All posts by nagaraj11081993

ಇಂಧನ ಕ್ರಾಂತಿ: ಹೆಚ್ಚಿನ ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಸಂಪೂರ್ಣ ಮನ್ನಾ – Kannada News

ನವದೆಹಲಿ, ಜೂನ್ 11: ಹೆಚ್ಚಿನ ಶೇಕಡಾವಾರು ಎಥೆನಾಲ್‌ನೊಂದಿಗೆ ಬೆರೆಸಿದ ಪೆಟ್ರೋಲ್(Petrol) ಮೇಲಿನ ಅಬಕಾರಿ ಸುಂಕದಿಂದ ವಿನಾಯಿತಿ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಹಣಕಾಸು ಸಚಿವಾಲಯದ ಅಡಿಯಲ್ಲಿರುವ ಕಂದಾಯ ಇಲಾಖೆಯು ಈ ಕುರಿತು ಹೊಸ ಅಧಿಸೂಚನೆಯನ್ನು ಹೊರಡಿಸಿದೆ. ಸರ್ಕಾರವು 2002 ಮತ್ತು 2017 ರಲ್ಲಿ ಹೊರಡಿಸಲಾದ ಹಿಂದಿನ ಅಬಕಾರಿ ಸುಂಕ ನಿಯಮಗಳನ್ನು ನವೀಕರಿಸಿದೆ.

ಶೂನ್ಯ ತೆರಿಗೆ ವ್ಯಾಪ್ತಿಗೆ ಬರುವ ಇಂಧನಗಳು ಯಾವುವು?
ಇದುವರೆಗೆ ಕೇವಲ ಕಡಿಮೆ ಪ್ರಮಾಣದ ಎಥೆನಾಲ್ ಮಿಶ್ರಣಗಳಿಗೆ (E20 ವರೆಗೆ) ಮಾತ್ರ ಲಭ್ಯವಿದ್ದ ತೆರಿಗೆ ವಿನಾಯಿತಿಯನ್ನು ಈಗ ಸರ್ಕಾರವಯ ಶೇ.22 ರಿಂದ ಶೇ.30ರಷ್ಟು ಹೆಚ್ಚಿನ ಎಥೆನಾಲ್ ಮಿಶ್ರಣ ಹೊಂದಿರುವ ಇಂಧನಗಳಿಗೂ ವಿಸ್ತರಿಸಿದೆ. ಹೊಸ ನಿಯಮದ ಪ್ರಕಾರ ಕೆಳಗಿನ ಇಂಧನ ರೂಪಾಂತರಗಳ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ:

E22 (ಶೇ.22 ಎಥೆನಾಲ್, ಶೇ.78 ಪೆಟ್ರೋಲ್)

E25 (ಶೇ.25 ಎಥೆನಾಲ್, ಶೇ.75 ಪೆಟ್ರೋಲ್)

E27 (ಶೇ. 27 ಎಥೆನಾಲ್, ಶೇ.73 ಪೆಟ್ರೋಲ್)

E30 (ಶೇ.30 ಎಥೆನಾಲ್, ಶೇ.70 ಪೆಟ್ರೋಲ್)

ಈ ಇಂಧನಗಳ ಮೇಲೆ ಕೇಂದ್ರ ಅಬಕಾರಿ ಸುಂಕ, ವಿಶೇಷ ಹೆಚ್ಚುವರಿ ಅಬಕಾರಿ ಸುಂಕ, ರಸ್ತೆ ಮತ್ತು ಮೂಲಸೌಕರ್ಯ ಸೆಸ್ ಹಾಗೂ ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್​ಗಳನ್ನು ಸಂಪೂರ್ಣವಾಗಿ ರದ್ದುಗಿಳಿಸಲಾಗಿದೆ. ಈ ಎಲ್ಲಾ ಮಿಶ್ರಣಗಳು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್​ ನಿಯಮಗಳಿಗೆ ಒಳಪಟ್ಟಿರುತ್ತದೆ.

ಮತ್ತಷ್ಟು ಓದಿ: CNG Price Hike: ಪೆಟ್ರೋಲ್, ಡೀಸೆಲ್​ ಆಯ್ತು ಈಗ ಸಿಎನ್​ಜಿ ದರ ಏರಿಕೆ! ವಾಹನ ಸವಾರರಿಗೆ ಶಾಕ್​

ಎಥೆನಾಲ್ ಮಿಶ್ರಣದಲ್ಲಿ ಭಾರತದ ಅದ್ಭುತ ಪ್ರಗತಿ
ಭಾರತವು ತನ್ನ ಇಂಧನ ಗುರಿಗಳನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ತಲುಪುತ್ತಾ ಸಾಗುತ್ತಿದೆ. ಜೈವಿಕ ಇಂಧನಗಳ ರಾಷ್ಟ್ರೀಯ ನೀತಿಯ ಅಡಿಯಲ್ಲಿ, ಪೆಟ್ರೋಲ್‌ನಲ್ಲಿ 20% ಎಥೆನಾಲ್ ಮಿಶ್ರಣ ಮಾಡುವ (E20) ಗುರಿಯನ್ನು 2030 ರ ಬದಲಿಗೆ 2025-26 ಕ್ಕೇ ಮುಂಚಿತವಾಗಿ ಸಾಧಿಸಲು ಶ್ರಮಿಸಲಾಗುತ್ತಿದೆ.

ಇಂಧನ ಸರಬರಾಜು ವರ್ಷ (ESY) ಎಥೆನಾಲ್ ಮಿಶ್ರಣದ ಶೇಕಡಾವಾರು
2022-23 12.06%
2023-24 14.60%
2024-25 (ಫೆಬ್ರವರಿ 2025 ರವರೆಗೆ)17.98%

ಈ ತ್ವರಿತ ಬೆಳವಣಿಗೆಯಿಂದಾಗಿ ಭಾರತವು ಈಗಾಗಲೇ ಶೇ. 10 ರಷ್ಟು ಮಿಶ್ರಣದ ಗುರಿಯನ್ನು ಐದು ತಿಂಗಳು ಮುಂಚಿತವಾಗಿಯೇ ಸಾಧಿಸಿ ಯಶಸ್ವಿಯಾಗಿದೆ. ಈಗ ಇಲಾಖೆಯು E30 ವರೆಗಿನ ಮುಂದಿನ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುತ್ತಿದೆ.

ದೇಶಕ್ಕೆ ಮೂರು ದೊಡ್ಡ ಲಾಭಗಳು: ಮಾಲಿನ್ಯ ಮುಕ್ತ ಮತ್ತು ರೈತಸ್ನೇಹಿ
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಇತ್ತೀಚೆಗೆ ಹೇಳಿದಂತೆ, ಪ್ರಸ್ತುತ ಭಾರತವು ತನ್ನ ಕಚ್ಚಾ ತೈಲ ಅಗತ್ಯತೆಯ ಶೇ. 87 ರಷ್ಟನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಈ ಹೊಸ ನೀತಿಯಿಂದ ದೇಶಕ್ಕೆ ಮೂರು ಪ್ರಮುಖ ಲಾಭಗಳಾಗಲಿವೆ.

ಆರ್ಥಿಕ ಸ್ವಾವಲಂಬನೆ: ಇಂಧನ ಆಮದಿಗಾಗಿ ವಿದೇಶಗಳಿಗೆ ಹರಿದು ಹೋಗುತ್ತಿದ್ದ ಕೋಟ್ಯಂತರ ರೂಪಾಯಿ ಹಣ ದೇಶದ ಒಳಗೇ ಉಳಿಯುತ್ತದೆ.

ಪರಿಸರ ಸಂರಕ್ಷಣೆ: ಎಥೆನಾಲ್ ಒಂದು ‘ಹಸಿರು ಇಂಧನ’ (Green Fuel) ಆಗಿರುವುದರಿಂದ, ಪಳೆಯುಳಿಕೆ ಇಂಧನಗಳ ಬಳಕೆಗೆ ಹೋಲಿಸಿದರೆ ವಾಯು ಮಾಲಿನ್ಯದ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ.

ಕೃಷಿ ವಲಯಕ್ಕೆ ಆದಾಯ: ಕಬ್ಬು ಮತ್ತು ಧಾನ್ಯಗಳಿಂದ ಎಥೆನಾಲ್ ತಯಾರಿಸುವುದರಿಂದ, ದೇಶದ ರೈತರು, ಗ್ರಾಮೀಣ ಯುವಕರು ಮತ್ತು ಕೃಷಿ ಆಧಾರಿತ ಕೈಗಾರಿಕೆಗಳಿಗೆ ನೇರ ಆರ್ಥಿಕ ಲಾಭ ಸಿಗಲಿದೆ.

ಭವಿಷ್ಯದ ಆಶಾವಾದ: ಇ20 ಇಂಧನ ಜಾರಿಗೆ ಬಂದಾಗ ಎಂಜಿನ್ ಹೊಂದಾಣಿಕೆಯ ಬಗ್ಗೆ ಕೆಲವು ಕಳವಳಗಳು ವ್ಯಕ್ತವಾಗಿದ್ದರೂ, ಸೆಪ್ಟೆಂಬರ್ 2025 ರಲ್ಲಿ ಸುಪ್ರೀಂ ಕೋರ್ಟ್ ಆ ಅರ್ಜಿಯನ್ನು ವಜಾಗೊಳಿಸಿ, ಸರ್ಕಾರದ ಈ ಪರಿವರ್ತನೆಯು ರೈತರಿಗೆ ಪೂರಕವಾಗಿದೆ ಎಂದು ಎತ್ತಿಹಿಡಿದಿದೆ. ಈಗ ಹೆಚ್ಚಿನ ಎಥೆನಾಲ್ ಮಿಶ್ರಣದ ಪೆಟ್ರೋಲ್ ಮೇಲಿನ ತೆರಿಗೆ ವಿನಾಯಿತಿಯು ತೈಲ ಕಂಪನಿಗಳಿಗೆ ಆರ್ಥಿಕ ಬಲ ತರಲಿದ್ದು, ದೇಶವನ್ನು ಇಂಧನ ಸ್ವಾವಲಂಬನೆಯತ್ತ ಮುನ್ನಡೆಸಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 9:28 am, Thu, 11 June 26

Source link

TV9 Kannada Live: ರಾಜ್ಯ, ದೇಶ ಸೇರಿ ಇಂದಿನ ಪ್ರಮುಖ ಸುದ್ದಿಗಳ ಮುಖ್ಯಾಂಶಗಳು

ಕೇಂದ್ರದಲ್ಲಿ NDA ಸರ್ಕಾರ 12 ವರ್ಷ ಪೂರೈಸಿದ ಹಿನ್ನೆಲೆ ಪ್ರಧಾನಿ ಮೋದಿ ಎನ್​​ಡಿಎ ನಾಯಕರ ಜೊತೆ ಸಾಲು ಸಾಲು ಸಭೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್​​ ತನ್ನದೇ ಆದ ರಾಜಕೀಯ ಲೆಕ್ಕಾಚಾರಗಳನ್ನು ಹಾಕುತ್ತಿದ್ದು, ಎಲ್ಲಾ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ರಾಜ್ಯ ಕಾಂಗ್ರೆಸ್ ಉಸ್ತುವಾರಿ, ಪ್ರಧಾನ ಕಾರ್ಯದರ್ಶಿಗಳ ಜೊತೆಗಿನ ಸಭೆ ಕುತೂಹಲ ಮೂಡಿಸಿದೆ. ಇತ್ತ ಕರ್ನಾಟಕದಲ್ಲಿ ಸಿಎಂ ಡಿಕೆ ಶಿವಕುಮಾರ್​​ ಅವರ ಸಚಿವ ಸಂಪುಟ ವಿಸ್ತರಣೆ ಕಸರತ್ತು ಮುಂದುವರಿದಿದ್ದು, ಸಚಿವಾಕಾಂಕ್ಷಿಗಳಿಂದ ಲಾಬಿ ಜೋರಾಗಿದೆ. ಯುವ ಮುಖಗಳಿಗೆ ಹೈಕಮಾಂಡ್​​ ಪ್ರಾಧಾನ್ಯತೆ ನೀಡಬಹುದೆಂಬ ಬಗ್ಗೆಯೂ ಮಾತುಗಳು ಕೇಳಿಬಂದಿವೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Source link

ಹಾವೇರಿ ಬಳಿಕ ತುಮಕೂರಿನಲ್ಲೂ SLV ಮಹಿಳಾ ಮಾರ್ಟ್ ಭಾರೀ ವಂಚನೆ: ಮಹಿಳೆಯರಿಗೆ ಲಕ್ಷ ಲಕ್ಷ ವಂಚನೆ – Kannada News

ತುಮಕೂರು ಎಸ್‌ಎಲ್‌ವಿ ಮಹಿಳಾ ಮಾರ್ಟ್​ಗೆ ಬೀಗ ಜಡಿದಿರುವುದುImage Credit source: tv9

ತುಮಕೂರು, ಜೂನ್ 11: ಹಾವೇರಿಯಲ್ಲಿ ಸ್ವಯಂ ಉದ್ಯೋಗದ ಹೆಸರಿನಲ್ಲಿ ಮಹಿಳೆಯರಿಗೆ ಕೋಟ್ಯಂತರ ರೂಪಾಯಿ ವಂಚಿಸಿ ಸದ್ದು ಮಾಡಿದ್ದ ‘ಎಸ್‌ಎಲ್‌ವಿ ಮಹಿಳಾ ಮಾರ್ಟ್’ (SLV Mahila Mart) ಕಂಪನಿಯ ವಂಚನಾ ಜಾಲ ರಾಜ್ಯದಾದ್ಯಂತ ವಿಸ್ತರಿಸಿದೆ ಎನ್ನಲಾಗಿತ್ತು. ಇದೀಗ ತುಮಕೂರು ಜಿಲ್ಲೆಯಲ್ಲಿಯೂ ಮಹಾ ಮೋಸ ನಡೆದಿರುವುದು ಗೊತ್ತಾಗಿದೆ. ತುಮಕೂರು ನಗರದ ಜಯನಗರದಲ್ಲಿ ಶಾಖೆ ತೆರೆದಿದ್ದ ಈ ಸಂಸ್ಥೆಯು, ಗೃಹಿಣಿಯರು ಹಾಗೂ ವಿದ್ಯಾವಂತ ಮಹಿಳೆಯರಿಗೆ ಸ್ವಯಂ ಉದ್ಯೋಗದ ಆಮಿಷ ಒಡ್ಡಿ 5 ಲಕ್ಷ ರೂಪಾಯಿಯಿಂದ ಹಿಡಿದು ಕೋಟಿಗಟ್ಟಲೆ ಹಣ ಹೂಡಿಕೆ ಮಾಡಿಸಿಕೊಂಡು ರಾತ್ರೋರಾತ್ರಿ ವಂಚಿಸಿ ಕೈಕೊಟ್ಟಿದೆ. ಹಾವೇರಿ ಮಾದರಿಯಲ್ಲೇ ಇಲ್ಲೂ ನೂರಾರು ಮಹಿಳೆಯರು ಹಣ ಕಳೆದುಕೊಂಡು ಬೀದಿಗೆ ಬಿದ್ದಿದ್ದು, ಕಣ್ಣೀರು ಹಾಕುತ್ತಿದ್ದಾರೆ.

ಮುಖ್ಯಾಂಶಗಳು

  • ಹಾವೇರಿ ಬೆನ್ನಲ್ಲೇ ತುಮಕೂರಿನಲ್ಲೂ ಮಹಾ ವಂಚನೆ.
  • ಸ್ವಯಂ ಉದ್ಯೋಗ ಹೆಸರಲ್ಲಿ ಡೆಪಾಸಿಟ್ ಲೂಟಿ.
  • ಜಯನಗರ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲು.

ಹಣ ಡಬಲ್ ಆಗುವ ಆಸೆಗೆ ಬಿದ್ದ ಮಹಿಳೆಯರು

ಈ ಕಂಪನಿಯು ಮನೆಯಲ್ಲಿಯೇ ಇರುವ ಗೃಹಿಣಿಯರನ್ನು ಗುರಿಯಾಗಿಸಿಕೊಂಡು ವ್ಯವಸ್ಥಿತವಾಗಿ ವಂಚನಾ ಜಾಲ ಹೆಣೆದಿತ್ತು. ಕಂಪನಿಯ ನಿಯಮದ ಪ್ರಕಾರ, ಮಹಿಳೆಯರು ಆರಂಭದಲ್ಲಿ ಮುಂಗಡವಾಗಿ (Security Deposit) ಲಕ್ಷ ಲಕ್ಷ ಹಣವನ್ನು ಡೆಪಾಸಿಟ್ ಮಾಡಬೇಕಿತ್ತು. ಈ ಡೆಪಾಸಿಟ್ ಮೊತ್ತಕ್ಕೆ ಅನುಗುಣವಾಗಿ ಕಂಪನಿಯು ಮನೆಯಲ್ಲೇ ಪ್ಯಾಕಿಂಗ್ ಮಾಡಲು ಅಗರಬತ್ತಿ, ಕಸದ ಪೊರಕೆ ಹಾಗೂ ಮೇಣದಬತ್ತಿ ಸೇರಿದಂತೆ ವಿವಿಧ ವಸ್ತುಗಳನ್ನು ನೀಡುತ್ತಿತ್ತು. ಮಹಿಳೆಯರು ಇವುಗಳನ್ನು ಪ್ಯಾಕ್ ಮಾಡಿ ಕಂಪನಿಗೆ ವಾಪಸ್ ನೀಡಬೇಕಿತ್ತು. ಪ್ರತಿ ತಿಂಗಳು ಹೂಡಿಕೆ ಮಾಡಿದ ಹಣಕ್ಕೆ ತಕ್ಕಂತೆ ಇಂತಿಷ್ಟು ಸಾವಿರ ರೂಪಾಯಿ ಸಂಬಳ ಹಾಗೂ ಕಂತುಗಳಲ್ಲಿ ಡೆಪಾಸಿಟ್ ಹಣವನ್ನು ವಾಪಸ್ ನೀಡುವುದಾಗಿ ಕಂಪನಿ ನಂಬಿಸಿತ್ತು. ಅಲ್ಲದೆ, ಕಂತುಗಳು ಮುಗಿದ ತಕ್ಷಣ ಪೂರ್ಣ ಡೆಪಾಸಿಟ್ ಹಣ ವಾಪಸ್ ಸಿಗಲಿದೆ, ಇದರಿಂದ ಹೂಡಿಕೆ ಮಾಡಿದ ಹಣ ಕೆಲವೇ ತಿಂಗಳುಗಳಲ್ಲಿ ದುಪ್ಪಟ್ಟಾಗಲಿದೆ (Double) ಎಂದು ನಂಬಿಸಲಾಗಿತ್ತು.

ಏಪ್ರಿಲ್ ವರೆಗೆ ಹಣ ವಸೂಲಿ ಮಾಡಿ ಬಾಗಿಲು ಹಾಕಿದ ಕಂಪನಿ

ಕಳೆದ ಒಂದು ವರ್ಷದಿಂದ ತುಮಕೂರಿನಲ್ಲಿ ಈ ಕಂಪನಿ ಸದ್ದಿಲ್ಲದೆ ವ್ಯವಹಾರ ನಡೆಸುತ್ತಿತ್ತು. ಇತ್ತೀಚಿನ ಏಪ್ರಿಲ್ ತಿಂಗಳವರೆಗೂ ಮಹಿಳೆಯರಿಂದ ಲಕ್ಷ ಲಕ್ಷ ರೂಪಾಯಿ ಹಣವನ್ನು ಠೇವಣಿ ರೂಪದಲ್ಲಿ ಪಡೆದುಕೊಂಡಿದ್ದ ಕಂಪನಿ, ತದನಂತರ ದಿಢೀರನೆ ತನ್ನ ವಹಿವಾಟನ್ನು ಸ್ಥಗಿತಗೊಳಿಸಿ ಕಚೇರಿಗೆ ಬಾಗಿಲು ಹಾಕಿದೆ. ಮೋಸ ಹೋಗಿರುವುದು ಗೊತ್ತಾಗಿ ಮಹಿಳೆಯರು ಹಲವು ಬಾರಿ ಕಚೇರಿಗೆ ಅಲೆದರೂ ಯಾವುದೇ ಪ್ರಯೋಜನವಾಗಿಲ್ಲ. ತೀವ್ರ ಆರ್ಥಿಕ ನಷ್ಟ ಉಂಟಾಗಿದ್ದರೂ, ಮರ್ಯಾದೆಗೆ ಅಂಜಿ ಆರಂಭದಲ್ಲಿ ದೂರು ನೀಡಲು ಮಹಿಳೆಯರು ಮೀನಾಮೇಷ ಎಣಿಸುತ್ತಿದ್ದರು. ಆದರೆ ಹಾವೇರಿ ವಂಚನೆ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಧೈರ್ಯ ತಂದಿಕೊಂಡ ಕೆಲವು ಸಂತ್ರಸ್ತರು ಜಯನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಒಬ್ಬೊಬ್ಬರದು ಒಂದೊಂದು ಕಣ್ಣೀರಿನ ಕಥೆ

ಹಣ ಕಳೆದುಕೊಂಡ ಮಹಿಳೆಯರ ಕಹಾನಿ ಬೆಚ್ಚಿಬೀಳಿಸುವಂತಿದೆ. ಕುಟುಂಬದವರಿಗೆ ತಿಳಿಸದೆ ರಹಸ್ಯವಾಗಿ ಹಣ ಹೂಡಿಕೆ ಮಾಡಿದ್ದ ಹಲವು ಗೃಹಿಣಿಯರು, ತಮ್ಮ ಪತಿಗೆ ಗೊತ್ತಾಗದಂತೆ ಮನೆಯ ಅಸಲಿ ಆಸ್ತಿ ಪತ್ರಗಳನ್ನು ಬ್ಯಾಂಕ್‌ನಲ್ಲಿ ಅಡಮಾನವಿಟ್ಟು ಲೋನ್ ಪಡೆದು ಕಂಪನಿಗೆ ತಂದುಕೊಟ್ಟಿದ್ದಾರೆ! ಇನ್ನು ಕೆಲವರು ತಾವಷ್ಟೇ ಅಲ್ಲದೆ ತಮ್ಮ ಆಪ್ತ ಸ್ನೇಹಿತೆಯರು ಹಾಗೂ ಸಂಬಂಧಿಕರಿಂದಲೂ ಲಕ್ಷ ಲಕ್ಷ ರೂಪಾಯಿ ಸಾಲ ಕೊಡಿಸಿ ಹೂಡಿಕೆ ಮಾಡಿಸಿದ್ದರು.

ಇದನ್ನೂ ಓದಿ: ಮನೆಯಲ್ಲೇ ಪ್ಯಾಕಿಂಗ್ ಕೆಲಸ ಅಂತ ನಂಬಿಸಿ 10 ಕೋಟಿ ರೂ. ಎಗರಿಸಿದ್ರು: ಹಾವೇರಿಯ ‘SLV ಮಹಿಳಾ ಮಾರ್ಟ್’ ಮಾಲೀಕರ ಮಹಾಮೋಸ

ಸದ್ಯ ವಂಚನೆಗೊಳಗಾದ ಮಹಿಳೆಯರು ಮುಖ ಮುಚ್ಚಿಕೊಂಡು ಕಚೇರಿಯ ಮುಂದೆ ಅಸಹಾಯಕರಾಗಿ ನಿಂತಿದ್ದಾರೆ. ಸದ್ಯ ಜಯನಗರ ಪೊಲೀಸರು ಈ ಕುರಿತು ಎನ್‌ಸಿಆರ್ (NCR) ದಾಖಲಿಸಿಕೊಂಡಿದ್ದು, ಕಂಪನಿಯ ಹಿನ್ನೆಲೆ ಹಾಗೂ ವಂಚನೆಗೊಳಗಾದ ಮಹಿಳೆಯರ ಸಂಪೂರ್ಣ ಮಾಹಿತಿಯನ್ನು ಕಲೆಹಾಕಿ ತನಿಖೆ ಚುರುಕುಗೊಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿಗರಿಗೆ ಗುಡ್​​ ನ್ಯೂಸ್​​: ನಮ್ಮ ಮೆಟ್ರೋ 3ನೇ ಹಂತಕ್ಕೆ ಕೇಂದ್ರ ಸರ್ಕಾರದಿಂದ ಶೀಘ್ರ ಅನುಮೋದನೆ ಸಾಧ್ಯತೆ – Kannada News

ಬೆಂಗಳೂರು, ಜೂನ್​​ 11: ಡಬಲ್ ಡೆಕ್ಕರ್‌ ಯೋಜನೆ ಸೇರ್ಪಡೆಯಿಂದ ಅನುಮೋದನೆಗಾಗಿ ಬಾಕಿ ಉಳಿದಿದ್ದ ನಮ್ಮ ಮೆಟ್ರೋ 3ನೇ ಹಂತ (Phase-3) ಯೋಜನೆಗೆ ಕೇಂದ್ರ ಸರ್ಕಾರದ ಅನುಮೋದನೆ ದೊರೆಯುವ ಸಾಧ್ಯತೆ ಹೆಚ್ಚಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಕೇಂದ್ರ ಸಾರ್ವಜನಿಕ ವಲಯದ ಸಂಸ್ಥೆಯಾದ RITES Ltd ಸಿದ್ಧಪಡಿಸಿರುವ ಕರಡು ವರದಿಯಲ್ಲಿ, 44.65 ಕಿ.ಮೀ ಉದ್ದದ ಈ ಯೋಜನೆಯ ಆರ್ಥಿಕ ಆಂತರಿಕ ಆದಾಯ ಪ್ರಮಾಣ (Economic Internal Rate of Return – EIRR) ಶೇ. 15.9ರಷ್ಟಿರಲಿದೆ ಎಂದು ಅಂದಾಜಿಸಲಾಗಿದೆ. ಇದು ಮೆಟ್ರೋ ಯೋಜನೆಗಳಿಗೆ ಅಗತ್ಯವೆಂದು ಪರಿಗಣಿಸಲಾದ ಶೇ.14ರ ಮಾನದಂಡಕ್ಕಿಂತ ಹೆಚ್ಚಾಗಿದೆ.

2024ರ ಸೆಪ್ಟೆಂಬರ್ 13ರಂದು ಕೇಂದ್ರ ಸರ್ಕಾರ ಮೂರನೇ ಹಂತದ ಯೋಜನೆಗೆ ಅನುಮೋದನೆ ನೀಡಿದಾಗ ಡಬಲ್ ಡೆಕ್ಕರ್‌ ವಯಾಡಕ್ಟ್‌ ಯೋಜನೆ ಇರಲಿಲ್ಲ. ನಂತರ ಭವಿಷ್ಯದಲ್ಲಿ ರಸ್ತೆ ವಿಸ್ತರಣೆ ಅಗತ್ಯ ತಪ್ಪಿಸಲು ರಾಜ್ಯ ಸರ್ಕಾರ ಹೆಚ್ಚುವರಿ 9,700 ಕೋಟಿ ವೆಚ್ಚದಲ್ಲಿ ಡಬಲ್ ಡೆಕ್ಕರ್‌ ವ್ಯವಸ್ಥೆಯನ್ನು ಸೇರಿಸಲು ನಿರ್ಧರಿಸಿತ್ತು. ಆದರೆ, ಮೆಟ್ರೋ ಮಾರ್ಗದ ಮೇಲೆಯೇ ಫ್ಲೈಓವರ್ ನಿರ್ಮಾಣವಾದರೆ ಪ್ರಯಾಣಿಕರು ಮೆಟ್ರೋ ಬಳಕೆ ಕಡಿಮೆ ಮಾಡಬಹುದು ಎಂಬ ಕಾರಣ ನೀಡಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA) ಯೋಜನೆಯ ಸಾಮಾಜಿಕ-ಆರ್ಥಿಕ ಕಾರ್ಯಸಾಧ್ಯತೆ ಬಗ್ಗೆ ಪ್ರಶ್ನೆ ಎತ್ತಿತ್ತು.

ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ನ್ಯೂಸ್; ಬೆಂಗಳೂರಿಗೆ ಬಂದೇ ಬಿಡ್ತು ಮೊದಲ ‘ಬ್ಲೂ ಲೈನ್’ ರೈಲು

RITES ವರದಿ ಪ್ರಕಾರ, ಡಬಲ್ ಡೆಕ್ಕರ್‌ ಸೇರಿಸಿದ ಬಳಿಕ EIRR ಶೇ.15.9ಕ್ಕೆ ಇಳಿದಿದ್ದರೂ ಅದು ಇನ್ನೂ ಅನುಮೋದನೆಗೆ ಅಗತ್ಯವಾದ ಮಟ್ಟಕ್ಕಿಂತ ಹೆಚ್ಚಾಗಿದೆ. ಮೂಲ ಯೋಜನೆಯಲ್ಲಿ EIRR ಶೇ.17.04 ಇತ್ತು. ಸಚಿವಾಲಯದ ಆಕ್ಷೇಪಣೆಗಳು ತಾಂತ್ರಿಕವಾಗಿದ್ದು, RITES ವರದಿ ಅದಕ್ಕೆ ಸ್ಪಷ್ಟ ಉತ್ತರ ನೀಡಿದೆ. ಅಂತಿಮ ವರದಿಯೂ ಇದೇ ರೀತಿಯಲ್ಲಿರಲಿದೆ. ಹೀಗಾಗಿ ಅನುಮೋದನೆ ಸಿಗುವ ವಿಶ್ವಾಸವಿದೆ ಎಂದು ಮೂಲಗಳು ತಿಳಿಸಿವೆ.

ಎಲ್ಲೆಲ್ಲಿ ಮೂರನೇ ಹಂತದ ಮಾರ್ಗ?

  • ಜೆಪಿ ನಗರ 4ನೇ ಹಂತದಿಂದ ಕೆಂಪಾಪುರವರೆಗೆ ಹೊರವರ್ತುಲ ರಸ್ತೆಯ (ORR) ಮೂಲಕ 32.5 ಕಿ.ಮೀ ಉದ್ದದ ಮಾರ್ಗ
  • ಹೊಸಹಳ್ಳಿಯಿಂದ ಕಡಬಗೆರೆವರೆಗೆ ಮಾಗಡಿ ರಸ್ತೆಯ ಮೂಲಕ 12.15 ಕಿ.ಮೀ ಉದ್ದದ ಮಾರ್ಗ

ಕೇಂದ್ರ ಸಚಿವರ ಭೇಟಿ ಮಾಡಿದ ಡಿ.ಕೆ. ಶಿವಕುಮಾರ್

ಬುಧವಾರ ನವದೆಹಲಿಯಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್​​ ಲಾಲ್​​ ಖಟ್ಟರ್​ ಅವರನ್ನು ಭೇಟಿ ಮಾಡಿರುವ ಸಿಎಂ ಡಿ.ಕೆ. ಶಿವಕುಮಾರ್​​, ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಡಬಲ್ ಡೆಕ್ಕರ್‌ ಯೋಜನೆಗೆ ಅನುಮೋದನೆ ನೀಡುವಂತೆ ಮನವಿ ಮಾಡಿದ್ದರು. ಇದರ ಜೊತೆಗೆ ಎರಡನೇ ಹಂತದ ಯೋಜನೆಯ ಪರಿಷ್ಕೃತ ವೆಚ್ಚ 40,425.02 ಕೋಟಿಗೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಅದರ ಅನುಮೋದನೆಯನ್ನು ಶೀಘ್ರ ನೀಡುವಂತೆ ಆಗ್ರಹಿಸಿದ್ದಾರೆ ಎಂದು ಡೆಕ್ಕನ್​​ ಹೆರಾಲ್ಡ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪಶ್ಚಿಮ ಬಂಗಾಳದ ಬಳಿಕ ಮಹಾರಾಷ್ಟ್ರದಲ್ಲೂ ರಾಜಕೀಯ ಹೈಡ್ರಾಮ, ಏಕನಾಥ್ ಶಿಂಧೆ ಬಣದ ಸಂಪರ್ಕದಲ್ಲಿದ್ದಾರಾ ಶಿವಸೇನೆಯ 7 ಸಂಸದರು – Kannada News

ಮುಂಬೈ, ಜೂನ್ 11: ಮಹಾರಾಷ್ಟ್ರ(Maharashtra) ರಾಜಕಾರಣದಲ್ಲಿ ಮತ್ತೊಮ್ಮೆ ಭಾರಿ ಸಂಚಲನ ಸೃಷ್ಟಿಯಾಗಿದೆ. ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಒಟ್ಟು 9 ಲೋಕಸಭಾ ಸಂಸದರ ಪೈಕಿ ಬರೋಬ್ಬರಿ ಏಳು ಮಂದಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ನೇತೃತ್ವದ ಶಿವಸೇನೆ ಬಣದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಬೆಳವಣಿಗೆಯು ರಾಜ್ಯದಲ್ಲಿ ಮತ್ತೊಂದು ದೊಡ್ಡ ರಾಜಕೀಯ ಹೈಡ್ರಾಮಕ್ಕೆ ಮುನ್ನುಡಿ ಬರೆದಿದೆ.

ಮಾಹಿತಿಗಳ ಪ್ರಕಾರ, ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಅವರ ಪುತ್ರ, ಲೋಕಸಭಾ ಸಂಸದ ಶ್ರೀಕಾಂತ್ ಶಿಂಧೆ ಅವರು ಕಳೆದ ಆರು ತಿಂಗಳಿನಿಂದ ಉದ್ಧವ್ ಠಾಕ್ರೆ ಬಣದ ಸಂಸದರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಇದರ ಮುಂದುವರಿದ ಭಾಗವಾಗಿ, ಜೂನ್ 7 ರಂದು ನವದೆಹಲಿಯಲ್ಲಿ ಏಕನಾಥ್ ಶಿಂಧೆ ಹಾಗೂ ಉದ್ಧವ್ ಬಣದ ಸಂಸದರ ನಡುವೆ ಅತ್ಯಂತ ಗೌಪ್ಯ ಸಭೆಯೊಂದು ನಡೆದಿದೆ ಎನ್ನಲಾಗಿದೆ. ಈ ಸಭೆಯ ಬೆನ್ನಲ್ಲೇ ಏಳು ಸಂಸದರು ಶಿಂದೆ ಬಣಕ್ಕೆ ಬೆಂಬಲ ಸೂಚಿಸಲು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದಾರೆ ಎಂಬ ವದಂತಿಗಳು ರಾಜಕೀಯ ವಲಯದಲ್ಲಿ ದಟ್ಟವಾಗಿವೆ.

ಕೇಂದ್ರ ಸಚಿವ ಸ್ಥಾನದ ಆಫರ್ ಮತ್ತು ಅಮಿತ್ ಶಾ ಭೇಟಿ
ಈ ರಾಜಕೀಯ ಬೆಳವಣಿಗೆಗಳ ನಡುವೆ, ಇತ್ತೀಚೆಗೆ ಏಕನಾಥ್ ಶಿಂಧೆ ಅವರು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದರು. ಮೂಲಗಳ ಪ್ರಕಾರ, ಶಿಂದೆ ಬಣಕ್ಕೆ ಸೇರಲಿರುವ ಹೊಸ ಸಂಸದರಲ್ಲಿ ಒಬ್ಬರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಪ್ರಮುಖ ಸ್ಥಾನ ಸಿಗುವ ಸಾಧ್ಯತೆ ಇದೆ. ಈ ಆಫರ್ ಉದ್ಧವ್ ಬಣದ ಸಂಸದರನ್ನು ಆಕರ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎನ್ನಲಾಗಿದೆ.

ಮತ್ತಷ್ಟು ಓದಿ: 400 ಕೋಟಿ ರೂ. ದರೋಡೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್: ಮಹಾರಾಷ್ಟ್ರ ಎಸ್​ಐಟಿ ತನಿಖಾ ವರದಿಯಲ್ಲಿ ಸ್ಫೋಟಕ ಅಂಶ!

ಉದ್ಧವ್ ಬಣದ ಪ್ರಮುಖ ಸಂಸದರ ಪಟ್ಟಿ
ಪ್ರಸ್ತುತ ಉದ್ಧವ್ ಠಾಕ್ರೆ ಬಣದಲ್ಲಿರುವ 9 ಲೋಕಸಭಾ ಸಂಸದರ ಪಟ್ಟಿ ಇಲ್ಲಿದೆ. ಇವರಲ್ಲಿ ಏಳು ಮಂದಿ ಶಿಂದೆ ಬಣದತ್ತ ಮುಖ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅರವಿಂದ್ ಸಾವಂತ್ (ಮುಂಬೈ ದಕ್ಷಿಣ)

ಸಂಜಯ್ ದಿನ ಪಾಟೀಲ್ (ಮುಂಬೈ ಈಶಾನ್ಯ)

ಅನಿಲ್ ದೇಸಾಯಿ (ಮುಂಬೈ ದಕ್ಷಿಣ ಮಧ್ಯ)

ಸಂಜಯ್ ದೇಶಮುಖ್ (ಯವತ್ಮಾಲ್-ವಾಶಿಂ)

ನಾಗೇಶ ಪಾಟೀಲ ಅಷ್ಟಿಕರ್ (ಹಿಂಗೋಲಿ)

ಸಂಜಯ್ ಹರಿಭಾವು ಜಾಧವ್ (ಪರ್ಭಾನಿ)

ರಾಜಭಾವು ವಾಜೆ (ನಾಸಿಕ್)

ಭೌಸಾಹೇಬ್ ವಕ್ಚೌರೆ (ಶಿರಡಿ)

ಓಂಪ್ರಕಾಶ್ ರಾಜೇನಿಂಬಾಳ್ಕರ್ (ಧಾರಾಶಿವ್ / ಒಸ್ಮಾನಾಬಾದ್)

ಪಕ್ಷಾಂತರ ನಿಷೇಧ ಕಾಯ್ದೆ ಪ್ರಕಾರ, ಯಾವುದೇ ಒಂದು ರಾಜಕೀಯ ಪಕ್ಷದ ಜನಪ್ರತಿನಿಧಿಗಳು ಶಿಕ್ಷೆಯಿಂದ ಪಾರಾಗಿ ಮತ್ತೊಂದು ಪಕ್ಷದೊಂದಿಗೆ ವಿಲೀನವಾಗಬೇಕಾದರೆ ಅಥವಾ ಪ್ರತ್ಯೇಕ ಗುಂಪು ಎಂದು ಗುರುತಿಸಿಕೊಳ್ಳಬೇಕಾದರೆ, ಒಟ್ಟು ಸಂಸದರ/ಶಾಸಕರ ಪೈಕಿ ಮೂರನೇ ಎರಡರಷ್ಟು ಸದಸ್ಯರ ಬಲ ಇರಬೇಕಾಗುತ್ತದೆ.

ಪ್ರಸ್ತುತ ಉದ್ಧವ್ ಬಣದಲ್ಲಿ 9 ಸಂಸದರಿದ್ದಾರೆ. ಇದರ 2/3ರಷ್ಟು ಎಂದರೆ ಕನಿಷ್ಠ 6 ಸಂಸದರು ಒಟ್ಟಿಗೆ ಉದ್ಧವ್ ಬಣವನ್ನು ತೊರೆಯಬೇಕಾಗುತ್ತದೆ. ಈಗ 7 ಸಂಸದರು ಶಿಂಧೆ ಬಣದ ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿ ನಿಜವೇ ಆದಲ್ಲಿ, ಅವರು ಯಾವುದೇ ಕಾನೂನು ಸಂಕಷ್ಟವಿಲ್ಲದೆ ಅಧಿಕೃತವಾಗಿ ಶಿಂದೆ ಬಣವನ್ನು ಸೇರಿಕೊಳ್ಳಬಹುದು ಮತ್ತು ಅವರ ಸಂಸದ ಸ್ಥಾನಕ್ಕೂ ಯಾವುದೇ ಧಕ್ಕೆ ಬರುವುದಿಲ್ಲ.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳು ಹತ್ತಿರ ಬರುತ್ತಿರುವ ಈ ಸಮಯದಲ್ಲಿ ಈ ಬೆಳವಣಿಗೆಯು ಉದ್ಧವ್ ಠಾಕ್ರೆ ಅವರಿಗೆ ಭಾರಿ ಹಿನ್ನಡೆಯನ್ನು ಉಂಟುಮಾಡಿದರೆ, ಏಕನಾಥ್ ಶಿಂಧೆ ಮತ್ತು ಮಹಾಯುತಿ (ಬಿಜೆಪಿ-ಶಿವಸೇನೆ-ಎನ್‌ಸಿಪಿ) ಮೈತ್ರಿಗೆ ದೆಹಲಿ ಮಟ್ಟದಲ್ಲಿ ಮತ್ತಷ್ಟು ಬಲ ತಂದುಕೊಡಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಇಂದಿನಿಂದ ಫಿಫಾ ವಿಶ್ವಕಪ್​ ಟೂರ್ನಿ ಆರಂಭ! – Kannada News

ವಿಶ್ವದ ಅತ್ಯಂತ ದೊಡ್ಡ ಫುಟ್‌ಬಾಲ್ ಟೂರ್ನಮೆಂಟ್ ಫಿಫಾ ವಿಶ್ವಕಪ್ 2026 ಆರಂಭಕ್ಕೆ ದಿನಗಣನೆ ಮುಗಿದಿದೆ. ಅದರಂತೆ ಅಮೆರಿಕ, ಕೆನಡಾ ಹಾಗೂ ಮೆಕ್ಸಿಕೋ ಜಂಟಿಯಾಗಿ ಆಯೋಜಿಸಲಿರುವ ಫಿಫಾ ವಿಶ್ವಕಪ್​ಗೆ ಇಂದು ಚಾಲನೆ ದೊರೆಯಲಿದೆ. ಆದರೆ ಕ್ರೀಡಾಭಿಮಾನಿಗಳಲ್ಲಿ ಈ ಬಾರಿಯ ವಿಶ್ವಕಪ್ ಜೂನ್ 11 ಕ್ಕೆ ಶುರುವಾಗುತ್ತದೆಯೇ ಅಥವಾ ಜೂನ್ 12 ಕ್ಕೆ ಎಂಬ ಸಣ್ಣ ಗೊಂದಲವಿದೆ. ಇದಕ್ಕೆ ಮುಖ್ಯ ಕಾರಣ ಉತ್ತರ ಅಮೆರಿಕ ಮತ್ತು ಭಾರತದ ನಡುವಿನ ಭೌಗೋಳಿಕ ಸಮಯದ ವ್ಯತ್ಯಾಸ.

ಆತಿಥೇಯ ದೇಶವಾದ ಮೆಕ್ಸಿಕೋದಲ್ಲಿ ಪಂದ್ಯಾವಳಿಯು ಗುರುವಾರ, ಜೂನ್ 11, 2026 ರಂದು ಅಧಿಕೃತವಾಗಿ ಆರಂಭವಾಗಲಿದೆ.

ಮೆಕ್ಸಿಕೋ ನಗರವು ಭಾರತಕ್ಕಿಂತ 11.5 ಗಂಟೆಗಳಷ್ಟು ಹಿಂದೆ ಇರುವುದರಿಂದ, ಅಲ್ಲಿ ಜೂನ್ 11 ರ ಮಧ್ಯಾಹ್ನ ನಡೆಯುವ ಉದ್ಘಾಟನಾ ಪಂದ್ಯವು ಭಾರತದಲ್ಲಿ ಶುಕ್ರವಾರ, ಜೂನ್ 12, 2026 ರ ಮುಂಜಾನೆ 12:30 ಕ್ಕೆ ನೇರಪ್ರಸಾರವಾಗುತ್ತದೆ. ಇದೇ ಕಾರಣಕ್ಕೆ ಭಾರತದ ವೇಳಾಪಟ್ಟಿಗಳಲ್ಲಿ ಜೂನ್ 12 ರ ದಿನಾಂಕ ಕಾಣಿಸಿಕೊಳ್ಳುತ್ತಿದೆ.

ಮೆಕ್ಸಿಕೋದ ಐತಿಹಾಸಿಕ ಎಸ್ಟಾಡಿಯೊ ಅಜ್ಟೆಕಾ ಕ್ರೀಡಾಂಗಣದಲ್ಲಿ ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಈ ಉದ್ಘಾಟನಾ ಕಾರ್ಯಕ್ರಮದ ಬಳಿಕ ಮೊದಲ ಪಂದ್ಯದಲ್ಲಿ ಆತಿಥೇಯ ಮೆಕ್ಸಿಕೋ ಮತ್ತು ಸೌತ್ ಆಫ್ರಿಕಾ ತಂಡಗಳು ಕಣಕ್ಕಿಳಿಯಲಿವೆ. ಈ ಪಂದ್ಯವನ್ನು ಭಾರತೀಯ ಕಾಲಮಾನ ಮಧ್ಯರಾತ್ರಿ 12.30 AM ವೀಕ್ಷಿಸಬಹುದು.

 

Source link

Bengaluru Traffic advisory: ವಾಹನ ಸವಾರರ ಗಮನಕ್ಕೆ, ಬೆಂಗಳೂರಿನ ಈ ರಸ್ತೆಗಳಲ್ಲಿಂದು ಸಂಚಾರ ಬದಲಾವಣೆ – Kannada News

ಬೆಂಗಳೂರು, ಜೂನ್ 11: ಬೆಂಗಳೂರಿನ (Bengaluru) ಫ್ರೀಡಂ ಪಾರ್ಕ್‌ನಲ್ಲಿ ಇಂದು (ಜೂನ್ 11, ಗುರುವಾರ) ಕರ್ನಾಟಕ ದಲಿತ ಸಂಘಟನೆಗಳ ಸಮಿತಿ ವತಿಯಿಂದ ಬೃಹತ್ ಪ್ರತಿಭಟನಾ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪ್ರತಿಭಟನೆ ನಡೆಯಲಿದ್ದು, ಸುಗಮ ವಾಹನ ಸಂಚಾರಕ್ಕಾಗಿ ಬೆಂಗಳೂರು ಸಂಚಾರ ಪೊಲೀಸರು ತಾತ್ಕಾಲಿಕ ಸಂಚಾರ ನಿರ್ಬಂಧ ಹಾಗೂ ಸಂಚಾರಕ್ಕೆ ಪರ್ಯಾಯ ಮಾರ್ಗಗಳಳನ್ನು ಪ್ರಕಟಿಸಿದ್ದಾರೆ. ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆ ಇರುವುದರಿಂದ ವಾಹನ ಸವಾರರು ಮುನ್ನೆಚ್ಚರಿಕೆ ವಹಿಸುವಂತೆ ಕೋರಲಾಗಿದೆ.

ಮುಖ್ಯಾಂಶಗಳು

  • ಫ್ರೀಡಂ ಪಾರ್ಕ್ ಸುತ್ತಮುತ್ತ ಸಂಚಾರ ಮಾರ್ಗ ಬದಲಾವಣೆ.
  • ಮುಂಜಾನೆ 8 ರಿಂದ ಸಂಜೆ 6 ರವರೆಗೆ ನಿರ್ಬಂಧ.
  • ಪ್ರಮುಖ ರಸ್ತೆಗಳಲ್ಲಿ ವಾಹನ ಪಾರ್ಕಿಂಗ್ ನಿಷೇಧ.

ಪ್ರತಿಭಟನಾ ಮೆರವಣಿಗೆ ಮತ್ತು ಮಾರ್ಗ ಬದಲಾವಣೆ ವಿವರ

ಪ್ರತಿಭಟನೆಯಲ್ಲಿ ಭಾಗವಹಿಸುವ ಸಾರ್ವಜನಿಕರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ಸಿಟಿ ರೈಲ್ವೆ ನಿಲ್ದಾಣದಿಂದ ಫ್ಲೈಓವರ್ ರಸ್ತೆಯ ಮೂಲಕ ಫ್ರೀಡಂ ಪಾರ್ಕ್ ಕಡೆಗೆ ಕಾಲ್ನಡಿಗೆಯಲ್ಲಿ ಮೆರವಣಿಗೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಖೋಡೆ ಜಂಕ್ಷನ್‌ನಿಂದ ಕೆಆರ್ ಸರ್ಕಲ್ ಕಡೆಗೆ ಸಂಚರಿಸುವ ವಾಹನ ಸವಾರರು ಸಂಚಾರ ದಟ್ಟಣೆಯನ್ನು ತಪ್ಪಿಸಲು ಹಳೇ ಜೆಡಿಎಸ್ ಕಚೇರಿ ರಸ್ತೆಯನ್ನು ಬಳಸುವಂತೆ ಸೂಚಿಸಲಾಗಿದೆ. ಇನ್ನು ಮೈಸೂರು ಬ್ಯಾಂಕ್ ವೃತ್ತದಿಂದ ಕೆ.ಜಿ. ರಸ್ತೆ ಮೂಲಕ ಫ್ರೀಡಂ ಪಾರ್ಕ್ ಕಡೆಗೆ ಬರುವ ವಾಹನಗಳು ಕಡ್ಡಾಯವಾಗಿ ಬಲತಿರುವು ಪಡೆದು, ಮಹಾರಾಣಿ ಅಂಡರ್‌ಪಾಸ್ ರಸ್ತೆ ಹಾಗೂ ಪ್ಯಾಲೇಸ್ ಕ್ರಾಸ್ ರಸ್ತೆ ಮೂಲಕ ಮುಂದೆ ಸಾಗಬೇಕಾಗುತ್ತದೆ.

ಟ್ರಾಫಿಕ್ ಪೊಲೀಸ್ ಎಕ್ಸ್ ಸಂದೇಶ

ದ್ವಿಮುಖ ಸಂಚಾರ ಹಾಗೂ ಸಂಚಾರ ಸಂಪೂರ್ಣ ನಿಷೇಧಿತ ರಸ್ತೆಗಳು

ಪ್ರತಿಭಟನೆಯ ತೀವ್ರತೆಯ ಕಾರಣದಿಂದಾಗಿ ಫ್ರೀಡಂ ಪಾರ್ಕ್ ಜಂಕ್ಷನ್‌ನಿಂದ ಕನಕದಾಸ ವೃತ್ತದ ನಡುವಿನ ರಸ್ತೆಯಲ್ಲಿ ಎರಡೂ ಕಡೆಯಿಂದಲೂ ಎಲ್ಲಾ ಮಾದರಿಯ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇನ್ನು ಗಾಂಧಿನಗರದ ಕಡೆಗೆ ತೆರಳುವ ಸವಾರರ ಅನುಕೂಲಕ್ಕಾಗಿ, ಸಾಮಾನ್ಯವಾಗಿ ಒನ್‌ವೇ (ಏಕಮುಖ ಸಂಚಾರ) ಆಗಿರುತ್ತಿದ್ದ ಸುಬ್ಬಣ್ಣ ಜಂಕ್ಷನ್‌ನಿಂದ ಎಂಟಿಆರ್ (MTR) ಜಂಕ್ಷನ್ ವರೆಗಿನ ರಸ್ತೆಯನ್ನು ಇಂದು ತಾತ್ಕಾಲಿಕವಾಗಿ ಟೂ-ವೇ (ದ್ವಿಮುಖ ಸಂಚಾರ) ಮಾರ್ಗವಾಗಿ ಪರಿವರ್ತಿಸಲಾಗಿದೆ.

ಎಲ್ಲೆಲ್ಲಿ ಪಾರ್ಕಿಂಗ್ ನಿಷೇಧ?

ಸಂಚಾರಕ್ಕೆ ಅಡ್ಡಿಯಾಗದಂತೆ ಮುನ್ನೆಚ್ಚರಿಕೆ ವಹಿಸಿರುವ ಪೊಲೀಸರು, ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ವಾಹನ ನಿಲ್ಲಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದ್ದಾರೆ. ಖೋಡೆ ಜಂಕ್ಷನ್‌ನಿಂದ ಮಹಾರಾಣಿ ಜಂಕ್ಷನ್‌ವರೆಗೆ, ವಿ. ರಾಮಚಂದ್ರ ರಸ್ತೆ, ಕಾಳಿದಾಸ ರಸ್ತೆ, ಪ್ಯಾಲೇಸ್ ರಸ್ತೆ ಹಾಗೂ ಕೆ.ಜಿ. ರಸ್ತೆಯಲ್ಲಿ ಯಾವುದೇ ರೀತಿಯ ವಾಹನಗಳ ಪಾರ್ಕಿಂಗ್ ಮಾಡುವಂತಿಲ್ಲ ಎಂದು ಸಂಚಾರ ಪೊಲೀಸರು ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪತಿ ಬಗ್ಗೆ ಇರೋ ಆತಂಕ ಹೇಳಿದ ಅಮೃತವರ್ಷಿಣಿ ರಜಿನಿ

ನಟಿ ರಜಿನಿ ಹಾಗೂ ಅರುಣ್ ಗೌಡ ಅವರ ಮಧ್ಯೆ ಜಿಮ್​​ನಲ್ಲಿ ಪ್ರೀತಿ ಮೂಡಿತು. ಆ ಬಳಿಕ ಇಬ್ಬರೂ ಮದುವೆ ಆದರು. ಈಗ ಪತಿ ಅರುಣ್ ಕುಮಾರ್ ಬಗ್ಗೆ ಇರುವ ಭಯದ ಬಗ್ಗೆ ರಜಿನಿ ಹೇಳಿಕೊಂಡಿದ್ದಾರೆ. ‘ಜೋಡಿ ನಂಬರ್ 1’ ಶೋನಲ್ಲಿ ಇವರು ಸ್ಪರ್ಧಿಗಳಾಗಿದ್ದಾರೆ. ಈ ಸ್ಪರ್ಧೆಯಲ್ಲಿ ಮನದಾಳದ ಮಾತನ್ನು ಹೇಳಿಕೊಳ್ಳುವ ಅವಕಾಶ ಇತ್ತು. ಈ ವೇಳೆ ರಜಿನಿ ಅವರು, ‘ಬಾಡಿ ಬಿಲ್ಡರ್​​ಗಳಿಗೆ ಆಯಸ್ಸು ಕಡಿಮೆ ಎಂಬ ಮಾತಿದೆ’ ಎಂದು ಆತಂಕ ಹೊರಹಾಕಿದ್ದಾರೆ. ಆಗ ಅರುಣ್ ಕುಮಾರ್ ಅವರು ಪತ್ನಿಗೆ ಧೈರ್ಯ ತುಂಬಿದ್ದಾರೆ. (VIDEO Source: Zee Kannada)

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಧಾರವಾಡ ಜಿಲ್ಲೆಯಲ್ಲಿ ಹಳ್ಳ ಹಿಡಿದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ?: ಇಂದಿರಾ ಕ್ಯಾಂಟೀನ್​​ ಆಹಾರ ಗುಣಮಟ್ಟದ ಬಗ್ಗೆ ಆಕ್ರೋಶ – Kannada News

ಇಂದಿರಾ ಕ್ಯಾಂಟೀನ್​Image Credit source: Tv9 Kannada

ಹುಬ್ಬಳ್ಳಿ, ಜೂನ್​​ 11: ನಗರ ಮತ್ತು ಪಟ್ಟಣದಲ್ಲಿನ ಕಾರ್ಮಿಕರು, ವಿದ್ಯಾರ್ಥಿಗಳು, ಬಡಜನರು ಹಸಿವಿನಿಂದ ಇರಬಾರದು ಎಂಬ ಸದುದ್ದೇಶದಿಂದ ಈ ಹಿಂದೆ ಸಿಎಂ ಆಗಿದ್ದ ಸಿದ್ದರಾಮಯ್ಯ ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್​​ಗಳನ್ನು ಆರಂಭಿಸಿದ್ದರು. ಹುಬ್ಬಳ್ಳಿ-ಧಾರವಾಡದಲ್ಲಿಯೂ  ಅನೇಕ ಇಂದಿರಾ ಕ್ಯಾಂಟೀನ್​​ಗಳು ತಲೆ ಎತ್ತಿದ್ದವು. ಆದರೆ ಇತ್ತೀಚೆಗೆ ಇಂದಿರಾ ಕ್ಯಾಂಟೀನ್​​ಗಳ ಆಹಾರದ ಗುಣಮಟ್ಟದ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಮೊದಲು ಇಂದಿರಾ ಕ್ಯಾಂಟೀನ್​​ಗಳಲ್ಲಿ ಅನ್ನ ಸಾರು, ಮೊಸರನ್ನ, ಪಲಾವ್​, ಮುಂಜಾನೆ ಉಪಹಾರಕ್ಕೆ ಉಪ್ಪಿಟ್ಟು, ಪೊಂಗಲ್ ಸೇರಿದಂತೆ ಕೆಲವೇ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿತ್ತು. ಆ ಬಳಿಕ ಇವುಗಳ ಮೆನುವಿನಲ್ಲಿ ಹೆಚ್ಚಳ ಮಾಡಲಾಗಿತ್ತು. ಉತ್ತರ ಕರ್ನಾಟಕದಲ್ಲಿ ರೊಟ್ಟಿ, ಚಪಾತಿ, ಪಲ್ಯವನ್ನು ಊಟದಲ್ಲಿ ನೀಡಿದ್ರೆ, ಇಡ್ಲಿ, ಪೊಂಗಲ್​​, ಉಪ್ಪಿಟ್ಟು ಸೇರಿದಂತೆ ಅನೇಕ ಖಾದ್ಯಗಳು ಸೇರ್ಪಡೆಯಾಗಿದ್ದವು.  ಮುಂಜಾನೆ ಉಪಹಾರಕ್ಕೆ ಐದು ರೂಪಾಯಿ ಮತ್ತು ಮಧ್ಯಾಹ್ನದ ರೊಟ್ಟಿ ಊಟಕ್ಕೆ ಇಪ್ಪತ್ತು ರೂಪಾಯಿ ಬೆಲೆ ನಿಗದಿ ಮಾಡಲಾಗಿತ್ತು. ಕೇವಲ ಅನ್ನ ಸಾಂಬಾರ್​​ ತಗೆದುಕೊಂಡರೆ ಹತ್ತು ರೂಪಾಯಿ ದರವಿತ್ತು. ಇದೇ ಕಾರಣಕ್ಕೆ ಆಟೋ ಚಾಲಕರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಸೇರಿದಂತೆ ಮಧ್ಯಮ ಹಾಗೂ ಬಡತನ ರೇಖೆಗಿಂತ ಕೆಳಗಿರೋ ನೂರಾರು ಜನರು ಮುಂಜಾನೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಇಂದಿಗೂ ಇಂದಿರಾ ಕ್ಯಾಂಟೀನ್​​ಗಳನ್ನು ಅವಲಂಬಿಸಿದ್ದಾರೆ. ಆದ್ರೆ ಇತ್ತೀಚೆಗೆ ಇಲ್ಲಿನ ಊಟ, ಉಪಹಾರಗಳು ಗುಣಮಟ್ಟ ಕಳೆದುಕೊಂಡಿರುವ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ವಾಯುವ್ಯ ಸಾರಿಗೆಗೆ ಡೀಸೆಲ್ ಬೆನ್ನಲ್ಲೇ ಬಿಡಿಭಾಗಗಳ ದರ ಏರಿಕೆ ಶಾಕ್; ಸ್ಪೇರ್ ಪಾರ್ಟ್ಸ್ ಸಿಗದೆ ಸಂಕಷ್ಟ

‘ಬೇಕಾದ್ರೆ ತಿನ್ನಿ, ಇಲ್ಲದಿದ್ದರೆ ಹೋಗಿ’

ನೀರಿನಂತಿರುವ ಸಾರು, ಸರಿಯಾಗಿ ಬೆಂದಿರದ ಅನ್ನವನ್ನು ಇಂದಿರಾ ಕ್ಯಾಂಟೀನ್​​ಗಳಲ್ಲಿ ನೀಡಲಾಗ್ತಿದೆ. ಚಪಾತಿ ಮತ್ತು ರೊಟ್ಟಿ ಕೂಡ ತಿನ್ನಲು ಯೋಗ್ಯವಾಗಿರಲ್ಲ. ಮುಂಜಾನೆ ಉಪಹಾರದಲ್ಲಿ ನೀಡುವ ಇಡ್ಲಿ, ಸಾಂಬಾರು ಕೂಡ ಚೆನ್ನಾಗಿರಲ್ಲ. ಮೊದಲು ಉತ್ತಮ ಗುಣಮಟ್ಟದ ಆಹಾರ ಇಲ್ಲಿ ಸಿಗುತ್ತಿದ್ದ ಹಿನ್ನೆಲೆ ಊಟ, ಉಪಹಾರ ಸೇವಿಸಿದಾಗ ಸಂತೃಪ್ತಿಯಾಗುತಿತ್ತು. ಆದ್ರೆ ಇದೀಗ ಕಷ್ಟಪಟ್ಟು ತಿನ್ನಬೇಕಾಗಿದೆ. ಇನ್ನು ಆಹಾರ ಪ್ರಮಾಣವನ್ನು ಕೂಡ ಕಡಿಮೆ ನೀಡ್ತಿದ್ದಾರೆ. ಮಧ್ಯಾಹ್ನ ಮತ್ತು ರಾತ್ರಿ ನೀಡೋ ರೈಸ್ ಪ್ರಮಾಣ ಮುನ್ನೂರು ಗ್ರಾಂನಷ್ಟಿರಬೇಕು ಅಂತಿದೆ. ಆದರೆ ಅಷ್ಟು ಕೊಡೋದಿಲ್ಲ. ಸಿಬ್ಬಂದಿ ಕೇಳಿದ್ರೆ ಬೇಕಾದ್ರೆ ತಿನ್ನಿ, ಇಲ್ಲದಿದ್ದರೆ ಹೋಗಿ ಎನ್ನುತ್ತಾರೆ. ಹೀಗಾಗಿ ಸಂಬಂಧಪಟ್ಟವರು ಇತ್ತಕಡೆ ಗಮನಹರಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

MI ಮೀಟಿಂಗ್: ಹಾರ್ದಿಕ್ ಪಾಂಡ್ಯ ಭವಿಷ್ಯ ನಿರ್ಧಾರ! – Kannada News

ಐಪಿಎಲ್ 2026ರ ಸೀಸನ್ ಮುಕ್ತಾಯಗೊಂಡ ಬೆನ್ನಲ್ಲೇ, ಮುಂಬೈ ಇಂಡಿಯನ್ಸ್ (MI) ತಂಡದಲ್ಲಿ ಭಾರಿ ಬದಲಾವಣೆಯಾಗುವ ಸೂಚನೆ ಸಿಗುತ್ತಿದೆ. ಬ್ಯಾಕ್ ಟು ಬ್ಯಾಕ್ ಮೂರು ಸೀಸನ್​ಗಳಲ್ಲಿ ತೀವ್ರ ನಿರಾಶಾದಾಯಕ ಪ್ರದರ್ಶನದ ಬಳಿಕ, ನಾಯಕ ಹಾರ್ದಿಕ್ ಪಾಂಡ್ಯ ಅವರ ಭವಿಷ್ಯದ ಕುರಿತು ಮುಂಬೈ ಇಂಡಿಯನ್ಸ್ ಮ್ಯಾನೇಜ್‌ಮೆಂಟ್ ಶೀಘ್ರದಲ್ಲೇ ಒಂದು ಪ್ರಮುಖ ಸಭೆ ನಡೆಸಲಿದೆ ಎಂದು ವರದಿಯಾಗಿದೆ.

ಈ ಸಭೆಯಲ್ಲಿ ಆಟಗಾರ ಮತ್ತು ಫ್ರಾಂಚೈಸಿ ಇಬ್ಬರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿದು ಬಂದಿದೆ. ಅಂದರೆ ಈ ಸಭೆಯಲ್ಲಿ ಹಾರ್ದಿಕ್ ಪಾಂಡ್ಯ ಅವರ ಭವಿಷ್ಯ ನಿರ್ಧಾರವಾಗಲಿದೆ. ಏಕೆಂದರೆ ಪಾಂಡ್ಯ ನಾಯಕನಾದ ಬಳಿಕ ಮುಂಬೈ ಇಂಡಿಯನ್ಸ್ ತಂಡದ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ.

ಇದನ್ನೇ ಗಂಭೀರವಾಗಿ ಪರಿಗಣಿಸಿರುವ ಮುಂಬೈ ಇಂಡಿಯನ್ಸ್ ಟೀಮ್ ಮ್ಯಾನೇಜ್ಮೆಂಟ್ ತಂಡಕ್ಕೆ ಮೇಜರ್ ಸರ್ಜರಿ ಮಾಡಲು ಚಿಂತಿಸಿದ್ದಾರೆ. ಈ ಮೇಜರ್ ಸರ್ಜರಿಯೊಂದಿಗೆ ಹಾರ್ದಿಕ್ ಪಾಂಡ್ಯ ಹೊರಬೀಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಏಕೆಂದರೆ ಹಾರ್ದಿಕ್ ಪಾಂಡ್ಯ ನಾಯಕತ್ವ ವಹಿಸಿಕೊಂಡ ಕೇವಲ ಮೂರು ವರ್ಷಗಳಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪ್ರದರ್ಶನ ತಳಮಟ್ಟಕ್ಕೆ ಕುಸಿದಿದೆ. 2024ರಲ್ಲಿ 10ನೇ ಸ್ಥಾನ, 2025ರಲ್ಲಿ ಪ್ಲೇಆಫ್ ಹಂತಕ್ಕೇರಿದ್ದರೂ, ಇತ್ತೀಚಿನ 2026ರ ಸೀಸನ್‌ನಲ್ಲಿ ತಂಡ ಮತ್ತೊಮ್ಮೆ ಕೇವಲ 4 ಪಂದ್ಯಗಳನ್ನು ಗೆದ್ದು 9ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಇದರೊಂದಿಗೆ ನಾಯಕನಾಗಿ ಮತ್ತು ಆಟಗಾರನಾಗಿ ಹಾರ್ದಿಕ್ ಪಾಂಡ್ಯ (206 ರನ್ ಮತ್ತು 4 ವಿಕೆಟ್) ಈ ಬಾರಿ ಕೂಡ ಸಂಪೂರ್ಣ ವಿಫಲರಾಗಿದ್ದಾರೆ. ಹೀಗಾಗಿ ಮುಂಬರುವ ಸೀಸನ್​ಗೂ ಮುನ್ನ ಪಾಂಡ್ಯರನ್ನು ಮುಂಬೈ ಇಂಡಿಯನ್ಸ್​ ಕೈ ಬಿಟ್ಟರೂ ಅಚ್ಚರಿಪಡಬೇಕಿಲ್ಲ.

ಡ್ರೆಸ್ಸಿಂಗ್ ರೂಮ್ ಭಿನ್ನಾಭಿಪ್ರಾಯ!

ವರದಿಗಳ ಪ್ರಕಾರ, ಹಾರ್ದಿಕ್ ಪಾಂಡ್ಯ ಅವರು ಕೇವಲ ಮೈದಾನದಲ್ಲಿ ಮಾತ್ರವಲ್ಲದೆ, ಡ್ರೆಸ್ಸಿಂಗ್ ರೂಮ್​ನಲ್ಲಿಯೂ ತೀವ್ರ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಸತತ ಸೋಲುಗಳು, ಅಭಿಮಾನಿಗಳಿಂದ ಎದುರಾದ ಟೀಕೆಗಳು ಮತ್ತು ತಂಡದ ಕೆಲವು ಹಿರಿಯ ಆಟಗಾರರಿಂದ ಸರಿಯಾದ ಸಹಕಾರ ಸಿಗದೇ ಇರುವುದು ಹಾರ್ದಿಕ್ ಅವರನ್ನು ತೀವ್ರ ಮಾನಸಿಕ ಒತ್ತಡಕ್ಕೆ ದೂಡಿದೆ.

ಹೀಗಾಗಿಯೇ ಐಪಿಎಲ್​ ಸೀಸನ್‌ನ ಮಧ್ಯಭಾಗದಲ್ಲೇ ಹಾರ್ದಿಕ್ ಪಾಂಡ್ಯ ತಂಡದಿಂದ ಹೊರಹೋಗುವ ಇಚ್ಛೆಯನ್ನು ಮ್ಯಾನೇಜ್‌ಮೆಂಟ್‌ಗೆ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಸೂರ್ಯಕುಮಾರ್ ಯಾದವ್ ಮತ್ತು ಜಸ್​ಪ್ರೀತ್ ಬುಮ್ರಾ ಅವರಂತಹ ಹಿರಿಯ ಆಟಗಾರರೊಂದಿಗೆ ಹಾರ್ದಿಕ್ ಅವರ ಸಂಬಂಧ ಸೌಹಾರ್ದಯುತವಾಗಿಲ್ಲ ಎಂಬ ಚರ್ಚೆಗಳೂ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿವೆ.

ಈ ಎಲ್ಲಾ ವಿಷಯಗಳನ್ನು ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ ಶೀಘ್ರದಲ್ಲೇ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಈ ಸಭೆಯ ಬಳಿಕ ಎಂಐ ಫ್ರಾಂಚೈಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮುಂಬೈ ಇಂಡಿಯನ್ಸ್ ಮತ್ತು ಹಾರ್ದಿಕ್ ಪಾಂಡ್ಯ ನಡುವಿನ ಈ ಸಭೆಯು ಕೇವಲ ಒಂದು ಫ್ರಾಂಚೈಸಿಯ ಆಂತರಿಕ ವಿಷಯವಾಗಿ ಉಳಿದಿಲ್ಲ. ಇದು ಮುಂಬರುವ ಐಪಿಎಲ್ 2027ರ ಮೆಗಾ ಹರಾಜಿನ ಚಿತ್ರಣವನ್ನೇ ಬದಲಿಸುವ ಶಕ್ತಿ ಹೊಂದಿದೆ.

ಇದನ್ನೂ ಓದಿ: ರಿಚಾ ಘೋಷ್ ಸಿಡಿಲಬ್ಬರ: ಸ್ಟಂಪ್ ಔಟ್​ನಿಂದ ಕೈತಪ್ಪಿದ ಗೆಲುವು!

ಹಾರ್ದಿಕ್ ಪಾಂಡ್ಯ ಮುಂಬೈ ತಂಡದಲ್ಲೇ ಮುಂದುವರಿಯುತ್ತಾರಾ ಅಥವಾ ಹೊಸ ಹಾದಿ ಹಿಡಿಯುತ್ತಾರಾ ಎಂಬ ಕುತೂಹಲಕ್ಕೆ ಜೂನ್ ತಿಂಗಳ ಅಂತ್ಯದೊಳಗೆ ತೆರೆ ಬೀಳಲಿದೆ. ಏನೇ ಆದರೂ, ಈ ನಿರ್ಧಾರವು ಮುಂಬೈ ಇಂಡಿಯನ್ಸ್‌ನ ಭವಿಷ್ಯದ ಯಶಸ್ಸು ಮತ್ತು ಹಾರ್ದಿಕ್ ಪಾಂಡ್ಯ ಅವರ ಕ್ರಿಕೆಟ್ ವೃತ್ತಿಜೀವನ—ಇಬ್ಬರಿಗೂ ಅತ್ಯಂತ ನಿರ್ಣಾಯಕವಾಗಲಿದೆ.

Source link