ಡಾರ್ವಿನ್‌ನ ಮರಾರಾ ಸ್ಟೇಡಿಯಂನಲ್ಲಿ ಆಗಸ್ಟ್ 13ರಿಂದ ಆರಂಭವಾಗಲಿರುವ ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಆಸ್ಟ್ರೇಲಿಯಾ ತನ್ನ ಪ್ಲೇಯಿಂಗ್ ಇಲೆವೆನ್ ಘೋಷಿಸಿದೆ. ಪ್ಯಾಟ್ ಕಮಿನ್ಸ್ ಮುಂದಾಳತ್ವದಲ್ಲಿ ಕಣಕ್ಕಿಳಿಯಲಿರುವ ಈ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಕಾಣಿಸಿಕೊಂಡಿದೆ. ಅದರಲ್ಲೂ ಆರಂಭಿಕನಾಗಿ ಜೇಕ್ ವೆದರಾಲ್ಡ್ ಮತ್ತೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಹೊಸ ಆರಂಭಿಕ ಜೋಡಿ:
ಉಸ್ಮಾನ್ ಖ್ವಾಜಾ ನಿವೃತ್ತಿಯಿಂದ ತೆರವಾಗಿರುವ ಆರಂಭಿಕ ಸ್ಥಾನದಲ್ಲಿ ಜೇಕ್ ವೆದರಾಲ್ಡ್ ಕಣಕ್ಕಿಳಿಯಲಿದ್ದಾರೆ. ದೇಶೀಯ ಕ್ರಿಕೆಟ್ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ವೆದರಾಲ್ಡ್ 2025ರ ಆ್ಯಶಸ್ ಸರಣಿಯಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಖ್ವಾಜಾ ಅವರ ಸ್ಥಾನದಲ್ಲಿ ಆರಂಭಿಕನಾಗಿ ಆಯ್ಕೆಯಾಗಿದ್ದಾರೆ. ಅದರಂತೆ ಬಾಂಗ್ಲಾದೇಶ್ ವಿರುದ್ಧ ಟ್ರಾವಿಸ್ ಹೆಡ್ ಹಾಗೂ ಜೇಕ್ ವೆದರಾಲ್ಡ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ.
ಮಧ್ಯಮ ಕ್ರಮಾಂಕಕ್ಕೆ ಸ್ಟಾರ್ ಬಲ:
ಆಸ್ಟ್ರೇಲಿಯಾದ ಬ್ಯಾಟಿಂಗ್ ಬೆನ್ನೆಲುಬಾಗಿರುವ ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್ ಮತ್ತು ವಿಕೆಟ್ ಕೀಪರ್ ಬ್ಯಾಟರ್ ಅಲೆಕ್ಸ್ ಕ್ಯಾರಿ ಮಧ್ಯಮ ಕ್ರಮಾಂಕವನ್ನು ಬಲಪಡಿಸಲಿದ್ದಾರೆ. ಇವರೊಂದಿಗೆ ಕ್ಯಾಮರೋನ್ ಗ್ರೀನ್ ಮತ್ತು ಬ್ಯೂ ವೆಬ್‌ಸ್ಟರ್ ಇಬ್ಬರು ಪ್ರಮುಖ ಆಲ್‌ರೌಂಡರ್‌ಗಳಾಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಇಬ್ಬರ ಸೇರ್ಪಡೆಯಿಂದಾಗಿ ಬ್ಯಾಕಪ್ ವಿಕೆಟ್ ಕೀಪರ್ ಜೋಶ್ ಇಂಗ್ಲಿಸ್ ಅಂತಿಮ 11ರಿಂದ ಹೊರಗುಳಿಯಬೇಕಾಗಿ ಬಂದಿದೆ.
ಒಂದಾದ ‘ಬಿಗ್ ಫೋರ್’:
ಬೌಲಿಂಗ್ ವಿಭಾಗದಲ್ಲಿ ಆಸ್ಟ್ರೇಲಿಯಾ ತನ್ನ ಅತ್ಯಂತ ಯಶಸ್ವಿ ಮತ್ತು ಅನುಭವಿ ಬೌಲರ್‌ಗಳನ್ನು ಕಣಕ್ಕಿಳಿಸಿದೆ. ನಾಯಕ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಮತ್ತು ಜೋಶ್ ಹೇಝಲ್ವುಡ್ ತ್ರಿವಳಿ ವೇಗಿಗಳಾಗಿ ಕಣಕ್ಕಿಳಿಯಲಿದ್ದಾರೆ. ಇವರೊಂದಿಗೆ ಏಕೈಕ ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿ ಹಿರಿಯ ಆಟಗಾರ ನಾಥನ್ ಲಿಯಾನ್ ಕಾಣಿಸಿಕೊಳ್ಳಲಿದ್ದಾರೆ. ಅದರಂತೆ ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯಾ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿದೆ…
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಜೇಕ್ ವೆದರಾಲ್ಡ್, ಟ್ರಾವಿಸ್ ಹೆಡ್, ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್, ಕ್ಯಾಮರೋನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಬ್ಯೂ ವೆಬ್‌ಸ್ಟರ್, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ (ನಾಯಕ), ನಾಥನ್ ಲಿಯಾನ್, ಜೋಶ್ ಹೇಝಲ್ವುಡ್.
ಇದನ್ನೂ ಓದಿ: 9, 8, 7… ಟೀಮ್ ಇಂಡಿಯಾದ WTC ಫೈನಲ್ ಲೆಕ್ಕಾಚಾರ ಹೀಗಿದೆ
ಆಸ್ಟ್ರೇಲಿಯಾ ಟೆಸ್ಟ್ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಶೇನ್, ಟ್ರಾವಿಸ್ ಹೆಡ್, ಕ್ಯಾಮರೋನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಜೋಶ್ ಇಂಗ್ಲಿಸ್, ಮಿಚೆಲ್ ಸ್ಟಾರ್ಕ್, ಜೋಶ್ ಹೇಝಲ್ವುಡ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್, ಜೇಕ್ ವೆದರಾಲ್ಡ್, ಬ್ಯೂ ವೆಬ್‌ಸ್ಟರ್.
