ಸಿಎಂ ಸ್ಥಾನಕ್ಕೆ ಮಮತಾ ಬ್ಯಾನರ್ಜಿ ರಾಜೀನಾಮೆ ಕೊಡದಿದ್ದರೆ ಪಶ್ಚಿಮ ಬಂಗಾಳದಲ್ಲಿ ಏನಾಗುತ್ತದೆ? – Kannada News | Mamata banerjee refuses to resign as chief minister what happens next in west bengal

ಕೊಲ್ಕತ್ತಾ, ಮೇ 5: ಬಂಗಾಳದಲ್ಲಿ ಮಮತಾ ಬ್ಯಾನರ್ಜಿ (Mamata Banerjee) ಬಿಜೆಪಿಯ ಗೆಲುವು ಅನೈತಿಕ ಎಂದು ಆರೋಪಿಸಿದ್ದಾರೆ. ಬಿಜೆಪಿ 100 ಸ್ಥಾನಗಳನ್ನು ಕದ್ದಿದೆ. ನೈತಿಕವಾಗಿ ನಾವೇ ಗೆದ್ದಿದ್ದೇವೆ. ಹೀಗಾಗಿ, ರಾಜಭವನಕ್ಕೆ ಹೋಗೋ ಮಾತೇ ಇಲ್ಲ, ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಮಮತಾ ಬ್ಯಾನರ್ಜಿ ಬಿಜೆಪಿಗೆ ಹೊಸ ಶಾಕ್ ನೀಡಿದ್ದಾರೆ. ಹಾಗಾದರೆ, ಮಮತಾ ಬ್ಯಾನರ್ಜಿ ಅವರ ಈ ನಿರ್ಧಾರದಿಂದಾಗಿ ಪಶ್ಚಿಮ ಬಂಗಾಳದ (West Bengal) ರಾಜಕೀಯದಲ್ಲಿ ಏನಾಗಬಹುದು?

ಮಮತಾ ಬ್ಯಾನರ್ಜಿ ಅವರಿಗೆ ಈ ಬಾರಿಯ ಚುನಾವಣೆ ನೀಡಿರುವ ಏಟು ಅಂತಿಂಥದ್ದಲ್ಲ. 15 ವರ್ಷ ಅಧಿಕಾರದಲ್ಲಿದ್ದ ಪಕ್ಷವಾದ ಟಿಎಂಸಿ ಹೀನಾಯವಾಗಿ ಸೋತಿದೆ. ತಮ್ಮ ಭದ್ರಕೋಟೆಯಾಗಿದ್ದ ಭವಾನಿಪುರದಲ್ಲಿ ತಮ್ಮ ಸ್ಥಾನವನ್ನು ಕೂಡ ಉಳಿಸಿಕೊಳ್ಳಲು ದೀದಿಗೆ ಸಾಧ್ಯವಾಗಲಿಲ್ಲ. ತಮ್ಮ ಪಕ್ಷದ ಗೆಲುವು ಹಾಗಿರಲಿ ತಮ್ಮ ಕ್ಷೇತ್ರದಲ್ಲೇ ಸಿಎಂ ಮಮತಾ ಬ್ಯಾನರ್ಜಿ ಗೆಲ್ಲಲಾಗದೆ ಮುಖಭಂಗ ಅನುಭವಿಸಿದರು. ಮಮತಾ ಬ್ಯಾನರ್ಜಿ ಈಗ ಶಾಸಕಿಯೂ ಅಲ್ಲ, ಮುಖ್ಯಮಂತ್ರಿಯೂ ಅಲ್ಲ. ಸರ್ಕಾರದ ಪತನವಾದ ಕೂಡಲೆ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು ಎಂದು ಕಾನೂನು ಹೇಳುತ್ತದೆ. ಆದರೆ, ಮಮತಾ ಬ್ಯಾನರ್ಜಿ ಮಾತ್ರ ಅದಕ್ಕೆ ಒಪ್ಪುತ್ತಿಲ್ಲ.

ಇದನ್ನೂ ಓದಿ: ನಾವು ಸೋತಿಲ್ಲ, ರಾಜೀನಾಮೆ ನೀಡೋ ಮಾತೇ ಇಲ್ಲ; ಹೊಸ ಬಾಂಬ್ ಸಿಡಿಸಿದ ಸಿಎಂ ಮಮತಾ ಬ್ಯಾನರ್ಜಿ

ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೂ ರಾಜ್ಯಪಾಲರು ಮುಂದಿನ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಯಾರಿಗೆ ಆಹ್ವಾನ ನೀಡಬೇಕೆಂಬುದರ ನಿರ್ಧಾರ ತೆಗೆದುಕೊಳ್ಳಬಹುದು. “ಸಂವಿಧಾನದ 164ನೇ ವಿಧಿಯು ರಾಜ್ಯಪಾಲರು ಮುಖ್ಯಮಂತ್ರಿಗೆ ಪ್ರಮಾಣ ವಚನ ಬೋಧಿಸಬೇಕು ಎಂದು ಹೇಳುತ್ತದೆ. ಈ ಸಂದರ್ಭದಲ್ಲಿ, ಚುನಾವಣಾ ಫಲಿತಾಂಶಗಳು ಪ್ರಕಟವಾದ ನಂತರ ನಿರ್ಗಮಿತ ಸಚಿವ ಸಂಪುಟದ ಅವಧಿ ಕೊನೆಗೊಳ್ಳುತ್ತದೆ. ಸಂಪ್ರದಾಯದ ಪ್ರಕಾರ ಅವರು ತಮ್ಮ ರಾಜೀನಾಮೆಗಳನ್ನು ಸಲ್ಲಿಸಿದ ನಂತರ ನಿರ್ಗಮಿತ ಮುಖ್ಯಮಂತ್ರಿಯನ್ನು ಈ ಎರಡು ಅಥವಾ ಮೂರು ದಿನಗಳವರೆಗೆ ಹಂಗಾಮಿ ಮುಖ್ಯಮಂತ್ರಿಯಾಗಿ ನೇಮಿಸಲಾಗುತ್ತದೆ. ಆದರೆ, ಮಮತಾ ಬ್ಯಾನರ್ಜಿ ರಾಜೀನಾಮೆ ನೀಡದಿದ್ದರೂ ಯಾವುದೇ ಸಮಸ್ಯೆ ಇಲ್ಲ. ರಾಜ್ಯಪಾಲರು ಮುಂದಿನ ನಿರ್ಧಾರ ತೆಗೆದುಕೊಳ್ಳಲು ಅವಕಾಶ ಇರುತ್ತದೆ” ಎಂದು ಮಾಜಿ ನ್ಯಾಯಮೂರ್ತಿ ದೇಬಾಶಿಶ್ ಕರ್ಗುಪ್ತ ಹೇಳಿದ್ದಾರೆ.

17ನೇ ಪಶ್ಚಿಮ ಬಂಗಾಳ ವಿಧಾನಸಭೆಯ ಅವಧಿ ಮೇ 7ರಂದು ಕೊನೆಗೊಳ್ಳುತ್ತದೆ. ಇದು 2021ರಲ್ಲಿ ಪ್ರಾರಂಭವಾದ ಮಮತಾ ಬ್ಯಾನರ್ಜಿ ಅವರ 5 ವರ್ಷಗಳ ಅಧಿಕಾರಾವಧಿಯ ಅಂತ್ಯವನ್ನು ಸೂಚಿಸುತ್ತದೆ. ಕಾನೂನಿನ ಪ್ರಕಾರ ಯಾವುದೇ ಸರ್ಕಾರ 5 ವರ್ಷಗಳಿಗಿಂತ ಹೆಚ್ಚು ಕಾಲ ಅಧಿಕಾರದಲ್ಲಿ ಇರಲು ಅಸಾಧ್ಯ. ಹೀಗಾಗಿ, ಮಮತಾ ಬ್ಯಾನರ್ಜಿ ರಾಜೀನಾಮೆ ನೀಡದಿದ್ದರೂ ರಾಜ್ಯಪಾಲರಿಗೆ ಆ ಸರ್ಕಾರವನ್ನು ವಜಾಗೊಳಿಸಿ, ನೂತನ ಸರ್ಕಾರ ರಚನೆಗೆ ಅನುಮತಿ ನೀಡುವ ಅಧಿಕಾರವಿದೆ. ಹೀಗಾಗಿ, ದೀದಿಯ ಈ ನಿರ್ಧಾರದಿಂದ ಬಿಜೆಪಿ ಸರ್ಕಾರ ರಚನೆಗೆ ಯಾವುದೇ ಕಾನೂನು ತೊಡಕುಗಳು ಆಗುವ ಸಾಧ್ಯತೆ ಕಡಿಮೆ.

ಇದನ್ನೂ ಓದಿ: ಮಮತಾ ಬ್ಯಾನರ್ಜಿ ನಿವಾಸದ ಹೊರಗೆ ಬಿಜೆಪಿ ಬೆಂಬಲಿಗರಿಂದ ಜೈ ಶ್ರೀ ರಾಮ್ ಘೋಷಣೆ

ಏಕೆಂದರೆ, ಮುಖ್ಯಮಂತ್ರಿಯಾಗಿ ಅಧಿಕಾರವನ್ನು ಮುಂದುವರಿಸಲು, ಮಮತಾ ಬ್ಯಾನರ್ಜಿ ವಿಧಾನಸಭೆಯಲ್ಲಿ ಬಹುಮತವನ್ನು ಸಾಬೀತುಪಡಿಸಬೇಕಾಗುತ್ತದೆ. ಪಶ್ಚಿಮ ಬಂಗಾಳದ ರಾಜ್ಯ ವಿಧಾನಸಭೆಯಲ್ಲಿ 207 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಸ್ಪಷ್ಟ ಬಹುಮತ ಹೊಂದಿದ್ದರೆ ಟಿಎಂಸಿ ಕೇವಲ 80 ಸ್ಥಾನಗಳನ್ನು ಪಡೆದಿದೆ. ಹೀಗಾಗಿ, ಟಿಎಂಸಿ ಮತ್ತೆ ಅಧಿಕಾರಕ್ಕೆ ಬರುವುದು ಅಸಾಧ್ಯವಾದ ಸಂಗತಿ.

ಈ ನಡುವೆ, ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿ ಸರ್ಕಾರ ರಚಿಸಲಿರುವ ಬಿಜೆಪಿ ಮುಂದಿನ ಮುಖ್ಯಮಂತ್ರಿ ಮತ್ತು ರಾಜ್ಯ ಕ್ಯಾಬಿನೆಟ್ ಸಚಿವರಿಗೆ ಪಶ್ಚಿಮ ಬಂಗಾಳದಲ್ಲಿ ಮೇ 9ರ ಶನಿವಾರ ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಅವರ ಜನ್ಮ ದಿನಾಚರಣೆಯಂದೇ ಪ್ರಮಾಣ ವಚನ ಸಮಾರಂಭವನ್ನು ಏರ್ಪಡಿಸಲು ನಿರ್ಧರಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗರ್ಭಾವಸ್ಥೆಯಲ್ಲಿ ಹೀಟ್ ಸ್ಟ್ರೋಕ್ ಅಪಾಯ: ಮಗುವಿನ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆಯೇ? – Kannada News | Extreme Heat in Pregnancy: Links to Neurodevelopmental Outcomes

ದೇಶದ ಹಲವೆಡೆ ಉಷ್ಣತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗರ್ಭಿಣಿಯರು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ. ಹೀಟ್ ಸ್ಟ್ರೋಕ್ (Heat Stroke) ಬಗ್ಗೆ ನೀವು ಕೇಳಿರಬಹುದು ಇದು ದೇಹದ ಉಷ್ಣಾಂಶವು ಅತಿಯಾಗಿ ಏರಿಕೆಯಾಗುವ ಸ್ಥಿತಿಯಾಗಿದ್ದು ದೀರ್ಘಕಾಲ ಬಿಸಿಲಿನಲ್ಲಿ ಇರುವುದು ಈ ಸಮಸ್ಯೆಗೆ ಕಾರಣವಾಗುತ್ತದೆ. ಜೊತೆಗೆ ಈ ರೀತಿಯಾದಾಗ ದೇಹವು ತಾನೇ ತಣ್ಣಗಾಗಲು ಸಾಧ್ಯವಾಗುವುದಿಲ್ಲ. ತೀವ್ರ ಜ್ವರ, ತಲೆಸುತ್ತು, ದೌರ್ಬಲ್ಯ ಕಾಣಿಸಿಕೊಳ್ಳಬಹುದು. ಈ ರೀತಿ ಬೇಸಿಗೆಯಲ್ಲಿ ಉಂಟಾಗುವ ಹೀಟ್ ಸ್ಟ್ರೋಕ್ ಗರ್ಭಿಣಿಯರಿಗೆ ಮಾತ್ರವಲ್ಲದೆ ಗರ್ಭದಲ್ಲಿರುವ ಮಗುವಿನ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹಾಗಾದರೆ ಗರ್ಭಾವಸ್ಥೆಯಲ್ಲಿ ಹೀಟ್ ಸ್ಟ್ರೋಕ್ ಉಂಟಾದರೆ ಶಿಶುವಿನ ಮೆದುಳಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆಯೇ, ಯಾವ ರೀತಿ ಮೆನ್ನೆಚ್ಚರಿಕೆ ವಹಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮಗುವಿನ ಮೆದುಳಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ತಜ್ಞರ ಪ್ರಕಾರ, ಗರ್ಭಾವಸ್ಥೆಯಲ್ಲಿ ಹೀಟ್ ಸ್ಟ್ರೋಕ್ ಉಂಟಾದರೆ ಗರ್ಭದಲ್ಲಿರುವ ಶಿಶುವಿನ ಮೆದುಳಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ದೇಹದ ಹೆಚ್ಚಿನ ತಾಪಮಾನವು ಕೋಶಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದರಿಂದ ಮಕ್ಕಳಲ್ಲಿ ನ್ಯೂರೋಲಾಜಿಕಲ್ ಸಮಸ್ಯೆಗಳ ಅಪಾಯ ಹೆಚ್ಚಾಗಬಹುದು. ಆದರೆ ಇದು ಎಲ್ಲ ಪ್ರಕರಣಗಳಲ್ಲೂ ಕಂಡುಬರುವುದಿಲ್ಲ. ದೀರ್ಘಕಾಲ ಬಿಸಿಲಿನಲ್ಲಿ ಕೆಲಸ ಮಾಡುವ ಅಥವಾ ಹೊರಗಡೆ ಹೆಚ್ಚು ಸಮಯ ಕಳೆಯುವ ಗರ್ಭಿಣಿಯರಲ್ಲಿ ಈ ಅಪಾಯ ಹೆಚ್ಚಾಗಿರುತ್ತದೆ. ಜೊತೆಗೆ ಈಗಾಗಲೇ ಆರೋಗ್ಯ ಸಮಸ್ಯೆ ಇರುವ ಮಹಿಳೆಯರು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಡಿಹೈಡ್ರೇಶನ್‌ನಿಂದ ಆರಂಭವಾಗಿ ನಂತರ ಹೀಟ್ ಸ್ಟ್ರೋಕ್ ಉಂಟಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಬೆಳಿಗ್ಗೆ ಮಾತ್ರವಲ್ಲ ರಾತ್ರಿ ಸಮಯದಲ್ಲೂ ಹೀಟ್ ಸ್ಟ್ರೋಕ್ ಅಪಾಯ ತಪ್ಪಿದ್ದಲ್ಲ: ತಜ್ಞರಿಂದ ಎಚ್ಚರಿಕೆ

ಹೇಗೆ ಮುನ್ನೆಚ್ಚರಿಕೆ ವಹಿಸಬೇಕು?

ಗರ್ಭಿಣಿಯರು ದಿನಕ್ಕೆ ಕನಿಷ್ಠ 7– 8 ಗ್ಲಾಸ್ ನೀರು ಕುಡಿಯಬೇಕು. ಜೊತೆಗೆ ಎಳನೀರು, ಮಜ್ಜಿಗೆ ಮತ್ತು ಅಗತ್ಯವಿದ್ದರೆ ವೈದ್ಯರ ಸಲಹೆಯಂತೆ ಓಆರ್‌ಎಸ್ ಸೇವಿಸಬಹುದು. ತೀವ್ರ ಬಿಸಿಲಿನಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಿ, ಹಗುರವಾದ ಬಟ್ಟೆಗಳನ್ನು ಧರಿಸುವುದು ಉತ್ತಮ. ದೇಹವನ್ನು ತಣ್ಣಗಿರಿಸಲು ಸಾಕಷ್ಟು ವಿಶ್ರಾಂತಿ ಪಡೆಯುವುದು ಅಗತ್ಯ. ಗರ್ಭಾವಸ್ಥೆಯಲ್ಲಿ ಹೀಟ್ ಸ್ಟ್ರೋಕ್ ಅಪಾಯವನ್ನು ನಿರ್ಲಕ್ಷ್ಯ ಮಾಡಬಾರದು. ಸರಿಯಾದ ಜಾಗೃತಿ, ಹೈಡ್ರೇಶನ್ ಮತ್ತು ಮುನ್ನೆಚ್ಚರಿಕೆ ಕ್ರಮಗಳಿಂದ ತಾಯಿ ಮತ್ತು ಮಗುವಿನ ಆರೋಗ್ಯವನ್ನು ಸುರಕ್ಷಿತವಾಗಿ ಕಾಪಾಡಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೌದ್ಧ ಸನ್ಯಾಸಿ ಕೊಲೆ ಪ್ರಕರಣ ಭೇದಿಸಿದ ಧಾರವಾಡ ಪೊಲೀಸರು – Kannada News | Tibetan buddhist monk Murder Case: Accused Arrested By Dharwad Police

ಧಾರವಾಡ, (ಮೇ 05): ಧಾರವಾಡ ಬೈಪಾಸ್ ಬಳಿ ಏಪ್ರಿಲ್ 28ರಂದು ಟಿಬೆಟಿಯನ್ ಮೂಲದ ಬೌದ್ಧ ಸನ್ಯಾಸಿ ತಾಶಿ ಧೊಂದೂಪ ನಿಗೂಢ ಸಾವು ಪ್ರಕರಣವನ್ನು (Tibetan buddhist monk Murder Case) ಪೊಲೀಸರು ಭೇದಿಸಿದ್ದಾರೆ. ಸಣ್ಣ ಮಾಹಿತಿಯೂ ಇಲ್ಲದಿದ್ದರೂ ಪ್ರರಕಣದ ಬೆನ್ನು ಬಿದ್ದ ಧಾರವಾಡ (Dharwad)  ಗ್ರಾಮೀಣ ಪೊಲೀಸರು ಹಂತಕರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಹಣಕ್ಕಾಗಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಆರಂಭದಲ್ಲಿ ಅಪಘಾತದಿಂದ ಈ ಸಾವಾಗಿರಬಹುದು ಅಂದುಕೊಂಡ ಪೊಲೀಸರಿಗೆ ಮುಖದ ಮೇಲಿನ ಗಾಯದಿಂದ ಅನುಮಾನ ಮೇಲೆ ತನಿಖೆ ನಡೆಸಿದಾಗ ಕೊಲೆ ಎನ್ನುವುದು ಗೊತ್ತಾಗಿದ್ದು, ಇದೀಗ ಮೂವರನ್ನು ಬಂಧಿಸಿದ್ದಾರೆ. ಯಾದವ್(24), ವೈಭವ್ ಚವ್ಹಾಣ(30) ಮತ್ತು ಸಿದ್ಧೇಶ ಭೋಸ್ಲೆ(18) ಬಂಧಿತರು.

ಮುಂಡಗೋಡದಿಂದ ಧಾರವಾಡದ ಮೂಲಕ ಕೊಲ್ಹಾಪುರದ ಕಡೆಗೆ ಕಾರೊಂದು ಹೋಗಿರೋದು ಗೊತ್ತಾಗಿದ್ದು, ಒಂದೆರಡು ಕಡೆ ಸಿಸಿಟಿವಿ ಪರಿಶೀಲಿಸಿದಾಗ ಕಾರಿನ ನಂಬರ್ ಸ್ಪಷ್ಟವಾಗಿ ಕಂಡಿಲ್ಲ. ಆದರೆ ಮುಂಡಗೋಡದ ಬಳಿ ಬಂಕ್ ನಲ್ಲಿ ಸಿಎನ್​​ ಜಿ ತುಂಬಿಸಿಕೊಳ್ಳಲು ಕಾರಿನಿಂದ ಇಳಿದಾಗ ಹಂತಕರು ಸಿಸಿಟಿವಿಯಲ್ಲಿ ಸೆರೆಯಾಗಿದ್ದಾರೆ. ಇದರ ಜಾಡು ಹಿಡಿದು ಹೊರಟ ಪೊಲೀಸರು, ಹಂತಕರನ್ನು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಬಂಧಿಸಿದ್ದಾರೆ. ಕೊಲ್ಹಾಪುರ ಸಂಕೇತ ಯಾದವ್(24), ವೈಭವ್ ಚವ್ಹಾಣ(30) ಮತ್ತು ಸಿದ್ಧೇಶ ಭೋಸ್ಲೆ(18) ಅನ್ನೋ ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನಿಬ್ಬರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಧಾರವಾಡದಲ್ಲಿ ಬೌದ್ಧ ಸನ್ಯಾಸಿಯ ನಿಗೂಢ ಸಾವು: ಮೃತದೇಹ ಪತ್ತೆ

ಹಣಕ್ಕಾಗಿ ಅಪಹರಿಸಿ ಕೊಲೆ

ಅಷ್ಟಕ್ಕೂ ಈ ಕೊಲೆಗೆ ಕಾರಣ ಹಣ. ಬೌದ್ಧ ಸನ್ಯಾಸಿಗಳ ಬಳಿ ಸಾಕಷ್ಟು ಹಣವಿರುತ್ತೆ ಅಂದುಕೊಂಡಿದ್ದ ಹಂತಕರು ತಾಶಿ ಧೊಂದೂಪರನ್ನು ಅವರು ವಾಕಿಂಗ್ ಮಾಡೋ ಸಂದರ್ಭದಲ್ಲಿ ಮುಂಡಗೋಡದಲ್ಲಿಯೇ ಕಿಡ್ನಾಪ್ ಮಾಡಿದ್ದರು. ಬಳಿಕ ಅವರಿಗೆ ಸಾಕಷ್ಟು ಹಿಂಸೆ ಕೊಟ್ಟು ಹಣ ಕೊಡುವಂತೆ ಪೀಡಿಸಿದ್ದರು. ಆದ್ರೆ, ಹಣವಿಲ್ಲದಿದ್ದಾಗ ಕಾರಿನಲ್ಲಿಯೇ ಸನ್ಯಾಸಿ ಮೇಲೆ ಹಲ್ಲೆ ಮಾಡಿದ್ದಾರೆ. ಪರಿಣಾಮ ಸನ್ಯಾಸಿ ಕಾರಿನಲ್ಲೇ ಸಾವನ್ನಪ್ಪಿದ್ದಾರೆ. ಬಳಿಕ ಶವವನ್ನು ಕಾರಿನಲ್ಲಿ ಇಟ್ಟುಕೊಂಡು ಕೊಲ್ಹಾಪುರದತ್ತ ತೆರಳಿದ್ದಾರೆ. ಆದ್ರೆ, ಅದೇನು ತಿಳಿತೋ ಏನೋ ಮಾರ್ಗ ಮಧ್ಯೆ ಧಾರವಾಡ ಬಳಿ ಶವವನ್ನು ಎಸೆದು ಪರಾರಿಯಾಗಿದ್ದರು.

ಮುಂಡಗೋಡದಿಂದ ಕೊಲ್ಹಾಪುರದವರೆಗೆ ವಾರದವರೆಗೆ ಓಡಾಡಿದ ಪೊಲೀಸರು ಎಲ್ಲ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ, ಕೊನೆಗೂ ಹಂತಕರನ್ನು ಲಾಕ್ ಮಾಡಿದ್ದಾರೆ. ತ್ವರಿತಗತಿಯಲ್ಲಿ ಪೊಲೀಸರು ಈ ಪ್ರಕರಣವನ್ನು ಭೇದಿಸಿದ್ದು, ಇದೀಗ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 6:10 pm, Tue, 5 May 26

Source link

DC vs CSK IPL 2026 Live Score: ಕ್ಯಾಪಿಟಲ್ಸ್​​ಗೆ ಸೂಪರ್ ಕಿಂಗ್ಸ್​ ಸವಾಲು

ಇಂಡಿಯನ್ ಪ್ರೀಮಿಯರ್ ಲೀಗ್​ನ 48ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಉಭಯ ತಂಡಗಳ ಪಾಲಿಗೆ ನಿರ್ಣಾಯಕ. ಏಕೆಂದರೆ ಎರಡೂ ತಂಡಗಳು ಪ್ಲೇಆಫ್​ ರೇಸ್​ನಲ್ಲಿದ್ದು, ಇಂದಿನ ಮ್ಯಾಚ್​ನಲ್ಲಿ ಗೆಲ್ಲುವ ಮೂಲಕ ಅಂಕ ಪಟ್ಟಿಯಲ್ಲಿ ಮೇಲೇರುವ ವಿಶ್ವಾಸದಲ್ಲಿದೆ.

ಉಭಯ ತಂಡಗಳು ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ ಈವರೆಗೆ 32 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಚೆನ್ನೈ ಸೂಪರ್ ಕಿಂಗ್ಸ್​ 20 ಬಾರಿ ಗೆದ್ದಿದೆ. ಇನ್ನು 12 ಮ್ಯಾಚ್​​ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆದ್ದಿದೆ. ಅಂದರೆ ಅಂಕಿ ಅಂಶಗಳ ಪ್ರಕಾರ ಚೆನ್ನೈ ಸೂಪರ್ ಕಿಂಗ್ಸ್​ ಮೇಲುಗೈ ಹೊಂದಿದೆ. ಆದರೆ ಪ್ರಸ್ತುತ ಫಾರ್ಮ್​ ಗಮನಿಸಿದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ. ಹೀಗಾಗಿ ಇಂದಿನ ಮ್ಯಾಚ್​ನಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

ಡೆಲ್ಲಿ ಕ್ಯಾಪಿಟಲ್ಸ್ ತಂಡ: ಅಕ್ಷರ್ ಪಟೇಲ್ (ನಾಯಕ) ನಿತೀಶ್ ರಾಣಾ, ಅಭಿಷೇಕ್ ಪೊರೆಲ್, ಅಜಯ್ ಮಂಡಲ್, ಅಶುತೋಷ್ ಶರ್ಮಾ, ದುಷ್ಮಂತ ಚಮೀರಾ, ಕರುಣ್ ನಾಯರ್, ಕೆಎಲ್ ರಾಹುಲ್, ಕುಲದೀಪ್ ಯಾದವ್, ಮಾಧವ್ ತಿವಾರಿ, ಮಿಚೆಲ್ ಸ್ಟಾರ್ಕ್, ಸಮೀರ್ ರಿಝ್ವಿ, ಟಿ ನಟರಾಜನ್, ತ್ರಿಪುರಾಣ ವಿಜಯ್, ಟ್ರಿಸ್ಟನ್ ಸ್ಟಬ್ಸ್, ವಿಪ್ರಾಜ್ ನಿಗಮ್, ಡೇವಿಡ್ ಮಿಲ್ಲರ್, ಬೆನ್ ಡಕೆಟ್, ಆಖಿಬ್ ನಬಿ, ಪಾತುಮ್ ನಿಸ್ಸಾಂಕಾ, ಲುಂಗಿ ಎನ್‌ಗಿಡಿ, ಸಾಹಿಲ್ ಪರಾಖ್, ಪೃಥ್ವಿ ಶಾ, ಕೈಲ್ ಜೇಮಿಸನ್.

ಚೆನ್ನೈ ಸೂಪರ್ ಕಿಂಗ್ಸ್ ತಂಡ: ರುತುರಾಜ್ ಗಾಯಕ್‌ವಾಡ್ (ನಾಯಕ), ಆಯುಷ್ ಮ್ಹಾತ್ರೆ, ಎಂಎಸ್ ಧೋನಿ, ಸಂಜು ಸ್ಯಾಮ್ಸನ್, ಡೆವಾಲ್ಡ್ ಬ್ರೆವಿಸ್, ಉರ್ವಿಲ್ ಪಟೇಲ್, ಶಿವಂ ದುಬೆ, ಜೇಮಿ ಓವರ್‌ಟನ್, ರಾಮಕೃಷ್ಣ ಘೋಷ್, ನೂರ್ ಅಹ್ಮದ್, ಖಲೀಲ್ ಅಹ್ಮದ್, ಅನ್ಶುಲ್ ಕಂಬೋಜ್, ಗುರ್ಜಪ್ನೀತ್ ಸಿಂಗ್, ಶ್ರೇಯಸ್ ಗೋಪಾಲ್, ಮುಖೇಶ್ ಚೌಧರಿ, ನಾಥನ್ ಎಲ್ಲಿಸ್, ಅಕೇಲ್ ಹೊಸೈನ್, ಪ್ರಶಾಂತ್ ವೀರ್, ಕಾರ್ತಿಕ್ ಶರ್ಮಾ, ಮ್ಯಾಥ್ಯೂ ಶಾರ್ಟ್, ಅಮನ್ ಖಾನ್, ಸರ್ಫರಾಝ್ ಖಾನ್, ಮ್ಯಾಟ್ ಹೆನ್ರಿ, ರಾಹುಲ್ ಚಹರ್, ಝಾಕ್ ಫೌಲ್ಕ್ಸ್.

 

Source link

ಅಂಚೆ ಮತಪತ್ರ ತಿದ್ದುಪಡಿ ಆರೋಪ: ಬಿಜೆಪಿಯ ಡಿ.ಎನ್. ಜೀವರಾಜ್ ವಿರುದ್ಧದ ಕೇಸ್​​ಗೆ ತಾತ್ಕಾಲಿಕ ತಡೆ – Kannada News | Sringeri Postal Ballot Tampering Allegations: High Court Temporarily Stays FIR Against BJP’s D.N. Jeevaraj

ಡಿ.ಎನ್. ಜೀವರಾಜ್ ವಿರುದ್ಧದ ಕೇಸ್​​ಗೆ ತಾತ್ಕಾಲಿಕ ತಡೆ

ಬೆಂಗಳೂರು/ಚಿಕ್ಕಮಗಳೂರು, ಮೇ 05: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ವೇಳೆ ಮತಪತ್ರಗಳಲ್ಲಿ ತಿದ್ದುಪಡಿ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ವಿರುದ್ಧ ದಾಖಲಾದ ಪ್ರಕರಣದ ತನಿಖೆಗೆ ಕರ್ನಾಟಕ ಹೈಕೋರ್ಟ್ ಮಂಗಳವಾರ ತಾತ್ಕಾಲಿಕ ತಡೆ ನೀಡಿದೆ. ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ರಜಾ ಪೀಠ, ಪ್ರಾಥಮಿಕವಾಗಿ ಎಫ್‌ಐಆರ್‌ಗೆ ತಡೆ ನೀಡಬೇಕು ಎಂಬ ಅಭಿಪ್ರಾಯದಲ್ಲಿದ್ದೇವೆ. ರಾಜಕೀಯ ಒತ್ತಡದಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಬಾರದು. ಇದು ಕಾನೂನು ಪ್ರಕ್ರಿಯೆಯ ದುರುಪಯೋಗ, ಎಂದು ಅಭಿಪ್ರಾಯಪಟ್ಟಿದೆ. ಮುಂದಿನ ವಿಚಾರಣೆಯನ್ನು ಮೇ 7ಕ್ಕೆ ಮುಂದೂಡಿದೆ.

  • ಶೃಂಗೇರಿ ವಿಧಾನಸಭಾ ಚುನಾವಣೆ ಅಂಚೆಮತಗಳ ಮರುಎಣಿಕೆ ವಿವಾದ
  • ಮರುಎಣಿಕೆ ವೇಳೆ ಅಂಚೆ ಮತಪತ್ರಗಳಲ್ಲಿ ತಿದ್ದುಪಡಿ ನಡೆಸಿದ ಆರೋಪ
  • ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ವಿರುದ್ಧದ ಕೇಸ್​​ಗೆ ತಾತ್ಕಾಲಿಕ ತಡೆ

ಇದನ್ನೂ ಓದಿ: ಮತಗಳ ಮರುಎಣಿಕೆ ಬಗ್ಗೆ ಬಿಜೆಪಿ ಶಾಸಕ ಜೀವರಾಜ್ ಬಿಚ್ಚಿಟ್ಟ ರಹಸ್ಯ ಕೇಳಿ

ಸರ್ಕಾರದ ವಿಶೇಷ ಸಾರ್ವಜನಿಕ ಅಭಿಯೋಜಕ ಬಿ.ಎ. ಬೆಳ್ಳಿಯಪ್ಪ, ಅಂಚೆ ಮತಪತ್ರಗಳಲ್ಲಿ ಡಬಲ್ ಟಿಕ್ ಗುರುತು ಕಂಡುಬಂದಿದೆ ಎಂದು ವಾದಿಸಿದ್ದರು. ಮರುಎಣಿಕೆಗೆ ಮೊದಲು ಈ ಬಗ್ಗೆ ರಿಟರ್ನಿಂಗ್ ಅಧಿಕಾರಿಗೆ ದೂರು ನೀಡಲಾಗಿದ್ದರೂ ಕ್ರಮ ಕೈಗೊಳ್ಳಲಿಲ್ಲ ಎಂದು ಅವರು ಹೇಳಿದ್ದು, ಅಲ್ಲದೆ ಮರುಎಣಿಕೆ ಮಾಡಬಾರದ ಅಂಚೆ ಮತಗಳನ್ನೂ ಎಣಿಸಲಾಗಿದೆ ಎಂದು ವಾದಿಸಿದ್ದರು. ಇದಕ್ಕೆ ಪ್ರತಿಯಾಗಿ ನ್ಯಾಯಪೀಠ, ಹೈಕೋರ್ಟ್ ಆದೇಶದಂತೆ ಮರುಎಣಿಕೆ ನಡೆದಿದೆ. ಏಜೆಂಟ್ ನ್ಯಾಯಾಲಯವನ್ನು ಸಂಪರ್ಕಿಸಿ ಸ್ಪಷ್ಟನೆ ಕೇಳಬಹುದಿತ್ತು ಎಂದು ಸೂಚಿಸಿತು. ಅಲ್ಲದೆ ಮತ ಎಣಿಕೆಯಲ್ಲಿ ವ್ಯತ್ಯಾಸ ಇದ್ದರೆ ಚುನಾವಣಾ ಅರ್ಜಿ ಸಲ್ಲಿಸುವುದೇ ಸೂಕ್ತ ಮಾರ್ಗ ಎಂದು ಅಭಿಪ್ರಾಯಪಟ್ಟಿತು.

ಮುಂದಿನ ವಿಚಾರಣೆಯಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಪ್ರಾಸಿಕ್ಯೂಷನ್‌ಗೆ ಕೋರ್ಟ್ ಅವಕಾಶ ನೀಡಿದ್ದು, ಪ್ರಸ್ತುತ ರಿಟರ್ನಿಂಗ್ ಅಧಿಕಾರಿ ಗೌರವ್ ಕುಮಾರ್ ಶೆಟ್ಟಿ ಅವರನ್ನು ಸಹ ಆರೋಪಿಯಾಗಿಸಲು ಪರಿಗಣಿಸಬಹುದು ಎಂದು ಕೋರ್ಟ್ ಹೇಳಿದೆ. ಇನ್ನೊಂದೆಡೆ ತಮ್ಮ ಅರ್ಜಿಯಲ್ಲಿ ಈ ಎಫ್‌ಐಆರ್ ಈಗಾಗಲೇ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಟ್ಟಿದ್ದ ವಿಷಯಗಳನ್ನು ಮರು ತೆರೆಯುವ ಪ್ರಯತ್ನ ಮಾತ್ರ ಎಂದು ಜೀವರಾಜ್ ವಾದಿಸಿದ್ದರು..

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ 59,171 ಮತಗಳನ್ನು ಪಡೆದು ಗೆದ್ದಿದ್ದರು. ಜೀವರಾಜ್ 58,970 ಮತಗಳನ್ನು ಪಡೆದು 201 ಮತಗಳ ಅಂತರದಿಂದ ಸೋತಿದ್ದರು. ಈ ಫಲಿತಾಂಶವನ್ನು ಪ್ರಶ್ನಿಸಿ ಜೀವರಾಜ್ ಹೈಕೋರ್ಟ್‌ನಲ್ಲಿ ಚುನಾವಣಾ ಅರ್ಜಿ ಸಲ್ಲಿಸಿದ್ದರು. ಏಪ್ರಿಲ್ 6ರಂದು ಹೈಕೋರ್ಟ್ 279 ತಿರಸ್ಕೃತ ಅಂಚೆ ಮತಪತ್ರಗಳ ಮರುಪರಿಶೀಲನೆ ಹಾಗೂ ಎಲ್ಲಾ ಅಂಚೆ ಮತಗಳ ಮರುಎಣಿಕೆಗೆ ಆದೇಶಿಸಿತ್ತು. ಅದರಂತೆ ಮೇ 2ರಂದು ಮರುಎಣಿಕೆ ನಡೆದಿತ್ತು.ಮೊದಲ ಎಣಿಕೆಯಲ್ಲಿ 1,822 ಅಂಚೆ ಮತಗಳಲ್ಲಿ ಜೀವರಾಜ್ 692 ಮತಗಳನ್ನು ಪಡೆದರೆ, ರಾಜೇಗೌಡ 569 ಮತಗಳನ್ನು ಪಡೆದಿದ್ದರು. ಮರುಪರಿಶೀಲನೆ ಮತ್ತು ಮರುಎಣಿಕೆಯ ಬಳಿಕ ಜೀವರಾಜ್ ಮತಗಳು 690 ಆಗಿದ್ದು, ರಾಜೇಗೌಡ ಅವರ ಮತಗಳು 314ಕ್ಕೆ ಇಳಿದಿದ್ದು, 255 ಮತಗಳ ಕಡಿತವಾಗಿದೆ. ಇದರಿಂದ ಜೀವರಾಜ್ 52 ಮತಗಳ ಅಂತರದಿಂದ ವಿಜೇತರಾಗಿ ಘೋಷಿಸಲ್ಪಟ್ಟಿದ್ದರು. ಆ ಬಳಿಕ ರಾಜೇಗೌಡ ಪರ ಮತ ಎಣಿಕೆ ಏಜೆಂಟ್ ಸುಧೀರ್ ಕುಮಾರ್ ಮುರೊಳ್ಳಿ ನೀಡಿದ ದೂರಿನ ಆಧಾರದಲ್ಲಿ, ಚಿಕ್ಕಮಗಳೂರು ಪಟ್ಟಣ ಪೊಲೀಸರು ಜೀವರಾಜ್, ಅಧಿಕಾರಿಗಳು ಸೇರಿದಂತೆ  ಹಲವರ ವಿರುದ್ಧ ಕೇಸ್ ದಾಖಲಿಸಿದ್ದರು. ಮರುಎಣಿಕೆ ವೇಳೆ ರಾಜೇಗೌಡ ಪರದ 255 ಮತಪತ್ರಗಳಲ್ಲಿ ತಿದ್ದುಪಡಿ ನಡೆದಿದೆ ಎಂದು ಆರೋಪಿಸಲಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 5:46 pm, Tue, 5 May 26

Source link

‘ಇದು ಸಿನಿಮಾದ ತಾಕತ್ತು’: ವಿಜಯ್ ಗೆಲುವನ್ನು ಬಣ್ಣಿಸಿದ ಸಂದೀಪ್ ರೆಡ್ಡಿ ವಂಗಾ – Kannada News | Vijay TVK historic win Tamil Nadu Elections Sandeep Reddy Vanga congratulations

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಳಪತಿ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು 108 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ದಶಕಗಳಿಂದ ತಮಿಳುನಾಡು ರಾಜಕೀಯವನ್ನು ನಿಯಂತ್ರಿಸುತ್ತಿದ್ದ ಎರಡು ದ್ರಾವಿಡ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಭದ್ರಕೋಟೆಯನ್ನು ವಿಜಯ್ (Vijay) ಪುಡಿಪುಡಿ ಮಾಡಿದ್ದಾರೆ. ಈ ಅಭೂತಪೂರ್ವ ಯಶಸ್ಸಿಗೆ ಚಿತ್ರರಂಗದ ಗಣ್ಯರಿಂದ ಅಭಿನಂದನೆಗಳ ಮಹಾಪೂರವೇ ಹರಿಯುತ್ತಿದ್ದು, ಖ್ಯಾತ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ಅವರ ಪೋಸ್ಟ್ ಈಗ ಗಮನ ಸೆಳೆಯುತ್ತಿದೆ.

1. ತಮಿಳುನಾಡು ಚುನಾವಣೆಯಲ್ಲಿ ದಳಪತಿ ವಿಜಯ್ ಅಭೂತಪೂರ್ವ ಗೆಲುವು.

2. ವಿಜಯ್ ಗೆಲುವಿಗೆ ಸಂತಸ ವ್ಯಕ್ತಪಡಿಸಿದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ.

3. ಸಂದೀಪ್ ರೀತಿಯೇ ಹಲವು ಸೆಲೆಬ್ರಿಟಿಗಳಿಂದ ದಳಪತಿ ವಿಜಯ್​ಗೆ ಅಭಿನಂದನೆ.

‘ಅರ್ಜುನ್ ರೆಡ್ಡಿ’, ‘ಅನಿಮಲ್’ ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರು ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ವಿಜಯ್ ಅವರನ್ನು ಶ್ಲಾಘಿಸಿದ್ದಾರೆ. ‘ಸಿನಿಮಾ ಏನನ್ನು ಮಾಡಬಲ್ಲದು ಎಂಬುದಕ್ಕೆ ಇದೇ ಸಾಕ್ಷಿ. ಇದು ಜನರನ್ನು ಪ್ರೇರೇಪಿಸುತ್ತದೆ, ವ್ಯವಸ್ಥೆಯನ್ನು ಅಲ್ಲಾಡಿಸುತ್ತದೆ ಮತ್ತು ಒಬ್ಬ ವ್ಯಕ್ತಿಯ ಇರುವಿಕೆಯನ್ನು ಶಕ್ತಿಯನ್ನಾಗಿ ಬದಲಾಯಿಸುತ್ತದೆ. ಇಲ್ಲಿ ಸಿನಿಮಾ ಅಧಿಕಾರ ನಡೆಸುತ್ತಿದೆ. ಇದು ಕೇವಲ ಪ್ರಚಾರವಲ್ಲ, ಸದ್ದು ಗದ್ದಲ ಅಲ್ಲ, ಇದು ಅಪ್ಪಟ ಶಕ್ತಿ. ವಿಜಯ್ ಸರ್ ಮತ್ತು ತಮಿಳಗ ವೆಟ್ರಿ ಕಳಗಂ ಪಕ್ಷಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು’ ಎಂದು ಬರೆದುಕೊಂಡಿದ್ದಾರೆ.

ಈ ಗೆಲುವಿನ ಮೂಲಕ ದಳಪತಿ ವಿಜಯ್ ಅವರು ಹೊಸ ಅಧ್ಯಾಯ ಆರಂಭಿಸಿದ್ದಾರೆ. ಸಿನಿಮಾದಿಂದ ಬಂದು ಸಿಎಂ ಪಟ್ಟಕ್ಕೇರಿದ ಎನ್.ಟಿ. ರಾಮರಾವ್, ಎಂ.ಜಿ. ರಾಮಚಂದ್ರನ್ ಮತ್ತು ಜೆ. ಜಯಲಲಿತಾ ಅವರ ಸಾಲಿಗೆ ಈಗ ವಿಜಯ್ ಕೂಡ ಸೇರ್ಪಡೆಯಾಗಿದ್ದಾರೆ. ಪರದೆಯ ಮೇಲಿನ ವರ್ಚಸ್ಸನ್ನು ಮತಗಳನ್ನಾಗಿ ಪರಿವರ್ತಿಸುವಲ್ಲಿ ವಿಜಯ್ ಯಶಸ್ವಿಯಾಗಿದ್ದಾರೆ.

ದಕ್ಷಿಣ ಭಾರತದ ಸ್ಟಾರ್ ನಟರು ಮಾತ್ರವಲ್ಲದೇ, ಬಾಲಿವುಡ್ ಕಲಾವಿದರು ಕೂಡ ವಿಶ್ ಮಾಡಿದ್ದಾರೆ. ರಿತೇಶ್ ದೇಶ್‌ಮುಖ್ ಅವರು ವಿಜಯ್ ಅವರ ಗೆಲುವನ್ನು ಕೊಂಡಾಡಿದ್ದಾರೆ. ‘ಫಲಿತಾಂಶ ಹೊರಬಿದ್ದಿದೆ! ವಿಜಯ್ ಅವರಿಗೆ ಈ ಸ್ಮರಣೀಯ ಗೆಲುವಿಗಾಗಿ ಅಭಿನಂದನೆಗಳು. ಜನರ ಏಳಿಗೆಗಾಗಿ ನೀವು ದಣಿವರಿಯದೇ ಕೆಲಸ ಮಾಡುವಂತಾಗಲಿ’ ಎಂದು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ‘ಅಂದು ಕರುಣಾನಿಧಿ ಹಿಂದೆ ನಿಂತಿದ್ದ ಹುಡುಗ ಇಂದು ಅವರ ಪಕ್ಷವನ್ನೇ ಮುಗಿಸಿದ’: ಆರ್​ಜಿವಿ

ಸೋಶಿಯಲ್ ಮೀಡಿಯಾದಲ್ಲಿ ರಿಷಬ್ ಶೆಟ್ಟಿ ಅವರು ಪೋಸ್ಟ್ ಮಾಡಿದ್ದಾರೆ. ‘ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದ ವಿಜಯ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ನಾಯಕತ್ವದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಆಗಲಿ. ಇನ್ನಷ್ಟು ಯುವ ಜನರಿಗೆ ನಿಮ್ಮ ಈ ಸಾಧನೆಯು ಸ್ಫೂರ್ತಿಯಾಗಲಿ’ ಎಂದು ರಿಷಬ್ ಶೆಟ್ಟಿ ಅವರು ಶುಭ ಹಾರೈಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 5:42 pm, Tue, 5 May 26

Source link

ಜ್ವರದಿಂದ ಮಲಗಿದ್ದ ಆಟಗಾರನಿಗೆ ಪ್ರೈವೇಟ್ ಪ್ಲೇನ್ ಆಫರ್ ನೀಡಿದ್ದ IPL ಮಾಲೀಕ! – Kannada News | Mark Wood Reveals Bizarre IPL Offer During High Fever

ಕ್ರಿಕೆಟ್ ಲೋಕದ ಶ್ರೀಮಂತ ಲೀಗ್ ಎನಿಸಿಕೊಂಡಿರುವ ಐಪಿಎಲ್‌ನಲ್ಲಿ ಆಟಗಾರರಿಗೆ ಸಿಗುವ ಸೌಲಭ್ಯಗಳು ಮತ್ತು ಅಲ್ಲಿನ ಮಾಲೀಕರ ಹಠ ಎರಡೂ ಜಗತ್ಪ್ರಸಿದ್ಧ. ಇತ್ತೀಚೆಗೆ ಇಂಗ್ಲೆಂಡ್‌ನ ವೇಗದ ಬೌಲರ್ ಮಾರ್ಕ್ ವುಡ್ ಹಂಚಿಕೊಂಡಿರುವ ಒಂದು ಘಟನೆಯು ಐಪಿಎಲ್‌ನ ಈ ಐಷಾರಾಮಿ ಮತ್ತು ವಿಚಿತ್ರ ಮಜಲನ್ನು ಅನಾವರಣಗೊಳಿಸಿದೆ. ತೀವ್ರ ಜ್ವರದಿಂದ ಬಳಲುತ್ತಿದ್ದರೂ ತಮಗೆ ಬಂದ ಆ ಒಂದು ‘ಪ್ರೈವೇಟ್ ಜೆಟ್’ ಆಫರ್ ಮತ್ತು ಅದಕ್ಕೆ ಅವರ ತಂದೆ ನೀಡಿದ ತಮಾಷೆಯ ಪ್ರತಿಕ್ರಿಯೆಯ ಬಗ್ಗೆ ವುಡ್ ಬಿಚ್ಚಿಟ್ಟಿದ್ದಾರೆ. ಆ ಕುತೂಹಲಕಾರಿ ಕಥೆ ಇಲ್ಲಿದೆ…

ಬಿಬಿಸಿ ಪಾಡ್‌ಕಾಸ್ಟ್‌ನಲ್ಲಿ ಕಾಣಿಸಿಕೊಂಡ ಮಾರ್ಕ್​ ವುಡ್​ಗೆ  ಐಪಿಎಲ್​ ಬಗ್ಗೆ ಕೇಳಲಾಗಿತ್ತು. ಈ ವೇಳೆ 2023 ರಲ್ಲಿ ನಡೆದ ಸ್ವಾರಸ್ಯಕರ ಘಟನೆಯೊಂದನ್ನು ಬಿಚ್ಚಿಟ್ಟಿದ್ದಾರೆ.

2023ರ ಐಪಿಎಲ್ ಸೀಸನ್‌. ಆಗ ನನಗೆ ತೀವ್ರ ಜ್ವರ ಕಾಣಿಸಿಕೊಂಡಿತ್ತು. ಹಾಸಿಗೆಯಿಂದ ಏಳಲೂ ಸಾಧ್ಯವಾಗದಂತಹ ಪರಿಸ್ಥಿತಿಯಲ್ಲಿದ್ದೆ. ಇದಾಗ್ಯೂ ಫ್ರಾಂಚೈಸಿ ಮಾಲೀಕರಿಂದ ನನಗೆ ಸತತವಾಗಿ ಕರೆಗಳು ಬರತೊಡಗಿದ್ದವು. ಕರೆ ಸ್ವೀಕರಿಸಿದ ಬಳಿಕ ನಾನು ನನ್ನ ಪರಿಸ್ಥಿತಿಯನ್ನು ವಿವರಿಸಿದೆ. ನನಗೆ ಹಾಸಿಗೆಯಿಂದ ಏಳಲು ಕೂಡ ಸಾಧ್ಯವಾಗುತ್ತಿಲ್ಲ. ಅಷ್ಟೊಂದು ಜ್ವರ ಇದೆ ಎಂದು ವಿರಿಸಿದೆ.

ಈ ವೇಳೆ ಐಪಿಎಲ್​ ಮಾಲೀಕರು, “ನೀವು ಹಾಸಿಗೆಯಿಂದ ಏಳಲು ಸಾಧ್ಯವಾಗದಿದ್ದರೆ ಚಿಂತಿಸಬೇಡಿ. ನಾನು ಪ್ರೈವೇಟ್ ಪ್ಲೇನ್ ಕಳುಹಿಸುತ್ತೇನೆ. ಅದರಲ್ಲಿ ಬಂದು ಪಂದ್ಯ ಆಡಿ, ತಕ್ಷಣವೇ ಅದೇ ಪ್ಲೇನ್‌ನಲ್ಲಿ ಹಿಂದಿರುಗಿ ಬಂದು ನಿಮ್ಮ ಹಾಸಿಗೆಯಲ್ಲೇ ವಿಶ್ರಾಂತಿ ಪಡೆಯಬಹುದು” ಎಂದರು.

ಈ ವಿಷಯವನ್ನು ಕೇಳಿ ಉತ್ಸಾಹಗೊಂಡ ನಾನು ತಕ್ಷಣವೇ ತಂದೆಗೆ ಕರೆ ಮಾಡಿ ವಿಷಯ ತಿಳಿಸಿದೆ. “ಅಪ್ಪಾ, ಅವರು ನನಗೆ ಪ್ರೈವೇಟ್ ಪ್ಲೇನ್ ಕಳುಹಿಸುತ್ತಾರಂತೆ” ಎಂದು ಸಂಭ್ರಮದಿಂದ ಹೇಳಿದ್ದೆ. ಆದರೆ  ತಂದೆ ಮಾತ್ರ ಬಹಳ ಪ್ರಾಯೋಗಿಕವಾಗಿ ಪ್ರತಿಕ್ರಿಯಿಸಿ, “ನಿನ್ನ ಆರೋಗ್ಯ ಹೇಗಿದೆ?” ಎಂದು ಕೇಳಿದರು.

ಈ ವೇಳೆ ನಾನು “ಎದ್ದು ನಿಂತರೆ ಮೂರ್ಛೆ ಹೋಗುವಂತಿದೆ” ಎಂದೆ. “ಹಾಗಿದ್ದರೆ ನೀನು ಆಡುವ ಸ್ಥಿತಿಯಲ್ಲಿಲ್ಲ, ಹೋಗಬೇಡ” ಎಂದು ತಂದೆ ಕಟ್ಟುನಿಟ್ಟಾಗಿ ಹೇಳಿದರು.  ತಂದೆ ಹೋಗಬೇಡ ಎಂದು ಹೇಳಿದ್ದರಿಂದ ಅಂದು ನಾನು ಹೋಗಲಿಲ್ಲ.

ಅಂದರೆ ನನಗೆ ಪ್ರೈವೇಟ್ ಪ್ಲೇನ್‌ನಲ್ಲಿ ಪ್ರಯಾಣಿಸುವ ಸುವರ್ಣಾವಕಾಶ ಸಿಕ್ಕಿದ್ದರೂ, ಕೊನೆಗೆ ತಮ್ಮ ಆರೋಗ್ಯಕ್ಕೆ ಆದ್ಯತೆ ನೀಡಿ ಆ ಪಂದ್ಯವನ್ನು ಆಡದಿರಲು ನಿರ್ಧರಿಸಿದೆ. ಇದು “ನನ್ನ ಜೀವನದಲ್ಲಿ ಸಂಭವಿಸಿದ ಅತ್ಯಂತ ಕೂಲ್ ಆದ ವಿಷಯ ಇದು” ಎಂದು ಮಾರ್ಕ್​ ವುಡ್​​ ಈ ಘಟನೆಯನ್ನು ತಮಾಷೆಯಾಗಿ ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: ಸೋತು ಸುಣ್ಣವಾಗಿರುವ LSG ತಂಡಕ್ಕೆ ಪ್ಲೇಆಫ್​ಗೇರಲು ಇನ್ನೂ ಇದೆ ಚಾನ್ಸ್​!

ಅಂದಹಾಗೆ ಐಪಿಎಲ್ 2023 ರಲ್ಲಿ ಮಾರ್ಕ್ ​ವುಡ್ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿದ್ದರು. ಅವರು ಈವರೆಗೆ ಐಪಿಎಲ್ ಆಡಿರುವುದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಪರ ಮಾತ್ರ. 2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಒಂದು ಪಂದ್ಯ ಮತ್ತು 2023ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ 4 ಪಂದ್ಯಗಳನ್ನು ಆಡಿದ್ದರು. ಹೀಗಾಗಿ ಈ ಘಟನೆಯು ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿದ್ದಾಗ ನಡೆದಿರುವುದನ್ನು ಊಹಿಸಬಹುದು. ಅಲ್ಲದೆ ಆಟಗಾರನಿಗೆ ಪ್ರೈವೇಟ್ ಪ್ಲೇನ್ ಕಳಿಸಲು ಮುಂದಾಗಿದ್ದು ಸಂಜೀವ್ ಗೊಯೆಂಕಾ?

Published On – 2:54 pm, Tue, 5 May 26

Source link

RCB ಅಭಿಮಾನಿಗಳಿಗೆ ಬಿಸಿಸಿಐ ಕಡೆಯಿಂದ ಶೀಘ್ರದಲ್ಲೇ ಕಹಿ ಸುದ್ದಿ! – Kannada News | Bengaluru May Lose Rights to Host IPL 2026 Final

ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸಲು ಸಜ್ಜಾಗುತ್ತಿದ್ದ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಈಗ ಸಂಕಷ್ಟ ಎದುರಾಗಿದೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ತವರು ಮೈದಾನವಾಗಿರುವ ಇಲ್ಲಿ ಫೈನಲ್ ನಡೆಯುವುದು ಬಹುತೇಕ ಖಚಿತವೆನ್ನಲಾಗಿತ್ತು. ಆದರೆ, ಇತ್ತೀಚಿನ ಕೆಲವು ಬೆಳವಣಿಗೆಗಳು ಬಿಸಿಸಿಐ (BCCI) ನಿರ್ಧಾರವನ್ನು ಬದಲಿಸುವಂತೆ ಮಾಡಿದೆ. ಇದಕ್ಕೆ ಕಾರಣಗಳೇನು ಎಂದು ನೋಡುವುದಾದರೆ…

  •  ಶಾಸಕರ ಟಿಕೆಟ್ ಹಂಚಿಕೆ ವಿವಾದ: ಬಿಸಿಸಿಐನ ತನ್ನ ನಿರ್ಧಾರ ಬದಲಿಸಲು ಪ್ರಮುಖ ಕಾರಣವೆಂದರೆ ಸ್ಥಳೀಯ ಶಾಸಕರಿಗೆ ನೀಡಲಾಗುವ ಟಿಕೆಟ್‌ಗಳ ಹಂಚಿಕೆ. ವರದಿಗಳ ಪ್ರಕಾರ, ರಾಜ್ಯ ಸರ್ಕಾರ ಮತ್ತು ಕೆಎಸ್‌ಸಿಎ (KSCA) ನಡುವೆ ಟಿಕೆಟ್ ಕೋಟಾದ ಕುರಿತು ಭಿನ್ನಾಭಿಪ್ರಾಯಗಳು ಮೂಡಿವೆ. ಈ ರಾಜಕೀಯ ಹಸ್ತಕ್ಷೇಪ ಮತ್ತು ಟಿಕೆಟ್ ಗೊಂದಲಗಳು ಬಿಸಿಸಿಐಗೆ ತಲೆನೋವಾಗಿ ಪರಿಣಮಿಸಿದೆ. ಸೌಹಾರ್ದಯುತ ವಾತಾವರಣ ಇಲ್ಲದಿದ್ದರೆ ಪಂದ್ಯವನ್ನು ಬೇರೆಡೆಗೆ ಸ್ಥಳಾಂತರಿಸಲು ಬಿಸಿಸಿಐ ಗಂಭೀರವಾಗಿ ಯೋಚಿಸುತ್ತಿದೆ.
  • ಭದ್ರತಾ ಲೋಪ ಮತ್ತು ಸಿಸಿಟಿವಿ ವಿವಾದ: ಇತ್ತೀಚೆಗೆ ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ಪಂದ್ಯದ ವೇಳೆ ನಡೆದ ಭದ್ರತಾ ಲೋಪವು ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ಸಿಸಿಟಿವಿ ವ್ಯವಸ್ಥೆ ಮಾಡಿದ್ದ ಕಂಪೆನಿಯ ಸಿಬ್ಬಂದಿಯೇ ಸುಮಾರು 240 ಕ್ಯಾಮೆರಾಗಳ ಸಂಪರ್ಕವನ್ನು ಕಡಿತಗೊಳಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ಫೈನಲ್‌ನಂತಹ ಹೈ-ಪ್ರೊಫೈಲ್ ಪಂದ್ಯಕ್ಕೆ ಇಂತಹ ಭದ್ರತಾ ಲೋಪಗಳು ದೊಡ್ಡ ಹಿನ್ನಡೆಯಾಗಿವೆ.
  • ಕ್ರೀಡಾಂಗಣದ ಸುರಕ್ಷತೆ ಮತ್ತು ಮೂಲಸೌಕರ್ಯ: ಕಳೆದ ವರ್ಷ ಆರ್‌ಸಿಬಿ ಚಾಂಪಿಯನ್ ಆದಾಗ ಅಭಿಮಾನಿಗಳ ಸಂಭ್ರಮಾಚರಣೆ ವೇಳೆ ನಡೆದ ನೂಕುನುಗ್ಗಲು ಮೈದಾನದ ಸುರಕ್ಷತೆಯ ಬಗ್ಗೆ ಪ್ರಶ್ನೆ ಎತ್ತಿತ್ತು. ನ್ಯಾ. ಜಾನ್ ಮೈಕೆಲ್ ಡಿಕುನ್ಹಾ ಅವರ ವರದಿಯು ಕ್ರೀಡಾಂಗಣದ ಕೆಲವು ವಿನ್ಯಾಸಗಳು “ಹೆಚ್ಚಿನ ಜನಸಂದಣಿಗೆ ಸುರಕ್ಷಿತವಲ್ಲ” ಎಂದು ಉಲ್ಲೇಖಿಸಿದೆ. ಈ ಹಿನ್ನೆಲೆಯಲ್ಲಿ ಪ್ರೇಕ್ಷಕರ ಸುರಕ್ಷತೆಯೂ ಬಿಸಿಸಿಐನ ಪ್ರಮುಖ ಕಾಳಜಿಯಾಗಿದೆ.

ಪರ್ಯಾಯ ಮೈದಾನ ಯಾವುದು?

ಒಂದು ವೇಳೆ ಬೆಂಗಳೂರಿಗೆ ಆತಿಥ್ಯ ತಪ್ಪಿದರೆ, ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಅಥವಾ ಕೊಲ್ಕತ್ತಾದ ಈಡನ್ ಗಾರ್ಡನ್ಸ್​, ಇಲ್ಲ ಮುಂಬೈನ ವಾಂಖೆಡೆ ಕ್ರೀಡಾಂಗಣಕ್ಕೆ ಫೈನಲ್ ಪಂದ್ಯ ವರ್ಗಾವಣೆಯಾಗುವ ಸಾಧ್ಯತೆಯಿದೆ. ಹಾಲಿ ಚಾಂಪಿಯನ್ನರ ತವರು ಮೈದಾನದಲ್ಲೇ ಫೈನಲ್ ನಡೆಯುವ ಸಂಪ್ರದಾಯ ಈ ಬಾರಿ ಮುರಿಯುವ ಲಕ್ಷಣಗಳು ಕಾಣುತ್ತಿವೆ.

ಇದನ್ನೂ ಓದಿ: 30 ಎಸೆತಗಳಲ್ಲಿ 95 ರನ್: ರಿಷಭ್ ಪಂತ್‌ ರುದ್ರತಾಂಡವ ಬಿಚ್ಚಿಟ್ಟ ಕೋಚ್!

ಒಟ್ಟಾರೆಯಾಗಿ ಹೇಳುವುದಾದರೆ, ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣವು ಕೇವಲ ಒಂದು ಮೈದಾನವಲ್ಲ, ಅದು ಆರ್‌ಸಿಬಿ ಅಭಿಮಾನಿಗಳ ಭಾವನೆಗಳ ತಾಣ. ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಸಜ್ಜಾಗಿರುವ ಬೆಂಗಳೂರಿಗೆ ಫೈನಲ್ ಪಂದ್ಯದ ಆತಿಥ್ಯ ಸಿಗುವುದು ಕೇವಲ ಗೌರವದ ವಿಷಯವಲ್ಲ, ಅದು ಅಭಿಮಾನಿಗಳ ಹಕ್ಕು ಕೂಡ ಹೌದು.

ಆದರೆ, ಟಿಕೆಟ್ ಗೊಂದಲ ಮತ್ತು ಭದ್ರತಾ ಸವಾಲುಗಳು ಈ ಅವಕಾಶಕ್ಕೆ ಅಡ್ಡಿಯಾಗಿರುವುದು ವಿಷಾದನೀಯ. ಬಿಸಿಸಿಐ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಮೊದಲು ಕೆಎಸ್‌ಸಿಎ ಮತ್ತು ರಾಜ್ಯ ಸರ್ಕಾರ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ, ಫೈನಲ್ ಪಂದ್ಯವನ್ನು ಬೆಂಗಳೂರಿನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.

Source link

ತಿಂಗಳ ಕೊನೆಯಲ್ಲಿ ಜೇಬು ಖಾಲಿಯಾಗಬಾರದು ಎಂದರೆ ಈ ಸ್ಮಾರ್ಟ್‌ ಅಭ್ಯಾಸಗಳನ್ನು ಪಾಲಿಸಿ – Kannada News | You can easily save money by following these smart tricks

ಇಂದಿನ ಈ ದುಬಾರಿ ದುನಿಯಾದಲ್ಲಿ ಹಣ ಉಳಿತಾಯ (money Saving) ಮಾಡುವುದೇ ಸವಾಲಿನ ಸಂಗತಿಯಾಗಿದೆ. ಎಷ್ಟೇ ಸಂಪಾದನೆ ಮಾಡಿದರೂ ಹಲವರಿಗೆ ಹಣ ಉಳಿತಾಯ ಮಾಡಲಿ ಸಾಧ್ಯವೇ ಆಗುವುದಿಲ್ಲ. ಸಂಬಳದ ಹಣವೆಲ್ಲಾ ಬಹು ಬೇಗನೇ ಖರ್ಚಾಗಿ ತಿಂಗಳ ಕೊನೆಯಲ್ಲಿ ಜೇಬು ಖಾಲಿಯಾಗುತ್ತದೆ. ತಿಂಗಳ ಕೊನೆಯಲ್ಲಿ ಇದೇ ರೀತಿ ನಿಮ್ಮ ಬ್ಯಾಂಕ್‌ ಬ್ಯಾಲೆನ್ಸ್‌ ಕೂಡ ಸಂಪೂರ್ಣವಾಗಿ ಖಾಯಿಯಾಗಿಬಿಡುತ್ತಾ, ಅಗತ್ಯ ಖರ್ಚಿಗಳಿಗೂ ಸಹ ಹಣ ಇರಲ್ವಾ? ಹಾಗಿದ್ರೆ ಈ ಹಣಕಾಸು ಸಮಸ್ಯೆಯಿಂದ ಮುಕ್ತಿ ಪಡೆಯಲು ಈ ಸ್ಮಾರ್ಟ್‌ ಮನಿ ಮ್ಯಾನೇಜ್‌ಮೆಂಟ್‌ ಟಿಪ್ಸ್‌ ಪಾಲಿಸಿ. ಇದರ ಮೂಲಕ ನೀವು ಉಳಿತಾಯಕ್ಕಾಗಿ ನಿಗದಿತ ಮೊತ್ತವನ್ನು ಮೀಸಲಿಡಬಹುದು ಮತ್ತು ತಿಂಗಳ ಕೊನೆಯಲ್ಲಿ ಜೇಬು ಕೂಡ ಸಂಪೂರ್ಣವಾಗಿ ಖಾಲಿಯಾಗುವುದಿಲ್ಲ.

ಈ ಸ್ಮಾರ್ಟ್‌ ಟ್ರಿಕ್ಸ್‌ ಪಾಲಿಸುವ ಮೂಲಕ ಹಣ ಉಳಿತಾಯ ಮಾಡಬಹುದು:

ನಿಮ್ಮ ಖರ್ಚುಗಳನ್ನು ಯೋಜಿಸಿ: ಉಳಿತಾಯದ ಮೊದಲ ಹೆಜ್ಜೆ ಎಂದರೆ ನಿಮ್ಮ ಹಣ ಎಲ್ಲಿಗೆ ಹೋಗುತ್ತಿದೆ ಎಂದು ತಿಳಿದುಕೊಳ್ಳುವುದು. ದಿನನಿತ್ಯದ ಚಿಕ್ಕ ಖರ್ಚುಗಳನ್ನು ಸಹ ನೋಟ್‌ಬುಕ್‌ನಲ್ಲಿ ಬರೆಯುವ ಅಭ್ಯಾಸ ಮಾಡಿಕೊಳ್ಳಿ. ನಿಮ್ಮ ಹಾಲಿನ ಬಿಲ್‌ನಿಂದ ಹಿಡಿದು ತರಕಾರಿ ಖರೀದಿ ಮತ್ತು ಚಹಾದವರೆಗೆ ಎಲ್ಲವನ್ನೂ ಟ್ರ್ಯಾಕ್ ಮಾಡುವುದರಿಂದ ತಿಂಗಳ ಕೊನೆಯಲ್ಲಿ ನೀವು ಎಲ್ಲಿ ಹೆಚ್ಚು ಖರ್ಚು ಮಾಡಿದ್ದೀರಿ ಎಂದು ತಿಳಿಯಲು ಸಹಾಯ ಮಾಡುತ್ತದೆ. ಇದು ಅನಗತ್ಯ ಖರ್ಚುಗಳನ್ನು ಗುರುತಿಸಲು ಮತ್ತು ಮುಂದಿನ ತಿಂಗಳು ಅವುಗಳನ್ನು ತಪ್ಪಿಸಲು ನಿಮಗೆ ಸಹಾಯ ಮಾಡುತ್ತದೆ. ನೀವು ಮಾಸಿಕ ಖರ್ಚು ಮಿತಿಯನ್ನು ನಿಗದಿಪಡಿಸಿದರೆ, ನಿಮ್ಮ ಹಣದ ವ್ಯರ್ಥ ಸ್ವಯಂಚಾಲಿತವಾಗಿ ಕಡಿಮೆಯಾಗುತ್ತದೆ.

ಚಂದಾದಾರಿಕೆಗಳನ್ನು ಕಡಿಮೆ ಮಾಡಿ: ಇತ್ತೀಚಿನ ದಿನಗಳಲ್ಲಿ, ಮೊಬೈಲ್ ಅಪ್ಲಿಕೇಶನ್‌ಗಳು, ಚಲನಚಿತ್ರ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳು ಮುಂತಾದ ಹಲವು ವಿಷಯಗಳಿಗೆ ನಾವು ಪ್ರತಿ ತಿಂಗಳು ಹಣ ಪಾವತಿಸುತ್ತೇವೆ. ನಿಮಗೆ ನಿಜವಾಗಿಯೂ ಅಗತ್ಯವಿರುವ ಅಪ್ಲಿಕೇಶನ್‌ಗಳನ್ನು ಮಾತ್ರ ಇರಿಸಿ ಮತ್ತು OTT ಪ್ಲಾಟ್‌ಫಾರ್ಮ್, ಸಂಗೀತ ಅಪ್ಲಿಕೇಶನ್, ಜಿಮ್ ಅಥವಾ ಯಾವುದೇ ಆನ್‌ಲೈನ್ ಕೋರ್ಸ್‌ನ ಚಂದಾದಾರಿಕೆ ಬಳಕೆಯಲ್ಲಿಲ್ಲದಿದ್ದರೆ, ಅದನ್ನು ತಕ್ಷಣವೇ ನಿಲ್ಲಿಸಿ.  ಏಕೆಂದರೆ ಸಣ್ಣ ಆಟೋ-ಡೆಬಿಟ್‌ಗಳು ಒಟ್ಟಾಗಿ ತಿಂಗಳ ದೊಡ್ಡ ಮೊತ್ತವನ್ನು ತಿಂದು ಹಾಕುತ್ತವೆ.

ಮನೆಯಲ್ಲಿಯೇ ಆಹಾರ ತಯಾರಿಸಿ: ಇತ್ತೀಚಿನ ದಿನಗಳಲ್ಲಿ, ಅನೇಕ ಜನರು ಹೊರಗೆ ಊಟ ಮಾಡುವುದಕ್ಕೆ ಒಗ್ಗಿಕೊಂಡಿದ್ದಾರೆ. ಇದಕ್ಕಾಗಿ ನಾವು ಬಹಳಷ್ಟು ಹಣವನ್ನು ಖರ್ಚು ಮಾಡುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ, ಮನೆಯಲ್ಲಿ ಅಡುಗೆ ಮಾಡುವುದು ಮತ್ತು ತಿನ್ನುವುದು ನಿಮ್ಮ ಆರೋಗ್ಯ ಮತ್ತು ಬಜೆಟ್ ಎರಡಕ್ಕೂ ತುಂಬಾ ಪ್ರಯೋಜನಕಾರಿ. ಇದು ನಿಮ್ಮ ಹಣವನ್ನು ಉಳಿಸುವುದಲ್ಲದೆ, ನೀವು ತಾಜಾ ಮತ್ತು ಪೌಷ್ಟಿಕ ಆಹಾರ ಸೇವಿಸುವುದನ್ನು ಖಚಿತಪಡಿಸುತ್ತದೆ. ಅಲ್ಲದೆ ಇದು ನಿಮ್ಮ ಮಾಸಿಕ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

ಸಾರಿಗೆ ವೆಚ್ಚಗಳು: ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿರುವುದರಿಂದ, ನಿಮ್ಮ ಕಾರನ್ನು ಬಳಸುವುದು ದುಬಾರಿಯಾಗಬಹುದು. ಸ್ನೇಹಿತರೊಂದಿಗೆ ಶೇರಿಂಗ್‌ನೊಂದಿಗೆ ಕಾರಿನಲ್ಲಿ ಹೋಗಿ ಅಥವಾ ಕೆಲಸಕ್ಕೆ ಹೋಗಲು ಸಾರ್ವಜನಿಕ ಸಾರಿಗೆಯನ್ನು ಬಳಸಿ. ಇದು ನಿಮ್ಮ ಹಣವನ್ನು ಉಳಿಸುತ್ತದೆ.

ಇದನ್ನೂ ಓದಿ: ಪದೇ ಪದೇ ಹಣವನ್ನು ಸಾಲ ಪಡೆಯುವುದರಿಂದ ಏನಾಗುತ್ತದೆ ಗೊತ್ತಾ?

ಹಣ ನಿರ್ವಹಣೆ: ಇತ್ತೀಚಿನ ದಿನಗಳಲ್ಲಿ ಎಲ್ಲರೂ ಮೊಬೈಲ್ ಪಾವತಿಗಳನ್ನು ಬಳಸುತ್ತಾರೆ. ಇದರಿಂದಾಗಿ ವೆಚ್ಚದ ಬಗ್ಗೆ ಯೋಚಿಸದೆ ನಾವು ಸುಲಭವಾಗಿ ಹಣವನ್ನು ಖರ್ಚು ಮಾಡುತ್ತೇವೆ. ಬದಲಾಗಿ, ನೀವು ಏನನ್ನಾದರೂ ಖರೀದಿಸಿದಾಗಲೆಲ್ಲಾ ನಗದು ರೂಪದಲ್ಲಿ ಪಾವತಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಇದರಿಂದ ನಮ್ಮ ಬಳಿ ಎಷ್ಟು ಹಣವಿದೆ ಮತ್ತು ಎಷ್ಟು ಹಣ ಖಾಲಿಯಾಗಿದೆ ಎಂಬ ಅಂದಾಜು ದೊರೆಯುತ್ತದೆ. ಇದು ಅನಗತ್ಯ ಖರೀದಿ, ಖರ್ಚನ್ನು ತಪ್ಪಿಸಲು ನಮಗೆ ಸಹಾಯ ಮಾಡುತ್ತದೆ.

ಬೃಹತ್ ಖರೀದಿ: ಒಂದು ತಿಂಗಳಿಗೆ ಬೇಕಾಗುವ ದಿನಸಿ ಮತ್ತು ಗೃಹೋಪಯೋಗಿ ವಸ್ತುಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸುವುದು ಪ್ರಯೋಜನಕಾರಿ. ನೀವು ವಸ್ತುಗಳನ್ನು ಪ್ರತ್ಯೇಕವಾಗಿ ಖರೀದಿಸಿದರೆ, ನೀವು ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ರಿಯಾಯಿತಿ ಇದ್ದಾಗ, ಅಗತ್ಯ ವಸ್ತುಗಳನ್ನು ಮಾತ್ರ ಖರೀದಿಸಿ. ರಿಯಾಯಿತಿಗಾಗಿ ಅನಗತ್ಯ ವಸ್ತುಗಳನ್ನು ಖರೀದಿಸಿ ನಿಮ್ಮ ಹಣವನ್ನು ವ್ಯರ್ಥ ಮಾಡಬೇಡಿ. ಏನನ್ನಾದರೂ ಖರೀದಿಸುವ ಮೊದಲು, ನಿಮಗೆ ನಿಜವಾಗಿಯೂ ಅದು ಅಗತ್ಯವಿದೆಯೇ ಎಂದು ಖಚಿತಪಡಿಸಿಕೊಳ್ಳಿ ಮತ್ತು ನಂತರ ಅದನ್ನು ಖರೀದಿಸಿ. ಸರಿಯಾದ ಯೋಜನೆ ಹಣವನ್ನು ಉಳಿಸಲು ಉತ್ತಮ ಮಾರ್ಗವಾಗಿದೆ.

50-30-20 ನಿಯಮವನ್ನು ಅಳವಡಿಸಿಕೊಳ್ಳಿ: ಹಣ ನಿರ್ವಹಣೆಗೆ ಒಂದು ಜನಪ್ರಿಯ ವಿಧಾನವೆಂದರೆ 50-30-20 ನಿಯಮ. ಇದು ಆದಾಯದ 50 ಪ್ರತಿಶತವನ್ನು ಅಗತ್ಯಗಳಿಗೆ, 30 ಪ್ರತಿಶತವನ್ನು ಖರ್ಚಿಗೆ ಮತ್ತು 20 ಪ್ರತಿಶತವನ್ನು ಉಳಿತಾಯ ಅಥವಾ ಹೂಡಿಕೆಗಳಿಗೆ ಮೀಸಲಿಡುತ್ತದೆ. ಇದು ಕೂಡ ಹಣ ಉಳಿತಾಯ ಮಾಡಲು ತುಂಬಾನೇ ಸಹಕಾರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮುಂದಿನ 9 ವರ್ಷದಲ್ಲಿ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುವ ನಗರ ಬೆಂಗಳೂರು; ಸಾವಿಲ್ಸ್ ವರದಿ – Kannada News | Bangalore’s Growth: IT Hub to Global Leader by 2035, says Savills Report

ಬೆಂಗಳೂರು, ಮೇ 5: ಭಾರತದ ಐಟಿ ಹಬ್ ಹಾಗೂ ಸಿಲಿಕಾನ್ ವ್ಯಾಲಿ ಖ್ಯಾತಿಯ ಬೆಂಗಳೂರು ನಗರದ (Bengaluru city) ಕಿರೀಟಕ್ಕೆ ಮತ್ತೊಂದು ಐತಿಹಾಸಿಕ ಗರಿ ಸಿಕ್ಕಿದೆ. ಜಾಗತಿಕ ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆಯಾದ ‘ಸಾವಿಲ್ಸ್’ (Savills) ನಡೆಸಿರುವ ಸಂಶೋಧನಾ ವರದಿಯ ಪ್ರಕಾರ, 2035ರ ವೇಳೆಗೆ ಬೆಂಗಳೂರು ಇಡೀ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುವ ಪ್ರಮುಖ ಮಹಾನಗರವಾಗಿ (World’s Fastest-Growing Major City) ಹೊರಹೊಮ್ಮಲಿದೆ. ವಿಶ್ವದ ಪ್ರಮುಖ 245 ನಗರಗಳನ್ನು ವಿವಿಧ ಆರ್ಥಿಕ ಮತ್ತು ಸಾಮಾಜಿಕ ಮಾನದಂಡಗಳ ಆಧಾರದ ಮೇಲೆ ಸಮೀಕ್ಷೆ ನಡೆಸಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಈ ಪಟ್ಟಿಯಲ್ಲಿ ಭಾರತದ ಹಲವು ನಗರಗಳು ಮೊದಲ 20 ಸ್ಥಾನಗಳಲ್ಲಿ ಗುರುತಿಸಿಕೊಂಡು ಭಾರತದ ಆರ್ಥಿಕ ಬಲವನ್ನು ಪ್ರದರ್ಶಿಸಿವೆ.

ಬೆಂಗಳೂರು ಮೊದಲ ಸ್ಥಾನ ಪಡೆಯಲು ಕಾರಣಗಳೇನು?

  • ಗ್ಲೋಬಲ್ ಕ್ಯಾಪಬಿಲಿಟಿ ಸೆಂಟರ್ಸ್ (GCC): ವಿಶ್ವದ ಪ್ರಮುಖ ಬಹುರಾಷ್ಟ್ರೀಯ ಕಂಪನಿಗಳು ತಂತ್ರಜ್ಞಾನ, ಹಣಕಾಸು ಮತ್ತು ಕಾರ್ಯಾಚರಣೆಗಾಗಿ ಬೆಂಗಳೂರಿನಲ್ಲಿ ತಮ್ಮ ‘ಗ್ಲೋಬಲ್ ಕ್ಯಾಪಬಿಲಿಟಿ ಸೆಂಟರ್’ಗಳನ್ನು (GCC) ಸ್ಥಾಪಿಸುತ್ತಿವೆ. ಇದು ನಗರದ ಬೆಳವಣಿಗೆಗೆ ಮುಖ್ಯ ಇಂಧನವಾಗಿದೆ.
  • ಉನ್ನತ ಐಟಿ ಪ್ರತಿಭೆಗಳು: ಬೆಂಗಳೂರಿನಲ್ಲಿರುವ ಅಪಾರ ಸಂಖ್ಯೆಯ ತಾಂತ್ರಿಕ ನೈಪುಣ್ಯತೆ ಹೊಂದಿದ ಯುವ ಸಮೂಹ ಮತ್ತು ಗುಣಮಟ್ಟದ ಶಿಕ್ಷಣ ಸಂಸ್ಥೆಗಳು ಜಾಗತಿಕ ಕಂಪನಿಗಳನ್ನು ಆಕರ್ಷಿಸುತ್ತಿವೆ.
  • ಸ್ಥಳಾಂತರ ಮತ್ತು ಜನಸಂಖ್ಯೆ: ದೇಶದ ಮೂಲೆ ಮೂಲೆಗಳಿಂದ ಉದ್ಯೋಗ ಅರಸಿ ಬರುವ ಯುವ ವಲಸಿಗರ ಸಂಖ್ಯೆ ಹೆಚ್ಚುತ್ತಿರುವುದು ಹಾಗೂ ಶ್ರೀಮಂತ ಕುಟುಂಬಗಳ (ವರ್ಷಕ್ಕೆ ಸುಮಾರು 70,000 ಡಾಲರ್​ಗಿಂತ ಹೆಚ್ಚು ಗಳಿಸುವ ಕುಟುಂಬಗಳು) ಸಂಖ್ಯೆ ವೃದ್ಧಿಸುತ್ತಿರುವುದು ನಗರದ ಆರ್ಥಿಕತೆಗೆ ದೊಡ್ಡ ಬಲ ನೀಡಿದೆ.

ಇದನ್ನೂ ಓದಿ: ವಿಜಯ್​ನ ಪೋರ್ಟ್​ಫೋಲಿಯೋ ಇಂಟರೆಸ್ಟಿಂಗ್; ಹೂಡಿಕೆಯಲ್ಲಿ ಸಂಪ್ರದಾಯವಾದಿ; ಎಲ್ಲೆಲ್ಲಿದೆ ಅವರ 624 ಕೋಟಿ ರೂ ಹಣ?

ರೇಸ್‌ನಲ್ಲಿ ಏಷ್ಯಾ ಪೆಸಿಫಿಕ್ ದೇಶಗಳು ಮತ್ತು ಭಾರತದ ಪ್ರಾಬಲ್ಯ

ಸಾವಿಲ್ಸ್ ವರದಿಯ ಪ್ರಕಾರ, ಜಗತ್ತಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮೊದಲ 20 ನಗರಗಳ ಪೈಕಿ ಶೇಕಡಾ 85 ರಷ್ಟು ನಗರಗಳು ಏಷ್ಯಾ ಪೆಸಿಫಿಕ್ ವಲಯಕ್ಕೆ ಸೇರಿವೆ. ಮೊದಲ 50 ನಗರಗಳಲ್ಲಿ ಮುಕ್ಕಾಲು ಭಾಗ ಏಷ್ಯಾದ್ದಾಗಿದ್ದು, ಇದರಲ್ಲಿ ಭಾರತ, ವಿಯೆಟ್ನಾಂ ಮತ್ತು ಚೀನಾ ದೇಶಗಳು ಮುಂಚೂಣಿಯಲ್ಲಿವೆ. ಭಾರತದ ದೆಹಲಿ, ಮುಂಬೈ, ಹೈದರಾಬಾದ್ ಮತ್ತು ಕೋಲ್ಕತ್ತಾ ನಗರಗಳು ಸಹ ಅಗ್ರ ಸ್ಥಾನಗಳಲ್ಲಿ ಗುರುತಿಸಿಕೊಂಡಿವೆ.

ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಭಾರಿ ಜಿಗಿತ

ಬೆಂಗಳೂರಿನ ಈ ಅಭೂತಪೂರ್ವ ಬೆಳವಣಿಗೆಯಿಂದಾಗಿ ಮುಂದಿನ ಒಂದು ದಶಕದಲ್ಲಿ ನಗರದ ರಿಯಲ್ ಎಸ್ಟೇಟ್ ಉದ್ಯಮವು ಸಂಪೂರ್ಣವಾಗಿ ಬದಲಾಗಲಿದೆ ಎಂದು ವರದಿ ಹೇಳಿದೆ.

  • ಕಚೇರಿ ಜಾಗಕ್ಕೆ ಭಾರಿ ಬೇಡಿಕೆ: ಜಾಗತಿಕ ಸಂಸ್ಥೆಗಳ ವಿಸ್ತರಣೆಯಿಂದಾಗಿ ಅತ್ಯಾಧುನಿಕ ಹಾಗೂ ಪರಿಸರಸ್ನೇಹಿ (Grade-A workspaces) ಆಫೀಸ್ ಸ್ಪೇಸ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ.
  • ವಿದೇಶಿ ಬಂಡವಾಳ: ಭಾರತದ ರಿಯಲ್ ಎಸ್ಟೇಟ್ ವಲಯಕ್ಕೆ ಖಾಸಗಿ ಈಕ್ವಿಟಿ (Private Equity) ಹೂಡಿಕೆಯು ಶೇಕಡಾ 66 ರಷ್ಟು ಹೆಚ್ಚಾಗಿದ್ದು, ಭಾರಿ ಪ್ರಮಾಣದ ವಿದೇಶಿ ಹಣ ಹರಿದುಬರುತ್ತಿದೆ.
  • ವಸತಿ ವಲಯದ ವಿಸ್ತರಣೆ: ಐಟಿ ಉದ್ಯೋಗಿಗಳ ವಲಸೆ ಹೆಚ್ಚಾಗುತ್ತಿದ್ದಂತೆ ವಸತಿ ಸಮುಚ್ಚಯಗಳು, ಲಗ್ಜರಿ ಅಪಾರ್ಟ್‌ಮೆಂಟ್‌ಗಳು ಮತ್ತು ಮೂಲಸೌಕರ್ಯ ಯೋಜನೆಗಳು ವೇಗವಾಗಿ ವಿಸ್ತರಣೆಯಾಗುತ್ತಿವೆ.

ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಇದ್ದೂ ಅದನ್ನು ಬಳಸದೇ ಇದ್ದರೆ ಏನಾಗುತ್ತೆ? ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತಾ?

ವರದಿಯ ಮಾನದಂಡಗಳು ಏನಾಗಿದ್ದವು?

ಈ ಜಾಗತಿಕ ಸೂಚ್ಯಂಕವನ್ನು ತಯಾರಿಸಲು ಸಾವಿಲ್ಸ್ ಸಂಸ್ಥೆಯು 2035ರವರೆಗಿನ ನಗರದ ಜಿಡಿಪಿ (GDP) ಬೆಳವಣಿಗೆ, ವೈಯಕ್ತಿಕ ಆದಾಯದ ವೃದ್ಧಿ, ಯುವ ಉದ್ಯೋಗಿಗಳ ಅನುಪಾತ (Population dependency ratio), ನಗರಕ್ಕೆ ಆಗುವ ವಲಸೆ ಮತ್ತು ಶ್ರೀಮಂತ ಕುಟುಂಬಗಳ ಬೆಳವಣಿಗೆಯನ್ನು ಆಧಾರವಾಗಿಟ್ಟುಕೊಂಡು ಸಮೀಕ್ಷೆ ನಡೆಸಿತ್ತು.

ಒಟ್ಟಾರೆ, ಮುಂದಿನ ದಿನಗಳಲ್ಲಿ ಕೇವಲ ತಂತ್ರಜ್ಞಾನದಲ್ಲಿ ಮಾತ್ರವಲ್ಲದೆ, ಆರ್ಥಿಕತೆ, ನಗರೀಕರಣ ಮತ್ತು ಹೂಡಿಕೆಯಲ್ಲೂ ಬೆಂಗಳೂರು ಇಡೀ ಜಗತ್ತಿಗೆ ‘ಬಾಸ್’ ಆಗಿ ನಿಲ್ಲಲಿದೆ ಎಂಬುದನ್ನು ಈ ವರದಿ ಸಾಬೀತುಪಡಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version