ಕೋಟಿ ಕೋಟಿ ಬೆಲೆ ಬಾಳುವ ಭೂಮಿ ಪ್ರಕರಣದಲ್ಲಿ ಶ್ರೀದೇವಿ ಕುಟುಂಬಕ್ಕೆ ಜಯ – Kannada News | Legal Win for Boney Kapoor: Madras HC Dismisses Property Suit Linked to Sridevi

ಬಾಲಿವುಡ್‌ನ ಖ್ಯಾತ ನಿರ್ಮಾಪಕ ಬೋನಿ ಕಪೂರ್ ಹಾಗೂ ಅವರ ಪುತ್ರಿಯರಾದ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಅವರಿಗೆ ಕಾನೂನು ಹೋರಾಟದಲ್ಲಿ ದೊಡ್ಡ ಜಯ ಸಿಕ್ಕಿದೆ. ನಟಿ ಶ್ರೀದೇವಿ ಅವರು (Sridevi) 1988ರಲ್ಲಿ ಖರೀದಿಸಿದ್ದ ಚೆನ್ನೈನ ಆಸ್ತಿಯ ಮೇಲೆ ಹೂಡಲಾಗಿದ್ದ ಸಿವಿಲ್ ದಾವೆಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ. ಇದರಿಂದ ಕಪೂರ್ ಕುಟುಂಬಕ್ಕೆ ಸಮಾಧಾನ ಸಿಕ್ಕಂತೆ ಆಗಿದೆ.

ಚೆನ್ನೈನ ಶೋಲಿಂಗನಲ್ಲೂರ್‌ನಲ್ಲಿರುವ ಸುಮಾರು 2.70 ಎಕರೆ ಭೂಮಿಗೆ ಸಂಬಂಧಿಸಿದಂತೆ ಈ ವಿವಾದ ಉಂಟಾಗಿತ್ತು. ಎಂ.ಸಿ. ಶಿವಕಾಮಿ ಮತ್ತು ಇತರರು ಈ ಭೂಮಿ ತಮ್ಮದು ಎಂದು ವಾದಿಸಿ ಕೋರ್ಟ್ ಮೆಟ್ಟಿಲೇರಿದ್ದರು. 1988ರಲ್ಲಿ ಶ್ರೀದೇವಿ ಖರೀದಿ ಮಾಡಿದ್ದ ಈ ಜಾಗದ ಪತ್ರಗಳು ಕಾನೂನುಬದ್ಧವಾಗಿಲ್ಲ ಮತ್ತು ಈ ಜಾಗ ನಮಗೆ ಸೇರಬೇಕು ಎಂಬುದು ಶಿವಕಾಮಿ ಅವರ ವಾದ ಆಗಿತ್ತು. 1940ರ ದಾಖಲೆಗಳನ್ನು ಮುಂದಿಟ್ಟುಕೊಂಡು 2025ರಲ್ಲಿ ಈ ದಾವೆ ಹೂಡಲಾಗಿತ್ತು.

ಕಪೂರ್ ಕುಟುಂಬದ ವಾದ:

ಬೋನಿ ಕಪೂರ್ ಪರ ವಕೀಲರು ಈ ಅರ್ಜಿಯನ್ನು ಬಲವಾಗಿ ವಿರೋಧಿಸಿದ್ದರು. 1988ರಲ್ಲಿ ನಡೆದ ವ್ಯವಹಾರವನ್ನು ಸುಮಾರು 40 ವರ್ಷಗಳ ನಂತರ ಪ್ರಶ್ನಿಸುವುದು ಸರಿಯಲ್ಲ ಎಂದು ವಾದಿಸಿದರು. ಕೇವಲ ಆಸ್ತಿ ಬಾಚಿಕೊಳ್ಳುವ ಉದ್ದೇಶದಿಂದ ಈಗ ಸುಳ್ಳು ವಾರಸುದಾರರ ಪ್ರಮಾಣಪತ್ರ ನೀಡಿ ದಾವೆ ಹೂಡಲಾಗಿದೆ ಎಂದು ಕಪೂರ್ ಕುಟುಂಬದ ಪರ ವಕೀಲರು ವಾದಿಸಿದ್ದರು.

ಪ್ರಕರಣದ ವಾದ-ವಿವಾದ ಆಲಿಸಿದ ನ್ಯಾಯಮೂರ್ತಿ ಟಿ.ವಿ. ತಮಿಳ್‌ಸೆಲ್ವಿ ಅವರು ಕಪೂರ್ ಕುಟುಂಬದ ವಾದವನ್ನು ಪುರಸ್ಕರಿಸಿದ್ದಾರೆ. ಸುಮಾರು ನಾಲ್ಕು ದಶಕಗಳ ನಂತರ ಹೂಡಿರುವ ಈ ಪ್ರಕರಣವು ಕಾಲಮಿತಿಯ ನಿಯಮವನ್ನು ಉಲ್ಲಂಘಿಸಿದೆ ಎಂದು ಕೋರ್ಟ್ ಹೇಳಿದೆ. ದೂರುದಾರರು ಸಲ್ಲಿಸಿದ್ದ ವಾರಸುದಾರರ ಪ್ರಮಾಣಪತ್ರ ಈಗಾಗಲೇ ರದ್ದಾಗಿರುವುದನ್ನು ಗಮನಿಸಿದ ನ್ಯಾಯಾಲಯ, ಆಸ್ತಿ ಕಬಳಿಸುವ ಉದ್ದೇಶದಿಂದ ಕಾನೂನನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಖಾರವಾಗಿ ಹೇಳಿ ದಾವೆಯನ್ನು ವಜಾಗೊಳಿಸಿದೆ.

ಇದನ್ನೂ ಓದಿ: ಯುವ ಜೊತೆಗಿನ ಫೋಟೋ ಹಂಚಿಕೊಂಡು ಮಹಿಳೆಯರಿಗೆ ಸಂದೇಶ ಕೊಟ್ಟ ಶ್ರೀದೇವಿ ಭೈರಪ್ಪ

ಶ್ರೀದೇವಿ ಅವರ ನಿಧನದ ನಂತರ ಈ ಆಸ್ತಿ ಕಾನೂನುಬದ್ಧವಾಗಿ ಬೋನಿ ಕಪೂರ್ ಮತ್ತು ಅವರ ಇಬ್ಬರು ಪುತ್ರಿಯರಿಗೆ ಸೇರಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಈ ಮೂಲಕ ಚೆಂಗಲ್ಪಟ್ಟು ನ್ಯಾಯಾಲಯ ನೀಡಿದ್ದ ಹಿಂದಿನ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿ ಕಪೂರ್ ಕುಟುಂಬಕ್ಕೆ ಜಯ ತಂದುಕೊಟ್ಟಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಂಗಾಳ ಮುಂದಿನ ಸಿಎಂ ಸುವೇಂದು ಅಧಿಕಾರಿ? ಅಗ್ನಿಮಿತ್ರಾ, ನಿಸಿತ್ ಉಪಮುಖ್ಯಮಂತ್ರಿಗಳು? – Kannada News | West Bengal govt formation, Suvendu Adhikari frontrunner for CM, may elect 2 DCMs

ಕೋಲ್ಕತಾ, ಮೇ 8: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ (West Bengal Assembly Elections 2026) ಐತಿಹಾಸಿಕ ಗೆಲುವು ದಾಖಲಿಸಿರುವ ಬಿಜೆಪಿಯಲ್ಲಿ ಈಗ ಸರ್ಕಾರ ಮತ್ತು ಮಂತ್ರಿಮಂಡಲ ರಚನೆಯ ಕಸರತ್ತು ನಡೆಯುತ್ತಿದೆ. ಇವತ್ತು ಶುಕ್ರವಾರ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ನಡೆಯಲಿದೆ. ಮುಖ್ಯಮಂತ್ರಿ ಯಾರೆಂದು ಸಂಜೆಯೊಳಗೆ ಸ್ಪಷ್ಟವಾಗುತ್ತದೆ. ಕೆಲ ಮಾಧ್ಯಮಗಳಲ್ಲಿ ಬಂದಿರುವ ವರದಿಗಳ ಪ್ರಕಾರ, ಸುವೇಂದು ಅಧಿಕಾರಿ (Suvendu Adhikari) ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಆಗಲಿದ್ದಾರೆ ಎನ್ನಲಾಗಿದೆ. ಮಮತಾ ಬ್ಯಾನರ್ಜಿಯನ್ನು ಎರಡು ಬಾರಿ ಸೋಲಿಸಿದ ದಿಗ್ಗಜರಾದ ಸುವೇಂದು ಅಧಿಕಾರಿ ಸದ್ಯ ಬಂಗಾಳ ಬಿಜೆಪಿಯಲ್ಲಿ ಅಗ್ರಗಣ್ಯ ನಾಯಕ. ಸಹಜವಾಗಿ ಅವರು ಸಿಎಂ ರೇಸ್​ನಲ್ಲಿ ಟಾಪ್​ನಲ್ಲಿದ್ದಾರೆ.

ಸುವೇಂದು ಅಧಿಕಾರಿ ಮುಖ್ಯಮಂತ್ರಿಯಾದರೆ, ಇಬ್ಬರು ಡಿಸಿಎಂಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಇಬ್ಬರಲ್ಲಿ ಒಬ್ಬರು ಮಹಿಳೆಯಾಗಿರುತ್ತಾರೆ. ದಕ್ಷಿಣ ಅಸಾನ್ಸೋಲ್​ನಲ್ಲಿ ಗೆದ್ದಿರುವ ಬಿಜೆಪಿ ಮಹಿಳಾ ನಾಯಕಿ ಅಗ್ನಿಮಿತ್ರಾ ಪೌಲ್ ಅವರು ಡಿಸಿಎಂ ಆಗಬಹುದು. ಮಾಜಿ ಕೇಂದ್ರ ಸಚಿವ ನಿಸಿತ್ ಪ್ರಾಮಾಣಿಕ್ ಅವರು ಎರಡನೇ ಡಿಸಿಎಂ ಆಗಬಹುದು ಎಂದು ವರದಿಗಳು ಹೇಳುತ್ತಿವೆ. ಬುಡಕಟ್ಟು ಸಮುದಾಯದ ವ್ಯಕ್ತಿಯನ್ನೂ ಡಿಸಿಎಂ ಸ್ಥಾನಕ್ಕೆ ಪರಿಗಣಿಸುವ ಸಾಧ್ಯತೆ ಇದೆ ಎಂದು ಎನ್​ಡಿಟಿವಿ ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಬಂಗಾಳ ಚುನಾವಣೆ 2026: ಎಸ್​ಐಆರ್ ಸುತ್ತಲಿನ ಆರೋಪಗಳು ಹಾಗೂ ಸತ್ಯಾಸತ್ಯತೆಗಳು

ಪಶ್ಚಿಮ ಬಂಗಾಳದಲ್ಲಿ ಈ ಹಿಂದೆ ಯಾರೂ ಕೂಡ ಡಿಸಿಎಂ ಆಗಿದ್ದಿಲ್ಲ. ಆ ಮಟ್ಟಿಗೆ ಇದು ಮಹತ್ವ ಎನಿಸಲಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಕೋಲ್ಕತಾಗೆ ಆಗಮಿಸಿದ್ದಾರೆ. ಇವತ್ತು ಅಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿದೆ. ಅಲ್ಲಿ ನಾಯಕನ ಆಯ್ಕೆ ಆಗಲಿದೆ. ಬಿಜೆಪಿ ಸಂಸದ ರಾಹುಲ್ ಸಿನ್ಹಾ ಪ್ರಕಾರ ಸಂಜೆ 6 ಗಂಟೆಯೊಳಗೆ ಪಕ್ಷದ ಸಭೆಯ ತೀರ್ಮಾನ ಸ್ಪಷ್ಟವಾಗಿ ಬಹಿರಂಗವಾಗಲಿದೆ.

ಪಶ್ಚಿಮ ಬಂಗಾಳದ 294 ಕ್ಷೇತ್ರಗಳ ಪೈಕಿ 293 ಕ್ಷೇತ್ರಗಳಿಗೆ ಚುನಾವಣೆ ಪೂರ್ಣಗೊಂಡು ಫಲಿತಾಂಶ ಪ್ರಕಟವಾಗಿದೆ. ಬಹುಮತಕ್ಕೆ 148 ಸ್ಥಾನಗಳ ಅಗತ್ಯವಿದೆ. ಏಕಾಂಗಿಯಾಗಿ ಸ್ಪರ್ಧಿಸಿದ್ದ ಬಿಜೆಪಿ ಬರೋಬ್ಬರಿ 207 ಸ್ಥಾನಗಳಿಸಿ ಸ್ಪಷ್ಟ ಬಹುಮತ ಪಡೆದಿದೆ.

ಇದನ್ನೂ ಓದಿ: ಸುವೇಂದು ಅಧಿಕಾರಿಯ ಪಿಎ ಹತ್ಯೆಗೆ ಬಿಹಾರದಿಂದ ಶಾರ್ಪ್ ಶೂಟರ್ಸ್, 40 ಲಕ್ಷ ರೂ.ಗೆ ಕಾಂಟ್ರಾಕ್ಟ್! ಅಚ್ಚರಿಯ ಮಾಹಿತಿ ಬಯಲು

ಟಿಎಂಸಿ 80, ಕಾಂಗ್ರೆಸ್ 2 ಸ್ಥಾನಗಳನ್ನು ಪಡೆದರೆ ಇತರರಿಗೆ ದಕ್ಕಿದ್ದು 4 ಸ್ಥಾನ ಮಾತ್ರ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಗ್ರೇಟರ್​​ ಬೆಂಗಳೂರು ಪ್ರಾಧಿಕಾರ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?

ಬೆಂಗಳೂರು, ಮೇ 08: ಜಿಬಿಎ ಚುನಾವಣೆ ಸಂಬಂಧ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಸಂಗ್ರೇಶಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದೆ. ಮೀಟಿಂಗ್​​ ಬಳಿಕ ಮಾತನಾಡಿದ ಆಯುಕ್ತ ಸಂಗ್ರೇಶಿ, ಚುನಾವಣೆ ಸಂಬಂಧ ದಿನಾಂಕ ನಿಗದಿ ಮಾತ್ರ ಬಾಕಿ ಉಳಿದಿದೆ. ಉಳಿದೆಲ್ಲಾ ಪ್ರಕ್ರಿಯೆ ಮುಗಿಸಿದ್ದೇವೆ. ಮಳೆಗಾಲ, ಶಾಲಾ ಕಾಲೇಜು, ಸೆನ್ಸನ್ ಇವೆಲ್ಲಾ ಗಮನಿಸಿ ದಿನಾಂಕ ನಿಗದಿ ಆಗಬೇಕು. ಜೂನ್ 30ರ ಒಳಗಾಗಿ GBA ಚುನಾವಣೆ ಮಾಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಹೀಗಾಗಿ ನಿಗದಿತ ಕಾಲಮಿತಿಯಲ್ಲಿ ಚುನಾವಣೆ ಮುಗಿಸಿ ಸುಪ್ರೀಂಕೋರ್ಟ್​​ಗೆ ನಾವು ವರದಿ ಕೊಡಬೇಕು . ಜೂನ್ 14 ರಿಂದ ಜೂನ್ 24ರ ಒಳಗಾಗಿ ಒಂದು ಡೇಟ್ ಹೇಳಿ ಎಂದು ಸೂಚನೆ ಕೊಟ್ಟಿದ್ದೇನೆ. ಕೆಲವೇ ದಿನಗಳಲ್ಲಿ ಅಂತಿಮ ದಿನಾಂಕವನ್ನು ನಿಮ್ಮೆಲ್ಲರಿಗೂ ಹೇಳುತ್ತೇವೆ. ಚುನಾವಣೆ ಮುಂದೂಡಿಕೆ ಮಾಡುವ ಅಧಿಕಾರ ಸುಪ್ರೀಂಕೋರ್ಟ್​​ಗೆ ಮಾತ್ರ ಇರೋದು ಎಂದವರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮಹಿಳೆಯರ ವಿರುದ್ಧದ ಅಪರಾಧ: ದೇಶದ ಮೆಟ್ರೋ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ 3ನೇ ಸ್ಥಾನ – Kannada News | NCRB Report 2024: Bengaluru Ranks 3rd in Crimes Against Women; Leads in Criminal Force with Intent to Outrage Modesty

ಪ್ರಾತಿನಿಧಿಕ ಚಿತ್ರImage Credit source: MediaForge AI

ಬೆಂಗಳೂರು, ಮೇ 8: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಮಹಿಳೆಯರ ಸುರಕ್ಷತೆಗಾಗಿ ಪೊಲೀಸ್ ಇಲಾಖೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ಸಮಸ್ಯೆ ಬಗೆಹರಿಯುವ ಲಕ್ಷಣ ಕಾಣಿಸುತ್ತಿಲ್ಲ. ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ನಗರವು ಇಂದಿಗೂ ದೇಶದ ಮೊದಲ ಮೂರು ಸ್ಥಾನಗಳಲ್ಲೇ ಮುಂದುವರಿದಿದೆ. ಎನ್‌ಸಿಆರ್‌ಬಿ (NCRB) ಬಿಡುಗಡೆ ಮಾಡಿರುವ 2024ರ ವರದಿಯ ಪ್ರಕಾರ, ದೇಶದ 19 ಪ್ರಮುಖ ಮೆಟ್ರೋಪಾಲಿಟನ್ ನಗರಗಳ ಪೈಕಿ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ದೆಹಲಿ ಮತ್ತು ಮುಂಬೈ ಮೊದಲ ಎರಡು ಸ್ಥಾನಗಳಲ್ಲಿವೆ. ನಂತರದ ಸ್ಥಾನದಲ್ಲಿ ಬೆಂಗಳೂರು ಇದೆ.

ಮುಖ್ಯಾಂಶಗಳು

  • 2024ರಲ್ಲಿ ಬೆಂಗಳೂರಿನಲ್ಲಿ ದಾಖಲಾದ ಒಟ್ಟು ಮಹಿಳಾ ದೌರ್ಜನ್ಯ ಪ್ರಕರಣಗಳು 4,748.
  • ಮಹಿಳೆಯರ ಮಾನಭಂಗಕ್ಕೆ ಯತ್ನಿಸಿದ ಪ್ರಕರಣಗಳಲ್ಲಿ ಬೆಂಗಳೂರಿಗೆ ದೇಶದಲ್ಲೇ ಮೊದಲ ಸ್ಥಾನ.
  • ವರದಕ್ಷಿಣೆ ಸಾವು ಪ್ರಕರಣಗಳಲ್ಲಿ ಜೈಪುರದೊಂದಿಗೆ ಬೆಂಗಳೂರು ದೇಶದಲ್ಲಿ 4ನೇ ಸ್ಥಾನದಲ್ಲಿದೆ.

2023ಕ್ಕೆ ಹೋಲಿಸಿದರೆ ಮಹಿಳೆಯರ ವಿರುದ್ಧದ ಒಟ್ಟು ಅಪರಾಧ ಪ್ರಕರಣಗಳ ಸಂಖ್ಯೆಯಲ್ಲಿ ಅಲ್ಪ ಇಳಿಕೆ ಕಂಡುಬಂದಿದ್ದರೂ, ಮಹಿಳೆಯರ ಮೇಲಿನ ದೌರ್ಜನ್ಯದ ತೀವ್ರತೆ ಮಾತ್ರ ಕಡಿಮೆಯಾದಂತೆ ಕಾಣುತ್ತಿಲ್ಲ ಎಂಬುದು ವರದಿಯಿಂದ ತಿಳಿದುಬಂದಿದೆ.

ಅಪರಾಧ ಪ್ರಕರಣಗಳ ಅಂಕಿ-ಅಂಶ

ವರದಿಯ ಪ್ರಕಾರ, ಬೆಂಗಳೂರಿನಲ್ಲಿ ಅತ್ಯಾಚಾರ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಬದಲಾವಣೆಯಾಗಿಲ್ಲ. 2023ರಲ್ಲಿ 169 ಪ್ರಕರಣಗಳಿದ್ದರೆ, 2024ರಲ್ಲಿ 168 ಪ್ರಕರಣಗಳು ದಾಖಲಾಗಿವೆ. ಲೈಂಗಿಕ ಕಿರುಕುಳದ ಪ್ರಕರಣಗಳು ಕಳೆದ ವರ್ಷಕ್ಕಿಂತ 30ರಷ್ಟು ಕಡಿಮೆಯಾಗಿದ್ದು, ಒಟ್ಟು 180 ಪ್ರಕರಣಗಳು ವರದಿಯಾಗಿವೆ. ಆದರೆ, ಮಹಿಳೆಯರ ಮಾನಭಂಗಕ್ಕೆ ಯತ್ನಿಸಿದ ಕ್ರಿಮಿನಲ್ ದೌರ್ಜನ್ಯದ ಪ್ರಕರಣಗಳಲ್ಲಿ ಬೆಂಗಳೂರು ದೇಶಕ್ಕೆ 3ನೇ ಸ್ಥಾನದಲ್ಲಿದೆ (66 ಪ್ರಕರಣಗಳು).

ವರದಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಹೋರಾಟಗಾರರು

ಈ ಅಂಕಿ-ಅಂಶಗಳ ಬಗ್ಗೆ ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘಟನೆಯ ಹಿರಿಯ ನಾಯಕಿ ವಿಮಲಾ ಕೆ.ಎಸ್. ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮೆಟ್ರೋ ನಗರಗಳಲ್ಲಿ ಅಪರಾಧ ಪ್ರಮಾಣ ಕಡಿಮೆಯಾಗಿದೆ ಎಂಬ ವರದಿಯನ್ನು ನಂಬಲು ಸಾಧ್ಯವಿಲ್ಲ. ಪ್ರತಿದಿನ ದಿನಪತ್ರಿಕೆಗಳಲ್ಲಿ ಅತ್ಯಾಚಾರ, ಕಿರುಕುಳದಂತಹ ಹತ್ತಾರು ಸುದ್ದಿಗಳು ಪ್ರಕಟವಾಗುತ್ತಲೇ ಇರುತ್ತವೆ. ಪ್ರಕರಣಗಳು ದಾಖಲಾಗದೆ ಹತ್ತಿಕ್ಕಲಾಗುತ್ತಿರಬಹುದು ಅಥವಾ ವರದಿ ಮಾಡುವ ವಿಧಾನದಲ್ಲಿ ದೋಷವಿರಬಹುದು. ಅಪರಾಧ ಸಾಬೀತಾಗುವ (Conviction rate) ಪ್ರಮಾಣ ಕಡಿಮೆಯಿರುವುದರಿಂದ ಜನರು ನ್ಯಾಯದ ಮೇಲಿನ ಭರವಸೆ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ದೇಶದ ಮೆಟ್ರೋ ನಗರಗಳ ಒಟ್ಟಾರೆ ಚಿತ್ರಣ

ವರದಿಯ ಪ್ರಕಾರ, 19 ಮೆಟ್ರೋ ನಗರಗಳಲ್ಲಿ ದಾಖಲಾದ ಒಟ್ಟು ಪ್ರಕರಣಗಳ ಪೈಕಿ ಪತಿಯಿಂದ ಅಥವಾ ಆತನ ಸಂಬಂಧಿಕರಿಂದ ನಡೆಯುವ ಕ್ರೌರ್ಯದ ಪ್ರಕರಣಗಳು ಅತಿ ಹೆಚ್ಚು (ಶೇ 28.4) ಇವೆ. ಉಳಿದಂತೆ ಮಹಿಳೆಯರ ಅಪಹರಣ (ಶೇ 20.1) ಹಾಗೂ ಮಾನಭಂಗದ ಉದ್ದೇಶದಿಂದ ನಡೆಯುವ ಹಲ್ಲೆ ಪ್ರಕರಣಗಳು (ಶೇ 9.2) ನಂತರದ ಸ್ಥಾನದಲ್ಲಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಜೇಡರ ಬಲೆ’ ಸಿನಿಮಾ ಕತೆ ಕೇಳಿ ಬಿದ್ದು-ಬಿದ್ದು ನಕ್ಕಿದ್ದ ಅಣ್ಣಾವ್ರು: ಕಾರಣವೇನು? – Kannada News | How Kannada’s first spy action movie Jedara Bale made, what was Dr Rajkumar’s reaction

ಜೇಡರ ಬಲೆ’ (Jedara Bale) ಕನ್ನಡದ ಮೊಟ್ಟ ಮೊದಲ ಬಾಂಡ್ ಸಿನಿಮಾ. ಡಾ ರಾಜ್​ಕುಮಾರ್ ಅವರು ಈ ಸಿನಿಮಾದ ನಾಯಕ. 1968ರಲ್ಲಿ ಬಿಡುಗಡೆ ಆದ ಈ ಸಿನಿಮಾ ನಿರ್ದೇಶನ ಮಾಡಿದ್ದು ದೊರೈ-ಭಗವಾನ್. ಸಿನಿಮಾ ಆಗಿನ ಕಾಲಕ್ಕೆ ಭಾರಿ ದೊಡ್ಡ ಹಿಟ್ ಆಗಿದ್ದು ಮಾತ್ರವೇ ಅಲ್ಲದೆ, ಸಿನಿಮಾದ ತಂತ್ರಜ್ಞಾನ, ನಿರ್ಮಾಣ ಚತುರತೆಯಿಂದ ಭಾರಿ ಪ್ರಶಂಸೆಗೆ ಕಾರಣವಾಗಿತ್ತು. ಆ ನಂತರ ಕನ್ನಡದಲ್ಲಿ ಸ್ಪೈ ಸಿನಿಮಾಗಳು, ಥ್ರಿಲ್ಲರ್ ಸಿನಿಮಾಗಳು ಹೇರಳವಾಗಿ ಮೂಡಿ ಬರಲು ವೇದಿಕೆ ಹಾಕಿಕೊಟ್ಟ ಸಿನಿಮಾ ಸಹ ಇದಾಯ್ತು. ಆದರೆ ಮೊದಲ ಬಾರಿಗೆ ಈ ಸಿನಿಮಾದ ಚರ್ಚೆ ಬಂದಾಗ ಅಣ್ಣಾವ್ರು ಬಿದ್ದು-ಬಿದ್ದು ನಕ್ಕಿದ್ದರಂತೆ. ಈ ಬಗ್ಗೆ ಭಗವಾನ್ ಈ ಹಿಂದೆ ಸಂದರ್ಶನದಲ್ಲಿ ಮಾತನಾಡಿದ್ದರು.

ಡಾ ರಾಜ್​ಕುಮಾರ್, ದೊರೈ-ಭಗವಾನ್ ಅವರು ಬೆಂಗಳೂರಿನಲ್ಲಿ ಇಂಗ್ಲೀಷಿನ ಮೊದಲ ಬಾಂಡ್ ಸಿನಿಮಾ ‘ಡಾ ನೋ’ ಸಿನಿಮಾ ನೋಡಲು ಹೋಗಿದ್ದರಂತೆ. ‘ಡಾ ನೋ’ ಮೊಟ್ಟ ಮೊದಲ ಜೇಮ್ಸ್ ಬಾಂಡ್ ಸಿನಿಮಾ. ಅತ್ಯಂತ ಹಳೆಯ ಹಾಲಿವುಡ್​ ಸಿನಿಮಾ ಸರಣಿಗಳಲ್ಲಿ ಒಂದು. ಆ ಸಿನಿಮಾ 1962 ರಲ್ಲಿ ಬಿಡುಗಡೆ ಆಗಿತ್ತು. ಭಾರತಕ್ಕೆ ಬರುವಷ್ಟರಲ್ಲಿ ಕೆಲ ವರ್ಷಗಳೇ ಆಗಿದ್ದವು. ಅಣ್ಣಾವ್ರು, ದೊರೈ-ಭಗವಾನ್ ಅವರುಗಳು ‘ಡಾ ನೋ’ ಸಿನಿಮಾ ನೋಡಿದ ಬಳಿಕ ಹೋಟೆಲ್ ಒಂದರಲ್ಲಿ ದೋಸೆ ತಿನ್ನಲು ಹೋದರಂತೆ. ಅಲ್ಲಿಯೇ ‘ಜೇಡರ ಬಲೆ’ ಸಿನಿಮಾದ ಕತೆ ಹೊಳೆದಿದ್ದು.

ಮೊದಲಿಗೆ ದೊರೈ ಅವರು ‘ಡಾ ನೋ’ ಮಾದರಿಯ ಸ್ಪೈ ಸಿನಿಮಾವನ್ನು ಕನ್ನಡದಲ್ಲಿ ಮಾಡಿದರೆ ಹೇಗೆ ಎಂದರಂತೆ. ಅದಕ್ಕೆ ಅಣ್ಣಾವ್ರು ನಗಲು ಆರಂಭಿಸಿದರಂತೆ. ಅವರು ಬಾಯಲ್ಲಿಟ್ಟಿದ್ದ ದೋಸೆ, ಕೆಳಗೆ ಬಿದ್ದು, ನಗುವಿಗೆ ನೆತ್ತಿಗೆ ಹತ್ತಿ ಬಿಟ್ಟಿತಂತೆ ಅಷ್ಟು ನಗಲು ಆರಂಭಿಸಿಬಿಟ್ಟರಂತೆ ರಾಜ್​ಕುಮಾರ್. ಏಕೆಂದು ದೊರೈ ಕೇಳಿದಾಗ, ‘ಅಲ್ಲ ಆ ಹಾಲಿವುಡ್ ಸಿನಿಮಾ ಎಲ್ಲಿ, ನಮ್ಮ ಕನ್ನಡದ ಸಿನಿಮಾ ಎಲ್ಲಿ, ಆ ಮಟ್ಟದ ತಂತ್ರಜ್ಞಾನ ಇತರೆಗಳು ನಮ್ಮಲ್ಲಿ ತರಲು ಆಗುತ್ತದೆಯೇ? ನವಿಲು ನೋಡಿ ಕೆಂಬೂತ ಕುಣಿದಂತೆ ಆಗುತ್ತದೆ’ ಎಂದರಂತೆ ರಾಜ್​ಕುಮಾರ್.

ಇದನ್ನೂ ಓದಿ:54 ವರ್ಷದ ಬಳಿಕ ‘ಜೇಡರ ಬಲೆ’ ಚಿತ್ರದ ಶೀರ್ಷಿಕೆ ಮರುಬಳಕೆ; ಹೊಸ ಸಿನಿಮಾ ಬಗ್ಗೆ ಇಲ್ಲಿದೆ ಮಾಹಿತಿ

ಆದರೆ ದೊರೈ ಅವರು ಹಠ ಬಿಡಲಿಲ್ಲವಂತೆ, ಅಣ್ಣಾವ್ರ ಆ ನಗುವನ್ನು ಸವಾಲಾಗಿ ಸ್ವೀಕರಿಸಿದ ದೊರೈ ಅವರು, ‘ನೀವು ಹೂ ಎನ್ನಿ ಸಾಕು, ನಾವು ಸಿನಿಮಾ ಮಾಡುತ್ತೇವೆ’ ಎಂದರಂತೆ. ಸರಿ ಅಣ್ಣಾವ್ರು ಸಹ ಸರಿಯೆಂದು ಒಪ್ಪಿಕೊಂಡರು. ಆ ಬಳಿಕ ‘ಜೇಡರ ಬಲೆ’ ಸಿನಿಮಾ ನಿರ್ಮಾಣ ಆಯ್ತು. ಅಣ್ಣಾವ್ರು ನಟಿಸಿದ ಮೊಟ್ಟ ಮೊದಲ ಬಾಂಡ್ ಸಿನಿಮಾ ಮಾತ್ರವೇ ಅಲ್ಲದೆ, ಕನ್ನಡದ ಮೊಟ್ಟ ಮೊದಲ ಬಾಂಡ್ ಸಿನಿಮಾ ಎಂಬ ಖ್ಯಾತಿಯನ್ನು ಪಡೆದುಕೊಂಡಿತು ಈ ಸಿನಿಮಾ.

1968ರ ಜನವರಿಯಲ್ಲಿ ‘ಜೇಡರ ಬಲೆ’ ಸಿನಿಮಾ ಬಿಡುಗಡೆ ಆಯ್ತು. ಆ ಸಿನಿಮಾದ ಯಶಸ್ಸಿನಿಂದ ಸ್ಪೂರ್ತಿಗೊಂಡು ಹಿಂದಿಯಲ್ಲಿ ‘ಆಂಖೆ’ ಹೆಸರಿನ ಸ್ಪೈ ಸಿನಿಮಾ ಮಾಡಲಾಯ್ತು. ಆದರೆ ಅದಕ್ಕಿಂತಲೂ ಮುಂಚೆ ತೆಲುಗಿನಲ್ಲಿ 1966 ರಲ್ಲಿ ‘ಗೂಢಚಾರಿ 116’ ಹೆಸರಿನ ಸ್ಪೈ ಥ್ರಿಲ್ಲರ್ ಸಿನಿಮಾವನ್ನು ಮಾಡಲಾಗಿತ್ತು. ಈ ಸಿನಿಮಾದ ನಾಯಕ ಮಹೇಶ್ ಬಾಬು ಅವರ ತಂದೆ ಕೃಷ್ಣ ಮತ್ತು ನಾಯಕಿ, ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಂಗಾಳ ಚುನಾವಣೆ 2026: ಎಸ್​ಐಆರ್ ಸುತ್ತಲಿನ ಆರೋಪಗಳು ಹಾಗೂ ಸತ್ಯಾಸತ್ಯತೆಗಳು – Kannada News | West Bengal Election: Debunking Voter List Fraud & SIR Process Reality

ಪಶ್ಚಿಮ ಬಂಗಾಳ ಮಾಜಿ ಸಿಎಂ ಮಮತಾ ಬ್ಯಾನರ್ಜಿImage Credit source: PTI

ಕೋಲ್ಕತ್ತಾ, ಮೇ 8: ಇತ್ತೀಚೆಗೆ ಮುಕ್ತಾಯಗೊಂಡ ಪಶ್ಚಿಮ ಬಂಗಾಳದ ಐತಿಹಾಸಿಕ ವಿಧಾನಸಭಾ ಚುನಾವಣೆಯ (West Bengal Assembly Elections 2026) ಫಲಿತಾಂಶಗಳು ಹೊರಬಿದ್ದ ಬೆನ್ನಲ್ಲೇ, ಸೋಲಿನಿಂದ ಕಂಗೆಟ್ಟಿರುವ ವಿರೋಧ ಪಕ್ಷಗಳ ಒಕ್ಕೂಟವು ಚುನಾವಣಾ ಪ್ರಕ್ರಿಯೆಯ ನಿಷ್ಪಕ್ಷಪಾತತೆಯನ್ನೇ ಪ್ರಶ್ನಿಸಲು ಆರಂಭಿಸಿದೆ. ವಿಶೇಷವಾಗಿ, ಚುನಾವಣಾ ಆಯೋಗವು ಹಮ್ಮಿಕೊಂಡಿದ್ದ ‘ವಿಶೇಷ ತೀವ್ರ ಪರಿಷ್ಕರಣೆ’ (Special Intensive Revision – SIR) ಪ್ರಕ್ರಿಯೆಯು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಸೋಲಿಗೆ ಕಾರಣವಾಯಿತು ಮತ್ತು ಇದು ಮತದಾರರ ಪಟ್ಟಿಯ ಮೇಲೆ ನಡೆದ “ವ್ಯವಸ್ಥಿತ ದಾಳಿ” ಎಂದು ರಾಹುಲ್ ಗಾಂಧಿ ನೇತೃತ್ವದ ಇಂಡಿ (INDI) ಮೈತ್ರಿಕೂಟ ಆರೋಪಿಸುತ್ತಿದೆ.

ಆದರೆ, ಲಭ್ಯವಿರುವ ಅಧಿಕೃತ ಅಂಕಿ-ಅಂಶಗಳು, ದೇಶದ ಪ್ರಜಾಪ್ರಭುತ್ವದ ನಿಯಮಾವಳಿಗಳು ಮತ್ತು ನ್ಯಾಯಾಂಗದ ಕಣ್ಗಾವಲನ್ನು ಸೂಕ್ಷ್ಮವಾಗಿ ಗಮನಿಸಿದರೆ, ವಿರೋಧ ಪಕ್ಷಗಳ ಈ ಆರೋಪಗಳು ಕೇವಲ ರಾಜಕೀಯ ಹತಾಶೆಯಿಂದ ಕೂಡಿದ್ದು, ಸತ್ಯಕ್ಕೆ ದೂರವಾಗಿವೆ ಎಂಬುದು ಸಾಬೀತಾಗುತ್ತದೆ. ಈ ಕುರಿತಾದ ನೈಜ ಸತ್ಯಾಂಶಗಳನ್ನು ದತ್ತಾಂಶಗಳ ಸಮೇತ ಇಲ್ಲಿ ವಿಶ್ಲೇಷಿಸಲಾಗಿದೆ.

1. SIR ಎಂಬುದು ದೇಶಾದ್ಯಂತ ನಡೆಯುವ ಸಾಮಾನ್ಯ ಸಂವಿಧಾನಬದ್ಧ ಪ್ರಕ್ರಿಯೆ

ವಿಶೇಷ ತೀವ್ರ ಪರಿಷ್ಕರಣೆ (SIR) ಎಂಬುದು ಪಶ್ಚಿಮ ಬಂಗಾಳ ಚುನಾವಣೆಯನ್ನು ಗುರಿಯಾಗಿಸಿಕೊಂಡು ರೂಪಿಸಿದ ಹೊಸ ಕಾಯ್ದೆಯಾಗಲಿ ಅಥವಾ ಅಸ್ತ್ರವಾಗಲಿ ಅಲ್ಲ. ಭಾರತೀಯ ಚುನಾವಣಾ ಆಯೋಗವು (ECI) ದೇಶಾದ್ಯಂತ ಮತದಾರರ ಪಟ್ಟಿಯನ್ನು ಅತ್ಯಂತ ಪಾರದರ್ಶಕವಾಗಿಡಲು, ಮರಣ ಹೊಂದಿದವರ, ದ್ವಿಪ್ರತಿ (Duplicate) ಹೊಂದಿರುವ ಮತ್ತು ಶಾಶ್ವತವಾಗಿ ವಲಸೆ ಹೋಗಿರುವ ಮತದಾರರ ಹೆಸರುಗಳನ್ನು ತೆಗೆದುಹಾಕಲು ನಿಯಮಿತವಾಗಿ ಹಮ್ಮಿಕೊಳ್ಳುವ ಸಾಮಾನ್ಯ ಆಡಳಿತಾತ್ಮಕ ಪ್ರಕ್ರಿಯೆಯಾಗಿದೆ. ಈ ಹಿಂದೆ ದೇಶದ ಬೇರೆ ಬೇರೆ ರಾಜ್ಯಗಳಲ್ಲೂ ಇದೇ ಮಾದರಿಯ ಪರಿಷ್ಕರಣೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಹೀಗಿರುವಾಗ, ಇದನ್ನು ಬಂಗಾಳಕ್ಕೆ ಮಾತ್ರ ಸೀಮಿತಗೊಳಿಸಿ ರಾಜಕೀಯ ಪಿತೂರಿ ಎಂದು ಬಿಂಬಿಸಲು ಆಗುವುದಿಲ್ಲ.

2. ಪಕ್ಷಪಾತದ ಆರೋಪಕ್ಕೆ ಅಂಕಿ-ಅಂಶಗಳ ಉತ್ತರ

ವಿರೋಧ ಪಕ್ಷಗಳ ಆಳ್ವಿಕೆ ಇರುವ ರಾಜ್ಯಗಳ ಮತದಾರರನ್ನು ಮಾತ್ರ ಗುರಿಯಾಗಿಸಿಕೊಂಡು ಹೆಸರುಗಳನ್ನು ಕೈಬಿಡಲಾಗಿದೆ ಎಂಬ ಆಕ್ಷೇಪಣೆಯನ್ನು ರಾಷ್ಟ್ರೀಯ ದತ್ತಾಂಶಗಳು ತಳ್ಳಿಹಾಕುತ್ತವೆ.

ಕಳೆದ ಕೆಲವು ವರ್ಷಗಳಲ್ಲಿ ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢ ರಾಜ್ಯಗಳಲ್ಲೂ ಸಹ ಪಶ್ಚಿಮ ಬಂಗಾಳಕ್ಕೆ ಸಮಾನವಾಗಿ ಅಥವಾ ಅದಕ್ಕಿಂತ ಹೆಚ್ಚಿನ ಶೇಕಡಾವಾರು ಪ್ರಮಾಣದಲ್ಲಿ ಮತದಾರರ ಹೆಸರುಗಳನ್ನು ಪರಿಷ್ಕರಿಸಿ ಕೈಬಿಡಲಾಗಿತ್ತು. ಚುನಾವಣಾ ಆಯೋಗವು ಯಾವುದೇ ರಾಜಕೀಯ ಪಕ್ಷಪಾತವಿಲ್ಲದೆ, ದೇಶಾದ್ಯಂತ ಒಂದೇ ರೀತಿಯ ತಾಂತ್ರಿಕ ಮತ್ತು ಆಡಳಿತಾತ್ಮಕ ನಿಯಮಗಳನ್ನು ಬಳಸಿ ಈ ಪ್ರಕ್ರಿಯೆಯನ್ನು ನಡೆಸಿದೆ.

ಇದನ್ನೂ ಓದಿ: ಸೋಮನಾಥ ದೇಗುಲ: ಸರ್ದಾರ್ ಪಟೇಲರ ಕನಸು, ಭಾರತದ ಹೆಮ್ಮೆ, ಅಖಂಡತೆಯ ಸಂಕೇತ – ಪಿಎಂ ಮೋದಿ ಲೇಖನ

3. ಮತದಾರರ ಹೆಸರು ಕಡಿತಕ್ಕೂ ಬಿಜೆಪಿಯ ಗೆಲುವಿಗೂ ಸಂಬಂಧವಿಲ್ಲ

ವಿರೋಧ ಪಕ್ಷಗಳ ಆರೋಪದಂತೆ, ಒಂದು ವೇಳೆ ಮತದಾರರ ಹೆಸರುಗಳನ್ನು ಕೈಬಿಟ್ಟಿರುವುದು ಬಿಜೆಪಿಗೆ ಲಾಭ ತಂದುಕೊಡಲು ಎಂಬ ವಾದವನ್ನು ಗಣಿತದ ಲೆಕ್ಕಾಚಾರಗಳೇ ಸುಳ್ಳಾಗಿಸುತ್ತವೆ:

ಅತಿ ಹೆಚ್ಚು ಹೆಸರು ಕಡಿತಗೊಂಡ ಕ್ಷೇತ್ರಗಳು: ಪಶ್ಚಿಮ ಬಂಗಾಳದಾದ್ಯಂತ ಅತಿ ಹೆಚ್ಚು ಮತದಾರರ ಹೆಸರುಗಳನ್ನು ಕೈಬಿಡಲಾದ ಟಾಪ್ 20 ವಿಧಾನಸಭಾ ಕ್ಷೇತ್ರಗಳ ಪೈಕಿ TMC ಬರೋಬ್ಬರಿ 13 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ! ಇನ್ನುಳಿದ ಕ್ಷೇತ್ರಗಳಲ್ಲಿ ಬಿಜೆಪಿ 6 ಮತ್ತು ಕಾಂಗ್ರೆಸ್ 1 ಕ್ಷೇತ್ರದಲ್ಲಿ ಗೆದ್ದಿವೆ. ಒಂದು ವೇಳೆ ಇದು ಆಡಳಿತಾರೂಢ ಪಕ್ಷದ ವಿರುದ್ಧ ನಡೆದ ವ್ಯವಸ್ಥಿತ ಸಂಚಾಗಿದ್ದರೆ, ಅತಿ ಹೆಚ್ಚು ಹೆಸರು ಕಡಿತಗೊಂಡ ಸಂಸೇರ್‌ಗಂಜ್, ಲಾಲ್‌ಗೊಲಾ, ಭಗಬಾಂಗೋಲಾ ಮತ್ತು ಮೇಟಿಯಾಬುರುಜ್ ನಂತಹ ಕ್ಷೇತ್ರಗಳಲ್ಲಿ TMC ಹೇಗೆ ಜಯಭೇರಿ ಬಾರಿಸಲು ಸಾಧ್ಯವಿತ್ತು?

ಕಡಿಮೆ ಅಂತರದ ಕ್ಷೇತ್ರಗಳ ಚಿತ್ರಣ: ರಾಜ್ಯದ ಒಟ್ಟು 293 ಕ್ಷೇತ್ರಗಳ ಪೈಕಿ 49 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಗೆಲುವಿನ ಅಂತರವು ಆ ಕ್ಷೇತ್ರದಲ್ಲಿ ಕೈಬಿಡಲಾದ ಮತಗಳಿಗಿಂತ ಕಡಿಮೆಯಿತ್ತು. ಈ 49 ತೀವ್ರ ಪೈಪೋಟಿಯ ಕ್ಷೇತ್ರಗಳಲ್ಲಿ ಬಿಜೆಪಿ 26 ಸ್ಥಾನಗಳನ್ನು ಗೆದ್ದರೆ, TMC ಮತ್ತು ಕಾಂಗ್ರೆಸ್ ಒಟ್ಟಾಗಿ 23 ಸ್ಥಾನಗಳನ್ನು (TMC 21, ಕಾಂಗ್ರೆಸ್ 2) ಗೆದ್ದಿವೆ. ಈ ಸಮಾನ ಹಂಚಿಕೆಯು ಪ್ರಕ್ರಿಯೆಯು ಯಾವುದೇ ಪಕ್ಷಪಾತವಿಲ್ಲದೆ ನಡೆದಿರುವುದಕ್ಕೆ ಗಟ್ಟಿಯಾದ ಪುರಾವೆಯಾಗಿದೆ.

4. ಪ್ರಜಾಪ್ರಭುತ್ವದ ‘ಫಸ್ಟ್‌-ಪಾಸ್ಟ್-ದಿ-ಪೋಸ್ಟ್’ ನಿಯಮದ ಅರಿವಿಲ್ಲದಿರುವುದು

ಕೇವಲ ಶೇ. 4.8 ರಷ್ಟು ಮತಗಳ ಅಂತರದಿಂದ ಸೀಟುಗಳ ಸಂಖ್ಯೆಯಲ್ಲಿ ಇಷ್ಟೊಂದು ಭಾರಿ ವ್ಯತ್ಯಾಸ ಉಂಟಾಗಲು ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನು ವಿರೋಧ ಪಕ್ಷಗಳು ಎತ್ತುತ್ತಿವೆ. ಆದರೆ, ಇದು ಭಾರತದ ‘ಫಸ್ಟ್‌-ಪಾಸ್ಟ್-ದಿ-ಪೋಸ್ಟ್’ (FPTP) ಚುನಾವಣಾ ವ್ಯವಸ್ಥೆಯ ಅರಿವಿಲ್ಲದಿರುವುದನ್ನು ತೋರಿಸುತ್ತದೆ.

ಭಾರತೀಯ ರಾಜಕೀಯ ಇತಿಹಾಸದಲ್ಲಿ ಕೇವಲ ಶೇ. 1 ರಿಂದ ಶೇ. 3 ರಷ್ಟು ಮತಗಳ ಅಂತರವು ಇಡೀ ಸೀಟುಗಳ ಸಮೀಕರಣವನ್ನೇ ಬದಲಾಯಿಸಿದ ನೂರಾರು ಉದಾಹರಣೆಗಳಿವೆ (ಉದಾಹರಣೆಗೆ: ಹಿಮಾಚಲ ಪ್ರದೇಶ 2022, ತೆಲಂಗಾಣ 2023). ಈ ಚುನಾವಣೆಯಲ್ಲಿ ಬಿಜೆಪಿ ಶೇ. 45.84 ಮತಗಳೊಂದಿಗೆ 207 ಸ್ಥಾನಗಳನ್ನು ಗೆದ್ದುಕೊಂಡರೆ, TMC ಶೇ. 41.08 ಮತಗಳೊಂದಿಗೆ 80 ಸ್ಥಾನಗಳಿಗೆ ಕುಸಿದಿದೆ. ಈ 4.8% ಮತಗಳ ಮುನ್ನಡೆಯು ಪ್ರತಿಯೊಂದು ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿಗಳು ಸಣ್ಣ ಮತ್ತು ಮಧ್ಯಮ ಅಂತರದ ಗೆಲುವು ಸಾಧಿಸಲು ಗಣಿತದ ಪ್ರಕಾರ ಸಂಪೂರ್ಣವಾಗಿ ಪೂರಕವಾಗಿದೆ.

5. ಕಾಂಗ್ರೆಸ್ ಪಕ್ಷದ ಇಬ್ಬಂದಿ ಧೋರಣೆ

ಕಾಂಗ್ರೆಸ್ ಪಕ್ಷದ ಇತಿಹಾಸವನ್ನು ಕೆದಕಿದರೆ ಅವರ ದ್ವಂದ್ವ ನೀತಿ ಸ್ಪಷ್ಟವಾಗುತ್ತದೆ. 2023 ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ ಕರ್ನಾಟಕದಲ್ಲಿ 12 ಲಕ್ಷಕ್ಕೂ ಹೆಚ್ಚು ಮತದಾರರನ್ನು ಸೇರಿಸಲಾಗಿತ್ತು ಮತ್ತು 6 ಲಕ್ಷಕ್ಕೂ ಹೆಚ್ಚು ಹೆಸರುಗಳನ್ನು ಕೈಬಿಡಲಾಗಿತ್ತು. ಆದರೆ, ಆ ಚುನಾವಣೆಯಲ್ಲಿ ತಮಗೆ ಗೆಲುವಾದಾಗ ಕಾಂಗ್ರೆಸ್ ಪಕ್ಷವು ಇಂತಹ ಯಾವುದೇ ಪ್ರಶ್ನೆಗಳನ್ನು ಎತ್ತಲಿಲ್ಲ. ಸೋತಾಗ ಮಾತ್ರ ಸಾಂವಿಧಾನಿಕ ಸಂಸ್ಥೆಗಳನ್ನು ಮತ್ತು ಮತದಾರರ ಪಟ್ಟಿಯನ್ನು ಸಂಶಯದ ಕಣ್ಣಿನಿಂದ ನೋಡುವುದು ರಾಜಕೀಯವಾಗಿ ಎಷ್ಟು ಸರಿ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.

6. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ನ ನೇರ ಉಸ್ತುವಾರಿ

ಇಡೀ ಚುನಾವಣಾ ಪ್ರಕ್ರಿಯೆ ಮತ್ತು SIR ಅಭಿಯಾನವು ದೇಶದ ಸರ್ವೋಚ್ಚ ನ್ಯಾಯಾಲಯ (Supreme Court) ಮತ್ತು ಕಲ್ಕತ್ತಾ ಹೈಕೋರ್ಟ್‌ನ ಅತ್ಯಂತ ಕಟ್ಟುನಿಟ್ಟಿನ ಕಣ್ಗಾವಲಿನಲ್ಲಿ ನಡೆದಿದೆ. ಮತದಾರರ ಪಟ್ಟಿ ಪರಿಷ್ಕರಣೆಯ ವಿರುದ್ಧ ದಾಖಲಾಗಿದ್ದ ಎಲ್ಲಾ ಅರ್ಜಿಗಳನ್ನು ನ್ಯಾಯಾಲಯಗಳು ಸೂಕ್ಷ್ಮವಾಗಿ ಪರಿಶೀಲಿಸಿ, ಚುನಾವಣಾ ಆಯೋಗದ ಪ್ರಕ್ರಿಯೆಗೆ ಹಸಿರು ನಿಶಾನೆ ತೋರಿದ್ದವು.

ಅಲ್ಲದೆ, ಯಾವುದೇ ತಪ್ಪು ಕಡಿತಗಳ ವಿರುದ್ಧ ಮೇಲ್ಮನವಿ ಸಲ್ಲಿಸಲು ನ್ಯಾಯಮಂಡಳಿಗಳ ಅವಕಾಶವಿತ್ತು. ಉದಾಹರಣೆಗೆ, ಫರಕ್ಕಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೊತಾಬ್ ಶೇಖ್ ಅವರ ಹೆಸರನ್ನು ಮೊದಲು ಕೈಬಿಡಲಾಗಿತ್ತು. ಆದರೆ ಅವರು ಕಾನೂನಾತ್ಮಕವಾಗಿ ಮೇಲ್ಮನವಿ ಸಲ್ಲಿಸಿ ತಮ್ಮ ಹೆಸರನ್ನು ಮರಳಿ ಸೇರಿಸಿಕೊಂಡರು ಮತ್ತು ನಂತರ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿದರು. ಹೀಗಿರುವಾಗ, ಇಡೀ ವ್ಯವಸ್ಥೆಯನ್ನು “ಚುನಾವಣಾ ಕಳ್ಳತನ” ಎಂದು ಕರೆಯುವುದು ದೇಶದ ನ್ಯಾಯಾಂಗ ವ್ಯವಸ್ಥೆಗೆ ಮಾಡುವ ಅಪಚಾರವಾಗಿದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದ ಸಂಪುಟವನ್ನು ವಿಸರ್ಜಿಸಿದ ರಾಜ್ಯಪಾಲ; ಮಮತಾ ಬ್ಯಾನರ್ಜಿ ಈಗ ಮಾಜಿ ಸಿಎಂ

7. ಬಂಗಾಳದಲ್ಲಿ ನಡೆದದ್ದು ನೈಜ ರಾಜಕೀಯ ಬದಲಾವಣೆ ಮತ್ತು ಆಡಳಿತ ವಿರೋಧಿ ಅಲೆ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸಾಧಿಸಿರುವ ಅಭೂತಪೂರ್ವ ಗೆಲುವಿಗೆ ಆಡಳಿತಾತ್ಮಕ ಕಾರಣಗಳಿಗಿಂತ ಹೆಚ್ಚಾಗಿ ಜನರಲ್ಲಿದ್ದ ಆಡಳಿತ ವಿರೋಧಿ ಅಲೆ (Anti-Incumbency) ಮುಖ್ಯ ಕಾರಣವಾಗಿದೆ:

  • ಸಚಿವರ ಸೋಲು: 15 ವರ್ಷಗಳ ಸುದೀರ್ಘ ಆಡಳಿತದ ನಂತರ ರಾಜ್ಯದಲ್ಲಿದ್ದ ಭ್ರಷ್ಟಾಚಾರ ಮತ್ತು ಕಾನೂನು ಸುವ್ಯವಸ್ಥೆಯ ಹದಗೆಟ್ಟ ಸ್ಥಿತಿಯಿಂದಾಗಿ ಜನರು ಬದಲಾವಣೆ ಬಯಸಿದ್ದರು. ಇದರ ಪರಿಣಾಮವಾಗಿ, ಸ್ವತಃ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (ಭವಾನಿಪುರ ಕ್ಷೇತ್ರದಲ್ಲಿ) ಸೇರಿದಂತೆ TMC ಯ 35 ಸಚಿವರ ಪೈಕಿ 22 ಸಚಿವರು ಘೋರ ಸೋಲನ್ನು ಅನುಭವಿಸಿದ್ದಾರೆ.
  • ಮಹಿಳಾ ಮತಗಳ ಒಲವು ಬದಲಾವಣೆ: ಈ ಹಿಂದೆ TMC ಯ ಪ್ರಮುಖ ಬೆಂಬಲ ಶಕ್ತಿಯಾಗಿದ್ದ ಮಹಿಳಾ ಮತದಾರರು, ಆರ್ಥಿಕ ಬಿಕ್ಕಟ್ಟು ಮತ್ತು ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಗೆ ಎದುರಾದ ಸವಾಲುಗಳಿಂದಾಗಿ ಈ ಬಾರಿ ಬಿಜೆಪಿಯತ್ತ ಮುಖ ಮಾಡಿದ್ದಾರೆ.
  • ಮೂಲ ಮತಗಳ ವಿಭಜನೆ: ಮುರ್ಶಿದಾಬಾದ್, ಮಾಲ್ಡಾದಂತಹ ಅಲ್ಪಸಂಖ್ಯಾತರು ಹೆಚ್ಚಿರುವ ಜಿಲ್ಲೆಗಳಲ್ಲಿ ಮತಗಳು TMC, ಕಾಂಗ್ರೆಸ್, ಕಮ್ಯುನಿಸ್ಟ್ (CPIM) ಮತ್ತು ಇತರೆ ಸ್ಥಳೀಯ ಪಕ್ಷಗಳ ನಡುವೆ ಹರಿದು ಹಂಚಿಹೋಗಿದ್ದು ಬಿಜೆಪಿಯ ಸುಲಭ ಗೆಲುವಿಗೆ ದಾರಿ ಮಾಡಿಕೊಟ್ಟಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಹೆಂಡತಿ, ಮಕ್ಕಳನ್ನು ಕಳುಹಿಸಿಕೊಡಿ ಎಂದಿದ್ದಕ್ಕೆ ಅಳಿಯನಿಗೆ ಬೆಂಕಿ ಹಚ್ಚಿ ಕೊಲೆ! ಮಾವ, ಭಾವ ಅಂದರ್ – Kannada News | Anekal Horror: Man Burnt Alive by In Laws Over Domestic Dispute; Two Arrested After Dying Declaration

ಹೆಂಡತಿ, ಮಕ್ಕಳನ್ನು ಕಳುಹಿಸಿಕೊಡಿ ಎಂದಿದ್ದಕ್ಕೆ ಅಳಿಯನಿಗೆ ಬೆಂಕಿ ಹಚ್ಚಿ ಕೊಲೆ!

ಆನೇಕಲ್, ಮೇ 08: ಬೆಂಗಳೂರು ಹೊರವಲಯದ ಆನೇಕಲ್‌ನಲ್ಲಿ (Anekal) ಕೌಟುಂಬಿಕ ಕಲಹವೊಂದು ಭೀಕರ ಕೊಲೆಯಲ್ಲಿ ಅಂತ್ಯವಾಗಿದೆ. ಹೆಂಡತಿ ಮತ್ತು ಮಕ್ಕಳನ್ನು ಮನೆಗೆ ಕಳುಹಿಸಿಕೊಡುವಂತೆ ಕೇಳಲು ಹೋದ ವ್ಯಕ್ತಿಯ ಮೇಲೆ ಆತನ ಮಾವ ಮತ್ತು ಭಾವ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ನಡೆದಿದ್ದು, ವ್ಯಕ್ತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಸಾವಿಗೂ ಮುನ್ನ ತನ್ನ ಮೇಲಾದ ದೌರ್ಜನ್ಯದ ಕುರಿತು ವ್ಯಕ್ತಿ ಹೇಳಿಕೊಂಡಿದ್ದು, ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಖ್ಯಾಂಶಗಳು

  • ಪತ್ನಿ-ಮಕ್ಕಳನ್ನು ಕರೆದೊಯ್ಯಲು ಬಂದ ಅಳಿಯನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ ಅತ್ತೆ ಮನೆಯವರು.
  • 19 ದಿನಗಳ ಕಾಲ ಹೋರಾಡಿ ಮೃತಪಟ್ಟ ನವೀನ್
  • ಮ್ಯಾಜಿಸ್ಟ್ರೇಟ್ ಎದುರು ತನ್ನ ಸಾವಿಗೆ ಕುಟುಂಬಸ್ಥರೇ ಕಾರಣವೆಂದು ಹೇಳಿಕೆ.

ಮನೆಗೆ ಬಾ ಎಂದಿದ್ದಕ್ಕೆ ಒಪ್ಪದ ಹೆಂಡತಿ

ಆನೇಕಲ್ ತಾಲೂಕಿನ ಚೂಡೇನಹಳ್ಳಿ ನಿವಾಸಿ ವಿ. ನವೀನ್ (25) ಕೊಲೆಯಾದ ದುರ್ದೈವಿ. ತೆಂಗಿನಕಾಯಿ ವ್ಯಾಪಾರಿಯಾಗಿದ್ದ ನವೀನ್, ಕಳೆದ ಏಪ್ರಿಲ್ 13 ರಂದು ಪತ್ನಿ ಸುಚಿತ್ರಾ ಮತ್ತು ಇಬ್ಬರು ಮಕ್ಕಳೊಂದಿಗೆ ಆನೇಕಲ್‌ನ ಜನತಾ ಕಾಲೋನಿಯಲ್ಲಿರುವ ಅತ್ತೆ ಮನೆಗೆ ಹೋಗಿದ್ದ. ಮರುದಿನ, ಏಪ್ರಿಲ್ 14 ರಂದು ನವೀನ್ ತನ್ನ ಪತ್ನಿ ಮತ್ತು ಮಕ್ಕಳನ್ನು ವಾಪಸ್ ಮನೆಗೆ ಕರೆದೊಯ್ಯಲು ಮುಂದಾದಾಗ ಪತ್ನಿ ಸುಚಿತ್ರಾ ನಿರಾಕರಿಸಿದ್ದಳು.

ಈ ವೇಳೆ ನವೀನ್ ತನ್ನ ಅತ್ತೆ-ಮಾವನ ಬಳಿ ಪತ್ನಿ ಮತ್ತು ಮಕ್ಕಳನ್ನು ಕಳುಹಿಸಿಕೊಡುವಂತೆ ಮನವಿ ಮಾಡಿದ್ದ. ಇದರಿಂದ ಆಕ್ರೋಶಗೊಂಡ ಸುಚಿತ್ರಾ ಕುಟುಂಬಸ್ಥರು ನವೀನ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ಮಾವ ಸಂಪಂಗಿ ಬಾಟಲಿಯಲ್ಲಿದ್ದ ಪೆಟ್ರೋಲನ್ನು ನವೀನ್ ಮೇಲೆ ಸುರಿದಿದ್ದಾರೆ. ಭಾವ ಮುನೇಷ್ ಬೆಂಕಿ ಹಚ್ಚಿದ್ದಾನೆ. ಇದೇ ವೇಳೆ ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ನೀರು ಸುರಿದು ಬೆಂಕಿ ನಂದಿಸಿ, ನವೀನ್​ನನ ರಕ್ಷಿಸಿದ್ದಾರೆ.

ಸಾವಿಗೂ ಮುನ್ನ ಸತ್ಯ ಬಿಚ್ಚಿಟ್ಟ ನವೀನ್

ತೀವ್ರ ಸುಟ್ಟ ಗಾಯಗಳಾಗಿದ್ದರೂ ನವೀನ್ ಸ್ವತಃ ಆನೇಕಲ್ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಮ್ಯಾಜಿಸ್ಟ್ರೇಟ್ ಎದುರು ಹೇಳಿಕೆ ನೀಡಿದ ನವೀನ್, ತನ್ನ ಪತ್ನಿ ಸುಚಿತ್ರಾ, ಮಾವ ಸಂಪಂಗಿ, ಅತ್ತೆ ಮತ್ತು ಭಾವ ಮುನೇಷ್ ಸೇರಿ ತನಗೆ ಬೆಂಕಿ ಹಚ್ಚಿದ್ದಾರೆ ಎಂದು ಹೇಳಿದ್ದ.

ಇದನ್ನೂ ಓದಿ ಪಡಿತರ ಅಕ್ಕಿ ಕಳ್ಳ ಸಾಗಾಣೆದಾರರಿಂದ 3 ಲಕ್ಷ ರೂ. ವಸೂಲಿ! ಬಳ್ಳಾರಿ ಎಸ್ಪಿ ಗನ್ ಮ್ಯಾನ್ ಅಂದರ್

ಚಿಕಿತ್ಸೆ ಫಲಿಸದೆ ಪ್ರಾಣಬಿಟ್ಟ ವ್ಯಕ್ತಿ

ಘಟನೆ ನಡೆದ ಆರಂಭದಲ್ಲಿ ಆನೇಕಲ್ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ 19 ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ ನವೀನ್, ಮೇ 2 ರಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಆತನ ಹೇಳಿಕೆಯ ನಂತರ ಆ ಪ್ರಕರಣವನ್ನು ಕೊಲೆಯೆಂದು ಬದಲಾಯಿಸಲಾಗಿದೆ.

ಈಗಾಗಲೇ ನವೀನ್ ಮಾವ ಸಂಪಂಗಿ ಮತ್ತು ಭಾವ ಮುನೇಷ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದಲ್ಲಿ ಪತ್ನಿ ಮತ್ತು ಅತ್ತೆಯ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದ್ದು, ಸದ್ಯಕ್ಕೆ ಅವರನ್ನು ಬಂಧಿಸಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಳಪತಿ ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​.ಡಿ. ಕುಮಾರಸ್ವಾಮಿ: ಕಾರಣ ಇಲ್ಲಿದೆ – Kannada News | H.D. Kumaraswamy Questions Financial Feasibility of TVK Vijays Freebies in Tamil Nadu

ಹಾಸನ, ಮೇ 08: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ಕಸರತ್ತು ನಡೆಸುತ್ತಿರುವ ನಟ ವಿಜಯ್ ಅವರ ಹೊಸ ರಾಜಕೀಯ ಪಕ್ಷ ಮತ್ತು ಅದರ ಉಚಿತ ಯೋಜನೆಗಳ ಘೋಷಣೆಯ ಕುರಿತು ಪ್ರತಿಕ್ರಿಯಿಸಿದ್ದಾರೆ. ವಿಜಯ್ ಘೋಷಿಸಿರುವ ಉಚಿತ ಗ್ಯಾರಂಟಿ ಯೋಜನೆಗಳಿಗೆ ದೊಡ್ಡ ಪ್ರಮಾಣದ ಹಣದ ಅಗತ್ಯವಿದೆ. ತಮಿಳುನಾಡಿನ ವಾರ್ಷಿಕ ಬಜೆಟ್ ಸುಮಾರು 3.30ರಿಂದ 3.40 ಲಕ್ಷ ಕೋಟಿ ರೂ. ಇದೆ. ಆದರೆ, ವಿಜಯ್ ಅವರ ಉಚಿತ ಯೋಜನೆಗಳಿಗೆ ಒಂದು ವರ್ಷಕ್ಕೆ ಅಂದಾಜು 6 ರಿಂದ 7 ಲಕ್ಷ ಕೋಟಿ ರೂ. ಬೇಕಾಗುತ್ತದೆ. ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ಅವರು ಹೇಗೆ ಹೊಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕು. ವಿಜಯ್‌ರನ್ನು “ದೇವರೇ ಕಾಪಾಡಬೇಕು” ಎಂದು ಅವರು ವ್ಯಂಗ್ಯವಾಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸುವೇಂದು ಅಧಿಕಾರಿಯ ಪಿಎ ಹತ್ಯೆಗೆ ಬಿಹಾರದಿಂದ ಶಾರ್ಪ್ ಶೂಟರ್ಸ್, 40 ಲಕ್ಷ ರೂ.ಗೆ ಕಾಂಟ್ರಾಕ್ಟ್! ಅಚ್ಚರಿಯ ಮಾಹಿತಿ ಬಯಲು – Kannada News | Suvendu Adhikari PA Murder Case: Sharp Shooters from Bihar Hired for Rs 40 Lakh Contract; Probe Reveals Details

ಚಂದ್ರನಾಥ್ ರಥ್ ಹಾಗೂ ಸುವೇಂದು ಅಧಿಕಾರಿImage Credit source: TV9 Network

ಕೋಲ್ಕತ್ತಾ, ಮೇ 8: ಪಶ್ಚಿಮ ಬಂಗಾಳದ ಬಿಜೆಪಿ ನಾಯಕ, ಸಿಎಂ ರೇಸ್​​​ನಲ್ಲಿ ಮುಂಚೂಣಿಯಲ್ಲಿರುವ ಸುವೇಂದು ಅಧಿಕಾರಿ (Suvendu Adhikari) ಆಪ್ತ ಕಾರ್ಯದರ್ಶಿ ಚಂದ್ರನಾಥ್ ರಥ್ (Chandranath Rath) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಗಿಲು ಹುಟ್ಟಿಸುವ ಮಾಹಿತಿ ಬಯಲಾಗಿದೆ. ಈ ಹತ್ಯೆಯನ್ನು ಯೋಜಿತವಾಗಿ ನಡೆಸಲು ಬಿಹಾರದಿಂದ ಶಾರ್ಪ್ ಶೂಟರ್‌ಗಳನ್ನು ಕರೆಸಲಾಗಿತ್ತು ಹಾಗೂ ಬರೋಬ್ಬರಿ 40 ಲಕ್ಷ ರೂ.ಗಳ ಸುಪಾರಿ ನೀಡಲಾಗಿತ್ತು ಎಂಬ ವಿಷಯ ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮುಖ್ಯಾಂಶಗಳು

  • ಹತ್ಯೆಗಾಗಿ ಬಿಹಾರದಿಂದ ಬಂದಿದ್ದರು ಇಬ್ಬರು ‘ಶಾರ್ಪ್ ಶೂಟರ್ಸ್’.
  • ಹಂತಕರಿಗೆ 40 ಲಕ್ಷ ರೂಪಾಯಿ ಸುಪಾರಿ ನೀಡಿದ ಶಂಕೆ.
  • ಕೃತ್ಯದ ನಂತರ ನಕಲಿ ಗುರುತಿನ ಚೀಟಿ ಬಳಸಿ ವಿಮಾನದ ಮೂಲಕ ಪರಾರಿಯಾದ ಶೂಟರ್‌ಗಳು.

ಯೋಜಿತ ಸಂಚು ಮತ್ತು ಹತ್ಯೆ

ಪೊಲೀಸ್ ಮೂಲಗಳ ಪ್ರಕಾರ, ಚಂದ್ರನಾಥ್ ರಥ್ ಅವರ ಚಲನವಲನದ ಮೇಲೆ ಹಂತಕರು ಕಳೆದ ಐದು ದಿನಗಳಿಂದ ಹದ್ದಿನ ಕಣ್ಣಿಟ್ಟಿದ್ದರು. ಜೂನ್ 5ರ ಬುಧವಾರ ರಾತ್ರಿ ಸುಮಾರು 10 ಗಂಟೆಗೆ ಚಂದ್ರನಾಥ್ ಅವರು ಜೆಸೋರ್ ರಸ್ತೆಯ ಮೂಲಕ ಹಿಂತಿರುಗುತ್ತಿದ್ದಾಗ, ಮಳೆಯಿಂದಾಗಿ ರಸ್ತೆಯಲ್ಲಿ ನೀರು ನಿಂತಿದ್ದ ಕಾರಣ ಅವರ ಕಾರಿನ ವೇಗ ಕಡಿಮೆಯಾಗಿತ್ತು. ಇದನ್ನೇ ಕಾಯುತ್ತಿದ್ದ ಇಬ್ಬರು ಬೈಕ್ ಸವಾರರು, ಕಾರಿನ ಕಿಟಕಿಯ ಬಳಿ ಬಂದು ಅತಿ ಸಮೀಪದಿಂದ ಹಲವು ಸುತ್ತು ಗುಂಡಿನ ದಾಳಿ ನಡೆಸಿ ಚಂದ್ರನಾಥ್ ಅವರನ್ನು ಹತ್ಯೆಗೈದಿದ್ದಾರೆ.

ಸ್ಥಳೀಯ ಕ್ರಿಮಿನಲ್​ಗಳ ಸಾಥ್

ಬಿಹಾರದಿಂದ ಬಂದಿದ್ದ ಶೂಟರ್‌ಗಳಿಗೆ ತಂಗಲು ವ್ಯವಸ್ಥೆ ಮತ್ತು ಓಡಾಡಲು ವಾಹನಗಳನ್ನು ಸ್ಥಳೀಯ ಕ್ರಿಮಿನಲ್ ಒಬ್ಬ ಒದಗಿಸಿದ್ದ ಎನ್ನಲಾಗಿದೆ. ಕೃತ್ಯಕ್ಕೆ ಬಳಸಲಾದ ಬೈಕ್ ಅನ್ನು ಬಿಧಾನ್‌ನಗರದ ಹಳೆಯ ವಾಹನಗಳ ಶೋರೂಮ್‌ನಿಂದ ಕಳವು ಮಾಡಲಾಗಿತ್ತು ಮತ್ತು ಅದರ ಇಂಜಿನ್ ಸಂಖ್ಯೆಯನ್ನು ತಿದ್ದಲಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಹತ್ಯೆ ನಡೆದ ಕೇವಲ 45 ಸೆಕೆಂಡುಗಳ ಮೊದಲು ಒಂದು ಬಿಳಿ ಬಣ್ಣದ ಸ್ಕಾರ್ಪಿಯೋ ಕಾರು ಅಲ್ಲಿಗೆ ಬಂದು ಹೋಗಿರುವುದು ತನಿಖಾಧಿಕಾರಿಗಳ ಸಂಶಯಕ್ಕೆ ಕಾರಣವಾಗಿದೆ.

ತನಿಖೆ ಮತ್ತು ಸಿಐಡಿ ಕಾರ್ಯಾಚರಣೆ

ಪ್ರಸ್ತುತ ಸಿಐಡಿ ಮತ್ತು ಎಸ್‌ಐಟಿ (SIT) ಅಧಿಕಾರಿಗಳು ಪ್ರಕರಣದ ತನಿಖೆ ನಡೆಸುತ್ತಿದ್ದು, ಘಟನಾ ಸ್ಥಳದಿಂದ ರಕ್ತದ ಮಾದರಿ ಮತ್ತು ಇತರ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಹಂತಕರು ಕೋಲ್ಕತ್ತಾ ವಿಮಾನ ನಿಲ್ದಾಣದ ಮೂಲಕ ಪರಾರಿಯಾಗಲು ಮೊದಲೇ ಸಂಚು ರೂಪಿಸಿ ನಕಲಿ ಐಡಿ ಕಾರ್ಡ್‌ಗಳನ್ನು ಹೊಂದಿದ್ದಿರಬಹುದು ಎಂದು ಶಂಕಿಸಲಾಗಿದೆ.

ಇದನ್ನೂ ಓದಿ: ಇದೊಂದು ಪೂರ್ವ ಯೋಜಿತ ಕೊಲೆ, ಆಪ್ತ ಚಂದ್ರನಾಥ್ ರಥ್ ಸಾವಿನ ಬಗ್ಗೆ ಸುವೇಂದು ಅಧಿಕಾರಿ ಮಾತು

ಚಂದ್ರನಾಥ್ ಅವರ ಆಪ್ತ ವಲಯದವರೇ ಹಂತಕರಿಗೆ ಮಾಹಿತಿ ಸೋರಿಕೆ ಮಾಡಿರಬಹುದು ಎಂಬ ಅನುಮಾನದ ನಿಟ್ಟಿನಲ್ಲಿ ಪೊಲೀಸರು ಫೋನ್ ರೆಕಾರ್ಡ್‌ಗಳನ್ನು ಪರಿಶೀಲಿಸುತ್ತಿದ್ದಾರೆ. ಸದ್ಯ ಹತ್ಯೆಗೆ ಬಳಸಿದ್ದ ಬೈಕ್ ವಶಪಡಿಸಿಕೊಳ್ಳಲಾಗಿದ್ದು, ಶೂಟರ್‌ಗಳಿಗಾಗಿ ಶೋಧ ಮುಂದುವರಿದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಎಲ್ಲಾ 108 ಟಿವಿಕೆ ಶಾಸಕರ ರಾಜೀನಾಮೆ ಬೆದರಿಕೆ; ಡಿಎಂಕೆ ಜೊತೆ ಮೈತ್ರಿಗೆ ಎಐಎಡಿಎಂಕೆ ಪ್ರಯತ್ನ; ತಮಿಳುನಾಡಿನಲ್ಲಿ ರಾಜಕೀಯ ರಂಗು – Kannada News | TVK warns of resignation of all its MLAs, as AIADMK tries coalition with DMK for Power in Tamil Nadu

ಚೆನ್ನೈ, ಮೇ 8: ತಮಿಳುನಾಡು ವಿಧಾನಸಭಾ ಚುನಾವಣೆಯು (Tamil Nadu Assembly Elections) ಅತಂತ್ರ ಫಲಿತಾಂಶ ಕೊಟ್ಟಿರುವುದು ವಿವಿಧ ರಾಜಕೀಯ ಬಣ್ಣಗಳು ಹೊರಬರಲು ಕಾರಣವಾಗಿದೆ. 108 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಬಹುಮತ ಸಿಗುವಂತಹ ಬೆಂಬಲ ಬಂದಿಲ್ಲ. ಹೀಗಾಗಿ, ಸರ್ಕಾರ ರಚನೆಗೆ ರಾಜ್ಯಪಾಲರಿಂದ ಅನುಮತಿ ಸಿಕ್ಕಿಲ್ಲ. ಇನ್ನೊಂದೆಡೆ, ತನ್ನ ಬದ್ಧ ವೈರಿ ಡಿಎಂಕೆ ಜೊತೆ ಕೈ ಜೋಡಿಸಿ ಸರ್ಕಾರ ರಚನೆಗೆ ಎಐಎಡಿಎಂಕೆ ಇಂಗಿತ ಹೊಂದಿದಂತಿದೆ. ರೆಸಾರ್ಟ್ ಪೊಲಿಟಿಕ್ಸ್ ಕೂಡ ಶುರುವಾಗಿದೆ.

ತಮಿಳಗ ವೆಟ್ರಿ ಕಳಗಂನ ಎಲ್ಲಾ ಶಾಸಕರು ರಾಜೀನಾಮೆಗೆ ಸಿದ್ಧ

ತಮಿಳುನಾಡು ಜನಾದೇಶ ತಮ್ಮ ಪಕ್ಷದ ಪರವಾಗಿದೆ. ಇದನ್ನೂ ಮೀರಿ ಡಿಎಂಕೆ ಮತ್ತು ಎಐಡಿಎಂಕೆ ಸಮ್ಮಿಶ್ರ ಸರ್ಕಾರ ರಚನೆಗೆ ಮುಂದಾದಲ್ಲಿ ತಮ್ಮ ಎಲ್ಲಾ 108 ಶಾಸಕರೂ ರಾಜೀನಾಮೆ ನೀಡುತ್ತಾರೆ ಎಂದು ಟಿವಿಕೆ ಬೆದರಿಕೆ ಹಾಕಿದೆ.

234 ವಿಧಾನಸಭಾ ಕ್ಷೇತ್ರಗಳಿರುವ ತಮಿಳುನಾಡಿನಲ್ಲಿ ಟಿವಿಕೆ 108 ಸ್ಥಾನ ಪಡೆದಿದೆ. ಡಿಎಂಕೆ ಮೈತ್ರಿಕೂಟ 73, ಎಐಎಡಿಎಂಕೆ ಮೈತ್ರಿಕೂಟ 53 ಸ್ಥಾನಗಳನ್ನು ಹೊಂದಿವೆ. ಇಲ್ಲಿ ಡಿಎಂಕೆ 59 ಸ್ಥಾನ ಹಾಗೂ ಎಐಎಡಿಎಂಕೆ 47 ಸ್ಥಾನಗಳನ್ನು ಹೊಂದಿವೆ. ಎರಡೂ ಸೇರಿಸಿದರೆ 106 ಸ್ಥಾನಗಳಾಗುತ್ತವೆ. ಆಗಲೂ ಬೇರೆ ಬೇರೆ ಪಕ್ಷಗಳ ಬೆಂಬಲ ಬೇಕಾಗುತ್ತದೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ಸರ್ಕಾರ ರಚನೆ ಬಿಕ್ಕಟ್ಟು; ಎಡಪಕ್ಷಗಳ ಬೆಂಬಲ ಕೋರಿದ ಟಿವಿಕೆ

ಡಿಎಂಕೆ ಜೊತೆ ಕೈಜೋಡಿಸಲು ಎಐಎಡಿಎಂಕೆ ಪಕ್ಷವು ಎನ್​ಡಿಎ ಮೈತ್ರಿಕೂಟ ತ್ಯಜಿಸಲು ಸಿದ್ಧವಿದೆ. ಸಮ್ಮಿಶ್ರ ಸರ್ಕಾರದ ಪ್ರಸ್ತಾಪವನ್ನು ಈ ಪಕ್ಷವೇ ಮಾಡಿದೆ. ಡಿಎಂಕೆಯಿಂದ ಇನ್ನೂ ಕೂಡ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಟಿವಿಕೆಗೆ ಸರ್ಕಾರ ರಚಿಸುವ ಅವಕಾಶ ತಪ್ಪಿಸಿದ ಆರೋಪ ತನಗೆ ಬಂದುಬಿಟ್ಟರೆ ಎನ್ನುವ ಭಯ ಡಿಎಂಕೆಯದ್ದು. ಹೀಗಾಗಿ, ಟಿವಿಕೆ ಸರ್ಕಾರ ರಚನೆಯಾಗಿ ಆರು ತಿಂಗಳು ಕಾದು ಆ ನಂತರ ಯೋಚಿಸೋಣ ಎಂದು ಡಿಎಂಕೆ ಹೇಳುತ್ತಿದೆ.

ಟಿವಿಕೆ ಪಕ್ಷಕ್ಕೆ ಕಾಂಗ್ರೆಸ್ ಈಗಾಗಲೇ ಬೆಂಬಲ ನೀಡುವುದಾಗಿ ಘೋಷಿಸಿದೆ. ಕಾಂಗ್ರೆಸ್​ನ ಐವರು ಶಾಸಕರಿದ್ದಾರೆ. ಒಟ್ಟು ನಾಲ್ವರು ಶಾಸಕರಿರುವ ಎರಡು ಎಡಪಕ್ಷಗಳ ಬೆಂಬಲವನ್ನು ಟಿವಿಕೆ ಯಾಚಿಸಿದೆ. ಮುಸ್ಲಿಮ್ ಲೀಗ್​ನ ಇಬ್ಬರು ಶಾಸಕರಿದ್ದಾರೆ. ಇವರೆಲ್ಲರೂ ಕೈಜೋಡಿಸಿದರೆ ಟಿವಿಕೆಗೆ ಬಹುಮತ ಸಿಗಬಹುದು. ಆದರೂ ಕೂಡ ತಮಿಳುನಾಡಿನಲ್ಲಿ ರಾಜಕೀಯ ಚದುರಂಗದಾಟ ಚಾಲನೆಗೊಂಡಿದೆ.

ಎಲ್ಲಾ ಟಿವಿಕೆ ಶಾಸಕರು ರಾಜೀನಾಮೆ ನೀಡಿದರೆ ಏನಾಗುತ್ತೆ?

ಎಲ್ಲಾ 108 ಟಿವಿಕೆ ಶಾಸಕರು ರಾಜೀನಾಮೆ ನೀಡಿದರೆ ಆಗ ವಿಧಾನಸಭೆಯ ಗಾತ್ರ 234ರಿಂದ 126ಕ್ಕೆ ಇಳಿಯುತ್ತದೆ. ಬಹುಮತ ಸಾಬೀತು ಮಾಡಲು ಬೇಕಾದ ಶಾಸಕರ ಬೆಂಬಲ 64 ಮಾತ್ರವೇ ಬೇಕಾಗುತ್ತದೆ. ಆಗ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ಸುಲಭವಾಗಿ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಬಹುದು.

ಇದನ್ನೂ ಓದಿ: ತಮಿಳುನಾಡಲ್ಲಿ ಸರ್ಕಾರ ರಚನೆಗೆ ಟಿವಿಕೆಗೆ ಸಂಖ್ಯಾಬಲದ ಹೋರಾಟ, ಅತ್ತ ಬಿಹಾರ ರಾಜಕಾರಣದಲ್ಲಿ ಹೊಸ ಚದುರಂಗದಾಟ!

ಟಿವಿಕೆ ಶಾಸಕರ ರಾಜೀನಾಮೆ ಬಳಿಕ ಆ 108 ಸ್ಥಾನಗಳಿಗೆ ಉಪಚುನಾವಣೆ ನಡೆಯಬಹುದು. ಅಲ್ಲಿ ಮತ್ತೆ ಎಲ್ಲಾ ಸ್ಥಾನಗಳಿಗೂ ಟಿವಿಕೆ ಅಭ್ಯರ್ಥಿಗಳೇ ಆಯ್ಕೆಯಾದರೆ ಮತ್ತೆ ರಾಜಕೀಯ ಸಮಸ್ಯೆ ಎದುರಾಗುತ್ತದೆ. ತಮಿಳುನಾಡಿಗೆ ಮತ್ತೊಮ್ಮೆ ಮರುಚುನಾವಣೆ ನಡೆಸಿದರೂ ಅಚ್ಚರಿ ಇಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version