ಆನೆಗಳ ((elephants) ಆಟ ತುಂಟಾಟ ನೋಡುವುದೇ ಚಂದ. ಎಲ್ಲರಿಗೂ ತಿಳಿದಿರುವಂತೆ ಈ ಆನೆಗಳು ಭಾವನಾತ್ಮಕ ಜೀವಿಗಳು. ಆನೆಗಳಿಗೆ ಮನುಷ್ಯರು ತುಂಬಾ ಮುದ್ದಾಗಿ ಕಾಣುತ್ತಾರೆಯಂತೆ. ಹೀಗಾಗಿ ಈ ಪ್ರಾಣಿಗಳು ಮನುಷ್ಯರೊಂದಿಗೆ ಬಹುಬೇಗನೇ ಆಪ್ತವಾಗುತ್ತವೆ. ಹೀಗಾಗಿ ಗಜರಾಜನ ಜತೆಗಿನ ಬಾಂಧವ್ಯ ಸಾರುವ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ಪುಟ್ಟ ಹುಡುಗಿಯೊಂದಿಗೆ ಆನೆಯೊಂದು ಪ್ರೀತಿಯಿಂದ ವರ್ತಿಸಿದೆ. ಹೌದು ಐಸ್ ಕ್ರೀಮ್ ಕೊಟ್ಟ ಬಾಲಕಿಗೆ ಮುತ್ತು ನೀಡಿ ಧನ್ಯವಾದ ತಿಳಿಸಿದೆ. ಈ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
primepost07 ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಪುಟ್ಟ ಹುಡುಗಿಯೊಬ್ಬಳು ಆನೆಗೆ ಐಸ್ ಕ್ರೀಮ್ ಕೊಡುವುದನ್ನು ಕಾಣಬಹುದು. ಐಸ್ ಕ್ರೀಮ್ ಕೊಟ್ಟ ಖುಷಿಗೆ ಆನೆ ಪುಟ್ಟ ಹುಡುಗಿಗೆ ಥ್ಯಾಂಕ್ಸ್ ಹೇಳಿ ಮುತ್ತು ನೀಡಿದೆ. ಪುಟ್ಟ ಹುಡುಗಿಯೂ ಖುಷಿಯಿಂದ ನಕ್ಕಿರುವುದನ್ನು ಕಾಣಬಹುದು.
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ತುಂಬಾನೇ ಮುದ್ದಾಗಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಐಸ್ ಕ್ರೀಮ್ ಕೊಟ್ಟದ್ದಕ್ಕೆ ಈ ಗಜರಾಜನಿಗೆ ಎಷ್ಟು ಖುಷಿ ನೋಡಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಮುಗ್ಧ ಮನಸ್ಸುಗಳ ಶುದ್ಧ ಗೆಳತನ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಓಂಕಾರವು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವಾದ ಸ್ಥಾನಮಾನವನ್ನು ಹೊಂದಿದೆ. ಅಕಾರ, ಉಕಾರ, ಮಕಾರಗಳ ಸಮ್ಮಿಲನವೇ ಓಂಕಾರವಾಗಿದ್ದು, ಇದನ್ನು ಇಡೀ ಬ್ರಹ್ಮಾಂಡದಲ್ಲಿ ಮೊದಲು ಉದ್ಭವಿಸಿದ ಶಬ್ದ ಎಂದು ನಂಬಲಾಗುತ್ತದೆ. ಇದನ್ನು ಪ್ರಣವ ಮಂತ್ರ ಎಂದೂ ಕರೆಯುತ್ತಾರೆ. ಈ ಓಂಕಾರವನ್ನು ಮಗುವಿನ ನಾಲಿಗೆಯ ಮೇಲೆ ಬರೆಯುವುದರಿಂದ ಸಾಕ್ಷಾತ್ ಶಾರದಾ ದೇವಿ, ಸರಸ್ವತಿ, ಗಣೇಶ ಮತ್ತು ಹಯಗ್ರೀವ ಸೇರಿದಂತೆ ವಿದ್ಯೆಗೆ ಸಂಬಂಧಿಸಿದ ಎಲ್ಲಾ ದೇವಾನುದೇವತೆಗಳ ಅನುಗ್ರಹ ಮಗುವಿಗೆ ದೊರೆಯುತ್ತದೆ ಎಂಬ ನಂಬಿಕೆಯಿದೆ. ಅಕ್ಷರಾಭ್ಯಾಸಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುವ ನಮ್ಮ ಸಂಸ್ಕೃತಿಯಲ್ಲಿ, ವೇದಗಳಿಗೂ ಮತ್ತು ಮಂತ್ರಗಳಿಗೂ ಓಂಕಾರವು ಅತ್ಯಂತ ಪವಿತ್ರವಾಗಿದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
ಗುರೂಜಿಯವರು ಹೇಳುವಂತೆ, ಮಗುವಿನ ನಾಲಿಗೆ ಮೇಲೆ ಓಂಕಾರ ಬರೆಯುವುದು ಹಲವು ವಿಧಗಳಲ್ಲಿ ಶುಭಕರವಾಗಿದೆ. ಜಾತಕರ್ಮದ ಸಮಯದಲ್ಲಿ ತಂದೆ, ತಾಯಿ, ಗುರುಗಳು ಅಥವಾ ವೇದ ಮಂತ್ರಗಳನ್ನು ಪಠಿಸುವವರು ಈ ಓಂಕಾರವನ್ನು ಬರೆಯಬಹುದು. ಓಂಕಾರವನ್ನು ಬರೆಯಲು ತುಪ್ಪ ಮತ್ತು ಜೇನುತುಪ್ಪವನ್ನು ಬೆರೆಸಿ ಬಳಸಲಾಗುತ್ತದೆ. ಇದರ ಜೊತೆಗೆ, ಬಂಗಾರದ ಕಡ್ಡಿ, ತುಳಸಿಯ ರೆಂಬೆಯ ಕಡ್ಡಿ, ಶ್ರೀಗಂಧದ ಕಡ್ಡಿ, ಪವಿತ್ರ ಬಿಲ್ವಪತ್ರೆಯ ಕಡ್ಡಿ, ತಾಮ್ರದ ಕಡ್ಡಿ, ಬೆಳ್ಳಿಯ ಕಡ್ಡಿ ಅಥವಾ ಬಂಗಾರದ ಕಡ್ಡಿಗಳನ್ನು ಬಳಸಿ ಮಗುವಿನ ನಾಲಿಗೆ ಮೇಲೆ ಓಂಕಾರವನ್ನು ಬರೆಯಲಾಗುತ್ತದೆ.
ಈ ಕ್ರಿಯೆಯಿಂದ ಮಗುವಿನ ಸಪ್ತ ಚಕ್ರಗಳು ಜಾಗೃತಗೊಳ್ಳುತ್ತವೆ ಎಂದು ಹೇಳಲಾಗುತ್ತದೆ. ತುಪ್ಪವು ಪರಿಶುದ್ಧತೆಯ ಸಂಕೇತವಾಗಿದ್ದು, ಜೇನುತುಪ್ಪವು ಮಗುವಿಗೆ ಮಧುರವಾದ ಮಾತುಗಳನ್ನು ತಂದುಕೊಡುತ್ತದೆ. ಬಂಗಾರದಿಂದ ದೇಹಕ್ಕೆ ಕಾಂತಿ ದೊರೆತು, ಋಣಾತ್ಮಕ ಶಕ್ತಿಗಳು ದೂರವಾಗುತ್ತವೆ. ಆರೋಗ್ಯದ ದೃಷ್ಟಿಯಿಂದಲೂ ಈ ಓಂಕಾರವು ಮಗುವಿನ ಜ್ಞಾನ ವೃದ್ಧಿಗೆ ಸಹಕಾರಿಯಾಗಿದ್ದು, ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಆಯುರ್ವೇದದಲ್ಲೂ ಸಹ ಓಂಕಾರಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ.
ಓಂಕಾರವನ್ನು ಬರೆಯಲು ಕೆಲವು ಶುಭ ದಿನಗಳು ಮತ್ತು ತಿಥಿಗಳನ್ನು ಸೂಚಿಸಲಾಗಿದೆ. ಗುರುವಾರ, ಸೋಮವಾರ ಮತ್ತು ಶುಕ್ರವಾರಗಳು ಸೂಕ್ತವಾಗಿವೆ. ಬುಧವಾರವೂ ಪ್ರಾಶಸ್ತ್ಯ ನೀಡಬಹುದು. ವಿಶೇಷವಾಗಿ ಅಕ್ಷಯ ತೃತೀಯ, ವಿಜಯದಶಮಿ, ಯುಗಾದಿ ಮತ್ತು ವಸಂತ ಪಂಚಮಿಯಂತಹ ಪವಿತ್ರ ದಿನಗಳಲ್ಲಿ ಈ ಸಂಸ್ಕಾರವನ್ನು ಮಾಡುವುದು ಉತ್ತಮ. ಅಕ್ಷಯ ತೃತೀಯ ಹೊಸ ಆರಂಭದ ಪ್ರತೀಕವಾಗಿದ್ದು, ವಿಜಯದಶಮಿ ವಿಜಯದ ಸಂಕೇತವಾಗಿದೆ. ವಸಂತ ಪಂಚಮಿಯು ಸರಸ್ವತಿ ದೇವಿಯ ಜನ್ಮದಿನವಾಗಿದೆ. ದ್ವಿತೀಯ, ತೃತೀಯ, ಪಂಚಮಿ, ಸಪ್ತಮಿ, ದಶಮಿಯಂತಹ ಶುಭ ತಿಥಿಗಳಲ್ಲಿ ಸಂಧ್ಯಾಕಾಲ ಅಥವಾ ಬ್ರಾಹ್ಮೀ ಮುಹೂರ್ತದಲ್ಲಿ ಓಂಕಾರವನ್ನು ಬರೆಸುವುದು ಅತ್ಯಂತ ಶ್ರೇಷ್ಠ. ಪುಷ್ಯ ನಕ್ಷತ್ರ ಮತ್ತು ರವಿಯೋಗವಿರುವ ಸಂದರ್ಭಗಳಲ್ಲೂ ಇದನ್ನು ಮಾಡಬಹುದು.
ಪೂರ್ವಾಭಿಮುಖವಾಗಿ ಕುಳಿತು, ದೀಪವನ್ನು ಸಾಕ್ಷಿಯಾಗಿಟ್ಟುಕೊಂಡು, ಜೇನುತುಪ್ಪ ಮತ್ತು ತುಪ್ಪವನ್ನು ಬೆರೆಸಿ ಮಗುವಿನ ನಾಲಿಗೆ ಮೇಲೆ ಓಂಕಾರ ಬರೆಯುವುದರಿಂದ ಅದಕ್ಕೆ ಅಪಾರ ಶಕ್ತಿ ದೊರೆಯುತ್ತದೆ. ಇದನ್ನು ಮೂರು, ಐದು, ಏಳು ಅಥವಾ ಒಂಬತ್ತು ವರ್ಷಗಳ ವಯಸ್ಸಿನಲ್ಲಿ ಮಾಡುವುದು ಉತ್ತಮ ಎಂದು ಹೇಳಲಾಗುತ್ತದೆ. “ಆಚಾರವೇ ಸ್ವರ್ಗ, ಅನಾಚಾರವೇ ನರಕ” ಎಂಬ ಮಾತಿನಂತೆ, ಈ ಆಚರಣೆಗಳು ಮಗುವಿನ ಉತ್ತಮ ಭವಿಷ್ಯಕ್ಕೆ ಪೂರಕವಾಗಿವೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನವದೆಹಲಿ, ಮಾರ್ಚ್ 15: ದೇಶದ ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆ (Assembly Elections) ಏಪ್ರಿಲ್ 9ರಿಂದ 29ರವರೆಗೂ ನಡೆಯಲಿದೆ. ಅದೇ ವೇಳೆ, ಆರು ರಾಜ್ಯಗಳಲ್ಲಿನ 8 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಯೂ ಆಗಲಿದೆ. ಏಪ್ರಿಲ್ 9 ಮತ್ತು 29ರಂದು ಈ ಉಪಚುನಾವಣೆ (By Polls) ನಡೆಯುತ್ತದೆ. ಮೇ 4ರಂದು ಎಲ್ಲಾ ಕ್ಷೇತ್ರಗಳಿಗೆ ಚುನಾವಣಾ ಫಲಿತಾಂಶ (Election Results) ಪ್ರಕಟವಾಗುತ್ತದೆ.
ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಗೋವಾ, ನಾಗಲ್ಯಾಂಡ್ ಮತ್ತು ತ್ರಿಪುರಾ ರಾಜ್ಯಗಳಲ್ಲಿನ ಎಂಟು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಿಗದಿಯಾಗಿದೆ. ಕರ್ನಾಟಕ, ನಾಗಾಲ್ಯಾಂಡ್, ತ್ರಿಪುರಾ ಮತ್ತು ಗೋವಾ ರಾಜ್ಯಗಳಲ್ಲಿ ಏಪ್ರಿಲ್ 9ರಂದು ಉಪಚುನಾವಣೆ ಆಗುತ್ತದೆ. ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಏಪ್ರಿಲ್ 23ರಂದು ಉಪಚುನಾವಣೆ ನಡೆಯುತ್ತದೆ.
ಕರ್ನಾಟಕದಲ್ಲಿ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರಗಳಲ್ಲಿ ಉಪಚುನಾವಣೆ ಆಗುತ್ತಿದೆ. ಎಚ್. ವೈ. ಮೇಟಿ ಅವರ ನಿಧನದಿಂದ ಬಾಗಲಕೋಟೆ ವಿಧಾನಸಭಾ ಸ್ಥಾನ ತೆರವಾಗಿದೆ. ಇನ್ನು, ದಾವಣಗೆರೆ ದಕ್ಷಿಣ ಕ್ಷೇತ್ರವು ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾಗಿತ್ತು. ಈ ಕ್ಷೇತ್ರಗಳಿಗೆ ಏಪ್ರಿಲ್ 9ರಂದು ಮತದಾನ ಆಗುತ್ತದೆ. ನಾಮಪತ್ರ ಸಲ್ಲಿಕೆಗೆ ಮಾರ್ಚ್ 24 ಕೊನೆಯ ದಿನವಾಗಿದೆ.
ಇದೇ ವೇಳೆ, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಅಸ್ಸಾಮ್ ಮತ್ತು ಪುದುಚೆರಿಯಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಕೇರಳ, ಅಸ್ಸಾಮ್ ಮತ್ತು ಪುದುಚೆರಿಯಲ್ಲಿ ಏಪ್ರಿಲ್ 9ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯುತ್ತದೆ. ತಮಿಳುನಾಡಿನಲ್ಲಿ ಏಪ್ರಿಲ್ 23ರಂದು ಒಂದೇ ಹಂತದಲ್ಲಿ ಚುನಾವಣೆ ಆಗುತ್ತದೆ. ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು 29ರಂದು ಎರಡು ಹಂತದಲ್ಲಿ ಚುನಾವಣೆಯಾಗಲಿದೆ.
ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ (KHPT) ಅಧಿಕೃತ ಅಧಿಸೂಚನೆಯ ಮೂಲಕ ಖಾಲಿ ಇರುವ ಪ್ರಮುಖ ಹುದ್ದೆಗಳ ಭರ್ತಿಗೆ ಸಿದ್ಧವಾಗಿದೆ. ಈ ನೇಮಕಾತಿ ಅಡಿಯಲ್ಲಿ ‘ಹಣಕಾಸು ಅಧಿಕಾರಿ’ (Finance Officer) ಮತ್ತು ‘ಜಿಲ್ಲಾ ಪ್ರಮುಖ’ (District Lead) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕ ಸರ್ಕಾರ ಮತ್ತು ಆರೋಗ್ಯ ಕ್ಷೇತ್ರದಲ್ಲಿ ತಮ್ಮ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ಉದ್ಯೋಗಾಕಾಂಕ್ಷಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರು ಅಥವಾ ವಿಜಯನಗರ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಸಂಬಂಧಿತ ವಿಷಯಗಳಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು. ವೇತನ ಶ್ರೇಣಿಯು ಸಂಸ್ಥೆಯ ಮಾನದಂಡಗಳ ಪ್ರಕಾರ ಅತ್ಯುತ್ತಮವಾಗಿದ್ದು, ಅಭ್ಯರ್ಥಿಯ ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಆಸಕ್ತರು ಮಾರ್ಚ್ 22 ರೊಳಗೆ ಆನ್‌ಲೈನ್ ಮೂಲಕ ತಮ್ಮ ಅರ್ಜಿಯನ್ನು ಸಲ್ಲಿಸಬೇಕೆಂದು ಸೂಚಿಸಲಾಗಿದೆ.
ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಅತ್ಯಂತ ಸರಳವಾಗಿದ್ದು, ಅಭ್ಯರ್ಥಿಗಳು ಕೆಎಚ್‌ಪಿಟಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಬೇಕು. ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಯು ಸರಿಯಾದ ಇಮೇಲ್ ಐಡಿ, ಮೊಬೈಲ್ ಸಂಖ್ಯೆ, ಐಡಿ ಪ್ರೂಫ್, ಶೈಕ್ಷಣಿಕ ದಾಖಲೆಗಳು ಮತ್ತು ನವೀಕರಿಸಿದ ರೆಸ್ಯೂಮ್ ಅನ್ನು ಸಿದ್ಧವಾಗಿಟ್ಟುಕೊಳ್ಳುವುದು ಅವಶ್ಯಕ. ಆನ್‌ಲೈನ್ ಅರ್ಜಿಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ, ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿದ ನಂತರ ಅರ್ಜಿ ಶುಲ್ಕವಿದ್ದರೆ ಪಾವತಿಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಕೊನೆಯಲ್ಲಿ ಅರ್ಜಿ ಸಲ್ಲಿಕೆಯಾದ ನಂತರ ಸಿಗುವ ಅರ್ಜಿ ಸಂಖ್ಯೆಯನ್ನು ಮುಂದಿನ ಉಲ್ಲೇಖಕ್ಕಾಗಿ ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಮರೆಯಬೇಡಿ.
ವಿಜಯ್ (Thalapathy Vijay) ನಟನೆಯ ‘ಜನ ನಾಯಗನ್’ ಸಿನಿಮಾ ರಾಜಕೀಯಕ್ಕೆ ಸಿಲುಕಿ ಇನ್ನೂ ಬಿಡುಗಡೆ ಆಗಿಲ್ಲ. ಜನವರಿ 09 ರಂದು ಬಿಡುಗಡೆ ಆಗಬೇಕಿತ್ತು. ಆದರೆ ಸಿನಿಮಾ ಸಿಬಿಎಫ್ಸಿಯು ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಲು ವಿಳಂಬ ನೀತಿ ಅನುಸರಿಸಿತು. ಇದೇ ಕಾರಣಕ್ಕೆ ಸಿನಿಮಾದ ನಿರ್ಮಾಣ ಸಂಸ್ಥೆಯಾದ ಕೆವಿಎನ್, ನ್ಯಾಯಾಲಯದ ಮೆಟ್ಟಿಲೇರಿತು. ಆದರೆ ಅಲ್ಲಿ ವಿಚಾರಣೆ ತಡವಾಗಿ ಸಿನಿಮಾದ ಬಿಡುಗಡೆ ಇನ್ನಷ್ಟು ವಿಳಂಬವಾಯ್ತು. ಆದರೆ ನಿರ್ಮಾಪಕರು ಕೇಸು ಹಿಂಪಡೆದು, ಸಿಬಿಎಫ್ಸಿಯಿಂದಲೇ ಪ್ರಮಾಣ ಪತ್ರ ಪಡೆಯಲು ಮುಂದಾದರು. ಆದರೆ ಮತ್ತೆ ಉದ್ದೇಶಪೂರ್ವಕ (?) ವಿಳಂಬ ಮಾಡಲಾಯ್ತು. ಇದೀಗ ಮತ್ತೊಮ್ಮೆ ಸಿನಿಮಾದ ಬಿಡುಗಡೆ ತಡವಾಗುತ್ತಿದೆ. ಆ ಮೂಲಕ ವಿಜಯ್ ಅವರ ರಾಜಕೀಯ ವಿರೋಧಿಗಳ ಕೈ ಮೇಲಾಗಿದೆ. ಅವರ ಉದ್ದೇಶ ಈಡೇರಿದೆ.
ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ಇಂದು (ಮಾರ್ಚ್ 15) ಘೋಷಣೆ ಆಗಿದ್ದು, ‘ಜನ ನಾಯಗನ್’ ಸಿನಿಮಾದ ನಾಯಕ ದಳಪತಿ ವಿಜಯ್ ಸಹ ಚುನಾವಣೆಗೆ ಸ್ಪರ್ಧಿಸಲಿದ್ದು, ಇಂದಿನಿಂದಲೇ ರಾಜ್ಯದಾದ್ಯಂತ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಸಿನಿಮಾದ ಬಿಡುಗಡೆ ಬಹುತೇಕ ಅಸಾಧ್ಯವಾಗಿದೆ. ನೀತಿ ಸಂಹಿತೆ ಪ್ರಕಾರ, ಚುನಾವಣಾ ಪಕ್ಷದ ಪರವಾಗಿ ಪ್ರಚಾರ ಮಾಡುವ, ನಿರ್ದಿಷ್ಟ ಪಕ್ಷಕ್ಕೆ ಮತ ಹಾಕುವಂತೆ ಮತದಾರರ ಮೇಲೆ ಪ್ರಭಾವ ಬೀರುವ ಇತರೆ ರಾಜಕೀಯ ಪಕ್ಷಗಳ ಟೀಕೆ ಮಾಡುವಂಥಹಾ ಸಿನಿಮಾಗಳನ್ನು ಪ್ರದರ್ಶಿಸುವಂತಿಲ್ಲ. ಹಾಗಾಗಿ ‘ಜನ ನಾಯಗನ್’ ಸಿನಿಮಾದ ಬಿಡುಗಡೆ ಇನ್ನಷ್ಟು ವಿಳಂಬ ಆಗಲಿದೆ.
‘ಜನ ನಾಯಗನ್’ ಸಿನಿಮಾವು ತೆಲುಗಿನ ‘ಭಗವಂತ ಕೇಸರಿ’ ಸಿನಿಮಾದ ರೀಮೇಕ್ ಆಗಿದ್ದರೂ ಸಹ ಸಿನಿಮಾನಲ್ಲಿ ಕೆಲವು ರಾಜಕೀಯ ಪಕ್ಷಗಳನ್ನು ಟೀಕೆ ಮಾಡುವ ದೃಶ್ಯಗಳಿವೆ. ಅಲ್ಲದೆ, ವಿಜಯ್ ಅವರ ಪಕ್ಷದ ಬಗ್ಗೆ ಪ್ರಚಾರಾತ್ಮಕ ಎನ್ನಬಹುದಾದ ಕೆಲವು ಸಂಭಾಷಣೆಗಳು ಇವೆಯಂತೆ. ಇದೇ ಕಾರಣಕ್ಕೆ ಸಿಬಿಎಫ್ಸಿಯು ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಲು ಹಿಂದೇಟು ಹಾಕಿತ್ತು. ಇದೀಗ ಮಾಡೆಲ್ ಕೋಡ್ ಆಫ್ ಕಂಡಕ್ಟ್ ಜಾರಿಗೆ ಬಂದಿರುವ ಕಾರಣ, ಸಿಬಿಎಫ್ಸಿ ಪ್ರಮಾಣ ಪತ್ರ ನೀಡಿದರೂ ಸಹ ಸಿನಿಮಾದ ಬಿಡುಗಡೆ ಅಸಾಧ್ಯ ಎಂಬಂತಾಗಿದೆ.
ತಮಿಳುನಾಡು ವಿಧಾನಸಭಾ ಚುನಾವಣೆ ಏಪ್ರಿಲ್ 23, 2026 ಕ್ಕೆ ನಿಗದಿ ಆಗಿದೆ. ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಹೊರಬೀಳಲಿದೆ. ಈ ಅವಧಿಯಲ್ಲಿ ರಾಜ್ಯದಾದ್ಯಂತ ಮಾದರಿ ಚುನಾವಣಾ ನೀತಿ ಸಂಹಿತೆ (MCC) ಜಾರಿಯಲ್ಲಿರುವುದರಿಂದ, ಫಲಿತಾಂಶದ ಬಳಿಕ ಅಂದರೆ ಮೇ ತಿಂಗಳಲ್ಲಿಯೇ ‘ಜನ ನಾಯಗನ್’ ಸಿನಿಮಾ ಬಿಡುಗಡೆ ಸಾಧ್ಯ ಎನ್ನಲಾಗುತ್ತಿದೆ.
ವಿಜಯ್ ಅವರ ರಾಜಕೀಯ ವಿರೋಧಿಗಳು ‘ಜನ ನಾಯಗನ್’ ಸಿನಿಮಾವನ್ನು ಚುನಾವಣೆಗೆ ಮುಂಚೆ ಬಿಡುಗಡೆ ಮಾಡದಂತೆ ತಡೆಹಿಡಿಯಲು ಯಶಸ್ವಿ ಆಗಿದ್ದು, ವಿಜಯ್ಗೆ ದೊಡ್ಡ ರಾಜಕೀಯ ಪೆಟ್ಟನ್ನೇ ನೀಡಿದ್ದಾರೆ. ಇನ್ನು ವಿಜಯ್ ಅವರು ತಮಿಳಗ ವೆಟ್ರಿ ಕಳಗಂ ಹೆಸರಿನ ರಾಜಕೀಯ ಪಕ್ಷ ಸ್ಥಾಪಿಸಿದ್ದು, ರಾಜ್ಯದ ಎಲ್ಲ ಕ್ಷೇತ್ರಗಳಿಂದಲೂ ಅವರ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದ್ದಾರಂತೆ. ಸ್ವತಃ ವಿಜಯ್ ಅವರು ಎರಡು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ.
ಬೆಂಗಳೂರು, ಮಾರ್ಚ್ 15: ರಾಜ್ಯದ ಬಹುತೇಕ ಜಿಲ್ಲೆಗಳ ಜನರು ವಿಪರೀತ ಸೆಕೆಯಿಂದಾಗಿ ತತ್ತರಿಸಿ ಹೋಗಿರುವ ನಡುವೆ ಕೆಲ ಜಿಲ್ಲೆಗಳಲ್ಲಿ ಇಂದು ಅಕಾಲಿಕವಾಗಿ ಸುರಿದ ಮಳೆ ತಂಪೆರೆದಿದೆ. ಕೊಡಗು, ಚಿಕ್ಕಮಗಳೂರು ಸೇರಿ ಬೆಳಗಾವಿಯಲ್ಲಿಯೂ ಉತ್ತಮ ಮಳೆಯಾಗಿದ್ದು, ಏಕಾಏಕಿ ಸುರಿದ ಮಳೆಯಿಂದ ವಾಹನ ಸವಾರರು ಪರದಾಟ ನಡೆಸಿರುವ ಪ್ರಸಂಗವೂ ನಡೆದಿದೆ. ಬೆಳಗಾವಿಯಲ್ಲಿ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಮಳೆಯಾಗಿದ್ದು, ಸದಾಶಿವ ನಗರ, ನೆಹರು ನಗರ, ಶಾಹು ನಗರದಲ್ಲಿ ವರುಣ ಅಬ್ಬರಿಸಿದ್ದಾನೆ. ಕೊಡಗಿನ ಹಲವೆಡೆಯೂ ಧಾರಾಕಾರ ಮಳೆಯಾಗಿದ್ದು, ಸುಡು ಬಿಸಿಲಿನ ಸಂದರ್ಭ ಸುರಿದ ಮಳೆಕಾಫಿ ಬೆಳೆಗಾರರಲ್ಲಿ ಹರ್ಷ ತಂದಿದೆ.
ಚಿಕ್ಕಮಗಳೂರಿನ ಹಲವೆಡೆ ಆಲಿಕಲ್ಲು ಮಳೆ
ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಭಾರಿ ಗಾಳಿಯೊಂದಿಗೆ ಉತ್ತಮ ಮಳೆಯಾಗಿದ್ದು, ಕೆಲ ಪ್ರದೇಶಗಳಲ್ಲಿ ಆಲಿಕಲ್ಲು ಮಳೆ ಕೂಡ ಸುರಿದಿದೆ. ಚಿಕ್ಕಮಗಳೂರು ತಾಲೂಕಿನ ಮುತ್ತೋಡಿ ಮತ್ತು ಕಡಬಗೆರೆ ಭಾಗದಲ್ಲಿ ಭಾರೀ ಮಳೆಯಾಗಿದ್ದರೆ, ಮೂಡಿಗೆರೆ ಮತ್ತು NR ಪುರ ತಾಲೂಕಿನ ಹಲವೆಡೆ ಆಲಿಕಲ್ಲು ಮಳೆಯಾಗಿದೆ. ಕಣತಿ ಗ್ರಾಮದ ಬಳಿ ಮಳೆಗೆ ಮರ ಧರೆಗುರುಳಿದ ಹಿನ್ನೆಲೆ ಚಿಕ್ಕಮಗಳೂರು ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತ ಪರಿಣಾಮ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ.
ರಾಜ್ಯದ 4-5 ಜಿಲ್ಲೆಗಳ ವ್ಯಾಪ್ತಿಯಲ್ಲಿ ನಾಳೆಯೂ ಗಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಬಳ್ಳಾರಿ, ಉಡುಪಿ, ದಕ್ಷಿಣ ಕನ್ನಡ, ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ ಅಂದಾಜಿಸಲಾಗಿದೆ. ಯಾದಗಿರಿ, ರಾಯಚೂರು, ಕಲಬುರಗಿ ಸೇರಿ ಬಹುತೇಕ ಜಿಲ್ಲೆಗಳಲ್ಲಿ ಹೆಚ್ಚಿನ ಉಷ್ಣತೆ ಕಂಡುಬರಲಿದೆ. ಬೆಂಗಳೂರಿನ ತಾಪಮಾನ ಗರಿಷ್ಠ 33-34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಗಾಳಿಯ ವೇಗ ಗಂಟೆಗೆ 8-15 ಕಿಲೋ ಮೀಟರ್ ಇರಲಿದ್ದು, ಮಳೆಯ ಸಾಧ್ಯತೆ ತೀರಾ ಕಡಿಮೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಯಾದಗಿರಿ, ಮಾರ್ಚ್ 15: ಬಹಿಷ್ಕಾರಕ್ಕೆ ಮನನೊಂದು ಮಾಂಗಲ್ಯ ಸರ ತೆಗೆದಿಟ್ಟು ನದಿಗೆ ಹಾರಿ ಮಹಿಳೆ ಆತ್ಮಹತ್ಯೆ (suicide) ಮಾಡಿಕೊಂಡಿರುವಂತಹ ಘಟನೆ ಜಿಲ್ಲೆಯ ವಡಗೇರ ತಾಲೂಕಿನ ಜೋಳದಡಗಿ ಬ್ರಿಡ್ಜ್ ಕಂ ಬ್ಯಾರೇಜ್ ಮೇಲಿಂದ ಹಾರಿ ನಿನ್ನೆ ರಾತ್ರಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಾದಗಿರಿಯ ಹೊರ ಭಾಗದ ಗಿರಿನಗರದ ನಿವಾಸಿ ಕಮಲಮ್ಮ (42) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಸದ್ಯ ವಡಗೇರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ನಡೆದದ್ದೇನು?
ಕಮಲಮ್ಮ ಸಿಳ್ಳೆ ಕ್ಯಾತ ಸಮುದಾಯವದರು. ಅವರ ಪುತ್ರ ಎರ್ರಿಸ್ವಾಮಿ ವಿರುದ್ಧ ಅನೈತಿಕ ಸಂಬಂಧ ಎಂದು ಆರೋಪಿಸಿ ತಮ್ಮದೇ ಸಮಾಜದ ಮುಖಂಡರಿಂದ ಇಡೀ ಕುಟುಂಬಸ್ಥರಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ಮೀನುಗಾರಿಕೆ ಜೊತೆಗೆ ಮಾರಾಟ ಮಾಡಲು ಮುಖಂಡರು ಅವಕಾಶ ನೀಡಿಲ್ಲ.
ಇದೆ ಕಾರಣಕ್ಕೆ ಕಮಲಮ್ಮ ನೊಂದುಕೊಂಡು, ಮಗಳ ಊರಾದ ಜೋಳದಡಗಿ ಗ್ರಾಮಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮುನ್ನ ಬ್ಯಾರೇಜ್ ಮೇಲೆ ಮಾಂಗಲ್ಯ ಸರ ತೆಗೆದಿಟ್ಟಿದ್ದಾರೆ. ಇಂದು ಮಧ್ಯಾಹ್ನ ಅಗ್ನಿ ಶಾಮಕ ದಳ ಸಿಬ್ಬಂದಿ ಮೃತದೇಹವನ್ನು ಹೊರ ತೆಗೆದಿದ್ದಾರೆ.
ತುಂಗ ಭದ್ರನದಿಗೆ ಹಾರಿ ಪ್ರೇಮಿಗಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ಬಳಿ ಇರುವ ತುಂಗಭದ್ರ ಸೇತುವೆ ಬಳಿ ಇತ್ತೀಚೆಗೆ ನಡೆದಿದೆ. ಸ್ಥಳೀಯರಿಂದ ಮಾಹಿತಿ ಬೆನ್ನಲ್ಲೇ ಅಗ್ನಿ ಶಾಮಕ ದಳ ಸಿಬ್ಬಂದಿ ಪ್ರೇಮಿಗಳನ್ನ ರಕ್ಷಣೆ ಮಾಡಿದ್ದಾರೆ.
ದಾವಣಗೆರೆ ನಗರದ ಬಾಡಾ ಕ್ರಾಸ್ ಬಳಿ ಇರುವ ಆಂಜನೇಯ ಕಾಟಲ್ ಮಿಲ್ ಪ್ರದೇಶ ನಿವಾಸಿಗಳು. ಅಪ್ರಾಪ್ತ ಬಾಲಕಿ ಹಾಗೂ 19 ವರ್ಷದ ಯುವಕ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು. ಪ್ರೇಮಿಗಳು ಸೇತುವೆಯಿಂದ ನದಿಗೆ ಹಾರಿದ್ದಾರೆ. ನದಿಯಲ್ಲಿ ನೀರು ಕಡಿಮೆ ಇದ್ದ ಹಿನ್ನೆಲೆ ನಡುಗಡ್ದೆಯಲ್ಲಿ ಆಸರೆ ಪಡೆದಿದ್ದರು. ಯುವಕ ಅನ್ಯಧರ್ಮೀಯ ಹಿನ್ನೆಲೆ ಮನೆಯಲ್ಲಿ ಮದುವೆಗೆ ವಿರೋಧ ವ್ಯಕ್ತವಾಗಿತ್ತು. ಮನೆ ಬಿಟ್ಟು ಮೈಸೂರು, ಶಿವಮೊಗ್ಗ ಸುತ್ತಾಡಿ ಹೊನ್ನಾಳಿಗೆ ಬಂದು ಆತ್ಮಹತ್ಯೆಗೆ ಯತ್ನಿಸಿದ್ದರು. ಹೊನ್ನಾಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.
ಬಿಸಿಸಿಐನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಮಾರ್ಚ್ 15 ರಂದು ಅಂದರೆ ಇಂದು ದೆಹಲಿಯಲ್ಲಿ ನಡೆಯಲಿದೆ. ಈ ಸಮಾರಂಭದಲ್ಲಿ ಕಳೆದ ಆವೃತ್ತಿಯಲ್ಲಿ ಅಂತರರಾಷ್ಟ್ರೀಯ ಹಾಗೂ ದೇಶಿಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಗೌರವಿಸಲಾಗುತ್ತದೆ. ಇದೇ ಸಮಾರಂಭದಲ್ಲಿ ಭಾರತ ಮಹಿಳಾ ತಂಡದ ಉಪನಾಯಕಿ ಸ್ಮೃತಿ ಮಂಧಾನಗೆ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಕಳೆದ ಒಂದೂವರೆ ವರ್ಷಗಳಲ್ಲಿ ಐದು ವಿಭಿನ್ನ ಐಸಿಸಿ ಟ್ರೋಫಿಗಳನ್ನು ಗೆದ್ದಿರುವ ಭಾರತ ಮಹಿಳಾ ಹಾಗೂ ಪುರುಷ ತಂಡಗಳನ್ನು ಬಿಸಿಸಿಐ ಗೌರವಿಸಲಿದೆ. ಇದರ ಜೊತೆಗೆ, ವೈಯಕ್ತಿಕ ಪ್ರಶಸ್ತಿಗಳನ್ನು ಸಹ ನೀಡಲಾಗುವುದು. ಇದರಡಿಯಲ್ಲಿ ಸ್ಮೃತಿ ಮಂಧಾನಗೆ 2024-25ರ ಆವೃತ್ತಿಯ ಅತ್ಯುತ್ತಮ ಅಂತರರಾಷ್ಟ್ರೀಯ ಮಹಿಳಾ ಕ್ರಿಕೆಟರ್ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಮೂರು ಮಾದರಿಯ ಕ್ರಿಕೆಟ್ನಲ್ಲಿ ಭಾರತೀಯ ಮಹಿಳಾ ತಂಡದ ಉಪನಾಯಕಿ ಮತ್ತು ಆರಂಭಿಕ ಆಟಗಾರ್ತಿಯಾಗಿರುವ ಮಂಧಾನ ಕಳೆದ ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದ್ದು ಅದಕ್ಕಾಗಿ ಅವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಮಂಧಾನಾ 36 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಏಳು ಶತಕಗಳು ಸೇರಿದಂತೆ 1,800 ರನ್ ಗಳಿಸಿದ್ದಾರೆ.
ಈ ಮೂಲಕ ಮಂಧಾನ ಅವರು ಸತತ ಎರಡನೇ ಬಾರಿ ಮತ್ತು ದಾಖಲೆಯ ಐದನೇ ಬಾರಿಗೆ ವರ್ಷದ ಅಂತರರಾಷ್ಟ್ರೀಯ ಕ್ರಿಕೆಟರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಮೂಲಕ ಪುರುಷರ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಬಾರಿ (5) ಈ ಪ್ರಶಸ್ತಿ ಗೆದಿದ್ದ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಮಂಧಾನ ಜೊತೆಗೆ, ಪುರುಷರ ಕ್ರಿಕೆಟ್ನಲ್ಲಿ ಏಕದಿನ ಮತ್ತು ಟೆಸ್ಟ್ ತಂಡಗಳ ಹೊಸ ನಾಯಕ ಶುಭಮನ್ ಗಿಲ್ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದು, ಅವರಿಗೆ ಪಾಲಿ ಉಮ್ರಿಗರ್ ಟ್ರೋಫಿಯನ್ನು ನೀಡಲಾಗುತ್ತದೆ. ಗಿಲ್ ಈ ಪ್ರಶಸ್ತಿಯನ್ನು ಗೆಲ್ಲುತ್ತಿರುವುದು ಇದು ಎರಡನೇ ಬಾರಿ. ಇದಲ್ಲದೆ, ರಾಹುಲ್ ದ್ರಾವಿಡ್, ರೋಜರ್ ಬಿನ್ನಿ ಮತ್ತು ಮಿಥಾಲಿ ರಾಜ್ ಜೀವಮಾನ ಸಾಧನೆ ಪ್ರಶಸ್ತಿಗಳನ್ನು ಪಡೆಯಲಿದ್ದಾರೆ.
ಬೆಂಗಳೂರು, ಮಾರ್ಚ್ 15: ರಾಜ್ಯದ ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರಗಳ ವಿಧಾನ ಸಭೆ ಉಪಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗದಿಂದ ಸುದ್ದಿಗೋಷ್ಠಿ ವೇಳೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಈ ಎರಡೂ ಕ್ಷೇತ್ರಗಳ ಉಪ ಚುನಾವಣೆಯ ದಿನಾಂಕ ಘೋಷಣೆ ಮಾಡಿದ್ದಾರೆ. ಏಪ್ರಿಲ್ 9ರಂದು ಎರಡೂ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ. ಹೆಚ್.ವೈ.ಮೇಟಿ ನಿಧನದಿಂದ ಬಾಗಲಕೋಟೆ ಕ್ಷೇತ್ರ ತೆರವಾಗಿದ್ದರೆ, ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ದಾವಣಗೆರೆ ದಕ್ಷಿಣ ಕ್ಷೇತ್ರ ಖಾಲಿಯಿತ್ತು. ಇನ್ನು ಮಾರ್ಚ್ 16ರಂದು ಉಪ ಚುನಾವಣೆ ಅಧಿಸೂಚನೆ ಪ್ರಕಟವಾಗಲಿದ್ದು, ಮಾರ್ಚ್ 24ರಂದು ನಾಮಪತ್ರ ಸಲ್ಲಿಸಲು ಮತ್ತು ಮಾರ್ಚ್ 26 ನಾಮಪತ್ರ ಹಿಂಪಡೆಯಲು ಕೊನೆ ದಿನ ಆಗಿರಲಿದೆ.
ಜೋರಾದ ಟಿಕೆಟ್ ಫೈಟ್
ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಿಗೆ ಸವಾಲಿನ ಕೆಲಸವಾಗಿ ಮಾರ್ಪಟ್ಟಿದೆ. ಶಾಮನೂರ ಶಿವಶಂಕರಪ್ಪ ನಿಧನದಿಂದ ತೆರವಾದ ಕ್ಷೇತ್ರದಲ್ಲಿ ಗೆಲ್ಲುವ ಉತ್ಸಾಹದಲ್ಲಿದ್ದ ಬಿಜೆಪಿ ಸ್ಥಿತಿ ಮನೆಯೊಂದು ಮೂರು ಬಾಗಿಲಾಗಿದ್ದರೆ, ಇತ್ತ ಕಾಂಗ್ರೆಸ್ನಲ್ಲಿ ಟಿಕೆಟ್ಗಾಗಿ ಮುಸ್ಲಿಂ ಸಮುದಾಯ ಪಟ್ಟು ಹಿಡಿದಿದೆ. ಮತ್ತೊಂದೆಡೆ ತಮ್ಮ ಕುಟುಂಬಕ್ಕೇ ಮರಳಿ ಟಿಕೆಟ್ ಸಿಗಬೇಕೆಂವ ಆಗ್ರಹವನ್ನು ಶಾಮನೂರು ಕುಟುಂಬ ವ್ಯಕ್ತಪಡಿಸಿದ್ದರೆ, ಈ ನಡುವೆ ಅಖಾಡಕ್ಕೆ ಹೊಸ ಮುಖದ ಪ್ರವೇಶವೂ ಆಗಿದೆ. ಎಐಸಿಸಿ ಯುವ ಘಟಕದ ಕಾರ್ಯದರ್ಶಿ, ಜಿಲ್ಲೆಯ ಮುಸ್ಲಿಂ ಸಮಾಜದ ಪ್ರಭಾವಿ ಮುಖಂಡ ಸೈಯದ್ ಸೈಪುಲ್ಲಾ ಪುತ್ರ ಮಹಮ್ಮದ್ ಖಾಲೀದ್ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಬೃಹತ್ ಇಫ್ತಾರ್ ಕೂಟ ಆಯೋಜನೆ ಮಾಡಿ ಟಿಕೆಟ್ಗೆ ಬೇಡಿಕೆ ಇಟ್ಟಿದ್ದಾರೆ. ಈ ಕಾರ್ಯಕ್ರಮಕ್ಕೆ ಮತ್ತೋರ್ವ ಆಕಾಂಕ್ಷಿ ಹಾಗೂ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥ ಶಾಮನೂರು ಕೂಡ ಹಾಜರಾಗಿರೋದು ಭಾರಿ ಕುತೂಹಲ ಮೂಡಿಸಿದೆ.
ಇನ್ನು ಮೊನ್ನೆ ಮೊನ್ನೆಯವರೆಗೂ ಜಿಲ್ಲೆಯಲ್ಲಿ ಕಿತ್ತಾಡುತ್ತಿದ್ದ ಬಿಜೆಪಿ ನಾಯಕರೀಗ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಪಕ್ಷ ಯಾರಿಗೇ ಮಣೆ ಹಾಕಿದರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಬಿಜಿಪಿ ಟಿಕೆಟ್ ಆಕಾಂಕ್ಷಿಗಳಾದ ಬಿ.ಜಿ. ಅಜಯಕುಮಾರ, ಯಶವಂತರಾವ್ ಜಾಧವ್, ಶ್ರೀನಿವಾಸ ದಾಸಕರಿಯಪ್ಪ, ರಾಜನಹಳ್ಳಿ ಶಿವಕುಮಾರ ಹಾಗೂ ದೇವರಮನೆ ಶಿವಕುಮಾರ ಒಂದೇ ವೇದಿಕೆಗೆ ಬಂದು ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದಾರೆ. ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮತ್ತು ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಬಣಗಳ ಟಿಕೆಟ್ ಆಕಾಂಕ್ಷಿಗಳು ಬಹುದಿನಗಳ ಬಳಿಕ ಒಂದೇ ವೇದಿಕೆಗೆ ಬಂದಿದ್ದು, ಪಕ್ಷ ಹೊಸ ಮುಖದ ಹುಡುಕಾಟ ನಡೆಸುತ್ತಿರೋದೇ ಇದರ ಹಿಂದಿನ ಕಾರಣ ಎನ್ನಲಾಗ್ತಿದೆ. ಅತ್ತ ಬಾಗಲಕೋಟೆಯಲ್ಲಿಯೂ ಟಿಕೆಟ್ ಆಕಾಂಕ್ಷಿಗಳ ನಡುವಿನ ಸ್ಪರ್ಧೆ ಪಕ್ಷಗಳಲ್ಲಿ ಜೋರಾಗಿಯೇ ಇದ್ದು, ಅಂತಿಮವಾಗಿ ಅಖಾಡಕ್ಕೆ ಇಳಿಯುವವರು ಯಾರೆಂಬ ಪ್ರಶ್ನೆಗೆ ಶೀಘ್ರವೇ ಉತ್ತರ ಸಿಗುವ ನಿರೀಕ್ಷೆ ಇದೆ.
ಕೋಲ್ಕತ್ತಾ: ಶಾಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾಮಾನ್ಯವಾಗಿ ವಿದ್ಯಾರ್ಥಿಗಳ ಪ್ರತಿಭೆ ಮತ್ತು ಸಂಪ್ರದಾಯವನ್ನು ಬಿಂಬಿಸುವ ವೇದಿಕೆಗಳಾಗಿರುತ್ತವೆ. ಆದರೆ, ಪಶ್ಚಿಮ ಬಂಗಾಳದ ಶಾಲೆಯೊಂದರಲ್ಲಿ ನಡೆದ ವಿಲಕ್ಷಣ ಪ್ರದರ್ಶನವೊಂದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಮತ್ತು ಟೀಕೆಗೆ ಗುರಿಯಾಗಿದೆ. ಸೋಶಿಯಲ್ ಮಿಡಿಯಾಗಳಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದೆ.
ಏನಿದು ಘಟನೆ?
ಕೋಲ್ಕತ್ತಾದ ಜೀಬನ್ ಜ್ಯೋತಿ ಮಾದರಿ ಶಾಲೆಯಲ್ಲಿ (Jeeban Jyoti Model School) ನಡೆದ ಕಾರ್ಯಕ್ರಮವೊಂದರ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಶಾಲಾ ವಿದ್ಯಾರ್ಥಿನಿಯರು ಟವೆಲ್ ಸುತ್ತಿ ವೇದಿಕೆಯ ಮೇಲೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ವಿದ್ಯಾರ್ಥಿನಿಯರು ಅಸಭ್ಯವಾಗಿ ನೃತ್ಯ ಪ್ರದರ್ಶನ ನೀಡುತ್ತಿರುವುದು ನೋಡುಗರ ಹುಬ್ಬೇರಿಸುವಂತೆ ಮಾಡಿದೆ.
@HateDetectors ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು,ಸದ್ಯ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದೆ. ವಿಡಿಯೋ ಇಲ್ಲಿದೆ ನೋಡಿ:
A video from a school cultural programme in West Bengal has gone viral on social media and sparked a heated debate.
The clip shows a group of girls performing a dance with towels wrapped around them during an event allegedly held at Jeeban Jyoti Model School in Kolkata.
ವೀಡಿಯೊದಲ್ಲಿ ಶಾಲೆಯ ಹೆಸರಿರುವ ಬ್ಯಾನರ್ ಸ್ಪಷ್ಟವಾಗಿ ಕಾಣಿಸುತ್ತಿದ್ದು, ನೂರಾರು ವಿದ್ಯಾರ್ಥಿಗಳು ಪ್ರೇಕ್ಷಕರ ಸಾಲಿನಲ್ಲಿ ಕುಳಿತು ಈ ಪ್ರದರ್ಶನವನ್ನು ವೀಕ್ಷಿಸುತ್ತಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿದ್ದಂತೆ ನೆಟ್ಟಿಗರು ಶಾಲಾ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಶಾಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ಶಿಕ್ಷಣ, ಶಿಸ್ತು ಮತ್ತು ನೈತಿಕ ಮೌಲ್ಯಗಳನ್ನು ಕಲಿಸಬೇಕು. ಇಂತಹ ಪ್ರದರ್ಶನಗಳಿಗೆ ಅನುಮತಿ ನೀಡಿದ್ದು ಹೇಗೆ?” ಎಂದು ಅನೇಕರು ಪ್ರಶ್ನಿಸಿದ್ದಾರೆ.
ಈ ವಿವಾದಾತ್ಮಕ ವಿಡಿಯೋ ಬಗ್ಗೆ ಶಾಲಾ ಆಡಳಿತ ಮಂಡಳಿಯಿಂದ ಇದುವರೆಗೆ ಯಾವುದೇ ಅಧಿಕೃತ ಸ್ಪಷ್ಟನೆ ಬಂದಿಲ್ಲ. ಈ ಕಾರ್ಯಕ್ರಮ ನಡೆದ ನಿಖರ ದಿನಾಂಕ ಯಾವುದು? ವೇದಿಕೆಯ ಮೇಲೆ ಪ್ರದರ್ಶನ ನೀಡಿದವರು ಶಾಲೆಯ ವಿದ್ಯಾರ್ಥಿಗಳೇ ಅಥವಾ ಹೊರಗಿನಿಂದ ಬಂದ ಕಲಾವಿದರೇ? ಎಂಬ ಬಗ್ಗೆ ಇನ್ನೂ ಗೊಂದಲಗಳಿವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ