Varalakshmi Vrat 2026: ವರಲಕ್ಷ್ಮಿ ವ್ರತ ಆಗಸ್ಟ್​​ 21 ಅಥವಾ 28? ನಿಖರ ದಿನಾಂಕವನ್ನು ಇಲ್ಲಿ ತಿಳಿದುಕೊಳ್ಳಿ – Kannada News | Varalakshmi Vrat 2026: August 21 or 28? Know the Right Date as per Tradition

ಶ್ರಾವಣ ಮಾಸವು ಹಿಂದೂ ಧಾರ್ಮಿಕ ಪರಂಪರೆಯಲ್ಲಿ ಅತ್ಯಂತ ಪವಿತ್ರವಾದ ಅವಧಿ. ಈ ತಿಂಗಳಿನ ಪ್ರತಿ ಶುಕ್ರವಾರವೂ ಮಹಾಲಕ್ಷ್ಮಿ ದೇವಿಯ ಆರಾಧನೆಗೆ ವಿಶೇಷ ಮಹತ್ವ ಹೊಂದಿದೆ. ಅದರಲ್ಲೂ ವರಲಕ್ಷ್ಮಿ ವ್ರತವನ್ನು ಮಹಿಳೆಯರು, ವಿಶೇಷವಾಗಿ ಸುಮಂಗಲಿ ಮಹಿಳೆಯರು, ಕುಟುಂಬದ ಸಂತೋಷ, ಆರೋಗ್ಯ, ಸಮೃದ್ಧಿ ಮತ್ತು ಮಕ್ಕಳ ಒಳಿತಿಗಾಗಿ ಭಕ್ತಿಯಿಂದ ಆಚರಿಸುತ್ತಾರೆ. ಆದರೆ 2026ರಲ್ಲಿ ಶ್ರಾವಣ ಮಾಸದಲ್ಲಿ ಐದು ಶುಕ್ರವಾರಗಳು ಬರುವುದರಿಂದ ವರಲಕ್ಷ್ಮಿ ವ್ರತವನ್ನು ಯಾವ ದಿನ ಆಚರಿಸಬೇಕು ಎಂಬ ಗೊಂದಲ ಭಕ್ತರಲ್ಲಿ ಮೂಡಿದೆ. ಆಗಸ್ಟ್ 21ರಂದು ಆಚರಿಸಬೇಕೇ ಅಥವಾ ಆಗಸ್ಟ್ 28ರಂದು ಆಚರಿಸಬೇಕೇ ಎಂಬ ಪ್ರಶ್ನೆಗೆ ವಿವಿಧ ಪಂಚಾಂಗ ಮತ್ತು ಸಂಪ್ರದಾಯಗಳಲ್ಲಿ ವಿಭಿನ್ನ ಅಭಿಪ್ರಾಯಗಳು ಕಂಡುಬರುತ್ತವೆ.

ವರಲಕ್ಷ್ಮಿ ವ್ರತ ಏಕೆ ವಿಶೇಷ?

ಲಕ್ಷ್ಮಿ ದೇವಿಯನ್ನು ‘ವರಲಕ್ಷ್ಮಿ’ ರೂಪದಲ್ಲಿ ಆರಾಧಿಸುವ ಈ ವ್ರತಕ್ಕೆ ಸನಾತನ ಧಾರ್ಮಿಕ ಪರಂಪರೆಯಲ್ಲಿ ವಿಶೇಷ ಸ್ಥಾನವಿದೆ. ಈ ದಿನ ಮಹಿಳೆಯರು ಕಲಶದಲ್ಲಿ ಲಕ್ಷ್ಮಿ ದೇವಿಯನ್ನು ಪ್ರತಿಷ್ಠಾಪಿಸಿ ಶೋಡಶೋಪಚಾರ ಪೂಜೆ, ಅಷ್ಟೋತ್ತರ ಶತನಾಮಾರ್ಚನೆ, ತೋರ ಪೂಜೆ, ತಾಂಬೂಲ ಅರ್ಪಣೆ ಸೇರಿದಂತೆ ವಿವಿಧ ಆಚರಣೆಗಳನ್ನು ನೆರವೇರಿಸುತ್ತಾರೆ. ಕೆಲವು ಸಂಪ್ರದಾಯಗಳಲ್ಲಿ ಮುತ್ತೈದೆಯರಿಗೆ ವಾಯನ ನೀಡುವ ಪದ್ಧತಿಯೂ ಇದೆ. ಭಕ್ತಿಯಿಂದ ವರಲಕ್ಷ್ಮಿ ವ್ರತ ಆಚರಿಸುವುದರಿಂದ ಕುಟುಂಬಕ್ಕೆ ಐಶ್ವರ್ಯ, ಆರೋಗ್ಯ, ಸಂತೋಷ, ಶಾಂತಿ ಮತ್ತು ಸಮೃದ್ಧಿ ದೊರೆಯುತ್ತದೆ ಎಂಬ ಧಾರ್ಮಿಕ ನಂಬಿಕೆಯಿದೆ.

ವರಲಕ್ಷ್ಮಿ ವ್ರತದ ದಿನಾಂಕದ ಬಗ್ಗೆ ಗೊಂದಲ ಏಕೆ?

ಸಾಮಾನ್ಯವಾಗಿ ಶ್ರಾವಣ ಮಾಸದ ಹುಣ್ಣಿಮೆಗೆ ಮುನ್ನ ಬರುವ ಶುಕ್ರವಾರದಂದು ವರಲಕ್ಷ್ಮಿ ವ್ರತವನ್ನು ಆಚರಿಸಲಾಗುತ್ತದೆ. ಹಲವು ಧಾರ್ಮಿಕ ಪರಂಪರೆಗಳಲ್ಲಿಯೂ ಇದೇ ಪದ್ಧತಿ ರೂಢಿಯಲ್ಲಿದೆ. ಆದರೆ ಈ ವರ್ಷ ಶ್ರಾವಣ ಮಾಸದಲ್ಲಿ ಐದು ಶುಕ್ರವಾರಗಳು ಬರುತ್ತಿದ್ದು, ಹುಣ್ಣಿಮೆಯ ತಿಥಿಯೂ ಶುಕ್ರವಾರದೊಂದಿಗೆ ಹೊಂದಿಕೊಳ್ಳುತ್ತಿರುವುದರಿಂದ ವ್ರತದ ದಿನಾಂಕದ ಬಗ್ಗೆ ಗೊಂದಲ ಉಂಟಾಗಿದೆ. ಹೀಗಾಗಿ ಕೆಲವರು ಎರಡನೇ ಶುಕ್ರವಾರವಾದ ಆಗಸ್ಟ್ 21ರಂದು ವ್ರತ ಆಚರಿಸಬೇಕೆಂದು ಹೇಳಿದರೆ, ಇನ್ನು ಕೆಲವರು ಹುಣ್ಣಿಮೆಯ ದಿನವಾದ ಆಗಸ್ಟ್ 28ರಂದು ಆಚರಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಧರ್ಮಶಾಸ್ತ್ರದ ಪ್ರಕಾರ ಆಗಸ್ಟ್ 28ರಂದು ವ್ರತ ಮಾಡಬಹುದೇ?

ಧರ್ಮಶಾಸ್ತ್ರಗಳಲ್ಲಿ ಉಲ್ಲೇಖವಾಗಿರುವ ಕೆಲವು ತಿಥಿ-ನಿರ್ಣಯ ನಿಯಮಗಳ ಆಧಾರದ ಮೇಲೆ, ಹುಣ್ಣಿಮೆಯ ತಿಥಿಯು ಶುಕ್ರವಾರದೊಂದಿಗೆ ಹೊಂದಿಕೊಂಡಿರುವ ಸಂದರ್ಭದಲ್ಲಿ ಆ ದಿನವೂ ವರಲಕ್ಷ್ಮಿ ವ್ರತವನ್ನು ಆಚರಿಸಬಹುದೆಂದು ಕೆಲವು ವಿದ್ವಾಂಸರು ಮತ್ತು ಪಂಚಾಂಗಕಾರರು ಅಭಿಪ್ರಾಯಪಟ್ಟಿದ್ದಾರೆ. ಈ ಲೆಕ್ಕಾಚಾರದ ಪ್ರಕಾರ, ಆಗಸ್ಟ್ 28ರ ಬೆಳಗ್ಗೆ ವರಲಕ್ಷ್ಮಿ ವ್ರತ ಆಚರಿಸುವುದು ಧಾರ್ಮಿಕವಾಗಿ ಮಾನ್ಯ ಎಂದು ಕೆಲವು ಪಂಚಾಂಗ ಸಂಪ್ರದಾಯಗಳು ಸೂಚಿಸುತ್ತವೆ. ಆದರೆ ವ್ರತದ ಸಮಯ ಮತ್ತು ದಿನಾಂಕವನ್ನು ನಿರ್ಧರಿಸುವಲ್ಲಿ ಸ್ಥಳೀಯ ಪಂಚಾಂಗ ಹಾಗೂ ಕುಟುಂಬದ ಆಚರಣಾ ಪದ್ಧತಿಯನ್ನು ಪರಿಗಣಿಸುವುದು ಮುಖ್ಯ.

ಶೃಂಗೇರಿ ಸಂಪ್ರದಾಯ ಏನು ಹೇಳುತ್ತದೆ?

ಶೃಂಗೇರಿ ಶ್ರೀ ಶಾರದಾ ಪೀಠದ ಸಂಪ್ರದಾಯದಲ್ಲಿ ವರಲಕ್ಷ್ಮಿ ವ್ರತಕ್ಕೆ ಸಂಬಂಧಿಸಿದ ಪ್ರಮುಖ ಪೂಜಾ ವಿಧಿಗಳನ್ನು ಸಂಜೆ ನೆರವೇರಿಸುವ ಪದ್ಧತಿಗೆ ಮಹತ್ವವಿದೆ. ಈ ಲೆಕ್ಕಾಚಾರದ ಪ್ರಕಾರ, ಆಗಸ್ಟ್ 28ರ ಸಂಜೆ ಹುಣ್ಣಿಮೆ ತಿಥಿ ಲಭ್ಯವಿಲ್ಲದಿರುವುದರಿಂದ, ಸಂಜೆ ಪೂಜಾ ಸಂಪ್ರದಾಯವನ್ನು ಅನುಸರಿಸುವವರು ಆಗಸ್ಟ್ 21ರಂದು ವರಲಕ್ಷ್ಮಿ ವ್ರತ ಆಚರಿಸುವುದು ಸೂಕ್ತ ಎಂದು ಸೂಚಿಸಲಾಗುತ್ತದೆ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ಹೀಗಾಗಿ ಸರಳವಾಗಿ ಹೇಳುವುದಾದರೆ:

  • ಬೆಳಗಿನ ಪೂಜಾ ಪದ್ಧತಿ ಅನುಸರಿಸುವವರು: ಆಗಸ್ಟ್ 28ರಂದು ವರಲಕ್ಷ್ಮಿ ವ್ರತ ಆಚರಿಸಬಹುದು.
  • ಸಂಜೆ ಪೂಜೆಗೆ ಹೆಚ್ಚಿನ ಮಹತ್ವ ನೀಡುವ ಶೃಂಗೇರಿ ಸಂಪ್ರದಾಯ ಅನುಸರಿಸುವವರು: ಆಗಸ್ಟ್ 21ರಂದು ವ್ರತ ಆಚರಿಸುವುದು ಸೂಕ್ತ.

ಭಕ್ತಿಯೇ ಮುಖ್ಯ. ವರಲಕ್ಷ್ಮಿ ವ್ರತವನ್ನು ಯಾವ ದಿನ ಆಚರಿಸಬೇಕು ಎಂಬುದರ ಬಗ್ಗೆ ಗೊಂದಲವಿದ್ದರೂ ಭಕ್ತರು ಆತಂಕಪಡುವ ಅಗತ್ಯವಿಲ್ಲ. ಶ್ರಾವಣ ಮಾಸದ ಶುಕ್ರವಾರಗಳು ಮಹಾಲಕ್ಷ್ಮಿ ಆರಾಧನೆಗೆ ಶುಭವೆಂದು ಪರಿಗಣಿಸಲಾಗುತ್ತದೆ. ತಿಥಿ, ನಕ್ಷತ್ರ ಮತ್ತು ಪೂಜಾ ಸಮಯದ ಲೆಕ್ಕಾಚಾರಗಳು ಪ್ರದೇಶ ಹಾಗೂ ಪಂಚಾಂಗ ಸಂಪ್ರದಾಯಕ್ಕೆ ಅನುಗುಣವಾಗಿ ಬದಲಾಗಬಹುದು. ಆದ್ದರಿಂದ ನಿಮ್ಮ ಕುಟುಂಬದ ಸಂಪ್ರದಾಯ ಅಥವಾ ಸ್ಥಳೀಯ ಪಂಚಾಂಗವನ್ನು ಅನುಸರಿಸುವುದು ಉತ್ತಮ.

ಧಾರ್ಮಿಕ ಪರಂಪರೆಯ ಪ್ರಕಾರ, ಯಾವುದೇ ವ್ರತದಲ್ಲೂ ದಿನಾಂಕಕ್ಕಿಂತ ಭಕ್ತಿ, ಶ್ರದ್ಧೆ, ಶುದ್ಧತೆ ಮತ್ತು ಸಂಕಲ್ಪಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಮಹಾಲಕ್ಷ್ಮಿ ದೇವಿಯನ್ನು ಭಕ್ತಿಯಿಂದ ಆರಾಧಿಸುವುದೇ ವರಲಕ್ಷ್ಮಿ ವ್ರತದ ಪ್ರಮುಖ ಉದ್ದೇಶವಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 12:09 pm, Sat, 8 August 26

Source link

Karnataka Dam Water Level: ಆಲಮಟ್ಟಿ ಮತ್ತು ಬಸವಸಾಗರ ಜಲಾಶಯಗಳಿಗೆ ಭಾರಿ ಪ್ರಮಾಣದ ಒಳಹರಿವು – Kannada News | Karnataka Reservoir Water Level on August 08; Almatti Dam Water Stolen by Influential Locals, KRS and Basavasagara Levels Update

ಬೆಂಗಳೂರು, ಆಗಸ್ಟ್ 08: ವಿಜಯಪುರ ಜಿಲ್ಲೆಯಲ್ಲಿ ಭೀಕರ ಬರಗಾಲ ಆವರಿಸಿದ್ದು, ಜನ-ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ಆಲಮಟ್ಟಿ ಅಣೆಕಟ್ಟು (dam water level) ಸಂಪೂರ್ಣ ಭರ್ತಿಯಾಗುವ ಹಂತಕ್ಕೆ ತಲುಪಿದೆ. ಬರ ಪರಿಹಾರವಾಗಿ ಜಿಲ್ಲೆಯ 165 ಕೆರೆಗಳನ್ನು ತುಂಬಿಸಲು ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ (KBJNL) ಅಧಿಕಾರಿಗಳು ಕಾಲುವೆಗಳ ಮೂಲಕ ನೀರು ಬಿಡುಗಡೆ ಮಾಡಿದ್ದಾರೆ. ಆದರೆ, ಇಂಗಳಗಿ, ಅಂಕಲಗಿ ಸೇರಿದಂತೆ ವಿವಿಧ ಗ್ರಾಮಗಳ ಸಾರ್ವಜನಿಕ ಕೆರೆಗಳಿಗೆ ತಲುಪಬೇಕಿದ್ದ ನೀರು ಪ್ರಭಾವಿಗಳ ಪಾಲಾಗುತ್ತಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಉಪ ಕಾಲುವೆ ಒಡೆದು ಅಕ್ರಮ ನೀರು ಕಳ್ಳತನ!

ದೇವರಹಿಪ್ಪರಗಿ ಭಾಗದಲ್ಲಿ ಮುಳವಾಡ ಏತ ನೀರಾವರಿ ಯೋಜನೆಯ ಉಪ ಕಾಲುವೆಯನ್ನು ಕೆಲವು ದುಷ್ಕರ್ಮಿಗಳು ಕಾನೂನು ಬಾಹಿರವಾಗಿ ಒಡೆದಿದ್ದಾರೆ. ಕೃಷಿ ಮತ್ತು ಸಾರ್ವಜನಿಕ ಕೆರೆಗಳಿಗೆ ಹೋಗಬೇಕಿದ್ದ ಈ ನೀರನ್ನು ಪ್ರಭಾವಿ ವ್ಯಕ್ತಿಗಳು ಹಾಗೂ ಜಲ್ಲಿ ಕಲ್ಲು ಕ್ರಷರ್ ಘಟಕಗಳ ಮಾಲೀಕರು ಅಕ್ರಮವಾಗಿ ಜಪ್ತಿ ಮಾಡುತ್ತಿದ್ದಾರೆ. ಕಾಲುವೆಯ ನೀರನ್ನು ಬೃಹದಾಕಾರದ ಕಲ್ಲಿನ ಕ್ವಾರಿಗಳಿಗೆ (ಗಣಿ ಹೊಂಡ) ಹರಿಸುವ ಮೂಲಕ ಲಕ್ಷಾಂತರ ಲೀಟರ್ ನೀರನ್ನು ಕಳ್ಳತನ ಮಾಡಲಾಗುತ್ತಿದೆ.

ಕಾಲುವೆ ಒಡೆದು ಬಹಿರಂಗವಾಗಿ ನೀರು ಲೂಟಿಯಾಗುತ್ತಿದ್ದರೂ ಕೆಬಿಜೆಎನ್ಎಲ್ ಅಧಿಕಾರಿಗಳು ತಲೆಕೆಡಿಸಿಕೊಳ್ಳದೆ ಮೂಕಪ್ರೇಕ್ಷಕರಾಗಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಪ್ರತಿಭಟನೆ ಹಾಗೂ ಜನರ ಒತ್ತಾಯ ಹೆಚ್ಚಾದ ಬೆನ್ನಲ್ಲೇ, ನೀರು ಕಳ್ಳತನದ ಕುರಿತು ಮೇಲಾಧಿಕಾರಿಗಳಿಗೆ ವರದಿ ನೀಡುವುದಾಗಿ ಸ್ಥಳೀಯ ಅಧಿಕಾರಿಗಳು ಹಾರಿಕೆ ಉತ್ತರ ನೀಡಿದ್ದಾರೆ. ಈ ಅಕ್ರಮದ ವಿರುದ್ಧ ಜಿಲ್ಲಾಡಳಿತ ತಕ್ಷಣ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ

1. ಆಲಮಟ್ಟಿ ಜಲಾಶಯ (ವಿಜಯಪುರ ಜಿಲ್ಲೆ, ನಿಡಗುಂದಿ ತಾಲೂಕು)

  • ಗರಿಷ್ಠ ಮಟ್ಟ: 519.60 ಮೀಟರ್
  • ಇಂದಿನ ಮಟ್ಟ: 518.84 ಮೀಟರ್
  • ಒಳಹರಿವು: 1,15,874 ಕ್ಯೂಸೆಕ್
  • ಹೊರಹರಿವು: 70,655 ಕ್ಯೂಸೆಕ್

2. ಬಸವಸಾಗರ ಜಲಾಶಯ (ಯಾದಗಿರಿ)

  • ಗರಿಷ್ಠ ಮಟ್ಟ: 492.25 ಮೀಟರ್
  • ಇಂದಿನ ಮಟ್ಟ: 491.70 ಮೀಟರ್
  • ಒಳಹರಿವು: 76,000 ಕ್ಯೂಸೆಕ್
  • ಹೊರಹರಿವು: 50,000 ಕ್ಯೂಸೆಕ್

3. ಕೆ.ಆರ್.ಎಸ್ ಜಲಾಶಯ (ಮಂಡ್ಯ ಜಿಲ್ಲೆ)

  • ಗರಿಷ್ಠ ಮಟ್ಟ: 124.80 ಅಡಿ
  • ಇಂದಿನ ಮಟ್ಟ: 106.92 ಅಡಿ
  • ಗರಿಷ್ಠ ಸಾಮರ್ಥ್ಯ: 49.452 TMC
  • ಇಂದಿನ ಸಂಗ್ರಹ: 28.736 TMC
  • ಒಳಹರಿವು: 8,064 ಕ್ಯೂಸೆಕ್
  • ಹೊರಹರಿವು: 2,049 ಕ್ಯೂಸೆಕ್

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು ಸ್ಟಾರ್ ಹೋಟೆಲ್‌ಗಳ ಬಂಡವಾಳ ಬಯಲು: 26 ಹೋಟೆಲ್‌ಗಳಲ್ಲಿ ಆಹಾರ ಸುರಕ್ಷತಾ ನಿಯಮ ಉಲ್ಲಂಘನೆ – Kannada News | Bengaluru Food Safety Raid: Violations Found in 26 Star Hotels, Expired Food and Meat Seized

ಹೋಟೆಲ್​ಗಳ ಮೇಲೆ ದಾಳಿ ಸಂದರ್ಭದ ಚಿತ್ರImage Credit source: tv9

ಬೆಂಗಳೂರು, ಆಗಸ್ಟ್ 8: ಬೆಂಗಳೂರಿನ (Bengaluru) ಪಂಚತಾರಾ ಹಾಗೂ ಪ್ರಮುಖ ಸ್ಟಾರ್ ಹೋಟೆಲ್‌ಗಳ (Five Star Hotels) ಮೇಲೆ ಆಹಾರ ಸುರಕ್ಷತಾ ಇಲಾಖೆ ನಡೆಸಿದ ತಪಾಸಣೆಯ ಮುಂದುವರಿದ ಭಾಗವಾಗಿ, 26 ಪ್ರಮುಖ ಹೋಟೆಲ್‌ಗಳಲ್ಲಿ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಆಗಿರುವುದು ಪತ್ತೆಯಾಗಿದೆ. ಅವಧಿ ಮೀರಿದ ಆಹಾರ ಪದಾರ್ಥಗಳು, ಕಳಪೆ ಗುಣಮಟ್ಟದ ಮಾಂಸ, ತರಕಾರಿ, ಮೀನು ಹಾಗೂ ಅಸ್ವಚ್ಛ ಅಡುಗೆಮನೆಗಳು ತಪಾಸಣೆ ವೇಳೆ ಪತ್ತೆಯಾಗಿವೆ. ಹೋಟೆಲ್‌ಗಳ ಅಡುಗೆಮನೆ ಹಾಗೂ ಆಹಾರ ಸಂಗ್ರಹಣಾ ಸ್ಥಳಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ನಿಯಮಗಳಿಗೆ ಅನುಗುಣವಾಗಿರದ ಆಹಾರ ಪದಾರ್ಥಗಳು ಪತ್ತೆಯಾಗಿವೆ. ಮಾಂಸಾಹಾರ ಪದಾರ್ಥಗಳನ್ನು ಸಮರ್ಪಕವಾಗಿ ಪ್ರತ್ಯೇಕವಾಗಿ ಸಂಗ್ರಹಿಸದಿರುವುದು, ತಪ್ಪು ಲೇಬಲ್ ಹೊಂದಿರುವ ಆಹಾರ ಉತ್ಪನ್ನಗಳು ಹಾಗೂ ಶಿಲೀಂಧ್ರ ಬಾಧಿತ ತರಕಾರಿ ಮತ್ತು ಇತರ ಆಹಾರ ಪದಾರ್ಥಗಳೂ ಪತ್ತೆಯಾಗಿವೆ.

ಲೇಬಲಿಂಗ್ ಇಲ್ಲದ ಆಹಾರೋತ್ಪನ್ನಗಳು ಪತ್ತೆ

ಇದರ ಜೊತೆಗೆ ಪ್ಯಾಕೇಜ್ಡ್ ಆಹಾರ ಉತ್ಪನ್ನಗಳಲ್ಲಿ FSSAI ನಿಯಮಾನುಸಾರ ಕಡ್ಡಾಯವಾಗಿರುವ ಲೇಬಲಿಂಗ್ ಇಲ್ಲದಿರುವುದು ಕೂಡ ಅಧಿಕಾರಿಗಳ ಗಮನಕ್ಕೆ ಬಂದಿದೆ. ತಪಾಸಣೆಯ ವೇಳೆ ವಶಪಡಿಸಿಕೊಂಡ ಆಹಾರ ಪದಾರ್ಥಗಳ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಯಾವ ಹೋಟೆಲ್‌ನಲ್ಲಿ ಏನೆಲ್ಲ ವಶ?

  • ದಿ ಲಲಿತ್ ಅಶೋಕ್: 76 ಕೆ.ಜಿ. ಮಾಂಸ, 200 ಕೆ.ಜಿ. ತರಕಾರಿ ಹಾಗೂ 32 ಲೀಟರ್ ಅವಧಿ ಮೀರಿದ ಹಾಲು ವಶಪಡಿಸಿಕೊಳ್ಳಲಾಗಿದೆ.
  • ಶಾಂಗ್ರಿಲಾ: 15 ಕೆ.ಜಿ. ಮಾಂಸ ಪತ್ತೆಯಾಗಿದ್ದು, ವಶಕ್ಕೆ ಪಡೆಯಲಾಗಿದೆ.
  • ಫೋರ್ ಸೀಸನ್ಸ್ ಹೋಟೆಲ್: 19 ಕೆ.ಜಿ. ಮಾಂಸ ವಶಪಡಿಸಿಕೊಳ್ಳಲಾಗಿದೆ.
  • ತಾಜ್ ವಿವಂತಾ ಬೆಂಗಳೂರು ವೈಟ್​ಫೀಲ್ಡ್: 3 ಕೆ.ಜಿ. ಅವಧಿ ಮೀರಿದ ಬೇಕರಿ ಉತ್ಪನ್ನಗಳು ಪತ್ತೆಯಾಗಿವೆ.
  • ತಾಜ್ ಯಶವಂತಪುರ್: 72 ಕೆ.ಜಿ. ಮಾಂಸ ಹಾಗೂ ಸಾಲ್ಮನ್ ಮೀನು ವಶಪಡಿಸಿಕೊಳ್ಳಲಾಗಿದೆ.
  • ಹೋಟೆಲ್ ಅತ್ರಿಯಾ: ಒಟ್ಟು 105 ಕೆ.ಜಿ. ಅವಧಿ ಮೀರಿದ ಆಹಾರ ಪದಾರ್ಥಗಳು ಪತ್ತೆಯಾಗಿವೆ. ಇದರಲ್ಲಿ 50 ಕೆ.ಜಿ. ಕೋಳಿ ಮಾಂಸ, 25 ಕೆ.ಜಿ. ಮಾಂಸ, 23 ಕೆ.ಜಿ. ಮೀನು ಹಾಗೂ 7 ಕೆ.ಜಿ. ತರಕಾರಿ ಸೇರಿದೆ.

ಪತ್ತೆಯಾದ ಆಹಾರ ಪದಾರ್ಥಗಳ ಮಾದರಿಗಳನ್ನು ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ನಿಯಮ ಉಲ್ಲಂಘಿಸಿರುವ ಹೋಟೆಲ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆಹಾರ ಸುರಕ್ಷತಾ ಇಲಾಖೆ ಮುಂದಾಗಿದೆ.

ಮುಂದುವರಿದ ತನಿಖೆ

ಬೆಂಗಳೂರಿನ ಸ್ಟಾರ್ ಹೋಟೆಲ್‌ಗಳಲ್ಲಿ ಆಹಾರದ ಗುಣಮಟ್ಟ, ಸಂಸ್ಕರಣೆ, ಸಂಗ್ರಹಣೆ ಹಾಗೂ ಸ್ವಚ್ಛತೆಯನ್ನು ಪರಿಶೀಲಿಸಲು ಆಹಾರ ಸುರಕ್ಷತಾ ಅಧಿಕಾರಿಗಳು ಶುಕ್ರವಾರ ವ್ಯಾಪಕ ತಪಾಸಣೆ ನಡೆಸಿದ್ದರು. ಈ ವೇಳೆ ಕೆಲವು ಹೋಟೆಲ್‌ಗಳಲ್ಲಿ ಕೊಳೆತ ಈರುಳ್ಳಿ, ಆಲೂಗಡ್ಡೆ ಸೇರಿದಂತೆ ಕಳಪೆ ಗುಣಮಟ್ಟದ ತರಕಾರಿಗಳು ಪತ್ತೆಯಾಗಿದ್ದವು. ಅವುಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪಂಚತಾರಾ ಹೋಟೆಲ್​ಗಳ ಮೇಲೆ ದಿಢೀರ್ ರೇಡ್: ಕಳಪೆ ಗುಣಮಟ್ಟದ ತರಕಾರಿ, ಕೊಳೆತ ಮಾಂಸ ಪತ್ತೆ!

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟೀಮ್ ಇಂಡಿಯಾಗೆ ಹೊಸ ಚಿಂತೆ: NCA ಸೇರಿದ 13 ಆಟಗಾರರು! – Kannada News | 13 Team India Stars Sidelined at NCA

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಬೆಂಗಳೂರಿನ ಅತ್ಯಾಧುನಿಕ ‘ಸೆಂಟರ್ ಆಫ್ ಎಕ್ಸಲೆನ್ಸ್’ (COE/ NCA) ಸದ್ಯ ಟೀಮ್ ಇಂಡಿಯಾದ ಪ್ರಮುಖ ಆಟಗಾರರ ಪುನರ್ವಸತಿ ಕೇಂದ್ರವಾಗಿ ಮಾರ್ಪಟ್ಟಿದೆ. ರಾಷ್ಟ್ರೀಯ ತಂಡದ ಹಾಲಿ ಆಟಗಾರರು ಹಾಗೂ ಭವಿಷ್ಯದ ಯೋಜನೆಗಳಲ್ಲಿ ಗುರುತಿಸಿಕೊಂಡಿರುವ ಬರೋಬ್ಬರಿ 13 ಭಾರತೀಯ ಕ್ರಿಕೆಟಿಗರು ಗಾಯದ ಸಮಸ್ಯೆಯಿಂದಾಗಿ ಏಕಕಾಲದಲ್ಲಿ ಎನ್‌ಸಿಎನಲ್ಲಿ ಚಿಕಿತ್ಸೆ ಮತ್ತು ಫಿಟ್​ನೆಸ್ ರಿಹ್ಯಾಬ್ ಪ್ರಕ್ರಿಯೆಗೆ ಒಳಗಾಗಿದ್ದಾರೆ.

ಟೀಮ್ ಇಂಡಿಯಾದ ಈ ಸರಣಿ ಗಾಯದ ಸಮಸ್ಯೆಗಳು ಇದೀಗ ನಾಯಕ ಶುಭ್‌ಮನ್ ಗಿಲ್ ಮತ್ತು ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಅವರ ಯೋಜನೆಗಳಿಗೆ ತೀವ್ರ ಹಿನ್ನಡೆ ಉಂಟುಮಾಡಿದ್ದು, ಬಿಸಿಸಿಐ ಫಿಟ್ನೆಸ್ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಲು ಮುಂದಾಗಿದೆ.

ಗಾಯಾಳುಗಳ ಪಟ್ಟಿಯಲ್ಲಿರುವ ಪ್ರಮುಖರು:

ಬಿಸಿಸಿಐ ಎಲ್ಲ 13 ಆಟಗಾರರ ಹೆಸರನ್ನು ಅಧಿಕೃತವಾಗಿ ಪ್ರಕಟಿಸದಿದ್ದರೂ, ಸದ್ಯ ಲಭ್ಯವಿರುವ ಮಾಹಿತಿಯ ಪ್ರಕಾರ ಪ್ರಮುಖ ಆಟಗಾರರು ಎನ್‌ಸಿಎನಲ್ಲಿದ್ದಾರೆ.

  • ಜಸ್​ಪ್ರೀತ್ ಬುಮ್ರಾ: ಮೊಣಕಾಲಿನ ಗಾಯದ ಸಮಸ್ಯೆಯಿಂದಾಗಿ ಶ್ರೀಲಂಕಾ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದ ಬುಮ್ರಾ, ಸದ್ಯ ಫಿಟ್​ನೆಸ್​ ಮರಳಿ ಪಡೆಯಲು ಶ್ರಮಿಸುತ್ತಿದ್ದಾರೆ.
  • ಹಾರ್ದಿಕ್ ಪಾಂಡ್ಯ: ಬೆನ್ನು ನೋವಿನ ಬಳಲುತ್ತಿರುವ ಪಾಂಡ್ಯ ಸದ್ಯ ಈ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ.
  • ಹರ್ಷಿತ್ ರಾಣಾ: ಇತ್ತೀಚಿಗೆ ಚೇತರಿಸಿಕೊಳ್ಳುತ್ತಿದ್ದ ಬೆನ್ನಲ್ಲೇ ಮತ್ತೆ ಹ್ಯಾಮ್‌ಸ್ಟ್ರಿಂಗ್ ಸಮಸ್ಯೆಗೆ ತುತ್ತಾಗಿದ್ದಾರೆ.
  • ಇತರೆ ಆಟಗಾರರು: ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ನಿತೀಶ್ ಕುಮಾರ್ ರೆಡ್ಡಿ, ಆಕಾಶ್ ದೀಪ್ ಮತ್ತು ಸಾಯಿ ಸುದರ್ಶನ್ ಸೇರಿದಂತೆ ಪ್ರಮುಖ ಯುವ ಆಟಗಾರರು ‘ಸೆಂಟರ್ ಆಫ್ ಎಕ್ಸಲೆನ್ಸ್’  ನಲ್ಲಿ ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ.

ಗಿಲ್ ಅಸಮಾಧಾನ: ‘ಬ್ರಾಂಕೋ’ ಟೆಸ್ಟ್ ಜಾರಿ!

ಸತತವಾಗಿ ಆಟಗಾರರು ಗಾಯದ ಸಮಸ್ಯೆಗೆ ತುತ್ತಾಗುತ್ತಿರುವುದಕ್ಕೆ ನಾಯಕ ಶುಭ್‌ಮನ್ ಗಿಲ್ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. “ಆಟಗಾರರು ಸತತವಾಗಿ 2-3 ಪಂದ್ಯಗಳನ್ನು ಆಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಪ್ರತಿ ಸರಣಿಯಲ್ಲೂ ತುರ್ತು ಬದಲಾವಣೆಗಳನ್ನು ಮಾಡಬೇಕಾಗಿ ಬರುತ್ತಿದ್ದು, ತಂಡದ ಸಮತೋಲನ ಕೆಡುತ್ತಿದೆ” ಎಂದು ಗಿಲ್ ಕಳವಳ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಫಿಟ್​ನೆಸ್​ ಮೌಲ್ಯಮಾಪನದಲ್ಲಿ ಪ್ರಮುಖ ಬದಲಾವಣೆಗಳನ್ನು ತರಲು ನಿರ್ಧರಿಸಿದೆ.

  • ಕಡ್ಡಾಯ ಫಿಟ್​ನೆಸ್ ಟೆಸ್ಟ್: ಇನ್ಮುಂದೆ ಆಟಗಾರರ ಇಷ್ಟದಂತೆ ಫಿಟ್​ನೆಸ್ ನಿಯಮಗಳನ್ನು ಸಡಿಲಗೊಳಿಸುವುದಿಲ್ಲ. ಪ್ರತಿಯೊಂದು ಸರಣಿಗೂ ಮುನ್ನ ಕಠಿಣವಾದ ‘ಬ್ರಾಂಕೋ’ ಮತ್ತು 2K ರನ್ನಿಂಗ್ ಟೆಸ್ಟ್‌ಗಳನ್ನು ಪಾಸ್ ಮಾಡುವುದು ಕಡ್ಡಾಯವಾಗಿದೆ.
  • ವೈದ್ಯಕೀಯ ತಂಡದ ತಪಾಸಣೆ: ನಿತಿನ್ ಪಟೇಲ್ ಅವರ ನಿರ್ಗಮನದ ಬಳಿಕ ಎನ್‌ಸಿಎನಲ್ಲಿ ಕಾಯಂ ವೈದ್ಯಕೀಯ ಮುಖ್ಯಸ್ಥರು ಇಲ್ಲದಿರುವುದು ಈ ಸಮಸ್ಯೆಗೆ ಕಾರಣ ಎನ್ನಲಾಗುತ್ತಿದ್ದು, ಸದ್ಯ ಇರುವ ಫಿಸಿಯೋ ಮತ್ತು ವೈದ್ಯರ ಕಾರ್ಯವೈಖರಿಯನ್ನು ಬಿಸಿಸಿಐ ಸೂಕ್ಷ್ಮವಾಗಿ ಗಮನಿಸುತ್ತಿದೆ.

ಇದನ್ನೂ ಓದಿ: ಏಕದಿನ ವಿಶ್ವಕಪ್‌ಗೆ ಆಫ್ಘಾನಿಸ್ತಾನ್ ಎಂಟ್ರಿ: 2 ತಂಡಗಳು ಔಟ್..!

ಒಟ್ಟಾರೆಯಾಗಿ ಹೇಳುವುದಾದರೆ, ಏಕಕಾಲದಲ್ಲಿ 13 ಪ್ರಮುಖ ಆಟಗಾರರು ಗಾಯಗೊಂಡು ಎನ್‌ಸಿಎ ಸೇರಿರುವುದು ಭಾರತೀಯ ಕ್ರಿಕೆಟ್‌ನ ಆತಂಕವನ್ನು ಹೆಚ್ಚಿಸಿದೆ. ನಾಯಕ ಶುಭ್‌ಮನ್ ಗಿಲ್ ಮತ್ತು ಕೋಚ್ ಗೌತಮ್ ಗಂಭೀರ್ ಅವರ ಮುಂದಿನ ಯೋಜನೆಗಳಿಗೆ ಇದು ದೊಡ್ಡ ಹಿನ್ನಡೆಯಾಗಿದ್ದು, ಮುಂಬರುವ ಸರಣಿಗಳಲ್ಲಿ ಬಲಿಷ್ಠ ತಂಡವನ್ನು ಕಣಕ್ಕಿಳಿಸುವುದು ಬಿಸಿಸಿಐಗೆ ಕಠಿಣ ಸವಾಲಾಗಿದೆ.

ಭಾರತೀಯ ಕ್ರಿಕೆಟ್ ತಂಡ ಸದ್ಯ ಮೈದಾನದ ಒಳಗಿಗಿಂತಲೂ ಹೆಚ್ಚಾಗಿ ಮೈದಾನದ ಹೊರಗಿನ ಫಿಟ್​ನೆಸ್​ ಸಮಸ್ಯೆಯಿಂದಾಗಿ ಭಾರಿ ಸುದ್ದಿಯಲ್ಲಿದೆ. ಮುಂಬರುವ ಪ್ರಮುಖ ಸರಣಿಗಳ ಮೇಲೆ ಕಣ್ಣಿಟ್ಟಿರುವ ಬಿಸಿಸಿಐಗೆ ಏಕಕಾಲದಲ್ಲಿ ಭಾರಿ ಆಘಾತ ಎದುರಾಗಿದ್ದು, ಹಾರ್ದಿಕ್ ಪಾಂಡ್ಯ, ಜಸ್​ಪ್ರೀತ್ ಬುಮ್ರಾ ಸೇರಿದಂತೆ ಭವಿಷ್ಯದ ಯೋಜನೆಗಳಲ್ಲಿದ್ದ 13 ಪ್ರಮುಖ ಆಟಗಾರರು ಗಾಯದ ಸಮಸ್ಯೆಯಿಂದಾಗಿ NCA  ಸೇರಿದ್ದಾರೆ.

Source link

ಕುಚಿಪುಡಿ ನರ್ತಕಿ ಸಾಧನಾ ವಿರುದ್ಧ ಎಕ್ಸ್‌ನಲ್ಲಿ ಸುಳ್ಳು ಆರೋಪ: ‘ಅವರು ಅಮೆರಿಕನ್ ಪ್ರಜೆ’ ಎಂದು ಸ್ಪಷ್ಟನೆ ನೀಡಿದ ಹೂಸ್ಟನ್ ಅಟಾರ್ನಿ – Kannada News | Kuchipudi Dancer Sadhana Gollapudi Cleared: US Citizenship vs. Viral Visa Fraud Hoax

ಕುಚಿಪುಡಿ ನರ್ತಕಿ ಸಾಧನಾ ಗೊಲ್ಲಪೂಡಿ

ವಾಷಿಂಗ್ಟನ್ ಆ.8: ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ ಬಯೋಮೆಡಿಕಲ್ ಎಂಜಿನಿಯರ್ ಹಾಗೂ ಕುಚಿಪುಡಿ ನರ್ತಕಿ ಸಾಧನಾ ಗೊಲ್ಲಪೂಡಿ ಎಂಬುವರ ವಿರುದ್ಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (ಟ್ವಿಟರ್) ವೀಸಾ ವಂಚನೆ ನಡೆಸಿದ್ದಾರೆ ಎಂದು ಮಾಡಲಾಗಿದ್ದ ಆರೋಪ ಭಾರೀ ಸದ್ದು ಮಾಡಿತ್ತು. ಆದರೆ, ಇದೀಗ ಅಮೆರಿಕದ ಹೂಸ್ಟನ್ ನಗರದ ಯುಎಸ್ ಅಟಾರ್ನಿ ಏರಾನ್ ರೈಟ್ಜ್ ಸ್ವತಃ ಸ್ಪಷ್ಟನೆ ನೀಡಿದ್ದು, “ಸಾಧನಾ ಅವರು ಅಮೆರಿಕದ ಅಧಿಕೃತ ಪೌರತ್ವ ಹೊಂದಿರುವ ಪ್ರಜೆ (Naturalized US Citizen)” ಎಂದು ತಿಳಿಸುವ ಮೂಲಕ ಸುಳ್ಳು ಆರೋಪಗಳಿಗೆ ತೆರೆ ಎಳೆದಿದ್ದಾರೆ. ಘಟನೆಯಿಂದ ತೀವ್ರ ಮನನೊಂದಿರುವ ಸಾಧನಾ ಗೊಲ್ಲಪೂಡಿ ಅವರು ತಮ್ಮ ಬಗ್ಗೆ ಸುಳ್ಳು ಮಾಹಿತಿ ಹರಡುತ್ತಿರುವ ಖಾತೆಗಳ ವಿರುದ್ಧ ದೂರು ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಘಟನೆಯ ಹಿನ್ನೆಲೆ:

ಜುಲೈ 30 ರಂದು ‘CyberGreen09’ ಎಂಬ ಎಕ್ಸ್ ಖಾತೆಯು ಸಾಧನಾ ಅವರ ಕುಚಿಪುಡಿ ನೃತ್ಯದ ವೀಡಿಯೊವನ್ನು ಹಂಚಿಕೊಂಡು, “2014 ರಿಂದ ಇವರು F-1 ವಿದ್ಯಾರ್ಥಿ ವೀಸಾ ಕಾಯ್ದುಕೊಳ್ಳಲು ಒಂದಾದ ಮೇಲೊಂದರಂತೆ ಕೋರ್ಸ್‌ಗಳಿಗೆ ಸೇರುತ್ತಿದ್ದಾರೆ. ವೀಸಾ ನಿಯಮಗಳನ್ನು ಉಲ್ಲಂಘಿಸಿ ನೃತ್ಯ ಪ್ರದರ್ಶನ ಹಾಗೂ ಟ್ಯೂಷನ್ ಮೂಲಕ ಹಣ ಗಳಿಸುತ್ತಿದ್ದಾರೆ” ಎಂದು ಆರೋಪಿಸಿ #visafraud ಹ್ಯಾಷ್‌ಟ್ಯಾಗ್ ಬಳಸಿತ್ತು. ಈ ಪೋಸ್ಟ್ ಇಂಟರ್ನೆಟ್‌ನಲ್ಲಿ ತೀವ್ರವಾಗಿ ವೈರಲ್ ಆಗಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಆಗಸ್ಟ್ 4 ರಂದು ಈ ಪೋಸ್ಟ್‌ಗೆ ಅಧಿಕೃತವಾಗಿ ಪ್ರತಿಕ್ರಿಯಿಸಿದ ಹೂಸ್ಟನ್ ನಗರದ ಯುಎಸ್ ಅಟಾರ್ನಿ ಏರಾನ್ ರೈಟ್ಜ್ (Aaron Reitz), “ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು. ನಮ್ಮ ಕಚೇರಿ ಈ ಬಗ್ಗೆ ತನಿಖೆ ನಡೆಸಿದೆ. ಸಾಧನಾ ಅವರು ವಿದ್ಯಾರ್ಥಿ ವೀಸಾದಲ್ಲಿ ಇಲ್ಲ, ಅವರು ಅಮೆರಿಕದ ಪೌರತ್ವ ಹೊಂದಿದ ಕಾನೂನುಬದ್ಧ ಪ್ರಜೆಯಾಗಿದ್ದಾರೆ. ವೀಸಾ ವಂಚನೆಯನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ, ಆದರೆ ಈ ಪ್ರಕರಣದಲ್ಲಿ ಯಾವುದೇ ವಂಚನೆ ನಡೆದಿಲ್ಲ” ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಥೈಲ್ಯಾಂಡ್ ಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿಯಿಂದ ಗುಂಡಿನ ದಾಳಿ, ಶಿಕ್ಷಕ ಸಾವು, 15ಕ್ಕೂ ಅಧಿಕ ಮಂದಿಗೆ ಗಾಯ

ಸಾಧನಾ ಗೊಲ್ಲಪೂಡಿ ಅವರ ಪ್ರತಿಕ್ರಿಯೆ:

ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಆಗಸ್ಟ್ 6 ರಂದು ಬರೆದುಕೊಂಡಿರುವ ಸಾಧನಾ, “ಕಳೆದ ಕೆಲವು ದಿನಗಳು ನನಗೂ ಮತ್ತು ನನ್ನ ಕುಟುಂಬಕ್ಕೂ ತೀವ್ರ ಕಷ್ಟಕರವಾಗಿದ್ದವು. ನನ್ನ ಅನುಮತಿಯಿಲ್ಲದೆ ನನ್ನ ನೃತ್ಯದ ವೀಡಿಯೊಗಳನ್ನು ಬಳಸಿ ನನ್ನ ಬಗ್ಗೆ ಸುಳ್ಳು ಮತ್ತು ದಾರಿತಪ್ಪಿಸುವ ಮಾಹಿತಿಯನ್ನು ಹರಡಲಾಗಿದೆ. ಇಂತಹ ಪೋಸ್ಟ್‌ಗಳು ಕಂಡುಬಂದರೆ ತಕ್ಷಣವೇ ‘ಮಿಸ್‌ಇನ್ಫರ್ಮೇಷನ್’ ಎಂದು ರಿಪೋರ್ಟ್ ಮಾಡಿ” ಎಂದು ಮನವಿ ಮಾಡಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ತಂದೆಯ ಅಗಲಿಕೆಯ ನೋವಿನಲ್ಲೂ ನಕ್ಕ ಪ್ರದೀಪ್ ರಾವತ್; ಟ್ರೋಲ್ ಖಂಡಿಸಿದ ಫ್ಯಾನ್ಸ್ – Kannada News | Late Actor Pradeep Rawat Son Vikramaditya Trolled for Laughing in Front of Paparazzi

ಖ್ಯಾತ ಹಿರಿಯ ನಟ ಪ್ರದೀಪ್ ರಾವತ್ (Pradeep Rawat) ಅಗಲಿಕೆಯ ನಂತರ ಇಡೀ ಚಿತ್ರರಂಗ ಹಾಗೂ ಕುಟುಂಬ ನೋವಿನಲ್ಲಿ ಇದೆ. ಈ ಮಧ್ಯೆ ಅವರ ಮನೆಗೆ ಪಾಪರಾಜಿಗಳು ಆಗಮಿಸುತ್ತಿದ್ದಾರೆ. ಈ ವೇಳೆ ಅವರ ಪುತ್ರ ವಿಕ್ರಮಾದಿತ್ಯ ರಾವತ್ ಕಾಣಿಸಿಕೊಂಡ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಕ್ಯಾಮೆರಾಗಳ ಮುಂದೆ ಸಣ್ಣದಾಗಿ ನಕ್ಕಂತೆ ಕಾಣಿಸಿಕೊಂಡ ವಿಕ್ರಮಾದಿತ್ಯ ಅವರ ನಡೆಗೆ ನೆಟ್ಟಿಗರು ಕಠೋರ ಕಾಮೆಂಟ್‌ಗಳ ಮೂಲಕ ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ.

ಮತ್ತೊಂದು ವಿಡಿಯೋದಲ್ಲಿ ತಂದೆಯ ಅಂತಿಮ ಸಂಸ್ಕಾರ ನೆರವೇರಿಸುವಾಗ ವಿಕ್ರಮಾದಿತ್ಯ ಅವರು ಕಣ್ಣೀರಿಟ್ಟು ಕಂಗಾಲಾಗಿದ್ದು ಕಂಡುಬಂದಿದೆ. ಕ್ಯಾಮೆರಾಗಳ ಸಮ್ಮುಖದಲ್ಲಿದ್ದಾಗ ಉಂಟಾದ ನರ್ವಸ್‌ನೆಸ್ ಹಾಗೂ ಏನು ಮಾಡಬೇಕೆಂದು ತಿಳಿಯದ ಸಂದರ್ಭದಲ್ಲಿ ಹೊರಬಂದ ಪ್ರತಿಕ್ರಿಯೆಯನ್ನು ಇಟ್ಟುಕೊಂಡು, ಒಬ್ಬ ವ್ಯಕ್ತಿಯ ದುಃಖ ಮತ್ತು ಭಾವನೆಗಳನ್ನು ಸೋಷಿಯಲ್ ಮೀಡಿಯಾದಲ್ಲಿ ನಿರ್ಧರಿಸುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಮೂಡಿವೆ. ದುಃಖದ ವಾತಾವರಣದಲ್ಲಿದ್ದಾಗ ಪ್ರತಿಯೊಬ್ಬ ವ್ಯಕ್ತಿಯು ಒಂದೇ ರೀತಿಯಾಗಿ ಪ್ರತಿಕ್ರಿಯಿಸುವುದಿಲ್ಲ ಎಂಬ ಕನಿಷ್ಠ ಮಾನವೀಯತೆಯನ್ನು ಅರ್ಥೈಸಿಕೊಳ್ಳಬೇಕು ಎಂದು ಹಲವರು ಅವರ ಬೆಂಬಲಕ್ಕೆ ನಿಂತಿದ್ದಾರೆ.

ಖ್ಯಾತ ನಟ ಪ್ರದೀಪ್ ರಾವತ್ ನಿಧನ

‘ಗಜನಿ’, ‘ಲಗಾನ್’ ಹಾಗೂ ಮಹಾಭಾರತ ಧಾರಾವಾಹಿಯ ಅಶ್ವತ್ಥಾಮ ಪಾತ್ರದ ಮೂಲಕ ಇಡೀ ಭಾರತೀಯ ಚಿತ್ರರಂಗದಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದ ಹಿರಿಯ ನಟ ಪ್ರದೀಪ್ ರಾವತ್ (74) ಅವರು ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಇತ್ತೀಚೆಗೆ ಚಿಕಿತ್ಸೆ ಫಲಕಾರಿಯಾಗದೆ ಮುಂಬೈನಲ್ಲಿ ಕೊನೆಯುಸಿರೆಳೆದರು. ತಮ್ಮ ವಿಶಿಷ್ಟ ಖಳನಟನೆಯಿಂದ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ: ಸಲ್ಮಾನ್ ಖಾನ್ ಮನೆಯಲ್ಲಿ ಐಷಾರಾಮಿ ಜೀವನ ನಡೆಸಿದ್ದ ಪ್ರದೀಪ್ ರಾವತ್; ಹೊರ ಬಂದಿದ್ದೇಕೆ??

ಕನ್ನಡದಲ್ಲಿ ದರ್ಶನ್ ಹಾಗೂ ಸುದೀಪ್ ನಟನೆಯ ಸಿನಿಮಾಗಳಲ್ಲಿ ಪ್ರದೀಪ್ ರಾವತ್ ನಟಿಸಿದ್ದರು. ಬಾಲಿವುಡ್​​ನಲ್ಲಿ ಸಲ್ಮಾನ್ ಖಾನ್, ಆಮಿರ್ ಖಾನ್​ಗೆ ಅವರು ಆಪ್ತರಾಗಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಭದ್ರಾವತಿಯಲ್ಲಿ ಫುಡ್ ಪಾಯಿಸನಿಂಗ್ ಶಂಕೆ; ವಿಶೇಷ ಶಾಲೆಯ 15 ಮಕ್ಕಳು ಸೇರಿದಂತೆ ಹಲವರು ಆಸ್ಪತ್ರೆಗೆ ದಾಖಲು – Kannada News | Bhadravathi Food Poisoning: 15 Special School Students Hospitalized in Shivamogga

ಭದ್ರಾವತಿಯಲ್ಲಿ ಫುಡ್ ಪಾಯಿಸನಿಂಗ್ ಶಂಕೆ

ಶಿವಮೊಗ್ಗ, ಆಗಸ್ಟ್ 08: ಜಿಲ್ಲೆಯ ಭದ್ರಾವತಿ (Shivamogga) ತಾಲೂಕಿನಲ್ಲಿ ಭೀಕರ ಆಹಾರ ವಿಷಬಾಧೆ (Food Poisoning) ಪ್ರಕರಣ ಬೆಳಕಿಗೆ ಬಂದಿದೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಸಿದ್ಧಪಡಿಸಲಾಗಿದ್ದ ಭೋಜನವನ್ನು ಸೇವಿಸಿದ ತರಂಗ ವಸತಿ ಶಾಲೆಯ 15ಕ್ಕೂ ಹೆಚ್ಚು ವಿಶೇಷ ಚೇತನ ವಿದ್ಯಾರ್ಥಿಗಳು ಹಾಗೂ 8 ಮಂದಿ ಸಾರ್ವಜನಿಕರು ಹಠಾತ್ ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥರಾದ ಎಲ್ಲರನ್ನೂ ತಕ್ಷಣವೇ ಸ್ಥಳೀಯ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಸದ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯಕೀಯ ಮೂಲಗಳು ಖಚಿತಪಡಿಸಿವೆ.

ನಡೆದಿದ್ದೇನು?

ಭದ್ರಾವತಿಯ ವೇಲೂರ್ ಶೆಡ್ ಪ್ರದೇಶದ ಮನೆಯೊಂದರಲ್ಲಿ ತಿಥಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮ ನಿಮಿತ್ತ ಸಿದ್ಧಪಡಿಸಲಾಗಿದ್ದ ಊಟವನ್ನು ನ್ಯೂಟೌನ್‌ನ ತರಂಗ ಕಿವುಡು ಮತ್ತು ಮೂಗರ ವಸತಿ ಶಾಲೆಯ ಮಕ್ಕಳು ಸೇವಿಸಿದ್ದರು. ಭೋಜನ ಸವಿದ ಕೆಲವೇ ಗಂಟೆಗಳಲ್ಲಿ ಮಕ್ಕಳಿಗೆ ತೀವ್ರ ವಾಂತಿ ಹಾಗೂ ಭೇದಿ ಕಾಣಿಸಿಕೊಂಡಿದೆ. ಮಕ್ಕಳಷ್ಟೇ ಅಲ್ಲದೆ ಇದೇ ಆಹಾರ ಸೇವಿಸಿದ್ದ ಮೃತರ ಕುಟುಂಬದ ಸಂಬಂಧಿಕರು ಹಾಗೂ ಸ್ಥಳೀಯರು ಸೇರಿ 7-8 ಸಾರ್ವಜನಿಕರ ಆರೋಗ್ಯದಲ್ಲೂ ಏರುಪೇರಾಗಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ

ಬಾಧಿತ ಮಕ್ಕಳನ್ನು ತಕ್ಷಣವೇ ಭದ್ರಾವತಿ ತಾಲೂಕು ಆಸ್ಪತ್ರೆಗೆ ತರಲಾಗಿದ್ದು, ತುರ್ತು ಚಿಕಿತ್ಸಾ ಘಟಕದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಯಾರನ್ನೂ ಜಿಲ್ಲಾ ಕೇಂದ್ರವಾದ ಶಿವಮೊಗ್ಗ ಆಸ್ಪತ್ರೆಗೆ ರವಾನಿಸುವ ಅಗತ್ಯ ಬಂದಿಲ್ಲ. ಆದರೆ, ಮಕ್ಕಳು ವಿಶೇಷಚೇತನರಾದ್ದರಿಂದ ಮುಂದಿನ 2-3 ದಿನಗಳ ಕಾಲ ವೈದ್ಯರ ಕಠಿಣ ನಿಗಾದಲ್ಲಿಯೇ ಇಟ್ಟು ಚಿಕಿತ್ಸೆ ಮುಂದುವರಿಸಲು ನಿರ್ಧರಿಸಲಾಗಿದೆ.

ತನಿಖೆ ಚುರುಕುಗೊಳಿಸಿದ ಆಹಾರ ಸುರಕ್ಷತಾ ಇಲಾಖೆ

ಒಂದೇ ಕಾರ್ಯಕ್ರಮದ ಊಟ ತಿಂದ ಹಲವರು ಒಟ್ಟಿಗೆ ಅಸ್ವಸ್ಥರಾಗಿರುವುದರಿಂದ ಆಹಾರ ಕಲುಷಿತಗೊಂಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಕಾರ್ಯಕ್ರಮ ಮುಗಿದ ನಂತರ ಉಳಿದಿದ್ದ ಹಳಸಿದ ಆಹಾರವನ್ನು ಮಕ್ಕಳಿಗೆ ನೀಡಲಾಗಿತ್ತೇ ಅಥವಾ ತಯಾರಿಕೆಯಲ್ಲೇ ದೋಷವಿತ್ತೇ ಎಂಬ ಆಯಾಮದಲ್ಲಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಧಾವಿಸಿರುವ ಆಹಾರ ಗುಣಮಟ್ಟ ಮತ್ತು ಸುರಕ್ಷತಾ ಇಲಾಖೆಯ ಅಧಿಕಾರಿಗಳು ಭೋಜನದ ಸ್ಯಾಂಪಲ್‌ಗಳನ್ನು ವಶಕ್ಕೆ ಪಡೆದು ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೀರೋ ಆಗಿ ಗೆದ್ದ ನಿರ್ದೇಶಕ ಲೋಕೇಶ್ ಕನಗರಾಜ್; ಮೊದಲ ದಿನ ಭರ್ಜರಿ ಗಳಿಕೆ – Kannada News | DC Box Office Collection Day 1: Lokesh Kanagaraj Acting Debut Film Earns Rs 5 Crore Worldwide

ಲೋಕೇಶ್ ಕನಗರಾಜ್ (Lokesh Kanagaraj) ತಾವು ಉತ್ತಮ ನಿರ್ದೇಶಕ ಮಾತ್ರ ಅಲ್ಲ, ಹೀರೋ ಎಂಬುದನ್ನು ಕೂಡ ಸಾಬೀತು ಮಾಡಿದ್ದಾರೆ. ಅವರ ನಟನೆಯ ‘ಡಿಸಿ’ ಸಿನಿಮಾ ಮೊದಲ ದಿನ ಉತ್ತಮ ಕಲೆಕ್ಷನ್ ಮಾಡಿದೆ. ಭಾರತದಲ್ಲಿ ಈ ಚಿತ್ರ ಮೊದಲ ದಿನವೇ 4.10 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಜಾಗತಿಕ ಮಟ್ಟದಲ್ಲಿ 5.70 ಕೋಟಿ ರೂಪಾಯಿ ಸಂಗ್ರಹಿಸಿ ಗಮನ ಸೆಳೆದಿದೆ. ವಿದೇಶದಲ್ಲೂ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಚಿತ್ರದ ಗಳಿಕೆ ವಿವರ

ಸ್ಟಾರ್ ನಿರ್ದೇಶಕ ಲೋಕೇಶ್ ಕನಗರಾಜ್ ನಾಯಕನಾಗಿ ನಟಿಸಿರುವ ‘ಡಿಸಿ’ ತಮಿಳು ಆ್ಯಕ್ಷನ್ ಡ್ರಾಮಾ ಚಿತ್ರ ಪ್ರೇಕ್ಷಕರನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಈ ಸಿನಿಮಾ ಭಾರತದಲ್ಲಿ ಮೊದಲ ದಿನದಂದು ಒಟ್ಟು 4.70 ಕೋಟಿ ರೂಪಾಯಿ ಗ್ರಾಸ್ ಗಳಿಕೆ ಮಾಡಿದೆ. ಅದರಲ್ಲಿ ನೆಟ್ ಗಳಿಕೆ 4.10 ಕೋಟಿ ರೂಪಾಯಿ ಆಗಿದೆ. ದೇಶಾದ್ಯಂತ ಮೊದಲ ದಿನವೇ 3,504 ಕ್ಕೂ ಹೆಚ್ಚು ಪ್ರದರ್ಶನಗಳನ್ನು ಈ ಚಿತ್ರ ಕಂಡಿದೆ.

ವಿದೇಶಿ ಮಾರುಕಟ್ಟೆಯಲ್ಲೂ ಈ ಸಿನಿಮಾ ಶುಭಾರಂಭ ಮಾಡಿದೆ. ವಿದೇಶದಲ್ಲಿ ಒಟ್ಟು 1 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಆಗಿದೆ. ಪ್ರಪಂಚದಾದ್ಯಂತ ಮೊದಲ ದಿನವೇ 5.70 ಕೋಟಿ ರೂಪಾಯಿ ಗಳಿಕೆಯಾಗಿದೆ.

ಭಾಷಾವಾರು ಕಲೆಕ್ಷನ್ ನೋಡುವುದಾದರೆ ತಮಿಳು ಆವೃತ್ತಿ ಒಂದರಲ್ಲೇ 2.60 ಕೋಟಿ ರೂಪಾಯಿ ಸಿಕ್ಕಿದೆ. ತಮಿಳಿನಲ್ಲಿ ಶೇ. 45.57 ರಷ್ಟು ಚಿತ್ರಮಂದಿರ ಭರ್ತಿಯಾಗಿತ್ತು. ತೆಲುಗು ಆವೃತ್ತಿಯು ಭಾರತದಲ್ಲಿ 1.25 ಕೋಟಿ ರೂಪಾಯಿ ತಂದುಕೊಟ್ಟಿದೆ. ಹಿಂದಿ ಆವೃತ್ತಿಯು 25 ಲಕ್ಷ ರೂಪಾಯಿ ಗಳಿಸಿದೆ.

ನಟನಾಗಿ ಲೋಕೇಶ್ ಕನಗರಾಜ್

ಲೋಕೇಶ್ ಕನಕರಾಜ್ ಅವರಿಗೆ ನಟನಾಗಿ ಇದು ಮೊದಲ ಅನುಭವ. ಈ ಹಿಂದೆ ಅವರು ವಿಕ್ರಮ್, ಲಿಯೋ ಮತ್ತು ಕೂಲಿ ರೀತಿಯ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದರು. ಅರುಣ್ ಮಾಥೇಶ್ವರನ್ ಈ ‘ಡಿಸಿ’ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಕಲಾನಿಧಿ ಮಾರನ್ ಅವರ ಸನ್ ಪಿಕ್ಚರ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಿದೆ.

ಇದನ್ನೂ ಓದಿ: ಲೋಕೇಶ್ ಕನಗರಾಜ್ ಬಳಿಕ ಮತ್ತೊಬ್ಬ ತಮಿಳು ಸ್ಟಾರ್ ನಿರ್ದೇಶಕನ ಸಿನಿಮಾನಲ್ಲಿ ಉಪ್ಪಿ

ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್ ಸಿಕ್ಕಿದ್ದು, 2 ಗಂಟೆ 23 ನಿಮಿಷ ಇದೆ. ಲೋಕೇಶ್ ಅವರು ದೇವದಾಸ್ ಪಾತ್ರದಲ್ಲಿದ್ದರೆ, ವಾಮಿಖಾ ಗಬ್ಬಿ ಮತ್ತು ಸಂಜನಾ ಕೃಷ್ಣಮೂರ್ತಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಅನಿರುದ್ಧ್ ರವಿಚಂದರ್ ಅವರ ಸಂಗೀತ ಈ ಚಿತ್ರಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

International Cat Day 2026: ಮನೆಯಲ್ಲಿ ಬೆಕ್ಕು ಸಾಕುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ – Kannada News | International Cat Day 2026: Why celebrate International Cat Day?

ಅಂತಾರಾಷ್ಟ್ರೀಯ ಬೆಕ್ಕು ದಿನImage Credit source: Getty Images

ಮನುಷ್ಯನ ಅಚ್ಚುಮೆಚ್ಚಿನ ಸಾಕು ಪ್ರಾಣಿಗಳಲ್ಲಿ ಬೆಕ್ಕು (Cat) ಕೂಡ ಒಂದು.  ಬೆಕ್ಕು ಹಲವರ ಮುದ್ದಿನ ಪ್ರಾಣಿ, ಹೆಚ್ಚಿನವರು ತಮ್ಮ ಮನೆಗಳಲ್ಲಿ ಬೆಕ್ಕು ಸಾಕಲು ಇಷ್ಟಪಡುತ್ತಾರೆ. ಈ ಮುದ್ದು ಪ್ರಾಣಿಗಳಿಗಾಗಿಯೂ ಒಂದು ದಿನವಿದೆ. ಹೌದು ಆಗಸ್ಟ್‌ 8 ರಂದು ಅಂತಾರಾಷ್ಟ್ರೀಯ ಬೆಕ್ಕು ದಿನವನ್ನು ಆಚರಿಸಲಾಗುತ್ತದೆ. ಬೆಕ್ಕುಗಳ ಸುರಕ್ಷತೆ ಮತ್ತು ಅವುಗಳ ಹಕ್ಕುಗಳ ಬಗ್ಗೆ ಜನರ ತಿಳುವಳಿಕೆ ಮೂಡಿಸಲು, ಬೆಕ್ಕುಗಳ ಯೋಗಕ್ಷೇಮ ಹಾಗೂ ಅವುಗಳ ಆರೈಕೆಯ ಮಹತ್ವವನ್ನು ಎತ್ತಿ ತೋರಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಬೆಕ್ಕುಗಳ ದಿನದ ಈ ವಿಶೇಷ ಸಂದರ್ಭದಲ್ಲಿ ಮನೆಯಲ್ಲಿ ಬೆಕ್ಕು ಸಾಕುವುದರಿಂದ ಏನೆಲ್ಲಾ ಪ್ರಯೋಜನಗಳು ಲಭಿಸುತ್ತವೆ ಎಂಬುದನ್ನು ನೋಡೋಣ ಬನ್ನಿ.

ಅಂತಾರಾಷ್ಟ್ರೀಯ ಬೆಕ್ಕು ದಿನದ ಇತಿಹಾಸವೇನು?

ಪ್ರತಿ ವರ್ಷ ಆಗಸ್ಟ್ 8 ರಂದು ಅಂತರರಾಷ್ಟ್ರೀಯ ಬೆಕ್ಕು ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ದಿನವು 2002 ರಲ್ಲಿ ಅಂತರರಾಷ್ಟ್ರೀಯ ಪ್ರಾಣಿ ಕಲ್ಯಾಣ ನಿಧಿಯು ಬೆಕ್ಕುಗಳ ರಕ್ಷಣೆಗಾಗಿ ಕರೆ ನೀಡಿದಾಗ ಹುಟ್ಟಿಕೊಂಡಿತು. ಆಗ ಅಂತರರಾಷ್ಟ್ರೀಯ ನಿಧಿಯು ಆಗಸ್ಟ್ 8 ರಂದು ಅಂತರರಾಷ್ಟ್ರೀಯ ಬೆಕ್ಕು ದಿನವನ್ನು ಆಚರಿಸಲು ನಿರ್ಧರಿಸಿತು. ಈ ದಿನದ ಮುಖ್ಯ ಉದ್ದೇಶವೆಂದರೆ ಬೆಕ್ಕುಗಳನ್ನು ರಕ್ಷಿಸುವುದು ಮತ್ತು ಸಹಾಯ ಮಾಡುವುದು, ಜೊತೆಗೆ ಬೆಕ್ಕುಗಳ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸುವುದು.

ಬೆಕ್ಕು ದಿನದ ಮಹತ್ವವೇನು?

  • ಈ ದಿನವು ಬೆಕ್ಕುಗಳ ರಕ್ಷಣೆ ಮತ್ತು ಬೆಂಬಲಕ್ಕೆ ನಾವು ಮನುಷ್ಯರು ಜವಾಬ್ದಾರರು ಎಂಬುದನ್ನು ನಮಗೆ ನೆನಪಿಸುತ್ತದೆ.
  • ಕೆಟ್ಟ ಹವಾಮಾನ, ಕಾರು ಅಪಘಾತಗಳು, ಮಾನವ ದೌರ್ಜನ್ಯ ಅಥವಾ ಇತರ ವಿಪತ್ತುಗಳಿಂದ ತೊಂದರೆಗೀಡಾಗುವ ಬೆಕ್ಕುಗಳಿಗೆ ಆಶ್ರಯ ನೀಡುವಂತೆ ಈ ದಿನ ಪ್ರೋತ್ಸಾಹಿಸುತ್ತದೆ.
  • ಬೆಕ್ಕುಗಳ ಜೀವನದ ಗುಣಮಟ್ಟವನ್ನು ಸುಧಾರಿಸಬೇಕು, ಬೆಕ್ಕುಗಳಿಗೆ ದಯೆ ತೋರಿ ಅವುಗಳಿಗೂ ಉತ್ತಮ ಜೀವನವನ್ನು ಕಲ್ಪಿಸಬೇಕು, ಅನಾಥ ಬೆಕ್ಕುಗಳನ್ನು ದತ್ತು ತೆಗೆದುಕೊಳ್ಳಬೇಕು ಎಂದು ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ.
  • ವಿಶ್ವ ಬೆಕ್ಕು ದಿನದಂದು, ವಿವಿಧ ಪ್ರಾಣಿ ಕಲ್ಯಾಣ ಸಂಸ್ಥೆಗಳು ಮತ್ತು ಆಶ್ರಯಗಳು ಬೆಕ್ಕುಗಳನ್ನು ನೋಡಿಕೊಳ್ಳಲು, ಅವುಗಳ ಹಕ್ಕುಗಳನ್ನು ರಕ್ಷಿಸಲು ಮತ್ತು ಅವುಗಳ ಯೋಗಕ್ಷೇಮದ ಬಗ್ಗೆ ಜಾಗೃತಿ ಮೂಡಿಸಲು ವಿಶೇಷ ಕಾರ್ಯಕ್ರಮಗಳು ಮತ್ತು ಅಭಿಯಾನಗಳನ್ನು ಆಯೋಜಿಸುತ್ತವೆ.

ಇದನ್ನೂ ಓದಿ:  ಭಾರತದ ಪ್ರಮುಖ ಕೈಮಗ್ಗ ತಾಣಗಳು

ಮನೆಯಲ್ಲಿ ಬೆಕ್ಕನ್ನು ಸಾಕುವುದರಿಂದಾಗುವ ಪ್ರಯೋಜನಗಳೇನು?

ಮನೆಯಲ್ಲಿ ಬೆಕ್ಕು ಸಾಕುವುದರಿಂದ ಹಲ್ಲಿ, ಜಿರಳೆ, ಇಲಿ, ಹಾವುಗಳು ಕಾಟ ಇರೋದಿಲ್ಲ. ಇದರ ಜೊತೆಗೆ ಬೆಕ್ಕುಗಳನ್ನು ಸಾಕುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳು ಸಹ ಲಭಿಸುತ್ತವೆ. ಅವುಗಳೆಂದರೆ,

ಒತ್ತಡ ಮತ್ತು ಆತಂಕ ಕಡಿಮೆಯಾಗುತ್ತದೆ: ಬೆಕ್ಕಿನೊಂದಿಗೆ ಸಮಯ ಕಳೆಯುವುದರಿಂದ ಒತ್ತಡದ ಹಾರ್ಮೋನ್ ( ಕಾರ್ಟಿಸೋಲ್ ) ಕಡಿಮೆಯಾಗುತ್ತದೆ ಮತ್ತು ಸಂತೋಷದ ಹಾರ್ಮೋನ್ ( ಸಿರೊಟೋನಿನ್ ) ಹೆಚ್ಚಾಗುತ್ತದೆ . ಇದು ಮಾನಸಿಕ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.

ಒಂಟಿತನವನ್ನು ನಿವಾರಿಸುತ್ತದೆ: ಒಂಟಿಯಾಗಿ ವಾಸಿಸುವವರಿಗೆ ಅಥವಾ ವಯಸ್ಸಾದವರಿಗೆ ಬೆಕ್ಕು  ಉತ್ತಮ ಸ್ನೇಹಿತ ಅಂತಾನೇ ಹೇಳಬಹುದು. ಇದು ಭಾವನಾತ್ಮಕ ಬೆಂಬಲವನ್ನು ನೀಡುತ್ತದೆ ಮತ್ತು ಒಂಟಿತನವನ್ನು ಕಡಿಮೆ ಮಾಡುತ್ತದೆ .

ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ: ಬೆಕ್ಕನ್ನು ಸಾಕುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ. ಅಲ್ಲದೆ, ಇದು ಮಕ್ಕಳ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

ಸಂತೋಷ ನೀಡುತ್ತದೆ: ಬೆಕ್ಕುಗಳು ನಮ್ಮ ಮನಸ್ಸಿನ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಜೊತೆಗೆ ಅವುಗಳ ಆಟ ತುಂಟಾಟ ನೋವನ್ನು ಮರೆಸಿ ಸಂತೋಷವನ್ನು ನಿಡುತ್ತದೆ.

ಜವಾಬ್ದಾರಿಯನ್ನು ಕಲಿಸುತ್ತದೆ: ಬೆಕ್ಕನ್ನು ನೋಡಿಕೊಳ್ಳುವುದು ಜವಾಬ್ದಾರಿ ಮತ್ತು ಶಿಸ್ತನ್ನು ಕಲಿಸುತ್ತದೆ. ಅದಕ್ಕೆ ಆಹಾರ ನೀಡುವುದು, ಸ್ವಚ್ಛಗೊಳಿಸುವುದು ಮತ್ತು ಅದನ್ನು ಪ್ರೀತಿಸುವುದು ನಿಮ್ಮ ಜೀವನದಲ್ಲಿ ಶಿಸ್ತನ್ನು ತರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಸ್ತೆ ಬದಿ ಅಡ್ಡಾದಿಡ್ಡಿ ನಿಲ್ಲಿಸಿದ್ದ ವಾಹನಗಳ ಹರಾಜಿಗೆ ಸಿದ್ಧತೆ: GBA ಮತ್ತು ಪೊಲೀಸರಿಂದ ಭರ್ಜರಿ ಜಂಟಿ ಕಾರ್ಯಾಚರಣೆ! – Kannada News | GBA and Police Joint Drive: 6,544 Abandoned Vehicles Reported, Auctions Soon

ಬೆಂಗಳೂರು, ಆಗಸ್ಟ್ 08: ರಸ್ತೆ ಬದಿಗಳಲ್ಲಿ ದೀರ್ಘಕಾಲದಿಂದ ಬಿದ್ದಿರುವ ಹಾಗೂ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವ ಪರಿತ್ಯಕ್ತ ವಾಹನಗಳ ವಿರುದ್ಧ ಜಿಬಿಎ (GBA) ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಭರ್ಜರಿ ತೆರವು ಕಾರ್ಯಾಚರಣೆ ಆರಂಭಿಸಿವೆ. ಕಳೆದ ಜುಲೈ 10 ರಿಂದ ಶುರುವಾದ ಈ ವಿಶೇಷ ಆಪರೇಷನ್ ತೀವ್ರಗತಿಯಲ್ಲಿ ಸಾಗುತ್ತಿದ್ದು, ಇನ್ನು ಮುಂದೆ ನಿಯಮ ಉಲ್ಲಂಘಿಸುವ ವಾಹನ ಮಾಲೀಕರಿಗೆ ಭಾರಿ ದಂಡದ ಬಿಸಿ ತಟ್ಟಲಿದೆ.

6,500ಕ್ಕೂ ಹೆಚ್ಚು ವಾಹನಗಳ ಪತ್ತೆ!

ಕಾರ್ಯಾಚರಣೆ ಆರಂಭವಾದ ದಿನದಿಂದ ಇಂದಿನವರೆಗೆ ಒಟ್ಟು 6,544 ವಾಹನಗಳು ವರದಿಯಾಗಿವೆ. ಇದರಲ್ಲಿ ಸಾರ್ವಜನಿಕರೇ ಜವಾಬ್ದಾರಿಯಿಂದ ಮುಂದೆ ಬಂದು 4,108 ಅಬಾಂಡೆಂಟ್ ವಾಹನಗಳನ್ನು ಪತ್ತೆ ಹಚ್ಚಿ ಮಾಹಿತಿ ನೀಡಿದ್ದಾರೆ. ಇನ್ನುಳಿದ 2,436 ವಾಹನಗಳನ್ನು ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಿಪೋರ್ಟ್ ಮಾಡಿದ್ದಾರೆ. ಈ ಪೈಕಿ ಒಟ್ಟು 3,100 ವಾಹನಗಳು ಕಂಪ್ಲೀಟ್ ಆಗಿ ರಸ್ತೆ ಬದಿಯಲ್ಲೇ ಬಿದ್ದಿರುವುದು ದಾಖಲಾಗಿದೆ.

7 ದಿನಗಳ ಗಡುವು

ರಸ್ತೆ ಬದಿ ಬಿದ್ದಿರುವ ವಾಹನಗಳನ್ನು ಜಪ್ತಿ ಮಾಡುವ ಮುನ್ನ ಅಧಿಕಾರಿಗಳು ಎಚ್ಚರಿಕೆ ನೀಡುತ್ತಿದ್ದಾರೆ. ಈಗಾಗಲೇ GBA ಅಧಿಕಾರಿಗಳು ಒಟ್ಟು 1,780 ವಾಹನಗಳಿಗೆ ನೋಟಿಸ್ ಸ್ಟಿಕ್ಕರ್ ಅಂಟಿಸಿದ್ದಾರೆ. ಸದ್ಯ ಪ್ರತಿದಿನ 50 ರಿಂದ 100 ವಾಹನಗಳಿಗೆ ಸ್ಟಿಕ್ಕರ್ ಹಾಕುವ ಕೆಲಸ ನಡೆಯುತ್ತಿದೆ. ನಿಯಮಗಳ ಪ್ರಕಾರ, ಸ್ಟಿಕ್ಕರ್ ಅಂಟಿಸಿದ 7 ದಿನಗಳ ಒಳಗೆ ಮಾಲೀಕರು ವಾಹನವನ್ನು ತೆರವುಗೊಳಿಸದಿದ್ದರೆ ಆ ವಾಹನಗಳನ್ನು ಟೋಯಿಂಗ್ ಮಾಡಲಾಗುತ್ತದೆ. ಈಗಾಗಲೇ ಇಂತಹ 352 ವಾಹನಗಳನ್ನು ಯಶಸ್ವಿಯಾಗಿ ಟೋಯಿಂಗ್ ಮಾಡಿ ಸುರಕ್ಷಿತವಾಗಿ ಜಪ್ತಿ ಮಾಡಲಾಗಿದೆ.

ಹರಾಜು ಪ್ರಕ್ರಿಯೆ

ಟೋಯಿಂಗ್ ಮಾಡಿದ ಎಲ್ಲಾ ವಾಹನಗಳಿಗೆ ವೀಲ್ ಕ್ಯಾಪ್ ಅಳವಡಿಸಿ ನಿಗದಿತ ಯಾರ್ಡ್ ಅಥವಾ ಸ್ಥಳಗಳಲ್ಲಿ ಜಾಗರೂಕತೆಯಿಂದ ನಿಲ್ಲಿಸಲಾಗಿದೆ. ಜಪ್ತಿಯಾದ ವಾಹನಗಳನ್ನು ಬಿಡಿಸಿಕೊಳ್ಳಲು ಮಾಲೀಕರಿಗೆ 15 ದಿನಗಳ ಗಡುವು ನೀಡಲಾಗುತ್ತದೆ. ಈ ಅವಧಿಯಲ್ಲಿ ಮಾಲೀಕರು ಬರದೇ ಇದ್ದರೆ, GBA ಅಧಿಕಾರಿಗಳು ಆ ವಾಹನಗಳನ್ನು ಕಾನೂನುಬದ್ಧವಾಗಿ ಹರಾಜು ಹಾಕಲಿದ್ದಾರೆ. ಈಗಾಗಲೇ 600 ವಾಹನ ಮಾಲೀಕರು ನೋ ಪಾರ್ಕಿಂಗ್ ಶುಲ್ಕ ಪಾವತಿಸಿ ತಮ್ಮ ವಾಹನಗಳನ್ನು ಬಿಡಿಸಿಕೊಂಡಿದ್ದಾರೆ.

ದಂಡ ಮತ್ತು ಟೋಯಿಂಗ್ ಶುಲ್ಕದ ವಿವರ

  • ದ್ವಿಚಕ್ರ ವಾಹನಗಳು (Two Wheelers): ನೋ ಪಾರ್ಕಿಂಗ್ ಶುಲ್ಕ 500 ರೂ. + ಟೋಯಿಂಗ್ ಚಾರ್ಜ್ 650 ರೂ. (ಒಟ್ಟು ರೂ.1,150)
  • ನಾಲ್ಕು ಚಕ್ರದ ವಾಹನಗಳು (Four Wheelers): ಟೋಯಿಂಗ್ ಚಾರ್ಜ್ 1,000 ರೂ. (ಜೊತೆಗೆ ಅನ್ವಯಿಸುವ ನೋ ಪಾರ್ಕಿಂಗ್ ದಂಡ)

ರಸ್ತೆಗಳನ್ನು ಸ್ವಚ್ಛವಾಗಿಡಲು ಮತ್ತು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಈ ಕಾರ್ಯಾಚರಣೆ ಮುಂದುವರಿಯಲಿದ್ದು, ಸಾರ್ವಜನಿಕರು ರಸ್ತೆ ಬದಿಗಳಲ್ಲಿ ವಾಹನಗಳನ್ನು ಅನಾಥವಾಗಿ ಬಿಡದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version