ಬೆಂಗಳೂರು, ಮೇ 12: ಮೇ3 ರಂದು ನಡೆದಿದ್ದ ಪ್ರಶ್ನೆಪತ್ರಿಕೆ ಸೋರಿಕೆ ಆರೋಪದಲ್ಲಿ ನೀಟ್ ಪರೀಕ್ಷೆಯನ್ನೇ NTA ರದ್ದು ಮಾಡಿದೆ. ಈ ಸುದ್ದಿ ಕಾಡ್ಗಿಚ್ಚಿನಂತೆ ಹರಡಿದ್ದು, ರಾಷ್ಟ್ರರಾಜಧಾನಿ ದೆಹಲಿಯಲ್ಲಿ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಇತ್ತ ರಾಜ್ಯದಿಂದ ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟಿವಿ9 ಜೊತೆಗೆ ಮಾನಾಡಿರುವ ವಿದ್ಯಾರ್ಥಿನಿ ಮಾನ್ಯತಾ, ಎರಡು ವರ್ಷದಿಂದ ಕಷ್ಟ ಪಟ್ಟು ಪರೀಕ್ಷೆ ಬರೆದಿದ್ದೇವೆ. ಈ ಬಾರಿ ಪರೀಕ್ಷೆ ಚೆನ್ನಾಗಿ ಆಗಿದೆ. ಒಳ್ಳೆಯ ರ‍್ಯಾಂಕ್ ಬರುವ ಸಾಧ್ಯತೆ ಇತ್ತು. ಸರ್ಕಾರಿ ಕಾಲೇಜ್ ಅಥವಾ ಖಾಸಗಿಯಲ್ಲಿ ಮೆಡಿಕಲ್ ಸೀಟ್ ಸಿಗುವ ಸಾಧ್ಯತೆ ಇತ್ತು. ಆದರೆ ಇದೀಗ ಪರೀಕ್ಷೆ ರದ್ದಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳವಂತೆ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ಬೆಂಗಳೂರು, ಮೇ 12: ಬೆಂಗಳೂರು (Bengaluru) ಅಂದ್ರೆ ದುಬಾರಿ ಅನ್ನೋದು ಅನೇಕರ ಅಭಿಪ್ರಾಯ. ಇನ್ನೊಂದೆಡೆ ಗಂಡ ಹೆಂಡತಿ ಇಬ್ಬರೂ ದುಡಿದ್ರೂ ಈ ನಗರದಲ್ಲಿ ತಿಂಗಳ ಖರ್ಚು ವೆಚ್ಚಗಳನ್ನು ತೂಗಿಸಿಕೊಂಡು ಹೋಗೋದು ಕಷ್ಟ. ಹೀಗಿರುವಾಗ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ದಂಪತಿ ತಿಂಗಳಿಗೆ ಸುಮಾರು 1.3 ಲಕ್ಷ ರೂ. ಖರ್ಚು ಮಾಡುತ್ತಿದ್ದು, ಆರ್ಥಿಕ ಹೊರೆಯಾಗುತ್ತಿದೆ ಎಂದು ಹೇಳಿದ್ದಾರೆ. ದಂಪತಿ ಮಾಡಿದ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.
ಬೆಂಗಳೂರಿನಲ್ಲಿ ಉತ್ಪನ್ನ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿರುವ ರಾಧಿಕಾ ಹಾಗೂ ಏಕಾನ್ಶ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ದಂಪತಿ ಪ್ರತಿ ತಿಂಗಳು ತಮ್ಮ ಅಪಾರ್ಟ್‌ಮೆಂಟ್‌ಗೆ 56 ಸಾವಿರ ರೂ ಬಾಡಿಗೆ ಕಟ್ಟಿರುತ್ತಿರುವುದಾಗಿ ಹೇಳಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ
ಮನೆಗೆಲಸದವರಿಗೆ ಹಾಗೂ ಅಡುಗೆಯವರಿಗೆ ಸುಮಾರು 10,000 ರೂ ಖರ್ಚು ಮಾಡುತ್ತೇವೆ. ನಾವಿಬ್ಬರೂ ಪೂರ್ಣ ಸಮಯ ಕೆಲಸ ಮಾಡುವುದರಿಂದ ನಾವು ಮಾಡುವ ಅತ್ಯುತ್ತಮ ವೆಚ್ಚ. ದಿನಸಿ ಸಾಮಗ್ರಿಗಳಿಗೆ ಪ್ರತಿ ತಿಂಗಳು 15,000 ರೂ, ವಿದ್ಯುತ್ ಹಾಗೂ ಇಂಟರ್ನೆಟ್ ಗೆ 15,000 ರೂ ಹಣ ವ್ಯಯಿಸಬೇಕಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.
ನಾನು ಕಚೇರಿಗೆ ಹೋಗುವುದರಿಂದ ಟ್ರಾವೆಲ್, ಪೆಟ್ರೋಲ್ ಹಾಗೂ ಇನ್ನಿತ್ತರ ಖರ್ಚುಗಳಿಗೆ ತಿಂಗಳಿಗೆ 6,000 ರೂ ಎತ್ತಿಡಬೇಕಾಗುತ್ತದೆ. ಹೊರಗೆ ಊಟದ ಖರ್ಚು ಮತ್ತು ಫುಡ್ ಆರ್ಡರ್ ಗೆ 2000 ರೂ ಬೇಕು. ಇನ್ನು ಉಳಿದಂತೆ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್‌ನಂತಹ ಪ್ಲಾಟ್‌ಫಾರ್ಮ್‌ಗಳನ್ನು ಒಳಗೊಂಡಂತೆ ಚಂದಾದಾರಿಕೆಗಳು ತಿಂಗಳಿಗೆ 3,000 ರೂ ರಷ್ಟಿವೆ. ಅದರ ಜೊತೆಗೆ, ಶಾಪಿಂಗ್, ವೈಯಕ್ತಿಕ ವೆಚ್ಚಗಳು ಮತ್ತು ಯೋಜಿತವಲ್ಲದ ಖರೀದಿಗಳಿಗಾಗಿ 15,000 ರೂ ಖರ್ಚು ಆಗುತ್ತದೆ. ತಮ್ಮ ಮಾಸಿಕ ವೆಚ್ಚಗಳು ಸುಮಾರು 1.3 ಲಕ್ಷ ರೂ ತಲುಪುತ್ತವೆ ಎಂದಿದ್ದಾರೆ. ಗಂಭೀರವಾಗಿ ಹೇಳಬೇಕೆಂದರೆ, ಈ ಬೆಂಗಳೂರು ಉತ್ತಮ ಹಣ ಗಳಿಸಬಹುದಾದ ಸ್ಥಳವಾಗಿದ್ದು, ತಿಂಗಳ ಅಂತ್ಯದ ವೇಳೆಗೆ ಇನ್ನೂ ದಿವಾಳಿಯಾಗಿರುವಂತೆ ಭಾಸವಾಗುತ್ತದೆ ಎಂದು ವಿವರಿಸಿರುವುದನ್ನು ಕಾಣಬಹುದು.
ಈ ವಿಡಿಯೋ ಒಂದು ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಕಂಡಿವೆ. ಒಬ್ಬ ಬಳಕೆದಾರ, ನೀವು ಹೈ ಎಂಡ್ ಅಪಾರ್ಟ್‌ಮೆಂಟ್‌ನಲ್ಲಿ ಉಳಿಯಲು ಆಯ್ಕೆ ಮಾಡಿಕೊಂಡರೆ ಮಾತ್ರ ಬಾಡಿಗೆ ಹೆಚ್ಚಾಗಿರುತ್ತದೆ. ಬೆಂಗಳೂರಿನಲ್ಲಿ ಬಾಡಿಗೆ ನೀವು ವಾಸಿಸುವ ಸ್ಥಳವನ್ನು ಅವಲಂಬಿಸಿರುತ್ತದೆ ಎಂದಿದ್ದಾರೆ. ಇನ್ನೊಬ್ಬರು, ಇದೊಂದು ನಿಷ್ಪ್ರಯೋಜಕ ವಿಡಿಯೋ. ನಾವಿಬ್ಬರೂ ಕೆಲಸ ಮಾಡುತ್ತಿದ್ದೇವೆ ಮತ್ತು ಇಬ್ಬರು ಮಕ್ಕಳನ್ನು ಹೊಂದಿದ್ದೇವೆ ಮತ್ತು ಇದರಲ್ಲಿ ಅರ್ಧವನ್ನು ಖರ್ಚು ಮಾಡುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಬೆಂಗಳೂರಿನಲ್ಲಿ ಬದುಕೋದು ಹೇಳಿದ್ದಷ್ಟು ಸುಲಭವಲ್ಲ, ಆದರೆ ಖರ್ಚಿಗೆ ಲಗಾಮು ಹಾಕಿದ್ರೆ ಒಳ್ಳೆಯದು ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮೇ.12: ಕರ್ನಾಟಕ ರಾಜಕೀಯದಲ್ಲಿ ಪ್ರಸ್ತುತ ನಾಯಕತ್ವ ಬದಲಾವಣೆ, ಸಂಪುಟ ವಿಸ್ತರಣೆ ಮತ್ತು ಪಕ್ಷದೊಳಗಿನ ಗೊಂದಲಗಳ ಕುರಿತು ಚರ್ಚೆ ಮುಂದುವರಿದಿದೆ. ಕೇರಳದ ಸಮಸ್ಯೆಗಳ ನಂತರ ಹೈಕಮಾಂಡ್ ರಾಜ್ಯದ ವಿಚಾರಗಳ ಬಗ್ಗೆ ಗಮನಹರಿಸುವ ವಿಶ್ವಾಸವಿದೆ. ಮೇ ತಿಂಗಳೊಳಗೆ ಈ ಎಲ್ಲಾ ಸಮಸ್ಯೆಗಳು ಇತ್ಯರ್ಥವಾಗುವ ನಿರೀಕ್ಷೆಯಿದೆ. ಕೆ.ಎನ್. ರಾಜಣ್ಣ ಅವರ ಹೇಳಿಕೆಗಳನ್ನು ಪ್ರಸ್ತಾಪಿಸಿದಾಗ, ನಾಯಕತ್ವ ಮತ್ತು ಸಂಪುಟ ವಿಸ್ತರಣೆಯ ಕುರಿತು ಅಂತಿಮ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ. ಬಿಬಿಎಂಪಿ ಚುನಾವಣೆಗಳನ್ನು ನಡೆಸಲು ಸುಪ್ರೀಂ ಕೋರ್ಟ್ ಸೂಚಿಸಿದ್ದರೂ, ರಾಜ್ಯ ಸರ್ಕಾರವು ಗ್ರೇಟರ್ ಬೆಂಗಳೂರು ತಯಾರಿಯ ಕಾರಣ ನೀಡಿ ಚುನಾವಣೆ ಮುಂದೂಡಲು ಪ್ರಯತ್ನಿಸುತ್ತಿದೆ. ಈ ಕುರಿತು ಅಫಿಡವಿಟ್ ಸಲ್ಲಿಸಿದ್ದು, ಸುಪ್ರೀಂ ಕೋರ್ಟ್ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ. ಐದು ಪಾಲಿಕೆಗಳ ರಚನೆಯ ನಿರ್ಧಾರ ಅಂತಿಮ ಎಂದು ಹೇಳಲಾಗಿದೆ. ಪ್ರಧಾನಿ ಮೋದಿ ಅವರ ಚಿನ್ನ, ತೈಲ ಮತ್ತು ಪೆಟ್ರೋಲ್ ಬಳಕೆಯನ್ನು ಮಿತಿಗೊಳಿಸುವಂತೆ ನೀಡಿದ ಹೇಳಿಕೆಗೆ ರಾಜಕೀಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಜೆಪಿ ಶ್ರೀಮಂತರ ಪಕ್ಷವಾಗಿದ್ದು, ಕಾಂಗ್ರೆಸ್ ಬಡವರ ಪರ ಪಕ್ಷ ಎಂದು ಹೇಳಿಕೆ ನೀಡಲಾಗಿದೆ. ಶ್ರೀಮಂತರು ಚಿನ್ನ ಮತ್ತು ವಾಹನಗಳನ್ನು ಹೆಚ್ಚು ಬಳಸುವುದರಿಂದ ಪ್ರಧಾನಿ ತಮ್ಮ ಪಕ್ಷದವರನ್ನೇ ತ್ಯಾಗ ಮಾಡುವಂತೆ ಕೇಳಬೇಕು ಎಂದು ಮನವಿ ಮಾಡಲಾಗಿದೆ ಎಂದು ಶಾಸಕ ಬಾಲಕೃಷ್ಣ ಹೇಳಿದ್ದಾರೆ.
ಬಾಲಿವುಡ್ ನಟ ಆಮಿರ್ ಖಾನ್ (Aamir Khan) ಪುತ್ರ ಜುನೈದ್ ಖಾನ್ ನಟನೆಯ ಎರಡನೇ ಸಿನಿಮಾ ‘ಏಕ್ ದಿನ್’ (Ek Din) ಇತ್ತೀಚೆಗೆ ಬಿಡುಗಡೆ ಆಯಿತು. ಈ ಸಿನಿಮಾ ಮೇಲೆ ಅವರಿಗೆ ಬಹಳ ನಿರೀಕ್ಷೆ ಇತ್ತು. ಆದರೆ ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾ ಮಕಾಡೆ ಮಲಗಿದೆ. ‘ಏಕ್ ದಿನ್’ ಚಿತ್ರದ ಸೋಲು ಸ್ವತಃ ಜುನೈದ್ ಖಾನ್ ಅವರಿಗಿಂತಲೂ ಅಮೀರ್ ಖಾನ್ ಅವರನ್ನೇ ಹೆಚ್ಚು ಕಾಡುತ್ತಿದೆ ಎಂಬ ವಿಷಯ ಈಗ ಹೊರಬಿದ್ದಿದೆ. ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಜುನೈದ್ ಖಾನ್ (Junaid Khan) ಅವರು ಚಿತ್ರದ ವೈಫಲ್ಯದ ಬಗ್ಗೆ ಮಾತನಾಡಿದ್ದಾರೆ.
‘ಏಕ್ ದಿನ’ ಚಿತ್ರವು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಮಿಶ್ರ ಹಾಗೂ ನಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. ಮೇ 1ರಂದು ಬಿಡುಗಡೆಯಾದ ಈ ಸಿನಿಮಾ ಮೊದಲ ದಿನ ಕೇವಲ 1 ಕೋಟಿ ರೂಪಾಯಿ ಗಳಿಸಿತು. ನಂತರದ ದಿನಗಳಲ್ಲಿ ಗಳಿಕೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿತು. ವರದಿಗಳ ಪ್ರಕಾರ, 11 ದಿನಗಳಲ್ಲಿ ಈ ಚಿತ್ರವು ವಿಶ್ವದಾದ್ಯಂತ ಕೇವಲ 5.44 ಕೋಟಿ ರೂಪಾಯಿ ಮತ್ತು ಭಾರತದಲ್ಲಿ 4.25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ಸಿನಿಮಾವನ್ನು ನಿರ್ಮಾಣ ಮಾಡಿದ್ದ ಆಮಿರ್ ಖಾನ್ ಅವರಿಗೆ ಚಿತ್ರದ ಮೇಲೆ ಅಪಾರ ನಂಬಿಕೆ ಇತ್ತು. ಆದರೆ ಸಿನಿಮಾ ಸೋತಾಗ ಅವರು ತುಂಬಾ ಭಾವುಕರಾಗಿದ್ದಾರೆ ಎಂದು ಜುನೈದ್ ಹೇಳಿದ್ದಾರೆ. ಇದು ಸಾಯಿ ಪಲ್ಲವಿ ಅವರು ಬಾಲಿವುಡ್ನಲ್ಲಿ ನಟಿಸಿದ ಮೊದಲ ಸಿನಿಮಾ ಆಗಿದ್ದರೂ ಕೂಡ ಅಭಿಮಾನಿಗಳನ್ನು ಸೆಳೆಯುವಲ್ಲಿ ವಿಫಲ ಆಯಿತು. ಬಾಕ್ಸ್ ಆಫೀಸ್‌ನಲ್ಲಿ ಹೀನಾಯ ಕಲೆಕ್ಷನ್ ಆಯಿತು.
‘ನನ್ನ ತಂದೆ ಇನ್ನೂ ಆ ಸೋಲಿನ ನೋವಿನಲ್ಲಿದ್ದಾರೆ. ಇಷ್ಟು ವರ್ಷಗಳ ಅನುಭವದ ನಂತರವೂ ಚಿತ್ರದ ವೈಫಲ್ಯ ಅವರನ್ನು ತುಂಬಾ ಕಾಡುತ್ತದೆ. ಅವರು ಸಿನಿಮಾವನ್ನು ತುಂಬಾ ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಾರೆ. ವಿಶೇಷವಾಗಿ ಆ ಸಿನಿಮಾ ಅವರಿಗೆ ಇಷ್ಟವಾಗಿದ್ದರೆ ಅದರ ಸೋಲು ಅವರಿಗೆ ಅತಿಯಾಗಿ ನೋವು ನೀಡುತ್ತದೆ’ ಎಂದು ಜುನೈದ್ ವಿವರಿಸಿದ್ದಾರೆ.
ಜುನೈದ್ ಖಾನ್ ಅವರ ಮೊದಲ ಚಿತ್ರ ‘ಮಹಾರಾಜ್’ ಒಟಿಟಿಯಲ್ಲಿ ಬಿಡುಗಡೆಯಾಗಿ ಮೆಚ್ಚುಗೆ ಪಡೆದಿತ್ತು. ಆದರೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಅವರ ‘ಲವ್ಯಪ’ ಮತ್ತು ‘ಏಕ್ ದಿನ್’ ಸಿನಿಮಾಗಳು ಸತತವಾಗಿ ಸೋಲು ಕಂಡಿವೆ. ಮುಂದಿನ ದಿನಗಳಲ್ಲಿ ಜುನೈದ್ ‘ರಾಗಿಣಿ MMS 3’ ಸಿನಿಮಾದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಗಳಿವೆ.
ಬಳ್ಳಾರಿ, ಮೇ 12: ಸಂಡೂರು ತಾಲೂಕಿನ ತೋರಣಗಲ್ ಬಳಿ ಸ್ಥಾಪನೆಯಾಗಿರುವ ದೇಶದ ಎರಡನೇ ಅತೀ ದೊಡ್ಡ ಖಾಸಗಿ ಉಕ್ಕು ಉತ್ಪಾದಕ ಕಂಪನಿ JSW ಜಿಂದಾಲ್ (JSW Jindal), 2018ರಿಂದಲೂ ಕೋಟ್ಯಂತರ ರೂಪಾಯಿ ಆಸ್ತಿ ಮತ್ತು ಅಭಿವೃದ್ಧಿ ತೆರಿಗೆಯನ್ನು (Tax) ಬಾಕಿ ಉಳಿಸಿಕೊಂಡಿದೆ. ತೋರಣಗಲ್ಲು, ವಡ್ಡು, ಬನ್ನಿಹಟ್ಟಿ ಗ್ರಾಮ ಪಂಚಾಯಿತಿಗಳಿಗೆ ಸರಿಸುಮಾರು 20 ಕೋಟಿ ರೂ.ಗೂ ಅಧಿಕ ತೆರಿಗೆ ಪಾವತಿಸದೆ ಜಿಂದಾಲ್ ಕಂಪನಿ ಗಪ್‌ಚುಪ್ ಕುಳಿತಿದೆ. ಹಲವು ಬಾರಿ ನೋಟಿಸ್ ನೀಡಿದರೂ ಕಂಪನಿ ಡೋಂಟ್ ಕೇರ್ ಧೋರಣೆ ತಾಳಿರುವುದು ಸ್ಥಳೀಯ ಆಡಳಿತ ಅಸಮಾಧಾನಕ್ಕೆ ಕಾರಣವಾಗಿದೆ.
ಮುಖ್ಯಾಂಶಗಳು
2018ರಿಂದ ಈವರಗೆ ತೆರಿಗೆ ಬಾಕಿ ಉಳಿಸಿಕೊಂಡ ಜಿಂದಾಲ್ ಕಂಪನಿ
ತೆರಿಗೆ ವಸೂಲಿ ಮಾಡಲು ಸ್ಥಳೀಯ ಆಡಳಿತಗಳು ಸರ್ಕಸ್
ಜಿಂದಾಲ್ ವಿರುದ್ಧ ಬಳ್ಳಾರಿ ನಗರ ಶಾಸಕ ಭರತ್ ರೆಡ್ಡಿ ಆಕ್ರೋಶ
ಗ್ರಾಮ ಪಂಚಾಯತ್ವಾರು ಬಾಕಿ ವಿವರ
ತೋರಣಗಲ್ಲು ಗ್ರಾಪಂ: 2018-19ರಿಂದ ಇಲ್ಲಿಯವರೆಗೆ 20,23,94,216 ರೂ
1994ರಲ್ಲಿ ವಿಜಯನಗರ ಸ್ಟೀಲ್ ಲಿಮಿಟೆಡ್ ಹೆಸರಲ್ಲಿ ಆರಂಭವಾದ ಜಿಂದಾಲ್, ಸಾವಿರಾರು ಎಕರೆಯಲ್ಲಿ ಕಬ್ಬಿಣ, ಸಿಮೆಂಟ್, ಪೇಂಟ್ ಸೇರಿ ಹಲವು ಉದ್ಯಮಗಳನ್ನು ನಡೆಸುತ್ತಿದೆ. ಸಾವಿರಾರು ಜನರಿಗೆ ಉದ್ಯೋಗ ನೀಡಿರುವ ಹೆಗ್ಗಳಿಕೆ ಇದ್ದರೂ, ತೆರಿಗೆ ವಸೂಲಿ ಮಾಡುವುದು ಗ್ರಾಮ ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗೆ ಸವಾಲಾಗಿದೆ.
ಜಿಂದಾಲ್ ಕಾರ್ಯವೈಖರಿ ಬಗ್ಗೆ ಸಿಎಂ ಮತ್ತು ಡಿಸಿಎಂ ಗಮನಕ್ಕೆ ತರುತ್ತೇನೆ ಎಂದ ಶಾಸಕ ಭರತ್ ರೆಡ್ಡಿ
ಇನ್ನು ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಬಳ್ಳಾರಿ ನಗರ ಶಾಸಕ ಭರತ್ ರೆಡ್ಡಿ, ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ, ಇದೀಗ ತೆರಿಗೆಯನ್ನೂ ಪಾವತಿಸುತ್ತಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು. JSW ಕಾರ್ಯವೈಖರಿಯನ್ನು ಸಿಎಂ ಮತ್ತು ಡಿಸಿಎಂ ಗಮನಕ್ಕೆ ತರುತ್ತೇನೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರು, ಮೇ 12: ಶ್ರೀಲಂಕಾದಿಂದ ಭಾರತಕ್ಕೆ ಐತಿಹಾಸಿಕ ರಾಮಸೇತು ಮಾರ್ಗದ ಮೂಲಕ ಈಜಿ ಬೆಂಗಳೂರಿನ (Bengaluru) ದಂಪತಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಆ ಮೂಲಕ ಡ್ಯಾನಿಶ್ ಅಬ್ದಿ ಮತ್ತು ವೃಶಾಲಿ ಪ್ರಸಾದ್ ಈ ಮಾರ್ಗದ ಮೂಲಕ ಓಪನ್ ವಾಟರ್ ಈಜು ಪೂರ್ಣಗೊಳಿಸಿದ ಮೊದಲ ಜೋಡಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಮೇ 7ರಂದು ಶ್ರೀಲಂಕಾದ ತಲೈಮನ್ನಾರ್‌ನಿಂದ ಬೆಳಗ್ಗೆ ಸುಮಾರು 4.30ಕ್ಕೆ ಈಜು ಆರಂಭಿಸಿದ್ದ ದಂಪತಿ, ತಮಿಳುನಾಡಿನ ಧನುಷ್ಕೋಡಿಗೆ ಮಧ್ಯಾಹ್ನ ಸುಮಾರು 3.15ಕ್ಕೆ ತಲುಪಿದ್ದಾರೆ. ಪಾಲ್ಕ್ ಜಲಸಂಧಿಯಲ್ಲಿ ಸುಮಾರು 32 ಕಿಲೋಮೀಟರ್ ದೂರವನ್ನು ಈ ಸಮಯದಲ್ಲಿ ಅವರು ಈಜಿದ್ದಾರೆ. ಈ ಸವಾಲಿನ ಈಜು ಪೂರ್ಣಗೊಳಿಸಲು ಅವರಿಗೆ 10 ಗಂಟೆ 45 ನಿಮಿಷಗಳು ತಗುಲಿವೆ.
ಸಾಹಸ ಯಶಸ್ವಿಯಾದ ಬಳಿಕ ಇನ್‌ಸ್ಟಾಗ್ರಾಂನಲ್ಲಿ ಈ ಬಗ್ಗೆ ದಂಪತಿ ಸಂತಸ ಹಂಚಿಕೊಂಡಿದ್ದು, ನಾವು ಸಾಧಿಸಿದ್ದೇವೆ! ಶ್ರೀಲಂಕಾದಿಂದ ಭಾರತಕ್ಕೆ. 10 ಗಂಟೆ 45 ನಿಮಿಷದ ನೀರಿನ ಹಾದು ಅತ್ಯಂತ ಕಠಿಣವಾಗಿತ್ತು. ಈಗ 12 ಗಂಟೆಗಳ ಅಲಾರ್ಮ್ ಇಲ್ಲದ ನಿದ್ರೆ ಬೇಕಾಗಿದೆ ಎಂದು ಅವರು ಪೋಸ್ಟ್ ಮಾಡಿದ್ದಾರೆ. ನಂತರ ಮತ್ತೊಂದು ಪೋಸ್ಟ್‌ನಲ್ಲಿ, ಕೇವಲ ನಾಲ್ಕು ವರ್ಷಗಳ ಹಿಂದೆ ಈಜು ಕಲಿಯಲು ಆರಂಭಿಸಿದ್ದೇವೆ. ಇಷ್ಟು ದೂರ ಬಂದಿದ್ದೇವೆ ಎಂಬುದನ್ನು ಇನ್ನೂ ನಂಬಲಾಗುತ್ತಿಲ್ಲ. ಈ ಸಾಹಸದಲ್ಲಿ ಒಬ್ಬರ ಜೊತೆಗೊಬ್ಬರು ಇದ್ದದ್ದು ನಮಗೆ ಮಾನಸಿಕ ಹಾಗೂ ಭಾವನಾತ್ಮಕ ಶಕ್ತಿಯಾಯಿತು. ನಮ್ಮ ಕೋಚ್‌ಗಳಾದ ಸತೀಶ್ ಮತ್ತು ಯಾಕೂಬ್ ಅವರು ನೀಡಿದ ತರಬೇತಿಯೇ ಈ ದೊಡ್ಡ ಸವಾಲನ್ನು ಎದುರಿಸಲು ಸಹಾಯ ಮಾಡಿತು ಎಂದು ತಿಳಿಸಿದ್ದಾರೆ. ಈಜಿನ ವೇಳೆ ಭಾರತೀಯ ಕರಾವಳಿ ರಕ್ಷಣಾ ಪಡೆ ಸಿಬ್ಬಂದಿ, ವೈದ್ಯಕೀಯ ತಂಡ ಹಾಗೂ ಸಹಾಯಕ ದೋಣಿಗಳು ಸಂಪೂರ್ಣ ಸುರಕ್ಷತಾ ವ್ಯವಸ್ಥೆ ಒದಗಿಸಿದ್ದವು.
ದಂಪತಿಯ ಸಾಧನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ನಿಮ್ಮ ಸಾಧನೆ ಅನೇಕರಿಗೆ ಪ್ರೇರಣೆಯಾಗಿದೆ, ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಮತ್ತೊಬ್ಬರು ಅಸಾಧ್ಯವೆನ್ನುವುದೇ ಇಲ್ಲ ಎಂಬುದನ್ನು ನೀವು ಸಾಬೀತುಪಡಿಸಿದ್ದೀರಿ ಎಂದು ಹೇಳುವ ಮೂಲಕ ದಂಪತಿಯನ್ನು ಅಭಿನಂದಿಸಿದ್ದಾರೆ.
IPL 2026: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಮುಂಬೈ ಇಂಡಿಯನ್ಸ್ (MI) ನಡುವಿನ ಪಂದ್ಯದ ವೇಳೆ ತಮಿಳು ಕಾಮೆಂಟರಿಯಲ್ಲಿ ಮಾಜಿ ಕ್ರಿಕೆಟಿಗ ಎಸ್. ಬದರಿನಾಥ್ ಅವರು ಕೃನಾಲ್ ಪಾಂಡ್ಯ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ವಿವಾದ ತಾರಕ್ಕೇರುತ್ತಿದ್ದಂತೆ ಬದರಿನಾಥ್ ಅವರು ತಮ್ಮ ಮಾತಿನ ಹಿಂದಿನ ಅಸಲಿ ಉದ್ದೇಶವನ್ನು ವಿವರಿಸುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ವಿವಾದದ ಹಿನ್ನೆಲೆ:
ರಾಯ್‌ಪುರದಲ್ಲಿ ನಡೆದ ಪಂದ್ಯದಲ್ಲಿ ಕೃನಾಲ್ ಪಾಂಡ್ಯ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದಾಗ ಸ್ನಾಯು ಸೆಳೆತಕ್ಕೆ ಒಳಗಾಗಿ ಮೈದಾನದಲ್ಲಿ ಕುಸಿದಿದ್ದರು. ಈ ವೇಳೆ ಮುಂಬೈ ಇಂಡಿಯನ್ಸ್ ವಿಕೆಟ್ ಕೀಪರ್ ರಯಾನ್ ರಿಕೆಲ್ಟನ್ ಅವರು ಕೃನಾಲ್ ಪಾಂಡ್ಯ ಅವರ ಕಾಲುಗಳನ್ನು ಸ್ಟ್ರೆಚ್ ಮಾಡುವ ಮೂಲಕ ಕ್ರೀಡಾ ಮನೋಭಾವ ಮೆರೆದಿದ್ದರು.
ಈ ಸಂದರ್ಭದಲ್ಲಿ ಕಾಮೆಂಟ್ರಿ ಮಾಡುತ್ತಿದ್ದ ಬದರಿನಾಥ್, ಇದು ಸೆಳೆತ ಅಲ್ಲ, ಮುಂಬೈ ಇಂಡಿಯನ್ಸ್ ತಂಡವರು ನೀ ಅಲ್ಲೇ ಸಾಯಿ ಎಂದರೂ ತಪ್ಪೇನಿಲ್ಲ ಎಂಬಾರ್ಥದಲ್ಲಿ ಹೇಳಿಕೆ ನೀಡಿದ್ದರು. ಈ ಆಕ್ಷೇಪಾರ್ಹ ಕಾಮೆಂಟ್ರಿ ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಬದರಿನಾಥ್ ನೀಡಿದ ಸ್ಪಷ್ಟೀಕರಣ:
ತಮ್ಮ ಹೇಳಿಕೆ ತಪ್ಪಾಗಿ ಅರ್ಥೈಸಲ್ಪಟ್ಟಿದೆ ಎಂದು ತಿಳಿಸಿರುವ ಬದರಿನಾಥ್, ಈ ಬಗ್ಗೆ ಈ ಕೆಳಗಿನ ಅಂಶಗಳನ್ನು ಹಂಚಿಕೊಂಡಿದ್ದಾರೆ:
ನಾನು ಬಳಸಿದ “ಸಾಯಿ” ಎನ್ನುವುದು ತಮಿಳಿನ ಒಂದು ಆಡುಭಾಷೆಯ ಶೈಲಿಯಾಗಿದೆ (Colloquial Expression). ಇದನ್ನು ನಾವು ಯಾವುದನ್ನಾದರೂ ಅತಿಯಾಗಿ ಹೇಳುವಾಗ ಅಥವಾ ತಮಾಷೆಯ ಸಂದರ್ಭದಲ್ಲಿ ಬಳಸುತ್ತೇವೆ ಹೊರತು ಯಾರಿಗೂ ಹಾನಿಯಾಗಲಿ ಎಂದು ಬಯಸುವುದಲ್ಲ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ನನ್ನ ಮಾತಿನ ನಿಜವಾದ ಉದ್ದೇಶ ರಯಾನ್ ರಿಕೆಲ್ಟನ್ ಅವರ ಮಾನವೀಯತೆಯನ್ನು ಹೊಗಳುವುದಾಗಿತ್ತು. “ಎದುರಾಳಿ ತಂಡದ ಅಪಾಯಕಾರಿ ಆಟಗಾರ ನೋವಿನಲ್ಲಿದ್ದಾಗಲೂ, ಪಂದ್ಯದ ಫಲಿತಾಂಶದ ಬಗ್ಗೆ ಯೋಚಿಸದೆ ಸಹಾಯ ಮಾಡಿದ ರಿಕೆಲ್ಟನ್ ಅವರ ಗುಣಕ್ಕೆ ಮುಂಬೈ ಇಂಡಿಯನ್ಸ್ ತಂಡಕ್ಕೆ ‘ಫೇರ್ ಪ್ಲೇ’ ಅಂಕಗಳನ್ನು ನೀಡಬೇಕು” ಎಂಬುದು ತಮ್ಮ ಆಶಯವಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಎದುರಾಳಿ ಬ್ಯಾಟರ್ ಔಟ್ ಆದರೆ ಸಾಕು ಎಂದು ತಂಡಗಳು ಬಯಸುವ ಸಂದರ್ಭದಲ್ಲಿ, ರಿಕೆಲ್ಟನ್ ಸಹಾಯ ಮಾಡಿದ್ದನ್ನು ಅತಿರಂಜಿತವಾಗಿ ವಿವರಿಸಲು ಆ ಪದ ಬಳಸಿದ್ದಾಗಿ ಎಸ್ ಬದರಿನಾಥ್ ಹೇಳಿದ್ದಾರೆ.
ಒಟ್ಟಾರೆಯಾಗಿ, ಕಾಮೆಂಟರಿ ಬಾಕ್ಸ್‌ನಲ್ಲಿ ನಡೆಯುವ ಸಣ್ಣ ಸಂವಹನವೂ ಸಹ ಎಷ್ಟೊಂದು ದೊಡ್ಡ ಪರಿಣಾಮ ಬೀರುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಬದರಿನಾಥ್ ಅವರು ತಮ್ಮ ಮಾತಿನ ಹಿಂದಿನ ಉದ್ದೇಶವನ್ನು ಸ್ಪಷ್ಟಪಡಿಸಿದ್ದರೂ, ಆಟಗಾರರ ನಡುವಿನ ಪರಸ್ಪರ ಗೌರವ ಮತ್ತು ಪದಬಳಕೆಯ ವಿಚಾರದಲ್ಲಿ ಈ ವಿವಾದ ಹೊಸದೊಂದು ಚರ್ಚೆಗೆ ನಾಂದಿ ಹಾಡಿರುವುದಂತು ಸುಳ್ಳಲ್ಲ.
ಚೆನ್ನೈ, ಮೇ 12: ಟಿವಿಕೆ ಮುಖ್ಯಸ್ಥ ಜೋಸೆಫ್ ವಿಜಯ್ (Joseph Vijay) ಅವರ ಗೆಲುವಿನ ಬಗ್ಗೆ ಚುನಾವಣೆಗೂ ಮುನ್ನವೇ ಭವಿಷ್ಯ ನುಡಿದಿದ್ದ ಜ್ಯೋತಿಷಿ ರಿಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ಇಂದು ತಮಿಳುನಾಡು ಮುಖ್ಯಮಂತ್ರಿಯ ವಿಶೇಷ ಕರ್ತವ್ಯ ಅಧಿಕಾರಿ (OSD) ಆಗಿ ನೇಮಿಸಲಾಗಿದೆ. ಈ ನೇಮಕ ಭಾರೀ ಚರ್ಚೆಗೆ ಕಾರಣವಾಗಿದೆ. ಟಿವಿಕೆ (TVK) ಪಕ್ಷವನ್ನು ಕೇವಲ 2 ವರ್ಷಗಳ ಹಿಂದೆ ಸ್ಥಾಪಿಸಲಾಗಿತ್ತು. 2024ರಲ್ಲಿ ನಟ ವಿಜಯ್ ಅವರ ರಾಜಕೀಯ ಉದಯದ ಬಗ್ಗೆ ಖ್ಯಾತ ಜ್ಯೋತಿಷಿಯಾದ ರಾಧನ್ ಪಂಡಿತ್ ಭವಿಷ್ಯ ನುಡಿದಿದ್ದರು.
ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ವೈಯಕ್ತಿಕ ಜ್ಯೋತಿಷಿ ರಿಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ಮುಖ್ಯಮಂತ್ರಿ ಕಚೇರಿಯಲ್ಲಿ ವಿಶೇಷ ಕರ್ತವ್ಯ ಅಧಿಕಾರಿಯಾಗಿ ನೇಮಿಸಲಾಗಿದೆ ಎಂದು ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ. ವಿಜಯ್ ಮೇ 10ರಂದು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ರಾಧನ್ ಪಂಡಿತ್ ಯಾರು?:
ವೈದಿಕ ಜ್ಯೋತಿಷ್ಯ, ಸಂಖ್ಯಾಶಾಸ್ತ್ರ ಆಧಾರಿತ ಮಾರ್ಗದರ್ಶನದಲ್ಲಿ ಸುಮಾರು 4 ದಶಕಗಳ ಅನುಭವ ಹೊಂದಿರುವ ರಾಧನ್ ಪಂಡಿತ್ ವೆಟ್ರಿವೇಲ್ ಭಾರತದ ಅತ್ಯಂತ ಉನ್ನತ ಮಟ್ಟದ ಸೆಲೆಬ್ರಿಟಿ ಮತ್ತು ರಾಜಕೀಯ ಜ್ಯೋತಿಷಿಗಳಲ್ಲಿ ಒಬ್ಬರು. ಪಂಡಿತ್ ವೆಟ್ರಿವೇಲ್ ಎಂದು ಕರೆಯಲ್ಪಡುವ ಈ ಜ್ಯೋತಿಷಿ 2008ರಲ್ಲಿ ದೆಹಲಿಗೆ ತೆರಳಿದ್ದರು. ಅಲ್ಲಿ ಅವರು ತಮ್ಮ ಹೆಸರನ್ನು ರಾಧನ್ ಪಂಡಿತ್ ಎಂದು ಬದಲಾಯಿಸಿಕೊಂಡರು.
ಮಾಧ್ಯಮ ವರದಿಗಳ ಪ್ರಕಾರ, ಬಿಜೆಪಿ, ಕಾಂಗ್ರೆಸ್, ಡಿಎಂಕೆ ಮತ್ತು ಎಐಎಡಿಎಂಕೆಯಾದ್ಯಂತ ರಾಧನ್ ಪಂಡಿತ್ ಅವರ ಕ್ಲೈಂಟ್‌ಗಳು ಹೆಚ್ಚಾಗಿ ಭಾರತೀಯ ರಾಜಕಾರಣಿಗಳೇ ಆಗಿದ್ದಾರೆ. ಪಂಡಿತ್ ರಾಧನ್ ಪಂಡಿತ್ ನಟ-ರಾಜಕಾರಣಿ ವಿಜಯ್ ಮತ್ತು ಟಿವಿಕೆಯ ಪ್ರಮುಖ ಬೆಂಬಲಿಗರಲ್ಲಿ ಒಬ್ಬರು. ಏಪ್ರಿಲ್‌ನಲ್ಲಿ ತಮಿಳುನಾಡಿನಲ್ಲಿ ನಡೆದ ಚುನಾವಣೆಗೆ ಬಹಳ ಮುಂಚೆಯೇ ವಿಜಯ್ ಅವರ ಜಾತಕದ ಪ್ರಕಾರ ಅವರಿಗೆ ರಾಜಕೀಯದಲ್ಲಿ ಭರ್ಜರಿ ಯಶಸ್ಸು ಸಿಗಲಿದೆ ಎಂದು ಅವರು ಭವಿಷ್ಯ ನುಡಿದಿದ್ದರು. ತಮಿಳುನಾಡಿನಲ್ಲಿ 150ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ವಿಜಯ್ ಮುಖ್ಯಮಂತ್ರಿಯಾಗುತ್ತಾರೆ ಎಂದು ರಾಧನ್ ಪಂಡಿತ್ ಭವಿಷ್ಯ ನುಡಿದಿದ್ದರು.
ತಮಿಳುನಾಡಿನಲ್ಲಿ ಪ್ರಮುಖ ಆಧ್ಯಾತ್ಮಿಕ ಮಾರ್ಗದರ್ಶಕರಾಗಿರುವ ರಾಧನ್ ಪಂಡಿತ್ ಚುನಾವಣೆಗೂ ಬಹಳ ಮೊದಲೇ ವಿಜಯ್ ಅವರ ಗೆಲುವಿನ ಬಗ್ಗೆ ಭವಿಷ್ಯ ನುಡಿದಿದ್ದರು. ವಿಜಯ್ ಮಾತ್ರವಲ್ಲದೆ, ಮಾಜಿ ಸಿಎಂ ಜಯಲಲಿತಾ ಸೇರಿದಂತೆ ಹಲವಾರು ಪ್ರಮುಖ ರಾಜಕಾರಣಿಗಳು ರಾಧನ್ ಪಂಡಿತ್ ಅವರ ಕಚೇರಿಯ ಮುಂದೆ ಸಾಲುಗಟ್ಟಿ ನಿಂತಿದ್ದರು. 4 ದಶಕಗಳಿಂದ ಜ್ಯೋತಿಷ್ಯ ಕ್ಷೇತ್ರದಲ್ಲಿದ್ದು, ಹಲವಾರು ರಾಜಕೀಯ ದಿಗ್ಗಜರ ಭವಿಷ್ಯ ನುಡಿದಿರುವ ವ್ಯಕ್ತಿ ಇದೀಗ ಮುಖ್ಯಮಂತ್ರಿಗಳ ವಿಶೇಷ ರಾಜಕೀಯ ಕರ್ತವ್ಯ ಅಧಿಕಾರಿಯಾಗಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪ್ರಮುಖ ಗೆಲುವು ಸಾಧಿಸಿತ್ತು. ಈ ಮೂಲಕ ಟಿವಿಕೆ 108 ಸ್ಥಾನಗಳೊಂದಿಗೆ ತಮಿಳುನಾಡಿನ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಕಾಂಗ್ರೆಸ್ ಮತ್ತು ಇತರ ಎಡ ಪಕ್ಷಗಳ ಬೆಂಬಲದೊಂದಿಗೆ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ತಮಿಳು ಚಿತ್ರರಂಗದ ಅನೇಕರು ರಾಜಕೀಯಕ್ಕೆ ಎಂಟ್ರಿ ಕೊಟ್ಟು ಯಶಸ್ಸು ಕಂಡಿದ್ದಾರೆ. ಈ ಸಾಲಿನಲ್ಲಿ ದಳಪತಿ ವಿಜಯ್ ಕೂಡ ಸೇರಿದ್ದಾರೆ. ಅವರದ್ದು ಅಂತಿಂಥ ಗೆಲುವಲ್ಲ. ಕೆಲವೇ ವರ್ಷಗಳ ಹಿಂದೆ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವನ್ನು ಸ್ಥಾಪಿಸಿ ಅಧಿಕೃತವಾಗಿ ರಾಜಕೀಯಕ್ಕೆ ಪ್ರವೇಶಿಸಿದ್ದಾರೆ. 2026ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಅವರು ಗೆದ್ದಿದ್ದಾರೆ. ಆದರೆ, ಅವರ ಈ ರಾಜಕೀಯ ಪಯಣದ ಸುಳಿವು 2011ರಲ್ಲೇ ಸಿಕ್ಕಿತ್ತು ಎಂಬುದು ಈಗ ವೈರಲ್ ಆಗುತ್ತಿರುವ ವಿಡಿಯೋದಿಂದ ಸ್ಪಷ್ಟವಾಗುತ್ತಿದೆ.
ಅಂದು ವಿಜಯ್ ಹೇಳಿದ್ದೇನು?
ವಿಜಯ್ ಆಗಿನ್ನೂ ಸಿನಿಮಾದಲ್ಲಿ ಸ್ಟಾರ್ ಆಗಿ ಬೆಳೆದಿದ್ದರು. ಅಂದಿನ ದಿನಗಳ ಸಂದರ್ಶನವೊಂದರಲ್ಲಿ ರಾಜಕೀಯ ಪ್ರವೇಶದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದ ವಿಜಯ್, ‘ಸದ್ಯಕ್ಕೆ ನನ್ನ ಗಮನ ಸಿನಿಮಾದ ಮೇಲಿದೆ. ಆದರೆ, ತಮಿಳುನಾಡಿನ ಜನರಿಗಾಗಿ ಏನಾದರೂ ಮಾಡಬೇಕು ಎಂಬ ಆಸೆಯಿದೆ. ಸೂಕ್ತ ಸಮಯ, ಸಂದರ್ಭ ಬಂದಾಗ ಕಾಲವೇ ನನ್ನನ್ನು ಆ ಜಾಗದಲ್ಲಿ ತಂದು ಕೂರಿಸುತ್ತದೆ. ಅದಕ್ಕಾಗಿ ಅಡಿಪಾಯವನ್ನು ಗಟ್ಟಿಗೊಳಿಸುತ್ತಿದ್ದೇನೆ’ ಎಂದು ಹೇಳಿದ್ದರು.
ಅಂದು ನುಡಿದಂತೆ ಇಂದು ನಡೆದಿದೆ:
ವಿಜಯ್ ಅವರು ಅಂದು ಹೇಳಿದಂತೆ, ಹಂತ ಹಂತವಾಗಿ ತಮ್ಮ ಅಭಿಮಾನಿ ಬಳಗವನ್ನು ಸಂಘಟಿಸಿ, ಇಂದು ಅಡಿಪಾಯವನ್ನು ಗಟ್ಟಿಮಾಡಿಕೊಂಡು ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ. ತಮಿಳುನಾಡಿನ ಮುಂದಿನ ರಾಜಕೀಯ ಚಿತ್ರಣದಲ್ಲಿ ವಿಜಯ್ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂಬ ಚರ್ಚೆಗಳು ಈಗ ಜೋರಾಗಿವೆ.
ವಿಜಯ್ ಅವರು ಪಕ್ಷ ಕಟ್ಟಿದ್ದು ಕೆಲ ವರ್ಷಗಳ ಹಿಂದೇ ಆಗಿದ್ದರೂ ಅವರು ಇದಕ್ಕಾಗಿ ಸಾಕಷ್ಟು ಪ್ಲ್ಯಾನ್ ಮಾಡಿದ್ದರು. ಅಭಿಮಾನಿಗಳನ್ನು ಸಂಘಟಿಸಿ, ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಈ ಮೂಲಕ ಜನರಿಗೆ ಹತ್ತಿರವಾದರು. ಈಗ ಅವರು ಗೆದ್ದು ಸಿಎಂ ಆಗಿದ್ದಾರೆ.
ದಳಪತಿ ವಿಜಯ್ (Thalapathy Vijay) ಸಿಎಂ ಆಗಿ ಇತ್ತೀಚೆಗಷ್ಟೆ ಪ್ರಮಾಣ ವಚನ ಸ್ವೀಕಾರ ಮಾಡಿದ್ದು ಇಂದು (ಮೇ 15) ಮೊದಲ ವಿಧಾನಸಭೆ ಅಧಿವೇಶದಲ್ಲಿ ಪಾಲ್ಗೊಂಡಿದ್ದಾರೆ. ಎಲ್ಲ ಶಾಸಕರು ಇಂದು ಸ್ಪೀಕರ್ ಎದುರು ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ವಿಜಯ್ ಅವರು ಸದನವನ್ನು ಉದ್ದೇಶಿಸಿ ಇದೇ ಮೊದಲ ಬಾರಿಗೆ ಭಾಷಣ ಮಾಡಿದ್ದಾರೆ. ತಮ್ಮ ಭಾಷಣದಲ್ಲಿ ಅವರು ತಾವು ಚುನಾವಣೆಗೆ ಮುಂಚೆ ಕೊಟ್ಟಿದ್ದ ಮಾತುಗಳನ್ನು ಉಳಿಸಿಕೊಳ್ಳಲಿದ್ದೇವೆ ಎಂದು ಸಹ ಹೇಳಿದ್ದಾರೆ. ವಿಡಿಯೋ ನೋಡಿ..