ಖಾರದಪುಡಿ ಎರಚಿ ಚಿನ್ನದಂಗಡಿಗೆ ಕನ್ನ: ಸಿನಿಮಾ ಕಥೆ ಮೀರಿಸುವ ದರೋಡೆ ಸ್ಟೋರಿ – Kannada News | Tumakuru jewellery shop Robbery: Shira Police Arrest Rajasthan Gang, Recover 26 Lakh Gold in Hours

ದರೋಡೆಯಾದ ಜ್ಯುವೆಲರಿ ಶಾಪ್Image Credit source: tv9 kannada

ತುಮಕೂರು, ಫೆಬ್ರವರಿ 23: ರಾಜ್ಯದಲ್ಲಿ ದರೋಡೆ (Robbery) ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಿವೆ. ಇದೀಗ ತುಮಕೂರಿನಲ್ಲೊಂದು (Tumakuru) ಜ್ಯುವೆಲರಿ ಶಾಪ್ ದರೋಡೆ ನಡೆದಿದೆ. ಆ ಮೂಲಕ ಗೃಹ ಸಚಿವರ ತವರು ಜಿಲ್ಲೆಯಲ್ಲಿ ಹೊರ ರಾಜ್ಯದ ದರೋಡೆಕೋರರು ಸದ್ದು ಮಾಡಿದ್ದಾರೆ. ಜ್ಯುವೆಲರಿ ಶಾಪ್​​ಗೆ ನುಗ್ಗಿ ಖಾರದ ಪುಡಿ ಎರಚಿ ಬರೋಬ್ಬರಿ 26 ಲಕ್ಷ ರೂ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವಂತಹ ಘಟನೆ ನಡೆದಿದೆ. ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣದೊಂದಿಗೆ ಕಾಡಿಗೆ ಪರಾರಿಯಾಗಿದ್ದ ಖತರ್ನಾಕ್​ ಗ್ಯಾಂಗ್​​​​ ಅನ್ನು ಕೆಲವೇ ಗಂಟೆಗಳಲ್ಲಿ ಶಿರಾ ಪೊಲೀಸರು ಬಂಧಿಸಿದ್ದಾರೆ. ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು? 

ಬಂಧಿತ ಅರವಿಂದ್, ದುಂಗರ್ ಸಿಂಗ್, ಮಹೇಂದ್ರ ಸಿಂಗ್ ಮತ್ತು ಮಧು ಸಿಂಗ್​ ಮೂಲತಃ ರಾಜಸ್ಥಾನ ಮೂಲದವರು. ಕಳೆದ ಮೂರ್ನಾಲ್ಕು ದಿನದಿಂದ ತುಮಕೂರಿನಲ್ಲಿ ಈ ಗ್ಯಾಂಗ್​ ಬಿಡುಬಿಟ್ಟಿತ್ತು. ಹೈವೇ ರಸ್ತೆಯಲ್ಲಿರುವ ಜ್ಯುವೆಲರಿ ಶಾಪ್​ಗಳೇ ಇವರ ಟಾರ್ಗೆಟ್. ಅದೇ ರೀತಿ ಶಿರಾ ತಾಲೂಕಿನ ಕಳ್ಳಂಬೆಳ್ಳದ ಬೆಂಚೆಗೇಟ್ ಬಳಿಯ ಜಗತಾಂಭ ಅಂಗಡಿ ದೋಚಲು ಹೊಂಚು ಹಾಕಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೊಂದು ದರೋಡೆ: ಅಧಿಕಾರಿಗಳ ಸೋಗಿನಲ್ಲಿ ಬಂದು ಲಕ್ಷಾಂತರ ರೂ ಹೊತ್ತೊಯ್ದರು

ಪ್ಲ್ಯಾನ್​ನಂತೆ ಬೊಲೆರೋ ಕಾರ್​ನಲ್ಲಿ ಬಂದ ಖದೀಮರು ಹಾಡಹಗಲೇ ಸಿನಿಮೀಯ ರೀತಿಯಲ್ಲಿ ಜ್ಯುವೆಲರಿ ಶಾಪ್​ಗೆ ನುಗ್ಗಿ ಖಾರದ ಪುಡಿ ಎರಚಿದ್ದಾರೆ. ಬಳಿಕ ಶಟರ್ ಕ್ಲೋಸ್ ಮಾಡಿ ಅಂಗಡಿಯಲ್ಲಿದ್ದ 100 ಗ್ರಾಂ ಚಿನ್ನ, ಒಂದುವರೆ ಕೆಜಿ ಬೆಳ್ಳಿ ಸೇರಿದಂತೆ 26 ಲಕ್ಷ ರೂ ಮೌಲ್ಯದ ಚಿನ್ನಾಭರಣ ದೋಚಿದ ಗ್ಯಾಂಗ್​ ಈ ವೇಳೆ ಅಂಗಡಿಯಲ್ಲಿದ್ದ ಮಾಲೀಕ ದಿನೇಶ್ ಹಾಗೂ ಅವರ ಅಜ್ಜಿ ಮೇಲೆ ಹಲ್ಲೆ ಮಾಡಿ ಪರಾರಿ ಆಗಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೊಂದು ದರೋಡೆ: ಫ್ಲಿಪ್‌ಕಾರ್ಟ್​​ನ ಲಕ್ಷಾಂತರ ರೂ ಮೌಲ್ಯದ ವಸ್ತುಗಳ ಕಳ್ಳತನ

ದೂರು ಬಂದ ಕೂಡಲೇ ಅಲರ್ಟ್ ಆದ ಪೊಲೀಸರು, ಬೊಲೆರೋ ಕಾರು ಮಾಹಿತಿ ಆಧರಿಸಿ ಶಿರಾ ಡಿವೈಎಸ್ಪಿ ಶೇಖರ್ ನೇತೃತ್ವದಲ್ಲಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಮೊದಲಿಗೆ ಟೋಲ್ ಬಳಿ ಕಾರು ಪತ್ತೆಯಾಗಿದೆ. ಬಳಿಕ ಆರೋಪಿಗಳ ಕಾರು ಚೇಸ್ ಮಾಡಿದ ಪೊಲೀಸರು ಕೆಲವೇ ಗಂಟೆಗಳಲ್ಲಿ ಹುಯುಲು ದೊರೆ ಅರಣ್ಯ ಪ್ರದೇಶದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಜೊತೆಗೆ ಕದ್ದ ಸಂಪೂರ್ಣ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಅಧಿಕಾರ ಹಂಚಿಕೆ ಬಿಕ್ಕಟ್ಟು ನಡುವೆ ಕರ್ನಾಟಕ ಕಾಂಗ್ರೆಸ್​ನಲ್ಲಿ ಪತ್ರ ಸ್ಫೋಟ, ಅದರಲ್ಲೇನಿದೆ? – Kannada News | Congress First Time MLAs Letter To High command For cabinet reshuffle Amide Karnataka Power Tussle

ಬೆಂಗಳೂರು, (ಫೆಬ್ರವರಿ 23): ಕಾಂಗ್ರೆಸ್​​ನಲ್ಲಿ  (Congress) ನಾಯಕತ್ವ ಬದಲಾವಣೆ ಕಿಚ್ಚು ಕಾವೇರಿದೆ. ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಬಣಗಳ ನಡುವೆ ತಂತ್ರ, ರಣತಂತ್ರ ಜೋರಾಗೇ ನಡೆಯುತ್ತಿವೆ. ಇದರ ಮಧ್ಯೆ ದಲಿತ ಸಿಎಂ ಕೂಗು ಕೇಳಿಬಂದಿದ್ದು, ಮೊನ್ನೇ ಅಷ್ಟೇ ದಲಿತ ನಾಯಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಗೊಂದಲ ಪರಿಹರಿಸಿ ಮುಂದಿನ ನಾಯಕತ್ವ ನಿರ್ಧರಿಸಿ ಎನ್ನುವ ಮನವಿ ಮಾಡಿದ್ದಾರೆ. ಈ ಅಧಿಕಾರ ಹಸ್ತಾಂತರದ ರಾಜಕೀಯ ಚಟುವಟಿಕೆಗಳ ನಡುವೆ ಸಂಪುಟ ಪುನಾರಚನೆ (cabinet reshuffle) ಕೂಗು ಕೇಳಿಬಂದಿದೆ. ಮೊದಲ ಬಾರಿಗೆ ಗೆದ್ದಿರುವ ಕಾಂಗ್ರೆಸ್​​ನ 31 ಶಾಸಕರು ಕಾಂಗ್ರೆಸ್ ಹೈಕಮಾಂಡ್ ನಾಯಕರಿಗೆ ಪತ್ರ ಬರೆದಿದ್ದು, ಸಂಪುಟ ವಿಸ್ತರಣೆ ಮಾಡಿ, ನಮಗೂ ಅವಕಾಶ ಕೊಡಿ ಎಂದು ಧ್ವನಿ ಎತ್ತಿದ್ದಾರೆ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲ ಕರ್ನಾಟಕ ಪ್ರವಾದಲ್ಲಿರುವಾಗಲೇ ಸಂಪುಟ ಪುನರ್‌ ರಚನೆ ದಾಳ ಉರುಳಿಸಿದ್ದು, ಭಾರೀ ಸಂಚಲನ ಮೂಡಿಸಿದೆ.

ಶಾಸಕರು ಬರೆದಿರುವ ಪತ್ರದ ಸಾರಾಂಶ

ಕಾಂಗ್ರೆಸ್​ನಿಂದ ಮೊದಲ ಬಾರಿ 38 ಶಾಸಕರು ಆಯ್ಕೆಯಾಗಿದ್ದಾರೆ. ಈ ಮೂಲಕ ಯುವಕರ ಅವಶ್ಯಕತೆ ಇದೆ ಎಂದು ಜನ ಹೇಳಿದ್ದಾರೆ. ಮೊದಲ ಬಾರಿ ಗೆದ್ದವರಿಗೆ ಸಚಿವ ಸ್ಥಾನ ನೀಡಿ ಜನಾದೇಶಕ್ಕೆ ಮನ್ನಣೆ ನೀಡಿ. ಯುವಕರಿಗೆ ಅವಕಾಶ ನೀಡುವುದು ಈ ಕ್ಷಣದ ಬೇಡಿಕೆಯಾಗಿದೆ. ಮೊದಲ ಬಾರಿ ಗೆದ್ದಿರುವ ಐವರು ಶಾಸಕರಿಗೆ ಸಚಿವ ಸ್ಥಾನ ನೀಡಿ. ಬೇರೆ ಸರ್ಕಾರದಲ್ಲಿ ಮೊದಲ ಬಾರಿ ಶಾಸಕರು ಸಿಎಂ ಆಗಿದ್ದಾರೆ. ಹೊಸಬರಿಗೆ ಅವಕಾಶ ನೀಡಿದ್ರೆ ಮುಂದಿನ ಚುನಾವಣೆ ಗೆಲ್ಲಲು ಸಹಕಾರಿಯಾಗಲಿದೆ. ಪಕ್ಷ ನಿಷ್ಠೆ, ಸೈದ್ದಾಂತಿಕವಾಗಿ ಗಟ್ಟಿಯಾಗಿರುವವರಿಗೆ ಅವಕಾಶ ನೀಡಿ ಎಂದು ಶಾಸಕರು ಹೈಕಮಾಂಡ್​​ಗೆ ಪತ್ರ ಬರೆದಿದ್ದಾರೆ.

ಇದನ್ನು ಓದಿ: ಅಧಿಕಾರ ಹಂಚಿಕೆ ಬಿಕ್ಕಟ್ಟು: ಕಾಂಗ್ರೆಸ್​ನಲ್ಲಿ ರೂಪುಗೊಳ್ಳುತ್ತಿದೆಯಾ ಮತ್ತೊಂದು ಪವರ್ ಸೆಂಟರ್!

ಹೈಕಮಾಂಡ್​ ಗೆ ಪತ್ರ ಬರೆದ ಕೈ ಶಾಸಕರು


ಶಾಸಕರಾದ ಎ.ಎಸ್.ಪೊನ್ನಣ್ಣ, ಭೀಮಸೇನ ಚಿಮ್ಮನಕಟ್ಟಿ, ಪ್ರದೀಪ್​ ಈಶ್ವರ್, ಇಕ್ಬಾಲ್​ ಹುಸೇನ್, ಎನ್​.ಟಿ.ಶ್ರೀನಿವಾಸ, ಅಶೋಕ್ ಕುಮಾರ್ ರೈ, ಎನ್​.ಶ್ರೀನಿವಾಸ, ದರ್ಶನ್ ಧ್ರುವನಾರಾಯಣ, ಶಿವಗಂಗಾ ಬಸವರಾಜು, ವಿಶ್ವಾಸ್ ವೈದ್ಯ, ನಾರಾ ಭರತ್ ರೆಡ್ಡಿ, ಪ್ರಕಾಶ್ ಕೋಳಿವಾಡ, ಕೆ.ಎಸ್.ಆನಂದ, ಮಂಥರ್ ಗೌಡ, ಚನ್ನಾರೆಡ್ಡಿ ಪಾಟೀಲ್, ದೇವೇಂದ್ರಪ್ಪ. ಡಿ.ರವಿಶಂಕರ್, ನಯನಾ ಮೋಟಮ್ಮ, ರಾಜಾವೇಣುಗೋಪಾಲ ನಾಯಕ, ಮಹೇಂದ್ರ ತಮ್ಮಣ್ಣನವರ್, ಎ.ಸಿ.ಶ್ರೀನಿವಾಸ, ಅಶೋಕ್ ಮನಗೂಳಿ, ಪಿ.ರವಿಕುಮಾರ್, ಬಾಬಾಸಾಹೇಬ್ ಪಾಟೀಲ್ ಸೇರಿ 31 ಶಾಸಕರು ಪತ್ರ ಬರೆದಿದ್ದಾರೆ.

ಸಂಪುಟ ಪುನರ್‌ ರಚನೆಯ ದಾಳ

ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ಗುಸುಗುಸು ಮತ್ತು ಗೊಂದಲಗಳು ಜೋರಾಗಿರುವ ಸಮಯದಲ್ಲೇ ದಲಿತ ಸಿಎಂ ಕೂಗು ಕೇಳಿಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ‘ದಲಿತ ಸಿಎಂ ಕಾಂಗ್ರೆಸ್‌ನಿಂದ ಮಾತ್ರ’ ಎಂಬ ಸಂದೇಶ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ. ಡಿಕೆ ಶಿವಕುಮಾರ್, ಸಿಎಂ ಪಟ್ಟದ ಪಟ್ಟು ಜೋರಾಗಿದ್ದರಿಂದ ಸಿದ್ದರಾಮಯ್ಯ ದಲಿತ ಸಿಎಂ ದಾಳ ಉರುಳಿಸಿದ್ರಾ ಎನ್ನುವ ಚರ್ಚೆಗಳು ಶುರುವಾಗಿವೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಈ ಎಲ್ಲಾ ಬೆಳವಣಿಗೆಗಳ ನಡುವೆ ಫಸ್ಟ್​​ ಟೈಮ್ ಶಾಸಕರ ಪತ್ರ ಕಾಂಗ್ರೆಸ್​​ನಲ್ಲಿ ಹಲ್ ಚಲ್ ಎಬ್ಬಿಸಿದ್ದು, ಇದು ಯಾವ ಸ್ವರೂಪ ಪಡೆದುಕೊಳ್ಳಲಿದೆ ಎನ್ನುವುದೇ ಕುತೂಹಲ ಮೂಡಿಸಿದೆ.

ಒಟ್ಟಿನಲ್ಲಿ ಕಾಂಗ್ರೆಸ್ ಕೋಟೆಯಲ್ಲಿ ನಾಯಕತ್ವ ಬದಲಾವಣೆ ಕಿಚ್ಚು ಕಾವೇರಿದ ಮಧ್ಯೆ ದಲಿತ ಸಿಎಂ, ಸಂಪುಟ ಪುನಾರಚನೆ ಕೂಗು ಜೋರಾಗಿದ್ದು, ಕರ್ನಾಟಕ ಕಾಂಗ್ರೆಸ್​​ನಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಹೀಗಾಗಿ ಈ ಎಲ್ಲಾ ವಿದ್ಯಮಾನಗಳು ಯಾವ ಹಂತಕ್ಕೆ ಹೋಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಕಾರ್ ವಾಶ್ ಮಾಡಿ ಜೀವನ ನಡೆಸುವ ವೃದ್ಧೆಗೆ ಸರ್ಪ್ರೈಸ್ ಉಡುಗೊರೆ ನೀಡಿದ ವ್ಯಕ್ತಿ – Kannada News | Man makes grandmother happy by giving her a gift while she is washing the car

ಮುಂಬೈ, ಫೆಬ್ರವರಿ 23: ಸ್ವಾಭಿಮಾನದ ಬದುಕೇ ಹಾಗೆ, ಎಷ್ಟೇ ಕಷ್ಟ ಆದ್ರೂ ದುಡಿಮೆ ತಿಂತಾರೆ ಹೊರತು ಯಾರ ಮುಂದೆಯೂ ಕೈ ಚಾಚಲ್ಲ. ಅದರಲ್ಲೂ ಇಳಿ ವಯಸ್ಸಿನ ವ್ಯಕ್ತಿಗಳು ಕಷ್ಟ ಪಟ್ಟು ದುಡಿಯುವುದನ್ನು ನೋಡಿದ್ರೆ ಕಣ್ಣಲ್ಲಿ ನೀರು ಬರುತ್ತದೆ. ಇದೀಗ ಇಲ್ಲೊಬ್ಬ ವೃದ್ಧೆಯೂ (elderly woman) ಮುಂಬೈ ರಸ್ತೆಯಲ್ಲಿ ಧೂಳು ಹಿಡಿದ ಕಾರುಗಳನ್ನು ತೊಳೆದು ಮೂರು ಹೊತ್ತಿನ ಕೂಳನ್ನು ಸಂಪಾದಿಸಿಕೊಳ್ಳುತ್ತಿದ್ದಾರೆ. ಈ ಅಜ್ಜಿಗೆ ವ್ಯಕ್ತಿಯೊಬ್ಬರು ಸರ್ಪ್ರೈಸ್ ಉಡುಗೊರೆ ನೋಡಿ ಖುಷಿ ಪಡಿಸುವ ದೃಶ್ಯವು ನೆಟ್ಟಿಗರ ಹೃದಯ ಗೆದ್ದಿದೆ.

ಹುಸೇನ್ ಮನ್ಸೂರಿ (Hussain Mansuri) ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ವೃದ್ಧೆಯೊಬ್ಬರು ಮುಂಬೈ ರಸ್ತೆಯಲ್ಲಿ ಧೂಳು ಹಿಡಿದು ನಿಂತಿರುವ ಕಾರನ್ನು ವಾಶ್ ಮಾಡುತ್ತಿರುವುದನ್ನು ಕಾಣಬಹುದು. ಇದೇ ವೇಳೆ ಅಜ್ಜಿಯ ಕಾಯಕವನ್ನು ಗಮನಿಸಿದ ಹುಸೇನ್ ಮನ್ಸೂರಿ ಎಂಬ ವ್ಯಕ್ತಿ ತಮ್ಮ ಕಾರನ್ನು ಗಲೀಜು ಮಾಡಿಕೊಂಡು ಅಜ್ಜಿಯ ಮುಂದೆ ತಂದು ನಿಂತಿದ್ದಾರೆ. ಅಜ್ಜಿಯ ಬಳಿ ಕಾರು ಸ್ವಚ್ಛಗೊಳಿಸಲು ಹೇಳಿ, ಕೊನೆಗೆ ವೃದ್ಧೆಯ ಕೈಗೆ ಹಣವನ್ನು ಇಟ್ಟಿದ್ದಾರೆ. ಅದಲ್ಲದೇ ವೃದ್ಧೆಗೆ ಸೀರೆ ಸೇರಿದಂತೆ ಉಡುಗೊರೆ ನೀಡಿ ಖುಷಿ ಪಡಿಸಿದ್ದಾರೆ. ಅಪರಿಚಿತ ವ್ಯಕ್ತಿಯೊಬ್ಬರು ಉಡುಗೊರೆ ನೀಡಿದ್ದನ್ನು ನೋಡಿ ಅಜ್ಜಿ ಭಾವುಕರಾಗಿದ್ದಾರೆ. ಇದೇ ವೇಳೆ ವ್ಯಕ್ತಿಯೂ ಅಪ್ಪಿಕೊಂಡು ಸಮಾಧಾನ ಮಾಡಿರುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ರೈಲಿನಲ್ಲಿ ಬ್ರೇಸ್ಲೆಟ್‌ ಮಾರಿ ಸ್ವಾಭಿಮಾನದ ಬದುಕು ಕಟ್ಟಿಕೊಂಡ ಅಜ್ಜಿ, ವೈರಲ್ ಆಯ್ತು ದೃಶ್ಯ

ಈ ವಿಡಿಯೋ ಎರಡು ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಕಣ್ಣಲ್ಲಿ ನೀರು ಬಂತು ಎಂದರೆ, ಇನ್ನೊಬ್ಬರು, ಇಳಿ ವಯಸ್ಸಿನಲ್ಲಿ ದುಡಿಯುವವರು ಯುವಕರಿಗೆ ಮಾದರಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಒಳ್ಳೆಯ ಮನಸ್ಸಿನ ವ್ಯಕ್ತಿಗಳು ಕಾಣ ಸಿಗುವುದೇ ಅಪರೂಪ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:47 pm, Mon, 23 February 26

Source link

ಅಡ್ಡಪಲ್ಲಕ್ಕಿ ಉತ್ಸವ ವೇಳೆ ಗುಂಡು ಹಾರಿಸಿದ ಬಸನಗೌಡ ಪಾಟೀಲ್ ಅರೆಸ್ಟ್: ಶೋ ಕೊಡಲು ಹೋಗಿ ಲಾಕ್ – Kannada News | Koppal Police Arrests basanagouda patil for air firing during addapallakki procession in yelburga

ಕೊಪ್ಪಳ, (ಫೆಬ್ರವರಿ 23): ಜಿಲ್ಲೆಯ ಯಲಬುರ್ಗಾದಲ್ಲಿ  (Yalburga) ನಡೆದ ಅಡ್ಡಪಲ್ಲಕ್ಕಿ ಮೆರವಣಿಗೆಯ ವೇಳೆ, ಬಸನಗೌಡ ಪಾಟೀಲ್ ಗಾಳಿಯಲ್ಲಿ ಗುಂಡು (Air Fire) ಹಾರಿಸಿ ಸಂಭ್ರಮಿಸಿದ್ದರು. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ  (Social Media) ವೈರಲ್ ಆದ ಬಳಿಕ ಈ ಸಂಬಂಧ ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಆರ್ಮ್ಸ್ ಆ್ಯಕ್ಟ್ ಅಡಿ ಪ್ರಕರಣ ದಾಖಲಾಗಿದ್ದು, ಇದೀಗ ಸಿಂದಗಿ ಮೂಲದ ಬಸನಗೌಡ ಪಾಟೀಲ್ ಎನ್ನುವಾತನನ್ನು ಬಂಧಿಸಲಾಗಿದೆ. ಜೊತೆಗೆ ಪೊಲೀಸರು, ಪಿಸ್ತೂಲು ಹಾಗೂ ಜೀವಂತ ಬುಲೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕೊಪ್ಪಳ (Koppal) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ರಾಮ್ ಎಲ್ ಅರಸಿದ್ದಿ ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಕೊಪ್ಪಳ ಎಸ್ಪಿ ಡಾ ರಾಮ್ ಎಲ್ ಅರಸಿದ್ದಿ, ಕೊಪ್ಪಳದ‌ ಯಲಬುರ್ಗಾ ಪಟ್ಟಣದಲ್ಲಿ ಏರಫೈರ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಂಡು ಹಾರಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಸೋಶಿಯಲ್‌ ಮೀಡಿಯಾ ಟೀಂ ಮಾನಿಟರಿಂಗ್ ಮಾಡುವ ವೇಳೆ ಏರಫೈರ್ ಮಾಡಿರುವ ವಿಷಯ ಗೊತ್ತಾಯಿತು.ಜನೆವರಿ 21 ರಂದು ಅಡ್ಡಪಲ್ಲಕ್ಕಿ ವೇಳೆ ಏರಪೈರ್ ಮಾಡಿರುವ ವಿಷಯ ವಾಟ್ಸಪ್ ಮೂಲಕ ಗೋತ್ತಾಯಿತು. ಈ ಸಂಬಂಧ ಯಲಬುರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರ್ಮ್ಸ್ ಆ್ಯಕ್ಟ್ ಅಡಿ ಪ್ರಕರಣ ದಾಖಲಾಗಿದ್ದು, ಸಿಂದಗಿ ಮೂಲದ ಬಸನಗೌಡ ಪಾಟೀಲ್ ನನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ತುಂಗಾ ನದಿ ತೀರದಲ್ಲಿ ವಿದೇಶಿಗರ ಪಾರ್ಟಿ! ರೆಸಾರ್ಟ್ ಮಾಲೀಕರ ಮೇಲೆ ಬಿತ್ತು ಕೇಸ್

ವೆಪನ್ ಲೈಸನ್ಸ್ ವಿಜಯಪುರ ಜಿಲ್ಲೆಗೆ ಮಾತ್ರ ಸಮೀತವಾಗಿತ್ತು. ಎರಡು ರೌಂಡ್ ಏರಫೈರ್ ಮಾಡಿದ್ದಕ್ಕೆ ವೆಪನ್ ಸೀಜ್ ಮಾಡಲಾಗಿದೆ. ಸೋಶಿಯಲ್ ಮೋಡಿಯಾವನ್ನು ನಾವು ಸತತವಾಗಿ ಮಾನಿಟರಿಂಗ್ ಮಾಡುತ್ತಿರುತ್ತೇವೆ. ವಿಲ್ಹಿಂಗ್, ಅಕ್ರಮ‌ ಚಟುವಟಿಕೆಗಳ ಮೇಲೆ ಮಾನಿಟರಿಂಗ್ ಮಾಡುತ್ತಿರುತ್ತೇವೆ. ಸೋಷಿಯಲ್ ಮೀಡಿಯಾದಲ್ಲಿ ಈ ರೀತಿ ಮಾಡಬಾರದು ಎಂದು ಎಚ್ಚರಿಕೆ ನೀಡಿದರು.

ಘಟನೆ ವಿವರ

ಕಳೆದ ಜನವರಿ 28 ರಂದು ಯಲಬುರ್ಗಾ ಪಟ್ಟಣದ ಪ್ರಸಿದ್ಧ ಶ್ರೀಧರ ಮುರಡಿ ಮಠದಿಂದ ಅಡ್ಡಪಲ್ಲಕ್ಕಿ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂಭ್ರಮದ ಮೆರವಣಿಗೆಯಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿ ಮೂಲದ ಬಸನಗೌಡ ಪಾಟೀಲ್ ಎಂಬುವವರು ಪಾಲ್ಗೊಂಡಿದ್ದರು. ಮೆರವಣಿಗೆ ಸಾಗುತ್ತಿದ್ದಾಗ ಭಕ್ತಿಯ ಉತ್ತುಂಗದಲ್ಲಿ ಅಥವಾ ತನ್ನ ಗತ್ತು ಪ್ರದರ್ಶಿಸುವ ಭರದಲ್ಲಿ ಬಸನಗೌಡ, ತನ್ನ ಬಳಿಯಿದ್ದ ಪಿಸ್ತೂಲನ್ನು ತೆಗೆದು ಸಾರ್ವಜನಿಕರ ಸಮ್ಮುಖದಲ್ಲೇ ಗಾಳಿಯಲ್ಲಿ ಗುಂಡು ಹಾರಿಸಿದ್ದರು.

ಇನ್ನು ಬಸನಗೌಡ ಗುಂಡು ಹಾರಿಸುತ್ತಿದ್ದ ದೃಶ್ಯವನ್ನು ಅಲ್ಲಿದ್ದವರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಬಳಿಕ ವಿಡಿಯೋ ಸಾಮಾಜಿಕ ಜಾಲತಣಗಳಲ್ಲಿ ವರೈಲ್ ಅಗಿತ್ತು.ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರಗಳ ಬಳಕೆ ಮತ್ತು ಗಾಳಿಯಲ್ಲಿ ಗುಂಡು ಹಾರಿಸುವುದು ಕಾನೂನುಬಾಹಿರವಾಗಿರುವುದರಿಂದ, ಕೊಪ್ಪಳ ಜಿಲ್ಲಾ ಪೊಲೀಸರ ‘ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್’ ಈ ವಿಡಿಯೋವನ್ನು ಪತ್ತೆಹಚ್ಚಿ ತನಿಖೆಗೆ ಆದೇಶಿಸಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹುಬ್ಬಳ್ಳಿ: ರೈತರಿಗೆ ಭೂ ಪರಿಹಾರ ನೀಡದ ಹಿನ್ನೆಲೆ ರೈಲ್ವೆ ಇಲಾಖೆ ಕಚೇರಿ ಜಪ್ತಿ – Kannada News | Railway Department’s Deputy Chief Engineer’s Office Seized for Failing to Pay Farmers’ Compensation

ರೈಲ್ವೆ ಇಲಾಖೆ ಕಚೇರಿ ಜಪ್ತಿImage Credit source: Tv9 Kannada

ಹುಬ್ಬಳ್ಳಿ, ಫೆಬ್ರವರಿ 23: ರೈತರಿಗೆ ಭೂ ಪರಿಹಾರ ನೀಡದ ಹಿನ್ನೆಲೆ ನ್ಯಾಯಾಲಯದ ಆದೇಶದ ಅನ್ವಯ ಹುಬ್ಬಳ್ಳಿ ನಗರದಲ್ಲಿರುವ ರೈಲ್ವೆ ಇಲಾಖೆಯ ಡೆಪ್ಯೂಟಿ ಚೀಫ್​ ಎಂಜಿನಿಯರ್ ಕಚೇರಿಯಲ್ಲಿನ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ನೈರುತ್ಯ ರೈಲ್ವೆ ವಿಭಾಗಕ್ಕೆ ಸೇರಿದ ಕಚೇರಿಯಲ್ಲಿನ ಟೇಬಲ್, ಕಂಪ್ಯೂಟರ್ ಸೇರಿ ಅನೇಕ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ. 2017ರಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ರೈಲು ನಿಲ್ದಾಣಕ್ಕೆಂದು ಇಲಾಖೆ 16 ರೈತರಿಂದ ‌ 12.5 ಎಕರೆ ಭೂಮಿಯನ್ನು ನೈರುತ್ವ ರೈಲ್ವೆ ಸ್ವಾಧೀನಪಡಿಸಿಕೊಂಡಿತ್ತು. ಸ್ವಾಧಿನ ಪಡಿಸಿಕೊಳ್ಳಲಾದ ಜಾಗ ಕೃಷಿ ಜಮೀನಾಗಿದ್ದ ಹಿನ್ನೆಲೆ ಒಂದು ಎಕರೆಗೆ 18 ಲಕ್ಷ ಪರಿಹಾರ ನಿಗದಿ ಮಾಡಿ ನೀಡಲಾಗಿತ್ತು. ಆದರೆ ನೀಡಿರುವ ಪರಿಹಾರ ಕಡಿಮೆ ಆಗಿದೆ ಎಂದು ರೈತರು ಕೋರ್ಟ್​​ ಮೊರೆ ಹೋಗಿದ್ದರು.

ಭೂಸ್ವಾಧೀನ ಸಂಬಂಧ ವಿಚಾರಣೆ ನಡೆಸಿದ್ದ ಕೊಪ್ಪಳ ಜಿಲ್ಲಾ ನ್ಯಾಯಾಲಯ ಪ್ರತಿ ಚದರ್ ಅಡಿಗೆ 800 ರೂಪಾಯಿ ನಿಗದಿ ಮಾಡಿ ಮಾರ್ಚ್​​ 31, 2023ರಲ್ಲಿ ಆದೇಶ ಮಾಡಿತ್ತು. ನಂತರ ಪ್ರಕರಣವನ್ನು ಹುಬ್ಬಳ್ಳಿ ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿತ್ತು. ಈ ನಡುವೆ ಕೊಪ್ಪಳ ಜಿಲ್ಲಾ ನ್ಯಾಯಲಯದ ಈ ಆದೇಶದ ವಿರುದ್ಧ ಧಾರವಾಡ ಹೈಕೋರ್ಟ್ ಪೀಠಕ್ಕೆ ನೈರುತ್ಯ ರೈಲ್ವೆ ಇಲಾಖೆ ಮೇಲ್ಮನವಿ ಸಲ್ಲಿಸಿದ್ದು, ಶೇಕಡಾ 50ರಷ್ಟು ಹಣ ಪಾವತಿ ಮಾಡುವಂತೆ ನ್ಯಾಯಾಲಯ ಮಧ್ಯಂತರ ಆದೇಶ ನೀಡಿತ್ತು. ಆದರೆ ರೈಲ್ವೆ ಇಲಾಖೆ ಈ ಆದೇಶವನ್ನು ಕೂಡ ಪಾಲನೆ ಮಾಡಿರಲಿಲ್ಲ. ಹೀಗಾಗಿ ಹುಬ್ಬಳ್ಳಿ ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಆದೇಶದ ಹಿನ್ನೆಲೆ ಜಪ್ತಿ ಕಾರ್ಯ ನಡೆದಿದೆ. ಒಟ್ಟು 9 ಪ್ರಕರಣಗಳಲ್ಲಿ 90 ಕೋಟಿ ರೂಪಾಯಿ ಹಣವನ್ನು ಇಲಾಖೆ ನೀಡಬೇಕಿದ್ದರೂ ಕೇವಲ 7 ಕೋಟಿಯನ್ನಷ್ಟೇ ಜಮೆ ಮಾಡಿತ್ತು ಎನ್ನಲಾಗಿದೆ.

ಇದನ್ನೂ ಓದಿ: 60 ಸಾವಿರದ ಕ್ಯಾಮರಾ ಆರ್ಡರ್​​ ಮಾಡಿದ್ದ ಉದ್ಯಮಿಗೆ ಶಾಕ್​​; ಬಾಕ್ಸ್​​ನಲ್ಲಿ ಬಂದಿದ್ದು ವಾಷಿಂಗ್​ ಪೌಡರ್​!

ಆಲಮಟ್ಟಿ ಕೃಷ್ಣಾ ಮೇಲ್ದಂಡೆ ಯೋಜನೆ (UKP) ಕಾಲುವೆ ನಿರ್ಮಾಣಕ್ಕೆ ಜಮೀನು ನೀಡಿದ್ದ ರೈತರಿಗೆ ಸೂಕ್ತ ಪರಿಹಾರ ನೀಡದ ಹಿನ್ನೆಲೆಯಲ್ಲಿ, ವಿಜಯಪುರದ 1ನೇ ಹೆಚ್ಚುವರಿ ನ್ಯಾಯಾಲಯದ ಆದೇಶದಂತೆ ಕೃಷ್ಣಾ ಭಾಗ್ಯ ಜಲ ನಿಗಮದ (KBJNL) ವ್ಯವಸ್ಥಾಪಕ ನಿರ್ದೇಶಕರ (MD) ಕಚೇರಿಯನ್ನು ಮೊನ್ನೆ ಮೊನ್ನೆಯಷ್ಟೇ ಜಪ್ತಿ ಮಾಡಲಾಗಿತ್ತು. ಬಬಲೇಶ್ವರ ತಾಲೂಕಿನ ಅರ್ಜುಣಗಿ ಗ್ರಾಮದ ರೈತ ಮಹಾದೇವ ಲಿಗಾಡೆ ಹಾಗೂ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದ ಅಕ್ರುಸಾಬ ಮುಲ್ಲಾ ಸೇರಿದಂತೆ ಹಲವಾರು ರೈತರ ಜಮೀನನ್ನು ಕಾಲುವೆ ನಿರ್ಮಾಣಕ್ಕಾಗಿ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಆದರೆ, ವರ್ಷಗಳು ಕಳೆದರೂ ಸರ್ಕಾರ ಹಾಗೂ ಅಧಿಕಾರಿಗಳು ಸೂಕ್ತ ಪರಿಹಾರ ನೀಡಿರಲಿಲ್ಲ. ಈ ಘಟನೆ ಬೆನ್ನಲ್ಲೇ ಮತ್ತೊಂದು ಅದೇ ಮಾದರಿಯ ಪ್ರಕರಣ ನಡೆದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕೂಡಲೇ ಇರಾನ್ ಬಿಟ್ಟು ಹೊರಡಿ; ಅಮೆರಿಕದ ದಾಳಿಯ ಭೀತಿಯ ಬೆನ್ನಲ್ಲೇ ಭಾರತೀಯರಿಗೆ ಸರ್ಕಾರದಿಂದ ಹೊಸ ಸಲಹೆ – Kannada News | Leave Iran by all available means India issues fresh advisory for indian Citizens amid US strike fears

ನವದೆಹಲಿ, ಫೆಬ್ರವರಿ 23: ಭಾರತ ಸರ್ಕಾರ ಮತ್ತೊಮ್ಮೆ ಇರಾನ್‌ನಲ್ಲಿರುವ ತನ್ನ ನಾಗರಿಕರಿಗೆ ಸಾಧ್ಯವಾದಷ್ಟು ಬೇಗ ದೇಶ ಬಿಟ್ಟು ಹೊರಡಿ ಎಂದು ಸಲಹೆ ನೀಡಿದೆ. ಫೆಬ್ರವರಿ 23ರಂದು ಬಿಡುಗಡೆ ಮಾಡಿದ ಹೊಸ ಸಲಹೆಯಲ್ಲಿ ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾರತೀಯರು ಮನೆಗೆ ಮರಳಲು ವಾಣಿಜ್ಯ ವಿಮಾನಗಳು ಸೇರಿದಂತೆ ಲಭ್ಯವಿರುವ ಯಾವ ಸಾರಿಗೆಯನ್ನು ಬೇಕಾದರೂ ಬಳಸುವಂತೆ ಮನವಿ ಮಾಡಿದೆ. ಇರಾನ್​​ನಲ್ಲಿ (Iran) ಉದ್ವಿಗ್ನತೆ ಹೆಚ್ಚುತ್ತಿರುವುದರಿಂದ ಸಂಘರ್ಷದ ಭಯ ಹೆಚ್ಚುತ್ತಿರುವ ಕಾರಣದಿಂದ ಅಮೆರಿಕದ ಈ ಎಚ್ಚರಿಕೆ ಬಂದಿದೆ.

2026ರ ಜನವರಿ 5ರಂದು ಭಾರತ ಸರ್ಕಾರ ಹೊರಡಿಸಿದ ಸಲಹೆಯ ಮುಂದುವರಿಕೆಯಾಗಿ ಮತ್ತು ಇರಾನ್‌ನಲ್ಲಿನ ಗಂಭೀರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಪ್ರಸ್ತುತ ಇರಾನ್‌ನಲ್ಲಿರುವ ಭಾರತೀಯ ಪ್ರಜೆಗಳು (ವಿದ್ಯಾರ್ಥಿಗಳು, ಯಾತ್ರಿಕರು, ವ್ಯಾಪಾರಸ್ಥರು ಮತ್ತು ಪ್ರವಾಸಿಗರು) ವಾಣಿಜ್ಯ ವಿಮಾನಗಳು ಸೇರಿದಂತೆ ಲಭ್ಯವಿರುವ ಸಾರಿಗೆ ವಿಧಾನಗಳ ಮೂಲಕ ಇರಾನ್‌ನಿಂದ ಹೊರಹೋಗಲು ಸೂಚಿಸಲಾಗಿದೆ.

“ಎಲ್ಲಾ ಭಾರತೀಯ ನಾಗರಿಕರು ಮತ್ತು ಪಿಐಒಗಳು ಸರಿಯಾದ ಎಚ್ಚರಿಕೆ ವಹಿಸಬೇಕು. ಪ್ರತಿಭಟನೆಗಳು ಅಥವಾ ಪ್ರದರ್ಶನಗಳ ಪ್ರದೇಶಗಳನ್ನು ತಪ್ಪಿಸಬೇಕು, ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಬೇಕು ಮತ್ತು ಯಾವುದೇ ಬೆಳವಣಿಗೆಗಳಿಗಾಗಿ ಸ್ಥಳೀಯ ಮಾಧ್ಯಮಗಳನ್ನು ಗಮನಿಸುತ್ತಿರಬೇಕು” ಎಂದು ಸಲಹೆಯಲ್ಲಿ ಸೂಚಿಸಲಾಗಿದೆ.

ಇದನ್ನೂ ಓದಿ: ಅನಿವಾರ್ಯವಲ್ಲದಿದ್ದರೆ ಇರಾನ್​​ಗೆ ಹೋಗಬೇಡಿ; ಸರ್ಕಾರದಿಂದ ಭಾರತೀಯರಿಗೆ ಸೂಚನೆ

ವಿದ್ಯಾರ್ಥಿಗಳು, ಯಾತ್ರಿಕರು, ಉದ್ಯಮಿಗಳು ಮತ್ತು ಪ್ರವಾಸಿಗರು ಸೇರಿದಂತೆ ಇದೀಗ ಇರಾನ್‌ನಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳಿಗೆ ಭಾರತ ಸರ್ಕಾರದ ಈ ಸಲಹೆ ಅನ್ವಯಿಸುತ್ತದೆ. ಇರಾನ್​​ನಲ್ಲಿರುವ ಭಾರತೀಯರು ಜಾಗರೂಕರಾಗಿರಲು, ಪ್ರತಿಭಟನಾ ಪ್ರದೇಶಗಳ ಕಡೆ ಹೋಗುವುದನ್ನು ತಪ್ಪಿಸಲು ಮತ್ತು ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿಕಟ ಸಂಪರ್ಕದಲ್ಲಿರಲು ಜನರಿಗೆ ಸೂಚಿಸಲಾಗಿದೆ.

ಭಾರತೀಯ ನಾಗರಿಕರು ತಮ್ಮ ಪಾಸ್‌ಪೋರ್ಟ್‌ಗಳು ಮತ್ತು ಇತರ ಪ್ರಮುಖ ಪ್ರಯಾಣದ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಲು ತಿಳಿಸಲಾಗಿದೆ. ಇನ್ನೂ ರಾಯಭಾರ ಕಚೇರಿಯಲ್ಲಿ ನೋಂದಾಯಿಸದವರು ಅಧಿಕೃತ ಆನ್‌ಲೈನ್ ಪೋರ್ಟಲ್ ಮೂಲಕ ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ. ಇದರ ಜೊತೆಗೆ ತುರ್ತು ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: ಆದಷ್ಟು ಬೇಗ ದೇಶ ಬಿಟ್ಟು ಹೊರಡಿ; ಇರಾನ್​​ನ ಭಾರತೀಯ ಪ್ರಜೆಗಳಿಗೆ ಸೂಚನೆ, ಸಹಾಯವಾಣಿ ಸಂಖ್ಯೆ ಬಿಡುಗಡೆ

ಇರಾನ್ ಒಳಗೆ ಇಂಟರ್ನೆಟ್ ಸಮಸ್ಯೆಗಳಿದ್ದಲ್ಲಿ, ಭಾರತದ ಕುಟುಂಬಗಳು ಅವರ ಪರವಾಗಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ತಕ್ಷಣದ ಸಹಾಯಕ್ಕಾಗಿ ತುರ್ತು ಸಹಾಯವಾಣಿ ಸಂಖ್ಯೆಗಳನ್ನು ಸಹ ಹಂಚಿಕೊಳ್ಳಲಾಗಿದೆ. “ಭಾರತೀಯ ರಾಯಭಾರ ಕಚೇರಿಯ ತುರ್ತು ಸಂಪರ್ಕ ಸಹಾಯವಾಣಿಗಳನ್ನು ಕೆಳಗೆ ನೀಡಲಾಗಿದೆ: ಮೊಬೈಲ್ ಸಂಖ್ಯೆಗಳು: +989128109115; +989128109109; +989128109102; +989932179359. ಇಮೇಲ್: cons.tehran@mea.gov.in” ಎಂದು ಸರ್ಕಾರ ಹೇಳಿದೆ.

ಇರಾನ್‌ನ ಕೆಲವು ಭಾಗಗಳಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ನೇತೃತ್ವದ ಪ್ರತಿಭಟನೆಗಳು ಮತ್ತು ಪರಮಾಣು ಮಾತುಕತೆಗಳ ಕುರಿತು ಇರಾನ್ ಮತ್ತು ಅಮೆರಿಕದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಕಾರಣದಿಂದ ಈ ಸಲಹೆ ನೀಡಲಾಗಿದೆ. ಈ ವಾರದ ಕೊನೆಯಲ್ಲಿ ಜಿನೀವಾದಲ್ಲಿ ಮತ್ತೊಂದು ಸುತ್ತಿನ ಚರ್ಚೆಗಳು ನಡೆಯುವ ನಿರೀಕ್ಷೆಯಿದೆ. ಆದರೆ, ಒಪ್ಪಂದಕ್ಕೆ ಬರದಿದ್ದರೆ ಗಂಭೀರ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳು ಯುದ್ಧದ ಭೀತಿ ಸೃಷ್ಟಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಧುರಂಧರ್ 2 Vs ಟಾಕ್ಸಿಕ್: 10 ಕೋಟಿ ಮಂದಿ ಚಿತ್ರಮಂದಿರಕ್ಕೆ ಬರುವ ನಿರೀಕ್ಷೆ – Kannada News | Toxic and Dhurandhar 2 likely to witness combined total 10 Cr footfalls

20226ರ ಎರಡು ಬಹುನಿರೀಕ್ಷಿತ ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗುತ್ತಿರುವುದರ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ‘ಟಾಕ್ಸಿಕ್’ ಮತ್ತು ‘ಧುರಂಧರ್ 2’ (Dhurandhar 2) ಸಿನಿಮಾಗಳು ಮಾರ್ಚ್ 19ರಂದು ರಿಲೀಸ್ ಆಗಲಿವೆ. ಈ ಸಿನಿಮಾಗಳ ಕ್ಲ್ಯಾಶ್ ಬಗ್ಗೆ ಬಾಕ್ಸ್ ಆಫೀಸ್ ಪಂಡಿತರು ಹಲವು ರೀತಿ ಅಭಿಪ್ರಾಯಗಳನ್ನು ನೀಡುತ್ತಿದ್ದಾರೆ. ಇಂಥ ಕ್ಲ್ಯಾಶ್ ಉತ್ತಮವಲ್ಲ ಎಂದು ಬಹುತೇಕರು ಹೇಳುತ್ತಿದ್ದಾರೆ. ಅಚ್ಚರಿ ಎಂದರೆ, ‘ಧುರಂಧರ್ 2’ ಮತ್ತು ‘ಟಾಕ್ಸಿಕ್’ (Toxic) ಒಟ್ಟು ಸೇರಿ ಬರೋಬ್ಬರಿ 10 ಕೋಟಿ ಪ್ರೇಕ್ಷಕರನ್ನು ಸೆಳೆದುಕೊಳ್ಳಲಿವೆ ಎಂದು ಅಂದಾಜಿಸಲಾಗಿದೆ.

ಯಶ್ ಅವರು ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈಗಾಗಲೇ ಈ ಚಿತ್ರದ ಟೀಸರ್ ಧೂಳೆಬ್ಬಿಸಿದೆ. ‘ಕೆಜಿಎಫ್: ಚಾಪ್ಟರ್ 2’ ಗೆಲುವಿನ ಬಳಿಕ ಯಶ್ ನಟಿಸಿದ ಸಿನಿಮಾ ಎಂಬ ಕಾರಣಕ್ಕೆ ‘ಟಾಕ್ಸಿಕ್’ ಸಿಕ್ಕಾಪಟ್ಟೆ ಹೈಪ್ ಸೃಷ್ಟಿ ಮಾಡಿದೆ. ಈ ಸಿನಿಮಾಗೆ ಗೀತು ಮೋಹನ್​ದಾಸ್ ಅವರು ನಿರ್ದೇಶನ ಮಾಡಿದ್ದಾರೆ. ರುಕ್ಮಿಣಿ ವಸಂತ್, ನಯನತಾರಾ ಸೇರಿದಂತೆ ಅನೇಕರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

‘ಧುರಂಧರ್ 2’ ಸಿನಿಮಾ ಕೂಡ ಸಣ್ಣದೇನಲ್ಲ. ರಣವೀರ್ ಸಿಂಗ್, ಅರ್ಜುನ್ ರಾಮ್​ಪಾಲ್, ಸಾರಾ ಅರ್ಜುನ್, ಸಂಜಯ್ ದತ್ ಮುಂತಾದವರು ನಟಿಸಿರುವ ಈ ಸಿನಿಮಾಗೆ ಆದಿತ್ಯ ಧಾರ್ ಅವರು ನಿರ್ದೇಶನ ಮಾಡಿದ್ದಾರೆ. ‘ಧುರಂಧರ್’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿರುವುದರಿಂದ ಸೀಕ್ವೆಲ್ ಮೇಲೆ ನಿರೀಕ್ಷೆ ಜಾಸ್ತಿ ಇದೆ. ಮಾರ್ಚ್ 19ರಂದು ಈ ಸಿನಿಮಾ ಕೂಡ ಭರ್ಜರಿ ಓಪನಿಂಗ್ ಪಡೆದುಕೊಳ್ಳಲಿದೆ.

ಈ ಎರಡು ಸಿನಿಮಾಗಳ ಪೈಕಿ ಒಂದು ಚಿತ್ರದ ರಿಲೀಸ್ ದಿನಾಂಕ ಮುಂದೂಡಿಕೆ ಆದರೆ ದೊಡ್ಡ ಕ್ಲ್ಯಾಶ್ ತಪ್ಪುತ್ತದೆ. ಎರಡೂ ಸಿನಿಮಾಗಳು ಬೇರೆ ಬೇರೆ ದಿನಾಂಕಗಳಲ್ಲಿ ಬಿಡುಗಡೆ ಆದರೆ ತಲಾ 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಸಾಮರ್ಥ್ಯ ಹೊಂದಿವೆ. ಆದರೆ ಎರಡೂ ಚಿತ್ರತಂಡಗಳು ಹಠಕ್ಕೆ ಬಿದ್ದು ಒಂದೇ ದಿನ ರಿಲೀಸ್ ಆಗುತ್ತಿವೆ.

ಇದನ್ನೂ ಓದಿ: ರವಿ ಬಸ್ರೂರು ಮಾತ್ರವಲ್ಲ: ಟಾಕ್ಸಿಕ್ ಚಿತ್ರಕ್ಕೆ 5 ಸಂಗೀತ ನಿರ್ದೇಶಕರು; ಜೀ ಮ್ಯೂಸಿಕ್ ತೆಕ್ಕೆಗೆ ಆಡಿಯೋ ಹಕ್ಕು

‘ಟಾಕ್ಸಿಕ್’ ಚಿತ್ರತಂಡದವರು ಮೊದಲು ರಿಲೀಸ್ ದಿನಾಂಕ ಅನೌನ್ಸ್ ಮಾಡಿದ್ದರು. ಮಾರ್ಚ್ 19ರಂದು ಬಿಡುಗಡೆ ಎಂದು ಖಚಿತಪಡಿಸಿದ್ದರು. ಆದರೆ ‘ಧುರಂಧರ್ 2’ ಚಿತ್ರತಂಡ ಕೂಡ ಅದೇ ದಿನಾಂಕದಲ್ಲಿ ರಿಲೀಸ್ ಮಾಡುವುದಾಗಿ ಹಠ ಹಿಡಿದಿದೆ. ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ಹಲವು ಬಗೆಯ ಲೆಕ್ಕಾಚಾರಗಳು ನಡೆಯುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Luxury homes: ಐಷಾರಾಮಿ ಮನೆಗಳಲ್ಲಿ ಬೆಂಗಳೂರು, ಮುಂಬೈ ಅನ್ನು ಹಿಂದಿಕ್ಕಿದೆ ಗುರುಗ್ರಾಮ – Kannada News | Ultra Luxury homes, Gurugram pips Mumbai to become India’s largest market

ನವದೆಹಲಿ, ಫೆಬ್ರುವರಿ 23: ಹತ್ತು ಕೋಟಿ ರೂಗೂ ಅಧಿಕ ಮೌಲ್ಯದ ಅತಿ ಐಷಾರಾಮಿ ಮನೆಗಳಿಗೆ (Ultra-luxury homes) ದೇಶದಲ್ಲೇ ಅತಿದೊಡ್ಡ ಮಾರುಕಟ್ಟೆ ಎಂದರೆ ಬೆಂಗಳೂರು, ಮುಂಬೈ, ದೆಹಲಿ ಮುಂತಾದ ನಗರಗಳ ಹೆಸರು ಮೊದಲು ಎದುರಾಗುತ್ತದೆ. ಆದರೆ, 2025ರಲ್ಲಿ ಅಲ್ಟ್ರಾ ಲಕ್ಷುರಿ ಮನೆಗಳಿಗೆ ದೇಶದಲ್ಲೇ ಅತಿದೊಡ್ಡ ಮಾರುಕಟ್ಟೆ ಎನಿಸಿದ್ದು ಗುರುಗ್ರಾಮ್ ಅಂತೆ. ಇಂಡಿಯಾ ಸೋತೆಬೈಸ್ ಇಂಟರ್ನ್ಯಾಷನಲ್ ರಿಯಾಲ್ಟಿ ಹಾಗೂ ಸಿಆರ್​ಇ ಮ್ಯಾಟ್ರಿಕ್ಸ್​ನ ಇತ್ತೀಚಿನ ಹೈ ಎಂಡ್ ಲಕ್ಸುರಿ ಹೌಸಿಂಗ್ ರಿಪೋರ್ಟ್ ಪ್ರಕಾರ 10 ಕೋಟಿ ರೂಗೂ ಅಧಿಕ ಮೌಲ್ಯದ ಮನೆಗಳು ಅತಿಹೆಚ್ಚು ಸೇಲ್ ಆಗಿದ್ದು ಗುರುಗ್ರಾಮ್​ನಲ್ಲಿ.

ದೆಹಲಿ ಎಡಬದಿಯಲ್ಲಿರುವ, ಹಾಗೂ ಹರ್ಯಾಣ ರಾಜ್ಯಕ್ಕೆ ಸೇರಿದ ಗುರುಗ್ರಾಮ್​ನಲ್ಲಿ 2025ರ ಕ್ಯಾಲಂಡರ್ ವರ್ಷದಲ್ಲಿ 24,120 ಕೋಟಿ ರೂ ಮೊತ್ತದ ಅಲ್ಟ್ರಾ ಲಕ್ಷುರಿ ಮನೆಗಳು ಮಾರಾಟವಾಗಿವೆಯಂತೆ. ಇದು ದೇಶದಲ್ಲೇ ಗರಿಷ್ಠ.

ಇದನ್ನೂ ಓದಿ: ಚಿನ್ನ, ಬೆಳ್ಳಿ ಬೆಲೆಗಳು ಅತಿಯಾಗಿ ಏರಿದ್ದು ಯಾಕೆಂದು ಕಾರಣ ಬಿಚ್ಚಿಟ್ಟ ನಿರ್ಮಲಾ ಸೀತಾರಾಮನ್

ಈ ವರದಿ ಪ್ರಕಾರ, 2025ರಲ್ಲಿ ಗುರುಗ್ರಾಮ್​ನಲ್ಲಿ ಮಾರಾಟವಾದ 10 ಕೋಟಿ ರೂಗೂ ಅಧಿಕ ಮೌಲ್ಯದ ಐಷಾರಾಮಿ ಮನೆಗಳ ಸಂಖ್ಯೆ 1,494. ಕೇವಲ ಎರಡು ವರ್ಷಗಳ ಹಿಂದೆ (2023) ಇಲ್ಲಿ ಮಾರಾಟವಾದ ಇಂಥ ಮನೆಗಳ ಸಂಖ್ಯೆ ಕೇವಲ 155. ಈಗ ಇಷ್ಟು ಸಂಖ್ಯೆಯಲ್ಲಿ ಮಾರಾಟ ಹೆಚ್ಚಳ ಆಗಿರುವುದು ಸೋಜಿಗದ ಸಂಗತಿ. ಎರಡೇ ವರ್ಷದಲ್ಲಿ ಬಹುತೇಕ ಹತ್ತು ಪಟ್ಟು ಹೆಚ್ಚು ಮನೆಗಳು ಸೇಲ್ ಆಗಿವೆ.

ಐಷಾರಾಮಿ ಮನೆಗಳು 2025ರಲ್ಲಿ ಅತಿಹೆಚ್ಚು ಮಾರಾಟ ಕಂಡ ನಗರಗಳು (10 ಕೋಟಿ ರೂಗಿಂತ ಹೆಚ್ಚು)

  1. ಗುರುಗ್ರಾಮ್: 24,120 ಕೋಟಿ ರೂ
  2. ಮುಂಬೈ: 21,902 ಕೋಟಿ ರೂ
  3. ನೋಯ್ಡಾ: 9,358 ಕೋಟಿ ರೂ
  4. ಹೈದರಾಬಾದ್: 8,140 ಕೋಟಿ ರೂ
  5. ಬೆಂಗಳೂರು: 2,319 ಕೋಟಿ ರೂ

ಇದನ್ನೂ ಓದಿ: ಐಡಿಎಫ್​ಸಿ ಫಸ್ಟ್ ಬ್ಯಾಂಕ್​ನಲ್ಲಿ ನೂರಾರು ಕೋಟಿ ರೂ ಲೂಟಿ; ಹೂಡಿಕೆದಾರರಿಗೆ 14,000 ಕೋಟಿ ರೂ ನಷ್ಟ; ಏನಿದು ಹಗರಣ?

ಗುರುಗ್ರಾಮ್ ಕಳೆದ ಎರಡು ವರ್ಷದಲ್ಲಿ ಐಷಾರಾಮಿ ಮನೆಗಳಿಗೆ ದೊಡ್ಡ ಮಾರುಕಟ್ಟೆಯಾಗಿ ಬೆಳೆದಿರುವುದು ಹೇಗೆ? ಗುರುಗ್ರಾಮ್​ನಲ್ಲಿ ಲಕ್ಷುರಿ ಕಾರಿಡಾರ್​ಗಳು ಹೆಚ್ಚುತ್ತಿವೆ. ದ್ವಾರಕಾ ಎಕ್ಸ್​ಪ್ರೆಸ್​ವೇ, ಗಾಲ್ಫ್ ಕೋರ್ಸ್ ರೋಡ್, ಗಾಲ್ಫ್ ಕೋರ್ಸ್ ಎಕ್ಸ್​ಟೆನ್ಷನ್ ರೋಡ್ ಇತ್ಯಾದಿ ಸ್ಥಳಗಳು, ಮೂಲಸೌಕರ್ಯ ಅಭಿವೃದ್ಧಿ, ವಿವಿಧ ಪ್ರದೇಶಗಳ ನಡುವೆ ಸಂಪರ್ಕ ಹೆಚ್ಚಳ ಇತ್ಯಾದಿ ಕಾರಣಗಳಿಂದ ಶ್ರೀಮಂತರು ಗುರುಗ್ರಾಮ್​ನಲ್ಲಿ ಮನೆ ಮಾಡಿಕೊಂಡು ನೆಲಸಲು ಬಯಸುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಗೃಹಣಿಯರೇ… ಪಾತ್ರೆ ತೊಳೆಯುವ ಸ್ಪಾಂಜ್‌ಗಳನ್ನು ಎಷ್ಟು ಬಾರಿ ಬದಲಾಯಿಸಬೇಕು ತಿಳ್ಕೊಳ್ಳಿ – Kannada News | What happens if you use dishwashing sponge for a long time?

ಪ್ರತಿಯೊಬ್ಬರೂ ಅಡುಗೆ ಮನೆಯ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಾರೆ. ಪಾತ್ರೆ ತೊಳೆಯುವುದರಿಂದ ಹಿಡಿದು ಗ್ಯಾಸ್‌ ಸ್ಟೌವ್‌ ಕ್ಲೀನ್‌ ಮಾಡುವುದರವರೆಗೆ ಪ್ರತಿಯೊಂದರ ಸ್ವಚ್ಛತೆಯ ಬಗ್ಗೆಯೂ ಕಾಳಜಿ ವಹಿಸುತ್ತಾರೆ. ಆದ್ರೆ ಪಾತ್ರೆ ತೊಳೆಯಲು ಬಳಸುವ ಸ್ಪಾಂಜ್‌ಗಳ (sponges) ಬಗ್ಗೆ ಯಾರೂ ಸಹ ಗಮನಹರಿಸುವುದಿಲ್ಲ. ಒಂದೇ ಸ್ಪಾಂಜ್‌ ಅನ್ನು ತಿಂಗಳಾನುಗಟ್ಟಲೆ ಬಳಸುತ್ತಿರುತ್ತಾರೆ. ಈ ಒಂದು ಸಣ್ಣ ತಪ್ಪು ಸಹ ಕಾಯಿಲೆ ಹರಡಲು ಕಾರಣವಾಗಬಹುದು. ಹಾಗಿದ್ರೆ ಪಾತ್ರೆ ತೊಳೆಯಲು ಹೆಚ್ಚು ಸಮಯ ಒಂದೇ ಸ್ಪಾಂಜ್‌ ಅನ್ನು ಬಳಸುವುದರಿಂದ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತದೆ, ಸ್ಪಾಂಜ್‌, ಸ್ಕ್ರಬ್ಬರ್‌ಗಳನ್ನು ಎಷ್ಟು ದಿನಗಳಿಗೊಮ್ಮೆ ಬದಲಾಯಿಸಬೇಕು ಎಂಬುದನ್ನು ತಿಳಿಯಿರಿ.

ಪಾತ್ರೆ ತೊಳೆಯಲು ಒಂದೇ ಸ್ಪಾಂಜ್‌ ದೀರ್ಘಕಾಲ ಬಳಸುವುದು ಏಕೆ ಅಪಾಯಕಾರಿ?

ಪಾತ್ರೆ ತೊಳೆಯಲು ಬಳಸುವ ಸ್ಪಾಂಜ್‌ ಚಿಕ್ಕದಾಗಿ ಕಾಣಬಹುದು ಆದರೆ ಅದು ಬ್ಯಾಕ್ಟೀರಿಯಾಗಳಿಗೆ ಸಂತಾನೋತ್ಪತ್ತಿ ಮಾಡುವ ಸ್ಥಳವಾಗಬಹುದು. ಹೌದು ಪಾತ್ರೆ ತೊಳೆಯುವ ಸ್ಪಂಜುಗಳು ಅಥವಾ ಸ್ಕ್ರಬ್ ಬ್ರಷ್‌ಗಳು ಹೆಚ್ಚಿನ ಸಮಯ ಒದ್ದೆಯಾಗಿರುತ್ತವೆ. ಅವುಗಳನ್ನು ದಿನಕ್ಕೆ 3 ರಿಂದ ನಾಲ್ಕು ಬಾರಿ ಬಳಸುವುದರಿಂದ, ಅವು ಒಣಗಲು ಅವಕಾಶ ಸಿಗುವುದಿಲ್ಲ, ಅಲ್ಲದೆ ಸ್ಪಂಜಿನ ಸಣ್ಣ ರಂಧ್ರಗಳಲ್ಲಿ ಆಹಾರದ ಕಣಗಳು ಹಿಡಿದಿಟ್ಟುಕೊಳ್ಳುತ್ತವೆ.  ಇದು ತೇವಾಂಶ ಮತ್ತು ಕೊಳಕು ಬ್ಯಾಕ್ಟೀರಿಯಾಗಳು ಬೆಳೆಯಲು ಸೂಕ್ತವಾದ ವಾತಾವರಣವನ್ನು ಸೃಷ್ಟಿಸುತ್ತದೆ. ನಂತರದಲ್ಲಿ ಅಪಾಯಕಾರಿ ಸೂಕ್ಷ್ಮಜೀವಿಗಳು ಬೆಳೆದು ರೋಗಗಳನ್ನು ಹರಡುತ್ತವೆ. ಕೊಳಕು ಸ್ಪಾಂಜ್‌ಗಳಲ್ಲಿ ಟಾಯ್ಲೆಟ್ ಸೀಟ್ ಗಿಂತ ಹೆಚ್ಚು ಬ್ಯಾಕ್ಟೀರಿಯಾಗಳು ಇರುತ್ತವಂತೆ. ಅದಕ್ಕಾಗಿ ಆಗಾಗ್ಗೆ ಸ್ಪಾಂಜ್‌ಗಳನ್ನು ಬದಲಾಯಿಸುತ್ತಿರಬೇಕು.

ಪಾತ್ರೆ ತೊಳೆಯಲು ಒಂದೇ ಸ್ಪಂಜನ್ನು ಬಳಸಿದರೆ ಏನಾಗುತ್ತದೆ?

ಸ್ಪಾಂಜ್‌ಗಳಲ್ಲಿರುವ ಬ್ಯಾಕ್ಟೀರಿಯಾಗಳು ಪಾತ್ರೆಗಳಿಗೆ ವರ್ಗಾಯಿಸಲ್ಪಟ್ಟು, ಇದು ಅತಿಸಾರ ಮತ್ತು ವಾಂತಿ, ತೀವ್ರ ಹೊಟ್ಟೆ ನೋವು ಮತ್ತು ಕರುಳಿನ ಸೋಂಕುಗಳಿಗೆ ಕಾರಣವಾಗಬಹುದು.  ಇನ್ನೂ ಈ ಬ್ಯಾಕ್ಟೀರಿಯಾಗಳು ಕೈಗಳ ಮೂಲಕ ದೇಹವನ್ನು ಪ್ರವೇಶಿಸಬಹುದು, ಇದು ಇಡೀ ಕುಟುಂಬಕ್ಕೆ ಅನಾರೋಗ್ಯವನ್ನುಂಟುಮಾಡುತ್ತದೆ.  ಅಲ್ಲದೆ ಒಂದೇ ಸ್ಪಾಂಜ್ ಅನ್ನು ದೀರ್ಘಕಾಲದವರೆಗೆ ಬದಲಾಯಿಸದಿದ್ದರೆ, ಅದು ಶಿಲೀಂಧ್ರವನ್ನು ಬೆಳೆಸಿಕೊಳ್ಳಬಹುದು ಮತ್ತು ಇದು ವಿಚಿತ್ರ ಮತ್ತು ಕೆಟ್ಟ ವಾಸನೆಯನ್ನು ಉಂಟು ಮಾಡುತ್ತದೆ.

ಇದನ್ನೂ ಓದಿ: ಕೊಳೆಗಟ್ಟಿದ ಗ್ಯಾಸ್‌ ಸ್ಟೌವ್‌ ಬರ್ನರ್‌ ಕ್ಲೀನ್‌ ಮಾಡಲು ಸಿಂಪಲ್‌ ಟಿಪ್ಸ್‌ ಫಾಲೋ ಮಾಡಿ

ಪಾತ್ರೆ ತೊಳೆಯುವ ಸ್ಪಾಂಜ್ ಅನ್ನು ಎಷ್ಟು ದಿನಗಳಿಗೊಮ್ಮೆ ಬದಲಾಯಿಸಬೇಕು?

ತಜ್ಞರು ಹೇಳುವಂತೆ ಪಾತ್ರೆ ತೊಳೆಯುವ ಸ್ಪಾಂಜ್ ಅನ್ನು ಪ್ರತಿ 7 ರಿಂದ 10 ದಿನಗಳಿಗೊಮ್ಮೆ ಬದಲಾಯಿಸಬೇಕು. ನೀವು ಪ್ರತಿದಿನ ಬಹಳಷ್ಟು ಪಾತ್ರೆಗಳನ್ನು ತೊಳೆಯುತ್ತಿದ್ದರೆ, ಪ್ರತಿ 7 ದಿನಗಳಿಗೊಮ್ಮೆ ಅದನ್ನು ಬದಲಾಯಿಸಬೇಕು. ನೀವು ಅದನ್ನು ವಿರಳವಾಗಿ ಬಳಸಿದರೂ ಸಹ, ಅದನ್ನು 2 ವಾರಗಳಿಗಿಂತ ಹೆಚ್ಚು ಕಾಲ ಇಟ್ಟುಕೊಳ್ಳಬೇಡಿ. ಹಳೆಯ ಸ್ಪಾಂಜ್ ಸ್ವಚ್ಛವಾಗಿ ಕಂಡರೂ ಸಹ, ಅದು ಬ್ಯಾಕ್ಟೀರಿಯಾಗಳ ಆಶ್ರಯತಾಣವಾಗಿರಬಹುದು. ಆದ್ದರಿಂದ 7 ರಿಂದ 10 ದಿನಗಳಿಗೊಮ್ಮೆ ಪಾತ್ರೆ ತೊಳೆಯುವ ಸ್ಪಾಂಜ್‌ ಬದಲಾಯಿಸಿ. ಸ್ಟೀಲ್ ಅಥವಾ ಸಿಲಿಕೋನ್ ಸ್ಕ್ರಬ್ಬರ್‌ಗಳು 1-2 ತಿಂಗಳುಗಳವರೆಗೆ ಬಾಳಿಕೆ ಬರಬಹುದು. ಸ್ಕ್ರಬ್ಬರ್ ವಾಸನೆ, ಬಿರುಕುಗಳು ಅಥವಾ ಬಣ್ಣ ಬದಲಾದರೆ, ಅದನ್ನು ತಕ್ಷಣ ಬದಲಾಯಿಸಿ.

ಪಾತ್ರೆ ತೊಳೆಯುವ ಸ್ಪಾಂಜ್‌ಗಳನ್ನು ಸ್ವಚ್ಛವಾಗಿಡಲು ಸುಲಭ ಮಾರ್ಗಗಳು:

  • ಪ್ರತಿ 2-3 ದಿನಗಳಿಗೊಮ್ಮೆ ಸ್ಪಾಂಜ್ ಅನ್ನು ಬೆಚ್ಚಗಿನ ನೀರು ಮತ್ತು ವಿನೆಗರ್‌ನಲ್ಲಿ 5-10 ನಿಮಿಷಗಳ ಕಾಲ ನೆನೆಸಿಡಿ.
  • ಪ್ರತಿ ಬಾರಿ ಪಾತ್ರೆ ತೊಳೆದ ನಂತರ ಬಿಸಿ ನೀರು ಮತ್ತು ಸೋಪಿನಿಂದ ಸ್ಕ್ರಬ್ಬರ್ ಅನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ನಂತರ ಅದನ್ನು ಚೆನ್ನಾಗಿ ಹಿಸುಕಿ ಒಣಗಲು ಬಿಡಿ.
  • ಸ್ಪಾಂಜ್ ಅನ್ನು ಚೆನ್ನಾಗಿ ತೊಳೆದು ಒಣ ಸ್ಥಳದಲ್ಲಿ ಸಂಗ್ರಹಿಸಿ. ಸಿಲಿಕೋನ್ ಬ್ರಷ್‌ಗಳು ಮತ್ತು ಸ್ಟೀಲ್ ಸ್ಕ್ರಬ್ಬರ್‌ಗಳು ಸ್ಪಾಂಜ್‌ಗಳಿಗಿಂತ ಉತ್ತಮ ಆಯ್ಕೆಗಳಾಗಿವೆ. ಇವು ಹೆಚ್ಚು ಕಾಲ ಬಾಳಿಕೆ ಬರುತ್ತವೆ ಮತ್ತು ಸ್ವಚ್ಛಗೊಳಿಸಲು ಸುಲಭ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಮತ್ತೊಂದು ದರೋಡೆ: ಅಧಿಕಾರಿಗಳ ಸೋಗಿನಲ್ಲಿ ಬಂದು ಲಕ್ಷಾಂತರ ರೂ ಹೊತ್ತೊಯ್ದರು – Kannada News | Devanahalli Robbery: 9 Arrested for 24 Lakh Fraud Posing as Fake Anti Corruption Officials

ದೇವನಹಳ್ಳಿ ಪೊಲೀಸ್ ಠಾಣೆImage Credit source: tv9 kannada

ದೇವನಹಳ್ಳಿ, ಫೆಬ್ರವರಿ 23: ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಭ್ರಷ್ಟಾಚಾರ ನಿಗ್ರಹ ದಳ‌ ಅಧಿಕಾರಿಗಳ ಸೋಗಿನಲ್ಲಿ ಎಂಟ್ರಿಕೊಟ್ಟು 24 ಲಕ್ಷ ರೂ ಹಣವನ್ನ ದೋಚಿ (Robbery) ಎಸ್ಕೇಪ್ ಆಗಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹೊರವಲಯದ ಪ್ರಸನ್ನಹಳ್ಳಿ ರಸ್ತೆಯಲ್ಲಿ ನಡೆದಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿದಂತೆ 12 ಜನರ ಪೈಕಿ 09 ಆರೋಪಿಗಳನ್ನ ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಕೃಷ್ಣಕುಮಾರ್, ವೇಣುಗೋಪಾಲ್, ಸಂಪಂಗಿ ರಾಮ, ಅಹಮದ್, ನಾರಾಯಣಸ್ವಾಮಿ, ವೆಂಕಟೇಶ, ಮುರುಗೇಶನ್, ಶಿವ, ಲತೀಪ್ ಬಂಧಿತ ಆರೋಪಿಗಳು. ಬಂಧಿತರಿಂದ ಹಣವನ್ನು ಜಪ್ತಿ ಮಾಡಲಾಗಿದೆ.

ನಡೆದಿದ್ದೇನು? 

ಶಂಕರಪ್ಪ ಎಂಬುವವರಿಗೆ ಹಣ ತ್ರಿಬಲ್ ಮಾಡಿಕೊಡುವುದಾಗಿ ಹೇಳಿ ಎ1 ಆರೋಪಿ ಕೃಷ್ಣ ಕುಮಾರ್​​​ ಫೋನ್​ ಮಾಡಿ ಕರೆಸಿಕೊಂಡಿದ್ದಾನೆ. ಅದರಂತೆ ಶಂಕರಪ್ಪ ಚಿನ್ನಾಭರಣ ಅಡವಿಟ್ಟು 24 ಲಕ್ಷ ರೂ ಹಣವನ್ನು ತಂದಿದ್ದಾರೆ. ಇತ್ತ ಮೊದಲೇ ಮಾಡಿಕೊಂಡಿದ್ದ ಪ್ಲ್ಯಾನ್​​ನಂತೆ ಖಾಸಗಿ ಕಾರಿನಲ್ಲಿ ಕೃಷ್ಣ ಕುಮಾರ್ ಸಹಚರರು ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಭ್ರಷ್ಟಾಚಾರ ನಿಗ್ರಹ ದಳ‌ ಹೆಸರಿನಲ್ಲಿ ಖಾಸಗಿ‌ ಕಾರ್​​ಗೆ ಬೋರ್ಡ್ ಹಾಕಿಕೊಂಡು ಅಧಿಕಾರಿಗಳ ಸೋಗಿನಲ್ಲಿ ಬಂದು 24 ಲಕ್ಷ ರೂ ಹಣವನ್ನು ದೋಚಿ ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೊಂದು ದರೋಡೆ: ಫ್ಲಿಪ್‌ಕಾರ್ಟ್​​ನ ಲಕ್ಷಾಂತರ ರೂ ಮೌಲ್ಯದ ವಸ್ತುಗಳ ಕಳ್ಳತನ

ಹಣ ಎಗರಿಸಿದ ನಂತರ ಎ1 ಆರೋಪಿ ಕೃಷ್ಣಕುಮಾರ್​​ ಪೊಲೀಸ್ ಠಾಣೆಗೆ ಬಂದು ತಾನೇ ದೂರು ನೀಡಿದ್ದ. ಪೊಲೀಸರ ವಿಚಾರಣೆ ವೇಳೆ ದೂರು‌ ನೀಡಿದ್ದ ಆರೋಪಿಯೇ ದರೋಡೆಕೋರ ಎನ್ನುವುದು ಬಯಲಾಗಿದೆ. ಸದ್ಯ ದೇವನಹಳ್ಳಿ ಠಾಣೆ ಪೊಲೀಸರು 12 ಜನರಲ್ಲಿ 09 ಆರೋಪಿಗಳನ್ನ ಬಂಧಿಸಿದ್ದಾರೆ.

ಪ್ರತಿಷ್ಠಿತ ಕೆನರಾ ಬ್ಯಾಂಕ್​ನಲ್ಲಿ ಕಳ್ಳತನಕ್ಕೆ ಯತ್ನ

ಇನ್ನು ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಪ್ರತಿಷ್ಠಿತ ಕೆನರಾ ಬ್ಯಾಂಕ್​​ನಲ್ಲಿ ಬೆಳಗಿನ ಜಾವ 3ರ ಸುಮಾರಿಗೆ ಕಳ್ಳತನಕ್ಕೆ ಯತ್ನಿಸಿರುವಂತಹ ಘಟನೆ ನಡೆದಿದೆ. ಸೈರನ್ ಆಗುತ್ತಿದ್ದಂತೆ ಕಳ್ಳ ಓಡಿ ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಸದ್ಯ ಶೇಷಾದ್ರಿಪುರಂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಇದನ್ನೂ ಓದಿ: ದರೋಡೆ ಕೇಸ್​​ ಬೇಧಿಸಿದ ಬೆಂಗಳೂರು ಪೊಲೀಸ್​​: ಅಧಿಕಾರಿಗಳಿಗೆ 5 ಲಕ್ಷ ರೂ ಬಹುಮಾನ ಘೋಷಣೆ

ರಾತ್ರಿ ಬ್ಯಾಂಕ್ ಹಿಂಬದಿ ಇದ್ದ ಗ್ರಿಲ್ ಕಟ್ ಮಾಡಿ ಒಳ ನುಗ್ಗಿರುವ ಕಳ್ಳ, ಪೂರ್ತಿ ಬ್ಯಾಂಕ್ ಸರ್ಚ್ ಮಾಡಿದ್ದಾನೆ. ಸ್ಟ್ರಾಂಗ್ ರೂಮ್ ಹತ್ತಿರ ಹೋಗಿ ವೈರ್ ಕಟ್ ಮಾಡಿದ್ದು, ವೈರ್ ಕಟ್ ಮಾಡುತ್ತಿದಂತೆ ಸೈರನ್ ಆನ್ ಆಗಿದೆ. ಬಳಿಕ ಅಲ್ಲಿಂದ ಕಳ್ಳ ಓಡಿ ಹೋಗಿರುವ ಶಂಕೆ ವ್ಯಕ್ತವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Source link

Exit mobile version