ಇತ್ತೀಚೆಗೆ ತಮಿಳು ಚಿತ್ರರಂಗದ (Kollywood) ನಾಯಕ ನಟರುಗಳು ಕೆಟ್ಟ ಕಾರಣಗಳಿಗೆ ಹೆಚ್ಚು ಸುದ್ದಿ ಆಗುತ್ತಿದ್ದಾರೆ. ರವಿ ಮೋಹನ್, ಧನುಶ್ ತಮ್ಮ ವಿಚ್ಛೇದನ ಮತ್ತು ಅಫೇರ್ಗಳ ಕಾರಣಕ್ಕೆ ಸುದ್ದಿ ಆದರು. ನಟ ವಿಶಾಲ್ ಹಣಕಾಸು ವಂಚನೆ ಕಾರಣಕ್ಕೆ ಸುದ್ದಿ ಆದರು. ಇದೆಲ್ಲದರ ನಡುವೆ ಇದೀಗ ತಮಿಳಿನ ಜನಪ್ರಿಯ ನಾಯಕ ನಟನೊಬ್ಬನ ವಿರುದ್ಧ ಹೈದರಾಬಾದ್ನಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.
ತಮಿಳು ಮಾತ್ರವೆ ಅಲ್ಲದೆ ತೆಲುಗು ಭಾಷೆಗಳಲ್ಲಿ ನಟಿಸಿರುವ ನಟ ಆರ್ಯ ವಿರುದ್ಧ ಈಗ ಹೈದರಾಬಾದ್ನ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅವರು ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕ್ಯಾಮೆರಾ ಉಪಕರಣಗಳನ್ನು ಬಾಡಿಗೆಗೆ ನೀಡುವ ಕಂಪನಿಯೊಂದು ನಟ ಆರ್ಯ ವಿರುದ್ಧ ದೂರು ದಾಖಲು ಮಾಡಿದ್ದು, ಹಣಕಾಸು ವಂಚನೆ ಮಾಡಿದ್ದಾರೆಂದು ಆರೋಪಿಸಿದೆ.
ದೂರಿನ ಪ್ರಕಾರ, ಆರ್ಯ, ನಿರ್ಮಾಪಕ ವಿನೋದ್ ಮತ್ತು ಪ್ರೊಡಕ್ಷನ್ ಹೌಸ್‌ನ ಪ್ರತಿನಿಧಿಗಳು ‘ಅನಂತನ್ ಕಾಡು’ ಸಿನಿಮಾದ ಚಿತ್ರೀಕರಣಕ್ಕಾಗಿ ಅತ್ಯುತ್ತಮ ಗುಣಮಟ್ಟದ, ಬಲು ದುಬಾರಿಯಾದ ಡಿಜಿಟಲ್ ಕ್ಯಾಮೆರಾಗಳು, ಲೈಟಿಂಗ್ ಯೂನಿಟ್‌ಗಳು ಮತ್ತು ಇತರೆ ಕೆಲವು ಶೂಟಿಂಗ್ಗೆ ಅಗತ್ಯವಿರುವ ಉಪಕರಣಗಳನ್ನು ಮುಂಗಡ ಹಣ ನೀಡಿ ಬಾಡಿಗೆಗೆ ಪಡೆದಿದ್ದರು. ಎಲ್ಲಾ ಬಾಕಿ ಹಣವನ್ನು ಯಾವುದೇ ವಿಳಂಬವಿಲ್ಲದೆ ಪಾವತಿಸುವುದಾಗಿ ಅವರು ಕಂಪನಿಗೆ ಭರವಸೆ ನೀಡಿದ್ದರು, ಆದರೆ ಹಣ ಪಾವತಿ ಮಾಡಿಲ್ಲವೆಂದು ದೂರಿದೆ.
ಕಂಪನಿಯು ದುಬಾರಿ ಉಪಕರಣಗಳನ್ನು ಹೈದರಾಬಾದ್‌ನಿಂದ ಕೇರಳದ ಶೂಟಿಂಗ್ ಲೊಕೇಶನ್ಗೆ ತನ್ನ ಸ್ವಂತ ವೆಚ್ಚದಲ್ಲಿ ಸಾಗಿಸಿದೆ ಮತ್ತು ಶೂಟಿಂಗ್‌ನಾದ್ಯಂತ ಅಗತ್ಯ ಬೆಂಬಲವನ್ನು ನೀಡಿದೆ ಎಂದು ಕಂಪನಿ ಹೇಳಿಕೊಂಡಿದೆ. ಆದಾಗ್ಯೂ, ಚಿತ್ರೀಕರಣ ಮುಗಿದ ನಂತರ, ನಿರ್ಮಾಪಕರು ಒಟ್ಟು 2.12 ಕೋಟಿ ರೂಪಾಯಿಗಳ ಪೈಕಿ 1.80 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಪಾವತಿಸಿಲ್ಲ ಎಂದು ಕಂಪೆನಿ ಆರೋಪ ಮಾಡಿದೆ.
ಇದನ್ನೂ ಓದಿ:ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಕೆ. ಭಾಗ್ಯರಾಜ್ ನಿಧನ; ಡಾ. ರಾಜ್ ರೀತಿ ನೇತ್ರದಾನ
ನಿರ್ಮಾಪಕರು ಬಾಕಿ ಹಣವನ್ನು ಪಾವತಿ ಮಾಡುವುದಾಗಿ ಲಿಖಿತ ರೂಪದಲ್ಲಿ ಒಪ್ಪಿಕೊಂಡಿದ್ದರು ಮತ್ತು ಚಿತ್ರ ಬಿಡುಗಡೆಗೂ ಮುನ್ನ ಬಾಕಿಯನ್ನು ಪಾವತಿಸುವುದಾಗಿ ಭರವಸೆ ನೀಡಿದ್ದರು ಆದರೆ ಫೋನ್ ಕರೆಗಳು ಮತ್ತು ವಾಟ್ಸಾಪ್ ಸಂದೇಶಗಳ ಮೂಲಕ ಪದೇ ಪದೇ ನೆನಪಿಸಿದರೂ, ಹಣ ಪಾವತಿಯಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೆ, ಹಣ ಮರು ಪಾವತಿ ಮಾಡುವಂತೆ ಕೇಳಿದ್ದಕ್ಕೆ ನಟ ಆರ್ಯ, ನಿರ್ಮಾಪಕ ವಿನೋದ್ ಮತ್ತು ಅವರ ವೈಯಕ್ತಿಕ ಸಹಾಯಕ ಕಂಪನಿಯ ಮ್ಯಾನೇಜರ್‌ಗೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ತಮಿಳು ನಟ ಆರ್ಯ ಕೆಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ನಾನ್ ಕಡವುಲ್’, ‘ಅರಣ್ಮಣಿ’, ‘ರಾಜಾ ರಾಣಿ’, ‘ಸರ್ಪಟ್ಟ ಪರಂಬರೈ’, ಮಲಯಾಳಂನ ‘ಉರುಮೈ’, ತೆಲುಗಿನಲ್ಲಿ ಅಲ್ಲು ಅರ್ಜುನ್ ಜೊತೆ ‘ವರುಡು’ ಇನ್ನೂ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ಆರ್ಯ ನಟಿಸಿದ್ದಾರೆ. ನಟನೆ ಜೊತೆಗೆ ಅವರು ನಿರ್ಮಾಪಕರು ಸಹ ಆಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
