Mother’s Day 2026: ಗರ್ಭದಲ್ಲೇ ಸಂಸ್ಕಾರ ನೀಡುವ ಶಕ್ತಿ ತಾಯಿಯದ್ದು; ಹಿಂದೂ ಧರ್ಮದ ದೃಷ್ಟಿಯಲ್ಲಿ ಮಾತೃತ್ವದ ಮಹತ್ವ – Kannada News | Sacred Mother in Hinduism: Matru Devo Bhava and Her Divine Influence

ಹಿಂದೂ ಧರ್ಮದಲ್ಲಿ ತಾಯಿಗೆ ಅತ್ಯುನ್ನತ ಮತ್ತು ಪವಿತ್ರವಾದ ಸ್ಥಾನ ನೀಡಲಾಗಿದೆ. ಸನಾತನ ಸಂಸ್ಕೃತಿಯ ಪ್ರಕಾರ, ತಾಯಿಯು ಕೇವಲ ಕುಟುಂಬದ ಸದಸ್ಯೆಯಲ್ಲ, ಬದಲಿಗೆ ಮನೆಯ ಬೆಳಗುವ ದೀಪ ಮತ್ತು ‘ಪ್ರತ್ಯಕ್ಷ ದೈವ’. “ಮಾತೃ ದೇವೋ ಭವ” ಎಂಬ ವೇದವಾಕ್ಯವು ಅತಿಥಿ ಅಥವಾ ದೇವರಿಗಿಂತ ಮೊದಲು ತಾಯಿಯನ್ನು ಪೂಜಿಸಬೇಕು ಎಂದು ಕಲಿಸುತ್ತದೆ. ಮಗುವಿಗೆ ಜನ್ಮ ನೀಡಿ, ಪೋಷಿಸಿ, ಸಂಸ್ಕಾರ ನೀಡುವ ತಾಯಿಯನ್ನು ಮಗುವಿನ ‘ಪ್ರಥಮ ಗುರು’ ಎಂದು ಪರಿಗಣಿಸಲಾಗುತ್ತದೆ. ತಾಯಿಯ ಪ್ರೀತಿ ಮತ್ತು ತ್ಯಾಗವು ದೈವಿಕ ಗುಣಗಳಿಗೆ ಸಮಾನವೆಂದು ಶಾಸ್ತ್ರಗಳು ಬಣ್ಣಿಸುತ್ತವೆ.

ಗರ್ಭದಲ್ಲೇ ಸಂಸ್ಕಾರ ನೀಡುವ ಶಕ್ತಿ ತಾಯಿಯದ್ದು:

ಪುರಾಣಗಳಲ್ಲಿ ತಾಯಿಯ ಪ್ರಭಾವ ಎಷ್ಟಿತ್ತೆಂದರೆ, ಗರ್ಭದಲ್ಲಿರುವಾಗಲೇ ಮಕ್ಕಳು ಜ್ಞಾನವನ್ನು ಪಡೆಯುತ್ತಿದ್ದರು ಎಂಬ ಉಲ್ಲೇಖವಿದೆ. ಭಕ್ತ ಪ್ರಹ್ಲಾದನು ತನ್ನ ತಾಯಿ ಕಯಾದುವಿನ ಗರ್ಭದಲ್ಲಿದ್ದಾಗಲೇ ನಾರದ ಮುನಿಗಳಿಂದ ಹರಿನಾಮದ ಮಹಿಮೆಯನ್ನು ತಿಳಿದುಕೊಂಡಿದ್ದನು. ಅದೇ ರೀತಿ ಅರ್ಜುನನ ಮಗ ಅಭಿಮನ್ಯು ಕೂಡ ಗರ್ಭದಲ್ಲಿರುವಾಗಲೇ ಯುದ್ಧತಂತ್ರದ ಬಗ್ಗೆ ಕೇಳಿಸಿಕೊಂಡಿದ್ದನು. ಇದು ತಾಯಿಯು ಮಗುವಿನ ವ್ಯಕ್ತಿತ್ವ ರೂಪಿಸುವಲ್ಲಿ ವಹಿಸುವ ಪ್ರಮುಖ ಪಾತ್ರವನ್ನು ಎತ್ತಿ ತೋರಿಸುತ್ತದೆ. ಮಗುವಿನ ಶೀಲ ಮತ್ತು ನಡತೆಗೆ ತಾಯಿಯೇ ಅಡಿಪಾಯವಾಗಿದ್ದಾಳೆ.

ಸನಾತನ ಧರ್ಮದ 7 ಶ್ರೇಷ್ಠ ತಾಯಂದಿರು:

ಹಿಂದೂ ಸಂಪ್ರದಾಯವು ಕೇವಲ ಜನ್ಮ ನೀಡಿದವಳನ್ನು ಮಾತ್ರವಲ್ಲದೆ, ಏಳು ಮಂದಿಯನ್ನು ತಾಯಿಯ ಸ್ಥಾನದಲ್ಲಿಟ್ಟು ಗೌರವಿಸುತ್ತದೆ. ಇದರಲ್ಲಿ ನಿಜವಾದ ತಾಯಿ, ಗುರುವಿನ ಪತ್ನಿ, ಬ್ರಾಹ್ಮಣ ಪತ್ನಿ, ರಾಜನ ಪತ್ನಿ (ರಾಣಿ), ಸಾಕು ತಾಯಿ, ನಮಗೆ ಹಾಲು ನೀಡುವ ಗೋಮಾತೆ ಮತ್ತು ನಮಗೆ ಆಶ್ರಯ ನೀಡಿರುವ ಭೂಮಾತೆ ಸೇರಿದ್ದಾರೆ. ಈ ಏಳು ರೂಪಗಳಲ್ಲಿ ಸ್ತ್ರೀಶಕ್ತಿಯನ್ನು ಕಾಣುವುದು ಭಾರತೀಯ ಸಂಸ್ಕೃತಿಯ ಹೆಮ್ಮೆಯಾಗಿದೆ. ದೈವಿಕವಾಗಿ ನಾವು ಪಾರ್ವತಿ, ಲಕ್ಷ್ಮಿ ಮತ್ತು ಸರಸ್ವತಿಯನ್ನು ಜಗನ್ಮಾತೆಯರೆಂದು ಆರಾಧಿಸುತ್ತೇವೆ, ಇದು ಸ್ತ್ರೀತ್ವಕ್ಕೆ ನೀಡುವ ಗೌರವದ ಸಂಕೇತವಾಗಿದೆ.

ಇದನ್ನೂ ಓದಿ: ನಿಮ್ಮ ಜನ್ಮ ದಿನಾಂಕದಲ್ಲೇ ಅಡಗಿದೆ ಮದುವೆಯ ರಹಸ್ಯ; ನಿಮಗಾಗುವುದು ಪ್ರೇಮ ವಿವಾಹವೋ ಅಥವಾ ಅರೇಂಜ್ ಮ್ಯಾರೇಜ್?

ಮೇ 10 ವಿಶ್ವ ತಾಯಂದಿರ ದಿನ:

ಈ ವರ್ಷ ಮೇ 10 ರಂದು ನಾವು ‘ವಿಶ್ವ ತಾಯಂದಿರ ದಿನ’ವನ್ನು ಆಚರಿಸುತ್ತಿದ್ದೇವೆ. ಇದು ಕೇವಲ ಒಂದು ದಿನದ ಆಚರಣೆಯಾಗದೆ, ದಿನನಿತ್ಯವೂ ತಾಯಿಯನ್ನು ಗೌರವಿಸುವ ಸಂಕಲ್ಪವಾಗಬೇಕು. ಆಧುನಿಕ ಯುಗದಲ್ಲಿ ತಾಯಂದಿರು ಮನೆ ಮತ್ತು ಕೆಲಸ ಎರಡನ್ನೂ ಸಮತೋಲನ ಮಾಡುತ್ತಾ ಹೆಚ್ಚು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಈ ತಾಯಂದಿರ ದಿನದಂದು ಅವರಿಗೆ ವಿಶ್ರಾಂತಿ ನೀಡುವುದು, ಅವರ ಆರೋಗ್ಯದ ಕಡೆ ಗಮನ ಹರಿಸುವುದು ಮತ್ತು ಅವರ ನಿಸ್ವಾರ್ಥ ಸೇವೆಗೆ ಕೃತಜ್ಞತೆ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೋಮನಾಥ ದೇಗುಲ: ಸರ್ದಾರ್ ಪಟೇಲರ ಕನಸು, ಭಾರತದ ಹೆಮ್ಮೆ, ಅಖಂಡತೆಯ ಸಂಕೇತ – ಪಿಎಂ ಮೋದಿ ಲೇಖನ – Kannada News | Somnath Temple, Sardar Patel’s Dream, India’s Pride, Symbol of Integrity, PM Modi blog

ಸೋಮನಾಥನ ಸನ್ನಿಧಿಯಲ್ಲಿ ನರೇಂದ್ರ ಮೋದಿImage Credit source: Narendra Modi’s X account

ಈ ವರ್ಷದ ಆರಂಭದಲ್ಲಿ ಸೋಮನಾಥ್ ಸ್ವಾಭಿಮಾನಪರ್ವ (Somnath Swabiman Parv) ಕಾರ್ಯಕ್ರಮಕ್ಕಾಗಿ ಸೋಮನಾಥ್​ಗೆ ಹೋಗಿದ್ದೆ. ಸೋಮನಾಥ ಮಂದಿರದ ಮೇಲೆ ಆದ ದಾಳಿಗೆ ಒಂದು ಸಾವಿರ ವರ್ಷ ಗತಿಸಿದ ಸಂದರ್ಭವದು. ಈಗ ಮತ್ತೊಮ್ಮೆ ಮೇ 11ಕ್ಕೆ ಅಲ್ಲಿಗೆ ಹೋಗುತ್ತಿದ್ದೇನೆ. 75 ವರ್ಷದ ಹಿಂದೆ ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ಈ ಮಂದಿರದ ಪುನರ್ನಿರ್ಮಾಣ ಮಾಡಿದ ಪುಣ್ಯ ಸಂದರ್ಭವದು. ಸೋಮನಾಥದ ಧ್ವಂಸ ಮತ್ತು ಪುನರ್ನಿರ್ಮಾಣವೆಂಬ ಎರಡು ಪ್ರಮುಖ ಮೈಲಿಗಲ್ಲುಗಳಲ್ಲಿ ಪಾಲ್ಗೊಳ್ಳುತ್ತಿರುವುದು ನನ್ನ ಪುಣ್ಯ.

ಸೋಮನಾಥ ನಮಗೆ ನಾಗರಿಕತೆಯ ಸಂದೇಶ ಸಾರುತ್ತದೆ. ಅದರ ಮುಂದಿರುವ ವಿಶಾಲ ಸಾಗರವು ಕಾಲಾತೀತತೆಯನ್ನು ಬಿಂಬಿಸುತ್ತದೆ. ಬಿರುಗಾಳಿ ಎಷ್ಟೇ ಭೀಕರವಾಗಿರಲಿ, ಕಡಲಬ್ಬರ ಹೇಗೇ ಇರಲಿ, ಅಲೆಗಳು ಸಮುದ್ರ ತೀರವನ್ನು ಸೇರುವಂತೆ, ಒಬ್ಬ ವ್ಯಕ್ತಿ ಎಂಥ ಸಂದರ್ಭದಲ್ಲೂ ಗೌರವ ಮತ್ತು ಬಲ ಕಂಡುಕೊಳ್ಳಲು ಸಾಧ್ಯ ಎಂಬುದನ್ನು ಅರಿತುಕೊಳ್ಳಬಹುದು.

ಪ್ರಭಾಸಂ ಚ ಪರಿಕ್ರಮ್ಯ ಪೃಥ್ವಿಕ್ರಮಸಂಭವಮ್’ ಎಂದು ಹೇಳಲಾಗುತ್ತದೆ. ಅಂದರೆ, ಪ್ರಭಾಸನ (ಸೋಮನಾಥ) ಪ್ರದಕ್ಷಿಣೆ ಹಾಕಿದರೆ ಇಡೀ ಭೂಮಿಯ ಪ್ರದಕ್ಷಿಣೆಗೆ ಸಮ. ಯಾವತ್ತೂ ನಾಶವಾಗದ ನಾಗರಿಕತೆಯ ದ್ಯೋತಕವಾಗಿ ಸೋಮನಾಥದ ದರ್ಶನವಾಗುತ್ತದೆ.

ಸೋಮನಾಥನ ನಾಶಕ್ಕೆ ನಡೆಯುತ್ತಿದ್ದ ಪ್ರಯತ್ನಗಳ ನಡುವೆ ಅದನ್ನು ಕಾಪಾಡಲು ನಿಂತ ಶ್ರೇಷ್ಠರು ಅನೇಕರಿದ್ದಾರೆ. ಅವರನ್ನು ಸ್ಮರಿಸುವ ಸಂದರ್ಭ ಬಂದಿದೆ. ಲಕುಲಿಶಾ ಮತ್ತು ಸೋಮ ಸರ್ಮನ್ ಅವರು ಪ್ರಭಾಸನನ್ನು ತತ್ವಶಾಸ್ತ್ರದ ಕೇಂದ್ರವಾಗಿ ಮಾರ್ಪಡಿಸಿದರು. ವಲ್ಲಾಭಿಯ ಚಕ್ರವರ್ತಿ ಮಹಾರಾಜ 4ನೇ ಧರ್ಮಸೇನಾ ಅವರು ಶತಮಾನಗಳ ಹಿಂದೆ ಅಲ್ಲಿ ಎರಡನೇ ದೇವಸ್ಥಾನ ಕಟ್ಟಿದರು. ಭೀಮ ದೇವ, ಜಯಪಾಲ ಮತ್ತು ಆನಂದಪಾಲ ಅವರು ವೈರಿಗಳ ದಾಳಿಗಳ ವಿರುದ್ಧ ಹೋರಾಟ ನಡೆಸಿದ್ದರು. ಮಂದಿರದ ಪುನರ್ನಿರ್ಮಾಣಕ್ಕೆ ರಾಜ ಭೋಜನೂ ಸಹಾಯ ಮಾಡಿದ್ದನೆಂದು ಹೇಳಲಾಗುತ್ತದೆ.

ಕರ್ಣ ದೇವ, ಸಿದ್ಧರಾಜ ಜಯಸಿಂಹ, ಭವ ಬಹಸ್ಪತಿ, ಕುಮಾರಪಾಲ ಸೋಳಂಕಿ, ಪಾಶುಪತ ಆಚಾರ್ಯರು, ವಿಶಾಲದೇವ ವಘೇಲಾ, ತ್ರಿಪುರಾಂತಕ, ಮಹಿಪಾಲದೇವ, ರಾ ಖಾಂಗರ್, ಪುಣ್ಯಶ್ಲೋಕ್ ಅಹಲ್ಯಾಬಾಯ್ ಹೋಳ್ಕರ್, ಬರೋಡಾದ ಗಾಯಕ್ವಾಡರು, ವೀರ್ ಹಮೀರ್​ಜಿ ಗೋಹಿಲ್, ವೀರ್ ವೇಗಡಜಿ ಭಿಲ್ ಮೊದಲಾದವರ ತ್ಯಾಗ, ಬಲಿದಾನ, ಬದ್ಧತೆ, ಭಕ್ತಿ ಇತ್ಯಾದಿಯು ಸೋಮನಾಥನ ರಕ್ಷಣೆ, ಪುನರ್ನಿರ್ಮಾಣದಲ್ಲಿ ಸಹಾಯವಾಗಿವೆ.

20ನೇ ಶತಮಾನದ 40ರ ದಶಕದಲ್ಲಿ ಸ್ವಾತಂತ್ರ್ಯದ ಕೆಚ್ಚು ದೇಶಾದ್ಯಂತ ಪಸರಿಸಿತ್ತು. ಆದರೆ, ಸರ್ದಾರ್ ಪಟೇಲ್​ರಂತಹ ನಾಯಕರಿಗೆ ಸೋಮನಾಥನ ದೈನೀಯ ಪರಿಸ್ಥಿತಿ ಸರಿಕಾಣಲಿಲ್ಲ. 1947ರ ನವೆಂಬರ್ 13ರಂದು ದೀಪಾವಳಿ ಸಂರ್ಭದಲ್ಲಿ ಸರ್ದಾರ್ ಪಟೇಲರು ಸೋಮನಾಥನ ಭಗ್ನಾವಶೇಷದ ಮುಂದೆ ನಿಂತು ಶಪಥ ಮಾಡುತ್ತಾರೆ:

‘ಈ ಶುಭ ದಿನದಂದು ಸೋಮನಾಥನ ಪುನರ್ನಿರ್ಮಾಣ ಮಾಡಲು ನಿರ್ಧರಿಸಿದ್ದೇವೆ’. ಪಟೇಲರ ಈ ಒಂದು ಕರೆಗೆ ಗುಜರಾತಿಗಳು ಮಾತ್ರವಲ್ಲ, ಇಡೀ ಭಾರತೀಯರೇ ಸ್ಪಂದಿಸಿದರು. ದುರ್ದೈವವೆಂದರೆ, ಸರ್ದಾರ್ ಪಟೇಲರ ಆ ಅದಮ್ಯ ಆಸೆ ನೆರವೇರುವ ಮುಂಚೆಯೇ ಅವರು ಶಿವನ ಪಾದ ಸೇರಿದರು. ಅವರ ಕನಸನ್ನು ಸಾಕಾರ ಮಾಡಲು ಹಲವರು ಅವಿರತ ಯತ್ನಿಸಿದರು. ಶ್ರೀ ಕೆಎಂ ಮುನ್ಷಿ, ನವನಗರ್​ನ ಜಾಮ್​ಸಾಹೇಬ್ ಮೊದಲಾದವರು ನಿಂತು ಪುನರ್ನಿರ್ಮಾನ ಕಾರ್ಯಕ್ಕೆ ಶಕ್ತಿ ತುಂಬಿದರು. 1951ರಲ್ಲಿ ಮಂದಿರ ಸಿದ್ಧವಾಯಿತು. ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ಪಿಎಂ ನೆಹರೂ ಅವರ ವಿರೋಧದ ನಡುವೆಯೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಗಮನಾರ್ಹ.

ಸೋಮನಾಥನ ರಕ್ಷಣೆಗಾಗಿ ಬಹಳಷ್ಟು ಜನರು ಬಲಿದಾನ ಮಾಡಿದ್ದಾರೆ, ತ್ಯಾಗ ಮಾಡಿದ್ದಾರೆ. ಅದರ ಪುನರ್ನಿರ್ಮಾಣಕ್ಕಾಗಿ ದೇಶದ ಮೂಲೆ ಮೂಲೆಗಳಿಂದ ಲೆಕ್ಕವಿಲ್ಲದಷ್ಟು ಜನರು ಕೊಡುಗೆ ನೀಡಿದ್ದಾರೆ. ಸೋಮನಾಥನು ಏಕತೆಯ ಸಂಕೇತವಾಗಿ ನಿಂತಿದ್ದಾನೆ. ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ನಾಗರಿಕತೆ ಸಾಕ್ಷಿಪ್ರಜ್ಞೆಯಾಗಿ ನೆಲಸಿದ್ದಾನೆ. ಮುಂದಿನ ಸಾವಿರ ದಿನಗಳವರೆಗೆ ಸೋಮನಾಥದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.

ಈ ವಿಶೇಷ ಸಂದರ್ಭದಲ್ಲಿ ಸೋಮನಾಥನ ದರ್ಶನ ಮಾಡಬೇಕೆಂದು ನಮ್ಮ ದೇಶವಾಸಿಗಳಲ್ಲಿ ಕೇಳಿಕೊಳ್ಳುತ್ತೇನೆ. ಸೋಮನಾಥನ ಸನ್ನಿಧಿಯಲ್ಲಿ ನಿಂತಾಗ ಪ್ರಾಚೀನತೆಯ ವಿಚಾರಗಳು ನಿಮ್ಮನ್ನು ಎಡತಾಕುತ್ತವೆ. ವಿನಾಶಕ್ಕೆ ಯಾರೆಷ್ಟೇ ಪ್ರಯತ್ನಪಟ್ಟರೂ ನಮ್ಮ ಸಂಸ್ಕೃತಿಯನ್ನು ಸೋಲಿಸಲು ಆಗಿಲ್ಲ. ಸೋಮನಾಥನ ದರ್ಶನವು ನಿಮಗೆ ಅವಿಸ್ಮರಣೀಯವಾಗಿರಲಿದೆ.

ಜೈ ಸೋಮನಾಥ್

(ಇದು ನರೇಂದ್ರ ಮೋದಿ ಅವರು ತಮ್ಮ ವೈಯಕ್ತಿಕ ವೆಬ್​ಸೈಟ್​ನಲ್ಲಿ ಬರೆದಿರುವ ಬ್ಲಾಗ್​ನ ಸಂಕ್ಷಿಪ್ತ ರೂಪ. ಇಂಗ್ಲೀಷ್​ನಿಂದ ಕನ್ನಡಕ್ಕೆ ತರ್ಜುಮೆ ಮಾಡಲಾಗಿದೆ. ಇವರ ಇಂಗ್ಲೀಷ್ ಲೇಖನದ ಪೂರ್ಣ ಪಠ್ಯ ಈ ಲಿಂಕ್​ನಲ್ಲಿದೆ.)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ! – Kannada News | Business Titan Donates Rs 2.50 Cr Gold Crown to Anjanadri Hill; Janardhana Reddy Attends Rituals

ಕೊಪ್ಪಳ, ಮೇ 08: ಬಂಗಾರದ ಬೆಲೆ ಗಗನಕ್ಕೇರಿದರೂ ಬರೋಬ್ಬರಿ 2.50 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟವನ್ನು ಅಂಜನಾದ್ರಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ದೇಣಿಗೆ ನೀಡಿದ್ದಾರೆ. ಎಎಂಆರ್ (AMR) ಗ್ರೂಪ್ ಅಧ್ಯಕ್ಷ ಎ. ಮಹೇಶ್ ರೆಡ್ಡಿ ನೇತೃತ್ವದಲ್ಲಿ ಬಂಗಾರದ ಪ್ರಭಾವಳಿ, ಕಿರೀಟ ಹಾಗೂ ಗದೆ ಅರ್ಪಣೆ ಮಾಡಲಾಗಿದೆ. ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹಾಗೂ ಪತ್ನಿ ಅರುಣಾ ಲಕ್ಷ್ಮೀ ಸಹ ಈ ವೇಳೆ ಭಾಗಿಯಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ತಿರುಪತಿ ಮಾದರಿಯಲ್ಲಿ ದೇವಸ್ಥಾನ ಅಭಿವೃದ್ಧಿಯಾಗಬೇಕು ಎಂಬ ಉದ್ದೇಶದಿಂದ ಈ ದೇಣಿಗೆ ನೀಡಲಾಗಿದೆ. ಹೈದರಾಬಾದ್‌ನ ನೆಲ್ಲೂರು ಮೂಲದ ಉದ್ಯಮಿ ಮಹೇಶ್ ರೆಡ್ಡಿ ಈಗಾಗಲೇ ಶಿರಡಿ ಸಾಯಿ ಬಾಬಾ ದೇವಸ್ಥಾನಕ್ಕೂ 140 ಕೆಜಿ ಬಂಗಾರ ದೇಣಿಗೆ ನೀಡಿದ್ದು, ಅಂಜನಾದ್ರಿಗೆ ಇದೇ ಮೊದಲ ಕೊಡುಗೆಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹೆಣ್ಣು ಜಿರಾಫೆ ಸಾವು: ಅನಾರೋಗ್ಯದಿಂದ ಮೃತಪಟ್ಟ ‘ಶಿವಾನಿ’ – Kannada News | Bannerghatta Giraffe Shivani Dies: Illness Claims Popular Bengaluru Zoo Attraction

ಬೆಂಗಳೂರು, ಮೇ 08: ಅನಾರೋಗ್ಯದಿಂದ ಬಳಲುತ್ತಿದ್ದ ಹೆಣ್ಣು ಜಿರಾಫೆ ಮೃತಪಟ್ಟಿರುವ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನಡೆದಿದೆ. 3 ವರ್ಷ 10 ತಿಂಗಳ ಶಿವಾನಿ ಹೆಸರಿನ ಹೆಣ್ಣು ಜಿರಾಫೆ ಕೊನೆಯುಸಿರೆಳೆದಿದ್ದು, ಅನಾರೋಗ್ಯದಿಂದ ಸರಿಯಾಗಿ ಆಹಾರ ಸೇವಿಸುತ್ತಿರಲಿಲ್ಲ ಎನ್ನಲಾಗಿದೆ. ಅಂತಿಮವಾಗಿ ಕರುಳು ಸುತ್ತಿಕೊಂಡು ರಕ್ತಪರಿಚಲನೆ ಆಗದೆ ಜಿರಾಫೆ ಮೃತಪಟ್ಟಿದೆ.

  • ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹೆಣ್ಣು ಜಿರಾಫೆ ಸಾವು
  • 3 ವರ್ಷ 10 ತಿಂಗಳ ಶಿವಾನಿ ಹೆಸರಿನ ಹೆಣ್ಣು ಜಿರಾಫೆ ಕೊನೆಯುಸಿರು
  • ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕತೆ ತುತ್ತಾಗಿದ್ದ ಜಿರಾಫೆ

ಇದನ್ನೂ ಓದಿ: ತುಮಕೂರಿನಲ್ಲಿ ಹೆಚ್ಚಾಯ್ತು ಹಕ್ಕಿ ಜ್ವರದ ಭೀತಿ; 50ಕ್ಕೂ ಹೆಚ್ಚು ನವಿಲುಗಳ ಸಾವು!

ಪ್ರಮುಖ ಆಕರ್ಷಣೆಯಾಗಿದ್ದ ‘ಶಿವಾನಿ’

ಜಿರಾಫೆ ‘ಶಿವಾನಿ’ ಬನ್ನೇರುಘಟ್ಟ ಜೈವಿಕ ಉದ್ಯಾನವನದ (BBP) ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಜಿರಾಫೆಗೆ ಹಲವು ಪಶುವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಬಿಬಿಪಿ ಅಧಿಕಾರಿಗಳ ಪ್ರಕಾರ, ಮೇ 3ರಿಂದ ಆಹಾರ ಸೇವನೆ ನಿಲ್ಲಿಸಿದ್ದ ಜಿರಾಫೆಯನ್ನು ಪಶುವೈದ್ಯರ ತಂಡ ನಿಗಾದಲ್ಲಿಟ್ಟು ಚಿಕಿತ್ಸೆ ನೀಡುತ್ತಿತ್ತು. ಆದರೆ ಗುರುವಾರ ಬೆಳಗ್ಗೆ ಸುಮಾರು 11 ಗಂಟೆಗೆ ಮೃತಪಟ್ಟಿದೆ.

ಪೋಸ್ಟ್‌ಮಾರ್ಟಂ ವರದಿಯಲ್ಲಿ ‘ಸಿಕಲ್ ಟಾರ್ಷನ್’ (Caecal Torsion) ಎಂಬ ಗಂಭೀರ ಆರೋಗ್ಯ ಸಮಸ್ಯೆಯಿಂದ ಶಿವಾನಿ ಸಾವನ್ನಪ್ಪಿರುವುದು ತಿಳಿದುಬಂದಿದೆ. ಶಿವಾನಿಯ ದೇಹದ ಮಾದರಿಗಳನ್ನು ಹೆಬ್ಬಾಳದ ಪಶು ಆರೋಗ್ಯ ಮತ್ತು ಪಶುವೈದ್ಯಕೀಯ ಜೈವಿಕ ಸಂಸ್ಥೆಯ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಭಾರತ್ ಮತ್ತು ಬಬ್ಲಿ ಜಿರಾಫೆಗಳಿಗೆ 2022ರಲ್ಲಿ ಶಿವಾನಿ ಜನಿಸಿತ್ತು. ಬನ್ನೇರುಘಟ್ಟದಲ್ಲಿದ್ದ ಏಕೈಕ ಜಿರಾಫೆ ‘ಗೌರಿ’ಗೆ ಸಂಗಾತಿ ಕಲ್ಪಿಸುವ ಉದ್ದೇಶದಿಂದ ಹಲವು ತಿಂಗಳ ಮಾತುಕತೆ ಬಳಿಕ 2024ರಲ್ಲಿ ಶಿವಾನಿಯನ್ನು ವಿಶೇಷ ವಿನ್ಯಾಸದ ಪಂಜರ ಹೊಂದಿದ್ದ ಮಲ್ಟಿ-ಆಕ್ಸಲ್ ಲಾರಿಯಲ್ಲಿ ಭದ್ರತಾ ವ್ಯವಸ್ಥೆಯೊಂದಿಗೆ ಬನ್ನೇರುಘಟ್ಟಕ್ಕೆ ತರಲಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಚಿಕ್ಕಪ್ಪ ಪವನ್ ಕಲ್ಯಾಣ್ ದಾಖಲೆ ಮುರಿದ ರಾಮ್ ಚರಣ್ – Kannada News | Ram Charan’s Peddi Movie beats Pawan Kalyan’s OG movie record

ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಹಲವು ಮುಂದೂಡಿಕೆಗಳ ಬಳಿಕ ಕೊನೆಗೂ ಜೂನ್ 4 ರಂದು ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರವನ್ನು ಚಿತ್ರತಂಡ ಇನ್ನೂ ಪ್ರಾರಂಭ ಮಾಡಿಲ್ಲ. ಪ್ರಸ್ತುತ ಸಿನಿಮಾದ ಪ್ರೀ ರಿಲೀಸ್ ಸೇಲ್​​ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ. ಸಿನಿಮಾಕ್ಕೆ ಸಾಕಷ್ಟು ಹೈಪ್ ಸೃಷ್ಟಿಯಾಗಿದ್ದು, ಸಿನಿಮಾ ಪ್ಯಾನ ಇಂಡಿಯಾ ಲೆವೆಲ್​​ನಲ್ಲಿ ಬಿಡುಗಡೆ ಆಗಲಿದೆ. ಅಮೆರಿಕ ಅದರಲ್ಲೂ ಉತ್ತರ ಅಮೆರಿಕ ಮಾರುಕಟ್ಟೆಯ ಮೇಲೆ ಹೆಚ್ಚು ಗಮನವನ್ನು ‘ಪೆದ್ದಿ’ ಚಿತ್ರತಂಡ ವಹಿಸಿದೆ. ಇದೀಗ ‘ಪೆದ್ದಿ’ ಸಿನಿಮಾವು ನಾಯಕ ರಾಮ್ ಚರಣ್ ಅವರ ಚಿಕ್ಕಪ್ಪ ಪವನ್ ಕಲ್ಯಾಣ್ ಅವರ ದಾಖಲೆಯೊಂದನ್ನು ಮುರಿದಿದೆ.

‘ಪೆದ್ದಿ’ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಅಮೆರಿಕನಲ್ಲಿ ಓಪನ್ ಆಗಿದ್ದು, ಕೇವಲ 24 ಗಂಟೆಯಲ್ಲಿ ಸುಮಾರು 1 ಕೋಟಿಗೂ ಹೆಚ್ಚಿನ ಮೌಲ್ಯದ ಟಿಕೆಟ್​​ಗಳು ಮುಂಗಡವಾಗಿ ಬುಕಿಂಗ್ ಆಗಿವೆ. ಈ ಹಿಂದೆ ಪವನ್ ಕಲ್ಯಾಣ್ ಅವರ ‘ಓಜಿ’ ಸಿನಿಮಾದ ಮುಂಗಡ ಬುಕಿಂಗ್ ಸುಮಾರು 75 ಲಕ್ಷ ರೂಪಾಯಿ ಮೌಲ್ಯದ ಟಿಕೆಟ್​​ಗಳು 24 ಗಂಟೆಯಲ್ಲಿ ಬುಕ್ ಆಗಿತ್ತು. ಇದು ಇತ್ತೀಚೆಗಿನ ದಾಖಲೆಯಾಗಿತ್ತು. ಆದರೆ ಆ ದಾಖಲೆಯನ್ನು ‘ಪೆದ್ದಿ’ ಸಿನಿಮಾ ಮುರಿದು ಹಾಕಿದೆ.

‘ಪೆದ್ದಿ’ ಸಿನಿಮಾವು ಗ್ರಾಮೀಣ ಭಾಗದ ಕತೆಯನ್ನು ಒಳಗೊಂಡಿದ್ದು, ಸಿನಿಮಾನಲ್ಲಿ ರಾಮ್ ಚರಣ್ ಕ್ರೀಡಾಪಟುವಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಕೆಲವು ಪೋಸ್ಟರ್​​ನಲ್ಲಿ ರಾಮ್ ಚರಣ್ ಕ್ರಿಕೆಟರ್ ಆಗಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ಬಿಡುಗಡೆ ಆದ ಟೀಸರ್​​ನಲ್ಲಿ ಕುಸ್ತಿ ಪಟುವಾಗಿ ಕಾಣಿಸಿಕೊಂಡಿದ್ದಾರೆ. ಕುಸ್ತಿ ಪಟುವಿನ ದೇಹ ಪಡೆಯಲು ಸಖತ್ ಕಸರತ್ತು ಮಾಡಿದ್ದಾರೆ ನಟ ರಾಮ್ ಚರಣ್. ಈ ಹಿಂದೆ ರಾಮ್ ಚರಣ್, ಗ್ರಾಮೀಣ ಭಾಗದ ಕತೆಯಲ್ಲಿ ನಟಿಸಿದಾಗ ಆ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿತ್ತು. ಈಗ ಮತ್ತೊಮ್ಮೆ ಅದೇ ಮ್ಯಾಜಿಕ್ ರಿಪೀಟ್ ಆಗುವ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು.

ಇದನ್ನೂ ಓದಿ:ರಾಮ್ ಚರಣ್ ಮತ್ತು ನಾನಿ ಸಿನಿಮಾಗಳಿಗೆ ಲೀಕ್ ಸಂಕಷ್ಟ: ಆತಂಕದಲ್ಲಿ ‘ಪೆದ್ದಿ’, ‘ದಿ ಪ್ಯಾರಡೈಸ್’

‘ಪೆದ್ದಿ’ ಸಿನಿಮಾನಲ್ಲಿ ರಾಮ್ ಚರಣ್ ಎದುರು ಜಾನ್ಹವಿ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾನಲ್ಲಿ ರಾಮ್ ಚರಣ್ ಅವರ ಗುರುವಿನ ಪಾತ್ರದಲ್ಲಿ ಶಿವರಾಜ್ ಕುಮಾರ್ ಅವರು ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಬುಚ್ಚಿಬಾಬು ಸನಾ. ಸುಕುಮಾರ್ ಶಿಷ್ಯನಾಗಿರುವ ಇವರು ಈ ಹಿಂದೆ ‘ಉಪ್ಪೆನ’ ಹೆಸರಿನ ಬ್ಲಾಕ್ ಬಸ್ಟರ್ ಸಿನಿಮಾ ನಿರ್ದೇಶಿಸಿದ್ದರು. ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದು, ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ. ಸಿನಿಮಾ ಜೂನ್ 4 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಚಾಮರಾಜನಗರ: ಸಲೂನ್‌ನಲ್ಲಿ ಶಿಸ್ತಿನಿಂದ ಕೇಶ ವಿನ್ಯಾಸ ಮಾಡಿಸಿಕೊಂಡ ಮಂಗ! ವಿಡಿಯೋ ಇಲ್ಲಿದೆ ನೋಡಿ – Kannada News | Viral Video: Monkey Visits Salon in Chamarajanagar for Hair Styling; Shakes Hands with Barber Before Leaving

ಚಾಮರಾಜನಗರ, ಮೇ 8: ಚಾಮರಾಜನಗರ ತಾಲೂಕಿನ ಸಂತೇಮರಳ್ಳಿ ಗ್ರಾಮದಲ್ಲಿ ವಿಚಿತ್ರ ಹಾಗೂ ಅಚ್ಚರಿಯ ಘಟನೆಯೊಂದು ನಡೆದಿದೆ. ಇಲ್ಲಿನ ದೇವರಾಜ್ ಎಂಬುವವರ ಸಲೂನ್‌ಗೆ ಮಂಗವೊಂದು ಬಂದು, ಶಿಸ್ತಿನಿಂದ ಕೇಶ ವಿನ್ಯಾಸ ಮಾಡಿಸಿಕೊಂಡು ಎಲ್ಲರ ಗಮನ ಸೆಳೆದಿದೆ. ದಿನನಿತ್ಯ ಸಲೂನ್ ಬಳಿ ಬರುತ್ತಿದ್ದ ಈ ಮಂಗ, ಒಳಗೆ ಬಂದು ಕನ್ನಡಿಯಲ್ಲಿ ತನ್ನನ್ನು ತಾನು ನೋಡಿಕೊಳ್ಳುತ್ತಿತ್ತು. ಎಷ್ಟೇ ಗದರಿಸಿದರೂ ಕ್ಷೌರಿಕನ ಕೆಲಸ ಮುಗಿಯುವ ವರೆಗೂ ಅಲ್ಲಿಂದ ಕದಲುತ್ತಿರಲಿಲ್ಲ. ಮಂಗನ ಈ ನಡೆ ಗಮನಿಸಿದ ಸಲೂನ್ ಮಾಲೀಕ ದೇವರಾಜ್, ಪ್ರೀತಿಯಿಂದ ಅದರ ತಲೆ ಬಾಚಿದ್ದಾರೆ. ಬಳಿಕ ಕೇಶ ವಿನ್ಯಾಸ ಮಾಡುವಂತೆ ನಟಿಸಿ ತಲೆ ಬಾಚಿದಾಗ, ಮಂಗ ಯಾವುದೇ ಗಲಾಟೆ ಮಾಡದೆ ಗಂಭೀರವಾಗಿ ಕುಳಿತು ಕೇಶ ವಿನ್ಯಾಸ ಮಾಡಿಸಿಕೊಂಡಿದೆ. ಪ್ರಾಣಿ ಮತ್ತು ಮನುಷ್ಯನ ನಡುವಿನ ಈ ಅಪರೂಪದ ಸ್ನೇಹದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತುಮಕೂರಿನಲ್ಲಿ ಹೆಚ್ಚಾಯ್ತು ಹಕ್ಕಿ ಜ್ವರದ ಭೀತಿ: 50ಕ್ಕೂ ಹೆಚ್ಚು ನವಿಲುಗಳ ಸಾವು! – Kannada News | Bird Flu Scare in Tumakuru: Over 54 Peacocks Dead; Chicken Lab Reports Negative

ತುಮಕೂರು, ಮೇ 08: ಜಿಲ್ಲೆಯಲ್ಲಿ ಹಕ್ಕಿ ಜ್ವರದ (Bird Flu) ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕೆಲ ದಿನಗಳ ಹಿಂದೆಯಷ್ಟೇ 44 ನವಿಲುಗಳು ಮತ್ತು 30 ಕೋಳಿಗಳು ಸಾವನ್ನಪ್ಪಿದ್ದವು. ನವಿಲುಗಳ ಸಾವಿಗೆ ಹಕ್ಕಿ ಜ್ವರವೇ ಕಾರಣವೆಂದು ಲ್ಯಾಬ್ ವರದಿ ದೃಢಪಡಿಸಿತ್ತು. ಕೋಳಿಗಳ ಸಾವಿಗೆ ಸಂಬಂಧಿಸಿದಂತೆ ಸ್ಯಾಂಪಲ್​ಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇದರ ಬೆನ್ನಲ್ಲೇ ಈಗ ಮತ್ತಷ್ಟು ನವಿಲುಗಳು ಸಾವನ್ನಪ್ಪಿದ್ದು, ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿದೆ.

ಮುಖ್ಯಾಂಶಗಳು

  • ತುಮಕೂರು ಜಿಲ್ಲೆಯಲ್ಲಿ ಕಳೆದ 30 ದಿನಗಳಲ್ಲಿ 54ಕ್ಕೂ ಅಧಿಕ ನವಿಲುಗಳ ಸಾವು
  • ಹಕ್ಕಿ ಜ್ವರದ ಭೀತಿಯಿಂದ ಪಶುಸಂಗೋಪನಾ ಇಲಾಖೆ ಹೈ ಅಲರ್ಟ್
  • ಬೊಮ್ಮನಹಳ್ಳಿ ಕೋಳಿ ಫಾರಂನಲ್ಲಿ ಮೃತಪಟ್ಟಿದ್ದ ಕೋಳಿಗಳ ವರದಿ ನೆಗೆಟಿವ್

ತುಮಕೂರು ತಾಲೂಕಿನಾದ್ಯಂತ ಕಳೆದ ಒಂದು ತಿಂಗಳಿನಿಂದ ನವಿಲುಗಳು ನಿಗೂಢವಾಗಿ ಸಾವನ್ನಪ್ಪುತ್ತಿವೆ. ಕಳೆದ 30 ದಿನಗಳಲ್ಲಿ ಸಾವನ್ನಪ್ಪಿದ ನವಿಲುಗಳ ಸಂಖ್ಯೆ ಈಗ 54ರ ಗಡಿ ದಾಟಿದೆ. ಈ ಹಿಂದೆ 44 ನವಿಲುಗಳು ಸಾವನ್ನಪ್ಪಿದ್ದ ವರದಿಯಾಗಿತ್ತು, ಇದೀಗ ಆ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ತುಮಕೂರು ತಾಲೂಕು ಮಾತ್ರವಲ್ಲದೆ, ಇದೀಗ ಕುಣಿಗಲ್‌ನಲ್ಲಿಯೂ ನವಿಲಿನ ಕಳೆಬರ ಪತ್ತೆಯಾಗಿದ್ದು, ಹಕ್ಕಿ ಜ್ವರ ಜಿಲ್ಲೆಯ ಇತರೆ ಭಾಗಗಳಿಗೂ ವ್ಯಾಪಿಸುತ್ತಿರುವ ಮುನ್ಸೂಚನೆ ನೀಡಿದೆ. ಕುಣಿಗಲ್‌ನಲ್ಲಿ ಮತ್ತೆ ನವಿಲುಗಳು ಸಾವನ್ನಪ್ಪಿದರೆ ಕೂಡಲೇ ಸ್ಯಾಂಪಲ್‌ಗಳನ್ನು ವರದಿಗೆ ರವಾನಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಪಶುಸಂಗೋಪನಾ ಇಲಾಖೆ ಮುನ್ನೆಚ್ಚರಿಕೆ

ನವಿಲುಗಳ ನಿರಂತರ ಸಾವಿನ ಬೆನ್ನಲ್ಲೇ ಪಶುಸಂಗೋಪನಾ ಇಲಾಖೆ ಅಲರ್ಟ್ ಘೋಷಿಸಿದೆ. ಜಿಲ್ಲೆಯಾದ್ಯಂತ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತು ಹಕ್ಕಿಗಳ ಚಲನವಲನದ ಮೇಲೆ ನಿಗಾ ಇಡುವಂತೆ ಸೂಚನೆ ನೀಡಲಾಗಿದೆ. ಕಾಡುಪ್ರಾಣಿಗಳು ಹಾಗೂ ಹಕ್ಕಿಗಳ ಸಾವಿನ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ವರದಿ ಮಾಡಲು ತಿಳಿಸಲಾಗಿದೆ.

ಇದನ್ನೂ ಓದಿ ತುಮಕೂರಿನಲ್ಲಿ ಹಕ್ಕಿ ಜ್ವರದ ಆತಂಕ: ನವಿಲುಗಳ ಸಾವಿಗೆ ‘H5N1’ ಸೋಂಕು ಕಾರಣ!

ಕೋಳಿಗಳ ಸಾವಿಗೆ ಹಕ್ಕಿ ಜ್ವರ ಕಾರಣವಲ್ಲ

ಇನ್ನೊಂದೆಡೆ, ತುಮಕೂರು ತಾಲೂಕಿನ ಬೊಮ್ಮನಹಳ್ಳಿಯ ಕೋಳಿ ಫಾರಂನಲ್ಲಿ ಏಕಕಾಲಕ್ಕೆ ಸುಮಾರು 30ಕ್ಕೂ ಹೆಚ್ಚು ಕೋಳಿಗಳು ಸಾವನ್ನಪ್ಪಿದ್ದವು. ಹಕ್ಕಿ ಜ್ವರದ ಭೀತಿಯ ನಡುವೆ ಈ ಘಟನೆ ಗ್ರಾಮಸ್ಥರನ್ನು ಕಂಗಾಲಾಗಿಸಿತ್ತು. ತಕ್ಷಣವೇ ಮೃತ ಕೋಳಿಗಳ ಸ್ಯಾಂಪಲ್‌ಗಳನ್ನು ವೈದ್ಯಕೀಯ ಪರೀಕ್ಷೆಗೆ ರವಾನಿಸಲಾಗಿತ್ತು. ಇದೀಗ ವರದಿ ಬಂದಿದ್ದು, ಕೋಳಿಗಳಲ್ಲಿ ಹಕ್ಕಿ ಜ್ವರ ಪತ್ತೆಯಾಗಿಲ್ಲ (Negative) ಎಂದು ದೃಢಪಟ್ಟಿದೆ. ಇದರಿಂದ ಕೋಳಿ ಫಾರಂ ಮಾಲೀಕರು ಹಾಗೂ ಸ್ಥಳೀಯರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರಾದರೂ, ನವಿಲುಗಳ ಸಾವು ಇನ್ನೂ ನಿಗೂಢವಾಗಿಯೇ ಇರುವುದು ಚಿಂತೆಯನ್ನು ಹೆಚ್ಚಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Amazon Summer Sale: ಅಮೆಜಾನ್​ನಲ್ಲಿ ಶುರುವಾಯಿತು ಸಮ್ಮರ್ ಸೇಲ್: ಸ್ಮಾರ್ಟ್‌ಫೋನ್‌ಗಳಿಂದ ಟಿವಿಗಳವರೆಗೆ ಎಲ್ಲವೂ ಅಗ್ಗ – Kannada News | Amazon Great Summer Sale Start platform offer huge discounts on smartphones and others

ಬೆಂಗಳೂರು (ಮೇ. 08): ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ (Amazon Summer Sale) ಇಂದಿನಿಂದ ಅಂದರೆ ಮೇ 8 ರಂದು ಎಲ್ಲಾ ಬಳಕೆದಾರರಿಗೆ ಪ್ರಾರಂಭವಾಗಿದೆ. ಪ್ರೈಮ್ ಸದಸ್ಯರಿಗೆ, ಈ ಸೇಲ್ ನಿನ್ನೆ, ಮೇ 7 ರಂದು ಲೈವ್ ಆಗಿತ್ತು. ಇ-ಕಾಮರ್ಸ್ ಕಂಪನಿಯು ಪ್ರೈಮ್ ಸದಸ್ಯರಿಗೆ ಆರಂಭಿಕ ಪ್ರವೇಶವನ್ನು ನೀಡುತ್ತದೆ. ವರ್ಷದ ಈ ಮೊದಲ ಪ್ರಮುಖ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳಿಂದ ಸ್ಮಾರ್ಟ್ ಟಿವಿಗಳವರೆಗೆ ಎಲ್ಲವೂ ರಿಯಾಯಿತಿಯಲ್ಲಿ ಲಭ್ಯವಿದೆ. ಮತ್ತೊಂದೆಡೆ ಫ್ಲಿಪ್‌ಕಾರ್ಟ್ ನಾಳೆಯಿಂದ, ಮೇ 9 ರಂದು ಹೊಸ ಸೇಲ್ ಅನ್ನು ಸಹ ಪ್ರಾರಂಭಿಸಲಿದೆ.

ಪ್ರೈಮ್ ಸದಸ್ಯರಿಗೆ ಆಫರ್‌ಗಳು

ಅಮೆಜಾನ್ ವೆಬ್‌ಸೈಟ್ ಪ್ರಕಾರ, ಈ ಮಾರಾಟದ ಸಮಯದಲ್ಲಿ ಪ್ರೈಮ್ ಸದಸ್ಯರು ಖರೀದಿಸಿದ ಯಾವುದೇ ಉತ್ಪನ್ನದ ಮೇಲೆ 15% ವರೆಗೆ ಹೆಚ್ಚುವರಿ ರಿಯಾಯಿತಿಯನ್ನು ಪಡೆಯುತ್ತಾರೆ. ಸ್ಯಾಮ್​ಸಂಗ್, ಆಪಲ್, ರಿಯಲ್ ಮಿ, ಐಕ್ಯೂ, ಒನ್​ಪ್ಲಸ್ ಮತ್ತು ಶವೋಮಿ ಬ್ರ್ಯಾಂಡ್‌ಗಳ ಸ್ಮಾರ್ಟ್‌ಫೋನ್‌ಗಳು ಗಮನಾರ್ಹ ರಿಯಾಯಿತಿಯಲ್ಲಿ ಲಭ್ಯವಿದೆ. LED ಸ್ಮಾರ್ಟ್ ಟಿವಿಗಳು, ಸ್ಪ್ಲಿಟ್ ACಗಳು ಮತ್ತು ರೆಫ್ರಿಜರೇಟರ್‌ಗಳಂತಹ ಗೃಹೋಪಯೋಗಿ ಉಪಕರಣಗಳನ್ನು ಸಹ ಈ ಮಾರಾಟದ ಸಮಯದಲ್ಲಿ ಗಮನಾರ್ಹವಾಗಿ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು.

HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳಲ್ಲಿ ಸುಲಭ EMI ಲಭ್ಯವಿರುತ್ತದೆ ಎಂದು ಇ-ಕಾಮರ್ಸ್ ಕಂಪನಿ ಘೋಷಿಸಿದೆ. ಗ್ರಾಹಕರು 10% ವರೆಗೆ ತ್ವರಿತ ರಿಯಾಯಿತಿಯ ಪ್ರಯೋಜನವನ್ನು ಪಡೆಯುತ್ತಾರೆ. ಯಾವುದೇ ವೆಚ್ಚವಿಲ್ಲದ EMI ಸಹ ಲಭ್ಯವಿದೆ, ಇದು ನಿಮಗೆ ದಿನಕ್ಕೆ ₹9 ಕ್ಕಿಂತ ಕಡಿಮೆ ಖರ್ಚು ಮಾಡುವ ಮೂಲಕ ಉತ್ಪನ್ನಗಳನ್ನು ಖರೀದಿಸಲು ಅನುವು ಮಾಡಿಕೊಡುತ್ತದೆ. ಅಮೆಜಾನ್ ಪೇ ICICI ಬ್ಯಾಂಕ್ ಕಾರ್ಡ್‌ನೊಂದಿಗೆ ಮಾಡಿದ ಖರೀದಿಗಳಿಗೆ 5% ವರೆಗೆ ಅನಿಯಮಿತ ಕ್ಯಾಶ್‌ಬ್ಯಾಕ್ ಲಭ್ಯವಿರುತ್ತದೆ. ಕೆಲವು ಉತ್ಪನ್ನಗಳು ₹1,250 ರಿಂದ ₹2,500 ವರೆಗಿನ ಹೆಚ್ಚುವರಿ ಪ್ರಯೋಜನಗಳನ್ನು ಸಹ ನೀಡುತ್ತವೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಿಪೇಯ್ಡ್ ಸಿಮ್‌ಗಳು ಏಕೆ ಕಾರ್ಯನಿರ್ವಹಿಸುವುದಿಲ್ಲ ಗೊತ್ತೇ?: ಇಲ್ಲಿದೆ ಕುತೂಹಲಕಾರಿ ವಿಷಯ

ಅಮೆಜಾನ್ ಸೇಲ್ ನಲ್ಲಿ ಸ್ಯಾಮ್ ಸಂಗ್ ಸ್ಮಾರ್ಟ್​ಫೋನ್​ಗಳ ಮೇಲೆ ₹30,000 ವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಲ್ಯಾಪ್ ಟಾಪ್ ಗಳು ಸಹ 60% ವರೆಗೆ ರಿಯಾಯಿತಿಯಲ್ಲಿ ಲಭ್ಯವಿದ್ದರೆ, ಆಡಿಯೋ ಡಿವೈಸ್ ಗಳು 70% ವರೆಗೆ ರಿಯಾಯಿತಿಯಲ್ಲಿ ಲಭ್ಯವಿರುತ್ತವೆ. ಸ್ಯಾಮ್ ಸಂಗ್ ಸ್ಮಾರ್ಟ್ ಟಿವಿಗಳನ್ನು ಸಹ 40% ವರೆಗೆ ರಿಯಾಯಿತಿಯಲ್ಲಿ ಖರೀದಿಸಬಹುದು. ಇನ್ವರ್ಟರ್ ಸ್ಪ್ಲಿಟ್ ಎಸಿಗಳು 55% ವರೆಗೆ ರಿಯಾಯಿತಿಯಲ್ಲಿ ಲಭ್ಯವಿದೆ.

ಸ್ಮಾರ್ಟ್‌ಫೋನ್‌ಗಳ ಬಗ್ಗೆ ಹೇಳುವುದಾದರೆ, ಸ್ಯಾಮ್‌ಸಂಗ್ ಫೋನ್‌ಗಳು ₹13,999 ರಿಂದ ಪ್ರಾರಂಭವಾಗುತ್ತವೆ. ಏತನ್ಮಧ್ಯೆ, ರೆಡ್‌ಮಿ ಫೋನ್‌ಗಳು ₹11,999 ರಿಂದ ಪ್ರಾರಂಭವಾಗುತ್ತವೆ. ಈ ಮಾರಾಟದ ಸಮಯದಲ್ಲಿ ₹6,999 ರಿಂದ ಪ್ರಾರಂಭವಾಗುವ ಸ್ಮಾರ್ಟ್ ಟಿವಿಗಳನ್ನು ಮನೆಗೆ ತರಬಹುದು. ₹1,09,390 ಬೆಲೆಯ ಹೈಯರ್‌ನ ಪ್ರೀಮಿಯಂ ರೆಫ್ರಿಜರೇಟರ್ ಅನ್ನು ಈ ಮಾರಾಟದ ಸಮಯದಲ್ಲಿ ಕೇವಲ ₹60,990 ಗೆ ಖರೀದಿಸಬಹುದು. ರೆಫ್ರಿಜರೇಟರ್ ಖರೀದಿಯ ಮೇಲೆ ನೀವು ₹49,000 ವರೆಗೆ ರಿಯಾಯಿತಿ ಪಡೆಯುತ್ತೀರಿ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಳಪತಿ ವಿಜಯ್ ಜೀವನದಲ್ಲಿ ನಿಜವಾಯ್ತು ‘ಸರ್ಕಾರ್’ ಸಿನಿಮಾದ ದೃಶ್ಯ – Kannada News | Thalapathy Vijay’s CM Bid: DMK AIADMK Alliance to Block TVK in Tamil Nadu Politics?

ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ಇತ್ತೀಚೆಗೆ ತಮಿಳುನಾಡು ರಾಜಕೀಯ ಸುದ್ದಿಯಲ್ಲಿದೆ. ನಟ ದಳಪತಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಮ್ (ಟಿವಿಕೆ) ಪಕ್ಷವು ಐತಿಹಾಸಿಕ ಗೆಲುವು ಸಾಧಿಸಿದೆ. ಟಿವಿಕೆ 234 ಸ್ಥಾನಗಳಲ್ಲಿ 108 ಸ್ಥಾನಗಳನ್ನು ಗೆದ್ದಿದೆ. ಆದಾಗ್ಯೂ, ವಿಜಯ್ ರಾಜ್ಯದ ಮುಖ್ಯಮಂತ್ರಿಯಾಗುವುದನ್ನು ತಡೆಯಲು ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ಮೈತ್ರಿ ಏರ್ಪಡಲಿದೆ ಎಂಬ ವದಂತಿಗಳಿವೆ. ಈ ಎರಡು ವಿರೋಧ ಪಕ್ಷಗಳ ನಡುವಿನ ಮೈತ್ರಿಯ ಸುದ್ದಿ ಎಷ್ಟು ನಿಜ ಎಂಬುದು ಸ್ಪಷ್ಟವಾಗಿಲ್ಲವಾದರೂ, ದಳಪತಿ ವಿಜಯ್ ಮುಖ್ಯಮಂತ್ರಿಯಾಗುವ ಪ್ರಯಾಣ ಸುಲಭವಲ್ಲ ಎಂಬುದು ಸ್ಪಷ್ಟವಾಗಿದೆ. ಅದೇ ರೀತಿ, ತಮಿಳುನಾಡು ರಾಜಕೀಯದಲ್ಲಿ ಪ್ರಸ್ತುತ ಕಂಡುಬರುತ್ತಿರುವ ತಿರುವು, ಇದೇ ರೀತಿಯ ದೃಶ್ಯವು ವಿಜಯ್ ಅವರ ಚಿತ್ರವೊಂದರಲ್ಲಿಯೂ ಕಂಡುಬಂದಿದೆ.

ವಿಜಯ್ ಅವರ ‘ಸರ್ಕಾರ್’ ಚಿತ್ರ 2018 ರಲ್ಲಿ ಬಿಡುಗಡೆಯಾಯಿತು . ಈ ಚಿತ್ರದ ಒಂದು ದೃಶ್ಯವು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವಿಜಯ್ ಅವರೊಂದಿಗೆ ಇದೇ ರೀತಿಯ ಚಲನಚಿತ್ರ ದೃಶ್ಯ ನಡೆಯುತ್ತಿರುವ ಬಗ್ಗೆ ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ. ‘ಒಂದು ಚಿತ್ರ ವಾಸ್ತವಕ್ಕೆ ತಿರುಗಿದಾಗ..’ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.

ವಿಜಯ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಎಲ್ಲರೂ ಭಾವಿಸಿರುತ್ತಾರೆ. ಆದರೆ ಅದಕ್ಕೂ ಮೊದಲು, ತಮಿಳುನಾಡಿನ ಎರಡು ಪ್ರಮುಖ ರಾಜಕೀಯ ಪಕ್ಷಗಳು ಒಗ್ಗೂಡಿ ಅವರ ಮುಂದೆ ಅಡೆತಡೆಗಳನ್ನು ಸೃಷ್ಟಿಸುತ್ತವೆ. ನಿಜ ಜೀವನದಲ್ಲೂ ವಿಜಯ್‌ಗೆ ಅದೇ ರೀತಿ ಆಗುವುದನ್ನು ನೋಡಿ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ.

ಇದನ್ನೂ ಓದಿ: ‘ಜನರ ತೀರ್ಪಿಗೆ ಗೌರವ ಸಿಗಲೇಬೇಕು’; ವಿಜಯ್ ಪರ ಬ್ಯಾಟ್ ಬೀಸಿದ ಕಮಲ್ ಹಾಸನ್

ಬುಧವಾರ, ವಿಜಯ್ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚಿಸುವುದಾಗಿ ಹೇಳಿಕೊಂಡರು. ಅವರ ಟಿವಿಕೆ ಪಕ್ಷವು ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದಿದ್ದು, ಬಹುಮತದ ಸಂಖ್ಯೆ 118 ಆಗಿದೆ. ಕಾಂಗ್ರೆಸ್ ಟಿವಿಕೆಯನ್ನು ಬೆಂಬಲಿಸುವುದರೊಂದಿಗೆ, ಅದರ ಸಂಖ್ಯೆ 113 ತಲುಪಿದೆ. ಅದರಂತೆ, ವಿಜಯ್ ಅವರ ಪಕ್ಷವು 113 ಶಾಸಕರ ಬೆಂಬಲ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿತು. ಆದಾಗ್ಯೂ, ರಾಜ್ಯಪಾಲರು 118 ಶಾಸಕರನ್ನು ಕೋರಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಿತಿಮೀರಿದ ಆಟಗಾರರ ವರ್ತನೆ; ಶಿಸ್ತುಕ್ರಮದ ಎಚ್ಚರಿಕೆ ಕೊಟ್ಟ ಬಿಸಿಸಿಐ – Kannada News | IPL Discipline Crackdown: BCCI Warns Players and Owners on Misconduct Rules

ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಆಟಗಾರರಿಂದ ಪದೇ ಪದೇ ಶಿಸ್ತು ಉಲ್ಲಂಘನೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಈಗ ಕಠಿಣ ಕ್ರಮಕ್ಕೆ ಮುಂದಾಗಿದೆ. ಆಟಗಾರರು ಮತ್ತು ಅಧಿಕಾರಿಗಳ ಕೊಠಡಿಗಳಿಗೆ ಅನಧಿಕೃತ ವ್ಯಕ್ತಿಗಳ ಭೇಟಿ ಹೆಚ್ಚಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ‘ನಾವು ಸುಮ್ಮನೆ ಕುಳಿತಿಲ್ಲ, ನಿಯಮ ಮೀರಿದರೆ ಕಠಿಣ ಶಿಕ್ಷೆ ಖಚಿತ’ ಎಂದು ಎಚ್ಚರಿಸಿದ್ದಾರೆ.

ಕೆಲವು ತಂಡಗಳ ಆಟಗಾರರು ಮತ್ತು ಫ್ರಾಂಚೈಸಿಗಳು ಬಿಸಿಸಿಐ ನಿಗದಿಪಡಿಸಿದ ಶಿಷ್ಟಾಚಾರಗಳನ್ನು ಸಂಪೂರ್ಣವಾಗಿ ಮರೆತಿವೆ ಎಂಬ ಆರೋಪ ಕೇಳಿಬಂದಿದೆ. ‘ತಂಡದ ಬಸ್‌ಗಳಲ್ಲಿ ಸಂಬಂಧಪಡದವರು ಪ್ರಯಾಣಿಸುವುದು, ಹೋಟೆಲ್‌ಗಳಲ್ಲಿ ಆಟಗಾರರು ಮತ್ತು ಅಧಿಕಾರಿಗಳ ಕೊಠಡಿಗಳಿಗೆ ಅನುಮತಿ ಇಲ್ಲದೆ ಹೊರಗಿನವರು ಭೇಟಿ ನೀಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇದು ಗಂಭೀರ ಅಪರಾಧ’ ಎಂದು ಸೈಕಿಯಾ ಹೇಳಿದ್ದಾರೆ.

ಈ ಬಾರಿ ಐಪಿಎಲ್ ಮೈದಾನಕ್ಕಿಂತ ಹೊರಗಿನ ಘಟನೆಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿದೆ. ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ, ಪಂಜಾಬ್ ಬೌಲರ್ ಅರ್ಷದೀಪ್ ಸಿಂಗ್, ಹೈದರಾಬಾದ್ ವಿಕೆಟ್ ಕೀಪರ್ ಇಶಾನ್ ಕಿಶನ್ ಅವರ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟ್ರೋಲ್ ವ್ಯಕ್ತವಾಗುತ್ತಿದೆ. ಇವರು ಆಟದ ಮೇಲೆ ಗಮನ ಹರಿಸೋದು ಬಿಟ್ಟು ಗರ್ಲ್​​ಫ್ರೆಂಡ್​ ಜೊತೆ ಸುತ್ತಾಡುತ್ತಿದ್ದಾರೆ.

ಮೊಬೈಲ್ ಬಳಕೆ: ಗುುವಾಹಟಿಯಲ್ಲಿ ನಡೆದ ಪಂದ್ಯದ ವೇಳೆ ತಂಡದ ಮ್ಯಾನೇಜರ್ ರೋಮಿ ಭಿಂದರ್ ಡಗೌಟ್‌ನಲ್ಲಿ ಮೊಬೈಲ್ ಬಳಸಿದ್ದಕ್ಕಾಗಿ 1 ಲಕ್ಷ ರೂ. ದಂಡ ವಿಧಿಸಲಾಗಿತ್ತು.

ವೇಪಿಂಗ್ ವಿವಾದ: ಆರ್​​ ಆರ್​ ತಂಡದ ನಾಯಕ ರಿಯಾನ್ ಪರಾಗ್ ಡ್ರೆಸ್ಸಿಂಗ್ ರೂಮ್‌ನಲ್ಲಿ ಇ-ಸಿಗರೇಟ್ (Vaping) ಬಳಸುತ್ತಿರುವ ದೃಶ್ಯ ವೈರಲ್ ಆಗಿದ್ದು, ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಚಹಾಲ್ ಕೂಡ ಇದೇ ವಿವಾದ ಮಾಡಿಕೊಂಡಿದ್ದಾರೆ.

ಮಾಲೀಕರಿಗೂ ಬಿಟ್ಟಿಲ್ಲ ವಾರ್ನಿಂಗ್:

ಕೇವಲ ಆಟಗಾರರಷ್ಟೇ ಅಲ್ಲ, ತಂಡದ ಮಾಲೀಕರು ಕೂಡ ನಿಯಮ ಮೀರಿ ಆಟಗಾರರ ಜೊತೆ ಬೆರೆಯುತ್ತಿರುವುದು ಬಿಸಿಸಿಐ ಕಣ್ಣು ಕೆಂಪು ಮಾಡಿತ್ತು. ಎಲ್​​ಎಸ್​ಜಿ ಮಾಲೀಕ ಗೋಯೆಂಕಾ ಅವರು ಪಂತ್​​ಗೆ ಓಪನ್ ಆಗಿ ಎಚ್ಚರಿಕೆ ನೀಡಿದ್ದು ಚರ್ಚೆ ಹುಟ್ಟುಹಾಕಿತ್ತು.

ಇದನ್ನೂ ಓದಿ: ಉಚಿತ ಟಿಕೆಟ್​ಗಳ ಬೇಡಿಕೆಯಿಂದಲೇ ಫೈನಲ್ ಪಂದ್ಯ ಶಿಫ್ಟ್; ಬಿಸಿಸಿಐ ಸ್ಪಷ್ಟನೆ

ಇನ್ನು ಮುಂದೆ ಯಾವುದೇ ಸಣ್ಣ ತಪ್ಪು ನಡೆದರೂ ಸಹಿಸುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಸಂಜೆ ವೇಳೆಗೆ ಹೊಸ ಮಾರ್ಗಸೂಚಿ ಬಿಡುಗಡೆಯಾಗಲಿದ್ದು, ಅದನ್ನು ಉಲ್ಲಂಘಿಸುವವರು ಸ್ಟಾರ್ ಆಟಗಾರನಾಗಿರಲಿ ಅಥವಾ ತಂಡದ ಮಾಲೀಕನಾಗಿರಲಿ ಅವರ ವಿರುದ್ಧ ಕಠಿಣ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಬಿಸಿಸಿಐ ತಿಳಿಸಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 10:31 am, Fri, 8 May 26

Source link

Exit mobile version