PBKS vs GT: ಸೂಪರ್ ಕೊನೊಲಿ: ಪಂಜಾಬ್ ಕಿಂಗ್ಸ್​ಗೆ ರೋಚಕ ಜಯ

PBKS vs GT: ಸೂಪರ್ ಕೊನೊಲಿ: ಪಂಜಾಬ್ ಕಿಂಗ್ಸ್​ಗೆ ರೋಚಕ ಜಯ

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 4ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಭರ್ಜರಿ ಜಯ ಸಾಧಿಸಿದೆ. ಮುಲ್ಲನ್​ಪುರ್​ನ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್​ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ.

ಆರಂಭಿಕನಾಗಿ ಕಣಕ್ಕಿಳಿದ ಸಾಯಿ ಸುದರ್ಶನ್ ಕೇವಲ 13 ರನ್​​ಗಳಿಸಿ ವಿಕೆಟ್ ಒಪ್ಪಿಸಿದ್ದರು. ಈ ಹಂತದಲ್ಲಿ ಜೊತೆಗೂಡಿದ ಶುಭ್​ಮನ್ ಗಿಲ್ ಹಾಗೂ ಜೋಸ್ ಬಟ್ಲರ್ ಉತ್ತಮ ಜೊತೆಯಾಟದೊಂದಿಗೆ ತಂಡಕ್ಕೆ ಆಸರೆಯಾಗಿ ನಿಂತರು.

ಗುಜರಾತ್ ಟೈಟಾನ್ಸ್ ತಂಡದ ಮೊತ್ತ 83 ರನ್ ಆಗಿದ್ದ ವೇಳೆ ಶುಭ್​ಮನ್ ಗಿಲ್ (39) ವಿಕೆಟ್ ಪಡೆಯುವಲ್ಲಿ ಯುಜ್ವೇಂದ್ರ ಚಹಲ್ ಯಶಸ್ವಿಯಾದರು. ಇದರ ಬೆನ್ನಲ್ಲೇ ಗ್ಲೆನ್ ಫಿಲಿಪ್ಸ್ (25) ಹಾಗೂ ಜೋಸ್ ಬಟ್ಲರ್ (38) ವಿಕೆಟ್ ಒಪ್ಪಿಸಿದರು.

ಇದಾದ ಬಳಿಕ ಬಂದ ವಾಷಿಂಗ್ಟನ್ ಸುಂದರ್ (18), ಶಾರುಖ್ ಖಾನ್ (4), ರಾಹುಲ್ ತೆವಾಟಿಯಾ (11) ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ಗುಜರಾತ್ ಟೈಟಾನ್ಸ್ ತಂಡವು 20 ಓವರ್​​ಗಳಲ್ಲಿ 6 ವಿಕೆಟ್​ ಕಳೆದುಕೊಂಡು 162 ರನ್​ಗಳಿಸಲಷ್ಟೇ ಶಕ್ತರಾದರು.

163 ರನ್​​ಗಳ ಗುರಿ:

20 ಓವರ್​​​ಗಳಲ್ಲಿ 163 ರನ್​ಗಳ ಗುರಿ ಪಡೆದ ಪಂಜಾಬ್ ಕಿಂಗ್ಸ್ ಕೂಡ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ದಾಂಡಿಗ ಪ್ರಿಯಾಂಶ್ ಆರ್ಯ ಕೇವಲ 7 ರನ್​ಗಳಿಸಿ ಕಗಿಸೊ ರಬಾಡಗೆ ವಿಕೆಟ್ ಒಪ್ಪಿಸಿದರು. ಆದರೆ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡುವಲ್ಲಿ ಪ್ರಭ್​ಸಿಮ್ರಾನ್ ಸಿಂಗ್ ಹಾಗೂ ಕೂಪರ್ ಕೊನೊಲಿ ಯಶಸ್ವಿಯಾದರು.

ಮೊದಲ ವಿಕೆಟ್ ಪತನದ ಬಳಿಕ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿಯು ಪವರ್​ಪ್ಲೇನಲ್ಲಿ ತಂಡದ ಮೊತ್ತವನ್ನು 55 ಕ್ಕೆ ತಂದು ನಿಲ್ಲಿಸಿದರು. ಇದಾದ ಬಳಿಕ ಭರ್ಜರಿ ಹೊಡೆತಕ್ಕೆ ಮುಂದಾಗಿ ಪ್ರಭ್​ಸಿಮ್ರಾನ್ ಸಿಂಗ್ (37) ಕ್ಯಾಚ್ ನೀಡಿ ನಿರ್ಗಮಿಸಿದರು.

ಆ ಬಳಿಕ ಬಂದ ಶ್ರೇಯಸ್ ಅಯ್ಯರ್ ಬಿರುಸಿನ ಆರಂಭ ಪಡೆದರೂ 18 ರನ್​​ಗಳಿಸಿ ಇನಿಂಗ್ಸ್ ಅಂತ್ಯಗೊಳಿಸಿದರು. ಇದರ ಬೆನ್ನಲ್ಲೇ ನೆಹಾಲ್ ವಧೇರಾ (3) ಹಾಗೂ ಶಶಾಂಕ್ ಸಿಂಗ್ (4) ಹಾಗೂ ಮಾರ್ಕಸ್ ಸ್ಟೊಯಿನಿಸ್ (0) ವಿಕೆಟ್ ಪಡೆಯುವಲ್ಲಿ ಕನ್ನಡಿಗ ಪ್ರಸಿದ್ಧ್ ಕೃಷ್ಣ ಯಶಸ್ವಿಯಾದರು.

ಸೂಪರ್ ಕೊನೊಲಿ:

ಇದಾಗ್ಯೂ ಮತ್ತೊಂದೆಡೆ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಕೂಪರ್ ಕೊನೊಲಿ 34 ಎಸೆತಗಳಲ್ಲಿ ಚೊಚ್ಚಲ ಅರ್ಧಶತಕ ಪೂರೈಸಿದರು. ಅಷ್ಟೇ ಅಲ್ಲದೆ ಕೊನೆ ತನಕ ಏಕಾಂಗಿ ಹೋರಾಟ ಮುಂದುವರೆಸಿದ ಕೊನೊಲಿ 44 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 5 ಫೋರ್​​ಗಳೊಂದಿಗೆ ಅಜೇಯ 72 ರನ್ ಬಾರಿಸಿದರು. ಈ ಮೂಲಕ ಪಂಜಾಬ್ ಕಿಂಗ್ಸ್ ತಂಡವನ್ನು 19.1 ಓವರ್​​ಗಳಲ್ಲಿ ಗುರಿ ತಲುಪಿ 3 ವಿಕೆಟ್​ಗಳ ರೋಚಕ ಜಯ ತಂದುಕೊಟ್ಟಿದ್ದಾರೆ.

ಗುಜರಾತ್ ಟೈಟಾನ್ಸ್ (ಪ್ಲೇಯಿಂಗ್ XI): ಸಾಯಿ ಸುದರ್ಶನ್, ಶುಭ್​ಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಕಗಿಸೊ ರಬಾಡ, ಅಶೋಕ್ ಶರ್ಮಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ (ಇಂಪ್ಯಾಕ್ಟ್ ಸಬ್).

ಇದನ್ನೂ ಓದಿ: VIDEO: ಟಾಸ್ ಫಿಕ್ಸಿಂಗ್..? ಮುಂಬೈ ಇಂಡಿಯನ್ಸ್ ವಿರುದ್ಧ ಗಂಭೀರ ಆರೋಪ

ಪಂಜಾಬ್ ಕಿಂಗ್ಸ್ (ಪ್ಲೇಯಿಂಗ್ XI): ಪ್ರಭ್​ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಕೂಪರ್ ಕೊನೊಲಿ, ಶ್ರೇಯಸ್ ಅಯ್ಯರ್ (ನಾಯಕ), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಮಾರ್ಕೊ ಯಾನ್ಸೆನ್, ಕ್ಸೇವಿಯರ್ ಬಾರ್ಟ್ಲೆಟ್, ವೈಶಾಕ್ ವಿಜಯಕುಮಾರ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಹಲ್, ಪ್ರಿಯಾಂಶ್ ಆರ್ಮಾ (ಇಂಪ್ಯಾಕ್ಟ್ ಸಬ್).

 

 

Source link

Leave a Reply

Your email address will not be published. Required fields are marked *