KEA Recruitment 2026: 233 ಫಾರ್ಮಸಿ, ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ; 99,400ರೂ. ವರೆಗೆ ವೇತನ – Kannada News | KEA Recruitment 2026: Apply for 233 Pharmacy Officer and Nursing Officer Posts

ಬೆಂಗಳೂರು: ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ಕಾಯುತ್ತಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಿಹಿಸುದ್ದಿ ನೀಡಿದೆ. KEA ವತಿಯಿಂದ ಫಾರ್ಮಸಿ ಆಫೀಸರ್ ಮತ್ತು ನರ್ಸಿಂಗ್ ಆಫೀಸರ್ ಸೇರಿದಂತೆ ಒಟ್ಟು 233 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಗಸ್ಟ್ 30 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

233 ಹುದ್ದೆಗಳಿಗೆ ನೇಮಕಾತಿ:

ಈ ನೇಮಕಾತಿಯಲ್ಲಿ ಕರ್ನಾಟಕದ ಉಳಿದ ವೃಂದ (RPC) ಹಾಗೂ ಕಲ್ಯಾಣ ಕರ್ನಾಟಕ (KK) ವೃಂದದ ಹುದ್ದೆಗಳು ಸೇರಿವೆ. ಒಟ್ಟು 233 ಹುದ್ದೆಗಳಲ್ಲಿ 98 ಫಾರ್ಮಸಿ ಆಫೀಸರ್ RPC, 90 ನರ್ಸಿಂಗ್ ಆಫೀಸರ್ RPC, 11 ಫಾರ್ಮಸಿ ಆಫೀಸರ್ KK ಹಾಗೂ 34 ನರ್ಸಿಂಗ್ ಆಫೀಸರ್ KK ಹುದ್ದೆಗಳು ಒಳಗೊಂಡಿವೆ.

ಹುದ್ದೆವಾರು ವಿವರ:

ಫಾರ್ಮಸಿ ಆಫೀಸರ್ – RPC ವಿಭಾಗದಲ್ಲಿ 98 ಹುದ್ದೆಗಳು, ನರ್ಸಿಂಗ್ ಆಫೀಸರ್ – RPC ವಿಭಾಗದಲ್ಲಿ 90 ಹುದ್ದೆಗಳು ಖಾಲಿ ಇವೆ. ಅದೇ ರೀತಿ ಫಾರ್ಮಸಿ ಆಫೀಸರ್ – KK ವಿಭಾಗದಲ್ಲಿ 11 ಹಾಗೂ ನರ್ಸಿಂಗ್ ಆಫೀಸರ್ – KK ವಿಭಾಗದಲ್ಲಿ 34 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಒಟ್ಟಾರೆಯಾಗಿ 233 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಶೈಕ್ಷಣಿಕ ಅರ್ಹತೆ ಏನು?

ಫಾರ್ಮಸಿ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಫಾರ್ಮಸಿಯಲ್ಲಿ ಡಿಪ್ಲೊಮಾ ಸೇರಿದಂತೆ ಅಧಿಸೂಚನೆಯಲ್ಲಿ ನಿಗದಿಪಡಿಸಿರುವ ವಿದ್ಯಾರ್ಹತೆಯನ್ನು ಹೊಂದಿರಬೇಕು. ನರ್ಸಿಂಗ್ ಆಫೀಸರ್ ಹುದ್ದೆಗೆ ನರ್ಸಿಂಗ್‌ನಲ್ಲಿ ಡಿಪ್ಲೊಮಾ, GNM ಅಥವಾ B.Sc Nursing ಸೇರಿದಂತೆ ಅಧಿಸೂಚನೆಯಲ್ಲಿ ಸೂಚಿಸಿರುವ ಅರ್ಹತೆ ಹೊಂದಿರಬೇಕು. ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುತ್ತಿರುವ ಹುದ್ದೆಗೆ ಅಗತ್ಯವಿರುವ ವಿದ್ಯಾರ್ಹತೆ ಹಾಗೂ ಇತರ ಅರ್ಹತಾ ಮಾನದಂಡಗಳನ್ನು ಅಧಿಕೃತ ಅಧಿಸೂಚನೆಯಲ್ಲಿ ಪರಿಶೀಲಿಸಿದ ಬಳಿಕವೇ ಅರ್ಜಿ ಸಲ್ಲಿಸುವುದು ಸೂಕ್ತ.

ತಿಂಗಳಿಗೆ 99,400ರೂ.ವರೆಗೆ ವೇತನ:

KEA ನೇಮಕಾತಿಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಗುಣವಾಗಿ ಉತ್ತಮ ವೇತನ ದೊರೆಯಲಿದೆ. ಫಾರ್ಮಸಿ ಆಫೀಸರ್ ಹುದ್ದೆಗೆ ತಿಂಗಳಿಗೆ 44,425ರಿಂದ 83,700 ರೂ. ರವರೆಗೆ ಹಾಗೂ ನರ್ಸಿಂಗ್ ಆಫೀಸರ್ ಹುದ್ದೆಗೆ 54,175ರಿಂದ 99,400 ರೂ. ರವರೆಗೆ ವೇತನ ನಿಗದಿಪಡಿಸಲಾಗಿದೆ.

ವಯೋಮಿತಿ ಎಷ್ಟು?

ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸು 40 ವರ್ಷ ಎಂದು ತಿಳಿಸಲಾಗಿದೆ. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ. 2A, 2B, 3A ಮತ್ತು 3B ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ SC, ST ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಅರ್ಜಿ ಶುಲ್ಕ ಎಷ್ಟು?

ಅಭ್ಯರ್ಥಿಗಳ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. SC/ST, ಪ್ರವರ್ಗ-1 ಮತ್ತು ESM ಅಭ್ಯರ್ಥಿಗಳಿಗೆ 500, ಪಿಎಚ್‌/PwD ಅಭ್ಯರ್ಥಿಗಳಿಗೆ 250ರೂ. ಹಾಗೂ ಇತರ ಎಲ್ಲಾ ಅಭ್ಯರ್ಥಿಗಳಿಗೆ 750 ರೂ. ಅರ್ಜಿ ಶುಲ್ಕವಿದೆ. ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು.

ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?

ಅಭ್ಯರ್ಥಿಗಳ ಆಯ್ಕೆಯು ನೇಮಕಾತಿ ಪ್ರಕ್ರಿಯೆಯಲ್ಲಿನ ನಿಯಮಗಳ ಆಧಾರದ ಮೇಲೆ ನಡೆಯಲಿದೆ. ನೀಡಿರುವ ಮಾಹಿತಿಯ ಪ್ರಕಾರ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಆಯ್ಕೆ ಪ್ರಕ್ರಿಯೆಯ ಭಾಗವಾಗಿರಲಿದೆ. ಪರೀಕ್ಷಾ ಮಾದರಿ, ಅಂಕಗಳ ವಿವರ ಹಾಗೂ ಅಂತಿಮ ಆಯ್ಕೆ ವಿಧಾನದ ಕುರಿತು ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಬೇಕು.

ಇದನ್ನೂ ಓದಿ: ಜಾಬ್ ಇಂಟರ್‌ವ್ಯೂಗೆ ಹೋಗುವ ಮುನ್ನ ಈ ತಪ್ಪು ಮಾಡಬೇಡಿ; ಸಿಂಪಲ್​ ಟಿಪ್ಸ್​ ಇಲ್ಲಿದೆ

ಅರ್ಜಿ ಸಲ್ಲಿಸುವುದು ಹೇಗೆ?

KEA ಫಾರ್ಮಸಿ ಆಫೀಸರ್ ಮತ್ತು ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಬಳಿಕ ನೇಮಕಾತಿ ವಿಭಾಗವನ್ನು ತೆರೆಯಿ, ಸಂಬಂಧಿತ ಅರ್ಜಿ ಲಿಂಕ್‌ ಆಯ್ಕೆ ಮಾಡಬೇಕು. ಅರ್ಜಿಯಲ್ಲಿ ಕೇಳಲಾಗಿರುವ ವೈಯಕ್ತಿಕ, ಶೈಕ್ಷಣಿಕ ಹಾಗೂ ಇತರ ವಿವರಗಳನ್ನು ಸರಿಯಾಗಿ ನಮೂದಿಸಿ, ಅಗತ್ಯ ದಾಖಲೆಗಳು ಮತ್ತು ಛಾಯಾಚಿತ್ರವನ್ನು ಅಪ್‌ಲೋಡ್ ಮಾಡಬೇಕು. ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಪಾವತಿಸಿ ಅರ್ಜಿಯನ್ನು ಅಂತಿಮವಾಗಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಬಳಿಕ ಅರ್ಜಿ ಸಂಖ್ಯೆ ಅಥವಾ ನೋಂದಣಿ ವಿವರವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಮುಖ್ಯವಾಗಿದೆ. ಭವಿಷ್ಯದಲ್ಲಿ ಪ್ರವೇಶ ಪತ್ರ, ಪರೀಕ್ಷೆ ಅಥವಾ ಇತರ ನೇಮಕಾತಿ ಪ್ರಕ್ರಿಯೆಗಳಿಗೆ ಇದು ಅಗತ್ಯವಾಗಬಹುದು.

ಪ್ರಮುಖ ದಿನಾಂಕಗಳು:

KEA ನೇಮಕಾತಿಗೆ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆಗಸ್ಟ್ 7 ರಂದು ಆರಂಭವಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 30 ಕೊನೆಯ ದಿನವಾಗಿದೆ. ಅರ್ಜಿ ಶುಲ್ಕ ಪಾವತಿಸಲು ಆಗಸ್ಟ್ 31 ಕೊನೆಯ ದಿನಾಂಕವಾಗಿದೆ.

ಅಭ್ಯರ್ಥಿಗಳಿಗೆ ಮುಖ್ಯ ಸೂಚನೆ:

ಫಾರ್ಮಸಿ ಆಫೀಸರ್ ಮತ್ತು ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ, ವಯೋಮಿತಿ, ವೃತ್ತಿಪರ ಅರ್ಹತೆ, ಶುಲ್ಕ ಮತ್ತು ಇತರ ನಿಯಮಗಳನ್ನು ಅಧಿಕೃತ KEA ಅಧಿಸೂಚನೆಯಲ್ಲಿ ಪರಿಶೀಲಿಸಬೇಕು. ನೇಮಕಾತಿಗೆ ಸಂಬಂಧಿಸಿದ ಅಂತಿಮ ಮತ್ತು ಅಧಿಕೃತ ಮಾಹಿತಿಗಾಗಿ KEA ವೆಬ್‌ಸೈಟ್‌ನಲ್ಲಿರುವ ಅಧಿಸೂಚನೆಯನ್ನೇ ಪರಿಗಣಿಸುವುದು ಸೂಕ್ತ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On – 1:50 pm, Sat, 8 August 26

Source link

ಬಿಡದಿ ಟೌನ್​ಶಿಪ್ ವಿರುದ್ಧ ಜೆಡಿಎಸ್, ಬಿಜೆಪಿ ಒಟ್ಟಾಗಿ ಹೋರಾಟ: ವಿಪಕ್ಷ ನಾಯಕ ಅಶೋಕ್ ಘೋಷಣೆ – Kannada News | Bidadi Township Row: BJP and JDS Join Hands for Joint Opposition, R Ashoka Announces

ಬೆಂಗಳೂರು, ಆಗಸ್ಟ್ 8: ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಹೋರಾಟ ನಡೆಸಲು ನಿರ್ಧಾರ ಕೈಗೊಂಡಿವೆ. ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ನಡೆದ ಸಮನ್ವಯ ಸಭೆಯ ಬಳಿಕ ಮಾಹಿತಿ ನೀಡಿದ ವಿಪಕ್ಷ ನಾಯಕ ಅಶೋಕ್, ಹೋರಾಟದಲ್ಲಿ ಭಾಗವಹಿಸಲು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಟ್ಟಾಗಿ ಸಮಾವೇಶಗಳನ್ನು ಆಯೋಜಿಸಲಿವೆ. ಸದನದ ಒಳಗೆ ಈಗಾಗಲೇ ಜೆಡಿಎಸ್, ಬಿಜೆಪಿಯ ಹೋರಾಟಗಳಿಗೆ ಬೆಂಬಲ ನೀಡಿದೆ. ಬರಗಾಲ, ನೈಸ್ ಯೋಜನೆ, ಬಿಡದಿ ಟೌನ್‌ಶಿಪ್ ಮತ್ತು ಕೆಪಿಎಸ್‌ಸಿ ಅಕ್ರಮಗಳಿಗೆ ಸಂಬಂಧಿಸಿದಂತೆ ಸದನದಲ್ಲಿ ಚರ್ಚಿಸಲು ಎರಡೂ ಪಕ್ಷಗಳು ನಿರ್ಧರಿಸಿವೆ. ಈ ಎಲ್ಲಾ ವಿಚಾರಗಳಿಗೆ ಜೆಡಿಎಸ್ ಸಂಪೂರ್ಣ ಸಹಕಾರ ನೀಡಲಿದೆ ಎಂದು ಅಶೋಕ್ ತಿಳಿಸಿದ್ದಾರೆ.

ಮುಂಬರುವ ದಿನಗಳಲ್ಲಿ ಕರ್ನಾಟಕದಲ್ಲಿ ನಡೆಯುವ ಎಲ್ಲಾ ಪ್ರಮುಖ ಹೋರಾಟಗಳಲ್ಲೂ ಒಟ್ಟಾಗಿ ಕೆಲಸ ಮಾಡುವ ತೀರ್ಮಾನವನ್ನು ಮಾಡಲಾಗಿದೆ. ಶೀಘ್ರದಲ್ಲೇ ಎರಡು-ಮೂರು ದಿನಗಳಲ್ಲಿ ಸಮನ್ವಯ ಸಮಿತಿ ರಚಿಸಲಾಗುವುದು. ಈ ಸಮಿತಿಯಲ್ಲಿ ಎರಡೂ ಕಡೆಯಿಂದ ತಲಾ ಐದು ಜನ ಸದಸ್ಯರಿರುತ್ತಾರೆ. ಜಿಲ್ಲಾ ಮಟ್ಟದಲ್ಲಿಯೂ ಎರಡೂ ಪಕ್ಷಗಳು ಒಟ್ಟಾಗಿ ಹೋರಾಟ ಮಾಡಲಿವೆ. ಜಂಟಿ ಶಾಸಕಾಂಗ ಸಭೆ ಕರೆಯುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ. ನಾಗೇಂದ್ರಗೆ ಸಚಿವ ಸ್ಥಾನ ನೀಡಿದ್ದರ ವಿರುದ್ಧದ ಹೋರಾಟದ ಬಗ್ಗೆ ಅಂತಿಮ ತೀರ್ಮಾನ ಇನ್ನಷ್ಟೇ ಆಗಬೇಕಿದೆ ಎಂದು ಅಶೋಕ್ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಹಿಂದಿ ಮಾತನಾಡದ್ದಕ್ಕೆ ಡೆಲಿವರಿ ಬಾಯ್ ಮೇಲೆ ಹಲ್ಲೆ!

ಬೆಂಗಳೂರು, ಆಗಸ್ಟ್ 08: ನಗರದಲ್ಲಿ ಭಾಷಾ ವಿವಾದಕ್ಕೆ ಸಂಬಂಧಿಸಿದಂತೆ ಭೀಕರ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ನಗರದ ಯಲಹಂಕ ನ್ಯೂ ಟೌನ್‌ನಲ್ಲಿ ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಹಿಂದಿ ಭಾಷೆ ಮಾತನಾಡಲಿಲ್ಲ ಎಂಬ ಕಾರಣಕ್ಕೆ ಸ್ಥಳೀಯ ಫುಡ್ ಡೆಲಿವರಿ ಬಾಯ್ ಮೇಲೆ ಅನ್ಯ ರಾಜ್ಯದ ಮೂಲದವರು ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಒಬ್ಬ ಯುವತಿ ಹಾಗೂ ಇಬ್ಬರು ಯುವಕರು ಸೇರಿ ನಡುರಸ್ತೆಯಲ್ಲೇ ಡೆಲಿವರಿ ಬಾಯ್ ಮುಖಕ್ಕೆ ತೀವ್ರವಾಗಿ ಪಂಚ್ ಮಾಡಿದ್ದಾರೆ. ಈ ಅಮಾನವೀಯ ಘಟನೆಯ ಸಂಪೂರ್ಣ ದೃಶ್ಯಗಳು ಸ್ಥಳೀಯ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿವೆ. ಸದ್ಯ ಹಲ್ಲೆಗೊಳಗಾದ ಯುವಕ ನೀಡಿದ ದೂರಿನ ಮೇರೆಗೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

5000 ಏಕದಿನ ಪಂದ್ಯಗಳು: ಒಡಿಐ ಕ್ರಿಕೆಟ್​ನಲ್ಲಿ ಭಾರತೀಯದ್ದೇ ಅಧಿಪತ್ಯ! – Kannada News | 5000 ODIs: Indian Cricket’s Absolute Dominance

ಪುರುಷರ ಏಕದಿನ ಕ್ರಿಕೆಟ್​ನಲ್ಲಿ 5,000 ಪಂದ್ಯಗಳು ಪೂರ್ಣಗೊಂಡಿದೆ. 1971 ರಲ್ಲಿ ಆರಂಭವಾದ ಈ 50 ಓವರ್‌ಗಳ ಕ್ರಿಕೆಟ್ ಪ್ರಯಾಣದಲ್ಲಿ, ಜಾಗತಿಕ ಮಟ್ಟದ ಪ್ರಮುಖ ಬ್ಯಾಟಿಂಗ್ ದಾಖಲೆಗಳ ಪೈಕಿ ಶೇಕಡಾ 80 ರಷ್ಟನ್ನು ಭಾರತೀಯ ಆಟಗಾರರೇ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ದಿಗ್ಗಜರು ಏಕದಿನ ಕ್ರಿಕೆಟ್ ಸಾಮ್ರಾಜ್ಯವನ್ನು ಹೇಗೆ ಆಳಿದ್ದಾರೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

ಮೈಲುಗಲ್ಲುಗಳಲ್ಲಿ ಪಾರುಪತ್ಯ:

ವಿಶ್ವ ಕ್ರಿಕೆಟ್‌ನ ಒಟ್ಟು ಪಂದ್ಯಗಳನ್ನು ತಲಾ 1,000 ಪಂದ್ಯಗಳ ಅವಧಿಯಾಗಿ ವಿಂಗಡಿಸಿದಾಗ, ಭಾರತೀಯ ಬ್ಯಾಟರ್‌ಗಳ ಪ್ರಾಬಲ್ಯ ಎದ್ದು ಕಾಣುತ್ತದೆ.

  • 1001 ರಿಂದ 2000 ಒನ್ ಡೇ ಪಂದ್ಯಗಳ ಅವಧಿ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 9,149 ರನ್ ಹಾಗೂ 30 ಶತಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರು.
  • 3001 ರಿಂದ 4000 ಒನ್ ಡೇ ಪಂದ್ಯಗಳ ಅವಧಿ: ರನ್ ಮಷೀನ್ ವಿರಾಟ್ ಕೊಹ್ಲಿ 8,534 ರನ್ ಹಾಗೂ 33 ಶತಕಗಳೊಂದಿಗೆ ಹೊಸ ಇತಿಹಾಸ ನಿರ್ಮಿಸಿದರು.
  • 4001 ರಿಂದ 5000 ಒನ್ ಡೇ ಪಂದ್ಯಗಳ ಅವಧಿ: ಇತ್ತೀಚಿನ ಈ ಕಾಲಘಟ್ಟದಲ್ಲೂ ವಿರಾಟ್ ಕೊಹ್ಲಿ ಅವರೇ ಅತಿ ಹೆಚ್ಚು (19) ಶತಕ ಸಿಡಿಸಿ ಸಾಮ್ರಾಟನಾಗಿ ಮುಂದುವರಿದಿದ್ದಾರೆ.

ಭಾರತೀಯರ ಐತಿಹಾಸಿಕ ದಾಖಲೆಗಳು:

5,000 ಪಂದ್ಯಗಳ ಈ ಸುದೀರ್ಘ ಇತಿಹಾಸದಲ್ಲಿ ಭಾರತದ ಕ್ರಿಕೆಟಿಗರು ನಿರ್ಮಿಸಿರುವ ಅತಿ ದೊಡ್ಡ ದಾಖಲೆಗಳ ಪಟ್ಟಿ ಇಲ್ಲಿದೆ:

ಐತಿಹಾಸಿಕ ದಾಖಲೆ  ಹೆಸರು ದಾಖಲೆ ದಾಖಲೆಯ ವಿಶೇಷತೆ

ಅತಿ ಹೆಚ್ಚು ರನ್‌ಗಳು

ಸಚಿನ್ ತೆಂಡೂಲ್ಕರ್ 18,426 ರನ್ ಏಕದಿನ ಇತಿಹಾಸದಲ್ಲಿ ಯಾರೂ ಮುರಿಯಲಾಗದ ರನ್ ಶಿಖರ.

ಅತಿ ಹೆಚ್ಚು ಶತಕಗಳು

ವಿರಾಟ್ ಕೊಹ್ಲಿ 50 ಶತಕಗಳು ಒನ್ ಡೇ ಕ್ರಿಕೆಟ್‌ನಲ್ಲಿ ಶತಕಗಳ ಅರ್ಧಶತಕ ಬಾರಿಸಿದ ಏಕೈಕ ಆಟಗಾರ.

ಅತ್ಯಧಿಕ ವೈಯಕ್ತಿಕ ಸ್ಕೋರ್

ರೋಹಿತ್ ಶರ್ಮಾ 264 ರನ್ ಏಕದಿನ ಕ್ರಿಕೆಟ್​ ಇತಿಹಾಸದ ಸಾರ್ವಕಾಲಿಕ ಗರಿಷ್ಠ ಸ್ಕೋರ್.

ಅತಿ ಹೆಚ್ಚು ಪಂದ್ಯಗಳು

ಸಚಿನ್ ತೆಂಡೂಲ್ಕರ್ 463 ಪಂದ್ಯಗಳು ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ಪಂದ್ಯಗಳನ್ನಾಡಿದ ಆಟಗಾರ

ಅತಿ ಹೆಚ್ಚು ಅರ್ಧಶತಕಗಳು

ಸಚಿನ್ ತೆಂಡೂಲ್ಕರ್ 96 ಅರ್ಧಶತಕಗಳು ಏಕದಿನ ಕ್ರಿಕೆಟ್​ ಇತಿಹಾಸದಲ್ಲೇ ಅತೀ ಹೆಚ್ಚು ಹಾಫ್ ಸೆಂಚುರಿ ಸಿಡಿಸಿದ ಬ್ಯಾಟರ್.

ಅತ್ಯುತ್ತಮ ಬ್ಯಾಟಿಂಗ್ ಸರಾಸರಿ

ವಿರಾಟ್ ಕೊಹ್ಲಿ 58.59 ಸರಾಸರಿ ಕನಿಷ್ಠ 50 ಇನ್ನಿಂಗ್ಸ್ ಆಡಿದ ಪೂರ್ಣ ಪ್ರಮಾಣದ ಐಸಿಸಿ ಸದಸ್ಯರಲ್ಲಿ ಅತ್ಯಧಿಕ.

ಅತಿ ಹೆಚ್ಚು ದ್ವಿಶತಕಗಳು

ರೋಹಿತ್ ಶರ್ಮಾ 3 ದ್ವಿಶತಕಗಳು ಏಕದಿನ ಕ್ರಿಕೆಟ್​ನಲ್ಲಿ ಮೂಡಿಬಂದ ಒಟ್ಟು 11 ದ್ವಿಶತಕಗಳಲ್ಲಿ 3 ಡಬಲ್ ಸೆಂಚುರಿ ರೋಹಿತ್ ಶರ್ಮಾ ಹೆಸರಲ್ಲೇ ಇವೆ!

ಅತಿ ಹೆಚ್ಚು ಬಾರಿ ನಾಟೌಟ್

ಎಂ.ಎಸ್. ಧೋನಿ 84 ಬಾರಿ ವಿಶ್ವದ ಶ್ರೇಷ್ಠ ಫಿನಿಶರ್; ಕೊನೆಯವರೆಗೂ ನಿಂತು ಪಂದ್ಯ ಗೆಲ್ಲಿಸಿದ ನಾಯಕ.

ಅತಿ ಹೆಚ್ಚು ಸಿಕ್ಸರ್‌ಗಳು (ಭಾರತ)

ರೋಹಿತ್ ಶರ್ಮಾ 362 ಸಿಕ್ಸರ್‌ಗಳು ಸಿಕ್ಸ್ ಹಿಟ್ಟಿಂಗ್‌ನಲ್ಲಿ ಭಾರತದ ಅತ್ಯಂತ ಯಶಸ್ವಿ ಬ್ಯಾಟರ್

ಮೊದಲ ದ್ವಿಶತಕದ ಮೈಲಿಗಲ್ಲು

ಸಚಿನ್ ತೆಂಡೂಲ್ಕರ್ 200 (vs ಸೌತ್ಆ ಫ್ರಿಕಾ) ಪುರುಷರ ಏಕದಿನ ಕ್ರಿಕೆಟ್​ನಲ್ಲಿ ಮೊದಲ ದ್ವಿಶತಕ ಸಿಡಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆ ಸಚಿನ್ ಹೆಸರಿನಲ್ಲಿದೆ.

ತ್ರಿಮೂರ್ತಿಗಳ ಅಧಿಪತ್ಯ (2013-2019):

ಭಾರತೀಯ ಕ್ರಿಕೆಟ್‌ನ ಸುವರ್ಣ ಯುಗವನ್ನು ರೋಹಿತ್ ಶರ್ಮಾ, ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿ ಅವರ ಟಾಪ್-ಆರ್ಡರ್ ಜೋಡಿ ಸಾಬೀತುಪಡಿಸುತ್ತದೆ. 2013 ರಿಂದ 2019 ರ ಅವಧಿಯಲ್ಲಿ ಈ ಮೂವರು ಆಟಗಾರರೇ ಸೇರಿ ಒಟ್ಟು 73 ಶತಕಗಳನ್ನು ಬಾರಿಸಿದ್ದರು.

ಆಶ್ಚರ್ಯಕರ ವಿಷಯವೆಂದರೆ, ಇದೇ ಅವಧಿಯಲ್ಲಿ ಸೌತ್ ಆಫ್ರಿಕಾ (69 ಶತಕ) ಮತ್ತು ನ್ಯೂಝಿಲೆಂಡ್ (50 ಶತಕ) ತಂಡಗಳ ಆಟಗಾರರೆಲ್ಲರೂ ಸೇರಿ ಬಾರಿಸಿದ ಶತಕಗಳಿಗಿಂತಲೂ ಈ ಮೂವರು ಭಾರತೀಯರೇ ಹೆಚ್ಚು ಶತಕ ಸಿಡಿಸಿದ್ದರು.

ಜಯದ ಹಾದಿಯಲ್ಲೂ ಟೀಮ್ ಇಂಡಿಯಾ ನಂ.1

ಕೇವಲ ವೈಯಕ್ತಿಕ ದಾಖಲೆಗಳಷ್ಟೇ ಅಲ್ಲದೆ, ಒಟ್ಟು 5,000 ಪಂದ್ಯಗಳ ಇತಿಹಾಸದಲ್ಲಿ ಕಳೆದ ಎರಡು ಕಾಲಘಟ್ಟಗಳಲ್ಲಿ (ಅಂದರೆ ಜಾಗತಿಕವಾಗಿ ನಡೆದ ಕೊನೆಯ 2,000 ಪಂದ್ಯಗಳಲ್ಲಿ) ಭಾರತವು ವಿಶ್ವದಲ್ಲೇ ಅತ್ಯಂತ ಯಶಸ್ವಿ ತಂಡವಾಗಿ ಹೊರಹೊಮ್ಮಿದೆ.

ಇದನ್ನೂ ಓದಿ: 6 ರನ್​ಗಳ ರೋಚಕ ಹೋರಾಟ: ರಣರೋಚಕ ಪಂದ್ಯದೊಂದಿಗೆ CPL​ ಶುರು

ಈ ಅವಧಿಯಲ್ಲಿ ಭಾರತವು ಜಗತ್ತಿನಲ್ಲೇ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದಿದ್ದು ಮಾತ್ರವಲ್ಲದೆ, 1.983 ಮತ್ತು 2.139 ರ ಅತ್ಯುನ್ನತ ವಿನ್-ಲಾಸ್ ಅನುಪಾತವನ್ನು ಕಾಯ್ದುಕೊಂಡು ಜಾಗತಿಕ ಕ್ರಿಕೆಟ್‌ನಲ್ಲಿ ತನ್ನ ಅಧಿಪತ್ಯವನ್ನು ಸ್ಥಾಪಿಸಿದೆ.

Source link

‘ವಿಕಸಿತ ಭಾರತ’ ನಿರ್ಮಾಣಕ್ಕೆ ಯುವಶಕ್ತಿ ಅಗತ್ಯ: ದೆಹಲಿ ಐಐಟಿ ಪದವಿ ಪ್ರದಾನ ಸಮಾರಂಭದಲ್ಲಿ ಪ್ರಧಾನಿ ಮೋದಿ ಕರೆ – Kannada News | Modi’s Vision: Youth’s Role in Nation Building, Tech Advancement and Drone Future

ದೆಹಲಿ, ಆ.8: ನವದೆಹಲಿಯ ಜಂತರ್ ಮಂತರ್‌ನಲ್ಲಿ ‘ಕಾಕ್‌ರೋಚ್ ಜನತಾ ಪಾರ್ಟಿ’ (CJP) ನೇತೃತ್ವದಲ್ಲಿ ನಡೆದ ಪ್ರತಿಭಟನೆ ಹಾಗೂ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಯ ಬಳಿಕ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೊದಲ ಸಾರ್ವಜನಿಕ ಭಾಷಣದಲ್ಲಿ ಯುವಜನತೆಯ ಸಾಮರ್ಥ್ಯದ ಮೇಲೆ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ನಮಗೆ ನಿಮ್ಮ ಮೇಲೆ ನಂಬಿಕೆಯಿದೆ. ‘ವಿಕಸಿತ ಭಾರತ’ ನಿರ್ಮಾಣದ ಪಯಣದಲ್ಲಿ ದೇಶಕ್ಕೆ ನಿಮ್ಮ ಅಗತ್ಯವಿದೆ” ಎಂದು ಯುವ ಪೀಳಿಗೆಗೆ ಕರೆ ನೀಡಿದ್ದಾರೆ.

ಖ್ಯಾತ ಭಾರತೀಯ ತಂತ್ರಜ್ಞಾನ ಸಂಸ್ಥೆ (IIT) ನವದೆಹಲಿಯ ವಾರ್ಷಿಕ ಪದವಿ ಪ್ರದಾನ ಸಮಾರಂಭವನ್ನು ಉದ್ದೇಶಿಸಿ ಪ್ರಧಾನಿಯವರು ಶನಿವಾರ ಮಾತನಾಡಿದರು. ಪ್ರತಿಯೊಂದು ಪೀಳಿಗೆಗೂ ಅದರದ್ದೇ ಆದ ರಾಷ್ಟ್ರೀಯ ಜವಾಬ್ದಾರಿ ಇರುತ್ತದೆ. ಮುಂದಿನ 30 ರಿಂದ 35 ವರ್ಷಗಳಲ್ಲಿ ನೀವು ಕೈಗೊಳ್ಳುವ ಪ್ರತಿ ನಿರ್ಧಾರವೂ ದೇಶದ ಹಿತಾಸಕ್ತಿ ಹಾಗೂ ರಾಷ್ಟ್ರದ ಅಗತ್ಯಗಳನ್ನು ಪೂರೈಸುವಂತಿರಬೇಕು ಎಂದು ಮೋದಿ ಹೇಳಿದರು.

ಇಲ್ಲಿದೆ ನೋಡಿ ವಿಡಿಯೋ:

ವೇಗವಾಗಿ ಬದಲಾಗುತ್ತಿರುವ ಇಂದಿನ ಜಗತ್ತಿನಲ್ಲಿ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತಿದೆ. ಜಾಗತಿಕ ಕಾರ್ಯತಂತ್ರ ಮತ್ತು ಜಾಗತಿಕ ಶಕ್ತಿಯ ಸಮತೋಲನ ಕ್ಷಣಕ್ಷಣಕ್ಕೂ ಬದಲಾಗುತ್ತಿದ್ದು, ಹೊಸ ಬದಲಾವಣೆಗಳಿಗೆ ತಕ್ಕಂತೆ ಕಲಿಯುತ್ತಾ ಸಾಗುವವರು ಮಾತ್ರ ಅಂತಿಮವಾಗಿ ಯಶಸ್ಸು ಸಾಧಿಸುತ್ತಾರೆ ಎಂದು ಪ್ರತಿಪಾದಿಸಿದರು. ‘ಸ್ಕೈರೂಟ್’ ಸಂಸ್ಥೆಯ ‘ವಿಕ್ರಮ್-1’ ರಾಕೆಟ್‌ನ ಯಶಸ್ಸುನ್ನು ಉಲ್ಲೇಖಿಸಿದ ಅವರು, ಸರ್ಕಾರವು ಯುವಕರ ಕೊಡುಗೆಗಾಗಿ ಹಲವು ಹೊಸ ಕ್ಷೇತ್ರಗಳನ್ನು ಮುಕ್ತಗೊಳಿಸಿದೆ. ಬಾಹ್ಯಾಕಾಶ ಕ್ಷೇತ್ರವು ಇಂದು ಯುವಕರಿಗೆ ಅಗಾಧ ಅವಕಾಶಗಳನ್ನು ತೆರೆದಿಟ್ಟಿದೆ.

ಇದನ್ನೂ ಓದಿ: ಕೈಮಗ್ಗದ ಬಟ್ಟೆ ಖರೀದಿಸಿ ಒಡಿಶಾದ ಹ್ಯಾಂಡ್​ಲೂಮ್ ಪರಂಪರೆ ಬೆಂಬಲಿಸಿದ ಸಚಿವ ಪ್ರಲ್ಹಾದ್ ಜೋಶಿ

ದೇಶದಲ್ಲಿ ಡ್ರೋನ್ ಕ್ಷೇತ್ರವೂ ವೇಗವಾಗಿ ವಿಸ್ತರಿಸುತ್ತಿದ್ದು, ರಾಷ್ಟ್ರೀಯ ಭದ್ರತೆ ಮತ್ತು ಔಷಧ ಸಾಗಣೆಯಲ್ಲಿ ಡ್ರೋನ್‌ಗಳನ್ನು ಯಶಸ್ವಿಯಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 1:03 pm, Sat, 8 August 26

Source link

Gadag Government Hostel Raid: ನೂರಾರು ಬಡ ವಿದ್ಯಾರ್ಥಿಗಳ ಆಸರೆ ಆಗ್ಬೇಕಿದ್ದ ವಸತಿ ನಿಲಯದಲ್ಲಿ ಅವ್ಯವಸ್ಥೆ – Kannada News | Gadag Government Hostel Raid: Upa Lokayukta K.N. Phanindra Takes Action Against Negligence

ಗದಗ, ಆಗಸ್ಟ್ 08: ಜಿಲ್ಲೆಯ ಸರ್ಕಾರಿ ಹಾಸ್ಟೆಲ್‌ನಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದ್ದು, ನೂರಾರು ಬಡ ವಿದ್ಯಾರ್ಥಿಗಳು ತೊಂದರೆಗೊಳಗಾಗಿದ್ದರು. ಟಿವಿ9 ಕನ್ನಡ ವಾಹಿನಿಯು ಈ ಬಗ್ಗೆ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ವರದಿ ಪ್ರಸಾರವಾದ ಬೆನ್ನಲ್ಲೇ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಗದಗ ನಗರದ ಸೂರ್ಯ ನಗರದಲ್ಲಿರುವ ಈ ಸರ್ಕಾರಿ ಹಾಸ್ಟೆಲ್‌ಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪರಿಶೀಲನೆ ವೇಳೆ ಹಾಸ್ಟೆಲ್‌ನಲ್ಲಿ ಬೆಡ್‌ಗಳಲ್ಲಿ ತಿಗಣೆ ರಾಶಿ, ಧವಸ ಧಾನ್ಯದಲ್ಲಿ ಹುಳುಗಳ ಹಿಂಡು, ಕಿತ್ತುಹೋಗಿರುವ ಬೆಡ್ ಶೀಟ್‌ಗಳು, ಕಿಟಕಿಗಳಿಗೆ ಬಟ್ಟೆ ಹೊದಿಕೆ ಹಾಗೂ ಸುತ್ತಮುತ್ತ ಕಸದ ರಾಶಿ ಕಂಡುಬಂದಿತು. ಈ ಪರಿಸ್ಥಿತಿಯನ್ನು ಕಂಡು ಕೆಂಡಾಮಂಡಲರಾದ ನ್ಯಾಯಮೂರ್ತಿ ಫಣೀಂದ್ರ ಅವರು ಹಾಸ್ಟೆಲ್ ವಾರ್ಡನ್, ಸಮಾಜ ಕಲ್ಯಾಣ ಇಲಾಖೆಯ ಡಿಡಿ ನಂದಾ ಮತ್ತು ಇತರ ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡರು. “ನಿಮ್ಮ ಮಕ್ಕಳನ್ನು ಇದೇ ಹಾಸ್ಟೆಲ್‌ನಲ್ಲಿ ಇರಿಸಿ” ಎಂದು ಕಿಡಿಕಾರಿದರು. ರಾಜ್ಯದಲ್ಲೇ ಅತ್ಯಂತ ಕೆಟ್ಟ ಹಾಸ್ಟೆಲ್ ಇದಾಗಿದೆ ಎಂದು ಹೇಳಿದ ಅವರು, ಕೂಡಲೇ ಉಪನಿರ್ದೇಶಕಿ, ತಾಲೂಕು ಅಧಿಕಾರಿ ಹಾಗೂ ವಾರ್ಡನ್ ಅವರನ್ನು ಎತ್ತಂಗಡಿ ಮಾಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಪತ್ರ ಬರೆಯುವುದಾಗಿ ತಿಳಿಸಿದರು. ಅಧಿಕಾರಿಗಳ ನಿರ್ಲಕ್ಷ್ಯವೇ ಈ ಅವ್ಯವಸ್ಥೆಗೆ ಕಾರಣ ಎಂದು ಆರೋಪಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Traditional Practice: ತಾಳಿ ದಾರ ಯಾವ ದಿನ ಬದಲಾಯಿಸಬೇಕು? ಪಾಲಿಸಬೇಕಾದ ಸಂಪ್ರದಾಯಗಳಿವು! – Kannada News | When Should Married Women Change the Thali Thread? Know the Traditional Practices

ವಿವಾಹಿತ ಮಹಿಳೆಯ ಜೀವನದಲ್ಲಿ ತಾಳಿ ಅಥವಾ ಮಾಂಗಲ್ಯಕ್ಕೆ ವಿಶೇಷ ಸ್ಥಾನವಿದೆ. ಇದು ಕೇವಲ ಆಭರಣವಲ್ಲ; ವೈವಾಹಿಕ ಬಂಧ, ದಾಂಪತ್ಯದ ಸಂಕೇತ ಮತ್ತು ಕುಟುಂಬದ ಯೋಗಕ್ಷೇಮದ ಪ್ರತೀಕವೆಂದು ಭಾರತೀಯ ಸಂಪ್ರದಾಯಗಳಲ್ಲಿ ಪರಿಗಣಿಸಲಾಗುತ್ತದೆ. ಹೀಗಾಗಿ ತಾಳಿ ದಾರವನ್ನು ಭಕ್ತಿ ಮತ್ತು ಕಾಳಜಿಯಿಂದ ನೋಡಿಕೊಳ್ಳುವುದು ಹಲವು ಕುಟುಂಬಗಳ ಆಚರಣೆಯಾಗಿದೆ. ಕಾಲ ಕಳೆದಂತೆ ತಾಳಿ ದಾರ ಸವೆಯುವುದು ಅಥವಾ ದುರ್ಬಲವಾಗುವುದು ಸಹಜ. ಇಂತಹ ಸಂದರ್ಭದಲ್ಲಿ ಹೊಸ ದಾರವನ್ನು ಬದಲಾಯಿಸುವಾಗ ಕೆಲವು ಕುಟುಂಬಗಳು ಶುಭ ದಿನ ಹಾಗೂ ನಿರ್ದಿಷ್ಟ ಪೂಜಾ ವಿಧಿವಿಧಾನಗಳನ್ನು ಅನುಸರಿಸುತ್ತವೆ. ಹಾಗಾದರೆ ತಾಳಿ ದಾರವನ್ನು ಯಾವ ದಿನ ಬದಲಾಯಿಸುವುದು ಶುಭ? ಬದಲಾಯಿಸುವಾಗ ಯಾವ ಆಚರಣೆಗಳನ್ನು ಪಾಲಿಸಲಾಗುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ತಾಳಿ ದಾರವನ್ನು ಯಾವ ದಿನ ಬದಲಾಯಿಸಬಹುದು?

ತಾಳಿ ದಾರ ಬದಲಾಯಿಸಲು ಶುಭ ಸಮಯವನ್ನು ಆಯ್ಕೆ ಮಾಡುವುದು ಹಲವು ಕುಟುಂಬಗಳಲ್ಲಿ ರೂಢಿಯಲ್ಲಿದೆ. ಸಾಮಾನ್ಯವಾಗಿ ಶುಕ್ರವಾರ, ಶುಕ್ಲ ಪಕ್ಷದ ಶುಭ ದಿನಗಳು ಅಥವಾ ಕುಟುಂಬದ ಸಂಪ್ರದಾಯದಲ್ಲಿ ನಿಗದಿಪಡಿಸಿರುವ ದಿನಗಳಲ್ಲಿ ತಾಳಿ ದಾರವನ್ನು ಬದಲಾಯಿಸುವ ಪದ್ಧತಿ ಕೆಲವು ಕಡೆ ಕಂಡುಬರುತ್ತದೆ. ಇನ್ನು ಕೆಲವು ಕುಟುಂಬಗಳು ತಮ್ಮ ಕುಟುಂಬದ ಜ್ಯೋತಿಷಿ ಸೂಚಿಸುವ ಮುಹೂರ್ತವನ್ನು ಅನುಸರಿಸುತ್ತವೆ. ಮತ್ತೊಂದೆಡೆ, ಕೆಲವರು ಮನೆಯ ಹಿರಿಯರ ಸಲಹೆಯಂತೆ ದಿನವನ್ನು ಆಯ್ಕೆ ಮಾಡುತ್ತಾರೆ. ಆದರೆ ತಾಳಿ ದಾರವು ಸವಿದು ದುರ್ಬಲವಾಗಿದ್ದರೆ ಅಥವಾ ಹರಿಯುವ ಸ್ಥಿತಿಯಲ್ಲಿದ್ದರೆ, ಕೇವಲ ಶುಭ ದಿನಕ್ಕಾಗಿ ಕಾಯುವುದು ಅಗತ್ಯವಿಲ್ಲ. ತಾಳಿ ಸುರಕ್ಷಿತವಾಗಿರುವುದು ಮುಖ್ಯವಾದ್ದರಿಂದ ಅಗತ್ಯವಿದ್ದಾಗ ತಕ್ಷಣವೇ ದಾರವನ್ನು ಬದಲಾಯಿಸಬಹುದು.

ತಾಳಿ ದಾರ ಬದಲಾಯಿಸುವಾಗ ಪೂಜೆ ಮಾಡಬಹುದೇ?

ಹೊಸ ತಾಳಿ ದಾರವನ್ನು ಧರಿಸುವ ಮೊದಲು ಮನೆಯ ದೇವರಿಗೆ ಅರಿಶಿನ ಮತ್ತು ಕುಂಕುಮದಿಂದ ಪೂಜೆ ಮಾಡುವ ಪದ್ಧತಿ ಹಲವು ಕುಟುಂಬಗಳಲ್ಲಿದೆ. ಕೆಲವು ಕುಟುಂಬಗಳಲ್ಲಿ ಹೊಸ ದಾರ ಮತ್ತು ತಾಳಿಯನ್ನು ದೇವರ ಮುಂದೆ ಇಟ್ಟು ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ಕುಟುಂಬದ ಹಿರಿಯರಿಂದ ಆಶೀರ್ವಾದ ಪಡೆದು ಹೊಸ ದಾರವನ್ನು ಧರಿಸುವ ಸಂಪ್ರದಾಯವಿದೆ. ಇನ್ನು ಕೆಲವರು ಮೊದಲು ದೇವಸ್ಥಾನಕ್ಕೆ ತೆರಳಿ ಅರ್ಚನೆ ಮಾಡಿಸಿ, ದೇವರ ಸನ್ನಿಧಿಯಲ್ಲಿ ತಾಳಿ ಮತ್ತು ಹೊಸ ದಾರಕ್ಕೆ ಆಶೀರ್ವಾದ ಪಡೆದುಕೊಂಡು ಮನೆಗೆ ಬಂದು ಧರಿಸುತ್ತಾರೆ. ಇಂತಹ ಆಚರಣೆಗಳನ್ನು ದಾಂಪತ್ಯ ಜೀವನದಲ್ಲಿ ಶುಭ, ಸಂತೋಷ ಮತ್ತು ಸಮೃದ್ಧಿ ನೆಲೆಸಲಿ ಎಂಬ ಭಕ್ತಿಭಾವದಿಂದ ಮಾಡಲಾಗುತ್ತದೆ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ಕುಟುಂಬದ ಸಂಪ್ರದಾಯಕ್ಕೆ ಅನುಗುಣವಾಗಿ ಆಚರಣೆ:

ತಾಳಿ ದಾರವನ್ನು ಬದಲಾಯಿಸುವ ದಿನ, ಸಮಯ ಮತ್ತು ಪೂಜಾ ವಿಧಾನ ಎಲ್ಲ ಕುಟುಂಬಗಳಲ್ಲೂ ಒಂದೇ ರೀತಿ ಇರುವುದಿಲ್ಲ. ಪ್ರದೇಶ, ಕುಟುಂಬದ ಆಚರಣೆ ಮತ್ತು ವೈಯಕ್ತಿಕ ನಂಬಿಕೆಗಳಿಗೆ ಅನುಗುಣವಾಗಿ ಪದ್ಧತಿಗಳಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಹೀಗಾಗಿ ಒಂದು ನಿರ್ದಿಷ್ಟ ದಿನವೇ ಎಲ್ಲರೂ ತಾಳಿ ದಾರ ಬದಲಾಯಿಸಬೇಕು ಎಂಬ ಸಾರ್ವತ್ರಿಕ ಧಾರ್ಮಿಕ ನಿಯಮವಿದೆ ಎಂದು ಹೇಳಲು ಸಾಧ್ಯವಿಲ್ಲ. ತಮ್ಮ ಕುಟುಂಬದ ಸಂಪ್ರದಾಯವನ್ನು ಅನುಸರಿಸುವುದು ಅಥವಾ ಅಗತ್ಯವಿದ್ದರೆ ಅರ್ಚಕರು/ಜ್ಯೋತಿಷಿಗಳ ಸಲಹೆ ಪಡೆಯುವುದು ಸೂಕ್ತ.

ದಾರ ಹಾಳಾಗುವವರೆಗೆ ಕಾಯಬೇಡಿ:

ತಾಳಿ ದಾರವು ದುರ್ಬಲವಾಗಿದ್ದರೆ ಅಥವಾ ಸವೆದಿದ್ದರೆ ಅದನ್ನು ಬದಲಾಯಿಸುವುದನ್ನು ಮುಂದೂಡಬಾರದು. ಶುಭ ದಿನ, ಹಿರಿಯರ ಆಶೀರ್ವಾದ ಮತ್ತು ಭಕ್ತಿಯೊಂದಿಗೆ ಹೊಸ ದಾರವನ್ನು ಧರಿಸುವುದು ಹಲವು ಕುಟುಂಬಗಳಲ್ಲಿ ಇಂದಿಗೂ ಮುಂದುವರಿದಿರುವ ಸಂಪ್ರದಾಯವಾಗಿದೆ. ಒಟ್ಟಿನಲ್ಲಿ, ತಾಳಿ ದಾರವನ್ನು ಬದಲಾಯಿಸುವ ಆಚರಣೆಯ ಹಿಂದಿರುವ ಪ್ರಮುಖ ಅಂಶ ವೈವಾಹಿಕ ಬಂಧದ ಬಗ್ಗೆ ಗೌರವ, ಭಕ್ತಿ ಮತ್ತು ಕಾಳಜಿ. ದಿನಾಂಕ ಅಥವಾ ವಿಧಿವಿಧಾನಗಳಿಗಿಂತ ಕುಟುಂಬದ ನಂಬಿಕೆ ಮತ್ತು ಸಂಪ್ರದಾಯಕ್ಕೆ ಅನುಗುಣವಾಗಿ ಆಚರಿಸುವುದೇ ಮುಖ್ಯ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಟಾಕ್ಸಿಕ್’ ಟ್ರೇಲರ್ ಲಾಂಚ್​ಗೆ ಬಂದ ಲೇಡೀಸ್ ಆ್ಯಂಡ್ ಲೇಡೀಸ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಭಾರತೀಯ ಚಿತ್ರರಂಗವೇ ಕಾತುರದಿಂದ ಕಾಯುತ್ತಿರುವ ‘ಟಾಕ್ಸಿಕ್’ ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕಾಗಿ ಸಿದ್ಧತೆಗಳು ಭರದಿಂದ ಸಾಗಿವೆ. ಈ ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಾಲಿವುಡ್‌ನ ಗ್ಲಾಮರಸ್ ನಟಿ ಕಿಯಾರಾ ಅಡ್ವಾಣಿ ಹಾಗೂ ‘ಟಾಕ್ಸಿಕ್’ ಸಿನಿಮಾದ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರು ಜೊತೆಯಾಗಿ ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ದಾರೆ.

ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕಿಯಾರಾ ಅಡ್ವಾಣಿ ಡೆನಿಮ್ ಡ್ರೆಸ್‌ನಲ್ಲಿ ಅತ್ಯಂತ ಸ್ಟೈಲಿಶ್ ಆಗಿ ಕಂಗೊಳಿಸಿದರೆ, ನಿರ್ದೇಶಕಿ ಗೀತು ಮೋಹನ್‌ದಾಸ್ ಕಪ್ಪು ಬಣ್ಣದ ಔಟ್‌ಫಿಟ್‌ನಲ್ಲಿ ಕ್ಲಾಸಿ ಲುಕ್ ನೀಡಿದರು. ಇಬ್ಬರೂ ಒಟ್ಟಿಗೆ ಹೆಜ್ಜೆ ಹಾಕುತ್ತಾ, ನಗುಮುಖದಿಂದ ಕ್ಯಾಮೆರಾಗಳಿಗೆ ಪೋಸ್ ನೀಡಿದರು. ತದನಂತರ ಒಂದೇ ಕಾರಿನಲ್ಲಿ ಹೋಟೆಲ್​ಗೆ ಪಯಣ ಬೆಳೆಸಿದರು.

‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಜೊತೆಗೆ ಕಿಯಾರಾ ಅಡ್ವಾಣಿ ಪ್ರಮುಖ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಗೀತು ಮೋಹನ್‌ದಾಸ್ ಅವರ ನಿರ್ದೇಶನದ ವೈಖರಿ ಹಾಗೂ ಮಾಸ್ ಅವತಾರದಲ್ಲಿ ಯಶ್ ಅವರ ಲುಕ್ ಹೇಗಿರಲಿದೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಇಡೀ ಚಿತ್ರತಂಡ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

6 ರನ್​ಗಳ ರೋಚಕ ಹೋರಾಟ: ರಣರೋಚಕ ಪಂದ್ಯದೊಂದಿಗೆ CPL​ ಶುರು – Kannada News | CPL 2026: Jamaica Kingsmen vs Antigua And Barbuda Falcons Highlights

ಕೆರಿಬಿಯನ್ ಪ್ರೀಮಿಯರ್ ಲೀಗ್​ನ 14ನೇ ಆವೃತ್ತಿಗೆ ಚಾಲನೆ ದೊರೆತಿದೆ. ಅದು ಸಹ ರಣರೋಚಕ ಪಂದ್ಯದೊಂದಿಗೆ ಎಂಬುದು ವಿಶೇಷ. ಕಿಂಗ್ಸ್​ಟೌನ್​ನ ಅರ್ನೋಸ್ ವೇಲ್ ಮೈದಾನದಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಜಮೈಕಾ ಕಿಂಗ್ಸ್​ಮೆನ್ ಹಾಗೂ ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ತಂಡದ ನಾಯಕ ಫ್ಯಾಬಿಯನ್ ಅಲೆನ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಜಮೈಕಾ ಕಿಂಗ್ಸ್​ಮೆನ್ ತಂಡದ ಪರ ಆರಂಭಿಕ ದಾಂಡಿಗ ರೀಝ ಹೆಂಡ್ರಿಕ್ಸ್ 25 ಎಸೆತಗಳಲ್ಲಿ 42 ರನ್ ಚಚ್ಚಿದರು. ಇನ್ನು ನಾಯಕ ರೋವ್​ಮನ್ ಪೊವೆಲ್ 47 ರನ್​ಗಳ ಕೊಡುಗೆ ನೀಡಿದರು. ಈ ಮೂಲಕ ಜಮೈಕಾ ಕಿಂಗ್ಸ್ ಪಡೆ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 167 ರನ್ ಕಲೆಹಾಕಿತು.

168 ರನ್​ಗಳ ಗುರಿ ಬೆನ್ನತ್ತಿದ ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ಪರ ಟಿಮ್ ರಾಬಿನ್ಸನ್ 40 ರನ್ ಬಾರಿಸಿದರೆ, ತಜಿಂದರ್ ದಿಲ್ಲೋನ್ 37 ಎಸೆತಗಳಲ್ಲಿ 62 ರನ್ ಚಚ್ಚಿದರು. ಈ ಮೂಲಕ ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ತಂಡವು 19 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 162 ರನ್ ಕಲೆಹಾಕಿತು.

6 ರನ್​ಗಳ ರೋಚಕ ಹೋರಾಟ:

ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ತಂಡಕ್ಕೆ ಕೊನೆಯ ಓವರ್​ನಲ್ಲಿ ಗೆಲ್ಲಲು ಬೇಕಿದದ್ದು ಕೇವಲ 6 ರನ್​ಗಳು ಮಾತ್ರ. ಆದರೆ ಅಂತಿಮ ಓವರ್ ಎಸೆದ ಹುನೈನ್ ಶಾ ಪಂದ್ಯವನ್ನು ರೋಚಕದತ್ತ ಕೊಂಡೊಯ್ದರು. ಮಾರಕ ದಾಳಿ ಸಂಘಟಿಸಿದ ಹುನೈನ್ ಮೊದಲೆರಡು ಎಸೆತಗಳಲ್ಲಿ ನೀಡಿದ್ದು ಕೇವಲ 3 ರನ್​ಗಳು ಮಾತ್ರ.

ಮೂರನೇ ಎಸೆತದಲ್ಲಿ ಜಹ್ಮರ್ ಹ್ಯಾಮಿಲ್ಟನ್ (3) ವಿಕೆಟ್ ಪಡೆದರು. ನಾಲ್ಕನೇ ಎಸೆತದಲ್ಲಿ ಉಸಾಮ ಮಿರ್ (0) ವಿಕೆಟ್ ಕಬಳಿಸಿದರು. ಪರಿಣಾಮ ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ತಂಡಕ್ಕೆ ಕೊನೆಯ 2 ಎಸೆತಗಳಲ್ಲಿ 3 ರನ್​ಗಳು ಬೇಕಿದ್ದವು.

ಐದನೇ ಎಸೆತದಲ್ಲಿ ಹುನೈನ್ ಶಾ ಕೇವಲ 1 ರನ್ ಮಾತ್ರ ಬಿಟ್ಟುಕೊಟ್ಟರು. ಆದರೆ ಅಂತಿಮ ಓವರ್​ನ ಕೊನೆಯ ಎಸೆತದಲ್ಲಿ ಶಮರ್ ಸ್ಪ್ರಿಂಗರ್ 2 ರನ್ ಕಲೆಹಾಕುವ ಮೂಲಕ ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ರೋಚಕ ಗೆಲುವು ದಾಖಲಿಸಿತು. ಇತ್ತ ಜಮೈಕಾ ಕಿಂಗ್ಸ್​ಮೆನ್ ತಂಡವು ವಿರೋಚಿತ ಹೋರಾಟದೊಂದಿಗೆ ಕೇವಲ 2 ವಿಕೆಟ್​ಗಳಿಂದ ಸೋಲೊಪ್ಪಿಕೊಂಡಿತು.

ಜಮೈಕಾ ಕಿಂಗ್ಸ್​ಮೆನ್ ಪ್ಲೇಯಿಂಗ್ 11 : ಶಯಾನ್ ಜಹಾಂಗೀರ್ (ವಿಕೆಟ್ ಕೀಪರ್) , ರೀಝ ಹೆಂಡ್ರಿಕ್ಸ್ ,
ಶಕ್ಕೆರೆ ಪ್ಯಾರಿಸ್ , ಕೀಸಿ ಕಾರ್ಟಿ , ರೋವ್‌ಮನ್ ಪೊವೆಲ್ (ನಾಯಕ) , ಆ್ಯಂಡ್ರೆ ರಸೆಲ್ , ಹಸನ್ ಖಾನ್ , ಕೀಮೊ ಪಾಲ್ , ಹುನೈನ್ ಶಾ , ವಿಟೆಲ್ ಲಾವೆಸ್ , ಜೀವರ್ ರಾಯಲ್.

ಇದನ್ನೂ ಓದಿ: ಟೀಮ್ ಇಂಡಿಯಾಗೆ ಹೊಸ ಚಿಂತೆ: NCA ಸೇರಿದ 13 ಆಟಗಾರರು!

ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ಪ್ಲೇಯಿಂಗ್ 11: ಎವಿನ್ ಲೆವಿಸ್ , ರಹಕೀಮ್ ಕಾರ್ನ್‌ವಾಲ್ ,
ಟಿಮ್ ರಾಬಿನ್ಸನ್ , ಜಹ್ಮರ್ ಹ್ಯಾಮಿಲ್ಟನ್ (ವಿಕೆಟ್ ಕೀಪರ್ ), ತಜಿಂದರ್ ಧಿಲ್ಲೋನ್ , ಕರೀಮಾ ಗೋರ್ , ಫ್ಯಾಬಿಯನ್ ಅಲೆನ್ (ನಾಯಕ) , ಶಮರ್ ಸ್ಪ್ರಿಂಗರ್ , ಉಸಾಮಾ ಮೀರ್ , ಅಲ್ಜಾರಿ ಜೋಸೆಫ್ , ಜೇಡನ್ ಸೀಲ್ಸ್.

Source link

ತುಮಕೂರು ಪಡಿತರದಾರರಿಗೆ ಸರ್ಕಾರ ಶಾಕ್: 14 ಸಾವಿರ ಬಿಪಿಎಲ್ ಕಾರ್ಡ್ ರದ್ದು – Kannada News | Karnataka Food Department Revokes 14,000 BPL Cards in Tumkur District

ತುಮಕೂರು, ಆ.8: ಜಿಲ್ಲೆಯಲ್ಲಿ ಪಡಿತರ ಚೀಟಿದಾರರಿಗೆ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಯ ಭಾಗವಾಗಿ, ಜಿಲ್ಲೆಯಲ್ಲಿ ಸುಮಾರು 14 ಸಾವಿರ ಬಿಪಿಎಲ್ ಕಾರ್ಡ್‌ಗಳನ್ನು ಆಹಾರ ಇಲಾಖೆ ರದ್ದುಪಡಿಸಿದೆ. ರಾಜ್ಯ ಸರ್ಕಾರದ ಬದ್ಧತೆಗಳ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ತುಮಕೂರು ಜಿಲ್ಲೆಯು ಒಟ್ಟಾರೆ 6 ಲಕ್ಷಕ್ಕೂ ಹೆಚ್ಚು ಪಡಿತರ ಚೀಟಿದಾರರನ್ನು ಹೊಂದಿದೆ. ಈ ಪೈಕಿ 14 ಸಾವಿರ ಬಿಪಿಎಲ್ ಕಾರ್ಡ್‌ದಾರರು ಅನರ್ಹರು ಎಂದು ಗುರುತಿಸಲಾಗಿದೆ. ಆಹಾರ ಇಲಾಖೆಯು ನಡೆಸಿದ ಪರಿಶೀಲನೆಯಲ್ಲಿ, ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವವರು ಮತ್ತು ಖಾಸಗಿ ವಾಹನಗಳಾದ ಕಾರುಗಳನ್ನು ಹೊಂದಿರುವವರೂ ಸಹ ಬಿಪಿಎಲ್ ಕಾರ್ಡ್‌ಗಳನ್ನು ಪಡೆದಿರುವುದು ಬೆಳಕಿಗೆ ಬಂದಿದೆ. ಈ ರೀತಿಯ ನಕಲಿ ಅಥವಾ ಅನರ್ಹ ಕಾರ್ಡುದಾರರನ್ನು ಪತ್ತೆ ಹಚ್ಚಿ, ಅವರ ಕಾರ್ಡ್‌ಗಳನ್ನು ರದ್ದುಪಡಿಸುವ ಮೂಲಕ ಯೋಜನೆಯ ಸೌಲಭ್ಯಗಳು ನಿಜವಾದ ಫಲಾನುಭವಿಗಳಿಗೆ ತಲುಪುವಂತೆ ಮಾಡಲು ಸರ್ಕಾರ ಮುಂದಾಗಿದೆ. ಈ ಕ್ರಮವು ಪಡಿತರ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ಮತ್ತು ದುರುಪಯೋಗವನ್ನು ತಡೆಯುವ ಸರ್ಕಾರದ ಪ್ರಯತ್ನದ ಭಾಗವಾಗಿದೆ. ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಿ, ಅವುಗಳನ್ನು ಅರ್ಹರಿಗೆ ವಿತರಿಸುವ ಅಥವಾ ಎಪಿಎಲ್ ಕಾರ್ಡ್‌ಗಳಾಗಿ ಪರಿವರ್ತಿಸುವ ಪ್ರಕ್ರಿಯೆಯನ್ನು ಕೈಗೊಳ್ಳಲಾಗುತ್ತಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version