ಹರಿಹರದ ಪಂಚಮಸಾಲಿ ಮಠದ ಆವರಣದಲ್ಲಿ ನಿಷೇಧಾಜ್ಞೆ ಜಾರಿ, ಗೇಟ್ ಬಂದ್ – Kannada News | Prohibitory Orders Imposed at Harihar Panchamasali Mutt; Gates Shut

ದಾವಣಗೆರೆ, ಮೇ 05: ಜಿಲ್ಲೆಯ ಹರಿಹರದಲ್ಲಿರುವ ಪಂಚಮಸಾಲಿ ಮಠದ ಆವರಣದಲ್ಲಿ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿದೆ. ಪೀಠಾಧಿಪತ್ಯಕ್ಕೆ ಸಂಬಂಧಿಸಿದ ವಿವಾದ ಮತ್ತು ಮಠದ ಆವರಣದಲ್ಲಿ ಪದೇಪದೆ ನಡೆಯುತ್ತಿದ್ದ ಗಲಾಟೆಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲಾಡಳಿತವು ಮಠದ ಗೇಟ್‌ಗಳನ್ನು ಬಂದ್ ಮಾಡಿ, ನಿಷೇಧಾಜ್ಞೆಯ ಬ್ಯಾನರ್‌ಗಳನ್ನು ಅಳವಡಿಸಿದೆ. ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಚನಾನಂದ ಸ್ವಾಮೀಜಿ ಅವರಿಗೂ ನೋಟಿಸ್‌ ನೀಡಿದ್ದಾರೆ. ಪಂಚಮಸಾಲಿ ಮಠದಲ್ಲಿ ಶಾಂತಿ ಕದಡದಂತೆ ಮತ್ತು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಈ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರಿಸ್ಥಿತಿ ಶಾಂತಿಯುತವಾಗುವವರೆಗೂ ನಿಷೇಧಾಜ್ಞೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಟಿವಿಕೆ ಜಯಭೇರಿ: ದಳಪತಿ ವಿಜಯ್ ಗೆಲುವಿಗೆ ರಿಷಬ್ ಶೆಟ್ಟಿ ಅಭಿನಂದನೆ – Kannada News | Rishab Shetty congratulates Thalapathy Vijay after TVK win in Tamil Nadu Elections

ಮೊದಲ ಬಾರಿಗೆ ಚುನಾವಣೆಯ ಅಖಾಡಕ್ಕೆ ಇಳಿದ ನಟ ದಳಪತಿ ವಿಜಯ್ (Thalapathy Vijay) ಅವರಿಗೆ ಗೆಲುವು ಸಿಕ್ಕಿದೆ. ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ (TVK) ಪಕ್ಷ ಬರೋಬ್ಬರಿ 108 ಸ್ಥಾನಗಳನ್ನು ಗೆದ್ದಿದೆ. ಇದು ಸಾಧಾರಣ ಗೆಲುವಲ್ಲ. ಸಿನಿಮಾ ಕ್ಷೇತ್ರದಿಂದ ರಾಜಕೀಯ ಕ್ಷೇತ್ರಕ್ಕೆ ಎಂಟ್ರಿ ನೀಡಿ, ಮುಖ್ಯಮಂತ್ರಿ ಆಗುವ ಮಟ್ಟಕ್ಕೆ ಬೆಳೆದ ದಳಪತಿ ವಿಜಯ್ ಅವರಿಗೆ ಅನೇಕ ಸೆಲೆಬ್ರಿಟಿಗಳು ಕೂಡ ಅಭಿನಂದನೆ ಸಲ್ಲಿಸುತ್ತಿದ್ದಾರೆ. ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಕೂಡ ವಿಜಯ್ ಅವರನ್ನು ಅಭಿನಂದಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ರಿಷಬ್ ಶೆಟ್ಟಿ ಅವರು ಪೋಸ್ಟ್ ಮಾಡಿದ್ದಾರೆ. ‘ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದ ವಿಜಯ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ನಾಯಕತ್ವದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಆಗಲಿ. ಇನ್ನಷ್ಟು ಯುವ ಜನರಿಗೆ ನಿಮ್ಮ ಈ ಸಾಧನೆಯು ಸ್ಫೂರ್ತಿಯಾಗಲಿ’ ಎಂದು ರಿಷಬ್ ಶೆಟ್ಟಿ ಅವರು ಶುಭ ಹಾರೈಸಿದ್ದಾರೆ.

ನಟ ಶಿವರಾಜ್​ಕುಮಾರ್ ಕೂಡ ಅಭಿನಂದನೆ ತಿಳಿಸಿದ್ದಾರೆ. ‘ವಿಜಯ್ ಅವರಿಗೆ ಇದು ಅರ್ಹ ಗೆಲುವು. ತೀವ್ರವಾದ ಟೀಕೆ-ದಾಳಿಗಳ ನಡುವೆಯೂ ಮೌನವಾಗಿರುವುದು ಮತ್ತು ನಿಮ್ಮ ಕೆಲಸವೇ ಮಾತನಾಡುವಂತೆ ಮಾಡುವುದು ಎಲ್ಲಕ್ಕಿಂತ ದೊಡ್ಡ ಗೆಲುವು. ಈ ಹಿಂದೆ ಮಾಧ್ಯಮಗಳ ಜೊತೆಗಿನ ಸಂವಾದವೊಂದರಲ್ಲಿ ನಾನು ತಮಾಷೆಯಾಗಿ ‘TVK ಎಂದರೆ – Try Vijay As King’ (ವಿಜಯ್ ಅವರನ್ನು ರಾಜನನ್ನಾಗಿ ನೋಡಿ) ಎಂದು ಹೇಳಿದ್ದೆ. ಇಂದು ನೀವು ನಿಜವಾಗಿಯೂ ಒಬ್ಬ ರಾಜನಂತೆ ಎತ್ತರಕ್ಕೆ ಬೆಳೆದು ನಿಂತಿದ್ದೀರಿ. ತಮಿಳುನಾಡಿನ ಜನತೆಗೆ ನೀವು ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸುವಂತಾಗಲಿ ಮತ್ತು ಅಲ್ಲಿ ಸದಾ ಪ್ರಗತಿಯುಂಟಾಗಲಿ’ ಎಂದು ಶಿವಣ್ಣ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ದಳಪತಿ ವಿಜಯ್ ಮನೆ ಎದುರು ಜಮಾಯಿಸಿದ ಅಭಿಮಾನಿಗಳು; ಧನ್ಯವಾದ ತಿಳಿಸಿದ ನಟ

ನಾನಿ, ವಿಜಯ್ ದೇವರಕೊಂಡ, ಶಿವಕಾರ್ತಿಕೇಯನ್, ಟೈಗರ್ ಶ್ರಾಫ್, ರವಿತೇಜ, ರಂಭಾ, ವೆಂಕಟ್ ಕೆ. ನಾರಾಯಣ, ಕಾಜಲ್ ಅಗರ್​​ವಾಲ್, ಚಿಯಾನ್ ವಿಕ್ರಮ್, ಚಿರಂಜೀವಿ, ಮಹೇಶ್ ಬಾಬು, ರಾಮ್ ಚರಣ್, ಸೂರ್ಯ, ರಜನಿಕಾಂತ್, ಎ.ಆರ್. ರೆಹಮಾನ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ದಳಪತಿ ವಿಜಯ್ ಅವರ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಚಿತ್ರರಂಗಕ್ಕೆ ವಿಜಯ್ ಅವರು ನೀಡಿರುವ ಕೊಡುಗೆ ಅಪಾರ. 1992ರಿಂದಲೂ ಹೀರೋ ಆಗಿ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿರುವ ಅವರು ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಹಲವು ಸಮಾಜಮುಖಿ ಕೆಲಸಗಳ ಮೂಲಕವೂ ಅವರು ಗುರುತಿಸಿಕೊಂಡಿದ್ದಾರೆ. ಈಗ ಪೂರ್ಣಪ್ರಮಾಣದ ರಾಜಕಾರಣಿ ಆಗಿದ್ದು, ಅವರಿಂದ ಅಭಿವೃದ್ಧಿ ನಿರೀಕ್ಷಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಿಜಯ್​ನ ಪೋರ್ಟ್​ಫೋಲಿಯೋ ಇಂಟರೆಸ್ಟಿಂಗ್; ಹೂಡಿಕೆಯಲ್ಲಿ ಸಂಪ್ರದಾಯವಾದಿ; ಎಲ್ಲೆಲ್ಲಿದೆ ಅವರ 624 ಕೋಟಿ ರೂ ಹಣ? – Kannada News | Actor turned politician Vijay’s Wealth Revealed: Rs 624 Crore Assets & Traditional Investments

ಚೆನ್ನೈ, ಮೇ 5: ನಟ ವಿಜಯ್ (Vijay) ತಮಿಳುನಾಡು ರಾಜಕೀಯವನ್ನೇ ಅಲುಗಾಡಿಸಿಬಿಟ್ಟಿದ್ದಾರೆ. ವಿಧಾನಸಭೆಯಲ್ಲಿ ಇಡೀ ರಾಜ್ಯವೇ ಸಂಚಲನಗೊಳ್ಳುವಂತೆ ಅವರ ಟಿವಿಕೆ ಪಕ್ಷ (TVK- Tamilaga Vetri Kazhagam) ದಿಗ್ವಿಜಯ ಸಾಧಿಸಿದೆ. ಏಕವ್ಯಕ್ತಿ ಈ ಮಹಾನ್ ಕ್ರಾಂತಿ ಮಾಡಿರುವುದು ಸಾಮಾನ್ಯದ ಸಂಗತಿಯಲ್ಲ. ಅಂತೆಯೇ, ಬಹಳ ಜನರು ವಿಜಯ್ ಅವರ ಹಣಕಾಸು ಶಕ್ತಿ ಮತ್ತು ಹಿನ್ನೆಲೆ ಬಗ್ಗೆ ಮಾಹಿತಿ ತಿಳಿಯಲು ಆಸಕ್ತರಾಗಿದ್ದಾರೆ. ಅವರ ಆಸ್ತಿಪಾಸ್ತಿ, ಹೂಡಿಕೆಯ ವಿವರ ನಿಜಕ್ಕೂ ಕುತೂಹಲಕಾರಿ ಎನಿಸಿದೆ.

ಹೊಸ ತಲೆಮಾರಿನ ಜನರನ್ನು ಮತಪೆಟ್ಟಿಗೆಗೆ ಆಕರ್ಷಿಸಿದ ವಿಜಯ್ ಅವರು ಹೂಡಿಕೆ ವಿಚಾರದಲ್ಲಿ ಮಹಾನ್ ಸಂಪ್ರದಾಯಸ್ಥರಂತೆ ಗೋಚರಿಸುತ್ತಾರೆ. ಅವರು ಚುನಾವಣಾ ಅಫಿಡವಿಟ್​ನಲ್ಲಿ ಘೋಷಿಸಿಕೊಂಡ ಒಟ್ಟು ಆಸ್ತಿ 624 ಕೋಟಿ ರೂ. ಅದರಲ್ಲಿ ಚರಾಸ್ತಿ 404 ಕೋಟಿ ರೂ, ಚಿರಾಸ್ತಿ 220 ಕೋಟಿ ರೂ. ಶೂನ್ಯ ಸಾಲ ಹೊಂದಿರುವ ಅಪರೂಪದ ರಾಜಕಾರಣಿ.

ವಿಜಯ್ ಅವರ ಆಸ್ತಿಪಾಸ್ತಿ ವಿವರ

ದಳಪತಿ ವಿಜಯ್ ಅವರ ಒಟ್ಟು ಆಸ್ತಿ: 624 ಕೋಟಿ ರೂ

  • ಬ್ಯಾಂಕ್​ಗಳಲ್ಲಿ: 404 ಕೋಟಿ ರೂ
  • ರಿಯಲ್ ಎಸ್ಟೇಟ್ ಆಸ್ತಿಗಳು: 220 ಕೋಟಿ ರೂ
  • ವಾರ್ಷಿಕ ಆದಾಯ: 184.53 ಕೋಟಿ ರೂ

ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಇದ್ದೂ ಅದನ್ನು ಬಳಸದೇ ಇದ್ದರೆ ಏನಾಗುತ್ತೆ? ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತಾ?

ವಿಜಯ್ ಅವರ ಬ್ಯಾಂಕ್ ಡೆಪಾಸಿಟ್​ಗಳು

  • ಚೆನ್ನೈನ ಸಾಲಿಗ್ರಾಮಮ್​ನಲ್ಲಿರುವ ಇಂಡಿಯನ್ ಓವರ್​ಸೀಸ್ ಬ್ಯಾಂಕ್​ನ ಒಂದು ಸೇವಿಂಗ್ಸ್ ಅಕೌಂಟ್​ನಲ್ಲಿ 213 ಕೋಟಿ ರೂ ಬ್ಯಾಲನ್ಸ್ ಹೊಂದಿದ್ದಾರೆ.
  • ಎಕ್ಸಿಸ್ ಬ್ಯಾಂಕ್​ನಲ್ಲಿ 40 ಕೋಟಿ ರೂ, ಐಒಬಿಯಲ್ಲಿ 25 ಕೊಟಿ ರೂ, ಎಚ್​ಡಿಎಫ್​ಸಿ ಬ್ಯಾಂಕಲ್ಲಿ 20 ಕೋಟಿ ರೂ, ಎಸ್​ಬಿಐನಲ್ಲಿ 15 ಕೋಟಿ ರೂ ಹೀಗೆ ವಿವಿಧ ಬ್ಯಾಂಕುಗಳಲ್ಲಿ 100 ಕೋಟಿ ರೂ ಮೊತ್ತದ ಫಿಕ್ಸೆಡ್ ಡೆಪಾಸಿಟ್​ಗಳನ್ನು ಹೊಂದಿದ್ದಾರೆ.
  • ಷೇರುಗಳಲ್ಲಿ ಅವರ ಹೂಡಿಕೆ 20 ಲಕ್ಷ ರೂಗಿಂತಲೂ ಕಡಿಮೆ. ಜಯನಗರ್ ಪ್ರಾಪರ್ಟಿ ಷೇರುಗಳಲ್ಲಿ 19.69 ಲಕ್ಷ ರೂ, ಐಒಬಿಯ ಷೇರುಗಳಲ್ಲಿ 9,600 ರೂ ಮತ್ತು ಸನ್ ಪೇಪರ್ ಮಿಲ್ ಷೇರುಗಳಲ್ಲಿ 25,000 ರೂ ಹೂಡಿಕೆ ಮಾಡಿದ್ದಾರೆ.

ವಿಜಯ್ ಅವರ ರಿಯಲ್ ಎಸ್ಟೇಟ್ ಹೂಡಿಕೆಗಳು

  • ವಿಜಯ್ ಅವರ ಸ್ಥಿರಾಸ್ತಿಗಳ ಮೌಲ್ಯ 220 ಕೋಟಿ ರೂನಷ್ಟು ಇದೆ. ನೀಲಂಕರೈ, ಸಾಲಿಗ್ರಾಮಮ್, ಮೈಲಾಪುರ್, ಎಗ್ಮೋರ್ ಮತ್ತಿತರೆಡೆ 115 ಕೋಟಿ ರೂ ಮೌಲ್ಯದ 10 ವಾಸ ಸ್ಥಳಗಳನ್ನು ಹೊಂದಿದ್ದಾರೆ.
  • ಪರಿವಾಕ್ಕಮ್, ತ್ಯಾಗರಾಜನಗರ್, ಶೋಲಿಂಗನಲ್ಲೂರ್, ಕೋಪ್ಪೂರ್​ನಲ್ಲಿ 82.8 ಕೋಟಿ ರೂ ಮೌಲ್ಯದ ಕಮರ್ಷಿಯಲ್ ಆಸ್ತಿಗಳನ್ನು ಹೊಂದಿದ್ದಾರೆ.
  • ವಾಟ್ಟಪಟ್ಟಿ ಗ್ರಾಮ್, ಕೊಡೈಕೆನಲಾಲ್​ನಲ್ಲಿ 20 ಲಕ್ಷ ರೂ ಮೌಲ್ಯದ ಕೃಷಿ ಭೂಮಿ ಹೊಂದಿದ್ದಾರೆ.
  • ಪೋರೂರ್, ಸಾಲಿಗ್ರಾಮಮ್ ಮತ್ತು ನೀಲಂಕರೈನಲ್ಲಿ 22 ಕೋಟಿ ರೂ ಮೌಲ್ಯದ ಕೃಷಿಯೇತರ ಜಮೀನು ಹೊಂದಿದ್ದಾರೆ.

ವಿಜಯ್ ಅವರ ಒಟ್ಟಾರೆ ಹೂಡಿಕೆ ಪ್ರವೃತ್ತಿ ಹೇಗೆ?

ಅವರ ಆಸ್ತಿಪಾಸ್ತಿ ಮತ್ತು ಹೂಡಿಕೆ ಗಮನಿಸಿದರೆ ವಿಜಯ್ ಅವರು ಸಂಪ್ರದಾಯಸ್ಥರಂತೆ ಗೋಚರವಾಗುತ್ತಾರೆ. ಹಿಂದಿನ ತಲೆಮಾರುಗಳ ಜನರ ರೀತಿಯಲ್ಲಿ ಹೆಚ್ಚಿನ ಹಣವು ಬ್ಯಾಂಕ್ ಡೆಪಾಸಿಟ್ ಮತ್ತು ರಿಯಲ್ ಎಸ್ಟೇಟ್​ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಷೇರುಗಳಲ್ಲಿ ಶೇ. 1ಕ್ಕಿಂತಲೂ ಕಡಿಮೆ ಹೂಡಿಕೆ ಮಾಡಿರುವುದು ಗಮನಾರ್ಹ.

ಇದನ್ನೂ ಓದಿ: ಲಕ್ಷ ರೂ ಹೂಡಿಕೆಯಿಂದ 5,000 ರೂ ಪಿಂಚಣಿ; ಜನಪ್ರಿಯವಾಗುತ್ತಿದೆ ಎಪಿವೈ ಪೆನ್ಷನ್ ಸ್ಕೀಮ್

ವಿಜಯ್ ಅವರ ವಾಹನ, ಒಡವೆ ಇತ್ಯಾದಿ ಆಸ್ತಿಗಳು

ವಿಜಯ್ ಅವರು ಐದು ಕಾರು ಮತ್ತು ಒಂದು ಬೈಕ್ ಹೊಂದಿದ್ದಾರೆ. ಇವೆಲ್ಲವೂ ಕಳೆದ ಐದಾರು ವರ್ಷಗಳಲ್ಲಿ ಖರೀದಿಸಿರುವಂಥವು. ಟೊಯೊಟಾ ಲೆಕ್ಸಸ್ 350, ಬಿಎಂಡಬ್ಲ್ಯು ಐ7, ಟೊಯೊಟಾ ವೆಲ್​ಫೈರ್, ಬಿಎಂಡಬ್ಲ್ಯು 530, ಮಾರುತಿ ಸ್ವಿಫ್ಟ್, ಟಿವಿಎಸ್ ಎಕ್ಸ್​ಎಲ್ ಸೂಪರ್ ಬೈಕ್ ವಾಹನಗಳಿವೆ ಎಂದು ವಿಜಯ್ ಘೋಷಿಸಿಕೊಂಡಿದ್ದಾರೆ.

ಇದರಲ್ಲಿ ಟೊಯೊಟಾ ಲೆಕ್ಸಸ್ ಕಾರಿನ ಮೌಲ್ಯ ಮೂರು ಕೋಟಿ ರೂ ಇದೆ. ಬಿಎಂಡಬ್ಲ್ಯು ಐ7 ಕಾರಿನ ಮೌಲ್ಯ 2 ಕೋಟಿ ರೂಗೂ ಅಧಿಕ ಇದೆ.

ವಿಜಯ್ ಅವರು 1.2 ಕೋಟಿ ರೂ ಮೌಲ್ಯದ 883 ಗ್ರಾಮ್ ತೂಕದ ಚಿನ್ನ ಮತ್ತು ಒಡವೆ ಆಸ್ತಿಗಳನ್ನು ಹೊಂದಿದ್ದಾರೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬಂಗಾಳದಲ್ಲಿ ಬಿಜೆಪಿ ಗೆಲುವಿನಿಂದ ದುರ್ಗಾ ದೇವಸ್ಥಾನಕ್ಕೂ ಸಿಕ್ಕಿತು ಮುಕ್ತಿ! – Kannada News | West Bengal Asansol Durga temple shut for several years reopened after BJPs huge win

ಕೊಲ್ಕತ್ತಾ, ಮೇ 5: ಪಶ್ಚಿಮ ಬಂಗಾಳದಲ್ಲಿ (West Bengal Election Results) ಬಿಜೆಪಿ ಯಾರೂ ಊಹಿಸದ ರೀತಿಯಲ್ಲಿ ಅದ್ಭುತವಾದ ಪ್ರದರ್ಶನ ನೀಡಿದೆ. ಭಾರೀ ಬಹುಮತದಿಂದ ಬಂಗಾಳದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿಯ ಗೆಲುವು ಯಾವೆಲ್ಲ ರೀತಿಯ ಬದಲಾವಣೆಗಳನ್ನು ತರಬಹುದು ಎಂಬ ಕುತೂಹಲ ಇಡೀ ದೇಶದ ಜನರಲ್ಲಿ ಇದೆ. ಏಕೆಂದರೆ, ಪಶ್ಚಿಮ ಬಂಗಾಳದ ಇತಿಹಾಸದಲ್ಲಿ ಒಂದು ಬಾರಿಯೂ ಬಿಜೆಪಿ ಅಧಿಕಾರ ಪಡೆದಿರಲಿಲ್ಲ. ಬಿಜೆಪಿ ಗೆದ್ದ ಮರುದಿನವೇ ಹಲವಾರು ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ಅಸನ್ಸೋಲ್ ದುರ್ಗಾ ದೇವಸ್ಥಾನದ ಬಾಗಿಲನ್ನು ತೆರೆಯಲಾಗಿದೆ.

ಪಶ್ಚಿಮ ಬಂಗಾಳದ ಪಶ್ಚಿಮ ಬಂಗಾಳದಲ್ಲಿ ಶ್ರೀ ಶ್ರೀ ದುರ್ಗಾಮಾತಾ ಚಾರಿಟೇಬಲ್ ಟ್ರಸ್ಟ್ ನಿರ್ವಹಿಸುತ್ತಿರುವ ದುರ್ಗಾ ದೇವಸ್ಥಾನವು ಹಲವಾರು ವರ್ಷಗಳಿಂದ ಮುಚ್ಚಲ್ಪಟ್ಟಿತ್ತು. ಇಂದು ಈ ದೇವಾಲಯ ಭಕ್ತರಿಗೆ ಮತ್ತೆ ತೆರೆಯಲ್ಪಟ್ಟಿದೆ. ಈ ದೇವಾಲಯದ ಪುನರಾರಂಭದ ನಂತರ, ಸ್ಥಳೀಯ ಬಿಜೆಪಿ ನಾಯಕರು ಇದನ್ನು ಈ ಪ್ರದೇಶದಲ್ಲಿ ಬದಲಾಗುತ್ತಿರುವ ರಾಜಕೀಯ ವಾತಾವರಣದ ಸಂಕೇತವೆಂದು ಎತ್ತಿ ತೋರಿಸಿದರು. ವಿಧಾನಸಭಾ ಚುನಾವಣೆಯಲ್ಲಿ ಅಸನ್ಸೋಲ್ ದಕ್ಷಿಣ ಸ್ಥಾನವನ್ನು 40,839 ಮತಗಳ ಅಂತರದಿಂದ ಗೆದ್ದಿರುವ ಅಗ್ನಿಮಿತ್ರ ಪಾಲ್ ಬಂಗಾಳದ ಮುಖ್ಯಮಂತ್ರಿ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿಯಲ್ಲೂ ಇದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದಿಂದ ಕೇರಳ ವರೆಗೆ… ಶಾಸಕರಾಗಿ ಆಯ್ಕೆಯಾದ ಮುಸ್ಲಿಮರೆಷ್ಟು ಗೊತ್ತೇ? ಅಚ್ಚರಿಯ ಅಂಕಿಅಂಖ್ಯೆ ಇಲ್ಲಿದೆ ನೋಡಿ

ಅಸನ್ಸೋಲ್ ಉತ್ತರ ಕ್ಷೇತ್ರದಿಂದ ಹೊಸದಾಗಿ ಆಯ್ಕೆಯಾದ ಶಾಸಕ ಕೃಷ್ಣೇಂದು ಮುಖರ್ಜಿ ಅವರು ತಮ್ಮ ಗೆಲುವಿನ ನಂತರ ಈ ದುರ್ಗಾ ದೇವಾಲಯಕ್ಕೆ ಭೇಟಿ ನೀಡಿದರು. ಅವರು ಈ ಹಿಂದೆ ತಮ್ಮ ಪ್ರಚಾರದ ಸಮಯದಲ್ಲಿ ವರ್ಷವಿಡೀ ದೇವಾಲಯ ತೆರೆದಿರುವಂತೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಅದರಂತೆ ಅವರು ಗೆದ್ದ ಮರುದಿನವೇ ಈ ದೇವಸ್ಥಾನದ ಬಾಗಿಲು ತೆರೆಯಲಾಗಿದೆ.

ಇದನ್ನೂ ಓದಿ: ಎಸ್​ಐಆರ್​​ನಲ್ಲಿ ಅತಿ ಹೆಚ್ಚು ಮತದಾರರು ಡಿಲೀಟ್ ಆಗಿದ್ದ ಕ್ಷೇತ್ರಗಳಲ್ಲಿ ಟಿಎಂಸಿ ಪ್ರದರ್ಶನ ಹೇಗಿತ್ತು?

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 294 ಸದಸ್ಯರ ವಿಧಾನಸಭೆಯಲ್ಲಿ 206 ಸ್ಥಾನಗಳನ್ನು ಗೆಲ್ಲುವ ಮೂಲಕ ಮೂರನೇ ಎರಡರಷ್ಟು ಬಹುಮತವನ್ನು ದಾಟಿ ಐತಿಹಾಸಿಕ ಗೆಲುವು ಸಾಧಿಸಿತು. ಈ ಫಲಿತಾಂಶವು ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ನ ದೀರ್ಘ 15 ವರ್ಷಗಳ ಆಡಳಿತವನ್ನು ಕೊನೆಗೊಳಿಸಿತು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭವಾನಿಪುರ್ ಸ್ಥಾನವನ್ನು ಬಿಜೆಪಿ ನಾಯಕ ಸುವೇಂದು ಅಧಿಕಾರಿ ವಿರುದ್ಧ ಸೋತಿದ್ದರಿಂದ ಈ ಚುನಾವಣೆಯು ಟಿಎಂಸಿಯ ಅಧಃಪತನದ ಮುನ್ನುಡಿ ಎಂದೇ ಪರಿಗಣಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪೋಕ್ಸೋ ಕೇಸ್​​ ಆರೋಪಿಯ ಬರ್ಬರ ಕೊಲೆ: ಶವ ಸಿಕ್ಕಿದ್ದು ರಾಜಕಾಲುವೆಯಲ್ಲಿ! – Kannada News | Revenge Killing in Bengaluru: Girl’s Father, 3 Arrested in POCSO Accused Murder

ಬೆಂಗಳೂರು, ಮೇ 05: ಪೋಕ್ಸೋ ಕೇಸ್​​ನ ಆರೋಪಿಯನ್ನು ಬಾಲಕಿಯ ತಂದೆಯೇ ಕೊಲೆ ಮಾಡಿಸಿರುವ ಆಘಾತಕಾರಿ ಘಟನೆ ಬೆಂಗಳೂರಲ್ಲಿ (Bengaluru) ನಡೆದಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮೂಲದ ರಮೇಶ್ ಶ್ರೀಶೈಲ ಪಟ್ಟದಕಲ್ಮಠ (36) ಮೃತ ವ್ಯಕ್ತಿಯಾಗಿದ್ದು, ಕೊಲೆ ಬಳಿಕ ಆರೋಪಿಗಳು ಶವವನ್ನು ಯಲಹಂಕ ಸಮೀಪದ ಅಲ್ಲಾಳಸಂದ್ರ ರಾಜಕಾಲುವೆಯಲ್ಲಿ ಎಸೆದಿದ್ದರು ಎನ್ನಲಾಗಿದೆ. ಪ್ರಕರಣ ಸಂಬಂಧ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

  • ಪೊಕ್ಸೋ ಪ್ರಕರಣದ ಆರೋಪಿಯ ಭೀಕರ ಕೊಲೆ
  • ಬಾಲಕಿ ತಂದೆ ಮೇಲೆಯೇ ಕೊಲೆ ಮಾಡಿಸಿದ ಆರೋಪ
  • ಹತ್ಯೆ ಬಳಿಕ ಶವವನ್ನು ಕಾಲುವೆಗೆ ಎಸೆದಿದ್ದ ದುಷ್ಟರು

ಇದನ್ನೂ ಓದಿ: ಮದುವೆ ಆಗಲು ಒಪ್ಪದ್ದಕ್ಕೆ ಮಹಿಳೆಯ ಭೀಕರ ಕೊಲೆ; ಬಳಿಕ ಆರೋಪಿಯೂ ಆತ್ಮಹತ್ಯೆ

ರಮೇಶ್ ಬೆಂಗಳೂರಿನಲ್ಲಿ ಫುಡ್​​ ಡೆಲಿವರಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಯಲಹಂಕದ ಪೇಯಿಂಗ್ ಗೆಸ್ಟ್ ವಸತಿಗೃಹದಲ್ಲಿ ವಾಸವಾಗಿದ್ದ. ರಾಜಕಾಲುವೆಯಲ್ಲಿ ಈತನ ಶವ ಪತ್ತೆಯಾದ ಹಿನ್ನೆಲೆ, ಕುಟುಂಬಸ್ಥರಿಗೆ ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದರು. ಬಳಿಕ ಡಾ.ಬಿ.ಆರ್.ಅಂಬೇಡ್ಕರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ರಮೇಶ್​​ ಸಂಬಂಧಿಕರು, ಪೋಕ್ಸೋ ಪ್ರಕರಣದ ಬಾಲಕಿಯ ತಂದೆ ಹಾಗೂ ಇನ್ನೊಬ್ಬ ಆರೋಪಿಯಾದ ಚಿನ್ನಯ್ಯ ಎಂಬಾತನನೇ ಕೊಲೆ ಮಾಡಿರಬಹುದೆಂಬ ಅನುಮಾನ ವ್ಯಕ್ತಪಡಿಸಿದ್ದರು.

ಈ ಹಿನ್ನೆಲೆ ತನಿಖೆ ನಡೆಸಿದ ಪೊಲೀಸರು ಬಾಲಕಿಯ ತಂದೆಯೊಂದಿಗೆ ಚಿನ್ನಯ್ಯ ಮಾತಪತಿ (29), ಚೇತನ ಮದಾರ (26) ಮತ್ತು ವಿನಾಯಕ ಗುರುವ (19) ಎಂಬವರನ್ನು ಬಂಧಿಸಿದ್ದಾರೆ. ರಮೇಶ್ ಹಾಗೂ ಬಾಲಕಿ ಸಂಬಂಧಿಕರಾಗಿದ್ದು, ಇಬ್ಬರ ನಡುವೆ ಪ್ರೀತಿಯ ಸಂಬಂಧ ಇತ್ತು ಎಂದು ತಿಳಿದುಬಂದಿದೆ. 2022ರಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ರಮೇಶ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಬಾಲಕಿಯನ್ನು ಶಿಕ್ಷಣಕ್ಕಾಗಿ ಪೋಷಕರು ಬೆಂಗಳೂರಿಗೆ ಕಳುಹಿಸಿದ್ದರೆ, ಜೈಲಿನಿಂದ ಬಿಡುಗಡೆಯಾದ ಬಳಿಕ ರಮೇಶ್ ಕೂಡ ಬಾಲಕಿ ಬೆಂಗಳೂರಿನಲ್ಲಿ ಇದ್ದುದನ್ನು ತಿಳಿದು ಇಲ್ಲಿ ಬಂದಿದ್ದ ಎನ್ನಲಾಗಿದೆ.

ಮಗಳ ಬಗ್ಗೆ ಆತಂಕಗೊಂಡ ತಂದೆ, ರಮೇಶ್ ಮೇಲೆ ಪ್ರತೀಕಾರ ತೀರಿಸಿಕೊಳ್ಳುವ ಪ್ಲ್ಯಾನ್​​ ಮಾಡಿದ್ದರು. ಹೀಗಾಗಿ ತನ್ನ ಸ್ನೇಹಿತರಾದ ಚಿನ್ನಯ್ಯ, ಚೇತನ ಮತ್ತು ವಿನಾಯಕರನ್ನು ಕಾರಿನಲ್ಲಿ ಬೆಂಗಳೂರಿಗೆ ಕಳುಹಿಸಿ ರಮೇಶ್‌ನನ್ನು ಹತ್ಯೆ ಮಾಡಲು ಸೂಚನೆ ನೀಡಿದ್ದರು. ಅದರಂತೆ ಆರೋಪಿಗಳು ರಮೇಶ್‌ನ್ನು ಬಾರ್‌ಗೆ ಕರೆದುಕೊಂಡು ಹೋಗಿ, ಬಳಿಕ ಹತ್ಯೆ ಮಾಡಿದ್ದರು. ಆ ಬಳಿಕ ಅಲ್ಲಾಳಸಂದ್ರ ರಾಜಕಾಲುವೆಗೆ ಶವ ಎಸೆದಿದ್ದರು ಎಂಬುದು ಪೊಲೀಸ್​​ ತನಿಖೆ ವೇಳೆ ಗೊತ್ತಾಗಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

TV9 Kannada News Live: ಉಪಚುನಾವಣೆ ಗೆದ್ದರೂ ‘ಕೈ’ಗೆ ಹೊಸ ಚಿಂತೆ, ಟಿವಿಕೆ ಮೈತ್ರಿ ಬಗ್ಗೆ ಅಂತೆಕಂತೆ – Kannada News | TV9 Kannada News Live: Muslim Votes shifts From Congress in Dvanagere, Vijay’s Alliance curiosity in Tamilnadu

ಬೆಂಗಳೂರು, ಮೇ 05: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶ ಕಾಂಗ್ರೆಸ್‌ಗೆ ಆತಂಕ ಮೂಡಿಸಿದೆ. ಎಲೆಕ್ಷನ್​​ನಲ್ಲಿ ಕಾಂಗ್ರೆಸ್​​ ಅಭ್ಯರ್ಥಿ ಸಮರ್ಥ್​​ ಶಾಮನೂರು ಗೆದ್ದಿದ್ದರೂ, ವಿಜಯದ ಅಂತರ ಬಹಳ ಕಡಿಮೆಯಾಗಿರೋದು ಮುಸ್ಲಿಂ ಮತದಾರರು ಕಾಂಗ್ರೆಸ್‌ನಿಂದ ದೂರ ಸರಿದಿರುವುದನ್ನು ಸ್ಪಷ್ಟವಾಗಿ ತೋರಿಸುತ್ತಿದೆ ಎಂದು ವಿಶ್ಲೇಷಿಸಲಾಗಿದೆ. ಎಸ್​​ಡಿಪಿಐ ಅಭ್ಯರ್ಥಿ ಸೇರಿದಂತೆ ಚುನಾವಣೆಗೆ ಸ್ಪರ್ಧಿಸಿದ್ದ ಮುಸ್ಲಿಂ ಸಮಉದಾಯಕ್ಕೆ ಸೇರಿರುವ ಕ್ಯಾಂಡಿಡೇಟ್​​ಗಳು 20 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದುಕೊಂಡಿದ್ದಾರೆ. ಈ ಬೆಳವಣಿಗೆಯು ಮುಂದಿನ ದಿನಗಳಲ್ಲಿ 40-50 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ದೊಡ್ಡ ಮಟ್ಟದ ಹಾನಿಯನ್ನುಂಟು ಮಾಡಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ.

ವಿಜಯ್​​ ಮುಂದಿನ ನಡೆಯೇ ಕುತೂಹಲ

ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶದ ಬೆನ್ನಲ್ಲೇ ನಟ ದಳಪತಿ ವಿಜಯ್​​ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದರೂ ಸರ್ಕಾರ ರಚನೆಗೆ ಅಗತ್ಯ ಬಹುತಗಳ ಕೊರತೆ ಇದೆ. ಟಿವಿಕೆ 108 ಸ್ಥಾನಗಳನ್ನು ಗೆದ್ದಿದ್ದು, ಸರ್ಕಾರ ರಚಿಸಲು ಅಗತ್ಯವಿರುವ ಮ್ಯಾಜಿಕ್ ಸಂಖ್ಯೆ 118 ತಲುಪಲು ಇನ್ನೂ 10 ಸ್ಥಾನಗಳ ಕೊರತೆಯಿದೆ. ಹೀಗಾಗಿ ವಿಜಯ್​​ ಮುಂದಿನ ನಡೆ ಏನು ಎಂಬ ಪ್ರಶ್ನೆ ಉದ್ಭವಿಸಿದೆ. ಯಾರ ಜೊತೆಗೆ ಟಿವಿಕೆ ಮೈತ್ರಿ ಮಾಡಿಕೊಳ್ಳಬುದೆಂಬ ಕುತೂಹಲವೂ ಹೆಚ್ಚಿದೆ.

ಇದನ್ನೂ ಓದಿ: ಪೀಣ್ಯ ಫ್ಲೈಓವರ್ ಬಂದ್, ಹೋಟೆಲ್ ತಿಂಡಿ ದುಬಾರಿ! ಇಲ್ಲಿವೆ ಈ ಹೊತ್ತಿನ ಪ್ರಮುಖ ಅಪ್​ಡೇಟ್ಸ್

ಬಂಗಾಳ, ಅಸ್ಸಾಂನಲ್ಲಿ ಮುಸ್ಲಿಂ ಶಾಸಕರ ಸಂಖ್ಯೆ ಇಳಿಕೆ

ಜಮ್ಮು ಮತ್ತು ಕಾಶ್ಮೀರದ ನಂತರ ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಈ ಬಾರಿ ಶಾಸಕರ ಸಂಖ್ಯೆ 26ಕ್ಕೆ ಕುಸಿದಿದೆ. ಒಟ್ಟು 294 ಕ್ಷೇತ್ರಗಳಿರುವ ಇಲ್ಲಿ ಕಳೆದಬಾರಿ 42 ಮಂದಿ ಮುಸ್ಲಿಂ ಶಾಸಕರಿದ್ದರು. ಹಾಗೆಯೇ ಅಸ್ಸಾಂನ ಒಟ್ಟು 126 ಸ್ಥಾನಗಳ ಪೈಕಿ ಈ ಬಾರಿ 22 ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಆದರೆ ಕೇರಳದಲ್ಲಿ ಮುಸ್ಲಿಂ ಸಾಸಕರ ಸಂಖ್ಯೆ 32 ರಿಂದ 35ಕ್ಕೆ ಏರಿದ್ದರೆ, ತಮಿಳುನಾಡಿನಲ್ಲಿ ಈ ಬಾರಿ ಒಟ್ಟು 9 ಮುಸ್ಲಿಂ ಶಾಸಕರು ವಿಧಾನಸಭೆ ಪ್ರವೇಶಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವಿಗೆ ಅಪಸ್ವರ

ಪಶ್ಚಿಮ ಬಂಗಾಳದಲ್ಲಿ 91 ಲಕ್ಷ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವುದೂ ಸೇರಿದಂತೆ ಚುನಾವಣಾ ಆಯೋಗದ ಹಲವು ಕ್ರಮಗಳೇ ಬಿಜೆಪಿ ಗೆಲುವಿಗೆ ಕಾರಣವಾಯಿತು ಎಂದು ಕರ್ನಾಟಕದ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವು ಅವರದ್ದಲ್ಲ. ಬದಲಾಗಿ ಅದು ಚುನಾವಣಾ ಆಯೋಗದ ಜಯ. ಚುನಾವಣಾ ಆಯೋಗವನ್ನು ಜೇಬಿನಲ್ಲಿ ಇಟ್ಟುಕೊಂಡು ಬಿಜೆಪಿಗರು ಚುನಾವಣೆ ನಡೆಸಿದ್ದರು ಎಂದು ಖರ್ಗೆ ದೂರಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 2:55 pm, Tue, 5 May 26

Source link

ಎಸ್​ಐಆರ್​​ನಲ್ಲಿ ಅತಿ ಹೆಚ್ಚು ಮತದಾರರು ಡಿಲೀಟ್ ಆಗಿದ್ದ ಕ್ಷೇತ್ರಗಳಲ್ಲಿ ಟಿಎಂಸಿ ಪ್ರದರ್ಶನ ಹೇಗಿತ್ತು? – Kannada News | SIR Impact in West Bengal How TMC performed where voter deletions were highest

ಕೊಲ್ಕತ್ತಾ, ಮೇ 5: ಎಸ್​ಐಆರ್​​ ವಿರುದ್ಧ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಸಮರ ಸಾರಿತ್ತು. ಇದಕ್ಕಾಗಿ ಸಿಎಂ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್​ನಲ್ಲಿ ತಾವೇ ವಾದವನ್ನೂ ಮಾಡಿಕೊಂಡು ಬಂಗಾಳದಲ್ಲಿ ಎಸ್​ಐಆರ್​ (SIR) ರದ್ದುಗೊಳಿಸಬೇಕೆಂದು ಪಟ್ಟು ಹಿಡಿದಿದ್ದರು. ಆದರೂ ಎಸ್​ಐಆರ್​​ ಪ್ರಕ್ರಿಯೆಯನ್ನು ರದ್ದುಗೊಳಿಸಿರಲಿಲ್ಲ. ಎಸ್​ಐಆರ್​​ನಿಂದಾಗಿ ಲಕ್ಷಾಂತರ ಮತದಾರರನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ. ಟಿಎಂಸಿ ಹೆಚ್ಚು ಪ್ರಾಬಲ್ಯ ಹೊಂದಿರುವ ಕ್ಷೇತ್ರಗಳಲ್ಲೇ ಹೆಚ್ಚು ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಮಮತಾ ಬ್ಯಾನರ್ಜಿ (Mamata Banerjee) ಆರೋಪಿಸಿದ್ದರು. ಹಾಗಾದರೆ, ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎಸ್​ಐಆರ್​​ನಲ್ಲಿ ಅತಿ ಹೆಚ್ಚು ಮತದಾರರ ಹೆಸರು ಡಿಲೀಟ್ ಆಗಿರುವ ಕ್ಷೇತ್ರಗಳಲ್ಲಿ ಟಿಎಂಸಿ ಪ್ರದರ್ಶನ ಹೇಗಿತ್ತು? ಎಂಬ ಕುತೂಹಲ ನಿಮಗೂ ಇರಬಹುದು. ಅದಕ್ಕೆ ಉತ್ತರ ಇಲ್ಲಿದೆ.

ಚುನಾವಣೆಗೂ ಸ್ವಲ್ಪ ಮೊದಲು ಚುನಾವಣಾ ಆಯೋಗವು ಮೃತಪಟ್ಟ ಮತ್ತು ನಕಲಿ ಮತದಾರರ ದಾಖಲೆಗಳನ್ನು ಸ್ವಚ್ಛಗೊಳಿಸುವ ಗುರಿಯನ್ನು ಹೊಂದಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಅನ್ನು ಕೈಗೆತ್ತಿಕೊಂಡಿತ್ತು. ಇದಾದ ನಂತರ ರಾಜ್ಯದ 90 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿತ್ತು. ಕೇಂದ್ರ ಸರ್ಕಾರದ ಈ ಕ್ರಮದಿಂದ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಭಾರೀ ಹೊಡೆತ ಬೀಳಲಿದೆ ಎಂದು ಟಿಎಂಸಿ ಆರೋಪಿಸಿತ್ತು.

ಇದನ್ನೂ ಓದಿ: ಚುನಾವಣಾ ಫಲಿತಾಂಶದ ಬೆನ್ನಲ್ಲೇ ಬಂಗಾಳದಲ್ಲಿ ಟಿಎಂಸಿ ಕಚೇರಿಗೆ ಬೆಂಕಿ ಹಚ್ಚಿ ಧ್ವಂಸ

ಆದರೆ, ಆಶ್ಚರ್ಯಕರ ಸಂಗತಿಯೆಂದರೆ ಯಾವ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆಯೋ ಅಲ್ಲೆಲ್ಲ ಟಿಎಂಸಿ ಉತ್ತಮ ಪ್ರದರ್ಶನವನ್ನೇ ನೀಡಿದೆ. ಪಶ್ಚಿಮ ಬಂಗಾಳದ 147 ಕ್ಷೇತ್ರಗಳಲ್ಲಿ ತಲಾ 25,000ಕ್ಕೂ ಹೆಚ್ಚು ಹೆಸರುಗಳನ್ನು ತೆಗೆದುಹಾಕಲಾಗಿದೆ. ಎನ್​ಡಿಟಿವಿ ನಡೆಸಿದ ವಿಶ್ಲೇಷಣೆಯ ಪ್ರಕಾರ, ಈ ಸ್ಥಾನಗಳಲ್ಲಿ ಗಮನಾರ್ಹ ಪಾಲು ಬಿಜೆಪಿಗೆ ಹೋಗಿದ್ದು, ಅದು 147ರಲ್ಲಿ 95 ಸ್ಥಾನಗಳನ್ನು ಪಡೆದುಕೊಂಡಿದೆ. ತೃಣಮೂಲ ಪಕ್ಷ 51 ಗೆದ್ದರೆ, ಕಾಂಗ್ರೆಸ್ ಕೇವಲ ಒಂದನ್ನು ಮಾತ್ರ ಗೆದ್ದಿತು.

ಇದನ್ನೂ ಓದಿ: ಸುಪ್ರೀಂಕೋರ್ಟ್​​ನಲ್ಲೂ ಟಿಎಂಸಿಗೆ ಹಿನ್ನಡೆ: ಚುನಾವಣಾ ಆಯೋಗದ ನಡೆ ಪ್ರಶ್ನಿಸಿದ್ದ ಅರ್ಜಿ ವಜಾ

15,000 ರಿಂದ 25,000 ಹೆಸರುಗಳನ್ನು ಡಿಲೀಟ್ ಮಾಡಿರುವ 67 ಕ್ಷೇತ್ರಗಳಲ್ಲಿ, ಬಿಜೆಪಿ ಮತ್ತೆ 47 ಗೆಲುವುಗಳೊಂದಿಗೆ ಮುನ್ನಡೆ ಸಾಧಿಸಿತು. ಟಿಎಂಸಿಗೆ 19 ಮತ್ತು ಕಾಂಗ್ರೆಸ್‌ಗೆ 1 ಸ್ಥಾನಗಳು ದೊರೆತವು. 5,000ರಿಂದ 15,000 ಹೆಸರುಗಳನ್ನು ಡಿಲೀಟ್ ಮಾಡಲಾಗಿದ್ದ 62 ಸ್ಥಾನಗಳಲ್ಲಿ, ಬಿಜೆಪಿ 50 ಸ್ಥಾನವನ್ನು ಗೆದ್ದಿತು. ಉಳಿದವು ಟಿಎಂಸಿ ಪಾಲಾಯಿತು. 5,000ಕ್ಕಿಂತ ಕಡಿಮೆ ಹೆಸರುಗಳನ್ನು ಡಿಲೀಟ್ ಮಾಡಿದ ಎಲ್ಲಾ 13 ಕ್ಷೇತ್ರಗಳನ್ನು ಬಿಜೆಪಿ ಗೆದ್ದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 3:34 pm, Tue, 5 May 26

Source link

ತಮಿಳುನಾಡಿನಲ್ಲಿ ಅಧಿಕಾರ ಹಸ್ತಾಂತರದ ಪರ್ವ: ಸಚಿವರ ಕೊಠಡಿಗಳು ಖಾಲಿ ಖಾಲಿ, ಬಿರುಸಿನ ಚಟುವಟಿಕೆ – Kannada News | Tamil Nadu Power Transition: Stalin Resigns, Secretariat Buzzes for New Govt

ಚೆನ್ನೈ, ಮೇ 05: ತಮಿಳುನಾಡು(Tamil Nadu) ರಾಜಕೀಯದಲ್ಲಿ ಒಂದು ಯುಗಾಂತ್ಯವಾಗಿದ್ದು, ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್  ಮುಖ್ಯಮಂತ್ರಿ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಚೆನ್ನೈನ ಐತಿಹಾಸಿಕ ಫೋರ್ಟ್ ಸೇಂಟ್ ಜಾರ್ಜ್ ಸಚಿವಾಲಯದಲ್ಲಿ ಹೊಸ ಬದಲಾವಣೆಯ ಗಾಳಿ ಬೀಸುತ್ತಿದೆ.

ಸ್ಟಾಲಿನ್ ಅವರ ರಾಜೀನಾಮೆ ಅಂಗೀಕಾರವಾಗುತ್ತಿದ್ದಂತೆ, ಸಚಿವಾಲಯದ ಸಿಬ್ಬಂದಿಗಳು ಸಚಿವರ ಕೊಠಡಿಗಳನ್ನು ಖಾಲಿ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಕಳೆದ ಐದು ವರ್ಷಗಳಿಂದ ಸಚಿವರ ಕಚೇರಿಗಳನ್ನು ಅಲಂಕರಿಸಿದ್ದ ಸ್ಟಾಲಿನ್ ಹಾಗೂ ಇತರ ನಾಯಕರ ಭಾವಚಿತ್ರಗಳನ್ನು ಅಧಿಕಾರಿಗಳು ಗೌರವಪೂರ್ವಕವಾಗಿ ತೆಗೆಯುತ್ತಿದ್ದಾರೆ. ಸಚಿವರ ವೈಯಕ್ತಿಕ ಫೈಲ್‌ಗಳು, ಸ್ಮರಣಿಕೆಗಳು ಮತ್ತು ಇತರ ಸಾಮಗ್ರಿಗಳನ್ನು ಪ್ಯಾಕ್ ಮಾಡಿ ಅವರ ನಿವಾಸಗಳಿಗೆ ಕಳುಹಿಸುವ ಕೆಲಸ ಬಿರುಸಿನಿಂದ ಸಾಗುತ್ತಿದೆ.

ಸಚಿವಾಲಯದ ಕಾರಿಡಾರ್‌ಗಳಲ್ಲಿ ಈಗ ಕೇವಲ ಪೀಠೋಪಕರಣಗಳ ಸ್ಥಳಾಂತರದ ಸದ್ದು ಕೇಳಿಬರುತ್ತಿದೆ. ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ಸರ್ಕಾರ ಮತ್ತು ಹೊಸ ಸಚಿವ ಸಂಪುಟದ ಸ್ವಾಗತಕ್ಕಾಗಿ ಇಡೀ ಸಚಿವಾಲಯವನ್ನು ಸಜ್ಜುಗೊಳಿಸಲಾಗುತ್ತಿದೆ. ನೂತನ ಮುಖ್ಯಮಂತ್ರಿಗಳ ನೇಮಕವಾದ ಕೂಡಲೇ ಅವರ ಆದ್ಯತೆಗೆ ಅನುಗುಣವಾಗಿ ಕಚೇರಿಗಳನ್ನು ಪುನರ್ ವ್ಯವಸ್ಥೆಗೊಳಿಸಲಾಗುತ್ತದೆ.

ಮತ್ತಷ್ಟು ಓದಿ: ತಮಿಳುನಾಡು ಚುನಾವಣೆ ಫಲಿತಾಂಶಕ್ಕೂ ಮುನ್ನ ಶಿರಡಿ ಸಾಯಿಬಾಬಾ ದರ್ಶನ ಪಡೆದ ವಿಜಯ್

ಸ್ಟಾಲಿನ್ ಅವರ ರಾಜೀನಾಮೆಯು ತಮಿಳುನಾಡಿನಲ್ಲಿ ಅಧಿಕಾರ ಹಸ್ತಾಂತರದ ಅಧಿಕೃತ ಪ್ರಕ್ರಿಯೆಯನ್ನು ಸೂಚಿಸುತ್ತದೆ. ಸಚಿವಾಲಯದಿಂದ ಹೊರಬರುತ್ತಿರುವ ಟ್ರಕ್‌ಗಳು ಮತ್ತು ತೆರವಾಗುತ್ತಿರುವ ಕಚೇರಿಗಳು ರಾಜ್ಯದಲ್ಲಿ ಬದಲಾದ ರಾಜಕೀಯ ಸಮೀಕರಣಕ್ಕೆ ಸಾಕ್ಷಿಯಾಗಿವೆ.

ಸದ್ಯಕ್ಕೆ ಹಂಗಾಮಿ ವ್ಯವಸ್ಥೆಯಡಿ ಆಡಳಿತ ನಡೆಯುತ್ತಿದ್ದು, ಮುಂದಿನ ಕೆಲವೇ ಗಂಟೆಗಳಲ್ಲಿ ತಮಿಳುನಾಡಿನ ನೂತನ ಸಾರಥಿ ಯಾರೆಂಬುದು ಅಧಿಕೃತವಾಗಲಿದೆ. ಸಚಿವಾಲಯದ ಈ ದೃಶ್ಯಗಳು ಪ್ರಜಾಪ್ರಭುತ್ವದ ಸುಗಮ ಅಧಿಕಾರ ಹಸ್ತಾಂತರದ ಸಂಪ್ರದಾಯವನ್ನು ಬಿಂಬಿಸುತ್ತಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೊಸ ಹಾದಿ; ಮಂಜು ಮುಸುಕಿದರೂ ಇನ್ನು ವಿಮಾನ ಹಾರಾಟ ಫುಲ್ ಸೇಫ್! – Kannada News | KIA Airport Gets Smarter: New AI Safety System Enhances Airside Operations

ವಿಮಾನ ನಿಲ್ದಾಣ ಸುರಕ್ಷತೆ, AI ತಂತ್ರಜ್ಞಾನ

ಬೆಂಗಳೂರು, ಮೇ.6: ಇತ್ತೀಚಿನ ದಿನಗಳಲ್ಲಿ ದೇಶ, ವಿದೇಶಗಳಲ್ಲಿ ವಿಮಾನ ಅಪಘಾತಗಳು ಹೆಚ್ಚಾಗುತ್ತಿರುವ ಹೊತ್ತಿನಲ್ಲೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (ಕೆಐಎ) ಪ್ರಯಾಣಿಕರ ಮತ್ತು ವಿಮಾನಗಳ ಸುರಕ್ಷತೆಗಾಗಿ ಹೊಸ ಹೆಜ್ಜೆ ಇಟ್ಟಿದೆ. ವಿಮಾನಗಳು ಓಡಾಡುವ ಜಾಗದಲ್ಲಿ (ಏರ್‌ಸೈಡ್) ಭದ್ರತೆ ಹೆಚ್ಚಿಸಲು ‘ಸ್ಮಾರ್ಟ್ ಏರ್‌ಸೈಡ್ ಸೇಫ್ಟಿ ಸಿಸ್ಟಂʼ ಎಂಬ ಹೊಸ ತಂತ್ರಜ್ಞಾನವನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (ಬಿಐಎಎಲ್‌) ಜಾರಿಗೆ ತಂದಿದೆ.

ಅಪಾಯಕಾರಿ ಜಾಗದಲ್ಲಿ ಹೊಸ ಸುರಕ್ಷತಾ ವ್ಯವಸ್ಥೆ

ವಿಮಾನ ನಿಲ್ದಾಣದೊಳಗೆ ‘ಕ್ರಾಸ್ ಸರ್ವಿಸ್ ರಸ್ತೆ’ಗಳಿರುತ್ತವೆ. ಇಲ್ಲಿ ವಿಮಾನಗಳು ಮತ್ತು ಸಿಬ್ಬಂದಿಯ ವಾಹನಗಳು ಒಟ್ಟೊಟ್ಟಿಗೆ ಓಡಾಡುತ್ತಿರುತ್ತವೆ. ಹೀಗಾಗಿ ಇಲ್ಲಿ ಅಪಘಾತ ಆಗುವ ಸಾಧ್ಯತೆ ಇರುತ್ತದೆ. ಹಿಂದೆ, ಇಲ್ಲಿ ವಾಹನಗಳನ್ನು ನಿಯಂತ್ರಿಸುವ ಲೈಟ್‌ಗಳನ್ನು ಸಿಬ್ಬಂದಿಗಳೇ ಖುದ್ದಾಗಿ ಆನ್/ಆಫ್ ಮಾಡುತ್ತಿದ್ದರು. ಇದರಲ್ಲಿ ಕೆಲವೊಮ್ಮೆ ತಪ್ಪುಗಳಾಗಿ, ವಿಮಾನಗಳ ಹಾರಾಟ ತಡವಾಗುವ ಘಟನೆಗಳೂ ನಡೆಯುತ್ತಿದ್ದವು. ಇದನ್ನು ತಪ್ಪಿಸಲು ಈಗ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

ಎಐ ಕ್ಯಾಮೆರಾಗಳಿಂದ ನಿಗಾ

ಹೊಸ ವ್ಯವಸ್ಥೆಯು ಸ್ಮಾರ್ಟ್ ಕ್ಯಾಮೆರಾಗಳು ಮತ್ತು ಎಐ ತಂತ್ರಜ್ಞಾನವನ್ನು ಒಳಗೊಂಡಿದ್ದು, ಇದು ರಸ್ತೆಯಲ್ಲಿ ಓಡಾಡುವ ವಾಹನಗಳನ್ನು ಗುರುತಿಸಿ, ಏನಾದರೂ ಅಪಾಯ ಎದುರಾದರೆ ತಕ್ಷಣವೇ ಎಚ್ಚರಿಕೆ ನೀಡುತ್ತದೆ. ಯಾರಾದರೂ ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಕ್ಷಣಾರ್ಧದಲ್ಲಿ ಅಧಿಕಾರಿಗಳಿಗೆ ಮಾಹಿತಿ ರವಾನೆಯಾಗುತ್ತದೆ. ಅಲ್ಲದೆ, ಪ್ರತಿಯೊಂದು ಸಣ್ಣ ಅಂಶವೂ ಕಂಪ್ಯೂಟರ್‌ನಲ್ಲಿ ಡಿಜಿಟಲ್ ರೂಪದಲ್ಲಿ ದಾಖಲಾಗುತ್ತದೆ. ಇದರಿಂದ ವಿಮಾನ ನಿಲ್ದಾಣದೊಳಗಿನ ಟ್ರಾಫಿಕ್‌ ನಿರ್ವಹಣೆಯಲ್ಲಿ ಪಾರದರ್ಶಕತೆ ಹೆಚ್ಚಾಗಲಿದೆ. ಜೊತೆಗೆ ಕಾರ್ಯಕ್ಷಮತೆ ಹೆಚ್ಚಾಗಲಿದ್ದು, ನಿಖರ ಕಾರ್ಯಾಚರಣೆಯೂ ಸಾಧ್ಯವಾಗಲಿದೆ.

ಕತ್ತಲು, ಮಂಜಿನಲ್ಲೂ ವಿಮಾನ ನಿಲ್ದಾಣ ಫುಲ್‌ ಸೇಫ್‌!

ಈ ಹೊಸ ತಂತ್ರಜ್ಞಾನವು ವಿಮಾನ ಹಾಗೂ ವಾಹನಗಳ ನಡುವೆ ಒಂದು ಸುರಕ್ಷಿತ ಅಂತರವನ್ನು ನಿರ್ವಹಿಸುತ್ತದೆ. ಇದರಿಂದ ರಾತ್ರಿ ವೇಳೆ ಅಥವಾ ಮಂಜು ಮುಸುಕಿ ಕಡಿಮೆ ಗೋಚರತೆ ಇದ್ದಾಗ ಮನುಷ್ಯರಿಂದ ನಡೆಯುವ ತಪ್ಪುಗಳು ತಪ್ಪಲಿವೆ. ಟ್ರಾಫಿಕ್ ಜಾಮ್ ಇಲ್ಲದೆ ವಿಮಾನಗಳು ಸರಿಯಾದ ಸಮಯಕ್ಕೆ ಹಾರಾಟ ನಡೆಸಲು ಇದು ಸಹಾಯ ಮಾಡಲಿದೆ. ಮುಂದಿನ ದಿನಗಳಲ್ಲಿ ಈ ಮಾಹಿತಿಯನ್ನು ಬಳಸಿಕೊಂಡು ವಿಮಾನ ನಿಲ್ದಾಣದ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲೂ ಯೋಜನೆ ರೂಪಿಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ: ನಾಳೆಯಿಂದ ಮಂಗಳೂರಿನ ಜನ ಕೂಲ್​ ಕೂಲ್: ದಕ್ಷಿಣ ಕನ್ನಡ ಮತ್ತು ಉಡುಪಿಯ ಈ ಭಾಗಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ

ಬಿಐಎಎಲ್‌ನಿಂದ ದಾಖಲೆ ಸಂಖ್ಯೆಯ ಪ್ರಯಾಣಿಕರಿಗೆ ಸೇವೆ

2024–25ನೇ ವರ್ಷದಲ್ಲಿ ಬಿಐಎಎಲ್‌ 4.18 ಕೋಟಿಗೂ ಹೆಚ್ಚು ಜನರಿಗೆ ಸೇವೆ ನೀಡಿದ್ದು, ದಕ್ಷಿಣ ಭಾರತದಲ್ಲಿ ಈ ಸಾಧನೆ ಮಾಡಿದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತದ 3ನೇ ಅತಿ ದೊಡ್ಡ ವಿಮಾನ ನಿಲ್ದಾಣವಾಗಿರುವ ಕೆಐಎ ಮೂಲಕ ಈವರೆಗೆ 35 ಕೋಟಿಗೂ ಹೆಚ್ಚು ಜನರು ಪ್ರಯಾಣಿಸಿದ್ದಾರೆ.

ಗ್ರಾಹಕರಿಗೆ ನೀಡುವ ಅತ್ಯುತ್ತಮ ಸೇವೆಗಾಗಿ ಜಾಗತಿಕ ಮಟ್ಟದ ಪ್ರತಿಷ್ಠಿತ ‘ಎಸಿಐ 5-ಸ್ಟಾರ್ ಏರ್‌ಪೋರ್ಟ್ ರೇಟಿಂಗ್’ ಅನ್ನು ಪಡೆದುಕೊಂಡಿರುವ ನಿಲ್ದಾಣವು, ಹಣ್ಣು, ತರಕಾರಿಯಂತಹ ಬೇಗ ಕೊಳೆಯುವ ವಸ್ತುಗಳ ಸಾಗಣೆಯಲ್ಲಿ ಸತತ 4ನೇ ವರ್ಷವೂ ಭಾರತದ ನಂ. 1 ವಿಮಾನ ನಿಲ್ದಾಣವಾಗಿ ಗುರುತಿಸಿಕೊಂಡಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:03 pm, Tue, 5 May 26

Source link

30 ಎಸೆತಗಳಲ್ಲಿ 95 ರನ್: ರಿಷಭ್ ಪಂತ್‌ ರುದ್ರತಾಂಡವ ಬಿಚ್ಚಿಟ್ಟ ಕೋಚ್! – Kannada News | 95 Off 30 Balls: LSG Coach Defends Pant’s Form

ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್​-19 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಕಳಪೆ ಪ್ರದರ್ಶನ ಮುಂದುವರೆದಿದೆ. ಈ ಕಳಪೆ ಪ್ರದರ್ಶನದ ಬೆನ್ನಲ್ಲೇ LSG ತಂಡದ ಭವಿಷ್ಯ ಮತ್ತು ನಾಯಕ ರಿಷಭ್ ಪಂತ್ ಅವರ ಫಾರ್ಮ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಚರ್ಚೆಯ ನಡುವೆ ತಂಡದ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಸುದ್ದಿಗೋಷ್ಠಿಯಲ್ಲಿ ನೀಡಿದ ಒಂದು ಹೇಳಿಕೆ ಈಗ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ಅಭ್ಯಾಸದ ವೇಳೆ ಪಂತ್ ಆರ್ಭಟ!

ಮುಂಬೈ ಇಂಡಿಯನ್ಸ್​ ವಿರುದ್ಧದ ಪಂದ್ಯದಲ್ಲಿ ರಿಷಭ್ ಪಂತ್ ಕೇವಲ 15 ರನ್ ಗಳಿಸಿ ಔಟಾಗಿದ್ದರು. ಈ ಕಳಪೆ ಪ್ರದರ್ಶನದ ಹೊರತಾಗಿಯೂ ಎಲ್​ಎಸ್​ಜಿ ತಂಡದ ಕೋಚ್ ಜಸ್ಟಿನ್ ಲ್ಯಾಂಗರ್ ಪಂತ್ ಅವರ ಬೆನ್ನಿಗೆ ನಿಂತಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್ ತಂಡದ 7ನೇ ಸೋಲಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಜಸ್ಟಿನ್ ಲ್ಯಾಂಗರ್​ಗೆ ಪಂತ್ ಅವರ ಫಾರ್ಮ್ ಹಾಗೂ ಬ್ಯಾಟಿಂಗ್ ಕ್ರಮಾಂಕದ​​ ಬಗ್ಗೆ ಪ್ರಶ್ನೆ ಕೇಳಲಾಗಿತ್ತು.

ಈ ಪ್ರಶ್ನೆಗೆ ಉತ್ತರಿಸಿದ ಲ್ಯಾಂಗರ್, “ಪಂದ್ಯಕ್ಕೆ ಎರಡು ದಿನಗಳ ಮೊದಲು ನಡೆದ ಅಭ್ಯಾಸ ಪಂದ್ಯದಲ್ಲಿ ರಿಷಭ್ ಪಂತ್ ಕೇವಲ 30 ರಿಂದ 40 ಎಸೆತಗಳಲ್ಲಿ 95 ರನ್ ಸಿಡಿಸಿದ್ದರು. ಅದು ಪಂತ್ ಅವರ ಅಸಲಿ ಆಟವಾಗಿತ್ತು. ಅಂತಹ ಅಮೋಘ ಬ್ಯಾಟಿಂಗ್ ನೋಡಿದ ಮೇಲೆಯೇ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಸಲು ನಿರ್ಧರಿಸಲಾಯಿತು ಎಂದು ತಿಳಿಸಿದ್ದಾರೆ.

ಇತ್ತ ಜಸ್ಟಿನ್ ಲ್ಯಾಂಗರ್ ನೀಡಿದ ಹೇಳಿಕೆಯು ಇದೀಗ ಸಾಕಷ್ಟು ಟ್ರೋಲ್ ಆಗಿದೆ. ಏಕೆಂದರೆ ಅಭ್ಯಾಸದ ವೇಳೆ ಪಂತ್ ಬ್ಯಾಟ್ ಬೀಸಿದ್ದು ಲಕ್ನೋ ಸೂಪರ್ ಜೈಂಟ್ಸ್ ಬೌಲರ್​ಗಳ ವಿರುದ್ಧ. ಇಲ್ಲಿ ಅವರು ಪಂತ್​ ಅವರನ್ನು ಸಮರ್ಥಿಸಲು ಮುಂದಾಗಿ ಎಲ್​ಎಸ್​ಜಿ ಬೌಲರ್​ಗಳ ವೈಫಲ್ಯವನ್ನೂ ಸಹ ಎತ್ತಿ ತೋರಿಸಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಾಲೆಳೆಯಲಾಗುತ್ತಿದೆ.

ಪಂತ್​ಗೆ ಬಹುಪರಾಕ್:

ಇನ್ನು ಇದೇ ಸುದ್ದಿಗೋಷ್ಠಿಯಲ್ಲಿ ರಿಷಭ್ ಪಂತ್ ಅವರ ನಾಯಕತ್ವದ ಗುಣವನ್ನು ಶ್ಲಾಘಿಸಿದ ಲ್ಯಾಂಗರ್, ನಿಕೋಲಸ್ ಪೂರನ್ ಅವರಿಗೆ ಹೆಚ್ಚಿನ ಅವಕಾಶ ನೀಡಲು ಪಂತ್ ಸ್ವತಃ ಮೂರನೇ ಕ್ರಮಾಂಕವನ್ನು ಬಿಟ್ಟುಕೊಟ್ಟು ಕೆಳಗಿನ ಕ್ರಮಾಂಕದಲ್ಲಿ ಆಡಿದ್ದರು. ತಂಡದ ಹಿತದೃಷ್ಟಿಯಿಂದ ಪಂತ್ ಈ ನಿರ್ಧಾರ ಕೈಗೊಂಡಿದ್ದರು. ಇದು ಒಬ್ಬ ಉತ್ತಮ ನಾಯಕನ ನಡೆ ಎಂದು ಶ್ಲಾಘಿಸಿದ್ದಾರೆ.

ಆದರೆ ಈ ಹೇಳಿಕೆಗೂ ಕೂಡ ಎಲ್​ಎಸ್​ಜಿ ಅಭಿಮಾನಿಗಳಿಂದ ಅಪಸ್ವರಗಳು ಕೇಳಿ ಬಂದಿವೆ. ಏಕೆಂದರೆ ಈ ಹಿಂದೆ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ಪಂತ್ ಈ ಹಿಂದೆ ಶೂನ್ಯಕ್ಕೆ ಔಟಾಗಿದ್ದರು. ಅಲ್ಲದೆ ಕೆಕೆಆರ್ ವಿರುದ್ಧ ಗಳಿಸಿದ್ದು ಕೇವಲ 10 ರನ್​ ಮಾತ್ರ. ಆರ್​ಸಿಬಿ ವಿರುದ್ಧ 1 ರನ್​ಗೆ ಮುಗ್ಗರಿಸಿದ್ದರು. ಹೀಗಾಗಿಯೇ ಅವರು ಪೂರನ್​ಗೆ ಮೇಲಿನ ಕ್ರಮಾಂಕದಲ್ಲಿ ಅವಕಾಶ ನೀಡಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪ್ರಸ್ತಾಪಿಸುತ್ತಿದ್ದಾರೆ.

ಒಟ್ಟಿನಲ್ಲಿ ಐಪಿಎಲ್ ಇತಿಹಾಸದ ಅತ್ಯಂತ ದುಬಾರಿ ಆಟಗಾರ (27 ಕೋಟಿ ರೂ.) ಎಂಬ ಹಣೆಪಟ್ಟಿಯೊಂದಿಗೆ ಕಣಕ್ಕಿಳಿಯುತ್ತಿರುವ ರಿಷಭ್ ಪಂತ್ ಅವರ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರುತ್ತಿಲ್ಲ. ಅದರಲ್ಲೂ ಅವರ ನಾಯಕತ್ವದ ಯಾವುದೇ ಪರಿಣಾಮ ಬೀರುತ್ತಿಲ್ಲ. ಇದಕ್ಕೆ ಸಾಕ್ಷಿ ಮುಂಬೈ ಇಂಡಿಯನ್ಸ್ ವಿರುದ್ಧ  228 ರನ್​ಗಳಿಸಿದರೂ ಲಕ್ನೋ ಸೂಪರ್ ಜೈಂಟ್ಸ್​ 6 ವಿಕೆಟ್​ಗಳಿಂದ ಸೋಲೊಪ್ಪಿಕೊಂಡಿರುವುದು.

ಇದನ್ನೂ ಓದಿ: ಜ್ವರದಿಂದ ಮಲಗಿದ್ದ ಆಟಗಾರನಿಗೆ ಪ್ರೈವೇಟ್ ಪ್ಲೇನ್ ಆಫರ್ ನೀಡಿದ್ದ IPL ಮಾಲೀಕ!

ಈ ಸೋಲುಗಳ ಹೊರತಾಗಿಯೂ ಲಕ್ನೋ ಸೂಪರ್ ಜೈಂಟ್ಸ್​ ತಂಡ ಇನ್ನೂ ಸಹ ಪ್ಲೇಆಫ್​ ರೇಸ್​ನಿಂದ ಹೊರಬಿದ್ದಿಲ್ಲ. ಆದರೆ ಪ್ಲೇಆಫ್​ಗೇರಲು ಎಲ್​ಎಸ್​ಜಿ ಪಡೆ ಮುಂದಿನ ಎಲ್ಲಾ ಪಂದ್ಯಗಳಲ್ಲೂ ಜಯಗಳಿಸಬೇಕು. ಅದರ ಜೊತೆಗೆ ಅದೃಷ್ಟ ಕೂಡ ಕೈ ಹಿಡಿಯಬೇಕು. ಅದರಂತೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಅದೃಷ್ಟದ ಆಧಾರದ ಮೇಲೆ ಪ್ಲೇಆಫ್​ಗೇರಲಿದೆಯಾ ಕಾದು ನೋಡಬೇಕಿದೆ.

Source link

Exit mobile version