ಐಪಿಎಲ್ 2026 ರ 45ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಕೆಕೆಆರ್ ತಂಡದ ಸ್ಟಾರ್ ಸ್ಪಿನ್ನರ್ ಸುನಿಲ್ ನರೈನ್ ಐಪಿಎಲ್ ಇತಿಹಾಸದಲ್ಲಿ ಬೇರೆ ಯಾವುದೇ ವಿದೇಶಿ ಬೌಲರ್ ಸಾಧಿಸದ ವಿಶಿಷ್ಟ ದಾಖಲೆಯನ್ನು ಸೃಷ್ಟಿಸಿದರು.
ಸನ್ರೈಸರ್ಸ್ ವಿರುದ್ಧದ ಈ ಪಂದ್ಯದಲ್ಲಿ, ಸುನಿಲ್ ನರೈನ್ 4 ಓವರ್ ಬೌಲಿಂಗ್ ಮಾಡಿ, 31 ರನ್ ನೀಡಿ, 2 ವಿಕೆಟ್ ಪಡೆದರು. ಅವರು ಸಾಹಿಲ್ ಅರೋರಾ ಮತ್ತು ಇಶಾನ್ ಕಿಶನ್ ಅವರನ್ನು ಔಟ್ ಮಾಡಿದರು. ಸಾಹಿಲ್ ಅರೋರಾ ಅವರ ವಿಕೆಟ್ ಸುನಿಲ್ ಅವರಿಗೆ ವಿಶೇಷವಾಗಿ ಸ್ಮರಣೀಯವಾಗಿತ್ತು, ಏಕೆಂದರೆ ಇದು ಅವರ 200 ಐಪಿಎಲ್ ವಿಕೆಟ್ ಆಗಿತ್ತು.
ನರೈನ್ ಈಗ 197 ಐಪಿಎಲ್ ಪಂದ್ಯಗಳಲ್ಲಿ 201 ವಿಕೆಟ್ಗಳನ್ನು ಹೊಂದಿದ್ದಾರೆ. ಈ ಮೂಲಕ ಐಪಿಎಲ್ನಲ್ಲಿ 200 ವಿಕೆಟ್ಗಳನ್ನು ಪಡೆದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ. ಯುಜ್ವೇಂದ್ರ ಚಾಹಲ್ ಮತ್ತು ಭುವನೇಶ್ವರ ಕುಮಾರ್ ಈಗಾಗಲೇ ಈ ಮೈಲಿಗಲ್ಲು ಸಾಧಿಸಿದ್ದಾರೆ. ಆದಾಗ್ಯೂ, ವಿದೇಶಿ ಆಟಗಾರನಾಗಿ 200 ವಿಕೆಟ್ಗಳನ್ನು ಪಡೆದ ಮೊದಲ ಬೌಲರ್ ಸುನಿಲ್ ನರೈನ್.
ಇದರಲ್ಲಿ ಇನ್ನೊಂದು ಗಮನಿಸಬೇಕಾದ ಸಂಗತಿಯೆಂದರೆ ನರೈನ್, ಕೋಲ್ಕತ್ತಾ ನೈಟ್ ರೈಡರ್ಸ್ ಪರವಾಗಿಯೇ ಈ ಎಲ್ಲಾ 201 ವಿಕೆಟ್ಗಳನ್ನು ಕಬಳಿಸಿದ್ದಾರೆ. 2012 ರಿಂದ ಕೆಕೆಆರ್ ತಂಡದ ಭಾಗವಾಗಿರುವ ನರೈನ್ ಐಪಿಎಲ್ ಇತಿಹಾಸದಲ್ಲಿ ಒಬ್ಬ ಆಟಗಾರ ಒಂದೇ ತಂಡದ ಪರ 200 ವಿಕೆಟ್ಗಳನ್ನು ಕಬಳಿಸಿದ ದಾಖಲೆಯನ್ನು ನಿರ್ಮಿಸಿದ್ದಾರೆ.
ಕಳೆದ 14 ವರ್ಷಗಳಿಂದ ಕೆಕೆಆರ್ ತಂಡದ ಅವಿಭಾಜ್ಯ ಅಂಗವಾಗಿರುವ ನರೈನ್, ಕೆಕೆಆರ್ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಸಾಧನೆಯು ಸುನಿಲ್ ನರೈನ್ಗೆ ಮಾತ್ರವಲ್ಲದೆ ಇಡೀ ಕೆಕೆಆರ್ ಫ್ರಾಂಚೈಸಿಗೆ ಹೆಮ್ಮೆಯ ಕ್ಷಣವಾಗಿದೆ.
