Pranav Ilango: ಭಾರತದ ಪ್ರತಿಭೆಗೆ ಅಮೆರಿಕದ ಮನ್ನಣೆ; 17 ವರ್ಷದ ಪ್ರಣವ್‌ಗೆ 3.55 ಕೋಟಿ ರೂ. ವಿದ್ಯಾರ್ಥಿವೇತನ – Kannada News | Pranav Ilango: 3.55 Cr Rs Brown University Full Scholarship Beyond JEE/NEET

3.55 ಕೋಟಿ ವಿದ್ಯಾರ್ಥಿವೇತನ ಗೆದ್ದ 17ರ ಹರೆಯದ ಯುವಕ

ಭಾರತದಲ್ಲಿ 12 ನೇ ತರಗತಿ ಮುಗಿಯುತ್ತಿದ್ದಂತೆಯೇ ಬಹುತೇಕ ವಿದ್ಯಾರ್ಥಿಗಳು ಎಂಜಿನಿಯರಿಂಗ್‌ಗಾಗಿ ನಡೆಸುವ JEE ಅಥವಾ ವೈದ್ಯಕೀಯ ಶಿಕ್ಷಣಕ್ಕಾಗಿ ಬರೆಯುವ NEET ಪರೀಕ್ಷೆಗಳಿಗಾಗಿ ತಯಾರಿ ನಡೆಸುತ್ತಿರುತ್ತಾರೆ. ಆದರೆ, ತಮಿಳುನಾಡಿನ 17 ವರ್ಷದ ಪ್ರಣವ್ ಇಳಂಗೊ ಈ ಸಾಂಪ್ರದಾಯಿಕ ಚೌಕಟ್ಟಿನಿಂದ ಹೊರಬಂದು ತಮ್ಮದೇ ಆದ ವಿಶಿಷ್ಟ ಹಾದಿಯನ್ನು ನಿರ್ಮಿಸಿಕೊಂಡಿದ್ದಾರೆ. ಶೈಕ್ಷಣಿಕ ಗಡಿಯನ್ನು ಮೀರಿ ಸಂಶೋಧನೆ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡ ಪರಿಣಾಮ, ಇಂದು ಅವರು ಅಮೆರಿಕದ ಅತ್ಯಂತ ಪ್ರತಿಷ್ಠಿತ ಬ್ರೌನ್ ವಿಶ್ವವಿದ್ಯಾಲಯದಲ್ಲಿ (Brown University) ಉಚಿತವಾಗಿ ವ್ಯಾಸಂಗ ಮಾಡಲು ಬರೋಬ್ಬರಿ 3.55 ಕೋಟಿ ರೂ. ಮೌಲ್ಯದ ಪೂರ್ಣ ವಿದ್ಯಾರ್ಥಿವೇತನ (Full Scholarship) ಪಡೆದುಕೊಂಡಿದ್ದಾರೆ.

ಆರಂಭಿಕ ಹಂತದಲ್ಲೇ ಭಿನ್ನ ಹಾದಿಯ ಆಯ್ಕೆ:

ತಮಿಳುನಾಡಿನವರಾದ ಪ್ರಣವ್‌ ಅವರ ತಂದೆ-ತಾಯಿ ಇಬ್ಬರೂ ಕಾಲೇಜು ಉಪನ್ಯಾಸಕರು. ಹೀಗಾಗಿ ಮನೆಯಲ್ಲಿ ಮೊದಲಿನಿಂದಲೂ ಶೈಕ್ಷಣಿಕ ವಾತಾವರಣವಿತ್ತು. ಆರನೇ ತರಗತಿಯಲ್ಲಿರುವಾಗಲೇ ಸಾಂಪ್ರದಾಯಿಕ CBSE ಪಠ್ಯಕ್ರಮದ ಬದಲು ಕೇಂಬ್ರಿಡ್ಜ್ IGCSE ಮಂಡಳಿಯನ್ನು ಆಯ್ಕೆ ಮಾಡಿಕೊಂಡದ್ದು ಇವರ ಜೀವನದ ಪ್ರಮುಖ ತಿರುವು. ನಂತರದ A-ಲೆವೆಲ್ ಅಭ್ಯಾಸದಲ್ಲಿ IGCSE ಯ ಎಲ್ಲಾ 9 ವಿಷಯಗಳಲ್ಲೂ A ಗ್ರೇಡ್ ಪಡೆದ ಪ್ರಣವ್, 6 A-ಲೆವೆಲ್ ವಿಷಯಗಳಲ್ಲೂ ಅತ್ಯುನ್ನತ ಶ್ರೇಣಿ ಗಳಿಸಿದರು. 8 ನೇ ತರಗತಿಯಲ್ಲಿದ್ದಾಗ ‘ಡೆಕ್ಸ್ಟೆರಿಟಿ ಗ್ಲೋಬಲ್’ ಮಾರ್ಗದರ್ಶನ ಕಾರ್ಯಕ್ರಮಕ್ಕೆ ಸೇರಿದ ಇವರಿಗೆ ಕೇವಲ ಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ ವೈಯಕ್ತಿಕ ಬೆಳವಣಿಗೆ, ವಿದೇಶಿ ಶಿಕ್ಷಣದ ಅವಕಾಶಗಳು ಮತ್ತು ಸಾಮಾಜಿಕ ಹೊಣೆಗಾರಿಕೆಯ ಅರಿವು ಮೂಡಿತು.

ಗಣಿತದಿಂದ ಕ್ಯಾನ್ಸರ್ ಜಾಗೃತಿ ಮತ್ತು ಸಾರ್ವಜನಿಕ ಆರೋಗ್ಯದತ್ತ ಪಯಣ:

ಚಿಕ್ಕಂದಿನಿಂದಲೂ ಗಣಿತ ಮತ್ತು ಅಂಕಿಅಂಶಗಳಲ್ಲಿ ತೀವ್ರ ಆಸಕ್ತಿ ಹೊಂದಿದ್ದ ಪ್ರಣವ್, 11 ನೇ ತರಗತಿಗೆ ಬಂದಾಗ ತಮ್ಮ ಜ್ಞಾನವನ್ನು ಸಮಾಜಕ್ಕೆ ಉಪಯುಕ್ತವಾಗುವ ರೀತಿಯಲ್ಲಿ ಬಳಸಲು ನಿರ್ಧರಿಸಿದರು. ಸ್ನೇಹಿತನೊಂದಿಗೆ ಸೇರಿ ತಮಿಳುನಾಡಿನ ಕ್ಯಾನ್ಸರ್ ಅಂಕಿಅಂಶಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ, ಆ ದತ್ತಾಂಶಗಳನ್ನು ಸಾರ್ವಜನಿಕರಿಗೆ ಸುಲಭವಾಗಿ ಸಿಗುವಂತೆ ವೆಬ್‌ಸೈಟ್ ನಿರ್ಮಿಸಿದರು. ಜೊತೆಗೆ ಈರೋಡ್, ಕೊಯಮತ್ತೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕ್ಯಾನ್ಸರ್ ಜಾಗೃತಿ ಅಭಿಯಾನಗಳನ್ನು ಆರಂಭಿಸಿ, ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚುವುದರಿಂದ ಜೀವ ಉಳಿಸಬಹುದು ಎಂಬುದನ್ನು ಸರಳ ತಮಿಳು ಭಾಷೆಯ ಕರಪತ್ರಗಳ ಮೂಲಕ ಜನರಿಗೆ ತಲುಪಿಸಿದರು.

ಇದನ್ನೂ ಓದಿ: ಕ್ಯಾಂಪಸ್ ಇಂಟರ್ವ್ಯೂಗೂ ಮುನ್ನವೇ ಒಲಿದ ಅದೃಷ್ಟ; ಭಾರತದ 21 ವರ್ಷದ ವಿದ್ಯಾರ್ಥಿಗೆ ನೆದರ್‌ಲ್ಯಾಂಡ್ಸ್ ಕಂಪನಿಯಿಂದ 2.5 ಕೋಟಿ ರೂ. ಜಾಬ್ ಆಫರ್!

ಚೆಸ್ ಅಖಾಡದಲ್ಲೂ ಭರವಸೆಯ ಆಟಗಾರ:

ಪ್ರಣವ್ ಅವರ ಪ್ರತಿಭೆ ಕೇವಲ ಪುಸ್ತಕ ಹಾಗೂ ಸಂಶೋಧನೆಗಷ್ಟೇ ಸೀಮಿತವಾಗಿಲ್ಲ. ಕ್ರೀಡಾರಂಗದಲ್ಲೂ ತಮ್ಮ ಛಾಪು ಮೂಡಿಸಿರುವ ಇವರು 1800 FIDE ರೇಟಿಂಗ್ ಹೊಂದಿರುವ ಸ್ಪರ್ಧಾತ್ಮಕ ಚೆಸ್ ಆಟಗಾರರಾಗಿದ್ದಾರೆ. ಫ್ರಾನ್ಸ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಚೆಸ್ ಪಂದ್ಯಾವಳಿಯಲ್ಲಿ ತಮಿಳುನಾಡು ರಾಜ್ಯವನ್ನು ಪ್ರತಿನಿಧಿಸಿ ಸಭಾಷ್ ಎನಿಸಿಕೊಂಡಿರುವುದು ಇವರ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿದೆ.

ಬ್ರೌನ್ ವಿಶ್ವವಿದ್ಯಾಲಯದಲ್ಲಿ ಮುಂದಿನ ಗುರಿ ಏನು?

ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯವು ತನ್ನ ‘ಓಪನ್ ಕರಿಕುಲಂ’ ಅಥವಾ ಮುಕ್ತ ಪಠ್ಯಕ್ರಮಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ಪ್ರಣವ್ ತಮ್ಮಿಷ್ಟದ ಅನ್ವಯಿಕ ಗಣಿತ (Applied Mathematics) ಮತ್ತು ಸಾರ್ವಜನಿಕ ಆರೋಗ್ಯ (Public Health) ವಿಷಯಗಳನ್ನು ಸಂಯೋಜಿಸಿ ವ್ಯಾಸಂಗ ಮಾಡಲಿದ್ದಾರೆ. ವಿದೇಶದಲ್ಲಿ ಶಿಕ್ಷಣ ಮತ್ತು ಸಂಶೋಧನಾ ಅನುಭವ ಪಡೆದ ನಂತರ ಭಾರತಕ್ಕೇ ಮರಳಿ, ಇಲ್ಲೇ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಹೊಸ ಸಂಶೋಧನೆಗಳನ್ನು ಕೈಗೊಂಡು ದೇಶದ ಆರೋಗ್ಯ ವ್ಯವಸ್ಥೆಗೆ ನವೀನ ಕೊಡುಗೆ ನೀಡುವುದು ಇವರ ಅಂತಿಮ ಕನಸಾಗಿದೆ. ಇಂದಿನ ಯುವ ಪೀಳಿಗೆಗೆ ಕೇವಲ ರ‍್ಯಾಂಕ್ ಬೆನ್ನತ್ತದೆ, ತಮ್ಮಿಷ್ಟದ ಕ್ಷೇತ್ರದಲ್ಲಿ ಆಳವಾದ ಜ್ಞಾನ ಮತ್ತು ಸಾಮಾಜಿಕ ಕಾಳಜಿ ಬೆಳೆಸಿಕೊಂಡರೆ ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಬಹುದು ಎಂಬುದಕ್ಕೆ ಪ್ರಣವ್ ಪ್ರೇರಣೆಯಾಗಿದ್ದಾರೆ.

ಶಿಕ್ಷಣಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *