‘ಜೈ ಹಿಂದ್ ಜೈ ಸಿಂಧ್’ ಬಾಲಿವುಡ್ ಸಿನಿಮಾಗೆ ಇಂದ್ರಜಿತ್ ಲಂಕೇಶ್ ನಿರ್ದೇಶನ – Kannada News | Kannada director Indrajit Lankesh new Hindi movie Jai Hind Jai Sindh

‘ಐಶ್ವರ್ಯಾ’, ‘ಮೊನಾಲಿಸಾ’, ‘ಲಂಕೇಶ್ ಪತ್ರಿಕೆ’ ಮುಂತಾದ ಸಿನಿಮಾಗಳ ಅನುಭವಿ ನಿರ್ದೇಶಕ ಇಂದ್ರಜಿತ್ ಲಂಕೇಶ್ (Indrajit Lankesh) ಅವರು ಈಗ ಹಿಂದಿ ಚಿತ್ರರಂಗದತ್ತ ಮುಖ ಮಾಡಿದ್ದಾರೆ. ಹೌದು, ಅವರೊಂದು ಬಾಲಿವುಡ್ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾಗೆ ‘ಜೈ ಹಿಂದ್ ಜೈ ಸಿಂಧ್’ (Jai Hind Jai Sindh) ಎಂದು ಶೀರ್ಷಿಕೆ ಇಡಲಾಗಿದೆ. ಈ ಚಿತ್ರಕ್ಕೆ ಸದ್ದಿಲ್ಲದೆ ಚಿತ್ರೀಕರಣ ಮಾಡಲಾಗಿದೆ. ಇಂದ್ರಜಿತ್ ಲಂಕೇಶ್ ಅವರು ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಉತ್ತರಾಖಂಡದಲ್ಲಿ ಚಿತ್ರಕ್ಕೆ ಕೊನೆಯ ಹಂತದ ಶೂಟಿಂಗ್ ಮಾಡಲಾಗುತ್ತಿದೆ. ಇತ್ತೀಚೆಗೆ ಸುದ್ದಿಗೋಷ್ಠಿ ಮಾಡಲಾಯಿತು.

ಡೆಹ್ರಾಡೂನ್​ನಲ್ಲಿ ‘ಜೈ ಹಿಂದ್ ಜೈ ಸಿಂಧ್’ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ ಸಮಾರಂಭ ನಡೆಯಿತು. ಮೊದಲ ಸುದ್ದಿಗೋಷ್ಠಿ ಅದ್ದೂರಿಯಾಗಿ ಮಾಡಲಾಯಿತು. ಸುದ್ದಿಗೋಷ್ಠಿಯಲ್ಲಿ ಇಂದ್ರಜಿತ್ ಜೊತೆಗೆ ನಿರ್ಮಾಪಕ ಸ್ಯಾಮಿ ನನ್ವಾನಿ, ಆಕಾಶ ವತ್ಸ್, ವಿಕ್ರಂ ಕೊಚ್ಚರ್ ಮುಂತಾದವರು ಭಾಗಿಯಾಗಿದ್ದರು. ಸಿನಿಮಾದ ಬಗ್ಗೆ ಅವರು ಮಾಹಿತಿ ಹಂಚಿಕೊಂಡರು.

ಸ್ಯಾಮೀಸ್ ಎಂಟರ್ಟೈನ್ಮೆಂಟ್ ಸಂಸ್ಥೆಯ ಮೂಲಕ ಸ್ಯಾಮಿ ನನ್ವಾನಿ ಅವರು ‘ಜೈ ಹಿಂದ್ ಜೈ ಸಿಂಧ್’ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಮಹೇಶ್ ಮಂಜ್ರೇಕರ್, ವಿಕ್ರಂ ಕೋಚಾರ್, ಜರೀನಾ ವಹಾಬ್, ಜಯಪ್ರದಾ, ಅಮಿತ್ ಬಹಲ್, ಉಪಾಸನಾ ಸಿಂಗ್ ಮುಂತಾದ ಕಲಾವಿದರು ನಟಿಸುತ್ತಿದ್ದಾರೆ. ಈ ಸಿನಿಮಾದ ಮೂಲಕ ನಾಲ್ವರು ಹೊಸ ಪ್ರತಿಭೆಗಳನ್ನು ಇಂದ್ರಜಿತ್ ಲಂಕೇಶ್ ಅವರು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ.

ಸದ್ಯದಲ್ಲೇ ಈ ಸಿನಿಮಾಗೆ ಚಿತ್ರೀಕರಣ ಮುಗಿಯಲಿದೆ. ಈ ವರ್ಷದ ಮಧ್ಯಭಾಗದ ಹೊತ್ತಿಗೆ ಬಿಡುಗಡೆ ಆಗುವ ಸಾಧ್ಯತೆ ಇದೆ. ಸುದ್ದಿಗೋಷ್ಠಿಯಲ್ಲಿ ಸಿನಿಮಾದ ಬಗ್ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾತನಾಡಿದರು. ‘ಇದೊಂದು ಪ್ರೇಮಕಥೆಯಾಗಿದೆ. ದೇಶ ವಿಭಜನೆ ಕೂಡ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿವಿಧತೆಯಲ್ಲಿ ಏಕತೆ ಎಂಬ ವಿಷಯವನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇನೆ’ ಎಂದು ಅವರು ಹೇಳಿದರು.

ಇದನ್ನೂ ಓದಿ: ಫಿಲ್ಮ್​ಫೇರ್: ಲಂಕೇಶ್, ಇಂದ್ರಜಿತ್ ಬಳಿಕ ಸಮರ್ಜಿತ್​ಗೂ ಒಲಿದ ಪ್ರತಿಷ್ಠಿತ ಪ್ರಶಸ್ತಿ

‘ದೇಶ ವಿಭಜನೆ ಆದಾಗ ಸಿಂಧ್ ಪ್ರಾಂತ್ಯದ ಜನ ಹೇಗೆ ನರಳಿದರು? ಅದರಿಂದ ಹೊರಬಂದು ಈಗ ತಮ್ಮ ಬದುಕನ್ನು ಹೇಗೆ ಕಟ್ಟಿಕೊಂಡಿದ್ದಾರೆ ಎಂಬುದನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇನೆ’ ಎಂದಿದ್ದಾರೆ ಇಂದ್ರಜಿತ್ ಲಂಕೇಶ್. ‘ನನ್ನ ಮೊದಲ ಸಿನಿಮಾದಿಂದ ಈವರೆಗೆ ಹಲವು ನಟ-ನಟಿಯರನ್ನು ಪರಿಚಯಿಸುವ ಪ್ರಯತ್ನ ಮಾಡುತ್ತಲೇ ಬಂದಿದ್ದೇನೆ. ಈಗ ಈ ಸಿನಿಮಾದ ಮೂಲಕ ನಾಲ್ವರು ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದೇನೆ’ ಎಂದು ಅವರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಫ್ಯಾಟಿ ಲಿವರ್‌ ಸಮಸ್ಯೆಯನ್ನು ತಡೆಯಲು ಎಣ್ಣೆ, ತುಪ್ಪ ಸೇವನೆ ಮಾಡುವುದನ್ನು ಬಿಡಬೇಕೇ? – Kannada News | Fatty Liver Diet: Oil and Ghee Guidelines

ಫ್ಯಾಟಿ ಲಿವರ್ (Fatty Liver) ಸಮಸ್ಯೆ ಕಂಡುಬಂದಾಗ ವೈದ್ಯರು ರೋಗಿಗಳಿಗೆ ಆಹಾರದಲ್ಲಿ ಹಲವು ರೀತಿಯ ಬದಲಾವಣೆಗಳನ್ನು ಮಾಡುವ ಮೂಲಕ ಕೆಲವು ನಿಯಮಗಳನ್ನು ಪಾಲಿಸಲು ಸಲಹೆ ನೀಡುತ್ತಾರೆ. ಕೆಲವರು ಈ ಸಂದರ್ಭದಲ್ಲಿ ತುಪ್ಪ ಮತ್ತು ಎಣ್ಣೆ ಸೇವನೆ ಮಾಡುವುದನ್ನು ಸಂಪೂರ್ಣವಾಗಿ ಬಿಡುತ್ತಾರೆ ಅಥವಾ ಬಹಳ ಕಡಿಮೆ ಪ್ರಮಾಣದಲ್ಲಿ ಮಾತ್ರ ಬಳಸುತ್ತಾರೆ. ಆದರೆ ನಿಜವಾಗಿಯೂ ತುಪ್ಪ, ಎಣ್ಣೆ ಸೇವನೆ ಮಾಡುವುದರಿಂದ ಫ್ಯಾಟಿ ಲಿವರ್ ಸಮಸ್ಯೆ ಹೆಚ್ಚುತ್ತದೆಯೇ, ಇವುಗಳ ಸೇವನೆಯನ್ನು ಸಂಪೂರ್ಣವಾಗಿ ಬಿಡಬೇಕೇ, ಫ್ಯಾಟಿ ಲಿವರ್‌ ಸಮಸ್ಯೆ ತಡೆಯಲು ಆಹಾರಕ್ರಮ ಯಾವ ರೀತಿ ಇರಬೇಕು ಎಂಬುದನ್ನು ತಿಳಿದುಕೊಳ್ಳಿ. ಈ ಕುರಿತು ತಜ್ಞರ ಅಭಿಪ್ರಾಯ ಇಲ್ಲಿದೆ.

ದೆಹಲಿ ನಗರದ ಜಿಟಿಬಿ ಆಸ್ಪತ್ರೆಯ ಮೆಡಿಸಿನ್ ವಿಭಾಗದ ಡಾ. ಅಜೀತ್ ಕುಮಾರ್ ಹೇಳುವ ಪ್ರಕಾರ, ಫ್ಯಾಟಿ ಲಿವರ್‌ ಸಮಸ್ಯೆ ತಡೆಯಲು ಒಟ್ಟಾರೆ ಕೊಬ್ಬಿನ ಸೇವನೆಯನ್ನು ಕಡಿಮೆ ಮಾಡಬೇಕು. ಆದರೆ ಆರೋಗ್ಯಕರ ಕೊಬ್ಬುಗಳನ್ನು ಸಂಪೂರ್ಣವಾಗಿ ತ್ಯಜಿಸುವ ಅಗತ್ಯವಿಲ್ಲ. ದೇಹಕ್ಕೆ ಅಗತ್ಯವಾದ ಕೆಲವು ಹೆಲ್ದಿ ಫ್ಯಾಟ್ಸ್ ಅತ್ಯಂತ ಮುಖ್ಯವಾಗಿವೆ. ಆದ್ದರಿಂದ ನಿಯಂತ್ರಿತ ಪ್ರಮಾಣದಲ್ಲಿ ತುಪ್ಪ ಮತ್ತು ಎಣ್ಣೆ ಸೇವಿಸಬಹುದು. ಆದರೆ ಅವುಗಳನ್ನು ಬಳಸುವ ವಿಧಾನದಲ್ಲಿ ಎಚ್ಚರಿಕೆ ಅಗತ್ಯ. ಯಾವುದೇ ಆಹಾರವನ್ನು ಡೀಪ್ ಫ್ರೈ ಮಾಡುವುದನ್ನು ತಪ್ಪಿಸಬೇಕು. ಹಾಗೆಯೇ, ಒಂದೇ ಎಣ್ಣೆಯನ್ನು ಮತ್ತೆ ಮತ್ತೆ ಬಿಸಿ ಮಾಡಿ ಬಳಸಬಾರದು. ಡಾ. ಕುಮಾರ್ ಅವರು ಹೇಳುವಂತೆ, ಡಬ್ಲ್ಯೂಎಚ್ಒ (WHO) ಪ್ರಕಾರ ಮತ್ತೆ ಮತ್ತೆ ಬಿಸಿ ಮಾಡಿದ ಎಣ್ಣೆಯ ಸೇವನೆ ಮೆಟಾಬಾಲಿಕ್ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಎಣ್ಣೆಯಲ್ಲಿ ತಯಾರಿಸಿದ ಆಹಾರವನ್ನು ಆಯ್ಕೆ ಮಾಡುವಾಗ ಎಚ್ಚರಿಕೆ ಅಗತ್ಯ. ಮನೆಯಲ್ಲೇ ತಯಾರಿಸಿದ ಆಹಾರದಲ್ಲಿ ಒಂದು ಬಾರಿ ಬಳಸಿದ ಎಣ್ಣೆ ಇದ್ದರೆ ದೊಡ್ಡ ಸಮಸ್ಯೆ ಇಲ್ಲ. ಆದರೆ ಅದನ್ನು ಮರುಬಳಕೆ ಮಾಡಬಾರದು.

ಫ್ಯಾಟಿ ಲಿವರ್‌ ತಡೆಯಲು ಪಾಲಿಸಬೇಕಾದ ಸಲಹೆಗಳು:

  • ಸಕ್ಕರೆ ಸೇವನೆಯನ್ನು ಕಡಿಮೆ ಮಾಡಬೇಕು
  • ಮೈದಾ ಬಳಕೆಯನ್ನು ನಿಯಂತ್ರಿಸಬೇಕು
  • ಪ್ರತಿದಿನ ಕನಿಷ್ಠ 30 ನಿಮಿಷ ವಾಕಿಂಗ್ ಮಾಡಬೇಕು
  • ಆಹಾರದಲ್ಲಿ ಪ್ರೋಟೀನ್ ಮತ್ತು ಫೈಬರ್ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬೇಕು

ಇದನ್ನೂ ಓದಿ: ಫ್ಯಾಟಿ ಲಿವರ್ ಸಮಸ್ಯೆ ಹೆಚ್ಚುತ್ತಿರಲು ಕಾರಣವೇನು? ಇದನ್ನು ತಡೆಯಲು ವೈದ್ಯರು ನೀಡಿರುವ ಸಲಹೆ ಇಲ್ಲಿದೆ

ಫ್ಯಾಟಿ ಲಿವರ್ ಉಂಟಾಗುವುದಕ್ಕೆ ಕಾರಣವೇನು?

ಡಾ. ಕುಮಾರ್ ಅವರ ಪ್ರಕಾರ, ಫ್ಯಾಟಿ ಲಿವರ್‌ ಸಮಸ್ಯೆ ಹೆಚ್ಚಾಗುತ್ತಿರುವುದಕ್ಕೆ ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದೇ ಮುಖ್ಯ ಕಾರಣವಾಗಿದೆ. ಹೆಚ್ಚು ತೈಲಯುಕ್ತ, ಕರಿದ ಆಹಾರ ಸೇವಿಸುವುದು, ಮೈದಾ ಮತ್ತು ಸಕ್ಕರೆ ಹೆಚ್ಚಾಗಿ ಸೇವಿಸುವುದು, ಮದ್ಯಪಾನ ಮಾಡುವುದು ಇತ್ಯಾದಿ ಕಾರಣಗಳಿಂದ ಈ ಸಮಸ್ಯೆ ಉಂಟಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮದ್ಯಪಾನ ಮಾಡದವರಲ್ಲಿಯೂ ಫ್ಯಾಟಿ ಲಿವರ್ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರ ಪ್ರಮುಖ ಕಾರಣ ಅಸಮರ್ಪಕ ಆಹಾರ ಪದ್ಧತಿ. ಹಾಗಾಗಿ ಆರೋಗ್ಯಕರ ಆಹಾರ ಸೇವನೆ ಮಾಡಬೇಕು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎದ್ದೇಳಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ; ಸ್ವಾಮಿ ವಿವೇಕಾನಂದರು ಕೆನಡಾದಲ್ಲಿ ಕಳೆದ ದಿನಗಳ ಉಲ್ಲೇಖಿಸಿದ ಪ್ರಧಾನಿ ಕಾರ್ನಿ – Kannada News | Arise, Awake And Stop Not; Canada PM Mark Carney quotes Swami Vivekananda in joint address with PM Modi

ನವದೆಹಲಿ, ಮಾರ್ಚ್ 2: ಭಾರತ ಪ್ರವಾಸದಲ್ಲಿರುವ ಕೆನಡಾದ ಪ್ರಧಾನ ಮಂತ್ರಿ ಮಾರ್ಕ್ ಕಾರ್ನಿ (Mark Carney) ಇಂದು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ (PM Modi) ಜಂಟಿ ಭಾಷಣ ಮಾಡಿದ್ದಾರೆ. ಈ ವೇಳೆ ಅವರು 1893ರಲ್ಲಿ ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನಕ್ಕಾಗಿ ಅಮೆರಿಕಕ್ಕೆ ಹೋಗುವಾಗ ಸ್ವಾಮಿ ವಿವೇಕಾನಂದರು ಕೆನಡಾಕ್ಕೆ ಭೇಟಿ ನೀಡಿದ ಬಗ್ಗೆಯೂ ಮಾತನಾಡಿದ್ದಾರೆ.

ಭಾರತ ಮತ್ತು ಕೆನಡಾ ನಡುವಿನ ಪಾಲುದಾರಿಕೆಯನ್ನು ವಿವರಿಸಲು ಪ್ರಧಾನಿ ಕಾರ್ನಿ ವಿವೇಕಾನಂದರ ಜನಪ್ರಿಯ ಹೇಳಿಕೆಯನ್ನು ಉಲ್ಲೇಖಿಸಿದರು. “ಏಳಿ, ಎದ್ದೇಳಿ, ಗುರಿ ತಲುಪುವವರೆಗೆ ನಿಲ್ಲಬೇಡಿ” ಎಂದು ವಿವೇಕಾನಂದರು ಹೇಳುತ್ತಿದ್ದರು. ಅವರು ಕೆನಡಾದಲ್ಲಿ ಸ್ವಲ್ಪ ಸಮಯ ಕಳೆದರು. ವಿವೇಕಾನಂದರು ಹೇಳಿದಂತೆಯೇ ಭಾರತದ ಜೊತೆಗಿನ ಈ ಪಾಲುದಾರಿಕೆಯಲ್ಲಿ ಗುರಿ ಮುಟ್ಟುವವರೆಗೂ ನಾವು ನಿಲ್ಲುವುದಿಲ್ಲ” ಎಂದು ಪ್ರಧಾನಿ ಕಾರ್ನಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: ಹೆಚ್​​.ಡಿ. ಕುಮಾರಸ್ವಾಮಿ ಸ್ಫೋಟಕ ಹೇಳಿಕೆ – Kannada News | H.D. Kumaraswamy Alleges State Intelligence Misuse, Calls Phone Tapping Common Across Governments

ಮೈಸೂರು, ಮಾರ್ಚ್​ 02: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಗುಪ್ತಚರ ಇಲಾಖೆಯ ದುರ್ಬಳಕೆ ಕುರಿತು ಗಂಭೀರ ಆರೋಪ ಮಾಡಿದ್ದಾರೆ. ಗುಪ್ತಚರ ಇಲಾಖೆಯನ್ನು ಸರ್ಕಾರವು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ರಾಜ್ಯದಲ್ಲಿ ಬಹುಶಃ ಇದೇ ಮೊದಲ ಬಾರಿಗೆ ಇಲಾಖೆ ಮೂಲಕ ಪಕ್ಷದ ಶಾಸಕರುಗಳು ಮತ್ತು ನಾಯಕರ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿರುವವರ ಮತ್ತು ಮುಖ್ಯಮಂತ್ರಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರ ಎರಡು ಗುಂಪುಗಳಿದ್ದು, ಇವೆರಡರ  ಮಾಹಿತಿ ಸಂಗ್ರಹ ನಡೆಯುತ್ತಿದೆ. ಫೋನ್​​ ಟ್ಯಾಪಿಂಗ್​ ನಿರಂತರವಾಗಿ ಹಲವಾರು ವರ್ಷಗಳಿಂದ ಎಲ್ಲಾ ಸರ್ಕಾರಗಳಲ್ಲೂ ನಡೆಯುತ್ತಾ ಬಂದಿರುವ ಸರ್ವೇಸಾಮಾನ್ಯ ಸಂಗತಿ. ಕೆಲವೊಮ್ಮೆ ತಪ್ಪುಗಳು ಹೊರಬಂದು ಕೆಲವು ಪ್ರಮುಖರ ಸ್ಥಾನಮಾನಗಳಿಗೆ ಧಕ್ಕೆಯಾದ ನಿದರ್ಶನಗಳಿವೆ. ಆದರೂ ಕೆಲವರು ಮಾತ್ರ ತಾವು ನಿಷ್ಕಳಂಕರು ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಾರೆ ಎಂದು ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Source link

ಸರ್ಕಾರಿ ಶಾಲೆ ಶಿಕ್ಷಕಿಯಾಗಿ ಖಾಸಗಿ ಕಾಲೇಜಿನಲ್ಲಿ ಮೂಗು ತೂರಿಸಿದ ಟೀಚರ್ ಸಸ್ಪೆಂಡ್ – Kannada News | Education department suspends ranebennur Teacher for involving private College Student PUC Hall Ticket issues

ಹಾವೇರಿ, (ಮಾರ್ಚ್ 02): ಫೀಸ್ ಕಟ್ಟಿಲ್ಲ ಎಂದು ಹಾಲ್ ಟಿಕೆಟ್ ನೀಡದೇ ಕಾಲೇಜು ಆಡಳಿತ ಮಂಡಳಿ ಸತಾಯಿಸಿದ್ದಲ್ಲದೇ, ಪರೀಕ್ಷೆ ಬರೆಯಲು ಅವಕಾಶ ಕೊಡದೇ ದರ್ಪತೋರಿದ್ದ ಶಿಕ್ಷಕಿಯನ್ನು ಶಿಕ್ಷಣ ಇಲಾಖೆ (Education Department) ಅಮಾನತುಗೊಳಿಸಿದೆ. ಶನಿವಾರ (ಫೆಬ್ರವರಿ 28) ದ್ವಿತೀಯ ಪಿಯುಸಿ ಪರೀಕ್ಷೆ ವೇಳೆ ರಾಣೇಬೆನ್ನೂರಿನ (Ranebennur)  ಬಿಎಜೆಎಸ್‌ಎಸ್ ಕಾಲೇಜಿನಲ್ಲಿ ಈ ಘಟನೆ ನಡೆದಿತ್ತು. ಈ ಸಂಬಂಧ `ಟಿವಿ9’ ಸುದ್ದಿ ಬಿತ್ತರಿಸಿತ್ತು. ವರದಿ ಬೆನ್ನಲ್ಲೇ ಸರ್ಕಾರಿ ಹಿರಿಯ ಉನ್ನತೀಕರಿಸಿದ ಶಾಲೆಯಲ್ಲಿ ವಿಜ್ಞಾನ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಸುನೀತಾ ಡಿ.ಬಿಯನ್ನು ಅಮಾನತುಗೊಳಿಸಿ ಶಿಕ್ಷಣ ಇಲಾಖೆ ಆದೇಶಿಸಿದೆ.

ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ಕೊಡದೇ ದರ್ಪ ತೋರಿದ್ದರು. ಜೊತೆಗೆ ಆಡಳಿತ ಮಂಡಳಿ ಪರವಾಗಿ ಮಾತನಾಡಿದ್ದು, ಹಸ್ತಕ್ಷೇಪ ಇರುವುದು ಕಂಡುಬಂದಿತ್ತು. ತನಿಖೆ ಮಾಡಿದ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮೋಹನ್ ದಂಡಿನ ಅವರು ರಾಣೇಬೆನ್ನೂರು ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮಸುಂದರ್ ಅಡಿಗರಿಂದ ಸೂಕ್ತಕ್ರಮಕ್ಕಾಗಿ ಶಿಪಾರಸ್ಸು ಮಾಡಿದ ಪತ್ರದನ್ವಯ ಅಮಾನತು ಮಾಡಿ ಆದೇಶ ಮಾಡಿದ್ದಾರೆ.

ಇದನ್ನೂ ಓದಿ: ಶುಲ್ಕ ಕಟ್ಟಿಲ್ಲವೆಂದು ಬೈಕ್ ಅಡವಿಟ್ಟುಕೊಂಡು ವಿದ್ಯಾರ್ಥಿಗೆ ಹಾಲ್ ಟಿಕೆಟ್ ನೀಡಿದ ಕಾಲೇಜು

ಪ್ರಕರಣದ ಹಿನ್ನೆಲೆ

ಸಾರಾ ಜೆಸ್ಸಿಕಾ ಎಂಬ ವಿದ್ಯಾರ್ಥಿನಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ರಾಣೆಬೆನ್ನೂರಿನ ಬಿಎಜೆಎಸ್‌ಎಸ್ ಕಾಲೇಜಿಗೆ ಬಂದಿದ್ದಳು. ಈ ವೇಳೆ ಶಿಕ್ಷಕಿ ಸುನೀತಾ ಬಿ ಶುಲ್ಕ ಕಟ್ಟಿಲ್ಲ ಅಂತ ಪರೀಕ್ಷೆಗೆ ಬಿಡದೇ ಸತಾಯಿಸಿದ್ದರು. 30 ಸಾವಿರ ರೂ. ಶುಲ್ಕ ಕಟ್ಟಿಲ್ಲ ಎಂದು ಕಾಲೇಜು ಆಡಳಿತ ಮಂಡಳಿ ಹಾಲ್ ಟಿಕೆಟ್ ನೀಡಿಲ್ಲ. ಆದರೂ ವಿದ್ಯಾರ್ಥಿನಿ ಇಂದು (ಫೆ.28) ಕನ್ನಡ ಪರೀಕ್ಷೆ ಬರೆಯಲು ಬಂದಿದ್ದಳು. ಈ ವೇಳೆ ಶಿಕ್ಷಕಿ ಸುನೀತಾ ವಿದ್ಯಾರ್ಥಿನಿ ಸಾರಾಳನ್ನು ತಡೆದು, ಎಲ್ಲಾ ಕಾಲೇಜಿನವರೂ ಪುಗಸೆಟ್ಟೆ ಕಲಿಸ್ತಾರಾ? ಎಂದು ಖಾಸಗಿ ಕಾಲೇಜಿನ ಪರವಾಗಿ ದರ್ಪದ ಮಾತುಗಳನ್ನಾಡಿದ್ದರು.

ಅಲ್ಲದೇ ಹಾಲ್ ಟಿಕೆಟ್ ನೀಡುವಂತೆ ಸಾಮಾಜಿಕ ಹೋರಾಟಗಾರ ಹನುಮಂತಪ್ಪ ವಿದ್ಯಾರ್ಥಿನಿ ಪರವಾಗಿ ಬಂದಿದ್ದು, ಈ ವೇಳೆ ಹನುಮಂತಪ್ಪ ಮೇಲೂ ದರ್ಪ ತೋರಿದ್ದಾರೆ. ಹಾಗೇ ಹನುಮಂತಪ್ಪನ ಬೈಕ್ ಕೀ ಮತ್ತು ಮೊಬೈಲ್ ಕಿತ್ತುಕೊಂಡು ಹಾಲ್ ಟಿಕೆಟ್ ನೀಡಿದ್ದರು. ಹೀಗೆ ಖಾಸಗಿ ಕಾಲೇಜು ಪರವಾಗಿ ವಕಾಲತ್ತು ವಹಿಸಿ ಸಾರ್ವಜನಿಕರ ಜೊತೆಗೆ ಅನುಚಿತ ವರ್ತನೆ ತೋರಿದ ಆರೋಪದ ಮೇಲೆ ಅಮಾನತು ಮಾಡಲಾಗಿದೆ.

ವರದಿ: ಅಣ್ಣಪ್ಪ ಬಾರ್ಕಿ ಟಿವಿ9 ಹಾವೇರಿ

ಕರ್ನಾಟಕದ ಮತ್ತಷ್ಟು ಸುದ್ದಿಗಳ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 4:35 pm, Mon, 2 March 26

Source link

ನಮ್ಮ ಪ್ರಜೆಗಳ ರಕ್ಷಣೆಗಾಗಿ ಒಗ್ಗಟ್ಟಾಗಿ ನಿಲ್ಲುತ್ತೇವೆ; ಇರಾನ್‌ ವಿರುದ್ಧ ಅಮೆರಿಕ ಮುಂತಾದ 7 ದೇಶಗಳ ಜಂಟಿ ಹೇಳಿಕೆ – Kannada News | Joint Statement on Irans Missile and Drone Attacks in Qatar, UAE, Kuwait, Bahraine and Other States

ನವದೆಹಲಿ, ಮಾರ್ಚ್ 2: ಇಸ್ರೇಲ್ ಜೊತೆಗಿನ ವೈಷಮ್ಯದ ಬಳಿಕ ಇದೀಗ ಕತಾರ್, ಬಹ್ರೇನ್, ಯುಎಇ ಮುಂತಾದ ಅರಬ್ ದೇಶಗಳ ಮೇಲೆ ಇರಾನ್ ದಾಳಿ (Iran Attack) ನಡೆಸಿದೆ. ಇದರಿಂದ ಅಲ್ಲಿನ ಜನಜೀವನ ಅಸ್ತವ್ಯಸ್ತವಾಗಿದೆ. ಹೀಗಾಗಿ, ಅಮೆರಿಕ ಸೇರಿದಂತೆ ಈ 7 ದೇಶಗಳು ಜಂಟಿಯಾಗಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿವೆ. “ನಮ್ಮ ನಾಗರಿಕರು, ಸಾರ್ವಭೌಮತ್ವ ಮತ್ತು ಪ್ರದೇಶದ ರಕ್ಷಣೆಯಲ್ಲಿ ನಾವು ಒಗ್ಗಟ್ಟಿನಿಂದ ನಿಲ್ಲುತ್ತೇವೆ. ಈ ದಾಳಿಗಳ ಸಂದರ್ಭದಲ್ಲಿ ನಮ್ಮ ಆತ್ಮರಕ್ಷಣೆಯನ್ನು ಮಾಡಿಕೊಳ್ಳಲು ಬದ್ಧರಾಗಿದ್ದೇವೆ” ಎಂದು ಹೇಳಿಕೆಯಲ್ಲಿ ಇರಾನ್​ಗೆ ಖಡಕ್ ಸಂದೇಶ ರವಾನಿಸಲಾಗಿದೆ.

ತನ್ನ ದೇಶದ ಮೇಲಿನ ದಾಳಿಗೆ ಇರಾನ್‌ನ ಪ್ರತೀಕಾರದ ದಾಳಿಗಳು ಮುಂದುವರಿದಂತೆ ಕತಾರ್, ಯುಎಇ, ಬಹ್ರೇನ್, ಕುವೈತ್‌ನಲ್ಲಿ ಸ್ಫೋಟಗಳು ಹೆಚ್ಚಾಗಿವೆ. ಅರಬ್ ದೇಶಗಳಲ್ಲಿರುವ ಅಮೆರಿಕದ ವಾಯುನೆಲೆಗಳು ಮತ್ತು ರಾಯಭಾರ ಕಚೇರಿಯನ್ನು ಗುರಿಯಾಗಿಸಿಕೊಂಡು ಇರಾನ್ ದಾಳಿ ನಡೆಸುತ್ತಿದೆ. ಇದರಿಂದ ತನ್ನದೇನೂ ತಪ್ಪಿಲ್ಲದಿದ್ದರೂ ಈ ದೇಶಗಳು ದಾಳಿಗೆ ಒಳಗಾಗಿವೆ. ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಇತ್ತೀಚೆಗೆ ಈ ಪ್ರದೇಶದಾದ್ಯಂತ ನಡೆಸಿದ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳ ಹಿನ್ನೆಲೆಯಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ, ಬಹ್ರೇನ್, ಜೋರ್ಡಾನ್, ಕುವೈತ್, ಕತಾರ್, ಸೌದಿ ಅರೇಬಿಯಾ ಸಾಮ್ರಾಜ್ಯ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರಗಳು ಜಂಟಿಯಾಗಿ ಹೇಳಿಕೆಯನ್ನು ಬಿಡುಗಡೆ ಮಾಡಿವೆ.

ಇದನ್ನೂ ಓದಿ: Video: ಕುವೈತ್​ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಆವರಣದಲ್ಲಿ ಇರಾನ್ ಡ್ರೋನ್ ದಾಳಿ

ಯುನೈಟೆಡ್ ಸ್ಟೇಟ್ಸ್, ಬಹ್ರೇನ್, ಜೋರ್ಡಾನ್, ಕುವೈತ್, ಕತಾರ್, ಯುಎಇ ಮತ್ತು ಕಿಂಗ್​ಡಮ್ ಆಫ್ ಸೌದಿ ಅರೇಬಿಯಾ, ಬಹ್ರೇನ್, ಇರಾಕ್ ದೇಶಗಳ ಮೇಲೆ ನಡೆಯುತ್ತಿರುವ ದಾಳಿಯ ಹಿನ್ನೆಲೆಯಲ್ಲಿ ನಮ್ಮ ಪ್ರಜೆಗಳ ಮತ್ತು ಪ್ರದೇಶದ ರಕ್ಷಣೆಗೆ ನಾವು ಒಗ್ಗಟ್ಟಾಗಿ ನಿಲ್ಲುತ್ತೇವೆ. ನಾವು ಈ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಬಲವಾಗಿ ಖಂಡಿಸುತ್ತೇವೆ. ಈ ಅನ್ಯಾಯದ ದಾಳಿಗಳು ಸಾರ್ವಭೌಮ ಪ್ರದೇಶ, ಅಳಿವಿನಂಚಿನಲ್ಲಿರುವ ಜನಸಂಖ್ಯೆ ಮತ್ತು ನಾಗರಿಕ ಮೂಲಸೌಕರ್ಯವನ್ನು ಹಾನಿಗೊಳಿಸಿವೆ ಎಂದು ಜಂಟಿ ಹೇಳಿಕೆಯಲ್ಲಿ ಹೇಳಿವೆ.

ಇರಾನ್​ನ ಕ್ರಮಗಳು ಬಹು ರಾಜ್ಯಗಳ ಸಾರ್ವಭೌಮತ್ವವನ್ನು ಉಲ್ಲಂಘಿಸುವ ಮತ್ತು ಪ್ರಾದೇಶಿಕ ಸ್ಥಿರತೆಗೆ ಬೆದರಿಕೆ ಹಾಕುವ ಅಪಾಯಕಾರಿ ಬೆಳವಣಿಗೆಯಾಗಿದೆ. ನಾಗರಿಕರು ಮತ್ತು ಯುದ್ಧದಲ್ಲಿ ತೊಡಗದ ದೇಶಗಳನ್ನು ಕೂಡ ಗುರಿಯಾಗಿಸಿಕೊಂಡು ದಾಳಿ ನಡೆಸುವುದು ಅಸ್ಥಿರಗೊಳಿಸುವ ನಡವಳಿಕೆಯಾಗಿದೆ. ನಮ್ಮ ನಾಗರಿಕರು, ಸಾರ್ವಭೌಮತ್ವ ಮತ್ತು ಪ್ರದೇಶದ ರಕ್ಷಣೆಯಲ್ಲಿ ನಾವು ಒಗ್ಗಟ್ಟಿನಿಂದ ನಿಲ್ಲುತ್ತೇವೆ. ಈ ದಾಳಿಗಳ ಸಂದರ್ಭದಲ್ಲಿ ನಮ್ಮ ಸ್ವರಕ್ಷಣೆಯ ಹಕ್ಕನ್ನು ಪುನರುಚ್ಚರಿಸುತ್ತೇವೆ. ಪ್ರಾದೇಶಿಕ ಭದ್ರತೆಗೆ ನಾವು ಬದ್ಧರಾಗಿದ್ದೇವೆ ಎಂದು ಈ ದೇಶಗಳು ಹೇಳಿವೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಫಲ; ಭಾರತದಲ್ಲಿ ಚಿನ್ನದ ಬೆಲೆ ಸದ್ಯದಲ್ಲೇ 20,000 ರೂ ಮುಟ್ಟುತ್ತಾ? – Kannada News | West Asia crisis, gold rate prediction from experts

ನವದೆಹಲಿ, ಮಾರ್ಚ್ 2: ಪಶ್ಚಿಮ ಏಷ್ಯನ್ ಪ್ರದೇಶದಲ್ಲಿ ಯುದ್ಧದ ವಾತಾವರಣ ಹೀಗೇ ಮುಂದುವರಿದರೆ ಚಿನ್ನದ ಬೆಲೆ (Gold Rates) ಹೈಜಂಪ್ ಮಾಡಿಕೊಂಡು ಸಾಗಬಹುದು ಎಂದು ಪರಿಣಿತರು ಊಹಿಸಿದ್ದಾರೆ. ಈಗಾಗಲೇ ಹೂಡಿಕೆದಾರರು ಗೋಲ್ಡ್ ಇಟಿಎಫ್​ಗಳನ್ನು ಹಣ ಹಾಕುವುದನ್ನು ಹೆಚ್ಚಿಸಿದ್ದಾರೆ. ಇದು ಇನ್ನೂ ಬಹಳಷ್ಟು ಹೆಚ್ಚಬಹುದು. ಡಾಲರ್ ಎದುರು ರುಪಾಯಿ ಮೌಲ್ಯದ ಕುಸಿತದ ಪರಿಣಾಮವೂ ಚಿನ್ನದ ಬೆಲೆ ಮೇಲೆ ಆಗಲಿದೆ.

20,000 ರೂ ಸಮೀಪಕ್ಕೆ ಚಿನ್ನದ ಬೆಲೆ?

ಸ್ಪಾಟ್ ಗೋಲ್ಡ್ ಬೆಲೆ ಒಂದು ಔನ್ಸ್​ಗೆ 5,400 ಯುಎಸ್ ಡಾಲರ್ ಇದೆ. ಅಂದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಗ್ರಾಮ್​ಗೆ 17,434 ರು ಬೆಲೆ ಇದೆ. ಈಗ ಜಾಗತಿಕವಾಗಿ ಭಯದ ವಾತಾವರಣ ತೀವ್ರಗೊಳ್ಳುತ್ತಿದ್ದು, ಇಂಥ ಸಂದರ್ಭಗಳಲ್ಲಿ ಚಿನ್ನದ ಮೇಲೆ ಹೂಡಿಕೆಗಳು ಹೆಚ್ಚುವುದು ಸ್ವಾಭಾವಿಕ. ಈಗ ಅದೇ ಆಗುತ್ತಿರುವುದು. ತಜ್ಞರು ಮಾಡಿರುವ ಅಂದಾಜು ಪ್ರಕಾರ, ಒಂದು ಔನ್ಸ್​ಗೆ 5,400 ಡಾಲರ್ ಇರುವ ಚಿನ್ನದ ಬೆಲೆ ಕೆಲ ದಿನಗಳಲ್ಲಿ 6,000 ಡಾಲರ್ ಮುಟ್ಟಬಹುದು. ಅಂದರೆ, ಒಂದು ಗ್ರಾಮ್ ಚಿನ್ನದ ಬೆಲೆ 19,400 ರೂ ಮುಟ್ಟಬಹುದು.

ಇದನ್ನೂ ಓದಿ: ಇರಾನ್ ಯುದ್ಧ; ಭಾರತದ ಬಾಸ್ಮತಿ ಅಕ್ಕಿ ರಫ್ತುದಾರರಿಗೆ 50,000 ಕೋಟಿ ರೂ ಬ್ಯುಸಿನೆಸ್ ಕೈತಪ್ಪುವ ಚಿಂತೆ

ವಿವಿಧ ದೇಶಗಳ ಸೆಂಟ್ರಲ್ ಬ್ಯಾಂಕುಗಳು ಚಿನ್ನದ ಖರೀದಿ ಹೆಚ್ಚಿಸಲಿವೆ. ಗೋಲ್ಡ್ ಇಟಿಎಫ್​ಗಳ ಮೇಲೆ ಹೂಡಿಕೆ ಹೆಚ್ಚಲಿವೆ. ಡಾಲರ್ ಎದುರು ರುಪಾಯಿ ಮೌಲ್ಯ ಕುಸಿಯುತ್ತಿದೆ. ಈ ಮೂರು ಅಂಶಗಳು ಚಿನ್ನದ ಬೆಲೆಯನ್ನು ಸಿಕ್ಕಾಪಟ್ಟೆ ಏರಿಸಬಹುದು. ಚಿನ್ನ ಮಾತ್ರವಲ್ಲ, ಬೆಳ್ಳಿ ಬೆಲೆಯೂ ಜಂಪ್ ಪಡೆಯಬಹುದು.

ಭಾರತದಲ್ಲಿ ಚಿನ್ನದ ಬೆಲೆ ಸೋಮವಾರ ಬೆಳಗ್ಗೆ ಭರ್ಜರಿ ಇಳಿಕೆ ಕಂಡು ನಂತರ ಮತ್ತೆ ಶೇ. 4.37ರಷ್ಟು ಮೇಲೇರಿದೆ. ಅಪರಂಜಿ ಚಿನ್ನದ ಬೆಲೆ 17,000 ರೂ ಸಮೀಪಕ್ಕೆ ಹೋಗಿದೆ. ಬೆಳ್ಳಿ ಬೆಲೆ ಗ್ರಾಮ್​ಗೆ 296 ರೂ ದಾಟಿದೆ.

ಇದನ್ನೂ ಓದಿ: ಯುದ್ಧದಿಂದ ತೈಲ ಪೂರೈಕೆ ನಿಂತು ಹೋದರೆ ಭಾರತಕ್ಕೆ ಗತಿ ಏನು? ದೇಶದಲ್ಲಿರುವ ಪೆಟ್ರೋಲ್ ಎಷ್ಟು ದಿನಕ್ಕೆ ಆಗುತ್ತೆ?

ತೈಲ ಬೆಲೆ ಏರಿಕೆ

ಇರಾನ್ ಯುದ್ಧದ ಪರಿಣಾಮ ತೈಲ ಬೆಲೆ ಏರಿಕೆ ಆಗುವ ಭೀತಿ ಇದೆ. ಈಗಾಗಲೇ ಹೆಚ್ಚಿನ ಮಟ್ಟದಲ್ಲಿರುವ ತೈಲ ಬೆಲೆ ಬ್ಯಾರಲ್​ಗೆ 90 ಡಾಲರ್ ಮಟ್ಟದಲ್ಲೇ ಹೆಚ್ಚಿನ ಕಾಲ ಮುಂದುವರಿದರೆ ಭಾರತದ ಆರ್ಥಿಕತೆಗೆ ತುಸು ಹಿನ್ನಡೆ ತರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮಕ್ಕಳ ಭವಿಷ್ಯದ ಆತಂಕ: 1ನೇ ತರಗತಿಗೆ ದಾಖಲಾತಿ ವಯೋಮಿತಿ ಸಡಿಲಿಕೆಗೆ ಪೋಷಕರ ಪಟ್ಟು – Kannada News | NEP 6 Year Rule: Karnataka Parents Demand Age Relaxation for 1st Grade Admission

ವಯೋಮಿತಿ ಸಡಿಲಿಕೆಗೆ ಪೋಷಕರ ಪಟ್ಟು
Image Credit source: Google

ಬೆಂಗಳೂರು, ಮಾರ್ಚ್​​ 02: ಹೊಸ ಶಿಕ್ಷಣ ನೀತಿ (NEP) ಪ್ರಕಾರ ಪ್ರಥಮ ತರಗತಿಗೆ ಪ್ರವೇಶಕ್ಕೆ 6 ವರ್ಷ ನಿಗದಿ ಹಿನ್ನೆಲೆ, ನಿಗದಿಪಡಿಸಿದ ವಯೋಮಿತಿಯನ್ನು ಪೂರೈಸದ ಮಕ್ಕಳ ಪೋಷಕರು ಬೆಂಗಳೂರಿನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 90 ದಿನಗಳ ಸಡಿಲಿಕೆ ನೀಡುವಂತೆ ಕರ್ನಾಟಕ ಸರ್ಕಾರವನ್ನು ಪೋಷಕರು ಆಗ್ರಹಿಸಿದ್ದು, ಯುಕೆಜಿ ಮುಗಿದಿದೆ 1ನೇ ತರಗತಿಗೆ ದಾರಿ ಬಿಡಿ. ಸಮಯ ವ್ಯರ್ಥ ಮಾಡಬೇಡಿ, ಕಲಿಕೆಗೆ ಅವಕಾಶ ಕೊಡಿ. ಶಿಕ್ಷಣ ನಮ್ಮ ಹಕ್ಕು, ವಯಸ್ಸು ಅಡ್ಡಿಯಾಗದಿರಲಿ ಎಂಬಿತ್ಯಾದಿ ಪ್ಲೇ ಕಾರ್ಡ್ ಹಿಡಿದು ಸರ್ಕಾರದ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಆದೇಶಗಳಿಂದಾಗಿ ಯುಕೆಜಿ ಅಥವಾ ಮಾಂಟೆಸ್ಸರಿ ತರಗತಿಯನ್ನು ಮರುಕಳಿಸಬೇಕಾದ ಪರಿಸ್ಥಿತಿ ಎದುರಾಗಬಾರದು ಎಂದು ಅವರು ಒತ್ತಾಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಓರ್ವ ಪೋಷಕರು, ಇದು ಪ್ರತಿಭಟನೆ ಅಲ್ಲ. ಸರ್ಕಾರಕ್ಕೆ ನಾವು ಮಾಡುತ್ತಿರುವ ಮನವಿ. ಮೂರು ವರ್ಷಗಳ ಪೂರ್ವ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿದ ಮಕ್ಕಳನ್ನು ಪ್ರಥಮ ತರಗತಿಗೆ ದಾಖಲಿಸಬೇಕು. ಆದರೆ ನಮ್ಮ ಮಕ್ಕಳು NEP ಪ್ರಕಾರ 6 ವರ್ಷದ ವಯೋಮಿತಿಯನ್ನು ಪೂರೈಸುತ್ತಿಲ್ಲ. ಈಗಿರುವ ತರಗತಿಯನ್ನು ಮರುಕಳಿಸುವುದು ಮಕ್ಕಳಿಗೆ ಮಾನಸಿಕ ಒತ್ತಡ ಉಂಟುಮಾಡುತ್ತದೆ. ಶಿಕ್ಷಣ ಸಂಸ್ಥೆಗಳು ಸಹ ಮಕ್ಕಳನ್ನು ಮರುಕಳಿಸಲು ಇಷ್ಟಪಡುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಮಧ್ಯ ಪ್ರಾಚ್ಯದಲ್ಲಿ ಯುದ್ಧ; ಪರದೇಶದಲ್ಲಿ ಸಿಲುಕಿ ಕನ್ನಡಿಗರ ಪರದಾಟ, ರಾಜ್ಯ ಸರ್ಕಾರದಿಂದ ಸಹಾಯವಾಣಿ ಆರಂಭ

ಕಳೆದ ಎರಡು ವರ್ಷಗಳಿಂದ ನಾವು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರಿಂದ ಭರವಸೆ ಸಿಕ್ಕಿದೆ. ಕೋವಿಡ್ ಸಮಯದಲ್ಲಿ ಹುಟ್ಟಿದ ಈ ಮಕ್ಕಳು ಈಗಾಗಲೇ ಸಾಕಷ್ಟು ಭಾವನಾತ್ಮಕ ಮತ್ತು ಮಾನಸಿಕ ಒತ್ತಡ ಅನುಭವಿಸಿದ್ದಾರೆ. ಮತ್ತೊಮ್ಮೆ ತರಗತಿ ಮರುಕಳಿಸುವುದು ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕರ್ನಾಟಕ ಸರ್ಕಾರದ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. 2 ಲಕ್ಷಕ್ಕೂ ಹೆಚ್ಚು ಮಕ್ಕಳು ಸರ್ಕಾರದ ಆದೇಶದಿಂದಾಗಿ ತೊಂದರೆಗೆ ಸಿಲುಕಿದ್ದು, ದಾಖಲಾತಿ ವಿಚಾರದಲ್ಲಿ 90 ದಿನಗಳ ವಯಸ್ಸಿನ ಸಡಿಲಿಕೆ ಸಿಗಬಹುದೆಂಬ ವಿಶ್ವಾಸ ಇದೆ ಎಂದು ಮತ್ತೋರ್ವ ಪೋಷಕಿರು ಅಭಿಪ್ರಾಯಪಟ್ಟಿದ್ದಾರೆ.

ಏನಿದು ಆದೇಶ?

2025-26ನೇ ಶೈಕ್ಷಣಿಕ ವರ್ಷದಿಂದ 1ನೇ ತರಗತಿಗೆ ಮಕ್ಕಳು ದಾಖಲಾಗಲು ಜೂನ್ 1ಕ್ಕೆ 6 ವರ್ಷಗಳು ತುಂಬಿರಬೇಕು ಎಂದು ಸರ್ಕಾರ ಆದೇಶವನ್ನು ಹೊರಡಿಸಿದೆ. ಕೇಂದ್ರ ಶಿಕ್ಷಣ ಸಚಿವಾಲಯ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಿದ ನಿರ್ದೇಶನದ ಅನ್ವಯ 1ನೇ ತರಗತಿ ಪ್ರವೇಶಕ್ಕೆ ಕನಿಷ್ಠ ವಯೋಮಿತಿಯನ್ನು 6 ವರ್ಷ ಎಂದು ನಿಗದಿಪಡಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ? ಯಾರಿಗೆ ಸಂಕಷ್ಟ? ಇಲ್ಲಿದೆ ನೋಡಿ – Kannada News | Blood Moon Total Lunar Eclipse 2026 On March 3rd, here His Effects, Significance And Timings details

2026ರ ಮೊದಲನೇ ಸೂರ್ಯ ಗ್ರಹಣವು (Lunar Eclipse 2026) ಈಗಾಗಲೇ ಮುಕ್ತಾಯಗೊಂಡಿದ್ದು, ಇದೀಗ ವರ್ಷದ ಮೊದಲನೇ ಚಂದ್ರ ಗ್ರಹಣ ಸಂಭವಿಸಲಿದೆ. 2026ರ ಮೊದಲನೇ ಚಂದ್ರ ಗ್ರಹಣವು ಮಾರ್ಚ್‌ 3, ಮಂಗಳವಾರ ಬಂದಿದ್ದು, ಈ ಚಂದ್ರ ಗ್ರಹಣವನ್ನು ಖಗ್ರಾಸ ಚಂದ್ರ ಗ್ರಹಣ, ಕೇತುಗ್ರಸ್ತ ಚಂದ್ರ ಗ್ರಹಣ ಹಾಗೂ ರಕ್ತ ಚಂದ್ರ ಗ್ರಹಣವೆಂದು ಕರೆಯಲಾಗುತ್ತದೆ. 2026ರ ಮೊದಲನೇ ಚಂದ್ರ ಗ್ರಹಣದ ಸಮಯ, ಸೂತಕ ಅವಧಿ, ಗ್ರಹಣದ ಸಮಯದಲ್ಲಿ ಹಾಗೂ ಗ್ರಹಣದ ನಂತರ ಏನು ಮಾಡಬೇಕು ಮತ್ತು ಏನು ಮಾಡಬಾರದು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

Source link

Holi 2026: ಹೋಳಿ ಹಬ್ಬದಲ್ಲಿ ಓಕುಳಿಯಾಡುವಾಗ ಬಿಳಿ ಬಣ್ಣದ ಬಟ್ಟೆಗಳನ್ನೇ ಧರಿಸುವುದೇಕೆ ಗೊತ್ತಾ? – Kannada News | Holi 2026: Why do people wear white clothes on Holi? Here’s the information

ಬಣ್ಣಗಳ ಹಬ್ಬ ಎಂದೂ ಕರೆಯಲ್ಪಡುವ ಹೋಳಿಯನ್ನು (Holi) ದೇಶಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಕೆಟ್ಟದರ ವಿರುದ್ಧ ವಿಜಯದ ಸಂಕೇತವಾಗಿ ಆಚರಿಸಲಾಗುವ ಈ ಹಬ್ಬದಲ್ಲಿ ಜನರು ತಮ್ಮ ದುಃಖ ನೋವುಗಳನ್ನು ಮರೆತು ಎಲ್ಲರೂ ಒಗ್ಗೂಡಿ ಬಣ್ಣಗಳಿಂದ ಓಕುಳಿಯಾಡಿ ಹೋಳಿಯನ್ನು ಸಂಭ್ರಮಿಸುತ್ತಾರೆ. ಈ ಓಕುಳಿಯಾಟದ ಸಂದರ್ಭದಲ್ಲಿ ಹೆಚ್ಚಿನ ಜನರು ಬಿಳಿ ಬಣ್ಣದ ಬಟ್ಟೆಗಳನ್ನೇ ಧರಿಸುತ್ತಾರೆ. ಹೋಳಿ ಹಬ್ಬದಲ್ಲಿ ಬಿಳಿ ಬಣ್ಣದ ಬಟ್ಟೆಯನ್ನೇ ಏಕೆ ಧರಿಸುತ್ತಾರೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಹೆಚ್ಚಿನವರು ಇದೊಂದು ಫ್ಯಾಶನ್‌ ಅಂದುಕೊಳ್ಳುತ್ತಾರೆ. ಆದರೆ ಇದರ ಹಿಂದೆಯೂ ಒಂದು ಕಾರಣವಿದೆಯಂತೆ. ಅದೇನೆಂಬುದನ್ನು ನೋಡೋಣ ಬನ್ನಿ.

ಹೋಳಿ ಹಬ್ಬದಲ್ಲಿ ಬಿಳಿ ಬಣ್ಣದ ಬಟ್ಟೆ ಧರಿಸುವುದೇಕೆ?

ಸಕಾರಾತ್ಮಕ ಶಕ್ತಿ ಮತ್ತು ಮಾನಸಿಕ ಶಾಂತಿ: ಬಿಳಿ ಬಣ್ಣವನ್ನು ಶುದ್ಧತೆ ಮತ್ತು ಶಾಂತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹೋಳಿಯ ಗದ್ದಲದ ನಡುವೆ ಬಿಳಿ ಬಟ್ಟೆಗಳನ್ನು ಧರಿಸುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ಅಲ್ಲದೆ ಈ ಬಣ್ಣವು ಸಕಾರಾತ್ಮಕ ಶಕ್ತಿಯನ್ನು ರವಾನಿಸುತ್ತದೆ.

ಬಣ್ಣಗಳನ್ನು ಹೈಲೈಟ್ ಮಾಡುವುದು: ಬಿಳಿ ಬಟ್ಟೆ ಧರಿಸಲು ಇದು ಅತ್ಯಂತ ಮೂಲಭೂತ ಕಾರಣ. ಏಕೆಂದರೆ ಬಿಳಿ ಬಟ್ಟೆಗಳ ಮೇಲೆ ಗುಲಾ ಬಿದ್ದಾಗ, ಪ್ರತಿಯೊಂದು ಬಣ್ಣವೂ ಸ್ಪಷ್ಟ ಮತ್ತು ಸುಂದರವಾಗಿ ಕಾಣುತ್ತದೆ. ಅದಕ್ಕಾಗಿ ಓಕುಳಿಯಾಟದಲ್ಲಿ ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸುವುದು.

ಸಹೋದರತ್ವ ಮತ್ತು ಸಾಮರಸ್ಯದ ಸಂದೇಶ: ಹೋಳಿ ಹಬ್ಬವು ಸಮಾಜದಲ್ಲಿ ಏಕತೆ ಮತ್ತು ಸಹೋದರತ್ವವನ್ನು ಉತ್ತೇಜಿಸುತ್ತದೆ. ಬಿಳಿ ಬಟ್ಟೆಗಳನ್ನು ಧರಿಸುವುದರಿಂದ ಎಲ್ಲರೂ ಸಮಾನರಾಗಿ ಕಾಣುತ್ತಾರೆ, ಅಲ್ಲದೆ ಹೋಳಿಯನ್ನು ಯಾವುದೇ ತಾರತಮ್ಯವಿಲ್ಲದೆ ಒಟ್ಟಿಗೆ ಆಚರಿಸಲಾಗುತ್ತದೆ ಎಂಬುದನ್ನು ಸಂಕೇತಿಸುತ್ತದೆ. ಇದು ಬಣ್ಣ, ಜಾತಿ, ಧರ್ಮ ಮತ್ತು ಸಾಮಾಜಿಕ ಸ್ಥಾನಮಾನವನ್ನು ಲೆಕ್ಕಿಸದೆ ಎಲ್ಲರನ್ನೂ ಒಂದುಗೂಡಿಸುತ್ತದೆ.

ಆಧ್ಯಾತ್ಮಿಕ ಮಹತ್ವ: ಬಿಳಿ ಬಣ್ಣವನ್ನು ಆಧ್ಯಾತ್ಮಿಕವಾಗಿ ಶುದ್ಧತೆ, ಶಾಂತಿ ಮತ್ತು ನವೀಕರಣದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹೋಳಿ ಹಬ್ಬವು ಶುದ್ಧೀಕರಣ ಮತ್ತು ಹೊಸ ಆರಂಭದ ಸಂದೇಶವನ್ನು ನೀಡುತ್ತದೆ. ಬಿಳಿ ಬಟ್ಟೆಗಳನ್ನು ಧರಿಸುವ ಮೂಲಕ ಜನರು ಈ ಆಧ್ಯಾತ್ಮಿಕ ಭಾವನೆಯನ್ನು ವ್ಯಕ್ತಪಡಿಸುತ್ತಾರೆ ಮತ್ತು ತಮ್ಮ ಮನಸ್ಸು ಮತ್ತು ಆತ್ಮವನ್ನು ಶುದ್ಧೀಕರಿಸುತ್ತಾರೆ.

ಸಂಪ್ರದಾಯದೊಂದಿಗಿನ ಸಂಬಂಧ: ಹೋಳಿ ಕೇವಲ ಬಣ್ಣಗಳ ಹಬ್ಬವಲ್ಲ, ಇದು ಹೊಸ ಆರಂಭಗಳನ್ನು ಸಹ ಸಂಕೇತಿಸುತ್ತದೆ. ಹೋಳಿಕಾ ದಹನ್ ಬಣ್ಣಗಳ ಹಬ್ಬಕ್ಕೆ ಒಂದು ದಿನ ಮೊದಲು ನಡೆಯುತ್ತದೆ, ಇದು ಚಳಿಗಾಲದ ಅಂತ್ಯ ಮತ್ತು ವಸಂತಕಾಲದ ಆಗಮನವನ್ನು ಸೂಚಿಸುತ್ತದೆ. ಹವಾಮಾನ ಬದಲಾದಂತೆ, ವಾತಾವರಣವೂ ಬದಲಾಗುತ್ತದೆ ಮತ್ತು ಇದು ಹಿಂದಿನ ನೋವು, ಕಹಿಗಳನ್ನೆಲ್ಲಾ ಅಳಿಸಿಹಾಕುವ ಮೂಲಕ ಹೊಸ ಆರಂಭವನ್ನು ಸೂಚಿಸುತ್ತದೆ, ಜೀವನಕ್ಕೆ ಹೊಸ ಬಣ್ಣಗಳನ್ನು ಸೇರಿಸುವ ಕ್ಷಣವನ್ನು ಸೂಚಿಸುತ್ತದೆ.

ಇದನ್ನೂ ಓದಿ: ಭಾರತದಂತೆಯೇ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವ ದೇಶಗಳಿವು

 ವೈಜ್ಞಾನಿಕ ಕಾರಣ: ಹೋಳಿಯನ್ನು ವಸಂತಕಾಲದ ಕೊನೆಯಲ್ಲಿ ಮತ್ತು ಬೇಸಿಗೆಯ ಆರಂಭದಲ್ಲಿ ಆಚರಿಸಲಾಗುತ್ತದೆ. ಹೋಳಿ ಬರುವ ಮೊದಲೇ ಹವಾಮಾನದಲ್ಲಿ ಬದಲಾವಣೆ ಕಂಡುಬರುತ್ತದೆ. ಚಳಿಗಾಲ ಕಡಿಮೆಯಾಗಲು ಪ್ರಾರಂಭವಾಗುತ್ತದೆ ಮತ್ತು ಬೇಸಿಗೆ ಕಾಲ ಕೂಡಿಬರಲು ಪ್ರಾರಂಭಿಸುತ್ತದೆ. ಈ ಸಮಯದಲ್ಲಿ ವಿಪರೀತ ಬಿಸಿಲು ಇರುತ್ತದೆ. ವೈಜ್ಞಾನಿಕವಾಗಿ, ಬಿಳಿ ಬಣ್ಣವು ಸೂರ್ಯನ ಬೆಳಕನ್ನು ಪ್ರತಿಬಿಂಬಿಸುತ್ತದೆ ಮತ್ತು ಶಾಖವನ್ನು ಹೀರಿಕೊಳ್ಳುವುದಿಲ್ಲ. ಇದು ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ದೀರ್ಘ ದಿನದ ಮೋಜಿನ ನಂತರವೂ ಈ ಬಟ್ಟೆ ದೇಹವನ್ನು  ತಂಪಾಗಿ ಮತ್ತು ಉಲ್ಲಾಸದಿಂದ ಇರಿಸುತ್ತದೆ. ಈ ಕಾರಣದಿಂದಾಗಿಯೂ ಹೋಳಿ ಹಬ್ಬದಲ್ಲಿ ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸುವುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version