Category Archives: Blog

Your blog category

ಹಾರ್ಮುಜ್​ನಲ್ಲಿ ಭಾರತದ ಹಡಗುಗಳ ಮೇಲೆ ಇರಾನ್ ದಾಳಿ, ಇರಾನ್ ರಾಯಭಾರಿ ಬಳಿ ವಿವರಣೆ ಕೇಳಿದ ಭಾರತ – Kannada News | Hormuz Tensions Spike as India Calls in Iranian Envoy

ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಹಡಗುಗಳ ಮೇಲೆ ಇರಾನ್ ಮಿಲಿಟರಿ ದಾಳಿ ನಡೆಸಿದ ಕಾರಣ, ಭಾರತ ಆಕ್ರೋಶ ವ್ಯಕ್ತಪಡಿಸಿದೆ. ಕದನ ವಿರಾಮವಿದ್ದರೂ ಇರಾನ್ ದಾಳಿ ಮುಂದುವರೆಸಿದೆ. ಇರಾನ್‌ನ ರಾಯಭಾರಿಯನ್ನು ಕರೆಸಿ ಭಾರತ ವಿವರಣೆ ಕೇಳಿದೆ. ಅಮೆರಿಕಾ ನೌಕಾಪಡೆ ಇರುವ ಕಾರಣ ಸಂಚಾರ ನಿಷೇಧಿಸಿದೆ ಎಂದು ಇರಾನ್ ಹೇಳಿದೆ. ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಹಡಗುಗಳ ಮೇಲೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್ಜಿಸಿ) ದಾಳಿ ನಡೆಸಿದೆ. ಭಾರತದ ಎರಡು ಹಡಗುಗಳು ಗುಂಡಿನ ದಾಳಿಗೆ ಒಳಗಾಗಿದ್ದು, ಒಂದು ಹಡಗು ಭಾರತದ ಕರಾವಳಿ ಕಡೆಗೆ ತಪ್ಪಿಸಿಕೊಂಡಿದೆ.

ಈ ಘಟನೆಯಿಂದ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಭಾರತದಲ್ಲಿರುವ ಇರಾನ್ ರಾಯಭಾರಿಯನ್ನು ಕರೆಸಿ ವಿವರಣೆ ಕೇಳಿದೆ. ಇರಾನ್, ಇಸ್ರೇಲ್ ಮತ್ತು ಅಮೆರಿಕಾ ನಡುವೆ ಕದನ ವಿರಾಮ ಘೋಷಣೆಯಾಗಿದ್ದರೂ, ಹರ್ಮುಜ್ ಜಲಸಂಧಿಯಲ್ಲಿ ಮತ್ತೆ ಉದ್ವಿಗ್ನತೆ ಸೃಷ್ಟಿಯಾಗಿದೆ.

ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಿದೆ ಎಂದು ಘೋಷಿಸಿದ್ದರೂ, ಇಪ್ಪತ್ತನಾಲ್ಕು ಗಂಟೆಗಳೊಳಗಾಗಿ ಮತ್ತೆ ಬಂದ್ ಮಾಡಿದೆ. ಅಮೆರಿಕದ ಯುದ್ಧ ನೌಕೆಗಳು ಇನ್ನೂ ಹಾರ್ಮುಜ್ ಜಲಸಂಧಿಯಲ್ಲಿ ಇರುವುದರಿಂದ ಮತ್ತು ಇರಾನ್ ಬಂದರುಗಳಿಗೆ ಅಮೆರಿಕ ನಿರ್ಬಂಧ ಹೇರಿರುವ ಕಾರಣ ಹಡಗುಗಳ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಯುರೇನಿಯಂ ಕಾರ್ಯಕ್ರಮಗಳನ್ನು ನಿಲ್ಲಿಸುವ ಅಮೆರಿಕದ ಷರತ್ತುಗಳನ್ನು ಇರಾನ್ ತಿರಸ್ಕರಿಸಿದೆ. ಈ ಘಟನೆಗಳು ಮಧ್ಯಪ್ರಾಚ್ಯದಲ್ಲಿ ಮತ್ತಷ್ಟು ಗೊಂದಲಗಳಿಗೆ ಕಾರಣವಾಗಿವೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ದೀಪಿಕಾ ಪಡುಕೋಣೆ ಮತ್ತೆ ಪ್ರೆಗ್ನೆಂಟ್; 2ನೇ ಮಗುವಿನ ನಿರೀಕ್ಷೆಯಲ್ಲಿ ರಣವೀರ್ ಸಿಂಗ್ – Kannada News | Deepika Padukone Ranveer Singh announce second pregnancy with daughter Dua photo

ಬಾಲಿವುಡ್ ಸುಂದರಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ (Ranveer Singh) ಈಗ ಎರಡನೇ ಮಗುವಿನ ಆಗಮನವನ್ನು ನಿರೀಕ್ಷಿಸುತ್ತಿದ್ದಾರೆ. ತಮ್ಮ ಪುತ್ರಿ ದುವಾ (Dua) ಜೊತೆಗಿನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಈ ಸುದ್ದಿಯನ್ನು ಅವರಿಬ್ಬರು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಈ ಜೋಡಿ, ಶೀರ್ಷಿಕೆಯಲ್ಲಿ ಸರಳವಾಗಿ ‘ದೃಷ್ಟಿ ತಗುಲದಿರಲಿ’ ಎಂಬ ಅರ್ಥ ನೀಡುವ ಎಮೋಜಿಗಳನ್ನು ಬಳಸಿದ್ದಾರೆ. ದೀಪಿಕಾ ಪಡುಕೋಣೆ (Deepika Padukone) ಈ ಪೋಸ್ಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಶುಭಾಶಯಗಳ ಮಳೆ ಸುರಿಸಿದ್ದಾರೆ.

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು 2018ರಲ್ಲಿ ಇಟಲಿಯಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದರು. ಈ ದಂಪತಿಗೆ 2024ರ ಸೆಪ್ಟೆಂಬರ್ 8ರಂದು ಮೊದಲ ಪುತ್ರಿ ದುವಾ ಜನಿಸಿದಳು. ಇದೇ ವರ್ಷ ನವೆಂಬರ್ ತಿಂಗಳಲ್ಲಿ ಮಗಳ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗಿತ್ತು. ಈಗ ದುವಾಳಿಗೆ ಒಬ್ಬ ತಮ್ಮ ಅಥವಾ ತಂಗಿ ಬರಲಿರುವ ಸುದ್ಧಿ ಮನೆಮಂದಿಯಲ್ಲಿ ಸಂಭ್ರಮ ತಂದಿದೆ.

ಪ್ರಸ್ತುತ ರಣವೀರ್ ಸಿಂಗ್ ಅವರು ತಮ್ಮ ಇತ್ತೀಚಿನ ಚಿತ್ರ ‘ಧುರಂಧರ್ 2’ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಸ್ಪೈ ಥ್ರಿಲ್ಲರ್ ಸಿನಿಮಾ ಬಿಡುಗಡೆಯಾಗಿ ಒಂದು ತಿಂಗಳಾದರೂ ಬಾಕ್ಸ್ ಆಫೀಸ್‌ನಲ್ಲಿ ಗಟ್ಟಿಯಾಗಿ ನಿಂತು ದಾಖಲೆಗಳನ್ನು ಬರೆಯುತ್ತಿದೆ. ಈ ಗೆಲುವಿನ ಬೆನ್ನಲ್ಲೇ ಅವರು ಎರಡನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ.

ಇನ್ನೊಂದೆಡೆ, ದೀಪಿಕಾ ಪಡುಕೋಣೆ ಕೂಡ ಸಾಲು ಸಾಲು ದೊಡ್ಡ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಶಾರುಖ್ ಖಾನ್ ಜೊತೆ ಸಿದ್ದಾರ್ಥ್ ಆನಂದ್ ಮಾಡುತ್ತಿರುವ ‘ಕಿಂಗ್’ ಸಿನಿಮಾದಲ್ಲಿ ದೀಪಿಕಾ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ, ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ಅಟ್ಲಿ ಕಾಂಬಿನೇಷನ್‌ನ ಬಹುನಿರೀಕ್ಷಿತ ಸಿನಿಮಾದಲ್ಲೂ ದೀಪಿಕಾ ನಟಿಸುತ್ತಿದ್ದಾರೆ.

ಇದನ್ನೂ ಓದಿ: ‘ರಾಕಾ’ ಸಿನಿಮಾ: ದೀಪಿಕಾ ಪಡುಕೋಣೆಗೆ ಹೀರೋಗೆ ಸರಿಸಮಾನವಾಗಿ ಸಂಭಾವನೆ ಸಿಕ್ಕಿತೇ?

ದೀಪಿಕಾ ಪಡುಕೋಣೆ ಅವರಿಗೆ ಸಖತ್ ಬೇಡಿಕೆ ಇದೆ. ಆದರೆ ಅವರು ಎಲ್ಲ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. 8 ಗಂಟೆ ಮಾತ್ರ ಕೆಲಸದ ಅವಧಿ ಇರಬೇಕು ಎಂದು ಅವರು ಷರತ್ತು ಹಾಕುತ್ತಿದ್ದಾರೆ. ಅದರಿಂದಾಗಿ ಕೆಲವು ಸಿನಿಮಾಗಳು ಅವರ ಕೈತಪ್ಪುತ್ತಿವೆ. ಈಗ ಪ್ರಗ್ನೆಂಟ್ ಕೂಡ ಆಗಿರುವುದರಿಂದ ಸಹಜವಾಗಿಯೇ ಅವರು ಬ್ರೇಕ್ ತೆಗೆದುಕೊಳ್ಳಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೈಕ್ ಟ್ಯಾಕ್ಸಿ ವಿಚಾರದಲ್ಲಿ ಬಿಗ್ ಶಾಕ್ ಕೊಟ್ಟ ರಾಜ್ಯ ಸರ್ಕಾರ! ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಲು ನಿರ್ಧಾರ – Kannada News | Karnataka Govt Challenges High Court’s Bike Taxi Order in Supreme Court

ಬೈಕ್ ಟ್ಯಾಕ್ಸಿ ವಿಚಾರದಲ್ಲಿ ಬಿಗ್ ಶಾಕ್ ಕೊಟ್ಟ ರಾಜ್ಯ ಸರ್ಕಾರ! ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಲು ನಿರ್ಧಾರ
Image Credit source: ANI

ಬೆಂಗಳೂರು, ಏಪ್ರಿಲ್ 19: ಬೈಕ್ ಟ್ಯಾಕ್ಸಿ (Bike Taxi) ವಿಚಾರದಲ್ಲಿ ರಾಜ್ಯ ಸರ್ಕಾರ ಮತ್ತು ಸಾರಿಗೆ ಇಲಾಖೆಯ ನಡುವೆ ನಡೆಯುತ್ತಿರುವ ಕಾನೂನು ಹೋರಾಟ ಮತ್ತೊಂದು ಹಂತಕ್ಕೆ ತಲುಪಿದೆ. ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ (Supreme Court) ಮೊರೆ ಹೋಗಲು ಸಿದ್ಧವಾಗಿದೆ. ಈ ಕುರಿತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್ ನೀಡಿದ್ದಾರೆ. ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗೆ ನಿಯಮಾವಳಿ ರೂಪಿಸುವ ಉದ್ದೇಶ ಇಲ್ಲವೆಂದು ತಿಳಿಸಿರುವ ಸರ್ಕಾರ, ಹೈಕೋರ್ಟ್ ತೀರ್ಪನ್ನು ಸವಾಲು ಮಾಡಲು ಮುಂದಾಗಿದೆ.

ಏಪ್ರಿಲ್ 23ರೊಳಗೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಸಿದ್ಧತೆ

ಕಳೆದ ವರ್ಷ ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠವು ಬೈಕ್ ಟ್ಯಾಕ್ಸಿಗಳನ್ನು ಅನಧಿಕೃತವೆಂದು ಘೋಷಿಸಿ ರಾಜ್ಯದಲ್ಲಿ ನಿಷೇಧಿಸಿತ್ತು. ಆದರೆ ಈ ವರ್ಷದ ಜನವರಿ 23ರಂದು ದ್ವಿಸದಸ್ಯ ಪೀಠವು ಬೈಕ್ ಟ್ಯಾಕ್ಸಿಗಳಿಗೆ ಲೈಸೆನ್ಸ್ ನೀಡುವುದನ್ನು ಸರ್ಕಾರ ನಿರಾಕರಿಸುವಂತಿಲ್ಲ. ಬೈಕ್ ಟ್ಯಾಕ್ಸಿ ಅಗ್ರಿಗೇಟರ್‌ಗಳು ಅನುಮತಿ ಕೋರಿ ಅರ್ಜಿ ಸಲ್ಲಿಸಿದರೆ, ಆ ಅರ್ಜಿಗಳನ್ನು ಪರಿಗಣಿಸಿ ಪರವಾನಗಿ ನೀಡಬೇಕು ಎಂದು ಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅಡಿಯಲ್ಲಿ ಯೆಲ್ಲೋ ಬೋರ್ಡ್ ಬೈಕ್ ಟ್ಯಾಕ್ಸಿಗಳಿಗೆ ಅವಕಾಶ ನೀಡಲು ಸೂಚಿಸಿತ್ತು. ಈ ತೀರ್ಪು ರಾಜ್ಯ ಸರ್ಕಾರದ ನಿಲುವಿಗೆ ವಿರುದ್ಧವಾಗಿರುವುದರಿಂದ, ಮೇಲ್ಮನವಿ ಸಲ್ಲಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ಇದನ್ನೂ ಓದಿ ಕೊನೆಗೂ ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಗ್ರೀನ್ ಸಿಗ್ನಲ್ ನೀಡಿದ ಹೈಕೋರ್ಟ್

ಈ ನಡುವೆ, ರಾಜ್ಯ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮ ಟಿವಿ9ಗೆ ಪ್ರತಿಕ್ರಿಯೆ ನೀಡಿ, ಬೈಕ್ ಟ್ಯಾಕ್ಸಿಯ ವಿಷಯದಲ್ಲಿ ಸರ್ಕಾರದ ನಿಲುವು ಸರಿಯಾದದ್ದೇ ಆಗಿದ್ದು, ಕಾನೂನು ಸ್ಪಷ್ಟತೆ ಅಗತ್ಯವಾಗಿದೆ. ಸಾರಿಗೆ ಇಲಾಖೆ ಈಗಾಗಲೇ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ, ಏಪ್ರಿಲ್ 23ರೊಳಗೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದೆ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: CSK ತಂಡಕ್ಕೆ ಮತ್ತೊಂದು ಆಘಾತ..! – Kannada News | IPL 2026: CSK’s Ayush Mhatre Suffers Hamstring Tear; Likely to Be Sidelined”

ಐಪಿಎಲ್ 2026ರ ಸೀಸನ್‌ನಲ್ಲಿ ಅದ್ಭುತ ಲಯದಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಯುವ ದಾಂಡಿಗ ಆಯುಷ್ ಮ್ಹಾತ್ರೆ ಸ್ನಾಯು ಸೆಳೆತದ (Hamstring Tear) ಸಮಸ್ಯೆಗೀಡಾಗಿದ್ದಾರೆ. ಈ ವಿಷಯವನ್ನು ತಂಡದ ಬ್ಯಾಟಿಂಗ್ ಕೋಚ್ ಮೈಕಲ್ ಹಸ್ಸಿ ಖಚಿತಪಡಿಸಿದ್ದು, ಇದು ತಂಡಕ್ಕೆ ತುಂಬಲಾರದ ನಷ್ಟ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಏಪ್ರಿಲ್ 18ರಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದ ಐದನೇ ಓವರ್‌ನಲ್ಲಿ ಎರಡನೇ ರನ್ ಓಡಲು ಪ್ರಯತ್ನಿಸಿದ ಮ್ಹಾತ್ರೆ ಎಡಗಾಲಿನ ಸ್ನಾಯು ಸೆಳೆತಕ್ಕೆ ಒಳಗಾದರು. ನೋವಿನ ನಡುವೆಯೂ ಬ್ಯಾಟಿಂಗ್ ಮುಂದುವರಿಸಿದ ಅವರು 13 ಎಸೆತಗಳಲ್ಲಿ 30 ರನ್ ಗಳಿಸಿ ಔಟಾದರು. ಪಂದ್ಯದ ನಂತರ ಅವರು ನಡೆಯಲು ಕಷ್ಟಪಡುತ್ತಿದ್ದುದರಿಂದ ಸಿಬ್ಬಂದಿಯ ನೆರವಿನೊಂದಿಗೆ ಮೈದಾನದಿಂದ ಹೊರನಡೆದರು.

ಗಾಯದ ತೀವ್ರತೆ ಎಷ್ಟು?

ಆಯುಷ್ ಮ್ಹಾತ್ರೆ ಅವರ ಗಾಯ ನೋಡಲು ಗಂಭೀರವಾಗಿ ಕಂಡುಬರುತ್ತಿದೆ. ತಂಡದ ವೈದ್ಯಕೀಯ ತಂಡವು ಸ್ಕ್ಯಾನಿಂಗ್ ವರದಿಗಾಗಿ ಕಾಯುತ್ತಿದೆ. ಆದರೆ ಪ್ರಾಥಮಿಕ ವರದಿಯ ಪ್ರಕಾರ ಇದು ಹ್ಯಾಮ್‌ಸ್ಟ್ರಿಂಗ್ ಟಿಯರ್ ಆಗಿದ್ದು, ಚೇತರಿಸಿಕೊಳ್ಳಲು ಸಮಯ ಬೇಕಾಗಬಹುದು ಎಂದು ಮೈಕಲ್ ಹಸ್ಸಿ ತಿಳಿಸಿದ್ದಾರೆ.

ಸಿಎಸ್‌ಕೆಗೆ ಹಿನ್ನಡೆ:

ಆಯುಷ್ ಮ್ಹಾತ್ರೆ ಅಲಭ್ಯರಾದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಹಿನ್ನಡೆಯಾಗುವುದರಲ್ಲಿ ಅನುಮಾನವೇ ಇಲ್ಲ. ಏಕೆಂದರೆ ಈ ಬಾರಿಯ ಟೂರ್ನಿಯಲ್ಲಿ ಸಿಎಸ್​ಕೆ ಪರ ಸ್ಥಿರ ಪ್ರದರ್ಶನ ನೀಡಿದ್ದು ಆಯುಷ್ ಮಾತ್ರ. ಆಡಿದ 6 ಪಂದ್ಯಗಳಲ್ಲಿ 177ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿರುವ ಮ್ಹಾತ್ರೆ ಒಟ್ಟು 201 ರನ್​ ಕಲೆಹಾಕಿದ್ದಾರೆ. ಇದರ ನಡುವೆ 2 ಅರ್ಧಶತಕಗಳನ್ನು ಕೂಡ ಬಾರಿಸಿದ್ದಾರೆ. ಒಂದು ವೇಳೆ ಆಯುಷ್ ಮ್ಹಾತ್ರೆ ಅಲಭ್ಯರಾದರೆ ತಂಡದ ಬ್ಯಾಟಿಂಗ್ ಬಲವನ್ನು ಕುಗ್ಗಿಸಲಿದೆ.

ಗಾಯದ ಸಮಸ್ಯೆಯಲ್ಲಿ ಸಿಎಸ್‌ಕೆ:

ಈಗಾಗಲೇ ಖಲೀಲ್ ಅಹ್ಮದ್, ನಾಥನ್ ಎಲ್ಲಿಸ್ ಮತ್ತು ಸ್ಪೆನ್ಸರ್ ಜಾನ್ಸನ್ ಅವರಂತಹ ಪ್ರಮುಖ ಆಟಗಾರರು ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದಾರೆ. ಮತ್ತೊಂದೆಡೆ ಮಹೇಂದ್ರ ಸಿಂಗ್ ಧೋನಿ ಕೂಡ ಫಿಟ್​ನೆಸ್ ಸಮಸ್ಯೆಗೀಡಾಗಿದ್ದಾರೆ.

ಇದನ್ನೂ ಓದಿ: ಸೂರ್ಯನಿಗೆ ಗೇಟ್ ಪಾಸ್ ಖಚಿತ: ಇವರಂತೆ ಟೀಮ್ ಇಂಡಿಯಾದ ಮುಂದಿನ ನಾಯಕ..!

ಇದೀಗ ಆಯುಷ್ ಮ್ಹಾಮ್ಹಾತ್ರೆ ಅವರ ಗಾಯವು ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಮ್ಯಾನೇಜ್‌ಮೆಂಟ್‌ಗೆ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ. ಸದ್ಯ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿರುವ ಸಿಎಸ್‌ಕೆ, ಏಪ್ರಿಲ್ 23ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಹೈವೋಲ್ಟೇಜ್ ಪಂದ್ಯವನ್ನು ಎದುರಿಸಲಿದೆ.

Source link

ಅಕ್ಷಯ ತೃತೀಯ ಸ್ಪೆಷಲ್: ಒಡವೆ, ಡಿಜಿಟಲ್ ಗೋಲ್ಡ್, ಇಟಿಎಫ್- ಬಂಗಾರದ ಲಾಭ ಪಡೆಯಲು ಯಾವುದು ಬೆಸ್ಟ್? – Kannada News | Digital, ETF or Jewellery, which works best for investment in gold

ನವದೆಹಲಿ, ಏಪ್ರಿಲ್ 19: ಇವತ್ತು ಅಕ್ಷಯ ತೃತೀಯ. ಈ ದಿನ ಚಿನ್ನ ಖರೀದಿಸಿದರೆ ಮುಂದಿನ ಅಕ್ಷಯ ತೃತೀಯದವರೆಗೂ (Akshaya Thritiya) ಮನೆ ಸಮೃದ್ಧವಾಗಿರುತ್ತದೆ ಎನ್ನುವ ನಂಬಿಕೆ ಇದೆ. ಹೆಚ್ಚಿನ ಜನರು ಚಿನ್ನದ ಒಡವೆ ಖರೀದಿಸುತ್ತಾರೆ. ಚಿನ್ನವೇ ಆಗಬೇಕೆಂದಿಲ್ಲ. ಕೆಲವರು ಬೆಳ್ಳಿ, ಪ್ಲಾಟಿನಂ, ಡೈಮಂಡ್ ಇತ್ಯಾದಿ ಅಮೂಲ್ಯ ಲೋಹಗಳ ಆಭರಣಗಳನ್ನು ಖರೀದಿಸುವುದುಂಟು. ಇನ್ನೂ ಕೆಲವರು, ಚಿನ್ನಕ್ಕೆ ಸಂಬಂಧಿಸಿದ ಹೂಡಿಕೆಗಳಲ್ಲಿ ಹಣ ತೊಡಗಿಸುವುದುಂಟು. ಆದರೆ, ಚಿನ್ನದ ಮೇಲೆ ಹಣ ಹಾಕುವುದಾದರೆ ಒಡವೆಯೋ, ಅಥವಾ ಇನ್ನಿತರ ಹೂಡಿಕೆಗಳೋ?

ಚಿನ್ನದ ಒಡವೆ ಎಷ್ಟು ಸೂಕ್ತ?

ಭಾರತದಲ್ಲಿ ಚಿನ್ನದ ಖರೀದಿ ಎಂದರೆ ಹೆಚ್ಚಿನ ಜನರಿಗೆ ಆಭರಣವೇ ಮೊದಲು ಬರುತ್ತದೆ. ಜನಸಾಮಾನ್ಯರು ಗೋಲ್ಡ್ ಕಾಯಿನ್, ಗೋಲ್ಡ್ ಬಿಸ್ಕತ್ ಖರೀದಿಸುವುದು ಬಹಳ ಕಡಿಮೆ. ಆದರೆ, ತಜ್ಞರ ಪ್ರಕಾರ ಚಿನ್ನದ ಒಡವೆಯನ್ನು ಹೂಡಿಕೆಗಾಗಿ ಖರೀದಿಸುತ್ತೇವೆನ್ನುವುದು ತಪ್ಪು ನಿರ್ಧಾರವಾಗುತ್ತದೆ. ಆಭರಣಕ್ಕೆ ಶೇ. 3 ಜಿಎಸ್​ಟಿ, ಶೇ. 25ರವರೆಗೂ ಮೇಕಿಂಗ್ ಚಾರ್ಜಸ್ ಕೊಡಬೇಕಾಗುತ್ತದೆ.

ಇದನ್ನೂ ಓದಿ: ಕಳೆದ 5 ವರ್ಷದಿಂದ ಅಕ್ಷಯ ತೃತೀಯದಂದು ಚಿನ್ನ ಖರೀದಿಸುತ್ತಿದ್ದರೆ ಇವತ್ತಿನ ಮೌಲ್ಯವೆಷ್ಟಿರುತ್ತಿತ್ತು ಗೊತ್ತಾ?

ಆಭರಣವನ್ನು ಮಾರುವಾಗಲೂ ಕೂಡ ತೊಡಕುಗಳಿವೆ. ವೇಸ್ಟೇಜ್ ಚಾರ್ಜಸ್ ಇತ್ಯಾದಿಯನ್ನು ಕಳೆಯಲಾಗುತ್ತದೆ. ಮಾರುಕಟ್ಟೆ ಬೆಲೆ ಪೂರ್ಣವಾಗಿ ಸಿಗುವುದಿಲ್ಲ. ಶೇ. 20ರಿಂದ 40ರಷ್ಟು ನಷ್ಟವಾಗಬಹುದು.

ಡಿಜಿಟಲ್ ಗೋಲ್ಡ್​ನಲ್ಲಿ ಹೂಡಿಕೆ

ಡಿಜಿಟಲ್ ಗೋಲ್ಡ್ ಈಗೀಗ ಜನಪ್ರಿಯವಾಗುತ್ತಿದೆ. ಇದರಲ್ಲಿ 24 ಕ್ಯಾರಟ್ ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ಎಷ್ಟು ಮೊತ್ತ ಬೇಕಾದರೂ ಖರೀದಿಸಬಹುದು. ಗ್ರಾಮ್ ಲೆಕ್ಕದಲ್ಲಿ ಖರೀದಿಸಬಹುದು, ಹಣದ ಲೆಕ್ಕದಲ್ಲಿ ಖರೀದಿಸಬಹುದು. ಹೀಗಾಗಿ, ಚಿನ್ನದ ಮೇಲೆ ಹೂಡಿಕೆಗೆ ಬಹಳ ಸರಳ ಹಾಗೂ ಸುಲಭ ಯಂತ್ರ ಇದಾಗಿದೆ. ಇದರ ಒಂದೇ ಹಿನ್ನಡೆ ಎಂದರೆ, ಡಿಜಿಟಲ್ ಗೋಲ್ಡ್ ಸರ್ವಿಸ್ ಯಾವುದೇ ಪ್ರಾಧಿಕಾರದ ನಿಯಂತ್ರಣಕ್ಕೆ ಒಳಪಡುವುದಿಲ್ಲ.

ಇದನ್ನೂ ಓದಿ: ಆರೂವರೆ ವರ್ಷದಲ್ಲಿ 4 ಪಟ್ಟು ಲಾಭ ಕೊಟ್ಟ ಗೋಲ್ಡ್ ಬಾಂಡ್; ಒಂದು ಲಕ್ಷಕ್ಕೆ 4 ಲಕ್ಷ ರಿಟರ್ನ್ಸ್

ಗೋಲ್ಡ್ ಇಟಿಎಫ್

ಗೋಲ್ಡ್ ಇಟಿಎಫ್​ಗಳು ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ಚಿನ್ನದ ಟ್ರೇಡಿಂಗ್ ಮಾಡುವ ಫಂಡ್​ಗಳಾಗಿವೆ. ಷೇರುಗಳ ರೀತಿಯಲ್ಲಿ ಯೂನಿಟ್​ಗಳನ್ನು ಖರೀದಿಸಬಹುದು ಮತ್ತು ಮಾರಬಹುದು. ಇವು ಬಹುತೇಕ ಚಿನ್ನದ ಮಾರುಕಟ್ಟೆ ಬೆಲೆಯನ್ನು ಟ್ರ್ಯಾಕ್ ಮಾಡುತ್ತವೆ. ಇಟಿಎಫ್ ಫಂಡ್​ಗಳು ನೈಜ ಚಿನ್ನವನ್ನು ಖರೀದಿಸುತ್ತವೆ ಮತ್ತು ಮಾರುತ್ತವಾದರೂ, ಹೂಡಿಕೆದಾರರಿಗೆ ಭೌತಿಕ ಚಿನ್ನ ಸಿಗುವುದಿಲ್ಲ.

ಇನ್ನಷ್ಟು ಪರ್ಸಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಗುಜರಾತ್​ನಲ್ಲಿ ಬೈಕ್ ಓವರ್ ಟೇಕ್ ಮಾಡುವ ವಿಚಾರಕ್ಕೆ ಜಗಳ, ಕೊಲೆ, ಕೋಮುಗಲಭೆ – Kannada News | Minor Road Dispute Turns Deadly in Dhandhuka, Triggers Arson and Arrests

ಅಹಮದಾಬಾದ್, ಏಪ್ರಿಲ್ 19: ರಸ್ತೆಯಲ್ಲಿ ಸಂಚರಿಸುವಾಗ ಸಾಮಾನ್ಯ ಎನಿಸುವ ‘ಓವರ್‌ಟೇಕಿಂಗ್’ ವಿಚಾರವು ಧಂಧುಕಾ ಪಟ್ಟಣದಲ್ಲಿ ರಕ್ತಪಾತಕ್ಕೆ ನಾಂದಿ ಹಾಡಿತು. 35 ವರ್ಷದ ಧರ್ಮೇಶ್ ಎಂಬ ಯುವಕ ಮತ್ತು ಇಬ್ಬರು ಹಿಂದೂಯೇತರ ಯುವಕರ ನಡುವೆ ಬೈಕ್ ಓವರ್‌ಟೇಕ್ ಮಾಡುವ ವಿಚಾರದಲ್ಲಿ ಮಾತಿನ ಚಕಮಕಿ ನಡೆಯಿತು. ಆದರೆ ಈ ಕ್ಷುಲ್ಲಕ ಕಾರಣವೇ ಅಂತಿಮವಾಗಿ ಕೊಲೆ(Murder)ಯಲ್ಲಿ ಅಂತ್ಯವಾಯಿತು. ಬಳಿಕ ಕೋಮುಗಲಭೆಗೆ ಕಾರಣವಾಯಿತು.

ವಾಗ್ವಾದ, ಹತ್ಯೆ ಮತ್ತು ಆಕ್ರೋಶ
ಘಟನೆಯ ವೇಳೆ ಧರ್ಮೇಶ್ ಮತ್ತು ಎದುರಾಳಿಗಳ ನಡುವಿನ ವಾಗ್ವಾದ ವಿಕೋಪಕ್ಕೆ ಹೋಗಿ, ಧರ್ಮೇಶ್‌ಗೆ ಚಾಕುವಿನಿಂದ ಇರಿಯಲಾಯಿತು. ಗಂಭೀರವಾಗಿ ಗಾಯಗೊಂಡ ಆತ ಸ್ಥಳದಲ್ಲೇ ಮೃತಪಟ್ಟ ಸುದ್ದಿ ಹರಡುತ್ತಿದ್ದಂತೆ ಪಟ್ಟಣದಲ್ಲಿ ಆಕ್ರೋಶದ ಅಲೆ ಎದ್ದಿತು. ಶಾಂತವಾಗಿದ್ದ ಧಂಧುಕಾ ಮಾರುಕಟ್ಟೆ ಕ್ಷಣಾರ್ಧದಲ್ಲಿ ರಣರಂಗವಾಯಿತು.

ಬೆಂಕಿಗೆ ಆಹುತಿಯಾದ ಮಾರುಕಟ್ಟೆ
ಯುವಕನ ಹತ್ಯೆಯಿಂದ ರೊಚ್ಚಿಗೆದ್ದ ಉದ್ರಿಕ್ತ ಗುಂಪೊಂದು ರಸ್ತೆಗಿಳಿದು ವಿಧ್ವಂಸಕ ಕೃತ್ಯಕ್ಕೆ ಮುಂದಾಯಿತು. ಮಾರುಕಟ್ಟೆಯಲ್ಲಿದ್ದ ಅಂಗಡಿಗಳಿಗೆ ಬೆಂಕಿ ಹಚ್ಚಲಾಯಿತು ಮತ್ತು ವಾಹನಗಳನ್ನು ಧ್ವಂಸಗೊಳಿಸಲಾಯಿತು. ಆತಂಕಕ್ಕೊಳಗಾದ ವ್ಯಾಪಾರಿಗಳು ತಮ್ಮ ವ್ಯಾಪಾರ-ವಹಿವಾಟನ್ನು ಅರ್ಧಕ್ಕೇ ನಿಲ್ಲಿಸಿ, ಅಂಗಡಿಗಳನ್ನು ಮುಚ್ಚಿ ಓಡಿಹೋದರು. ಇಡೀ ಪಟ್ಟಣದಲ್ಲಿ ದಟ್ಟವಾದ ಹೊಗೆ ಮತ್ತು ಜನರ ಕಿರುಚಾಟ ತುಂಬಿಹೋಗಿತ್ತು.

ಪೊಲೀಸ್ ಬಿಗಿ ಬಂದೋಬಸ್ತ್ ಮತ್ತು ಬಂಧನ
ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಓಂ ಪ್ರಕಾಶ್ ಜಾಟ್ ಅವರು ಬೃಹತ್ ಪೊಲೀಸ್ ಪಡೆಯೊಂದಿಗೆ ಸ್ಥಳಕ್ಕೆ ಧಾವಿಸಿದರು. ಲಾಠಿ ಪ್ರಹಾರ ಮತ್ತು ಕಠಿಣ ಕ್ರಮಗಳ ಮೂಲಕ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿಗಳಾದ ಸಮೀರ್ ಮತ್ತು ರಿಜ್ವಾನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಕಿ ಹಚ್ಚುವಿಕೆ ಮತ್ತು ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡಿದ ಆರೋಪದ ಮೇಲೆ ಇತರ 15 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.

ಮತ್ತಷ್ಟು ಓದಿ: ಗೊಂಬೆಯಂತಿದ್ದ ಹೆಂಡತಿಯನ್ನು ಬಿಟ್ಟು ಪರಸ್ತ್ರೀ ಜತೆಗೆ ಸಂಬಂಧ: ಪೆನ್ ಡ್ರೈವ್​​ನಲ್ಲಿತ್ತು ಗಂಡನ ರಾಸಲೀಲೆ, ಕಿರುಕುಳದ ಸಾಕ್ಷಿ!

ಶಾಂತಿಗಾಗಿ ಮನವಿ
ಪ್ರಸ್ತುತ ಧಂಧುಕಾದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಪೊಲೀಸರು ಪಟ್ಟಣದಾದ್ಯಂತ ಫ್ಲ್ಯಾಗ್ ಮಾರ್ಚ್ ನಡೆಸುತ್ತಿದ್ದಾರೆ. ಯಾರೂ ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳನ್ನು ಹರಡಬಾರದು ಮತ್ತು ಶಾಂತಿ ಕಾಪಾಡಲು ಸಹಕರಿಸಬೇಕು” ಎಂದು ಎಸ್‌ಪಿ ಜಾಟ್ ಮನವಿ ಮಾಡಿದ್ದಾರೆ. ಒಂದು ಕ್ಷಣದ ಸಿಟ್ಟು ಮತ್ತು ಅಸಹನೆ ಹೇಗೆ ಒಂದು ಸಂಸಾರವನ್ನು ಬೀದಿಗೆ ತಳ್ಳಬಹುದು ಮತ್ತು ಇಡೀ ಸಮಾಜದ ಶಾಂತಿಯನ್ನು ಕದಡಬಹುದು ಎಂಬುದಕ್ಕೆ ಧಂಧುಕಾದ ಈ ಘಟನೆ ಒಂದು ಕರಾಳ ಉದಾಹರಣೆಯಾಗಿದೆ. ಕಾನೂನು ತನ್ನ ಕೆಲಸ ಮಾಡುತ್ತಿದ್ದರೂ, ಕಳೆದುಹೋದ ಜೀವ ಮತ್ತು ಸುಟ್ಟುಹೋದ ಜೀವನಗಳು ಮಾತ್ರ ಮರಳಿ ಬಾರದು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Gold Rates: ಹತ್ತು ಗ್ರಾಮ್ ಚಿನ್ನದ ಬೆಲೆ 10 ದಿನದಲ್ಲಿ 6,100 ರೂ ಏರಿಕೆ – Kannada News | Gold Price Today on 19th April 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಏಪ್ರಿಲ್ 19: ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold Rates) ತೂಗುಯ್ಯಾಲೆಯಂತೆ ಆಡುತ್ತಿವೆ. ಈ ವಾರಾಂತ್ಯದಲ್ಲಿ ಚಿನ್ನದ ಬೆಲೆ ಗ್ರಾಮ್​ಗೆ 145 ರೂ ಏರಿಕೆಯಾಗಿದೆ. ಬೆಳ್ಳಿ ಬೆಲೆ 10 ರೂ ಹಿಗ್ಗಿದೆ. ಕಳೆದ ಎರಡು ವಾರಗಳಿಂದ ಕಣ್ಣಾಮುಚ್ಚಾಳೆ ಆಡುತ್ತಿದ್ದರೂ ಹತ್ತು ದಿನದಲ್ಲಿ ಇವೆರಡರ ಬೆಲೆಗಳು ಸಖತ್ತಾಗಿ ಏರಿವೆ. ಚಿನ್ನದ ಬೆಲೆ ಭಾರತದಲ್ಲಿ 10 ದಿನದಲ್ಲಿ ಸುಮಾರು 600ಕ್ಕೂ ಅಧಿಕ ಮೊತ್ತದಷ್ಟು ಹೆಚ್ಚಳ ಕಂಡಿದೆ. ಬೆಳ್ಳಿ ಬೆಲೆ 25 ರೂಗಳಷ್ಟು ದುಬಾರಿಗೊಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,42,800 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,55,780 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 27,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,42,800 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 27,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 28,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಏಪ್ರಿಲ್ 19ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,578 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,280 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,684 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 275 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,578 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,280 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 275 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,280 ರೂ
  • ಚೆನ್ನೈ: 14,360 ರೂ
  • ಮುಂಬೈ: 14,280 ರೂ
  • ದೆಹಲಿ: 14,295 ರೂ
  • ಕೋಲ್ಕತಾ: 14,280 ರೂ
  • ಕೇರಳ: 14,280 ರೂ
  • ಅಹ್ಮದಾಬಾದ್: 14,285 ರೂ
  • ಜೈಪುರ್: 14,295 ರೂ
  • ಲಕ್ನೋ: 14,295 ರೂ
  • ಭುವನೇಶ್ವರ್: 14,280 ರೂ

ಇದನ್ನೂ ಓದಿ: ಕಳೆದ 5 ವರ್ಷದಿಂದ ಅಕ್ಷಯ ತೃತೀಯದಂದು ಚಿನ್ನ ಖರೀದಿಸುತ್ತಿದ್ದರೆ ಇವತ್ತಿನ ಮೌಲ್ಯವೆಷ್ಟಿರುತ್ತಿತ್ತು ಗೊತ್ತಾ?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 593 ರಿಂಗಿಟ್ (13,896 ರುಪಾಯಿ)
  • ದುಬೈ: 544.50 ಡಿರಾಮ್ (13,728 ರುಪಾಯಿ)
  • ಅಮೆರಿಕ: 152 ಡಾಲರ್ (14,076 ರುಪಾಯಿ)
  • ಸಿಂಗಾಪುರ: 190.40 ಸಿಂಗಾಪುರ್ ಡಾಲರ್ (13,848 ರುಪಾಯಿ)
  • ಕತಾರ್: 540.50 ಕತಾರಿ ರಿಯಾಲ್ (13,730 ರೂ)
  • ಸೌದಿ ಅರೇಬಿಯಾ: 552 ಸೌದಿ ರಿಯಾಲ್ (13,627 ರುಪಾಯಿ)
  • ಓಮನ್: 57.75 ಒಮಾನಿ ರಿಯಾಲ್ (13,891 ರುಪಾಯಿ)
  • ಕುವೇತ್: 44.86 ಕುವೇತಿ ದಿನಾರ್ (13,567 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 275 ರೂ
  • ಚೆನ್ನೈ: 280 ರೂ
  • ಮುಂಬೈ: 275 ರೂ
  • ದೆಹಲಿ: 275 ರೂ
  • ಕೋಲ್ಕತಾ: 275 ರೂ
  • ಕೇರಳ: 280 ರೂ
  • ಅಹ್ಮದಾಬಾದ್: 275 ರೂ
  • ಜೈಪುರ್: 275 ರೂ
  • ಲಕ್ನೋ: 275 ರೂ
  • ಭುವನೇಶ್ವರ್: 280 ರೂ
  • ಪುಣೆ: 275

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮಮತೆಯ ಮುಂದೆ ಮಣಿದ ವೈಕಲ್ಯ, ಬಾಯಿಯಿಂದ ಬಟ್ಟೆ ಹೊಲಿಯುತ್ತಾ ಮಕ್ಕಳ ಬಾಳು ಬೆಳಗಿದ ಮಹಿಳೆಯ ಅಪೂರ್ವ ಸಾಹಸ – Kannada News | Defying Limits: 81 Year Old Woman Without Limbs Raises Three Children

ಬೈಯಿಮ್, ಏಪ್ರಿಲ್ 19: ಜೀವನದಲ್ಲಿ ಸಣ್ಣಪುಟ್ಟ ಕಷ್ಟ ಬಂದಾಗ ನಾವು ಕುಗ್ಗಿಹೋಗುತ್ತೇವೆ. ಆದರೆ ಚೀನಾದ ಗನ್ಸು ಪ್ರಾಂತ್ಯದ ವಾಂಗ್ ಯುಶಿ ಎಂಬ 81 ವರ್ಷದ ವೃದ್ಧೆಯ ಕಥೆ ಕೇಳಿದರೆ, ನಮ್ಮ ಸಮಸ್ಯೆಗಳೆಲ್ಲವೂ ಅತ್ಯಂತ ಚಿಕ್ಕವು ಎನಿಸುತ್ತವೆ. ಹುಟ್ಟುತ್ತಲೇ ಕೈಕಾಲುಗಳಿಲ್ಲದಿದ್ದರೂ, ಶೂನ್ಯದಿಂದ ಬದುಕು ಕಟ್ಟಿಕೊಂಡ ಈಕೆ ಇಂದು ಚೀನಾದಲ್ಲಿ “ಅತ್ಯಂತ ಬಲಿಷ್ಠ ತಾಯಿ” ಎಂದು ಕರೆಸಿಕೊಳ್ಳುತ್ತಿದ್ದಾರೆ.

ಹೆಸರಿಲ್ಲದ 27 ವರ್ಷಗಳು ಮತ್ತು ಅತಂತ್ರ ಬಾಲ್ಯ
ವಾಂಗ್ ಅವರ ಬದುಕು ಹೋರಾಟದಿಂದಲೇ ಆರಂಭವಾಯಿತು. ಜನ್ಮಜಾತ ವೈಕಲ್ಯದಿಂದ ಹುಟ್ಟಿದ ಈಕೆಗೆ ಇಪ್ಪತ್ತರ ದಶಕದವರೆಗೂ ಸ್ವಂತ ಹೆಸರೂ ಇರಲಿಲ್ಲ, ಎಲ್ಲರೂ ಆಕೆಯನ್ನು ಗುರುತಿಸುತ್ತಿದ್ದದ್ದು ಅವಳ ವೈಕಲ್ಯದಿಂದಲೇ. ಕೊನೆಗೆ 27ನೇ ವಯಸ್ಸಿನಲ್ಲಿ ಅಧಿಕಾರಿಯೊಬ್ಬರು ‘ವಾಂಗ್ ಯುಶಿ’ ಎಂದು ಹೆಸರಿಟ್ಟಾಗ ಆಕೆಗೆ ಒಂದು ಅಧಿಕೃತ ಗುರುತು ಸಿಕ್ಕಿತು.

ಒಬ್ಬಂಟಿಯಾಗಿ ಮೂವರು ಮಕ್ಕಳನ್ನು ಸಾಕಿ ಸಲಹಿದ ತಾಯಿ
ಮದುವೆಯ ನಂತರ ವಾಂಗ್ ಅವರಿಗೆ ಒಬ್ಬ ಮಗಳು ಮತ್ತು ಇಬ್ಬರು ಗಂಡು ಮಕ್ಕಳಾದರು. ಬಡತನದ ಕಾರಣ ಅವರ ಪತಿ ಕೆಲಸಕ್ಕಾಗಿ ಸದಾ ಊರು ಬಿಟ್ಟಿರಬೇಕಿತ್ತು. ಇಂತಹ ಸ್ಥಿತಿಯಲ್ಲಿ, ಕೈಕಾಲುಗಳಿಲ್ಲದ ವಾಂಗ್ ಅವರ ಮೇಲೆ ಇಡೀ ಮನೆಯ ಜವಾಬ್ದಾರಿ ಬಿತ್ತು. ಆದರೆ ಅವರು ಎದೆಗುಂದಲಿಲ್ಲ. ಕೃಷಿ ಪ್ರಧಾನವಾದ ಆ ಹಳ್ಳಿಯಲ್ಲಿ ಮನೆಯ ಕೆಲಸಗಳನ್ನು ಅವರು ಮಾಡತೊಡಗಿದ ರೀತಿ ಕಂಡರೆ ಇಂದಿಗೂ ಯಾರಿಗಾದರೂ ಅಚ್ಚರಿಯಾಗುತ್ತದೆ.

ಬಾಯಲ್ಲೇ ಹೊಲಿಗೆ, ಮೊಣಕೈಯಲ್ಲಿ ಚಾಪ್‌ಸ್ಟಿಕ್
ವಾಂಗ್ ಅವರು ತಮ್ಮ ದೈನಂದಿನ ಕೆಲಸಗಳಿಗಾಗಿ ಸ್ವತಃ ಹೊಸ ವಿಧಾನಗಳನ್ನು ಕಂಡುಕೊಂಡರು, ಸ್ಟೂಲ್ ಮೇಲೆ ಕುಳಿತುಕೊಂಡು ತನ್ನ ದೇಹದ ಬಲದಿಂದ ಹಿಟ್ಟನ್ನು ಬೆರೆಸುತ್ತಿದ್ದರು ಮತ್ತು ತರಕಾರಿಗಳನ್ನು ಕತ್ತರಿಸುತ್ತಿದ್ದರು. ತನ್ನ ಬಾಯಿಯ ಮೂಲಕವೇ ಸೂಜಿ-ದಾರ ಹಿಡಿದು ಬಟ್ಟೆಗಳನ್ನು ಹೊಲಿಯುತ್ತಿದ್ದರು.

ಮೊಣಕೈಗಳ ನಡುವೆ ಚಾಪ್‌ಸ್ಟಿಕ್‌ಗಳನ್ನು ಹಿಡಿದು ತಿನ್ನುವುದನ್ನು ಅಭ್ಯಾಸ ಮಾಡಿಕೊಂಡರು. ಕೈಗಳಿಲ್ಲದಿದ್ದರೂ ಮಕ್ಕಳ ಬಟ್ಟೆಗಳನ್ನು ತಾವೇ ಸ್ವತಃ ಶುಚಿಗೊಳಿಸುತ್ತಿದ್ದರು.

ಮತ್ತಷ್ಟು ಓದಿ: Video: ದೇವರು ಕೈಗಳನ್ನು ಕೊಟ್ಟಿಲ್ಲ ಎಂಬ ವಿಷಾದವಿಲ್ಲ, ಆಡಲು ಜತೆಗಾರರಿಲ್ಲ ಎಂಬ ಬೇಸರವಿಲ್ಲ, ಮುಖದಲ್ಲೊಂದು ಮಂದಹಾಸ

ನನ್ನ ಕುಟುಂಬ ಹಸಿವಿನಿಂದ ಮಲಗಲಿಲ್ಲ
ತನ್ನ ಹಳೆಯ ದಿನಗಳನ್ನು ನೆನಪಿಸಿಕೊಳ್ಳುವ ವಾಂಗ್, ಜೀವನ ತುಂಬ ಕಷ್ಟವಾಗಿತ್ತು. ಆದರೆ ನನ್ನ ಮಕ್ಕಳು ಯಾವತ್ತೂ ಹಸಿವಿನಿಂದ ಮಲಗಲಿಲ್ಲ ಎಂಬ ತೃಪ್ತಿ ನನಗಿದೆ, ಎನ್ನುತ್ತಾರೆ. ಅವರ ಹೋರಾಟದ ಫಲವಾಗಿ ಇಂದು ಅವರ ಮೂವರೂ ಮಕ್ಕಳು ಸುಖವಾಗಿ ನೆಲೆಸಿದ್ದಾರೆ.

ಸುಮಾರು ಹತ್ತು ವರ್ಷಗಳ ಹಿಂದೆ ಪತಿ ನಿಧನರಾದ ನಂತರ, ವಾಂಗ್ ಈಗ ತಮ್ಮ ಕಿರಿಯ ಮಗನ ಮನೆಯಲ್ಲಿ ವಾಸಿಸುತ್ತಿದ್ದಾರೆ. 81 ವರ್ಷದ ಪ್ರಾಯದಲ್ಲಿ ಸ್ವಲ್ಪ ರಕ್ತದೊತ್ತಡದ ಸಮಸ್ಯೆ ಇದ್ದರೂ, ಅವರ ಮುಖದಲ್ಲಿರುವ ನಗು ಮತ್ತು ಜೀವನದ ಮೇಲಿರುವ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ.

ದೈಹಿಕ ವೈಕಲ್ಯವು ಸಾಧನೆಗೆ ಅಡ್ಡಿಯಲ್ಲ ಎಂಬ ಮಾತನ್ನು ವಾಂಗ್ ಯುಶಿ ಅಕ್ಷರಶಃ ಸಾಬೀತುಪಡಿಸಿದ್ದಾರೆ. ಕೈಕಾಲುಗಳಿಲ್ಲದಿದ್ದರೂ ಅವರು ಕಟ್ಟಿದ ಸುಂದರ ಸಂಸಾರ ಮತ್ತು ಅವರು ತೋರಿದ ತಾಯ್ತನದ ಶಕ್ತಿ ಇಂದು ಕೋಟ್ಯಂತರ ಜನರಿಗೆ ಭರವಸೆಯ ಬೆಳಕಾಗಿದೆ.

ಟ್ರೆಂಡಿಂಗ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಶೀರ್ಷಿಕೆ ಗೀತೆ ರಿಲೀಸ್ ಮಾಡಿದ ಸಿಎಂ ಸಿದ್ದರಾಮಯ್ಯ – Kannada News | CM Siddaramaiah released Sarkari Nyaya Bele Angadi Kannada movie title song ft Ragini Dwivedi

ಶೀರ್ಷಿಕೆಯ ಕಾರಣದಿಂದಲೇ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ (Sarkari Nyaya Bele Angadi) ಸಿನಿಮಾ ಕೌತುಕ ಸೃಷ್ಟಿ ಮಾಡಿದೆ. ಈ ಸಿನಿಮಾದಲ್ಲಿ ನಟಿ ರಾಗಿಣಿ ದ್ವಿವೇದಿ (Ragini Dwivedi) ಅವರು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಸಾಮಾಜಿಕ ಕಥಾಹಂದರವನ್ನು ಇಟ್ಟುಕೊಂಡು ತಯಾರಾಗಿರುವ ಈ ಚಿತ್ರ ಈಗ ತೆರೆಗೆ ಬರಲು ಸಿದ್ಧವಾಗುತ್ತಿದೆ. ಈಗಾಗಲೇ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದಿವೆ. ಇತ್ತೀಚೆಗೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾದ ಟೈಟಲ್ ಸಾಂಗ್ ಬಿಡುಗಡೆ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಶೀರ್ಷಿಕೆ ಗೀತೆ ಬಿಡುಗಡೆ ಮಾಡಿ ವಿಶ್ ಮಾಡಿದ್ದಾರೆ.

ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ಅವರು ಸಿನಿಮಾ ಬಗ್ಗೆ ಮೆಚ್ಚುಗೆ ಸೂಚಿಸಿದರು. ‘ಸಿನಿಮಾ ಬಹಳ ಪ್ರಭಾವಶಾಲಿ ಮಾಧ್ಯಮ. ಸಿನಿಮಾಗಳ ಮೂಲಕ ವಾಸ್ತವ ವಿಷಯಗಳನ್ನು ಬಹಳ ಬೇಗ ಜನರಿಗೆ ತಲುಪಿಸಬಹುದು. ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ ವಾಸ್ತವ ಸ್ಥಿತಿಯನ್ನು ಕಥಾಹಂದರವಾಗಿ ಇಟ್ಟುಕೊಂಡು ತಯಾರಾಗಿರುವುದು ಶ್ಲಾಘನೀಯ’ ಎಂದು ಅವರು ಹೇಳಿದರು.

‘ಜನ ಸಾಮಾನ್ಯರು, ಬಡವರು ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸರ್ಕಾರಿ ನ್ಯಾಯಬೆಲೆ ಅಂಗಡಿಗಳ ಮೂಲಕ ದಿನಸಿ ಮತ್ತು ಆಹಾರವನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಆದರೆ ಈ ವ್ಯವಸ್ಥೆಯಲ್ಲಿರುವ ಕೆಲವು ಲೋಪಗಳಿಂದ ಇದರ ಉದ್ದೇಶ ಪರಿಣಾಮಕಾರಿಯಾಗಿ ಈಡೇರುತ್ತಿಲ್ಲ. ಈಗ ಇದೇ ವಿಷಯವನ್ನು ಸಿನಿಮಾವಾಗಿಸಿದ ಚಿತ್ರತಂಡದಿಂದ ಜನ ಜಾಗೃತಿ ಮೂಡಲಿ’ ಎಂದು ಸಿದ್ದರಾಮಯ್ಯ ಹೇಳಿದರು.

ಕುಮಾರ್ ಬಂಗಾರಪ್ಪ, ರಾಗಿಣಿ ದ್ವಿವೇದಿ, ದೊಡ್ಡಣ್ಣ ಮುಂತಾದವರು ನಟಿಸಿರುವ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾ ‘ಜಯಶಂಕರ ಟಾಕೀಸ್‌’ ಬ್ಯಾನರ್ ಮೂಲಕ ನಿರ್ಮಾಣ ಆಗುತ್ತಿದೆ. ತೇಜು ಮೂರ್ತಿ ಹಾಗೂ ಪದ್ಮಾವತಿ ಚಂದ್ರಶೇಖರ್‌ ಅವರು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾಗೆ ಅನಂತ್‌ ಆರ್ಯನ್‌ ಅವರು ಸಂಗೀತ ನೀಡಿದ್ದಾರೆ.

ಇದನ್ನೂ ಓದಿ: ರಾಗಿಣಿ ದ್ವಿವೇದಿ, ವರಲಕ್ಷ್ಮೀ ‘ಪೊಲೀಸ್ ಕಂಪ್ಲೈಂಟ್’: ಸಾಕ್ಷಿಯಾದ ಹಿರಿಯ ನಟಿ ಪ್ರೇಮಾ

‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾಗೆ ಬಿ. ರಾಮಮೂರ್ತಿ ಅವರು ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಸಾತ್ವಿಕ್‌ ಪವನ್‌ ಕುಮಾರ್‌ ಅವರು ಛಾಯಾಗ್ರಹಣ ಹಾಗೂ ನಿರ್ದೇಶನ ಮಾಡುತ್ತಿದ್ದಾರೆ. ಸುಮಾರು 52 ದಿನಗಳ ಕಾಲ ಮಂಡ್ಯ ಸುತ್ತಮುತ್ತಲಿನ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಶೀಘ್ರದಲ್ಲೇ ಈ ಸಿನಿಮಾ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Kumkumarchan: ಮನೆಯಲ್ಲಿ ಕುಂಕುಮಾರ್ಚನೆ ಮಾಡಬಹುದೇ? ವಾಸ್ತು ತಜ್ಞರ ಸಲಹೆ ಇಲ್ಲಿದೆ – Kannada News | Kumkumarchana at Home: Understanding the Ritual and Its Benefits

ಮನೆಯಲ್ಲಿ ಕುಂಕುಮಾರ್ಚನೆImage Credit source: Pinterest

ಸಾಮಾನ್ಯವಾಗಿ ಕುಂಕುಮಾರ್ಚನೆ ಎಂದರೆ ದೇವಾಲಯಗಳಲ್ಲಿ ಅರ್ಚಕರು ದೇವಿಯ ಪಾದಗಳಿಗೆ, ಮೇರು ಚಕ್ರಕ್ಕೆ ಅಥವಾ ವೀಳೆದೆಲೆಯ ಮೇಲೆ ಕುಂಕುಮವನ್ನು ಅರ್ಪಿಸುವುದನ್ನು ನಾವು ನೋಡುತ್ತೇವೆ. ಈ ಸಂದರ್ಭದಲ್ಲಿ, ಮನೆಯಲ್ಲಿ ಕುಂಕುಮಾರ್ಚನೆಯನ್ನು ಮಾಡಬಹುದೇ ಎಂಬ ಪ್ರಶ್ನೆ ಹಲವರಲ್ಲಿ ಮೂಡುತ್ತದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಗುರೂಜಿಯವರು ಹೇಳುವಂತೆ, ಮನೆಯಲ್ಲಿ ಕುಂಕುಮಾರ್ಚನೆಯನ್ನು ಖಂಡಿತವಾಗಿಯೂ ಮಾಡಬಹುದು. ಇದಕ್ಕಾಗಿ ಅರಿಶಿನದಿಂದ ತಯಾರಿಸಿದ ಶುದ್ಧ ಕುಂಕುಮವನ್ನು ಬಳಸುವುದು ಉತ್ತಮ. ಕುಂಕುಮವು ಆಕರ್ಷಣ ಶಕ್ತಿಯನ್ನು ಬೇಗನೆ ಸೆಳೆಯುವ ಗುಣವನ್ನು ಹೊಂದಿದೆ. ಪುನುಗು, ಜವಾದ್, ಅರಗಜದಂತಹ ದ್ರವ್ಯಗಳಿಗೆ ಇರುವ ಶಕ್ತಿಯಂತೆ, ಕುಂಕುಮಕ್ಕೂ ಅಧ್ಬುತ ಶಕ್ತಿಯಿದೆ. ನಾವು ಹಣೆಗೆ ಇಟ್ಟುಕೊಳ್ಳುವ ಕುಂಕುಮ, ವಿಭೂತಿ, ಗಂಧ ಇವೆಲ್ಲವೂ ಆಯಾ ಬಲಕ್ಕೆ ತಕ್ಕ ಫಲವನ್ನು ನೀಡುತ್ತವೆ. ಅರ್ಚನೆಯಲ್ಲಿ ಬಳಸುವ ಕುಂಕುಮವು ವಿಶೇಷ ಶಕ್ತಿಯನ್ನು ಹೊಂದಿರುತ್ತದೆ.

ಮನೆಯಲ್ಲಿ ಕುಂಕುಮಾರ್ಚನೆ ಮಾಡುವ ವಿಧಾನ ಹೀಗಿದೆ:

ಪೂರ್ವಾಭಿಮುಖವಾಗಿ ಅಥವಾ ಉತ್ತರಾಭಿಮುಖವಾಗಿ ಕುಳಿತುಕೊಳ್ಳಬೇಕು. ದೇವಿಯ ಅಷ್ಟೋತ್ತರ ನಾಮಾವಳಿಗಳನ್ನು ಪಠಿಸಬೇಕು. ಕುಂಕುಮವನ್ನು ಹಿಡಿಯಲು ತೋರುಬೆರಳನ್ನು ಬಳಸಬಾರದು. ಉಳಿದ ಮೂರು ಬೆರಳುಗಳಿಂದ ಕುಂಕುಮವನ್ನು ತೆಗೆದುಕೊಂಡು, ಪ್ರತಿ ನಾಮಕ್ಕೂ ಒಂದೊಂದು ಬಾರಿ ವೀಳೆದೆಲೆಯ ಮೇಲೆ ಅಥವಾ ಶುದ್ಧವಾದ ಬೆಳ್ಳಿ ತಟ್ಟೆಯ ಮೇಲೆ ಇರುವ ದೇವಿಯ ಚಿತ್ರಕ್ಕೆ ಅರ್ಪಿಸಬೇಕು. ನಿಮ್ಮ ಶಕ್ತಿಗನುಸಾರವಾಗಿ ಈ ತಟ್ಟೆಯನ್ನು ಬಳಸಬಹುದು. ಅರ್ಚನೆ ಮಾಡಿದ ಈ ಕುಂಕುಮವನ್ನು ಪ್ರತಿನಿತ್ಯ ಹಣೆಗೆ ಹಚ್ಚಿಕೊಂಡು ಪ್ರಯಾಣ, ಉದ್ಯೋಗಕ್ಕೆ ಹೋಗುವುದರಿಂದ ನಿಮ್ಮ ಎಲ್ಲಾ ಕಾರ್ಯಗಳು ಯಶಸ್ವಿಯಾಗುತ್ತವೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಕುಂಕುಮಾರ್ಚನೆ ಮಾಡಲು ಮಂಗಳವಾರ ಮತ್ತು ಶುಕ್ರವಾರಗಳು ಅತಿ ಶ್ರೇಷ್ಠ. ಪ್ರತಿದಿನ ಬ್ರಾಹ್ಮಿ ಮುಹೂರ್ತದಲ್ಲಿ ಮಾಡುವುದು ಇನ್ನೂ ಉತ್ತಮ. ಮದುವೆಗೆ ತಡೆಯಾಗುತ್ತಿದ್ದರೆ, ಒಂದು ಸಂಕಲ್ಪ ಮಾಡಿಕೊಂಡು ಕುಂಕುಮಾರ್ಚನೆ ಮಾಡಿಕೊಳ್ಳಬಹುದು. ದೇವಾಲಯಗಳಲ್ಲಿ ಅಮ್ಮನವರ ಸನ್ನಿಧಿಯಲ್ಲಿ ಕುಳಿತು ವೀಳೆದೆಲೆಯನ್ನಿಟ್ಟು ಅರ್ಚನೆ ಮಾಡಿಕೊಳ್ಳಬಹುದು. ವಿದ್ಯಾಭ್ಯಾಸ ಪ್ರಾರಂಭಿಸುವ ಮುನ್ನ, ಮನೆ ಕಟ್ಟುವ ಮುನ್ನ ಫೌಂಡೇಶನ್‌ನಲ್ಲಿ ಹಾಕಿಸಲು, ಮಕ್ಕಳು ಶಾಲೆಗೆ ಹೋಗುವ ಮುನ್ನ ಕುಂಕುಮ ಹಚ್ಚಿ ಕಳುಹಿಸುವುದು ಶುಭ. ಸಂತಾನ, ಉದ್ಯೋಗ, ಕಲ್ಯಾಣ ಹೀಗೆ ಸಕಲ ವಿಜಯಗಳಿಗೂ ಕುಂಕುಮಾರ್ಚನೆಯು ಒಂದು ಅಸ್ತ್ರವಿದ್ದಂತೆ.

ಮನೆಯಲ್ಲಿ ಕುಂಕುಮಾರ್ಚನೆ ಮಾಡುವುದರಿಂದ ದೇವಿಯ ಪ್ರಸನ್ನತೆ ಮತ್ತು ಸರ್ವಶಕ್ತಿಯ ಅನುಗ್ರಹ ಸಿಗುತ್ತದೆ. ಹುಣ್ಣಿಮೆಯ ಸಮಯದಲ್ಲಿ ಕುಂಕುಮಾರ್ಚನೆಗೆ ಹೆಚ್ಚಿನ ಫಲವಿರುತ್ತದೆ. ಈ ಶಕ್ತಿಶಾಲಿ ಕುಂಕುಮಾರ್ಚನೆಯನ್ನು ಮನೆಯಲ್ಲಿ ಮಾಡುವುದರಿಂದ ಜೀವನದಲ್ಲಿ ಬಹಳಷ್ಟು ಶುಭವಾಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:08 am, Sun, 19 April 26

Source link