All posts by nagaraj11081993

TV9 Kannada News Live: ಚಿತ್ರದುರ್ಗದಲ್ಲಿ ಬಿಎಸ್ ವೈ ಅಭಿಮಾನೋತ್ಸವ ಸಂಭ್ರಮ! ಇಲ್ಲಿದೆ ಈ ಹೊತ್ತಿನ ಪ್ರಮುಖ ಸುದ್ದಿಗಳು – Kannada News | TV9 Kannada News Live: BSY Abhimanotsava in Chitradurga; Bengaluru Hotel Fire Tragedy; Suvendu Adhikari Oath in West Bengal

ಚಿತ್ರದುರ್ಗದಲ್ಲಿ ಬಿಎಸ್ ವೈ ಅಭಿಮಾನೋತ್ಸವ ಸಂಭ್ರಮ!

ಬೆಂಗಳೂರು, ಮೇ 09: ಇಂದು ಚಿತ್ರದುರ್ಗದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಬೃಹತ್ ಅಭಿಮಾನೋತ್ಸವಕ್ಕೆ ಭರ್ಜರಿ ತಯಾರಿ ನಡೆದಿದೆ. ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿಯ (Suvendhu Adhikari) ಪದಗ್ರಹಣದಂತಹ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗುತ್ತಿದೆ. ಇನ್ನೊಂದೆಡೆ ಬೆಂಗಳೂರಿನಲ್ಲಿ ಸಂಭವಿಸಿದ ಅಗ್ನಿ ದುರಂತವೊಂದು ಜನರನ್ನು ಬೆಚ್ಚಿ ಬೀಳಿಸಿದೆ.

ಮುಖ್ಯಾಂಶಗಳು

  • ಚಿತ್ರದುರ್ಗದಲ್ಲಿ ಬಿಎಸ್ ವೈ ಅಭಿಮಾನೋತ್ಸವ: ಲಕ್ಷಾಂತರ ಅಭಿಮಾನಿಗಳ ಸಮ್ಮುಖದಲ್ಲಿ ಅದ್ಧೂರಿ ಕಾರ್ಯಕ್ರಮ
  • ನಾಗರಬಾವಿ ಹೋಟೆಲ್ ಅಗ್ನಿ ಅವಘಡ: ಹೊಗೆಯಿಂದ ಉಸಿರುಗಟ್ಟಿ ಓರ್ವ ಸಾವು, ನಾಲ್ವರು ಗಂಭೀರ
  • ಬಂಗಾಳದಲ್ಲಿ ಸುವೇಂದು ಅಧಿಕಾರಿ ಪ್ರಮಾಣ ವಚನ

ಚಿತ್ರದುರ್ಗದಲ್ಲಿ ಬಿಎಸ್ ವೈ ಅಭಿಮಾನೋತ್ಸವ!

ಕೋಟೆ ನಾಡು ಚಿತ್ರದುರ್ಗ ಇಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ‘ಅಭಿಮಾನೋತ್ಸವ’ಕ್ಕೆ ಸಾಕ್ಷಿಯಾಗುತ್ತಿದೆ. ಮಾದಾರ ಚನ್ನಯ್ಯ ಮಠದ ಆವರಣದಲ್ಲಿ ನಿರ್ಮಿಸಲಾಗಿರುವ ಬೃಹತ್ ವೇದಿಕೆಯು ಏಳುಸುತ್ತಿನ ಕೋಟೆಯ ಮಾದರಿಯಲ್ಲಿದ್ದು, ಬಿಎಸ್ ವೈ ಮತ್ತು ಅಮಿತ್ ಶಾ ಅವರ ಬೃಹತ್ ಭಾವಚಿತ್ರಗಳಿಂದ ಕಂಗೊಳಿಸುತ್ತಿದೆ. ಈ ಸಮಾರಂಭದ ವಿಶೇಷ ಆಕರ್ಷಣೆಯೆಂದರೆ ಯಡಿಯೂರಪ್ಪನವರು ತಮ್ಮ ಆರಂಭಿಕ ರಾಜಕೀಯ ದಿನಗಳಲ್ಲಿ ಬಳಸುತ್ತಿದ್ದ ಅಂಬಾಸಿಡರ್ ಕಾರು ಪ್ರದರ್ಶನಕ್ಕೆ ಇಟ್ಟಿರುವುದು. ಲಕ್ಷಾಂತರ ಅಭಿಮಾನಿಗಳು ಸೇರುವ ನಿರೀಕ್ಷೆಯಿದ್ದು, ಬಿ.ವೈ. ವಿಜಯೇಂದ್ರ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಭಾಗಿಯಾಗುತ್ತಿದ್ದಾರೆ.

ಬೆಂಗಳೂರಿನ ನಾಗರಬಾವಿ ಹೋಟೆಲ್‌ನಲ್ಲಿ ಅಗ್ನಿ ಅವಘಡ!

ಬೆಂಗಳೂರಿನ ನಾಗರಬಾವಿಯ ಹೋಟೆಲ್ ಒಂದರಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಹೋಟೆಲ್‌ನಲ್ಲಿ ಕಾಣಿಸಿಕೊಂಡ ಬೆಂಕಿಯಿಂದಾಗಿ ದಟ್ಟವಾದ ಹೊಗೆ ಆವರಿಸಿದ್ದರಿಂದ ರಾಜಕುಮಾರ್ (45) ಎಂಬುವವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಬೆಂಕಿ ಹೊತ್ತಿಕೊಂಡಾಗ ಕಟ್ಟಡದೊಳಗೆ ಸಿಲುಕಿದ್ದ ಭೀಮ, ಶಿವಾನಂದ, ಸತೀಶ್ ಮತ್ತು ರಾಜಕುಮಾರ್ ಸೇರಿ ಐವರನ್ನು ಅಗ್ನಿಶಾಮಕ ದಳದವರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ರಾಜಕುಮಾರ್ ಕೊನೆಯುಸಿರೆಳೆದಿದ್ದು, ಉಳಿದ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿರಬಹುದು ಎಂದು ಶಂಕಿಸಲಾಗಿದ್ದು, ಈ ಬಗ್ಗೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ ನಾಗರಬಾವಿ ಹೋಟೆಲ್‌ನಲ್ಲಿ ಭೀಕರ ಅಗ್ನಿ ಅವಘಡ, ಉಸಿರುಗಟ್ಟಿ ಓರ್ವ ಸಾವು, ನಾಲ್ವರ ಸ್ಥಿತಿ ಗಂಭೀರ

ಮೊದಲ ಬಿಜೆಪಿ ಸಿಎಂ ಆಗಿ ಸುವೇಂದು ಅಧಿಕಾರಿ ಪ್ರಮಾಣ ವಚನ!

ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಇಂದು ಹೊಸ ಮೈಲಿಗಲ್ಲು ಸ್ಥಾಪನೆಯಾಗುತ್ತಿದೆ. ಇತ್ತೀಚಿನ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದ ಬಿಜೆಪಿ, ಮೊದಲ ಬಾರಿಗೆ ಬಂಗಾಳದಲ್ಲಿ ಅಧಿಕಾರ ಹಿಡಿದಿದೆ. ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಸುವೇಂದು ಅಧಿಕಾರಿ ಇಂದು ಬೆಳಗ್ಗೆ 11 ಗಂಟೆಗೆ ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇಂದು ವಿಶ್ವಕವಿ ರವೀಂದ್ರನಾಥ ಠಾಗೋರ್ ಅವರ 165ನೇ ಜನ್ಮದಿನವಾಗಿರುವುದರಿಂದ, ಬಂಗಾಳಿಗಳ ಭಾವನೆಗಳಿಗೆ ಗೌರವ ನೀಡಲು ಇದೇ ದಿನವನ್ನು ನಿಗದಿಪಡಿಸಲಾಗಿದೆ. ನಂದಿಗ್ರಾಮದ ಕಲಿ ಎಂದೇ ಖ್ಯಾತರಾದ ಸುವೇಂದು ಅವರು ರಾಜ್ಯಪಾಲ ಆರ್.ಎನ್. ರವಿ ಅವರಿಂದ ಪ್ರತಿಜ್ಞಾ ವಿಧಿ ಸ್ವೀಕರಿಸಲಿದ್ದು, ಬಂಗಾಳದಲ್ಲಿ ಕಮಲ ಪಾಳೆಯದ ಆಡಳಿತ ಆರಂಭವಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Axar Patel: ಮುಂದಿನ ವರ್ಷಕ್ಕೆ ನಾವು ಪ್ಲ್ಯಾನ್ ರೂಪಿಸುತ್ತೇವೆ..! – Kannada News | Axar patel post match interview after DCvs KKR match

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲಿ ಡೆಲ್ಲಿ ಕ್ಯಾಫಿಟಲ್ಸ್ ತಂಡದ ಸೋಲಿನ ಸರಪಳಿ ಮುಂದುವರೆದಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಐಪಿಎಲ್​ನ 51ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್​ಗಳಲ್ಲಿ 142 ರನ್​ ಕಲೆಹಾಕಿದ್ದರು. ಈ ಗುರಿಯನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 14.2 ಓವರ್​ಗಳಲ್ಲಿ ಚೇಸ್ ಮಾಡಿ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಈ ಸೋಲಿನ ಬಳಿಕ ಮಾತನಾಡಿದ ಡೆಲ್ಲಿ ಕ್ಯಾಫಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್,  “ಕೇವಲ ಎರಡು-ಮೂರು ಓವರ್‌ಗಳಲ್ಲಿ ನಾವು ಐದು ವಿಕೆಟ್‌ಗಳನ್ನು ಕಳೆದುಕೊಂಡೆವು. ಅಲ್ಲಿಯೇ ಪಂದ್ಯ ನಮ್ಮ ಕೈತಪ್ಪಿತು,” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲೂ ಇದೇ ರೀತಿ ಆರಂಭ ಉತ್ತಮವಾಗಿದ್ದರೂ ನಂತರ ಹಠಾತ್ ವಿಕೆಟ್ ಕಳೆದುಕೊಂಡಿದ್ದನ್ನು ಅವರು ನೆನಪಿಸಿಕೊಂಡಿದ್ದಾರೆ.

ಈ ಪಿಚ್ ಸ್ಪಿನ್ನರ್‌ಗಳಿಗೆ ಪೂರಕವಾಗಿದ್ದರೂ, ನಮ್ಮ ಸ್ಪಿನ್ನರ್‌ಗಳು ಅದರ ಲಾಭ ಪಡೆಯುವಲ್ಲಿ ಎಡವಿದರು ಎಂದು ಅಕ್ಷರ್ ಒಪ್ಪಿಕೊಂಡಿದ್ದಾರೆ. ಪಿಚ್ ವರ್ತಿಸಿದ ರೀತಿ ನೋಡಿದರೆ, ಸ್ಪಿನ್ನರ್‌ಗಳು ಸಾಕಷ್ಟು ತಪ್ಪುಗಳನ್ನು ಮಾಡಿದರು ಎನಿಸುತ್ತದೆ. ನಾವು ಇದಕ್ಕಿಂದಲೂ ಉತ್ತಮವಾಗಿ ಬೌಲಿಂಗ್ ಮಾಡಬಹುದಿತ್ತು ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಬ್ಯಾಟಿಂಗ್ ವೈಫಲ್ಯ ಹಾಗೂ ಸತತವಾಗಿ ವಿಕೆಟ್ ಬೀಳುತ್ತಿರುವಾಗ ಅದನ್ನು ಹೇಗೆ ತಡೆಯಬಹುದು ಎಂಬ ಪ್ರಶ್ನೆಗೆ  ಸರಳ ಉತ್ತರ ನೀಡಿದ ಅಕ್ಷರ್. “ಇದಕ್ಕೆ ಯಾವುದೇ ಸಂಕೀರ್ಣ ಪರಿಹಾರವಿಲ್ಲ. ವಿಕೆಟ್‌ಗಳು ಬೀಳುತ್ತಿರುವಾಗ ಒಂದೆರಡು ಓವರ್‌ಗಳ ಕಾಲ ತಾಳ್ಮೆಯಿಂದ ಕ್ರೀಸ್‌ನಲ್ಲಿ ನಿಂತು ಒತ್ತಡವನ್ನು ಹೀರಿಕೊಳ್ಳಬೇಕು. ಆ ಮೈಂಡ್‌ಸೆಟ್ ಅಳವಡಿಸಿಕೊಳ್ಳುವುದು ಬಹಳ ಮುಖ್ಯ,” ಎಂದಿದ್ದಾರೆ.

ಇದನ್ನೂ ಓದಿ: ಕೃನಾಲ್ ಪಾಂಡ್ಯ ಕಾಲರ್ ಪಟ್ಟಿ ಹಿಡಿದ ನಿಕೋಲಸ್ ಪೂರನ್!

ಟೂರ್ನಿಯ ಮುಂದಿನ ಪಂದ್ಯಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅಕ್ಷರ್, ಈ ವರ್ಷದ ತಪ್ಪುಗಳಿಂದ ಕಲಿಯುವುದು ಬಹಳಷ್ಟಿದೆ ಎಂದಿದ್ದಾರೆ. ಮುಂದಿನ ವರ್ಷದ ದೃಷ್ಟಿಯಿಂದ ತಂಡದಲ್ಲಿ ಯಾವ ಬದಲಾವಣೆ ಮಾಡಬಹುದು ಮತ್ತು ಬೆಂಚ್‌ನಲ್ಲಿರುವ ಆಟಗಾರರಿಗೆ ಹೇಗೆ ಅವಕಾಶ ನೀಡಬಹುದು ಎಂಬ ಬಗ್ಗೆ ಮ್ಯಾನೇಜ್‌ಮೆಂಟ್ ಆಲೋಚಿಸಲಿದೆ. ಈ ಮೂಲಕ ಮುಂದಿನ ವರ್ಷಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್ ಪ್ಲ್ಯಾನ್ ರೂಪಿಸುವ ಸುಳಿವು ನೀಡಿದ್ದಾರೆ.

ಒಟ್ಟಾರೆಯಾಗಿ, ಅಕ್ಷರ್ ಅವರ ಮಾತುಗಳು ತಂಡದಲ್ಲಿ ತಾಂತ್ರಿಕ ಬದಲಾವಣೆಗಿಂತ ಹೆಚ್ಚಾಗಿ ಮಾನಸಿಕ ಸ್ಥಿರತೆ ಮತ್ತು ಪಂದ್ಯದ ಸಂದರ್ಭಕ್ಕೆ ತಕ್ಕಂತೆ ಆಡುವ ಜಾಣ್ಮೆಯ ಅಗತ್ಯವಿದೆ ಎಂಬುದನ್ನು ಒತ್ತಿಹೇಳಿವೆ. ಈ ಎಲ್ಲಾ ತಪ್ಪುಗಳನ್ನು ತಿದ್ದಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಂದಿನ ಮ್ಯಾಚ್​ನಲ್ಲಿ ಕಂಬ್ಯಾಕ್ ಮಾಡಲಿದೆಯಾ ಕಾದು ನೋಡಬೇಕಿದೆ.

Source link

ಕನ್ನಡದ ಯಾವ ಹೀರೋಗೆ ವಿಜಯ್ ರೀತಿಯ ಗೆಲ್ಲುವ ತಾಕತ್ತಿದೆ? ಉಪ್ಪಿ ಹೇಳಿದ್ದಿಷ್ಟು  – Kannada News | Thalapathy Vijay’s Success Sparks Debate in Karnataka: Upendra Shares His Unique Take

ದಳಪತಿ ವಿಜಯ್ ಅವರು ಹೀರೋ ಆಗಿದ್ದವರು. ಅವರು ತಮಿಳುನಾಡಿನಲ್ಲಿ ದೊಡ್ಡ ಗೆಲುವು ಕಂಡಿದ್ದಾರೆ. ಅವರ ಗೆಲುವಿನ ಬೆನ್ನಲ್ಲೇ ಕರ್ನಾಟಕದ ಯಾವ ಹೀರೋಗೆ ಆ ರೀತಿಯ ಗೆಲುವು ಕಾಣುವ ತಾಕತ್ತಿದೆ ಎಂಬ ಚರ್ಚೆ ಶುರುವಾಗಿದೆ. ಈ ಚರ್ಚೆಯ ಬಗ್ಗೆ ಉಪೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ‘ಹೀರೋಗಳು ಚುನಾವಣೆ ಗೆಲ್ಲೋದು ಒಂದು ಕಡೆ ಆಯ್ತು. ಜನಸಾಮಾನ್ಯರೇ ಸ್ಟಾರ್ ಆಗುವ ಸಂದರ್ಭದ ಬರಬೇಕು’ ಎಂದಿದ್ದಾರೆ ಉಪೇಂದ್ರ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

DC vs KKR: ಪೋಸ್ಟ್ ಮ್ಯಾಚ್​ನಲ್ಲಿ ಭಾವುಕರಾದ ಅಕ್ಷರ್ ಪಟೇಲ್ – Kannada News | DC vs KKR, IPL 2026 Our season is over let’s see next year Axar Patel emotional in post match

ಬೆಂಗಳೂರು (ಮೇ. 09): ಐಪಿಎಲ್ 2026 ರ 51 ನೇ ಪಂದ್ಯದಲ್ಲಿ ಶುಕ್ರವಾರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಎಂಟು ವಿಕೆಟ್‌ಗಳ ಸೋಲನ್ನು ಅನುಭವಿಸಿತು. ಅರುಣ್ ಜೇಟ್ಲಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಅನುಭವಿಸಿದ ಮತ್ತೊಂದು ಸೋಲಿನಿಂದ ನಾಯಕ ಅಕ್ಷರ್ ಪಟೇಲ್ ತೀವ್ರ ನಿರಾಶೆಗೊಂಡಿದ್ದಾರೆ. ಎರಡರಿಂದ ಮೂರು ಓವರ್‌ಗಳಲ್ಲಿ ಐದು ವಿಕೆಟ್‌ಗಳನ್ನು ಕಳೆದುಕೊಂಡಿದ್ದು ಡೆಲ್ಲಿ ಕ್ಯಾಪಿಟಲ್ಸ್ ಸೋಲಿಗೆ ಪ್ರಮುಖ ಕಾರಣ ಎಂದು ಪಟೇಲ್ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ಸಂದರ್ಭ ಹೇಳಿದ್ದಾರೆ.

ಸೋಲಿಗೆ ಯಾರು ಹೊಣೆ?

“ನಾವು ನಿರೀಕ್ಷೆಗಿಂತ ಕಡಿಮೆ ರನ್ ಗಳಿಸಿದ್ದೇವೆ ಮತ್ತು ಸ್ಪಿನ್ನರ್‌ಗಳು ಕೂಡ ಬಹಳಷ್ಟು ತಪ್ಪುಗಳನ್ನು ಮಾಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಪಿಚ್ ವರ್ತಿಸುತ್ತಿದ್ದ ರೀತಿಯನ್ನು ಪರಿಗಣಿಸಿದರೆ, ಸ್ಪಿನ್ನರ್‌ಗಳು ತಪ್ಪುಗಳನ್ನು ಮಾಡಿದ್ದಾರೆ. ಆದಾಗ್ಯೂ, ನಾವು ಎರಡು ಅಥವಾ ಮೂರು ಓವರ್‌ಗಳಲ್ಲಿ ಐದು ವಿಕೆಟ್‌ಗಳನ್ನು ಕಳೆದುಕೊಂಡೆವು, ಅಲ್ಲಿಂದ ಪಂದ್ಯವು ನಮ್ಮಿಂದ ಜಾರಿತು. ಬಹುಶಃ ನಾವು ಅದರ ಬಗ್ಗೆ ಯೋಚಿಸಬೇಕಾಗಬಹುದು ಏಕೆಂದರೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧವೂ ಅದೇ ಸಂಭವಿಸಿದೆ. ನಾವು ಉತ್ತಮ ಆರಂಭವನ್ನು ಪಡೆದುಕೊಂಡೆವು, ನಂತರ ಇದ್ದಕ್ಕಿದ್ದಂತೆ ವಿಕೆಟ್‌ಗಳು ಬೀಳಲು ಪ್ರಾರಂಭಿಸಿದವು,” ಎಂದು ಅವರು ಋತುವಿನ ಏಳನೇ ಸೋಲಿನ ನಂತರ ಹೇಳಿದರು.

ಬ್ಯಾಟ್ಸ್‌ಮನ್‌ಗಳ ತಪ್ಪು

“ನೀವು ಇದನ್ನು ಕಠಿಣ ರೀತಿಯಲ್ಲಿ ಪರಿಹರಿಸಲು ಸಾಧ್ಯವಿಲ್ಲ. ಅಶುತೋಷ್ ಮತ್ತು ನಾನು ಬ್ಯಾಟಿಂಗ್ ಮಾಡುವಾಗ, ನಾವು ಅಲ್ಲಿ ತಪ್ಪು ಮಾಡಿದರೆ, ಮುಂದಿನ ಬ್ಯಾಟ್ಸ್‌ಮನ್‌ಗೆ ಅದು ತುಂಬಾ ಕಷ್ಟಕರವಾಗಿರುತ್ತದೆ ಎಂದು ನಾವು ಭಾವಿಸಿದ್ದೆವು. ಅದಕ್ಕಾಗಿಯೇ ಸರಿಯಾದ ಮನಸ್ಥಿತಿಯನ್ನು ಹೊಂದಿರುವುದು ಹೆಚ್ಚು ಮುಖ್ಯ ಎಂದು ನಾನು ಭಾವಿಸುತ್ತೇನೆ. ನೀವು ಒಂದು ಅಥವಾ ಎರಡು ವಿಕೆಟ್‌ಗಳನ್ನು ಕಳೆದುಕೊಂಡರೂ ಸಹ, ನೀವು ಇನ್ನೂ ಕ್ರೀಸ್‌ನಲ್ಲಿ ಸಮಯ ಕಳೆಯಬಹುದು ಮತ್ತು ಆಡಬಹುದು. ಅದನ್ನೇ ಅಳವಡಿಸಿಕೊಳ್ಳಬೇಕಾಗಿದೆ. ವಿಕೆಟ್‌ಗಳು ತ್ವರಿತವಾಗಿ ಬೀಳುತ್ತಿರುವಾಗ, ನೀವು ಒಂದು ಅಥವಾ ಎರಡು ಓವರ್‌ಗಳಿಗೆ ಒತ್ತಡವನ್ನು ಹೀರಿಕೊಳ್ಳಬೇಕು.”

ಈಗ ನಾವು ಮುಂದಿನ ವರ್ಷಕ್ಕೆ ತಯಾರಿ ನಡೆಸುತ್ತೇವೆ – ಅಕ್ಷರ್

ಮುಂಬರುವ ಪಂದ್ಯಗಳಿಗೆ ಸಿದ್ಧತೆಗಳ ಕುರಿತು ಮಾತನಾಡಿದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ, “ಸದ್ಯಕ್ಕೆ ನಾವು ಹಿಂದಿನ ಪಂದ್ಯಗಳಲ್ಲಿ ಮಾಡಿದ ತಪ್ಪುಗಳನ್ನು ಸರಿಪಡಿಸಬೇಕು. ನಂತರ, ಇನ್ನೂ ಬಹಳ ದೂರ ಸಾಗಬೇಕಾಗಿದೆ, ಮತ್ತು ಮುಂದಿನ ವರ್ಷ ಅತ್ಯುತ್ತಮವಾಗಿ ಬರುತ್ತೇವೆ. ಮುಂದಿನ ವರ್ಷಕ್ಕೆ ನಾವು ಯಾವ ಯೋಜನೆಗಳನ್ನು ಮಾಡಬಹುದು ಮತ್ತು ನಾವು ಯಾವ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂಬುದರ ಕುರಿತು ಯೋಚಿಸುತ್ತೇವೆ. ಜೊತೆಗೆ ನಾವು ಬೆಂಚ್‌ನಲ್ಲಿರುವ ಆಟಗಾರರನ್ನು ಸಹ ನೋಡಬೇಕು ಮತ್ತು ಯಾರಿಗೆ ಅವಕಾಶಗಳನ್ನು ನೀಡಬಹುದು ಮತ್ತು ನಾವು ಯಾವ ಬದಲಾವಣೆಗಳನ್ನು ಮಾಡಬಹುದು ಎಂಬುದನ್ನು ನಿರ್ಧರಿಸಬಹುದು.”

ಫಿನ್ ಅಲೆನ್ ಶತಕ

ಮೊದಲು ಬ್ಯಾಟಿಂಗ್ ಮಾಡಿದ ಡಿಸಿ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 142 ರನ್ ಗಳಿಸಿತು. ಪಾಥುಮ್ ನಿಸ್ಸಂಕ 50 ರನ್‌ಗಳೊಂದಿಗೆ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಆದಾಗ್ಯೂ, ಇತರ ಬ್ಯಾಟ್ಸ್‌ಮನ್‌ಗಳು ನಿಯಮಿತ ಅಂತರದಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಕೆಕೆಆರ್ 14.2 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ಗಳನ್ನು ಕಳೆದುಕೊಂಡು 143 ರನ್‌ಗಳ ಗುರಿಯನ್ನು ತಲುಪಿತು. ಕೆಕೆಆರ್ ಪರ ಫಿನ್ ಅಲೆನ್ 47 ಎಸೆತಗಳಲ್ಲಿ ಅಜೇಯ 100 ರನ್ ಗಳಿಸಿದರೆ, ಕ್ಯಾಮರೂನ್ ಗ್ರೀನ್ 33 ರನ್‌ಗಳೊಂದಿಗೆ ಅಜೇಯರಾಗಿ ಉಳಿದರು.

Source link

ಬೆಂಗಳೂರು: ನಾಗರಬಾವಿ ಹೋಟೆಲ್‌ನಲ್ಲಿ ಭೀಕರ ಅಗ್ನಿ ಅವಘಡ, ಉಸಿರುಗಟ್ಟಿ ಓರ್ವ ಸಾವು, ನಾಲ್ವರ ಸ್ಥಿತಿ ಗಂಭೀರ – Kannada News | Bengaluru Fire News: One Dead, Four Injured in Nagarbhavi Hotel Fire Accident Due to Suffocation

ನಾಗರಬಾವಿ ಹೋಟೆಲ್​ನಲ್ಲಿ ಬೆಂಕಿImage Credit source: tv9

ಬೆಂಗಳೂರು, ಮೇ 9: ಬೆಂಗಳೂರಿನ ನಾಗರಬಾವಿಯ ಹೋಟೆಲ್ ಒಂದರಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ. ಹೋಟೆಲ್‌ನಲ್ಲಿ ಕಾಣಿಸಿಕೊಂಡ ಬೆಂಕಿಯಿಂದಾಗಿ ದಟ್ಟವಾದ ಹೊಗೆ ಆವರಿಸಿದ್ದರಿಂದ ಉಸಿರುಗಟ್ಟಿ ಈ ಸಾವು ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ನಾಗರಬಾವಿಯ ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಾಗ ಒಟ್ಟು ಐವರು ಕಟ್ಟಡದೊಳಗೆ ಸಿಲುಕಿಕೊಂಡಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟು ಐವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಹೋಟೆಲ್ ಒಳಗೆ ಸಿಲುಕಿದ್ದವರನ್ನು ಭೀಮ, ಶಿವಾನಂದ, ಸತೀಶ್ ಮತ್ತು ರಾಜಕುಮಾರ್ ಎಂದು ಗುರುತಿಸಲಾಗಿದೆ. ದುರದೃಷ್ಟವಶಾತ್, ಅತಿಯಾದ ಹೊಗೆ ಸೇವನೆಯಿಂದ ಅಸ್ವಸ್ಥರಾಗಿದ್ದ 45 ವರ್ಷದ ರಾಜಕುಮಾರ್ ಅವರು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಉಳಿದ ನಾಲ್ವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಸ್ಥಳದಲ್ಲಿ ಅಗ್ನಿಶಾಮಕ ದಳದ ಕಾರ್ಯಾಚರಣೆ ಮುಂದುವರಿದಿದೆ. ಬೆಂಕಿ ಅವಘಡಕ್ಕೆ ನಿಖರ ಕಾರಣವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

(ಮಾಹಿತಿ ಅಪ್​ಡೇಟ್ ಆಗಲಿದೆ)

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಅಮೃತಧಾರೆ’: ಅವನ್ಯಾರು ಗೊತ್ತೇ ಇಲ್ಲ; ಮಗ ಜೆಡಿ ವಿರುದ್ಧ ತಿರುಗಿಬಿದ್ದ ಶಕುಂತಲ – Kannada News | Amruthadhare: Shakuntala Turns Against JD! Major Plot Twist in Kannada Serial

‘ಅಮೃತಧಾರೆ’ ಧಾರಾವಾಹಿಯಲ್ಲಿ (Amruthadhaare Serial) ಈಗ ಒಂದು ದೊಡ್ಡ ಬದಲಾವಣೆ ಬಂದಿದೆ. ವಿಲನ್ ಜೆಡಿ ವಿರುದ್ಧವೇ ಶಕುಂತಲ ತಿರುಗಿ ಬಿದ್ದಿದ್ದಾಳೆ. ಮಗನಿಗೋಸ್ಕರ ಆಕೆ ಎದುರು ಹಾಕಿಕೊಳ್ಳದ ಜನರೇ ಇರಲಿಲ್ಲ. ಆದರೆ, ಈಗ ಎಲ್ಲವೂ ಬದಲಾಗಿದೆ. ಶಕುಂತಲ ವಿರುದ್ಧ ಮಗನೇ ತಿರುಗಿಬಿದ್ದ. ಆ ಸಂದರ್ಭದಲ್ಲಿ ಕಾಪಾಡಿದ್ದು ಮಲ ಮಗ. ಈ ಋಣವನ್ನು ತೀರಿಸುವ ಸಮಯ ಈಗ ಬಂದಿದೆ. ಈ ಕಾರಣದಿಂದ ಆಕೆ ಜೆಡಿ ವಿರುದ್ಧವೇ ತಿರುಗಿಬಿದ್ದಿದ್ದಾಳೆ.

ಪ್ರತಿ ಹಂತದಲ್ಲೂ ಶಕುಂತಲ ಮಲ ಮಗ ಗೌತಮ್ ಹಾಗೂ ಭೂಮಿಕಾಳನ್ನು ದೂರ ತಳ್ಳುತ್ತಾ, ಅವರಿಗೆ ಕೆಟ್ಟದನ್ನು ಮಾಡುತ್ತಲೇ ಬಂದಳು. ಈ ವೇಳೆ ಜಯದೇವ್ನ ಶಕುಂತಲ ಬೆಂಬಲಿಸಿದಳು. ಕೊನೆಗೆ ಆಗಿದ್ದೇಬೆರೆ. ಹಣ ಕೇಳಿದ್ದಕ್ಕೆ ಜಯದೇವ್ ತಾಯಿಯನ್ನೇ ಹೊರಹಾಕಿದ್ದಾನೆ. ಇದರಿಂದ ಆಕೆ ಪಾಠ ಕಲಿತಿದ್ದಾಳೆ.

ಜಯದೇವ್ ಹೊರಹಾಕುತ್ತಿದ್ದಂತೆ ಶಕುಂತಲಾಳನ್ನು ಸಾಲ ಕೊಟ್ಟವರು ಬಂದು ಹಿಡಿದುಕೊಂಡು ಹೋದರು. ಆಕೆಗೆ ಟಾರ್ಚರ್ ಕೊಡೋಕೆ ಆರಂಭಿಸಿದರು. ಕೊನೆಗೆ ಆಕೆಯ ಸಹಾಯಕ್ಕೆ ಬಂದಿದ್ದು ಗೌತಮ್. ಈ ವಿಷಯದಲ್ಲಿ ಆಕೆಯ ಸಹಾಯಕ್ಕೆ ಗೌತಮ್ ನಿಂತಿದ್ದು ನೋಡಿ ಆಕೆಯ ಮನಸ್ಸು ಕರಗಿ ಹೋಯಿತು. ಅಷ್ಟೆಲ್ಲ ಕೆಟ್ಟದನ್ನು ಮಾಡಿದರೂ ಮಲತಾಯಿಗೆ ಗೌತಮ್ ಒಳ್ಳೆಯದ್ದನ್ನೇ ಬಯಸಿದ್ದ. ಈ ಘಟನೆ ಆಕೆಯನ್ನು ಸಾಕಷ್ಟು ಬದಲಾವಣೆ ಮಾಡಿತು.

ಇದನ್ನೂ ಓದಿ: ‘ಅಮೃತಧಾರೆ’: ಮೋಸ ಮಾಡಿ ಕಾಲ್ಕಿತ್ತ ಜೆಡಿ ಪತ್ನಿ ದಿಯಾ; ಬೀದಿಗೆ ಬಂದ ಜಯದೇವ್

ಈಗ ಜಯದೇವ್ ಕಷ್ಟದಲ್ಲಿ ಇದ್ದಾನೆ. ಆದರೆ, ಈ ಸಂದರ್ಭದಲ್ಲಿ ಜಯದೇವ್ಗೆ ಸಹಾಯ ಮಾಡಲು ಶಕುಂತಲ ರೆಡಿ ಇಲ್ಲ. ಆತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ವೇಳೆ ‘ತಾಯಿಗೆ ಕರೆ ಮಾಡುವಂತೆ’ ಕೋರಿದ. ಆದರೆ, ಶಕುಂತಲ ಅವನ್ಯಾರು ಗೊತ್ತೇ ಇಲ್ಲ ಎಂದಿದ್ದಾಳೆ. ಇದರಿಂದ ಆತನಿಗೆ ಏಟು ಬಿದ್ದಿದೆ. ಶೀಘ್ರವೇ ಧಾರಾವಾಹಿ ಪೂರ್ಣಗೊಳ್ಳಲಿದೆಯೇ ಎಂಬ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಚಾಮರಾಜನಗರ: ಕೆರೆಯಂತಾದ ರಾಜ್ಯ ಹೆದ್ದಾರಿ; ಜೀವ ಕೈಯಲ್ಲಿ ಹಿಡಿದು ಸವಾರರ ಸಂಚಾರ! – Kannada News | Chamarajanagar Road Crisis: Interstate Highway in Hanur Turns into Pond; Commuters Slam Authorities

ಚಾಮರಾಜನಗರ, ಮೇ 9: ಜಿಲ್ಲೆಯ ಹನೂರು ತಾಲೂಕಿನ ಒಡೆಯರಪಾಳ್ಯದಲ್ಲಿ ರಾಜ್ಯ ಹೆದ್ದಾರಿಯ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಪ್ರತಿದಿನ ನರಕಯಾತನೆ ಅನುಭವಿಸುತ್ತಿದ್ದಾರೆ. ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳನ್ನು ಸಂಪರ್ಕಿಸುವ ಈ ಪ್ರಮುಖ ರಸ್ತೆಯಲ್ಲಿ ಶುಕ್ರವಾರ ಸುರಿದ ಸಣ್ಣ ಮಳೆಗೆ ನೀರು ನಿಂತು ರಸ್ತೆಯೇ ಕಾಣದಂತಾಗಿದೆ. ರಸ್ತೆಯಲ್ಲಿ ಗುಂಡಿಗಳಿವೆಯೋ ಅಥವಾ ಗುಂಡಿಗಳ ಮಧ್ಯೆಯೇ ರಸ್ತೆ ಇದೆಯೋ ಎಂಬ ಅನುಮಾನ ಮೂಡುವಂತೆ ಈ ಮಾರ್ಗ ಅಧ್ವಾನಗೊಂಡಿದೆ. ಅಂತರರಾಜ್ಯ ಸಂಪರ್ಕ ಕಲ್ಪಿಸುವ ಇಂತಹ ಮಹತ್ವದ ರಸ್ತೆಯ ಗುಂಡಿಗಳಿಂದಾಗಿ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ. ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಮತ್ತು ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕೂಡಲೇ ರಸ್ತೆ ದುರಸ್ತಿಗೆ ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲಂಚ ಪಡೆಯುತ್ತಿದ್ದಾಗ ರೆಡ್​ ಹ್ಯಾಂಡೆಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಇನ್ಸ್​ಪೆಕ್ಟರ್! – Kannada News | Yadgiri Inspector Trapped by Lokayukta While Accepting Rs 1 Lakh Bribe in Gurmitkal

ಇನ್ಸ್‌ಪೆಕ್ಟರ್ ವೀರಣ್ಣ ದೊಡ್ಡಮನಿ

ಯಾದಗಿರಿ, ಮೇ 09: ಜಿಲ್ಲೆಯಲ್ಲಿ ಇನ್ಸ್‌ಪೆಕ್ಟರ್ ಒಬ್ಬರು​ ಬರೋಬ್ಬರಿ ಒಂದು ಲಕ್ಷ ರೂ. ಲಂಚ (Bribe) ಪಡೆಯುವಾಗ ರೆಡ್​ ಹ್ಯಾಂಡೆಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಗುರುಮಠಕಲ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವೀರಣ್ಣ ದೊಡ್ಡಮನಿ ಕ್ರಿಮಿನಲ್ ಪ್ರಕರಣವೊಂದರ ಆರೋಪಿಗಳನ್ನು ಬಂಧಿಸದಿರಲು ಮತ್ತು ಪ್ರಕರಣದಿಂದ ಕೈಬಿಡಲು ಹಣಕ್ಕೆ ಬೇಡಿಕೆಯಿಟ್ಟಿದ್ದ ಸಂದರ್ಭದಲ್ಲಿ ಈ ದಾಳಿ ನಡೆದಿದೆ.

ಮುಖ್ಯಾಂಶಗಳು

  • ಆರೋಪಿಯನ್ನು ಬಂಧಿಸದಿರಲು ಒಂದು ಲಕ್ಷ ರೂ. ಲಂಚ ಪಡೆಯುತ್ತಿದ್ದ ಇನ್ಸ್‌ಪೆಕ್ಟರ್
  •  ಇನ್ಸ್‌ಪೆಕ್ಟರ್ ವೀರಣ್ಣ ದೊಡ್ಡಮನಿ ಅವರು ಹಣ ಪಡೆಯುವಾಗ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿಬಿದ್ದಿದ್ದಾರೆ.
  •  ಲೋಕಾಯುಕ್ತ ಡಿವೈಎಸ್‌ಪಿ ಜಾಕೀರ್ ಇನಾಂದಾರ್ ನೇತೃತ್ವದಲ್ಲಿ ದಾಳಿ

ನಡೆದಿದ್ದೇನು?

ಗುರುಮಠಕಲ್ ತಾಲೂಕಿನ ಗೋಪಾಳಪುರ ಗ್ರಾಮದ ಆನಂದ್ ಎಂಬುವವರ ವಿರುದ್ಧ ಜಾತಿ ನಿಂದನೆ ಪ್ರಕರಣವೊಂದು ದಾಖಲಾಗಿತ್ತು. ಈ ಕೇಸ್​ನಲ್ಲಿ ಅವರನ್ನು ಬಂಧಿಸದೆ ಇರಲು ಮತ್ತು ಇನ್ನೊಂದು ಕೇಸ್‌ನಲ್ಲಿ ಅವರ ಹೆಸರನ್ನು ಕೈಬಿಡಲು ಪಿಐ ವೀರಣ್ಣ ದೊಡ್ಡಮನಿ ಅವರು ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎಂದು ಆನಂದ್ ದೂರು ನೀಡಿದ್ದಾರೆ. ಈ ಎರಡು ಪ್ರಕರಣಗಳ ಇತ್ಯರ್ಥಕ್ಕಾಗಿ ಒಟ್ಟು ಒಂದು ಲಕ್ಷ ರೂಪಾಯಿ ಹಣವನ್ನು ಪಡೆಯುವ ಒಪ್ಪಂದವಾಗಿತ್ತು ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ 1.2 ಲಕ್ಷ ಹಣ ಪಡೆಯುವಾಗ ಪಿಡಿಓ, ಯುಟ್ಯೂಬರ್ ಲೋಕಾಯುಕ್ತ ಬಲೆಗೆ

ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಅಧಿಕಾರಿ

ಗುರುಮಠಕಲ್‌ನ ಪೊಲೀಸ್ ವಸತಿ ಗೃಹದಲ್ಲಿ ಆನಂದ್ ಅವರಿಂದ ಒಂದು ಲಕ್ಷ ರೂಪಾಯಿ ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ಹಠಾತ್ ದಾಳಿ ನಡೆಸಿದ್ದಾರೆ. ಲಂಚದ ಹಣದೊಂದಿಗೆ ಇನ್ಸ್‌ಪೆಕ್ಟರ್ ವೀರಣ್ಣ ಬಲೆಗೆ ಬೀಳಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಲೋಕಾಯುಕ್ತ ಡಿವೈಎಸ್‌ಪಿ ಜಾಕೀರ್ ಇನಾಂದಾರ್ ಅವರ ನೇತೃತ್ವದ ತಂಡ ಈ ದಾಳಿಯನ್ನು ನಡೆಸಿದೆ. ಸದ್ಯ ಆರೋಪಿ ಇನ್ಸ್‌ಪೆಕ್ಟರ್ ವೀರಣ್ಣ ದೊಡ್ಡಮನಿಯನ್ನು ವಶಕ್ಕೆ ಪಡೆಯಲಾಗಿದ್ದು, ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕೃನಾಲ್ ಪಾಂಡ್ಯ ಕಾಲರ್ ಪಟ್ಟಿ ಹಿಡಿದ ನಿಕೋಲಸ್ ಪೂರನ್! – Kannada News | Krunal pandya and nicholas pooran Fight video in IPL 2026

IPL 2026: ಲಕ್ನೋ ಸೂಪರ್ ಜೈಂಟ್ಸ್ (LSG) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವಿನ ಹಣಾಹಣಿ ಎಂದರೆ ಅಲ್ಲಿ ಕೇವಲ ಕ್ರಿಕೆಟ್ ಮಾತ್ರವಲ್ಲ, ಹೈ-ವೋಲ್ಟೇಜ್ ಡ್ರಾಮಾಗಳು ನಡೆಯುತ್ತಿರುತ್ತವೆ. ಇತ್ತೀಚಿನ ಪಂದ್ಯದ ನಂತರವೂ ಇಂತಹದ್ದೇ ಒಂದು ಘಟನೆ ನಡೆದಿದ್ದು, ಕೆರಿಬಿಯನ್ ಆಟಗಾರ ನಿಕೋಲಸ್ ಪೂರನ್ ಅವರು ಕೃನಾಲ್ ಪಾಂಡ್ಯ ಅವರ ಕಾಲರ್ ಹಿಡಿದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

ಮೈದಾನದಲ್ಲಿ ಏನಾಯಿತು?

ಈ ಪಂದ್ಯದ ವೇಳೆ 10ನೇ ಓವರ್‌ನಲ್ಲಿ ಕೃನಾಲ್ ಪಾಂಡ್ಯ ಸತತ ಎರಡು ಬೌನ್ಸರ್ ಎಸೆತಗಳ ಮೂಲಕ ಪೂರನ್ ಅವರನ್ನು ಕೆಣಕಿದ್ದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಇಬ್ಬರೂ ಆಟಗಾರರು ಕ್ರೀಸ್​​ನಲ್ಲಿ ಮುಖಾಮುಖಿಯಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂಬಂತೆ ತೋರಿತ್ತು. ಈ ವೇಳೆ ಅಂಪೈರ್ ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಬೇಕಾಯಿತು.

ಪಂದ್ಯದ ನಂತರ ನಡೆದಿದ್ದೇನು?

ಈ ಪಂದ್ಯದಲ್ಲಿ ಎಲ್‌ಎಸ್‌ಜಿ ತಂಡ ಆರ್‌ಸಿಬಿ ವಿರುದ್ಧ 9 ರನ್‌ಗಳ ಜಯ ಸಾಧಿಸಿದ ಬಳಿಕ, ಮೈದಾನದಲ್ಲಿ ಎಲ್ಲರೂ ಹ್ಯಾಂಡ್ ಶೇಕ್ ಮಾಡುತ್ತಿರುವಾಗ ಪೂರನ್ ಅವರು ದಿಢೀರನೆ ಕೃನಾಲ್ ಪಾಂಡ್ಯ ಅವರ ಕಾಲರ್ ಪಟ್ಟಿಯನ್ನು ಹಿಡಿದು ಎಳೆದಿದ್ದಾರೆ. ಮೊದಲ ನೋಟಕ್ಕೆ ಇದು ಜಗಳದಂತೆ ಕಂಡರೂ, ವಾಸ್ತವವಾಗಿ ಅದು ಕೇವಲ ತಮಾಷೆಯಾಗಿತ್ತು.

ಕೃನಾಲ್ ಮತ್ತು ಪೂರನ್ ಇಬ್ಬರೂ ಈ ಹಿಂದೆ ಎಲ್‌ಎಸ್‌ಜಿ ತಂಡದಲ್ಲಿ ಜೊತೆಯಾಗಿ ಆಡಿದ್ದಾರೆ. ಅವರಿಬ್ಬರೂ ಆತ್ಮೀಯ ಸ್ನೇಹಿತರಾಗಿದ್ದು, ಮೈದಾನದಲ್ಲಿ ನಡೆದಿದ್ದ ಮಾತಿನ ಚಕಮಕಿಯನ್ನು ಮರೆತು ಗೆಲುವಿನ ಸಂಭ್ರಮದಲ್ಲಿ ಒಬ್ಬರನ್ನೊಬ್ಬರು ಕಾಲೆಳೆದಿದ್ದಾರೆ. ಕಾಲರ್ ಹಿಡಿದ ಬಳಿಕ ಇಬ್ಬರೂ ಪರಸ್ಪರ ಕೈಕುಲುಕಿ, ನಗುತ್ತಾ ಅಪ್ಪಿಕೊಂಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು, “ಇದು ನೈಜ ಕ್ರೀಡಾ ಮನೋಭಾವ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಂದ್ಯದ ನಂತರದ ಈ ಸ್ನೇಹದ ಕ್ಷಣಗಳು ಕ್ರಿಕೆಟ್ ಎನ್ನುವುದು ಕೇವಲ ಸ್ಪರ್ಧೆಯಲ್ಲ, ಅದನ್ನೂ ಮೀರಿದ ಬಾಂಧವ್ಯ ಎಂದು ಸಾರಿವೆ.

ಒಟ್ಟಾರೆಯಾಗಿ ಹೇಳುವುದಾದರೆ, ಮೈದಾನದಲ್ಲಿ ಎಷ್ಟೇ ಪೈಪೋಟಿ ಇದ್ದರೂ ಪಂದ್ಯ ಮುಗಿದ ಮೇಲೆ ಆಟಗಾರರು ಒಬ್ಬರಿಗೊಬ್ಬರು ಗೌರವ ನೀಡುತ್ತಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಪೂರನ್ ಮತ್ತು ಕೃನಾಲ್ ನಡುವಿನ ಈ ‘ಕಾಲರ್ ಫೈಟ್’ ಕೇವಲ ಸ್ನೇಹದ ಸಂಭ್ರಮವಷ್ಟೇ ಆಗಿತ್ತು. ಕ್ರೀಡೆ ಎಂದರೆ ಕೇವಲ ಸೋಲು-ಗೆಲುವಲ್ಲ, ಅದು ಹಳೆಯ ಸ್ನೇಹವನ್ನು ಸಂಭ್ರಮಿಸುವ ವೇದಿಕೆ ಕೂಡ ಹೌದು ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.

Source link

ಪತ್ನಿಯರ ಎದುರು ಬಯಲಾಯ್ತು ಸಹೋದರರ ಸವಾಲು; ಗುಟ್ಟು-ರಟ್ಟು – Kannada News | Nandagokula Secret Exposed: Brothers’ Challenge Revealed by Wives TRP leading serial

ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ‘ನಂದಗೋಕುಲ’ ಟಿಆರ್​ಪಿ ರೇಸ್​ನಲ್ಲಿ ಮುಂದಿದೆ. ಈ ಧಾರಾವಾಹಿ ಗಂಭೀರ ವಿಷಯಗಳ ಜೊತೆಗೆ ವೀಕ್ಷಕರಿಗೆ ನಗೆಯ ಹಬ್ಬವನ್ನೇ ಉಣಬಡಿಸುವ ಕೆಲಸವನ್ನೂ ಮಾಡುತ್ತಿದೆ ಎಂದರೂ ತಪ್ಪಾಗಲಾರದು. ಕೌಟುಂಬಿಕ ಬಾಂಧವ್ಯದ ಜೊತೆಗೆ ಹಾಸ್ಯದ ಎಳೆಯನ್ನು ಬೆರೆಸಿರುವ ಈ ಧಾರಾವಾಹಿಯಲ್ಲಿ, ಕೇಶವ ಮತ್ತು ವಲ್ಲಭನ ನಡುವಿನ ಮಾತುಕತೆ ಈಗ ಹೊಸ ತಿರುವು ಪಡೆದುಕೊಂಡಿದೆ.

ಕೇಶವ ಮತ್ತು ಮೀನಾ ಅವರ ಮದುವೆ ಮೀನಾ ತಂದೆಗೆ ಇಷ್ಟವಿರಲಿಲ್ಲ. ದೇವಸ್ಥಾನದಲ್ಲಿ ಸಿಕ್ಕಾಗ ಕೇಶವನನ್ನು ಮೀನಾ ತಂದೆ ‘ಕಿರಾಣಿ ಅಂಗಡಿಯವ’ ಎಂದು ಹೀಯಾಳಿಸಿದ್ದನು. ಇದು ಕೇಶವನ ಮನಸ್ಸಿಗೆ ತೀವ್ರವಾಗಿ ತಟ್ಟಿದೆ. ಹೇಗಾದರೂ ಮಾಡಿ ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳಲೇಬೇಕು ಎಂದು ಕೇಶವ ಪಣ ತೊಟ್ಟರೆ, ಇತ್ತ ತಮ್ಮ ವಲ್ಲಭ ಕೂಡ ಡ್ರೈವಿಂಗ್ ಕೆಲಸದ ಮೂಲಕ ಆರ್ಥಿಕವಾಗಿ ಸದೃಢವಾಗುವ ಕನಸು ಕಾಣುತ್ತಾನೆ.

ಇಬ್ಬರೂ ಸಹೋದರರು ತಮ್ಮ ಗುರಿಗಳ ಬಗ್ಗೆ ಪರಸ್ಪರ ಚರ್ಚಿಸಿ, ‘ಈ ವಿಷಯ ನಮ್ಮ ಪತ್ನಿಯರಿಗೆ ಅಪ್ಪಿತಪ್ಪಿಯೂ ತಿಳಿಯಬಾರದು‘ ಎಂದು ಒಬ್ಬರಿಗೊಬ್ಬರು ಮಾತು ಕೊಟ್ಟುಕೊಳ್ಳುತ್ತಾರೆ. ಆದರೆ, ಈ ‘ಸೀಕ್ರೆಟ್’ ಉಳಿಯುವುದು ಅಷ್ಟು ಸುಲಭವಲ್ಲ ಎಂಬುದು ಅವರಿಗೆ ತಿಳಿದಿರುವುದಿಲ್ಲ.

ಕೇಶವ ಮನೆಗೆ ಬಂದವನೇ ಮೀನಾ ಎದುರು ವಲ್ಲಭನ ಡ್ರೈವಿಂಗ್ ಯೋಜನೆಯನ್ನು ಬಾಯಿ ಬಿಟ್ಟುಬಿಡುತ್ತಾನೆ. ಇತ್ತ ವಲ್ಲಭ ಕೂಡ ಅಮೂಲ್ಯ ಮುಂದೆ ಹೋಗಿ ಕೇಶವನ ಸರ್ಕಾರಿ ಕೆಲಸದ ಕನಸನ್ನು ಹಂಚಿಕೊಳ್ಳುತ್ತಾನೆ. ತಮಾಷೆಯೆಂದರೆ, ಇಬ್ಬರೂ ಕೂಡ ‘ಬೇರೆಯವರಿಗೆ ಹೇಳಬೇಡ’ ಎಂಬ ಕಂಡೀಷನ್ ಹಾಕಿಯೇ ಗುಟ್ಟನ್ನು ಬಿಟ್ಟುಕೊಟ್ಟಿರುತ್ತಾರೆ.

ಇದನ್ನೂ ಓದಿ: ಬಿಗ್​​ಬಾಸ್ ಮನೆಗೆ ಹೋಗಲು ಇಲ್ಲಿದೆ ಅವಕಾಶ, ಮಾಡಬೇಕಾಗಿದ್ದು ಇಷ್ಟೆ

ಹೊಟ್ಟೆಯಲ್ಲಿ ಗುಟ್ಟು ಇಟ್ಟುಕೊಳ್ಳಲಾಗದೆ ಒದ್ದಾಡುವ ಮೀನಾ, ಅಡುಗೆ ಮನೆಯಲ್ಲಿ ಅಮೂಲ್ಯ ಸಿಕ್ಕ ತಕ್ಷಣ ಎಲ್ಲವನ್ನೂ ಹೇಳಿಯೇ ಬಿಡುತ್ತಾಳೆ. ಅಣ್ಣ-ತಮ್ಮಂದಿರು ಅಂದುಕೊಂಡಿದ್ದ ‘ಸಹೋದರರ ಸವಾಲು’ ಅಂತಿಮವಾಗಿ ಹೆಂಡತಿಯರ ನಡುವಿನ ಹರಟೆಯಲ್ಲಿ ಕರಗಿ ಹೋಗುತ್ತದೆ. ಗಂಡಂದಿರ ಅತಿ ಆತ್ಮವಿಶ್ವಾಸ ಮತ್ತು ಪತ್ನಿಯರ ಮುಗ್ಧ ಹರಟೆಯ ಈ ಜುಗಲ್‌ಬಂದಿ ವೀಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತಿದೆ. ‘ನಂದಗೋಕುಲ’ ಧಾರಾವಾಹಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link