‘ಟಾಕ್ಸಿಕ್’ ಸಿನಿಮಾದಲ್ಲಿ ಬೋಲ್ಡ್ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಕಿಯಾರಾ ಅಡ್ವಾಣಿ ಮನವಿ? – Kannada News | Kiara Advani reportedly requested Toxic makers to trim bold scenes with Yash

ನಟ ಯಶ್ (Yash) ಮತ್ತು ನಿರ್ದೇಶಕಿ ಗೀತು ಮೋಹನ್‌ದಾಸ್ ಕಾಂಬಿನೇಷನ್‌ನ ‘ಟಾಕ್ಸಿಕ್’ (Toxic) ಸಿನಿಮಾ ದಿನಕ್ಕೊಂದು ಹೊಸ ವಿಚಾರಗಳಿಂದ ಸುದ್ದಿಯಾಗುತ್ತಿದೆ. ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ, ಕಿಯಾರಾ ಅಡ್ವಾಣಿ (Kiara Advani) ಅವರು ಸಿನಿಮಾದ ಕೆಲವು ಬೋಲ್ಡ್ ದೃಶ್ಯಗಳನ್ನು ಕಟ್ ಮಾಡುವಂತೆ ಅಥವಾ ಅವುಗಳ ಅವಧಿಯನ್ನು ಕಡಿಮೆ ಮಾಡುವಂತೆ ಚಿತ್ರತಂಡಕ್ಕೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಚಿತ್ರತಂಡದಲ್ಲಿ ಮತ್ತೆ ಗೊಂದಲ ನಿರ್ಮಾಣ ಆದಂತಿದೆ. ಈಗಾಗಲೇ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಿಕೆ ಆಗಿದೆ.

ವರದಿಗಳ ಪ್ರಕಾರ, ಕಿಯಾರಾ ಅಡ್ವಾಣಿ ಅವರು ಈಗಾಗಲೇ ಯಶ್ ಜೊತೆಗಿನ ಕೆಲವು ಬೋಲ್ಡ್ ದೃಶ್ಯಗಳಲ್ಲಿ ಭಾಗಿಯಾಗಿದ್ದಾರೆ. ಚಿತ್ರೀಕರಣಕ್ಕೂ ಮೊದಲು ನಿರ್ದೇಶಕರು ಈ ದೃಶ್ಯಗಳು ನಟಿಯ ಕಂಫರ್ಟ್ ಜೋನ್ ಒಳಗೇ ಇರುತ್ತವೆ ಎಂದು ಭರವಸೆ ನೀಡಿದ್ದರು. ಆದರೆ, ಚಿತ್ರೀಕರಣ ಮುಗಿದ ನಂತರ ಔಟ್‌ಪುಟ್ ನೋಡಿದ ಕಿಯಾರಾ ಅವರಿಗೆ ಆ ದೃಶ್ಯಗಳು ತೆರೆಯ ಮೇಲೆ ಅತಿ ಎನಿಸಿದೆಯಂತೆ. ಈ ಕಾರಣದಿಂದ ಅವರು ದೃಶ್ಯಗಳನ್ನು ಎಡಿಟ್ ಮಾಡಲು ಕೇಳಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆ ಶುರುವಾಗಿದೆ. ‘ಚಿತ್ರೀಕರಣ ಮುಗಿದ ಮೇಲೆ ಈ ರೀತಿ ಮನವಿ ಮಾಡುವುದು ಸರಿಯಲ್ಲ’ ಎಂದು ಒಂದು ವರ್ಗದ ಜನರು ಅಭಿಪ್ರಾಯಪಟ್ಟಿದ್ದಾರೆ. ‘ಒಬ್ಬ ಕಲಾವಿದೆಯಾಗಿ ತಮ್ಮ ಅಭಿನಯ ತೆರೆಯ ಮೇಲೆ ಹೇಗೆ ಕಾಣುತ್ತದೆ ಎಂಬುದನ್ನು ಗಮನಿಸಿ, ತಮ್ಮ ಕಂಫರ್ಟ್ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಅವರಿಗೆ ಇದೆ’ ಎಂದು ಇನ್ನೊಂದು ವರ್ಗದವರು ಬೆಂಬಲ ವ್ಯಕ್ತಪಡಿಸಿದ್ದಾರೆ.

‘ಟಾಕ್ಸಿಕ್’ ಸಿನಿಮಾ ಯಶ್ ಅವರ ವೃತ್ತಿಜೀವನದಲ್ಲೇ ಅತ್ಯಂತ ಸ್ಟೈಲಿಶ್ ಮತ್ತು ಬೋಲ್ಡ್ ಆದಂತಹ ಆ್ಯಕ್ಷನ್ ಸಿನಿಮಾ ಎಂದು ಹೇಳಲಾಗುತ್ತಿದೆ. ಈ ನಡುವೆ ಇಂತಹ ಗಾಸಿಪ್‌ಗಳು ಸಿನಿಮಾದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿವೆ. ಆದರೆ, ಈ ಬಗ್ಗೆ ಚಿತ್ರತಂಡವಾಗಲಿ ಅಥವಾ ನಟಿ ಕಿಯಾರಾ ಅಡ್ವಾಣಿ ಆಗಲಿ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.

ಇದನ್ನೂ ಓದಿ: ಜೂ.4ಕ್ಕೆ ‘ಪೆದ್ದಿ’ ರಿಲೀಸ್; ‘ಟಾಕ್ಸಿಕ್’ ಬಿಟ್ಟುಕೊಟ್ಟ ದಿನಾಂಕದಲ್ಲಿ ರಾಮ್ ಚರಣ್ ಸಿನಿಮಾ ತೆರೆಗೆ

ಗೀತು ಮೋಹನ್‌ದಾಸ್ ನಿರ್ದೇಶನದ ಈ ಸಿನಿಮಾವನ್ನು ‘ಕೆವಿಎನ್ ಪ್ರೊಡಕ್ಷನ್ಸ್’ ಮತ್ತು ‘ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್’ ಜಂಟಿಯಾಗಿ ನಿರ್ಮಾಣ ಮಾಡುತ್ತಿವೆ. ಜೂನ್ 4ರಂದು ಬಿಡುಗಡೆ ಆಗಬೇಕಿದ್ದ ಈ ಸಿನಿಮಾದ ರಿಲೀಸ್ ದಿನಾಂಕ ಸದ್ಯಕ್ಕೆ ಮುಂದೂಡಿಕೆ ಆಗಿದೆ. ಹೊಸ ರಿಲೀಸ್ ಡೇಟ್ ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಎಸಿ ಸ್ಫೋಟ, ದೆಹಲಿಯ ವಸತಿಗೃಹದಲ್ಲಿ ಅಗ್ನಿ ಅವಘಡ, 9 ಮಂದಿ ಸಜೀವದಹನ – Kannada News | Blaze in Vivek Vihar Residential Building Claims Lives, Rescue Effort Saves Many

ನವದೆಹಲಿ, ಮೇ 03: ದೆಹಲಿಯ ವಿವೇಕ್ ವಿಹಾರದಲ್ಲಿರುವ ವಸತಿ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 9 ಮಂದಿ ಸುಟ್ಟು ಕರಕಲಾಗಿದ್ದಾರೆ. 20 ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ನಾಲ್ಕು ಅಂತಸ್ಥಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಎಸಿ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿರಬಹುದು ಎಂದು ಅಂದಾಜಿಸಿದ್ದಾರೆ.ಬೆಂಕಿಯನ್ನು ನಂದಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ, ಆದರೆ ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ.

ಬೆಂಕಿಯ ಪರಿಣಾಮ ತೀವ್ರವಾಗಿದ್ದ ಎರಡನೇ ಮಹಡಿಯಿಂದ ಶವಗಳನ್ನು ಹೊರತೆಗೆಯಲಾಗಿದೆ ಎಂದು ಶಹದಾರಾ ಜಿಲ್ಲಾ ಡಿಸಿಪಿ ರಾಜೇಂದ್ರ ಪ್ರಸಾದ್ ಮೀನಾ ತಿಳಿಸಿದ್ದಾರೆ. 2, 3 ಮತ್ತು 4 ನೇ ಮಹಡಿಯಲ್ಲಿರುವ ಫ್ಲಾಟ್‌ಗಳಲ್ಲಿ ಬೆಂಕಿ ಕಂಡುಬಂದಿದೆ. ಬೆಂಕಿಯ ಬಗ್ಗೆ ವರದಿಯಾದ ಕೂಡಲೇ ತುರ್ತು ತಂಡಗಳು ಸ್ಥಳಕ್ಕೆ ಧಾವಿಸಿ ಕಟ್ಟಡದಿಂದ 10 ಕ್ಕೂ ಹೆಚ್ಚು ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ದೇಹದಲ್ಲಿ ಒಂದೇ ಒಂದು ಮಚ್ಚೆ ಇರಬಾರದು, ಬೆತ್ತಲೆ ಪೂಜೆಗೆ 30 ಲಕ್ಷ ರೂ. : ಯುವತಿಗೆ ಕಾಲ್‌ ಮಾಡಿ ಟಾರ್ಚರ್ ನೀಡುತ್ತಿದ್ದ ಕಿರಣ್ – Kannada News | Ramanagara Black Magic Scam: Woman Offered rs.30 Lakh for ‘Naked Puja,’ Police Hunt Accused

ಯುವತಿಗೆ ಕಾಲ್‌ ಮಾಡಿ ಟಾರ್ಚರ್ ನೀಡುತ್ತಿದ್ದ ಕಿರಣ್

ರಾಮನಗರ, ಮೇ.3: ಜಿಲ್ಲೆಯಲ್ಲಿ ಮಾಟ-ಮಂತ್ರ ಮತ್ತು ವಾಮಾಚಾರದ ಹೆಸರಿನಲ್ಲಿ ಯುವತಿಯೊಬ್ಬರಿಗೆ ಬರೋಬ್ಬರಿ 30 ಲಕ್ಷ ರೂಪಾಯಿ ಆಮಿಷವೊಡ್ಡಿ, ಬೆತ್ತಲೆ ಪೂಜೆಗೆ ಕುಳಿತುಕೊಳ್ಳುವಂತೆ ಒತ್ತಾಯಿಸಿ ಕಿರುಕುಳ ನೀಡಿದ ಘಟನೆ ನಡೆದಿದೆ. ಈ ಸಂಬಂಧ ಕಿರಣ್ ಎಂಬಾತನ ವಿರುದ್ಧ ರಾಮನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇಂತಹದೇ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಪೂಜೆ ಮತ್ತು ದೀಕ್ಷೆಯ ನೆಪದಲ್ಲಿ ಬ್ಯೂಟಿಷಿಯನ್ ಒಬ್ಬರ ಮೇಲೆ ಜ್ಯೋತಿಷಿಯೊಬ್ಬ ನಿರಂತರವಾಗಿ ಅತ್ಯಾಚಾರ ಎಸಗಿರುವ ಘನಘೋರ ಘಟನೆ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

“ದೇಹದಲ್ಲಿ ಒಂದೇ ಒಂದು ಮಚ್ಚೆ ಇರಬಾರದು, ಮಚ್ಚೆ ಇದ್ದರೆ ಪೂಜೆಗೆ ಕುಳಿತುಕೊಳ್ಳಲು ಆಗುವುದಿಲ್ಲ” ಎಂದು ಹೇಳಿ ಆಕೆಗೆ ಫೋಟೋ ಕಳುಹಿಸುವಂತೆ ಪೀಡಿಸಿದ್ದಾನೆ. ಅಷ್ಟೇ ಅಲ್ಲದೆ, ಇತರ ಕೆಲವು ಯುವತಿಯರ ಫೋಟೋಗಳನ್ನು ವಾಟ್ಸಾಪ್ ಮೂಲಕ ಕಳುಹಿಸಿ ನಂಬಿಸಲು ಯತ್ನಿಸಿದ್ದಾನೆ.

ಇದನ್ನೂ ಓದಿ; ಯಾರಿಗಾದರೂ ಹೇಳಿದ್ರೆ ಗಂಡ-ಮಗ ರಕ್ತ ಕಾರಿ ಸಾಯ್ತಾರೆ: ಮಾಟ-ಮಂತ್ರದ ಹೆಸರಲ್ಲಿ ಬ್ಯೂಟಿಷಿಯನ್ ಮೇಲೆ ಜ್ಯೋತಿಷಿಯಿಂದ ನಿರಂತರ ಅತ್ಯಾಚಾರ!

ಏಪ್ರಿಲ್ 12ರಂದು ಈ ಕರೆ ಬಂದಿದ್ದು, ಇದರಿಂದ ರೋಸಿಹೋದ ಚೈತ್ರಾ ಮತ್ತು ಅವರ ಕುಟುಂಬಸ್ಥರು ರಾಮನಗರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಬೆಂಗಳೂರಿನಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಕಿರಣ್ ಎಂಬಾತ ಪರಾರಿಯಾಗಿದ್ದಾನೆ.ಮಾಟ-ಮಂತ್ರದ ಹೆಸರಿನಲ್ಲಿ ಯುವತಿಯರನ್ನು ದುರ್ಬಳಕೆ ಮಾಡಿಕೊಳ್ಳುವ ಜಾಲದ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶೃಂಗೇರಿ ಅಂಚೆ ಮತಗಳ ಮರು ಎಣಿಕೆ: ‘ಸತ್ಯಕ್ಕೆ ಸಂದ ಜಯ’ ಎಂದ ಆರ್. ಅಶೋಕ್! – Kannada News | Shringeri Recount Controversy: R. Ashok Slams Congress Over Stolen Mandate; Calls it Victory for Truth

ಚಿಕ್ಕಮಗಳೂರು, ಮೇ 03: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ (postal ballot recount) ಪ್ರಕ್ರಿಯೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಪ್ರತಿಪಕ್ಷ ನಾಯಕ ಆರ್. ಅಶೋಕ್, ಕಾಂಗ್ರೆಸ್ ಮೌನವಾಗಿದೆ, ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಕ್ರಮವಾಗಿ ಜನಾದೇಶವನ್ನು ಕಸಿದುಕೊಂಡಿದ್ದ ಕಾಂಗ್ರೆಸ್‌ಗೆ ನ್ಯಾಯಾಲಯ ತಕ್ಕ ಪಾಠ ಕಲಿಸಿದೆ ಎಂದು ಅವರು ತಮ್ಮ ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ.

ಆರ್​. ಅಶೋಕ್ ಟ್ವೀಟ್‌ನಲ್ಲಿ ಏನಿದೆ?

ಮತ ಕಳ್ಳ ಯಾರು? ರಾಹುಲ್ ಗಾಂಧಿ! ಎಂದಿರುವ ಅಶೋಕ್, ಶೃಂಗೇರಿಯ ಮರು ಎಣಿಕೆ ಫಲಿತಾಂಶ ಕಾಂಗ್ರೆಸ್‌ನ ಕರಾಳ ಮುಖವನ್ನು ಬಯಲು ಮಾಡಿದೆ ಎಂದಿದ್ದಾರೆ. 2023ರ ಚುನಾವಣೆಯಲ್ಲಿ 279 ಅಂಚೆ ಮತಗಳನ್ನು ಅಕ್ರಮವಾಗಿ ತಿರಸ್ಕರಿಸುವ ಮೂಲಕ ಜನಾದೇಶವನ್ನು ಕದಿಯಲಾಗಿತ್ತು. ಅಧಿಕಾರದ ಮದಕ್ಕೆ ತಲೆಬಾಗದೆ ಕಾನೂನು ಹೋರಾಟ ನಡೆಸಿದ ಡಿ.ಎನ್. ಜೀವರಾಜ್ ಅವರ ಈ ಹೋರಾಟ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸಂದ ಜಯ ಎಂದು ಅವರು ಶ್ಲಾಘಿಸಿದ್ದಾರೆ.

ಪ್ರಕರಣದ ಹಿನ್ನೆಲೆ

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಟಿ.ಡಿ. ರಾಜೇಗೌಡ ಅವರು ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ವಿರುದ್ಧ ಕೇವಲ 201 ಮತಗಳ ಅಂತರದಿಂದ ಜಯ ಸಾಧಿಸಿದ್ದರು. ಆದರೆ, ಅಧಿಕಾರಿಗಳು ಅಂಚೆ ಮತಗಳ ಎಣಿಕೆಯಲ್ಲಿ ಗಂಭೀರ ಲೋಪ ಎಸಗಿದ್ದಾರೆ ಮತ್ತು ಎದುರಾಳಿ ಅಭ್ಯರ್ಥಿ ಚುನಾವಣೆಯಲ್ಲಿ ಸುಮಾರು 120 ಕೋಟಿ ರೂ. ಖರ್ಚು ಮಾಡಿದ್ದಾರೆ ಎಂದು ಆರೋಪಿಸಿ ಜೀವ ರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ರಾಜೇಗೌಡ ಅವರು ಈ ಅರ್ಜಿಯನ್ನು ವಜಾಗೊಳಿಸುವಂತೆ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರೂ, ನ್ಯಾಯಾಲಯಗಳು ಅದನ್ನು ತಿರಸ್ಕರಿಸಿ ಮರು ಎಣಿಕೆಗೆ ಹಸಿರು ನಿಶಾನೆ ನೀಡಿದ್ದವು. ನ್ಯಾಯಮೂರ್ತಿ ಆರ್. ನಟರಾಜ್ ಅವರಿದ್ದ ನ್ಯಾಯಪೀಠವು ಅಂಚೆ ಮತಗಳ ಮರು ಪರಿಶೀಲನೆಗೆ ಐತಿಹಾಸಿಕ ಆದೇಶ ನೀಡಿತ್ತು.

ಇದನ್ನೂ ಓದಿ ರಾಜೇಗೌಡ vs ಜೀವರಾಜ್: ಅಂಚೆ ಮತಗಳ ಮರು ಎಣಿಕೆ ಹೈಕೋರ್ಟ್ ಆದೇಶದಿಂದ ಇಲ್ಲಿಯವರೆಗೆ ಆಗಿದ್ದೇನು? ಯಾರಿಗೆ ಗೆಲುವು?

ಮರು ಎಣಿಕೆಯಲ್ಲಿ ಏನಾಯಿತು?

ನಿನ್ನೆ (ಮೇ 2) ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜಿನಲ್ಲಿ ನಡೆದ ಸುದೀರ್ಘ ಮರು ಎಣಿಕೆ ಪ್ರಕ್ರಿಯೆಯಲ್ಲಿ ನಾಟಕೀಯ ಬೆಳವಣಿಗೆಗಳು ನಡೆದವು. ವರದಿಗಳ ಪ್ರಕಾರ, ಮರು ಎಣಿಕೆಯ ನಂತರ ರಾಜೇಗೌಡ ಅವರ ಮತಗಳ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡುಬಂದಿದೆ ಎನ್ನಲಾಗಿದ್ದು, ಇದು ಬಿಜೆಪಿ ಪಾಳಯದಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ. ನ್ಯಾಯದೇವತೆಯ ಮೇಲೆ ನಂಬಿಕೆ ಇಟ್ಟು ಸಾಂವಿಧಾನಿಕವಾಗಿ ಹೋರಾಡಿದ ಡಿ.ಎನ್. ಜೀವರಾಜ್ ಅವರಿಗೆ ಜಯ ಸಿಕ್ಕಿದೆ ಎಂದು ಅಶೋಕ್ ಅಭಿನಂದಿಸಿದ್ದಾರೆ. ಸದ್ಯ ಹೈಕೋರ್ಟ್ ನಿರ್ದೇಶನದಂತೆ ಚುನಾವಣಾಧಿಕಾರಿಗಳು ಮರು ಎಣಿಕೆಯ ವರದಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:42 am, Sun, 3 May 26

Source link

CSK vs MI: ಟಿ20ಯಲ್ಲಿ ಹಾರ್ದಿಕ್ ಪಾಂಡ್ಯ ಟೆಸ್ಟ್ ಮಾದರಿಯ ಇನ್ನಿಂಗ್ಸ್: ಮುಂಬೈ ತಂಡಕ್ಕೆ ನಾಯಕನೇ ವಿಲನ್? – Kannada News | Mumbai Indians Captain Hardik Pandya’s Test like innings in IPL 2026 vs CSK

ಬೆಂಗಳೂರು (ಮೇ. 03): ಇಂಡಿಯನ್ ಪ್ರೀಮಿಯರ್ ಲೀಗ್ 2026 ರ 44 ನೇ ಪಂದ್ಯ ಮೇ 2 ರಂದು ಚೆಪಾಕ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆಯಿತು. ಮುಂಬೈ ಇಂಡಿಯನ್ಸ್ (Mumbai Indians) ಈ ಪಂದ್ಯವನ್ನು ಹೀನಾಯವಾಗಿ ಸೋತಿತು. ಇದು ಅವರ ಸತತ ಮೂರನೇ ಸೋಲು. ಈ ಸೋಲಿನ ಮೂಲಕ ಮುಂಬೈ ಪ್ಲೇಆಫ್ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ. ಒಂದು ಪವಾಡ ನಡೆದರೆ ಮಾತ್ರ ಪ್ಲೇಆಫ್‌ನಲ್ಲಿ ಸ್ಥಾನ ಪಡೆಯಲು ಸಾಧ್ಯ. ನಿನ್ನೆಯ ಪಂದ್ಯದಲ್ಲಿ ಮುಂಬೈನ ಈ ಸ್ಥಿತಿಗೆ ಸ್ವತಃ ನಾಯಕನೇ ಕಾರಣರಾದರು. ಚೆನ್ನೈ ವಿರುದ್ಧ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರ ಬ್ಯಾಟಿಂಗ್ ಸಾಕಷ್ಟು ನಿರಾಶಾದಾಯಕವಾಗಿತ್ತು. ಹಾರ್ದಿಕ್ ಪಾಂಡ್ಯ 100 ಕ್ಕಿಂತ ಕಡಿಮೆ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದರು.

23 ಎಸೆತಗಳಲ್ಲಿ 18 ರನ್ ಗಳಿಸಿ ಔಟಾದ ಹಾರ್ದಿಕ್ ಪಾಂಡ್ಯ

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಹಾರ್ದಿಕ್ ಪಾಂಡ್ಯ ತುಂಬಾ ನಿಧಾನಗತಿಯ ಇನ್ನಿಂಗ್ಸ್ ಆಡಿದರು. ಮುಂಬೈ ಅಭಿಮಾನಿಗಳು ಮಾತ್ರವಲ್ಲದೆ ತಂಡ ಕೂಡ ಪಾಂಡ್ಯ ಕಡೆಯಿಂದ ಬಿರುಗಾಳಿಯ ಇನ್ನಿಂಗ್ಸ್ ನಿರೀಕ್ಷಿಸಿತ್ತು. ಆದರೆ ಅವರು 23 ಎಸೆತಗಳಲ್ಲಿ ಕೇವಲ 18 ರನ್ ಗಳಿಸಿ ಔಟಾದರು. ಅವರ ಸ್ಟ್ರೈಕ್ ರೇಟ್ ಕೇವಲ 78.26 ಆಗಿತ್ತು. ಹಾರ್ದಿಕ್ ಅವರ ಬ್ಯಾಟ್​ನಿಂದ ಬಂದಿದ್ದು ಕೇವಲ ಎರಡು ಬೌಂಡರಿ ಮಾತ್ರ.

ಹಾರ್ದಿಕ್ ಪಾಂಡ್ಯ ವೇಗವಾಗಿ ರನ್ ಗಳಿಸಿ ಕೊನೆಯವರೆಗೂ ಆಡಿದ್ದರೆ, ಮುಂಬೈ ಇಂಡಿಯನ್ಸ್ 200 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಬಹುದಿತ್ತು. ಆದಾಗ್ಯೂ, ಮುಂಬೈ ಇಂಡಿಯನ್ಸ್ ನಾಯಕನ ಬ್ಯಾಟ್‌ನಿಂದ ದೊಡ್ಡ ಇನ್ನಿಂಗ್ಸ್ ಬರಲಿಲ್ಲ. ಅಷ್ಟೇ ಅಲ್ಲದೆ ಅವರು ತಮ್ಮ ಬೌಲಿಂಗ್‌ನಿಂದಲೂ ಯಾವುದೇ ವಿಕೆಟ್ ಪಡೆಯಲಿಲ್ಲಿ.

IPL 2026: ಡಗೌಟ್​ನಿಂದಲೇ ಹಾರ್ದಿಕ್​ಗೆ ನಾಯಕನ ಪಾಠ ಮಾಡಿದ ರೋಹಿತ್ ಶರ್ಮಾ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 159 ರನ್ ಗಳಿಸಿ ಚೆನ್ನೈ ಸೂಪರ್ ಕಿಂಗ್ಸ್‌ಗೆ 160 ರನ್‌ಗಳ ಗುರಿಯನ್ನು ನೀಡಿತು. ಮುಂಬೈ ಪರ ನಮನ್ ಧೀರ್ 57 ರನ್ ಗಳಿಸಿದರು. ರಯಾನ್ ರಿಕಲ್ಟನ್ ಕೂಡ 37 ರನ್ ಗಳಿಸಿದರು. ಸಿಎಸ್‌ಕೆ ಪರ ಅನ್ಶುಲ್ ಕಾಂಬೋಜ್ ಗರಿಷ್ಠ 3 ವಿಕೆಟ್ ಪಡೆದರು.

ಚೆನ್ನೈ ಸೂಪರ್ ಕಿಂಗ್ಸ್ 18.1 ಓವರ್‌ಗಳಲ್ಲಿ 8 ವಿಕೆಟ್‌ಗಳು ಬಾಕಿ ಇರುವಂತೆ 160 ರನ್‌ಗಳ ಗುರಿಯನ್ನು ಬೆನ್ನಟ್ಟಿತು. ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್ ನಾಯಕತ್ವದ ಇನ್ನಿಂಗ್ಸ್ ಆಡಿದರು. ಅವರು ಔಟಾಗದೆ 67 ರನ್ ಗಳಿಸಿದರು. ಕಾರ್ತಿಕ್ ಶರ್ಮಾ ಕೂಡ ಅರ್ಧಶತಕ ಗಳಿಸಿ ಅಜೇಯ 54 ರನ್ ಗಳಿಸಿದರು. ಮುಂಬೈ ಇಂಡಿಯನ್ಸ್ ಪರ ಜಸ್ಪ್ರೀತ್ ಬುಮ್ರಾ ಮತ್ತು ಅಲ್ಲಾಹ್ ಗಜನ್ಫರ್ ತಲಾ ಒಂದು ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

World Laughter Day: ಇಂದು ವಿಶ್ವ ನಗು ದಿನ; ಭಾರತದಿಂದ ಜಗತ್ತಿಗೆ ಹರಡಿದ ಆನಂದದ ಅಲೆ – Kannada News | World Laughter Day: Discover the Power and Benefits of Laughter for Health

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದಾಗಿ ಪ್ರತಿದಿನವೂ ಒಂದಲ್ಲ ಒಂದು ವಿಶೇಷ ದಿನವಾಗಿ ಆಚರಿಸಲ್ಪಡುತ್ತಿದೆ. ಕಾಫಿ ದಿನ, ಚಾಕಲೇಟ್ ದಿನ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆದರೆ, ಈ ದಿನಗಳಲ್ಲಿ ಬಹುತೇಕವು ಅಮೆರಿಕದಂತಹ ದೇಶಗಳ “ರಾಷ್ಟ್ರೀಯ ದಿನಗಳು” ಅಥವಾ ಖಾಸಗಿ ಸಂಸ್ಥೆಗಳ ಪ್ರಚಾರದ ತಂತ್ರಗಳಾಗಿರುತ್ತವೆ. ಇವುಗಳ ನಡುವೆ ನಿಜವಾದ ಜಾಗತಿಕ ಮಾನ್ಯತೆ ಪಡೆದ ಮತ್ತು ಭಾರತೀಯ ಮೂಲದಿಂದ ವಿಶ್ವದಾದ್ಯಂತ ಪಸರಿಸಿದ ವಿಶೇಷ ದಿನವೆಂದರೆ ಅದು “ವಿಶ್ವ ನಗು ದಿನ”. ವಿಶ್ವ ನಗು ದಿನವನ್ನು ಪ್ರತಿ ವರ್ಷ ಮೇ ತಿಂಗಳ ಮೊದಲ ಭಾನುವಾರದಂದು ಆಚರಿಸಲಾಗುತ್ತದೆ.

ನಗು ಎನ್ನುವುದು ಕೇವಲ ತುಟಿಗಳ ಚಲನೆಯಲ್ಲ:

ಮುಖದಲ್ಲಿ ನಗು ಇದೆ ಎಂದರೆ ಜೀವನದಲ್ಲಿ ಕಷ್ಟಗಳೇ ಇಲ್ಲ ಎಂದರ್ಥವಲ್ಲ. ಬದಲಾಗಿ, ಆ ನಗುವು ದುಃಖ ಮತ್ತು ಸವಾಲುಗಳ ವಿರುದ್ಧ ಹೋರಾಡುವ ಆತ್ಮಬಲದ ಪ್ರತೀಕವಾಗಿದೆ. ನೋವು, ಭಯ ಮತ್ತು ಚಿಂತೆಗಳಿಂದ ತುಂಬಿರುವ ಈ ಜಗತ್ತಿನಲ್ಲಿ, ಒಂದು ಸಣ್ಣ ನಗು ಭರವಸೆಯ ಆಶಾಕಿರಣವಾಗಿ ಕೆಲಸ ಮಾಡುತ್ತದೆ. ಎಲ್ಲವೂ ಸುಗಮವಾಗಿರುವಾಗ ನಗುವುದು ಸಹಜ, ಆದರೆ ಕಣ್ಣಿನಲ್ಲಿ ನೀರು ತುಂಬಿದ್ದರೂ ಮುಖದಲ್ಲಿ ನಗು ತಂದುಕೊಳ್ಳುವವನೇ ನಿಜವಾದ ಜೀವನ ಯೋಧ. ಈ ಆತ್ಮಬಲವು ವ್ಯಕ್ತಿಯನ್ನು ಮಾನಸಿಕವಾಗಿ ಸದೃಢಗೊಳಿಸುತ್ತದೆ.

ನಗುವಿನ ಹಿಂದಿನ ಅದ್ಭುತ ವಿಜ್ಞಾನ:

ನಗು ಕೇವಲ ಒಂದು ಭಾವನೆಯಲ್ಲ, ಅದರ ಹಿಂದೆ ಆಳವಾದ ವೈಜ್ಞಾನಿಕ ಸತ್ಯಗಳಿವೆ. ನಾವು ಮನಸಾರೆ ನಕ್ಕಾಗ ಮೆದುಳಿನಲ್ಲಿ ಡೋಪಮಿನ್, ಸೆರೊಟೋನಿನ್ ಮತ್ತು ಎಂಡಾರ್ಫಿನ್ ಎಂಬ “ಸಂತೋಷದ ಹಾರ್ಮೋನ್‌ಗಳು” ಬಿಡುಗಡೆಯಾಗುತ್ತವೆ. ಇವು ಮನಸ್ಸಿಗೆ ಉಲ್ಲಾಸ ನೀಡುವುದಲ್ಲದೆ, ಒತ್ತಡಕ್ಕೆ ಕಾರಣವಾಗುವ ‘ಕಾರ್ಟಿಸಾಲ್’ ಹಾರ್ಮೋನ್ ಮಟ್ಟವನ್ನು ಕಡಿಮೆ ಮಾಡುತ್ತವೆ. ವಿಜ್ಞಾನಿಗಳ ಪ್ರಕಾರ, ಹತ್ತು ನಿಮಿಷಗಳ ಕಾಲ ನಗುವುದು ಸುಮಾರು 30 ನಿಮಿಷಗಳ ಧ್ಯಾನಕ್ಕೆ ಸಮನಾದ ಪ್ರಯೋಜನವನ್ನು ನೀಡುತ್ತದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸಿ ಹೃದಯದ ಆರೋಗ್ಯವನ್ನೂ ಸುಧಾರಿಸುತ್ತದೆ.

ಸಾಮಾಜಿಕ ಬಾಂಧವ್ಯದ ಕೊಂಡಿ:

ನಗು ಎನ್ನುವುದು ಒಂದು ಸಾರ್ವತ್ರಿಕ ಭಾಷೆ. ಇದಕ್ಕೆ ದೇಶ, ಭಾಷೆ ಅಥವಾ ಸಂಸ್ಕೃತಿಯ ಹಂಗಿಲ್ಲ. ನಗು ಸಾಂಕ್ರಾಮಿಕವೂ ಹೌದು; ನಮ್ಮ ಮೆದುಳಿನ ‘ಮಿರರ್ ನ್ಯೂರಾನ್‌ಗಳು’ ಇನ್ನೊಬ್ಬರ ನಗುವನ್ನು ಕಂಡಾಗ ನಮಗೂ ನಗುವ ಪ್ರೇರಣೆ ನೀಡುತ್ತವೆ. ಹೀಗೆ ಒಬ್ಬರ ನಗುವು ಇಡೀ ಪರಿಸರವನ್ನು ಸಕಾರಾತ್ಮಕವಾಗಿ ಬದಲಿಸಬಲ್ಲದು. ಇದು ಜನರ ನಡುವೆ ನಂಬಿಕೆ, ಪ್ರೀತಿ ಮತ್ತು ಬಾಂಧವ್ಯವನ್ನು ಬೆಳೆಸುವ ಅತ್ಯುತ್ತಮ ಮತ್ತು ಉಚಿತ ಔಷಧಿಯಾಗಿದೆ.

ಭಾರತದ ಹೆಮ್ಮೆಯ ಇತಿಹಾಸ:

ವಿಶ್ವ ನಗು ದಿನದ ಇತಿಹಾಸ ನಮಗೆ ಹೆಮ್ಮೆ ತರುವಂತದ್ದು. ಈ ದಿನವನ್ನು ೧೯೯೮ರಲ್ಲಿ ಭಾರತದ ಡಾ. ಮದನ್ ಕಟಾರಿಯಾ ಅವರು ಪ್ರಾರಂಭಿಸಿದರು. ಇವರು ‘ಲಾಫ್ಟರ್ ಯೋಗ’ (ನಗು ಯೋಗ) ಚಳುವಳಿಯ ಸ್ಥಾಪಕರು. ಪ್ರತಿ ವರ್ಷ ಮೇ ತಿಂಗಳ ಮೊದಲ ಭಾನುವಾರದಂದು ಈ ದಿನವನ್ನು ಆಚರಿಸಲಾಗುತ್ತದೆ. ಇಂದು ಭಾರತದಲ್ಲಿ ಹುಟ್ಟಿದ ಈ ಕಲ್ಪನೆಯು ಸುಮಾರು ೧೦೦ಕ್ಕೂ ಹೆಚ್ಚು ದೇಶಗಳಲ್ಲಿ ಹರಡಿದ್ದು, ಜಾಗತಿಕ ಶಾಂತಿ ಮತ್ತು ಮಾನಸಿಕ ಆರೋಗ್ಯದ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ನಗುವನ್ನು ಜೀವನದ ಭಾಗವಾಗಿಸಿಕೊಳ್ಳಿ:

ನಗು ಎನ್ನುವುದು ಹಣ ಕೊಟ್ಟು ಖರೀದಿಸುವ ವಸ್ತುವಲ್ಲ, ಅದು ನಮ್ಮೊಳಗೇ ಇರುವ ವರದಾನ. ಬೆಳಿಗ್ಗೆ ಎದ್ದ ತಕ್ಷಣ ಕನ್ನಡಿಯ ಮುಂದೆ ನಿಂತು ನಗುವುದು, ಮಕ್ಕಳೊಂದಿಗೆ ಆಟವಾಡುವುದು ಅಥವಾ ಹಾಸ್ಯ ಪ್ರಸಂಗಗಳನ್ನು ಕೇಳುವುದರಿಂದ ನಗುವನ್ನು ಬೆಳೆಸಿಕೊಳ್ಳಬಹುದು. ನಗು ಹಂಚಿದಷ್ಟೂ ಹೆಚ್ಚಾಗುತ್ತದೆ. ಈ ವಿಶ್ವ ನಗು ದಿನದಂದು ನಾವು ಒಂದು ನಿರ್ಧಾರ ಮಾಡೋಣ: ಪ್ರತಿದಿನ ನಗೋಣ ಮತ್ತು ಇತರರನ್ನೂ ನಗಿಸೋಣ.

“ನಗುತ್ತಾ ಬದುಕು, ನಗಿಸುತ್ತಾ ಬಾಳು.” ಎಲ್ಲರಿಗೂ ವಿಶ್ವ ನಗು ದಿನದ ಹಾರ್ದಿಕ ಶುಭಾಶಯಗಳು!

ಲೇಖನ: ಡಾ. ರವಿಕಿರಣ್ ಪಟವರ್ಧನ, ಪಟವರ್ಧನ ಆಯುರ್ವೇದ ಕ್ಲಿನಿಕ್, ಶಿರಸಿ (9242122874)

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:24 am, Sun, 3 May 26

Source link

ಶೃಂಗೇರಿ ಅಂಚೆ ಮತಗಳ ಮರು ಎಣಿಕೆ : ಬಿಜೆಪಿ, ಕಾಂಗ್ರೆಸ್​​​ಗೆ ಸಿಕ್ಕ ವೋಟ್​ ಎಷ್ಟು? ಫಲಿತಾಂಶ ಯಾವಾಗ ಘೋಷಣೆ; ಚುನಾವಣಾಧಿಕಾರಿ ಮಹತ್ವದ ಹೇಳಿಕೆ – Kannada News | Sringeri Postal Ballot Recount: Jeevaraj and Rajegowda Vote Counts Altered

ಚಿಕ್ಕಮಗಳೂರು, ಮೇ.3: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರುಪರಿಶೀಲನೆ ಮತ್ತು ಮರು ಎಣಿಕೆ ಪ್ರಕ್ರಿಯೆಯು ಹೈಕೋರ್ಟ್‌ನ ಆದೇಶದಂತೆ ಪೂರ್ಣಗೊಂಡಿದೆ. ಏಪ್ರಿಲ್ 6, 2026 ರಂದು ಹೈಕೋರ್ಟ್ ಹೊರಡಿಸಿದ ತೀರ್ಪಿನ ಪ್ರಕಾರ, ಸುಮಾರು 279 ಅಂಚೆ ಮತಪತ್ರಗಳನ್ನು ಮರು ಪರಿಶೀಲನೆ ಮತ್ತು ಮರು ಎಣಿಕೆ ಮಾಡಲಾಯಿತು. ಇವಿಎಂ ಮತಗಳ ಬಗ್ಗೆ ಯಾವುದೇ ಆದೇಶವಿರಲಿಲ್ಲ. ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಮುರೋಳಿ ಅವರು ಅಂದಿನ ಚುನಾವಣಾಧಿಕಾರಿ ವೇದಮೂರ್ತಿ ವಿರುದ್ಧ ಅಂಚೆ ಮತಗಳ ಟ್ಯಾಂಪರಿಂಗ್ ಆರೋಪದ ಮೇಲೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ಕೈಗೊಳ್ಳಲಾಯಿತು. ಮರು ಎಣಿಕೆಯ ನಂತರ ಅಭ್ಯರ್ಥಿಗಳ ಮತಗಳಲ್ಲಿ ಗಮನಾರ್ಹ ಬದಲಾವಣೆಗಳು ಕಂಡುಬಂದಿವೆ. 2023 ರ ಮತ ಎಣಿಕೆಯಲ್ಲಿ ಮೇಲ್ಮನವಿದಾರ ಡಿ ಎನ್ ಜೀವರಾಜ್ ಅವರಿಗೆ 692 ಮತಗಳು ಬಂದಿದ್ದರೆ, ಮರು ಎಣಿಕೆಯ ನಂತರ ಅದು 690 ಕ್ಕೆ ಇಳಿದಿದೆ. ಇನ್ನು, ಎದುರುದಾರ ಟಿ ಡಿ ರಾಜೇಗೌಡರಿಗೆ ಮೂಲತಃ 569 ಮತಗಳು ಬಂದಿದ್ದವು. ಆದರೆ ಮರು ಎಣಿಕೆಯ ನಂತರ ಅವರ ಮತಗಳ ಸಂಖ್ಯೆ 314 ಕ್ಕೆ ಇಳಿದು 255 ಮತಗಳ ವ್ಯತ್ಯಾಸವಾಗಿದೆ. ಈ ಕುರಿತು ವರದಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ. ಸ್ಟ್ರಾಂಗ್ ರೂಂ ಅನ್ನು ಸೀಲ್ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಾಕ್ಸ್ ಆಫೀಸ್‌ನಲ್ಲಿ ‘ಏಕ್ ದಿನ್’ ಸಿನಿಮಾಗೆ ಸೋಲು; 2ನೇ ದಿನ ಗಳಿಸಿದ್ದು ಕೇವಲ 1 ಕೋಟಿ ರೂಪಾಯಿ – Kannada News | Junaid Khan Sai Pallavi starrer Ek Din Box Office Collection day 2 report

ಆಮಿರ್ ಖಾನ್ ಪುತ್ರ ಜುನೈದ್ ಖಾನ್ (Junaid Khan) ಮತ್ತು ದಕ್ಷಿಣದ ಸ್ಟಾರ್ ನಟಿ ಸಾಯಿ ಪಲ್ಲವಿ ಕಾಂಬಿನೇಷನ್‌ನ ‘ಏಕ್ ದಿನ್’ (Ek Din) ಸಿನಿಮಾ ಕಳೆದ ಶುಕ್ರವಾರವಷ್ಟೇ ತೆರೆಕಂಡಿತ್ತು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯಲು ಈ ಸಿನಿಮಾ ವಿಫಲವಾಗಿದೆ. ಮೊದಲ ದಿನವೇ ನೆಗೆಟಿವ್ ವಿಮರ್ಶೆ ಪಡೆದುಕೊಂಡಿದ್ದ ಈ ಚಿತ್ರ, ಎರಡನೇ ದಿನವೂ (ಶನಿವಾರ, ಮೇ 2) ಚೇತರಿಕೆ ಕಾಣದೆ ಗಳಿಕೆಯಲ್ಲಿ ಕುಸಿತ ಕಂಡಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಚಿತ್ರತಂಡಕ್ಕೆ ದೊಡ್ಡ ಪ್ರಮಾಣದ ನಷ್ಟ ಆಗಲಿದೆ.

ಸ್ಯಾಕ್ನಿಲ್ಕ್ ವರದಿಯ ಪ್ರಕಾರ, ‘ಏಕ್ ದಿನ್’ ಸಿನಿಮಾ ಎರಡನೇ ದಿನ ಕೇವಲ 1 ಕೋಟಿ ಕಲೆಕ್ಷನ್ ಮಾಡಿದೆ. ಮೊದಲ ದಿನ 1.15 ಕೋಟಿ ರೂಪಾಯಿ ಗಳಿಸಿದ್ದ ಈ ಚಿತ್ರಕ್ಕೆ ಶನಿವಾರ ರಜಾ ದಿನವಾಗಿದ್ದರೂ ಯಾವುದೇ ಲಾಭವಾಗಿಲ್ಲ. ಬೇರೆ ಸಿನಿಮಾಗಳ ಪ್ರಬಲ ಪೈಪೋಟಿ ಇರುವುದರಿಂದ ‘ಏಕ್ ದಿನ್’ ಚಿತ್ರದ ಬಾಕ್ಸ್ ಆಫೀಸ್ ಮೇಲೆ ತೀವ್ರ ಪೆಟ್ಟು ಬಿದ್ದಿದೆ.

ರಿತೇಶ್ ದೇಶ್‌ಮುಖ್ ನಟನೆಯ ‘ರಾಜಾ ಶಿವಾಜಿ’ ಸಿನಿಮಾ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಅಕ್ಷಯ್ ಕುಮಾರ್ ಅವರ ಕಾಮಿಡಿ-ಹಾರರ್ ಚಿತ್ರ ‘ಭೂತ್ ಬಂಗ್ಲ’ ಕೂಡ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಇದರ ಜೊತೆಗೆ ಹಾಲಿವುಡ್ ಸಿನಿಮಾ ‘ದಿ ಡೆವಿಲ್ ವೇರ್ಸ್ ಪ್ರಾಡಾ 2’ ಸಿನಿಮಾ ಕೂಡ ಚೆನ್ನಾಗಿ ಪ್ರದರ್ಶನ ಆಗುತ್ತಿದೆ. ಹಾಗಾಗಿ ‘ಏಕ್ ದಿನ್’ ಕಲೆಕ್ಷನ್ ಮಂಕಾಗಿದೆ.

ಇದನ್ನೂ ಓದಿ: ಮಗನ ಸಿನಿಮಾ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿದ ಆಮಿರ್ ಖಾನ್; ವಿಡಿಯೋ ವೈರಲ್

‘ಏಕ್ ದಿನ್’ ಸಿನಿಮಾಗೆ ಸುನಿಲ್ ಪಾಂಡೆ ಅವರು ನಿರ್ದೇಶನ ಮಾಡಿದ್ದಾರೆ. ‘ಆಮಿರ್ ಖಾನ್ ಪ್ರೊಡಕ್ಷನ್ಸ್’ ಮೂಲಕ ಮನ್ಸೂರ್ ಖಾನ್, ಆಮಿರ್ ಖಾನ್ ಮತ್ತು ಅಪರ್ಣಾ ಪುರೋಹಿತ್ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇದು 2016ರ ಥಾಯ್ ಸಿನಿಮಾ ‘ಒನ್ ಡೇ’ ರಿಮೇಕ್. ತನ್ನ ಸಹೋದ್ಯೋಗಿಯನ್ನು ಪ್ರೀತಿಸುವ ಯುವಕನೊಬ್ಬ, ಕೇವಲ ಒಂದು ದಿನದ ಮಟ್ಟಿಗೆ ಆಕೆಯ ಪ್ರೇಮಿಯಾಗಲು ಬಯಸುವ ಕಥಾಹಂದರ ಈ ಚಿತ್ರದಲ್ಲಿದೆ.

‘ಮಹಾರಾಜ್’ ಮತ್ತು ‘ಲವ್ಯಾಪ’ ನಂತರ ಇದು ಜುನೈದ್ ಖಾನ್‌ ನಟನೆಯ ಮೂರನೇ ಸಿನಿಮಾ. ಬಹುಭಾಷಾ ನಟಿ ಸಾಯಿ ಪಲ್ಲವಿ ಅವರಿಗೆ ಬಾಲಿವುಡ್‌ನಲ್ಲಿ ಇದು ಮೊದಲ ಚಿತ್ರ. ಸಾಯಿ ಪಲ್ಲವಿ ಅವರು ಈ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿರುವುದು ಅಭಿಮಾನಿಗಳಲ್ಲಿ ಖುಷಿ ತಂದಿತ್ತಾದರೂ, ಕಳಪೆ ಕಲೆಕ್ಷನ್ ಆಗಿರುವುದು ನಿರಾಸೆ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರಾಜೇಗೌಡ vs ಜೀವರಾಜ್: ಅಂಚೆ ಮತಗಳ ಮರು ಎಣಿಕೆ ಹೈಕೋರ್ಟ್ ಆದೇಶದಿಂದ ಇಲ್ಲಿಯವರೆಗೆ ಆಗಿದ್ದೇನು? ಯಾರಿಗೆ ಗೆಲುವು? – Kannada News | Sringeri Recount Saga: Invalid Ballots Challenge Rajegowda’s Win, EC Decision Awaited

ಚಿಕ್ಕಮಗಳೂರು, ಮೇ. 3: ಶೃಂಗೇರಿ ವಿಧಾನಸಭೆ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು, ಈ ಪ್ರಕ್ರಿಯೆ ಏಳು ಗಂಟೆಗೆ ಆರಂಭವಾಗಿ ದಿನವಿಡೀ ಮುಂದುವರಿದು ಅಂತಿಮವಾಗಿ ಅಂತ್ಯಗೊಂಡಿದೆ. ಈ ಘಟನೆಯ ಕುರಿತು ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರು ಪ್ರತಿಕ್ರಿಯಿಸಿದ್ದು, ಸ್ಟ್ರಾಂಗ್ ರೂಂನಿಂದಲೂ ಗೊಂದಲ ಶುರುವಾಗಿದ್ದು, ಇವಿಎಂಗಳನ್ನು ಇರಿಸಿರುವ ಕೋಣೆಯಲ್ಲಿ ಅನಗತ್ಯ ಸಮಸ್ಯೆಗಳು ಸೃಷ್ಟಿಯಾಗಿವೆ ಎಂದು ಅವರು ಆರೋಪಿಸಿದ್ದಾರೆ. ಒಂಬತ್ತು ಗಂಟೆಗೆ ಎಲ್ಲಾ 22 ಟ್ರಂಕ್‌ಗಳನ್ನು ತೆರೆದು ಬ್ಯಾಲೆಟ್‌ಗಳನ್ನು ಎಣಿಕೆ ಮಾಡಲಾಗಿದೆ. ಅಮಾನ್ಯ ಎಂದು ಪರಿಗಣಿಸಲಾಗಿದ್ದ ಮತಗಳಲ್ಲಿ ಡಿಕ್ಲರೇಶನ್ ಕೊರತೆಯಿಂದ ಕೆಲವು ಮತಗಳನ್ನು ಕೈಬಿಡಲಾಗಿದೆ. ಡಿ.ಎನ್. ಜೀವರಾಜ್ ಅವರ ಪ್ರಕಾರ, ಮಾನ್ಯ ಮತಗಳನ್ನು ಮತ್ತು ತಮ್ಮ ಎದುರಾಳಿ ಅಭ್ಯರ್ಥಿಯ ಮಾನ್ಯ ಮತಗಳನ್ನು ಲೆಕ್ಕ ಹಾಕಿದಾಗ, ಪ್ರಸ್ತುತ ಪರಿಸ್ಥಿತಿಯಲ್ಲಿ ತಮಗೆ ಬಹುಮತ ಬರುತ್ತಿದೆ. ಈ ಅಂಕಿಅಂಶಗಳನ್ನು ಚುನಾವಣಾ ಆಯೋಗಕ್ಕೆ ಕಳುಹಿಸಲಾಗುವುದು ಮತ್ತು ಆಯೋಗದ ನಿರ್ಧಾರಕ್ಕಾಗಿ ಕಾಯುತ್ತಿರುವುದಾಗಿ ಅವರು ತಿಳಿಸಿದ್ದಾರೆ. 2023ರ ಮೇ 13ರಂದು ಅಮಾನ್ಯ ಮತಗಳನ್ನು ಮಾನ್ಯಗೊಳಿಸುವಂತೆ ತಾವು ಸಲ್ಲಿಸಿದ್ದ ಅರ್ಜಿಯ ಕುರಿತು ಉಲ್ಲೇಖಿಸಿದ ಅವರು, ಕಳೆದ ಮೂರು ವರ್ಷಗಳಿಂದ ತಾವು ನಡೆಸುತ್ತಿದ್ದ ಹೋರಾಟಕ್ಕೆ ಈಗ ಜಯ ಸಿಕ್ಕಿದೆ ಎಂದು ತಿಳಿಸಿದ್ದಾರೆ. ಆದಾಗ್ಯೂ, ಚುನಾವಣಾ ಆಯೋಗ ಇಂದು ಫಲಿತಾಂಶ ಘೋಷಿಸುತ್ತದೆ ಎಂದು ಭಾವಿಸಿದ್ದೇನೆ ಎಂದು ಹೇಳಿದ್ದಾರೆ.

ಈ ಪ್ರಕ್ರಿಯೆಯಲ್ಲಿ ರಾಜಕೀಯ ಒತ್ತಡಗಳ ಬಗ್ಗೆಯೂ ಜೀವರಾಜ್ ಸುಳಿವು ನೀಡಿದ್ದಾರೆ. ಹೈಕೋರ್ಟ್‌ನ ನಿರ್ದೇಶನವಿದ್ದರೂ, ಕೇವಲ ವೋಟ್‌ಗಳನ್ನು ಡಿಕ್ಲೇರ್ ಮಾಡಿ ಕಳುಹಿಸಬೇಕೇ ಹೊರತು ಫಲಿತಾಂಶವನ್ನು ಘೋಷಿಸುವುದಲ್ಲ, ಆಡಳಿತಾರೂಢ ಪಕ್ಷವು ಈ ವಿಷಯವನ್ನು ಹೇಗೆ ನಿಭಾಯಿಸುತ್ತದೆ ಎಂಬುದನ್ನು ಕಾದು ನೋಡಬೇಕು ಎಂದಿದ್ದಾರೆ. ಇದೀಗ ಈ ಫಲಿತಾಂಶ ಕಾಂಗ್ರೆಸ್ ಪಕ್ಷದ ಸಂಭ್ರಮಾಚರಣೆ ನಿರಾಶೆಯಾಗಿ ಪರಿಣಮಿಸಿದ್ದು, ಈಗ ಬೇರೆ ರೀತಿಯ ಪರಿಣಾಮಗಳು ಕಂಡುಬರುತ್ತಿವೆ. ಆಡಳಿತಾರೂಢ ಪಕ್ಷವೇ ಆಗಿರುವುದರಿಂದ ಒತ್ತಡಗಳು ಇರಬಹುದು ಎಂದು ಜೀವರಾಜ್ ಅಭಿಪ್ರಾಯಪಟ್ಟಿದ್ದಾರೆ. ಡಿ. ರಾಜೇಗೌಡ ಅವರು ಎಣಿಕೆಯನ್ನು ನಿಲ್ಲಿಸಲು ಒತ್ತಡ ಹಾಕಿದ ಬಗ್ಗೆ ಪ್ರತಿಕ್ರಿಯಿಸಿದ ಜೀವರಾಜ್, ಅದು ರಾಜಕೀಯ ಪಕ್ಷದ ಸಹಜ ಕ್ರಿಯೆ ಎಂದು ಹೇಳಿ, ಕೋರ್ಟ್‌ನಲ್ಲಿರುವ ವಿಷಯದ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಪ್ರಕರಣದ ಹಿನ್ನಲೆ ಏನು?:

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​​ನ ರಾಜೇಗೌಡ ಅವರು ಗೆಲುವು ಸಾಧಿಸಿದ್ದರು. ಆದರೆ ರಾಜೇಗೌಡ ಆಯ್ಕೆಯನ್ನು ಅಸಿಂಧಗೊಳಿಸಬೇಕು ಎಂದು ಡಿ.ಎನ್.ಜೀವರಾಜ್ ಅವರು ಅರ್ಜಿ ಸಲ್ಲಿಸಿದರು. ಕೇವಲ 200 ಮತಗಳ ಅಂತರದಿಂದ ಗೆದ್ದಿದ್ದು, ಅಂಚೆ ಮತಗಳ ಎಣಿಕೆಯಲ್ಲಿ ಅಧಿಕಾರಿಗಳು ಲೋಪ ಎಸಗಿದ್ದಾರೆ. ಜಿತೆಗೆ ಎದುರಾಳಿಯು ಚುನಾವಣೆಗೆ 120 ಕೋಟಿ ರೂ. ಖರ್ಚು ಮಾಡಿದ್ದಾರೆ. ಇದಕ್ಕೆ ಸಾಕ್ಷಿ ಇದೆ ಎಂದು ಅರ್ಜಿ ಸಲ್ಲಿಸಿದರು. ಜೀವರಾಜ್ ಅವರ ಅರ್ಜಿಯನ್ನು ವಜಾಗೊಳಿಸಬೇಕೆಂದು ಕಾಂಗ್ರೆಸ್​​ ಶಾಸಕ ರಾಜೇಗೌಡ ಅವರು ಹೈಕೋರ್ಟ್​​​ಗೆ ಮೇಲ್ಮನವಿ ಸಲ್ಲಿಸಿದ್ದರು. ಆದ್ರೆ ಹೈಕೋರ್ಟ್, ಅರ್ಜಿ ವಜಾಗೊಳಿಸಲು ನಿರಾಕರಿಸಿತ್ತು. ಬಳಿಕ ರಾಜೇಗೌಡ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಬಳಿಕ ಸುಪ್ರೀಂಕೋರ್ಟ್​ ರಾಜೇಗೌಡರ ಅರ್ಜಿಯನ್ನು ವಿಲೇವಾರಿ ಮಾಡಿದ್ದು, ಈ ಪ್ರಕರಣದ ಅರ್ಜಿಯನ್ನು ಹೈಕೋರ್ಟ್ ಮುಂದುವರಿಸಲಿದ್ದು, ಅರ್ಜಿದಾರರು ಅಲ್ಲಿ ಆಕ್ಷೇಪಣೆ ಸಲ್ಲಿಸಲು ಅರ್ಹರು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿತ್ತು.

ಅಂಚೆ ಮತಪತ್ರಗಳ ಮರುಪರಿಶೀಲನೆ ಬಗ್ಗೆ ಹೈಕೋರ್ಟ್ ಆದೇಶದಲ್ಲಿ ಏನಿತ್ತು?

2023ರ ವಿಧಾನಸಭಾ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದಿಂದ ಗೆದ್ದು, ಶಾಸಕರಾಗಿದ್ದ ಕಾಂಗ್ರೆಸ್‌ನ ಕೆವೈ ನಂಜೇಗೌಡ ಆಯ್ಕೆ ಅಸಿಂಧುಗೊಳಿಸಿ ಮರು ಮತ ಎಣಿಕೆಗೆ ಆದೇಶಿಸಿತ್ತು. ಆದ್ರೆ, ಮರುಮತದಾನದಲ್ಲಿ ನಂಜೇಗೌಡ ಅವರೇ ಗೆದ್ದಿದ್ದಾರೆ. ಹೀಗಾಗಿ ನಂಜೇಗೌಡ ಅವರ ಪ್ರಕರಣ ಸುಖಾಂತ್ಯ ಕಂಡಿತ್ತು. ಇದರ ಬೆನ್ನಲ್ಲೇ ಮತ್ತೊರ್ವ ಶಾಸಕ ಸ್ಥಾನಕ್ಕೆ ಕುತ್ತುಬಂದಿದೆ. ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಆಯ್ಕೆ ಅಸಿಂಧು ಕೋರಿ ಬಿಜೆಪಿ ಪರಾಜಿತ ಅಭ್ಯರ್ಥಿ ಸಲ್ಲಿಸಿದ್ದ ತಕರಾರು ಅರ್ಜಿ ಸಂಬಂಧ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿತ್ತು. ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಆಯ್ಕೆ ಅಸಿಂಧು ಕೋರಿ ಬಿಜೆಪಿ ಅಭ್ಯರ್ಥಿ ಡಿ.ಎನ್.ಜೀವರಾಜ್ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ 279 ಅಂಚೆ ಮತಪತ್ರಗಳನ್ನು ಮೇ 2ಕ್ಕೆ ಮರುಪರಿಶೀಲನೆ ಮಾಡಿ ಫಲಿತಾಂಶ ಪ್ರಕಟಿಸುವಂತೆ ಹೇಳಿತ್ತು. ಇದೀಗ ಕೋರ್ಟ್​​ ಆದೇಶದಂತೆ ಚುನಾವಣಾ ಆಯೋಗ ಈ ಪ್ರಕ್ರಿಯೆಯನ್ನು ನಡೆಸಿದೆ.

ಇದನ್ನೂ ಓದಿ: ಕಾಂಗ್ರೆಸ್ ಶಾಸಕ ರಾಜೇಗೌಡರಿಗೆ ಬಿಗ್ ಶಾಕ್; ಅಂಚೆ ಮತಗಳ ಮರು ಎಣಿಕೆಯಲ್ಲಿ ತಿರುವು!

ಮರು ಮತ ಎಣಿಕೆಯಲ್ಲೂ ಶಾಸಕ ಟಿಡಿ ರಾಜೇಗೌಡಗೆ ಗೆಲುವು ಎಂದಿದ್ದೇಕೆ?

ಹೈಕೋರ್ಟ್ ಆದೇಶದ ಮೇರೆಗೆ ನೆನ್ನೆ (ಮೇ.2) ಮರು ಮತ ಎಣಿಕೆಯನ್ನು ನಡೆಸಲಾಗಿತ್ತು. ಈ ಮತ ಎಣಿಕೆ ನಡೆಯುತ್ತಿರುವಾಗಲೇ ಕಾಂಗ್ರೆಸ್​​​​​ ಶಾಸಕರ ಗೆಲುವು ಎಂದು ಹೇಳಲಾಗಿತ್ತು. ಈ ಹಿನ್ನಲ್ಲೆ ಚಿಕ್ಕಮಗಳೂರಿನ ಐಡಿಎಸ್​ಜಿ ಕಾಲೇಜು ಮುಂಭಾಗ ಕೈ ಕಾರ್ಯಕರ್ತರಿಂದ ಸಂಭ್ರಮಾಚರಣೆ ಜೋರಾಗಿತ್ತು. ಆದರೆ ಈ ಬಗ್ಗೆ ಚುನಾವಣಾ ಆಯೋಗ ಅಧಿಕೃತ ಘೋಷಣೆ ಮಾಡಿರಲಿಲ್ಲ. ರಾತ್ರಿ ಹೊತ್ತಿಗೆ ಮರು ಮತ ಎಣಿಕೆಯಲ್ಲಿ ದೊಡ್ಡ ತಿರುವು ಪಡೆದುಕೊಂಡಿತ್ತು. ಮತ ಎಣಿಕೆ ವೇಳೆ, ಸಿಂಧು, ಅಸಿಂಧು ಮತ ಲೆಕ್ಕಚಾರ ಕೂಡ ನಡೆದಿದೆ. ಈ ವೇಳೆ ಅಂಚೆ ಮತಗಳ ಪತ್ರದಲ್ಲಿ ರಾಜೇಗೌಡ ಮತ್ತು ಮತ್ತೊಬ್ಬ ಅಭ್ಯರ್ಥಿ ಇಬ್ಬರಿಗೂ ‘ಡಬ್ಬಲ್ ಟಿಕ್’ ಮಾಡಿರುವುದು ಕಂಡುಬಂದಿದೆ. ಈ ಕಾರಣಕ್ಕೆ 258 ಮತಗಳನ್ನು ತಿರಸ್ಕರಿಸಲಾಗಿದೆ. ಈ ಹಿಂದೆ 569 ಅಂಚೆ ಮತಗಳನ್ನು ಪಡೆದಿದ್ದ ರಾಜೇಗೌಡರ ಪಟ್ಟಿಯಿಂದ ಈಗ 255 ಮತಗಳು ಮರು ಎಣಿಕೆ ವೇಳೆ ಕಡಿತಗೊಂಡಿವೆ. ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರಿಗೆ ಬಂದಿದ್ದ 692 ಅಂಚೆ ಮತಗಳಲ್ಲಿ ಕೇವಲ 2 ಮತಗಳು ಮಾತ್ರ ತಿರಸ್ಕೃತಗೊಂಡಿವೆ. ಈಗಿನ ಮರು ಎಣಿಕೆಯಲ್ಲಿ ರಾಜೇಗೌಡರ 255 ಅಂಚೆ ಮತಗಳು ಕಡಿತಗೊಂಡಿರುವುದರಿಂದ, ಚುನಾವಣಾ ಫಲಿತಾಂಶದ ಅಂತಿಮ ಚಿತ್ರಣವು ಬದಲಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:51 am, Sun, 3 May 26

Source link

ಸಾಗರದ ಮಧ್ಯೆ ಭಾರತದ ಶಕ್ತಿಯ ಉದಯ: ಗ್ರೇಟ್ ನಿಕೋಬಾರ್ ಮಹಾಯೋಜನೆ ಬಗೆಗಿನ ಪ್ರಶ್ನೆಗಳಿಗೆ ಸರ್ಕಾರದ ಉತ್ತರ – Kannada News | Great Nicobar Project: India’s Power Rise, Govt Answers Rahul Gandhi on Security and Growth

ಶ್ರೀವಿಜಯಪುರಂ, ಮೇ 03: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi) ಅಂಡಮಾನ್-ನಿಕೋಬಾರ್​ನಲ್ಲಿನ ಗ್ರೇಟ್ ನಿಕೋಬಾರ್ ಯೋಜನೆ ಬಗ್ಗೆ ಅಪಸ್ವರ ಎತ್ತಿದ್ದಾರೆ. ಅವರು ಕೇಳಿರುವ ಪ್ರಶ್ನೆಗಳಿಗೆ ಸರ್ಕಾರ ಉತ್ತರ ನೀಡಿದೆ. ಸರ್ಕಾರ ಈ ಯೋಜನೆಯನ್ನು ರಾಷ್ಟ್ರೀಯ ರಕ್ಷಣೆಗೆ ಅತ್ಯಗತ್ಯ ಮತ್ತು ಮಹತ್ವಾಕಾಂಕ್ಷೆಯ ಯೋಜನೆ ಎಂದು ಕರೆಯುತ್ತಿದೆ ಆದರೆ ಕೆಲವರು ಇದನ್ನು ವಿರೋಧಿಸುತ್ತಿದ್ದಾರೆ. ರಾಹುಲ್ ಗಾಂಧಿ ಕೆಲವು ದಿನಗಳ ಹಿಂದಷ್ಟೇ ಅಂಡಮಾನ್-ನಿಕೋಬಾರ್ ದ್ವೀಪಕ್ಕೆ ಭೇಟಿ ನೀಡಿದ್ದರು. ಗ್ರೇಟ್ ನಿಕೋಬಾರ್ ದ್ವೀಪದಲ್ಲಿನ ಪರಿಸರ ನಾಶ ಮತ್ತು ಸ್ಥಳೀಯ ಬುಡಕಟ್ಟು ಜನಾಂಗದವರ ಸ್ಥಳಾಂತರದ ಬಗ್ಗೆ ಆತಂಕ ವ್ಯಕ್ತಪಡಿಸಿ, ಸ್ಥಳೀಯ ನಿಕೋಬಾರೀಸ್ ಸಮುದಾಯದ ಮುಖಂಡರನ್ನು ಭೇಟಿ ಮಾಡಿದ್ದರು.

ಈ ಯೋಜನೆಯನ್ನು ರಾಹುಲ್ ಗಾಂಧಿ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ವಿನಾಶ ಮತ್ತು ಅತಿದೊಡ್ಡ ಹಗರಣ ಎಂದು ಕರೆದಿದ್ದಾರೆ. ಆದರೆ ಈ ಆರೋಪಗಳಿಗೆ ಸರ್ಕಾರ ಉತ್ತರ ನೀಡಿದೆ. ಅಂಡಮಾನ್ ಸಮುದ್ರದ ನೀಲಿ ಅಲೆಗಳ ನಡುವೆ ಇರುವ ಗ್ರೇಟ್ ನಿಕೋಬಾರ್ ದ್ವೀಪವು ಕೇವಲ ಒಂದು ಪ್ರವಾಸಿ ತಾಣವಲ್ಲ, ಅದು ಭಾರತದ ಭವಿಷ್ಯದ ಆರ್ಥಿಕ ಮತ್ತು ರಕ್ಷಣಾ ಶಕ್ತಿಯ ಕೇಂದ್ರಬಿಂದು. ಇಲ್ಲಿ ಜಾರಿಯಾಗುತ್ತಿರುವ ಬೃಹತ್ ಯೋಜನೆಯು ರಾಷ್ಟ್ರದ ಹಿತಾಸಕ್ತಿ ಮತ್ತು ಪರಿಸರದ ರಕ್ಷಣೆಯನ್ನು ಸಮಾನವಾಗಿ ಗೌರವಿಸುವ ಒಂದು ಮಹತ್ವಾಕಾಂಕ್ಷೆಯ ಪಯಣವಾಗಿದೆ.

ಈ ಯೋಜನೆಯು ಕೇವಲ ಕಟ್ಟಡ ಅಥವಾ ಬಂದರುಗಳ ನಿರ್ಮಾಣವಲ್ಲ, ಬದಲಿಗೆ ಅಂಡಮಾನ್ ಸಮುದ್ರ ಮತ್ತು ಆಗ್ನೇಯ ಏಷ್ಯಾದಲ್ಲಿ ಭಾರತದ ಅಧಿಪತ್ಯವನ್ನು ಬಲಪಡಿಸುವ ಒಂದು ದೃಢವಾದ ಹೆಜ್ಜೆ. ಇಲ್ಲಿ ಸ್ಥಾಪನೆಯಾಗಲಿರುವ ಅಂತಾರಾಷ್ಟ್ರೀಯ ಟ್ರಾನ್ಸ್‌ಶಿಪ್‌ಮೆಂಟ್ ಟರ್ಮಿನಲ್ ಭಾರತವನ್ನು ಜಾಗತಿಕ ವ್ಯಾಪಾರ ಭೂಪಟದಲ್ಲಿ ಪ್ರಮುಖ ಲಾಜಿಸ್ಟಿಕ್ಸ್ ಕೇಂದ್ರವಾಗಿ ಗುರುತಿಸಲಿದೆ. ಇದು ಬಂಗಾಳ ಕೊಲ್ಲಿಯ ಇತರ ಸ್ಪರ್ಧಾತ್ಮಕ ಬಂದರುಗಳಿಗಿಂತ ಭಾರತಕ್ಕೆ ಹೆಚ್ಚಿನ ಭೌಗೋಳಿಕ ಅನುಕೂಲವನ್ನು ಒದಗಿಸಲಿದೆ.

ಅನೇಕರಲ್ಲಿ ಕಾಡುವ ಪ್ರಶ್ನೆಯೆಂದರೆ, ಈ ಅಭಿವೃದ್ಧಿಯಿಂದ ದ್ವೀಪದ ಪರಿಸರಕ್ಕೆ ಹಾನಿಯಾಗುವುದಿಲ್ಲವೇ? ಇದಕ್ಕೆ ಉತ್ತರ ಯೋಜನೆಯ ವಿನ್ಯಾಸದಲ್ಲೇ ಇದೆ. ದ್ವೀಪದ ಜೀವವೈವಿಧ್ಯಕ್ಕೆ ಧಕ್ಕೆಯಾಗದಂತೆ ತಡೆಯಲು ಅತ್ಯಂತ ಕಟ್ಟುನಿಟ್ಟಾದ ‘ಪರಿಸರ ನಿರ್ವಹಣಾ ಯೋಜನೆ’ಯನ್ನು ಸಿದ್ಧಪಡಿಸಲಾಗಿದೆ. ಯಾವುದೇ ಸಂಭಾವ್ಯ ತೊಂದರೆಗಳನ್ನು ಮೊದಲೇ ಗುರುತಿಸಿ, ಅವುಗಳನ್ನು ತಗ್ಗಿಸುವ ಜಾರಿಗೊಳಿಸಬಹುದಾದ ಷರತ್ತುಗಳನ್ನು ವಿಧಿಸಲಾಗಿದೆ.

ಮತ್ತಷ್ಟು ಓದಿ: Video: ಪ್ರಧಾನಿ ಮೋದಿ ಮತ್ತು ನನಗೆ ಇಬ್ರಿಗೂ ‘ಹೆಂಡತಿ’ ಸಮಸ್ಯೆ ಇಲ್ಲ ಎಂದ ರಾಹುಲ್ ಗಾಂಧಿ

ಝೂಲಾಜಿಕಲ್ ಸರ್ವೇ ಆಫ್ ಇಂಡಿಯಾ ಮತ್ತು ಐಐಟಿಗಳಂತಹ ಪ್ರತಿಷ್ಠಿತ ಸಂಸ್ಥೆಗಳ ಮೂಲಕ ಕಠಿಣ ಪರಿಸರ ಪರಿಣಾಮ ಮೌಲ್ಯಮಾಪನ (EIA) ನಡೆಸಲಾಗಿದೆ. ಜೀವವೈವಿಧ್ಯ ಸಂರಕ್ಷಣೆ, ಹವಳಗಳ ಸ್ಥಳಾಂತರ ಮತ್ತು ವನ್ಯಜೀವಿ ನಿರ್ವಹಣಾ ತಂತ್ರಗಳನ್ನು ಈ ಯೋಜನೆಯಲ್ಲಿ ಅಳವಡಿಸಲಾಗಿದೆ.

ಕೇವಲ ಶೇ.1.82ರಷ್ಟು ಭೂಮಿ ಮಾತ್ರ ಬಳಕೆ

ಯೋಜನೆಯು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಒಟ್ಟು ಅರಣ್ಯ ಪ್ರದೇಶದ ಕೇವಲ 1.82% ರಷ್ಟು ಭೂಮಿಯನ್ನು ಮಾತ್ರ ಬಳಸಿಕೊಳ್ಳುತ್ತಿದೆ. ಈ ಯೋಜನೆಯು ಸಮುದ್ರ ಮಾರ್ಗಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ವಿದೇಶಿ ಶಕ್ತಿಗಳನ್ನು ಎದುರಿಸಲು ಭಾರತಕ್ಕೆ ಸಹಾಯ ಮಾಡುತ್ತದೆ. ಅಲ್ಲದೆ, ಮ್ಯಾನ್ಮಾರ್‌ನ ಬೇಟೆಗಾರರಿಂದ ಹವಳ ಮತ್ತು ಸಮುದ್ರ ಸಂಪನ್ಮೂಲಗಳ ಲೂಟಿಯನ್ನು ತಡೆಯಲು ಇದು ಪೂರಕವಾಗಲಿದೆ.

ಇಲ್ಲಿ ಸ್ಥಾಪನೆಯಾಗಲಿರುವ ಅಂತಾರಾಷ್ಟ್ರೀಯ ಟ್ರಾನ್ಸ್‌ಶಿಪ್‌ಮೆಂಟ್ ಟರ್ಮಿನಲ್ ಭಾರತವನ್ನು ಜಾಗತಿಕ ವ್ಯಾಪಾರ ಭೂಪಟದಲ್ಲಿ ಪ್ರಮುಖ ಲಾಜಿಸ್ಟಿಕ್ಸ್ ಕೇಂದ್ರವಾಗಿ ಗುರುತಿಸಲಿದೆ.

ಸುಸ್ಥಿರ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿ
ಈ ಯೋಜನೆಯು ದ್ವೀಪದ ಮೂಲಸೌಕರ್ಯ ಅಂತರವನ್ನು ಕಡಿಮೆ ಮಾಡುವುದಲ್ಲದೆ, ಭಾರಿ ಮೊತ್ತದ ಸಾಗಣೆ ವೆಚ್ಚವನ್ನು ಉಳಿಸುತ್ತದೆ ಮತ್ತು ಸ್ಥಳೀಯರಿಗೆ ಉದ್ಯೋಗದ ಅವಕಾಶಗಳನ್ನು ಸೃಷ್ಟಿಸುತ್ತದೆ. ಸ್ಥಳೀಯ ಸಮುದಾಯಗಳ ರಕ್ಷಣೆಯನ್ನು ಯೋಜನೆಯ ಕೇಂದ್ರಬಿಂದುವಾಗಿ ಇರಿಸಿಕೊಳ್ಳಲಾಗಿದ್ದು, ಅಭಿವೃದ್ಧಿಯು ಎಲ್ಲರನ್ನೂ ಒಳಗೊಳ್ಳುವಂತೆ ಖಚಿತಪಡಿಸಲಾಗಿದೆ.

ಈ ಯೋಜನೆ ಆರ್ಥಿಕ ಲಾಭಕ್ಕಲ್ಲ

ಈ ಯೋಜನೆಯು ಕೇವಲ ಆರ್ಥಿಕ ಲಾಭಕ್ಕಾಗಿ ಅಲ್ಲ, ಇಲ್ಲಿನ ಸ್ಥಳೀಯ ಸಮುದಾಯಗಳ ರಕ್ಷಣೆಯನ್ನು ತನ್ನ ಯೋಜನೆಯ ಕೇಂದ್ರಬಿಂದುವಾಗಿರಿಸಿಕೊಂಡಿದೆ. ಸುಸ್ಥಿರ ಮತ್ತು ಅಂತರ್ಗತ ಬೆಳವಣಿಗೆಯ ಮೂಲಕ ದ್ವೀಪವಾಸಿಗಳ ಬದುಕನ್ನು ಹಸನುಗೊಳಿಸುವುದು ಮತ್ತು ರಾಷ್ಟ್ರೀಯ ಭದ್ರತೆಯನ್ನು ಖಚಿತಪಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಒಟ್ಟಾರೆಯಾಗಿ, ಗ್ರೇಟ್ ನಿಕೋಬಾರ್ ಯೋಜನೆಯು ಆಧುನಿಕ ಭಾರತದ ಆರ್ಥಿಕ ಕನಸುಗಳಿಗೆ ರೆಕ್ಕೆ ನೀಡುವ ಜೊತೆಗೆ, ಪರಿಸರ ಸ್ನೇಹಿ ಅಭಿವೃದ್ಧಿಗೆ ಮಾದರಿಯಾಗುವಂತೆ ವಿನ್ಯಾಸಗೊಂಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version