IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 29ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ ಸೋಲನುಭವಿಸಿದೆ. ಈ ಸೋಲಿನ ಬೆನ್ನಲ್ಲೇ ಎಲ್ಲರ ಕಣ್ಣು ನೆಟ್ಟಿದ್ದು 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಮೇಲೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು 20 ಓವರ್ಗಳಲ್ಲಿ 155 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಕೆಕೆಆರ್ 19.4 ಓವರ್ಗಳಲ್ಲಿ 161 ರನ್ಗಳಿಸಿ 4 ವಿಕೆಟ್ಗಳ ಜಯ ಸಾಧಿಸಿತು.
ಅತ್ತ ಕೆಕೆಆರ್ ಆಟಗಾರರು ಗೆದ್ದ ಖುಷಿಯಲ್ಲಿದ್ದರೆ, ಇತ್ತ ಸೋತ ನೋವಿನಲ್ಲಿ ವೈಭವ್ ಸೂರ್ಯವಂಶಿ ಭಾವುಕರಾಗಿ ಕಣ್ಣೀರಿಟ್ಟರು. ಇದೀಗ ಯುವ ಆಟಗಾರ ಕಣ್ಣೀರಿಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳ ಮನ ಮಿಡಿಯುವಂತೆ ಮಾಡಿದೆ.
ಅಬ್ಬರದ ಆರಂಭ, ಆಘಾತಕಾರಿ ಅಂತ್ಯ:
ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ 28 ಎಸೆತಗಳಲ್ಲಿ 46 ರನ್ ಬಾರಿಸಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸ್ಫೋಟಕ ಆರಂಭ ನೀಡಿದ್ದರು. ಅವರ ಬ್ಯಾಟಿಂಗ್‌ನಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್‌ಗಳಿದ್ದವು. ಆದರೆ, ವರುಣ್ ಚಕ್ರವರ್ತಿ ಎಸೆದ 9ನೇ ಓವರ್‌ನಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿ ಔಟ್ ಆಗಿದ್ದು ಪಂದ್ಯದ ಲಯವನ್ನೇ ಬದಲಿಸಿತು.
ವೈಭವ್ ಸೂರ್ಯವಂಶಿ ಔಟಾಗುತ್ತಿದ್ದಂತೆ ಆರ್ಆರ್ ತಂಡ ರನ್ ಗತಿ ಇಳಿಕೆಯಾಯಿತು. ಇದರ ಜೊತೆಗೆ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ವೈಫಲ್ಯ ಅನುಭವಿಸಿದರು. ಪರಿಣಾಮ ಆರ್ಆರ್ 20 ಓವರ್ಗಳಲ್ಲಿ 155 ರನ್ಗಳಿಸಿ ಇನಿಂಗ್ಸ್ ಅಂತ್ಯಗೊಳಿಸಿತು.
ಗೆಲ್ಲುವ ಅವಕಾಶ ಕೈ ಚೆಲ್ಲಿದ ಆರ್ಆರ್:
ಅಲ್ಪ ಮೊತ್ತವನ್ನು ಕಲೆಹಾಕಿದ್ದರೂ ರಾಜಸ್ಥಾನ್ ರಾಯಲ್ಸ್ ತಂಡದ ಬೌಲರ್ಗಳು ಅತ್ಯುತ್ತಮ ದಾಳಿ ಸಂಘಟಿಸಿದ್ದರು. ಪರಿಣಾಮ ಕೆಕೆಆರ್ ತಂಡಕ್ಕೆ ಕೊನೆಯ ಮೂರು ಓವರ್ಗಳಲ್ಲಿ 28 ರನ್ಗಳು ಬೇಕಿದ್ದವು. 18ನೇ ಓವರ್ ಎಸೆದ ಬ್ರಿಜೇಶ್ ನೀಡಿದ್ದು ಕೇವಲ 7 ರನ್ಗಳು ಮಾತ್ರ.
ಇನ್ನು 19ನೇ ಓವರ್‌ನಲ್ಲಿ ಜೋಫ್ರಾ ಆರ್ಚರ್ 12 ರನ್ ಬಿಟ್ಟು ಕೊಟ್ಟರು. ಇದಾಗ್ಯೂ ಕೊನೆಯ ಓವರ್‌ನಲ್ಲಿ 9 ರನ್ಗಳು ಬೇಕಿದ್ದವು. ಈ ವೇಳೆ ದಾಳಿಗಿಳಿದ ಬ್ರಿಜೇಶ್ ಶರ್ಮಾ 4, 4, 6 ಹೊಡೆಸಿಕೊಳ್ಳುವ ಮೂಲಕ ಪಂದ್ಯವನ್ನು ಕೈಚೆಲ್ಲಿಕೊಂಡರು.
ಇದನ್ನೂ ಓದಿ: ಸಿಕ್ಸರ್‌ಗಳ ಸುರಿಮಳೆಗೆ ಕಾರಣವಾಯ್ತು ಶ್ರೇಯಸ್ ಅಯ್ಯರ್ ಅವರ ಆ ಒಂದು ಸವಾಲು!
ಭಾವುಕರಾದ ವೈಭವ್:
ರಾಜಸ್ಥಾನ್ ರಾಯಲ್ಸ್ ತಂಡವು ಕೊನೆಯ ಓವರ್‌ನಲ್ಲಿ ಸೋಲುತ್ತಿದ್ದಂತೆ ಭಾವುಕರಾದ ವೈಭವ್ ಸೂರ್ಯವಂಶಿ ಮೈದಾನದ ಹೊರಕ್ಕೆ ಬಂದು ಕೂತು ಕಣ್ಣೀರಿಟ್ಟರು. ಹೀಗೆ ವೈಭವ್ ಅಳುತ್ತಿರುವುದನ್ನು ಕಂಡ ಆರ್ಆರ್ ಮತ್ತು ಕೆಕೆಆರ್ ಆಟಗಾರರು ಯುವ ದಾಂಡಿಗನನ್ನು ಸಂತೈಸಿದರು. ಇದೀಗ ವೈಭವ್ ಸೂರ್ಯವಂಶಿ ಅಳುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
