All posts by nagaraj11081993

ಹೊಸ ವರ್ಷಾಚರಣೆ ಪಾರ್ಟಿಗಳಲ್ಲಿ ಮಕ್ಕಳಿಗೆ ಪ್ರವೇಶವಿಲ್ಲ, ಹೈಕೋರ್ಟ್​​ ಸೂಚನೆ – Kannada News | Chennai HC: No Kids in New Year Parties Serving Alcohol

ಚೆನ್ನೈ, ಡಿಸೆಂಬರ್ 23: ಹೊಸ ವರ್ಷ(New Year) ಆಚರಣೆಯ ಪಾರ್ಟಿಗಳಲ್ಲಿ ಮಕ್ಕಳು ಪಾಲ್ಗೊಳ್ಳುವಂತಿಲ್ಲ ಎಂದು ಚೆನ್ನೈ ಹೈಕೋರ್ಟ್​ ಮಹತ್ವದ ಸೂಚನೆ ನೀಡಿದೆ. ಹೊಸ ವರ್ಷಾಚರಣೆ ಸಂದರ್ಭಗಳಲ್ಲಿ ಸ್ಟಾರ್ ಹೋಟೆಲ್​ಗಳು ಮತ್ತು ರೆಸ್ಟೋರೆಂಟ್​ಗಳು ಸೇರಿದಂತೆ ಮಕ್ಕಳನ್ನು ಮದ್ಯ ಸೇವಿಸುವ ಸ್ಥಳಗಳಿಗೆ ಕರೆದೊಯ್ಯಲಾಗುತ್ತಿದೆ ಎಂಬ ದೂರು ಬಂದರೆ ತಕ್ಷಣ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಮದ್ರಾಸ್ ಹೈಕೋರ್ಟ್ ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಸಾಮಾನ್ಯವಾಗಿ ಹೊಸ ವರ್ಷಾಚರಣೆಯ ಸಮಯದಲ್ಲಿ, ಚೆನ್ನೈ ಮರೀನಾ ಬೀಚ್‌ನಲ್ಲಿರುವ ಸ್ಟಾರ್ ಹೋಟೆಲ್‌ಗಳು ಮತ್ತು ಅಪಾರ್ಟ್‌ಮೆಂಟ್‌ಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ, ಇವುಗಳಿಗೆ ಹೆಚ್ಚಿನ ಸಂಖ್ಯೆಯ ಜನರು ಸೇರುತ್ತಾರೆ, ವಿಶೇಷವಾಗಿ ಬೀಚ್ ಪ್ರದೇಶಗಳಲ್ಲಿ, ಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಗುತ್ತದೆ ಮತ್ತು ವಿಶೇಷ ವ್ಯವಸ್ಥೆಗಳನ್ನು ಮಾಡಲಾಗುತ್ತದೆ.

ಸಾರ್ವಜನಿಕರು ತಮ್ಮ ಕುಟುಂಬಗಳೊಂದಿಗೆ ಆಚರಿಸುವುದು ವಾಡಿಕೆಯಾಗಿದ್ದು, ಈ ಆಚರಣೆಗಳ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸರು ವಿವಿಧ ನಿರ್ಬಂಧಗಳನ್ನು ವಿಧಿಸುತ್ತಾರೆ. ನಿರ್ದಿಷ್ಟವಾಗಿ ಹೇಳುವುದಾದರೆ, ಹೆಚ್ಚಿನ ವೇಗದಲ್ಲಿ ವಾಹನಗಳನ್ನು ಚಲಾಯಿಸಬಾರದು, ಮದ್ಯಪಾನ ಮಾಡಿ ವಾಹನಗಳನ್ನು ಚಲಾಯಿಸಬಾರದು ಮತ್ತು ಕೆಲವು ಪ್ರದೇಶಗಳಿಗೆ ಹೋಗಬಾರದು ಮುಂತಾದ ವಿವಿಧ ನಿರ್ಬಂಧಗಳನ್ನು ವಿಧಿಸಲಾಗುತ್ತದೆ.

ಮತ್ತಷ್ಟು ಓದಿ: ಹೊಸ ವರ್ಷಾಚರಣೆ: ಗೋವಾ ದುರಂತ ಬೆನ್ನಲ್ಲೇ ಬೆಂಗಳೂರಿನ ಪಬ್, ಹೋಟೆಲ್, ರೆಸ್ಟೋರೆಂಟ್​ಗಳಿಗೆ ಸ್ಟ್ರಿಕ್ಟ್ ರೂಲ್ಸ್

ಹೊಸ ವರ್ಷದ ಮುನ್ನಾದಿನದಂದು ಮಕ್ಕಳನ್ನು ಕರೆತರಬೇಡಿ
ಕಳೆದ ವರ್ಷ ಡಿಸೆಂಬರ್ 31 ರಂದು ಎಗ್ಮೋರ್‌ನ ಖಾಸಗಿ ಸ್ಟಾರ್ ಹೋಟೆಲ್‌ನಲ್ಲಿ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಮಕ್ಕಳನ್ನು ಮದ್ಯಪಾನ ಮಾಡಲು ಒಂದು ಸ್ಥಳಕ್ಕೆ ಕರೆತರಲಾಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಕಾಯ್ದೆ ಕಾನೂನುಬದ್ಧವಾಗಿ ತಪ್ಪು ಮತ್ತು ಬಾಲ ನ್ಯಾಯ ಕಾಯ್ದೆಗೆ ವಿರುದ್ಧವಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ ಮತ್ತು ಇದು ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅವರ ಜೀವನವನ್ನು ನಾಶಪಡಿಸುತ್ತದೆ ಎಂದು ದುಃಖ ವ್ಯಕ್ತಪಡಿಸಿದರು.

ಮಕ್ಕಳಿಗೆ ಮದ್ಯಪಾನ ಮಾಡುವ ಪ್ರದೇಶದಲ್ಲಿ ಪಾರ್ಟಿ ಮಾಡಲು ಅವಕಾಶ ನೀಡಿದ ಸ್ಟಾರ್ ಹೋಟೆಲ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ. ಹೊಸ ವರ್ಷ ಸಮೀಪಿಸುತ್ತಿದ್ದಂತೆ ಮದ್ಯಪಾನ ಮಾಡುವ ಪ್ರದೇಶಗಳಲ್ಲಿನ ಸ್ಟಾರ್ ಹೋಟೆಲ್‌ಗಳಲ್ಲಿ ನಡೆಯುವ ಹೊಸ ವರ್ಷದ ಆಚರಣೆಯಲ್ಲಿ ಮಕ್ಕಳು ಭಾಗವಹಿಸದಂತೆ ನೋಡಿಕೊಳ್ಳಲು ಸರ್ಕಾರಕ್ಕೆ ಆದೇಶಿಸಬೇಕೆಂದು ಅವರು ವಿನಂತಿಸಿದ್ದಾರೆ.

ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಂ.ಎಂ. ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ಜಿ. ಅರುಳ್ಮುರುಗನ್ ಅವರ ಪೀಠ, ಮುಂಬರುವ ಹೊಸ ವರ್ಷಾಚರಣೆಯ ಸಮಯದಲ್ಲಿ ಮಕ್ಕಳನ್ನು ಸ್ಟಾರ್ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಮದ್ಯ ಸೇವಿಸುವ ಸ್ಥಳಗಳಿಗೆ ಕರೆದೊಯ್ಯಲಾಗುತ್ತಿದೆ ಎಂಬ ದೂರುಗಳು ಬಂದರೆ, ತಕ್ಷಣ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸರ್ಕಾರಿ ಅಧಿಕಾರಿಗಳಿಗೆ ಆದೇಶಿಸಿ, ಪ್ರಕರಣವನ್ನು ಮುಕ್ತಾಯಗೊಳಿಸಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ವಿದೇಶಕ್ಕೆ ಹೋಗಿ ಮತ್ತೆ ಭಾರತದ ಪ್ರಜಾಪ್ರಭುತ್ವವನ್ನು ಆಡಿಕೊಂಡ ರಾಹುಲ್​ಗೆ ಬಿಜೆಪಿ ತಿರುಗೇಟು – Kannada News | Rahul Gandhi Abroad: BJP Labels Him Anti India Over Democracy Claims

ನವದೆಹಲಿ, ಡಿಸೆಂಬರ್ 23: ಭಾರತದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದೆ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ(Rahul Gandhi) ನೀಡಿರುವ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. ಪ್ರತಿ ವರ್ಷವೂ ರಾಹುಲ್ ಗಾಂಧಿ ವಿದೇಶಗಳಿಗೆ ಪ್ರವಾಸ ಹೋದಾಗ ಭಾರತದ ಬಗ್ಗೆ ಒಂದಲ್ಲಾ ಒಂದು ಅವಹೇಳನಕಾರಿ ಹೇಳಿಕೆಯನ್ನು ನೀಡುತ್ತಲೇ ಇರುತ್ತಾರೆ. ರಾಹುಲ್ ಮತ್ತು ಕಾಂಗ್ರೆಸ್​​ ಭಾರತೀಯ ಪ್ರಜಾಪ್ರಭುತ್ವದಲ್ಲಿ ಅವ್ಯಸವ್ಥೆ ಮತ್ತು ಅಶಾಂತಿಯನ್ನು ಬಯಸುತ್ತಿವೆ ಎಂದು ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಹೇಳಿದ್ದಾರೆ.

ರಾಹುಲ್ ಗಾಂಧಿ ಹಾಗೂ ಜಾರ್ಜ್​ ಸೊರೊಸ್ ಭಾರತೀಯ ಪ್ರಜಾಪ್ರಭುತ್ವದಲ್ಲಿ ಅವ್ಯವಸ್ಥೆ ಉಂಟು ಮಾಡಲು ಭಾರತ ವಿರೋಧಿ ಶಕ್ತಿಗಳನ್ನು ಒಗ್ಗೂಡಿಸಲು ವಿದೇಶಕ್ಕೆ ಹೋಗುತ್ತಾರೆ ಎಂದು ಭಂಡಾರಿ ಪೋಸ್ಟ್​ ಮಾಡಿದ್ದಾರೆ.

ಕಾಂಗ್ರೆಸ್ ಭಾರತೀಯ ಪ್ರಜಾಪ್ರಭುತ್ವವನ್ನು ದ್ವೇಷಿಸುತ್ತದೆ, ಕಾಂಗ್ರೆಸ್ ಭಾರತದ ಪ್ರಗತಿಯನ್ನು ದ್ವೇಷಿಸುತ್ತದೆ, ರಾಹುಲ್ ಗಾಂಧಿಯವರ ಕಾಂಗ್ರೆಸ್ ಅರಾಜಕತೆಯನ್ನು ಬಯಸುತ್ತದೆ ಎಂದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೂಡ ಕಾಂಗ್ರೆಸ್ ನಾಯಕನ ವಿರುದ್ಧ ವಾಗ್ದಾಳಿ ನಡೆಸಿ, ಅವರು ದೇಶದ ವಿರುದ್ಧ ಮಾತನಾಡಲು ವಿದೇಶಕ್ಕೆ ಹೋಗುತ್ತಾರೆ ಎಂದು ಆರೋಪಿಸಿದರು.

ಮತ್ತಷ್ಟು ಓದಿ: Manufacturing sector: ಮತ್ತೆ ವಿದೇಶದಲ್ಲಿ ಭಾರತದ ವಿರುದ್ಧ ರಾಹುಲ್ ಧ್ವನಿ; ಸತ್ಯ ಎಷ್ಟು, ಸುಳ್ಳೆಷ್ಟು?

ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕರಲ್ಲ, ಬದಲಾಗಿ ವಿದೇಶಕ್ಕೆ ಹೋಗಿ ರಾಷ್ಟ್ರದ ವಿರುದ್ಧ ಮಾತನಾಡುವ ಭಾರತ ವಿರೋಧಿ ನಾಯಕ. ಹೀಗೆ ಮಾಡುವುದರಿಂದ ಅವರು ಏನನ್ನು ಗಳಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಕರ್ನಾಟಕದಲ್ಲಿ ಅಭಿವೃದ್ಧಿಯ ಬಗ್ಗೆ ಯಾವುದೇ ಮಾತುಕತೆ ಇಲ್ಲ, ಯಾರು ಮುಖ್ಯಮಂತ್ರಿಯಾಗಿ ಉಳಿಯುತ್ತಾರೆ ಎಂಬುದರ ಬಗ್ಗೆ ಮಾತ್ರ ಚರ್ಚೆ ನಡೆಯುತ್ತಿದೆ.

ರಾಹುಲ್ ಗಾಂಧಿ ವಿಡಿಯೋ

ದೇಶದ ಸಾಂಸ್ಥಿಕ ರಚನೆಗಳನ್ನು ಬಿಜೆಪಿ ತನ್ನ ವಶಕ್ಕೆ ತೆಗೆದುಕೊಂಡಿದೆ ಮತ್ತು ತನಿಖಾ ಸಂಸ್ಥೆಗಳನ್ನು ರಾಜಕೀಯ ಅಸ್ತ್ರಗಳಾಗಿ ಬಳಸಲಾಗುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.ಭಾರತದ ಸಾಂಸ್ಥಿಕ ರಚನೆಯನ್ನು ಬಿಜೆಪಿ ತನ್ನ ವೈಯಕ್ತಿಕ ಆಸ್ತಿಯೆಂದು ಪರಿಗಣಿಸುತ್ತದೆ ಮತ್ತು ಅದನ್ನು ತನ್ನ ರಾಜಕೀಯ ಶಕ್ತಿಯನ್ನು ಹೆಚ್ಚಿಸಲು ಬಳಸುತ್ತದೆ ಎಂದು ಜರ್ಮನಿಯಲ್ಲಿ ಹೇಳಿದ್ದರು. ಭಾರತದಲ್ಲಿ ಸಂಸ್ಥೆಗಳು ಯಾವ ಪಾತ್ರವನ್ನು ನಿರ್ವಹಿಸುತ್ತಿದ್ದವೋ ಆ ಪಾತ್ರವನ್ನು ನಿರ್ವಹಿಸಲು ಸಾಧ್ಯವಾಗದ ವಾತಾವರಣ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದರು.

ರಾಹುಲ್ ಗಾಂಧಿ ತಮ್ಮ ಮತ ಕಳ್ಳತನದ ಆರೋಪಗಳನ್ನು ಪುನರುಚ್ಚರಿಸಿದರು. ತೆಲಂಗಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆದ್ದಿದೆ ಎಂದು ಅವರು ಹೇಳಿದರು. ಹರಿಯಾಣ ಚುನಾವಣೆಯಲ್ಲೂ ಕಾಂಗ್ರೆಸ್ ಗೆದ್ದಿದೆ, ಆದರೆ ಬಿಜೆಪಿ ಜನಾದೇಶವನ್ನು ಕದ್ದಿದೆ ಎಂದು ಅವರು ಹೇಳಿದರು, ಅದರ ಪುರಾವೆಗಳನ್ನು ನಾನು ಪತ್ರಿಕಾಗೋಷ್ಠಿಯಲ್ಲಿ ಪ್ರಸ್ತುತಪಡಿಸಿದ್ದೇನೆ ಎಂದರು.

ಮಹಾರಾಷ್ಟ್ರ ಚುನಾವಣೆಗಳು ನ್ಯಾಯಯುತವಾಗಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಈ ವಿಷಯದಲ್ಲಿ ಚುನಾವಣಾ ಆಯೋಗಕ್ಕೆ ನೇರ ಪ್ರಶ್ನೆಗಳನ್ನು ಕೇಳಿದ್ದೆ, ಆದರೆ ಸ್ಪಷ್ಟ ಉತ್ತರಗಳು ಸಿಗಲಿಲ್ಲ, ಚುನಾವಣಾ ಪ್ರಕ್ರಿಯೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ ಎಂದು ಅವರು ಆರೋಪಿಸಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 12:40 pm, Tue, 23 December 25

Source link

ಬಿಗ್​​ಬಾಸ್: ರನ್ನರ್ ಅಪ್ ಆದರೂ ವಿನ್ನರ್​​ಗಿಂತ ಹೆಚ್ಚು ಹಣ ಪಡೆದ ತನುಜಾ – Kannada News | Tanuja Puttaswamy remuneration in Telugu Bigg Boss season 09

ಬಿಗ್​​ಬಾಸ್ (Bigg Boss) ಸೀಸನ್ ಮುಗಿಯುತ್ತಾ ಬಂದಿದೆ. ಈಗಾಗಲೇ ಹಿಂದಿ, ಮಲಯಾಳಂ ಬಿಗ್​​ಬಾಸ್ ಮುಗಿದಿವೆ. ಇದೇ ಭಾನುವಾರ ತೆಲುಗು ಬಿಗ್​​ಬಾಸ್ ಸೀಸನ್ 09 ಸಹ ಮುಗಿದಿದೆ. ಈ ಬಾರಿಯ ತೆಲುಗು ಬಿಗ್​​ಬಾಸ್ ಕೆಲವು ಕಾರಣಗಳಿಗೆ ಕನ್ನಡ ಪ್ರೇಕ್ಷಕರ ಗಮನವನ್ನೂ ಸೆಳೆದಿತ್ತು. ಈ ಬಾರಿ ತೆಲುಗು ಬಿಗ್​​ಬಾಸ್​​ನಲ್ಲಿ ಇಬ್ಬರು ಕನ್ನಡತಿಯರು ಭಾಗವಹಿಸಿದ್ದರು, ಮಾತ್ರವಲ್ಲದೆ ಅದ್ಭುತವಾಗಿ ಆಡಿ ಫಿನಾಲೆ ಸಹ ತಲುಪಿದ್ದರು. ನಟಿ ಸಂಜನಾ ಗಲ್ರಾನಿ ಮತ್ತು ತನುಜಾ ಪುಟ್ಟಸ್ವಾಮಿ ಇಬ್ಬರೂ ಸಹ ತೆಲುಗು ಬಿಗ್​​ಬಾಸ್​​ನಲ್ಲಿ ಭಾಗವಹಿಸಿದ್ದರು. ಅದ್ಭುತವಾಗಿ ಆಡಿ ಫಿನಾಲೆ ವರೆಗೆ ಹೋಗಿದ್ದರು. ಆದರೆ ಫಿನಾಲೆಯಲ್ಲಿ ಗೆಲುವು ಅವರದ್ದಾಗಲಿಲ್ಲ.

ಗೆಲುವಿನ ಭರವಸೆ ಮೂಡಿಸಿದ್ದ ತನುಜಾ ಪುಟ್ಟಸ್ವಾಮಿ ಮೊದಲ ರನ್ನರ್ ಅಪ್ ಆದರೆ, ಸಂಜನಾ ಗಲ್ರಾನಿ ನಾಲ್ಕನೇ ರನ್ನರ್ ಅಪ್ ಆದರು. ಕಾಮನರ್ ಆಗಿ ಮನೆಗೆ ಎಂಟ್ರಿ ಕೊಟ್ಟ ಕಲ್ಯಾಣ್ ಅವರು ವಿನ್ನರ್ ಆಗಿ ಇತಿಹಾಸ ಬರೆದರು. ವಿನ್ನರ್ ಆದ ಕಲ್ಯಾಣ್​​ಗೆ 35 ಲಕ್ಷ ರೂಪಾಯಿ ಬಹುಮಾನದ ಮೊತ್ತದ ಜೊತೆಗೆ ಟ್ರೋಫಿ ಮತ್ತು ಮಾರುತಿಯ ಹೊಸ ಕಾರೊಂದನ್ನು ನೀಡಲಾಯ್ತು. ವಿಶೇಷವೆಂದರೆ ವಿನ್ನರ್ ಆದವರಿಗಿಂತಲೂ ಹೆಚ್ಚಿನ ಮೊತ್ತ ಗಳಿಸಿದ್ದು ರನ್ನರ್ ಅಪ್ ಆದ ತನುಜಾ ಪುಟ್ಟಸ್ವಾಮಿ.

ಕಲ್ಯಾಣ್ ಅವರು ಕಾಮನರ್ ಆಗಿ ಬಿಗ್​​ಬಾಸ್ ಮನೆಗೆ ಹೋಗಿದ್ದರು. ಈ ಹಿಂದೆ ಸೈನ್ಯದಲ್ಲಿದ್ದ ಕಲ್ಯಾಣ್, ಜನರ ಓಟಿನ ಮೂಲಕ ಬಿಗ್​​ಬಾಸ್ ಮನೆಗೆ ಆಯ್ಕೆ ಆಗಿ ಹೋಗಿದ್ದರು. ಮನರಂಜನಾ ಕ್ಷೇತ್ರದ ಹಿನ್ನೆಲೆ ಅವರಿಗೆ ಇರಲಿಲ್ಲ. ಆದರೆ ತನುಜಾ ಪುಟ್ಟಸ್ವಾಮಿ ತೆಲುಗು ಟಿವಿ ಲೋಕದ ಜನಪ್ರಿಯ ನಟಿ. ಈಗಾಗಲೇ ಹಲವು ಧಾರಾವಾಹಿಗಳಲ್ಲಿ ತನುಜಾ ನಟಿಸಿ, ತೆಲುಗು ಪ್ರೇಕ್ಷಕರ ಮನ ಗೆದ್ದಿದ್ದಾರೆ. ಹಾಗಾಗಿ ಭಾರಿ ಮೊತ್ತದ ಸಂಭಾವನೆಯನ್ನೇ ತನುಜಾ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ:ಬಿಗ್​​ಬಾಸ್ ಮನೆಯ ‘ಕಬಾಲಿ’ ತನುಜಾ ಪುಟ್ಟಸ್ವಾಮಿ: ವಿಡಿಯೋ

ತೆಲುಗು ಮಾಧ್ಯಮಗಳು ವರದಿ ಮಾಡಿರುವಂತೆ ತನುಜಾ ಅವರ ಸಂಭಾವನೆ ದಿನದ ಲೆಕ್ಕದಲ್ಲಿತ್ತಂತೆ. ಪ್ರತಿ ದಿನ 35 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು. ತನುಜಾ ಅವರು ಒಟ್ಟು 105 ದಿನಗಳ ಕಾಲ ಬಿಗ್​​ಬಾಸ್​​ ಮನೆಯಲ್ಲಿದ್ದರು, ಇದರಿಂದ ಅವರು ಪಡೆದ ಒಟ್ಟು ಸಂಭಾವನೆ 36.75 ಲಕ್ಷ ರೂಪಾಯಿಗಳು. ತೆಲುಗು ಬಿಗ್​​ಬಾಸ್ ಸೀಸನ್ 09ರಲ್ಲಿ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ. ಪ್ರಥಮ ಬಹುಮಾನ ಗೆದ್ದ ಕಲ್ಯಾಣ್, ಕಾಮನರ್ ಆಗಿದ್ದ ಕಾರಣ ಅವರಿಗೆ ಸಂಭಾವನೆಯೇ ಇರಲಿಲ್ಲ ಎಂದು ಸಹ ಕೆಲ ಮಾಧ್ಯಮಗಳು ವರದಿ ಮಾಡಿವೆ. ಪ್ರಥಮ ಬಹುಮಾನ ಗೆದ್ದ ಕಲ್ಯಾಣ್ ಅವರಿಗೆ ಸಿಕ್ಕ ನಗದು ಬಹುಮಾನಕ್ಕಿಂತಲೂ ಹೆಚ್ಚಿನ ಸಂಭಾವನೆಯನ್ನು ತನುಜಾ ಪುಟ್ಟಸ್ವಾಮಿ ಪಡೆದುಕೊಂಡಿದ್ದಾರೆ.

ತನುಜಾ ಪುಟ್ಟಸ್ವಾಮಿ ಅವರು ಕನ್ನಡದ ಸೂಪರ್ ಹಿಟ್ ಸಿನಿಮಾ ‘6-5=3’, ‘ದಂಧೆ ಬಾಯ್ಸ್’ ಇನ್ನೂ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಳ್ಳೆಯ ನಟಿಯಾಗಿರುವ ಅವರು ತೆಲುಗು ಕಿರುತೆರೆ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದಾರೆ. ತೆಲುಗಿನಲ್ಲಿ ಕೆಲ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 12:27 pm, Tue, 23 December 25

Source link

Yearly Horoscope 2026: 2026 ಕನ್ಯಾ ರಾಶಿಯವರಿಗೆ ಬಹುತೇಕ ಸುವರ್ಣಾವಧಿ, ಆದ್ರೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ – Kannada News | Virgo Yearly Horoscope 2026: Astrological Predictions by Dr. Basavaraj Guruji

ಡಾ. ಬಸವರಾಜ ಗುರೂಜಿ ಅವರು 2026ರ ಕನ್ಯಾ ರಾಶಿಯ ವರ್ಷ ಭವಿಷ್ಯದ ಕುರಿತು ಮಾಹಿತಿ ನೀಡಿದ್ದಾರೆ. ಈ ವರ್ಷ ಕನ್ಯಾ ರಾಶಿಯವರಿಗೆ ಬಹುತೇಕ ಸುವರ್ಣಾವಧಿಯಾಗಿದ್ದು, ವಿಶೇಷವಾಗಿ ಗುರು ಗ್ರಹದ ಲಾಭಸ್ಥಾನದ ಸಂಚಾರದಿಂದ ಸರ್ವತೋಮುಖ ಯಶಸ್ಸು, ಬಲ ಮತ್ತು ತೇಜಸ್ಸು ಹೆಚ್ಚಲಿದೆ. ಆದಾಯ 8, ವ್ಯಯ 7 ಇರುವುದರಿಂದ ಆರ್ಥಿಕವಾಗಿ ಸದೃಢ ವರ್ಷ ಇದಾಗಿದೆ. ಗೌರವಗಳು ಹೆಚ್ಚಲಿದ್ದು, ಅವಮಾನಗಳು ಕಡಿಮೆಯಾಗಲಿವೆ.

ವೃತ್ತಿ ಜೀವನದಲ್ಲಿ ಜೂನ್ ತನಕ ವೃತ್ತಿ ಬದಲಾವಣೆ, ಜವಾಬ್ದಾರಿ ಹೆಚ್ಚಳ, ಬಡ್ತಿ ಮತ್ತು ಸ್ಥಾನಪಲ್ಲಟದ ಸಾಧ್ಯತೆ ಇದೆ. ಪ್ರಾಮಾಣಿಕತೆ, ನಿಷ್ಠೆ ಮತ್ತು ಶ್ರದ್ಧೆಯಿಂದ ಕೆಲಸ ಮಾಡುವುದು ಒಳಿತು. ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಬೆಳೆಯಲಿದೆ. ಆರ್ಥಿಕವಾಗಿ ಉನ್ನತಿ, ದೊಡ್ಡ ಯೋಜನೆಗಳ ಯಶಸ್ಸು, ವಿವಾಹ ಯೋಗ, ವಾಹನ ಮತ್ತು ಕಟ್ಟಡ ಯೋಗವಿದೆ. ರಿಯಲ್ ಎಸ್ಟೇಟ್, ಆಸ್ಪತ್ರೆ ನಿರ್ವಹಿಸುವವರಿಗೆ ಶುಭ ಫಲಗಳು.

ಆರೋಗ್ಯದ ವಿಚಾರದಲ್ಲಿ ರಾಹು ಪ್ರಭಾವದಿಂದ ನಿರ್ಲಕ್ಷ್ಯ ಬೇಡ. ಆಕಸ್ಮಿಕ ಘಟನೆಗಳ ಸಾಧ್ಯತೆಯಿದೆ. ಕಂಟಕ ಶನಿಯ ಪ್ರಭಾವದಿಂದ ತಾಳ್ಮೆ ಮತ್ತು ಸಜ್ಜನರ ಸಹವಾಸ ಮುಖ್ಯ. ಪಾಲುದಾರಿಕೆ ಹಾಗೂ ವಿವಾಹಾನಂತರ ಸಣ್ಣ ಸಂಕಟಗಳು ಎದುರಾಗಬಹುದು. ಆದರೂ, ಶ್ರದ್ಧೆಯಿಂದ ಕರ್ಮ ಮಾಡಿ, ದೇವತಾ ಪ್ರಾರ್ಥನೆಯಲ್ಲಿ ತೊಡಗುವುದು ಶುಭ ತರುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಡಿಸಿಎಂ ಡಿ.ಕೆ. ಶಿವಕುಮಾರ್​​- ಮಾಜಿ ಸಚಿವ ಕೆ.ಎನ್​​. ರಾಜಣ್ಣ ಭೇಟಿ ರಹಸ್ಯ ಬಿಚ್ಚಿಟ್ಟ MLC ರಾಜೇಂದ್ರ – Kannada News | K.N. Rajendra Reacts to D.K. Shivakumars Meeting with Rajanna Amidst Karnataka Political Buzz

ದೆಹಲಿ, ಡಿಸೆಂಬರ್​​ 23: ಕರ್ನಾಟಕ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಆಪ್ತ ಕೆ.ಎನ್. ರಾಜಣ್ಣ ಭೇಟಿ ಕುರಿತು ಕಾಂಗ್ರೆಸ್​​ ಎಂಎಲ್​​ಸಿ ಮತ್ತು ರಾಜಣ್ಣ ಪುತ್ರ  ರಾಜೇಂದ್ರ ಪ್ರತಿಕ್ರಿಯಿಸಿದ್ದಾರೆ. ಪಕ್ಷದ ಅಧ್ಯಕ್ಷ ಹಾಗೂ ಡಿಸಿಎಂ ಆಗಿರುವ ಡಿ.ಕೆ. ಶಿವಕುಮಾರ್ ಪಕ್ಷದ ಸದಸ್ಯರಾದ ರಾಜಣ್ಣ ಅವರನ್ನು ಭೇಟಿಯಾಗುವುದು ಸಹಜ. ಯಾವುದೇ ಪ್ರಮುಖ ವಿಚಾರಗಳಿದ್ದಾಗ ಈ ರೀತಿಯ ಭೇಟಿಗಳು ನಡೆಯಬಹುದು. ಭೇಟಿ ವೇಳೆ ನಡೆದ ಚರ್ಚೆ ಬಗ್ಗೆ ತನಗೆ ಮಾಹಿತಿ ಇಲ್ಲ, ಏಕೆಂದರೆ ಇದು ಖಾಸಗಿ ಭೇಟಿ ಎಂದು ಅವರು ತಿಳಿಸಿದ್ದಾರೆ. ಸಿಎಂ ಬದಲಾವಣೆ ವಿಚಾರದಲ್ಲಿ ರಾಜಣ್ಣ ಅವರು ಸಿದ್ದರಾಮಯ್ಯನವರ ಪರ ಗಟ್ಟಿಯಾಗಿ ನಿಂತಿದ್ದಾರೆ. ತಮ್ಮ ಹಿಂದಿನ ಮಾತಿಗೆ ಬದ್ಧರಾಗಿರುವುದಾಗಿ ರಾಜಣ್ಣ ಹೇಳಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಸತೀಶ್ ಜಾರಕಿಹೊಳಿ ಮತ್ತು ಜಮೀರ್ ಅಹ್ಮದ್ ಅವರಂತಹ ಸಿದ್ದರಾಮಯ್ಯ ಆಪ್ತರನ್ನು ಭೇಟಿಯಾಗುವುದು ಪಕ್ಷದ ಅಧ್ಯಕ್ಷರಾಗಿ ಸಹಜವಾದ ಪ್ರಕ್ರಿಯೆ. ಇದು ವಿಶ್ವಾಸ ಗಳಿಸುವ ಪ್ರಯತ್ನದ ಭಾಗವಲ್ಲ, ಬದಲಾಗಿ ಸಾಮಾನ್ಯ ರಾಜಕೀಯ ಮಾತುಕತೆ ಎಂದು ರಾಜೇಂದ್ರ ಅಭಿಪ್ರಾಯಪಟ್ಟಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ರಾಹುಲ್​​ ಗಾಂಧಿಗೆ ಮತ್ತೊಂದು ಪತ್ರ ಬರೆದ ಮಾಜಿ ಸಚಿವ ಕೆ.ಎನ್​​. ರಾಜಣ್ಣ: ಮಹತ್ವದ ವಿಷಯಗಳ ಉಲ್ಲೇಖ – Kannada News | K.N. Rajanna writes to Rahul Gandhi, clarifying his ‘Vote Chori’ statement

ರಾಹುಲ್​​ ಗಾಂಧಿಗೆ ಮತ್ತೊಂದು ಪತ್ರ ಬರೆದ ರಾಜಣ್ಣ

ಬೆಂಗಳೂರು, ಡಿಸೆಂಬರ್​ 23: ಕಾಂಗ್ರೆಸ್​​ ನಾಯಕ ರಾಹುಲ್​ ಗಾಂಧಿಗೆ ಮಾಜಿ ಸಚಿವ ಕೆ.ಎನ್. ರಾಜಣ್ಣ ಮತ್ತೊಂದು ಪತ್ರ ಬರೆದಿದ್ದಾರೆ. ವೋಟ್​​ ಚೋರಿ ಅಭಿಯಾನದ ಬಗ್ಗೆ ತಮ್ಮ ಹೇಳಿಕೆಯನ್ನು ಹೇಗೆ ತಪ್ಪಾಗಿ ಅರ್ಥೈಸಲಾಗಿದೆ ಎಂಬುದರ ಬಗ್ಗೆ ಸಂಭಾಷಣೆ ಸಮೇತ ಪತ್ರದಲ್ಲಿ ಉಲ್ಲೇಖಿಸಲಾಗಿದ್ದು, ಭೇಟಿಗೂ ಸಮಯ ಕೇಳಿದ್ದಾರೆ. ಈಗಾಗಲೇ ನಾಲ್ಕು ಪತ್ರಗಳನ್ನು ಬರೆದಿರುವ ರಾಜಣ್ಣ, ರಾಜ್ಯದಲ್ಲಿನ ವಿದ್ಯಮಾನದಿಂದ ಪಕ್ಷಕ್ಕೆ ಆಗುತ್ತಿರುವ ಡ್ಯಾಮೇಜ್ ಬಗ್ಗೆಯೂ ಅವುಗಳಲ್ಲಿ ಉಲ್ಲೇಖಿಸಿದ್ದರು. ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಕೈ ಬಿಟ್ಟರೆ ಆಗುವ ಡ್ಯಾಮೇಜ್ ಬಗ್ಗೆಯೂ ಮನವರಿಕೆ ಯತ್ನ ಮಾಡಿದ್ದರು.

ರಾಜಣ್ಣ ಬರೆದ ಪತ್ರದಲ್ಲೇನಿದೆ?

ತಾನು ತುಮಕೂರು ಜಿಲ್ಲೆಯ ಮಧುಗಿರಿ ವಿಧಾನಸಭಾ ಕ್ಷೇತ್ರದ ಪ್ರಸ್ತುತ ಶಾಸಕನಾಗಿದ್ದು, ಕರ್ನಾಟಕ ಸರ್ಕಾರದಲ್ಲಿ ಸಹಕಾರ ಸಚಿವನಾಗಿಯೂ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವನಾಗಿಯೂ ಈ ಹಿಂದೆ ಸೇವೆ ಸಲ್ಲಿಸಿದ್ದೇನೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಸಚಿವ ಸಂಪುಟದಿಂದ ತನ್ನನ್ನು ಕೈಬಿಟ್ಟಿರುವ ಹಿನ್ನೆಲೆಯಲ್ಲಿ, ಕೆಲ ಪ್ರಮುಖ ವಿಷಯಗಳನ್ನು ಗಮನಕ್ಕೆ ತರುತ್ತಿದ್ದೇನೆ ಎಂದು ಪತ್ರದಲ್ಲಿ ರಾಜಣ್ಣ ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಅಧಿಕಾರ ಹಂಚಿಕೆ; ಖರ್ಗೆ ಜತೆ ರಾಹುಲ್ ಗಾಂಧಿ 25 ನಿಮಿಷ ಮಾತುಕತೆ

ವೋಟ್ ಚೋರಿ ಕಾರ್ಯಕ್ರಮವನ್ನು ತಾನು ಹೃದಯಪೂರ್ವಕವಾಗಿ ಬೆಂಬಲಿಸಿದ್ದು,ಇಂತಹ ಮಹತ್ವದ ವಿಷಯಗಳನ್ನು ದೇಶದ ಮುಂದೆ ಇಡುವ ನಿಮ್ಮ ನಾಯಕತ್ವ ಮತ್ತು ಮುಂದಾಳತ್ವವನ್ನು ಆಳವಾಗಿ ಮೆಚ್ಚುತ್ತೇನೆ. ನಾನು ನೀಡಿದ್ದ ಹೇಳಿಕೆಯ ಉದ್ದೇಶ ಏನೆಂದರೆ, ಕೆಪಿಸಿಸಿ ನೇಮಕ ಮಾಡಿದ ಬಿಎಲ್ಏಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ. ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಮತ್ತು ಸಂಬಂಧಿಸಿದವರು ಈ ಲೋಪಗಳತ್ತ ಸೂಕ್ತ ಗಮನ ನೀಡಿದ್ದರೆ, ಅವುಗಳನ್ನು ತಪ್ಪಿಸಬಹುದಾಗಿತ್ತು. ಹಾಗಿದ್ದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಇನ್ನೂ 8 ರಿಂದ 10 ಸ್ಥಾನಗಳನ್ನು ಹೆಚ್ಚಾಗಿ ಗೆಲ್ಲುವ ಸಾಧ್ಯತೆ ಇತ್ತು. ಇದೇ ರೀತಿಯ ಲೋಪಗಳನ್ನು ಇತರ ರಾಜ್ಯಗಳಲ್ಲಿಯೂ ತಪ್ಪಿಸಿದ್ದರೆ, ಇನ್ನೂ 30 ರಿಂದ 40 ಸ್ಥಾನಗಳನ್ನು ಹೆಚ್ಚಾಗಿ ಗೆಲ್ಲಬಹುದಾಗಿತ್ತು. ಆ ಪರಿಸ್ಥಿತಿಯಲ್ಲಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಆಗುತ್ತಿರಲಿಲ್ಲ. ಬದಲಾಗಿ ಕಾಂಗ್ರೆಸ್ ಪಕ್ಷವೇ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು, ನಮ್ಮ ಪ್ರಿಯ ಯುವ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಮಂತ್ರಿಯಾಗುತ್ತಿದ್ದರು ಎಂಬುದಾಗಿತ್ತು ಎಂದು ಪತ್ರದಲ್ಲಿ ರಾಜಣ್ಣ ತಿಳಿಸಿದ್ದಾರೆ.

ತಮ್ಮ ರಾಜಕೀಯ ಜೀವನ, ಕಾಂಗ್ರೆಸ್​​ ಪಕ್ಷದ ಮೇಲಿನ ನಿಷ್ಠೆ, ಸಚಿವನಾಗಿ ಮಾಡಿದ ಕೆಲಸಗಳು ಸೇರಿ ತಮ್ಮ ರಾಜಕೀಯ ಸಾಧನೆ ಬಗ್ಗೆಯೂ ಪತ್ರದಲ್ಲಿ ರಾಜಣ್ಣ ಉಲ್ಲೇಖಿಸಿದ್ದು, ಸತ್ಯಾಸತ್ಯತೆಯನ್ನು ನಿಮ್ಮಮುಂದಿಡುವ ಸಲುವಾಗಿ ಈ ಪತ್ರ ಬರೆದಿದ್ದೇನೆ. ಜೊತೆಗೆ, ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಿ, ತಪ್ಪು ರೀತಿಯಲ್ಲಿ ನಿಮ್ಮ ಗಮನಕ್ಕೆ ತಂದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಿನಂತಿಸುತ್ತೇನೆ. ಈ ವಿಷಯಗಳ ಕುರಿತು ವಿವರವಾಗಿ ಚರ್ಚಿಸಲು, ಭೇಟಿಗೆ ಸಮಯ ನೀಡುವಂತೆಯೂ ಪತ್ರಮುಖೇನ ರಾಹುಲ್​​ ಗಾಂಧಿಗೆ ಅವರು ಮನವಿ ಮಾಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 11:42 am, Tue, 23 December 25

Source link

‘ಇದು ಬೆಂಗಳೂರಿನಲ್ಲಿ ಸಹಿಸಲಾಗದ ಕ್ಷಣ’: ಟ್ರಾಫಿಕ್‌ನಲ್ಲಿ ಕಸದ ಲಾರಿಯ ಪಕ್ಕದಲ್ಲಿ ಸಿಲುಕಿಕೊಂಡ ಆಟೋದಲ್ಲಿದ್ದ ಮಹಿಳೆ – Kannada News | Pavitra Kulkarni’s Viral Video: Bangalore Traffic, Garbage Woes and Citizen Frustration

ಬೆಂಗಳೂರು, ಡಿ.23: ಕೆಲವರು ಬೆಂಗಳೂರನ್ನು (Bangalore traffic) ಮೆಚ್ಚಿಕೊಂಡರೆ, ಇನ್ನು ಕೆಲವರು ಇಲ್ಲಿನ ವ್ಯವಸ್ಥೆಯನ್ನು ದೂರುತ್ತಾರೆ. ರಾಜ್ಯ ರಾಜಧಾನಿ ಎಲ್ಲರಿಗೂ ಆಸರೆಯಾಗಿದೆ. ಆದರೆ ಇಲ್ಲಿನ ರಸ್ತೆ, ಟ್ರಾಫಿಕ್​​​​​, ವಾತಾವರಣದ ಬಗ್ಗೆ ಅನೇಕರಿಗೆ ಅಸಮಾಧಾನ ಇದೆ. ಇದೀಗ ಇಲ್ಲೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಪವಿತ್ರಾ ಕುಲಕರ್ಣಿ ಎಂಬುವವರು, ಹಂಚಿಕೊಂಡಿರುವ ವಿಡಿಯೋದಲ್ಲಿ ಬೆಂಗಳೂರಿನಲ್ಲಿ ತಾವು ಅನುಭವಿಸಿದ ಸಂಕಷ್ಟದ ಬಗ್ಗೆ ಹಂಚಿಕೊಂಡಿದ್ದಾರೆ. ಆಟೋದಲ್ಲಿ ಹೋಗುತ್ತಿದ್ದ ವೇಳೆ ನಡೆದ ಘಟನೆಯನ್ನು ಈ ವಿಡಿಯೋ ಮೂಲಕ ವಿವರಿಸಿದ್ದಾರೆ. ನಗರದ ಜನದಟ್ಟಣೆಯ ರಸ್ತೆಗಳಲ್ಲಿ ದೈನಂದಿನ ಜೀವನದ ಕೆಟ್ಟ ಚಿತ್ರಣ ಹೇಗಿದೆ ಎಂಬುದನ್ನು ಇನ್ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಈ ವಿಡಿಯೊದಲ್ಲಿ ಹೀಗೆ ಬರೆದುಕೊಂಡಿದ್ದಾರೆ “ಇದು ಬೆಂಗಳೂರಿನ ಸಹಿಸಲಾಗದ ಕ್ಷಣ?” ಗಂಟೆಗಟ್ಟಲೆ ಕಸದ ಲಾರಿಯ ಪಕ್ಕದಲ್ಲಿ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡರೂ ಏನೂ ಅನಿಸುತ್ತಿಲ್ಲ ಎಂದು ಹೇಳಿದ್ದಾರೆ. ಪವಿತ್ರಾ ಕುಲಕರ್ಣಿ ಟ್ರಾಫಿಕ್​​​ನಲ್ಲಿ ಸಿಲುಕಿಕೊಂಡ ವೇಳೆ ಚಿತ್ರಹಿಂಸೆ ಅನುಭವಿಸಿದ್ದಾರೆ. ತಮ್ಮ ರಿಕ್ಷಾದ ಪಕ್ಕದಲ್ಲೇ ಕಸ ಲಾರಿಯೊಂದು ಬಂದು ನಿಂತಿತ್ತು. ತನ್ನ ಗಮ್ಯಸ್ಥಾನವನ್ನು ತಲುಪಲು 78 ನಿಮಿಷಗಳು ಬೇಕು. ಜತೆಗೆ ಟ್ರಾಫಿಕ್, ಅದರ ನಡುವೆ ಈ ಕಸ ವಾಸನೆ, ಇದು ಪ್ರತಿದಿನದ ನರಕಯಾತನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರು ವಿದೇಶಿಗರ ಶಾಶ್ವತ ಮನೆ: ಭಾರತದ ಸರಳ ಜೀವನಕ್ಕೆ ರಷ್ಯಾ ಮಹಿಳೆ ಫಿದಾ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇನ್ನು ಈ ವಿಡಿಯೋ ಬಗ್ಗೆ ನೆಟ್ಟಿಗರು ಕೂಡ ಕಮೆಂಟ್​​ ಮಾಡಿದ್ದಾರೆ. ಟ್ರಾಫಿಕ್ ಮತ್ತು ಆ ವಾಸನೆಗಳು, ಇದು ನಿಜವಾಗಿಯೂ ಮುಂದಿನ ಹಂತ ಎಂದು ಒಬ್ಬರು ಟೀಕಿಸಿದ್ದಾರೆ. ಈ ಪರಿಸ್ಥಿತಿಯನ್ನು ನಾನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬಲ್ಲೆ, ಪ್ರತಿದಿನವೂ ಈ ಸ್ಥಿತಿ ಬೆಂಗಳೂರಿನಲ್ಲಿ ನಡೆಯುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಇದು ಒಂದು ಹಾಸ್ಯಮಯ ಕ್ಷಣ, ಬೆಂಗಳೂರು ಮಾತ್ರ ನಿಮಗೆ ಹೀಗೆ ಮಾಡಲು ಸಾಧ್ಯ ಎಂದು ಮತ್ತೊಬ್ಬರು ಕಮೆಂಟ್​​ ಮಾಡಿದ್ದಾರೆ. ಈ ನಗರವು ಪ್ರತಿದಿನ ನಿಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತದೆ ಎಂದು ಇನ್ನೊಬ್ಬರು ಕಮೆಂಟ್​​​ ಮಾಡಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Vasthu Tips: ಮನೆಯ ಈ ದಿಕ್ಕಿನಲ್ಲಿ ಎಂದಿಗೂ ಕಸದ ಬುಟ್ಟಿಯನ್ನು ಇಡಬೇಡಿ; ಸಮಸ್ಯೆ ತಪ್ಪಿದ್ದಲ್ಲ! – Kannada News | Vastu for Dustbin Placement: Avoid Financial Loss and Boost Home Positivity

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡಾ ವಾಸ್ತುವಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಮನೆ ಕಟ್ಟುವುದರಿಂದ ಹಿಡಿದು ಮನೆಯೊಳಗಿನ ಅಲಂಕಾರಿಕ ವಸ್ತುವಿನ ತನಕ ವಾಸ್ತುವಿನ ಸಲಹೆಯನ್ನು ಪಾಲಿಸುತ್ತಾರೆ. ಆದರೆ ಅನೇಕ ಜನರು ಕಸದ ಬುಟ್ಟಿ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ಅದನ್ನು ಮನೆಯ ಯಾವುದೋ ಮೂಲೆಯಲ್ಲಿ ಇರಿಸಲಾಗುತ್ತದೆ. ಆದರೆ ವಾಸ್ತು ತಜ್ಞರು ಅದನ್ನು ಎಂದಿಗೂ ತಪ್ಪು ದಿಕ್ಕಿನಲ್ಲಿ ಇಡಬಾರದು ಎಂದು ಎಚ್ಚರಿಸುತ್ತಾರೆ.

ವಾಸ್ತು ಶಾಸ್ತ್ರದ ಪ್ರಕಾರ, ಮನೆಯೊಳಗೆ ಕಸದ ಬುಟ್ಟಿಯನ್ನು ಈಶಾನ್ಯ ಅಥವಾ ವಾಯುವ್ಯ ದಿಕ್ಕಿನಲ್ಲಿ ಇಡಲೇಬಾರದು. ಇದು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ದಿಕ್ಕುಗಳು ದೇವತೆಗಳಿಗೆ ಸಂಬಂಧಿಸಿವೆ. ಆದ್ದರಿಂದ, ಈ ಎರಡು ದಿಕ್ಕುಗಳಲ್ಲಿ ಕಸದ ಬುಟ್ಟಿಯನ್ನು ಇಡುವುದರಿಂದ ಆರ್ಥಿಕ ಸಮಸ್ಯೆಗಳು ಹೆಚ್ಚಾಗುತ್ತವೆ.

ಅದೇ ರೀತಿ, ಯಾವುದೇ ಸಂದರ್ಭದಲ್ಲಿ ಮುಖ್ಯ ದ್ವಾರದಲ್ಲಿ ಅಥವಾ ಸ್ನಾನಗೃಹದಲ್ಲಿ ಕಸದ ಬುಟ್ಟಿಯನ್ನು ಇಡಬಾರದು. ಇದು ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ವಾಸ್ತು ತಜ್ಞರು ಹೇಳುತ್ತಾರೆ. ಮುಖ್ಯ ದ್ವಾರದಲ್ಲಿ ಅಥವಾ ಸ್ನಾನಗೃಹದಲ್ಲಿ ಕಸದ ಬುಟ್ಟಿಯನ್ನು ಇಡುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಇದು ಮನೆಯೊಳಗೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಬಹುದು.

ಇದನ್ನೂ ಓದಿ: ವಾಸ್ತು ಪ್ರಕಾರ, ಮನೆಯಲ್ಲಿ ಕಾಮಧೇನುವಿನ ವಿಗ್ರಹ ಇಡುವುದರಿಂದ ಸಿಗುವ ಅದ್ಭುತ ಲಾಭಗಳಿವು!

ವಾಸ್ತು ಶಾಸ್ತ್ರದ ಪ್ರಕಾರ, ಧನಾತ್ಮಕ ಶಕ್ತಿಯು ಮನೆಗೆ ಪ್ರವೇಶಿಸಬೇಕು, ಆದ್ದರಿಂದ ಪಶ್ಚಿಮ ಅಥವಾ ನೈಋತ್ಯ ದಿಕ್ಕಿನಲ್ಲಿ ಕಸದ ತೊಟ್ಟಿಯನ್ನು ಇಡುವುದು ತುಂಬಾ ಶುಭ. ಇದು ಮನೆಯೊಳಗಿನ ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡುತ್ತದೆ ಮತ್ತು ಶಾಂತಿಯನ್ನು ತರುತ್ತದೆ. ಇದು ಕುಟುಂಬದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Dream Home: ಸ್ವಂತ ಮನೆ ನಿರ್ಮಾಣಕ್ಕೆ ಸಾಕಷ್ಟು ಅಡೆತಡೆ ಬರುತ್ತಿದೆಯೇ? ಜ್ಯೋತಿಷ್ಯ ಸಲಹೆ ಇಲ್ಲಿದೆ – Kannada News | Astrological Remedies to Achieve Your Dream of Owning a Home

ಪ್ರತಿಯೊಬ್ಬ ವ್ಯಕ್ತಿಗೂ ಸ್ವಂತ ಮನೆ ಹೊಂದುವ ಆಸೆ ಇರುತ್ತದೆ. “ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು” ಎಂಬ ಗಾದೆಯು ಸ್ವಂತ ಮನೆ ಕಟ್ಟುವುದರ ಶ್ರಮ ಮತ್ತು ಮಹತ್ವವನ್ನು ತಿಳಿಸುತ್ತದೆ. ಸಾಲ ಮಾಡಿ ಮನೆ ಕಟ್ಟಿದರೂ ಅದರಲ್ಲಿ ಶ್ರಮ ಮತ್ತು ಕಷ್ಟ ಇರುತ್ತದೆ. ಅನೇಕರು ಬಾಡಿಗೆ ಮನೆಗಳಲ್ಲಿ ಅಥವಾ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುತ್ತಿದ್ದು, ಸ್ವಂತ ಮನೆಗಾಗಿ ನಿರಂತರವಾಗಿ ಪ್ರಯತ್ನಿಸುತ್ತಿರುತ್ತಾರೆ. ಕೆಲವರಿಗೆ ಪೂರ್ವಿಕರ ಆಸ್ತಿ, ಭೂಮಿ ಇದ್ದರೂ ಸಹ ಮನೆ ಕಟ್ಟಲು ಸಾಧ್ಯವಾಗದೆ ಅಪಾರ್ಟ್‌ಮೆಂಟ್‌ಗಳಲ್ಲಿ ಅಥವಾ ಬಾಡಿಗೆ ಮನೆಗಳಲ್ಲಿ ಉಳಿದಿರುವುದನ್ನು ಕಾಣಬಹುದು. ಇನ್ನು ಕೆಲವರಿಗೆ ಹಣ ಕೂಡಿಟ್ಟರೂ ಸಹ ಅದನ್ನು ಮನೆ ನಿರ್ಮಾಣಕ್ಕೆ ಬಳಸಲು ಸಾಧ್ಯವಾಗುವುದಿಲ್ಲ. ಸಿಮೆಂಟ್, ಕಬ್ಬಿಣದ ಬೆಲೆ ಏರಿಕೆಯಂತಹ ಕಾರಣಗಳಿಂದ ನಿರ್ಮಾಣ ಕಾರ್ಯ ಮುಂದೂಡಲ್ಪಟ್ಟು, ಅಂತಿಮವಾಗಿ ಅಪಾರ್ಟ್‌ಮೆಂಟ್ ಖರೀದಿಗೆ ಹೋಗುವ ಸನ್ನಿವೇಶಗಳು ಇರುತ್ತವೆ.

ಈ ಎಲ್ಲಾ ಸವಾಲುಗಳ ನಡುವೆ, ಸ್ವಂತ ಮನೆ ಯೋಗವಿದೆಯೇ ಅಥವಾ ಅದನ್ನು ಹೇಗೆ ಪಡೆದುಕೊಳ್ಳಬೇಕು ಎಂಬುದಕ್ಕೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ತಜ್ಞರಾದ ಡಾ. ಬಸವರಾಜ ಗುರೂಜಿ ತಮ್ಮ ನಿತ್ಯ ಭಕ್ತಿಯಲ್ಲಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ.

ಗುರೂಜಿಯವರು ಹೇಳುವಂತೆ, ಜ್ಯೋತಿಷ್ಯದ ಪ್ರಕಾರ, ಒಬ್ಬರ ಜಾತಕದಲ್ಲಿ ಮನೆ ಕಟ್ಟುವುದು ಅಥವಾ ಖರೀದಿಸುವ ಯೋಗವಿದೆಯೇ ಎಂದು ಪರೀಕ್ಷಿಸಿಕೊಳ್ಳುವುದು ಮುಖ್ಯ. ಜಾತಕದಲ್ಲಿ ಮನೆ ಕಟ್ಟುವುದು ಅಥವಾ ಹೊಂದುವುದಕ್ಕೆ ಪ್ರೋತ್ಸಾಹ ನೀಡುವ ಪ್ರಮುಖ ಗ್ರಹಗಳೆಂದರೆ ಕುಜ (ಮಂಗಳ), ಶುಕ್ರ ಮತ್ತು ಬುಧ. ಈ ಮೂರು ಗ್ರಹಗಳ ಅನುಗ್ರಹವು ಸ್ವಂತ ಮನೆ ಕನಸನ್ನು ನನಸಾಗಿಸಲು ಸಹಾಯಕ.

ಕುಜ ಗ್ರಹದ ಅನುಗ್ರಹ ಅತ್ಯಗತ್ಯ. ಕುಜ ಗ್ರಹದ ಅಧಿಪತಿ ಸುಬ್ರಹ್ಮಣ್ಯ ಸ್ವಾಮಿ. ಜಾತಕದಲ್ಲಿ ನಾಲ್ಕನೆಯ ಮನೆಯು ಮನೆ, ಆಸ್ತಿ ಮತ್ತು ವಾಹನಗಳ ಬಗ್ಗೆ ಸೂಚಿಸುತ್ತದೆ. ನಾಲ್ಕನೆಯ ಮನೆಯ ಅಧಿಪತಿ, ನಾಲ್ಕನೆಯ ಮನೆಯಲ್ಲಿರುವ ಗ್ರಹಗಳು, ಅವುಗಳ ಸ್ಥಿತಿಗತಿಗಳು ಮತ್ತು ನಾಲ್ಕನೇ ಮನೆಯ ಮೇಲೆ ಬೀಳುವ ದೃಷ್ಟಿ – ಇವೆಲ್ಲವೂ ಮನೆ ಯೋಗವನ್ನು ನಿರ್ಧರಿಸುತ್ತವೆ. ಮನೆಯನ್ನು ಅಂದವಾಗಿ ನಿರ್ಮಿಸಲು ಶುಕ್ರನ ಅನುಗ್ರಹ ಮತ್ತು ಸರಿಯಾದ ಯೋಜನೆಗೆ ಬುಧನ ಅನುಗ್ರಹ ಬೇಕು.

ಇದನ್ನೂ ಓದಿ: ವಾಸ್ತು ಪ್ರಕಾರ, ಮನೆಯಲ್ಲಿ ಕಾಮಧೇನುವಿನ ವಿಗ್ರಹ ಇಡುವುದರಿಂದ ಸಿಗುವ ಅದ್ಭುತ ಲಾಭಗಳಿವು!

ಮನೆ ಯೋಗ ಪ್ರಾಪ್ತಿಗಾಗಿ ಮಾಡಬೇಕಾದ ಪರಿಹಾರಗಳು:

  • ಮಂಗಳ ಗ್ರಹದ ಆರಾಧನೆ: ಮಂಗಳ ಗ್ರಹವನ್ನು ಸತತವಾಗಿ ಪೂಜಿಸುವುದು ಮುಖ್ಯ. ಮಂಗಳವಾರದಂದು ಮಂಗಳ ಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಬೇಕು.
  • ಸುಬ್ರಹ್ಮಣ್ಯ ಸ್ವಾಮಿ ಪೂಜೆ: ಮಂಗಳ ಗ್ರಹದ ಅಧಿಪತಿಯಾದ ಸುಬ್ರಹ್ಮಣ್ಯ ಸ್ವಾಮಿಯನ್ನು ಪೂಜಿಸುವುದು ಅತಿ ಮುಖ್ಯ. ಪ್ರತಿ ಮಂಗಳವಾರದಂದು ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಬಹುದು. ನಾಗರಕಲ್ಲು ಪೂಜೆ ಸಹ ಫಲಪ್ರದ. ಕನಿಷ್ಠ 5-10 ನಿಮಿಷಗಳ ಕಾಲ ಸುಬ್ರಹ್ಮಣ್ಯ ಸ್ವಾಮಿಯನ್ನು ಶಿರಬಾಗಿ ಪ್ರಾರ್ಥಿಸುವುದರಿಂದ ಮನೆ ಯೋಗ ಪ್ರಾಪ್ತವಾಗುತ್ತದೆ.
  • ಕೃಷ್ಣ ಪಕ್ಷದ ಚತುರ್ಥಿ ಪೂಜೆ: ಕೃಷ್ಣ ಪಕ್ಷದ ಚತುರ್ಥಿಯಂದು ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡುವುದರಿಂದ ಮನೆ ಯೋಗ ಆಟೋಮ್ಯಾಟಿಕ್ ಆಗಿ ಪ್ರಾಪ್ತವಾಗುತ್ತದೆ.
  • ಮಂತ್ರ ಜಪ: ಪ್ರತಿನಿತ್ಯ “ಓಂ ಅಂಗಾರಕಾಯ ನಮಃ” ಮಂತ್ರವನ್ನು ಜಪಿಸುವುದರಿಂದ ಕುಜ ಗ್ರಹದ ಅನುಗ್ರಹ ದೊರೆಯುತ್ತದೆ. ಮಂತ್ರ ಜಪಿಸಿದ ನಂತರ ಶುದ್ಧ ಮನಸ್ಸಿನಿಂದ ಮನೆ ಬೇಕೆಂದು ಪ್ರಾರ್ಥಿಸಬೇಕು.
  • ವಿಶೇಷ ಮಂತ್ರಗಳು: ಹೆಚ್ಚು ಪರಿಣಾಮಕಾರಿ ಫಲಿತಾಂಶಗಳಿಗಾಗಿ “ಓಂ ಕ್ರಾಮ್ ಕ್ರೀಮ್ ಕ್ರೌಮ್ ಸಃ ಅಂಗಾರಕಾಯ ನಮಃ” ಅಥವಾ “ಓಂ ಕ್ರಾಮ್ ಕ್ರೀಮ್ ಕ್ರೌಮ್ ಸಃ ಭೌಮಾಯ ನಮಃ” ಮಂತ್ರಗಳನ್ನು ಜಪಿಸಬಹುದು.
  • ಮಂಗಳವಾರ ಉಪವಾಸ: ಮಂಗಳವಾರದಂದು ಉಪವಾಸ ಆಚರಿಸುವುದು ತುಂಬಾನೇ ಒಳ್ಳೆಯದು ಎಂದು ಹೇಳಲಾಗುತ್ತದೆ.

ಈ ಎಲ್ಲಾ ಪರಿಹಾರಗಳು ನಂಬಿಕೆಯ ಆಧಾರದಲ್ಲಿರುತ್ತವೆ. ಜಾತಕ ಪರಿಶೀಲನೆ ಮಾಡಿಸಿ, ಈ ಕ್ರಮಗಳನ್ನು ಶ್ರದ್ಧೆಯಿಂದ ಅನುಸರಿಸುವುದರಿಂದ ಸ್ವಂತ ಮನೆ ಕನಸು ನನಸಾಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Shanku Sthapana: ಯಾವುದೇ ಕಟ್ಟಡ ಕಟ್ಟುವ ಮುನ್ನ ಶಂಕುಸ್ಥಾಪನೆ ಮಾಡುವುದು ಯಾಕೆ ಗೊತ್ತಾ? – Kannada News | Shanku Sthapana Importance: Foundation Ceremony for Land Purification and Prosperity

ಮನೆ, ದೇವಸ್ಥಾನ ಅಥವಾ ಯಾವುದೇ ಸಾಮಾಜಿಕ ಸೇವಾ ಕಟ್ಟಡ ನಿರ್ಮಿಸುವ ಮೊದಲು ಶಂಕುಸ್ಥಾಪನೆ ಮಾಡುವುದು ಹಿಂದೂ ಸಂಪ್ರದಾಯದಲ್ಲಿ ಅತ್ಯಂತ ಮಹತ್ವದ ವಿಧಿಯಾಗಿದೆ. ಕೇವಲ ಹೋಗಿ ಪೂಜೆ ಮಾಡಿ ಮನೆ ಕಟ್ಟಲು ಪ್ರಾರಂಭಿಸುವುದಕ್ಕಿಂತ, ಶಾಸ್ತ್ರೋಕ್ತವಾಗಿ ಶಂಕುಸ್ಥಾಪನೆ ಮಾಡುವುದರಿಂದ ಆ ಭೂಮಿಗೆ ಶತಮಾನಗಳ ಕಾಲ ಬಲ ಸಿಗುತ್ತದೆ ಮತ್ತು ಆಸ್ತಿಯು ವಂಶಪಾರಂಪರ್ಯವಾಗಿ ಉಳಿಯುತ್ತದೆ ಎಂಬುದು ಪ್ರಾಚೀನ ನಂಬಿಕೆ. ಉತ್ತಮ ಮುಹೂರ್ತ, ಆಯ ಮತ್ತು ಭೂಮಿಯ ಬಲವನ್ನು ಗಮನಿಸಿ ಮಾಡುವ ಈ ಕ್ರಿಯೆಯು ಕೇವಲ ಧಾರ್ಮಿಕ ವಿಧಿಯಲ್ಲ, ಇದು ಶುಭ ಸಂಕಲ್ಪದ ಪ್ರತೀಕವಾಗಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ತಜ್ಞರಾದ ಡಾ. ಬಸವರಾಜ ಗುರೂಜಿ ತಮ್ಮ ನಿತ್ಯ ಭಕ್ತಿಯಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಗುರೂಜಿಯವರು ಹೇಳುವಂತೆ, ಶಂಕುಸ್ಥಾಪನೆ ಎಂದರೆ, ನಾವು ಕಟ್ಟಲು ಉದ್ದೇಶಿಸಿರುವ ಸ್ಥಳದಲ್ಲಿ ನಿರ್ಮಾಣದ ಸದುದ್ದೇಶದಿಂದ ಸಂಕಲ್ಪ ಮಾಡುವುದು. ಇದು ನಿಮ್ಮ ರಾಶಿ, ಜಾತಕಕ್ಕೆ ಅನುಗುಣವಾಗಿ ಶುಭ ಮುಹೂರ್ತದಲ್ಲಿ, ನಿಮ್ಮ ನಾಲ್ಕನೇ ಮನೆಯ ಅಧಿಪತಿಯ ಸ್ಥಾನವನ್ನು ಗಮನಿಸಿ ನಡೆಸುವ ಪೂಜೆ. ಕೈಯಲ್ಲಿ ಹಣವಿಲ್ಲದಿದ್ದರೂ ಅಥವಾ ಸಾಲದ ವ್ಯವಸ್ಥೆ ಇಲ್ಲದಿದ್ದರೂ ಸಹ, ಭೂಮಿಯಲ್ಲಿ ಮನೆ ಕಟ್ಟುವ ಬಲವಾದ ಉದ್ದೇಶದಿಂದ ಮಾಡುವ ಸತ್ಸಂಕಲ್ಪವೇ ಶಂಕುಸ್ಥಾಪನೆ.

ಪ್ರತಿ ಭೂಮಿಗೂ ಮೂರು ಪ್ರಮುಖ ದೋಷಗಳಿರುತ್ತವೆ ಎಂದು ಶಾಸ್ತ್ರಗಳು ಹೇಳುತ್ತವೆ:

  • ಸ್ಪರ್ಶ ದೋಷ: ಭೂಮಿಯಲ್ಲಿ ಓಡಾಡಿರುವ ಹಾವುಗಳು, ಜೀವಜಂತುಗಳು, ಅಥವಾ ಅಲ್ಲಿ ಸತ್ತಿರುವ ಪ್ರಾಣಿಗಳಿಂದ ಉಂಟಾಗುವ ದೋಷ.
  • ದೃಷ್ಟಿ ದೋಷ: ಜಾಗವನ್ನು ನೋಡಿದಾಗ ಜನರಿಗೆ ಉಂಟಾಗುವ ನಕಾರಾತ್ಮಕ ಭಾವನೆಗಳು ಅಥವಾ ಕೆಟ್ಟ ದೃಷ್ಟಿಯಿಂದ ಬರುವ ದೋಷ.
  • ಶಲ್ಯಾ ದೋಷ (ಮೃತ್ಯು ದೋಷ): ಭೂಮಿಯಲ್ಲಿ ಹೂತಿರುವ ಮೃತ ದೇಹಗಳು ಅಥವಾ ಯಾವುದಾದರೂ ಅಶುಭ ವಸ್ತುಗಳಿಂದ ಉಂಟಾಗುವ ದೋಷ. ಅನೇಕ ಜನರು ಸೈಟ್ ಅಥವಾ ಮನೆಯನ್ನು ಕೊಂಡುಕೊಂಡು ನಂತರ ಮಾರಾಟ ಮಾಡುವುದು ಅಥವಾ ಲೋನ್ ಕಟ್ಟಲಾಗದೆ ಹಿಂತಿರುಗಿಸುವುದು ಈ ದೋಷಗಳ ಪರಿಣಾಮವಾಗಿರಬಹುದು.

ಈ ಮೂರು ದೋಷಗಳನ್ನು ನಿವಾರಿಸಲು ಶಂಕುಸ್ಥಾಪನೆ ಅತ್ಯಗತ್ಯ. ಇದನ್ನು ಈಶಾನ್ಯ ದಿಕ್ಕಿನಲ್ಲಿ ಮಾಡಲಾಗುತ್ತದೆ. ಶಂಕುಸ್ಥಾಪನೆಯ ಸಮಯದಲ್ಲಿ, ಬ್ರಾಹ್ಮೀ ಮುಹೂರ್ತದಲ್ಲಿ ಬಿಲ್ವ, ಅತ್ತಿ ಅಥವಾ ತುಳಸಿಯಂತಹ ಸಣ್ಣ ಗಿಡವನ್ನು ನೆಡಲಾಗುತ್ತದೆ. ನಿರ್ಮಾಣದ ಸಮಯದಲ್ಲಿ ಈ ಗಿಡವನ್ನು ತೆಗೆದು ಸುರಕ್ಷಿತ ಸ್ಥಳಕ್ಕೆ ಅಥವಾ ದೇವಸ್ಥಾನಕ್ಕೆ ಸ್ಥಳಾಂತರಿಸಬಹುದು, ಅಥವಾ ಮಡಕೆಯಲ್ಲಿಟ್ಟು ಪೋಷಿಸಬಹುದು. ನವಗ್ರಹ ದೋಷ ನಿವಾರಣೆ ಮತ್ತು ವಾಸ್ತು ಪೂಜೆಗಳನ್ನು ಶಂಕುಸ್ಥಾಪನೆಯೊಂದಿಗೆ ಮಾಡುವುದರಿಂದ ಭೂಶುದ್ಧಿ ಆಗುತ್ತದೆ. ಗಂಗಾಜಲ ಮತ್ತು ಪಂಚಗವ್ಯಗಳನ್ನು ಭೂಮಿಯ ಮೇಲೆ ಸಿಂಪಡಿಸುವುದರಿಂದ ಭೂಮಿಯ ಎಲ್ಲಾ ದೋಷಗಳು ನಿವಾರಣೆಯಾಗಿ ಮನೆ ಕಟ್ಟಿಕೊಳ್ಳಲು ಸುಗಮ ವಾತಾವರಣ ಸೃಷ್ಟಿಯಾಗುತ್ತದೆ.

ಇದನ್ನೂ ಓದಿ: ವಾಸ್ತು ಪ್ರಕಾರ, ಮನೆಯಲ್ಲಿ ಕಾಮಧೇನುವಿನ ವಿಗ್ರಹ ಇಡುವುದರಿಂದ ಸಿಗುವ ಅದ್ಭುತ ಲಾಭಗಳಿವು!

ಇತ್ತೀಚಿನ ದಿನಗಳಲ್ಲಿ, ಕಲ್ಲಹಳ್ಳಿಯ ಭೂವರಾಹ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಅಲ್ಲಿನ ಇಟ್ಟಿಗೆ ಅಥವಾ ಮಣ್ಣನ್ನು ತಂದು ನಮ್ಮ ಭೂಮಿಗೆ ಹಾಕುವುದರಿಂದಲೂ ಭೂಮಿಗೆ ಬಲ ಬರುತ್ತದೆ ಎಂಬ ನಂಬಿಕೆಯಿದೆ. ಗೌತಮ ಮಹರ್ಷಿಗಳು ಸ್ಥಾಪಿಸಿದ ಆ ಜಾಗದ ಮಣ್ಣು ಮನೆ ನಿರ್ಮಾಣಕ್ಕೆ ಅನುಕೂಲ ಮಾಡಿಕೊಡುತ್ತದೆ ಎಂದು ಹೇಳಲಾಗುತ್ತದೆ. ತಮ್ಮದೇ ಆದ ಸೈಟ್ ಇದ್ದರೂ ಕೂಡ, ಅದರ ಕಡೆಗೆ ಗಮನ ಹರಿಸದೆ ಇರುವುದು ಅಥವಾ ಸೈಟ್ ಅನ್ನು ನೋಡದಿರುವುದು ಆಸ್ತಿಯು ವಂಶಪಾರಂಪರ್ಯವಾಗಿ ಬರದಿರಲು ಕಾರಣವಾಗಬಹುದು.

ಹೀಗಾಗಿ, ಶಂಕುಸ್ಥಾಪನೆಯು ಕೇವಲ ಒಂದು ಸಂಪ್ರದಾಯವಲ್ಲದೆ, ಭೂಮಿಯ ಶುದ್ಧೀಕರಣ, ದೋಷ ನಿವಾರಣೆ ಮತ್ತು ಭವಿಷ್ಯದ ಪೀಳಿಗೆಗೆ ಆಸ್ತಿಯನ್ನು ಸುಭದ್ರವಾಗಿರಿಸುವ ಒಂದು ಆಳವಾದ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಇದು ನಂಬಿಕೆಯ ಆಧಾರದ ಮೇಲೆ ನಡೆಯುವ ಒಂದು ಸತ್ಕಾರ್ಯವಾಗಿದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:57 am, Tue, 23 December 25

Source link