IND vs SA: ಅಮ್ಮನಿಗೆ ಯಾರಿಗೆ ಸಪೋರ್ಟ್​ ಮಾಡ್ಬೇಕು ಎಂಬುದೇ ಗೊಂದಲ! – Kannada News | Mama doesn’t know who to support – India or South Africa: Albie Morkel

T20 World Cup 2026: ಟಿ20 ವಿಶ್ವಕಪ್​ನ ಸೂಪರ್-8 ಸುತ್ತಿನ 3ನೇ ಪಂದ್ಯದಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿದೆ. ಭಾನುವಾರ (ಫೆ.22) ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಮರಿಯಾನಾ ಮೊರ್ಕೆಲ್ ಯಾರಿಗೆ ಸಪೋರ್ಟ್ ಮಾಡಬೇಕು ಎಂಬ ಗೊಂದಲದಲ್ಲಿದ್ದಾರೆ. ಇಂತಹದೊಂದು ಗೊಂದಲಕ್ಕೆ ಕಾರಣ ಅವರ ಇಬ್ಬರು ಮಕ್ಕಳು ಎರಡು ತಂಡಗಳ ಜೊತೆ ಕಾಣಿಸಿಕೊಂಡಿರುವುದು.

ಹೌದು, ಸೌತ್ ಆಫ್ರಿಕಾ ತಂಡದ ಮಾಜಿ ಆಟಗಾರರಾದ ಅಲ್ಬಿ ಮೊರ್ಕೆಲ್ ಮತ್ತು ಮೋರ್ನೆ ಮೊರ್ಕೆಲ್ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳ ಕೋಚಿಂಗ್ ಸಿಬ್ಬಂದಿಯಲ್ಲಿದ್ದಾರೆ. ಅಣ್ಣ ಅಲ್ಬಿ ಮೊರ್ಕೆಲ್ ಆಫ್ರಿಕಾ ತಂಡದ ಸ್ಪೆಷಲಿಸ್ಟ್ ಕೋಚಿಂಗ್ ಕನ್ಸಲ್ಟೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇತ್ತ ತಮ್ಮ ಮೋರ್ನೆ ಮೊರ್ಕೆಲ್ ಟೀಮ್ ಇಂಡಿಯಾದ ಬೌಲಿಂಗ್ ಕೋಚ್.

ಹೀಗಾಗಿಯೇ ತಾಯಿ ಮರಿಯಾನಾ ಮಾರ್ಕೆಲ್ ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಪಂದ್ಯದಲ್ಲಿ ಯಾರನ್ನು ಬೆಂಬಲಿಸಬೇಕು ಎಂಬ ಗೊಂದಲದಲ್ಲಿದ್ದಾರೆ. ಈ ವಿಚಾರವನ್ನು ಖುದ್ದು ಮೋರ್ನೆ ಮೊರ್ಕಲೆ್ ಬಹಿರಂಗಪಡಿಸಿದ್ದಾರೆ.

ತಾಯಿಯು ಅಣ್ಣನಿಗೆ ಸಪೋರ್ಟ್ ಮಾಡ್ಬೇಕಾ ಇಲ್ಲ ನನಗೆ ಸಪೋರ್ಟ್ ಮಾಡಬೇಕಾ ಎಂಬ ಗೊಂದಲದಲ್ಲಿ ಸಿಲುಕಿದ್ದಾರೆ. ಇಲ್ಲಿ ನಾವು ಪಂದ್ಯವನ್ನು ಗೆಲ್ಲುವ ಬಗ್ಗೆ ಯೋಚಿಸುತ್ತಿದ್ದರೆ,  ಅಲ್ಲಿ ನಮ್ಮ ತಾಯಿ ಯಾರನ್ನು ಬೆಂಬಲಿಸಬೇಕು ಎಂದು ನಮಗಿಂತ ಹೆಚ್ಚು ಚಿಂತಿತರಾಗಿದ್ದಾರೆ ಮೋರ್ನೆ ಮೊರ್ಕೆಲ್ ತಿಳಿಸಿದ್ದಾರೆ.

ಇತ್ತ ಟೀಮ್ ಇಂಡಿಯಾ ಗೆದ್ದರೆ ಮೋರ್ನೆ ಮೊರ್ಕೆಲ್ ಖುಷಿಯಾದರೆ, ಅತ್ತ ಸೌತ್ ಆಫ್ರಿಕಾ ಸೋತರೆ ಅಲ್ಬಿ ಮೊರ್ಕೆಲ್ ದುಃಖಕ್ಕೀಡಾಗಲಿದ್ದಾರೆ. ಹೀಗಾಗಿ ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಪಂದ್ಯವು ಇದೀಗ ಸಹೋದರರ ಸವಾಲ್ ಆಗಿ ಮಾರ್ಪಟ್ಟಿದೆ.

ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.

ಇದನ್ನೂ ಓದಿ: ನಾವು ಭಾರತವನ್ನು ಸೋಲಿಸಿದ್ದೇವೆ: ಪಾಕ್ ಆಟಗಾರನ ತಿರುಗೇಟು!

ಸೌತ್ ಆಫ್ರಿಕಾ ತಂಡ: ಐಡೆನ್ ಮಾರ್ಕ್ರಾಮ್ (ನಾಯಕ), ಕ್ವಿಂಟನ್ ಡಿ ಕಾಕ್, ಟೋನಿ ಡಿ ಝೋರ್ಝಿ, ಡೆವಾಲ್ಡ್ ಬ್ರೆವಿಸ್, ಡೇವಿಡ್ ಮಿಲ್ಲರ್, ಡೊನೊವನ್ ಫೆರೇರಾ, ಮಾರ್ಕೊ ಯಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಕ್ವೆನಾ ಮಫಕಾ, ಲುಂಗಿ ಎನ್‌ಗಿಡಿ, ಜೇಸನ್ ಸ್ಮಿತ್, ಜಾರ್ಜ್ ಲಿಂಡೆ, ಕಾರ್ಬಿನ್ ಬಾಷ್, ಅನ್ರಿಕ್ ನೋಕಿಯ.

Published On – 5:08 pm, Thu, 19 February 26

Source link

ಕೋಮುವಾದದಿಂದ ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಮೋಹನ್ ದಾಸ್ ಕೆಂಡಾಮಂಡಲ – Kannada News | Mangaluru Investment Row: Mohandas Pai sparks Priyank Kharge Over Communalism Claim

ಬೆಂಗಳೂರು, ಫೆಬ್ರವರಿ 19: ಕೋಮುವಾದ ಕಾರಣಕ್ಕೆ ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇದೀಗ ಈ ವಿಚಾರವಾಗಿ ಉದ್ಯಮಿ ಮೋಹನ್ ದಾಸ್ ಪೈ ಕೂಡ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿರುವ ಮೋಹನ್ ದಾಸ್ ಪೈ, ಇದು ಅತ್ಯಂತ ನಾಚಿಕೇಡಿನ ಹಾಗೂ ಅನಗತ್ಯ ಎಂದು ಹೇಳಿದ್ದಾರೆ. ಇನ್ನು ಇತ್ತೀಚೆಗೆ ಐಟಿ ಸಚಿವರು ಮಂಗಳೂರಿಗೆ ಭೇಟಿ ನೀಡಿದ್ದ ವೇಳೆ ಭಾರೀ ಪ್ರಮಾಣದ ಹೂಡಿಕೆಗಳು ಆಗುತ್ತಿರುವುದು, ಉದ್ಯೋಗಗಳು ಸೃಷ್ಟಿಯಾಗುತ್ತಿರುವುದು ಮತ್ತು ಅನೇಕರು ಮಂಗಳೂರಿನ ಅಭಿವೃದ್ಧಿಗಾಗಿ ಬಹಳ ಕಷ್ಟಪಡುತ್ತಿರುವುದನ್ನು ಅವರು ನೋಡಿದ್ದರು. ಅಂತಹ ಸಂದರ್ಭದಲ್ಲಿ ಅವರು ಈ ರೀತಿಯ ಹೇಳಿಕೆ ನೀಡಿರುವುದು ಅತ್ಯಂತ ನಾಚಿಕೇಡು ಮತ್ತು ಅನಗತ್ಯ ಎಂದು ವಾಗ್ದಾಳಿ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಅಸ್ಸಾಂನಲ್ಲಿ 6,839 ಕೋಟಿ ರೂ. ವೆಚ್ಚದ 2ನೇ ಹಂತದ ವೈಬ್ರೆಂಟ್ ವಿಲೇಜಸ್ ಕಾರ್ಯಕ್ರಮಕ್ಕೆ ನಾಳೆ ಅಮಿತ್ ಶಾ ಚಾಲನೆ – Kannada News | Amit Shah to launch second phase of Vibrant Villages Programme in Assam tomorrow

ನವದೆಹಲಿ, ಫೆಬ್ರವರಿ 19: ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಳೆ (ಶುಕ್ರವಾರ) 15 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ 1,954 ಗಡಿ ಗ್ರಾಮಗಳನ್ನು ಒಳಗೊಂಡ ವೈಬ್ರೆಂಟ್ ವಿಲೇಜಸ್ ಕಾರ್ಯಕ್ರಮದ (ವಿವಿಪಿ) ಎರಡನೇ ಹಂತಕ್ಕೆ ಚಾಲನೆ ನೀಡಲಿದ್ದಾರೆ. ಅಸ್ಸಾಂನಲ್ಲಿ 6,839 ಕೋಟಿ ರೂ. ಹೂಡಿಕೆಯೊಂದಿಗೆ ಎರಡನೇ ಹಂತದ ವೈಬ್ರೆಂಟ್ ವಿಲೇಜಸ್ ಕಾರ್ಯಕ್ರಮಕ್ಕೆ ಅಮಿತ್ ಶಾ (Amit Shah) ಚಾಲನೆ ನೀಡಲಿದ್ದಾರೆ.

ಅಸ್ಸಾಂನಲ್ಲಿ ಶುಕ್ರವಾರ ಅಮಿತ್ ಶಾ ವೈಬ್ರೆಂಟ್ ವಿಲೇಜಸ್ ಕಾರ್ಯಕ್ರಮದ (ವಿವಿಪಿ-II) ಎರಡನೇ ಹಂತವನ್ನು ಅಸ್ಸಾಂನ ಕಚಾರ್ ಜಿಲ್ಲೆಯ ನಾಥನ್‌ಪುರ ಗ್ರಾಮದಲ್ಲಿ ಉದ್ಘಾಟಿಸಲಿದ್ದಾರೆ. ಇದು ಭಾರತದ ಗಡಿ ಪ್ರದೇಶಗಳಲ್ಲಿ ಮೂಲಸೌಕರ್ಯ ಮತ್ತು ಭದ್ರತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. 2028-29ರ ಹಣಕಾಸು ವರ್ಷದವರೆಗೆ 6,839 ಕೋಟಿ ರೂ.ಗಳ ಆರ್ಥಿಕ ವೆಚ್ಚದೊಂದಿಗೆ ವಿವಿಪಿ-II ಅನ್ನು ಕೇಂದ್ರ ವಲಯದ ಯೋಜನೆಯಾಗಿ ಜಾರಿಗೆ ತರಲಾಗುವುದು ಎಂದು ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್‌ಎ) ತಿಳಿಸಿದೆ.

ಇದನ್ನೂ ಓದಿ: ಅಮಿತ್ ಶಾ, ಮೋದಿಯನ್ನು ಮಹಾಭಾರತದ ದುಶ್ಯಾಸನ, ದುರ್ಯೋಧನನಿಗೆ ಹೋಲಿಸಿದ ಸಿಎಂ ಮಮತಾ ಬ್ಯಾನರ್ಜಿ

ವಿವಿಪಿ ಕಾರ್ಯಕ್ರಮವನ್ನು ಫೆಬ್ರವರಿ 15, 2023ರಂದು ಕೇಂದ್ರ ಸರ್ಕಾರ ಅನುಮೋದಿಸಿತು. ಇದು ಅರುಣಾಚಲ ಪ್ರದೇಶ, ಹಿಮಾಚಲ ಪ್ರದೇಶ, ಸಿಕ್ಕಿಂ, ಉತ್ತರಾಖಂಡ ಮತ್ತು ಲಡಾಖ್ ರಾಜ್ಯಗಳ 19 ಜಿಲ್ಲೆಗಳಲ್ಲಿ ಉತ್ತರ ಗಡಿಗೆ ಹೊಂದಿಕೊಂಡಿರುವ 46 ಬ್ಲಾಕ್‌ಗಳಲ್ಲಿ 662 ಆಯ್ದ ಹಳ್ಳಿಗಳನ್ನು ಒಳಗೊಂಡಿದೆ.

ಈ ಕಾರ್ಯಕ್ರಮವು 15 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಗಡಿ ಗ್ರಾಮಗಳನ್ನು ಒಳಗೊಳ್ಳಲಿದೆ. ಈ ಕಾರ್ಯಕ್ರಮವು ಅಂತಾರಾಷ್ಟ್ರೀಯ ಗಡಿಗಳಲ್ಲಿ ಇರುವ ಹಳ್ಳಿಗಳ ಸ್ಯಾಚುರೇಶನ್ ಆಧಾರಿತ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾದ ಸಮಗ್ರ ಉಪಕ್ರಮವಾಗಿದೆ. ಇದು ಅಗತ್ಯ ಮೂಲಸೌಕರ್ಯಗಳನ್ನು ಸುಧಾರಿಸುವುದು, ಆರೋಗ್ಯ ರಕ್ಷಣೆ, ಶಿಕ್ಷಣ, ರಸ್ತೆ ಸಂಪರ್ಕ ಮತ್ತು ದೂರಸಂಪರ್ಕಕ್ಕೆ ಪ್ರವೇಶವನ್ನು ಹೆಚ್ಚಿಸುವುದು ಮತ್ತು ಸ್ಥಳೀಯ ನಿವಾಸಿಗಳಿಗೆ ಸುಸ್ಥಿರ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿದೆ.

ವಿಕಸಿತ ಭಾರತದ ದೃಷ್ಟಿಕೋನಕ್ಕೆ ಅನುಗುಣವಾಗಿ ಸುರಕ್ಷಿತ, ಸ್ಥಿತಿಸ್ಥಾಪಕ ಮತ್ತು ಸಮೃದ್ಧ ಗಡಿ ಸಮುದಾಯಗಳನ್ನು ಸೃಷ್ಟಿಸುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: Twin Tube Tunnel: ಅಸ್ಸಾಂನಲ್ಲಿ ಬ್ರಹ್ಮಪುತ್ರ ನದಿಯ ಕೆಳಗೆ ನಿರ್ಮಾಣಗೊಳ್ಳಲಿದೆ ಅವಳಿ ಕೊಳವೆ ಸುರಂಗ, ವೈಶಿಷ್ಟ್ಯವೇನು?

ವಿವಿಪಿ-I ಅಡಿಯಲ್ಲಿ 3,431 ಕೋಟಿ ರೂ. ವೆಚ್ಚದಲ್ಲಿ 2,558 ಯೋಜನೆಗಳನ್ನು ಗೃಹ ಸಚಿವಾಲಯ ಮಂಜೂರು ಮಾಡಿದೆ. ಜಾಗೃತಿ ಅಭಿಯಾನಗಳು, ಆರೋಗ್ಯ ಮತ್ತು ಪಶುವೈದ್ಯಕೀಯ ಶಿಬಿರಗಳು, ಜಾತ್ರೆಗಳು ಮತ್ತು ಉತ್ಸವಗಳು ಮತ್ತು ಪ್ರವಾಸೋದ್ಯಮದ ಪ್ರಚಾರ ಸೇರಿದಂತೆ 8,500ಕ್ಕೂ ಹೆಚ್ಚು ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ.

ಏಪ್ರಿಲ್ 2, 2025ರಂದು ಕೇಂದ್ರ ಸರ್ಕಾರವು ಎರಡನೇ ಹಂತಕ್ಕೆ ಅನುಮೋದನೆ ನೀಡಿತು. ಇದರಲ್ಲಿ 15 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ ಅಂತಾರಾಷ್ಟ್ರೀಯ ಭೂ ಗಡಿಗಳಿಗೆ ಹೊಂದಿಕೊಂಡಿರುವ 1,954 ಗ್ರಾಮಗಳನ್ನು ಸಮಗ್ರ ಅಭಿವೃದ್ಧಿಗಾಗಿ ಗುರುತಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಶಂಕರಾಭರಣ’ ಶೂಟಿಂಗ್ ಮುಗಿಸಿದ ಶೈನ್ ಶೆಟ್ಟಿ; ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ – Kannada News | Shine Shetty starrer new Kannada movie Shankarabharan first look poster released

‘ಬಿಗ್ ಬಾಸ್ ಕನ್ನಡ ಸೀಸನ್ 7’ ರಿಯಾಲಿಟಿ ಶೋ ವಿನ್ನರ್ ಶೈನ್ ಶೆಟ್ಟಿ (Shine Shetty) ಅವರು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರ ಹೊಸ ಸಿನಿಮಾ ‘ಶಂಕರಾಭರಣ’ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಮೂಡಿದೆ. ಈ ಚಿತ್ರದ ಶೀರ್ಷಿಕೆಯೇ ಗಮನ ಸೆಳೆಯುತ್ತಿದೆ. ಈಗ ಫಸ್ಟ್ ಲುಕ್ ಪೋಸ್ಟರ್ ಮೂಲಕ ಕುತೂಹಲ ಹೆಚ್ಚಿಸಲಾಗಿದೆ. ಇತ್ತೀಚೆಗೆ ‘ಶಂಕರಾಭರಣ’ (Shankarabharan) ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾದ ಶೂಟಿಂಗ್ ಪೂರ್ಣಗೊಂಡಿದೆ ಎಂಬ ಮಾಹಿತಿಯನ್ನು ಕೂಡ ತಿಳಿಸಲಾಗಿದೆ.

‘ರಂಗಸ್ಥಳ ಸ್ಟುಡಿಯೋಸ್’ ಮೂಲಕ ‘ಶಂಕರಾಭರಣ’ ಸಿನಿಮಾ ನಿರ್ಮಾಣ ಆಗುತ್ತಿದೆ. ದಿವಾಕರ್ ಶೆಟ್ಟಿ ಮತ್ತು ಶೈನ್ ಶೆಟ್ಟಿ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಒಂದು ಬಸ್ ಕೇಂದ್ರಭಾಗವಾಗಿರುತ್ತದೆ. ಆ ಬಸ್ಸಿನ ಹೆಸರೇ ‘ಶಂಕರಾಭರಣ’. ಈ ಸಿನಿಮಾದಲ್ಲಿ ಶೈನ್ ಶೆಟ್ಟಿ ಅವರು ಬಸ್ ಡ್ರೈವರ್ ಪಾತ್ರ ಮಾಡಿದ್ದಾರೆ.

‘ಶಂಕರಾಭರಣ’ ಸಿನಿಮಾದಲ್ಲಿ ಕರಾವಳಿ ಭಾಗದ ಕಥೆಯನ್ನು ಹೇಳಲಾಗುತ್ತದೆ. ಬಸ್ ಚಾಲಕನೊಬ್ಬ ದೂರದ ಹಳ್ಳಿಯ ಹೊಸ ಮಾರ್ಗಕ್ಕೆ ನಿಯೋಜನೆಗೊಂಡಾಗ ಏನೆಲ್ಲ ನಡೆಯುತ್ತದೆ ಎಂಬುದೇ ಈ ಚಿತ್ರದ ಸಾರಾಂಶ ಆಗಿರಲಿದೆ. ಒಂದು ಮೊಟ್ಟೆಯ ಕಥೆ, ಕಾಂತಾರ, ಜೇಮ್ಸ್ ಸಿನಿಮಾಗಳ ಬಳಿಕ ಶೈನ್ ಶೆಟ್ಟಿ ಅವರು ‘ಶಂಕರಾಭರಣ’ ಚಿತ್ರದಲ್ಲಿ ಗಮನಾರ್ಹ ಪಾತ್ರ ಮಾಡಿರುವುದಾಗಿ ಚಿತ್ರತಂಡ ಹೇಳಿದೆ.

ಈ ಮೊದಲು ‘ಮಿಥ್ಯ’ ಸಿನಿಮಾವನ್ನು ನಿರ್ದೇಶಿಸಿದ್ದ ಸುಮಂತ್ ಅವರು ಈಗ ‘ಶಂಕರಾಭರಣ’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ವಿಶೇಷ ಕಥಾಹಂದರದ ಕಾರಣದಿಂದ ‘ಮಿಥ್ಯ’ ಸಿನಿಮಾ ಗಮನ ಸೆಳೆದಿತ್ತು. ಈಗ ಅದೇ ನಿರ್ದೇಶಕರು ‘ಶಂಕರಾಭರಣ’ ಚಿತ್ರವನ್ನು ಮಾಡಿರುವುದರಿಂದ ನಿರೀಕ್ಷೆ ಮೂಡಿದೆ.

ಇದನ್ನೂ ಓದಿ: ಮಕ್ಕಳಾಗಿಲ್ಲ ಎಂದು ಕೊರಗುತ್ತಿರುವವರಿಗೆ ವಿಶೇಷ ದೇವಸ್ಥಾನದ ಬಗ್ಗೆ ಹೇಳಿದ ಶೈನ್ ಶೆಟ್ಟಿ

‘ಶಂಕರಾಭರಣ’ ಸಿನಿಮಾಗೆ ಚರಣ್ ರಾಜ್ ಅವರು ಸಂಗೀತ ನೀಡಿದ್ದಾರೆ. ಉದಿತ್ ಖುರಾನಾ ಅವರ ಛಾಯಾಗ್ರಹಣ ಈ ಸಿನಿಮಾಗಿದೆ. ‘ರಂಗಸ್ಥಳ ಸ್ಟುಡಿಯೋಸ್ ಮೂಲಕ ನೈಜ ಕಥೆಗಳನ್ನು ಹೇಳುವುದೇ ನಮ್ಮ ಉದ್ದೇಶ’ ಎಂದು ನಿರ್ಮಾಪಕರಾದ ಶೈನ್ ಶೆಟ್ಟಿ ಮತ್ತು ದಿವಾಕರ ಶೆಟ್ಟಿ ಅವರು ಹೇಳಿದ್ದಾರೆ. ಚಿತ್ರದ ಬಗ್ಗೆ ಹೆಚ್ಚಿನ ಅಪ್​ಟೇಟ್ ತಿಳಿಯಲು ಅಭಿಮಾನಿಗಳು ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ತಕ್ಷಣ ಬರುವ ತೀವ್ರ ತಲೆನೋವು ಮತ್ತು ಆತಂಕ ಮೆದುಳಿನ ಅಸ್ವಸ್ಥತೆಯ ಲಕ್ಷಣವೇ? – Kannada News | Headache and Anxiety: Could It Be Serious?

ಇದ್ದಕ್ಕಿದ್ದಂತೆ ತೀವ್ರ ತಲೆನೋವಿನ ಜೊತೆಗೆ ಆತಂಕವಾದರೆ ಯಾರಿಗಾದರೂ ಭಯವಾಗುವುದು ಸಹಜ. ಈ ರೀತಿಯಾಗುವುದು ಗಂಭೀರ ಮೆದುಳಿನ ಅಸ್ವಸ್ಥತೆಯ ಸಂಕೇತವಾಗಿರಬಹುದು. ಸಾಮಾನ್ಯವಾಗಿ ಇಂತಹ ಲಕ್ಷಣಗಳು ಇದ್ದಕ್ಕಿದ್ದಂತೆ ಕಂಡುಬರುತ್ತದೆ, ವ್ಯಕ್ತಿಯಲ್ಲಿ ಆತಂಕ (Anxiety) ಉಂಟುಮಾಡಿ, ವಿಚಲಿತಗೊಳಿಸಿ, ಭಯಭೀತರನ್ನಾಗಿ ಮಾಡುತ್ತವೆ. ಆದರೆ ಈ ರೀತಿ ಬರುವ ಎಲ್ಲಾ ತಲೆನೋವು (Headache) ಅಥವಾ ಆತಂಕ ಮೆದುಳಿನ ಕಾಯಿಲೆಯನ್ನು ಸೂಚಿಸುವುದಿಲ್ಲ, ಆದರೆ ಅದನ್ನು ನಿರ್ಲಕ್ಷಿಸುವುದು ಸಹ ಸೂಕ್ತವಲ್ಲ. ಈ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದರಿಂದ ಅನಗತ್ಯ ಭಯವನ್ನು ಕಡಿಮೆ ಮಾಡಬಹುದು. ಇಂತಹ ಸಂದರ್ಭದಲ್ಲಿ, ಈ ಸ್ಥಿತಿ ಎಷ್ಟು ಗಂಭೀರವಾಗಬಹುದು, ಅದನ್ನು ಹೇಗೆ ತಡೆಯುವುದು ಮತ್ತು ಯಾವಾಗ ವೈದ್ಯರನ್ನು ಸಂಪರ್ಕಿಸುವುದು ಎಂಬುದರ ಬಗ್ಗೆ ತಿಳಿದಿದ್ದಲ್ಲಿ ಇಂತಹ ಸಮಸ್ಯೆಗಳನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಬಹುದು.

ತಕ್ಷಣ ಬರುವ ತಲೆನೋವು ಮತ್ತು ಆತಂಕವು ಮೆದುಳಿನ ಅಸ್ವಸ್ಥತೆಯೇ?

ದೆಹಲಿಯ ನರವಿಜ್ಞಾನಿ ಡಾ. ರಾಜೇಶ್ ಕುಮಾರ್ ಹೇಳುವ ಪ್ರಕಾರ ತೀವ್ರ ತಲೆನೋವು ಮತ್ತು ಆತಂಕ ಉಂಟಾಗುವುದಕ್ಕೆ ಹಲವಾರು ಕಾರಣಗಳಿರಬಹುದು, ಆದರೆ ಇದು ಯಾವಾಗಲೂ ಗಂಭೀರ ಮೆದುಳಿನ ಅಸ್ವಸ್ಥತೆ ಎಂದು ಹೇಳಲಾಗುವುದಿಲ್ಲ. ಏಕೆಂದರೆ ಇದು ಒತ್ತಡ, ಚಿಂತೆ ಅಥವಾ ಮಾನಸಿಕ ಒತ್ತಡ ಉಂಟಾದಾಗಲೂ ಕೂಡ ಅನುಭವಕ್ಕೆ ಬರುತ್ತದೆ. ಆದರೆ ನಿದ್ರೆಯ ಕೊರತೆ ಅಥವಾ ನಿರಂತರ ಆಯಾಸವು ಮೆದುಳಿನ ಮೇಲೂ ಪರಿಣಾಮ ಬೀರುತ್ತದೆ, ಇದು ಹಠಾತ್ ತೀವ್ರ ತಲೆನೋವು ಮತ್ತು ಚಡಪಡಿಕೆಗೆ ಕಾರಣವಾಗಬಹುದು. ಜೊತೆಗೆ ನಿರ್ಜಲೀಕರಣವು ತಲೆಯನ್ನು ಭಾರವಾಗಿಸುತ್ತದೆ ಮತ್ತು ಆತಂಕವನ್ನು ಹೆಚ್ಚಿಸುತ್ತದೆ.

ಅದೇ ರೀತಿ, ರಕ್ತದೊತ್ತಡ ಅಥವಾ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿನ ಏರಿಳಿತಗಳು ಸಾಮಾನ್ಯವಾಗಿ ತ್ವರಿತ ಹೃದಯ ಬಡಿತ, ಬೆವರುವುದು ಮತ್ತು ತಲೆನೋವಿಗೆ ಕಾರಣವಾಗಬಹುದು. ಪ್ಯಾನಿಕ್ ಅಟ್ಯಾಕ್ ಸಮಯದಲ್ಲಿ ತಲೆನೋವಿನ ಜೊತೆಗೆ ಕೆಲವರಿಗೆ ತೀವ್ರ ಆತಂಕ ಕೂಡ ಉಂಟಾಗುತ್ತದೆ. ಮಹಿಳೆಯರಲ್ಲಿ ಹಾರ್ಮೋನುಗಳ ಬದಲಾವಣೆಗಳು ಸಹ ಈ ರೀತಿಯ ಸಮಸ್ಯೆಗೆ ಕಾರಣವಾಗಬಹುದು. ಇದಲ್ಲದೆ, ಮೊಬೈಲ್ ಫೋನ್‌ ಅಥವಾ ಲ್ಯಾಪ್‌ಟಾಪ್‌ಗಳ ದೀರ್ಘಕಾಲದ ಬಳಕೆಯು ಮೆದುಳು ಮತ್ತು ಕಣ್ಣುಗಳ ಮೇಲೆ ಒತ್ತಡವನ್ನುಂಟು ಮಾಡುತ್ತದೆ, ಆಗ ಇಂತಹ ಲಕ್ಷಣಗಳು ಪ್ರಚೋದಿಸಲ್ಪಡುತ್ತದೆ.

ಇದನ್ನೂ ಓದಿ: ಮೈಗ್ರೇನ್ ಮತ್ತು ಸಾಮಾನ್ಯ ತಲೆನೋವಿಗಿರುವ ವ್ಯತ್ಯಾಸವೇನು? ಇದನ್ನು ತಡೆಯಲು ಇಲ್ಲಿದೆ ಸಿಂಪಲ್ ಟಿಪ್ಸ್

ತಡೆಯುವುದು ಹೇಗೆ?

ಇಂತಹ ಸಮಸ್ಯೆಗಳನ್ನು ತಡೆಗಟ್ಟಲು, ದೈನಂದಿನ ಅಭ್ಯಾಸಗಳ ಕಡೆ ಗಮನ ಕೊಡುವುದು ಬಹಳ ಮುಖ್ಯ. ಸಾಕಷ್ಟು ನಿದ್ರೆ ಮಾಡಬೇಕು. ದೇಹವು ದುರ್ಬಲವಾಗದಂತೆ ದಿನವಿಡೀ ಸರಿಯಾದ ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು. ಸ್ಕ್ರೀನ್ ಸಮಯವನ್ನು ಕಡಿಮೆ ಮಾಡಿ ಕಣ್ಣು ಮತ್ತು ಮನಸ್ಸಿಗೆ ವಿಶ್ರಾಂತಿ ನೀಡಬೇಕು. ಪ್ರತಿನಿತ್ಯ ಆಳವಾದ ಉಸಿರಾಟ, ಲಘು ವ್ಯಾಯಾಮ ಅಥವಾ ಧ್ಯಾನ ಮಾಡುವ ಮೂಲಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು. ಇದೆಲ್ಲದರ ಜೊತೆಗೆ ದೀರ್ಘಕಾಲದವರೆಗೆ ಹಸಿವಿನಿಂದ ಇರುವುದನ್ನು ತಪ್ಪಿಸಿ. ಕೆಲಸದ ನಡುವೆ ವಿರಾಮ ತೆಗೆದುಕೊಳ್ಳಬೇಕು.

ತಲೆನೋವು ತೀವ್ರವಾಗಿದ್ದರೆ, ಹಿಂದೆಂದೂ ಆ ರೀತಿ ಆಗದಿದ್ದರೆ ಅಥವಾ ನೋವು ನಿರಂತರವಾಗಿ ಹೆಚ್ಚುತ್ತಿದ್ದರೆ, ತಕ್ಷಣ ವೈದ್ಯರನ್ನು ಭೇಟಿ ಮಾಡಿ. ಆತಂಕ, ಗೊಂದಲ, ಮಾತನಾಡಲು ತೊಂದರೆ, ಕೈ ಅಥವಾ ಕಾಲುಗಳಲ್ಲಿ ದೌರ್ಬಲ್ಯ ಅಥವಾ ಮಸುಕಾದ ದೃಷ್ಟಿಯೊಂದಿಗೆ ಮೂರ್ಛೆ ಹೋಗುವುದು ಗಂಭೀರ ಲಕ್ಷಣಗಳಾಗಿರಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸರ್ಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧವೂ 1.60 ಕೋಟಿ ರೂ. ಲಂಚ: ಸಂಚಲನ ಮೂಡಿಸಿದ ಸ್ನೇಹಮಯಿ ಕೃಷ್ಣ ಆರೋಪ – Kannada News | Snehamayi krishna serious allegations On karnataka chief secretary shalini rajneesh accepted Rs 1 60crore bribe

ಬೆಂಗಳೂರು, (ಫೆಬ್ರವರಿ 19): ಅಧಿಕಾರಿಯೊಬ್ಬರಿಗೆ ಭಡ್ತಿ ನೀಡಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ 1.60 ಕೋಟಿ ರೂ. ಲಂಚ ಪಡೆದಿದ್ದಾರೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ₹9 ಕೋಟಿ ಅಕ್ರಮ ಹಣ ವರ್ಗಾವಣೆ ನಡೆದಿದ್ದು, ಹಣ ಸಾಗಿಸಿದ ಕಾರಿನ ಫೋಟೋ ಸಹಿತ ದೂರು ಸಲ್ಲಿಸಿದ್ದಾರೆ. ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪಿ ಆಗಿರುವ ಅಧಿಕಾರಿಗೆ ಲಂಚ ಪಡೆದು ಭಡ್ತಿ ನೀಡಲಾಗಿದೆ ಎಂಬ ಗಂಭೀರ ಆರೋಪಗಳು ರಾಜ್ಯ ರಾಜಕೀಯ ಮತ್ತು ಆಡಳಿತ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ. ಈ ಸಂಬಂಧ ದೂರುದಾರ ಸ್ನೇಹಮಯಿ ಕೃಷ್ಣ ಮತ್ತೊಂದು ಮಹತ್ವದ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಬಫೆಲ್ಲೊ ಪ್ಲಾಸ್ಟಿ’, ‘ಗ್ಲೋವ್ ಐವಿ’ ಜಾನ್ಹವಿ ಅಂದದ ರಹಸ್ಯಗಳು ಒಂದೆರಡಾ? – Kannada News | Did Janhvi Kapoor under went beauty surgeries

ಜಾನ್ಹವಿ ಕಪೂರ್ (Janhvi Kapoor) ಬಾಲಿವುಡ್​ನ ಸ್ಟಾರ್ ಯುವ ನಟಿ. ಶ್ರೀದೇವಿ ಮತ್ತು ಬೋನಿ ಕಪೂರ್ ಪುತ್ರಿಯಾದ ಜಾನ್ಹವಿ ತಮ್ಮ ಅಂದ ಮತ್ತು ಗ್ಲಾಮರ್​​ನಿಂದ ಬಾಲಿವುಡ್​ನಲ್ಲಿ ಅವಕಾಶಗಳ ಮೇಲೆ ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ. ಆದರೆ ಜಾನ್ಹವಿಯ ಈ ಅಂದ ಮತ್ತು ಗ್ಲಾಮರ್ ಎಲ್ಲವೂ ನಿಜವಾದುದಲ್ಲ ಕೃತಕವಾದುದು ಎಂಬ ಟೀಕೆಗಳು ಆಗಾಗ್ಗೆ ವ್ಯಕ್ತವಾಗುತ್ತಿರುತ್ತದೆ. ಜಾನ್ಹವಿ ಕಪೂರ್ ಅವರು ಕೆಲವು ಪ್ಲಾಸ್ಟಿಕ್ ಸರ್ಜರಿ ಮತ್ತು ಕೆಲವು ಕೃತಕ ವೈದ್ಯಕೀಯ ಪ್ರಕ್ರಿಯೆಗಳ ಮೂಲಕ ತಮ್ಮ ಅಂದವನ್ನು ಹೆಚ್ಚಿಸಿಕೊಂಡಿದ್ದಾರೆ. ತಮ್ಮ ಅಂಗಾಂಗಳನ್ನು ಉಬ್ಬಿಸಿ ಕೆಲವೆಡೆ ತಗ್ಗಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಕೆಲ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಕೆಲ ವಾರಗಳ ಹಿಂದೆ ಜಾನ್ಹವಿ ಕಪೂರ್ ಐವಿ ಡ್ರಿಪ್ ಹಾಕಿಸಿಕೊಂಡೇ ಮೇಕಪ್ ಮಾಡಿಸಿಕೊಳ್ಳುತ್ತಿರುವ ವಿಡಿಯೋ ಒಂದು ವೈರಲ್ ಆಗಿತ್ತು. ಸ್ವತಃ ಜಾನ್ಹವಿ ಸಹ ಐವಿ ಡ್ರಿಪ್ ಹಾಕಿಸಿಕೊಳ್ಳುತ್ತಿರುವ ಚಿತ್ರ ಹಂಚಿಕೊಂಡಿದ್ದರು. ಕೆಲ ವರದಿಗಳ ಪ್ರಕಾರ ಜಾನ್ಹವಿ ಹಾಕಿಸಿಕೊಳ್ಳುತ್ತಿರುವುದು ಗ್ಲೋವಿಂಗ್ ಐವಿ ಡ್ರಿಪ್. ಇದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ, ತ್ವಚೆ ನುಣುಪಾಗುತ್ತದೆ ಅಂದ ಹೆಚ್ಚುತದೆಯಂತೆ. ಜಾನ್ಹವಿ ಮಾತ್ರವೇ ಅಲ್ಲದೆ ಇನ್ನೂ ಕೆಲವು ಬಾಲಿವುಡ್ ಮತ್ತು ಕೆಲ ಹಾಲಿವುಡ್ ನಟಿಯರು ಸಹ ಈ ಐವಿ ಮಾದರಿಯನ್ನು ಬಳಸುತ್ತಾರೆ.

ಇದನ್ನೂ ಓದಿ:ರಶ್ಮಿಕಾ ಮಂದಣ್ಣ ಸಿನಿಮಾವ ಕೊಂಡಾಡಿದ ಬಾಲಿವುಡ್ ನಟಿ ಜಾನ್ಹವಿ ಕಪೂರ್

ಕೆಲ ತಿಂಗಳುಗಳ ಹಿಂದೆ ವೈರಲ್ ಆಗಿದ್ದ ವಿಡಿಯೋ ಒಂದರಲ್ಲಿ ನಟಿ ಜಾನ್ಹವಿ ಕಪೂರ್ ‘ಬಫೆಲ್ಲೊ ಪ್ಲಾಸ್ಟಿ’ ಮಾಡಿಸಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಆ ಬಳಿಕ ಜಾನ್ಹವಿಯೇ ಕಾರ್ಯಕ್ರಮವೊಂದರಲ್ಲಿ ಇದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ತಾವು ಬಫೆಲ್ಲೊ ಪ್ಲಾಸ್ಟಿ ಮಾಡಿಸಿಕೊಂಡಿಲ್ಲ ಎಂದರು. ಆದರೆ ಅಂದ ಹೆಚ್ಚಿಸಿಕೊಳ್ಳಲು ಬೇರೆ ಕೆಲವು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿರುವುದಾಗಿಯೂ ಅವರು ಹೇಳಿದರು. ಪ್ಲಾಸ್ಟಿಕ್ ಸರ್ಜರಿಗಳ ಬಗ್ಗೆ ಪಾರದರ್ಶಕತೆ ಇರಬೇಕು ಎಂದ ಜಾನ್ಹವಿ, ಸೌಂದರ್ಯವರ್ಧಕ ಚಿಕಿತ್ಸೆಗಳ ಕುರಿತು ಪಾರದರ್ಶಕತೆಯ ಮಹತ್ವವನ್ನು ಜಾನ್ವಿ ಕಪೂರ್ ಒತ್ತಿ ಹೇಳಿದರು, “ನಾನು ಮುಚ್ಚುಮರೆಯಲ್ಲಿ ನಂಬಿಕೆ ಇಡುವುದಿಲ್ಲ”. ನಾನು ಆ ವಿಷಯದಲ್ಲಿ ‘ಬುದ್ಧಿವಂತ, ಸಂಪ್ರದಾಯವಾದಿ ಮತ್ತು ಸರಿಯಾದ’ ನಿರ್ಣಯಗಳನ್ನು ತೆಗೆದುಕೊಂಡಿದ್ದೀನಿ. ನನಗೆ ನನ್ನ ತಾಯಿಯ ಮಾರ್ಗದರ್ಶನ ಸರಿಯಾದ ಸಲಹೆಗಳು ಸಹ ನೆರವಾದವು’ ಎಂದಿದ್ದಾರೆ.

ಆ ಮೂಲಕ ತಾವು ಚಿತ್ರರಂಗಕ್ಕೆ ಕಾಲಿಡುವ ಮುಂಚೆಯೇ ತಾವು ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿರುವ ವಿಷಯವನ್ನು ಅವರು ಹೇಳಿಕೊಂಡಿದ್ದಾರೆ. ಜಾನ್ಹವಿ ಕಪೂರ್ ಪ್ರಸ್ತುತ ತೆಲುಗಿನ ‘ಪೆದ್ದಿ’ ಸಿನಿಮಾನಲ್ಲಿ ರಾಮ್ ಚರಣ್ ಜೊತೆಗೆ ನಟಿಸಿದ್ದಾರೆ. ಅದಾದ ಬಳಿಕ ‘ದೇವರ 2’ನಲ್ಲಿ ನಟಿಸಲಿದ್ದಾರೆ. ಹಿಂದಿಯಲ್ಲಿ ಸದ್ಯಕ್ಕೆ ಯಾವುದೇ ಹೊಸ ಸಿನಿಮಾಗಳನ್ನು ಜಾನ್ಹವಿ ಒಪ್ಪಿಕೊಂಡಂತಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Forest Dept Recruitment 2026: ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಉದ್ಯೋಗವಕಾಶ; PRO ಹುದ್ದೆಗೆ ಅರ್ಜಿ ಆಹ್ವಾನ – Kannada News | Karnataka Forest Dept PRO Recruitment 2026: Public Relations Officer Job Application

ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆ ವತಿಯಿಂದ ಸಾರ್ವಜನಿಕ ಸಂಪರ್ಕಾಧಿಕಾರಿ (PRO) ಹುದ್ದೆಗೆ ನೇಮಕಾತಿ ಸಂಬಂಧಿಸಿದ ಮಹತ್ವದ ಅಧಿಸೂಚನೆ ಪ್ರಕಟವಾಗಿದೆ. ಅರಣ್ಯ ಭವನ, ಮಲ್ಲೇಶ್ವರಂ, ಬೆಂಗಳೂರು ಕೇಂದ್ರ ಕಚೇರಿಯಿಂದ ಈ ಪ್ರಕಟಣೆ ಹೊರಡಿಸಲಾಗಿದ್ದು, ಕರ್ನಾಟಕ ಅರಣ್ಯ, ವನ್ಯಜೀವಿ ಮತ್ತು ಹವಾಮಾನ ಬದಲಾವಣೆ ಪ್ರತಿಷ್ಠಾನ (KFWCCF) ಅಡಿಯಲ್ಲಿ ಒಪ್ಪಂದ ಆಧಾರಿತವಾಗಿ ಎರಡು ವರ್ಷಗಳ ಪ್ರಾಥಮಿಕ ಅವಧಿಗೆ ಈ ಹುದ್ದೆಯನ್ನು ಭರ್ತಿ ಮಾಡಲಾಗುತ್ತಿದೆ.

ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ ಅನುಭವ ಹಾಗೂ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದ್ದು, ಅರ್ಹ ಮತ್ತು ಆಸಕ್ತರು ನಿಗದಿತ ಅರ್ಜಿ ನಮೂನೆಯನ್ನು ಅಧಿಕೃತ ವೆಬ್‌ಸೈಟ್ http://kfwccf.in ಮೂಲಕ ಡೌನ್‌ಲೋಡ್ ಮಾಡಿ ಭರ್ತಿ ಸಲ್ಲಿಸಬಹುದು.

ಅರ್ಜಿಯನ್ನು ಫೆಬ್ರವರಿ 25ರೊಳಗೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. ನೇಮಕಾತಿ ಪ್ರಕ್ರಿಯೆ, ಅರ್ಜಿ ವಿಧಾನ ಹಾಗೂ ಸೇವಾ ನಿಯಮಗಳ ಕುರಿತ ಹೆಚ್ಚಿನ ವಿವರಗಳನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಅರಣ್ಯ ಮತ್ತು ಪರಿಸರ ಸಂರಕ್ಷಣಾ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವವರಿಗೆ ಇದು ಮಹತ್ವದ ವೃತ್ತಿ ಅವಕಾಶವಾಗಿದೆ.

ಅರ್ಜಿ ನಮೂನೆ ಹಾಗೂ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್​ ಮಾಡಿ: Notification for the post of Public Relations Officer (PRO) to KFWCCF

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Optical Illusion: ನಿಮ್ಮ ಕಣ್ಣಿಗೊಂದು ಸವಾಲ್; ಈ ಎರಡು ಚಿತ್ರಗಳಲ್ಲಿನ ವ್ಯತ್ಯಾಸ ಗುರುತಿಸಬಲ್ಲಿರಾ – Kannada News | Optical Illusion: Find the three differences between these two pictures

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Social Media

ಆಪ್ಟಿಕಲ್‌ ಇಲ್ಯೂಷನ್‌ನಂತಹ (optical illusion) ಒಗಟಿನ ಆಟಗಳೆಂದರೆ ಎಲ್ಲರಿಗೂ ಇಷ್ಟನೇ. ಹೀಗಾಗಿ ಕೆಲವರು ಬಿಡುವು ಸಿಕ್ಕಾಗ ಒಗಟನ್ನು ಬಿಡಿಸುತ್ತಾ ಮನಸ್ಸು ಮಾಡುತ್ತಾರೆ. ವೈರಲ್ ಆಗಿರುವ ಈ ಚಿತ್ರವು ನಿಮ್ಮ ದೃಷ್ಟಿ ಹಾಗೂ ಬುದ್ಧಿಗೆ ಸವಾಲು ಎಸೆಯುವುದಂತು ಖಂಡಿತ. ಈ ಎರಡು ಚಿತ್ರಗಳ ನಡುವಿನ ಮೂರು ವ್ಯತ್ಯಾಸಗಳನ್ನು ಕಂಡು ಹಿಡಿದ್ರೆ ನೀವು ಬುದ್ಧಿವಂತರು ಎನ್ನುವುದು ಖಚಿತವಾಗುತ್ತದೆ. ನಿಮಗೆ ಈ ಒಗಟು ಬಿಡಿಸಲು 30 ಸೆಕೆಂಡುಗಳು ಇವೆ.

ಈ ಚಿತ್ರ ನೋಡಿದಾಗ ನಿಮಗೆ ಏನು ಕಾಣಿಸಿತು?

ಈ ಆಪ್ಟಿಕಲ್‌ ಇಲ್ಯೂಷನ್‌ನಂತಹ ಒಗಟಿನ ಚಿತ್ರಗಳು ಟ್ರಿಕ್ಕಿಯಾಗಿರುವಂತೆ ಕಾಣುತ್ತದೆ. ಪುಟ್ಟ ಹುಡುಗನು ಚೆಂಡಿನೊಂದಿಗೆ ಆಟವಾಡುತ್ತಿದ್ದಾನೆ. ಅಲ್ಲೇ ಪಕ್ಕದಲ್ಲಿ ನಾಯಿಯೂ ಇರುವುದನ್ನು ಕಾಣಬಹುದು. ಇಲ್ಲಿರುವ ಎರಡೂ ಚಿತ್ರಗಳು ದೃಶ್ಯ ಒಂದೇ ರೀತಿ ಇದೆ. ಆದರೆ ನೀವು ಈ ಎರಡು ಚಿತ್ರಗಳಲ್ಲಿ ಮೂರು ಸಣ್ಣ ವ್ಯತ್ಯಾಸಗಳಿವೆ. ನೀವು ಎಚ್ಚರಿಕೆಯಿಂದ ನೋಡಿದರೆ, ಎರಡು ಚಿತ್ರಗಳ ನಡುವಿನ ವ್ಯತ್ಯಾಸಗಳು ನಿಮಗೆ ಗೋಚರಿಸುತ್ತವೆ.

ಇದನ್ನೂ ಓದಿ: ಈ ಚಿತ್ರದಲ್ಲಿ ಅಡಗಿರುವ ಮೂವರು ವ್ಯಕ್ತಿಗಳ ಮುಖಗಳನ್ನು ಪತ್ತೆ ಹಚ್ಚಿ

ಈ ಚಿತ್ರಗಳಲ್ಲಿನ ವ್ಯತ್ಯಾಸಗಳನ್ನು ಗುರುತಿಸಲು ಸಾಧ್ಯವಾಯಿತೇ?

ಈ ಚಿತ್ರದತ್ತ ಕಣ್ಣುಹಾಯಿಸಿದರೂ ಈ ಎರಡು ಚಿತ್ರಗಳ ನಡುವಿನ ವ್ಯತ್ಯಾಸಗಳನ್ನು ಗುರುತಿಸಲು ಸಾಧ್ಯವಾಗಲಿಲ್ಲವೇ. ಹೌದು, ನೂರರಲ್ಲಿ ಹತ್ತು ಜನರಿಗೆ ಮಾತ್ರ ಇಂತಹ ವ್ಯತ್ಯಾಸಗಳನ್ನು ಸುಲಭವಾಗಿ ಕಂಡುಹಿಡಿಯುತ್ತಾರೆ. ಆದರೆ ಈ ಕೆಳಗಿನ ಚಿತ್ರಗಳಲ್ಲಿ ಆ ಮೂರು ವ್ಯತ್ಯಾಸಗಳನ್ನು ಗುರುತಿಸಿದ್ದೇವೆ.

ಇನ್ನಷ್ಟು ವೈರಲ್‌ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Source link

ಕುಂಟುತ್ತಾ ಸಾಗಿದ ತುಂಗಭದ್ರಾ ಡ್ಯಾಂ ಗೇಟ್ ರಿಪೇರಿ ಕಾರ್ಯ: ನೀರು ಸಂಗ್ರಹಕ್ಕೆ ತೊಂದರೆ, ರೈತರಲ್ಲಿ ಆಂತಕ – Kannada News | Tungabhadra Dam Crest Gate Repair Slows: Farmers Fear Water Scarcity in Kalyana Karnataka

ತುಂಗಭದ್ರಾ ಡ್ಯಾಂ, ಗೇಟ್ ರಿಪೇರಿ ಕಾರ್ಯ

ಬಳ್ಳಾರಿ, ಫೆಬ್ರವರಿ 19: ತುಂಗಭದ್ರಾ ಡ್ಯಾಂ (Tungabhadra dam) ಕಲ್ಯಾಣ ಕರ್ನಾಟಕದ ಜೀವನಾಡಿ. ಈ ಡ್ಯಾಂ‌‌ನ ಕ್ರೆಸ್ಟ್ ಗೇಟ್‌ಗಳ ರಿಪೇರಿ ಕಾರ್ಯ ಮಂದಗತಿಯಲ್ಲಿ ಸಾಗುತ್ತಿದೆ. ಕುಂಟುತ್ತಾ ಸಾಗಿರುವ ಗೇಟ್ (crust gate)  ರಿಪೇರಿ ಕಾರ್ಯದಿಂದ ರೈತರು ಆತಂಕಗೊಂಡಿದ್ದಾರೆ. ಮೇ ತಿಂಗಳ ಅಂತ್ಯದೊಳಗೆ ಡ್ಯಾಂ ಗೇಟ್ ರಿಪೇರಿ ಕಾರ್ಯ ಮುಗಿಯದಿದ್ದರೇ ಡ್ಯಾಂ‌ನಲ್ಲಿ ನೀರು ಸಂಗ್ರಹಿಸುವುದು ಕಷ್ಟ ಎನ್ನುತ್ತಿದ್ದಾರೆ.

ಜನರು ಹಾಗೂ ರೈತರಲ್ಲಿ ಆತಂಕ

ಕಲ್ಯಾಣ ಕರ್ನಾಟಕ ಭಾಗದ ಜೀವನಾಡಿ ತುಂಗಭದ್ರಾ ಡ್ಯಾಂ. ತುಂಗಭದ್ರಾ ಡ್ಯಾಂ ಕ್ರೆಸ್ಟ್​ ಗೇಟ್ ರಿಪೇರಿ ಕಾರ್ಯ ನಡೆದು ಎರಡ್ಮೂರು ತಿಂಗಳುಗಳೇ ಕಳೆದಿವೆ. ಆದರೆ ಈವರಗೆ ಕೇವಲ ಒಂದೇ ಒಂದು ಗೇಟ್ ರಿಪೇರಿ ಕಾರ್ಯ ಪೂರ್ಣಗೊಂಡಿದೆ. ಕುಂಟುತ್ತಾ ಸಾಗಿರುವ ಟಬಿ ಡ್ಯಾಂ ಗೇಟ್ ರಿಪೇರಿ ಕಾರ್ಯದಿಂದ ಜನರು ಹಾಗೂ ರೈತರು ಆತಂಕಗೊಂಡಿದ್ದಾರೆ.

ಇದನ್ನೂ ಓದಿ: ತುಂಗಭದ್ರಾ ಡ್ಯಾಂ ಕ್ರೆಸ್ಟ್​ ಗೇಟ್​ ಅಳವಡಿಕೆಗೆ ನೀಡಿದ್ದ 10 ಕೋಟಿ ರೂ. ವಾಪಸ್ ಪಡೆಯಿತಾ ಸರ್ಕಾರ? ಬಿಜೆಪಿ ಗಂಭೀರ ಆರೋಪ

ವಿಜಯನಗರ ಜಿಲ್ಲೆಯ ಹೊಸಪೇಟೆ ಪಟ್ಟಣ ಹಾಗೂ ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಡ್ಯಾಂ 19 ನೇ ಕ್ರೆಸ್ಟ್ ಗೇಟ್ ಕಳೆದ ವರ್ಷ ನೀರಿನ ರಭಸಕ್ಕೆ ಕಿತ್ತುಹೋಗಿತ್ತು. ಆಗ ನೂರಾರು ಟಿಎಮ್‌ಸಿ ನೀರು ವ್ಯರ್ಥವಾಗಿ ಹರಿದು ಸಮುದ್ರ ಸೇರುವಂತಾಗಿತ್ತು. ಹೀಗಾಗಿ ಎಚ್ಚೆತ್ತ ಸರ್ಕಾರ ಈ ವರ್ಷ 33 ಗೇಟ್ ಹೊಂದಿರುವ ಟಿಬಿ ಡ್ಯಾಂನ ಎಲ್ಲಾ ಗೇಟ್ ರಿಪೇರಿ ಕಾರ್ಯಕ್ಕೆ ಮುಂದಾಗಿತ್ತು. ಸರ್ಕಾರ ತೆಗೆದುಕೊಂಡಿರುವ ಕಾರ್ಯ ಉತ್ತಮವಾಗಿದ್ದು, ಆದರೆ ರಿಪೇರಿ ಕಾರ್ಯ ಮಾತ್ರ ಮಂದಗತಿಯಲ್ಲಿ ಸಾಗಿದೆ. ಹೀಗಾಗಿ ಶೀಘ್ರ ಗೇಟ್ ರಿಪೇರಿ ಕಾರ್ಯ ಪೂರ್ಣಗೊಳಿಸಬೇಕು ಅಂತಾ ಸ್ಥಳೀಯರಾದ ಸಂತೋಷ್​​ ಎಂಬುವವರು ಒತ್ತಾಯಿಸಿದ್ದಾರೆ.

ನೀರು ಸಂಗ್ರಹಕ್ಕೆ ತೊಂದರೆ

ಇನ್ನು ತುಂಗಭದ್ರಾ ಡ್ಯಾಂನಿಂದ ವಿಜಯನಗರ, ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಗೆ ಕುಡಿಯುವ ನೀರು ಹಾಗೂ ರೈತರ ಜಮೀನುಗಳಿಗೆ ಜೀವನಾಡಿಯಾಗಿದೆ. ಕಳೆದ ವರ್ಷ 19ರಂದು ಕ್ರೆಸ್ಟ್ ಗೇಟ್ ಕಿತ್ತು ಹೋದ ಪರಿಣಾಮ ಈ ವರ್ಷ 33 ಗೇಟ್‌ಗಳನ್ನ ತೆರವುಗೊಳಿಸಿ ಹೊಸ ಗೇಟ್‌ಗಳನ್ನ ಅಳವಡಿಕೆ ಕಾರ್ಯ ನಡೆಯುತ್ತಿದೆ. ಆದರೆ ಆ ಕಾಮಗಾರಿ ಮಾತ್ರ ಕುಂಟುತ್ತಾ ಸಾಗಿದೆ. ಹೀಗಾಗಿ ರೈತರಿಗೆ, ಜನರಿಗೆ ಆತಂಕ ಶುರುವಾಗಿದೆ. ಏಕೆಂದರೆ ಮಳೆಗಾಲ ಆರಂಭ ಆಗುವ ಮೊದಲೇ ಎಲ್ಲ ಗೇಟ್‌ಗಳ ಅಳವಡಿಕೆ ಕಾರ್ಯ ಪೂರ್ಣಗೊಳ್ಳದಿದ್ದರೆ, ಮತ್ತೆ ನೀರಿನ ಸಂಗ್ರಹಕ್ಕೆ ತೊಂದರೆ ಆಗಲಿದೆ.

ಟಿಬಿ ಡ್ಯಾಂ 103 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ಗೇಟ್‌ಗಳು ತಾಂತ್ರಿಕ ಸಮಸ್ಯೆ ಹಿನ್ನೆಲೆ ಕಳೆದ ವರ್ಷ ಕೇವಲ 80 ಟಿಎಂಸಿ ನೀರು ಸಂಗ್ರಹಕ್ಕೆ ಅವಕಾಶವಿತ್ತು. ಮತ್ತದೆ ಕೆಲಸ ಆದರೆ ಎರಡನೇ ಬೆಳೆಗೆ ನೀರಿನ ತೊಂದರೆ ಉಂಟಾಗಲಿದೆ. ಹೀಗಾಗಿ ಶೀಘ್ರದಲ್ಲೇ ಗೇಟ್ ರಿಪೇರಿ ಕಾರ್ಯ ಪೂರ್ಣಗೊಳ್ಳಬೇಕು ಎನ್ನುವುದು ಜನರ ಒತ್ತಾಯ.

ಇದನ್ನೂ ಓದಿ: ತುಂಗಭದ್ರಾ ಜಲಾಶಯದ ಮೊದಲ ಕ್ರಸ್ಟ್ ಗೇಟ್ ಅಳವಡಿಕೆ ಯಶಸ್ವಿ: ಅದರ ಭಾರ, ಅಗಲ-ಉದ್ದ ಎಷ್ಟು ಗೊತ್ತಾ?

ಒಟ್ಟು 33 ಗೇಟ್​ಗಳ ಪೈಕಿ, ಒಂದು ಗೇಟ್ ಅಳವಡಿಕೆ ಯಶಸ್ವಿ ಆಗಿದೆ. 23 ಹೊಸ ಕ್ರೆಸ್ಟ್ ಗೇಟ್​ಗಳ ನಿರ್ಮಾಣ ಪೂರ್ಣ, 15 ಹಳೆಯ ಕ್ರೆಸ್ಟ್ ಗೇಟ್​ಗಳ ತೆರವು ಕಾರ್ಯ ಮುಗಿಸಿರುವ ತಂತ್ರಜ್ಞರು, ಹೊಸಪೇಟೆ ಮತ್ತು ಗದಗಿನಲ್ಲಿ ತಲಾ ಒಂದೊಂದು ಗೇಟ್ ಸಿದ್ಧ ಪಡಿಸಲಾಗುತ್ತಿದೆ. 4 ಹಳೆಯ ಕ್ರೆಸ್ಟ್ ಗೇಟ್​ಗಳ ತೆರವು ಪ್ರಗತಿಯಲ್ಲಿದೆ. 5 ಹೊಸ ಕ್ರೆಸ್ಟ್ ಗೇಟ್​ಗಳು ಅಳವಡಿಸಲಾಗಿದೆ. 18ನೇ ಗೇಟ್​ನ ಟ್ರಯಲ್ ಆ್ಯಂಡ್​ ರನ್ ಯಶಸ್ವಿಯಾಗಿದೆ. 8 ಗೇಟ್​ಗಳ ಅಳವಡಿಕೆ ಪ್ರಗತಿಯಲ್ಲಿದೆ.

ಒಟ್ಟಿನಲ್ಲಿ ತುಂಗಭದ್ರಾ ಡ್ಯಾಂ ಕ್ರೆಸ್ಟ್ ಗೇಟ್ ರಿಪೇರಿ ಕಾರ್ಯ ಶೀಘ್ರದಲ್ಲೇ ಪೂರ್ಣಗೊಂಡು ನೂರಾರು ಟಿಎಂಸಿ ನೀರು ಸಂಗ್ರಹಿಸುವಂತಾಗಲಿದೆ. ಜೊತೆಗೆ ರೈತರ ಜಮೀನುಗಳಿಗೆ ಎರಡು ಬೆಳೆಗೂ ನೀರು ಸಿಗುವಂತಾಗಲಿ ಎನ್ನುವುದು ನಮ್ಮ ಆಶಯ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version