ಕೋಲಾರ, ಮೇ 7: ಜಿಲ್ಲೆಯ ಕೋಲಾರ ತಾಲ್ಲೂಕಿನ ಮಲ್ಲಸಂದ್ರ ಗ್ರಾಮದಲ್ಲಿ ತಡರಾತ್ರಿ ಖದೀಮರು ಲಕ್ಷಾಂತರ ರೂಪಾಯಿ ಮೌಲ್ಯದ ಒಡವೆ ಹಾಗೂ ನಗದನ್ನು ದೋಚಿ ನಂತರ ಕೃತ್ಯ ಬೆಳಕಿಗೆ ಬಾರದೇ ಇರಲು ಮನೆಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಗ್ರಾಮದ ಶಾರದಮ್ಮ ಎಂಬುವರಿಗೆ ಸೇರಿದ ಮನೆಯಲ್ಲಿ ಈ ಕೃತ್ಯ ನಡೆದಿದ್ದು, ಜೀವನೋಪಾಯಕ್ಕಾಗಿ ಟೀ ಅಂಗಡಿ ನಡೆಸುತ್ತಿದ್ದ ಈ ಬಡ ಕುಟುಂಬ ಇದೀಗ ಬೀದಿಗೆ ಬಿದ್ದಿದೆ. ತಡರಾತ್ರಿ ಮನೆಗೆ ನುಗ್ಗಿದ ಕಳ್ಳರು ಲಾಕರ್ ಮುರಿದು ಅದರಲ್ಲಿದ್ದ ನಗದು ಮತ್ತು ಚಿನ್ನಾಭರಣಗಳನ್ನು ಕದ್ದಿದ್ದಾರೆ. ಬಳಿಕ ಈ ಕಳ್ಳತನದ ಕೃತ್ಯದ ಬಗ್ಗೆ ಯಾರಿಗೂ ಅನುಮಾನ ಬಾರದಂತೆ ಮಾಡಲು ಇಡೀ ಮನೆಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಮನೆಯಲ್ಲಿದ್ದ ದಿನಸಿ ಪದಾರ್ಥಗಳು ಹಾಗೂ ಅಗತ್ಯ ವಸ್ತುಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ. ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬಳ್ಳಾರಿ, ಮೇ 08: ಜಿಲ್ಲೆಯಲ್ಲಿಅಕ್ರಮ ಪಡಿತರ ಅಕ್ಕಿ ಸಾಗಾಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ (Ballary)ಎಸ್ಪಿ ಸುಮನ್ ಡಿ. ಪನ್ನೇಕರ್ ಅವರ ಗನ್ ಮ್ಯಾನ್ ದೇವರಾಜ್ ಬಂಧನಕ್ಕೊಳಗಾಗಿರುವ ಘಟನೆ ಸಂಚಲನ ಮೂಡಿಸಿದೆ. ಅಕ್ರಮ ಪಡಿತರ ಅಕ್ಕಿ ಸಾಗಾಣೆ ಮಾಡುತ್ತಿದ್ದ ಶರಭಯ್ಯ ಎಂಬುವವರಿಂದ ಹಣ ವಸೂಲಿ ಮಾಡಿದ ಆರೋಪದಡಿ ದೇವರಾಜ್ ಹಾಗೂ ಆತನ ಸಹಚರರನ್ನು ಮೋಕಾ ಪೊಲೀಸರು ಬಂಧಿಸಿದ್ದಾರೆ.
ಮುಖ್ಯಾಂಶಗಳು
ಬಳ್ಳಾರಿ ಎಸ್ಪಿ ಗನ್ ಮ್ಯಾನ್ ದೇವರಾಜ್ ಅಕ್ರಮ ಅಕ್ಕಿ ಸಾಗಾಣಿಕೆದಾರರಿಂದ ಹಣ ವಸೂಲಿ ಮಾಡಿದ ಆರೋಪದಡಿ ಬಂಧನ.
ಎಸ್ಪಿ ಸ್ಕ್ವಾಡ್ ಹೆಸರಿನಲ್ಲಿ ಲಾರಿಗಳನ್ನು ಅಡ್ಡಗಟ್ಟಿ ಐದು ಲಕ್ಷ ರೂ. ಬೇಡಿಕೆಯಿಟ್ಟು, ಮೂರು ಲಕ್ಷ ರೂ. ಸುಲಿಗೆ.
ಖುದ್ದು ಎಸ್ಪಿ ಸುಮನ್ ಡಿ. ಪನ್ನೇಕರ್ ಅವರ ಸೂಚನೆ ಮೇರೆಗೆ ಗನ್ ಮ್ಯಾನ್ ದೇವರಾಜ್ ಮತ್ತು ಸಹಚರರ ವಿಚಾರಣೆ.
ನಡೆದಿದ್ದೇನು?
ಮಡಕೇರಿಯಿಂದ ಆಂಧ್ರಪ್ರದೇಶದತ್ತ ಪಡಿತರ ಅಕ್ಕಿ ತುಂಬಿಕೊಂಡು ತೆರಳುತ್ತಿದ್ದ ಎರಡು ಲಾರಿಗಳನ್ನು ಅಡ್ಡಗಟ್ಟಿದ್ದ ಆರೋಪಿಗಳು, ತಾವು ಎಸ್ಪಿ ಸ್ಕ್ವಾಡ್ ಅಧಿಕಾರಿಗಳು ಎಂದು ಹೇಳಿ ಐದು ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಬಳಿಕ ಮೂರು ಲಕ್ಷ ರೂ. ವಸೂಲಿ ಮಾಡಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹಣ ನೀಡದಿದ್ದರೆ ಲಾರಿಗಳನ್ನು ಸೀಜ್ ಮಾಡಿ ಜೈಲಿಗೆ ಕಳುಹಿಸುವುದಾಗಿ ಜೀವ ಬೆದರಿಕೆ ಹಾಕಿದ್ದಾರೆಯೆಂದು ಶರಭಯ್ಯ ಮೋಕಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ, ಗನ್ ಮ್ಯಾನ್ ದೇವರಾಜ್ ಎಸ್ಪಿ ಸ್ಕ್ವಾಡ್ ಹೆಸರಿನಲ್ಲಿ ಹಣ ವಸೂಲಿ ಮಾಡಿರುವುದು ಖಚಿತವಾಗಿದೆ. ಈ ಹಿನ್ನೆಲೆ ಎಸ್ಪಿ ಸುಮನ್ ಡಿ. ಪನ್ನೇಕರ್ ಅವರೇ ಕ್ರಮ ಕೈಗೊಂಡು ದೇವರಾಜ್ ಬಂಧನಕ್ಕೆ ಸೂಚನೆ ನೀಡಿದ್ದಾರೆ. ಸದ್ಯ ಮೋಕಾ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿಚಾರಣೆ ನಡೆಯುತ್ತಿದೆ.
ವಿವಾಹವೆಂಬುದು ಮನುಷ್ಯನ ಜೀವನದ ಒಂದು ಪ್ರಮುಖ ಘಟ್ಟ. ಇದು ದೈವ ಸಂಕಲ್ಪವೂ ಹೌದು. ವಿವಾಹಗಳಲ್ಲಿ ಪ್ರೇಮ ವಿವಾಹ, ಅರೇಂಜ್ ಮ್ಯಾರೇಜ್ ಸಾಮಾನ್ಯವಾಗಿವೆ. ಆದರೆ, ವಯಸ್ಸಿಗೆ ಪ್ರಾಶಸ್ತ್ಯ ನೀಡಬೇಕೇ, ಕೊಡಬಾರದೇ ಎಂಬ ಪ್ರಶ್ನೆ ಸದಾ ಕಾಡುತ್ತದೆ. ಗಂಡು ತಮ್ಮಿಗಿಂತ ವಯಸ್ಸಿನಲ್ಲಿ ಹೆಚ್ಚಿನ ಮಹಿಳೆಯರನ್ನು ಮದುವೆಯಾಗುವುದು ಶುಭವೇ ಅಶುಭವೇ ಎಂಬ ಪ್ರಶ್ನೆ ವ್ಯಾಪಕವಾಗಿ ಕೇಳಿಬರುತ್ತಿದೆ. ಈ ಎಲ್ಲ ಗೊಂದಲಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.
ಗುರೂಜಿಯವರು ಹೇಳುವಂತೆ, ಅನಾದಿ ಕಾಲದಿಂದಲೂ ಗಂಡಿನ ವಯಸ್ಸು ಹೆಚ್ಚಿದ್ದು, ಹೆಣ್ಣಿನ ವಯಸ್ಸು ಕಡಿಮೆಯಿರುವುದು ಸಾಮಾನ್ಯ. ಬಾಲ್ಯ ವಿವಾಹಗಳ ಕಾಲದಿಂದಲೂ ಇದೇ ಪದ್ಧತಿ ಚಾಲ್ತಿಯಲ್ಲಿದೆ. ಕಾಲ ಕಳೆದಂತೆ, “ಪರಿವರ್ತನೆ ಜಗದ ನಿಯಮ” ಎಂಬ ಭಗವದ್ಗೀತೆಯ ಮಾತು ನೆನಪಿಗೆ ಬರುತ್ತದೆ. ಈ ಪರಿವರ್ತನೆಯಿಂದಾಗಿ, ಈಗ ಗಂಡು ತಮ್ಮಿಗಿಂತ ವಯಸ್ಸಿನಲ್ಲಿ ಹೆಚ್ಚಿನ ಮಹಿಳೆಯರನ್ನು ಮದುವೆಯಾಗುವುದು ಸಾಮಾನ್ಯವಾಗಿ ಬಿಟ್ಟಿದೆ.
ನಮ್ಮ ಸಂಸ್ಕೃತಿ, ಜ್ಯೋತಿಷ್ಯ ಶಾಸ್ತ್ರ ಅಥವಾ ಹಿರಿಯರ ಹೇಳಿಕೆಗಳನ್ನು ನೋಡಿದಾಗ, ಗೃಹಿಣಿ ಗಂಡನಿಗಿಂತ ವಯಸ್ಸಿನಲ್ಲಿ ಚಿಕ್ಕವಳಾಗಿದ್ದಾಗ, ಗಂಡನ ಜವಾಬ್ದಾರಿಗಳು ಸ್ಪಷ್ಟವಾಗಿರುತ್ತವೆ. ಅವನು ಸಂಪಾದನೆ ಮಾಡಬೇಕು, ಕುಟುಂಬವನ್ನು ನಿರ್ವಹಿಸಬೇಕು, ಒಳ್ಳೆಯ ಸಂತಾನವನ್ನು ಪೋಷಿಸಿ, ಸತ್ಪ್ರಜೆಗಳನ್ನಾಗಿ ರೂಪಿಸಬೇಕು, ಮತ್ತು ಸಮಾಜಕ್ಕೂ ತನ್ನ ಸೇವೆ ಸಲ್ಲಿಸಬೇಕು. ಕೇವಲ ಸ್ವಾವಲಂಬಿಯಾಗಿ, ಸ್ವಾರ್ಥಿಯಾಗಿ ಬದುಕುವುದಕ್ಕಿಂತ ಸಮಾಜಕ್ಕೆ ಏನಾದರೂ ಕೊಡಬೇಕು ಎಂಬ ಮನೋಭಾವ ಹೊಂದಿರುತ್ತಾನೆ.
ಈ ಮಧ್ಯೆ, ಹೆಣ್ಣು ತನ್ನಿಗಿಂತ ಹೆಚ್ಚಿನ ವಯಸ್ಸಿನ ಪುರುಷನನ್ನು ಮದುವೆಯಾಗಬಹುದೇ ಎಂಬ ಮಾತಿಗೆ ಅನೇಕರು ತಕ್ಷಣ ಬೇಡ ಎಂದು ತಲೆ ಅಲ್ಲಾಡಿಸುತ್ತಾರೆ. ಆದರೆ, ಕಾಲ ಬದಲಾಗಿದೆ. ಯಾವುದೇ ಶಾಸ್ತ್ರಗಳಲ್ಲಿ ಗಂಡಿಗಿಂತ ಹೆಣ್ಣು ವಯಸ್ಸಿನಲ್ಲಿ ಜಾಸ್ತಿಯಿದ್ದರೆ ಮದುವೆಯಾಗಬಾರದು ಎಂದು ಸ್ಪಷ್ಟವಾಗಿ ಹೇಳಿಲ್ಲ. ಹಿಂದಿನ ಕಾಲದಲ್ಲಿ ಹೆಣ್ಣು ಮನೆಗೆ ಸೀಮಿತವಾಗಿದ್ದಳು. ಆದರೆ, ಈಗ ಗಂಡು-ಹೆಣ್ಣು ಇಬ್ಬರೂ ಕೂಡ ಎಲ್ಲಾ ವಿಚಾರಗಳಲ್ಲಿ ಸರಿಸಮಾನರಾಗಿ ಜೀವನ ನಡೆಸುತ್ತಿದ್ದಾರೆ.
ಪುರಾಣಗಳನ್ನು ಗಮನಿಸಿದಾಗ, ವಸಿಷ್ಠ ಋಷಿ ಮತ್ತು ಅರುಂಧತಿ ಅವರ ವಿವಾಹದಲ್ಲಿ ಅರುಂಧತಿ ವಯಸ್ಸಿನಲ್ಲಿ ದೊಡ್ಡವರಾಗಿದ್ದರು. ನವಗ್ರಹಗಳಲ್ಲಿ ಚಂದ್ರ ಮತ್ತು ತಾರೆ ಅವರ ಸಂಬಂಧದಲ್ಲಿ ತಾರೆ ಚಂದ್ರನಿಗಿಂತ ಹಿರಿಯರಾಗಿದ್ದರು. ಅರ್ಜುನನು ಉಲೂಪಿ ಎಂಬ ಸ್ತ್ರೀಯನ್ನು ಮದುವೆಯಾದಾಗ, ಆಕೆ ಅರ್ಜುನನಿಗಿಂತ ವಯಸ್ಸಿನಲ್ಲಿ ಹಿರಿಯರಾಗಿದ್ದರು ಎಂದು ಪುರಾಣಗಳು ಹೇಳುತ್ತವೆ. ಹಾಗೆಯೇ, ಶ್ರೀಕೃಷ್ಣರಿಗಿಂತ ಸತ್ಯಭಾಮಾ ವಯಸ್ಸಿನಲ್ಲಿ ಸ್ವಲ್ಪ ದೊಡ್ಡವರಾಗಿದ್ದರು ಎಂದೂ ಉಲ್ಲೇಖವಿದೆ. ಇವೆಲ್ಲವೂ ಕೂಡ ದೈವ ಸಂಕಲ್ಪಕ್ಕೆ ಉದಾಹರಣೆಗಳು.
ಇಂದಿನ ಕಾಲಘಟ್ಟದಲ್ಲಿಯೂ ಅನೇಕ ಉದಾಹರಣೆಗಳನ್ನು ನಾವು ಕಾಣಬಹುದು. ಭಾರತ ರತ್ನ ಸಚಿನ್ ತೆಂಡೂಲ್ಕರ್, ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರು ತಮ್ಮಿಗಿಂತ ವಯಸ್ಸಾದ ಸಂಗಾತಿಗಳನ್ನು ಮದುವೆಯಾಗಿದ್ದಾರೆ. ನಟಿ ಜಯಂತಿ ಅವರು ನಂಜುಂಡ ಸ್ವಾಮಿ ಅವರನ್ನು ಮದುವೆಯಾದಾಗ, ನಂಜುಂಡ ಸ್ವಾಮಿ ಜಯಂತಿ ಅವರಿಗಿಂತ ಚಿಕ್ಕವರಾಗಿದ್ದರು. ಇದೇ ರೀತಿ, ಸೈಫ್ ಅಲಿ ಖಾನ್ ಅವರಂತಹ ಅನೇಕ ಸೆಲೆಬ್ರಿಟಿಗಳನ್ನು ನೋಡಬಹುದು. ಅವರ ಜೀವನ ಶೈಲಿಯನ್ನು ಗಮನಿಸಿದಾಗ, ಈ ರೀತಿಯ ವಿವಾಹಗಳು ಕುಟುಂಬಕ್ಕೆ ಒಳ್ಳೆಯದೇ ಎಂಬುದನ್ನು ಅನುಭವದಿಂದ ತಿಳಿಯಬಹುದು.
ಶಾಸ್ತ್ರೀಯವಾಗಿ ನೋಡಿದಾಗ, ಗಂಡನಿಗಿಂತ ಹೆಣ್ಣು ವಯಸ್ಸಿನಲ್ಲಿ ಹೆಚ್ಚಿದ್ದರೆ, ಆ ಕುಟುಂಬದಲ್ಲಿ ಶ್ರೇಯಸ್ಸು, ಪ್ರಗತಿ ಮತ್ತು ಅಭಿವೃದ್ಧಿ ಇರುತ್ತದೆ. ಹಿರಿಯ ವಯಸ್ಸಿನ ಹೆಣ್ಣಿನ ಆಲೋಚನೆಗಳು ಮತ್ತು ಅನುಭವಗಳು ಗಂಡನಿಗೆ ತುಂಬಾ ಪೂರಕವಾಗಿರುತ್ತವೆ. ಇದು ಕುಟುಂಬದ ವೃದ್ಧಿಗೂ ಕಾರಣವಾಗುತ್ತದೆ. ಹಾಗಂತ, ವಯಸ್ಸಿನಲ್ಲಿ ಜಾಸ್ತಿ ಆದವರನ್ನೇ ಮದುವೆಯಾಗಬೇಕು ಎಂದಿಲ್ಲ. ಆದರೆ, ಇದು ದೈವ ಸಂಕಲ್ಪವಾಗಿದ್ದರೆ, ಅದಕ್ಕೇನು ತೊಂದರೆ ಇಲ್ಲ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಚಿತ್ರದುರ್ಗ, ಮೇ 8: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ‘ಬಿಎಸ್ವೈ ಅಭಿಮಾನೋತ್ಸವ’ ಕಾರ್ಯಕ್ರಮಕ್ಕೆ ಕೋಟೆನಾಡು ಚಿತ್ರದುರ್ಗ ಅದ್ದೂರಿಯಾಗಿ ಸಜ್ಜಾಗಿದೆ. ನಗರದ ಮಾದಾರ ಚನ್ನಯ್ಯ ಮಠದ ಸಮೀಪವಿರುವ ವಿಶಾಲವಾದ ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಾಣವಾಗಿದ್ದು, ಲಕ್ಷಾಂತರ ಅಭಿಮಾನಿಗಳು ಈ ಸಮಾವೇಶದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ. ಈ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದಾರೆ.
ಅಭಿಮಾನೋತ್ಸವದ ಹಿನ್ನೆಲೆಯಲ್ಲಿ ಇಡೀ ಚಿತ್ರದುರ್ಗ ನಗರ ಕೇಸರಿಮಯವಾಗಿದ್ದು, ಎಲ್ಲೆಡೆ ಬಿಎಸ್ವೈ, ಅಮಿತ್ ಶಾ ಮತ್ತು ಪ್ರಧಾನಿ ಮೋದಿ ಅವರ ಬ್ಯಾನರ್‌ಗಳು ರಾರಾಜಿಸುತ್ತಿವೆ. ಇಂದು (ಮೇ 7) ಸಂಜೆ ನಗರದ ಕನಕ ವೃತ್ತದಿಂದ ಚಳ್ಳಕೆರೆ ಗೇಟ್ ವರೆಗೆ ತೆರೆದ ವಾಹನದಲ್ಲಿ ಯಡಿಯೂರಪ್ಪ ಅವರ ಮೆರವಣಿಗೆ ನಡೆಯಲಿದ್ದು, ಸಾವಿರಾರು ಮಹಿಳೆಯರು ಕುಂಭಮೇಳದೊಂದಿಗೆ ಬರಮಾಡಿಕೊಳ್ಳಲಿದ್ದಾರೆ.
ನಾಳೆ (ಮೇ 8) ಮಧ್ಯಾಹ್ನ 3 ಗಂಟೆಗೆ ಅಮಿತ್ ಶಾ ಚಿತ್ರದುರ್ಗಕ್ಕೆ ಆಗಮಿಸಲಿದ್ದು, ಅವರಿಗಾಗಿ ವೇದಿಕೆಯ ಹಿಂಭಾಗದಲ್ಲೇ ವಿಶೇಷ ಹೆಲಿಪ್ಯಾಡ್ ನಿರ್ಮಿಸಲಾಗಿದೆ. ಮಠಾಧೀಶರು, ಕೇಂದ್ರ ಹಾಗೂ ರಾಜ್ಯ ನಾಯಕರಿಗೆ ವೇದಿಕೆಯಲ್ಲಿ ಪ್ರತ್ಯೇಕ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಬರುವ ಲಕ್ಷಾಂತರ ಜನರಿಗಾಗಿ ಕುಡಿಯುವ ನೀರು, ಬಾಳೆಹಣ್ಣು ಮತ್ತು ಉಪಾಹಾರದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಮತ್ತು ‘ಧುರಂಧರ್ 2: ದಿ ರಿವೇಂಜ್’ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಯಶಸ್ಸು ಗಳಿಸಿವೆ. ‘ಧುರಂಧರ್ 2’ ಅಬ್ಬರ ಇನ್ನೂ ಮುಂದುವರಿದಿದೆ. ಹೀಗಿರುವಾಗಲೇ ಈ ಫ್ರಾಂಚೈಸಿಯಿಂದ ಮತ್ತೊಂದು ಬಿಗ್ ಅಪ್‌ಡೇಟ್ ಹೊರಬಿದ್ದಿದೆ. ಈ ಹಿಂದೆ ‘ಧುರಂಧರ್ 2’ ಬಂದಾಗ ಈ ಕಥೆ ಇಲ್ಲಿಗೆ ಮುಗಿಯಿತು ಎಂದೇ ಭಾವಿಸಲಾಗಿತ್ತು. ಆದರೆ, ಈಗ ಚಿತ್ರತಂಡ ನೀಡಿರುವ ಸುಳಿವು ಅಭಿಮಾನಿಗಳಲ್ಲಿ ಹೊಸ ಸಂಚಲನ ಮೂಡಿಸಿದೆ.
ಜಿಯೋ ಸ್ಟುಡಿಯೋಸ್‌ನ ಸಹ-ನಿರ್ಮಾಪಕಿ ಜ್ಯೋತಿ ದೇಶಪಾಂಡೆ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ‘ಧುರಂಧರ್ 3’ ಬರುವ ಬಗ್ಗೆ ಮಹತ್ವದ ಸುಳಿವು ನೀಡಿದ್ದಾರೆ. ‘ಧುರಂಧರ್ ಸರಣಿ ಇಲ್ಲಿಗೆ ಮುಗಿದಿಲ್ಲ. ಈ ವರ್ಷದ ಅಂತ್ಯದ ವೇಳೆಗೆ ನಾವು ಪ್ರೇಕ್ಷಕರಿಗೆ ಒಂದು ದೊಡ್ಡ ಸರ್ಪ್ರೈಸ್ ನೀಡಲಿದ್ದೇವೆ. ಸದ್ಯಕ್ಕೆ ನಾವು ಏನನ್ನೋ ಸಿದ್ಧಪಡಿಸುತ್ತಿದ್ದೇವೆ’ ಎಂದು ಹೇಳುವ ಮೂಲಕ ಮೂರನೇ ಭಾಗದ ಸುಳಿವು ನೀಡಿದ್ದಾರೆ.
ಈ ಹೇಳಿಕೆಯ ಬೆನ್ನಲ್ಲೇ ರಣವೀರ್ ಸಿಂಗ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಸಂಭ್ರಮಿಸುತ್ತಿದ್ದಾರೆ. ‘ಧುರಂಧರ್ 3’ ಶೀಘ್ರದಲ್ಲೇ ಸೆಟ್ಟೇರಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೊಸ ಸ್ಪೈ ಕಥೆ ಮೂಲಕ ನಿರ್ದೇಶಕರು ಬರುತ್ತಾರಾ ಎನ್ನುವ ಪ್ರಶ್ನೆಯೂ ಇದೆ.
ಗೊಂದಲ ಮೂಡಿಸಿದ ರಾಕೇಶ್ ಬೇಡಿ ಹೇಳಿಕೆ
ಒಂದೆಡೆ ನಿರ್ಮಾಪಕರು ಹೊಸ ಸರ್ಪ್ರೈಸ್ ಎಂದಿದ್ದರೆ, ಮತ್ತೊಂದೆಡೆ ಇದೇ ಚಿತ್ರದಲ್ಲಿ ಜಮೀಲ್ ಜಮಾಲಿ ಪಾತ್ರ ಮಾಡಿದ್ದ ಹಿರಿಯ ನಟ ರಾಕೇಶ್ ಬೇಡಿ ಅವರು ಮಾತ್ರ ಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ‘ಮೂರನೇ ಭಾಗ ಬರಲಿದೆ ಎಂದು ನನಗೆ ಅನ್ನಿಸುತ್ತಿಲ್ಲ. ಧುರಂಧರ್ ಒಂದು ದೊಡ್ಡ ಫ್ರಾಂಚೈಸಿ, ಅದನ್ನು ಬೇರೆ ನಟರೊಂದಿಗೆ ಯಾವಾಗ ಬೇಕಾದರೂ ಮಾಡಬಹುದು. ಆದರೆ ಈ ಕಥೆ ಮುಗಿದಿದೆ’ ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ ಚಿತ್ರದ ನಿರ್ದೇಶಕ ಆದಿತ್ಯ ಧರ್ ಅವರ ಪತ್ನಿ ಹಾಗೂ ನಟಿ ಯಾಮಿ ಗೌತಮ್ ಅವರು ತಮ್ಮ ಪತಿಯ ಬಗ್ಗೆ ಮಾತನಾಡಿದ್ದಾರೆ. ‘ಸಿನಿಮಾ ಇಷ್ಟೊಂದು ದೊಡ್ಡ ಯಶಸ್ಸು ಕಂಡರೂ ನಿರ್ದೇಶk ಆದಿತ್ಯ ಸ್ವಲ್ಪವೂ ಬದಲಾಗಿಲ್ಲ. ಸೋಲು-ಗೆಲುವು ಎರಡನ್ನೂ ಅವರು ಸಮಾನವಾಗಿ ಸ್ವೀಕರಿಸುತ್ತಾರೆ. ಅವರು ಅತ್ಯಂತ ವಿನಮ್ರ ವ್ಯಕ್ತಿ. ಒಳ್ಳೆ ಕೆಲಸ ಮಾಡುವವರಿಗೆ ದೇವರಿಂದ ಒಳ್ಳೆ ಪ್ರತಿಫಲ ಸಿಗುತ್ತದೆ ಎಂಬುದಕ್ಕೆ ಅವರ ಯಶಸ್ಸೇ ಸಾಕ್ಷಿ’ ಎಂದು ಯಾಮಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಬೆಂಗಳೂರು (ಮೇ. 08): ಐಪಿಎಲ್ 2026 (Indian Premier League) ಸೀಸನ್ ಬ್ಯಾಟ್ಸ್‌ಮನ್‌ಗಳ ಸ್ಫೋಟಕ ಆಟದಿಂದ ಕೂಡಿದೆ. ಈ ಸೀಸನ್‌ನಲ್ಲಿ 265 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವುದರಿಂದ ಹಿಡಿದು ಕೇವಲ 36 ಎಸೆತಗಳಲ್ಲಿ ಶತಕಗಳನ್ನು ಗಳಿಸಿರುವಂತಹ ಬ್ಯಾಟರ್ಗಳನ್ನು ನಾವು ನೋಡುತ್ತಿದ್ದೇವೆ. ವಿಶೇಷವಾಗಿ ಬ್ಯಾಟ್ಸ್‌ಮನ್‌ಗಳಾದ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ ಮತ್ತು ಕ್ಲಾಸೆನ್ ಬೌಲರ್‌ಗಳನ್ನು ಕಾಡುತ್ತಿದ್ದಾರೆ. ಆದರೆ, ಇಂತಹ ಕಠಿಣ ಸಂದರ್ಭಗಳಲ್ಲಿಯೂ ಸಹ, ಕೆಲವು ಬೌಲರ್‌ಗಳು ಬಿಗಿಯಾಗಿ ಬೌಲಿಂಗ್ ಮಾಡುತ್ತಿದ್ದಾರೆ ಮತ್ತು ಡಾಟ್ ಬಾಲ್‌ಗಳಿಂದ ಬ್ಯಾಟ್ಸ್‌ಮನ್‌ಗಳನ್ನು ನಿರ್ಬಂಧಿಸುತ್ತಿದ್ದಾರೆ. ಇಲ್ಲಿಯವರೆಗೆ ಆಡಿದ 49 ಪಂದ್ಯಗಳ ಅಂಕಿಅಂಶಗಳ ಪ್ರಕಾರ ಹೆಚ್ಚು ಡಾಟ್ ಬಾಲ್‌ಗಳನ್ನು ಬೌಲ್ ಮಾಡಿದ ಟಾಪ್-5 ಬೌಲರ್‌ಗಳು ಯಾರು ನೋಡೋಣ.
ಮೊಹಮ್ಮದ್ ಸಿರಾಜ್
ಪ್ರಸ್ತುತ ಗುಜರಾತ್ ಟೈಟಾನ್ಸ್ ಪರ ಆಡುತ್ತಿರುವ ಮೊಹಮ್ಮದ್ ಸಿರಾಜ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇದುವರೆಗೆ ಆಡಿರುವ 10 ಪಂದ್ಯಗಳಲ್ಲಿ ಸಿರಾಜ್ 37 ಓವರ್‌ಗಳನ್ನು (222 ಎಸೆತಗಳು) ಬೌಲಿಂಗ್ ಮಾಡಿದ್ದಾರೆ. ಈ ಪೈಕಿ 109 ಎಸೆತಗಳು ಡಾಟ್ ಬಾಲ್‌ಗಳಾಗಿವೆ. ಅಂದರೆ ಬ್ಯಾಟ್ಸ್‌ಮನ್‌ಗಳು ಅರ್ಧದಷ್ಟು ಎಸೆತಗಳಿಗೆ ಯಾವುದೇ ರನ್ ಗಳಿಸಲು ಸಾಧ್ಯವಾಗಿಲ್ಲ. ಸಿರಾಜ್ ಇಲ್ಲಿಯವರೆಗೆ 11 ವಿಕೆಟ್‌ಗಳನ್ನು ಪಡೆಯುವ ಮೂಲಕ ತಮ್ಮ ತಂಡಕ್ಕೆ ಪ್ರಮುಖ ಆಟಗಾರರಾಗಿದ್ದಾರೆ.
ಜೋಫ್ರಾ ಆರ್ಚರ್
ರಾಜಸ್ಥಾನ್ ರಾಯಲ್ಸ್ ಪರ ಇಂಗ್ಲೆಂಡ್‌ನ ವೇಗಿ ಜೋಫ್ರಾ ಆರ್ಚರ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅವರು ಕೂಡ 10 ಪಂದ್ಯಗಳಲ್ಲಿ 37 ಓವರ್‌ಗಳಲ್ಲಿ 107 ಡಾಟ್ ಬಾಲ್‌ಗಳನ್ನು ಎಸೆದು ಎರಡನೇ ಸ್ಥಾನದಲ್ಲಿದ್ದಾರೆ. ಇವರ ವೇಗವು ಬ್ಯಾಟ್ಸ್‌ಮನ್‌ಗಳಿಗೆ ನಡುಕ ಹುಟ್ಟಿಸುತ್ತಿದೆ. ಆರ್ಚರ್ ಈಗಾಗಲೇ 15 ವಿಕೆಟ್‌ಗಳನ್ನು ಪಡೆದಿದ್ದಾರೆ ಮತ್ತು ಪರ್ಪಲ್ ಕ್ಯಾಪ್‌ಗಾಗಿ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ.
ಕಗಿಸೊ ರಬಾಡ
ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ ಗುಜರಾತ್ ಟೈಟಾನ್ಸ್ ತಂಡದ ಬೌಲಿಂಗ್ ವಿಭಾಗದ ಬೆನ್ನೆಲುಬಾಗಿದ್ದಾರೆ. ಇದುವರೆಗೆ 10 ಪಂದ್ಯಗಳಲ್ಲಿ 39 ಓವರ್‌ಗಳನ್ನು ಬೌಲ್ ಮಾಡಿರುವ ರಬಾಡ, 105 ಡಾಟ್ ಬಾಲ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. 100 ಕ್ಕೂ ಹೆಚ್ಚು ಡಾಟ್ ಬಾಲ್‌ಗಳನ್ನು ಬೌಲ್ ಮಾಡಿದ ಮೂವರು ಬೌಲರ್‌ಗಳಲ್ಲಿ ಇವರು ಒಬ್ಬರು. ರಬಾಡ ಇದುವರೆಗೆ 16 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಈ ಋತುವಿನಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ಕಷ್ಟಗಳನ್ನು ಎದುರಿಸುತ್ತಿದ್ದರೂ, ಶಮಿ ತಮ್ಮ ತೀಕ್ಷ್ಣ ಬೌಲಿಂಗ್‌ನಿಂದ ಪ್ರಭಾವಶಾಲಿಯಾಗಿದ್ದಾರೆ. ಇಲ್ಲಿಯವರೆಗೆ ಕೇವಲ 9 ಪಂದ್ಯಗಳನ್ನು ಆಡಿರುವ ಶಮಿ, 35 ಓವರ್‌ಗಳಲ್ಲಿ 95 ಡಾಟ್ ಬಾಲ್‌ಗಳನ್ನು ಎಸೆದಿದ್ದಾರೆ. ಕಡಿಮೆ ಪಂದ್ಯಗಳನ್ನು ಆಡಿದ್ದರೂ ಅವರು ಟಾಪ್ -4 ರಲ್ಲಿರುವುದು ಶಮಿ ಅವರ ಕೌಶಲ್ಯಕ್ಕೆ ಸಾಕ್ಷಿಯಾಗಿದೆ. ಅವರು ಇಲ್ಲಿಯವರೆಗೆ 8 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಅಂಶುಲ್ ಕಾಂಬೋಜ್
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯುವ ಆಟಗಾರ ಅನ್ಶುಲ್ ಕಾಂಬೋಜ್ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಅವರು 10 ಪಂದ್ಯಗಳಲ್ಲಿ 35.4 ಓವರ್‌ಗಳಲ್ಲಿ 94 ಡಾಟ್ ಬಾಲ್‌ಗಳನ್ನು ಎಸೆದಿದ್ದಾರೆ. ಕುತೂಹಲಕಾರಿಯಾಗಿ, ಈ ಋತುವಿನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಭುವನೇಶ್ವರ್ ಕುಮಾರ್ (17) ಅವರೊಂದಿಗೆ ಅನ್ಶುಲ್ ಜಂಟಿಯಾಗಿ ಅಗ್ರಸ್ಥಾನದಲ್ಲಿದ್ದಾರೆ.
ಮುಂಬೈ, ಮೇ 7: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ನ (TCS) ಮಹಾರಾಷ್ಟ್ರದ ನಾಸಿಕ್ ಘಟಕದಲ್ಲಿ ನಡೆದಿದೆ ಎನ್ನಲಾದ ಮತಾಂತರ ಮತ್ತು ಕಿರುಕುಳ ಪ್ರಕರಣದ ಪ್ರಮುಖ ಆರೋಪಿ ನಿದಾ ಖಾನ್ ಅನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಈ ಪ್ರಕರಣ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದು, ನಿದಾ ಖಾನ್ ಕಳೆದ ಕೆಲವು ದಿನಗಳಿಂದ ತಲೆಮರೆಸಿಕೊಂಡಿದ್ದಳು. ಇದೀಗ ಆಕೆಯನ್ನು ಛತ್ರಪತಿ ಸಂಭಾಜಿನಗರದಲ್ಲಿ ಜಂಟಿ ಕಾರ್ಯಾಚರಣೆಯ ಮೂಲಕ ಬಂಧಿಸಲಾಗಿದೆ.
ಮುಖ್ಯಾಂಶಗಳು
ನಾಸಿಕ್ ಟಿಸಿಎಸ್ ಘಟಕದಲ್ಲಿ ಬಲವಂತದ ಧಾರ್ಮಿಕ ಮತಾಂತರಕ್ಕೆ ಯತ್ನಿಸಿದ ಆರೋಪ.
ತಲೆಮರೆಸಿಕೊಂಡಿದ್ದ ನಿದಾ ಖಾನ್ ಛತ್ರಪತಿ ಸಂಭಾಜಿನಗರದ ಫ್ಲಾಟ್‌ನಲ್ಲಿ ಪತ್ತೆ.
ಗರ್ಭಿಣಿ ಎಂಬ ಕಾರಣ ನೀಡಿ ನಿರೀಕ್ಷಣಾ ಜಾಮೀನು ಕೋರಿದ್ದರೂ ನ್ಯಾಯಾಲಯದಿಂದ ನಿರಾಕರಣೆ.
ನಾಸಿಕ್ ಎಸ್‌ಐಟಿ (SIT), ಛತ್ರಪತಿ ಸಂಭಾಜಿನಗರ ಪೊಲೀಸ್ ಕಮಿಷನರೇಟ್ ಮತ್ತು ಅಪರಾಧ ವಿಭಾಗದ ಪೊಲೀಸರು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದಾರೆ. ನಿದಾ ಖಾನ್ ಕಳೆದ ನಾಲ್ಕು ದಿನಗಳಿಂದ ಛತ್ರಪತಿ ಸಂಭಾಜಿನಗರದ ನಾರೇಗಾಂವ್ ಪ್ರದೇಶದ ಕೈಸರ್ ಕಾಲೋನಿಯಲ್ಲಿರುವ ಫ್ಲಾಟ್‌ನಲ್ಲಿ ತನ್ನ ಪೋಷಕರು, ಸಹೋದರ ಮತ್ತು ಚಿಕ್ಕಮ್ಮನೊಂದಿಗೆ ತಂಗಿದ್ದಳು. ಪೊಲೀಸರು ಈ ಫ್ಲಾಟ್ ಮೇಲೆ ಎರಡು ದಿನಗಳಿಂದ ನಿಗಾ ಇಟ್ಟಿದ್ದರು. ಬಂಧನದ ನಂತರ ಆಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ನಾಸಿಕ್‌ಗೆ ಕರೆದೊಯ್ಯಲಾಗಿದೆ.
ತಾನು ಎರಡು ತಿಂಗಳ ಗರ್ಭಿಣಿ ಎಂದು ಹೇಳಿಕೊಂಡಿದ್ದ ನಿದಾ ಖಾನ್, ಬಂಧನದಿಂದ ರಕ್ಷಣೆ ಕೋರಿ ನಾಸಿಕ್ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಳು. ಆದರೆ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ನ್ಯಾಯಾಲಯವು ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತ್ತು.
ಟಿಸಿಎಸ್ ಕಂಪನಿಯಿಂದ ಅಮಾನತು
ನಿದಾ ಖಾನ್ 2021 ರ ಡಿಸೆಂಬರ್ನಲ್ಲಿ ‘ಪ್ರೊಸೆಸ್ ಅಸೋಸಿಯೇಟ್’ ಆಗಿ ಕಂಪನಿಗೆ ಸೇರಿದ್ದರು. ಪ್ರಕರಣ ದಾಖಲಾದ ಬೆನ್ನಲ್ಲೇ ಏಪ್ರಿಲ್ 9 ರಂದು ಕಂಪನಿಯು ಆಕೆಯನ್ನು ಅಮಾನತುಗೊಳಿಸಿದೆ. ಆಂತರಿಕ ವ್ಯವಸ್ಥೆ ಮತ್ತು ನೆಟ್‌ವರ್ಕ್‌ಗೆ ಆಕೆಯ ಪ್ರವೇಶವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ವಿಶೇಷವೆಂದರೆ, ವಿವಾದ ಸಾರ್ವಜನಿಕವಾಗುವ ಮೂರು ತಿಂಗಳ ಮೊದಲು ಆಕೆಯನ್ನು ನಾಸಿಕ್‌ನಿಂದ ಮುಂಬೈನ ಮಲಾಡ್ ಮತ್ತು ಹಿರಾನಂದಾನಿ ಕಚೇರಿಗಳಿಗೆ ವರ್ಗಾಯಿಸಲಾಗಿತ್ತು ಎಂದು ವರದಿಯಾಗಿದೆ.
ಟಿಸಿಎಸ್ ಮತಾಂತರ ಮತ್ತು ಕಿರುಕುಳ ಪ್ರಕರಣ ಹಿನ್ನೆಲೆ
ಈ ಇಡೀ ವಿವಾದವು ನಾಸಿಕ್ ಟಿಸಿಎಸ್ ಶಾಖೆಯ ಮಹಿಳಾ ಉದ್ಯೋಗಿಯೊಬ್ಬರು ನೀಡಿದ ದೂರಿನಿಂದ ಬೆಳಕಿಗೆ ಬಂದಿತು. ಸಹೋದ್ಯೋಗಿ ದಾನಿಶ್ ಶೇಖ್ ಮದುವೆಯ ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸಿದ್ದ ಎಂದು ಮಹಿಳೆ ಆರೋಪಿಸಿದ್ದರು. ಆದರೆ ದಾನಿಶ್ ಈಗಾಗಲೇ ವಿವಾಹಿತನಾಗಿದ್ದ ಎಂಬ ಅಂಶವನ್ನು ಮುಚ್ಚಿಡಲಾಗಿತ್ತು. ಆರೋಪಿ ನಿದಾ ಖಾನ್ ಈ ದಾನಿಶ್ ಶೇಖ್‌ನ ಸಹೋದರಿಯಾಗಿದ್ದು, ದೂರುದಾರ ಮಹಿಳೆಯ ಧರ್ಮದ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿ, ಮತಾಂತರವಾಗುವಂತೆ ಒತ್ತಡ ಹೇರಿದ್ದರು ಎನ್ನಲಾಗಿದೆ.
ಪೊಲೀಸ್ ತನಿಖೆ ತೀವ್ರಗೊಂಡಂತೆ, ಇನ್ನೂ ಏಳು ಮಹಿಳಾ ಉದ್ಯೋಗಿಗಳು ಮುಂದೆ ಬಂದು ಹಿರಿಯ ಸಹೋದ್ಯೋಗಿಗಳು ಮಾನಸಿಕ ಮತ್ತು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಈ ಕಿರುಕುಳದ ಬಗ್ಗೆ ಮಾನವ ಸಂಪನ್ಮೂಲ ಇಲಾಖೆಗೆ (HR) ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಂತ್ರಸ್ತೆಯರು ತಿಳಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್‌ಆರ್ ಮುಖ್ಯಸ್ಥೆ ಸೇರಿದಂತೆ ಒಟ್ಟು ಏಳು ಜನರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
ಈ ನಡುವೆ ಟಿಸಿಎಸ್ ಸಂಸ್ಥೆಯು ಎಕ್ಸ್ (X) ಮೂಲಕ ಸ್ಪಷ್ಟನೆ ನೀಡಿ, ನಿದಾ ಖಾನ್ ಎಚ್‌ಆರ್ ಮ್ಯಾನೇಜರ್ ಆಗಿರಲಿಲ್ಲ ಮತ್ತು ನೇಮಕಾತಿ ಪ್ರಕ್ರಿಯೆಯಲ್ಲಿ ಆಕೆಯ ಪಾತ್ರವಿರಲಿಲ್ಲ ಎಂದು ತಿಳಿಸಿತ್ತು. ಅಲ್ಲದೆ, ಈ ವಿಷಯದ ಬಗ್ಗೆ ಕಂಪನಿಯ ಆಂತರಿಕ ವಿಭಾಗಕ್ಕೆ ಯಾವುದೇ ದೂರುಗಳು ಬಂದಿರಲಿಲ್ಲ ಎಂದು ಸ್ಪಷ್ಟಪಡಿಸಿತ್ತು.
ಚಂದನ್ ಕುಮಾರ್ ಹಾಗೂ ಕವಿತಾ ಗೌಡ ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಈಗ ಅವರ ಹೊಸ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ‘ಎರಡನೇ ಪತ್ನಿ ಬೇಕು ಅಂತಾದ್ರೆ ನಗಬೇಕು’ ಎಂದು ಬರೆದಿರುವ ಚೀಟಿಯನ್ನು ಕವಿತಾ ಅವರು ಚಂದನ್ಗೆ ನೀಡುತ್ತಾರೆ. ಆಗ ನಗುವ ಚಂದನ್, ‘ಒಂದನ್ನೇ ತಡೆದುಕೊಳ್ಳೋಕೆ ಆಗ್ತಿಲ್ಲ’ ಎಂದಿದ್ದಾರೆ. ‘ಅವರು ನಕ್ಕಿದ್ದಾರೆ, ಅವರಿಗೆ ಎರಡನೇ ಪತ್ನಿ ಬೇಕು ಎಂಬ ಆಸೆ ಇದೆ. ಆದರೆ, ಕವಿತಾ ಮೇಲೆ ಅವರಿಗೆ ಭಯವೂ ಇದೆ’ ಎಂದು ಕೆಲವರು ನಗೆ ಚಟಾಕಿ ಹಾರಿಸಿದ್ದಾರೆ.
ಬೆಂಗಳೂರು, ಮೇ 08: ಮಡಿಕೇರಿ ತಾಲೂಕಿನ ತಾಳತ್ ಮನೆ ಬಳಿ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ದುರ್ಘಟನೆ ಸಂಭವಿಸಿದೆ. ಬಸ್ ಚಲಾಯಿಸುತ್ತಿದ್ದ ವೇಳೆ ಖಾಸಗಿ ಬಸ್ ಚಾಲಕನಿಗೆ ಹೃದಯಾಘಾತವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ದಿಣ್ಣೆಗೆ ಗುದ್ದಿದರೂ ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಳಪತಿ ವಿಜಯ್ ನೇತೃತ್ವದ ಟಿವಿಕೆ 107 ಸ್ಥಾನಗಳನ್ನು ಗೆದ್ದಿದ್ದು, ಸರ್ಕಾರ ರಚನೆಗೆ ಶಾಸಕರ ಬೆಂಬಲಕ್ಕಾಗಿ ತೀವ್ರ ಕಸರತ್ತು ನಡೆಯುತ್ತಿದೆ. ಅದರ ಜೊತೆಗೆ ಜಾಗತಿಕ ಯುದ್ಧದ ಬಿಸಿ ಬೆಂಗಳೂರಿನ ಸಣ್ಣ ಕೈಗಾರಿಕೆಗಳಿಗೂ ತಟ್ಟಿದ್ದು, ಯುನಿಟ್ಗಳು ಮುಚ್ಚುವ ಹಂತಕ್ಕೆ ತಲುಪಿವೆ.
ಮುಖ್ಯಾಂಶಗಳು
ಮಡಿಕೇರಿ ತಾಳತ್‌ಮನೆ ಬಳಿ ಚಾಲಕನಿಗೆ ಹೃದಯಾಘಾತವಾಗಿ ಸಾವು, ಕೂದಲೆಳೆ ಅಂತರದಲ್ಲಿ ಪಾರಾದ ಬಸ್ ಪ್ರಯಾಣಿಕರು.
ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಕೇವಲ ಆರು ಶಾಸಕರ ಬೆಂಬಲದ ನಿರೀಕ್ಷೆಯಲ್ಲಿ ದಳಪತಿ ವಿಜಯ್ ನೇತೃತ್ವದ ಟಿವಿಕೆ.
ಜಾಗತಿಕ ಯುದ್ಧದ ಬಿಕ್ಕಟ್ಟು ಮತ್ತು ಇಂಧನ ಬೆಲೆ ಏರಿಕೆಯಿಂದ ಪೀಣ್ಯದ ಸಾವಿರಾರು ಕೈಗಾರಿಕೆಗಳು ಮುಚ್ಚುವ ಭೀತಿಯಲ್ಲಿವೆ.
ಚಾಲಕನಿಗೆ ಹೃದಯಾಘಾತ, ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು
ಮಡಿಕೇರಿ ತಾಲೂಕಿನ ತಾಳತ್ ಮನೆ ಬಳಿ ಚಲಿಸುತ್ತಿದ್ದ ಬಸ್‌ನಲ್ಲೇ ಚಾಲಕ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ‘ಪೂರ್ಣಿಮಾ ಟ್ರಾವೆಲ್ಸ್’ ಬಸ್ ಚಲಿಸುತ್ತಿದ್ದಾಗ ಚಾಲಕನಿಗೆ ತೀವ್ರ ಹೃದಯಾಘಾತ ಸಂಭವಿಸಿದೆ. ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ದಿಣ್ಣೆಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಪ್ರಯಾಣಿಕರೆಲ್ಲರೂ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಾಲನೆ ವೇಳೆಯೇ ಚಾಲಕ ಸಾವನ್ನಪ್ಪಿದ್ದರೂ, ಬಸ್ ದೊಡ್ಡ ಪ್ರಪಾತಕ್ಕೆ ಬೀಳದೆ ದಿಣ್ಣೆಗೆ ಗುದ್ದಿದ್ದರಿಂದ ಭೀಕರ ದುರಂತವೊಂದು ತಪ್ಪಿದಂತಾಗಿದೆ.
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಳಪತಿ ವಿಜಯ್ ನೇತೃತ್ವದ ಟಿವಿಕೆ (TVK) ಪಕ್ಷ 107 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಸರ್ಕಾರ ರಚಿಸಲು 118 ಶಾಸಕರ ಬೆಂಬಲ ಬೇಕಾಗಿದ್ದು, ವಿಜಯ್ ಪ್ರಸ್ತುತ 112 ಶಾಸಕರ (ಟಿವಿಕೆ 107 + ಕಾಂಗ್ರೆಸ್ 5) ಬೆಂಬಲ ಹೊಂದಿದ್ದಾರೆ. ಬಾಕಿ ಇರುವ 6 ಶಾಸಕರ ಬೆಂಬಲಕ್ಕಾಗಿ ತೀವ್ರ ಕಸರತ್ತು ನಡೆಯುತ್ತಿದೆ. ಇದರ ನಡುವೆ ಎಐಎಡಿಎಂಕೆಯ 28 ಶಾಸಕರನ್ನು ಪುದುಚೇರಿ ರೆಸಾರ್ಟ್‌ಗೆ ಶಿಫ್ಟ್ ಮಾಡಲಾಗಿದ್ದು, ವಿಜಯ್‌ಗೆ ಬೆಂಬಲ ನೀಡುವ ಬಗ್ಗೆ ಪಳನಿಸ್ವಾಮಿ ಮೇಲೆ ಒತ್ತಡ ಹೆಚ್ಚಿದೆ. ಅತ್ತ ನಿರ್ಗಮಿತ ಸಿಎಂ ಎಂ.ಕೆ. ಸ್ಟಾಲಿನ್, ವಿಜಯ್ ಸರ್ಕಾರ ರಚಿಸಲಿ ನಾವು ಆರು ತಿಂಗಳು ತೊಂದರೆ ಕೊಡುವುದಿಲ್ಲ ಎಂಬ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಪೀಣ್ಯ ಕೈಗಾರಿಕಾ ವಲಯಕ್ಕೆ ಇಂಧನ ಬಿಸಿ: ಮುಚ್ಚುವ ಭೀತಿಯಲ್ಲಿ ಉದ್ಯಮಗಳು
ಜಾಗತಿಕ ಯುದ್ಧದ ಬಿಕ್ಕಟ್ಟು ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದ ಮೇಲೆ ಭೀಕರ ಪರಿಣಾಮ ಬೀರಿದೆ. ಸರ್ಕಾರಿ ವಾಣಿಜ್ಯ ಸಿಲಿಂಡರ್ ಪೂರೈಕೆ ಸ್ಥಗಿತಗೊಂಡಿರುವುದರಿಂದ ಕೈಗಾರಿಕೆಗಳು ಸಂಪೂರ್ಣವಾಗಿ ಖಾಸಗಿ ಏಜೆನ್ಸಿಗಳ ಮೇಲೆ ಅವಲಂಬಿತವಾಗಿವೆ. ಖಾಸಗಿಯಲ್ಲಿ ಸಿಲಿಂಡರ್ ಬೆಲೆ ಎರಡು ಪಟ್ಟು ಹೆಚ್ಚಾಗಿರುವುದು ಉತ್ಪಾದನಾ ವೆಚ್ಚವನ್ನು ಏರಿಕೆ ಮಾಡಿದೆ. ಇದರಿಂದಾಗಿ ಸಾವಿರಕ್ಕೂ ಅಧಿಕ ಸಣ್ಣ ಕೈಗಾರಿಕೆಗಳು ಮತ್ತು ಕಟ್ಟಿಂಗ್ ಯೂನಿಟ್‌ಗಳು ಮುಚ್ಚುವ ಸ್ಥಿತಿಗೆ ತಲುಪಿವೆ. ಉತ್ಪಾದನಾ ವೆಚ್ಚ ಭರಿಸಲಾಗದೆ ಕೈಗಾರಿಕಾ ಮಾಲೀಕರು ಕಂಗಾಲಾಗಿದ್ದು, ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಇಂಧನ ಪೂರೈಕೆ ಸರಿಪಡಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.
ರಾಜ್ಯದಲ್ಲಿ ಹೈಟೆಕ್ ‘ಹೆಲ್ತ್ ಎಮರ್ಜೆನ್ಸಿ ಸೆಂಟರ್’ ಲೋಕಾರ್ಪಣೆ
ಬೆಂಗಳೂರು, ಮೇ 08: ಜನರಿಗೆ ತುರ್ತು ಸಂದರ್ಭಗಳಲ್ಲಿ ಆರೋಗ್ಯ ಸೇವೆ ಪಡೆಯಲು ಸುಲಭ ದಾರಿ ಸಿಕ್ಕಿದ್ದು, ಆರೋಗ್ಯ ಇಲಾಖೆಯು ಅತ್ಯಾಧುನಿಕ ತಂತ್ರಜ್ಞಾನದಡಿ ‘ಹೆಲ್ತ್ ಎಮರ್ಜೆನ್ಸಿ ಆಪರೇಷನ್ ಸೆಂಟರ್’ (HEOC) ಆರಂಭಿಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಈ ನೂತನ ಕೇಂದ್ರಕ್ಕೆ ಚಾಲನೆ ನೀಡಿದ್ದಾರೆ. ಈ ಕೇಂದ್ರವು ಕೇವಲ ಒಂದು ಸಹಾಯವಾಣಿಯಾಗಿರದೆ, ವಿವಿಧ ಇಲಾಖೆಗಳ ಸಮನ್ವಯದ ಕೊಂಡಿಯಾಗಿ ಕಾರ್ಯನಿರ್ವಹಿಸಲಿದೆ.
ಮುಖ್ಯಾಂಶಗಳು
ತುರ್ತು ಸೇವೆಗಳಿಗಾಗಿ ರಾಜ್ಯದಲ್ಲಿ ಅತ್ಯಾಧುನಿಕ ಹೆಲ್ತ್ ಎಮರ್ಜೆನ್ಸಿ ಆಪರೇಷನ್ ಸೆಂಟರ್ ಆರಂಭ.
ಆರೋಗ್ಯ, ಪೊಲೀಸ್ ಮತ್ತು ಅಗ್ನಿಶಾಮಕ ಸೇವೆಗಳು ಇನ್ಮುಂದೆ ಒಂದೇ ಸೂರಿನಡಿ ಲಭ್ಯ.
ಈ ಕೇಂದ್ರವು ದಿನದ ಇಪ್ಪತ್ನಾಲ್ಕು ಗಂಟೆಯೂ ಸಾರ್ವಜನಿಕರ ತುರ್ತು ಸೇವೆಗೆ ಲಭ್ಯವಿರುತ್ತದೆ.
ಏನಿದರ ವಿಶೇಷತೆ?
ಈ ಕೇಂದ್ರವು WHO ಮಾರ್ಗದರ್ಶನದಂತೆ ಮತ್ತು ‘ಪ್ರಧಾನಮಂತ್ರಿ ಆಯುಷ್ಮಾನ್ ಭಾರತ ಆರೋಗ್ಯ ಮೂಲಸೌಕರ್ಯ ಮಿಷನ್’ ಅಡಿಯಲ್ಲಿ ಸ್ಥಾಪಿತವಾಗಿದೆ. ಇಲ್ಲಿ ಕೇವಲ ಆರೋಗ್ಯ ಇಲಾಖೆಯಷ್ಟೇ ಅಲ್ಲದೆ, ತುರ್ತು ಸಂದರ್ಭಗಳಲ್ಲಿ ಕಂದಾಯ, ವಿಪತ್ತು ನಿರ್ವಹಣಾ ಪ್ರಾಧಿಕಾರ, ಪೊಲೀಸ್ ಮತ್ತು ಅಗ್ನಿಶಾಮಕ ದಳದಂತಹ ಪ್ರಮುಖ ಸೇವೆಗಳು ಒಂದೇ ಸೂರಿನಡಿ ಸಿಗಲಿವೆ.
ಈ ಕೇಂದ್ರವು ದಿನದ 24 ಗಂಟೆಯೂ ಸಕ್ರಿಯವಾಗಿದ್ದು, ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಕೇಂದ್ರಗಳೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತದೆ. ಸಾಂಕ್ರಾಮಿಕ ರೋಗಗಳ ಉಲ್ಬಣ, ಬೆಂಕಿ ಅವಘಡ ಅಥವಾ ಪ್ರಕೃತಿ ವಿಕೋಪದಂತಹ ಕ್ಲಿಷ್ಟಕರ ಪರಿಸ್ಥಿತಿಗಳಲ್ಲಿ ತಕ್ಷಣ ಮಾಹಿತಿ ವಿನಿಮಯ ಮಾಡಿ, ಸ್ಥಳೀಯ ಮಟ್ಟದಲ್ಲಿ ಸೂಕ್ತ ನಿರ್ದೇಶನ ನೀಡಲು ಇದು ಸಹಕಾರಿಯಾಗಿದೆ. ಹಲವಾರು ಸಹಾಯವಾಣಿಗಳಿಗೆ ಕರೆ ಮಾಡಿ ಕಾಯುವ ಬದಲು, ಈಗ ಒಂದೇ ಕೇಂದ್ರದ ಮೂಲಕ ಎಲ್ಲಾ ತುರ್ತು ಸೇವೆಗಳನ್ನು ಪಡೆಯಬಹುದಾಗಿದೆ.
ಈ ವೇಳೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕೊವಿಡ್ ಸಂದರ್ಭದಲ್ಲಿ ತುರ್ತು ಪರಿಸ್ಥಿತಿ ನಿರ್ವಹಣೆ ಕೊರತೆ ಇತ್ತು. ಮುಂದೆ ಈ ರೀತಿಯ ಪರಿಸ್ಥಿತಿ ಬಂದಾಗ ಸ್ಪಷ್ಟ ನಿರ್ವಹಣೆಗೆ ಸರಿಯಾದ ವ್ಯವಸ್ಥೆ ಬೇಕು. WHO ಮತ್ತು ವಿಶ್ವ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ಆಗಿದೆ. ದೇಶದ ಎಲ್ಲಾ ಕಡೆ ಈ ಕಾರ್ಯಕ್ರಮ ನಡೆಯುತ್ತಿದೆ. ನಮ್ಮ ರಾಜ್ಯದಲ್ಲಿ ಇದನ್ನು ಸ್ಥಾಪನೆ ಮಾಡಿದ್ದೇವೆ. ಆಧುನಿಕ ತಂತ್ರಜ್ಞಾನ ಬಳಕೆ ಮಾಡಿ ಈ ಕೇಂದ್ರ ನಿರ್ಮಾಣ ಮಾಡಿದ್ದೇವೆ.ಇಲಾಖೆ ಅಧಿಕಾರಿಗಳು ಇತರೆ ಅಧಿಕಾರಿಗಳು ಎಲ್ಲರು ಸಹ ಕನೆಕ್ಟ್ ಮಾಡೋಕೆ ಸಹಾಯಕವಾಗಲಿದೆ. ಆ್ಯಂಬುಲೆನ್ಸ್ ಕೂಡ ಇದರ ಜೊತೆ ಸಹಯೋಗದಲ್ಲಿ ಇರುತ್ತದೆ ಎಂದಿದ್ದಾರೆ.