All posts by nagaraj11081993

IND vs AFG: ಕೊಹ್ಲಿ ಬದಲು ಯಾರಿಗೆ ಅವಕಾಶ? ಹೇಗಿರಲಿದೆ ಪ್ಲೇಯಿಂಗ್ 11? – Kannada News

ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಸರಣಿ ಏಕೈಕ ಟೆಸ್ಟ್ ಪಂದ್ಯದೊಂದಿಗೆ ಆರಂಭವಾಗಲಿದೆ. ಅದಾದ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿಯೂ ನಡೆಯಲಿದೆ. ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಆಡುವುದನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಆದರೆ ಗಾಯದ ಕಾರಣದಿಂದಾಗಿ ವಿರಾಟ್ ಕೊಹ್ಲಿ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ. ಕೊಹ್ಲಿಯ ಈ ಅಲಭ್ಯತೆ ಏಕದಿನ ವಿಶ್ವಕಪ್ ತಯಾರಿಯ ದೃಷ್ಟಿಯಿಂದ ಟೀಂ ಇಂಡಿಯಾಕ್ಕೆ ದೊಡ್ಡ ಹಿನ್ನಡೆಯಾಗಿದೆ. ಕೊಹ್ಲಿ ಅವರ ಗಾಯವು ಗಂಭೀರವಾಗಿರುವ ಕಾರಣ ಅವರು ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಆಡುವುದಿಲ್ಲ ಎಂದು ಬಿಸಿಸಿಐ ಮೂಲವೊಂದು ಪಿಟಿಐಗೆ ದೃಢಪಡಿಸಿದೆ.

ಮಂಡಿರಜ್ಜು ಗಾಯಕ್ಕೆ ತುತ್ತಾದ ಕೊಹ್ಲಿ

2026 ರ ಐಪಿಎಲ್‌ನಲ್ಲಿ ಆರ್​ಸಿಬಿ ತಂಡ ಚಾಂಪಿಯನ್‌ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದ ವಿರಾಟ್ ಕೊಹ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ನಿರ್ಣಾಯಕ ಇನ್ನಿಂಗ್ಸ್ ಆಡಿದರು. 75 ರನ್​ಗಳ ಅಜೇಯ ಇನ್ನಿಂಗ್ಸ್ ಆಡಿದ್ದ ಕೊಹ್ಲಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಆದರೆ ಇದೇ ಪಂದ್ಯದಲ್ಲಿ ಕೊಹ್ಲಿ ಗಾಯಕ್ಕೆ ತುತ್ತಾಗಬೇಕಾಯಿತು. ಬ್ಯಾಟಿಂಗ್‌ ಮಾಡುವ ವೇಳೆ ಕೊಹ್ಲಿ ಮಂಡಿರಜ್ಜು ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಪಂದ್ಯವನ್ನು ಹಲವಾರು ಬಾರಿ ನಿಲ್ಲಿಸಬೇಕಾಯಿತು. ಈ ನೋವಿನ ನಡುವೆಯೂ ಕ್ರೀಸ್​ನಲ್ಲಿ ನೆಲೆ ನಿಂತಿದ್ದ ಕೊಹ್ಲಿ ಕೊನೆಯವರೆಗೂ ಉಳಿದು ತಂಡಕ್ಕೆ ಅಮೋಘ ಜಯ ತಂದುಕೊಟ್ಟಿದ್ದರು.

ಕೊಹ್ಲಿ ಬದಲು ಯಾರಿಗೆ ಸ್ಥಾನ?

ಕೊಹ್ಲಿಯ ಅಲಭ್ಯತೆಯಿಂದಾಗಿ ಜೂನ್ 13 ರಿಂದ ಪ್ರಾರಂಭವಾಗುವ ಏಕದಿನ ಸರಣಿಯಲ್ಲಿ ಅವರ ಬದಲಿಗೆ ಆಡುವ ಹನ್ನೊಂದರ ಬಳಗದಲ್ಲಿ ಯಾರಿಗೆ ಸ್ಥಾನ ಸಿಗುತ್ತದೆ ಎಂಬುದು ಪ್ರಶ್ನೆಯಾಗಿದೆ. ವಿರಾಟ್ ಕೊಹ್ಲಿ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿರುವುದರಿಂದ, ಇಶಾನ್ ಕಿಶನ್ ಅವರ ಸ್ಥಾನದಲ್ಲಿ ಆಡುವ ಸಾಧ್ಯತೆಗಳಿವೆ. ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೆ ಇಶಾನ್ ಕಿಶನ್ ಅವರನ್ನು ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಿ ಆಯ್ಕೆ ಮಾಡಲಾಗಿದೆ. ಹೀಗಾಗಿ ಅವರಿಗೆ ಆಡುವ ಅವಕಾಶ ಸಿಗುವುದು ಭಾಗಶಃ ಖಚಿತವಾಗಿದೆ.

ಮಧ್ಯಮ ಕ್ರಮಾಂಕದಲ್ಲಿ ಯಾರ್ಯಾರು?

ಎಂದಿನಂತೆ ರೋಹಿತ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ಇನ್ನಿಂಗ್ಸ್ ಆರಂಭಿಸಿದರೆ, ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಆಡುತ್ತಿದ್ದರು. ಅವರ ಅಲಭ್ಯತೆಯ ನಡುವೆ ಕಿಶನ್ ಆಡಬಹುದು. ಇದಾದ ಬಳಿಕ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ 4 ನೇ ಕ್ರಮಾಂಕದಲ್ಲಿ ಆಡಬಹುದು. ಹಾಗೆಯೇ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಿ ಆಯ್ಕೆಯಾಗಿರುವ ಕೆಎಲ್ ರಾಹುಲ್ 5 ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ.

ವೇಗದ ಬೌಲಿಂಗ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಆರನೇ ಸ್ಥಾನದಲ್ಲಿ ಆಡಿದರೆ, ಸ್ಪಿನ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ 7 ನೇ ಕ್ರಮಾಂಕದಲ್ಲಿ ಆಡಬಹುದು. ಸ್ಪಿನ್ ಬೌಲರ್ ಆಗಿ ಕುಲ್ದೀಪ್ ಯಾದವ್ ಆಡುವುದು ಖಚಿತವಾಗಿದ್ದು, ವೇಗದ ಬೌಲರ್​ಗಳಾಗಿ ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ ಮತ್ತು ಗುರ್ನೂರ್ ಬ್ರಾರ್ ಕಣಕ್ಕಿಳಿಯಬಹುದು.

ಭಾರತದ ಸಂಭಾವ್ಯ ಪ್ಲೇಯಿಂಗ್ XI: ಶುಭ್​ಮನ್ ಗಿಲ್, ರೋಹಿತ್ ಶರ್ಮಾ, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಉತ್ತರಾಖಂಡದಲ್ಲಿ ಟ್ರೆಕಿಂಗ್ ಹೋಗಿದ್ದ ಎಂಬಿಎ ವಿದ್ಯಾರ್ಥಿನಿ ನಾಪತ್ತೆ; ಆಗಿದ್ದೇನು? – Kannada News

ಡೆಹ್ರಾಡೂನ್, ಜೂನ್ 4: ಉತ್ತರಾಖಂಡದ ಗಡ್ವಾಲ್ ಹಿಮಾಲಯದಲ್ಲಿ ಟ್ರೆಕ್ಕಿಂಗ್‌ಗೆ (Trekking) ಹೋಗಿದ್ದ ಎಂಬಿಎ ವಿದ್ಯಾರ್ಥಿನಿಯೊಬ್ಬರು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿಣ ಕಾನೂನು ಕ್ರಮಗಳು ಆರಂಭವಾಗಿವೆ. ಉತ್ತರಾಖಂಡದ ದುರ್ಗಮ ಬೆಟ್ಟ ಪ್ರದೇಶದಲ್ಲಿ ಟ್ರೆಕ್ಕಿಂಗ್ ಮಾಡುವಾಗ ಎಂಬಿಎ ವಿದ್ಯಾರ್ಥಿನಿ ನಿಗೂಢವಾಗಿ ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಾಖಂಡ ಪೊಲೀಸರು ಮತ್ತು ಅರಣ್ಯ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಸುರಕ್ಷತಾ ಲೋಪದ ಆರೋಪದ ಮೇಲೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದ್ದು, ಟ್ರೆಕ್ಕಿಂಗ್ ಆಯೋಜಿಸಿದ್ದ ಅಧಿಕೃತ ಏಜೆನ್ಸಿಯನ್ನು ಈಗ ತೀವ್ರ ತನಿಖೆಗೆ ಒಳಪಡಿಸಲಾಗಿದೆ. ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸುವ ಸಾಧ್ಯತೆ ಇದೆ.

ಏನಿದು ಘಟನೆ?:

ದೆಹಲಿಯ ಪ್ರತಿಷ್ಠಿತ ಕಾಲೇಜೊಂದರಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ ಬಬಿತಾ ಎಂಬ ವಿದ್ಯಾರ್ಥಿನಿ ತನ್ನ ಸ್ನೇಹಿತರ ತಂಡ ಮತ್ತು ಟ್ರೆಕ್ಕಿಂಗ್ ಏಜೆನ್ಸಿಯೊಂದಿಗೆ ಉತ್ತರಾಖಂಡದ ಎತ್ತರದ ಪರ್ವತ ಪ್ರದೇಶಕ್ಕೆ ಪ್ರವಾಸ ತೆರಳಿದ್ದರು. ಆದರೆ, ಟ್ರೆಕ್ಕಿಂಗ್ ಮಾರ್ಗದ ಮಧ್ಯದಲ್ಲಿ ಕ್ಯಾಂಪ್​ನಲ್ಲಿ ಅವರು ನಾಪತ್ತೆಯಾಗಿದ್ದಾರೆ. ಆ ವಿದ್ಯಾರ್ಥಿನಿಗಾಗಿ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಮತ್ತು ಸ್ಥಳೀಯ ಪೊಲೀಸರು ಡ್ರೋನ್ ಹಾಗೂ ಹೆಲಿಕಾಪ್ಟರ್ ಮೂಲಕ ತೀವ್ರ ಶೋಧ ನಡೆಸುತ್ತಿದ್ದರೂ ಇನ್ನು ಯಾವುದೇ ಸುಳಿವು ಸಿಕ್ಕಿಲ್ಲ.

ಇದನ್ನೂ ಓದಿ: ರಾಜ್ಯದಲ್ಲಿ ಬ್ಯಾನ್​​ ಆಗುತ್ತಾ ಸೋಲೋ ಟ್ರೆಕ್ಕಿಂಗ್?: ಅನುಭವ ಇದ್ದರೂ ಅಪಾಯ ಫಿಕ್ಸ್​​, ಯಾಕೆ ಗೊತ್ತಾ?

ಈ ಟ್ರೆಕ್ಕಿಂಗ್ ತಂಡದ ಜೊತೆಯಲ್ಲಿದ್ದ ಸ್ಥಳೀಯ ಗೈಡ್ (ಮಾರ್ಗದರ್ಶಿ) ಮತ್ತು ಏಜೆನ್ಸಿಯ ಒಬ್ಬ ನಿರ್ವಾಹಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಿದ್ಯಾರ್ಥಿನಿ ಕಾಣೆಯಾದ ತಕ್ಷಣವೇ ಆಡಳಿತ ಮಂಡಳಿಗೆ ಮಾಹಿತಿ ನೀಡದೆ ವಿಳಂಬ ಮಾಡಿದ್ದು ಯಾಕೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಈ ಪ್ರವಾಸವನ್ನು ಆಯೋಜಿಸಿದ್ದ ಟ್ರೆಕ್ಕಿಂಗ್ ಏಜೆನ್ಸಿಯು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ. ನಿಷೇಧಿತ ಅಥವಾ ಅಪಾಯಕಾರಿ ಮಾರ್ಗದಲ್ಲಿ ವಿದ್ಯಾರ್ಥಿಗಳನ್ನು ಕರೆದೊಯ್ದಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹೀಗಾಗಿ, ಏಜೆನ್ಸಿಯ ಲೈಸೆನ್ಸ್ ರದ್ದುಗೊಳಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: ಟ್ರೆಕ್ಕಿಂಗ್​​ ಪ್ರಿಯರೇ ಗಮನಿಸಿ: ವನ್ಯಜೀವಿ ಓಡಾಟವಿರುವ ಚಾರಣಪಥಗಳಲ್ಲಿ ಸಂಚಾರಕ್ಕೆ ತಾತ್ಕಾಲಿಕ ಬ್ರೇಕ್​​

ಈ ಘಟನೆಯ ಬೆನ್ನಲ್ಲೇ ಉತ್ತರಾಖಂಡ ಸರ್ಕಾರವು ಹಿಮಾಲಯನ್ ವಲಯದಲ್ಲಿ ಟ್ರೆಕ್ಕಿಂಗ್ ಮಾಡುವ ಸಂಸ್ಥೆಗಳಿಗೆ ಹೊಸ ಮತ್ತು ಕಠಿಣ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸೂಚಿಸಿದೆ. ಇನ್ನು ಮುಂದೆ ಪ್ರತಿಯೊಬ್ಬ ಟ್ರೆಕ್ಕರ್ ಬಳಿ ಜಿಪಿಎಸ್ (GPS) ಟ್ರ್ಯಾಕಿಂಗ್ ಸಾಧನ ಇರಬೇಕು ಮತ್ತು ನೋಂದಾಯಿತ ಗೈಡ್‌ಗಳಿಲ್ಲದೆ ಯಾರೂ ಇಂತಹ ಸಾಹಸಕ್ಕೆ ಕೈಹಾಕಬಾರದು ಎಂದು ಕಡ್ಡಾಯಗೊಳಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:52 pm, Thu, 4 June 26

Source link

ಮಹಿಳೆಯರೇ… ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ವರ್ಷಕ್ಕೊಮ್ಮೆ ತಪ್ಪದೆ ಈ ರಕ್ತ ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ – Kannada News

ಮಹಿಳೆಯರು ಜೀವನದ ವಿವಿಧ ಹಂತಗಳಲ್ಲಿ ಹಲವು ಬದಲಾವಣೆಗಳನ್ನು ಅನುಭವಿಸುತ್ತಾರೆ. ಹಾರ್ಮೋನ್ ಬದಲಾವಣೆ, ಗರ್ಭಧಾರಣೆ, ಪಿರಿಯಡ್ಸ್‌ (Periods), ಪೌಷ್ಟಿಕಾಂಶಗಳ ಕೊರತೆ ಹಾಗೂ ವಯಸ್ಸು ಹೆಚ್ಚಾಗುವುದರಿಂದ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಆದರೆ ಈ ರೀತಿ ಬರುವ ಹಲವಾರು ಆರೋಗ್ಯ ಸಮಸ್ಯೆಗಳು ಆರಂಭಿಕ ಹಂತದಲ್ಲಿ ಸ್ಪಷ್ಟ ಲಕ್ಷಣಗಳನ್ನು ತೋರಿಸದೇ ಇರಬಹುದು. ಆದ್ದರಿಂದ ಸಮಯಕ್ಕೆ ಸರಿಯಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಬಹಳ ಮುಖ್ಯ. ತಜ್ಞರ ಪ್ರಕಾರ, ನಿಯಮಿತ ರಕ್ತ ಪರೀಕ್ಷೆಗಳು ದೇಹದ ಒಳಗಿನ ಆರೋಗ್ಯ ಸ್ಥಿತಿಯನ್ನು ತಿಳಿಯಲು ಸಹಾಯ ಮಾಡುತ್ತವೆ. ಇದರಿಂದ ಅನೀಮಿಯಾ, ಡಯಾಬಿಟಿಸ್‌, ಥೈರಾಯ್ಡ್ ಸಮಸ್ಯೆಗಳು ಮತ್ತು ವಿಟಮಿನ್ ಕೊರತೆಗಳನ್ನು ಆರಂಭದಲ್ಲೇ ಪತ್ತೆಹಚ್ಚಬಹುದು.

ಮಹಿಳೆಯರು ವರ್ಷಕ್ಕೊಮ್ಮೆ ಮಾಡಿಸಬೇಕಾದ ರಕ್ತ ಪರೀಕ್ಷೆಗಳು:

ಜೈಪುರದ ಅಪೋಲೋ ಸ್ಪೆಕ್ಟ್ರಾ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಹಿರಿಯ ಸಲಹೆಗಾರರಾದ ಡಾ. ಪ್ರತಿಮಾ ಪೊದ್ದಾರ್ ಅವರು ಹೇಳುವ ಪ್ರಕಾರ, ಮಹಿಳೆಯರು ವರ್ಷಕ್ಕೊಮ್ಮೆ ಕೆಲವು ಮುಖ್ಯ ರಕ್ತ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಉತ್ತಮ.

ಸಿಬಿಸಿ (Complete Blood Count): ಈ ಪರೀಕ್ಷೆಯಿಂದ ಅನೀಮಿಯಾ ಹಾಗೂ ರಕ್ತ ಸಂಬಂಧಿತ ಸಮಸ್ಯೆಗಳನ್ನು ಪತ್ತೆಹಚ್ಚಬಹುದು.
ಬ್ಲಡ್ ಶುಗರ್ ಟೆಸ್ಟ್: ಡಯಾಬಿಟಿಸ್‌ ಇರುವುದನ್ನು ಗುರುತಿಸಲು ಸಹಾಯಕವಾಗುತ್ತದೆ.
ಲಿಪಿಡ್ ಪ್ರೊಫೈಲ್: ಹೃದಯ ಸಂಬಂಧಿತ ರೋಗಗಳ ಅಪಾಯವನ್ನು ತಿಳಿಯಲು ಅನುಕೂಲ ಮಾಡಿಕೊಡುತ್ತದೆ.
ಥೈರಾಯ್ಡ್ ಪ್ರೊಫೈಲ್ (TSH, T3, T4): ದೇಹದ ಶಕ್ತಿ, ಕೂದಲು ಉದುರುವುದು, ತೂಕ ಹೆಚ್ಚಳ ಅಥವಾ ಕಡಿಮೆ ಆಗುವುದು ಸೇರಿದಂತೆ ಹಲವು ಸಮಸ್ಯೆಗಳ ಮೂಲ ಕಾರಣ ತಿಳಿಯಲು ಸಹಾಯ ಮಾಡುತ್ತವೆ.
ವಿಟಮಿನ್ D ಪರೀಕ್ಷೆ ಮತ್ತು ವಿಟಮಿನ್ B12 ಪರೀಕ್ಷೆ: ಇದರ ಮಟ್ಟ ಕಡಿಮೆ ಇದ್ದಲ್ಲಿ ಅದನ್ನು ತಿಳಿದುಕೊಂಡು ಅದನ್ನು ಸರಿಪಡಿಸಬಹುದು.

ಇದನ್ನೂ ಓದಿ: ನಿಮ್ಮ ಓರಲ್ ಹೆಲ್ತ್ ಚೆನ್ನಾಗಿಲ್ಲ ಅಂದ್ರೆ ಬಂಜೆತನದ ಅಪಾಯ ಹೆಚ್ಚಾಗುತ್ತಾ? ಏನ್ ಹೇಳುತ್ತೆ ಸಂಶೋಧನೆ?

ಯಾವ ಲಕ್ಷಣಗಳು ಕಂಡರೆ ತಕ್ಷಣ ಪರೀಕ್ಷೆ ಮಾಡಿಸಬೇಕು?

  • ನಿರಂತರ ದಣಿವು
  • ತಲೆ ಸುತ್ತುವುದು
  • ದೇಹದಲ್ಲಿ ದುರ್ಬಲತೆ
  • ಕೂದಲು ಉದುರುವುದು
  • ತೂಕ ಏಕಾಏಕಿ ಹೆಚ್ಚಳ ಅಥವಾ ಇಳಿಕೆ
  • ಪಿರಿಯಡ್ಸ್‌ನಲ್ಲಿ ಅಸಾಮಾನ್ಯ ಬದಲಾವಣೆ
  • ಹೆಚ್ಚು ದಾಹ ಅಥವಾ ಪದೇಪದೇ ಮೂತ್ರ ವಿಸರ್ಜನೆ
  • ದೇಹದಲ್ಲಿ ಶಕ್ತಿಯ ಕೊರತೆ

ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು?

ಮಹಿಳೆಯರು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಅತ್ಯಗತ್ಯ. ಸಮತೋಲನಯುತ ಆಹಾರ ಸೇವನೆ, ಹಣ್ಣು-ತರಕಾರಿ, ಪ್ರೋಟೀನ್ ಮತ್ತು ಪೌಷ್ಟಿಕಾಂಶಯುಕ್ತ ಆಹಾರವನ್ನು ಆಹಾರಕ್ರಮದಲ್ಲಿ ಸೇರಿಸಬೇಕು. ನಿಯಮಿತ ವ್ಯಾಯಾಮ, ಸಾಕಷ್ಟು ನಿದ್ರೆ, ಒತ್ತಡ ನಿಯಂತ್ರಣ, ಸಾಕಷ್ಟು ನೀರು ಕುಡಿಯುವುದು, ನಿಯಮಿತ ಆರೋಗ್ಯ ತಪಾಸಣೆ ಮಾಡುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Balmer Lawrie Recruitment 2026: ಸಾರ್ವಜನಿಕ ವಲಯದಲ್ಲಿ ಕೆಲಸ ಪಡೆಯಲು ಇಲ್ಲಿದೆ ಸುವರ್ಣವಕಾಶ;43 ಹುದ್ದೆಗಳಿಗೆ ಅರ್ಜಿ ಆಹ್ವಾನ! – Kannada News

ಸಾರ್ವಜನಿಕ ವಲಯದಲ್ಲಿ ಕೆಲಸImage Credit source: Pinterest

ಉದ್ಯೋಗದ ನಿರೀಕ್ಷೆಯಲ್ಲಿರುವ ಅರ್ಹ ಅಭ್ಯರ್ಥಿಗಳಿಗೆ ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡಲು ಭರ್ಜರಿ ಅವಕಾಶವೊಂದು ಬಂದಿದೆ. ಭಾರತ ಸರ್ಕಾರದ ಆಡಳಿತಕ್ಕೊಳಪಟ್ಟ ಪ್ರಮುಖ ಸಾರ್ವಜನಿಕ ವಲಯದ ಸಂಸ್ಥೆಯಾದ ಬಾಲ್ಮರ್ ಲಾರಿ ಅಂಡ್ ಕಂಪನಿ ಲಿಮಿಟೆಡ್ (Balmer Lawrie & Co. Ltd.) 2026ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 43 ಹುದ್ದೆಗಳ ಭರ್ತಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಉತ್ತಮ ಸಂಬಳ ಮತ್ತು ವೃತ್ತಿ ಜೀವನದಲ್ಲಿ ಉತ್ತಮ ಬೆಳವಣಿಗೆಯನ್ನು ಬಯಸುವ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ವೇದಿಕೆಯಾಗಿದೆ.

ಯಾವೆಲ್ಲ ಹುದ್ದೆಗಳು ಲಭ್ಯವಿವೆ?

ಈ ನೇಮಕಾತಿ ಪ್ರಕ್ರಿಯೆಯಡಿ ವಿವಿಧ ಶೈಕ್ಷಣಿಕ ಹಿನ್ನೆಲೆ ಹಾಗೂ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಜೂನಿಯರ್ ಆಫೀಸರ್‌ನಿಂದ ಹಿಡಿದು ಮ್ಯಾನೇಜರ್ ಮಟ್ಟದವರೆಗೆ ಹಲವು ಅವಕಾಶಗಳನ್ನು ಕಲ್ಪಿಸಲಾಗಿದೆ. ಲಭ್ಯವಿರುವ ಪ್ರಮುಖ ಹುದ್ದೆಗಳು ಹೀಗಿವೆ:

  • ಜೂನಿಯರ್ ಆಫೀಸರ್ (Junior Officer)
  • ಅಸಿಸ್ಟೆಂಟ್ ಮ್ಯಾನೇಜರ್ (Assistant Manager)
  • ಡೆಪ್ಯುಟಿ ಮ್ಯಾನೇಜರ್ (Deputy Manager)
  • ಮ್ಯಾನೇಜರ್ (Manager) ಹಾಗೂ ಇತರೆ ಹುದ್ದೆಗಳು.

ಪ್ರಮುಖ ದಿನಾಂಕಗಳು (Important Dates):

ಅಭ್ಯರ್ಥಿಗಳು ಕೊನೆಯ ಕ್ಷಣದ ತಾಂತ್ರಿಕ ಸಮಸ್ಯೆಗಳನ್ನು ತಪ್ಪಿಸಲು ನಿಗದಿತ ಅವಧಿಗಿಂತ ಮುಂಚಿತವಾಗಿಯೇ ಅರ್ಜಿ ಸಲ್ಲಿಸುವುದು ಸೂಕ್ತ.

  • ಅರ್ಜಿ ಸಲ್ಲಿಕೆ ಆರಂಭದ ದಿನಾಂಕ: ಮೇ 27, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್ 13, 2026

ಅರ್ಹತಾ ಮಾನದಂಡಗಳು:

ನೇಮಕಾತಿ ಮಾಡಿಕೊಳ್ಳಲಾಗುತ್ತಿರುವ ಪ್ರತಿ ಹುದ್ದೆಗೆ ಅಗತ್ಯವಿರುವ ಶೈಕ್ಷಣಿಕ ಅರ್ಹತೆ, ವೃತ್ತಿಪರ ಅನುಭವ ಮತ್ತು ವಯೋಮಿತಿ ವಿಭಿನ್ನವಾಗಿರುತ್ತದೆ. ಆಯಾ ಹುದ್ದೆಗಳಿಗೆ ತಕ್ಕಂತೆ ನಿಗದಿಪಡಿಸಲಾದ ಅರ್ಹತೆಗಳನ್ನು ತಿಳಿಯಲು ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಲು ಕೋರಲಾಗಿದೆ.

ಆಯ್ಕೆ ವಿಧಾನ:

ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಹುದ್ದೆಯ ಶ್ರೇಣಿಗೆ ಅನುಗುಣವಾಗಿ ಬದಲಾಗಬಹುದು. ಸಾಮಾನ್ಯವಾಗಿ ಸ್ವೀಕರಿಸಲಾದ ಆನ್‌ಲೈನ್ ಅರ್ಜಿಗಳ ಪರಿಶೀಲನೆ (Shortlisting), ವೈಯಕ್ತಿಕ ಸಂದರ್ಶನ (Interview) ಹಾಗೂ ಅಗತ್ಯವಿದ್ದರೆ ಸಂಸ್ಥೆಯ ನಿಯಮಾವಳಿಗಳ ಪ್ರಕಾರ ಇತರೆ ಮೌಲ್ಯಮಾಪನ ಪ್ರಕ್ರಿಯೆಗಳ ಮೂಲಕ ಅಂತಿಮ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.

ಬೆಂಗಳೂರಿನಲ್ಲಿ ಉದ್ಯೋಗಾವಕಾಶವಿದೆಯೇ?

ಬಾಲ್ಮರ್ ಲಾರಿ ಸಂಸ್ಥೆಯು ಲಾಜಿಸ್ಟಿಕ್ಸ್, ಕೈಗಾರಿಕಾ ಪ್ಯಾಕೇಜಿಂಗ್, ಟ್ರಾವೆಲ್ ಸೇವೆಗಳು, ರಿಫೈನರಿ ಸೇರಿದಂತೆ ಹಲವು ಪ್ರಮುಖ ವಲಯಗಳಲ್ಲಿ ದೇಶಾದ್ಯಂತ ಕಾರ್ಯನಿರ್ವಹಿಸುತ್ತಿದೆ. ಸಂಸ್ಥೆಯು ಬೆಂಗಳೂರಿನಲ್ಲಿಯೂ ತನ್ನ ಪ್ರಮುಖ ಶಾಖೆ ಮತ್ತು ಸೇವೆಗಳನ್ನು ಹೊಂದಿರುವುದರಿಂದ, ಕರ್ನಾಟಕದ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ನಿಯೋಜನೆಗೊಳ್ಳುವ (Job Location) ಸಾಧ್ಯತೆ ಇರುತ್ತದೆ. ಆದಾಗ್ಯೂ, ಈ 43 ಹುದ್ದೆಗಳ ನಿಖರವಾದ ಉದ್ಯೋಗದ ಸ್ಥಳವನ್ನು ಖಚಿತಪಡಿಸಿಕೊಳ್ಳಲು ಅಧಿಕೃತ ಅಧಿಸೂಚನೆಯಲ್ಲಿನ ‘Place of Posting’ ವಿವರಗಳನ್ನು ಗಮನಿಸಬೇಕಾಗಿ ವಿನಂತಿ.

ಇದನ್ನೂ ಓದಿ: Kerala: ನಿವೃತ್ತಿಯಾಗುವ ವಯಸ್ಸಲ್ಲಿ ಸಿಕ್ತು ಸರ್ಕಾರಿ ಕೆಲಸ; ಪರೀಕ್ಷೆ ಬರೆದ 20 ವರ್ಷಗಳ ನಂತರ ಬಂದ ನೇಮಕಾತಿ ಪತ್ರ!

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಬಾಲ್ಮರ್ ಲಾರಿ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗುತ್ತದೆ:

  • ಮೊದಲು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ಹೋಮ್ ಪೇಜ್‌ನಲ್ಲಿರುವ ‘Careers’ (ನೇಮಕಾತಿ) ವಿಭಾಗವನ್ನು ಕ್ಲಿಕ್ ಮಾಡಿ.
  • ಪ್ರಸ್ತುತ ಚಾಲ್ತಿಯಲ್ಲಿರುವ ಉದ್ಯೋಗ ಪ್ರಕಟಣೆಯನ್ನು ಆಯ್ಕೆ ಮಾಡಿಕೊಂಡು, ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
  • ಅಗತ್ಯವಿರುವ ಶೈಕ್ಷಣಿಕ ದಾಖಲೆಗಳು, ಭಾವಚಿತ್ರ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ ಅರ್ಜಿಯನ್ನು ಸಬ್ಮಿಟ್ ಮಾಡಿ.

ಬಾಲ್ಮರ್ ಲಾರಿ (Balmer Lawrie) ಸಂಸ್ಥೆಯ ಬಗ್ಗೆ:

1867ರಲ್ಲಿ ಸ್ಥಾಪನೆಯಾದ ಬಾಲ್ಮರ್ ಲಾರಿ ಕಂಪನಿಯು 150ಕ್ಕೂ ಹೆಚ್ಚು ವರ್ಷಗಳ ಸುದೀರ್ಘ ಇತಿಹಾಸವನ್ನು ಹೊಂದಿದೆ. ಭಾರತ ಸರ್ಕಾರದ ಆಡಳಿತದಲ್ಲಿರುವ ಅತ್ಯಂತ ನಂಬಿಕಸ್ಥ ಮಿನಿರತ್ನ (Miniratna I) ಸಾರ್ವಜನಿಕ ವಲಯದ ಉದ್ದಿಮೆಯಾಗಿದ್ದು, ಇಲ್ಲಿ ವೃತ್ತಿಜೀವನವನ್ನು ಆರಂಭಿಸುವುದು ಅಭ್ಯರ್ಥಿಗಳಿಗೆ ಹೆಮ್ಮೆಯ ವಿಷಯವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ ಸಿಎಂ ಡಿಕೆಶಿ, ಅಧಿಕಾರಿಗಳಿಗೆ ಕೊಟ್ಟ ಖಡಕ್ ಸೂಚನೆಗಳೇನು? – Kannada News

ಬೆಂಗಳೂರು, (ಜೂನ್ 04): ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕ್ಷಣದಿಂದಲೂ ಡಿ.ಕೆ. ಶಿವಕುಮಾರ್ (DK Shivakumar) ಅವರ ಪ್ರತಿಯೊಂದು ನಡೆ ಹಾಗೂ ನಿರ್ಧಾರಗಳು ಭಾರೀ ಕುತೂಹಲ ಮೂಡಿಸುತ್ತಿವೆ. ರಾಜಕೀಯ ತಂತ್ರಗಾರಿಕೆಯಲ್ಲಿ ಸೈ ಎನಿಸಿಕೊಂಡಿರುವ ಡಿಕೆಶಿ, ಇದೀಗ ಒಂದೊಳ್ಳೆ ಆಡಳಿತ ನೀಡಲು ತಮ್ಮದೇ ನೀಲನಕ್ಷೆ ಹಾಕಿಕೊಂಡಿದ್ದು, ಅದಕ್ಕೆ ತಕ್ಕಂತೆ ಅಧಿಕಾರಿಗಳನ್ನು ಬಡಿದೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಸಿಎಂ ಆದ ಬಳಿಕೆ ಡಿಕೆ ಶಿವಕುಮಾರ್ ಅವರು ಇಂದು (ಜೂನ್ 04) ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳ ಸಭೆ ನಡೆಸುವ ಮೂಲಕ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ ಕಾನೂನು ಸುವವ್ಯಸ್ಥೆ ಹಾಗೂ ಭ್ರಷ್ಟಾಚಾರ ಬಗ್ಗೆ ಅಧಿಕಾರಿಗಳಿಗೆ ಖಡಕ್ ಸಲಹೆ ಸೂಚನೆಗಳನ್ನು ನೀಡಿದ್ದಾರೆ.

ಪಾರದರ್ಶಕವಾಗಿ ಕೆಲಸ ಮಾಡುವಂತೆ ಸೂಚನೆ

ಅಧಿಕಾರಿಗಳಿಂದ ಉತ್ತಮ ಕೆಲಸದ ನಿರೀಕ್ಷೆ ಹೊಂದಿದ್ದೇನೆ. ಅದಕ್ಕೆ ತಕ್ಕಂತೆ ಯಾವುದೇ ಒತ್ತಡಕ್ಕೆ ಮಣಿಯದೆ ಜನರ ಕೆಲಸ ಮಾಡಬೇಕು. ನಮ್ಮ ಸರ್ಕಾರದಲ್ಲಿ ಜಾತಿ, ಧರ್ಮ ಸೇರಿ ಯಾವುದೇ ಪ್ರಭಾವ ನಡೆಯಲ್ಲ. ಎಲ್ಲಾ ಇಲಾಖೆಗಳ ಬಾಕಿ ಕೆಲಸದ ಪಟ್ಟಿಯನ್ನು 25 ದಿನದೊಳಗೆ ಪಟ್ಟಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸುವ ಮೂಲಕ ಪಾರದರ್ಶಕವಾಗಿ ಕೆಲಸ ಮಾಡುವಂತೆ ತಿಳಿಸಿದ್ದಾರೆ.

ಜನ ಮೆಚ್ಚುವಂತಹ ಆಡಳಿತ ನೀಡುವುದು, ಸಾರ್ವಜನಿಕರ ಸಂಕಷ್ಟಗಳನ್ನು ಬಗೆಹರಿಸುವುದು, ಮತ್ತು ಅಭಿವೃದ್ಧಿಯನ್ನು ಸುಗಮಗೊಳಿಸುವುದು ತಮ್ಮ ಸರ್ಕಾರದ ಮುಖ್ಯ ಉದ್ದೇಶ. ಸರ್ಕಾರ ಮತ್ತು ಜನರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವ ಅಧಿಕಾರಿಗಳ ಪಾತ್ರವನ್ನು ಅವರು ಮನವರಿಕೆ ಮಾಡಿಕೊಟ್ಟರು. ಯಾವುದೇ ಇಲಾಖೆಯಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ನೀಡಬಾರದು ಎಂದು ಖಡಕ್ ಆಗಿ ಹೇಳಿದ್ದಾರೆ.

ಸರ್ಕಾರದ ಸುಗಮ ಆಡಳಿತಕ್ಕೆ ಅಧಿಕಾರಿಗಳೇ ಬೆನ್ನೆಲುಬು. ಹೀಗಾಗಿ ಅಧಿಕಾರಿಗಳು ಸಾರ್ವಜನಿಕರ ಕಷ್ಟಗಳಿಗೆ ತಕ್ಷಣ ಸ್ಪಂದಿಸಬೇಕು. ಸರ್ಕಾರದ ಯೋಜನೆಗಳು ಸಮರ್ಥವಾಗಿ ಜನರಿಗೆ ತಲುಪಿಸಬೇಕು. ಅಭಿವೃದ್ಧಿ ಹಾದಿಗೆ ಮೆಟ್ಟಿಲಾಗಿ ಮೆಚ್ಚುವಂತೆ ಕೆಲಸ ಮಾಡಬೇಕೆಂದು ನಯವಾಗಿಯೇ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದ್ದಾರೆ.

ನಿನ್ನೆ ಅಷ್ಟೇ ಜಾರಿಗೊಳಿಸಿದ ಆರು ಕಲ್ಯಾಣ ಯೋಜನೆಗಳನ್ನು ತಕ್ಷಣ ಜಾರಿಗೊಳಿಸುವಂತೆ ಸೂಚಿಸಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಲು, ರೌಡಿಸಂ, ಡ್ರಗ್ಸ್ ಮತ್ತು ಜೂಜಾಟ ತಡೆಗಟ್ಟಲು ಖಡಕ್ ಸೂಚನೆ ನೀಡಿದ್ದಾರೆ. ಅಲ್ಲದೇ ಭ್ರಷ್ಟಾಚಾರಕ್ಕೆ ಅವಕಾಶ ನೀಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಭ್ರಷ್ಟಾಚಾರ ಮುಕ್ತ ಸರ್ಕಾರ ನೀಡಬೇಕೆಂಬುದು ನಮ್ಮ ಗುರಿ

ಭ್ರಷ್ಟಾಚಾರ ಮುಕ್ತ ಸರ್ಕಾರ ನೀಡಬೇಕೆಂಬುದು ನಮ್ಮ ಗುರಿಯಾಗಿದ್ದು, ನಾವೆಲ್ಲಾ ಸೇರಿ ಭ್ರಷ್ಟಾಚಾರ ಮುಕ್ತ ಆಡಳಿತ ಕೊಡಬೇಕು. ಯಾವುದೇ ಒತ್ತಡಕ್ಕೆ ಮಣಿಯದೇ ಮಂತ್ರಿಗಳು, ಅಧಿಕಾರಿಗಳು ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಎಲ್ಲಾ ಇಲಾಖೆಗಳು 15 ದಿನದಲ್ಲಿ ಆ್ಯಕ್ಷನ್ ಪ್ಲ್ಯಾನ್ ಮಾಡಬೇಕು.ಎಲ್ಲ ಕೆಲಸಗಳನ್ನು ಪಾಸಿಟಿವ್ ಆಗಿ ಕಾರ್ಯನಿರ್ವಹಿಸಬೇಕು. ನನಗೆ ಹಿಸ್ಟರಿ ಬರೆಯೋಕೆ, ಓದೋಕೆ ಇಷ್ಟ ಇಲ್ಲ. ಇತಿಹಾಸ ನಿರ್ಮಾಣ ಮಾಡಬೇಕು, ಸಾಕ್ಷಿ ಗುಡ್ಡೆ ಇರಬೇಕು ಎಂದಿದ್ದಾರೆ.

Source link

Women’s T20 World Cup 2026: ಚಾಂಪಿಯನ್‌ ತಂಡಕ್ಕೆ ಸಿಗಲಿದೆ ದಾಖಲೆಯ ಬಹುಮಾನ..! – Kannada News

10 ನೇ ಆವೃತ್ತಿಯ ಮಹಿಳಾ ಟಿ20 ವಿಶ್ವಕಪ್​ಗೆ ಕ್ಷಣಗಣನೆ ಆರಂಭವಾಗಿದೆ. ಜೂನ್ 12 ರಿಂದ ಜುಲೈ 5 ರವರೆಗೆ ಇಂಗ್ಲೆಂಡ್ ಮತ್ತು ವೇಲ್ಸ್ ಆತಿಥ್ಯದಲ್ಲಿ ಈ ಪಂದ್ಯಾವಳಿ ನಡೆಯಲಿದೆ. 24 ದಿನಗಳ ಈ ಪಂದ್ಯಾವಳಿಯಲ್ಲಿ ಹನ್ನೆರಡು ತಂಡಗಳು ಭಾಗವಹಿಸಲಿದ್ದು, ಒಟ್ಟು 33 ಪಂದ್ಯಗಳು ನಡೆಯಲಿವೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಉದ್ಘಾಟನಾ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಲಿದ್ದು, ಭಾರತ ಜೂನ್ 14 ರಂದು ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಈ ಬಾರಿ, ಪಂದ್ಯಾವಳಿಯ ಒಟ್ಟು ಬಹುಮಾನದ ಹಣವನ್ನು 83ಕೋಟಿ ರೂ.ಗೆ ಏರಿಸಲಾಗಿದೆ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ.

  • ಹಿಂದಿನ ಆವೃತ್ತಿಗೆ ಹೋಲಿಸಿದರೆ ಒಟ್ಟು ಬಹುಮಾನದ ಹಣವನ್ನು ಶೇಕಡಾ 10 ರಷ್ಟು ಹೆಚ್ಚಿಸಲಾಗಿದೆ.
  • ಯುಎಇಯಲ್ಲಿ ನಡೆದ ಕಳೆದ ಮಹಿಳಾ ಟಿ20 ವಿಶ್ವಕಪ್‌ನ ಒಟ್ಟು ಬಹುಮಾನದ ಮೊತ್ತ 74 ಕೋಟಿ ರೂ.ಗಳಾಗಿತ್ತು.
  • ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ 12 ತಂಡಗಳು ಭಾಗವಹಿಸಲಿವೆ.
  • ಕಳೆದ ಆವೃತ್ತಿಯ ಪಂದ್ಯಾವಳಿಯಲ್ಲಿ 10 ತಂಡಗಳು ಭಾಗವಹಿಸಿದ್ದವು.
  • ಭಾಗವಹಿಸುವ 12 ತಂಡಗಳು ಕನಿಷ್ಠ 2.06 ಕೋಟಿ ರೂಪಾಯಿಗಳ ಖಚಿತ ಬಹುಮಾನ ಹಣವನ್ನು ಪಡೆಯುತ್ತವೆ.
  • ಭಾರತ ತಂಡ ಜೂನ್ 14 ರಂದು ಪಾಕಿಸ್ತಾನ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ.
  • 2026 ರ ಪುರುಷರ ಟಿ20 ವಿಶ್ವಕಪ್ ವಿಜೇತ ತಂಡಕ್ಕೆ 25 ಕೋಟಿ ರೂಪಾಯಿಗಳನ್ನು ನೀಡಲಾಗಿತ್ತು.

ಯಾರಿಗೆ ಎಷ್ಟು ಬಹುಮಾನ ಸಿಗಲಿದೆ?

  • ವಿಜೇತ ತಂಡಕ್ಕೆ: 21.8 ಕೋಟಿ ರೂ.
  • ರನ್ನರ್ ಅಪ್ ತಂಡಕ್ಕೆ: 10 ಕೋಟಿ ರೂ.
  • ಸೆಮಿಫೈನಲಿಸ್ಟ್‌ ತಂಡಗಳಿಗೆ: 6.29 ಕೋಟಿ ರೂ.
  • ಗುಂಪು ಪಂದ್ಯಗಳನ್ನು ಗೆದ್ದ ತಂಡಗಳಿಗೆ: 29 ಲಕ್ಷ ರೂ.

ಭಾರತದ ವೇಳಾಪಟ್ಟಿ

  • ಜೂನ್ 14 ರಂದು ಪಾಕಿಸ್ತಾನ ವಿರುದ್ಧ
  • ಜೂನ್ 17 ರಂದು ನೆದರ್ಲ್ಯಾಂಡ್ಸ್ ವಿರುದ್ಧ
  • ಜೂನ್ 21 vs ದಕ್ಷಿಣ ಆಫ್ರಿಕಾ ವಿರುದ್ಧ
  • ಜೂನ್ 25 ರಂದು ಬಾಂಗ್ಲಾದೇಶ ವಿರುದ್ಧ
  • ಜೂನ್ 28 ರಂದು ಆಸ್ಟ್ರೇಲಿಯಾ ವಿರುದ್ಧ

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜಾತಿ, ಧರ್ಮ ಸೇರಿ ಯಾವುದೇ ಪ್ರಭಾವ ನಡೆಯಲ್ಲ: ಪಾರದರ್ಶಕವಾಗಿ ಕೆಲಸ ಮಾಡಲು ಅಧಿಕಾರಿಗಳಿಗೆ ಡಿಕೆಶಿ ಖಡಕ್ ಸೂಚನೆ​​ – Kannada News

ಬೆಂಗಳೂರು, ಜೂನ್​ 04: ನೂತನ ಸಿಎಂ ಡಿ.ಕೆ. ಶಿವಕುಮಾರ್ (DK Shivakumar)​ ನಿನ್ನೆ ಆರು ಪ್ರಮುಖ ನಿರ್ಧಾರಗಳನ್ನು ಘೋಷಣೆ ಮಾಡಿದ್ದರು. ಆ ಬೆನ್ನಲ್ಲೇ ಇಂದು ಅಧಿಕಾರಿಗಳ ಸಭೆ ಮಾಡುವ ಮೂಲಕ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವುದೇ ಒತ್ತಡಕ್ಕೆ ಮಣಿಯದೆ ಜನರ ಕೆಲಸ ಮಾಡಬೇಕು. ಅಧಿಕಾರಿಗಳಿಂದ ಉತ್ತಮ ಕೆಲಸದ ನಿರೀಕ್ಷೆ ಹೊಂದಿದ್ದೇನೆ. ನಮ್ಮ ಸರ್ಕಾರದಲ್ಲಿ ಜಾತಿ, ಧರ್ಮ ಸೇರಿ ಯಾವುದೇ ಪ್ರಭಾವ ನಡೆಯಲ್ಲ. ಆತ್ಮಸಾಕ್ಷಿಗೆ ಅನುಗುಣವಾಗಿ, ಒತ್ತಡಕ್ಕೆ ಮಣಿಯದೆ ಕೆಲಸ ಮಾಡಿ. ನಮ್ಮ ಶಾಸಕರು, ಸಚಿವರು ಸೇರಿದಂತೆ ಯಾವುದೇ ಒತ್ತಡ ಬಂದರೂ ಅದಕ್ಕೆ ಮಣಿಯದೆ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಜನರಿಗೆ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡಬೇಕು. ತಾಲೂಕು, ಗ್ರಾಮಗಳಿಗೆ ತೆರಳಿ ಅಧಿಕಾರಿಗಳು ಕೆಲಸ ಮಾಡಬೇಕು. ಎಲ್ಲಾ ಇಲಾಖೆಗಳ ಬಾಕಿ ಕೆಲಸದ ಪಟ್ಟಿ ನೀಡಬೇಕು. ಬಾಕಿ ಕೆಲಸದ ಪಟ್ಟಿಯನ್ನು 25 ದಿನದೊಳಗೆ ಪಟ್ಟಿ ಸಲ್ಲಿಸಬೇಕು ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಟಾಕ್ಸಿಕ್’ ರಿಶೂಟ್, ಮುಂದಿನ ವರ್ಷ ರಿಲೀಸ್ ಎಂದು ಹೇಳಿ ಉಲ್ಟಾ ಹೊಡೆದ ಬಾಕ್ಸ್ ಆಫೀಸ್ ಪಂಡಿತ – Kannada News

‘ಟಾಕ್ಸಿಕ್’ ಸಿನಿಮಾ (Toxic Movie) ತಂಡ ಒಂದು ಒಳ್ಳೆಯ ಉದ್ದೇಶ ಇಟ್ಟುಕೊಂಡು ಸಿನಿಮಾನ ಮುಂದಕ್ಕೆ ಹಾಕಿಕೊಂಡಿದೆ. ವಿಶ್ವ ಮಟ್ಟದಲ್ಲಿ ದೊಡ್ಡದಾಗಿ ಬಿಡುಗಡೆ ಮಾಡಬೇಕು ಎಂಬುದು ತಂಡದ ಪ್ಲ್ಯಾನ್. ಆದರೆ, ಇದನ್ನು ಕೆಲವರು ತಪ್ಪಾಗಿ ಬಿಂಬಿಸೋ ಕೆಲಸ ಮಾಡುತ್ತಿದ್ದಾರೆ. ಹೌದು, ‘ಟಾಕ್ಸಿಕ್’ ಸಿನಿಮಾ ರೀಶೂಟ್ ಮಾಡಲಾಗುತ್ತದೆ, ಸಿನಿಮಾ ರಿಲೀಸ್ 2027ಕ್ಕೆ ಹೋಗುತ್ತದೆ ಎಂದೆಲ್ಲ ಹೇಳಲಾಗುತ್ತಿದೆ. ಈ ಬಗ್ಗೆ ಟ್ವೀಟ್ ಮಾಡಿದವರೇ ಆ ಬಳಿಕ ಉಲ್ಟಾ ಹೊಡೆದಿದ್ದಾರೆ.

ಕಾಲಿವುಡ್ ಸಿನಿಮಾ ಬಗ್ಗೆ ಅಪ್​​ಡೇಟ್ ಕೊಡುವ ವಲೈ ಪೆಚು ಅವರು ‘ಟಾಕ್ಸಿಕ್’ ಮುಂದಕ್ಕೆ ಹೋಗಲಿದೆ ಎಂದು ಹೇಳಿದ್ದರಂತೆ. ಈ ವಿಷಯವನ್ನು ಆಧರಿಸಿ, ಕಾಲಿವುಡ್ ಬಾಕ್ಸ್ ಆಫೀಸ್ ಬಗ್ಗೆ ಮಾಹಿತಿ ನೀಡುವ ಕ್ರಿಸ್ಟೋಫರ್ ಕನಗರಾಜ್ ಅವರು ಟ್ವೀಟ್ ಮಾಡಿದ್ದರು.

‘ಟಾಕ್ಸಿಕ್ ಸಿನಿಮಾ ಬಗ್ಗೆ ಯಶ್​ ಅವರಿಗೆ ಖುಷಿ ಇಲ್ಲ. ಹೀಗಾಗಿ, 100 ದಿನಗಳ ರೀ ಶೂಟ್ ಮಾಡಲು ಅವರು ಪ್ಲ್ಯಾನ್ ಮಾಡಿದ್ದಾರೆ. 2027ರಲ್ಲಿ ಸಿನಿಮಾ ರಿಲೀಸ್ ಆಗಲಿದೆ. ವಿಪಿ ಹೇಳಿದ್ದು’ ಎಂದು ಕನಗರಾಜ್ ಟ್ವೀಟ್ ಮಾಡಿದ್ದರು. ವಿಪಿ ಎಂದರೆ ವಲೈ ಪೆಚು ಎಂದರ್ಥ.

ಆ ಬಳಿಕ ಕನಗರಾಜ್ ಅವರಿಂದ ಸ್ಪಷ್ಟನೆ ಸಿಕ್ಕಿದೆ. ವಲೈ ಪೆಚು ಹಬ್ಬಿಸಿರೋ ಸುದ್ದಿ ಸುಳ್ಳು ಎಂದು ನಿರ್ಮಾಣ ಸಂಸ್ಥೆ ಮಾಹಿತಿ ನೀಡಿದೆ ಎಂದು ಅವರು ಆ ಬಳಿಕ ಟ್ವೀಟ್ ಮಾಡಿದ್ದಾರೆ. ಈ ಮೂಲಕ ವದಂತಿಗೆ ತೆರೆ ಬಿದ್ದಿದೆ. ಇದೆಲ್ಲ ಜನಪ್ರಿಯತೆ ಪಡೆದುಕೊಳ್ಳಲು ಮಾಡುವ ತಂತ್ರ ಎಂದು ಅನೇಕರು ಹೇಳಿದ್ದಾರೆ.

ಇದನ್ನೂ ಓದಿ: ಜೂನ್ 8ಕ್ಕೆ ಸಿಗಲಿದೆ ‘ಟಾಕ್ಸಿಕ್’ ಅಪ್​​ಡೇಟ್? ಆ ದಿನಕ್ಕಿರುವ ವಿಶೇಷತೆ ಏನು?

ತಮಿಳುನಾಡಿನಲ್ಲಿ ಯಾವುದೇ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಆಗಿಲ್ಲ. ಅವರ ಚಿತ್ರಗಳು ಸಾವಿರ ಕೋಟಿ ರೂಪಾಯಿ ಗಳಿಸಿಲ್ಲ. ಕನ್ನಡ ಚಿತ್ರವೊಂದು ಇಷ್ಟು ದೊಡ್ಡ ಮಟ್ಟಕ್ಕೆ ಹೋಗುವುದನ್ನು ನೋಡಿ ಕಾಲಿವುಡ್ ಮಂದಿ ಹೊಟ್ಟೆ ಉರಿದುಕೊಂಡಿದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಯಾರೂ ಮತದಾನದ ಹಕ್ಕು ಕಳೆದುಕೊಳ್ಳಬಾರದು: SIR ಹೆಲ್ಪ್ ಡೆಸ್ಕ್ ಸ್ಥಾಪಿಸಲು ಸಿಎಂ ಡಿಕೆಶಿ ಸೂಚನೆ – Kannada News

ಮುಖ್ಯಮಂತ್ರಿ ಡಿ ಕೆ ಶಿವಕುಮಾರ್Image Credit source: tv9

ಬೆಂಗಳೂರು, ಜೂನ್ 4: ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ಎಸ್‌ಐಆರ್ (Special Electoral Roll Purification / SIR) ಪ್ರಕ್ರಿಯೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಈ ಪ್ರಕ್ರಿಯೆಯು ಸಾರ್ವಜನಿಕರನ್ನು ತಪ್ಪು ದಾರಿಗೆ ಎಳೆಯದೆ ಅತ್ಯಂತ ಪಾರದರ್ಶಕವಾಗಿ ನಡೆಯಬೇಕು ಮತ್ತು ಎಲ್ಲಾ ಮತದಾರರಲ್ಲಿ ಈ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಬೇಕು ಎಂದು ಆದೇಶಿಸಿದ್ದಾರೆ.

ಮುಖ್ಯಾಂಶಗಳು

  • ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ನೆರವಾಗಲು ಅಗತ್ಯವಿರುವ ಕಡೆಗಳಲ್ಲಿ ತಕ್ಷಣವೇ ‘ಹೆಲ್ಪ್ ಡೆಸ್ಕ್’ ಸ್ಥಾಪಿಸಲು ಸಿಎಂ ಸೂಚನೆ.
  • ಎಸ್‌ಐಆರ್ ಉಸ್ತುವಾರಿಗಾಗಿ ಪ್ರತ್ಯೇಕ ಅಧಿಕಾರಿಗಳ ತಂಡ ನೇಮಕ.
  • ಜಿಲ್ಲಾವಾರು ಸಮಸ್ಯೆಗಳ ಪಟ್ಟಿ ಸಿದ್ಧಪಡಿಸಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಜವಾಬ್ದಾರಿ.

ಜಾಗೃತಿ ಮೂಡಿಸಲು ಪ್ರತ್ಯೇಕ ತಂಡ ನೇಮಕ

ಬೇರೆ ಅನೇಕ ರಾಜ್ಯಗಳಲ್ಲಿ ಎಸ್‌ಐಆರ್ ಪ್ರಕ್ರಿಯೆಯಿಂದಾಗಿ ಲಕ್ಷಾಂತರ ಜನರು ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ. ಆದರೆ ಕೇರಳದಲ್ಲಿ ಈ ಪ್ರಕ್ರಿಯೆ ಅತ್ಯಂತ ಯಶಸ್ವಿಯಾಗಿ ನಡೆದಿದೆ. ನಮ್ಮ ರಾಜ್ಯದಲ್ಲೂ ಯಾರೊಬ್ಬರ ಹೆಸರೂ ಮತದಾರರ ಪಟ್ಟಿಯಿಂದ ಕೈತಪ್ಪದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಇದಕ್ಕಾಗಿ ಪ್ರತ್ಯೇಕ ಅಧಿಕಾರಿಗಳ ತಂಡವನ್ನು ನೇಮಿಸಲು ಸೂಚಿಸಿ, ಸಾರ್ವಜನಿಕರ ಕುಂದುಕೊರತೆ ಆಲಿಸಲು ಹೊಸ ಇಲಾಖೆಯನ್ನು ಸೃಷ್ಟಿಸಬೇಕು. ಅದಕ್ಕೆ ಸಚಿವರೊಬ್ಬರನ್ನು ನೇಮಿಸಬೇಕು ಎಂದಿದ್ದಾರೆ.

ಎಸ್‌ಐಆರ್ ಎಂದರೇನು? ಕಾಂಗ್ರೆಸ್ ವಿರೋಧ ಏಕೆ?

ಎಸ್‌ಐಆರ್ ಎಂದರೆ ‘ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (Special Electoral Roll Purification)’ ಪ್ರಕ್ರಿಯೆಯಾಗಿದೆ. ಚುನಾವಣಾ ಆಯೋಗವು ಮತದಾರರ ಪಟ್ಟಿಯಲ್ಲಿರುವ ನಕಲಿ ಹೆಸರುಗಳು, ಮರಣ ಹೊಂದಿದವರ ವಿವರಗಳು ಹಾಗೂ ಒಂದಕ್ಕಿಂತ ಹೆಚ್ಚು ಕಡೆ ಇರುವ ಹೆಸರುಗಳನ್ನು ತೆಗೆದುಹಾಕಲು ಈ ತಾಂತ್ರಿಕ ಪ್ರಕ್ರಿಯೆಯನ್ನು ನಡೆಸುತ್ತದೆ.

ಕಾಂಗ್ರೆಸ್ ವಿರೋಧಕ್ಕೆ ಕಾರಣವೇನು?

ಕಾಂಗ್ರೆಸ್ ಪಕ್ಷವು ಎಸ್‌ಐಆರ್ ಪ್ರಕ್ರಿಯೆಯ ಕೆಲವು ನಿಯಮಾವಳಿಗಳನ್ನು ಮೊದಲಿನಿಂದಲೂ ಆಕ್ಷೇಪಿಸುತ್ತಾ ಬಂದಿದೆ. ಈ ತಾಂತ್ರಿಕ ಪರಿಷ್ಕರಣೆಯ ಹೆಸರಿನಲ್ಲಿ ಬಡವರು, ವಲಸೆ ಕಾರ್ಮಿಕರು ಹಾಗೂ ನಿರ್ದಿಷ್ಟ ಸಮುದಾಯಗಳ ಮತಗಳನ್ನು ವ್ಯವಸ್ಥಿತವಾಗಿ ಪಟ್ಟಿಯಿಂದ ಕೈಬಿಡಲಾಗುತ್ತಿದೆ ಎಂಬುದು ಕಾಂಗ್ರೆಸ್‌ನ ಗಂಭೀರ ಆರೋಪವಾಗಿದೆ. ತಳಮಟ್ಟದ ಪರಿಶೀಲನೆ ಸರಿಯಾಗಿ ನಡೆಯದಿದ್ದರೆ ನಿಜವಾದ ಮತದಾರರು ಹಕ್ಕು ಕಳೆದುಕೊಳ್ಳುತ್ತಾರೆ ಎಂಬ ಕಾರಣಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಈ ಪ್ರಕ್ರಿಯೆಯನ್ನು ಅತ್ಯಂತ ಜಾಗರೂಕತೆಯಿಂದ ನಿಭಾಯಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಣಕೊಡಲಿಲ್ಲವೆಂದು ತಾವೇ ಸರಿಪಡಿಸಿದ್ದ ಬಾಲಕಿಯ ಮೂಳೆಯನ್ನು ಮತ್ತೆ ಮುರಿದು ಕಳುಹಿಸಿದ ವೈದ್ಯರು – Kannada News

ಮುಜಫರ್‌ನಗರ, ಜೂನ್ 04: ಹಣ ಕೊಡಲಿಲ್ಲವೆಂದು ವೈದ್ಯ(Doctor)ರು ತಾವೇ ಸರಿಪಡಿಸಿದ್ದ ಬಾಲಕಿಯ ಮೂಳೆಯನ್ನು ಮತ್ತೆ ಮುರಿದು ಕಳುಹಿಸಿರುವ ಘಟನೆ ಮುಜಫರ್​ನಗರದಲ್ಲಿ ನಡೆದಿದೆ. ಬಾಲಕಿಗೆ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳೊಂದಿಗೆ ಸಂಪೂರ್ಣ ಉಚಿತ ಮರುಚಿಕಿತ್ಸೆ ನೀಡಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಗಂಡನಿಲ್ಲದ ಮಹಿಳೆ,  ಮಾನಸಿಕವಾಗಿ ಅಸ್ವಸ್ಥ ಮಗಳನ್ನು ಕರೆದುಕೊಂಡು ಸರ್ಕಾರಿ ಆಸ್ಪತ್ರೆಗೆ ಹೋಗಿದ್ದರು, ತಾನು ಕೂಲಿ ಮಾಡಿ ಜೀವನ ಸಾಗಿಸಬೇಕು ಮಗಳ ಕಾಲು ಮೂಳೆ ಮುರಿದಿದೆ.

ದಯವಿಟ್ಟು ಸರಿ ಮಾಡಿಕೊಡಿ ಎಂದು ಅಂಗಲಾಚಿ ಕೇಳಿದ್ದಾರೆ. ಅದಕ್ಕೆ ವೈದ್ಯರು 25 ಸಾವಿರ ರೂ. ಕೊಡುವಂತೆ ಕೇಳಿದ್ದಾರೆ. ಆದರೆ ತನ್ನ ಬಳಿ ಹಣವಿಲ್ಲ ಎಂದಿದ್ದಕ್ಕೆ ಹಾಗಾದ್ರೆ ಶಸ್ತ್ರ ಚಿಕಿತ್ಸೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಕಳುಹಿಸಿದ್ದಾರೆ. ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿ ಅವರ ಮೂಲಕ ಆಸ್ಪತ್ರೆಗೆ ಹೋದಾಗ 8 ಸಾವಿರ ರೂ. ಮುಂಗಡ ಕೊಡುವಂತೆ ಕೇಳಿದ್ದಾರೆ.

ಆಗ 8 ಸಾವಿರ ರೂ. ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿಸಿದ್ದಾರೆ. ಬಳಿಕ ಚೆಕ್​ಅಪ್​ಗೆಂದು ಬಂದ ವೈದ್ಯರು ಪೂರ್ತಿ ಹಣಕೊಡುವಂತೆ ಕೇಳಿದ್ದಾರೆ. ಆಗ ತನ್ನ ಬಳಿ ಹಣವಿಲ್ಲ ಎಂದಾಗ ಮತ್ತೆ ಆ ಬಾಲಕಿಯ ಮೂಳೆಯನ್ನು ಮುರಿದಿದ್ದಾರೆ ಎಂಬುದು ಮಹಿಳೆಯ ಆರೋಪವಾಗಿದೆ.

ಮತ್ತಷ್ಟು ಓದಿ: ಆಪರೇಷನ್ ಮಾಡದೆ ಸುಳ್ಳು ಹೇಳಿ ಹಣ ಪೀಕಿದ ವೈದ್ಯ?: ಸ್ಕ್ಯಾನಿಂಗ್​​ ವರದಿ ಕಂಡು ರೋಗಿಗೆ ಶಾಕ್​​!

ಮಾನಸಿಕ ಅಸ್ವಸ್ಥಳಾಗಿದ್ದ ಮಗಳನ್ನು ಹೊತ್ತುಕೊಂಡು ನ್ಯಾಯಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದಿದ್ದ ತಾಯಿ ರೇಷ್ಮಾ ಅವರ ಅಳಲನ್ನು ಅಧಿಕಾರಿಗಳು ಮತ್ತು ಮಾಧ್ಯಮಗಳು ಅತ್ಯಂತ ಗಂಭೀರವಾಗಿ ಪರಿಗಣಿಸಿವೆ.

ಜಿಲ್ಲಾಧಿಕಾರಿಗಳ ಕಟ್ಟುನಿಟ್ಟಿನ ಸೂಚನೆಯ ಮೇರೆಗೆ, ಬಾಲಕಿಯನ್ನು ತಕ್ಷಣವೇ ಪರಿಣಿತ ವೈದ್ಯರ ನಿಗಾಕ್ಕೆ ಒಳಪಡಿಸಲಾಗಿದೆ. ಆಕೆಯ ಕಾಲಿನ ಮೂಳೆಯನ್ನು ಅತ್ಯಾಧುನಿಕ ಶಸ್ತ್ರಚಿಕಿತ್ಸೆಯ ಮೂಲಕ ಉಚಿತವಾಗಿ ಸರಿಪಡಿಸಲು ಮತ್ತು ಗುಣಮುಖವಾಗುವವರೆಗೆ ಆಸ್ಪತ್ರೆಯಲ್ಲೇ ಉನ್ನತ ದರ್ಜೆಯ ಆರೈಕೆ ನೀಡಲು ಆಡಳಿತ ಮಂಡಳಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿದೆ.

ಆಸ್ಪತ್ರೆಯ ಸಿಬ್ಬಂದಿ ಹಾಗೂ ವೈದ್ಯರು ಈ ಮುಂಚೆ ನಡೆಸಿದ್ದಾರೆನ್ನಲಾದ ಹಣದ ಸುಲಿಗೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಕುಟುಂಬಕ್ಕೆ ಆರ್ಥಿಕ ಭದ್ರತೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಕರಣದ ಕುರಿತು ಮಾತನಾಡಿದ ಮುಜಫರ್‌ನಗರದ ಮುಖ್ಯ ವೈದ್ಯಾಧಿಕಾರಿ (CMO) ಸುನಿಲ್ ತೆವಾಟಿಯಾ ಅವರು, ಇದೊಂದು ಅತ್ಯಂತ ಗಂಭೀರ ಮತ್ತು ಸೂಕ್ಷ್ಮ ವಿಷಯವಾಗಿದ್ದು, ವ್ಯವಸ್ಥೆಯಲ್ಲಿ ಇಂತಹ ಬೇಜವಾಬ್ದಾರಿತನವನ್ನು ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬಾಲಕಿಯ ಎಕ್ಸ್-ರೇ ವರದಿ ಹಾಗೂ ತಾಯಿಯ ದೂರನ್ನು ಆಧರಿಸಿ ತನಿಖೆಗೆ ವಿಶೇಷ ವೈದ್ಯಕೀಯ ಮಂಡಳಿಯನ್ನು ರಚಿಸಲಾಗಿದೆ. ಡಾ. ಚತುರ್ವೇದಿ ಹಾಗೂ ಅಲ್ಲಿನ ಸಿಬ್ಬಂದಿಗಳ ವರ್ತನೆ ಮತ್ತು ಲಂಚದ ಆರೋಪದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಯಲಿದೆ. ಯಾವುದೇ ಹಂತದಲ್ಲಿ ವೈದ್ಯರ ನಿರ್ಲಕ್ಷ್ಯ ಅಥವಾ ಕಾನೂನುಬಾಹಿರ ಸುಲಿಗೆ ದೃಢಪಟ್ಟರೆ, ತಪ್ಪಿತಸ್ಥರನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಿ, ಕಠಿಣ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು, ಎಂದು ಸಿಎಂಒ ಭರವಸೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ತಾಯಿ ರೇಷ್ಮಾ ಅವರು ಅನುಭವಿಸಿದ ನೋವಿಗೆ ಸದ್ಯ ಆಡಳಿತದ ತ್ವರಿತ ಹಸ್ತಕ್ಷೇಪದಿಂದಾಗಿ ಪರಿಹಾರ ಸಿಕ್ಕಂತಾಗಿದೆ. ಬಾಲಕಿಗೆ ಉನ್ನತ ಚಿಕಿತ್ಸೆ ಆರಂಭವಾಗಿರುವುದು ಮತ್ತು ಭ್ರಷ್ಟಾಚಾರದ ವಿರುದ್ಧ ಕಠಿಣ ಕಾನೂನು ಸಮರಕ್ಕೆ ಆಡಳಿತ ಮುಂದಾಗಿರುವುದು ಸರ್ಕಾರಿ ಆರೋಗ್ಯ ವ್ಯವಸ್ಥೆಯ ಮೇಲಿನ ಸಾರ್ವಜನಿಕರ ನಂಬಿಕೆಯನ್ನು ಪುನಃಸ್ಥಾಪಿಸಲು ನೆರವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link