All posts by nagaraj11081993

ಬಂಡೀಪುರ ಸಫಾರಿ ವಿರುದ್ಧ ಮತ್ತೆ ಸಿಡಿದೆದ್ದ ರೈತರು: ನಾಳೆಯಿಂದ ಆಮರಣಾಂತ ಧರಣಿ, ಕಾರಣವೇನು?

ಬಂಡೀಪುರ ಸಫಾರಿ ವಿರುದ್ಧ ಮತ್ತೆ ಸಿಡಿದೆದ್ದ ರೈತರು: ನಾಳೆಯಿಂದ ಆಮರಣಾಂತ ಧರಣಿ, ಕಾರಣವೇನು?

ಚಾಮರಾಜನಗರ, ಏಪ್ರಿಲ್ 06: ಭಾರಿ ವಿರೋಧದ ನಡುವೆಯೂ ಬಂಡೀಪುರ ಸಫಾರಿಯನ್ನ (Bandipur Safari) ಸರ್ಕಾರ ರೀ ಓಪನ್ ಮಾಡಿತ್ತು. ಇದೀಗ ಸಫಾರಿ ಆರಂಭವಾದ ಬೆನ್ನಲ್ಲೇ ಮತ್ತೆ ಮಾನವ ಮತ್ತು ಕಾಡು ಪ್ರಾಣಿ ಸಂಘರ್ಷ ಹೆಚ್ಚಾಗಿದೆ. ಹೀಗಾಗಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದ ವಿರುದ್ಧ ಸಿಡಿದೆದ್ದಿರುವ ರೈತರು ಸಫಾರಿ ಬಂದ್​​ಗೆ ಆಗ್ರಹಿಸಿ ನಾಳೆಯಿಂದ ಅಂದರೆ ಏಪ್ರಿಲ್​ 07ರಿಂದ ಆಮರಣಾಂತ ಧರಣಿಗೆ ಸಜ್ಜಾಗಿದ್ದಾರೆ.

ಪ್ರತಿ ತಾಲೂಕಿನಲ್ಲಿ ಧರಣಿ

ಕಳೆದೊಂದು ವರ್ಷದಿಂದ ಮಾನವ ಮತ್ತು ಕಾಡು ಪ್ರಾಣಿ ಸಂಘರ್ಷಕ್ಕೆ ಸುದ್ದಿ ಆಗುತ್ತಿರುವ ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿಂದ ಮತ್ತೆ ಹುಲಿ, ಚಿರತೆ ಹಾಗೂ ಕಾಡಾನೆ ದಾಳಿ ಹೆಚ್ಚಾಗಿದೆ. ಗುಂಡ್ಲುಪೇಟೆ ಭಾಗದಲ್ಲೇ ಅತಿ ಹೆಚ್ಚು ಮಾನವ ಹಾಗೂ ಕಾಡು ಪ್ರಾಣಿ ಸಂಘರ್ಷಕ್ಕೆ ಬಂಡೀಪುರ ಸಫಾರಿ ರೀ ಓಪನ್ ಆಗಿರುವುದೇ ಕಾರಣ ಎಂಬ ಕೂಗು ಇದೀಗ ಹೆಚ್ಚಾಗಿದೆ. ಏಪ್ರಿಲ್​ 07ರಿಂದ ರಾಜ್ಯ ರೈತ ಸಂಘದ ಹೊನ್ನೂರು ಪ್ರಕಾಶ್ ಬಣದಿಂದ ಜಿಲ್ಲಾದ್ಯಂತ ಪ್ರತಿ ತಾಲೂಕಿನಲ್ಲಿ ಆಮರಣಾಂತ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ.

ಇದನ್ನೂ ಓದಿ: ಗಡಿ ಜಿಲ್ಲೆ ಚಾಮರಾಜನಗರದ ರೈತರಿಗೆ ಕಾಡಾನೆ ಕಾಟ: ಬೆಳೆದ ಬೆಳೆ ಕೈಸೇರುವ ಮುನ್ನವೇ ಸರ್ವನಾಶ!

ಭೀಮನ ಬೀಡು ಬರ್ಗಿ ಪಡಗೂರಿನಲ್ಲಿ ಹುಲಿ ಉಪಟಳ ಮಿತಿಮೀರಿದೆ. ಗ್ರಾಮದ ಬಳಿಯ ಜಮೀನುಗಳಲ್ಲಿ ಹುಲಿಗಳು ಆಶ್ರಯ ಪಡೆದುಕೊಳ್ಳುತ್ತಿವೆ. ಹಸು, ಕುರಿ, ಮೇಕೆ ಸೇರಿದಂತೆ ಜಾನುವಾರುಗಳ ಮೇಲೆ ದಾಳಿ ಹೆಚ್ಚುತ್ತಿವೆ. ಮಂಚಹಳ್ಳಿ ಗ್ರಾಮದ ಜಮೀನುಗಳಿಗೆ ಕಾಡಾನೆಗಳು ಲಗ್ಗೆ ಇಡುತ್ತಿವೆ. ಬೆಳೆಗಳನ್ನ ತಿಂದು ತೇಗಿದ್ದು, ಅಲ್ಲದೆ ಶೆಡ್ ಹಾಗೂ ಮೋಟಾರು ಪೈಪ್​ಗಳನ್ನ ತುಳಿದು ನಾಶಪಡಿಸುತ್ತಿವೆ.’

ಸಫಾರಿ ಬಂದ್ ಒಂದೇ ಪರಿಹಾರ

ಈ ಎಲ್ಲಾ ಕಾರಣಗಳಿಗೆ ಶಾಶ್ವತ ಪರಿಹಾರ ಅಂತ ಹೇಳಿದರೆ ಆರಂಭವಾಗಿರುವ ಸಫಾರಿಯನ್ನ ಬಂದ್ ಮಾಡುವುದು. ಜೊತೆಗೆ ಕೇರಳಕ್ಕೆ ಅಕ್ರಮವಾಗಿ ಸಾಗಾಟ ಆಗುತ್ತಿರುವ ಮರಳು ಮತ್ತು ಖನಿಜ ಸಂಪನ್ಮೂಲಗಳನ್ನ ತಡೆ ಹಿಡಿಯಬೇಕೆಂಬ ಆಶಯಗಳೊಂದಿಗೆ ನಾಳೆಯಿಂದ ಹೊನ್ನೂರು ಪ್ರಕಾಶ್ ಬಣ ಪ್ರತಿ ತಾಲೂಕಿನಲ್ಲಿ ಒಂದೊಂದು ದಿನ ಪ್ರತಿಭಟನೆ ನಡೆಸುವುದಕ್ಕೆ ಮುಂದಾಗಿದೆ.

ಇದನ್ನೂ ಓದಿ: ರೆಸಾರ್ಟ್ ಮಾಲೀಕರ ಲಾಬಿಗೆ ಒಳಗಾದ್ರಾ ಬಂಡೀಪುರ ಅರಣ್ಯ ಸಿಬ್ಬಂದಿ? ರೈತರ ವಿರುದ್ದವೇ ದಬ್ಬಾಳಿಕೆ

ಒಟ್ಟಿನಲ್ಲಿ ರೆಸಾರ್ಟ್ ಮಾಲೀಕರು ಕೆಲ ಹಾಲಿ, ಮಾಜಿ ಶಾಸಕರ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರ ಸಫಾರಿ ಮತ್ತೆ ಪುನರಾರಂಭ ಮಾಡಿದ್ದು, ಇದೀಗ ಮತ್ತೆ ಸರ್ಕಾರ ಸಫಾರಿ ಬಂದ್ ಮಾಡಿ ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತಾ, ಇಲ್ಲವಾ ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಇರಾನ್‌ನಿಂದ ಬಂದಿದ್ದ ದಂಪತಿ ಕೊಡಗಿನಲ್ಲೇ ಲಾಕ್‌: ಅಲ್ಲಿ ಮಕ್ಕಳು, ಇಲ್ಲಿ ಪೋಷಕರು!

ಮಡಿಕೇರಿ, (ಏಪ್ರಿಲ್ 06):  ಯುದ್ಧ ಪರಿಸ್ಥಿತಿಯಿಂದಾಗಿ ದಂಪತಿ ಇರಾನ್‌ಗೆ (Iran) ಮರಳಲಾಗದೆ ಕೊಡಗು (Kodagu) ಜಿಲ್ಲೆಯ ಮೂರ್ನಾಡು ಸಮೀಪದ ಕಾಂತೂರಿನಲ್ಲಿ ಪರಿತಪಿಸುವಂತಾಗಿದೆ. ಕಾಂತೂರು ನಿವಾಸಿ ಪತ್ನಿ ನವೀನಾ ಹಾಗೂ ಇರಾನ್ ಮೂಲದ ಪತಿ ನಾದರ್ ಕೊಡಗಿನಲ್ಲಿಯೇ ಸಿಲುಕಿರುವ ದಂಪತಿ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಹಲವು ದೇಶಗಳ ವಾಯು ಪ್ರದೇಶ ಬಂದ್ ಆಗಿದ್ದು, ವಿಮಾನ ಸಂಚಾರವೂ ಅಸ್ತವ್ಯಸ್ತಗೊಂಡಿದೆ. ಹೀಗಾಗಿ ದಂಪತಿ ಕೊಡಗಿನಲ್ಲಿಯೇ ಉಳಿಯುವಂತಾಗಿದೆ.

ಕೊಡಗು ಮೂಲದ ನವೀನಾ, 30 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಆ ವೇಳೆ ಇರಾನ್‌ನ ನಾದರ್‌ ಅವರೊಂದಿಗೆ ಪರಿಚಯವಾಗಿದ್ದು, ಬಳಿಕ ಪ್ರೀತಿಸಿ ವಿವಾಹವಾದ್ದರು. ನಂತರ ದಂಪತಿ ಇರಾನ್‌ನ ಬೋಜ್‌ನೂರ್‌ ಪ್ರದೇಶದಲ್ಲಿ ನೆಲೆಸಿತ್ತು. ಆದ್ರೆ, ಇದೀಗ ದೀರ್ಘ ರಜೆಗೆಂದು ಇರಾನ್​ ನಿಂದ ತವರುಮನೆ ಕೊಡಗಿಗೆ ಆಗಮಿಸಿದ್ದು, ಇಲ್ಲೇ ಸಿಲುಕಿ ಪರದಾಡುವಂತಾಗಿದೆ.

ಇದನ್ನೂ ನೋಡಿ: ಬಾವಿಗೆ ಬಿದ್ದು 3 ದಿನ ಬಳಿಕ ಬದುಕಿ ಬಂದ ವೃದ್ಧ: ಗ್ಯಾಸ್ ಸಿಲಿಂಡರ್ OTP ವ್ಯಕ್ತಿಯ ಜೀವ ಉಳಿಸಿದ್ಹೇಗೆ ಗೊತ್ತಾ?

ದಂಪತಿಗೆ ಇಬ್ಬರು ಮಕ್ಕಳಿದ್ದು, ಒಬ್ಬರು ಸಿವಿಲ್ ಇಂಜಿನಿಯರ್ ಆಗಿದ್ದು, ಮತ್ತೊಬ್ಬರು ಆರ್ಕಿಟೆಕ್ಟ್ (ವಾಸ್ತುಶಿಲ್ಪಿ) ಆಗಿದ್ದಾರೆ. ಈ ಕುಟುಂಬವು ಇರಾನಿನಲ್ಲಿ ದಾಳಿಂಬೆ, ಗ್ರೇಪ್, ಆಪಲ್, ಬ್ಲೂಬೆರಿ, ಬಾದಾಮಿ, ಏಪ್ರಿಕೋಟ್, ಖರ್ಜೂರ, ಪಿಸ್ತಾ ಸೇರಿದಂತೆ ಹಲವು ವಿದೇಶಿ ಹಣ್ಣುಗಳ ಫಾರ್ಮ್‌ಗಳನ್ನ ಹೊಂದಿದ್ದು, ಜೊತೆಗೆ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದಾರೆ.

ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ಕೊಡಗಿಗೆ ಬರುತ್ತಿದ್ದ ದಂಪತಿ, ಮಾರ್ಚ್‌ನಲ್ಲಿ ಮರಳಿ ಇರಾನ್‌ಗೆ ತೆರಳುತ್ತಿದ್ದರು. ಈ ಬಾರಿಯೂ ಡಿಸೆಂಬರ್‌ನಲ್ಲಿ ಕೊಡಗಿಗೆ ಬಂದಿದ್ದು, ಮಾರ್ಚ್ 16 ರಂದು ಬೆಂಗಳೂರಿನಿಂದ ಶಾರ್ಜಾ ಮೂಲಕ ಇರಾನ್‌ನ ಬೋಜ್‌ನೂರ್‌ಗೆ ತೆರಳಲು ವಿಮಾನ ಟಿಕೆಟ್ ಬುಕ್ ಮಾಡಿದ್ದರು. ಆದರೆ ಅಮೆರಿಕ–ಇರಾನ್ ಯುದ್ಧದ ಪರಿಣಾಮವಾಗಿ ವಿಮಾನ ರದ್ದಾಯಿತು. ನಂತರ ಏಪ್ರಿಲ್ 15 ರಂದು ಮತ್ತೊಮ್ಮೆ ಪ್ರಯಾಣ ಬುಕ್ ಮಾಡಿದ್ದರು, ಆ ವಿಮಾನವೂ ರದ್ದಾಗಿದೆ. ಇದರಿಂದ ದಂಪತಿ ಇದೀಗ ಕೊಡಗಿನಲೇ ಉಳಿಯುವಂತಾಗಿದೆ.

ಇನ್ನೂ ನವೀನಾ ಪತಿ ನಾದೀರ್ ಪಾಸ್‌ಪೋರ್ಟ್‌ ಅವಧಿ ಮುಕ್ತಾಯಗೊಳ್ಳುತ್ತದೆ. ಹೀಗಾಗಿ ಅದರೊಳಗೆ ಇವರು ಇರಾನ್ ತೆರಳಬೇಕಿದೆ. ಇವರಿಬ್ಬರ ಇಬ್ಬರು ಮಕ್ಕಳು ಇರಾನ್ ನಲ್ಲೇ ಉಳಿದುಕೊಂಡಿದ್ದು, ಸಂಪರ್ಕ ಸಾಧ್ಯವಾಗುತ್ತಿಲ್ಲ. ಇಂಟರ್ನೆಟ್ ಸ್ಥಗಿತವಾಗಿರುವುದಿರಂದ ಅವರಾಗಿಯೇ ಇವರಿಗೆ ಮೆಸೇಜ್ ಮಾಡುವವರೆಗೂ ಸಂಪರ್ಕ ಸಾಧ್ಯವಾಗುವುದಿಲ್ಲ. ಇನ್ನು ಯುದ್ಧದ ಬಗ್ಗೆ ಪ್ರತಿಕ್ರಿಯೆ ನೀಡಿದ ನಾದೀರ್ ಅಜೀಜಿ, ನನ್ನ ಪ್ರೀತಿಯ ದೇಶ ಮತ್ತು ಜನರ ಬಗ್ಗೆ ಬಹಳ ಚಿಂತೆಯಾಗಿದೆ. ಇಂತಹ ಸಂದರ್ಭದಲ್ಲಿ ನಾವು ಅಲ್ಲಿರಬೇಕಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

Source link

KKR vs PBKS IPL 2026 Live Score: ಟಾಸ್ ಗೆದ್ದ ಕೆಕೆಆರ್ ಬ್ಯಾಟಿಂಗ್ ಆಯ್ಕೆ – Kannada News | Kolkata Knight Riders vs Punjab Kings IPL 2026 Live Cricket Score KKR vs PBKS Match on 6th April latest news in Kannada

ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಐಪಿಎಲ್ 19 ನೇ ಸೀಸನ್​ನ ತನ್ನ ಮೂರನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಿದೆ. ಈ ಎರಡೂ ತಂಡಗಳ ನಡುವಿನ ಈ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯುತ್ತಿದೆ. ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಕೆಕೆಆರ್ ಮೊದಲ ಎರಡು ಪಂದ್ಯಗಳಲ್ಲಿ ಸೋತಿದ್ದರೆ, ಶ್ರೇಯಸ್ ಅಯ್ಯರ್ ಮೊದಲ ಎರಡು ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ. ಆದ್ದರಿಂದ, ಪಂಜಾಬ್ ಸೋಮವಾರ ಮೈದಾನಕ್ಕಿಳಿದು ಸತತ ಮೂರನೇ ಪಂದ್ಯವನ್ನು ಗೆದ್ದು ಹ್ಯಾಟ್ರಿಕ್ ಗೆಲುವಿನ ಇರಾದೆಯಲ್ಲಿದ್ದರೆ, ಮತ್ತೊಂದೆಡೆ, ಕೆಕೆಆರ್ ಸೋಲಿನ ಹ್ಯಾಟ್ರಿಕ್ ತಪ್ಪಿಸುವ ಸವಾಲನ್ನು ಎದುರಿಸಲಿದೆ.

Source link

ಕೊಲನ್‌ ಕ್ಯಾನ್ಸರ್ ಎಷ್ಟು ಅಪಾಯಕಾರಿ ಗೊತ್ತಾ? ಹೇಗಿರುತ್ತೆ ಇದರ ಲಕ್ಷಣಗಳು? ಡಾ ಅನುರಾಗ್‌ ಶೆಟ್ಟಿ ನೀಡಿರುವ ಮಾಹಿತಿ ಇಲ್ಲಿದೆ

ಕೊಲನ್‌ ಕ್ಯಾನ್ಸರ್ (Colon Cancer) ಅಥವಾ ದೊಡ್ಡ ಕರುಳಿನ ಕ್ಯಾನ್ಸರ್ ಬಗ್ಗೆ ನೀವು ಕೇಳಿರಬಹುದು. ಅತಿ ಹೆಚ್ಚು ಕಾಣಿಸಿಕೊಳ್ಳುವ ಕ್ಯಾನ್ಸರ್ ಗಳಲ್ಲಿ ಇದು ಒಂದಾಗಿದೆ. ಜಾಗತಿಕವಾಗಿ ಕ್ಯಾನ್ಸರ್ (Cancer) ನಿಂದ ಸಂಭವಿಸುವ ಸಾವುಗಳಿಗೆ ಎರಡನೇ ಪ್ರಮುಖ ಕಾರಣವಾಗಿದೆ. ಇದನ್ನು “ಸೈಲೆಂಟ್‌” ಕ್ಯಾನ್ಸರ್ ಎಂದು ಕೂಡ ಕರೆಯಲಾಗುತ್ತದೆ, ಏಕೆಂದರೆ ಇದರ ಆರಂಭಿಕ ಹಂತಗಳಲ್ಲಿ ಯಾವುದೇ ರೀತಿಯ ಲಕ್ಷಣಗಳು ಕೂಡ ಕಂಡುಬರುವುದಿಲ್ಲ. ಆದರೆ ಈ ರೀತಿ ಕಂಡು ಬರುವ ಕ್ಯಾನ್ಸರ್ ಗೆ ಕಾರಣವೇನು, ಲಕ್ಷಣಗಳನ್ನು ಗುರುತಿಸುವುದು ಹೇಗೆ, ಕೊಲನ್‌ ಕ್ಯಾನ್ಸರ್ ಗುಣಪಡಿಸಬಹುದೇ ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಏಕೆಂದರೆ ಈ ಬಗ್ಗೆ ತಿಳಿದಿದ್ದಾಗ ಸಮಸ್ಯೆಗಳನ್ನು ಮುಂಚಿತವಾಗಿಯೇ ಗುರುತಿಸಿ ಅದನ್ನು ತಡೆಯಬಹುದು. ಮಂಗಳೂರು ಕೆಎಂಸಿ ಆಸ್ಪತ್ರೆಯ ಮೆಡಿಕಲ್ ಗ್ಯಾಸ್ಟ್ರೊಎಂಟರಾಲಾಜಿಸ್ಟ್, ಡಾ ಅನುರಾಗ್ ಶೆಟ್ಟಿ ಅವರು ಈ ಕುರಿತು ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಕೊಲನ್‌ ಕ್ಯಾನ್ಸರ್ ಲಕ್ಷಣಗಳು:

ಕರುಳಿನ ಕಾರ್ಯದಲ್ಲಿ ಬದಲಾವಣೆಗಳು (ಮಲಬದ್ಧತೆ ಅಥವಾ ಅತಿಸಾರ), ಮಲದ ಗಾತ್ರದಲ್ಲಿ ಬದಲಾವಣೆ, ಮಲದಲ್ಲಿ ರಕ್ತ ಬರುವುದು, ಕಾರಣವಿಲ್ಲದೆ ತೂಕ ಕಡಿಮೆಯಾಗುವುದು, ಹೊಟ್ಟೆ ನೋವು, ದೌರ್ಬಲ್ಯ, ಕಡಿಮೆ ಹಿಮೋಗ್ಲೋಬಿನ್ (ರಕ್ತಹೀನತೆ), ಕರುಳಿನ ಅಡಚಣೆಯಿಂದ ಉಂಟಾಗುವ ನಿರಂತರ ವಾಂತಿ ಅಥವಾ ಮಲ ವಿಸರ್ಜನೆ ಇವು ಕೊಲನ್ ಕ್ಯಾನ್ಸರ್‌ನ ಆರಂಭಿಕ ಹಂತಗಳಲ್ಲಿ ಕಾಣಿಸಬಹುದಾದ ಲಕ್ಷಣಗಳಾಗಿವೆ.

ಜೀವನಶೈಲಿಯೂ ಕಾರಣವಾಗಬಹುದೇ?

ದೊಡ್ಡ ಕರುಳಿನ ಕ್ಯಾನ್ಸರ್ ವಿಷಯದಲ್ಲಿ ಜೀವನಶೈಲಿ ಅಂಶಗಳು ಸಹ ಮಹತ್ವದ ಪಾತ್ರ ವಹಿಸುತ್ತವೆ. ಬೊಜ್ಜು ಮತ್ತು ಜಡ ಜೀವನಶೈಲಿ ಅಪಾಯಕಾರಕ ಅಂಶಗಳಾಗಿವೆ, ಆದರೆ ದೈಹಿಕ ಚಟುವಟಿಕೆ ಕೊಲನ್‌ ಕ್ಯಾನ್ಸರ್ ಅಪಾಯವನ್ನು 19–24% ರಷ್ಟು ಕಡಿಮೆ ಮಾಡಬಹುದು. ರೋಗ ತಡೆಗಟ್ಟುವ ಕ್ರಮಗಳಲ್ಲಿ ಸಮರ್ಪಕ ಫೈಬರ್ ಮತ್ತು ದ್ರವ ಸೇವನೆ, ಮುಖ್ಯವಾಗಿವೆ ಹಾಗೇ ಸಂಸ್ಕರಿಸಿದ ಆಹಾರಗಳು ಮತ್ತು ಕೆಂಪು ಮಾಂಸದ ಸೇವನೆಯನ್ನು ಕಡಿಮೆ ಮಾಡುವುದು, ಧೂಮಪಾನ ಮತ್ತು ಮದ್ಯಪಾನ ನಿಲ್ಲಿಸುವುದು ಕೂಡ ಒಳಗೊಂಡಿದೆ.

ಇದನ್ನೂ ಓದಿ: ಮೌತ್ ಕಾಂಡೋಮ್‌ ಎಂದರೇನು? ಇದು ಓರಲ್ ಕ್ಯಾನ್ಸರ್‌ನಿಂದ ರಕ್ಷಣೆ ನೀಡುತ್ತದೆಯೇ?

ರೋಗ ಪತ್ತೆ ಹೇಗೆ?

ಮಲ ಪರೀಕ್ಷೆ, ಕೊಲೊನೋಸ್ಕೊಪಿ ಮೂಲಕ ಆರಂಭಿಕ ಹಂತದಲ್ಲಿ ಪಾಲಿಪ್ಸ್‌ನಂತಹ ಕ್ಯಾನ್ಸರ್ ಪೂರ್ವ ಲಕ್ಷಣಗಳನ್ನು ಪತ್ತೆಹಚ್ಚಬಹುದಾಗಿದೆ. ಪಾಲಿಪ್ಸ್‌ಗಳು ಪತ್ತೆಯಾದಲ್ಲಿ ಎಂಡೊಸ್ಕೊಪಿ ಮೂಲಕ ತೆಗೆದುಹಾಕಬಹುದು ಇದರಿಂದ ಕ್ಯಾನ್ಸರ್ ಗೆ ಕಾರಣವಾಗುವುದನ್ನು ತಡೆಯಬಹುದು. ಪಾಶ್ಚಾತ್ಯ ಮಾರ್ಗಸೂಚಿಗಳ ಪ್ರಕಾರ 45 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರು ಅಥವಾ ಹೆಚ್ಚಿನ ಅಪಾಯದಲ್ಲಿರುವವರು ಇನ್ನಷ್ಟು ಮುಂಚೆಯೇ ನಿಯಮಿತ ಸ್ಕ್ರೀನಿಂಗ್ ಮಾಡಿಸಿಕೊಳ್ಳುವುದು ಒಳ್ಳೆಯದು. ಕುಟುಂಬದಲ್ಲಿ ಕೊಲನ್ ಕ್ಯಾನ್ಸರ್ ಇತಿಹಾಸ ಇರುವವರು, ಕರುಳಿನ ಉರಿಯೂತದ ಕಾಯಿಲೆ ಹೊಂದಿರುವವರು ಅಥವಾ ಕೆಲವು ಆನುವಂಶಿಕ ಸಿಂಡ್ರೋಮ್‌ಗಳನ್ನು ಹೊಂದಿರುವವರಲ್ಲಿ ಕೊಲನ್‌ ಕ್ಯಾನ್ಸರ್ ಕಂಡುಬರುವ ಸಾಧ್ಯತೆ ಅಧಿಕವಾಗಿರುತ್ತದೆ.

ಕೊಲನ್‌ ಕ್ಯಾನ್ಸರ್ ಗುಣಪಡಿಸಬಹುದೇ?

ಆರಂಭಿಕ ಹಂತದಲ್ಲೇ ಪತ್ತೆಯಾದಲ್ಲಿ ಕೊಲನ್‌ ಕ್ಯಾನ್ಸರ್ ಗುಣಪಡಿಸಬಹುದಾಗಿದೆ. ರೋಗ ಬೇಗ ಪತ್ತೆಯಾದಲ್ಲಿ ರೋಗಿ ಬದುಕುಳಿಯುವ ಸಾಧ್ಯತೆ ಶೇ. 92ರಷ್ಟಿದ್ದು, ರೋಗ ಮುಂದುವರೆದಲ್ಲಿ ಬದುಕುಳಿಯುವ ಸಾಧ್ಯತೆ ಶೇ. 16ಕ್ಕೆ ಕುಸಿಯುತ್ತದೆ. ಸಕಾಲಿಕ ತಪಾಸಣೆ, ಆರೋಗ್ಯಕರ ಜೀವನಶೈಲಿ ರೋಗ ಗುಣಪಡಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗಂಡನನ್ನು ಬಿಟ್ಟು ಪ್ರಿಯಕರನ ಜೊತೆ ಬದುಕಲು 19 ವರ್ಷದ ಯುವತಿಗೆ ಕೋರ್ಟ್ ಒಪ್ಪಿಗೆ

ನವದೆಹಲಿ, ಏಪ್ರಿಲ್ 6: 19 ವರ್ಷದ ಯುವತಿಗೆ ತನ್ನ ಗಂಡನ ಜೊತೆ ಬದುಕುವುದು ಇಷ್ಟವಿರಲಿಲ್ಲ. ಮನೆಯಿಂದ ಬರುವಾಗ ಆಕೆಯ ಗಂಡ ಆಕೆಯ ಮನವೊಲಿಸಿ ತನ್ನ ಜೊತೆಗೆ ಇರಲು ಒಪ್ಪಿಸಿ ಕರೆತಂದಿದ್ದ. ಆದರೆ, ಆಕೆಯ ಪತಿ, ಪೋಷಕರು ಮತ್ತು ಆಕೆಯ ಪ್ರೇಮಿ ನ್ಯಾಯಾಲಯದ ಹೊರಗೆ ಕಾಯುತ್ತಿದ್ದಾಗ ಆಕೆ ಕೋರ್ಟ್​ನೊಳಗೆ ನ್ಯಾಯಾಧೀಶರ ಮುಂದೆ ತಾನು ಪ್ರಿಯಕರನ ಜೊತೆಯೇ ಹೋಗುತ್ತೇನೆ ಎಂದು ನಿರ್ಧಾರ ತಿಳಿಸಿದಳು. “ನಾನು ವಯಸ್ಕಳು. ನಾನು ನನ್ನ ಸ್ವಂತ ಇಚ್ಛೆಯ ಮೇಲೆ ಬದುಕುತ್ತಿದ್ದೇನೆ. ನನ್ನ ಪತಿ ಅಥವಾ ನನ್ನ ಪೋಷಕರೊಂದಿಗೆ ಇರಲು ನಾನು ಬಯಸುವುದಿಲ್ಲ” ಎಂದು ಆಕೆ ನ್ಯಾಯಾಲಯಕ್ಕೆ (Court) ತಿಳಿಸಿದ್ದಾಳೆ. ಆಕೆಯ ನಿರ್ಧಾರವನ್ನು ಮಧ್ಯಪ್ರದೇಶದ ಹೈಕೋರ್ಟ್‌ನ ಗ್ವಾಲಿಯರ್ ಪೀಠವು ಒಪ್ಪಿಕೊಂಡಿತು.

ತನಗಿಂತ 2 ಪಟ್ಟು ಹೆಚ್ಚು ವಯಸ್ಸಿನವನ ಜೊತೆ ಮನೆಯವರು ಮದುವೆ ಮಾಡಿಕೊಟ್ಟಿದ್ದರಿಂದ 19 ವರ್ಷದ ಯುವತಿ ಆ ಮದುವೆಯಲ್ಲಿ ಸಂತೋಷವಾಗಿರಲಿಲ್ಲ. ಆಕೆಗೆ ಇನ್ನೋರ್ವ ಯುವಕನ ಮೇಲೆ ಮನಸಾಗಿತ್ತು. ಈ ಕುರಿತು ನ್ಯಾಯಾಲಯದ ಮೊರೆ ಹೋಗಿದ್ದ ಆಕೆ ತಾನು ತನ್ನ ಮನೆಯಲ್ಲಿ ವಯಸ್ಸಾದ ಗಂಡನಿಂದ ಯಾವ ರೀತಿ ದೌರ್ಜನ್ಯವನ್ನು ಸಹಿಸಿಕೊಂಡಿದ್ದೇನೆ, ತನ್ನ ತವರು ಮನೆಯವರು ಯಾವ ರೀತಿ ತನ್ನನ್ನು ದೂರ ಇಟ್ಟಿದ್ದಾರೆ, ಎರಡೂ ಕಡೆ ಆಶ್ರಯ ಸಿಗದೆ ತಾನು ಹೇಗೆ ಕಷ್ಟ ಅನುಭವಿಸುತ್ತಿದ್ದೇನೆ ಎಂಬುದರ ಬಗ್ಗೆ ಹೇಳಿಕೊಂಡಿದ್ದಳು.

ಇದನ್ನೂ ಓದಿ: ಮದುವೆ ಮುಗಿದ ಮೇಲೆ ಮಗಳನ್ನು ಗಂಡನ ಮನೆಗೆ ಕಳಿಸಲ್ಲ ಎಂದು ಮದುವೆ ಮುರಿದ ತಂದೆ, ಅಂಥದ್ದೇನಾಯ್ತು?

ನ್ಯಾಯಮೂರ್ತಿಗಳಾದ ಆನಂದ್ ಪಾಠಕ್ ಮತ್ತು ಪುಷ್ಪೇಂದ್ರ ಯಾದವ್ ಅವರ ವಿಭಾಗೀಯ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿತು. ಏಪ್ರಿಲ್ 2ರಂದು ಆಕೆಯ ಪತಿ ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಅರ್ಜಿಯಲ್ಲಿ ಆಕೆಯನ್ನು ಇನ್ನೊಬ್ಬ ಪುರುಷ ಕಾನೂನುಬಾಹಿರವಾಗಿ ವಶದಲ್ಲಿಟ್ಟುಕೊಂಡಿದ್ದಾನೆ ಎಂದು ಆರೋಪಿಸಲಾಗಿತ್ತು. ಆದರೆ, ತನ್ನ ಪತಿ, ಪೋಷಕರು ಮತ್ತು ಪ್ರಿಯಕರನ ಜೊತೆ ನ್ಯಾಯಾಲಯಕ್ಕೆ ಹಾಜರಾದ ಆ ಯುವತಿ ತನ್ನ ಗಂಡ ಮಾಡಿದ ಆರೋಪಗಳನ್ನು ದೃಢವಾಗಿ ತಳ್ಳಿಹಾಕಿದ ನಂತರ ಈ ಪ್ರಕರಣವು ನಾಟಕೀಯ ತಿರುವು ಪಡೆದುಕೊಂಡಿತು.

ನನ್ನನ್ನು ಯಾರೂ ಬಲವಂತವಾಗಿ ಕರೆದುಕೊಂಡು ಹೋಗಿಲ್ಲ. ನನ್ನ ಗಂಡನ ಕಿರುಕುಳ ತಾಳಲಾರದೆ ಅಪ್ಪನ ಮನೆಗೆ ಹೋದಾಗ ಅಲ್ಲಿ ಕೂಡ ನನಗೆ ಆಶ್ರಯ ಸಿಗಲಿಲ್ಲ. ನಾನು ಪ್ರೀತಿಸುತ್ತಿರುವ ಯುವಕನ ಜೊತೆ ಹೋದ ನಂತರವೇ ನನಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು. ನನ್ನ ಸಂತೋಷ ಬಯಸದ, ನನ್ನ ಹಿತೈಷಿಗಳಲ್ಲದವರ ಜೊತೆ ವಾಪಾಸ್ ಹೋಗುವ ಪ್ರಶ್ನೆಯೇ ಇಲ್ಲ ಎಂದು ಆಕೆಯ ನ್ಯಾಯಾಧೀಶರ ಮುಂದೆ ಹೇಳಿದ್ದಾಳೆ. ಅಲ್ಲದೆ, ಆಕೆಯನ್ನು ಸೆರೆಯಲ್ಲಿಟ್ಟಿದ್ದ ಆರೋಪ ಹೊತ್ತಿರುವ ಆಕೆಯ ಪ್ರೇಮಿಯ ಜೊತೆಯೇ ಇರಲು ಬಯಸುವುದಾಗಿ ಆಕೆ ಹೇಳಿದ್ದಾಳೆ.

ಇದನ್ನೂ ಓದಿ: ಇನ್ನೋರ್ವ ಜಡ್ಜ್ ಮನೆಯಿಂದ ಆಭರಣ ಕದ್ದ ನ್ಯಾಯಾಧೀಶರಿಗೆ ಜಾಮೀನು ನಿರಾಕರಿಸಿದ ಕೋರ್ಟ್

ಆಕೆಯ ಪ್ರಿಯಕರನನ್ನು ಕೂಡ ಈ ಬಗ್ಗೆ ವಿಚಾರಿಸಲಾಯಿತು. ಆತನೂ ಆ ಯುವತಿಯನ್ನು ಪ್ರೀತಿ ಮಾಡುತ್ತಿರುವುದಾಗಿ ಹೇಳಿಕೆ ನೀಡಿದನು. ಅವಳ ವಿಚ್ಛೇದನದ ನಂತರ ಅವಳನ್ನು ಮದುವೆಯಾಗುವ ಉದ್ದೇಶವಿದೆ ಎಂದು ಕೂಡ ಹೇಳಿದನು. ಯಾವುದೇ ರೀತಿಯಲ್ಲಿ ಅವಳಿಗೆ ಕಿರುಕುಳ ನೀಡುವುದಿಲ್ಲ ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದನು.

ಆಕೆಯ ಗಂಡನ ವಯಸ್ಸು, ಆಕೆಯ ವಯಸ್ಸು ಗಮನಿಸಿದ ನ್ಯಾಯಾಲಯವು ಆಕೆ ತನ್ನ ಸ್ವಂತ ಇಚ್ಛೆಯಂತೆ ನಿರ್ಧಾರ ತೆಗೆದುಕೊಳ್ಳುವ ಪ್ರೌಢಿಮೆ ಹೊಂದಿದ್ದಾಳೆ ಎಂದು ದೃಢಪಡಿಸಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಲಿತ ಎನ್ನೋ ಕಾರಣಕ್ಕೆ ಎಳೆದಾಡಿ ಸ್ವಾಮೀಜಿ ಮೇಲೆ ಹಲ್ಲೆ: ದೇವಸ್ಥಾನದಿಂದ ಎತ್ತಿ ಹೊರಹಾಕಿದ ಟ್ರಸ್ಟಿಗಳು

ಕಲಬುರಗಿ, ಏಪ್ರಿಲ್​ 06: ದಲಿತ ಎಂಬ ಕಾರಣಕ್ಕೆ ಸ್ವಾಮೀಜಿ ಮೇಲೆ ಹಲ್ಲೆ ಮಾಡಿ, ದೇಗುಲದಿಂದ ಹೊರಗೆ ಹಾಕಿರುವಂತಹ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಯಾನಾಗುಂದಿಯಲ್ಲಿ ನಡೆದಿದೆ. ಮಾತಾ ಮಾಣಿಕೇಶ್ವರಿ ದೇವಸ್ಥಾನದಲ್ಲಿ ಟ್ರಸ್ಟಿಗಳಿಂದ ತೆಲಂಗಾಣ ಮೂಲದ ಬಂಡಿ ಬಾಲಕೃಷ್ಣ ಎಂಬುವರನ್ನು ಎಳೆದಾಡಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಸ್ವಾಮೀಜಿ ಕಳೆದ 7-8 ವರ್ಷಗಳಿಂದ ದೇವಸ್ಥಾನದಲ್ಲಿ ನೆಲೆಸಿ ಸೇವೆ ಸಲ್ಲಿಸುತ್ತಿದ್ದರು. ಕೆಳಜಾತಿಯವರು ದೇವಸ್ಥಾನ ಪ್ರವೇಶಿಸಬಾರದು ಎಂದು ನಿಂದಿಸಿ ಹಲವು ಬಾರಿ ಹಲ್ಲೆ ಮಾಡಿದ್ದಾರೆ. ಟ್ರಸ್ಟ್​ನ ಕಾರ್ಯದರ್ಶಿ ಶಿವಯ್ಯ ಮತ್ತು ಪುತ್ರ ಸುಮನ್ ವಿರುದ್ಧ ಹಲ್ಲೆ ಆರೋಪ ಮಾಡಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಎಐ ಕಾಲದಲ್ಲಿ ಎಂಜಿನಿಯರ್ ಜಪ ಬಿಡಿ, ನೀವು ಊಹಿಸಲೂ ಕಷ್ಟವಾದ ನಾನಾ ಉದ್ಯಮಗಳು ಸೃಷ್ಟಿಯಾಗುತ್ತವಂತೆ

ನವದೆಹಲಿ, ಏಪ್ರಿಲ್ 6: ಕೃತಕ ಬುದ್ಧಿಮತ್ತೆ ತಂತ್ರಜ್ಞಾನ (Artificial Intelligence technology) ಅಡಿ ಇಟ್ಟ ಮೇಲೆ ಖುಷಿಪಡುವ ಮತ್ತು ದುಃಖಪಡುವ ಸಂಗತಿಗಳೆರಡೂ ಸಮಾನವಾಗಿ ಘಟಿಸುತ್ತಿವೆ. ಎಐ ಒಳಿತೋ, ಕೆಡುಕೋ ಎನ್ನುವ ಚರ್ಚೆ ನಡೆಯುತ್ತಲೇ ಇದೆ. ಈ ಜಿಜ್ಞಾಸೆ ಉದ್ಯಮ ವಲಯದವರನ್ನೂ ಬಿಟ್ಟಿಲ್ಲ. ಅಲ್ಲಿಯೂ ಭಿನ್ನಾಭಿಪ್ರಾಯಗಳು, ಅಭಿಪ್ರಾಯಭೇದಗಳು ಹೆಚ್ಚಿವೆ. ಅವರಲ್ಲೂ ಗೊಂದಲಗಳಿವೆ. ಎಐ ತಜ್ಞರೊಳಗೆಯೇ ಅಭಿಪ್ರಾಯಗಳು ಬೇರೆ ಬೇರೆ ಇವೆ.

ಕೆನಡಾದ ಶ್ರೀಮಂತ ಉದ್ಯಮಿ ಕೆವಿನ್ ಓಲಿಯಾರಿ ಅವರು ಎಐ ವಿಚಾರದ ಬಗ್ಗೆ ಬಹಳ ಕುತೂಹಲ ಎನಿಸುವ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಮನುಷ್ಯನ ಸೃಜನಶೀಲತೆಯ ಶಕ್ತಿಯು ಹಿಂದೆಂದಿಗಿಂತಲೂ ಹೆಚ್ಚು ಮೌಲ್ಯಯುತ ಎನಿಸುವಂತೆ ಮಾಡುತ್ತಿದೆ ಎಐ. ಐಡಿಯಾಗಳನ್ನು ಜಾರಿಗೊಳಿಸುವ ಶಕ್ತಿ ಹೊಂದಿದವರಿಗೆ ಒಳ್ಳೆಯ ಅವಕಾಶಗಳಿವೆ. ಹಿಂದೆಲ್ಲಾ ಎಲ್ಲರೂ ಎಂಜಿನಿಯರ್, ಎಂಜಿನಿಯರ್ ಆಗಬೇಕು ಎನ್ನುತ್ತಿದ್ದರು. ಈಗ ಆರ್ಟಿಸ್ಟ್ ಆಗಬೇಕೆಂದು ಬಯಸುವ ಕಾಲ ಮರಳಿದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಂದ ರಸ್ತೆ ಮೂಲಕ ಮುಂಬೈಗೆ ಕೇವಲ 5.5 ಗಂಟೆ ಪ್ರಯಾಣ; ಇದು ಎಕ್ಸ್​ಪ್ರೆಸ್​ವೇ ಮ್ಯಾಜಿಕ್

ಉದ್ಯೋಗಗಳ ನಾಶಕ್ಕಿಂತ ಹೊಸ ಉದ್ಯಮಗಳ ಸ್ಥಾಪನೆ

ಎಐನಿಂದ ಎಲ್ಲರೂ ನಿರುದ್ಯೋಗಿಗಳಾಗುತ್ತಾರೆ ಎನ್ನುವ ವಾದವನ್ನು ಕೆವಿನ್ ಒಲಿಯಾರಿ ತಿರಸ್ಕರಿಸಿದ್ದಾರೆ. ‘ಎಐ ಉದ್ಯೋಗಗಳನ್ನು ಕಿತ್ತುಕೊಳ್ಳುವುದಕ್ಕಿಂತ ಹೆಚ್ಚಾಗಿ ಹೊಸ ಉದ್ಯಮಗಳನ್ನು ಸೃಷ್ಟಿಸುತ್ತಿದೆ. ಯಾರೂ ಊಹಿಸದೇ ಇರುವಂತಹ ಕ್ಷೇತ್ರಗಳಲ್ಲಿ ಅವಕಾಶಗಳು ಹುಟ್ಟಲಿವೆ. ಆರ್ಥಿಕತೆಯ ಎಲ್ಲಾ 11 ಕ್ಷೇತ್ರಗಳಲ್ಲೂ ಉತ್ಪನ್ನಶೀಲತೆ ಹೆಚ್ಚಿಸಲಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕ್ರಿಯೇಟಿವಿಟಿಗೆ ಮಹತ್ವ

ಪೋಡ್​ಕ್ಯಾಸ್ಟ್​ವೊಂದರಲ್ಲಿ ಮಾತನಾಡುತ್ತಿದ್ದ ಕೆನಡಿಯನ್ ಉದ್ಯಮಿ ಕೆವಿನ್ ಓಲಿಯಾರಿ ಅವರು ಸೃಜನಶೀಲತೆಗೆ ಈಗ ಹೆಚ್ಚಿನ ಬೆಲೆ ಸಿಗುತ್ತಿರುವುದನ್ನು ಗುರುತಿಸಿದ್ದಾರೆ. ಕ್ರಿಯೇಟಿವ್ ಸ್ಟೋರಿಟೆಲ್ಲಿಂಗ್ ಹಿಂದೆಂದಿಗಿಂತಲೂ ಮಹತ್ವದ್ದಾಗಿದೆ. ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳಲ್ಲಿ ಗ್ರಾಹಕರನ್ನು ಆಕರ್ಷಿಸಲು ಇವರ ಪಾತ್ರ ಮುಖ್ಯ ಎಂದು ಒಲಿಯಾರಿ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕೇವಲ 11 ಕೋಟಿಗೆ ಐವರು ಮ್ಯಾಚ್ ವಿನ್ನರ್ಸ್​; ಆರ್​ಸಿಬಿ ಲೆಕ್ಕಾಚಾರಕ್ಕೆ ಥಂಡಾ ಹೊಡೆದ ಉಳಿದ ಫ್ರಾಂಚೈಸಿಗಳು

ಹಾಲಿ ಚಾಂಪಿಯನ್ ಆರ್‌ಸಿಬಿ (RCB) ಕಳೆದ ಆವೃತ್ತಿಯಲ್ಲಿ ತನ್ನ ಅಮೋಘ ಪ್ರದರ್ಶನವನ್ನು ಎಲ್ಲಿಗೆ ನಿಲ್ಲಿಸಿತ್ತೋ ಅದನ್ನು ಈ ಆವೃತ್ತಿಯಲ್ಲೂ ಮುಂದುವರೆಸಿದೆ. ಆಡಿದ ಮೊದಲ ಎರಡು ಪಂದ್ಯಗಳನ್ನು ಗೆದ್ದು ಐಪಿಎಲ್ 2026 (IPL 2026) ರ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಎಸ್‌ಆರ್‌ಹೆಚ್ ವಿರುದ್ಧದ ತನ್ನ ಮೊದಲ ಪಂದ್ಯವನ್ನು ಆರು ವಿಕೆಟ್‌ಗಳಿಂದ ಗೆದ್ದುಕೊಂಡಿದ್ದ ಆರ್‌ಸಿಬಿ, ತನ್ನ ಎರಡನೇ ಪಂದ್ಯದಲ್ಲಿ ಸಿಎಸ್‌ಕೆ ತಂಡವನ್ನು 43 ರನ್‌ಗಳಿಂದ ಸೋಲಿಸಿತು. ಆರ್​ಸಿಬಿಯ ಈ ಬಲಿಷ್ಠ ಪ್ರದರ್ಶನಕ್ಕೆ 2025 ರ ಐಪಿಎಲ್ ಮೆಗಾ ಹರಾಜಿನಲ್ಲಿ ಆರ್​ಸಿಬಿ ಅಳೆದು ತೂಗಿ ಆಟಗಾರರನ್ನು ಖರೀದಿಸಿದ್ದೆ ಕಾರಣ. ಅದರಲ್ಲೂ ಕೇವಲ 11 ಕೋಟಿ ರೂ. ನೀಡಿ ಆರ್​ಸಿಬಿ ಖರೀದಿಸಿದ ಐವರು ಮ್ಯಾಚ್ ವಿನ್ನರ್ಸ್​ಗಳು ತಂಡವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುತ್ತಿದ್ದಾರೆ ಎಂದರೆ ತಪ್ಪಾಗಲಾರದು.

11 ಕೋಟಿಗೆ ಐವರು ಮ್ಯಾಚ್ ವಿನ್ನರ್ಸ್​ ಖರೀದಿ

2025 ರ ಐಪಿಎಲ್ ಮೆಗಾ ಹರಾಜಿನಲ್ಲಿ ಆರ್​ಸಿಬಿ ಕೆಲವೇ ಕೆಲವು ಕೋಟಿಗಳನ್ನು ನೋಡಿ ಐವರು ಆಟಗಾರರನ್ನು ಖರೀದಿಸಿತ್ತು. ಆ ಐವರು ಆಟಗಾರರೇ ಇವಾಗ ಆರ್​ಸಿಬಿಯ ಬೆನ್ನೆಲುಬಾಗಿದ್ದಾರೆ. ಅವರುಗಳಲ್ಲಿ ಮೊದಲ ಹೆಸರು ಆಸ್ಟ್ರೇಲಿಯಾದ ಸ್ಟಾರ್ ಆಲ್​ರೌಂಡರ್ ಟಿಮ್ ಡೇವಿಡ್. ಈ ಸ್ಫೋಟಕ ದಾಂಡಿಗನನ್ನು ಆರ್‌ಸಿಬಿ ಕೇವಲ 3 ಕೋಟಿ ರೂ.ಗೆ ಖರೀದಿಸಿತು. ಹಾಗೆಯೇ ಮತ್ತೊಬ್ಬ ಆಟಗಾರ ಜಾಕೋಬ್ ಡಫಿ, ಅವರನ್ನು ಆರ್‌ಸಿಬಿ 2 ಕೋಟಿ ರೂ.ಗೆ ಖರೀದಿಸಿತು.

ಪ್ರಸ್ತುತ ಆವೃತ್ತಿಯಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿರುವ ಕನ್ನಡಿಗ ದೇವದತ್ ಪಡಿಕ್ಕಲ್ ಅವರನ್ನು ಕೂಡ ಆರ್‌ಸಿಬಿಗೆ ಕೇವಲ 2 ಕೋಟಿ ರೂ.ಗೆ ಖರೀದಿ ಮಾಡಿತ್ತು. ಮತ್ತೊಬ್ಬ ಅಪಾಯಕಾರಿ ಆಲ್​ರೌಂಡರ್ ರೊಮಾರಿಯೊ ಶೆಫರ್ಡ್ ಅವರನ್ನು ಆರ್‌ಸಿಬಿ ಮೂಲ ಬೆಲೆ 1.50 ಕೋಟಿ ರೂ.ಗೆ ಖರೀದಿ ಮಾಡಿತ್ತು. ಈ ನಾಲ್ವರ ಜೊತೆಗೆ ಇಂಗ್ಲೆಂಡ್​ನ ಸ್ಟಾರ್ ಬ್ಯಾಟರ್ ಜಾಕೋಬ್ ಬೆಥೆಲ್ ಕೂಡ ಕೇವಲ 2.60 ಕೋಟಿ ರೂ.ಗೆ ಆರ್​ಸಿಬಿ ಪಾಲಾಗಿದ್ದರು.

IPL 2026: ತನ್ನ 3ನೇ ಪಂದ್ಯದಲ್ಲಿ ಮತ್ತೊಂದು ಬಲಿಷ್ಠ ತಂಡವನ್ನು ಎದುರಿಸಲಿದೆ ಆರ್​ಸಿಬಿ..!

ಈ ಆಟಗಾರರೇ ಆರ್‌ಸಿಬಿ ಮ್ಯಾಚ್ ವಿನ್ನರ್ಸ್​

ಟಿಮ್ ಡೇವಿಡ್ ಮತ್ತು ದೇವದತ್ ಪಡಿಕ್ಕಲ್ ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಪಂದ್ಯದಲ್ಲಿ ಇಬ್ಬರೂ ಅದ್ಭುತ ಅರ್ಧಶತಕದ ಇನ್ನಿಂಗ್ಸ್ ಆಡಿದರು. ದೇವದತ್ ಪಡಿಕ್ಕಲ್ 29 ಎಸೆತಗಳಲ್ಲಿ 50 ರನ್ ಗಳಿಸಿದರೆ, ಟಿಮ್ ಡೇವಿಡ್ ಕೇವಲ 25 ಎಸೆತಗಳಲ್ಲಿ 8 ಸಿಕ್ಸರ್‌ಗಳೊಂದಿಗೆ ಅಜೇಯ 70 ರನ್ ಬಾರಿಸಿದರು.

ಇದಕ್ಕೂ ಮೊದಲು, SRH ವಿರುದ್ಧದ ಪಂದ್ಯದಲ್ಲಿ ಮಿಂಚಿದ್ದ ವೇಗೊ ಜಾಕೋಬ್ ಡಫಿ 4 ಓವರ್‌ಗಳಲ್ಲಿ 22 ರನ್‌ ನೀಡಿ ಪ್ರಮಿಖ 3 ವಿಕೆಟ್‌ಗಳನ್ನು ಪಡೆದಿದ್ದರು. ರೊಮಾರಿಯೊ ಶೆಫರ್ಡ್ ಕೂಡ 4 ಓವರ್‌ಗಳಲ್ಲಿ 3 ವಿಕೆಟ್‌ಗಳನ್ನು ಪಡೆದಿದ್ದರು. ದೇವದತ್ ಪಡಿಕ್ಕಲ್ ಕೂಡ SRH ವಿರುದ್ಧ 61 ರನ್‌ಗಳ ಸ್ಫೋಟಕ ಇನ್ನಿಂಗ್ಸ್‌ನೊಂದಿಗೆ ತಂಡದ ಗೆಲುವಿಗೆ ಕೊಡುಗೆ ನೀಡಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ತನ್ನ 3ನೇ ಪಂದ್ಯದಲ್ಲಿ ಮತ್ತೊಂದು ಬಲಿಷ್ಠ ತಂಡವನ್ನು ಎದುರಿಸಲಿದೆ ಆರ್​ಸಿಬಿ..!

2026 ರ ಐಪಿಎಲ್‌ನಲ್ಲಿ (IPL 2026) ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿದಿರುವ ಆರ್​​ಸಿಬಿ (RCB) ಇದುವರೆಗೆ ಆಡಿರುವ ಮೊದಲ ಎರಡು ಪಂದ್ಯಗಳನ್ನು ಗೆದ್ದುಕೊಂಡಿದೆ. ತನ್ನ ತವರಿನಲ್ಲಿ ಮೊದಲ ಎರಡು ಪಂದ್ಯಗಳನ್ನು ಆಡಿದ ಆರ್​ಸಿಬಿ ಎರಡು ಪಂದ್ಯಗಳಲ್ಲೂ ಏಕಪಕ್ಷೀಯ ಗೆಲುವು ಸಾಧಿಸಿದೆ. ಲೀಗ್​ನ ಉದ್ಘಾಟನಾ ಪಂದ್ಯದಲ್ಲಿ ಬಲಿಷ್ಠ ಬ್ಯಾಟಿಂಗ್‌ ವಿಭಾಗವನ್ನು ಹೊಂದಿರುವ ಸನ್​ರೈಸರ್ಸ್​ ಹೈದರಾಬಾದ್ ತಂಡವನ್ನು ಏಕಪಕ್ಷೀಯವಾಗಿ ಸೋಲಿಸಿದ್ದ ಆರ್​ಸಿಬಿ, ಅದಾದ ಬಳಿಕ ನಡೆದಿದ್ದ ಎರಡನೇ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಸಿಎಸ್​ಕೆ ತಂಡವನ್ನು ಕೂಡ ಏಕಪಕ್ಷೀಯವಾಗಿ ಸೋಲಿಸಿತ್ತು. ಈ ಎರಡು ಗೆಲುವುಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆರ್​ಸಿಬಿ ಇದೀಗ ತನ್ನ ಮೂರನೇ ಪಂದ್ಯಕ್ಕಾಗಿ ತಯಾರಿ ನಡೆಸುತ್ತಿದೆ. ಹಾಗಿದ್ದರೆ, ಆರ್​ಸಿಬಿಯ ಮೂರನೇ ಪಂದ್ಯ ಯಾವಾಗ? ಯಾವ ತಂಡದ ವಿರುದ್ಧ ನಡೆಯಲಿದೆ ಎಂಬುದನ್ನು ನೋಡುವುದಾದರೆ..

ಆರ್​ಸಿಬಿ ಮತ್ತು ರಾಜಸ್ಥಾನ್ ನಡುವಿನ ಐಪಿಎಲ್ 2026 ರ 16 ನೇ ಪಂದ್ಯ ಯಾವಾಗ ನಡೆಯಲಿದೆ?

ಆರ್​ಸಿಬಿ ಮತ್ತು ರಾಜಸ್ಥಾನ್ ನಡುವಿನ ಐಪಿಎಲ್ 2026 ರ 16 ನೇ ಪಂದ್ಯವು ಏಪ್ರಿಲ್ 10 ರ ಶುಕ್ರವಾರದಂದು ನಡೆಯಲಿದೆ.

ಆರ್​ಸಿಬಿ ಮತ್ತು ರಾಜಸ್ಥಾನ್ ನಡುವಿನ ಐಪಿಎಲ್ 2026 ರ 16 ನೇ ಪಂದ್ಯ ಎಲ್ಲಿ ನಡೆಯಲಿದೆ?

ಆರ್​ಸಿಬಿ ಮತ್ತು ರಾಜಸ್ಥಾನ್ ನಡುವಿನ ಐಪಿಎಲ್ 2026 ರ 16 ನೇ ಪಂದ್ಯ ಬರ್ಸಾಪರ ಸ್ಟೇಡಿಯಂ, ಗುವಾಹಟಿಯಲ್ಲಿ ನಡೆಯಲಿದೆ.

ಆರ್​ಸಿಬಿ ಮತ್ತು ರಾಜಸ್ಥಾನ್ ನಡುವಿನ ಐಪಿಎಲ್ 2026 ರ 16 ನೇ ಪಂದ್ಯ ಯಾವ ಸಮಯಕ್ಕೆ ಪ್ರಾರಂಭವಾಗುತ್ತದೆ?

ಆರ್​ಸಿಬಿ ಮತ್ತು ರಾಜಸ್ಥಾನ್ ನಡುವಿನ ಐಪಿಎಲ್ 2026 ರ 16 ನೇ ಪಂದ್ಯವು ಭಾರತೀಯ ಕಾಲಮಾನ ಸಂಜೆ 7:30 ಕ್ಕೆ ಪ್ರಾರಂಭವಾಗಲಿದ್ದು, ಟಾಸ್ ಸಂಜೆ 7 ಗಂಟೆಗೆ ನಡೆಯಲಿದೆ.

ಆರ್​ಸಿಬಿ ಮತ್ತು ರಾಜಸ್ಥಾನ್ ನಡುವಿನ ಐಪಿಎಲ್ 2026 ರ 16 ನೇ ಪಂದ್ಯವನ್ನು ಟಿವಿಯಲ್ಲಿ ವೀಕ್ಷಿಸುವುದು ಹೇಗೆ?

ನೀವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಟಿವಿಯಲ್ಲಿ ಆರ್​ಸಿಬಿ ಮತ್ತು ರಾಜಸ್ಥಾನ್ ನಡುವಿನ ಐಪಿಎಲ್ 2026 ರ 16 ನೇ ಪಂದ್ಯವನ್ನು ವೀಕ್ಷಿಸಬಹುದು.

ಆರ್​ಸಿಬಿ ಮತ್ತು ರಾಜಸ್ಥಾನ್ ನಡುವಿನ ಐಪಿಎಲ್ 2026 ರ 16 ನೇ ಪಂದ್ಯವನ್ನು ಮೊಬೈಲ್‌ನಲ್ಲಿ ವೀಕ್ಷಿಸುವುದು ಹೇಗೆ?

ಜಿಯೋ-ಹಾಟ್‌ಸ್ಟಾರ್ ಅಪ್ಲಿಕೇಶನ್ ಬಳಸಿಕೊಂಡು ನಿಮ್ಮ ಮೊಬೈಲ್​ಲ್ಲಿ ಆರ್​ಸಿಬಿ ಮತ್ತು ರಾಜಸ್ಥಾನ್ ನಡುವಿನ ಐಪಿಎಲ್ 2026 ರ 16ನೇ ಪಂದ್ಯವನ್ನು ನೀವು ವೀಕ್ಷಿಸಬಹುದು.

RCB vs CSK IPL 2026 Highlights: ಸಿಎಸ್​ಕೆ ವಿರುದ್ಧ ಆರ್​​ಸಿಬಿಗೆ 43 ರನ್ ಜಯ

ಉಭಯ ತಂಡಗಳು

ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರಿಯಾನ್ ಪರಾಗ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ರವೀಂದ್ರ ಜಡೇಜಾ, ಜೋಫ್ರಾ ಆರ್ಚರ್, ನಾಂದ್ರೆ ಬರ್ಗರ್, ಸಂದೀಪ್ ಶರ್ಮಾ, ರವಿ ಬಿಷ್ಣೋಯ್, ಬ್ರಿಜೇಶ್ ಶರ್ಮಾ, ಲುವಾನ್ ಸಿಂಗ್-ಪ್ರೇರಿರಾ, ರವಿ ಬಿಷ್ಣೋಯ್, ಎಸ್. ತುಷಾರ್ ದೇಶಪಾಂಡೆ, ಆಡಮ್ ಮಿಲ್ನೆ, ದಸುನ್ ಶನಕ, ಕುಲದೀಪ್ ಸೇನ್, ಯುದ್ವೀರ್ ಸಿಂಗ್ ಚರಕ್, ಶುಭಂ ದುಬೆ, ಕ್ವೀನಾ ಎಂಫಕಾ, ವಿಘ್ನೇಶ್ ಪುತ್ತೂರು, ಅಮನ್ ರಾವ್ ಪೆರಾಲ.

ಆರ್​ಸಿಬಿ ಪೂರ್ಣ ತಂಡ: ರಜತ್ ಪಾಟಿದಾರ್, ವಿರಾಟ್ ಕೊಹ್ಲಿ, ದೇವದತ್ತ್ ಪಡಿಕ್ಕಲ್, ರಜತ್ ಪಾಟಿದಾರ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋರ್ಡಾನ್ ಕಾಕ್ಸ್, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಜಾಕೋಬ್ ಬೆಥೆಲ್, ವೆಂಕಟೇಶ್ ಅಯ್ಯರ್, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ವಿಕ್ಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾಣ್, ಜೋಶ್ ಹೇಜಲ್​ವುಡ್, ರಸಿಖ್ ದಾರ್, ಸುಯಶ್ ಶರ್ಮಾ, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಅಭಿನಂದನ್ ಸಿಂಗ್, ಜಾಕೋಬ್ ಡಫಿ,

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಾಖಲೆ ಬರೆದ ಧುರಂಧರ್ 2: ಭಾರತದಲ್ಲಿ 1000 ಕೋಟಿ ರೂ. ಗಳಿಸಿದ ಮೊದಲ ಹಿಂದಿ ಸಿನಿಮಾ

ನಟ ರಣವೀರ್ ಸಿಂಗ್ (Ranveer Singh) ಮತ್ತು ನಿರ್ದೇಶಕ ಆದಿತ್ಯ ಧರ್ ಅವರ ಕಾಂಬಿನೇಷನ್​​ನಲ್ಲಿ ಬಂದ ‘ಧುರಂಧರ್ 2’ ಸಿನಿಮಾ ಅಕ್ಷರಶಃ ಹೊಸ ಇತಿಹಾಸ ಬರೆದಿದೆ. ಭಾರತೀಯ ಬಾಕ್ಸ್ ಆಫೀಸ್ ಇತಿಹಾಸದಲ್ಲೇ 1000 ಕೋಟಿ ರೂಪಾಯಿ ನಿವ್ವಳ ಗಳಿಕೆ (Box Office Collection) ಮಾಡಿದ ಮೊದಲ ಹಿಂದಿ ಚಿತ್ರ ಎಂಬ ಹೆಗ್ಗಳಿಕೆಗೆ ಈ ಸಿನಿಮಾ ಪಾತ್ರವಾಗಿದೆ. ಮಾರ್ಚ್ 19ರಂದು ತೆರೆಕಂಡ ಈ ಸಿನಿಮಾ, ಮೂರನೇ ವಾರದಲ್ಲೂ ತನ್ನ ನಾಗಾಲೋಟವನ್ನು ಮುಂದುವರಿಸಿದೆ. ಪ್ರೇಕ್ಷಕರನ್ನು ಥಿಯೇಟರ್‌ಗಳತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಭಾರತದಲ್ಲೇ 1000 ಕೋಟಿ ರೂಪಾಯಿ ಕಲೆಕ್ಷನ್ ಆಗಿದ್ದಕ್ಕೆ ‘ಧುರಂಧರ್ 2’ (Dhurandhar 2) ಚಿತ್ರತಂಡಕ್ಕೆ ಖುಷಿ ಆಗಿದೆ.

ವರದಿಗಳ ಪ್ರಕಾರ, ‘ಧುರಂಧರ್ 2’ ಸಿನಿಮಾ ಬಿಡುಗಡೆಯಾಗಿ 18ನೇ ದಿನ (ಏಪ್ರಿಲ್ 5) ಬರೋಬ್ಬರಿ 28.75 ಕೋಟಿ ರೂಪಾಯಿ ಬಾಚಿಕೊಂಡಿದೆ. ಮೂರನೇ ವಾರದಲ್ಲೂ ಈ ಮಟ್ಟದ ಗಳಿಕೆ ಮಾಡಿರುವುದು ಚಿತ್ರರಂಗವನ್ನು ಬೆರಗುಗೊಳಿಸಿದೆ. ಮೊದಲ ವಾರ 674 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. ಎರಡನೇ ವಾರ 263.65 ಕೋಟಿ ರೂಪಾಯಿ ಸೇರ್ಪಡೆ ಆಯಿತು.

ಈವರೆಗೂ ‘ಧುರಂಧರ್ 2’ ಸಿನಿಮಾಗೆ ಭಾರತದಲ್ಲಿ ಆಗಿರುವ ಒಟ್ಟು ಗಳಿಕೆ (Gross) 1,209 ಕೋಟಿ ರೂಪಾಯಿ. ಭಾರತದಲ್ಲಿನ ನಿವ್ವಳ ಗಳಿಕೆ (Net) 1,013 ಕೋಟಿ ಎಂಬ ಮಾಹಿತಿ ಸಿಕ್ಕಿದೆ. ‘ಧುರಂಧರ್ 2’ ಸಿನಿಮಾ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಕೇವಲ ಮೊದಲ ವಾರದಲ್ಲೇ 1000 ಕೋಟಿ ರೂಪಾಯಿ ಗಡಿ ದಾಟುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿತ್ತು.

‘ಧುರಂಧರ್ 2’ ಚಿತ್ರವು ಈಗಾಗಲೇ ಭಾರತದ ಬ್ಲಾಕ್‌ಬಸ್ಟರ್ ಸಿನಿಮಾಗಳಾದ ‘ಆರ್​ಆರ್​ಆರ್​’ (782.20 ಕೋಟಿ ರೂ.), ‘ಕಲ್ಕಿ 2898 AD’ (646 ಕೋಟಿ ರೂ.), ‘ಕೆಜಿಎಫ್: ಚಾಪ್ಟರ್ 2’ (859.70 ಕೋಟಿ ರೂ.), ಜವಾನ್ ಮತ್ತು ಪಠಾಣ್ ಚಿತ್ರಗಳ ಲೈಫ್‌ಟೈಮ್ ಕಲೆಕ್ಷನ್ ಹಿಂದಿಕ್ಕಿದೆ. 1,030 ಕೋಟಿ ರೂಪಾಯಿ ಗಳಿಸಿದ್ದ ‘ಬಾಹುಬಲಿ 2’ ದಾಖಲೆಯನ್ನು ಮುರಿಯಲು ಸಜ್ಜಾಗಿರುವ ಈ ಚಿತ್ರ, ನಂತರ ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ (1,234 ಕೋಟಿ ರೂ.) ದಾಖಲೆಯನ್ನು ಮೀರಿಸುತ್ತದೆಯೇ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ: ‘ಧುರಂಧರ್’, ‘ಕೇರಳ ಸ್ಟೋರಿ’ ಸುಳ್ಳು ಎಂದವರ ವಿರುದ್ಧ ನರೇಂದ್ರ ಮೋದಿ ಗರಂ

ಆದಿತ್ಯ ಧರ್ ನಿರ್ದೇಶನದ ಈ ಚಿತ್ರದಲ್ಲಿ ರಣವೀರ್ ಸಿಂಗ್ ಅವರು ಭಾರತೀಯ ಗೂಢಚಾರನಾಗಿ ನಟಿಸಿದ್ದಾರೆ. ಪಾಕಿಸ್ತಾನದ ಭೂಗತ ಲೋಕಕ್ಕೆ ನುಗ್ಗಿ ಭಾರತವನ್ನು ಗುರಿಯಾಗಿಸಿಕೊಂಡಿರುವ ಭಯೋತ್ಪಾದಕ ಜಾಲವನ್ನು ಮಟ್ಟಹಾಕುವ ರೋಚಕ ಕಥೆ ಚಿತ್ರದಲ್ಲಿದೆ. ಚಿತ್ರದಲ್ಲಿ ರಣವೀರ್ ಜೊತೆಗೆ ಆರ್. ಮಾಧವನ್, ಸಂಜಯ್ ದತ್, ಅರ್ಜುನ್ ರಾಮ್​ಪಾಲ್, ಸಾರಾ ಅರ್ಜುನ್ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link