ಬೆಂಗಳೂರು, ಮೇ 1: ಕುಡಿದ ನಶೆಯಲ್ಲಿ ಪುಂಡರ ಗ್ಯಾಂಗ್‌ವೊಂದು ಮಚ್ಚು ಲಾಂಗು ಹಿಡಿದು ದಾಂಧಲೆ ನಡೆಸಿದ ಘಟನೆ ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಏಪ್ರಿಲ್ 25ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಪುಂಡರ ಅಟ್ಟಹಾಸಕ್ಕೆ ಸ್ಥಳೀಯರು ಬೆಚ್ಚಿಬೀಳುವಂತಾಗಿದೆ. ಏಪ್ರಿಲ್ 25ರಂದು ಸಂಜೆ ಸುಮಾರು 4:50ರ ಸಮಯದಲ್ಲಿ ಯುವಕನೊಬ್ಬ ಏರಿಯಾದಲ್ಲಿ ಮಚ್ಚು ಹಿಡಿದು ಓಡಾಡಿ ಸಾರ್ವಜನಿಕರಿಗೆ ಬೆದರಿಕೆ ಹಾಕಿದ್ದಾನೆ. ಪ್ರಶ್ನಿಸಿದ ಅಕ್ಕಪಕ್ಕದ ಮನೆಯವರಿಗೂ ಮಚ್ಚು ತೋರಿಸಿ ಹೆದರಿಸಿದ್ದಾನೆ. ಇದಾದ ಬಳಿಕ ಸಂಜೆ 7 ಗಂಟೆ ಸುಮಾರಿಗೆ ಮತ್ತೆ ಗ್ಯಾಂಗ್ನೊಂದಿಗೆ ತಂಡೋಪತಂಡವಾಗಿ ಬಂದು ಮನೆಯೊಂದರ ಕಿಟಕಿ ಗಾಜುಗಳನ್ನು ಒಡೆದು ದಾಂಧಲೆ ನಡೆಸಿದ್ದಾರೆ. ಪೊಲೀಸರಿಗೆ ದೂರು ನೀಡಿದರೆ ಮುಗಿಸಿಬಿಡುವುದಾಗಿ ಬೆದರಿಕೆ ಹಾಕಿರುವ ಈ ಪುಂಡರ ಗಲಾಟೆಯ ದೃಶ್ಯಗಳು ಮನೆಯೊಂದರ ಸಿಸಿಟಿವಿಯಲ್ಲಿ (CCTV) ಸೆರೆಯಾಗಿವೆ. ಪುಂಡರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಪೊಲೀಸರನ್ನು ಆಗ್ರಹಿಸಿದ್ದಾರೆ.
ವಿಡಿಯೋ, ವರದಿ: ನಟರಾಜ್, ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
‘ಕೆಡಿ’ ಸಿನಿಮಾದ ‘ಸರ್ಸೆ ಸರ್ಸೆ’ ಹಾಡು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ವಿವಾದದ ಬಳಿಕ ಯೂಟ್ಯೂಬ್ನಿಂದಲೇ ಹಾಡನ್ನು ತೆಗೆಯಲಾಗಿದೆ. ಈಗ ಸಿನಿಮಾದಲ್ಲೂ ಈ ಹಾಡು ಇಲ್ಲ. ಈ ಬಗ್ಗೆ ಪ್ರೇಮ್ ಮಾತನಾಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಹಾಡನ್ನು ಸಿನಿಮಾದಲ್ಲಿ ಸೇರ್ಪಡೆ ಮಾಡೋದಾಗಿ ಅವರು ಹೇಳಿದ್ದಾರೆ. ಇದನ್ನು ಕೇಳಿ ಪಡ್ಡೆ ಹುಡುಗರು ಖುಷಿಪಟ್ಟಿದ್ದಾರೆ.
ಕೋಲ್ಕತ್ತಾ, ಮೇ 1: ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಪಶ್ಚಿಮ ಬಂಗಾಳ(West Bengal) ದಲ್ಲಿ ಆಡಳಿತಾರೂಢ ಟಿಎಂಸಿ ಮತ್ತು ಚುನಾವಣಾ ಆಯೋಗದ ನಡುವೆ ಶೀತಲ ಸಮರ ಏರ್ಪಟ್ಟಿದೆ. ಮತಪೆಟ್ಟಿಗೆಗಳನ್ನು ತಿರುಚಲಾಗುತ್ತಿದೆ ಎಂದು ಆರೋಪಿಸಿ ಟಿಎಂಸಿ ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ, ಆಯೋಗವು ಈ ಆರೋಪಗಳನ್ನು ನಿರಾಕರಿಸಿದೆ.
ಪಕ್ಷದ ಪ್ರತಿನಿಧಿಗಳಿಲ್ಲದೆ ಮತಪೆಟ್ಟಿಗೆಗಳನ್ನು ತೆರೆಯಲಾಗುತ್ತಿದೆ ಎಂದು ಟಿಎಂಸಿ ಆರೋಪಿಸಿದೆ. ಇವಿಎಂ ಯಂತ್ರಗಳನ್ನು ಬದಲಾಯಿಸಲು ಸಂಚು ರೂಪಿಸಲಾಗುತ್ತಿದೆ, 24 ಗಂಟೆಗಳ ಕಾಲ ಜಾಗರೂಕರಾಗಿರಿ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಕೋಲ್ಕತ್ತಾದ ನೇತಾಜಿ ಒಳಾಂಗಣ ಕ್ರೀಡಾಂಗಣದ ಹೊರಗೆ ಹಿರಿಯ ನಾಯಕರಾದ ಶಶಿ ಪಂಜಾ ಮತ್ತು ಕುನಾಲ್ ಘೋಷ್ ಧರಣಿ ಪ್ರತಿಭಟನೆ ಆರಂಭಿಸಿದ್ದಾರೆ.
ಟಿಎಂಸಿ ಬಿಡುಗಡೆ ಮಾಡಿದ ವಿಡಿಯೋದಲ್ಲಿರುವುದು ಇವಿಎಂ ಸಂಸ್ಕರಣೆಯಲ್ಲ, ಬದಲಾಗಿ ಅಂಚೆ ಮತಪತ್ರಗಳ (Postal Ballots) ಸಂಸ್ಕರಣೆ ಎಂದು ಆಯೋಗ ಸ್ಪಷ್ಟಪಡಿಸಿದೆ.
ಸ್ಟ್ರಾಂಗ್ ರೂಮ್‌ಗಳು ಸುರಕ್ಷಿತ: 7 ಇವಿಎಂ ಸ್ಟ್ರಾಂಗ್ ರೂಮ್‌ಗಳನ್ನು ಅಭ್ಯರ್ಥಿಗಳು ಮತ್ತು ಏಜೆಂಟ್‌ಗಳ ಸಮ್ಮುಖದಲ್ಲೇ ಸಂಪೂರ್ಣವಾಗಿ ಸೀಲ್ ಮಾಡಲಾಗಿದೆ. ಅಂಚೆ ಮತಪತ್ರಗಳ ಪ್ರತ್ಯೇಕತೆಯ ಪ್ರಕ್ರಿಯೆಯ ಬಗ್ಗೆ ಎಲ್ಲಾ ರಾಜಕೀಯ ಪಕ್ಷಗಳಿಗೆ ಇಮೇಲ್ ಮತ್ತು ಆರ್‌ಒ ಮೂಲಕ ಮುಂಚಿತವಾಗಿಯೇ ಮಾಹಿತಿ ನೀಡಲಾಗಿತ್ತು. ಸಂಜೆ 4 ಗಂಟೆಗೆ ನಿಯಮಗಳ ಪ್ರಕಾರ ಅಂಚೆ ಮತಪತ್ರಗಳ ವಿಂಗಡಣೆ ಆರಂಭವಾಗಿತ್ತು ಎಂದು ಆಯೋಗ ಹೇಳಿದೆ.
ಟಿಎಂಸಿಯ ಈ ಆರೋಪಗಳನ್ನು ಬಿಜೆಪಿ ಕಟುವಾಗಿ ಟೀಕಿಸಿದೆ. ಟಿಎಂಸಿ ಪಶ್ಚಿಮ ಬಂಗಾಳದಿಂದ ನಿರ್ನಾಮವಾಗುವ ಭೀತಿಯಲ್ಲಿದೆ, ಸಾರ್ವಜನಿಕರ ಜನಾದೇಶವನ್ನು ಒಪ್ಪಿಕೊಳ್ಳಲಾಗದೆ ಈ ನಾಟಕವಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಲೇವಡಿ ಮಾಡಿದ್ದಾರೆ. ಇವಿಎಂಗಳು ಸಿಸಿಟಿವಿ ಕಣ್ಗಾವಲಿನಲ್ಲಿ ಸುರಕ್ಷಿತವಾಗಿದ್ದು, ಅಕ್ರಮಕ್ಕೆ ಅವಕಾಶವಿಲ್ಲ ಎಂದು ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ತಿಬ್ರೆವಾಲ್ ಹೇಳಿದ್ದಾರೆ.
ಸದ್ಯಕ್ಕೆ ಸ್ಟ್ರಾಂಗ್ ರೂಮ್‌ಗಳ ಸುತ್ತ ಬಿಗಿ ಭದ್ರತೆ ಮುಂದುವರೆದಿದ್ದು, ಎಲ್ಲರ ಕಣ್ಣು ಮೇ 4ರ ಫಲಿತಾಂಶದ ಮೇಲೆ ನೆಟ್ಟಿದೆ. ಆಯೋಗವು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಪಾರದರ್ಶಕತೆಯನ್ನು ಸಾಬೀತುಪಡಿಸಿದ್ದು, ಯಾವುದೇ ಅಕ್ರಮ ನಡೆದಿಲ್ಲ ಎಂದು ಭರವಸೆ ನೀಡಿದೆ.
ಚಿತ್ರರಂಗಕ್ಕೆ ಅದರಲ್ಲೂ ಬಿಗ್ ಬಜೆಟ್ ಸಿನಿಮಾಗಳಿಗೆ ಸೆಟ್ ಫೋಟೋ ಅಋವ ವಿಡಿಯೋ ಲೀಕ್ ಅನ್ನೋದು ಸರ್ವೇ ಸಾಮಾನ್ಯ ಎಂಬಂತಾಗಿದೆ. ಇದು ಚಿತ್ರತಂಡದ ಮೇಲಿನ ನಿರೀಕ್ಷೆಯನ್ನು ಹಾಳು ಮಾಡುತ್ತದೆ. ಈಗ ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಕಿಂಗ್’ ಚಿತ್ರೀಕರಣದ ಫೋಟೋಗಳು ಲೀಕ್ ಆಗಿವೆ. ಈ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಸೆಟ್‌ನಿಂದ ಹೊರಬಂದಿರುವ ಫೋಟೋ ಹಾಗೂ ವೀಡಿಯೋಗಳಲ್ಲಿ ಈ ಜೋಡಿಯ ಕೆಮಿಸ್ಟ್ರಿ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.
ಇತ್ತೀಚೆಗಷ್ಟೇ ಪತಿ ರಣವೀರ್ ಸಿಂಗ್ ಅವರೊಂದಿಗೆ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವುದನ್ನು ಖಚಿತಪಡಿಸಿದ್ದ ದೀಪಿಕಾ, ಗರ್ಭಿಣಿಯಾಗಿದ್ದರೂ ತಮ್ಮ ವೃತ್ತಿಜೀವನದ ಬದ್ಧತೆಯಲ್ಲಿ ಹಿಂದೆ ಬಿದ್ದಿಲ್ಲ. ಲೀಕ್ ಆದ ಫೋಟೋಗಳಲ್ಲಿ ದೀಪಿಕಾ ಬೋಲ್ಡ್ ಉಡುಪಿನಲ್ಲಿ ಸುಂದರವಾಗಿ ಕಾಣಿಸುತ್ತಿದ್ದಾರೆ. ಶಾರುಖ್ ಅವರೊಂದಿಗೆ ಹಾಡಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಆ್ಯಕ್ಷನ್ ದೃಶ್ಯಗಳ ಶೂಟ್ಗೆ ಬಾಡಿ ಡಬಲ್ ಬಳಸಲಾಗುತ್ತಿದೆ.
ಸಿದ್ದಾರ್ಥ್ ಆನಂದ್ ನಿರ್ದೇಶನದ ಈ ಚಿತ್ರವು ಶಾರುಖ್ ಖಾನ್ ಮತ್ತು ಅವರ ಮಗಳು ಸುಹಾನಾ ಖಾನ್ ಒಟ್ಟಾಗಿ ನಟಿಸುತ್ತಿರುವ ಮೊದಲ ಸಿನಿಮಾ. ಈ ಕಾರಣದಿಂದಲೂ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಚಿತ್ರದಲ್ಲಿ ಶಾರುಖ್ ಭೂಗತ ಲೋಕದ ಡಾನ್ ಆಗಿ ಕಾಣಿಸಿಕೊಂಡರೆ, ಸುಹಾನಾ ಅವರ ಶಿಷ್ಯೆಯ ಪಾತ್ರ ಮಾಡುತ್ತಿದ್ದಾರೆ ಎಂದು ವರದಿ ಆಗಿದೆ. ಈ ಚಿತ್ರದಲ್ಲಿ ಅಭಿಷೇಕ್ ಬಚ್ಚನ್, ಅನಿಲ್ ಕಪೂರ್ ಮತ್ತು ರಾಣಿ ಮುಖರ್ಜಿ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.
ದಕ್ಷಿಣ ಆಫ್ರಿಕಾದ ಚಿತ್ರೀಕರಣ ಮುಗಿಸಿ ಭಾರತಕ್ಕೆ ಮರಳಿದ ನಂತರ ದೀಪಿಕಾ ಪಡುಕೋಣೆ ಅವರು ಅಟ್ಲೀ ನಿರ್ದೇಶನದ ‘ರಾಕಾ’ ಚಿತ್ರದ ಕೆಲಸದಲ್ಲಿ ನಟಿಸಲಿದ್ದಾರೆ. ಸದ್ಯಕ್ಕೆ ‘ಕಿಂಗ್’ ಸೆಟ್‌ನ ಲೀಕ್ ಫೋಟೋಗಳೇ ಬಾಲಿವುಡ್ ಅಂಗಳದ ಹಾಟ್ ಟಾಪಿಕ್ ಆಗಿದೆ.
ಬೆಂಗಳೂರು, ಮೇ 1: ಕೇಂದ್ರ ಸರ್ಕಾರವು ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು ದಿಢೀರ್ 993 ರೂಪಾಯಿಗಳಷ್ಟು ಏರಿಕೆ ಮಾಡಿದೆ. ಇದರೊಂದಿಗೆ ಬೆಂಗಳೂರಿನಲ್ಲಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ದರ 991 ರೂ. ಏರಿಕೆಯಾಗಿದೆ. ಇದರಿಂದ ರಾಜಧಾನಿ ಬೆಂಗಳೂರಿನ ಹೋಟೆಲ್ ಉದ್ಯಮಕ್ಕೆ ಭಾರಿ ಆಘಾತ ಉಂಟಾಗಿದೆ. ಮೇ 1 ರಿಂದ ಜಾರಿಗೆ ಬಂದಿರುವ ಈ ದರ ಹೆಚ್ಚಳವು ಹೋಟೆಲ್ ಮಾಲೀಕರನ್ನು ಕಂಗಾಲು ಮಾಡಿದೆ. ಮಧ್ಯಪ್ರಾಚ್ಯ ಯುದ್ಧದ ಪರಿಣಾಮದಿಂದ ಕಳೆದ ಕೆಲವು ತಿಂಗಳಿಂದಲೇ ಹೋಟೆಲ್ ಮಾಲೀಕರು ಸಂಕಷ್ಟ ಎದುರಿಸುತ್ತಿದ್ದರು. ಸಿಲಿಂಡರ್‌ಗಳ ಕೊರತೆಯಿಂದ ಬ್ಲಾಕ್‌ನಲ್ಲಿ 4,000 ರಿಂದ 7,000 ರೂಪಾಯಿಗಳವರೆಗೂ ಹಣ ನೀಡಿ ಖರೀದಿಸುವ ಅನಿವಾರ್ಯತೆ ಸೃಷ್ಟಿಯಾಗಿತ್ತು. ಇದರಿಂದ ಹಲವು ಹೋಟೆಲ್‌ಗಳು ಮುಚ್ಚಲ್ಪಟ್ಟಿದ್ದವು ಅಥವಾ ಮೆನುವಿನಿಂದ ಎಣ್ಣೆಯಲ್ಲಿ ಮಾಡುವ ತಿಂಡಿಗಳನ್ನು ತೆಗೆದುಹಾಕಿದ್ದವು.
ಈಗ ಮತ್ತೆ ದರ ಹೆಚ್ಚಳದಿಂದ ಹೋಟೆಲ್‌ಗಳು ಊಟ, ತಿಂಡಿ, ಕಾಫಿ, ಟೀ ಬೆಲೆಗಳನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ. ಆದಾಗ್ಯೂ ಗ್ರಾಹಕರು, ವಿಶೇಷವಾಗಿ ಕೂಲಿ ಕಾರ್ಮಿಕರ ಮೇಲೆ ಈ ಹೊರೆ ಹಾಕಲು ಹೋಟೆಲ್ ಮಾಲೀಕರು ಹಿಂಜರಿಯುತ್ತಿದ್ದಾರೆ. ಈ ಕ್ರಮವು ಪಂಚರಾಜ್ಯ ಚುನಾವಣೆಗಳ ನಂತರ ಕೇಂದ್ರ ಸರ್ಕಾರದಿಂದ ಬಂದ ಶಾಕ್ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಅಕ್ಬರ್ ಮತ್ತು ಅವನ ಪತ್ನಿಯ ವೀಡಿಯೋ ಕಾಲ್ನ ಸ್ಕ್ರೀನ್ ಶಾಟ್
ಬೆಂಗಳೂರು, ಮೇ 01: ಪರಪ್ಪನ ಅಗ್ರಹಾರ ಜೈಲಿನಲ್ಲಿ (Parappana agrahara) ಕೈದಿಗಳ ಐಷಾರಾಮಿ ಜೀವನ, ಕಳ್ಳಾಟಗಳ ಕುರಿತು ಸುದ್ದಿ ಹೊರಬರುವುದು ಹೊಸತೇನಲ್ಲ. ಅದೆಷ್ಟೇ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿ ಮಾಡಿದರೂ ಕೈದಿಗಳು ಮಾತ್ರ ತಮ್ಮ ಮನಸೋಇಚ್ಛೆ ಜೀವನ ನಡೆಸುತ್ತಿದ್ದಾರೆ. ಕೆಲವರು ಗ್ರ್ಯಾಂಡ್ ಆಗಿ ಬರ್ತ್ಡೇ ಆಚರಿಸಿಕೊಂಡರೆ ಇನ್ನೂ ಕೆಲವರು ಗಾಂಜಾ, ತಂಬಾಕು, ಸಿಮ್ ಕಾರ್ಡ್ ಸಾಗಾಟದಂತ ಅಕ್ರಮ ಚಟುವಟಿಗಳಲ್ಲಿ ತೊಡಗಿದ್ದೂ ಉಂಟು. ಅದೇ ರೀತಿ ಕೇಂದ್ರ ಕಾರಾಗ್ರಹದಲ್ಲಿ ಮತ್ತೊಮ್ಮೆ ವಿಚಾರಣಾಧೀನ ಕೈದಿಯೊಬ್ಬ ಸೆಲ್ನಲ್ಲಿ ಕುಳಿತೇ ತನ್ನ ಪತ್ನಿಗೆ ವೀಡಿಯೋ ಕಾಲ್ ಮಾಡಿರುವ ಘಟನೆ ಬಹಿರಂಗವಾಗಿದೆ. ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಬಯಲಾಯ್ತು ರಹಸ್ಯ
ವಿಚಾರಣಾಧೀನ ಖೈದಿಯಾಗಿದ್ದ ಅಕ್ಬರ್, ಜೈಲಿನ ಅಧಿಕಾರಿಗಳ ಕಣ್ಣು ತಪ್ಪಿಸಿ ಮೊಬೈಲ್ ಬಳಸುತ್ತಿದ್ದ ಎನ್ನಲಾಗಿದೆ. ಈತ ಜೈಲಿನ ಒಳಭಾಗದಿಂದಲೇ ಪತ್ನಿಗೆ ವಿಡಿಯೋ ಕಾಲ್ ಮಾಡಿ ಮಾತುಕತೆ ನಡೆಸಿದ್ದ. ಆಕೆಯ ಪತ್ನಿ ಈ ವಿಡಿಯೋ ಕಾಲ್ ಅನ್ನು ಸ್ಕ್ರೀನ್ ರೆಕಾರ್ಡ್ ಮಾಡಿ, ಏಪ್ರಿಲ್ 9 ರಂದು ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಳು. ಏಪ್ರಿಲ್ 28 ರಂದು ಅಕ್ಬರ್ ಜೈಲಿನಿಂದ ಬಿಡುಗಡೆಯಾಗಿದ್ದು, ಆತ ರಿಲೀಸ್ ಆದ ವಿಡಿಯೋವನ್ನೂ ಪತ್ನಿ ಹಂಚಿಕೊಂಡಿದ್ದಳು. ಸದ್ಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಆಕೆ ಇನ್‌ಸ್ಟಾದಿಂದ ವಿಡಿಯೋ ಡಿಲೀಟ್ ಮಾಡಿದ್ದಾಳೆ.
ವೈರಲ್ ವೀಡಿಯೋ ನೋಡಿ!
ಈ ಹಿಂದೆಯೂ ನಡೆದಿದ್ದವು ಸರಣಿ ಅಕ್ರಮಗಳು
ಪರಪ್ಪನ ಅಗ್ರಹಾರದಲ್ಲಿ ಇಂತಹ ಅಕ್ರಮಗಳು ಇದೇ ಮೊದಲೇನಲ್ಲ. ಕಳೆದ ವರ್ಷಗಳಿಂದ ಜೈಲು ಐಷಾರಾಮಿ ಸೌಲಭ್ಯಗಳ ತಾಣವಾಗಿ ಮಾರ್ಪಟ್ಟಿರುವ ಬಗ್ಗೆ ಸರಣಿ ಆರೋಪಗಳು ಕೇಳಿಬಂದಿದ್ದವು. ಕಳೆದ ನವೆಂಬರ್‌ನಲ್ಲಿ ಜೈಲಿನ ಒಳಗಿನ ಹೈಫೈ ಲೈಫ್ ವಿಡಿಯೋಗಳು ಹೊರಬಂದಾಗ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಪರಿಸ್ಥಿತಿ ಸುಧಾರಿಸಲು ಸರ್ಕಾರ ಅಂಶುಕುಮಾರ್ ಅವರನ್ನು ಮುಖ್ಯ ಅಧೀಕ್ಷಕರಾಗಿ ನೇಮಿಸಿತ್ತು.
ಈ ಹಿಂದೆ ಜೈಲಿನ ಟವರ್–1ರ 6ನೇ ಬ್ಯಾರಕ್ ಮೇಲೆ ದಾಳಿ ನಡೆಸಿದಾಗ 8 ಮೊಬೈಲ್ ಫೋನ್‌ಗಳು, ಸಿಮ್ ಕಾರ್ಡ್ ಮತ್ತು ಚಾರ್ಜರ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಕೇವಲ ಎರಡು ತಿಂಗಳ ಅವಧಿಯಲ್ಲಿ ಸುಮಾರು 200ಕ್ಕೂ ಹೆಚ್ಚು ಮೊಬೈಲ್‌ಗಳನ್ನು ಅಧಿಕಾರಿಗಳು ಸೀಜ್ ಮಾಡಿದ್ದರು. ಜನವರಿ 23ರಂದು ಕೈದಿ ಸೋಮಶೇಖರ್‌ನನ್ನು ಭೇಟಿಯಾಗಲು ಬಂದಿದ್ದ ಮಹಿಳೆಯೊಬ್ಬಳು 22,000 ರೂ. ನಗದು ನೀಡಲು ಯತ್ನಿಸಿ ಸಿಕ್ಕಿಬಿದ್ದಿದ್ದಳು. ಹಾಗೆಯೇ ಮಾರ್ಚ್ 26ರಂದು ರಿತಿಕಾ ರೈ ಎಂಬಾಕೆ ಕೈದಿ ಫರ್ಹಾನ್ ಖಾನ್‌ನನ್ನು ಭೇಟಿಯಾಗಲು ಬಂದಾಗ, ತನ್ನ ಖಾಸಗಿ ಭಾಗದಲ್ಲಿ ತಂಬಾಕು ಮತ್ತು 5G ಸಿಮ್ ಕಾರ್ಡ್ ಅಡಗಿಸಿಟ್ಟುಕೊಂಡು ಬಂದಿದ್ದು ತಪಾಸಣೆ ವೇಳೆ ಪತ್ತೆಯಾಗಿತ್ತು. ಈ ಎಲ್ಲಾ ಘಟನೆಗಳ ಬಳಿಕ ಮತ್ತೊಮ್ಮೆ ಇಂತಹದ್ದೇ ಕೇಸ್ ಹೊರಬಂದಿದ್ದು, ಜೈಲಿನ ಭದ್ರತಾ ವ್ಯವಸ್ಥೆ ಬಗ್ಗೆ ಪ್ರಶ್ನೆ ಮೂಡಿಸಿದೆ.
ಬೆಂಗಳೂರು (ಮೇ. 01): ಐಪಿಎಲ್ 2026 ರ 42 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಗುಜರಾತ್ ಟೈಟಾನ್ಸ್ ಪ್ಲೇಆಫ್ ಆಸೆಯನ್ನು ಬಲಪಡಿಸಿಕೊಂಡಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಈ ರೋಮಾಂಚಕ ಗೆಲುವು ಪಾಯಿಂಟ್ ಪಟ್ಟಿಯಲ್ಲಿ ಕೆಲ ಬದಲಾವಣೆಗೆ ಕಾರಣವಾಯಿತು. ಆದರೆ ಕುತೂಹಲಕಾರಿಯಾಗಿ, ಆರ್‌ಸಿಬಿ ತಂಡದ ಶ್ರೇಯಾಂಕದಲ್ಲಿ ಯಾವುದೇ ಪ್ರಮುಖ ಬದಲಾವಣೆಗಳಾಗಿಲ್ಲ.
ಗುಜರಾತ್ 5ನೇ ಸ್ಥಾನದಲ್ಲಿ ಮುಂದುವರೆದಿದೆ
ಹೊಸ ಪಾಯಿಂಟ್ಸ್ ಟೇಬಲ್ ಅನ್ನು ನೋಡುವುದಾದರೆ, ಗುಜರಾತ್ ಟೈಟಾನ್ಸ್ ಈ ಗೆಲುವಿನೊಂದಿಗೆ 10 ಅಂಕಗಳನ್ನು ತಲುಪಿದೆ. ಗುಜರಾತ್ ಇದುವರೆಗೆ ಒಂಬತ್ತು ಪಂದ್ಯಗಳನ್ನು ಆಡಿದ್ದು, ಐದು ಪಂದ್ಯಗಳನ್ನು ಗೆದ್ದು ನಾಲ್ಕರಲ್ಲಿ ಸೋತಿದೆ. ಜಿಟಿ ಐದನೇ ಸ್ಥಾನದಲ್ಲಿದ್ದರೂ, ಅಗ್ರ ನಾಲ್ಕು ತಂಡಗಳೊಂದಿಗೆ ಅವರ ಅಂತರವು ಗಮನಾರ್ಹವಾಗಿ ಕಡಿಮೆಯಾಗಿದೆ. ಗುಜರಾತ್‌ನ ನಿವ್ವಳ ರನ್ ದರ ಪ್ರಸ್ತುತ -0.192 ಆಗಿದ್ದು, ಮುಂಬರುವ ಪಂದ್ಯಗಳಲ್ಲಿ ಗೆಲುವು ಅನಿವಾರ್ಯವಾಗಿದೆ.
ಆರ್‌ಸಿಬಿ ಎರಡನೇ ಸ್ಥಾನದಲ್ಲಿ ಭದ್ರ
ಮತ್ತೊಂದೆಡೆ, ಈ ಸೋಲಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ದೊಡ್ಡ ಹಿನ್ನಡೆಯನ್ನು ಅನುಭವಿಸಿತು, ಆದರೆ ಇನ್ನೂ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಆರ್‌ಸಿಬಿ ತಮ್ಮ ಒಂಬತ್ತು ಪಂದ್ಯಗಳಲ್ಲಿ ಆರು ಪಂದ್ಯಗಳನ್ನು ಗೆದ್ದಿದೆ ಮತ್ತು ಮೂರರಲ್ಲಿ ಸೋತಿದೆ. +1.420 ರ ಬಲಿಷ್ಠ ನಿವ್ವಳ ರನ್ ದರದೊಂದಿಗೆ, ಆರ್‌ಸಿಬಿ ಇನ್ನೂ ಸುರಕ್ಷಿತ ಸ್ಥಾನದಲ್ಲಿದೆ, ಆದರೆ ಪಂಜಾಬ್ ಕಿಂಗ್ಸ್ ತಮ್ಮ ಸತತ ಗೆಲುವುಗಳೊಂದಿಗೆ ಅಗ್ರಸ್ಥಾನದಲ್ಲಿ ತಮ್ಮ ಹಿಡಿತವನ್ನು ಕಾಯ್ದುಕೊಂಡಿದೆ.
ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್ ಎಂಟು ಪಂದ್ಯಗಳಿಂದ 13 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ಕೂಡ ತಲಾ 12 ಅಂಕಗಳನ್ನು ಹೊಂದಿದ್ದು, ಆರ್‌ಸಿಬಿಗೆ ಸಮನಾಗಿದೆ, ಆದರೆ ರನ್ ರೇಟ್ ಆಧಾರದ ಮೇಲೆ ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿವೆ.
ಮುಂಬೈ ಮತ್ತು ಲಕ್ನೋದ ಸ್ಥಿತಿ ಕೆಟ್ಟದಾಗಿದೆ
ಕೊನೆಯ ಸ್ಥಾನದಲ್ಲಿರುವವರ ಪರಿಸ್ಥಿತಿ ಇನ್ನೂ ಚಿಂತಾಜನಕವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಲಾ 6 ಅಂಕಗಳೊಂದಿಗೆ ಆರು ಮತ್ತು ಏಳನೇ ಸ್ಥಾನದಲ್ಲಿದ್ದರೆ, ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಲಾ 4 ಅಂಕಗಳೊಂದಿಗೆ ಒಂಬತ್ತು ಮತ್ತು ಹತ್ತನೇ ಸ್ಥಾನದಲ್ಲಿ ಹೋರಾಡುತ್ತಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮೊರಾದಾಬಾದ್, ಮೇ 1: ರಸ್ತೆಯಲ್ಲಿ ಬುರ್ಖಾ ಧರಿಸಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ಕೊಟ್ಟಿದ್ದ ನೌಶಾದ್‌ನ ಕಾಲಿಗೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ನಡೆದಿದೆ. ಕತ್ಘರ್ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾದ ನೌಶಾದ್, ಓಣಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬುರ್ಖಾ ಧರಿಸಿದ ಮಹಿಳೆಯನ್ನು ಹಿಂದಿನಿಂದ ತಬ್ಬಿಕೊಂಡು ಅಲ್ಲಿಂದ ಪರಾಋಇಯಾಗಿದ್ದ. ಕುರ್ತಾ-ಪೈಜಾಮ ಮತ್ತು ಟೋಪಿ ಧರಿಸಿದ್ದ ವ್ಯಕ್ತಿಯನ್ನು ಕಾಣಬಹುದು. ಆತನ ಕೃತ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ತನಿಖೆ ಚುರುಕುಗೊಳಿಸಿದರು.
ಆರೋಪಿಗಾಗಿ ತಪಾಸಣೆ ನಡೆಸುತ್ತಿದ್ದಾಗ ನಡೆದ ಪೊಲೀಸ್ ಎನ್‌ಕೌಂಟರ್‌ನಲ್ಲಿ ನೌಶಾದ್‌ನ ಕಾಲಿಗೆ ಗುಂಡು ತಗುಲಿದೆ. ಗಾಯಗೊಂಡಿರುವ ಆತನನ್ನು ಸದ್ಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಕೈಗೊಂಡ ಈ ತ್ವರಿತ ಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಅಂತಾರಾಷ್ಟ್ರೀಯ ಕಾರ್ಮಿಕರ ದಿನImage Credit source: vecteezy
ಪ್ರತಿಯೊಂದು ದೇಶದ ಆರ್ಥಿಕ ಅಭಿವೃದ್ಧಿಯು ಆ ದೇಶದ ಕಾರ್ಮಿಕರ (Labour) ಮೇಲೆ ಅವಲಂಬಿತವಾಗಿರುತ್ತದೆ. ಹೌದು ರಸ್ತೆ ನಿರ್ಮಾಣಗಳಿಂದ ಹಿಡಿದು ದೊಡ್ಡ ದೊಡ್ಡ ಕಟ್ಟಡಗಳ ನಿರ್ಮಾಣಗಳ ವರೆಗೆ ಪ್ರತಿಯೊಂದು ಕೆಲಸವನ್ನು ಶ್ರಮವಹಿಸಿ ಮಾಡುವ ಮೂಲಕ ದೇಶದ ಪ್ರಗತಿಗೆ ಕಾರ್ಮಿಕರು ಕೊಡುಗೆ ನೀಡುತ್ತಾರೆ. ಕಾರ್ಮಿಕರು ಹಗಲು ರಾತ್ರಿ, ಬಿಸಿಲು-ಮಳೆ ಎನ್ನದೆ ಸಮರ್ಪಣಾ ಭಾವದಿಂದ ಕಠಿಣ ಶ್ರಮ ವಹಿಸಿ ದುಡಿಯುತ್ತಾರೆ. ಇವರು ತಮ್ಮ ಶ್ರಮದ ಮೂಲಕ ಸಮಾಜ ಮತ್ತು ಆರ್ಥಿಕತೆಯ ಅಡಿಪಾಯವನ್ನು ಬಲಪಡಿಸುತ್ತಾರೆ. ಹೀಗೆ ಸಮಾಜ ಮತ್ತು ಆರ್ಥಿಕತೆಯನ್ನು ಮುನ್ನಡೆಸಲು ಶ್ರಮಿಸಿದ ಕಾರ್ಮಿಕರು ಮತ್ತು ಕಾರ್ಮಿಕ ವರ್ಗವನ್ನು ಗೌರವಿಸಲು ಪ್ರತಿ ವರ್ಷ ಮೇ 1 ರಂದು ಪ್ರಪಂಚದಾದ್ಯಂತ ಅಂತರರಾಷ್ಟ್ರೀಯ ಕಾರ್ಮಿಕ ದಿನವನ್ನು ಆಚರಿಸಲಾಗುತ್ತದೆ. ಶ್ರಮಜೀವಿಗಳಿಗೆ ಸಮರ್ಪಿಸಲಾದ ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.
ಅಂತಾರಾಷ್ಟ್ರೀಯ ಕಾರ್ಮಿಕರ ದಿನದ ಇತಿಹಾಸವೇನು?
ಪ್ರತಿ ವರ್ಷ ಮೇ 1 ರಂದು ಆಚರಿಸಲಾಗುವ ಕಾರ್ಮಿಕರ ದಿನವು 19 ನೇ ಶತಮಾನದ ಉತ್ತರಾರ್ಧದಲ್ಲಿ ಅಮೇರಿಕನ್ ಕಾರ್ಮಿಕ ಚಳುವಳಿಯೊಂದಿಗೆ ಪ್ರಾರಂಭವಾಯಿತು. ಮೇ 1, 1886 ರಂದು, 15 ಗಂಟೆಗಳ ಕಾಲ ಇದ್ದ ಕೆಲಸದ ಸಮಯವನ್ನು 8 ಗಂಟೆಗಳ ಅವಧಿಗೆ ತರಬೇಕು ಎಂಬ ಬೇಡಿಕೆಯೊಂದಿದೆ ಕಾರ್ಮಿಕರು ಅಮೆರಿಕದ ಚಿಕಾಗೋ ನಗರದಲ್ಲಿ ಮುಷ್ಕರವನ್ನು ಪ್ರಾರಂಭಿಸಿದರು. ನಂತರ ಈ ಪ್ರತಿಭಟನೆ ಚಿಕಾಗೋದ ಹೇಮಾರ್ಕೆಟ್ ಪ್ರದೇಶದಲ್ಲಿ ಹಿಂಸಾತ್ಮಕವಾಗಿ ಮಾರ್ಪಟ್ಟಿತು. ಈ ಘಟನೆಯಲ್ಲಿ ಏಳು ಪೊಲೀಸರು ಮತ್ತು ನಾಲ್ವರು ನಾಗರಿಕರು ಪ್ರಾಣ ಕಳೆದುಕೊಂಡರು. ಈ ಘಟನೆಯ ಸ್ಮರಣಾರ್ಥವಾಗಿ, ಮೇ 1 ಅನ್ನು ಅಂತಾರಾಷ್ಟ್ರೀಯ ಕಾರ್ಮಿಕರ ದಿನವನ್ನಾಗಿ ಆಚರಿಸಲು ಪ್ರಾರಂಭಿಸಲಾಯಿತು. 1889 ರಲ್ಲಿ, ಯುರೋಪಿನ ಅನೇಕ ಸಮಾಜವಾದಿ ಪಕ್ಷಗಳು ಮೇ 1 ಅನ್ನು ಅಂತಾರಾಷ್ಟ್ರೀಯ ಕಾರ್ಮಿಕರ ದಿನವನ್ನಾಗಿ ಆಚರಿಸಲು ಒಟ್ಟಾಗಿ ಬಂದವು. ಅಂದಿನಿಂದ ಪ್ರತಿ ವರ್ಷ ಈ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಭಾರತದಲ್ಲಿ ಕಾರ್ಮಿಕರ ದಿನ ಆರಂಭವಾದದ್ದು ಯಾವಾಗ?
ಭಾರತದಲ್ಲಿ ಮೊದಲ ಬಾರಿಗೆ ಕಾರ್ಮಿಕರ ದಿನವನ್ನು 1923 ರಲ್ಲಿ ಆಚರಿಸಲಾಯಿತು. ಈ ದಿನವನ್ನು ಕಮ್ಯುನಿಸ್ಟ್ ನಾಯಕ ಸಿಂಗಾರವೇಲು ಚೆಟ್ಟಿಯಾರ್ ಅವರು ಚೆನ್ನೈನಲ್ಲಿ ಪ್ರಾರಂಭಿಸಿದರು. ಕಾರ್ಮಿಕರ ಹಕ್ಕುಗಳು ಮತ್ತು ರಕ್ಷಣೆಯ ಬಗ್ಗೆ ಒತ್ತಾಯಿಸಿ ಅವರು ಮದ್ರಾಸ್ ಹೈಕೋರ್ಟ್ ಮುಂದೆ ಮೊದಲ ಕಾರ್ಮಿಕ ದಿನಾಚರಣೆಯ ಸಭೆಯನ್ನು ಆಯೋಜಿಸಿದರು. ಈ ಸಭೆಯಲ್ಲಿ, ಭಾರತದಲ್ಲಿ ಮೊದಲ ಬಾರಿಗೆ ಕಾರ್ಮಿಕರ ದಿನವನ್ನು ಆಚರಿಸಲಾಯಿತು.
ಅಂತಾರಾಷ್ಟ್ರೀಯ ಕಾರ್ಮಿಕರ ದಿನದ ಉದ್ದೇಶವು ಕಾರ್ಮಿಕರ ಕಠಿಣ ಪರಿಶ್ರಮವನ್ನು ಗುರುತಿಸುವುದು ಮಾತ್ರವಲ್ಲದೆ, ಶೋಷಣೆಯನ್ನು ತಪ್ಪಿಸಲು ಅವರ ಹಕ್ಕುಗಳ ಬಗ್ಗೆ ಅವರಿಗೆ ಶಿಕ್ಷಣ ನೀಡುವುದಾಗಿದೆ.
ಈ ದಿನವು ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವ ಅಗತ್ಯತೆ ಮತ್ತು ಕಾರ್ಮಿಕರಿಗೆ ಉತ್ತಮ ಕೆಲಸದ ಪರಿಸ್ಥಿತಿಗಳ ಮೇಲೆ ಕೇಂದ್ರೀಕರಿಸುತ್ತದೆ.
ಈ ದಿನವು ನ್ಯಾಯಯುತ ವೇತನ, ಸುರಕ್ಷಿತ ಕೆಲಸದ ವಾತಾವರಣ, ನ್ಯಾಯಯುತ ಕೆಲಸದ ಸಮಯ ಮತ್ತು ಶೋಷಣೆ ನಿರ್ಮೂಲನೆಯ ಅಗತ್ಯವನ್ನು ಎತ್ತಿ ತೋರಿಸುತ್ತದೆ.
ಈ ದಿನದ ಸಂದರ್ಭದಲ್ಲಿ, ಕಾರ್ಮಿಕರ ಕೊಡುಗೆಯನ್ನು ಗೌರವಿಸಲು ಮತ್ತು ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಅನೇಕ ಸ್ಥಳಗಳಲ್ಲಿ ರ್ಯಾಲಿಗಳು ಮತ್ತು ವಿಚಾರ ಸಂಕಿರಣಗಳನ್ನು ಆಯೋಜಿಸಲಾಗುತ್ತದೆ.
ಜ್ಯೋತಿಷ್ಯದಲ್ಲಿ ಶನಿ ಗ್ರಹವು ಅತ್ಯಂತ ಪ್ರಭಾವಶಾಲಿ ಗ್ರಹಗಳಲ್ಲಿ ಒಂದಾಗಿದೆ. ಶನಿ ಎಂದರೆ ಬಹುತೇಕರಿಗೆ ಒಂದು ರೀತಿಯ ಭಯ, ಭಕ್ತಿ, ಶ್ರದ್ಧೆ ಮತ್ತು ವಿನಯದ ಭಾವ ಮೂಡುವುದು ಸಹಜ. ಶನಿಯು ಕರ್ಮಫಲದಾತನಾಗಿದ್ದು, ಒಬ್ಬರ ಕರ್ಮಗಳಿಗೆ ತಕ್ಕಂತೆ ಫಲವನ್ನು ನೀಡುತ್ತಾನೆ ಎಂಬ ನಂಬಿಕೆ ಇದೆ. ಸಾಡೆ ಸಾತಿ, ಅರ್ಧಾಷ್ಟಮ ಶನಿ, ಪಂಚಮ ಶನಿ, ಅಷ್ಟಮ ಶನಿ ಮುಂತಾದ ಶನಿ ಪ್ರಭಾವದ ಅವಧಿಗಳಲ್ಲಿ ವ್ಯಕ್ತಿಗಳು ಹಲವು ಕಷ್ಟ-ನಷ್ಟಗಳನ್ನು ಅನುಭವಿಸಬೇಕಾಗುತ್ತದೆ. ದುಸ್ಥಾನಗಳಲ್ಲಿ ಶನಿ ಇದ್ದಾಗ ಅಥವಾ ಶನಿಯ ದೃಷ್ಟಿ ಇದ್ದಾಗ ಸಮಸ್ಯೆಗಳು ಉಲ್ಬಣಿಸಬಹುದು. ಶನಿ ಕಾಟ ದೇವಾನು ದೇವತೆಗಳಿಗೂ ತಪ್ಪಿದ್ದಲ್ಲ ಎಂಬುದನ್ನು ಶಾಸ್ತ್ರಗಳು ಹೇಳುತ್ತವೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.
ಗುರೂಜಿಯವರು ಹೇಳುವಂತೆ, ಸೂರ್ಯ ಮತ್ತು ಛಾಯಾದೇವಿ ಪುತ್ರನಾದ ಶನಿ, ಕಪ್ಪು ಮತ್ತು ನೀಲಿ ವರ್ಣದವನಾಗಿದ್ದು, ಕಾಗೆಯನ್ನು ತನ್ನ ವಾಹನವಾಗಿ ಹೊಂದಿದ್ದಾನೆ. ಶನಿವಾರದಂದು ಎಳ್ಳು ದಾನ, ಎಳ್ಳೆಣ್ಣೆ ದೀಪ ಹಚ್ಚುವುದು, ಕಪ್ಪು ಬಟ್ಟೆ ಧರಿಸುವುದು ಮುಂತಾದವು ಶನಿ ಪ್ರಭಾವವನ್ನು ಕಡಿಮೆ ಮಾಡಲು ಸಾಮಾನ್ಯವಾಗಿ ಅನುಸರಿಸುವ ವಿಧಾನಗಳಾಗಿವೆ. ಸತ್ಯ ಹರಿಶ್ಚಂದ್ರ, ನಳ ಮಹಾರಾಜ, ದಶರಥ, ವಿಕ್ರಮಾದಿತ್ಯ, ರಾವಣರಂತಹ ಮಹಾರಾಜರೂ ಶನಿಯ ದೃಷ್ಟಿಗೆ ಬಿದ್ದವರೇ. ಆದರೆ ಈ ಕಲಿಯುಗದಲ್ಲಿ ಶನಿ ಕಾಟದಿಂದ ಹೊರಬರಲು ಯಾವುದೇ ಖರ್ಚಿಲ್ಲದ ಒಂದು ಸೂಕ್ಷ್ಮ ತಂತ್ರವಿದೆ ಎಂದು ಜ್ಯೋತಿಷ್ಯ ತಿಳಿಸುತ್ತದೆ.
ಶನಿ ಭಗವಾನರು ಸಂಚಾರಿ, ಅವರು ಎಲ್ಲೆಡೆಯೂ ಸಂಚರಿಸುತ್ತಾ ಎಲ್ಲರ ಕರ್ಮಗಳನ್ನು ಪರಿಶೀಲಿಸುತ್ತಾರೆ ಎಂಬ ನಂಬಿಕೆ ಇದೆ. ಶನಿಗೆ ಪೂಜೆ, ಜಪ ಅಥವಾ ಎಣ್ಣೆ ದೀಪ ಹಚ್ಚುವ ಸಾಂಪ್ರದಾಯಿಕ ವಿಧಾನಗಳ ಜೊತೆಗೆ, ಒಂದು ಸರಳ ತಂತ್ರವನ್ನು ಅನುಸರಿಸಬಹುದು. ಅದು ವ್ಯಾಪಾರ ವೃದ್ಧಿ, ಉತ್ತಮ ಆರೋಗ್ಯ, ಅಪವಾದಗಳಿಂದ ಮುಕ್ತಿ, ಕಾನೂನು ವಿಷಯಗಳಲ್ಲಿ ಜಯ, ರಾಜಕೀಯ ಪ್ರಗತಿ, ಹಿತ ಶತ್ರುಗಳು ಮಿತ್ರರಾಗುವುದು ಹಾಗೂ ಕುಟುಂಬದಲ್ಲಿ ಪ್ರೀತಿ ಹೆಚ್ಚುವುದಕ್ಕೆ ಸಹಕಾರಿಯಾಗಿದೆ. ಸಾಡೆ ಸಾತಿ ಇರುವವರು ಸಹ ಉನ್ನತ ಸ್ಥಾನಗಳನ್ನು ತಲುಪಿದ ನಿದರ್ಶನಗಳು ಇವೆ.
ಈ ವಿಶೇಷ ತಂತ್ರವೆಂದರೆ: ಪ್ರತಿದಿನ ಬೆಳಿಗ್ಗೆ ಅಥವಾ ಸೂರ್ಯಾಸ್ತದ ಸಮಯದಲ್ಲಿ, ಚಪ್ಪಲಿ ಧರಿಸದೆ, ಭೂಮಿಯ ಮೇಲೆ ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿ ಸುಮಾರು ಅರ್ಧ ಘಂಟೆ ಕಾಲ ನಡೆಯುವುದು. ಈ ಸಮಯದಲ್ಲಿ ಯಾವುದೇ ಯೋಚನೆ ಮಾಡದೆ, ಸಾಧ್ಯವಾದರೆ ಓಂ ಶಂ ಶನೇಶ್ಚರಾಯ ನಮಃ ಎಂದು ಜಪಿಸುತ್ತಾ ನಡೆಯಬಹುದು. ಹೀಗೆ ಬರಿಗಾಲಿನಲ್ಲಿ ನಡೆಯುವುದರಿಂದ ಶನಿಯ ಕಾಟವು ಕ್ರಮೇಣ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ.
ಇದೇ ಅಭ್ಯಾಸವನ್ನು ಆಧುನಿಕ ಮಹನೀಯರೂ ಅನುಸರಿಸಿದ್ದಾರೆ. ಉದಾಹರಣೆಗೆ, ಸರ್ ಎಂ. ವಿಶ್ವೇಶ್ವರಯ್ಯನವರು ಗಂಟೆಗಟ್ಟಲೆ ಮೈಲುಗಟ್ಟಲೆ ನಡೆಯುತ್ತಿದ್ದರು. ಇತ್ತೀಚಿನ ನಡೆದಾಡುವ ದೇವರು ಡಾ. ಶಿವಕುಮಾರ ಮಹಾಸ್ವಾಮಿಗಳು ಕೂಡ ತಮ್ಮ ಅಂತಿಮ ದಿನಗಳಲ್ಲಿಯೂ ಆಸರೆ ಇಲ್ಲದೆ ನಡೆದಾಡುತ್ತಿದ್ದರು. ವೈಜ್ಞಾನಿಕವಾಗಿ ನಡೆಯುವುದು ದೇಹಕ್ಕೆ ಉತ್ತಮವಾದರೆ, ಆಧ್ಯಾತ್ಮಿಕವಾಗಿ ಇದು ಶನಿಯ ಅಶುಭ ಪ್ರಭಾವವನ್ನು ಕಡಿಮೆ ಮಾಡುತ್ತದೆ. ಹಾಗಾಗಿ, ಸ್ವಲ್ಪ ಸಮಯ ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಿ ಬರಿಗಾಲಿನಲ್ಲಿ ನಡೆಯುವ ಅಭ್ಯಾಸ ಮಾಡಿಕೊಳ್ಳುವುದು ಶನಿಯ ಅವಕೃಪೆಯಿಂದ ದೂರವಿರಲು ಸಹಾಯಕವಾಗಿದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ