ಸಿಎಂ ಸಿದ್ದರಾಮಯ್ಯ ಮನೇಲಿದ್ದಾಗ್ಲೇ ಕಂಪೌಂಡ್ ಮೇಲೆ ಬಿದ್ದ ಮರದ ಕೊಂಬೆಗಳು, ಕಬ್ಬಿಣದ ವಾಲ್‌ಗಳು! ತಪ್ಪಿದ ಅನಾಹುತ – Kannada News | Bengaluru Rain Fury: CM Siddaramaiah’s Residence Krishna compound Damaged; City Records Highest April Rain Since 2001

ಬೆಂಗಳೂರು, ಏಪ್ರಿಲ್ 30: ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ರಾತ್ರಿ ಭಾರಿ ಮಳೆಯ ಅಬ್ಬರಕ್ಕೆ ಸಾಮಾನ್ಯ ಜನರು ಮಾತ್ರವಲ್ಲದೆ, ಮುಖ್ಯಮಂತ್ರಿಗಳ ಅಧಿಕೃತ ನಿವಾಸವೂ ತತ್ತರಿಸಿದೆ! ಸಿಎಂ ಸಿದ್ದರಾಮಯ್ಯ ಅವರ ಗೃಹ ಕಚೇರಿ ‘ಕೃಷ್ಣ’ ಕಾಂಪೌಂಡ್ ಮೇಲೆ ಮರದ ಕೊಂಬೆಗಳು ಮತ್ತು ಕಬ್ಬಿಣದ ವಾಲ್‌ಗಳು ಕುಸಿದು ಬಿದ್ದಿವೆ. ಮುಖ್ಯಮಂತ್ರಿಗಳು ಮನೆಯಲ್ಲಿದ್ದಾಗಲೇ ನಿವಾಸದ ಪಕ್ಕದ ಗೋಡೆ ಮೇಲೆ ಅಳವಡಿಸಲಾಗಿದ್ದ ಕಬ್ಬಿಣದ ವಾಲ್‌ಗಳು ಏಕಾಏಕಿ ಕುಸಿದು ಬಿದ್ದಿವೆ. ಭಾರಿ ಗಾಳಿ ಮಳೆಗೆ ಮರದ ಬೃಹತ್ ಕೊಂಬೆಗಳು ಕಾಂಪೌಂಡ್ ಮೇಲೆ ಉರುಳಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಬೌರಿಂಗ್ ಆಸ್ಪತ್ರೆ ಬಳಿ ಕಾಂಪೌಂಡ್ ಕುಸಿದು ಕೇರಳದ ಇಬ್ಬರು ಹಾಗೂ ಅಸ್ಸಾಂನ ಓರ್ವ ಕಾರ್ಮಿಕ ಸೇರಿದಂತೆ ಒಟ್ಟು 7 ಜನರು ಮೃತಪಟ್ಟ ಘೋರ ದುರಂತದ ಬೆನ್ನಲ್ಲೇ ಸಿಎಂ ಮನೆ ಬಳಿಯೂ ಕಂಪೌಂಡ್​ಗೆ ಮರದ ಕೊಂಬೆಗಳು, ಕಬ್ಬಿಣದ ವಾಲ್ ಕುಸಿದಿದೆ.

ಬೆಂಗಳೂರಿನಲ್ಲಿ ಬುಧವಾರ ಸಂಜೆ ಹಾಗೂ ರಾತ್ರಿ ಬರೋಬ್ಬರಿ 111 ಮಿಲಿ ಮೀಟರ್ ಮಳೆಯಾಗಿದ್ದು, ಇದು ಏಪ್ರಿಲ್ ತಿಂಗಳ ಇತಿಹಾಸದಲ್ಲೇ ದಾಖಲಾದ ಅತಿ ದೊಡ್ಡ ಪ್ರಮಾಣದ ಮಳೆಯಾಗಿದೆ. ಈ ಹಿಂದೆ 2001ರ ಏಪ್ರಿಲ್ 19 ರಂದು ಇಷ್ಟೇ ಪ್ರಮಾಣದ ಮಳೆಯಾಗಿತ್ತು. ಕೇವಲ ಕೆಲವೇ ಗಂಟೆಗಳಲ್ಲಿ ಸುರಿದ ಈ ಮಳೆ ನಗರದಾದ್ಯಂತ ಹಲವು ಅವಾಂತರಗಳನ್ನು ಸೃಷ್ಟಿಸಿದೆ.

ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ರಾಜಧಾನಿಯಲ್ಲಿ ಮುಂದಿನ ಮೂರು ದಿನಗಳ ಕಾಲ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ. ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.

ವರದಿ, ವಿಡಿಯೋ: ಈರಣ್ಣ ಬಸವ, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Vasthu Tips: ಈ ಸಮಯದಲ್ಲಿ ಮನೆಯಲ್ಲಿ ಕಸ ಗುಡಿಸಿ; ನಿಮ್ಮ ಅದೃಷ್ಟವನ್ನೇ ಬದಲಿಸಬಲ್ಲ ವಾಸ್ತು ನಿಯಮಗಳಿವು! – Kannada News | Vastu Cleaning Tips for Positive Energy and Prosperity: Unlock Your Home’s Good Fortune

ಭಾರತೀಯ ಸಂಪ್ರದಾಯದಲ್ಲಿ ಬೆಳಿಗ್ಗೆ ಎದ್ದ ತಕ್ಷಣ ಮನೆಯನ್ನು ಗುಡಿಸಿ, ಒರೆಸುವುದು ಒಂದು ಅವಿಭಾಜ್ಯ ಆಚರಣೆ. ಇದು ಕೇವಲ ಕಸ, ಧೂಳನ್ನು ತೆಗೆಯುವ ಕೆಲಸವಲ್ಲ, ಬದಲಾಗಿ ಮನೆಯ ಶಕ್ತಿ ಮತ್ತು ಆರ್ಥಿಕ ಯೋಗಕ್ಷೇಮದ ಮೇಲೆ ನೇರ ಪರಿಣಾಮ ಬೀರುವ ಕ್ರಿಯೆಯಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ನಾವು ಮನೆಯನ್ನು ಹೇಗೆ ಮತ್ತು ಯಾವ ಸಮಯದಲ್ಲಿ ಸ್ವಚ್ಛಗೊಳಿಸುತ್ತೇವೆ ಎಂಬುದು ನಮ್ಮ ಅದೃಷ್ಟವನ್ನು ನಿರ್ಧರಿಸುತ್ತದೆ. ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಲು ಈ ಕೆಳಗಿನ ಪ್ರಮುಖ ವಾಸ್ತು ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ.

ಸರಿಯಾದ ಸಮಯದಲ್ಲಿ ಶುಚಿಗೊಳಿಸುವಿಕೆ:

ವಾಸ್ತು ಶಾಸ್ತ್ರದ ಪ್ರಕಾರ, ಸೂರ್ಯೋದಯದ ನಂತರದ ಬೆಳಗಿನ ಸಮಯವು ಮನೆಯನ್ನು ಸ್ವಚ್ಛಗೊಳಿಸಲು ಅತ್ಯಂತ ಪ್ರಶಸ್ತವಾದ ಕಾಲ. ಬೆಳಿಗ್ಗೆ ಬೇಗನೆ ಮನೆಯನ್ನು ಅಚ್ಚುಕಟ್ಟಾಗಿ ಇಡುವುದರಿಂದ ನಕಾರಾತ್ಮಕ ಶಕ್ತಿಯು ಹೊರಹೋಗಿ, ಇಡೀ ದಿನ ಮನೆ ಉಲ್ಲಾಸದಿಂದ ಕೂಡಿರುತ್ತದೆ. ಅನೇಕರು ಸಂಜೆ ಅಥವಾ ರಾತ್ರಿಯ ಸಮಯದಲ್ಲಿ ಮನೆಯನ್ನು ಗುಡಿಸುತ್ತಾರೆ, ಆದರೆ ಶಾಸ್ತ್ರಗಳ ಪ್ರಕಾರ ಇದು ಅಶುಭ. ಸೂರ್ಯಾಸ್ತದ ನಂತರ ಮನೆಯನ್ನು ಗುಡಿಸುವುದರಿಂದ ಆರ್ಥಿಕ ತೊಂದರೆಗಳು ಎದುರಾಗಬಹುದು ಮತ್ತು ಮನೆಯಲ್ಲಿರುವ ಧನಾತ್ಮಕ ಶಕ್ತಿ ಕಡಿಮೆಯಾಗಬಹುದು ಎಂದು ನಂಬಲಾಗಿದೆ.

ಪೊರಕೆಯನ್ನು ಇಡುವ ಸರಿಯಾದ ಕ್ರಮ:

ಮನೆ ಸ್ವಚ್ಛಗೊಳಿಸುವ ಪೊರಕೆಯನ್ನು ಲಕ್ಷ್ಮಿ ದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಪೊರಕೆಯನ್ನು ಎಲ್ಲರಿಗೂ ಕಾಣುವಂತೆ ಮುಂಬಾಗಿಲಿನ ಬಳಿ ಅಥವಾ ತೆರೆದ ಪ್ರದೇಶದಲ್ಲಿ ಇಡುವುದು ದೊಡ್ಡ ತಪ್ಪು. ಇದು ಮನೆಯಲ್ಲಿ ಉದ್ವಿಗ್ನತೆ ಮತ್ತು ಸಂಘರ್ಷವನ್ನು ಉಂಟುಮಾಡಬಹುದು. ವಾಸ್ತು ಪ್ರಕಾರ, ಪೊರಕೆಯನ್ನು ಯಾವಾಗಲೂ ಮನೆಯ ನೈಋತ್ಯ ದಿಕ್ಕಿನಲ್ಲಿ (South-West) ಕಣ್ಣಿಗೆ ಕಾಣದಂತೆ ಅಡಗಿಸಿಡಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಅದೃಷ್ಟ ಮತ್ತು ಸಮೃದ್ಧಿ ನೆಲೆಸುತ್ತದೆ.

ಮುಖ್ಯ ದ್ವಾರದ ಬಳಿ ಕಸ ಸಂಗ್ರಹಿಸಬೇಡಿ:

ಮನೆಯ ಮುಖ್ಯ ಬಾಗಿಲು ಸಕಾರಾತ್ಮಕ ಶಕ್ತಿಯು ಪ್ರವೇಶಿಸುವ ದ್ವಾರವಾಗಿದೆ. ಆದರೆ ಅನೇಕರು ಮನೆಯನ್ನು ಗುಡಿಸಿದ ನಂತರ ಕಸವನ್ನು ಮುಖ್ಯ ಬಾಗಿಲಿನ ಪಕ್ಕದಲ್ಲೇ ರಾಶಿ ಹಾಕುತ್ತಾರೆ ಅಥವಾ ಅಲ್ಲಿಯೇ ಬಿಡುತ್ತಾರೆ. ಇದು ಮನೆಯೊಳಗೆ ಬರುವ ಶುಭ ಶಕ್ತಿಗಳಿಗೆ ತಡೆಯೊಡ್ಡುತ್ತದೆ. ಕಸವನ್ನು ಯಾವಾಗಲೂ ತಕ್ಷಣವೇ ಕಸದ ಬುಟ್ಟಿಗೆ ಹಾಕಿ ವಿಲೇವಾರಿ ಮಾಡುವುದು ಆರ್ಥಿಕ ಅಭಿವೃದ್ಧಿಗೆ ಪೂರಕ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಒದ್ದೆಯಾದ ಮಾಪ್‌ಗಳ ಬಗ್ಗೆ ಇರಲಿ ಎಚ್ಚರ:

ನೆಲ ಒರೆಸಿದ ನಂತರ ಒದ್ದೆಯಾದ ಬಟ್ಟೆ ಅಥವಾ ಮಾಪ್‌ಗಳನ್ನು ಮನೆಯ ಮೂಲೆಗಳಲ್ಲಿ ಹಾಗೆಯೇ ಬಿಡುವ ಅಭ್ಯಾಸ ಹಲವರಿಗಿದೆ. ಈ ಒದ್ದೆಯಾದ ವಸ್ತುಗಳು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ ಮತ್ತು ಮನೆಯಲ್ಲಿ ಅಹಿತಕರ ವಾಸನೆ ಹಾಗೂ ತೇವಾಂಶವನ್ನು ಹೆಚ್ಚಿಸುತ್ತವೆ. ಆದ್ದರಿಂದ, ಸ್ವಚ್ಛಗೊಳಿಸಿದ ನಂತರ ಮಾಪ್‌ಗಳನ್ನು ಚೆನ್ನಾಗಿ ತೊಳೆದು ಒಣಗಲು ಬಿಡುವುದು ಆರೋಗ್ಯ ಮತ್ತು ವಾಸ್ತು ಎರಡೂ ದೃಷ್ಟಿಯಿಂದ ಉತ್ತಮ.

ವಾರದ ದಿನಗಳ ಮಹತ್ವ:

ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದು ದಿನಕ್ಕೂ ತನ್ನದೇ ಆದ ಪ್ರಾಮುಖ್ಯತೆ ಇದೆ. ಗುರುವಾರದಂದು ಮನೆಯನ್ನು ಆಳವಾಗಿ ಶುಚಿಗೊಳಿಸುವುದು ಅಥವಾ ನೆಲ ಒರೆಸುವುದನ್ನು ತಪ್ಪಿಸಬೇಕು, ಏಕೆಂದರೆ ಈ ದಿನವನ್ನು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದರೆ ಶುಕ್ರವಾರದಂದು ಮನೆ ಸ್ವಚ್ಛಗೊಳಿಸುವುದು ಬಹಳ ವಿಶೇಷ. ಶುಕ್ರವಾರದ ಸ್ವಚ್ಛತೆಯು ಮನೆಯಲ್ಲಿ ಶಿಸ್ತು, ಸಂತೋಷ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಮಿಳುನಾಡು ರಾಜಕೀಯದಲ್ಲಿ ಸಿಎಂ ಆದ ಸೆಲೆಬ್ರಿಟಿಗಳಿವರು; ವಿಜಯ್​ಗೂ ಸಿಗುತ್ತಾ ಕುರ್ಚಿ?

ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಎಕ್ಸಿಟ್ ಪೋಲ್‌ಗಳ ಪ್ರಕಾರ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ಈ ಬಾರಿ ನಿರ್ಣಾಯಕ ಪಾತ್ರ ವಹಿಸಲಿದೆ. ಡಿಎಂಕೆ ಮತ್ತು ಎಐಎಡಿಎಂಕ ನಡುವಿನ ತೀವ್ರ ಪೈಪೋಟಿಯಲ್ಲಿ ವಿಜಯ್ ಕಿಂಗ್ ಮೇಕರ್ ಆಗುವ ಅಥವಾ ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ.

ತಮಿಳುನಾಡು ರಾಜಕಾರಣದಲ್ಲಿ ಸಿನಿಮಾ ತಾರೆಯರು ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸಿದ ದೀರ್ಘ ಇತಿಹಾಸವೇ ಇದೆ. ಈ ಹಿಂದೆ ನಟ ಮತ್ತು ನಿರ್ದೇಶಕರಾಗಿದ್ದ ಎಂ.ಜಿ. ರಾಮಚಂದ್ರನ್ (MGR) ಅವರು ಎಐಎಡಿಎಂಕ ಪಕ್ಷವನ್ನು ಸ್ಥಾಪಿಸಿ ಹತ್ತು ವರ್ಷಗಳ ಕಾಲ ರಾಜ್ಯವನ್ನು ಆಳುವ ಮೂಲಕ ಸಿನಿಮಾ ತಾರೆಯರಿಗೆ ರಾಜಕೀಯ ಹಾದಿ ನಿರ್ಮಿಸಿಕೊಟ್ಟಿದ್ದರು. ಅವರನ್ನು ಅನುಸರಿಸಿದ ಜಯಲಲಿತಾ ಅವರು ಚಿತ್ರರಂಗದ ಖ್ಯಾತ ನಟಿಯಾಗಿ ಮಿಂಚಿ, ನಂತರ 14 ವರ್ಷಗಳಿಗೂ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ದೇಶದ ಪ್ರಭಾವಿ ನಾಯಕಿಯಾಗಿ ಹೊರಹೊಮ್ಮಿದ್ದರು.

ಕೇವಲ ನಟರಷ್ಟೇ ಅಲ್ಲದೆ, ಚಿತ್ರಕಥೆಗಾರರಾಗಿದ್ದ ಎಂ. ಕರುಣಾನಿಧಿ ಅವರು ಕೂಡ ಐದು ಬಾರಿ ಮುಖ್ಯಮಂತ್ರಿಯಾಗಿ ತಮಿಳುನಾಡಿನ ಮೇಲೆ ಸಿನಿಮಾ ಪ್ರಭಾವ ಎಷ್ಟಿದೆ ಎಂಬುದನ್ನು ಸಾಬೀತುಪಡಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಕಮಲ್ ಹಾಸನ್ ಅವರು 2018ರಲ್ಲಿ ‘ಮಕ್ಕಳ್ ನೀಧಿ ಮೈಯಂ’ ಪಕ್ಷವನ್ನು ಸ್ಥಾಪಿಸಿ, 2024ರಲ್ಲಿ ಡಿಎಂಕೆ ಮೈತ್ರಿಕೂಟದ ಬೆಂಬಲದೊಂದಿಗೆ 2025ರಲ್ಲಿ ರಾಜ್ಯಸಭಾ ಸಂಸದರಾಗಿ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ತಮಿಳುನಾಡು ಚುನಾವಣೆ ಫಲಿತಾಂಶಕ್ಕೂ ಮುನ್ನ ಶಿರಡಿ ಸಾಯಿಬಾಬಾ ದರ್ಶನ ಪಡೆದ ವಿಜಯ್

ಈಗ ಅದೇ ಹಾದಿಯಲ್ಲಿ ದಳಪತಿ ವಿಜಯ್ ಅವರು ಹೆಜ್ಜೆ ಇಟ್ಟಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ನಟ ಮುಂದಿನ ಮುಖ್ಯಮಂತ್ರಿಯಾಗುತ್ತಾರೆಯೇ ಎಂಬ ಕುತೂಹಲದಿಂದ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ತಮಿಳುನಾಡು ರಾಜಕಾರಣದಲ್ಲಿ ಸಿನಿಮಾ ಸಂಸ್ಕೃತಿ ಮತ್ತು ರಾಜಕೀಯ ಅಸ್ಮಿತೆ ಅಷ್ಟೊಂದು ಆಳವಾಗಿ ಬೆಸೆದುಕೊಂಡಿದೆ. ತಮಿಳುನಾಡಿನ ಎಲ್ಲಾ ಕ್ಷೇತ್ರದಲ್ಲೂ ವಿಜಯ್ ಸ್ಪರ್ಧೆ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IPL 2026: ಬ್ಯಾಟಿಂಗ್, ಬೌಲಿಂಗ್ ಮಾಡದೇ ದಾಖಲೆ ಬರೆದ ಶಾರ್ದೂಲ್ ಠಾಕೂರ್..! – Kannada News | No Bat, No Ball, No Problem! Shardul Thakur New IPL Record

ಐಪಿಎಲ್ ಅಂದಮೇಲೆ ಅಲ್ಲಿ ರನ್ ಮಳೆ, ವಿಕೆಟ್ ಬೇಟೆ ಮತ್ತು ರೋಚಕ ದಾಖಲೆಗಳ ಸುರಿಮಳೆಯೇ ಇರುತ್ತದೆ. ಆದರೆ, ಮುಂಬೈ ಇಂಡಿಯನ್ಸ್ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಐಪಿಎಲ್ ಇತಿಹಾಸದಲ್ಲೇ ಯಾರೂ ಮಾಡದ, ಅತ್ಯಂತ ವಿಲಕ್ಷಣವಾದ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಸಾಮಾನ್ಯವಾಗಿ ‘ಇಂಪ್ಯಾಕ್ಟ್ ಪ್ಲೇಯರ್’ ಆಗಿ ಬರುವ ಆಟಗಾರ ಪಂದ್ಯದ ಗತಿಯನ್ನೇ ಬದಲಿಸಬೇಕೆಂದು ತಂಡ ನಿರೀಕ್ಷಿಸುತ್ತದೆ. ಆದರೆ, ಶಾರ್ದೂಲ್ ವಿಷಯದಲ್ಲಿ ಆಗಿದ್ದೇ ಬೇರೆ!

MI vs SRH ಪಂದ್ಯದಲ್ಲಿ ನಡೆದಿದ್ದೇನು?

ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟಿಂಗ್ ಮಾಡಿ 243 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತ್ತು. ಈ ಗುರಿ ಬೆನ್ನಟ್ಟಿದ ಹೈದರಾಬಾದ್ ತಂಡವನ್ನು ಕಟ್ಟಿಹಾಕಲು ಮುಂಬೈ ಇಂಡಿಯನ್ಸ್ ತಂಡವು ‘ಇಂಪ್ಯಾಕ್ಟ್ ಪ್ಲೇಯರ್’ ನಿಯಮದಡಿ ಶಾರ್ದೂಲ್ ಠಾಕೂರ್ ಅವರನ್ನು ಮೈದಾನಕ್ಕಿಳಿಸಿತು. ಸಾಮಾನ್ಯವಾಗಿ ತಂಡಕ್ಕೆ ಬೌಲಿಂಗ್ ಅಥವಾ ಬ್ಯಾಟಿಂಗ್‌ನಲ್ಲಿ ನೆರವಾಗಲು ಇಂಪ್ಯಾಕ್ಟ್ ಪ್ಲೇಯರ್ ಅನ್ನು ಬಳಸಿಕೊಳ್ಳಲಾಗುತ್ತದೆ.

ಆದರೆ, ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಆರು ಜನ ಬೌಲರ್‌ಗಳನ್ನು ಬಳಸಿಕೊಂಡರೂ, ಶಾರ್ದೂಲ್ ಅವರಿಗೆ ಒಂದೇ ಒಂದು ಓವರ್ ಬೌಲಿಂಗ್ ನೀಡಲಿಲ್ಲ. ಇದರೊಂದಿಗೆ, ಐಪಿಎಲ್ ಇತಿಹಾಸದಲ್ಲೇ ಇಂಪ್ಯಾಕ್ಟ್ ಪ್ಲೇಯರ್ ಆಗಿ ಮೈದಾನಕ್ಕಿಳಿದು ಬ್ಯಾಟಿಂಗ್ ಅಥವಾ ಬೌಲಿಂಗ್ ಎರಡನ್ನೂ ಮಾಡದ ಮೊದಲ ಆಟಗಾರ ಎಂಬ ‘ವಿಚಿತ್ರ’ ದಾಖಲೆಯೊಂದು ಶಾರ್ದೂಲ್ ಠಾಕೂರ್ ಪಾಲಾಯಿತು.

ಈ ಹಿಂದೆಯೂ ಶಾರ್ದೂಲ್ ಇಂತಹ ಕೆಲವು ಸಂದರ್ಭಗಳನ್ನು ಎದುರಿಸಿದ್ದರೂ, ಈ ಪಂದ್ಯವು ಸಂಪೂರ್ಣವಾಗಿ ಅವರ ಪಾತ್ರವಿಲ್ಲದೆಯೇ ಕೊನೆಗೊಂಡಿದ್ದು ವಿಶೇಷ. ಆದಾಗ್ಯೂ, ಇದೇ ಸೀಸನ್‌ನಲ್ಲಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ 3 ವಿಕೆಟ್ ಪಡೆದು ‘ಪಂದ್ಯ ಪುರುಷ’ ಪ್ರಶಸ್ತಿ ಗೆಲ್ಲುವ ಮೂಲಕ ಶಾರ್ದೂಲ್ ತಮ್ಮ ಸಾಮರ್ಥ್ಯವನ್ನು ತೆರೆದಿಟ್ಟಿದ್ದಾರೆ.

ಇದನ್ನೂ ಓದಿ: IPL 2026: ಎಲ್ಲವೂ ಉಲ್ಟಾ.. ಹೀಗಿದೆ ಮುಂಬೈ ಇಂಡಿಯನ್ಸ್ ಪ್ಲೇಆಫ್ ಲೆಕ್ಕಾಚಾರ

ಆದರೆ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮುಂಬೈ ಇಂಡಿಯನ್ಸ್ ಬೌಲರ್‌ಗಳು ದುಬಾರಿಯಾದರೂ ಬೌಲಿಂಗ್ ಮಾಡಲೆಂದೇ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ಶಾರ್ದೂಲ್ ಠಾಕೂರ್ ಗೆ ಹಾರ್ದಿಕ್ ಪಾಂಡ್ಯ ಓವರ್ ನೀಡದಿರುವುದು ಅಚ್ಚರಿಗೆ ಕಾರಣವಾಗಿದೆ.

ಪಂದ್ಯದ ಮುಖ್ಯಾಂಶ:

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಪರ ರಯಾನ್ ರಿಕೆಲ್ಟನ್ ಸ್ಫೋಟಕ ಶತಕ (123*) ಬಾರಿಸಿದರು. ಈ ಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ 243 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು. ಆದರೆ ಸನ್‌ರೈಸರ್ಸ್ ಹೈದರಾಬಾದ್ ತಂಡವು 18.4 ಓವರುಗಳಲ್ಲಿ ಚೇಸ್ ಮಾಡಿ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

Source link

ದಾಖಲೆ ಮಟ್ಟದಲ್ಲಿ ಬತ್ತಿದ ಕೆಆರ್​​ಎಸ್​​ ಡ್ಯಾಂ: ಮೈಸೂರು, ಬೆಂಗಳೂರಲ್ಲಿ ಕುಡಿಯುವ ನೀರಿಗೂ ಸಂಕಷ್ಟ! – Kannada News | KRS Dam Water Crisis: Bangalore, Mysore Face Drinking Water Shortage Amid Record Low Levels

ಮೈಸೂರು, ಏಪ್ರಿಲ್​​ 30: ಕೃಷ್ಣರಾಜ ಸಾಗರ (KRS) ಜಲಾಶಯದ ನೀರಿನ ಮಟ್ಟ ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡಿದೆ. ಡ್ಯಾಂನ ಸಂಗ್ರಹ ಮಟ್ಟ 94 ಅಡಿಗೆ ಇಳಿದಿದ್ದು, ಇದರಿಂದ ಲಭ್ಯ ನೀರಿನ ಪ್ರಮಾಣ 278 ಟಿಎಂಸಿಎಫ್‌ಟಿಗೆ ಇಳಿಕೆಯಾಗಿದೆ. ಸಂಗ್ರಹ ಶೇಖರಣೆ ತಳಮಟ್ಟಕ್ಕೆ ಸಮೀಪಿಸುತ್ತಿರುವ ಹಿನ್ನೆಲೆ ಉಳಿದ ನೀರನ್ನು ಜಾಗರೂಕತೆಯಿಂದ ಬಳಸಬೇಕೆಂದು ತಜ್ಞರು ಎಚ್ಚರಿಸಿದ್ದಾರೆ. ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ನಿಗಾವಳಿ ಕೇಂದ್ರ (KSNDMC) ಮಾಹಿತಿ ಪ್ರಕಾರ, ಕಳೆದ ವರ್ಷ ಏಪ್ರಿಲ್ 29ರಂದು KRS ಮತ್ತು ಕಬಿನಿ ಜಲಾಶಯಗಳಲ್ಲಿ ಕ್ರಮವಾಗಿ 19.50 ಟಿಎಂಸಿಎಫ್‌ಟಿ ಮತ್ತು 9.25 ಟಿಎಂಸಿಎಫ್‌ಟಿ ನೀರು ಇತ್ತು. ಈ ವರ್ಷ ಅದು 18.52 ಟಿಎಂಸಿಎಫ್‌ಟಿ ಮತ್ತು 6.23 ಟಿಎಂಸಿಎಫ್‌ಟಿ ಆಗಿದೆ.

ಸಾಮಾನ್ಯವಾಗಿ ಈ ಅವಧಿಯಲ್ಲಿ KRS ಜಲಾಶಯದ ಮಟ್ಟ 100 ಅಡಿ ಇರುತ್ತದೆ. ತಾಪಮಾನ ಹೆಚ್ಚಾದಂತೆ ನೀರಿನ ಆಳ ಕಡಿಮೆಯಾಗುತ್ತಿದ್ದು, ಪಾಚಿ ಬೆಳವಣಿಗೆ ಹೆಚ್ಚಾಗಿ ನೀರಿನ ಗುಣಮಟ್ಟ ಕುಸಿಯುತ್ತದೆ. ಇದರಿಂದ ನೀರಿನ ರುಚಿ ಹಾಗೂ ಆರೋಗ್ಯದ ಮೇಲೆ ಪರಿಣಾಮ ಬಿದ್ದು ನೀರಿನ ಮೂಲಕ ಹರಡುವ ರೋಗಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮಾಜಿ ನೀರಾವರಿ ಕಾರ್ಯದರ್ಶಿ ಕ್ಯಾಪ್ಟನ್ ರಾಜಾ ರಾವ್ ತಿಳಿಸಿದ್ದಾರೆ. KSNDMC ಮಾಜಿ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಅವರ ಪ್ರಕಾರ, ಪ್ರಸ್ತುತ ಲೈವ್ ಸ್ಟೋರೇಜ್ ಸುಮಾರು 10 ಟಿಎಂಸಿಎಫ್‌ಟಿ ಇದ್ದು, ಅದರಲ್ಲಿ 7 ಟಿಎಂಸಿಎಫ್‌ಟಿ ಕ್ಕಿಂತ ಹೆಚ್ಚು ನೀರನ್ನು ಬೆಂಗಳೂರು, ಮೈಸೂರು, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಿಗೆ ಕುಡಿಯುವ ನೀರಿಗಾಗಿ ಪೂರೈಕೆ ಮಾಡಲಾಗುತ್ತದೆ. KRSನಿಂದ ಟಿ.ಕೆ. ಹಳ್ಳಿ ವರೆಗೆ ಸಾಗುವ ವೇಳೆ ಸುಮಾರು 0.8 ರಿಂದ 1 ಟಿಎಂಸಿಎಫ್‌ಟಿ ನೀರು ಆವಿಯಾಗುತ್ತದೆ. ಹೀಗಾಗಿ ನಾವು ಗಂಭೀರ ಪರಿಸ್ಥಿತಿಯ ಅಂಚಿನಲ್ಲಿದ್ದೇವೆ. ಜನರು ನೀರನ್ನು ಮಿತವಾಗಿ ಬಳಸಬೇಕು. ಮಳೆಗಾಲ ಜೂನ್‌ನಲ್ಲಿ ಆರಂಭವಾದರೂ ಜಲಾಶಯಕ್ಕೆ ನೀರಿನ ಹರಿವು ತಕ್ಷಣವೇ ಶುರುವಾಗುವುದಿಲ್ಲ. ಜೂನ್ 15ರವರೆಗೆ ಈಗಿರುವ ನೀರನ್ನು ಬಳಸಿ ನಿರ್ವಹಿಸಬೇಕಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಸಮುದ್ರ ಇದ್ರೂ ಮಂಗಳೂರಿನಲ್ಲಿ ನೀರಿಗೆ ಬರ; ವಾಹನಗಳನ್ನ ತೊಳೆಯದಂತೆ ಸೂಚನೆ

ರಾಜ್ಯ ವಿಪತ್ತು ನಿರ್ವಹಣಾ ಇಲಾಖೆಯ ಮೂಲಗಳ ಪ್ರಕಾರ, ಕಾವೇರಿ ಕಣಿವೆಯ ಕೊಡಗು, ಮೈಸೂರು, ಮಂಡ್ಯ, ರಾಮನಗರ ಹಾಗೂ ಬೆಂಗಳೂರು ಜಿಲ್ಲೆಗಳಲ್ಲಿ ಸಮರ್ಪಕ ಮಳೆಯ ಕೊರತೆ ಉಂಟಾಗಿದೆ. ಈ ಎಲ್ಲಾ ಜಿಲ್ಲೆಗಳು ಮಳೆಯ ಕೊರತೆಯ ‘ರೆಡ್’ ವರ್ಗದಲ್ಲಿ ಇದ್ದು, ಇದೇ ಕಾರಣಕ್ಕೆ ಜಲಾಶಯಗಳ ನೀರಿನ ಮಟ್ಟ ಕುಸಿದಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದರೂ ಮುಂದಿನ ದಿನಗಳಲ್ಲಿ ಮಳೆ ಬಾರದಿದ್ದರೆ ಪರಿಸ್ಥಿತಿ ಗಂಭೀರವಾಗಬಹುದು ಎಂದು ದಿ ನ್ಯೂ ಇಂಡಿಯನ್​​ ಎಕ್ಸ್ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಆಸೆ’ ಧಾರಾವಾಹಿ ತಂಡದ ಬಗ್ಗೆ ಗಂಭೀರ ಆರೋಪ ಮಾಡಿದ್ರಾ ಅಮೃತಾ ರಾಮಮೂರ್ತಿ? – Kannada News | Amrutha Ramamurthy Reveals Why She Quit Popular TV Serial: Uncomfortable Environment

ನ್ಯೂಸ್ ಆ್ಯಂಕರ್ ಆಗಿ ವೃತ್ತಿ ಆರಂಭಿಸಿದ ಅಮೃತಾ ರಾಮಮೂರ್ತಿ (Amrutha Ramamoorthy) ಅವರು ನಂತರ ಕಿರುತೆರೆಯಲ್ಲಿ ಮಿಂಚಿದರು. ವಿಲನ್ ಪಾತ್ರಗಳ ಮೂಲಕ ಅವರು ಗಮನ ಸೆಳೆದರು. ಈಗ ಅವರು ಒಂದು ಜನಪ್ರಿಯ ಧಾರಾವಾಹಿ ತೊರೆದ ಬಗ್ಗೆ ಕಾರಣ ನೀಡಿದ್ದಾರೆ. ಧಾರಾವಾಹಿ ಸೆಟ್ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ಥವಾಗಿ ಇರುತ್ತಿತ್ತು ಎಂದು ಹೇಳಿದ್ದಾರೆ. ಅವರು ಧಾರಾವಾಹಿ ಹೆಸರನ್ನು ಎಲ್ಲಿಯೂ ಹೇಳಿಲ್ಲ. ಅನೇಕರು ಇದು ‘ಆಸೆ’ ಧಾರಾವಾಹಿ ಇರಬಹುದು ಎಂದು ಊಹಿಸಿದ್ದಾರೆ. ಅವರು ನೀಡಿರುವ ಮಾಹಿತಿ ‘ಆಸೆ’ ಧಾರಾವಾಹಿಯನ್ನು ಹೋಲುತ್ತಿದೆ ಎಂದಿದ್ದಾರೆ.

ನ್ಯೂಸೋ ನ್ಯೂಸು ಚಾನೆಲ್​​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಮೃತಾ, ‘ಮಗು ಜನಿಸಿದ ಬಳಿಕ ನೆಗೆಟಿವ್ ಪಾತ್ರವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದೆ. ಅದು ಜನಪ್ರಿಯತೆ ತಂದುಕೊಟ್ಟಿದೆ ಎಂಬುದು ನಿಜ. ಆದರೆ, ಆ ಪಾತ್ರ ನನ್ನ ವ್ಯಕ್ತಿತ್ವಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿ ಇರುತ್ತಿತ್ತು. ಒಂದು ಧಾರಾವಾಹಿ ನನ್ನ ಮೇಲೆ ತುಂಬಾನೇ ಪ್ರಭಾವ ಬೀರಿದೆ’ ಎಂದು ಹೇಳಿಕೊಂಡಿದ್ದಾರೆ.

‘ನೀವು ಯಾಕೆ ಅಷ್ಟು ಸುಳ್ಳು ಹೇಳ್ತೀರಾ’ ಎಂದು ಅಮೃತಾ ರಾಮಮೂರ್ತಿ ಅವರಿಗೆ ಯಾರೋ ಬಂದು ಕೇಳಿದ್ದರಂತೆ. ಅದು ಕೂಡ ಮಗುವಿನ ಎದುರಿಗೆ. ಇದು ಅಮೃತಾ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು. ಸೋಶಿಯಲ್ ಮೀಡಿಯಾದಲ್ಲಿ ಅವರ ಮಗುವಿನ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದರಂತೆ. ‘ಇದು ನಿಜಕ್ಕೂ ಮನೋಜನ (ಆಸೆ ಧಾರಾವಾಹಿಯಲ್ಲಿ ಅಮೃತಾ ಮಾಡಿದ್ದ ರೋಹಿಣಿ ಪಾತ್ರಧಾರಿಯ ಪತಿ ಪಾತ್ರದ ಹೆಸರು ಮನೋಜ್) ಮಗುವಾ’ ಎಂದು ಪ್ರಶ್ನೆ ಮಾಡುತ್ತಿದ್ದಂತೆ. ಧಾರಾವಾಹಿ ಪಾತ್ರ ಎಷ್ಟು ಪ್ರಭಾವ ಬೀರುತ್ತಿದೆ ಎಂಬುದು ಅವರಿಗೆ ಆಗ ಅರಿವಾಗಿತ್ತು. ‘ನನಗೂ ವೈಯಕ್ತಿಕ ಜೀವನ ಇದೆ’ ಎಂದು ಅವರು ಹೇಳಿದ್ದಾರೆ.

‘ಆ ಧಾರಾವಾಹಿಯಲ್ಲಿ ಕಂಫರ್ಟ್ ಇರಲಿಲ್ಲ. ವ್ಯವಸ್ಥೆ ಸರಿ ಇರಲಿಲ್ಲ. ಹೀಗಾಗಿ, ನಾನು ಬಿಡುವ ನಿರ್ಧಾರ ಮಾಡಿದೆ. ಬಿಡಲು ಕಾರಣ ಲಿಸ್ಟ್ ಮಾಡಿದೆ. ಬಿಡಬೇಕು ಎಂಬ ಕಾರಣ ತುಂಬಾನೇ ದೊಡ್ಡದಿತ್ತು. ಕಥೆ ಹೀರೋ ಹಾಗೂ ವಿಲನ್ ಪಾತ್ರದ ಮೇಲೆ ಸಾಗುತ್ತಿತ್ತು. ಆದರೂ ನಾನು ಬಿಡೋಣ ಎಂದು ನಿರ್ಧರಿಸಿದೆ’ ಎಂದಿದ್ದಾರೆ ಅಮೃತಾ.

ಇದನ್ನೂ ಓದಿ: ಅಮೃತಾ ರಾಮಮೂರ್ತಿ ಫಿಟ್ನೆಸ್ ಜರ್ನಿ ಎಷ್ಟು ಟಫಿತ್ತು ನೋಡಿ

‘ಒಂದು ಬಾತ್​​ರೂಂ ಹೆಣ್ಣುಮಕ್ಕಳಿಗೆ ಪ್ರತ್ಯೇಕವಾಗಿ ಕೊಡಿ ಎಂದು ಕೇಳುತ್ತಿದ್ದೆ. ಆದರೆ, ಕೊಡಲಿಲ್ಲ. ಅದು ಪ್ರಮುಖ ಧಾರಾವಾಹಿ ಆಗಿತ್ತು. ಆ ಧಾರಾವಾಹಿ ಆದ ಬಳಿಕ ನಾನು ಕಿರುತೆರೆ ತೊರೆಯುವ ನಿರ್ಧಾರ ಮಾಡಿದ್ದೆ’ ಎಂದು ಹೇಳಿದ್ದಾರೆ. ಸದ್ಯ ಅಮೃತಾ ಅವರು ಉದಯ ಟಿವಿಯಲ್ಲಿ ಧಾರಾವಾಹಿ ಮಾಡುತ್ತಿದ್ದಾರೆ. ಅಲ್ಲಿಯೂ ಅವರದ್ದು ವಿಲನ್ ಪಾತ್ರ ಅನ್ನೋದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Daily Devotional: ದೇವಸ್ಥಾನದಲ್ಲಿ ನೀಡುವ ಪ್ರಸಾದವನ್ನು ಸ್ವೀಕರಿಸದೇ ಹಾಗೆಯೇ ಬರಬಾರದು ಯಾಕೆ? – Kannada News | Understanding the Significance of Prasad; Its Power and Pitfalls of Neglect

ದೇವಸ್ಥಾನದಲ್ಲಿ ನೀಡುವ ಪ್ರಸಾದImage Credit source: Pinterest

ನಮ್ಮ ಕರ್ಮಗಳನ್ನು ತೊಳೆದುಕೊಳ್ಳಲು ಮತ್ತು ಆಧ್ಯಾತ್ಮಿಕ ಶಾಂತಿಯನ್ನು ಪಡೆಯಲು ದೇವಾಲಯಗಳು ಪ್ರಮುಖ ಪಾತ್ರವಹಿಸುತ್ತವೆ. ಇಂತಹ ದೈವಿಕ ಸ್ಥಳಗಳಲ್ಲಿ ಭಗವಂತನಿಗೆ ಅರ್ಪಿಸಿರುವ ಪ್ರಸಾದವನ್ನು ನಿರ್ಲಕ್ಷಿಸುವುದು ಅಥವಾ ನಿರಾಕರಿಸುವುದು ದೊಡ್ಡ ಆಧ್ಯಾತ್ಮಿಕ ಅಪರಾಧ ಎಂದು ಹೇಳಲಾಗುತ್ತದೆ. ಪ್ರಸಾದ ಕೇವಲ ಭೌತಿಕ ಆಹಾರ ಪದಾರ್ಥವಲ್ಲ. ಇದು ದೇವರಿಗೆ ಅರ್ಪಿಸಿದ ಹೂವು, ಕುಂಕುಮ, ವಿಭೂತಿ ಅಥವಾ ಯಾವುದೇ ಭೋಜನ ಪದಾರ್ಥವಾಗಿರಬಹುದು. ಇದನ್ನು ಭಕ್ತಿಯಿಂದ ಸ್ವೀಕರಿಸಬೇಕು ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಸಲಹೆ ನೀಡಿದ್ದಾರೆ.

ಗುರೂಜಿಯವರು ಹೇಳುವಂತೆ, ಪ್ರಸಾದವನ್ನು ನಿರ್ಲಕ್ಷಿಸಿದರೆ ಅಥವಾ “ನಾನು ಸ್ಥಿತಿವಂತ, ದೊಡ್ಡ ಸ್ಥಾನದಲ್ಲಿದ್ದೇನೆ, ನನಗೆ ಇವೆಲ್ಲ ಬೇಡ” ಎಂಬ ಅಹಂಕಾರದಿಂದ ತಿರಸ್ಕರಿಸಿದರೆ, ಪ್ರಪ್ರಥಮವಾಗಿ ದೈವಿಕ ಕೃಪೆ ಮತ್ತು ದೈವಬಲವು ಹೊರಟುಹೋಗುತ್ತದೆ. ಪ್ರತಿಯೊಬ್ಬರಿಗೂ ಒಂದು ಪ್ರಭಾವಳಿ ಇರುತ್ತದೆ. ಈ ಪ್ರಭಾವಳಿ ಅಥವಾ ಆಧ್ಯಾತ್ಮಿಕ ಶಕ್ತಿಯೇ ವ್ಯಕ್ತಿಯನ್ನು ಸಮಾಜದಲ್ಲಿ ಗುರುತಿಸುವಂತೆ ಮಾಡುತ್ತದೆ. ಪ್ರಸಾದ ನಿರಾಕರಣೆಯು ಈ ಪ್ರಭಾವಳಿಯನ್ನು ದುರ್ಬಲಗೊಳಿಸಿ, ಉದ್ಯೋಗ ನಷ್ಟ, ರಾಜಕೀಯದಲ್ಲಿ ಕಷ್ಟಗಳು ಅಥವಾ ಇತರೆ ಅಡ್ಡಿ ಆತಂಕಗಳಿಗೆ ಕಾರಣವಾಗಬಹುದು. ದೇವಾಲಯದಲ್ಲಿ ಎಲ್ಲಾ ಭಕ್ತರು, ಶ್ರೀಮಂತರು ಅಥವಾ ಬಡವರು, ಸಮಾನರು ಎಂಬ ಭಾವನೆಯನ್ನು ಅಳವಡಿಸಿಕೊಳ್ಳಬೇಕು.

ಪ್ರಸಾದವನ್ನು ಭಕ್ತಿಯಿಂದ ಸ್ವೀಕರಿಸುವುದರಿಂದ ಕೀರ್ತಿ, ಪ್ರತಿಷ್ಠೆಗಳು ದೊರೆಯುತ್ತವೆ. ಮಾಟ ಮಂತ್ರ ದೋಷಗಳು, ಗ್ರಹಕಾಟಗಳು ನಿವಾರಣೆಯಾಗಿ ಶುಭ ಫಲಗಳು ಪ್ರಾಪ್ತವಾಗುತ್ತವೆ. ಭಗವಂತನಿಗೆ ಅರ್ಪಿಸಿದ ಪ್ರಸಾದದ ಮೇಲೆ ಆತನ ದೃಷ್ಟಿ ಬಿದ್ದಿರುತ್ತದೆ. ಇದರಿಂದ ಪ್ರಸಾದಕ್ಕೆ ಒಂದು ವಿಶಿಷ್ಟ ಶಕ್ತಿ ದೊರೆಯುತ್ತದೆ. ಚಿಕ್ಕ ಮಕ್ಕಳಿದ್ದಾಗ, ದೇವಸ್ಥಾನದಲ್ಲಿ ನೀಡುವ ಚಿತ್ರಾನ್ನ ಅಥವಾ ಪುಳಿಯೋಗರೆಯನ್ನು ರುಚಿಕರವಾಗಿ ಭಾವಿಸಿ “ಇನ್ನೂ ಸ್ವಲ್ಪ ಕೊಡಿ ಸ್ವಾಮಿ” ಎಂದು ಕೇಳುತ್ತಿದ್ದೆವು. ಆಧುನಿಕ ನಾಗರಿಕತೆಯ ಪ್ರಭಾವದಿಂದ ಕೆಲವರು ತಮ್ಮ ಮಕ್ಕಳ ಶಿಕ್ಷಣ ಅಥವಾ ಸ್ಥಾನಮಾನದ ಕಾರಣದಿಂದ ಪ್ರಸಾದವನ್ನು ನಿರ್ಲಕ್ಷಿಸುತ್ತಾರೆ. ಇದು ಅವರ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಪುರಾಣಗಳಲ್ಲಿ ದೇವೇಂದ್ರನ ಉದಾಹರಣೆಯನ್ನು ನೋಡಬಹುದು. ಮದ್ಯಪಾನ ಮಾಡಿ ರಂಭೆಯೊಂದಿಗೆ ಇದ್ದಾಗ, ದೂರ್ವಾಸ ಮಹರ್ಷಿಗಳು ಕೈಲಾಸದಿಂದ ತಂದ ಪ್ರಸಾದವನ್ನು ದೇವೇಂದ್ರ ನಿರ್ಲಕ್ಷಿಸಿ ತಳ್ಳಿಬಿಟ್ಟನು. ಇದರ ಪರಿಣಾಮವಾಗಿ, ದೇವೇಂದ್ರ ತನ್ನ ರಾಜ್ಯಭಾರವನ್ನು ಕಳೆದುಕೊಂಡನು, ದೇವತೆಗಳು ಅವನ ವಿರುದ್ಧ ಯುದ್ಧ ಘೋಷಿಸಿದರು ಮತ್ತು ಅವನ ಮನಸ್ಸು ಚಂಚಲವಾಯಿತು. ತನ್ನ ತಪ್ಪನ್ನು ಅರಿತ ನಂತರ, ದೇವೇಂದ್ರ ಮತ್ತೆ ಪ್ರಸಾದವನ್ನು ತಯಾರಿಸಿ ಹಲವರಿಗೆ ಅರ್ಪಿಸಿದನು. ಈ ಕಥೆಯು ಪ್ರಸಾದದ ಮಹತ್ವವನ್ನು ಎತ್ತಿ ತೋರಿಸುತ್ತದೆ.

ಕುಂಕುಮ ಮತ್ತು ವಿಭೂತಿಯಂತಹ ಪ್ರಸಾದವನ್ನು ದೇವಸ್ಥಾನದ ಬಾಗಿಲಲ್ಲೇ ಬಿಸಾಡುವುದು ಅಥವಾ ಗೋಡೆಗಳಿಗೆ ಹಚ್ಚುವುದು ಸಹ ತಪ್ಪು. ಅದನ್ನು ಮನೆಗೆ ತಂದು ಸ್ನಾನಕ್ಕೆ, ನಿತ್ಯ ಉಪಯೋಗಕ್ಕೆ ಬಳಸಬೇಕು. ಹೆಚ್ಚುವರಿಯಾಗಿದ್ದರೆ, ಅದನ್ನು ನೀರಿನಲ್ಲಿ ಬಿಡಬೇಕು. ಪ್ರಸಾದ ನಿರ್ಲಕ್ಷತೆಯು ಅದೃಷ್ಟವಿದ್ದರೂ ಜೀವನದಲ್ಲಿ ಕಷ್ಟಗಳನ್ನು ತರಬಹುದು ಎಂದು ಗುರೂಜಿ ಎಚ್ಚರಿಸಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿಗರೇ ಎಚ್ಚರ: ಇಂದು ಮತ್ತೆ ಅಪ್ಪಳಿಸಲಿದೆ ರಣಮಳೆ! ಯಾವೆಲ್ಲ ಭಾಗಗಳಲ್ಲಿ ಮಳೆಯಾಗಲಿದೆ? – Kannada News | Bengaluru Heavy Rain: April 29 Chaos, Today’s Weather Forecast and Essential Safety Alerts

ಬೆಂಗಳೂರು, ಏ.30: ಬುಧವಾರದ (ಏ.29) ಭೀಕರ ಮಳೆಗೆ ಈಗಾಗಲೇ 9 ಜೀವಗಳನ್ನು ಬಲಿ ಪಡೆದಿರುವ ಸಿಲಿಕಾನ್ ಸಿಟಿಯಲ್ಲಿ ಇಂದು ಕೂಡ ಮಳೆಯ ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಹವಾಮಾನ ಇಲಾಖೆಯ ವರದಿಯ ಪ್ರಕಾರ, ನಗರದಲ್ಲಿ ಇಂದು ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿಯ ವೇಳೆಗೆ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಯಾವ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ?

ನಗರದ ದಕ್ಷಿಣ ಮತ್ತು ಪೂರ್ವ ಭಾಗಗಳಲ್ಲಿ ಮಳೆಯ ತೀವ್ರತೆ ಹೆಚ್ಚಿರಲಿದೆ ಎಂದು ಅಂದಾಜಿಸಲಾಗಿದೆ. ಪ್ರಮುಖವಾಗಿ ಈ ಕೆಳಗಿನ ಭಾಗಗಳಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಹೇಳಲಾಗಿದೆ.

ದಕ್ಷಿಣ ಬೆಂಗಳೂರು: ಜೆ.ಪಿ. ನಗರ, ಜಯನಗರ, ಬನ್ನೇರುಘಟ್ಟ ರಸ್ತೆ ಮತ್ತು ಬಿಟಿಎಂ ಲೇಔಟ್.

ಪೂರ್ವ ಬೆಂಗಳೂರು: ವೈಟ್‌ಫೀಲ್ಡ್, ಮಾರತಹಳ್ಳಿ, ಎಚ್‌ಎಸ್‌ಆರ್ ಲೇಔಟ್ ಮತ್ತು ಬೆಳ್ಳಂದೂರು.

ಕೇಂದ್ರ ಭಾಗ: ಶಿವಾಜಿನಗರ, ಮೆಜೆಸ್ಟಿಕ್, ಎಂ.ಜಿ. ರಸ್ತೆ ಮತ್ತು ಶಾಂತಿನಗರ.

ಉತ್ತರ ಬೆಂಗಳೂರು: ಯಲಹಂಕ, ಹೆಬ್ಬಾಳ ಮತ್ತು ಆರ್‌.ಟಿ. ನಗರದ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗಬಹುದು.

ಈಗಾಗಲೇ ಹಲವು ಸಾವುಗಳು ವಿದ್ಯುತ್ ಸ್ಪರ್ಶದಿಂದ ಸಂಭವಿಸಿರುವುದರಿಂದ, ಮಳೆಯ ವೇಳೆ ವಿದ್ಯುತ್ ಕಂಬಗಳು ಅಥವಾ ಟ್ರಾನ್ಸ್‌ಫಾರ್ಮರ್‌ಗಳ ಹತ್ತಿರ ಹೋಗಬೇಡಿ ಎಂದು ಇಲಾಖೆ ಹೇಳಿದೆ. ನೀರು ನುಗ್ಗುವ ಸಾಧ್ಯತೆ ಇರುವ ಪ್ರದೇಶದ ಜನರು ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತವಾಗಿರಿಸಿಕೊಳ್ಳಿ. ರಸ್ತೆಗಳಲ್ಲಿ ನೀರು ನಿಂತಿರುವುದರಿಂದ ಚಾಲನೆಯಲ್ಲಿ ಜಾಗರೂಕತೆ ಇರಲಿ. ಮರಗಳ ಕೆಳಗೆ ವಾಹನಗಳನ್ನು ನಿಲ್ಲಿಸಬೇಡಿ ಎಂದು ಹೇಳಲಾಗಿದೆ.

ಬಿಸಿಲಿನಿಂದ ಮುಕ್ತಿ ಸಿಕ್ಕರೂ ನಗರಕ್ಕೆ ತಟ್ಟಿದ ಮಳೆಯ ಬಿಸಿ

ಸಿಲಿಕಾನ್ ಸಿಟಿಯಲ್ಲಿ ಬುಧವಾರ ಸುರಿದ ಧಾರಾಕಾರ ಮಳೆ ಮತ್ತು ಅನಿರೀಕ್ಷಿತ ಆಲಿಕಲ್ಲು ಮಳೆಯು ಕಳೆದ ಹಲವು ದಿನಗಳ ಸುಡುವ ಬಿಸಿಲಿನಿಂದ ಜನರಿಗೆ ತಾತ್ಕಾಲಿಕ ನೆಮ್ಮದಿ ನೀಡಿದೆ. ಆದರೆ, ಕೇವಲ ಎರಡು ಗಂಟೆಗಳ ಈ ಅಬ್ಬರದ ಮಳೆಯು ನಗರದ ದುಸ್ಥಿತಿಯನ್ನು ಬಯಲು ಮಾಡಿದೆ. 37 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿದ್ದ ತಾಪಮಾನವು ಮಳೆಯಿಂದಾಗಿ ಕುಸಿದಿದ್ದರೂ, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದು ಮಗು ಸೇರಿದಂತೆ ಏಳು ಜನರು ಮೃತಪಟ್ಟಿದ್ದಾರೆ.ಮಲ್ಲೇಶ್ವರಂ, ಶಾಂತಿನಗರ ಮತ್ತು ಶೇಷಾದ್ರಿಪುರಂ ಸೇರಿದಂತೆ ನಗರದ ಸುಮಾರು 50ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಮರಗಳು ಧರೆಗುರುಳಿವೆ. ಕರ್ನಾಟಕದ ಶಕ್ತಿ ಕೇಂದ್ರವಾದ ವಿಧಾನ ಸೌಧದ ಕಾರಿಡಾರ್‌ಗಳು ಮತ್ತು ಕಚೇರಿಗಳಿಗೆ ಮಳೆ ನೀರು ನುಗ್ಗಿದೆ. ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಕಚೇರಿಯೂ ಜಲಾವೃತವಾಗಿತ್ತು.

ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಸೇರಿದಂತೆ ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಅಬ್ಬರಿಸಲಿದ್ದಾನೆ ವರುಣ

ನಗರದ ಸ್ಥಿತಿಗತಿ ಹೇಗಿದೆ?

ರಿಚ್‌ಮಂಡ್ ಟೌನ್ ಮತ್ತು ಶಾಂತಿನಗರದಂತಹ ತಗ್ಗು ಪ್ರದೇಶಗಳು ಮಳೆ ನೀರಿನಿಂದ ದ್ವೀಪದಂತಾಗಿವೆ. ರಸ್ತೆಗಳಲ್ಲಿ ಸೊಂಟದವರೆಗೆ ನೀರು ನಿಂತಿದ್ದರಿಂದ ವಾಹನ ಸವಾರರು ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದರು. ಮೆಟ್ರೋ ಸೇವೆಗಳಲ್ಲೂ ವ್ಯತ್ಯಯ ಉಂಟಾಗಿದ್ದು, ಕಚೇರಿಯಿಂದ ಮನೆಗೆ ತೆರಳುವವರು ತೀವ್ರ ಸಂಕಷ್ಟ ಅನುಭವಿಸಿದ್ದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೌರಿಂಗ್ ಆಸ್ಪತ್ರೆ ದುರಂತಕ್ಕೆ ಪ್ರಧಾನಿ ಮೋದಿ ಕಂಬನಿ: ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ – Kannada News | PM Modi Expresses Grief and Announces Ex gratia for Bengaluru Bowring Hospital Wall Collapse Victims

ಬೌರಿಂಗ್ ಆಸ್ಪತ್ರೆ ದುರಂತಕ್ಕೆ ಪ್ರಧಾನಿ ಮೋದಿ ಕಂಬನಿImage Credit source: tv9

ಬೆಂಗಳೂರು, ನವದೆಹಲಿ, ಏಪ್ರಿಲ್ 30: ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ಸಂಭವಿಸಿದ ಭೀಕರ ದುರಂತಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಘಟನೆಯಲ್ಲಿ ಮೂವರು ಮಕ್ಕಳು ಸೇರಿದಂತೆ ಒಟ್ಟು ಏಳು ಮಂದಿ ಮೃತಪಟ್ಟಿರುವುದು ಅತ್ಯಂತ ದುರದೃಷ್ಟಕರ ಎಂದು ಅವರು ಹೇಳಿದ್ದಾರೆ. ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ.

ಪ್ರಧಾನಿ ಮೋದಿ ಎಕ್ಸ್ ಸಂದೇಶದಲ್ಲಿ ಏನಿದೆ?

ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ಬೆಂಗಳೂರಿನಲ್ಲಿ ಕಾಂಪೌಂಡ್ ಕುಸಿದು ಸಂಭವಿಸಿದ ದುರಂತ ಅತ್ಯಂತ ದುರದೃಷ್ಟಕರವಾದುದು’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಸಂತಾಪವನ್ನು ಸೂಚಿಸುತ್ತೇನೆ. ಘಟನೆಯಲ್ಲಿ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಮೃತರ ವಾರಸುದಾರರಿಗೆ 2 ಲಕ್ಷ ರೂಪಾಯಿ ಹಾಗೂ ಗಾಯಾಳುಗಳಿಗೆ 50,000 ರೂಪಾಯಿ ಆರ್ಥಿಕ ನೆರವು ನೀಡಲಾಗುವುದು ಎಂದು ಪ್ರಧಾನಿ ಉಲ್ಲೇಖಿಸಿದ್ದಾರೆ.

ಪ್ರಧಾನಿ ಮೋದಿ ಎಕ್ಸ್ ಸಂದೇಶ

ಏತನ್ಮಧ್ಯೆ, ಮುಖ್ಯಮಂತ್ರಿ ಸಿದ್ದರಾಮಯ್ಯ ದುರಂತ ಸಂಭವಿಸಿದ ಬೌರಿಂಗ್ ಆಸ್ಪತ್ರೆ ಆವರಣಕ್ಕೆ ಬುಧವಾರ ರಾತ್ರಿಯೇ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ ಪೊಲೀಸ್ ಕಮಿಷನರ್ ಅವರೊಂದಿಗೆ ಮಾತನಾಡಿ ಸ್ಥಳಕ್ಕೆ ಧಾವಿಸಿ, ತಕ್ಷಣದ ನೆರವು ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ದುರಂತದಲ್ಲಿ ಮೃತಪಟ್ಟವರು ಯಾರೆಲ್ಲ? ಅಧಿಕೃತ ಮಾಹಿತಿ ಬಿಡುಗಡೆ, ಕೇರಳ-ಅಸ್ಸಾಂನವರೂ ಸಾವು

ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಇದು ಸರ್ಕಾರದ ಆಸ್ಪತ್ರೆಯ ಗೋಡೆಯಾಗಿರುವುದರಿಂದ, ಘಟನೆಗೆ ಆಡಳಿತದ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ. ಅಲ್ಲದೆ, ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದಾರೆ. ಕಾಂಗ್ರೆಸ್ ನಾಯಕ ರಿಜ್ವಾನ್ ಅರ್ಷದ್ ಮಾತನಾಡಿ, ಮಳೆ ಮತ್ತು ಮಿಂಚಿನಿಂದ ರಕ್ಷಣೆ ಪಡೆಯಲು ಗೋಡೆಯ ಕೆಳಗೆ ನಿಂತಿದ್ದವರು ಸಾವನ್ನಪ್ಪಿರುವುದು ಹೃದಯವಿದ್ರಾವಕವಾಗಿದೆ ಎಂದಿದ್ದಾರೆ. ರಾಜ್ಯ ಸರ್ಕಾರ ಈಗಾಗಲೇ ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದು, ಅದನ್ನು ಮತ್ತಷ್ಟು ಹೆಚ್ಚಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಅಧಿಕಾರಿಗಳು ಈಗಾಗಲೇ ತನಿಖೆ ಆರಂಭಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಧ್ಯಪ್ರದೇಶ: ಪಿಕಪ್ ಟ್ರಕ್ ಪಲ್ಟಿಯಾಗಿ 12 ಕಾರ್ಮಿಕರು ಸಾವು, 13 ಜನರಿಗೆ ಗಾಯ – Kannada News | Pickup Overturns in Madhya Pradesh, Multiple Workers Killed

ಧಾರ್, ಏಪ್ರಿಲ್ 30: ಪಿಕಪ್ ಟ್ರಕ್ ಪಲ್ಟಿಯಾಗಿ 12 ಮಂದಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ನಡೆದಿದೆ, ಘಟನೆಯಲ್ಲಿ 13 ಮಂದಿ ಗಾಯಗೊಂಡಿದ್ದಾರೆ. ಬುಧವಾರ ರಾತ್ರಿ ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತ(Accident)ವು 12 ಜನರ ಬದುಕನ್ನು ಕಸಿದುಕೊಂಡಿದೆ. ಸುಮಾರು 35 ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಪಿಕಪ್ ವಾಹನವು ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಈ ದುರಂತ ಸಂಭವಿಸಿದೆ.

ರಾತ್ರಿ 8:30ರ ಸುಮಾರಿಗೆ ಹೆದ್ದಾರಿಯ ಪೆಟ್ರೋಲ್ ಪಂಪ್ ಬಳಿ ಈ ಅಪಘಾತ ನಡೆದಿದೆ. ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ತುಂಬಿಸಿಕೊಂಡಿದ್ದ ಪಿಕಪ್ ಟ್ರಕ್, ಅತಿ ವೇಗದಿಂದಾಗಿ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಹಲವು ಬಾರಿ ಪಲ್ಟಿಯಾಗಿದೆ. ಈ ಭೀಕರ ದೃಶ್ಯ ಕಂಡ ಪ್ರತ್ಯಕ್ಷದರ್ಶಿಗಳು ಬೆಚ್ಚಿಬಿದ್ದಿದ್ದಾರೆ. ಮೃತರಲ್ಲಿ ಹಲವಾರು ಅಮಾಯಕ ಮಕ್ಕಳೂ ಸೇರಿರುವುದು ದುರಂತದ ತೀವ್ರತೆಯನ್ನು ಹೆಚ್ಚಿಸಿದೆ.

ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯ ನಿವಾಸಿಗಳು ಮತ್ತು ಪೊಲೀಸರು ರಕ್ಷಣಾ ಕಾರ್ಯಾಚರಣೆಗೆ ಧಾವಿಸಿದ್ದಾರೆ. ಅವಶೇಷಗಳ ಅಡಿಯಲ್ಲಿ ಸಿಲುಕಿದ್ದವರನ್ನು ಹೊರತೆಗೆದು ತಕ್ಷಣ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯ ವೈದ್ಯರ ಪ್ರಕಾರ, ಸದ್ಯ 13 ಜನರ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಮತ್ತಷ್ಟು ಓದಿ: ಕುಲ್ಗಾಮ್​ನಲ್ಲಿ ಭೀಕರ ಅಪಘಾತ; ಕಾರು ಗುದ್ದಿದ ರಭಸಕ್ಕೆ ವಿದ್ಯಾರ್ಥಿನಿ ಸಾವು

ಈ ಘಟನೆಯ ಕುರಿತು ತೀವ್ರ ಶೋಕ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 50,000 ರೂ. ಪರಿಹಾರವನ್ನು ಘೋಷಿಸಿದ್ದಾರೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಅವರು ಈ ಸಂದರ್ಭದಲ್ಲಿ ಪ್ರಾರ್ಥಿಸಿದ್ದಾರೆ.

ಅತಿಯಾದ ವೇಗ ಮತ್ತು ಮಿತಿಮೀರಿದ ಭಾರ ಹೊರುವುದು ಅಮಾಯಕರ ಪ್ರಾಣಕ್ಕೆ ಹೇಗೆ ಸಂಚಕಾರ ತರುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version