ಪ್ರಮಾಣಪತ್ರ ಪಡೆಯದೇ ‘ಸತ್ಲುಜ್’ ಸಿನಿಮಾ ಬಿಡುಗಡೆ: ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆರೋಪ – Kannada News | Satluj movie removed from ZEE5 IB Ministry alleges lack of certification Diljit Dosanjh

ಖ್ಯಾತ ನಟ ದಿಲ್ಜಿತ್ ದೋಸಾಂಜ್ (Diljit Dosanjh) ಅಭಿನಯದ, ತೀವ್ರ ಕುತೂಹಲ ಮೂಡಿಸಿದ್ದ ‘ಸತ್ಲುಜ್’ (Satluj) ಸಿನಿಮಾ ವಿವಾದ ಈಗ ಹೊಸ ತಿರುವು ಪಡೆದುಕೊಂಡಿದೆ. ಅಗತ್ಯವಿರುವ ಸೆನ್ಸಾರ್ ಪ್ರಮಾಣಪತ್ರ ಪ್ರಕ್ರಿಯೆಯನ್ನು ಪೂರ್ಣಗೊಳಿಸದೆಯೇ ಚಿತ್ರತಂಡ ಈ ಸಿನಿಮಾವನ್ನು ZEE5 ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆ ಮಾಡಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ (I&B Ministry) ಗಂಭೀರ ಆರೋಪ ಮಾಡಿದೆ. ಹನಿ ಟ್ರೆಹನ್ ನಿರ್ದೇಶನದ ಈ ಸಿನಿಮಾ ಜುಲೈ 3ರಂದು ಬಿಡುಗಡೆ ಆಗಿತ್ತು. ಆದರೆ ಆದಾದ ಕೇವಲ ಎರಡೇ ದಿನಗಳಲ್ಲಿ ಭಾರತದಲ್ಲಿ ಇದರ ಸ್ಟ್ರೀಮಿಂಗ್ ಸ್ಥಗಿತಗೊಳಿಸಲಾಗಿತ್ತು.

ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಸೆನ್ಸಾರ್ ಮಂಡಳಿಯಿಂದ ತೊಂದರೆ ಎದುರಾದ ಕಾರಣ, ನಿಗದಿಪಡಿಸಿದ ನಿಯಮಗಳನ್ನು ಗಾಳಿಗೆ ತೂರಿ ಚಿತ್ರದ ನಿರ್ಮಾಪಕರು ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಮಾಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ನಿಯಮ ಉಲ್ಲಂಘನೆ ಆರೋಪ

‘ಎಎನ್​ಐ’ ನ್ಯೂಸ್ ಏಜೆನ್ಸಿ ವರದಿಯ ಪ್ರಕಾರ, ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಯೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘ಸತ್ಲುಜ್ ಸಿನಿಮಾಗೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಬೇಕಾದ ಯಾವುದೇ ಅಧಿಕೃತ ಪ್ರಮಾಣಪತ್ರ ಸಿಕ್ಕಿರಲಿಲ್ಲ. ಸೆನ್ಸಾರ್ ಪ್ರಕ್ರಿಯೆಗೆ ಒಳಪಡುವ ಬದಲು, ಚಿತ್ರದ ನಿರ್ಮಾಪಕರು ಸಿನಿಮಾದ ಹೆಸರನ್ನು ಬದಲಾಯಿಸಿ ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಮಾಡಿದ್ದಾರೆ’ ಎಂದು ಹೇಳಿದ್ದಾರೆ.

ಸರ್ಕಾರದಿಂದ ಯಾವುದೇ ಅನುಮತಿ ಪಡೆದಿಲ್ಲ:

ಈ ನಡೆ ಮಾಹಿತಿ ತಂತ್ರಜ್ಞಾನ (ಮಧ್ಯಸ್ಥಿಕೆ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ನಿಯಮಗಳನ್ನು ಉಲ್ಲಂಘಿಸಿದೆ ಎಂದು ಸಚಿವಾಲಯ ಆರೋಪಿಸಿದೆ. ಆದರೆ ಯಾವ ನಿರ್ದಿಷ್ಟ ನಿಯಮ ಉಲ್ಲಂಘನೆಯಾಗಿದೆ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಿಲ್ಲ. ಅಲ್ಲದೆ, ಒಟಿಟಿಯಲ್ಲಿ ಬಿಡುಗಡೆ ಮಾಡುವ ಮುನ್ನ ಸರ್ಕಾರದಿಂದ ಯಾವುದೇ ಅನುಮತಿ ಅಥವಾ ಮರುಪರಿಶೀಲನೆಗೆ ಚಿತ್ರತಂಡ ಅರ್ಜಿ ಸಲ್ಲಿಸಿರಲಿಲ್ಲ ಎಂದೂ ಸಚಿವಾಲಯ ಹೇಳಿದೆ.

‘ಪಂಜಾಬ್ 95’ ಹೆಸರಿನಿಂದ ‘ಸತ್ಲುಜ್’ವರೆಗಿನ ವಿವಾದ

ಈ ಸಿನಿಮಾ ಮೊದಲು ‘ಪಂಜಾಬ್ 95’ ಎಂಬ ಹೆಸರಿನಲ್ಲಿ ಸಿದ್ಧವಾಗಿತ್ತು. ಪಂಜಾಬ್‌ನ ಕರಾಳ ದಿನಗಳ ಅವಧಿಯಲ್ಲಿ ನಡೆದ ನಿಗೂಢ ನಾಪತ್ತೆ ಪ್ರಕರಣಗಳು ಮತ್ತು ಕಾನೂನುಬಾಹಿರ ಸಾಮೂಹಿಕ ಶವಸಂಸ್ಕಾರಗಳ ಬಗ್ಗೆ ತನಿಖೆ ನಡೆಸಿದ್ದ ಮಾನವ ಹಕ್ಕುಗಳ ಹೋರಾಟಗಾರ ಜಸ್ವಂತ್ ಸಿಂಗ್ ಖಾಲ್ರಾ ಅವರ ಜೀವನ ಆಧಾರಿತ ಸಿನಿಮಾ ಇದಾಗಿದೆ.

ಭಾರತದಲ್ಲಿ ‘ಸತ್ಲುಜ್’ ಸಿನಿಮಾ ನಿಷೇಧ; ಡೌನ್‌ಲೋಡ್ ಕಾಪಿ ಹಂಚಿಕೊಳ್ಳಿ ಎಂದ ನಟ ದಿಲ್ಜಿತ್ ದೋಸಾಂಜ್

ಈ ಚಿತ್ರವನ್ನು 2022ರಲ್ಲೇ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್​ಗೆ ಸಲ್ಲಿಸಲಾಗಿತ್ತು. ಆಗ ಮಂಡಳಿಯು ಸಿನಿಮಾದ ಹೆಸರು ಬದಲಾವಣೆ ಸೇರಿ 27 ಕಟ್‌ಗಳನ್ನು ಸೂಚಿಸಿತ್ತು. ಮಂಡಳಿಯ ನಿರ್ಧಾರವನ್ನು ಚಿತ್ರತಂಡ ಕೋರ್ಟ್‌ನಲ್ಲಿ ಪ್ರಶ್ನಿಸಿತು. ತದನಂತರ ರಚನೆಯಾದ ಪರಿಶೀಲನಾ ಸಮಿತಿಯು ಬರೋಬ್ಬರಿ 120ಕ್ಕೂ ಹೆಚ್ಚು ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೂಚಿಸಿತ್ತು. ವರ್ಷಗಳ ಕಾನೂನು ಹೋರಾಟದ ನಂತರ, ಚಿತ್ರತಂಡ ಯಾವುದೇ ಕಟ್‌ಗಳಿಲ್ಲದೆ ಮೂಲ ರೂಪದಲ್ಲೇ ಸಿನಿಮಾವನ್ನು ‘ಸತ್ಲುಜ್’ ಹೆಸರಿನಲ್ಲಿ ZEE5ನಲ್ಲಿ ಬಿಡುಗಡೆ ಮಾಡಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *