ಜಿಬಿಎ ಲ್ಯಾಬ್‌ಗೆ ಅಂಟಿದ ಗ್ರಹಣ: ಬೆಂಕಿ ಅವಘಡದ ಬಳಿಕವೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು! – Kannada News | BBMP/GBA Quality Control Lab Negligence: Machinery Rots After Fire Mishap

ಕ್ವಾಲಿಟಿ ಕಂಟ್ರೋಲ್ ಲ್ಯಾಬ್Image Credit source: The Hindu

ಬೆಂಗಳೂರು, ಏಪ್ರಿಲ್ 29: ಸಿಲಿಕಾನ್ ಸಿಟಿಯ ಅಭಿವೃದ್ಧಿ ಕಾಮಗಾರಿಗಳ ಬೆನ್ನೆಲುಬಾಗಬೇಕಿದ್ದ ಬಿಬಿಎಂಪಿ ಗುಣನಿಯಂತ್ರಣ ಪ್ರಯೋಗಾಲಯವು (Quality Control Lab) ಸದ್ಯ ಅನಾಥ ಸ್ಥಿತಿಯಲ್ಲಿದೆ. ಎರಡು ವರ್ಷಗಳ ಹಿಂದೆ ಬಿಬಿಎಂಪಿ ಕೇಂದ್ರ ಕಚೇರಿಯ ಆವರಣದಲ್ಲಿದ್ದ ಲ್ಯಾಬ್‌ನಲ್ಲಿ ಸಂಭವಿಸಿದ ಭೀಕರ ಬೆಂಕಿ ಅವಘಡ ಹಲವರನ್ನು ಬಲಿ ಪಡೆದಿತ್ತು. ಆ ಘಟನೆಯ ನಂತರವೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು ಮತ್ತು ಜಿಬಿಎ (GBA), ಪ್ರಯೋಗಾಲಯದ ಪುನಶ್ಚೇತನಕ್ಕೆ ಆಸಕ್ತಿ ತೋರದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಹೊಸ ಲ್ಯಾಬ್ ನಿರ್ಮಾಣಕ್ಕಿನ್ನೂ ಬಂದಿಲ್ಲ ಮುಹೂರ್ತ!

ದುರಂತದ ನಂತರ ಸುಸಜ್ಜಿತವಾದ ಹೊಸ ಲ್ಯಾಬ್ ನಿರ್ಮಿಸುವುದಾಗಿ ಪಾಲಿಕೆ ನೀಡಿದ್ದ ಭರವಸೆ ಕೇವಲ ಕಾಗದದ ಮೇಲೆಯೇ ಉಳಿದಿದೆ. ಪರಿಣಾಮವಾಗಿ, ಸಾರ್ವಜನಿಕ ತೆರಿಗೆ ಹಣದಲ್ಲಿ ಖರೀದಿಸಲಾದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಆಧುನಿಕ ಯಂತ್ರೋಪಕರಣಗಳು ಬಳಕೆಯಿಲ್ಲದೆ ಧೂಳು ಹಿಡಿಯುತ್ತಿವೆ. ನಗರದಲ್ಲಿ ನಡೆಯುತ್ತಿರುವ ಕೋಟ್ಯಂತರ ರೂಪಾಯಿ ವೆಚ್ಚದ ಕಾಮಗಾರಿಗಳ ಗುಣಮಟ್ಟವನ್ನು ಪರೀಕ್ಷಿಸಲು ಈ ಲ್ಯಾಬ್ ಅತ್ಯಗತ್ಯವಾಗಿತ್ತು. ಆದರೆ ಪ್ರಸ್ತುತ ಇದು ಕಾರ್ಯಾಚರಣೆ ಸ್ಥಗಿತಗೊಳಿಸಿರುವುದರಿಂದ, ರಸ್ತೆ ಹಾಗೂ ಕಟ್ಟಡ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.

ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ಎನ್.ಆರ್. ರಮೇಶ್, ಅಧಿಕಾರಿಗಳು ತಮ್ಮ ಭ್ರಷ್ಟಾಚಾರ ಮತ್ತು ಕಳ್ಳಾಟವನ್ನು ಮುಚ್ಚಿಡಲು ಉದ್ದೇಶಪೂರ್ವಕವಾಗಿ ಲ್ಯಾಬ್ ಕಾರ್ಯನಿರ್ವಹಿಸದಂತೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಬೆಂಕಿ ಅವಘಡದಂತಹ ಪಾಠ ಕಲಿತ ಮೇಲೂ ಸುಧಾರಣಾ ಕ್ರಮಗಳನ್ನು ಕೈಗೊಳ್ಳದ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಶೋಚನೀಯವಾಗಿದೆ. ಗುಣಮಟ್ಟದ ತಪಾಸಣೆಯಿಲ್ಲದೆ ನಗರದ ಮೂಲಸೌಕರ್ಯಗಳು ಹಳ್ಳ ಹಿಡಿಯುವ ಭೀತಿ ಎದುರಾಗಿದೆ.

ಲಕ್ಷ್ಮಿ ನರಸಿಂಹ, ಟಿವಿ9, ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಮಗನೇ ಈಗಲೂ ನನಗೆ ಸಿನಿಮಾ ಅರ್ಥ ಆಗಿಲ್ಲ ಅಂತಿದ್ರು’; ಪ್ರಭಾಕರ್ ಮಾತು ನೆನೆದ ವಿನೋದ್ – Kannada News | Tiger Prabhakar’s Emotional Advice to Son Vinod Prabhakar Revealed at Balaramana Dinagalu Teaser Launch.

ಪ್ರಭಾಕರ್ ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಪೊಲೀಸ್​ ಆಗಿ, ಹೀರೋ ಆಗಿ, ವಿಲನ್ ಆಗಿ ಮಿಂಚಿದ್ದರು. ಅವರು ಹೇಳಿದ ಒಂದು ಮಾತನ್ನು ವಿನೋದ್ ಪ್ರಭಾಕರ್ ನೆನಪಿಸಿಕೊಂಡಿದ್ದಾರೆ.‘ಬಲರಾಮನ ದಿನಗಳು’ ಸಿನಿಮಾ ಟೀಸರ್ ಲಾಂಚ್ ವೇಳೆ ಮಾತನಾಡಿದ ಪ್ರಭಾಕರ್ ಅವರು, ‘ನಾನು ಇಷ್ಟೆಲ್ಲ ಸಿನಿಮಾ ಮಾಡಿದರೂ ನನಗೆ ಸಿನಿಮಾ ಏನು ಅನ್ನೋದು ಗೊತ್ತಾಗಿಲ್ಲ ಮಗನೆ ಎಂದು ಪ್ರಭಾಕರ್ ಹೇಳುತ್ತಿದ್ದರು’ ಎಂದು ವಿನೋದ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹಸೆಮಣೆ ಏರಬೇಕಿದ್ದ ವಧುವಿನ ದಾರುಣ ಅಂತ್ಯ, ಮದುವೆ ದಿನ ಬ್ಯೂಟಿ ಪಾರ್ಲರ್‌ಗೆ ಹೋಗುತ್ತಿದ್ದಾಗ ಅಪಘಾತ, ಯುವತಿ ಸಾವು – Kannada News | Wedding Day Tragedy: Bride Dies in Road Accident in UP

ಬರಿಯಾರ್‌ಪುರ, ಏಪ್ರಿಲ್ 29: ಮಂಗಲ ವಾದ್ಯಗಳು ಮೊಳಗಬೇಕಿದ್ದ ಮನೆಯಲ್ಲಿ ಈಗ ಸ್ಮಶಾನ ಮೌನ ಆವರಿಸಿದೆ. ಮದುವೆಗೆ ಸಿದ್ಧವಾಗಲು ಸಡಗರದಿಂದ ಬ್ಯೂಟಿ ಪಾರ್ಲರ್‌ಗೆ ಹೊರಟಿದ್ದ 22 ವರ್ಷದ ವಧು, ಮನೆಗೆ ಹೆಣವಾಗಿ ಹಿಂದಿರುಗಿದ ಘೋರ ದುರಂತ ಉತ್ತರ ಪ್ರದೇಶದಲ್ಲಿ ನಡೆದಿದೆ. ಬರಿಯಾರ್‌ಪುರದ ಗೌರ್ ಕೋಥಿ ಗ್ರಾಮದ  ರಚನಾ (22) ಅವರ ವಿವಾಹ(Marriage)ವು ಅದೇ ದಿನ ಸಂಜೆ ನಡೆಯಬೇಕಿತ್ತು. ವಧುವಿನ ಅಲಂಕಾರಕ್ಕಾಗಿ ರಚನಾ ತನ್ನ ಕಿರಿಯ ಸಹೋದರನೊಂದಿಗೆ ಬೈಕ್​​ನಲ್ಲಿ ಹತ್ತಿರದ ಬ್ಯೂಟಿ ಪಾರ್ಲರ್‌ಗೆ ಹೊರಟಿದ್ದರು. ಆದರೆ ಬೈಕ್ ನಿಯಂತ್ರಣ ತಪ್ಪಿ ಬಿದ್ದಿದೆ, ಇದೇ ವೇಳೆ ಎದುರುಗಡೆಯಿಂದ ವೇಗವಾಗಿ ಬಂದ ಟ್ರಕ್ ರಚನಾ ಮೇಲೆ ಹರಿದಿದೆ.

ಅಪಘಾತದ ತೀವ್ರತೆಗೆ ರಚನಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಬಂದಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಮಗಳ ಮದುವೆ ಮುಗಿಸಿ ಬೀಳ್ಕೊಡಬೇಕಿದ್ದ ತಂದೆ ಮತ್ತು ಕುಟುಂಬಸ್ಥರು ಈ ಸುದ್ದಿಯನ್ನು ಕೇಳಿ ದಿಗ್ಭ್ರಾಂತರಾಗಿದ್ದಾರೆ. ವರನ ಕಡೆಯವರು ಮೆರವಣಿಗೆಯೊಂದಿಗೆ ಬರಬೇಕಿದ್ದ ಸಮಯದಲ್ಲಿ, ಮಗಳ ಶವಯಾತ್ರೆ ನಡೆಸಬೇಕಾದ ಅನಿವಾರ್ಯತೆ ಆ ತಂದೆಗೆ ಎದುರಾಗಿದೆ.

ಘಟನೆ ನಡೆದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಟ್ರೇಲರ್ ಅನ್ನು ವಶಪಡಿಸಿಕೊಂಡಿದ್ದು, ಚಾಲಕನನ್ನು ಬಂಧಿಸಿದ್ದಾರೆ. ಟ್ರೇಲರ್ ಅಡಿಯಲ್ಲಿ ಸಿಲುಕಿ ವಧು ಸಾವನ್ನಪ್ಪಿದ್ದಾರೆ. ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಸ್ಟೇಷನ್ ಹೌಸ್ ಅಧಿಕಾರಿ ದೀಪಕ್ ಸಿಂಗ್ ತಿಳಿಸಿದ್ದಾರೆ.

ಮತ್ತಷ್ಟು ಓದಿ: ಅನಾಥಾಶ್ರಮದಲ್ಲಿ ಮದ್ವೆ ಸಂಭ್ರಮ: ಅನಾಥೆ ಬಾಳಲ್ಲಿ ಹೊಸ ಬೆಳಕು, ತುಂಬು ಮನೆ ಸೇರಿದ ಮೈನಾ

ಸ್ಥಳೀಯ ಪ್ರತಿನಿಧಿ ರಾಜೇಶ್ ರಾಜ್‌ಭರ್ ಈ ಘಟನೆಯನ್ನು ಅತ್ಯಂತ ದುರಂತ ಎಂದು ಬಣ್ಣಿಸಿದ್ದಾರೆ. ಮದುವೆಯ ಸಿದ್ಧತೆಗಳಿಗಾಗಿ ಅದ್ದೂರಿಯಾಗಿ ಸಿಂಗಾರಗೊಂಡಿದ್ದ ಮನೆ, ಈಗ ಶೋಕಸಾಗರದಲ್ಲಿ ಮುಳುಗಿದೆ. ನೂರಾರು ಕನಸು ಹೊತ್ತು ಹೊಸ ಜೀವನಕ್ಕೆ ಕಾಲಿಡಬೇಕಿದ್ದ ಯುವತಿಯ ಅಕಾಲಿಕ ಮರಣವು ಇಡೀ ಗ್ರಾಮಸ್ಥರ ಕಣ್ಣುಗಳನ್ನು ತೇವಗೊಳಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪಂಜಾಬ್ ಕಿಂಗ್ಸ್​ ಸೋಲಿಗೆ ಇದುವೇ ಕಾರಣ!

IPL 2026: ಐಪಿಎಲ್​ನ 40ನೇ ಪಂದ್ಯದ ಮೂಲಕ ರಾಜಸ್ತಾನ್ ರಾಯಲ್ಸ್ ತಂಡವು ಪಂಜಾಬ್ ಕಿಂಗ್ಸ್ ತಂಡದ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದೆ. ಈ ಪಂದ್ಯದಲ್ಲಿ 222 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿದರೂ ಪಂಜಾಬ್ ಕಿಂಗ್ಸ್​ ತಂಡವು 6 ವಿಕೆಟ್‌ಗಳ ಸೋಲನ್ನು ಅನುಭವಿಸಿತು. ಸತತ ಏಳು ಪಂದ್ಯಗಳ ಗೆಲುವಿನ ನಂತರ ಪಂಜಾಬ್ ಎಡವಿದ್ದು ಎಲ್ಲಿ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್.

ಡೆತ್ ಓವರ್‌ಗಳಲ್ಲಿ ಬೌಲಿಂಗ್ ವೈಫಲ್ಯ:

ಪಂದ್ಯದ ನಂತರ ಮಾತನಾಡಿದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್, ಸೋಲಿಗೆ ಮುಖ್ಯ ಕಾರಣ ಬೌಲರ್‌ಗಳು ಯೋಜನೆಯನ್ನು ಸರಿಯಾಗಿ ಜಾರಿಗೆ ತರದಿರುವುದು ಎಂದು ಒಪ್ಪಿಕೊಂಡಿದ್ದಾರೆ. ಕೊನೆಯ ಓವರ್‌ಗಳಲ್ಲಿ ಸ್ಲೋವರ್ ಬಾಲ್ ಹಾಗೂ ಯಾರ್ಕರ್ ಎಸೆಯುವಲ್ಲಿ ಪಂಜಾಬ್ ಬೌಲರ್‌ಗಳು ವಿಫಲರಾದರು. ವಿಶೇಷವಾಗಿ ಅರ್ಷದೀಪ್ ಸಿಂಗ್ (1/68) ಮತ್ತು ಲಾಕಿ ಫರ್ಗುಸನ್ (0/57) ಅತ್ಯಂತ ದುಬಾರಿಯಾದರು.

ರಾಜಸ್ಥಾನ್ ರಾಯಲ್ಸ್‌ನ ಸ್ಫೋಟಕ ಆರಂಭ:

223 ರನ್‌ಗಳ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ತಂಡಕ್ಕೆ 15 ವರ್ಷದ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಆರಂಭ ನೀಡಿದರು. ಕೇವಲ 16 ಎಸೆತಗಳಲ್ಲಿ 5 ಸಿಕ್ಸರ್ ಸಹಿತ 43 ರನ್ ಸಿಡಿಸಿದ ಅವರು ಪಂಜಾಬ್ ಬೌಲರ್‌ಗಳ ಲಯವನ್ನು ತಪ್ಪಿಸಿದರು. ಪರಿಣಾಮ ಪವರ್‌ಪ್ಲೇನಲ್ಲಿ ರಾಜಸ್ಥಾನ್ ರಾಯಲ್ಸ್​ 84 ರನ್ ಕಲೆಹಾಕಿ ಪಂದ್ಯದ ಗತಿಯನ್ನೇ ಬದಲಿಸಿದರು.

ಫೆರೇರಾ ಮತ್ತು ಶುಭಂ ದುಬೆ ಅವರ ಫಿನಿಶಿಂಗ್ ಆಟ:

ಒಂದು ಹಂತದಲ್ಲಿ ಪಂದ್ಯ ಪಂಜಾಬ್ ಕಿಂಗ್ಸ್​ ಕೈಯಲ್ಲಿದೆ ಎನಿಸಿದರೂ, ಡೊನೊವನ್ ಫೆರೇರಾ (52*) ಮತ್ತು ಶುಭಂ ದುಬೆ (31*) ಅವರ ಅಜೇಯ 77 ರನ್‌ಗಳ ಜೊತೆಯಾಟ ಪಂದ್ಯವನ್ನು ರಾಜಸ್ಥಾನ್ ರಾಯಲ್ಸ್​ ಪರವಾಗಿ ತಿರುಗಿಸಿತು. ಕೇವಲ 32 ಎಸೆತಗಳಲ್ಲಿ ಮೂಡಿಬಂದ ಈ ಜೊತೆಯಾಟವು ಪಂಜಾಬ್‌ನ ಬೌಲರ್‌ಗಳನ್ನು ಮಂಕಾಗಿಸಿತು.

3 ಓವರ್​ಗಳಲ್ಲಿ ಕೇವಲ 23 ರನ್​:

15 ಓವರ್​ಗಳವರೆಗೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದ ಪಂಜಾಬ್ ಕಿಂಗ್ಸ್ ತಂಡವು 16 ರಿಂದ 18 ಓವರ್​ಗಳವರೆಗೆ ಕಲೆಹಾಕಿದ್ದು ಕೇವಲ 23 ರನ್​​ಗಳು ಮಾತ್ರ. ಇದು ಪಂಜಾಬ್ ಕಿಂಗ್ಸ್ ತಂಡದ ಒಟ್ಟು ಸ್ಕೋರ್​ಗಳ ಮೇಲೆ ಪರಿಣಾಮ ಬೀರಿತು. ಅಂದರೆ ಈ ಮೂರು ಓವರ್​ಗಳಲ್ಲೂ ಸ್ಫೋಟಕ ಬ್ಯಾಟಿಂಗ್ ಮೂಡಿಬಂದಿದ್ದರೆ ಪಂಜಾಬ್ ಕಿಂಗ್ಸ್ ತಂಡಕ್ಕೆ 240 ರಿಂದ 250 ರನ್​ಗಳಿಸುವ ಅವಕಾಶವಿತ್ತು. ಆದರೆ ಅಂತಿಮ ಹಂತದಲ್ಲಿ ನಿಧಾನಗತಿಯಲ್ಲಿ ಬ್ಯಾಟ್ ಬೀಸಿದ್ದು ಪಂಜಾಬ್ ಕಿಂಗ್ಸ್ ಪಾಲಿಗೆ ಮುಳುವಾಯಿತು.

ಇದನ್ನೂ ಓದಿ: ವೈಭವ್ ಆರ್ಭಟಕ್ಕೆ ರಸೆಲ್ ರೆಕಾರ್ಡ್ ಉಡೀಸ್

ಈ ಸೋಲಿನ ಹೊರತಾಗಿಯೂ ಪಂಜಾಬ್ ಕಿಂಗ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ ಮುಂದಿನ ಪಂದ್ಯಗಳಲ್ಲಿ ಪಂಜಾಬ್ ಪಡೆ ಗೆಲ್ಲಬೇಕಿದ್ದರೆ ಬೌಲಿಂಗ್ ವಿಭಾಗವು ಉತ್ತಮ ಪ್ರದರ್ಶನ ನೀಡಬೇಕಾದ ಅನಿವಾರ್ಯತೆ. ಏಕೆಂದರೆ ಬ್ಯಾಟರ್​ಗಳು ಬೃಹತ್ ಮೊತ್ತ ಪೇರಿಸಿದರೂ ಬೌಲರ್​ಗಳು ದುಬಾರಿಯಾದರೆ ಏನಾಗಲಿದೆ ಎಂಬುದಕ್ಕೆ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯವೇ ಸಾಕ್ಷಿ.

 

Source link

ಬಿಜೆಪಿ ಮುಖಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ: ಸೊರಬ ಪುರಸಭೆ ಮಾಜಿ ಅಧ್ಯಕ್ಷ ಅರೆಸ್ಟ್! – Kannada News | Shivamogga: BJP Leader and Former Soraba TMC President Arrested After Wife ended Over Extra Marital Affair

ಶಿವಮೊಗ್ಗ, ಏಪ್ರಿಲ್ 29: ಪತಿಯ ಅನೈತಿಕ ಸಂಬಂಧ ಹಾಗೂ ದೈಹಿಕ-ಮಾನಸಿಕ ಹಿಂಸೆಯಿಂದ ಬೇಸತ್ತ ಬಿಜೆಪಿ (BJP) ಮುಖಂಡನ ಪತ್ನಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಸೊರಬ ಪಟ್ಟಣದ ಕಾನುಕೇರಿ ಬಡಾವಣೆಯಲ್ಲಿ ನಡೆದಿದೆ. ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಹೊಸವೀರಾಪುರ ಗ್ರಾಮದ ಮಂಜುಳಾ (38) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈ ಬಗ್ಗೆ ಮೃತಳ ತಾಯಿ ಸೊರಬ ಪೋಲೀಸರಿಗೆ ದೂರು ನೀಡಿದ್ದು, ಇದರ ಆಧಾರದಲ್ಲಿ ಬಿಜೆಪಿ ಮುಖಂಡ ಪ್ರಭು ಮೇಸ್ತ್ರಿಯನ್ನು ಬಂಧಿಸಲಾಗಿದೆ. ಅಲ್ಲದೆ, ಪ್ರಭು ಮೇಸ್ತ್ರಿಯ ಹಲವು ವಿಚಾರಗಳು ಬೆಳಕಿಗೆ ಬಂದಿವೆ.

ಸೊರಬ ಪುರಸಭೆಯ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಪ್ರಭು ಮೇಸ್ತ್ರಿ ಎಂಬಾತನ ಪತ್ನಿ ಮಂಜುಳಾ, ಪತಿಯ ನಡತೆಯಿಂದ ಮನನೊಂದಿದ್ದರು. ಪ್ರಭು ಮೇಸ್ತ್ರಿ ತನ್ನ ಹಾರ್ಡ್‌ವೇರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎಂಬ ಆರೋಪವಿದೆ. ಈ ಸಂಬಂಧವನ್ನು ಬಿಟ್ಟುಬಿಡುವಂತೆ ಹಿರಿಯರು ಮತ್ತು ಸಂಬಂಧಿಕರು ಹಲವು ಬಾರಿ ಬುದ್ಧಿಮಾತು ಹೇಳಿದ್ದರೂ, ಪ್ರಭು ಅದನ್ನು ಮುಂದುವರಿಸಿದ್ದ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಇದೇ ವಿಚಾರವಾಗಿ ಪತ್ನಿ ಮಂಜುಳಾ ಅವರಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದ.

ಎರಡು ಮದುವೆಯಾಗಿದ್ದ ಪ್ರಭು ಮೇಸ್ತ್ರಿ, ಮೂರನೇಯವಳೊಂದಿಗೆ ಸಂಬಂಧ!

ಪ್ರಭು ಮೇಸ್ತ್ರಿ ಈ ಮೊದಲು ಕೇರಳ ಮೂಲದ ಮಹಿಳೆಯನ್ನು ವಿವಾಹವಾಗಿದ್ದು, ಆಕೆಯನ್ನು ತೊರೆದಿದ್ದ. ನಂತರ ಮಂಜುಳಾ ಅವರೊಂದಿಗೆ ಎರಡನೇ ಮದುವೆಯಾಗಿದ್ದ. ಮೊದಲ ಪತ್ನಿ ಪತಿಯನ್ನು ಬಿಟ್ಟು ತವರಿಗೆ ತೆರಳಿದ್ದರೆ, ಎರಡನೇ ಪತ್ನಿ ಮಂಜುಳಾ ಮನೆಯ ಹಿಂಭಾಗದ ಮರದ ತೊಲೆಗೆ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ. ಪ್ರಭು ಮೇಸ್ತ್ರಿ ಈ ಹಿಂದೆ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಬಣದಲ್ಲಿ ಗುರುತಿಸಿಕೊಂಡಿದ್ದ. ಮೃತಳ ತಾಯಿ ಶೋಭಾ ನೀಡಿದ ದೂರಿನ ಮೇರೆಗೆ ಸೊರಬ ಪೊಲೀಸರು ಸದ್ಯ ಪ್ರಭು ಮೇಸ್ತ್ರಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ಮಾಜಿ ಮುಖಂಡನ ಪುತ್ರನಿಂದ ಯುವತಿಗೆ ದೋಖಾ ಕೇಸ್​: ಹೈಕೋರ್ಟ್​​ನಿಂದ ಮಹತ್ವದ ಆದೇಶ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Bengaluru Air Quality: ಬಳ್ಳಾರಿ ಜನರ ಉಸಿರಿಗೆ ಕುತ್ತು: ಮಾರಕ ಹಂತಕ್ಕೆ ತಲುಪಿದ ಗಾಳಿಯ ಗುಣಮಟ್ಟ! – Kannada News | Bangalore Air Pollution Crisis: Ballari Air Quality crosses 300, Hazardous AQI noted

ಬೆಂಗಳೂರು, ಏಪ್ರಿಲ್ 29: ರಾಜ್ಯದಲ್ಲಿ ಬಳ್ಳಾರಿಯ ವಾಯು ಗುಣಮಟ್ಟ (Bengaluru Air Quality) ಏಕಾಏಕಿ 300ರ ಗಡಿ ದಾಟಿದ್ದು, ಇದೇ ಮೊದಲ ಬಾರಿಗೆ ಈ ಮಟ್ಟದಲ್ಲಿ ಹದಗೆಟ್ಟಿದೆ. ಇಷ್ಟು ದಿನ ಗರಿಷ್ಠ 200ಕ್ಕೆ ತಲುಪುತ್ತಿದ್ದ AQI ಇಂದು ಇಷ್ಟು ಹೆಚ್ಚಾಗಿರುವುದು ಆತಂಕ ಮೂಡಿಸಿದೆ. ಬೆಂಗಳೂರಿನ AQI ಸಧ್ಯಕ್ಕೆ ಒಳ್ಳೆಯ ಮಟ್ಟದಲ್ಲಿದ್ದು, ಆದರೂ ಬೆಂಗಳೂರಿನ ವಾಯು ಗುಣಮಟ್ಟ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಹಠಾತ್ತನೆ ಕುಸಿದ AQI

ಬಳ್ಳಾರಿಯಲ್ಲಿ ವಾಯುಮಾಲಿನ್ಯದ ಮಟ್ಟವು ಅತ್ಯಂತ ಅಪಾಯಕಾರಿ (Hazardous) ಹಂತಕ್ಕೆ ತಲುಪಿದ್ದು, ವಾಯು ಗುಣಮಟ್ಟ ಸೂಚ್ಯಂಕವು (AQI) 356ಕ್ಕೆ ಏರಿಕೆಯಾಗಿದೆ. ಇದು ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ. ವಿಶೇಷವಾಗಿ ಮಕ್ಕಳು, ವೃದ್ಧರು ಮತ್ತು ಉಸಿರಾಟದ ಸಮಸ್ಯೆ ಇರುವವರು ತೀವ್ರ ಸಂಕಷ್ಟಕ್ಕೆ ಒಳಗಾಗಬಹುದು.

ಗಾಳಿಯಲ್ಲಿನ ವಿಷಕಾರಿ ಅಂಶಗಳು ಶ್ವಾಸಕೋಶದ ಕಾಯಿಲೆಗಳಿಗೆ ದಾರಿಯಾಗುವುದರಿಂದ, ಜನರು ತುರ್ತು ಕೆಲಸಗಳಿಲ್ಲದೆ ಹೊರಬರದಂತೆ ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ. ನಗರದ ಹವಾಮಾನವು ಉಸಿರುಗಟ್ಟಿಸುವಂತಿದ್ದು, ಮಾಲಿನ್ಯ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳ ಅಗತ್ಯವಿದೆ. ಬಳ್ಳಾರಿಯ ಜನತೆ ಈಗ ದೀರ್ಘಕಾಲದ ಆರೋಗ್ಯದ ದೃಷ್ಟಿಯಿಂದ ಹೆಚ್ಚಿನ ಜಾಗ್ರತೆ ವಹಿಸಬೇಕಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು – 141
  • ಮಂಗಳೂರು-118
  • ಮೈಸೂರು – 110
  • ಬೆಳಗಾವಿ – 42
  • ಕಲಬುರ್ಗಿ-116
  • ಶಿವಮೊಗ್ಗ –102
  • ಬಳ್ಳಾರಿ – 356
  • ಹುಬ್ಬಳ್ಳಿ- 67
  • ಉಡುಪಿ –124
  • ವಿಜಯಪುರ – 93

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಜಗದ್ಧಾತ್ರೀ’ ಎಂಟ್ರಿಗೆ ಸಿದ್ಧವಾಯ್ತು ವೇದಿಕೆ; ಮುಗಿಯುತ್ತಿರುವ ಧಾರಾವಾಹಿ ಯಾವುದು? – Kannada News | Jagaddhatri Serial: Mokshitha Pai’s Grand Return on Zee Kannada; Which Show Ends?

‘ಜಗದ್ಧಾತ್ರೀ’ ಧಾರಾವಾಹಿ ಬರಲಿದೆ ಎಂಬುದನ್ನು ಜೀ ಕನ್ನಡ ವಾಹಿನಿ ಈ ಮೊದಲೇ ಘೋಷಣೆ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗ ಧಾರಾವಾಹಿಯ ಹೊಸ ಪ್ರೋಮೋ ಒಂದು ರಿಲೀಸ್ ಆಗಿದೆ. ಇದರಲ್ಲಿ ‘ಜಗದ್ಧಾತ್ರೀ’ ಪಾತ್ರ ಯಾವ ರೀತಿಯಲ್ಲಿ ಇರಲಿದೆ ಎಂಬುದನ್ನು ತೋರಿಸಲಾಗಿದೆ. ಜಗದ್ಧಾತ್ರೀ ಕೇವಲ ಮನೆ ಮಗಳಲ್ಲ, ಆಕೆ ಲೋಕವನ್ನು ಕಾಯುವವಳೂ ಹೌದು ಎಂಬುದನ್ನು ತೋರಿಸಿರಿವುದನ್ನು ನೀವು ಕಾಣಬಹುದು.

‘ಜಗದ್ಧಾತ್ರೀ’ ಧಾರಾವಾಹಿ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಮೊದಲು ಪ್ರೋಮೋ ಒಂದು ರಿಲೀಸ್ ಆಗಿತ್ತು. ಈಗ ಧಾರಾವಾಹಿಯ ಎರಡನೇ ಪ್ರೋಮೋ ರಿಲೀಸ್ ಆಗಿದೆ. ಈ ಪ್ರೋಮೋದಲ್ಲಿ ನಟಿ ಯಾರು ಎಂಬುದರ ಸೂಚನೆಯನ್ನು ಕೊಡಲಾಗಿದೆ.

‘ಜಗದ್ಧಾತ್ರೀ’ ಧಾರಾವಾಹಿಯ ಪ್ರೋಮೋದಲ್ಲಿ ಕಥಾ ನಾಯಕಿ ಮನೆಯಲ್ಲಿ ಚಹಾ ಮಾಡಿಕೊಡುತ್ತಾ ಇರುತ್ತಾಳೆ. ಆ ಸಂದರ್ಭಕ್ಕೆ ಸರಿಯಾಗಿ ಕಿಡ್ನ್ಯಾಪ್ ಆಗಿದೆ ಎಂಬ ಸುದ್ದಿ ಬರುತ್ತದೆ. ಆ ಸಮಯಕ್ಕೆ ಸರಿಯಾಗಿ ಆಕೆ ಹೊರಡುತ್ತಾಳೆ ಮತ್ತು ಹೋಗಿ ಬಾಲಕಿಯನ್ನು ರಕ್ಷಣೆ ಮಾಡುತ್ತಾಳೆ . ಈ ರೀತಿಯಲ್ಲಿ ಧಾರಾವಾಹಿ ಪ್ರೋಮೋದಲ್ಲಿ ಮೂಡಿ ಬಂದಿದೆ.

ಈ ಧಾರಾವಾಹಿಯಲ್ಲಿ ನಟಿಸೋದು ಮೋಕ್ಷಿತಾ ಪೈ ಎಂಬುದು ಬಹುತೇಕ ಸ್ಪಷ್ಟವಾಗಿದೆ. ಈಗ ರಿಲೀಸ್ ಆಗಿರುವ ಪ್ರೋಮೋ ನೋಡಿದ ಮೋಕ್ಷಿತಾ ಅಭಿಮಾನಿಗಳು ತುಂಬಾನೇ ಖುಷಿಯಾಗಿದ್ದಾರೆ. ಅವರ ಮುಖವನ್ನು ತೋರಿಸಲು ಅಭಿಮಾನಿಗಳು ಕಾದಿದ್ದಾರೆ.

ಮೋಕ್ಷಿತಾ ಪೈ ಅವರು ಈ ಮೊದಲು ಜೀ ಕನ್ನಡದಲ್ಲಿ ‘ಪಾರು’ ಧಾರಾವಾಹಿಯಲ್ಲಿ ನಟಿಸಿದ್ದರು. ಆ ಬಳಿಕ ಕಲರ್ಸ್ ಕನ್ನಡದ ಬಿಗ್ ಬಾಸ್ ಶೋಗೆ ಆಗಮಿಸಿದರು. ಈಗ ಅವರು ಮನೆಗೆ ಮರಳುತ್ತಿದ್ದಾರೆ. ಈ ಧಾರಾವಾಹಿ ಯಾವಾಗ ಪ್ರಸಾರ ಕಾಣುತ್ತದೆ ಎಂಬ ಕುತೂಹಲ ಮೂಡಿದೆ.

ಇದನ್ನೂ ಓದಿ: ಕಳೆದ ಸೀಸನ್​ ಅಂತೆಯೇ ನಡೆದುಕೊಳ್ಳುತ್ತಿದ್ದಾರೆ ಮೋಕ್ಷಿತಾ ಪೈ 

ಯಾವ ಧಾರಾವಾಹಿ ಪೂರ್ಣಗೊಳ್ಳುತ್ತದೆ ಎಂಬ ಬಗ್ಗೆ ಚರ್ಚೆ ನಡೆದಿದೆ. ಇದಕ್ಕೂ ಉತ್ತರ ಸಿಕ್ಕಿದೆ. ‘ಅಮೃತಧಾರೆ’ ಧಾರಾವಾಹಿ ಕೊನೆಗೊಳ್ಳಬಹುದು ಎಂದು ಹೇಳಲಾಗುತ್ತಾ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವೈಭವ್ ಆರ್ಭಟಕ್ಕೆ ರಸೆಲ್ ರೆಕಾರ್ಡ್ ಉಡೀಸ್ – Kannada News | Vaibhav Sooryavanshi Breaks Andre Russell’s Record

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ವೈಭವ್ ಸೂರ್ಯವಂಶಿ (Vaibhav Sooryavanshi) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಸಹ 6 ವರ್ಷಗಳ ಹಿಂದೆ ಆ್ಯಂಡ್ರೆ ರಸೆಲ್ (Andre Russell) ಬರೆದಿಟ್ಟಿದ್ದ ಭರ್ಜರಿ ದಾಖಲೆಯನ್ನು ಮುರಿಯುವ ಮೂಲಕ.

ಮುಲ್ಲನ್​ಪುರ್​ನಲ್ಲಿ ನಡೆದ ಪಂಜಾಬ್ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಸ್ಫೋಟಕ ಬ್ಯಾಟಿಂಗ್​​ನೊಂದಿಗೆ ಕೇವಲ 16 ಎಸೆತಗಳಲ್ಲಿ 5 ಭರ್ಜರಿ ಸಿಕ್ಸರ್​​ನೊಂದಿಗೆ 43 ರನ್​ ಚಚ್ಚಿದ್ದರು.

ಈ 43 ರನ್​ಗಳೊಂದಿಗೆ ವೈಭವ್ ಸೂರ್ಯವಂಶಿ ಈ ಬಾರಿಯ ಐಪಿಎಲ್​ನಲ್ಲಿ 400 ರನ್​ ಕಲೆಹಾಕಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಸೀಸನ್​ವೊಂದರಲ್ಲಿ ಅತೀ ವೇಗವಾಗಿ 400 ರನ್​ ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ರಸೆಲ್ ಹೆಸರಿನಲ್ಲಿತ್ತು.

2019 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಡ್ ಪರ ಕಣಕ್ಕಿಳಿದಿದ್ದ ಆ್ಯಂಡ್ರೆ ರಸೆಲ್ ಕೇವಲ 188 ಎಸೆತಗಳಲ್ಲಿ 400 ರನ್​ ಕಲೆಹಾಕಿದ್ದರು. ಈ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್​ ಇತಿಹಾಸದಲ್ಲೇ ಸೀಸನ್​ವೊಂದರಲ್ಲಿ ಅತೀ ಕಡಿಮೆ ಎಸೆತದಲ್ಲಿ 400 ರನ್​ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದರು.

ಇದೀಗ ಈ ದಾಖಲೆಯನ್ನು ಅಳಿಸಿ ಹಾಕುವಲ್ಲಿ ವೈಭವ್ ಸೂರ್ಯವಂಶಿ ಯಶಸ್ವಿಯಾಗಿದ್ದಾರೆ. ಈ ಬಾರಿಯ ಐಪಿಎಲ್​ನಲ್ಲಿ 9 ಇನಿಂಗ್ಸ್ ಆಡಿರುವ ವೈಭವ್ ಕೇವಲ 167 ಎಸೆತಗಳಲ್ಲಿ 400 ರನ್​ ಪೂರೈಸಿದ್ದಾರೆ. ಈ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಸೀಸನ್​ವೊಂದರಲ್ಲಿ ಅತೀ ಕಡಿಮೆ ಎಸೆತಗಳಲ್ಲಿ 400 ರನ್​ಗಳ ಗಡಿದಾಟಿದ ಬ್ಯಾಟರ್ ಎಂಬ ಭರ್ಜರಿ ದಾಖಲೆಯನ್ನು ವೈಭವ್ ತಮ್ಮದಾಗಿಸಿಕೊಂಡಿದ್ದಾರೆ.

Published On – 7:52 am, Wed, 29 April 26

Source link

ಮತ್ತೆ ಒಂದಾದ ‘ಧುರಂಧರ್’ ಜೋಡಿ; ಆದಿತ್ಯ ಧಾರ್ ಹೊಸ ಚಿತ್ರಕ್ಕೆ ರಣವೀರ್ ಹೀರೋ – Kannada News | Ranveer Singh and Aditya Dhar Reunite: New Blockbuster After Dhurandhar 2 Success

ಒಂದು ಹಿಟ್ ಕಾಂಬಿನೇಷನ್ ಸಿಕ್ಕರೆ ಸಾಕು ನಂತರದಲ್ಲಿ ಇದನ್ನೇ ಮುಂದುವರಿಸಿಕೊಂಡು ಹೋಗುವ ಪ್ರಯತ್ನವನ್ನು ಮಾಡಲಾಗುತ್ತದೆ. ಹೀಗೆ ಮಾಡೋದನ್ನು ಜನರು ಕೂಡ ಇಷ್ಟಪಡುತ್ತಾರೆ. ಈಗ ರಣವೀರ್ ಸಿಂಗ್ ಹಾಗೂ ನಿರ್ದೇಶಕ ಆದಿತ್ಯ ಧಾರ್ ಅವರು ಮತ್ತೊಮ್ಮೆ ಒಟ್ಟಿಗೆ ಬರಲು ರೆಡಿ ಆಗಿದ್ದಾರೆ. ಈ ಚಿತ್ರಕ್ಕೆ ಅಭಿಮಾನಿಗಳು ಕಾದಿದ್ದಾರೆ. ಹಾಗಂತ ಈ ಸಿನಿಮಾ ಈಗಲೇ ಸೆಟ್ಟೇರುವುದಿಲ್ಲ. ಇದಕ್ಕೆ ಸಾಕಷ್ಟು ಸಮಯದ ಅಗತ್ಯವಿದೆ.

ರಣವೀರ್ ಸಿಂಗ್ ಹಾಗೂ ಆದಿತ್ಯ ಧಾರ್ ಅವರು ಮೊದಲ ಬಾರಿಗೆ ಒಂದಾಗಿದ್ದು ‘ಧುರಂಧರ್’ ಸಿನಿಮಾದಲ್ಲಿ. ರಣವೀರ್ ಹಮ್ಜಾ ಅಲಿ ಮಜಾರಿ ಪಾತ್ರವನ್ನು ಸರಿಯಾಗಿ ನಿರ್ವಹಿಸಬಹುದು ಎಂಬ ನಂಬಿಕೆಯನ್ನು ಆದಿತ್ಯ ಧಾರ್ ಇಟ್ಟುಕೊಂಡಿದ್ದರು. ಅದೇ ರೀತಿಯಲ್ಲಿ ರಣವೀರ್ ಸಿಂಗ್ ಅವರು ಈ ನಂಬಿಕೆಯನ್ನು ಉಳಿಸಿಕೊಂಡರು. ಈಗ ಇಬ್ಬರೂ ಮತ್ತೊಮ್ಮೆ ಒಂದಾಗುತ್ತಿದ್ದಾರೆ.

ಆದಿತ್ಯ ಧಾರ್ ಅವರ ಮುಂದಿನ ಚಿತ್ರಕ್ಕೆ ಹೀರೋ ಯಾರು ಎಂಬ ಬಗ್ಗೆ ಚರ್ಚೆಗಳು ಈ ಮೊದಲಿನಿಂದಲೂ ನಡೆಯುತ್ತಲೇ ಇವೆ. ಇದಕ್ಕೆ ಈವರೆಗೆ ಉತ್ತರ ಸಿಕ್ಕಿಲ್ಲ. ಕೆಲವರು ಅಲ್ಲು ಅರ್ಜುನ್ ಹೆಸರು ಹೇಳಿದರೆ, ಇನ್ನೂ ಕೆಲವರು ಬೇರೆ ನಟರ ಹೆಸರನ್ನು ಹೇಳಿದ್ದಾರೆ. ಆದರೆ, ಈಗ ಸಿದ್ಧಪಡಿಸಿಕೊಂಡಿರುವ ಕಥೆಯ ಒಂದೆಳೆಗೆ ರಣವೀರ್ ಸಿಂಗ್ ಅವರೇ ಹೆಚ್ಚು ಸೂಕ್ತ ಎಂದು ಆದಿತ್ಯ ಧಾರ್ ಅವರಿಗೆ ಅನಿಸುತ್ತಿದೆ.

ಆದಿತ್ಯ ಧಾರ್ ಅವರು ‘ಧುರಂಧರ್ 2’ ಯಶಸ್ಸಿನ ಬಳಿಕ ಹೊಸ ಸಿನಿಮಾಗೆ ಕೈ ಹಾಕಿದ್ದಾರೆ. ಈ ಚಿತ್ರದ ಸ್ಕ್ರಿಪ್ಟ್ ಕೆಲಸಗಳು ಸಾಗುತ್ತಿವೆ.ಈ ಸಿನಿಮಾಗೆ ರಣವೀರ್ ಹೀರೋ ಆದರೆ, ವಿಲನ್ ಯಾರು ಎಂಬುದು ಇನ್ನೂ ಫೈನಲ್ ಆಗಿಲ್ಲ ಎಂದು ವರದಿ ಆಗಿದೆ. ಈ ಸಿನಿಮಾ 2027ರಲ್ಲಿ ಸೆಟ್ಟೇರುವ ನಿರೀಕ್ಷೆ ಇದೆ.

ಇದನ್ನೂ ಓದಿ: ‘ಬಾಹುಬಲಿ 2’ ದಾಖಲೆ ಉಡೀಸ್: ಹೊಸ ಇತಿಹಾಸ ಬರೆಯಲು ಸಜ್ಜಾದ ‘ಧುರಂಧರ್ 2’

‘ಧುರಂಧರ್ 2’ ಸಿನಿಮಾ ಈಗಾಗಲೇ ‘ಬಾಹುಬಲಿ 2’ ಚಿತ್ರದ ದಾಖಲೆಯನ್ನು ಮುರಿದಿದೆ. ಈ ಸಿನಿಮಾ ಇಷ್ಟು ದಾಖಲೆ ಮಾಡಲು ಕಾರಣ ‘ಧುರಂಧರ್’ ಸಿನಿಮಾದ ಯಶಸ್ಸು. ಈಗ ಈ ಎರಡೂ ಚಿತ್ರದ ಯಶಸ್ಸು ಆದಿತ್ಯ ಧಾರ್ ಅವರ ಮುಂದಿನ ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚುವಂತೆ ಮಾಡುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸುಡುವ ಬಿಸಿಲು, ಉಷ್ಣ ಅಲೆಯ ನಡುವೆಯೂ ಹಂಪಿ ಮೃಗಾಲಯದ ಪ್ರಾಣಿಗಳು ಕೂಲ್ ಕೂಲ್! ಹೇಗೆ ಗೊತ್ತಾ? – Kannada News | Hampi Zoo Animals Stay Cool Amid 40 degree celsius Heat: Sprinklers and Water Ponds Deployed to Prevent Dehydration

ಹಂಪಿ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನವನದಲ್ಲಿ ವಿರಮಿಸುತ್ತಿರುವ ಹುಲಿ

ಬಳ್ಳಾರಿ, ಏಪ್ರಿಲ್ 29: ಕರ್ನಾಟಕದಾದ್ಯಂತ ಸೂರ್ಯನ ಪ್ರತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕೆಂಡದಂತಹ ಬಿಸಿಲು, ಉಷ್ಣ ಅಲೆಗೆ (Heat Wave) ಮನುಷ್ಯರೇ ತತ್ತರಿಸಿ ಹೋಗುತ್ತಿದ್ದಾರೆ. ಆದರೆ, ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನವನದಲ್ಲಿ (Atal Bihari Vajpayee Zoological Park) ಮಾತ್ರ ಪ್ರಾಣಿಗಳು ರಣರ ಬಿಸಿಲಿನಲ್ಲೂ ತಂಪಾಗಿವೆ. ಬಿಸಿಲಿನ ತಾಪ 40 ಡಿಗ್ರಿ ಸೆಲ್ಸಿಯಸ್ ದಾಟಿದ್ದರೂ, ಪ್ರಾಣಿಗಳಿಗೆ ಬಿಸಿಲಿನ ಧಗೆ ತಟ್ಟದಂತೆ ಮೃಗಾಲಯದ ಸಿಬ್ಬಂದಿ ವಿಶೇಷ ವ್ಯವಸ್ಥೆ ಮಾಡಿದ್ದಾರೆ.

ಸ್ಪ್ರಿಂಕ್ಲರ್ ಮತ್ತು ನೀರಿನ ಗುಂಡಿಗಳ ಆಸರೆ

ಮೃಗಾಲಯದ ವ್ಯಾಪ್ತಿಯಲ್ಲಿ ವಾತಾವರಣವನ್ನು ತಂಪಾಗಿರಿಸಲು ಅಲ್ಲಲ್ಲಿ ಸ್ಪ್ರಿಂಕ್ಲರ್‌ಗಳನ್ನು (Sprinklers) ಅಳವಡಿಸಲಾಗಿದೆ. ಹುಲಿ, ಸಿಂಹ, ಚಿರತೆ ಮತ್ತು ಜಿರಾಫೆಗಳಂತಹ ಪ್ರಾಣಿಗಳು ಇರುವ ಕಡೆಗಳಲ್ಲಿ ಸದಾ ನೀರು ಚಿಮ್ಮುವಂತೆ ಮಾಡಲಾಗುತ್ತಿದ್ದು, ಪ್ರಾಣಿಗಳು ಇವುಗಳ ಕೆಳಗೆ ನಿಂತು ಮೈ ನೆನೆಸಿಕೊಳ್ಳುತ್ತಿವೆ. ಅಷ್ಟೇ ಅಲ್ಲದೆ, ಪ್ರಾಣಿಗಳ ಆವರಣದಲ್ಲಿರುವ ಗುಂಡಿಗಳಲ್ಲಿ ನೀರು ತುಂಬಿಸಲಾಗಿದ್ದು, ಬಿಸಿಲಿನ ತಾಪ ತಾಳಲಾರದೆ ಪ್ರಾಣಿಗಳು ಈ ನೀರಿನಲ್ಲಿ ಈಜುತ್ತಾ, ಮುಳುಗುತ್ತಾ ದಣಿವಾರಿಸಿಕೊಳ್ಳುತ್ತಿವೆ.

ಡಿಹೈಡ್ರೇಶನ್ ತಡೆಗೆ ಕ್ರಮ

ಪ್ರಾಣಿಗಳ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ಡಿಹೈಡ್ರೇಶನ್ (Dehydration) ಸಮಸ್ಯೆ ಉಂಟಾಗಬಾರದು ಎಂಬ ದೃಷ್ಟಿಯಿಂದ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ ನಾಯ್ಕ ತಿಳಿಸಿದ್ದಾರೆ. ಪ್ರಾಣಿಗಳು ಮರದ ನೆರಳಿನಲ್ಲಿ ವಿಶ್ರಮಿಸಲು ಪೂರಕವಾದ ವಾತಾವರಣವನ್ನೂ ನಿರ್ಮಿಸಲಾಗಿದೆ. ಈ ಬಾರಿ ಮೃಗಾಲಯಕ್ಕೆ ಹೊಸ ಅತಿಥಿಗಳಾಗಿ ಹಲವು ಪ್ರಾಣಿಗಳು ಆಗಮಿಸಿದ್ದು, ಅವುಗಳನ್ನು ನೋಡಲು ಬರುವ ಪ್ರವಾಸಿಗರು ಕೂಡ ಪ್ರಾಣಿಗಳಿಗಾಗಿ ಮಾಡಿರುವ ಈ ‘ಕೂಲ್’ ವ್ಯವಸ್ಥೆ ಕಂಡು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ಕರಾವಳಿಯಲ್ಲಿ ಉಷ್ಣ ಅಲೆಯ ಜೊತೆಗೆ ಗುಡುಗು ಸಹಿತ ಮಳೆಯ ಅಬ್ಬರ!

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version