ಡಿಜಿಟಲ್​​ ಅರೆಸ್ಟ್​​ ಹೆಸರಲ್ಲಿ 2.1 ಕೋಟಿ ದೋಖಾ: ವಂಚಕರ ಮಾತು ನಂಬಿ ಹಣ ಕೊಟ್ಟು ಕೆಟ್ಟ 78 ವರ್ಷದ ಮಹಿಳೆ! – Kannada News | Bengaluru Woman Duped of 2.1 Crore in Digital Arrest Scam

ಬೆಂಗಳೂರು, ಮೇ 07: ಡಿಜಿಟಲ್​​ ಅರೆಸ್ಟ್​​ ಹೆಸರಿನಲ್ಲಿ 78 ವರ್ಷದ ಗೃಹಿಣಿ ಮತ್ತು ಆಕೆಯ ಪುತ್ರಿಗೆ ಬರೋಬ್ಬರಿ 2.1 ಕೋಟಿ ರೂಪಾಯಿ ಹಣವನ್ನು ವಂಚಿಸಿರುವ ಘಟನೆ ಬೆಂಗಳೂರಿನ ಜಯನಗರದಲ್ಲಿ ನಡೆದಿದೆ. ಸಂತ್ರಸ್ತರಿಗೆ ಏಪ್ರಿಲ್ 13ರಂದು ವಾಟ್ಸಾಪ್ ಕರೆ ಮಾಡಿದ್ದ ಆರೋಪಿ, ಮಹಿಳೆಯ ಹೆಸರಿನ ಡೆಬಿಟ್ ಕಾರ್ಡ್​​ನ ನಿಷೇಧಿತ ಪಿಎಫ್‌ಐ (PFI) ಸಂಘಟನೆಯ ಸದಸ್ಯನೊಬ್ಬ ಬಳಸುತ್ತಿದ್ದಾನೆ ಎಂದು ಬೆದರಿಸಿದ್ದ. ಅಲ್ಲದೆ ತನ್ನನ್ನು ಎನ್‌ಐಎ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ ಎನ್ನಲಾಗಿದೆ.

  • ಬೆಂಗಳೂರಲ್ಲಿ ಮತ್ತೊಂದು ಡಿಜಿಟಲ್​​ ಅರೆಸ್ಟ್​​ ಕೇಸ್​​ ಬೆಳಕಿಗೆ
  • ಎನ್‌ಐಎ ಅಧಿಕಾರಿ ಸೋಗಲ್ಲಿ ಹಣ ಪೀಕಿರುವ ಖದೀಮರು
  • ಬರೋಬ್ಬರಿ 2.1 ಕೋಟಿ ಹಣ ಕಳೆದುಕೊಂಡ ತಾಯಿ-ಮಗಳು

ಇದನ್ನೂ ಓದಿ: ಸಿಬಿಐ ಅಧಿಕಾರಿ ಸೋಗಿನಲ್ಲಿ ಉದ್ಯಮಿಗೆ ಗಾಳ; 30 ದಿನಗಳ ಕಾಲ ಡಿಜಿಟಲ್ ಅರೆಸ್ಟ್ ಮಾಡಿ 15 ಕೋಟಿ ಲೂಟಿ!

ಪ್ರಕರಣದ ಗಂಭೀರತೆಯನ್ನು ಉಲ್ಲೇಖಿಸಿ ಈ ಬಗ್ಗೆ ಯಾರಿಗೂ ಮಾಹಿತಿ ನೀಡಬಾರದು ಎಂದು ಎಚ್ಚರಿಕೆ ನೀಡಿದ್ದಲ್ಲದೆ, ಮಹಿಳೆ ಹಾಗೂ ಕುಟುಂಬ ಸದಸ್ಯರ ಗುರುತಿನ ದಾಖಲೆಗಳ ಪ್ರತಿಗಳನ್ನು ಪಡೆದುಕೊಂಡಿದ್ದ. ಬಳಿಕ ಮಹಿಳೆಯ ಪುತ್ರಿಯೂ ಇದೇ ಪ್ರಕರಣದಲ್ಲಿ ಶಂಕಿತಳಾಗಿದ್ದಾಳೆ ಎಂದು ಹೇಳಿದ್ದ. ವಂಚಕರು ಪೊಲೀಸ್ ಠಾಣೆಯಂತೆ ಕಾಣುವ ಪ್ರದೇಶದಿಂದ ವಿಡಿಯೋ ಕಾಲ್‌ಗಳನ್ನು ಮಾಡಿ ಸಂತ್ರಸ್ತರನ್ನು ಮತ್ತಷ್ಟು ನಂಬಿಸಿದ್ದು, ಆರೋಪಿ ಪ್ರದೀಪ್ ಜಸ್ವಾಲ್ ಎಂದು ತನನ್ನು ಪರಿಚಯಿಸಿಕೊಂಡಿದ್ದ. ಸಂತ್ರಸ್ತ ಮಹಿಳೆ ಮತ್ತು ಪುತ್ರಿಯ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದ ಆತ, ಸಹಕರಿಸದಿದ್ದರೆ ಸಾರ್ವಜನಿಕವಾಗಿ ಬಂಧಿಸಲಾಗುವುದು ಎಂದು ಬೆದರಿಕೆ ಹಾಕಿದ್ದ ಎಂಬ ಮಾಹಿತಿ ಸಿಕ್ಕಿದೆ.

ನಂತರ ಹಣದ ವ್ಯವಹಾರಗಳ ಪರಿಶೀಲನೆ ನಡೆಸಬೇಕಿದ್ದು, ಅದೇ ಬಂಧನ ತಪ್ಪಿಸಿಕೊಳ್ಳುವ ಮಾರ್ಗ ಎಂದು ಹೇಳಿ ಬ್ಯಾಂಕ್ ಖಾತೆ ವಿವರಗಳನ್ನು ಆರೋಪಿ ಪಡೆದಿದ್ದ. ಬಳಿಕ, ಆರ್‌ಬಿಐ ಮಾರ್ಗಸೂಚಿಯಂತೆ ಪರಿಶೀಲನೆ ಬಳಿಕ ಹಣ ಮರಳಿ ನೀಡಲಾಗುವುದು ಎಂದು ನಂಬಿಸಿ ವಿವಿಧ ಖಾತೆಗಳಿಗೆ ಹಣ ವರ್ಗಾಯಿಸುವಂತೆ ಸೂಚಿಸಿದ್ದ. ವಂಚಕನ ಮಾತು ನಂಬಿದ ಮಹಿಳೆ ತನ್ನ ಜೀವಮಾನ ಉಳಿತಾಯವನ್ನು ನೀಡಿದ್ದಾರೆ. ಸಾಲದ್ದಕ್ಕೆ ಚಿನ್ನವನ್ನು ಗಿರವಿ ಇಟ್ಟು ಗೋಲ್ಡ್ ಲೋನ್ ಪಡೆದು ಅದರ ಹಣವನ್ನೂ ಆರೋಪಿಗಳ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಏಪ್ರಿಲ್ 15ರಿಂದ 23ರವರೆಗೆ ಹಲವು ಆರ್‌ಟಿಜಿಎಸ್ ವ್ಯವಹಾರಗಳ ಮೂಲಕ ಒಟ್ಟು 2.1 ಕೋಟಿ ಹಣವನ್ನು ವಿವಿಧ ಖಾತೆಗಳಿಗೆ ಹಾಕಿರೋದು ಗೊತ್ತಾಗಿದೆ.

ಇಷ್ಟಾದರೂ ಆರೋಪಿಗಳ ಹಣದ ದಾಹ ತೀರದ ಕಾರಣ ಮೇ 2ರಂದು ಮಹಿಳೆ ತಮ್ಮ ಸಹೋದರರ ಬಳಿ ಮತ್ತಷ್ಟು ಹಣ ಕೇಳಿದ್ದರು. ಅನುಮಾನಗೊಂಡ ಅವರು ವಿಚಾರಿಸಿದಾಗ ವಂಚನೆ ಬಯಲಾಗಿದೆ. ಆ ಬಳಿಕ ಮಹಿಳೆ 1930 ಸೈಬರ್ ಸಹಾಯವಾಣಿ ಸಂಪರ್ಕಿಸಿ ದೂರು ನೀಡಿದ್ದು, ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 12:15 pm, Thu, 7 May 26

Source link

ಸೋದರಸಂಬಂಧಿಯನ್ನೇ ವರಿಸಿದ ಯುವತಿ! ಚಿಕ್ಕಬಳ್ಳಾಪುರದಲ್ಲೊಂದು ವಿಚಿತ್ರ ವಿವಾಹ – Kannada News | Chikkaballapura, A strange marriage: Woman Marries Her Cousin Brother Days Before Her Scheduled Wedding in Devanahalli

ಚಿಕ್ಕಬಳ್ಳಾಪುರ, ಮೇ 7: ಪ್ರೀತಿ ಕುರುಡು ಎಂಬ ಮಾತಿಗೆ ಸಾಕ್ಷಿಯೆಂಬಂತೆ, ವರಸೆಯಲ್ಲಿ ಅಕ್ಕ-ತಮ್ಮನಾಗಬೇಕಾದವರೇ ಪ್ರೀತಿಸಿ ಮದುವೆಯಾಗಿ ಪೋಷಕರಿಗೆ ಶಾಕ್ ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೇವನಹಳ್ಳಿ (Devanahalli) ತಾಲ್ಲೂಕಿನ ಸಾವಕನಹಳ್ಳಿಯ ಶಶಿಕಲಾ (29), ಹೊಸಕೋಟೆ ತಾಲ್ಲೂಕಿನ ಹಳೆಊರಿನ ಪ್ರವೀಣ್ (24) ಎಂಬಾತನನ್ನು ಮದುವೆಯಾಗುವ ಮೂಲಕ ಸಮಾಜ ಮತ್ತು ಕುಟುಂಬದ ವಿರೋಧದ ನಡುವೆಯೂ ಒಂದಾಗಿದ್ದಾರೆ. ಅಷ್ಟೇ ಅಲ್ಲದೆ, ತಮಗೆ ರಕ್ಷಣೆ ನೀಡುವಂತೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಕಚೇರಿ ಮತ್ತು ಮಹಿಳಾ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ್ದಾರೆ.

ಮುಖ್ಯಾಂಶಗಳು

  • ಶಶಿಕಲಾ ಮತ್ತು ಪ್ರವೀಣ್ ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದರು.
  • ಮೇ 29 ರಂದು ಶಶಿಕಲಾಗೆ ಬೇರೊಬ್ಬ ಯುವಕನೊಂದಿಗೆ ಮದುವೆ ನಿಗದಿಯಾಗಿತ್ತು.
  • ಶಶಿಕಲಾ ತಾಯಿಯ ತಂಗಿಯ ಮಗ ಪ್ರವೀಣ್​ನನ್ನೇ ಮದುವೆಯಾಗಿದ್ದಾಳೆ.

ಪೋಷಕರ ವಿರೋಧದ ನಡುವೆ ಮದುವೆ

ಶಶಿಕಲಾ ಮತ್ತು ಪ್ರವೀಣ್ ಸಂಬಂಧಿಕರಾಗಿದ್ದು, ಶಶಿಕಲಾಳ ತಾಯಿಯ ತಂಗಿಯ ಮಗನೇ ಪ್ರವೀಣ್. ಅಂದರೆ, ವರಸೆಯಲ್ಲಿ ಇವರಿಬ್ಬರು ಅಕ್ಕ-ತಮ್ಮನಾಗಬೇಕು. ಇವರ ಪ್ರೀತಿಯ ವಿಷಯ ತಿಳಿದ ಪೋಷಕರು, ಈ ಸಂಬಂಧ ಸಮಾಜದಲ್ಲಿ ಒಪ್ಪಿತವಲ್ಲ ಎಂದು ವಿರೋಧಿಸಿದ್ದರು. ಅಲ್ಲದೆ, ಶಶಿಕಲಾಗೆ ಬೇರೊಬ್ಬ ಹುಡುಗನೊಂದಿಗೆ ನಿಶ್ಚಿತಾರ್ಥ ನಡೆಸಿ ಇದೇ ಮೇ 29ಕ್ಕೆ ಮದುವೆ ದಿನಾಂಕವನ್ನೂ ನಿಗದಿಪಡಿಸಿದ್ದರು. ಆದರೆ ಮದುವೆಗೆ ಕೆಲವೇ ದಿನ ಬಾಕಿ ಇರುವಾಗ ಶಶಿಕಲಾ ಮನೆಯಿಂದ ಹೊರಬಂದು ಪ್ರವೀಣ್‌ನನ್ನು ಮದುವೆಯಾಗಿದ್ದಾಳೆ.

ಪೊಲೀಸ್ ರಕ್ಷಣೆ ಕೋರಿದ ನವಜೋಡಿ

ಮದುವೆಯಾದ ಬಳಿಕ ಈ ಜೋಡಿ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಕಚೇರಿ ಮತ್ತು ಮಹಿಳಾ ಪೊಲೀಸ್ ಠಾಣೆಗೆ ಧಾವಿಸಿ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ‘ನಾವು ಪರಸ್ಪರ ಇಷ್ಟಪಟ್ಟು ಮದುವೆಯಾಗಿದ್ದೇವೆ, ನಮ್ಮನ್ನು ನಮ್ಮ ಪಾಡಿಗೆ ಬದುಕಲು ಬಿಡಿ’ ಎಂದು ಶಶಿಕಲಾ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ. ಇತ್ತ ಪೋಷಕರು ‘ವರಸೆಯಲ್ಲಿ ತಮ್ಮನಾಗುವವನನ್ನೇ ಮದುವೆಯಾಗಿ ಇಡೀ ಕುಟುಂಬಕ್ಕೆ ಅವಮಾನ ತಂದಿದ್ದೀಯಾ’ ಎಂದು ಹತಾಶೆ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಚಿತ್ರ ಮದುವೆ ಪ್ರಕರಣ ಸ್ಥಳೀಯವಾಗಿ ಭಾರೀ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: ಹೊಸಕೋಟೆ ಪೊಲೀಸರ ಭರ್ಜರಿ ಬೇಟೆ: 50 ಬೈಕ್ ಸಮೇತ ಇಬ್ಬರು ಅಂತರರಾಜ್ಯ ಕಳ್ಳರ ಬಂಧನ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೀರಿಗಾಗಿ ಮಂಗಗಳ ಪರದಾಟ, ಮನಕಲಕುವ ದೃಶ್ಯ ಇಲ್ಲಿದೆ ನೋಡಿ! – Kannada News | Heartbreaking Video: Thirsty Monkeys Drink Pothole Water in Gadag Amid Intense Heatwave

ಗದಗ, ಮೇ 07: ಜಿಲ್ಲೆಯಲ್ಲಿ ಸುಡುವ ಬಿಸಿಲಿಗೆ ಮನುಷ್ಯರು ಮಾತ್ರ ಅಲ್ಲ, ಪ್ರಾಣಿಗಳೂ ಬಳಲುತ್ತಿವೆ. ಸರಿಯಾದ ಹೊತ್ತಿಗೆ ನೀರು, ಆಹಾರ ಸಿಗದ ಜೀವಿಗಳು ಕಂಗೆಟ್ಟುಹೋಗಿವೆ. ಹೀಗಿರುವಾಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹುಲ್ಲೂರು ಗ್ರಾಮದ ರಸ್ತೆಯ ಹೊಂಡದಲ್ಲಿ ಸಂಗ್ರಹವಾಗಿದ್ದ ನೀರನ್ನು ಅಲ್ಲಿನ ಮಂಗಗಳು ಕುಡಿದು ಬಾಯಾರಿಕೆ ನೀಗಿಸಿಕೊಳ್ಳುತ್ತಿರುವ ದೃಶ್ಯ ಕಂಡುಬಂದಿದೆ. ಈ ದೃಶ್ಯವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಮನಕಲಕುವಂತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

TV9 Kannada News Live: ಸುವೇಂದು ಅಧಿಕಾರಿ ಆಪ್ತ ಸಹಾಯಕನ ಹತ್ಯೆ, ಆಪರೇಷನ್ ಸಿಂಧೂರ್​ಗೆ ಒಂದು ವರ್ಷ! ಇಲ್ಲಿದೆ ಈ ಹೊತ್ತಿನ ಪ್ರಮುಖ ಸುದ್ದಿಗಳು – Kannada News | TV9 Kannada News Live: Siddaramaiah Becomes India’s Oldest CM; Suvendu Adhikari’s PA Murdered in Bengal

ಸುವೇಂದು ಅಧಿಕಾರಿ ಆಪ್ತ ಸಹಾಯಕನ ಹತ್ಯೆ, ಆಪರೇಷನ್ ಸಿಂಧೂರ್​ಗೆ ಒಂದು ವರ್ಷ!

ಬೆಂಗಳೂರು, ಮೇ 07: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಬಿಜೆಪಿ ನಾಯಕ ಸುವೇಂದು ಅಧಿಕಾರಿಯ (Suvendu Adhikar) ಆಪ್ತ ಸಹಾಯಕ ಚಂದ್ರನಾಥ್ ರಥ್ ಗುಂಡೇಟಿಗೆ ಬಲಿಯಾಗಿದ್ದಾರೆ. ಆಪರೇಷನ್ ಸಿಂಧೂರ್​ಗೆ ಒಂದು ವರ್ಷ ಪೂರೈಸಿದ್ದು, ಭಾರತೀಯ ಸೇನೆಯು ವಿಶೇಷ ವೀಡಿಯೋವನ್ನು ಹಂಚಿಕೊಂಡಿದೆ. ಇನ್ನೊಂದೆಡೆ ರೈಲ್ವೆ ಇಲಾಖೆ ನಡೆಸುವ ವಿವಿಧ ಪರೀಕ್ಷೆಗಳಲ್ಲಿ ಕನ್ನಡ ಬಾಷೆಯನ್ನು ನಿರಾಕರಿಸಲಾಗಿದೆ. ಇದೆಲ್ಲದರ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ದೇಶದ ಅತ್ಯಂತ ಹಿರಿಯ ಮುಖ್ಯಮಂತ್ರಿ ಎನ್ನಿಸಿಕೊಂಡು ದಾಖಲೆ ಸೃಷ್ಟಿಸಿದ್ದಾರೆ.

ಮುಖ್ಯಾಂಶಗಳು

  • ಸುವೇಂದು ಅಧಿಕಾರಿಯ ಆಪ್ತ ಸಲಹೆಗಾರ ಗಂಡೇಟಿಗೆ ಬಲಿ
  • ಆಪರೇಷನ್ ಸಿಂಧೂರ್​ ನೆನಪಿಗೆ ಭಾರತೀಯ ಸೇನೆಯಿಂದ ವೀಡಿಯೋ ರಿಲೀಸ್
  • ರೈಲ್ವೇ ಪರೀಕ್ಷೆಗಳಲ್ಲಿ ಕನ್ನಡಕ್ಕೆ ನಿರಾಕರಣೆ
  • ದೇಶದಲ್ಲೆ ಹಿರಿಯ ಮುಖ್ಯಮಂತ್ರಿಯಾದ ಸಿಎಂ ಸಿದ್ದರಾಮಯ್ಯ

ಸುವೇಂದು ಅಧಿಕಾರಿಯ ಪಿಎ ಹತ್ಯೆ!

ಪಶ್ಚಿಮ ಬಂಗಾಳದ ವಿವಿಧೆಡೆ ಭೀಕರ ಹಿಂಸಾಚಾರ ಭುಗಿಲೆದ್ದಿದ್ದು, ಬಿಜೆಪಿ ನಾಯಕ ಮತ್ತು ಭಾವಿ ಮುಖ್ಯಮಂತ್ರಿ ಅಭ್ಯರ್ಥಿ ಎನ್ನಲಾದ ಸುವೇಂದು ಅಧಿಕಾರಿಯ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ಬುಧವಾರ ರಾತ್ರಿ ಉತ್ತರ 24 ಪರಗಣ ಜಿಲ್ಲೆಯ ಮಧ್ಯಮಗ್ರಾಮದ ದೋಹಾರಿಯಾ ಪ್ರದೇಶದಲ್ಲಿ ನಡೆದಿರುವ ಈ ಘಟನೆಯು ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಆಪರೇಷನ್ ಸಿಂಧೂರ್​ಗೆ ಒಂದು ವರ್ಷ

ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಅಡಗಿದ್ದ ಉಗ್ರರು ಮತ್ತು ಅವರಿಗೆ ಬೆಂಬಲ ನೀಡುತ್ತಿದ್ದ ಶಕ್ತಿಗಳ ವಿರುದ್ಧ ನಡೆದಿದ್ದ ‘ಆಪರೇಷನ್ ಸಿಂಧೂರ್’ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ್ದು, ಈ ಹಿನ್ನೆಲೆಯಲ್ಲಿ ಭಾರತೀಯ ಸೇನೆಯು ಅಂದಿನ ಭೀಕರ ಕಾರ್ಯಾಚರಣೆಯ ವಿಶೇಷ ವೀಡಿಯೊವನ್ನು ಬಿಡುಗಡೆ ಮಾಡಿದೆ. ಭಾರತದ ಮೇಲೆ ಕಣ್ಣು ಹಾಕುವ ಅಥವಾ ಭಯೋತ್ಪಾದನೆಗೆ ನೀರೆರೆಯುವ ಶಕ್ತಿಗಳು ಜಗತ್ತಿನ ಯಾವುದೇ ಮೂಲೆಯಲ್ಲಿ ಅಡಗಿದ್ದರೂ ಸರಿ, ಭಾರತೀಯ ಸೇನೆ ಅವರನ್ನು ಹುಡುಕಿ ಶಿಕ್ಷಿಸುತ್ತದೆ ಎಂಬ ಸಂದೇಶವನ್ನು ವೀಡಿಯೋದಲ್ಲಿ ನೀಡಲಾಗಿದೆ.

ಇದನ್ನೂ ಓದಿ ಮಾವು, ಹಲಸು ಪ್ರಿಯರಿಗೆ ಈ ಬಾರಿ ಡಬ್ಬಲ್ ಧಮಾಕ! ಬೆಂಗಳೂರಿನ ಎರಡು ಕಡೆ ‘ಮಾವು ಮತ್ತು ಹಲಸಿನ ಮೇಳ’

ರೈಲ್ವೆ ಪರಿಕ್ಷೇಗಳಲ್ಲಿ ಕನ್ನಡಕ್ಕಿಲ್ಲ ಜಾಗ!

ನೈರುತ್ಯ ರೈಲ್ವೆ ಇಲಾಖೆಯು ನಡೆಸುತ್ತಿರುವ ವಿವಿಧ ಹುದ್ದೆಗಳ ಮುಂಬಡ್ತಿ ಪರೀಕ್ಷೆಗಳಲ್ಲಿ ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ತಿರಸ್ಕರಿಸಲಾಗಿದೆ. ಈ ಹಿಂದೆ ಪ್ರತಿಭಟನೆಗಳ ನಂತರ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಇದೀಗ ಮತ್ತೆ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಪರೀಕ್ಷೆ ನಡೆಸಲು ರೈಲ್ವೆ ಮಂಡಳಿ ಮುಂದಾಗಿದೆ. ಇಲಾಖೆಯ ಈ ಕ್ರಮದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯಾದ್ಯಂತ ರೈಲು ಸಂಚಾರ ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿದೆ.

ಸಿದ್ದರಾಮಯ್ಯ ದೇಶದ ಅತ್ಯಂತ ಹಿರಿಯ ಸಿಎಂ

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಎಲ್‌ಡಿಎಫ್ ಸೋಲುಂಡ ಕಾರಣ 80 ವರ್ಷ ವಯಸ್ಸಿನ ಪಿಣರಾಯಿ ವಿಜಯನ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಿಣರಾಯಿ ವಿಜಯನ್ ನಂತರ ಕರ್ನಾಟಕದ ಮುಖ್ಯಮಂತ್ರಿ, 78 ವರ್ಷ ವಯಸ್ಸಿನ ಸಿದ್ದರಾಮಯ್ಯ ಈಗ ದೇಶದ ಅತ್ಯಂತ ಹಿರಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಳಪತಿ ವಿಜಯ್ ಹಾದಿಯಲ್ಲಿ ಮುಂದುವರೆಯುತ್ತಾರಾ ಶಿವಣ್ಣ? ರಾಜಕೀಯ ನಿಲುವಿನ ಬಗ್ಗೆ ಸಿಕ್ತು ಉತ್ತರ – Kannada News | Shivarajkumar Political Entry? Will He Follow Thalapathy Vijay’s Path? Answer Revealed

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸ್ಟಾರ್ ನಟರು ರಾಜಕೀಯಕ್ಕೆ ಬರುವುದು ಹೊಸದೇನಲ್ಲ. ತಮಿಳುನಾಡಿನಲ್ಲಿ ದಳಪತಿ ವಿಜಯ್ ತಮ್ಮದೇ ಆದ ‘ಟಿವಿಕೆ’ (TVK) ಪಕ್ಷವನ್ನು ಸ್ಥಾಪಿಸಿ, ರಾಜಕೀಯದಲ್ಲಿ ಹೊಸ ಸುನಾಮಿ ಎಬ್ಬಿಸಿದ್ದಾರೆ. ಅವರ ಪಕ್ಷ 108 ಸ್ಥಾನಗಳನ್ನು ಗೆದ್ದಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಕರ್ನಾಟಕದಲ್ಲೂ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಅವರು ಚುನಾವಣಾ ರಾಜಕೀಯಕ್ಕೆ ಬರಬೇಕು ಎಂಬ ಒತ್ತಾಯಗಳು ಮತ್ತೆ ಕೇಳಿಬರುತ್ತಿವೆ. ಆದರೆ, ಶಿವಣ್ಣ ಅವರು ಈ ವಿಷಯದಲ್ಲಿ ಈ ಮೊದಲೇ ತಮ್ಮ ಸ್ಪಷ್ಟ ನಿಲುವನ್ನು ತಿಳಿಸಿದ್ದರು.

ಆಂಧ್ರ ಪ್ರದೇಶದಲ್ಲಿ ಪವನ್ ಕಲ್ಯಾಣ್, ತಮಿಳುನಾಡಿನಲ್ಲಿ ದಳಪತಿ ವಿಜಯ್ ಗೆದ್ದಾಗಿದೆ. ಅದೇ ರೀತಿ ಕನ್ನಡದಲ್ಲಿ ಈ ರೀತಿ ರಾಜಕೀಯ ಪ್ರವೇಶ ಮಾಡಿ ಗೆಲ್ಲೋದು ಯಾರು ಎಂಬುದು ಅನೇಕರ ಪ್ರಶ್ನೆ ಅನೇಕರಿಗೆ ಮೂಡಿದೆ. ಅನೇಕರು ಶಿವಣ್ಣ ಹೆಸರನ್ನು ಹೇಳುತ್ತಿದ್ದಾರೆ. ಆದರೆ, ಕೆಲ ವರ್ಷಗಳ ಹಿಂದೆ ರಾಜಕೀಯಕ್ಕೆ ಬರುವುದಿಲ್ಲ ಎಂಬುದನ್ನು ಶಿವರಾಜ್​​ಕುಮಾರ್ ನೇರವಾಗಿ ಹೇಳಿದ್ದರು.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಾರ್ವಜನಿಕ ವೇದಿಕೆಯಲ್ಲೇ ಶಿವಣ್ಣನಿಗೆ ರಾಜಕೀಯಕ್ಕೆ ಬರುವಂತೆ ಬಹಿರಂಗವಾಗಿ ಆಹ್ವಾನ ನೀಡಿದ್ದರು. ‘ಶಿವರಾಜ್‌ಕುಮಾರ್ ಅವರೇ, ನೀವು ಪಾರ್ಲಿಮೆಂಟ್ ಚುನಾವಣೆಗೆ ನಿಲ್ಲಲು ರೆಡಿಯಾಗಿ, ನಿಮಗೆ ಎಲ್ಲಿ ಬೇಕೋ ಅಲ್ಲಿ ಸೀಟ್ ಕೊಡುತ್ತೇನೆ’ ಎಂದು ಡಿಕೆಶಿ ಹೇಳಿದ್ದರು.

ನೋ ಎಂದಿದ್ದ ನಟ:

ಅದಕ್ಕೆ ವೇದಿಕೆಯಲ್ಲೇ ಪ್ರತಿಕ್ರಿಯಿಸಿದ್ದ ಶಿವಣ್ಣ, ‘ನಮ್ಮ ತಂದೆ (ಡಾ. ರಾಜ್‌ಕುಮಾರ್) ನಮಗೆ ಕೊಟ್ಟಿರುವ ಬಳುವಳಿ ಒಂದೇ, ಅದು ಬಣ್ಣ ಹಚ್ಚುವುದು ಮತ್ತು ನಿಮ್ಮನ್ನು ರಂಜಿಸುವುದು. ನಾನು ಈಗಷ್ಟೇ ಐದಾರು ಸಿನಿಮಾಗಳನ್ನು ಒಪ್ಪಿಕೊಂಡಿದ್ದೇನೆ. ನನಗೆ ಸಿನಿಮಾ ಮಾಡುವುದೇ ಖುಷಿ’ ಎಂದು ವಿನಮ್ರವಾಗಿ ರಾಜಕೀಯ ಪ್ರವೇಶದ ಆಫರ್ ಅನ್ನು ನಿರಾಕರಿಸಿದ್ದರು.

ತಮಿಳುನಾಡಿನಲ್ಲಿ ವಿಜಯ್ ಅವರು ತಮ್ಮ ಮೊದಲ ರಾಜಕೀಯ ಸಮಾವೇಶದಲ್ಲೇ ಲಕ್ಷಾಂತರ ಜನರನ್ನು ಸೇರಿಸುವ ಮೂಲಕ ತಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಇದು ಕರ್ನಾಟಕದ ಅಭಿಮಾನಿಗಳಲ್ಲೂ ಹೊಸ ಆಸೆಯನ್ನು ಚಿಗುರಿಸಿದೆ. ಶಿವಣ್ಣನಂತಹ ಜನಪ್ರಿಯ ನಟರು ರಾಜಕೀಯಕ್ಕೆ ಬಂದರೆ ಬದಲಾವಣೆ ತರಬಹುದು ಎಂಬುದು ಅವರ ಅಭಿಪ್ರಾಯ. ಆದರೆ, ಶಿವಣ್ಣ ಸದ್ಯಕ್ಕೆ ತಾವು ಚಿತ್ರರಂಗಕ್ಕೆ ಮಾತ್ರ ಸೀಮಿತ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ‘ಧುರಂಧರ್ 2’ ಸಿನಿಮಾ ನೋಡಿ ‘ಬ್ರಿಲಿಯಂಟ್’ ಎಂದು ಹೊಗಳಿದ ಶಿವರಾಜ್​ಕುಮಾರ್

ಶಿವಣ್ಣ ಅವರ ಪತ್ನಿ ಗೀತಾ ಶಿವರಾಜ್‌ಕುಮಾರ್ ಅವರು ಈಗಾಗಲೇ ರಾಜಕೀಯದಲ್ಲಿ ಸಕ್ರಿಯರಾಗಿದ್ದು, ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ. ಶಿವಣ್ಣ ಅವರೂ ಕೂಡ ಪತ್ನಿಯ ಪರವಾಗಿ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸಿದ್ದಾರೆ. ಆದರೆ, ವೈಯಕ್ತಿಕವಾಗಿ ತಾವು ಚುನಾವಣಾ ಕಣಕ್ಕೆ ಇಳಿಯುವ ಬಗ್ಗೆ ಶಿವಣ್ಣ ಎಂದಿಗೂ ಆಸಕ್ತಿ ತೋರಿಸಿಲ್ಲ. ‘ನಾನು ನಿಮ್ಮ ಪ್ರೀತಿಯ ಶಿವಣ್ಣನಾಗಿ ಉಳಿಯಲು ಬಯಸುತ್ತೇನೆ, ರಾಜಕೀಯ ನಾಯಕನಾಗಿ ಅಲ್ಲ’ ಎಂಬುದು ಅವರ ಖಡಕ್ ನಿಲುವು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Viral Video: ಮಾನವೀಯತೆ ಅಂದ್ರೆ ಇದು: ಸುಡುವ ಬಿಸಿಲಿನಿಂದ ರಕ್ಷಿಸಲು ತನ್ನ ಅಂಗಡಿಯೊಳಗೆ ಬೀದಿ ನಾಯಿಗಳಿಗೆ ಆಶ್ರಯ ನೀಡಿದ ವ್ಯಕ್ತಿ – Kannada News | Viral Video Man shelters stray dogs inside his shop to protect them from the scorching sun

ಪ್ರತಿದಿನ, ಸಾಮಾಜಿಕ ಮಾಧ್ಯಮದಲ್ಲಿ ಹಲವು ಬಗೆಯ ವಿಡಿಯೋಗಳು ವೈರಲ್ ಆಗುತ್ತವೆ. ಅಂತರ್ಜಾಲದಲ್ಲಿ ಕಾಣಿಸಿಕೊಳ್ಳುವ ಕೆಲವು ವಿಡಿಯೋಗಳು ನಮ್ಮ ಸುತ್ತಲೂ ನಡೆಯುತ್ತಿರುವ ಕೆಲವು ಅದ್ಭುತ ಘಟನೆಗಳ ಮೇಲೆಯೇ ಇರುತ್ತದೆ. ಈ ರೀತಿಯಾಗಿ, ಅಂಗಡಿ ಮಾಲೀಕರೊಬ್ಬರು ಬೀದಿ ನಾಯಿಗಳನ್ನು ಸೂರ್ಯನಿಂದ ರಕ್ಷಿಸಲು ಮತ್ತು ತನ್ನ ಅಂಗಡಿಯೊಳಗೆ ಅವುಗಳನ್ನು ಸುರಕ್ಷಿತವಾಗಿಡಲು ವ್ಯವಸ್ಥೆಗಳನ್ನು ಮಾಡಿದ್ದಾರೆ. ಈ ವಿಡಿಯೋ ಪ್ರಸ್ತುತ ಅಂತರ್ಜಾಲದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ.

ನಾಯಿಗಳಿಗೆ ತನ್ನ ಶಾಪ್ ಒಳಗೆ ಆಶ್ರಯ ನೀಡಿದ ಅಂಗಡಿಯವನು

ಪ್ರಸ್ತುತ, ಭಾರತದ ಹೆಚ್ಚಿನ ಭಾಗಗಳಲ್ಲಿ ಶಾಖದ ಅಲೆಯು ತುಂಬಾ ತೀವ್ರವಾಗಿದೆ. ಸುಡುವ ಬಿಸಿಲಿನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸಾರ್ವಜನಿಕರು ತಮ್ಮ ಮನೆಗಳಿಂದ ಹೊರಬರುತ್ತಿಲ್ಲ. ಹೀಗಿರುವಾಗ ಬೀದಿ ನಾಯಿಗಳ ಬಗ್ಗೆ ಕೇಳುವವರಿಲ್ಲ. ರಸ್ತೆಗಳಲ್ಲಿ ಓಡಾಡುವ ಬೀದಿ ನಾಯಿಗಳ ಸ್ಥಿತಿ ತುಂಬಾ ದಯನೀಯವಾಗಿದೆ. ಇದಲ್ಲದೆ, ನಗರಗಳಲ್ಲಿ ಬೀದಿ ನಾಯಿಗಳು ಸೂರ್ಯನಿಂದ ಆಶ್ರಯ ಪಡೆಯಲು ಸ್ಥಳವಿಲ್ಲದೆ ಬಳಲುತ್ತಿವೆ. ಈ ಪರಿಸ್ಥಿತಿಯಲ್ಲಿ ಅಂಗಡಿಯವರೊಬ್ಬರು ಬೀದಿ ನಾಯಿಗಳಿಗೆ ದಯೆ ತೋರಿದ್ದಾರೆ. ಪ್ರಸ್ತುತ, ಇದು ಇಂಟರ್ನೆಟ್‌ನ ಚರ್ಚೆಯಾಗಿದೆ.

ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ವಿಡಿಯೋ

ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಬೀದಿ ನಾಯಿಗಳು ಅಂಗಡಿಯ ಒಳಗೆವೇ ಕುಳಿತಿವೆ. ಅಂಗಡಿಯಲ್ಲಿ ಬಿಸಿಲಿನ ಬಿಸಿ ಇಲ್ಲದೆ, ಯಾವುದೇ ಭಯವಿಲ್ಲದೆ ಆರಾಮವಾಗಿ ಕುಳಿತಿರುವುದು ವಿಡಿಯೋದಲ್ಲಿ ಕಾಣಬಹುದು. ಕೆಲವು ನಾಯಿಗಳು ನೆಲದ ಮೇಲೆ ಕುಳಿತಿದ್ದರೆ, ಇನ್ನೂ ಕೆಲವು ನಾಯಿಗಳು ಮೇಜಿನ ಮೇಲೆ ಮಲಗಿವೆ. ಅಂಗಡಿಯಲ್ಲಿ ಕೆಲಸ ಮಾಡುವ ಜನರು ಸಹ ನಾಯಿಗಳು ಅಲ್ಲಿರುವುದರಿಂದ ಯಾವುದೇ ತೊಂದರೆ ಅನುಭವಿಸಿಲ್ಲ. ಆ ನಾಯಿಗಳು ಕೂಡ ತಮ್ಮಷ್ಟಕ್ಕೆ ತಾವು ಆರಾಮವಾಗಿ ಕುಳಿತಿವೆ. ಇದೆಲ್ಲವೂ ವಿಡಿಯೋದಲ್ಲಿ ಸೆರೆಯಾಗಿದೆ.

Viral Video: ಬೇಸಿಗೆಯಲ್ಲಿ ಗಿಡಗಳಿಗೆ ನೀರುಣಿಸುದು ಈಗ ಸುಲಭ: ಚಮಚ-ಟೇಪ್ ಬಳಸಿ ಪೈಪ್ ಅನ್ನು ಮಿನಿ ಸ್ಪ್ರೇ ಆಗಿ ಪರಿವರ್ತಿಸಿದ ಗಾರ್ಡನರ್

ಈ ವಿಡಿಯೋ ಅಂತರ್ಜಾಲದಲ್ಲಿ ವೇಗವಾಗಿ ವೈರಲ್ ಆಗುತ್ತಿದ್ದಂತೆ, ಅನೇಕರು ಅಂಗಡಿಯವರನ್ನು ಹೊಗಳುತ್ತಿದ್ದಾರೆ ಮತ್ತು ಸಾಕಷ್ಟು ಕಾಮೆಂಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Vastu Tips: ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ದಂಪತಿಗಳ ಫೋಟೋ ಇಡಬೇಡಿ; ವಾಸ್ತು ಸಲಹೆ ಇಲ್ಲಿದೆ – Kannada News | Vastu Tips for Couple Photos: Boost Marital Harmony and Positive Energy at Home

ಮನೆಯ ಸೌಂದರ್ಯವನ್ನು ಹೆಚ್ಚಿಸಲು ಗೋಡೆಗಳ ಮೇಲೆ ಫೋಟೋಗಳನ್ನು ಹಾಕುತ್ತೇವೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ ಪ್ರತಿಯೊಂದು ಫೋಟೋ ಕೂಡ ತನ್ನದೇ ಆದ ಶಕ್ತಿಯನ್ನು ಹೊಂದಿರುತ್ತದೆ. ಅದರಲ್ಲೂ ಗಂಡ-ಹೆಂಡತಿಯ ಫೋಟೋವನ್ನು ಸರಿಯಾದ ಸ್ಥಳದಲ್ಲಿ ಇರಿಸುವುದು ವೈವಾಹಿಕ ಜೀವನದ ಸುಖ-ಶಾಂತಿಗೆ ಬಹಳ ಮುಖ್ಯ. ದಂಪತಿಗಳ ಫೋಟೋ ಇರಿಸುವಾಗ ಗಮನಿಸಬೇಕಾದ ಅಂಶಗಳು ಇಲ್ಲಿವೆ.

ಫೋಟೋ ಮತ್ತು ಫ್ರೇಮ್ ಹೇಗಿರಬೇಕು?

ಫೋಟೋದಲ್ಲಿ ಗಂಡ-ಹೆಂಡತಿ ಇಬ್ಬರೂ ಪರಸ್ಪರ ಸಂತೋಷದಿಂದ ಮತ್ತು ನಗುಮುಖದಿಂದ ಕೂಡಿರಬೇಕು. ಇದು ದಂಪತಿಗಳ ನಡುವೆ ಪ್ರೀತಿಯನ್ನು ವೃದ್ಧಿಸುತ್ತದೆ. ಫ್ರೇಮ್ ಹಳೆಯದಾಗಿರಬಾರದು ಅಥವಾ ಅದರ ಬಣ್ಣ ಮಾಸಿರಬಾರದು. ಯಾವಾಗಲೂ ಹೊಸದಾದ ಮತ್ತು ಆಕರ್ಷಕವಾದ ಫ್ರೇಮ್ ಬಳಸಿ. ಮುರಿದ ಫ್ರೇಮ್‌ಗಳು ನಕಾರಾತ್ಮಕತೆಯನ್ನು ತರುತ್ತವೆ. ದಂಪತಿಗಳ ಫೋಟೋದಲ್ಲಿ ಗಂಡ-ಹೆಂಡತಿ ಇಬ್ಬರು ಮಾತ್ರ ಇರಲಿ. ಪೂರ್ವಜರು, ಮಕ್ಕಳು ಅಥವಾ ಇತರ ಕುಟುಂಬ ಸದಸ್ಯರ ಫೋಟೋಗಳನ್ನು ಇದರೊಂದಿಗೆ ಸೇರಿಸಬೇಡಿ. ಫೋಟೋ ಅತಿ ದೊಡ್ಡದೂ ಅಲ್ಲದ, ಅತಿ ಚಿಕ್ಕದೂ ಅಲ್ಲದ ‘ಮಧ್ಯಮ’ ಗಾತ್ರದಲ್ಲಿದ್ದರೆ ನೋಡಲು ಚಂದ ಮತ್ತು ವಾಸ್ತು ದೃಷ್ಟಿಯಿಂದಲೂ ಉತ್ತಮ.

ಯಾವ ಸ್ಥಳಗಳಲ್ಲಿ ಫೋಟೋ ಇಡಬಾರದು?

ವಾಸ್ತು ಶಾಸ್ತ್ರದ ಪ್ರಕಾರ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಫೋಟೋ ಇಡುವುದು ನಿಷೇಧಿತ. ಮಲಗುವ ಕೋಣೆಯ (Bedroom) ಎದುರಿನ ಗೋಡೆಯ ಮೇಲೆ ಫೋಟೋ ಇಡಬೇಡಿ. ದೇವರ ಮನೆ ಅಥವಾ ಪ್ರಾರ್ಥನಾ ಕೋಣೆಯ ನೇರ ಎದುರು ಭಾಗದಲ್ಲಿ ದಂಪತಿಗಳ ಫೋಟೋ ಬೇಡ. ಅಡುಗೆ ಮನೆ, ಶೌಚಾಲಯ ಅಥವಾ ಸ್ನಾನಗೃಹದ ಗೋಡೆಗಳ ಮೇಲೆ ಫೋಟೋ ಹಾಕುವುದನ್ನು ತಪ್ಪಿಸಿ. ಮನೆಯ ಮುಖ್ಯ ಬಾಗಿಲಿನ ನೇರ ಎದುರು ಭಾಗದಲ್ಲಿ ಫೋಟೋ ಇರಿಸುವುದು ಸೂಕ್ತವಲ್ಲ.

ತಪ್ಪು ಸ್ಥಳದಲ್ಲಿ ಇಟ್ಟರೆ ಏನಾಗಬಹುದು?

ಫೋಟೋಗಳನ್ನು ತಪ್ಪು ದಿಕ್ಕಿನಲ್ಲಿ ಅಥವಾ ಅಶುಭ ಸ್ಥಳದಲ್ಲಿ ಇರಿಸಿದರೆ ಜೀವನದಲ್ಲಿ ಕೆಲವು ಸಮಸ್ಯೆಗಳು ಎದುರಾಗಬಹುದು. ದಂಪತಿಗಳ ನಡುವೆ ಅನಗತ್ಯ ಭಿನ್ನಾಭಿಪ್ರಾಯ ಮತ್ತು ಕಲಹಗಳು ಉಂಟಾಗಬಹುದು. ಆರ್ಥಿಕ ಮುಗ್ಗಟ್ಟು ಮತ್ತು ಅನಾರೋಗ್ಯದ ಸಮಸ್ಯೆಗಳು ಕಾಡಬಹುದು. ಸಂಬಂಧದಲ್ಲಿ ಮಾನಸಿಕ ದೂರ ಮತ್ತು ಉದ್ವಿಗ್ನತೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ವಾಸ್ತು ಪ್ರಕಾರ ಇಟ್ಟರೆ ಸಿಗುವ ಪ್ರಯೋಜನಗಳು:

ಸರಿಯಾದ ನಿಯಮಗಳನ್ನು ಪಾಲಿಸಿ ಫೋಟೋ ಇರಿಸುವುದರಿಂದ ಮನೆ ಮಂದಿರವಾಗುತ್ತದೆ. ಗಂಡ-ಹೆಂಡತಿಯ ನಡುವೆ ಪರಸ್ಪರ ವಿಶ್ವಾಸ ಮತ್ತು ಮಧುರ ಬಾಂಧವ್ಯ ಬೆಳೆಯುತ್ತದೆ. ವೈವಾಹಿಕ ಜೀವನದಲ್ಲಿ ಸ್ಥಿರತೆ ಮತ್ತು ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹರಿಯುತ್ತದೆ. ಮನೆಯಲ್ಲಿ ಶಾಂತಿ ನೆಲೆಸಿದಾಗ, ಅಲ್ಲಿ ಲಕ್ಷ್ಮಿ ದೇವಿಯ ಅನುಗ್ರಹ ಸದಾ ಇರುತ್ತದೆ ಎಂದು ನಂಬಲಾಗಿದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ವಾಸ್ತು ದೋಷ ನಿವಾರಣೆಗೆ ಸರಳ ಕ್ರಮಗಳು:

ಫೋಟೋಗಳ ಮೇಲೆ ಧೂಳು ಕುಳಿತುಕೊಳ್ಳದಂತೆ ಯಾವಾಗಲೂ ಸ್ವಚ್ಛವಾಗಿಡಿ. ಪ್ರತಿ ವರ್ಷ ದೀಪಾವಳಿಯ ಸಂದರ್ಭದಲ್ಲಿ ಹಳೆಯ ಫ್ರೇಮ್ ಬದಲಿಸಿ ಹೊಸದನ್ನು ಹಾಕುವ ಅಭ್ಯಾಸ ಮಾಡಿಕೊಳ್ಳಿ. ಫೋಟೋ ಹಳೆಯದಾಗಿದ್ದರೆ ಅಥವಾ ಹರಿದಿದ್ದರೆ ಅದನ್ನು ಗೌರವಯುತವಾಗಿ ತೆಗೆದುಹಾಕಿ.

ಸಲಹೆ: ವಾಸ್ತು ಎನ್ನುವುದು ಕೇವಲ ನಂಬಿಕೆಯಲ್ಲ, ಅದು ನಮ್ಮ ಸುತ್ತಮುತ್ತಲಿನ ಪರಿಸರವನ್ನು ವ್ಯವಸ್ಥಿತವಾಗಿಟ್ಟುಕೊಳ್ಳುವ ಒಂದು ಕಲೆ. ಈ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ನಿಮ್ಮ ದೈನಂದಿನ ಜೀವನದಲ್ಲಿ ಪ್ರೀತಿ ಮತ್ತು ಸಂತೋಷವನ್ನು ಹೆಚ್ಚಿಸಿಕೊಳ್ಳಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪೂಜಾ ದತ್ತ ಸಾವಿಗೆ ಕಾರಣ ಇನ್ನೂ ನಿಗೂಢ: ಮರಣೋತ್ತರ ಪರೀಕ್ಷೆ ವರದಿಯಲ್ಲೂ ಇಲ್ಲ ಸ್ಪಷ್ಟತೆ – Kannada News | Pooja Dutta’s Mysterious Death: Bangalore Police Seek Answers After Inconclusive Post Mortem

ಬೆಂಗಳೂರು, ಮೇ 07: ಪ್ರತಿಷ್ಠಿತ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ 34 ವರ್ಷದ ಪೂಜಾ ದತ್ತ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಆಕೆಯ ಸಾವಿನ ಹಿಂದಿನ ಅಸಲೀ ಕಾರಣ ಏನೆಂದು ಪತ್ತೆ ಮಾಡುವುದೇ ಈಗ ಸವಾಲಿನ ಕೆಲಸವಾಗಿದೆ. ಪೂಜಾ ಸಾವು ಹೇಗಾಯ್ತು ಎಂಬುವುದು ಇನ್ನೂ ನಿಗೂಢವಾಗಿಯೇ ಉಳಿದಿದ್ದು, ಮರಣೋತ್ತರ ಪರೀಕ್ಷೆಯ ವರದಿಯಲ್ಲಿಯೂ ಈ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ ಎನ್ನಲಾಗಿದೆ. ಹೀಗಾಗಿ ಪೂಜಾದ್ದು ಆತ್ಮಹತ್ಯೆಯೋ? ಅಥವಾ ಯಾವುದಾದರೂ ಕಾಯಿಲೆಯಿಂದ ಮೃತಪಟ್ಟರಾ ಎಂಬ ಪ್ರಶ್ನೆಗಳೀಗ ಉದ್ಭವಿಸಿವೆ. ಇನ್ನು ಸಾವಿನ ಕಾರಣ ಪತ್ತೆ ಸಂಬಂಧ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ನಿಖರ ಮಾಹಿತಿ ಸಿಗದ ಕಾರಣ, ದೇಹದ ಮಾದರಿಗಳನ್ನು ಎಫ್​​ಎಸ್​​ಎಲ್​​ಗೆ ಕಳುಹಿಸಲಾಗಿದೆ.

  • ಆಡುಗೋಡಿಯಲ್ಲಿ ಪೂಜಾ ದತ್ತ ಅನುಮಾನಾಸ್ಪದ ಸಾವು ಪ್ರಕರಣ
  • ಖಾಸಗಿ ಕಂಪನಿ ಉದ್ಯೋಗಿ ಸಾವಿಗೆ ಕಾರಣ ಏನೆಂಬುದೇ ನಿಗೂಢ
  • ಮರಣೋತ್ತರ ಪರೀಕ್ಷೆ ವರದಿಯಲ್ಲೂ ಸಿಕ್ಕಿಲ್ಲವಂತೆ ಸ್ಪಷ್ಟ ಕಾರಣ

ಇದನ್ನೂ ಓದಿ: ಯುವತಿಯ ಬೆತ್ತಲೆ ಮೃತದೇಹ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ಮನೆ ಮಾಲಕಿ ಸ್ಫೋಟಕ ಹೇಳಿಕೆ

ಹಣದ ಮೂಲ ಹುಡುಕುತ್ತಿರುವ ಪೊಲೀಸರು

ಇನ್ನು ಪೂಜಾ ದತ್ತ ಮೂರು ತಿಂಗಳಿನಿಂದ ಹೊರಗಡೆ ಅಷ್ಟು ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಏನೂ ಕೆಲಸ ಮಾಡದೇ ಇದ್ದರೂ ಆಕೆ ಖರ್ಚನ್ನು ಹೇಗೆ ನಿಭಾಯಿಸುತ್ತಿದ್ದಳು ಎಂಬ ಪ್ರಶ್ನೆ ಹಿನ್ನೆಲೆ ಆಕೆಯ ಹಣದ ಮೂಲದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಂಪನಿ ಬಿಡುವಾಗ ಅಕೆಗೆ ಬಂದ ಹಣ ಎಷ್ಟು ಎಂಬ ಕುರಿತು ಹೆಚ್​​ಆರ್​​ಗಳ ಮೂಲಕ ಮಾಹಿತಿ ಪಡೆಯಲು ಖಾಕಿ ಮುಂದಾಗಿದೆ. ಆಕೆಯ ಬ್ಯಾಂಕ್ ಖಾತೆಗಳ ಮಾಹಿತಿ ಪಡೆಯುತ್ತಿರುವ ಜೊತೆಗೆ, ಮೊಬೈಲ್​​ನಲ್ಲಿನ ಸರ್ಚ್​​ ಹಿಸ್ಟರಿ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದೆ. ಸ್ನೇಹಿತರಿಂದ ಏನಾದರೂ ಆಕೆ ಹಣ ಪಡೆದಿದ್ದಳಾ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಮೂಲತಃ ಜಾರ್ಖಂಡ್‌ನ ಧನಬಾದ್ ಸಮೀಪದ ಹಿರಾಪುರ ನಿವಾಸಿಯಾಗಿದ್ದ ಪೂಜಾ ದತ್ತ ಮೃತದೇಹ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಕೆ ವಾಸವಿದ್ದ ಬಾಡಿಗೆ ಮನೆಯಲ್ಲಿಯೇ ಪತ್ತೆಯಾಗಿತ್ತು. ಮನೆಯಿಂದ ಭಾರಿ ದುರ್ನಾತ ಬರುತ್ತಿದ್ದ ಹಿನ್ನೆಲೆಯಲ್ಲಿ ಅನುಮಾನಗೊಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಬಂದು ಬಾಗಿಲು ಮುರಿದು ನೋಡಿದಾಗ ಸಂಪೂರ್ಣವಾಗಿ ಬೆತ್ತಲೆ ಮತ್ತು ಅರೆಕೊಳೆತ ಸ್ಥಿತಿ ಪೂಜಾ ಮೃತದೇಹ ಕಂಡುಬಂದಿತ್ತು. ಮೃತದೇಹ ಸಂಪೂರ್ಣ ಕೊಳೆತು ಹೋಗಿದ್ದರಿಂದ ಸಾವು ಸಂಭವಿಸಿ ಕನಿಷ್ಠ 2-3 ದಿನಗಳು ಕಳೆದಿರಬಹುದು ಎಂದು ಶಂಕಿಸಲಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 11:36 am, Thu, 7 May 26

Source link

Gold Rates: ಹತ್ತು ಗ್ರಾಮ್ ಚಿನ್ನದ ಬೆಲೆ ಎರಡು ದಿನದಲ್ಲಿ 3,000 ರೂ ಏರಿಕೆ – Kannada News | Gold Price Today on 7th May 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಮೇ 7: ಚಿನ್ನದ ಬೆಲೆ (Gold Rates) ಇವತ್ತೂ ಏರಿಕೆಯಾಗಿದೆ. ನಿನ್ನೆ 195 ರೂನಷ್ಟು ಹೆಚ್ಚಿದ್ದ ಬಂಗಾರದ ದರ ಇವತ್ತು ಗುರುವಾರ 105 ರೂ ಜಿಗಿದಿದೆ. ಎರಡು ದಿನದಲ್ಲಿ ಇದರ ಬೆಲೆಯಲ್ಲಿ ಗ್ರಾಮ್​ಗೆ 300 ರೂನಷ್ಟು ಹೆಚ್ಚಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಸ್ವರ್ಣ ಬೆಲೆ ಹೆಚ್ಚಿದೆ. ಬೆಳ್ಳಿ ಬೆಲೆಯೂ ಸತತ ಎರಡನೇ ಬಾರಿ ಹೆಚ್ಚಳ ಕಂಡಿದೆ. ನಿನ್ನೆ ಗ್ರಾಮ್​ಗೆ 10 ರೂ ಹೆಚ್ಚಿದ್ದ ಅದು ಇವತ್ತು 5 ರೂ ಏರಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,39,750 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,52,460 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 27,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,39,750 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 27,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 27,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮೇ 7ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,246 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,975 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,434 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 270 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,246 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,975 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 270 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,975 ರೂ
  • ಚೆನ್ನೈ: 14,101 ರೂ
  • ಮುಂಬೈ: 13,975 ರೂ
  • ದೆಹಲಿ: 13,990 ರೂ
  • ಕೋಲ್ಕತಾ: 13,975 ರೂ
  • ಕೇರಳ: 13,975 ರೂ
  • ಅಹ್ಮದಾಬಾದ್: 13,980 ರೂ
  • ಜೈಪುರ್: 13,990 ರೂ
  • ಲಕ್ನೋ: 13,990 ರೂ
  • ಭುವನೇಶ್ವರ್: 13,975 ರೂ

ಇದನ್ನೂ ಓದಿ: ಜಾಗತಿಕ ಮಟ್ಟದಲ್ಲಿ ಭಾರತದ ಆರ್ಥಿಕತೆಯ ಜಯಭೇರಿ: ದೇಶದ ಜಿಡಿಪಿ ಪ್ರಗತಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಮೂಡೀಸ್ ಮತ್ತು ಎಡಿಬಿ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 566 ರಿಂಗಿಟ್ (13,710 ರುಪಾಯಿ)
  • ದುಬೈ: 524.50 ಡಿರಾಮ್ (13,548 ರುಪಾಯಿ)
  • ಅಮೆರಿಕ: 146.50 ಡಾಲರ್ (13,898 ರುಪಾಯಿ)
  • ಸಿಂಗಾಪುರ: 185.70 ಸಿಂಗಾಪುರ್ ಡಾಲರ್ (13,899 ರುಪಾಯಿ)
  • ಕತಾರ್: 522.50 ಕತಾರಿ ರಿಯಾಲ್ (13,600 ರೂ)
  • ಸೌದಿ ಅರೇಬಿಯಾ: 534 ಸೌದಿ ರಿಯಾಲ್ (13,505 ರುಪಾಯಿ)
  • ಓಮನ್: 55.40 ಒಮಾನಿ ರಿಯಾಲ್ (13,654 ರುಪಾಯಿ)
  • ಕುವೇತ್: 43.17 ಕುವೇತಿ ದಿನಾರ್ (13,373 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 270 ರೂ
  • ಚೆನ್ನೈ: 275 ರೂ
  • ಮುಂಬೈ: 270 ರೂ
  • ದೆಹಲಿ: 270 ರೂ
  • ಕೋಲ್ಕತಾ: 270 ರೂ
  • ಕೇರಳ: 275 ರೂ
  • ಅಹ್ಮದಾಬಾದ್: 270 ರೂ
  • ಜೈಪುರ್: 270 ರೂ
  • ಲಕ್ನೋ: 270 ರೂ
  • ಭುವನೇಶ್ವರ್: 275 ರೂ
  • ಪುಣೆ: 270

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ದಾಖಲೆ ಮೊತ್ತದ ಒಪ್ಪಂದ: ಪ್ಯಾಟ್ ಕಮ್ಮಿನ್ಸ್‌ಗೆ 27.43 ಕೋಟಿ ರೂ. ಆಫರ್! – Kannada News | Cricket Australia’s 27 Cr ‘Lifeline’ Offer to Pat Cummins

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ (Pat Cummins) ಈಗ ವಿಶ್ವ ಕ್ರಿಕೆಟ್‌ನ ಅತ್ಯಂತ ದುಬಾರಿ ಆಟಗಾರನಾಗುವ ಹಾದಿಯಲ್ಲಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾ (CA) ತನ್ನ ನಾಯಕನನ್ನು ಫ್ರಾಂಚೈಸಿ ಕ್ರಿಕೆಟ್‌ನ ಆಕರ್ಷಣೆಯಿಂದ ಉಳಿಸಿಕೊಳ್ಳಲು ಬರೋಬ್ಬರಿ  27.43 ಕೋಟಿ (5 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್) ವಾರ್ಷಿಕ ವೇತನದ ಬೃಹತ್ ಒಪ್ಪಂದವನ್ನು ಮುಂದಿಟ್ಟಿದೆ ಎಂದು ದಿ ಏಜ್ ವರದಿ ಮಾಡಿದೆ.

ಏನಿದು ‘ಲೈಫ್‌ಲೈನ್’ ಒಪ್ಪಂದ?

ಇತ್ತೀಚಿನ ದಿನಗಳಲ್ಲಿ ಐಪಿಎಲ್‌ನಂತಹ ಖಾಸಗಿ ಲೀಗ್‌ಗಳ ಮಾಲೀಕರು ಅಂತಾರಾಷ್ಟ್ರೀಯ ಆಟಗಾರರಿಗೆ ತಮ್ಮ ಫ್ರಾಂಚೈಸಿಗಳ ಪರವಾಗಿ ಮಾತ್ರ ಆಡಲು ಕೋಟಿಗಟ್ಟಲೆ ಹಣದ ಆಫರ್ ನೀಡುತ್ತಿದ್ದಾರೆ. ವರದಿಗಳ ಪ್ರಕಾರ, ಒಂದು ಐಪಿಎಲ್ ಫ್ರಾಂಚೈಸಿ ಕಮ್ಮಿನ್ಸ್ ಮತ್ತು ಟ್ರಾವಿಸ್ ಹೆಡ್‌ಗೆ ವರ್ಷಕ್ಕೆ ಸುಮಾರು ₹58 ಕೋಟಿ ನೀಡಲು ಮುಂದಾಗಿತ್ತು. ಇಂತಹ ಆಮಿಷಗಳನ್ನು ತಡೆಯಲು ಕ್ರಿಕೆಟ್ ಆಸ್ಟ್ರೇಲಿಯಾ ಈ 2029ರವರೆಗಿನ ದೀರ್ಘಾವಧಿಯ ಒಪ್ಪಂದವನ್ನು ರೂಪಿಸಿದೆ.

ಕಮಿನ್ಸ್-ಸಿಎ​ ಒಪ್ಪಂದದ ಮುಖ್ಯಾಂಶಗಳು:

  • ವಾರ್ಷಿಕ ವೇತನ: ಸುಮಾರು ₹27.43 ಕೋಟಿ (ಒಂದು ವೇಳೆ ಅವರು ಒಪ್ಪಂದಕ್ಕೆ ಸಹಿ ಹಾಕಿದರೆ).
  • ಅವಧಿ: 2026 ರಿಂದ 2029 ರವರೆಗೆ ಈ ಒಪ್ಪಂದ ಜಾರಿಯಲ್ಲಿರಲಿದೆ.
  • ಉದ್ದೇಶ: ಆಸ್ಟ್ರೇಲಿಯಾ ರಾಷ್ಟ್ರೀಯ ತಂಡಕ್ಕಾಗಿ ಆಡುವುದನ್ನು ಪ್ರಥಮ ಆದ್ಯತೆಯಾಗಿರಿಸುವುದು.

ಪ್ಯಾಟ್ ಕಮ್ಮಿನ್ಸ್ ಬೇಡಿಕೆ ಹೆಚ್ಚಲು ಕಾರಣವೇನು?

ಪ್ಯಾಟ್ ಕಮ್ಮಿನ್ಸ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡವು ಕಳೆದ ಎರಡು ವರ್ಷಗಳಲ್ಲಿ ಅದ್ಭುತ ಸಾಧನೆ ಮಾಡಿದೆ. ಆ ಸಾಧನೆಗಳಾವುವು ಎಂದು ನೋಡುವುದಾದರೆ…

  1. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಜಯ.
  2. ಏಕದಿನ ವಿಶ್ವಕಪ್ 2023 ವಿಜೇತ ನಾಯಕ.
  3. ಆ್ಯಶಸ್ ಸರಣಿ ಉಳಿಸಿಕೊಳ್ಳುವಲ್ಲಿ ಯಶಸ್ಸು.
  4. ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಫೈನಲ್‌ಗೆ ಮುನ್ನಡೆಸಿದ್ದು.

ಇದನ್ನೂ ಓದಿ: RCB ವಿರುದ್ಧದ ಪಂದ್ಯಕ್ಕೆ ಇಬ್ಬರು ಸ್ಟಾರ್ ಆಟಗಾರರು ಡೌಟ್..!

ವಿಶ್ವ ದಾಖಲೆಯ ಒಪ್ಪಂದ:

ಕ್ರಿಕೆಟ್ ಇತಿಹಾಸದಲ್ಲೇ ಯಾವುದೇ ಆಟಗಾರ ವಾರ್ಷಿಕ ವೇತನವಾಗಿ ಇಷ್ಟೊಂದು ಮೊತ್ತ ಪಡೆದಿಲ್ಲ. ಭಾರತೀಯ ಕ್ರಿಕೆಟಿಗರಿಗೆ ಬಿಸಿಸಿಐ ನೀಡುವ ಗರಿಷ್ಠ ವಾರ್ಷಿಕ ಒಪ್ಪಂದ 5 ಕೋಟಿ ರೂ. ಮಾತ್ರ. ಆದರೆ ಇದೀಗ ಪ್ಯಾಟ್ ಕಮಿನ್ಸ್​​ಗೆ ಬರೋಬ್ಬರಿ 27.43 ಕೋಟಿ ರೂ. ನೀಡಲು ಕ್ರಿಕೆಟ್ ಆಸ್ಟ್ರೇಲಿಯಾ ಮುಂದಾಗಿದೆ.

ಐಪಿಎಲ್ ಮತ್ತು ಇತರ ಲೀಗ್‌ಗಳ ಗಳಿಕೆ:

ಪ್ಯಾಟ್ ಕಮ್ಮಿನ್ಸ್ ಈಗಾಗಲೇ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದಿಂದ ₹18 ಕೋಟಿ ಪಡೆಯುತ್ತಿದ್ದಾರೆ. ಇದರ ಜೊತೆಗೆ ಅಮೆರಿಕದ ಮೇಜರ್ ಲೀಗ್ ಕ್ರಿಕೆಟ್ (MLC) ನಲ್ಲೂ ಅವರು ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ಪರ ದೀರ್ಘಾವಧಿಯ ಒಪ್ಪಂದ ಮಾಡಿಕೊಂಡಿದ್ದಾರೆ.  ಇದೀಗ ಕ್ರಿಕೆಟ್ ಆಸ್ಟ್ರೇಲಿಯಾ ಜೊತೆ ಹೊಸ ಒಪ್ಪಂದ ಮಾಡಿದರೆ, ಅವರ ವಾರ್ಷಿಕ ಆದಾಯ 50 ಕೋಟಿ ರೂ. ದಾಟಲಿದೆ.

ಇದರೊಂದಿಗೆ ಕ್ರಿಕೆಟ್ ಇತಿಹಾಸದಲ್ಲೇ ವಾರ್ಷಿಕ ಒಪ್ಪಂದದ ಮೂಲಕ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರನಾಗಿ ಪ್ಯಾಟ್ ಕಮಿನ್ಸ್ ಹೊರಹೊಮ್ಮಲಿದ್ದಾರೆ.

Source link

Exit mobile version