ಮೈಸೂರು, ಜು.23: ಆಹಾರ ಹುಡುಕಿಕೊಂಡು ಬಂದು ಮುಸುಕಿನ ಜೋಳದ ಹೊಲದಲ್ಲಿ ಬಿಡಾರ ಹೂಡಿದ್ದ ಮರಿಯಾನೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಸುದೀರ್ಘ 6 ಗಂಟೆಗಳ ಕಾರ್ಯಾಚರಣೆ ಬಳಿಕ ಯಶಸ್ವಿಯಾಗಿ ಕಾಡಿಗೆ ಅಟ್ಟಿದ್ದಾರೆ. ಮೈಸೂರು ಜಿಲ್ಲೆ ಸರಗೂರು ತಾಲೂಕಿನ ದಡದಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿತ್ತು. ದಡದಹಳ್ಳಿ ಗ್ರಾಮದ ರೈತ ಮಹಿಳೆ ಸಣ್ಣಮ್ಮ ಎಂಬುವರಿಗೆ ಸೇರಿದ ಜಮೀನಿನಲ್ಲಿ ಬೆಳೆದಿದ್ದ ಜೋಳದ ತೋಟಕ್ಕೆ ಈ ಆನೆ ಮರಿ ನುಗ್ಗಿತ್ತು. 2 ವರ್ಷ ಪ್ರಾಯದ ಈ ಗಂಡಾನೆ ಮರಿ ಕಳೆದ 4 ದಿನಗಳಿಂದ ಅದೇ ಜಮೀನಿನಲ್ಲೇ ತಂಗಿ, ಮುಸುಕಿನ ಜೋಳದ ಬೆಳೆಯನ್ನು ತಿಂದಲ್ಲದೆ ತುಳಿದು ನಾಶಪಡಿಸಿದೆ. ಇದರಿಂದಾಗಿ ಸಣ್ಣಮ್ಮ ಅವರಿಗೆ ಅಪಾರ ಪ್ರಮಾಣದ ಬೆಳೆ ನಷ್ಟ ಉಂಟಾಗಿದೆ. ಸತತವಾಗಿ ಹೊಲದಲ್ಲೇ ತಂಗಿದ್ದ ಆನೆ ಮರಿಯನ್ನು ಕಾಡಿಗೆ ಅಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ 3 ಸಾಕಾನೆಗಳನ್ನು ಕರೆತಂದು ಪ್ರತ್ಯೇಕ ಕಾರ್ಯಾಚರಣೆ ಆರಂಭಿಸಿದರು. ಕಾರ್ಯಾಚರಣೆ ವೇಳೆ ಆನೆ ಮರಿ ಸೆರೆಗೆ ಸಿಗದೆ, ಬೆದರಿ ಹೊಲದಲ್ಲಿ ಅಡ್ಡಾದಿಡ್ಡಿ ಓಡಾಡಲು ಶುರು ಮಾಡಿತು. ಇದರಿಂದಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಆನೆ ಮರಿಯನ್ನು ಸುರಕ್ಷಿತವಾಗಿ ಹೊರತರಲು ಹರಸಾಹಸ ಪಡಬೇಕಾಯಿತು. ಅರಣ್ಯ ಸಿಬ್ಬಂದಿ ಹಾಗೂ ಸಾಕಾನೆಗಳ ತಂಡದ ಸತತ 6 ಗಂಟೆಗಳ ಕಾರ್ಯಾಚರಣೆಯ ನಂತರ, ಮರಿಯಾನೆಗೆ ಯಾವುದೇ ಗಾಯಗಳಾಗದಂತೆ ಸುರಕ್ಷಿತವಾಗಿ ಪಕ್ಕದ ಅರಣ್ಯ ಪ್ರದೇಶದತ್ತ ಕಳುಹಿಸುವಲ್ಲಿ ಇಲಾಖೆಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಮರಿಯಾನೆ ಕಾಡಿಗೆ ಮರಳುತ್ತಿದ್ದಂತೆಯೇ ದಡದಹಳ್ಳಿ ಗ್ರಾಮಸ್ಥರು ನಿರಾಳರಾಗಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
