ಬೆಂಗಳೂರಿನ ಆಸ್ತಿ ಮಾಲೀಕರಿಗೆ ಬಿಗ್ ರಿಲೀಫ್: ಆಸ್ತಿ ತೆರಿಗೆ ಪಾವತಿಯ ಶೇ 5ರ ರಿಯಾಯಿತಿ ಮೇ 31ರವರೆಗೆ ವಿಸ್ತರಣೆ – Kannada News | Bengaluru Property Tax: Government Extends 5 percent Rebate Deadline Until 31 May 2026

ಬೆಂಗಳೂರು, ಮೇ 1: ಬೆಂಗಳೂರಿನ ಆಸ್ತಿ ಮಾಲೀಕರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. ಆಸ್ತಿ ತೆರಿಗೆ (Property Tax) ಪಾವತಿಯ ಮೇಲೆ ನೀಡಲಾಗುತ್ತಿದ್ದ ಶೇ 5ರಷ್ಟು ರಿಯಾಯಿತಿ (Rebate) ಅವಧಿಯನ್ನು 2026ರ ಮೇ 31ರವರೆಗೆ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ. ಈ ನಿರ್ಧಾರದಿಂದ ಗ್ರೇಟರ್ ಬೆಂಗಳೂರು ಪ್ರದೇಶದ (GBA) ಐದು ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿರುವ ಸುಮಾರು 25 ಲಕ್ಷ ಆಸ್ತಿ ಮಾಲೀಕರಿಗೆ ನೇರ ಪ್ರಯೋಜನವಾಗಲಿದೆ.

ಆಸ್ತಿ ತೆರಿಗೆ ರಿಯಾಯಿತಿ ವಿಸ್ತರಣೆಗೆ ಕಾರಣವೇನು?

ಸಾಮಾನ್ಯವಾಗಿ ಏಪ್ರಿಲ್ ಅಂತ್ಯಕ್ಕೆ ಈ ರಿಯಾಯಿತಿ ಅವಧಿ ಮುಕ್ತಾಯವಾಗುತ್ತಿತ್ತು. ಆದರೆ, ಆಸ್ತಿ ತೆರಿಗೆ ಪಾವತಿ ಪ್ರಕ್ರಿಯೆಯಲ್ಲಿ ಉಂಟಾಗಿದ್ದ ಗೊಂದಲಗಳ ಕುರಿತು ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಶನ್ (BAF) ಸೇರಿದಂತೆ ಹಲವು ಸಂಘಟನೆಗಳು ಕಳವಳ ವ್ಯಕ್ತಪಡಿಸಿದ್ದವು. ವಿಶೇಷವಾಗಿ ಬಲ್ಕ್ ವೇಸ್ಟ್ ಜನರೇಟರ್‌ಗಳ ವರ್ಗೀಕರಣದಲ್ಲಿನ ಅಸ್ಪಷ್ಟತೆಯಿಂದಾಗಿ ತೆರಿಗೆ ಪಾವತಿಸಲು ಮಾಲೀಕರು ವಿಳಂಬ ಮಾಡಿದ್ದರು. ಇದಲ್ಲದೆ, ಮೇ ತಿಂಗಳಲ್ಲಿ ಶಾಲಾ ಶುಲ್ಕದಂತಹ ಪ್ರಮುಖ ಗೃಹ ವೆಚ್ಚಗಳು ಬರುವುದರಿಂದ, ಈ ರಿಯಾಯಿತಿ ಅವಧಿಯನ್ನು ವಿಸ್ತರಿಸಬೇಕೆಂದು ಸಾರ್ವಜನಿಕರಿಂದ ಬೇಡಿಕೆ ವ್ಯಕ್ತವಾಗಿತ್ತು. ಇದಕ್ಕೆ ಸರ್ಕಾರ ಸ್ಪಂದಿಸಿದೆ.

ಆದಾಯ ಸಂಗ್ರಹದಲ್ಲಿ ಕುಸಿತ

ಜಿಬಿಎ (GBA) ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ತೆರಿಗೆ ಸಂಗ್ರಹದಲ್ಲಿ ಸುಮಾರು 500 ಕೋಟಿ ರೂಪಾಯಿಗಳ ಕೊರತೆ ಕಂಡುಬಂದಿದೆ. ಕಳೆದ ವರ್ಷ ಸುಮಾರು 1,500 ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗಿತ್ತು. ಏಪ್ರಿಲ್ 16 ರಂದು ತೆರಿಗೆ ಪಾವತಿಯಲ್ಲಿದ್ದ ತಾಂತ್ರಿಕ ಗೊಂದಲಗಳನ್ನು ಸರಿಪಡಿಸಲಾಗಿದ್ದರೂ, ನಿರೀಕ್ಷಿತ ಮಟ್ಟದಲ್ಲಿ ತೆರಿಗೆ ಪಾವತಿಯಾಗಿಲ್ಲ. ಹೀಗಾಗಿ, ಹೆಚ್ಚಿನ ಸಮಯ ನೀಡುವುದರಿಂದ ಮಾಲೀಕರು ತೆರಿಗೆ ಪಾವತಿಸಲು ಆಸಕ್ತಿ ತೋರಿಸುತ್ತಾರೆ ಮತ್ತು ಪಾಲಿಕೆಯ ಆದಾಯದ ಕೊರತೆಯನ್ನು ನೀಗಿಸಬಹುದು ಎಂದು ಅಧಿಕಾರಿಗಳು ಆಶಿಸಿದ್ದಾರೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಮನೇಲಿದ್ದಾಗ್ಲೇ ಕಂಪೌಂಡ್ ಮೇಲೆ ಬಿದ್ದ ಮರದ ಕೊಂಬೆಗಳು, ಕಬ್ಬಿಣದ ವಾಲ್‌ಗಳು! ತಪ್ಪಿದ ಅನಾಹುತ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

GT vs RCB, IPL 2026: ಮುಲಾಜಿಲ್ಲದೆ ಸೋಲಿಗೆ ಯಾರು ಕಾರಣ ಎಂದು ಖಡಕ್ ಆಗಿ ಹೇಳಿದ ರಜತ್ ಪಾಟಿದಾರ್ – Kannada News | Rajat Patidar Post Match Statement He said who was responsible for the defeat vs Gujarat

ಬೆಂಗಳೂರು (ಮೇ. 01): ಐಪಿಎಲ್ 2026 ರಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಗುಜರಾತ್ ಟೈಟಾನ್ಸ್ ತಮ್ಮ ಹಿಂದಿನ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡಿತು. ಸೋಲಿನ ನಂತರ, ಆರ್‌ಸಿಬಿ ನಾಯಕ ರಜತ್ ಪಾಟಿದಾರ್ (Rajat Patidar) ತಮ್ಮ ತಂಡದ ಬ್ಯಾಟಿಂಗ್ ಮತ್ತು ಮಧ್ಯಮ ಓವರ್‌ಗಳಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡಿರುವುದು ಸೋಲಿಗೆ ಪ್ರಮುಖ ಕಾರಣ ಎಂದು ಹೇಳಿದರು. ಗುಜರಾತ್ ವಿರುದ್ಧ 155 ರನ್‌ಗಳಿಗೆ ಸೀಮಿತವಾದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಋತುವಿನ ಮತ್ತೊಂದು ಸೋಲನ್ನು ಎದುರಿಸಿತು. ಪೋಸ್ಟ್ ಮ್ಯಾಚ್​​ನಲ್ಲಿ ರಜತ್ ತಮ್ಮ ತಂಡದ ತಪ್ಪುಗಳನ್ನು ಒಪ್ಪಿಕೊಂಡರು, ಜೊತೆಗೆ ಬೌಲರ್‌ಗಳ ಹೋರಾಟದ ಮನೋಭಾವ ಮತ್ತು ಭುವನೇಶ್ವರ್ ಕುಮಾರ್ ಅವರ ಬೌಲಿಂಗ್ ಅನ್ನೂ ಹೊಗಳಿದರು.

ಸ್ಕೋರ್‌ಬೋರ್ಡ್‌ನಲ್ಲಿ ಕಡಿಮೆ ರನ್‌- ಮಧ್ಯಮ ಕ್ರಮಾಂಕ ವಿಫಲ

ಪಂದ್ಯದ ನಂತರ ರಜತ್ ಪಾಟಿದಾರ್ ಅವರು ಗೆಲುವಿಗೆ ಒಟ್ಟು 155 ರನ್‌ಗಳು ಸಾಕಾಗಲಿಲ್ಲ ಎಂದು ಹೇಳಿದರು. ಮಧ್ಯಮ ಓವರ್‌ಗಳಲ್ಲಿ ತಂಡವು ನಿಯಮಿತ ಅಂತರದಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡಿತು, ಇದು ಹಿನ್ನಡೆಯನ್ನುಂಟುಮಾಡಿತು ಎಂದು ಒಪ್ಪಿಕೊಂಡರು. ಪಾಟಿದಾರ್ ಪ್ರಕಾರ, ಪಿಚ್ ಉತ್ತಮ ಹುಲ್ಲಿನ ಪದರವನ್ನು ಹೊಂದಿತ್ತು, ಇದು ವೇಗದ ಬೌಲರ್‌ಗಳಿಗೆ ಸಹಾಯ ಮಾಡಿತು, ಆದರೆ ಬ್ಯಾಟ್ಸ್‌ಮನ್‌ಗಳು ಅದನ್ನು ಬಳಸಿಕೊಳ್ಳಲು ವಿಫಲರಾದರು.

ಪವರ್‌ಪ್ಲೇನಲ್ಲಿಯೇ ಶುಭ್​​ಮನ್ ಗಿಲ್ ಪಂದ್ಯವನ್ನು ಗೆಲ್ಲಿಸಿದರು

ಗುಜರಾತ್ ತಂಡದ ನಾಯಕ ಶುಭ್​ಮನ್ ಗಿಲ್ ಅವರನ್ನು ಆರ್‌ಸಿಬಿ ನಾಯಕ ಶ್ಲಾಘಿಸಿದ್ದಾರೆ. ಪವರ್‌ಪ್ಲೇನಲ್ಲಿ ಗಿಲ್ ಅವರ ಅದ್ಭುತ ಬ್ಯಾಟಿಂಗ್ ಬೆಂಗಳೂರು ತಂಡದ ಮೇಲೆ ಅಗಾಧ ಒತ್ತಡವನ್ನುಂಟುಮಾಡಿದೆ ಎಂದು ಅವರು ಹೇಳಿದರು. ಆದಾಗ್ಯೂ, ತಮ್ಮ ತಂಡವು ಬಿಟ್ಟುಕೊಡಲಿಲ್ಲ ಮತ್ತು ಇಷ್ಟು ಸಣ್ಣ ಗುರಿಯ ಹೊರತಾಗಿಯೂ ಪಂದ್ಯವನ್ನು 16 ನೇ ಓವರ್‌ಗೆ ಎಳೆಯುವಲ್ಲಿ ಯಶಸ್ವಿಯಾಗಿದೆ ಎಂದು ಪಾಟಿದಾರ್ ಸಂತೋಷಪಟ್ಟರು. ಇದು ತಂಡಕ್ಕೆ ಸಕಾರಾತ್ಮಕ ಸಂಕೇತ ಎಂದು ಅವರು ಹೇಳಿದರು.

GT vs RCB: ಗಿಲ್ ಔಟಾದಾಗ ವಿರಾಟ್ ವಿಚಿತ್ರ ಸೆಲೆಬ್ರೇಷನ್: ಕೊಹ್ಲಿ ನಡೆಗೆ ಭಾರೀ ವಿರೋಧ

ಭುವನೇಶ್ವರ್ ಕುಮಾರ್ ಪರ್ಪಲ್ ಕ್ಯಾಪ್ ಮ್ಯಾಜಿಕ್

ಈ ಪಂದ್ಯದ ಪ್ರಮುಖ ಸಕಾರಾತ್ಮಕ ಅಂಶವೆಂದರೆ ಭುವನೇಶ್ವರ್ ಕುಮಾರ್ ಅವರ ಅತ್ಯುತ್ತಮ ಬೌಲಿಂಗ್‌ಗಾಗಿ ಪರ್ಪಲ್ ಕ್ಯಾಪ್ ಗಳಿಸಿದ ಪ್ರದರ್ಶನ. “ಟಿ 20 ಸ್ವರೂಪದಲ್ಲಿ ಭುವಿ ಎಷ್ಟು ಅನುಭವಿ ಎಂದು ನಮಗೆಲ್ಲರಿಗೂ ತಿಳಿದಿದೆ. ಅವರು ತಮ್ಮ ಆರಂಭಿಕ ಸ್ಪೆಲ್‌ನಲ್ಲಿ ಬೌಲಿಂಗ್ ಮಾಡಿದ ರೀತಿ ಅದ್ಭುತವಾಗಿತ್ತು.” ಲೀಗ್ ದೀರ್ಘವಾಗಿದೆ, ನಾವು ಒಂದೊಂದೇ ಪಂದ್ಯದ ಮೇಲೆ ಕೇಂದ್ರೀಕರಿಸುತ್ತಿದ್ದೇವೆ ಎಂದು ಪಾಟಿದಾರ್ ಹೇಳಿದರು.

ಟೇಬಲ್‌ನಲ್ಲಿನ ಸ್ಥಾನದ ಬಗ್ಗೆ ರಜತ್ ಏನು ಹೇಳಿದರು?

ಸೋಲಿನ ಹೊರತಾಗಿಯೂ, ಆರ್‌ಸಿಬಿ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಪಾಟಿದಾರ್ ಅವರು, ಪ್ರಸ್ತುತ ನಾವು ಅಂಕಗಳ ಮೇಲೆ ಕೇಂದ್ರೀಕರಿಸಿಲ್ಲ ಎಂದು ಹೇಳಿದರು. ನಮ್ಮ ಗಮನ ಮೈದಾನದಲ್ಲಿ ಉತ್ತಮ ಕ್ರಿಕೆಟ್ ಆಡುವುದಾಗಿದೆ. ಮುಂಬರುವ ಪಂದ್ಯಗಳಲ್ಲಿ ತಂಡವು ಭರ್ಜರಿ ಆಗಿ ಕಮ್​ಬ್ಯಾಕ್ ಮಾಡಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Bengaluru Air Quality: ಬೆಳಗಾವಿ ಸೇರಿದಂತೆ ವಿಜಯಪುರದ ಏರ್ ಕ್ವಾಲಿಟಿಯಲ್ಲೂ ಸುಧಾರಣೆ! – Kannada News | Bangalore Air Pollution Crisis: Belagavi and Vijayapura Air Quality is better than most cities

ಬೆಳಗಾವಿ ಸೇರಿದಂತೆ ವಿಜಯಪುರದ ಏರ್ ಕ್ವಾಲಿಟಿಯಲ್ಲೂ ಸುಧಾರಣೆ!

ಬೆಂಗಳೂರು, ಮೇ 01: ರಾಜ್ಯದಲ್ಲಿ ಬೆಳಗಾವಿ, ವಿಜಯಪುರ ಏರ್ ಕ್ವಾಲಿಟಿ (Bengaluru Air Quality) ತಕ್ಕಮಟ್ಟಿಗೆ ಸುಧಾರಿಸಿದೆ. ಆದರೂ ಬೆಂಗಳೂರಿನ ವಾಯು ಗುಣಮಟ್ಟ ಅಪಾಯಕಾರಿ ಮಟ್ಟದಲ್ಲಿಯೇ ಇದೆ ಎಂದು ತಜ್ಞರು ಹೇಳುತ್ತಾರೆ. ಬೆಳಗಾವಿಯ ವಾಯು ಗುಣಮಟ್ಟ ಇಂದು ಭಾರೀ ಸುಧಾರಣೆ ಕಂಡಿದ್ದು, ಉಳಿದೆಡೆಗಿಂತ ಎಷ್ಟೋ ಉತ್ತಮವಾಗಿದೆ ಎನ್ನಲಾಗಿದೆ. ಬೆಂಗಳೂರಿನ AQI ಸಧ್ಯಕ್ಕೆ ಒಳ್ಳೆಯ ಮಟ್ಟದಲ್ಲಿದ್ದು, ಆದರೂ ಬೆಂಗಳೂರಿನ ವಾಯು ಗುಣಮಟ್ಟ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಬೆಳಗಾವಿಯ ಏರ್ ಕ್ವಾಲಿಟಿ ಇಂದು ಕೇವಲ 64ರಷ್ಟಿದ್ದು, ಅತ್ಯಂತ ಒಳ್ಳೆಯ ಗುಣಮಟ್ಟದಲ್ಲಿದೆ. ಮಂಗಳೂರಿನಲ್ಲಿ ಕೆಲ ತಿಂಗಳ ಹಿಂದೆ ವಾಯು ಗುಣಮಟ್ಟ ಅಪಾಯಕಾರಿ ಮಟ್ಟಕ್ಕೆ ಇಳಿದಿತ್ತು. ಹಲವು ಬಾರಿ 200ರ ಗಡಿ ತಲುಪಿತ್ತು. ಆದರೆ ಇತ್ತೀಚೆಗೆ AQI ಸುಧಾರಣೆ ಕಂಡುಬಂದಿತ್ತು. ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 102ಕ್ಕೆ ತಲುಪಿದೆ. ಮಂಗಳೂರು ಮತ್ತು ಉಡುಪಿಯ AQI 100ಕ್ಕಿಂತ ಹೆಚ್ಚಿದ್ದು, ಅನಾರೋಗ್ಯಕರ ಮಟ್ಟದಲ್ಲಿದೆ. ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು – 102
  • ಮಂಗಳೂರು-110
  • ಮೈಸೂರು – 92
  • ಬೆಳಗಾವಿ – 64
  • ಕಲಬುರ್ಗಿ-86
  • ಶಿವಮೊಗ್ಗ –107
  • ಬಳ್ಳಾರಿ – 96
  • ಹುಬ್ಬಳ್ಳಿ- 81
  • ಉಡುಪಿ –109
  • ವಿಜಯಪುರ – 88

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೇಕ್ ಕಿರಿಕ್: ಜಿಮ್‌ನಲ್ಲಿ ಮೂವರನ್ನು ಹತ್ಯೆಗೈದಿದ್ದ ವ್ಯಕ್ತಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಸಾವು – Kannada News | Uttar Pradesh: Jeetu Saini, Gym Triple Murder Suspect Over Birthday Cake, Killed in Police Encounter

ಬುಲಂದ್‌ಶಹರ್, ಮೇ 01: ಕೇಕ್ ವಿಚಾರಕ್ಕೆ ಜಗಳವಾಡಿ ಜಿಮ್​​ನಲ್ಲಿ ಮೂವರನ್ನು ಹತ್ಯೆ(Murder)ಗೈದಿದ್ದ ವ್ಯಕ್ತಿ ಪೊಲೀಸ್ ಎನ್​ಕೌಂಟರ್​ನಲ್ಲಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಏಪ್ರಿಲ್ 25ರಂದು ಆತ ಮೂರು ಕೊಲೆಗಳನ್ನು ಮಾಡಿ ಬಳಿಕ ಪರಾರಿಯಾಗಿದ್ದ, ಆತನನ್ನು ಹಿಡಿದುಕೊಟ್ಟವರಿಗೆ 50 ಸಾವಿರ ರೂ. ಕೊಡುವುದಾಗಿ ಪೊಲೀಸರು ಘೋಷಿಸಿದ್ದರು. ಜೀತು ಸೈನಿ, ಪೊಲೀಸರೊಂದಿಗಿನ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ್ದಾನೆ. ಧಾರೌ ಪೊಲೀಸ್ ಹೊರಠಾಣೆ ಬಳಿ ನಡೆದ ಈ ಎನ್‌ಕೌಂಟರ್‌ನಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಯೂ ಗಾಯಗೊಂಡಿದ್ದಾರೆ.

ಗುರುವಾರ ಮುಂಜಾನೆ ಸ್ಕೂಟರ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳನ್ನು ತಪಾಸಣೆಗಾಗಿ ನಿಲ್ಲಿಸಲು ಪೊಲೀಸರು ಹೇಳಿದಾಗ, ಅವರು ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದಾರೆ. ಪೊಲೀಸರು ಬೆನ್ನಟ್ಟಿ ಜಝಾರ್ ರಸ್ತೆಯಲ್ಲಿ ಅವರನ್ನು ಸುತ್ತುವರೆದಾಗ ಆರೋಪಿಗಳು ಮತ್ತೆ ದಾಳಿ ನಡೆಸಿದರು. ಆತ್ಮರಕ್ಷಣೆಗಾಗಿ ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಜೀತು ಸೈನಿ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಸ್ಥಳದಿಂದ ಅಕ್ರಮ ಪಿಸ್ತೂಲ್ ಮತ್ತು ಸ್ಕೂಟರ್ ವಶಪಡಿಸಿಕೊಳ್ಳಲಾಗಿದ್ದು, ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ.

ಏಪ್ರಿಲ್ 25 ರಂದು ಜೀತು ಸೈನಿ ತನ್ನ ಹುಟ್ಟುಹಬ್ಬದ ಸಂಭ್ರಮಕ್ಕಾಗಿ ಜಿಮ್‌ನಲ್ಲಿ ಗೆಳೆಯರನ್ನು ಆಹ್ವಾನಿಸಿದ್ದ ಸಂಭ್ರಮಾಚರಣೆಯ ವೇಳೆ ಸ್ನೇಹಿತ ಜೀತು ಸೈನಿಯ ಮುಖಕ್ಕೆ ಕೇಕ್ ಹಚ್ಚಿದ್ದ. ಈ ಕ್ಷುಲ್ಲಕ ಕಾರಣಕ್ಕಾಗಿ ಉಂಟಾದ ಬಿಸಿ ವಾದವು ಅನಿರೀಕ್ಷಿತ ಹಗೆತನಕ್ಕೆ ತಿರುಗಿತು. ಆರೋಪಿ ನಂತರ ಮಾರಕಾಸ್ತ್ರಗಳೊಂದಿಗೆ ಹಿಂತಿರುಗಿ ಅಮರದೀಪ್ (30), ಮನೀಶ್ (28) ಮತ್ತು ಆಕಾಶ್ (18) ಎಂಬ ಒಂದೇ ಕುಟುಂಬದ ಮೂವರನ್ನು ಗುಂಡಿಕ್ಕಿ ಕೊಂದಿದ್ದ.

ಮತ್ತಷ್ಟು ಓದಿ: ‘ಸೋಫಾ ಅಳತೆ ಮಾಡಿಕೊಡು ಬಾ’ ಎಂದು ಕರೆದು ಬರ್ಬರವಾಗಿ ಹತ್ಯೆ; ಬಾರ್ ಎದುರೇ ಯುವಕನ ತಲೆ ಮೇಲೆ ಕಲ್ಲು ಎತ್ತಿಹಾಕಿದ ಆಟೋ ಚಾಲಕ!

ಜೀತು ಸೈನಿ ಸಾವಿನೊಂದಿಗೆ ಈ ಪ್ರಕರಣದಲ್ಲಿ ಇದುವರೆಗೆ ಆರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರ ಈ ಕ್ರಮದಿಂದ ತೃಪ್ತರಾಗಿರುವ ಸಂತ್ರಸ್ತರ ಕುಟುಂಬದ ಸದಸ್ಯರು ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೆ, ಆರೋಪಿಗಳ ಆಸ್ತಿಗಳನ್ನು ಕೆಡವಬೇಕೆಂದು ಅವರು ಒತ್ತಾಯಿಸಿದ್ದಾರೆ. ಸದ್ಯ ಮುನ್ನೆಚ್ಚರಿಕೆ ಕ್ರಮವಾಗಿ ಆರೋಪಿಯ ನಿವಾಸದ ಬಳಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

GT vs RCB: ಗಿಲ್ ಔಟಾದಾಗ ವಿರಾಟ್ ವಿಚಿತ್ರ ಸೆಲೆಬ್ರೇಷನ್: ಕೊಹ್ಲಿ ನಡೆಗೆ ಭಾರೀ ವಿರೋಧ – Kannada News | Virat Kohli strange celebration when Shubman Gill is out Kohli’s move draws criticism on SM

ಬೆಂಗಳೂರು (ಮೇ. 01): ಇಂಡಿಯನ್ ಪ್ರೀಮಿಯರ್ ಲೀಗ್ 2026 ರ 42ನೇ ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲು ಕಂಡಿದೆ. ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ದೊಡ್ಡ ಟಾರ್ಗೆಟ್ ನೀಡಲು ವಿಫಲವಾಯಿತು. ಪರಿಣಾಮ ನಾಲ್ಕು ವಿಕೆಟ್‌ಗಳಿಂದ ಜಿಟಿ ಗೆದ್ದು ಬೀಗಿತು. ಈ ಪಂದ್ಯದಲ್ಲಿ ಕೆಲ ವಿಚಿತ್ರ ಘಟನೆ ಕೂಡ ನಡೆಯಿತು. ಜೇಸನ್ ಹೋಲ್ಡರ್ ಹಿಡಿದ ಕ್ಯಾಚ್ ವಿವಾದಕ್ಕೆ ಕಾರಣವಾದರೆ, ಅತ್ತ ವಿರಾಟ್ ಕೊಹ್ಲಿ (Virat Kohli) ಸೆಲೆಬ್ರೇಷನ್​ಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

ಗುಜರಾತ್ ಟೈಟಾನ್ಸ್ ಗುರಿ ಬೆನ್ನಟ್ಟುವ ಸಂದರ್ಭ ಶುಭ್​ಮನ್ ಗಿಲ್ ಔಟಾದಾಗ ವಿರಾಟ್ ಕೊಹ್ಲಿ ಸೆಲೆಬ್ರೇಷನ್ ಮಾಡಿದ ರೀತಿ ಸಾಮಾಜಿಕ ತಾಣಗಳಲ್ಲಿ ಟೀಕೆಗೆ ಗುರಿಯಾಗಿದೆ. ಕ್ರಿಕೆಟ್ ಮೈದಾನದಲ್ಲಿ ವಿರಾಟ್ ಕೊಹ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಶಾಂತ ಸ್ವಭಾವ ಹೊಂದಿದ್ದರು. ಒಂದು ಕಾಲದಲ್ಲಿ ಆಕ್ರಮಣಶೀಲತೆಗೆ ಹೆಸರುವಾಸಿಯಾಗಿದ್ದ ಕೊಹ್ಲಿ ಅವರ ಸ್ವಭಾವ ಕಳೆದ ಕೆಲವು ವರ್ಷಗಳಿಂದ ಗಮನಾರ್ಹವಾಗಿ ಬದಲಾಗಿದೆ. ಆದಾಗ್ಯೂ, ನಿನ್ನೆಯ ಪಂದ್ಯದಲ್ಲಿ ಕೊಹ್ಲಿ ಅವರ ಹಳೆಯ ಆಕ್ರಮಣಶೀಲತೆ ಮೈದಾನದಲ್ಲಿ ಎದ್ದುಕಂಡಿತು.

ಗಿಲ್ ಅವರ ಕ್ಯಾಚ್ ಹಿಡಿದ ನಂತರ ವಿರಾಟ್ ಕೋಪ

ಟಾರ್ಗೆಟ್ ಬೆನ್ನಟ್ಟಲು ಬಂದ ಜಿಟಿ ಪರ ಶುಭ್​ಮನ್ ಗಿಲ್ ತಂಡಕ್ಕೆ ಸ್ಫೋಟಕ ಆರಂಭ ನೀಡಿದ್ದರು. ಆದರೆ, ಐದನೇ ಓವರ್‌ನ ಕೊನೆಯ ಎಸೆತದಲ್ಲಿ ಗಿಲ್ ವಿಕೆಟ್ ಪತನವಾಯಿತು. ಭುವನೇಶ್ವರ್ ಕುಮಾರ್ ಎಸೆತದಲ್ಲಿ ಗಿಲ್ ಬಿರುಸಿನ ಶಾಟ್ ಹೊಡೆದರು, ಆದರೆ ವಿರಾಟ್ ಕೊಹ್ಲಿ ಕವರ್‌ನಲ್ಲಿ ಕ್ಯಾಚ್ ಪಡೆದರು. ಕ್ಯಾಚ್ ಹಿಡಿದಾಗ ಕೊಹ್ಲಿ ಸಾಕಷ್ಟು ಆಕ್ರಮಣಕಾರಿಯಾದರು. ಮೊದಲು, ಗಿಲ್ ಅವರನ್ನು ಕೊಹ್ಲಿ ಕೆಲವು ಸೆಕೆಂಡುಗಳ ಕಾಲ ದಿಟ್ಟಿಸಿ ನೋಡಿದರು, ನಂತರ ಚೆಂಡನ್ನು ಬಲವಾಗಿ ನೆಲಕ್ಕೆ ಹೊಡೆದು ಬೊಬ್ಬೆ ಹೊಡೆಯಲು ಪ್ರಾರಂಭಿಸಿದರು.

ಗಿಲ್ ಔಟಾದಾಗ ವಿರಾಟ್ ಕೊಹ್ಲಿ ಮಾಡಿದ ಸೆಲೆಬ್ರೇಷನ್​ನ ವಿಡಿಯೋ

ವಿರಾಟ್ ಕೊಹ್ಲಿ ಅವರ ಈ ನಡೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ದೇಶೀಯ ಪಂದ್ಯದಲ್ಲಿ, ಅದರಲ್ಲೂ ಓರ್ವ ಶ್ರೇಷ್ಠ ಭಾರತೀಯ ಬ್ಯಾಟರ್ ಔಟಾದಾಗ ಈರೀತಿ ಸೆಲೆಬ್ರೇಷನ್ ಮಾಡಿದ್ದು ತಪ್ಪು ಎಂದು ಅನೇಕರು ಸಾಮಾಜಿಕ ತಾಣಗಳಲ್ಲಿ ಬರೆದುಕೊಳ್ಳುತ್ತಿದ್ದಾರೆ. ಒಟ್ಟಾರೆ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

GT vs RCB: ಕಳಪೆ ಬ್ಯಾಟಿಂಗ್‌, ಫಿಲ್ಡಿಂಗ್​ಗೆ ಸೋಲಿನ ಬೆಲೆ ತೆತ್ತ ಆರ್​ಸಿಬಿ

ಸೋತರೂ ಎರಡನೇ ಸ್ಥಾನದಲ್ಲಿ ಆರ್​ಸಿಬಿ ಭದ್ರ

ಈ ಸೋಲಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದೊಡ್ಡ ಹಿನ್ನಡೆ ಏನೂ ಆಗಿಲ್ಲ, ಇನ್ನೂ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಆರ್‌ಸಿಬಿ ತಮ್ಮ ಒಂಬತ್ತು ಪಂದ್ಯಗಳಲ್ಲಿ ಆರು ಪಂದ್ಯಗಳನ್ನು ಗೆದ್ದಿದೆ ಮತ್ತು ಮೂರರಲ್ಲಿ ಸೋತಿದೆ. +1.420 ರ ನಿವ್ವಳ ರನ್ ದರದೊಂದಿಗೆ, ಆರ್‌ಸಿಬಿ ಇನ್ನೂ ಸುರಕ್ಷಿತ ಸ್ಥಾನದಲ್ಲಿದೆ, ಆದರೆ ಪಂಜಾಬ್ ಕಿಂಗ್ಸ್ ತಮ್ಮ ಸತತ ಗೆಲುವುಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ.

ಅತ್ತ, ಗುಜರಾತ್ ಟೈಟಾನ್ಸ್ ಈ ಗೆಲುವಿನೊಂದಿಗೆ 10 ಅಂಕಗಳನ್ನು ತಲುಪಿದೆ. ಗುಜರಾತ್ ಇದುವರೆಗೆ ಒಂಬತ್ತು ಪಂದ್ಯಗಳನ್ನು ಆಡಿದ್ದು, ಐದು ಪಂದ್ಯಗಳನ್ನು ಗೆದ್ದು ನಾಲ್ಕರಲ್ಲಿ ಸೋತಿದೆ. ಅವರು ಐದನೇ ಸ್ಥಾನದಲ್ಲಿದ್ದರೂ, ಅಗ್ರ ನಾಲ್ಕು ತಂಡಗಳೊಂದಿಗೆ ಅವರ ಅಂತರವು ಗಮನಾರ್ಹವಾಗಿ ಕಡಿಮೆಯಾಗಿದೆ. ಗುಜರಾತ್‌ನ ನಿವ್ವಳ ರನ್ ದರ ಪ್ರಸ್ತುತ -0.192 ಆಗಿದ್ದು, ಮುಂಬರುವ ಪಂದ್ಯಗಳಲ್ಲಿ ಗೆಲುವಿನ ಜೊತೆಗೆ ರನ್​ರೇಟ್ ಮುಖ್ಯವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟ್ರಂಪ್ ಹೊಸ ಬಾಂಬ್, ಅಮೆರಿಕದ ಜೊತೆ ಕೈಜೋಡಿಸಲು ಇರಾನ್ ಕಾತರವಾಗಿದೆ, ಆದರೆ ಜಗತ್ತಿಗೆ ಅಸಲಿ ವಿಷಯ ತಿಳಿದಿಲ್ಲ ಎಂದ ಟ್ರಂಪ್ – Kannada News | Trump Reveals Iran’s Secret: Economy Collapsing, Wants US Agreement

ವಾಷಿಂಗ್ಟನ್, ಮೇ 1: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರು ಇರಾನ್ ಸಂಘರ್ಷದ ಕುರಿತು ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದು, ಇಸ್ಲಾಮಿಕ್ ಗಣರಾಜ್ಯವು ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಳ್ಳಲು ತುದಿಗಾಲಿನಲ್ಲಿ ನಿಂತಿದೆ ಎಂದು ಪ್ರತಿಪಾದಿಸಿದ್ದಾರೆ. ಶ್ವೇತಭವನದ ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇರಾನ್‌ನ ಆರ್ಥಿಕತೆ ಮತ್ತು ಮಿಲಿಟರಿ ಸಾಮರ್ಥ್ಯದ ಕುರಿತು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಅಮೆರಿಕ ಹೇರಿರುವ ಆರ್ಥಿಕ ದಿಗ್ಬಂಧನಗಳು ಇರಾನ್ ಮೇಲೆ ಭಾರಿ ಪರಿಣಾಮ ಬೀರಿದ್ದು, ಆ ದೇಶದ ಆರ್ಥಿಕತೆ ಕುಸಿಯುತ್ತಿದೆ ಎಂದು ಟ್ರಂಪ್ ಹೇಳಿದ್ದಾರೆ. ದಿಗ್ಬಂಧನದಿಂದಾಗಿ ಇರಾನ್‌ಗೆ ತೈಲ ಮಾರಾಟದಿಂದ ಯಾವುದೇ ಹಣ ಸಿಗುತ್ತಿಲ್ಲ. ಈ ಒತ್ತಡದಿಂದಾಗಿ ಇರಾನ್ ಈಗ ಒಪ್ಪಂದ ಮಾಡಿಕೊಳ್ಳಲು ಕಾತರವಾಗಿದೆ, ಆದರೆ ಪ್ರಸ್ತುತ ನಡೆಯುತ್ತಿರುವ ಮಾತುಕತೆಗಳ ನೈಜ ಸ್ಥಿತಿಯ ಬಗ್ಗೆ ಜಗತ್ತಿನ ಕೆಲವೇ ಜನರಿಗೆ ಮಾತ್ರ ತಿಳಿದಿದೆ ಎಂದು ಅವರು ಗುಟ್ಟು ಬಿಟ್ಟುಕೊಟ್ಟಿದ್ದಾರೆ.

ಕಳೆದ ಎರಡು ತಿಂಗಳಲ್ಲಿ ಇರಾನ್ ಸುಮಾರು 42,000 ಮುಗ್ಧ ಜನರನ್ನು ಕೊಂದಿದೆ ಎಂದು ಟ್ರಂಪ್ ಗಂಭೀರ ಆರೋಪ ಮಾಡಿದ್ದಾರೆ. ಪ್ರತಿಭಟನೆ ನಡೆಸಿದವರನ್ನು ಸಾಮೂಹಿಕವಾಗಿ ಹತ್ಯೆ ಮಾಡಲಾಗುತ್ತಿದೆ ಮತ್ತು ಅವರು ಹೇಳುವ ಸಂಖ್ಯೆಗಿಂತ ಇದು ಇನ್ನೂ ಹೆಚ್ಚಿರಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಎಂಟು ಮಂದಿ ಮಹಿಳೆಯರನ್ನು ಗಲ್ಲಿಗೇರಿಸುವ ಇರಾನ್ ಪ್ರಯತ್ನವನ್ನು ತಮ್ಮ ಸಕಾಲಿಕ ಮಧ್ಯಸ್ಥಿಕೆಯು ತಡೆಯಿತು ಎಂದು ಅವರು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಹೃದಯಾಘಾತವಾಗಬಹುದು, ಟ್ರಂಪ್ ಶಾಂತಿ ಪ್ರಸ್ತಾವನೆ ತಿರಸ್ಕರಿಸಿದ ಬೆನ್ನಲ್ಲೇ ಇರಾನ್‌ನಿಂದ ಹೊಸ ಮಹಾಸ್ತ್ರ ಪ್ರಯೋಗ

ಇರಾನ್‌ನ ಮಿಲಿಟರಿ ಶಕ್ತಿ ಕುಂದಿದೆ ಎಂದು ಪ್ರತಿಪಾದಿಸಿದ ಟ್ರಂಪ್, ಆ ದೇಶದ ಡ್ರೋನ್ ಕಾರ್ಖಾನೆಗಳು ಶೇಕಡಾ 82 ರಷ್ಟು ಮತ್ತು ಕ್ಷಿಪಣಿ ಕಾರ್ಖಾನೆಗಳು ಸುಮಾರು ಶೇಕಡಾ 90 ರಷ್ಟು ಕುಸಿದಿವೆ ಎಂದು ಅಂಕಿಅಂಶ ನೀಡಿದ್ದಾರೆ. ಇರಾನ್‌ನ ಸೇನೆ ಬಹುತೇಕ ನಾಶವಾಗಿದೆ ಎಂದು ಅವರು ಪುನರುಚ್ಚರಿಸಿದ್ದಾರೆ.

ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಲು ಅನುಮತಿಸುವುದಿಲ್ಲ ಎಂಬ ತಮ್ಮ ದೀರ್ಘಕಾಲದ ಬೇಡಿಕೆಯನ್ನು ಟ್ರಂಪ್ ಮತ್ತೊಮ್ಮೆ ಒತ್ತಿ ಹೇಳಿದ್ದಾರೆ. ಇರಾನ್ ವಿರುದ್ಧ ದೊಡ್ಡ ಪ್ರಮಾಣದ ಮಿಲಿಟರಿ ದಾಳಿಗಳ ಸಾಧ್ಯತೆಯನ್ನು ಸದ್ಯಕ್ಕೆ ಕಡಿಮೆ ಮಾಡಿದರೂ, ಆ ದೇಶದ ಮೇಲೆ ಹೇರಲಾಗಿರುವ ದಿಗ್ಬಂಧನದ ಶಕ್ತಿಯು ಅದ್ಭುತವಾಗಿ ಕೆಲಸ ಮಾಡುತ್ತಿದೆ ಎಂದು ಅವರು ಶ್ಲಾಘಿಸಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕರ್ನಾಟಕ ಹವಾಮಾನ ವರದಿ: ಇಂದು ರಾಜ್ಯದ ಹಲವೆಡೆ ಆಲಿಕಲ್ಲು ಮಳೆ! 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ – Kannada News | Karnataka Weather Forecast: Hailstorm and Thunderstorm  in south Karnataka, Rain in Bengaluru

ಇಂದು ರಾಜ್ಯದ ಹಲವೆಡೆ ಆಲಿಕಲ್ಲು ಮಳೆ

ಬೆಂಗಳೂರು, ಮೇ 01: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ 2 ದಿನಗಳಿಂದ ಆಲಿಕಲ್ಲು  (Karnataka Weather) ಮಳೆಯಾಗುತ್ತಿದ್ದು, ಇಂದೂ ಸಹ ಕರಾವಳಿ ಹೊರತುಪಡಿಸಿ ಉಳಿದೆಡೆ ಗುಡುಗು ಸಹಿತ ಆಲಿಕಲ್ಲು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ದಕ್ಷಿಣ ಕರ್ನಾಟಕದ 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ನೀಡಲಾಗಿದೆ. ಕಲಬುರಗಿ, ರಾಯಚೂರು ಸೇರಿದಂತೆ ಹಲವೆಡೆ ಇಂದು ಗರಿಷ್ಠ 42-42 ಡಿಗ್ರಿ ಸೆಲ್ಸಿಯಸ್​ನಷ್ಟು ತಾಪಮಾನವಿರಲಿದ್ದು, ಇನ್ನೂ 3 ದಿನ ಇದೇ ವಾತಾವರಣ ಇರಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.

ಆಲಿಕಲ್ಲು ಮಳೆಯ ಅಲರ್ಟ್​!

ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಲಿದ್ದು, ಉಳಿದೆಡೆ ಶುಷ್ಕ ವಾತಾವರಣವಿರಲಿದೆ. ಉತ್ತರ ಒಳನಾಡಿನ ರಾಯಚೂರು, ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉಳಿದಂತೆ ಎಲ್ಲೆಡೆ ಶುಷ್ಕ ಹವಾಮಾನ ಇರಲಿದೆ.

ದಕ್ಷಿಣ ಒಳನಾಡಿನ ಮೈಸೂರು, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಚಾಮರಾಜನಗರದಲ್ಲಿ ಗುಡುಗು ಸಿಡಿಲು, ಆಲಿಕಲ್ಲು ಸಹಿತ ಜೋರು ಮಳೆಯಾಗಲಿದ್ದು, ಆರೆಂಜ್ ಅಲರ್ಟ್​ ನೀಡಲಾಗಿದೆ. ಮಂಡ್ಯ ಮತ್ತು ತುಮಕೂರಿನಲ್ಲೂ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಮಂಡ್ಯ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ನೀಡಲಾಗಿದೆ. ಉಳಿದಂತೆ ಎಲ್ಲಾ ಜಿಲ್ಲೆಗಳಲ್ಲಿಯೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಬೆಂಗಳೂರು ಮಳೆಗೆ ಮತ್ತೊಂದು ಸಾವು; ಜೆ.ಪಿ. ನಗರದ ಮಿನಿ ಫಾರೆಸ್ಟ್ ಬಳಿ ಶಾಕ್ ಹೊಡೆದು ರಘು ದುರ್ಮರಣ, ಒಟ್ಟು 9 ಬಲಿ!

ಮಳೆಯ ಅವಾಂತರ!

ಬುಧವಾರ ಸಂಜೆ ಬೆಂಗಳೂರಿನಲ್ಲಿ ಸುರಿದ ಮಳೆ ಹಲವರನ್ನು ಬಲಿ ಪಡೆದಿದೆ. ಜೆ.ಪಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದಕ್ಕೂ ಮುನ್ನ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿತದಿಂದ 7 ಜನರು ಸಾವನ್ನಪ್ಪಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮುಸ್ಲಿಮರ ಮುನಿಸು ತಣಿಸಲು ಕಾಂಗ್ರೆಸ್ ಸರ್ಕಾರ ಮತ್ತೊಂದು ಹೆಜ್ಜೆ: ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿಗೆ 600 ಕೋಟಿ ರೂ. – Kannada News | Karnataka Cabinet Decisions: Rs 600 Cr for Minority Colony Development, Bidadi Township Approved

ಸಚಿವ ಸಂಪುಟ ಸಭೆಯ ಬಳಿಕ ಮಾಹಿತಿ ನೀಡಿದ ಸಚಿವ ಹೆಚ್​ಕೆ ಪಾಟೀಲ್Image Credit source: tv9

ಬೆಂಗಳೂರು, ಮೇ 1: ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಟಿಕೆಟ್ ಗೊಂದಲದಿಂದ ಮುಸ್ಲಿಂ (Muslims) ಸಮುದಾಯ ಕಾಂಗ್ರೆಸ್ (Congress) ವಿರುದ್ಧ ತೀವ್ರ ಅಸಮಾಧಾನ ಹೊಂದಿತ್ತು. ಇದೀಗ ಅಲ್ಪಸಂಖ್ಯಾತರ ಮುನಿಸು ತಣಿಸಲು ಮುಂದಾಗಿರುವ ಸರ್ಕಾರ, 2026-27 ಮತ್ತು 2027-28ನೇ ಸಾಲಿನಲ್ಲಿ ಅವರ ಕಾಲೋನಿಗಳ ಅಭಿವೃದ್ಧಿಗೆ 600 ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆಗೆ ಸಚಿವ ಸಂಪುಟ (Karnataka Cabinet) ಸಭೆಯಲ್ಲಿ ಒಪ್ಪಿಗೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಕುರಿತು ಕಾನೂನು ಸಚಿವ ಹೆಚ್​​ಕೆ ಪಾಟೀಲ್ ಮಾಹಿತಿ ನೀಡಿದ್ದಾರೆ.

1 ರಿಂದ 12ನೇ ತರಗತಿಯವರೆಗೆ ಓದುತ್ತಿರುವ ಕಾರ್ಮಿಕರ ಮಕ್ಕಳಿಗೆ 115.84 ಕೋಟಿ ರೂ. ವೆಚ್ಚದಲ್ಲಿ 8,600 ಮೌಲ್ಯದ ಲೇಖನ ಸಾಮಗ್ರಿ, ಪುಸ್ತಕಗಳನ್ನೊಳಗೊಂಡ ಶಾಲಾ ಕಿಟ್ ನೀಡಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಆರೋಗ್ಯ ಕ್ಷೇತ್ರಕ್ಕೆ ಬಲ ತುಂಬಲು ಉಚಿತ ರೋಗ ಪತ್ತೆಗಾಗಿ 6 ಎಂಆರ್‌ಐ ಸ್ಕ್ಯಾನಿಂಗ್ ಯಂತ್ರಗಳನ್ನು ಖರೀದಿಸಲು ಸಚಿವ ಸಂಪುಟ ಗ್ರೀನ್ ಸಿಗ್ನಲ್ ನೀಡಿದೆ.

ರೈತರ ವಿರೋಧದ ನಡುವೆ ಬಿಡದಿ ಟೌನ್​​ಶಿಪ್​​ಗೆ ಅನುಮೋದನೆ

ಬಹು ದಿನಗಳಿಂದ ಬಾಕಿ ಇದ್ದ ಬಿಡದಿ ಟೌನ್‌ಶಿಪ್ ಯೋಜನೆಗೆ ಮರುಜೀವ ನೀಡಲಾಗಿದೆ. ಸುಮಾರು 7,481 ಎಕರೆ ಪ್ರದೇಶದಲ್ಲಿ ಈ ಯೋಜನೆ ನಿರ್ಮಾಣವಾಗಲಿದ್ದು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದಲೇ ಈ ಬೃಹತ್ ಉಪನಗರ ತಲೆ ಎತ್ತಲಿದೆ. ಈ ಹಿಂದೆ ರೈತರ ವಿರೋಧದಿಂದ ವಿಳಂಬವಾಗಿದ್ದ ಯೋಜನೆಗೆ ಈಗ ಹೊಸ ರೂಪ ನೀಡಲಾಗಿದ್ದು, ಭೂಮಿ ಕಳೆದುಕೊಳ್ಳುವ ರೈತರಿಗೆ ಪ್ರತಿ ಎಕರೆಗೆ 9600 ಚದರ ಅಡಿ ಅಭಿವೃದ್ಧಿಪಡಿಸಿದ ಭೂಮಿ ನೀಡಲು ಸರ್ಕಾರ ನಿರ್ಧರಿಸಿದೆ.

  • ಆರೋಗ್ಯ ಮತ್ತು ಮೂಲಸೌಕರ್ಯ: ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ರೋಗ ಪತ್ತೆಗಾಗಿ 6 ಹೊಸ ಎಂಆರ್‌ಐ (MRI) ಸ್ಕ್ಯಾನಿಂಗ್ ಯಂತ್ರಗಳನ್ನು ಖರೀದಿಸಲು ಗ್ರೀನ್ ಸಿಗ್ನಲ್ ನೀಡಲಾಗಿದೆ.
  • ಕಲಬುರ್ಗಿ-ಬೆಂಗಳೂರು ಹಾಗೂ ಬೀದರ್-ಬೆಂಗಳೂರು ವಿಮಾನಯಾನ ಸೇವೆಗಳ ನಿರ್ವಹಣೆಗಾಗಿ ವರ್ಷಕ್ಕೆ ₹28.7 ಕೋಟಿ ಪ್ರೋತ್ಸಾಹಧನ ನೀಡಲು ಅನುಮೋದನೆ.
  • ವಾಯವ್ಯ ಸಾರಿಗೆ ಸಂಸ್ಥೆಗೆ 80 ಹೊಸ ಬಸ್‌ಗಳ ಖರೀದಿಗಾಗಿ ₹32 ಕೋಟಿ ಬಿಡುಗಡೆ.
    ಬೆಂಗಳೂರು-ಹೈದ್ರಾಬಾದ್ ಹೈಸ್ಪೀಡ್ ರೈಲು ಯೋಜನೆಯಡಿ ಕರ್ನಾಟಕದಲ್ಲಿ ಬರಲಿರುವ 15 ನಿಲ್ದಾಣಗಳ ಬಗ್ಗೆ ಚರ್ಚೆ ನಡೆಸಲಾಗಿದೆ.
  • ರೈತರಿಂದ ಬಿಳಿಜೋಳ ಖರೀದಿಸಲು ಅಗತ್ಯವಿರುವ ಹೆಚ್ಚುವರಿ ಗೋಣಿ ಚೀಲಗಳ ಖರೀದಿಗಾಗಿ ₹21.35 ಕೋಟಿ ವೆಚ್ಚ ಮಾಡಲು ಒಪ್ಪಿಗೆ ನೀಡಲಾಗಿದೆ.
  • ತಿರುಮಲ ಕರ್ನಾಟಕ ರಾಜ್ಯ ಛತ್ರ: ಆಂಧ್ರಪ್ರದೇಶದ ತಿರುಮಲದಲ್ಲಿರುವ ಕರ್ನಾಟಕ ರಾಜ್ಯ ಛತ್ರದ ನಿರ್ವಹಣೆಯನ್ನು
  • ಕಂದಾಯ ಇಲಾಖೆಯಿಂದ ಪ್ರವಾಸೋದ್ಯಮ ಇಲಾಖೆಗೆ (KSTDC) ವರ್ಗಾಯಿಸಲು ನಿರ್ಧರಿಸಲಾಗಿದೆ.
  • ಶಿಕ್ಷಣ ನೀತಿ: ರಾಜ್ಯ ಶಿಕ್ಷಣ ನೀತಿ ಆಯೋಗ ನೀಡಿರುವ ಅಂತಿಮ ವರದಿಯ ಬಗ್ಗೆ ಸುದೀರ್ಘ ಚರ್ಚೆ ನಡೆದಿದ್ದರೂ, ಯಾವುದೇ ಅಂತಿಮ ತೀರ್ಮಾನ ಕೈಗೊಳ್ಳದೆ ಮುಂದಿನ ಸಭೆಗೆ ಮುಂದೂಡಲಾಗಿದೆ.

ಸಚಿವ ಸಂಪುಟ ಸಭೆಯ ವಿವರವಾದ ಮಾಹಿತಿಗೆ ಓದಿ: ಒಳಮೀಸಲಾತಿ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ: ಪರಿಷ್ಕೃತ ರೋಸ್ಟರ್ ಜಾರಿಗೆ ಸಂಪುಟ ಅಸ್ತು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಾಕ್ಸ್ ಆಫೀಸ್​​ನಲ್ಲಿ ಅಬ್ಬರಿಸಿದ ‘ಕೆಡಿ’; ಮೊದಲ ದಿನದ ಗಳಿಕೆ ಎಷ್ಟು? – Kannada News | KD Movie Box Office Collection Day 1: Dhruva Sarja’s Film Earns 4 Cr on Day 1

‘ಕೆಡಿ: ದಿ ಡೆವಿಲ್’ ಸಿನಿಮಾ (KD Movie) ಏಪ್ರಿಲ್ 30ರಂದು ರಿಲೀಸ್ ಆಯಿತು. ಈ ಸಿನಿಮಾದಲ್ಲಿ ಧ್ರುವ ಸರ್ಜಾ, ಸಂಜಯ್ ದತ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಈ ಸಿನಿಮಾ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಅನೇಕರು ಚಿತ್ರದ ಬಗ್ಗೆ ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಫ್ಯಾನ್​​ಶೋಗಳು ಹೌಸ್​​ಫುಲ್ ಪ್ರದರ್ಶನ ಕಂಡವು. ಹಾಗಾದರೆ ಈ ಸಿನಿಮಾ ಮೊದಲ ದಿನ ಗಳಿಕೆ ಮಾಡಿದ್ದು ಎಷ್ಟು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ. ಈ ಚಿತ್ರದಿಂದ ಕೆವಿಎನ್​ ಪ್ರೊಡಕ್ಷನ್​​ಗೆ ಲಾಭ ತಂದುಕೊಡಲಿದೆಯೇ ಎಂಬುದು ಸದ್ಯದ ಪ್ರಶ್ನೆ.

‘ಕೆಡಿ’ ಸಿನಿಮಾ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ‘ಮಾರ್ಟಿನ್’ ಸಿನಿಮಾ ಕೆಲಸಗಳು ನಡೆಯುತ್ತಿದ್ದ ಕಾರಣ, ‘ಕೆಡಿ’ ಸಿನಿಮಾಗೆ ಸಮಯ ಕೊಡಲು ಧ್ರುವ ಸರ್ಜಾ ಅವರ ಬಳಿ ಸಾಧ್ಯವಾಗಿರಲಿಲ್ಲ. ಆ ಬಳಿಕ ‘ಕೆಡಿ’ ಸಿನಿಮಾದಲ್ಲಿ ತೊಡಗಿಕೊಂಡರು ಧ್ರುವ.ಈ ಸಿನಿಮಾ ರೆಟ್ರೋ ಶೈಲಿ ಮಾದರಿಯಲ್ಲಿದೆ. ದೊಡ್ಡ ದೊಡ್ಡ ಸೆಟ್​​ಗಳ ನಿರ್ಮಾಣ ಮಾಡಿ ಶೂಟ್ ಮಾಡಲಾಗಿದೆ.

‘ಕೆಡಿ’ ಸಿನಿಮಾಗೆ ಮೊದಲ ದಿನ 845 ಶೋಗಳನ್ನು ನೀಡಲಾಗಿತ್ತು. ಮುಂಜಾನೆ ಫ್ಯಾನ್ಸ್ ಶೋ ಕೂಡ ಇಟ್ಟಿದ್ದರಿಂದ ಸಿನಿಮಾ ಹೆಚ್ಚಿನ ಗಳಿಕೆ ಮಾಡಿದೆ. ಈ ಚಿತ್ರ ಮೊದಲ ದಿನ 4.10 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಆಗಿದೆ ಎಂದು ‘ಸ್ಯಾಕ್‌ನಿಲ್ಕ್ (sacnilk) ವರದಿ ಮಾಡಿದೆ. ಇನ್ನು, ಚಿತ್ರದ ನೆಟ್ ಕಲೆಕ್ಷನ್ ಮೂರುವರೆ ಕೋಟಿ ರೂಪಾಯಿ ಆಗಿದೆ.

ಸಿನಿಮಾಗೆ ಈ ಮೂರು ದಿನ ತುಂಬಾನೇ ಮುಖ್ಯವಾಗಲಿದೆ. ಇಂದು (ಮೇ 1) ಕಾರ್ಮಿಕರ ದಿನಾಚರಣೆ ಪ್ರಯುಕ್ತ ಸರ್ಕಾರಿ ರಜೆ ಇದ್ದು ಚಿತ್ರ ಹೆಚ್ಚಿನ ಗಳಿಕೆ ಮಾಡುವ ನಿರೀಕ್ಷೆ ಇದೆ. ಇನ್ನು ಶನಿವಾರ ಹಾಗೂ ಭಾನುವಾರ ಎಂದಿನಂತೆ ಜನರು ಸಿನಿಮಾ ವೀಕ್ಷಣೆಗೆ ತೆರಳುತ್ತಾರೆ. ಹೀಗಾಗಿ, ಸಿನಿಮಾದ ಕಲೆಕ್ಷನ್ ಹೆಚ್ಚಬಹುದು.

ಇದನ್ನೂ ಓದಿ: KD Movie Review: ಧ್ರುವ ಸರ್ಜಾ ಅಭಿಮಾನಿಗಳಿಗೆ ಇಷ್ಟ ಆಗುವ ರಕ್ತದೋಕುಳಿಯ ‘ಕೆಡಿ’ ಕಹಾನಿ

ಕೆಡಿ ಸಿನಿಮಾಗೆ ದೊಡ್ಡ ಮಟ್ಟದ ಬಜೆಟ್ ಖರ್ಚಾಗಿದೆ. ಪ್ರೇಮ್ ಹಲವು ವರ್ಷ ಇದಕ್ಕಾಗಿ ಮೀಸಲಿಟ್ಟಿದ್ದಾರೆ. ಈಗ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿರುವುದು ಅವರ ಪಾಲಿಗೆ ಖುಷಿ ನೀಡಿದೆ. ಸಿನಿಮಾದ ಹಿನ್ನೆಲೆ ಸಂಗೀತವನ್ನು ಜನರು ಇಷ್ಟಪಟ್ಟಿದ್ದಾರೆ. ಸುದೀಪ್, ಶಿಲ್ಪಾ ಶೆಟ್ಟಿ, ರೀಷ್ಮಾ ನಾಣಯ್ಯ ಸೇರಿದಂತೆ ಅನೇಕರು ಚಿತ್ರದ ಭಾಗ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Commercial LPG Cylinder Price: ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್ ಬೆಲೆ ಬರೋಬ್ಬರಿ 993 ರೂ. ಏರಿಕೆ – Kannada News | Commercial LPG Cylinder Price Jumps Rs 993: Hotels and Restaurants Face Impact

ನವದೆಹಲಿ, ಮೇ 1: ಇಂದು ವಾಣಿಜ್ಯ ಸಿಲಿಂಡರ್​ ಬೆಲೆ(Commercial Cylinder Price)ಯಲ್ಲಿ ಭಾರಿ ಏರಿಕೆಯಾಗಿದೆ. ಇಂದಿನಿಂದ (ಮೇ 1) ಜಾರಿಗೆ ಬರುವಂತೆ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಬರೋಬ್ಬರಿ 993 ರೂ. ಹೆಚ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಭಾರಿ ಏರಿಕೆಯ ನಂತರ, ರಾಜಧಾನಿ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್‌ನ ಬೆಲೆ 3,071.50 ರೂ.ಗೆ ತಲುಪಿದೆ. ಇದು ಹೋಟೆಲ್, ರೆಸ್ಟೋರೆಂಟ್ ಮತ್ತು ಇತರ ವಾಣಿಜ್ಯ ಸಂಸ್ಥೆಗಳ ಮೇಲೆ ನೇರ ಪರಿಣಾಮ ಬೀರಲಿದೆ.

ಗ್ರಾಹಕರಿಗೆ ನಿರಾಳ: ಪೆಟ್ರೋಲ್, ಡೀಸೆಲ್ ಮತ್ತು ದೇಶೀಯ ಸಿಲಿಂಡರ್ ದರ ಸ್ಥಿರ
ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಾಗಿದ್ದರೂ, ಸಾರ್ವಜನಿಕರಿಗೆ ನೇರವಾಗಿ ಅನ್ವಯವಾಗುವ ಪ್ರಮುಖ ಇಂಧನ ದರಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ದೇಶೀಯ ಎಲ್‌ಪಿಜಿ: ಸುಮಾರು 33 ಕೋಟಿ ಗ್ರಾಹಕರು ಬಳಸುವ 14.2 ಕೆಜಿ ದೇಶೀಯ ಸಿಲಿಂಡರ್ ಬೆಲೆಗಳು ಯಥಾಸ್ಥಿತಿಯಲ್ಲಿವೆ.

ಒಟ್ಟು ಬಳಕೆಯ ಶೇಕಡಾ 90 ರಷ್ಟು ಪಾಲನ್ನು ಹೊಂದಿರುವ ವಾಹನ ಸವಾರರಿಗೆ ಪೆಟ್ರೋಲ್ ಮತ್ತು ಡೀಸೆಲ್‌ನ ಚಿಲ್ಲರೆ ಬೆಲೆಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಅಡಿಯಲ್ಲಿ ವಿತರಿಸಲಾಗುವ ಸೀಮೆಎಣ್ಣೆಯ ಬೆಲೆಗಳು ಕೂಡ ಬದಲಾಗದೆ ಉಳಿದಿವೆ. ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 1,950– 2,200 ರೂ. ಇತ್ತು.

ಮತ್ತಷ್ಟು ಓದಿ: LPG Price Hike: ಎಲ್​ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ, ಗ್ರಾಹಕರಿಗೆ ಬಿಗ್ ಶಾಕ್

ವಿಮಾನಯಾನ ದರಗಳೂ ಸ್ಥಿರ: ಎಟಿಎಫ್ ಬೆಲೆ ಯಥಾಸ್ಥಿತಿ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆಗಳು ಏರಿಕೆಯಾಗಿದ್ದರೂ, ದೇಶೀಯ ವಿಮಾನಯಾನ ಸಂಸ್ಥೆಗಳಿಗೆ ನೀಡಲಾಗುವ ವಿಮಾನಯಾನ ಟರ್ಬೈನ್ ಇಂಧನ (ATF) ಬೆಲೆಗಳನ್ನು ಶುಕ್ರವಾರವೂ ಬದಲಾಗದಂತೆ ಉಳಿಸಿಕೊಳ್ಳಲಾಗಿದೆ. ಗ್ರಾಹಕರು ಮತ್ತು ವಿಮಾನಯಾನ ಸಂಸ್ಥೆಗಳನ್ನು ರಕ್ಷಿಸಲು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಅಂತರರಾಷ್ಟ್ರೀಯ ಬೆಲೆ ಏರಿಕೆಯ ಹೊರೆಯನ್ನು ತಾವೇ ಹೀರಿಕೊಳ್ಳಲು ನಿರ್ಧರಿಸಿವೆ ಎಂದು ಐಒಸಿ ತಿಳಿಸಿದೆ. ಆದರೆ, ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳಿಗೆ ಇಂಧನ ಬೆಲೆಗಳನ್ನು ಹೆಚ್ಚಿಸಲಾಗಿದೆ.

ತೈಲ ಮಾರುಕಟ್ಟೆ ಕಂಪನಿಗಳ ಈ ನಿರ್ಧಾರದಿಂದಾಗಿ, ಮಾರುಕಟ್ಟೆಯಲ್ಲಿ ಲಭ್ಯವಿರುವ ಸುಮಾರು ಶೇ 80 ರಷ್ಟು ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇದು ಬಹುಪಾಲು ಗ್ರಾಹಕರಿಗೆ ಸ್ಥಿರತೆಯನ್ನು ಖಚಿತಪಡಿಸಿದೆ. ಶೇ 4 ರಷ್ಟು ಉತ್ಪನ್ನಗಳು ಬೆಲೆ ಇಳಿಕೆಯನ್ನು ಕಂಡಿದ್ದರೆ, ಕೇವಲ ಶೇ 16 ರಷ್ಟು ಇಂಧನಗಳು (ಮುಖ್ಯವಾಗಿ ಕೈಗಾರಿಕಾ ಬಳಕೆಯವು) ಬೆಲೆ ಏರಿಕೆಯನ್ನು ದಾಖಲಿಸಿವೆ.

ಅಂತಾರಾಷ್ಟ್ರೀಯ ಬೆಲೆ ಏರಿಳಿತಗಳಿಂದ ದೇಶೀಯ ಗ್ರಾಹಕರನ್ನು ರಕ್ಷಿಸುವ ಮತ್ತು ಆರ್ಥಿಕ ಸ್ಥಿರತೆಯನ್ನು ಕಾಪಾಡುವ ಉದ್ದೇಶದಿಂದ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಐಒಸಿ ಸ್ಪಷ್ಟಪಡಿಸಿದೆ.

ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version