Category Archives: Blog

Your blog category

ಊಟ ಮಾಡುವಾಗ ಫೋನ್ ಬಳಸುವ ಅಭ್ಯಾಸ ನಿಮಗಿದ್ಯಾ? ಇದರಿಂದ ಕರುಳಿನ ಆರೋಗ್ಯ ಹಾಳಾಗುತ್ತೆ ಹುಷಾರ್!

ಊಟ ಮಾಡುವಾಗ ಫೋನ್ ಬಳಸುವ ಅಭ್ಯಾಸ ನಿಮಗಿದ್ಯಾ? ಇದರಿಂದ ಕರುಳಿನ ಆರೋಗ್ಯ ಹಾಳಾಗುತ್ತೆ ಹುಷಾರ್!

ಇಂದಿನ ಕಾಲದಲ್ಲಿ ಅನಾರೋಗ್ಯಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದು ಮತ್ತು ಅಸ್ಥಿರ ಜೀವನ ಶೈಲಿ. ಈಗ ಹೆಚ್ಚಿನವರು ಆನ್‌ಲೈನ್ ಮೂಲಕ ಆರ್ಡರ್ ಮಾಡಿ ತಿನ್ನುತ್ತಾರೆ. ಅಷ್ಟು ಮಾತ್ರವಲ್ಲ, ಊಟ ಮಾಡುವಾಗ ಮೊಬೈಲ್ ಬಳಸದೆಯೇ ಊಟ ಮಾಡುವುದೇ ಇಲ್ಲ. ಆದರೆ ಆರೋಗ್ಯ ತಜ್ಞರು ಹೇಳುವ ಪ್ರಕಾರ, ಈ ಅಭ್ಯಾಸ ನಿಮ್ಮ ಆರೋಗ್ಯಕ್ಕೆ, ಅದರಲ್ಲಿಯೂ ಕರುಳಿನ ಆರೋಗ್ಯಕ್ಕೆ (Gut Health) ಹಾನಿ ಉಂಟುಮಾಡಬಹುದು. ಹಾಗಾದರೆ ಫೋನ್ ಬಳಕೆ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆಯೇ, ಆರೋಗ್ಯ ಕಾಪಾಡಿಕೊಳ್ಳಲು ಯಾವ ರೀತಿಯ ಸಲಹೆಗಳನ್ನು ಅನುಸರಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಫೋನ್ ಬಳಕೆ ಮತ್ತು ಜೀರ್ಣಕ್ರಿಯೆ ಮೇಲೆ ಪರಿಣಾಮ:

ಊಟ ಮಾಡುವಾಗ ಫೋನ್ ನೋಡುತ್ತಾ ಆಹಾರ ಸೇವನೆ ಮಾಡುವವರು ಸಾಮಾನ್ಯವಾಗಿ ಆಹಾರವನ್ನು ಸರಿಯಾಗಿ ಜಗಿದು ತಿನ್ನುವುದಿಲ್ಲ. ಇದರ ಪರಿಣಾಮವಾಗಿ ಆಹಾರ ಸರಿಯಾಗಿ ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಈ ಒತ್ತಡದಿಂದ ಕರುಳು ಅಥವಾ ಗಟ್ ಆರೋಗ್ಯ ಹದಗೆಡುತ್ತದೆ. ಆಗ ಮೈಕ್ರೋಬಿಯೊಮ್‌ನಲ್ಲಿ ಅಸಮತೋಲನ ಉಂಟಾಗುತ್ತದೆ. ಇದು ಇಮ್ಯುನಿಟಿ ಕಡಿಮೆಯಾಗುವುದರಿಂದ ಹಿಡಿದು ನಿದ್ರಾಹೀನತೆ ಸೇರಿದಂತೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಇದನ್ನೂ ಓದಿ: ಖಾರವಾಗಿರುವ ಆಹಾರ ಸೇವನೆ ಮಾಡೋದಕ್ಕೆ ತುಂಬಾ ಇಷ್ಟಾನಾ? ಹಾಗಿದ್ರೆ ಈ ಸ್ಟೋರಿ ನಿಮಗಾಗಿ

ಕೆಟ್ಟ ಆಹಾರ ಪದ್ಧತಿಯೂ ಕಾರಣ!

ಪ್ಯಾಸಿಫಿಕ್ ವನ್‌ಹೆಲ್ತ್ ಸಂಸ್ಥೆಯ ಪ್ರಿವೆಂಟಿವ್ ವೆಲ್‌ನೆಸ್ ಮತ್ತು ಮೆಟಾಬಾಲಿಕ್ ಡಿಸೀಸ್ ವಿಭಾಗದ ಮುಖ್ಯಸ್ಥರಾದ ಡಾ. ಐಜಾಝ್ ಇಲ್ಮಿ ಅವರ ಪ್ರಕಾರ, 2025ರಲ್ಲಿ ನಡೆದ ಒಂದು ಅಧ್ಯಯನದಂತೆ ಸುಮಾರು 39% ನಗರ ಪ್ರದೇಶದ ಜನರು ಕಡಿಮೆ ಫೈಬರ್ ಇರುವ ಆಹಾರ ಸೇವಿಸುತ್ತಿದ್ದಾರೆ. ಜೊತೆಗೆ 36% ಕ್ಕಿಂತ ಹೆಚ್ಚು ಜನರು ಹೆಚ್ಚು ಸಕ್ಕರೆ ಇರುವ ಆಹಾರಗಳನ್ನು ಸೇವಿಸುತ್ತಿದ್ದಾರೆ. ಈ ರೀತಿಯ ಆಹಾರ ಪದ್ಧತಿಗಳು ಕರುಳಿನ ಆರೋಗ್ಯವನ್ನು ಹಾನಿಗೊಳಿಸುತ್ತವೆ. ದೇಹದಲ್ಲಿ ಉರಿಯೂತ (ಇನ್‌ಫ್ಲಮೇಷನ್) ಹೆಚ್ಚುವುದು, ಇಮ್ಯೂನ್ ಸಿಸ್ಟಮ್ ಮೇಲೆ ಪರಿಣಾಮ ಬೀಳುವುದು ಸೇರಿದಂತೆ ಹಲವು ಸಮಸ್ಯೆಗಳು ಉಂಟಾಗುತ್ತವೆ. ಹೊಟ್ಟೆ ಉಬ್ಬರ, ಮಧ್ಯಾಹ್ನದ ವೇಳೆಯಲ್ಲಿ ದಣಿವು ಇತ್ಯಾದಿ ಲಕ್ಷಣಗಳು ಕಂಡುಬರುತ್ತದೆ ಆದರೆ ಇದನ್ನು ಸಾಮಾನ್ಯವೆಂದು ನಿರ್ಲಕ್ಷಿಸುವುದರಿಂದ ಸಮಸ್ಯೆ ಗಂಭೀರವಾಗಬಹುದು.

ಆರೋಗ್ಯ ಕಾಪಾಡಿಕೊಳ್ಳಲು ಸಲಹೆಗಳು:

  • ಊಟ ಮಾಡುವಾಗ ಫೋನ್ ಬಳಕೆ ಮಾಡಬೇಡಿ
  • ಆಹಾರದಲ್ಲಿ ದಾಲ್, ಹಣ್ಣು ಮತ್ತು ಕಾಯಿ, ಬೀಜಗಳನ್ನು ಸೇರಿಸಿಕೊಳ್ಳಿ
  • ಸಕ್ಕರೆ ಸೇವನೆಯನ್ನು ಕಡಿಮೆ ಮಾಡಿ
  • ಪ್ರತಿದಿನ ವ್ಯಾಯಾಮ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಡ್ರ್ಯಾಗನ್’ ಸಿನಿಮಾ ಶೂಟಿಂಗ್ ನಿಲ್ಲಿಸಿದ ಪ್ರಶಾಂತ್ ನೀಲ್, ಜೂ. ಎನ್​ಟಿಆರ್; ಕಾರಣ ಏನು?

ನಟ ಜೂನಿಯರ್ ಎನ್‌ಟಿಆರ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಶನ್‌ನ ಬಹುನಿರೀಕ್ಷಿತ ‘ಡ್ರ್ಯಾಗನ್’ (Dragon) ಸಿನಿಮಾದ ಚಿತ್ರೀಕರಣಕ್ಕೆ ಸಣ್ಣ ಬ್ರೇಕ್ ನೀಡಲಾಗಿದೆ. ಈ ತಿಂಗಳು ನಡೆಯಬೇಕಿದ್ದ ಪ್ರಮುಖ ಹಂತದ ಚಿತ್ರೀಕರಣವನ್ನು ದಿಢೀರ್ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ. ಈ ಚಿತ್ರದಲ್ಲಿ ಎನ್‌ಟಿಆರ್ (Jr NTR) ವಿಭಿನ್ನ ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚಿನ ಶೆಡ್ಯೂಲ್‌ಗಾಗಿ ಎನ್‌ಟಿಆರ್ ಅವರ ಹೊಸದೊಂದು ಲುಕ್ ಫೈನಲ್ ಮಾಡಬೇಕಿತ್ತು. ಆದರೆ, ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ (Prashanth Neel) ಇಬ್ಬರೂ ಆ ಹೊಸ ಲುಕ್ ಬಗ್ಗೆ ತೃಪ್ತರಾಗಿಲ್ಲ ಎನ್ನಲಾಗಿದೆ.

ಗುಣಮಟ್ಟದ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಇಷ್ಟಪಡದ ಈ ಜೋಡಿ, ಪರ್ಫೆಕ್ಟ್ ಲುಕ್ ಸಿಗುವವರೆಗೆ ಚಿತ್ರೀಕರಣವನ್ನು ಮುಂದೂಡಲು ನಿರ್ಧರಿಸಿದ್ದಾರೆ. ಆದ್ದರಿಂದ ಈಗ ಶೂಟಿಂಗ್​ಗೆ ಬ್ರೇಕ್ ನೀಡಲಾಗಿದೆ ಎಂಬ ಮಾಹಿತಿ ಕೇಳಿಬಂದಿದೆ. ಪವರ್​ಫುಲ್ ಕಾಂಬಿನೇಷನ್ ಆದ್ದರಿಂದ ಈ ಸಿನಿಮಾ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಚಿತ್ರತಂಡ ಈಗಾಗಲೇ ಜೋರ್ಡಾನ್‌ನಲ್ಲಿ ಒಂದು ದೊಡ್ಡ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರೈಸಿದೆ. ಕಳೆದ ತಿಂಗಳು ಶಂಶಾಬಾದ್ ಸಮೀಪದ ದೇವಾಲಯವೊಂದರಲ್ಲಿ ಸುಮಾರು ಒಂದು ವಾರಗಳ ಕಾಲ ಚಿತ್ರೀಕರಣ ನಡೆಸಲಾಗಿತ್ತು. ಪ್ರಸ್ತುತ ಹೈದರಾಬಾದ್ ಹೊರವಲಯದಲ್ಲಿ ಬೃಹತ್ ಸೆಟ್ ನಿರ್ಮಾಣವಾಗುತ್ತಿದ್ದು, ಮುಂದಿನ ತಿಂಗಳಿಂದ ಅಲ್ಲಿ ಚಿತ್ರೀಕರಣ ಪುನರಾರಂಭವಾಗುವ ಸಾಧ್ಯತೆಯಿದೆ.

ಈ ಹಿಂದೆ ಚಿತ್ರವನ್ನು 2026ರ ಜೂನ್ 25ರಂದು ಬಿಡುಗಡೆ ಮಾಡುವುದಾಗಿ ಘೋಷಿಸಲಾಗಿತ್ತು. ಆದರೆ ಶೂಟಿಂಗ್ ವಿಳಂಬವಾಗುತ್ತಿರುವುದರಿಂದ ಈ ದಿನಾಂಕದಂದು ಸಿನಿಮಾ ತೆರೆಗೆ ಬರುವುದು ಅನುಮಾನ ಎನ್ನಲಾಗುತ್ತಿದೆ. ಒಂದು ವೇಳೆ ಎನ್‌ಟಿಆರ್ ಸಿನಿಮಾ ಮುಂದೂಡಲ್ಪಟ್ಟರೆ, ಅದೇ ದಿನಾಂಕದಂದು ರಾಮ್ ಚರಣ್ ಅಭಿನಯದ ‘ಪೆದ್ದಿ’ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಜೂ. ಎನ್​ಟಿಆರ್ ನೋಡಲು ಮುಗಿಬಿದ್ದ ಜನ; ಪೊಲೀಸ್ ಲಾಠಿ ಚಾರ್ಜ್

‘ಮೈತ್ರಿ ಮೂವೀ ಮೇಕರ್ಸ್’ ಮತ್ತು ‘ಎನ್‌ಟಿಆರ್ ಆರ್ಟ್ಸ್’ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿವೆ. ಎನ್‌ಟಿಆರ್ ಅವರ ಬಾಲಿವುಡ್​ನ ಮೊದಲ ಸಿನಿಮಾ ‘ವಾರ್ 2’ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಹಿನ್ನೆಲೆಯಲ್ಲಿ, ಪ್ರಶಾಂತ್ ನೀಲ್ ಜೊತೆಗಿನ ಈ ಸಿನಿಮಾ ಎನ್‌ಟಿಆರ್ ವೃತ್ತಿಜೀವನಕ್ಕೆ ಅತ್ಯಂತ ನಿರ್ಣಾಯಕವಾಗಿದೆ. ಹೀಗಾಗಿ ಪ್ರಶಾಂತ್ ನೀಲ್ ಪ್ರತಿಯೊಂದು ದೃಶ್ಯವನ್ನೂ ಬಹಳ ಅಚ್ಚುಕಟ್ಟಾಗಿ ರೂಪಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದೆಹಲಿಗೆ ಬಂದ ಅಸ್ಸಾಂ ಪೊಲೀಸರು, ಹೈದರಾಬಾದ್​ಗೆ ಪರಾರಿಯಾದ ಪವನ್ ಖೇರಾ

ನವದೆಹಲಿ, ಏಪ್ರಿಲ್ 7: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಅವರು ಮಾಡಿದ್ದ ಪಾಸ್‌ಪೋರ್ಟ್ ವಂಚನೆ ಆರೋಪದ ವಿರುದ್ಧ ಕಾಂಗ್ರೆಸ್ ನಾಯಕ ಪವನ್ ಖೇರಾ (Pawan Khera) ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಅದಾದ ಒಂದು ದಿನದ ನಂತರ ಇಂದು ಅಸ್ಸಾಂ ಪೊಲೀಸರು ದೆಹಲಿಯಲ್ಲಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರ ನಿವಾಸಕ್ಕೆ ತೆರಳಿದ್ದಾರೆ.ನಿಜಾಮುದ್ದೀನ್ ಪ್ರದೇಶದ ದೆಹಲಿ ಪೊಲೀಸರು ಅಸ್ಸಾಂ ಪೊಲೀಸರ ಭೇಟಿಯ ಸಮಯದಲ್ಲಿ ಅಸ್ಸಾಂ ಪೊಲೀಸ್ ತಂಡಕ್ಕೆ ಸಹಾಯ ಮಾಡಿದರು.

ಆದರೆ, ಅಷ್ಟರಲ್ಲಾಗಲೇ ಪವನ್ ಖೇರಾ ತಮ್ಮ ಮನೆಯನ್ನು ಬಿಟ್ಟು ಹೈದರಾಬಾದ್​ಗೆ ಪರಾರಿಯಾಗಿದ್ದರು. ಪವನ್ ಖೇರಾ ದೆಹಲಿಯಲ್ಲಿಲ್ಲ ಮತ್ತು ಕಾಂಗ್ರೆಸ್ ಆಡಳಿತದ ರಾಜ್ಯವಾದ ತೆಲಂಗಾಣದಲ್ಲಿ ಇರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

 

“ನಾವು ಅವರ ಮನೆಯನ್ನು ಶೋಧಿಸಿದ್ದೇವೆ. ನಾವು ಹೆಚ್ಚಿನ ವಿವರಗಳನ್ನು ನೀಡಲು ಸಾಧ್ಯವಿಲ್ಲ” ಎಂದು ಅಸ್ಸಾಂ ಪೊಲೀಸ್ ಡಿಸಿಪಿ ಡಾ. ದೇಬಾಜಿತ್ ನಾಥ್ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರ ನಿವಾಸದಲ್ಲಿ ನಡೆಸಿದ ಶೋಧದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಸಂಸದರ ಪತ್ನಿಗೆ ಪಾಕಿಸ್ತಾನದ ನಂಟು ದೃಢ; ಅಸ್ಸಾಂ ಸಿಎಂ ಹಿಮಂತ ಶರ್ಮಾಗೆ ಎಸ್‌ಐಟಿ ವರದಿ ಸಲ್ಲಿಕೆ

“ಪವನ್ ಖೇರಾ ಹೈದರಾಬಾದ್‌ಗೆ ಓಡಿಹೋಗಿದ್ದಾರೆ” ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಲೇವಡಿ ಮಾಡಿದ್ದಾರೆ. “ಅವರು ನಿನ್ನೆ ಗುವಾಹಟಿಯಿಂದ ಓಡಿಹೋಗಿದ್ದಾರೆ. ಪೊಲೀಸರು ದೆಹಲಿಯಲ್ಲಿರುವ ಅವರ ನಿವಾಸಕ್ಕೆ ಹೋಗಿದ್ದಾರೆ ಎಂದು ಮಾಧ್ಯಮಗಳ ಮೂಲಕ ನನಗೆ ತಿಳಿದುಬಂದಿದೆ. ಆದರೆ ಅವರು ಹೈದರಾಬಾದ್‌ಗೆ ಓಡಿಹೋಗಿದ್ದಾರೆ. ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ” ಎಂದು ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ.

ಏನಿದು ವಿವಾದ?:

ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರಿಗೆ ಸಂಬಂಧಿಸಿದ ಪಾಸ್‌ಪೋರ್ಟ್‌ಗಳು ಮತ್ತು ವಿದೇಶಿ ಆಸ್ತಿಗಳನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ಪವನ್ ಖೇರಾ ಪತ್ರಿಕಾಗೋಷ್ಠಿ ನಡೆಸಿದ್ದರು. ಅವರ ಹೇಳಿಕೆಗಳಿಗೆ ಸಂಬಂಧಿಸಿದಂತೆ ಅಸ್ಸಾಂ ಪೊಲೀಸರು ಪವನ್ ಖೇರಾ ಅವರನ್ನು ಪ್ರಶ್ನಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಪವನ್ ಖೇರಾ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ.

ಇದನ್ನೂ ಓದಿ: ನನ್ನ ಪತ್ನಿ ಮೇಲೆ ಸುಳ್ಳು ಆರೋಪ ಮಾಡ್ಬೇಡಿ ಎನ್ನುತ್ತಾ ಕಾಂಗ್ರೆಸ್ ಬಂಡವಾಳ ಬಿಚ್ಚಿಟ್ಟ ಅಸ್ಸಾಂ ಸಿಎಂ ಹಿಮಂತ ಶರ್ಮಾ

ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದಕ್ಕೆ ಹಿಮಂತ ಬಿಸ್ವ ಶರ್ಮ ಅವರ ಪತ್ನಿ ಪೊಲೀಸ್ ದೂರು ದಾಖಲಿಸಿದ್ದಾರೆ. ಹೀಗಾಗಿ, ಪವನ್ ಖೇರಾ ವಿರುದ್ಧ ಕೇಸ್ ದಾಖಲಾಗಿದ್ದು, ಅವರನ್ನು ವಿಚಾರಣೆಗೆ ಒಳಪಡಿಸಲು ದೆಹಲಿಗೆ ಹೋದರೂ ಅಲ್ಲಿಂದಲೂ ಪವನ್ ಖೇರಾ ಹೈದರಾಬಾದ್​​ಗೆ ಓಡಿಹೋಗಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಸವಜಯಮೃತ್ಯುಂಜಯ ವಿರುದ್ಧ ಮಹಿಳೆ ಲೈಂಗಿಕ ದೌರ್ಜುನ್ಯ ಆರೋಪ:ಸ್ಫೋಟಕ ವಿಚಾರ ಬಿಚ್ಚಿಟ್ಟ ಕೈ ಶಾಸಕ

ಬಾಗಲಕೋಟೆ, (ಏಪ್ರಿಲ್ 07): ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ (Basavajaya Mrutyunjaya Swamiji )ಮೇಲೆ ಲೈಂಗಿಕ ಕಿರುಕುಳ ಆರೋಪ ದಾಖಲಾಗಿದೆ. ಸ್ವಾಮೀಜಿ ತನ್ನ ವಿಡಿಯೋ ಮಾಡಿಕೊಂಡು ಬೆದರಿಕೆ ಹಾಕುತ್ತಿದ್ದಾರೆ ಎಂದು ಬೆಂಗಳೂರು ಮೂಲದ ಮಹಿಳೆಯ ಆರೋಪ ಮಾಡಿದ್ದಾರೆ. ಈ ಕುರಿತು ರಾಜ್ಯ ಮಹಿಳಾ ಆಯೋಗಕ್ಕೆ ದೂರು ದಾಖಲು ಮಾಡಿದ್ದಾರೆ. ಇದರ ಬೆನ್ನಲ್ಲೇ ಈ ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಈ ಬಗ್ಗೆ ಕಾಂಗ್ರೆಸ್ ಶಾಸಕ ಹಾಗೂ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್  (Congress MLA vijayanand kashappanavar) ಪ್ರತಿಕ್ರಿಯಿಸಿದ್ದು, ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ. ಸ್ವಾಮೀಜಿಗಳು ಚಾರಿತ್ರ್ಯವಂತರಾಗಿದ್ದರೆ. ಕೋರ್ಟ್ ನಿಂದ ಇಂಜೆಕ್ಷನ್ ಯಾಕೆ ತರುತ್ತಿದ್ದರು? ಎಂದು ಪ್ರಶ್ನಿಸಿದ್ದಾರೆ.

ಬಾಗಲಕೋಟೆಯಲ್ಲಿ ಮಾತನಾಡಿದ ವಿಜಯಾನಂದ ಕಾಶಪ್ಪನವರ್. ಬಸವ ಜಯಮೃತ್ಯುಂಜಯ ಸ್ವಾಮೀಜಿಗಳು ಸ್ವಾಮೀಜಿಗಳಾಗಿ ಉಳಿದಿಲ್ಲ. ನಡೆ-ನುಡಿಯಲ್ಲಿ ಅವರು ಸ್ವಾಮೀಜಿಗಳಾಗಿಲ್ಲ. ಅದೇ ಹಿನ್ನೆಲೆಯಿಂದ ನಾವು ಅವರನ್ನು ಪೀಠದಿಂದ ಉಚ್ಚಾಟನೆ ಮಾಡಿದ್ದು. ಉಚ್ಚಾಟನೆಗೂ ಮುನ್ನ ಅವರಿಗೆ ಸುಧಾರಿಸಿಕೊಳ್ಳಿ ಎಂದು ಹೇಳಿ ನೋಟಿಸ್ ಕೂಡ ಕೊಟ್ಟಿದ್ದೆವು. ಆದರೂ ಅವರು ಬದಲಾಗಲಿಲ್ಲ. ಈ ಹಿನ್ನೆಲೆಯಲ್ಲಿ ಅವರನ್ನು ನಾವು ಉಚ್ಚಾಟನೆ ಮಾಡಿದ್ದೆವು. ಕಾಲ ಎಲ್ಲ ಉತ್ತರ ನೀಡುತ್ತಿದೆ. ಇದೀಗ ಅದೆಲ್ಲ ನಡೆಯುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: ‘ಬೆತ್ತಲೆ ವೀಡಿಯೋ ಕಾಲ್ ಮಾಡು ಎಂದು ಪೀಡಿಸುತ್ತಾರೆ’: ಬಸವಜಯ ಮೃತ್ಯುಂಜಯ ಸ್ವಾಮೀಜಿ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ!

ಮಹಿಳೆ ಬ್ಲಾಕ್ ಮೇಲ್ ಮಾಡಿದಳು 3 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದಳು ಎಂಬ ವಿಚಾರದ ಬಗ್ಗೆ ಮಾತನಾಡಿ,
ಮಹಿಳೆ ಹಣಕ್ಕೆ ಡಿಮ್ಯಾಂಡ್ ಮಾಡಿದಳು ಬ್ಲಾಕ್ ಮೇಲ್ ಮಾಡಿದ್ದಳು ಎನ್ನುವುದಾದರೆ, ಏನಾದರೂ ಆಗಿರಲೇಬೇಕು ಅಲ್ವಾ? ಸುಮ್ಮನೆ ಒಬ್ಬ ಮಹಿಳೆ ಯಾಕೆ ಆರೋಪ ಮಾಡುತ್ತಾರೆ. ಅಂತಹ ಕೃತ್ಯಕ್ಕೆ ಇವರು ಆಸ್ಪದ ಯಾಕೆ ನೀಡಬೇಕು. ಸಮಯ ಸಂದರ್ಭ ಬಂದಾಗ ಎಲ್ಲವೂ ಆಗಲಿದೆ. ಈಗ ಒಂದೊಂದೇ ಹೊರಗೆ ಬರುತ್ತಿದೆ. ಘಟನೆಗೆ ಸಂಬಂಧಪಟ್ಟಂತೆ ಕೋರ್ಟ್ ಇದೆ ಕಾನೂನಿದೆ. ಅದು ಅದರ ಪ್ರಕಾರ ಏನಾಗಬೇಕು ಆಗುತ್ತದೆ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಚ್ಛೇದಿತ ಮಹಿಳೆಗೂ, ಮನೆ ಕಟ್ಟಲು ಬಂದ ಗೌಂಡಿಗೂ ಲವ್​: ಆಸ್ತಿಗಾಗಿ ನಡೆದಿದ್ದು ಭೀಕರ ಕೊಲೆ!

ಬೆಳಗಾವಿ, ಏಪ್ರಿಲ್​​ 07: ವಿಚ್ಛೇದಿತ ಮಹಿಳೆಯ ನಂಬಿಕೆ ಗಳಿಸಿ ಆಕೆಯ ಜೊತೆ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದ ವ್ಯಕ್ತಿಯೋರ್ವ ಆಕೆಯ ಆಸ್ತಿ ಲಪಟಾಯಿಸುವ ಆಸೆಯಿಂದ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಕಳೆದ ಮಾರ್ಚ್ 12ರಂದು ಅಥಣಿ ಪಟ್ಟಣದ ಹೊರ ವಲಯದ ಕಬ್ಬಿನ ಗದ್ದೆಯೊಂದರಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ ಪ್ರಕರಣ ಬೆನ್ನತ್ತಿದ್ದ ಪೊಲೀಸರು ಮೃತಳನ್ನು ಅಥಣಿ ಪಟ್ಟಣದ ನಿವಾಸಿ ಸುಜಾತಾ ಪವಾರ್ (35) ಎಂದು ಗುರುತಿಸಿದ್ದು, ಈಕೆಯ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಆರೋಪಿ ಕುಮಾರ್ ಹವಾಲ್ದಾರ್​​ ಎಂಬಾತನನ್ನು ಬಂಧಿಸಿದ್ದಾರೆ.

ಇನ್ನು ಕೊಲೆಯಾಗಿರುವ ಈ ಸುಜಾತಳನ್ನ 16 ವರ್ಷಗಳ ಹಿಂದೆ ಹಾರೂಗೇರಿ ಯುವಕನೊಬ್ಬನ ಜೊತೆಗೆ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಗಂಡು ಮಗುವೂ ಇತ್ತು. ಆದರೆ ಕುಡಿದು ಬಂದು ಗಂಡ ಕಿರುಕುಳ ನೀಡುತ್ತಾನೆ ಎಂಬ ಕಾರಣಕ್ಕೆ 13 ವರ್ಷಗಳ ಬಳಿಕ ಪತಿ ತೊರೆದು ಸುಜಾತಾ  ತವರು ಸೇರಿದ್ದಳು. ಗಂಡನಿಂದ ವಿಚ್ಛೇದನ ಕೂಡ ಪಡೆದು, ಆತನ ಕಡೆಯಿಂದ ಸಿಕ್ಕಿದ್ದ ಮನೆ ಕೂಡ ಮಾರಿ ಅದರಿಂದ ಬಂದ ಹಣದಿಂದ ಅಥಣಿ ಹೊರ ವಲಯದಲ್ಲಿ ಸೈಟ್ ಕೂಡ ಖರೀದಿಸಿದ್ದಳು. ಗಂಡು ದಿಕ್ಕಿಲ್ಲದ ತವರು ಮನೆಗೆ ಆಧಾರವಾಗಿದ್ದ ಈಕೆ ತಾಯಿ ಬಾಡಿಗೆ ಮನೆಯಲ್ಲಿದ್ದ ಕಾರಣ ಸ್ವಂತದ್ದೊಂದು ಮನೆ ಬೇಕು ಎಂದು ಖರೀದಿಸಿದ್ದ ಜಾಗದಲ್ಲಿ ಹೊಸ ಮನೆ ಕಟ್ಟಲು ಮುಂದಾಗಿದ್ದಳು. ಈ ವೇಳೆ ಗೌಂಡಿ ಕುಮಾರ್ ಹವಾಲ್ದಾರನ ಪರಿಚಯ ಸುಜಾತಾಳಿಗಾಗಿತ್ತು. ಮನೆ ಕಟ್ಟಲು ಸಹಾಯ ಮಾಡವ ನೆಪದಲ್ಲಿ ಸುಜಾತಾಳ ವಿಶ್ವಾಸ ಗಳಿಸಿದ್ದ ಈತ, ನಿನ್ನ ಮದುವೆ ಆಗ್ತೀನಿ ಎಂದು ಹೇಳಿ ದೈಹಿಕ ಸಂಬಂಧ ಕೂಡ ಬೆಳೆಸಿದ್ದ. ಆದರೆ ಕಳೆದ 2 ವರ್ಷಗಳಿಂದ ಇವರ ನಡುವಿನ ಸಂಬಂಧ ಹಳಸಿತ್ತು ಎನ್ನಲಾಗಿದೆ.

ಇದನ್ನೂ ಓದಿ: ಸಾವಿನಲ್ಲೂ ಒಂದಾದ ಯುವ ದಂಪತಿ! ಪತ್ನಿಯ ಸಾವಿನ ದಿನವೇ ರಸ್ತೆ ಅಪಘಾತದಲ್ಲಿ ಪ್ರಾಣಬಿಟ್ಟ ಪತಿ

ಅಲ್ಲದೆ, ಮದುವೆ ಆಗಬೇಕು ಎಂದರೆ ಕಟ್ಟಿದ ಮನೆಯನ್ನ ತನ್ನ ಹೆಸರಿಗೆ ಮಾಡಬೇಕು ಎಂದು ಕುಮಾರ್ ಸುಜಾತಾಗೆ ಒತ್ತಡ ಹಾಕಲಾರಂಭಿಸಿದ್ದ. ಆದರೆ ಮಗನಿದ್ದಾನೆ, ತಾನು ಮನೆ ಕೊಡಲ್ಲ ಎಂದು ಸುಜಾತಾ ಹೇಳಿದ್ದಳು. ಇದರಿಂದ ಪಿತ್ತ ನೆತ್ತಿಗೇರಸಿಕೊಂಡಿದ್ದ ಈತ ಮಾರ್ಚ್ 5ರಂದು ಮಧ್ಯಾಹ್ನ ಕುಡಿದು ಬಂದು ಸುಜಾತ ಜೊತೆಗೆ ಗಲಾಟೆ ನಡೆಸಿದ್ದಾನೆ. ಮಾತಾಡೋದಿದೆ ಅಂತಾ ಬೈಕ್ ಮೇಲೆ ಕರೆದುಕೊಂಡು ಹೋಗಿ ಕೊಲೆ ಮಾಡಿ ವಾಪಾಸ್ ಆಕೆಯ ಮನೆಗೆ ಬಂದು ಸಾಮಗ್ರಿಗಳ ಸಮೇತ ಹೊರ ನಡೆದಿದ್ದಾನೆ. ಈ ವೇಳೆ ಸುಜಾತಾಳ 15ವರ್ಷದ ಮಗ ಪ್ರಶ್ನೆ ಮಾಡಿದಾಗ ತನ್ನ ಜೊತೆಗೆ ಜಗಳ ಮಾಡಿ ಗೆಳತಿ ಮನೆಗೆ ನಿಮ್ಮಮ್ಮ ಹೋಗಿದ್ದಾಳೆ. ನಾನು ಬೈಯುತ್ತೇನೆಂದು ಪೋನ್ ಸ್ವಿಚ್ಛ್ ಆಫ್ ಮಾಡಿದ್ದಾಳೆ. ತಾನು ಕೂಡ ಜಾತ್ರೆ ಹೋಗುತ್ತೇನೆಂದು ಸುಳ್ಳು ಹೇಳಿ ತೆರಳಿದ್ದ. ಇತ್ತ ಸುಜಾತಾ ತಾಯಿ ಕೂಡ ಏನೋ ಬೇಜಾರಾಗಿ ಮಗಳು ಪ್ರತಿ ವರ್ಷದಂತೆ ಈ ಬಾರಿಯೂ ಗೆಳೆತಿಯರ ಜೊತೆಗೆ ಶ್ರೀಶೈಲಕ್ಕೆ ಹೋಗಿದ್ದಾಳೆ ಎಂದು ಸುಮ್ಮನಾಗಿದ್ದಳು. ಆದರೆ  ಮನೆಗೆ ಪೊಲೀಸರು ಬಂದು ಸುಜಾತಾ ಸಾವಿನ ವಿಷಯ ತಿಳಿಸುತ್ತಿದ್ದಂತೆ ಕುಮಾರನ ಕಳ್ಳಾಟ ಬಯಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

Source link

PSL 2026: ಡೇವಿಡ್ ವಾರ್ನರ್​ ಬಂಧನ

ಕರಾಚಿ ಕಿಂಗ್ಸ್ ತಂಡದ ನಾಯಕ ಡೇವಿಡ್ ವಾರ್ನರ್ (David Warner) ಅವರು ಸಿಡ್ನಿಯಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಆರೋಪದ ಮೇಲೆ ಆಸ್ಟ್ರೇಲಿಯನ್ ಪೊಲೀಸರು ಬಂಧಿಸಿದ್ದಾರೆ. ಪ್ರಸ್ತುತ ಪಾಕಿಸ್ತಾನ ಸೂಪರ್ ಲೀಗ್ (PSL 2026) ನಡೆಯುತ್ತಿದ್ದು, ಅದರ ನಡುವೆಯೇ ಈ ಘಟನೆ ಸಂಭವಿಸಿದೆ.

ಪಾಕಿಸ್ತಾನ್ ಸೂಪರ್ ಲೀಗ್​ ನಡುವೆ ತವರಿಗೆ ತೆರಳಿದ್ದ ಡೇವಿಡ್ ವಾರ್ನರ್ ಏಪ್ರಿಲ್ 7, 2026 ರಂದು ಸಿಡ್ನಿಯ ಮರೂಬ್ರಾದಲ್ಲಿ ವೇಗದಲ್ಲಿ ವಾಹನ ಚಲಾಯಿಸಿದ್ದರು. ಇದನ್ನು ಗಮನಿಸಿದ ಪೋಲೀಸರು ಇವರನ್ನು ತಪಾಸಣೆಗಾಗಿ ತಡೆದಿದ್ದಾರೆ.

ಈ ವೇಳೆ ಡೇವಿಡ್ ವಾರ್ನರ್  ಕುಡಿದು ಗಾಡಿ ಓಡಿಸುತ್ತಿರುವುದು ಗೊತ್ತಾಗಿದೆ. ತಕ್ಷಣವೇ ವಾರ್ನರ್​ ಅವರನ್ನು ವಶಕ್ಕೆ ಪಡೆದ ಪೊಲೀಸರು ಅವರನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ವೇಳೆ ಅವರ ರಕ್ತದಲ್ಲಿನ ಮದ್ಯದ ಪ್ರಮಾಣ 0.104 ಇರುವುದು ಕಂಡುಬಂದಿದೆ. ಇದು ಆಸ್ಟ್ರೇಲಿಯಾದ ಕಾನೂನುಬದ್ಧ ಮಿತಿಗಿಂತ (0.05) ಎರಡು ಪಟ್ಟು ಹೆಚ್ಚು.

ಇತ್ತ ಮದ್ಯಪಾನ ಮಾಡಿ ಬಂಧನಕ್ಕೆ ಒಳಗಾದ ಡೇವಿಡ್ ವಾರ್ನರ್ ಇದೀಗ ವಕೀಲರ ನೆರವಿನೊಂದಿಗೆ ಬಿಡುಗಡೆಯಾಗಿದ್ದಾರೆ. ಇದಾಗ್ಯೂ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತಿಂಗಳು ಆಸ್ಟ್ರೇಲಿಯಾದ ನ್ಯಾಯಾಲಯಕ್ಕೆ ಹಾಜರಾಗಬೇಕಿದೆ.

PSL 2026​ ಆಡ್ತಾರಾ?

ವರದಿಯ ಪ್ರಕಾರ, ಡೇವಿಡ್ ವಾರ್ನರ್ ಅವರು ಶೀಘ್ರದಲ್ಲೇ ಪಾಕಿಸ್ತಾನಕ್ಕೆ ಮರಳಲಿದ್ದಾರೆ ಮತ್ತು ಕರಾಚಿ ಕಿಂಗ್ಸ್ ತಂಡದ ಪರವಾಗಿ ಪಂದ್ಯಗಳನ್ನು ಮುಂದುವರಿಸಲಿದ್ದಾರೆ.

ಕರಾಚಿ ಕಿಂಗ್ಸ್ ತಂಡವು ಏಪ್ರಿಲ್ 9 ರಂದು ಗುರುವಾರ ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪೆಶಾವರ್ ಝಲ್ಮಿ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೆ ಅವರು ಲಭ್ಯರಿರಲಿದ್ದಾರೆ ಎಂದು ವರದಿಯಾಗಿದೆ.

ಅಂದಹಾಗೆ ಡೇವಿಡ್ ವಾರ್ನರ್, ಇತ್ತೀಚೆಗಷ್ಟೇ ತಂಡದ ಸದಸ್ಯ ಮೊಯಿನ್ ಅಲಿ ಅವರೊಂದಿಗೆ ಗಲಾಟೆ ಮಾಡಿಕೊಂಡಿದ್ದಾರೆ ಎಂಬ ವಿಡಿಯೋ ವೈರಲ್ ಆಗಿತ್ತು, ಆದರೆ ಅದು ಕೇವಲ “ತಮಾಷೆ” ಎಂದು ವಾರ್ನರ್ ಸ್ಪಷ್ಟಪಡಿಸಿದ್ದರು. ಇದೀಗ ಮದ್ಯಪಾನ ಮಾಡಿ ಗಾಡಿ ಓಡಿಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

 

Source link

ಬ್ರ್ಯಾಂಡ್ ಕರ್ನಾಟಕವೋ ಅಥವಾ ಬ್ರೇಕ್‌ಡೌನ್ ಕರ್ನಾಟಕವೋ?: ಕೆಎಸ್‌ಆರ್‌ಟಿಸಿ ಬಸ್‌ಗಳ ಭೀಕರ ದುಸ್ಥಿತಿ ಬಿಚ್ಚಿಟ್ಟ ಸವಾರರು!

ಬೆಂಗಳೂರು, ಏ.7: ಕಳೆದ ಮೂರು ವರ್ಷದಿಂದ ಬ್ರ್ಯಾಂಡ್ ಕರ್ನಾಟಕ… ಬ್ರ್ಯಾಂಡ್ ಕರ್ನಾಟಕ ಎನ್ನುವ ಕಾಂಗ್ರೆಸ್​​ ಸರ್ಕಾರಕ್ಕೆ ಈ ಬಸ್ಸುಗಳನ್ನು ಬ್ರ್ಯಾಂಡ್ ಮಾಡುವ ಯೋಚನೆಯೇ ಮಾಡಿಲ್ಲ ಎಂದು ಅನ್ನಿಸುತ್ತದೆ. ಕಳೆದ ಹಲವು ದಿನಗಳಿಂದ ಸರ್ಕಾರಿ ಬಸ್ಸುಗಳ ಬಗ್ಗೆ ಒಂದಲ್ಲ ಒಂದು ದೂರುಗಳು ಬರುತ್ತಲೇ ಇದೆ. ಇದೀಗ @KarnatakaPortfolio ಹಂಚಿಕೊಂಡಿರುವ ವಿಡಿಯೋ ನೋಡಿದ್ರೆ ಕೆಎಸ್​​ಆರ್​​ಟಿಸಿ ಬಸ್ಸುಗಳು ಎಷ್ಟು ಅಪಾಯಕಾರಿಯಾಗಿದೆ ಎಂಬುದನ್ನು ನೋಡಬಹುದು. ಇದೀಗ ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ಭಾರೀ ವೈರಲ್​​ ಆಗುತ್ತಿದೆ. ಇದೀಗ ಈ ತಾಂತ್ರಿಕ ದೋಷ ಜನರ ಜೀವನಕ್ಕೆ ಎಷ್ಟೊಂದು ಅಪಾಯಕಾರಿಯಾಗಿದೆ ಎಂಬುದನ್ನು ಹಾಗೂ ಸಂಸ್ಥೆಯ ನಿರ್ವಹಣಾ ಲೋಪವನ್ನು ಬೆತ್ತಲೆ ಮಾಡಿವೆ.

ಬಸ್ಸಿನ ವೇಗವನ್ನು ನಿಯಂತ್ರಿಸುವ ಆಕ್ಸಿಲರೇಟರ್ ಕಿತ್ತು ಬಂದಿದ್ದು, ಅದನ್ನು ಲೋಹದ ಬದಲು ಒಂದು ಸಾಧಾರಣ ಬಟ್ಟೆಯ ಪಟ್ಟಿಯಿಂದ ಕಟ್ಟಿ ನಿಲ್ಲಿಸಲಾಗಿದೆ. ಒಂದು ವೇಳೆ ಈ ಬಟ್ಟೆ ತುಂಡಾದರೆ ಅಪಘಾತ ಖಂಡಿತ. ಇಂತಹ ಬೇಜಾವ್ದಾರಿತನದಿಂದ ಜನರ ಪ್ರಾಣಕ್ಕೆ ಅಪಾಯ ತರುವುದು ಎಷ್ಟು ಸರಿ ಎಂದು ಜನ ಪ್ರಶ್ನೆ ಮಾಡಿದ್ದಾರೆ. ದಿನವಿಡೀ ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆದೊಯ್ಯಬೇಕಾದ ಚಾಲಕನ ಸೀಟನ್ನು ಸರಿಯಾಗಿ ರಿಪೇರಿ ಮಾಡುವ ಬದಲು, ಕಬ್ಬಿಣದ ತಂತಿಗಳಿಂದ ಕಟ್ಟಲಾಗಿದೆ. ಪಾಪ ಅವರಿಗೂ ಕೂಡ ಸರಿಯಾದ ವ್ಯವಸ್ಥೆಯನ್ನು ಕೂಡ ಮಾಡಲು ನಮ್ಮ ಸರ್ಕಾರದ ಬಳಿ ಹಣವಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

ಇನ್ನು ಟೈರ್ ಬಳಿ ಆಯಿಲ್ ಸೋರಿಕೆಯಾಗಿರುವುದು ಕೂಡ ಈ ಬಸ್ಸಿನಲ್ಲಿ ಕಂಡು ಬಂದಿದೆ. ಇದರಿಂದ ಇದು ಬ್ರೇಕ್ ಫೇಲ್ಯೂರ್ ಅಥವಾ ಗೇರ್ ಬಾಕ್ಸ್ ಸಮಸ್ಯೆಯಾಗುವ ಸಾಧ್ಯತೆ ಕೂಡ ಇದೆ. ಪ್ರತಿದಿನ ಲಕ್ಷಾಂತರ ಶಾಲಾ ಮಕ್ಕಳು, ಕಾರ್ಮಿಕರು ಮತ್ತು ಸಾಮಾನ್ಯ ಜನರು ಈ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಬಸ್‌ಗಳ ಈ ದುಸ್ಥಿತಿಗೆ ಒತ್ತಡದಲ್ಲಿ ಕೆಲಸ ಮಾಡುವ ಚಾಲಕರನ್ನು ಹೊಣೆ ಮಾಡುವಂತಿಲ್ಲ. ಇದು ಸಂಪೂರ್ಣವಾಗಿ ಸಾರಿಗೆ ಇಲಾಖೆ ಮತ್ತು ಸರ್ಕಾರದ ನಿರ್ಲಕ್ಷ್ಯವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಯಾವುದಾದರೂ ದೊಡ್ಡ ದುರಂತ ಸಂಭವಿಸಿದ ಮೇಲೆ ಇಲಾಖೆ ಎಚ್ಚೆತ್ತುಕೊಳ್ಳುತ್ತದೆಯೇ?” ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ: ಮಹಿಳೆ ಬಟ್ಟೆ ವಾಷ್​ಗೆ ಹಾಕಲು ಬಂದಾಗ ವಾಷಿಂಗ್ ಮಷಿನ್ ಒಳಗೆ ಬೆಚ್ಚಗೆ ಮಲಗಿತ್ತು ಹಾವು! ಆಮೇಲೇನಾಯ್ತು ನೋಡಿ

ಸಾರ್ವಜನಿಕ ಸಾರಿಗೆಯು ನಂಬಿಕಾರ್ಹ ಮತ್ತು ಸುರಕ್ಷಿತವಾಗಿರಬೇಕು. ಆದರೆ ಈಗಿನ ಪರಿಸ್ಥಿತಿ ನೋಡಿದರೆ ಪ್ರಯಾಣಿಕರು ಪ್ರತಿ ಕ್ಷಣವೂ ಪ್ರಾಣಭಯದಲ್ಲೇ ಸಂಚರಿಸುವಂತಾಗಿದೆ. ಕೂಡಲೇ ಎಲ್ಲಾ ಬಸ್‌ಗಳ ತಾಂತ್ರಿಕ ತಪಾಸಣೆ ನಡೆಸಿ, ಅನರ್ಹ ವಾಹನಗಳನ್ನು ರಸ್ತೆಯಿಂದ ಹಿಂಪಡೆಯಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಹಿಳೆ ಬಟ್ಟೆ ವಾಷ್​ಗೆ ಹಾಕಲು ಬಂದಾಗ ವಾಷಿಂಗ್ ಮಷಿನ್ ಒಳಗೆ ಬೆಚ್ಚಗೆ ಮಲಗಿತ್ತು ಹಾವು! ಆಮೇಲೇನಾಯ್ತು ನೋಡಿ

ಚಾಮರಾಜನಗರ, ಏಪ್ರಿಲ್ 7: ಚಾಮರಾಜನಗರ ಜಿಲ್ಲೆಯ ಬೂದಿತಿಟ್ಟು ಗ್ರಾಮದ ಬಿಳಿಗಿರಿ ಎಂಬುವವರ ಮನೆಯಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಮನೆಯ ಹೊರಾಂಗಣದಲ್ಲಿದ್ದ ವಾಷಿಂಗ್ ಮಿಷನ್‌ನಲ್ಲಿ ಬಟ್ಟೆ ಒಗೆಯ ಹಾಕಲು ಹೋದ ಮಹಿಳೆಗೆ ಮಿಷನ್ ಒಳಗಿದ್ದ ಹಾವನ್ನು ನೋಡಿ ಶಾಕ್ ಆಗಿದೆ. ಬಿಸಿಲಿನ ಬೇಗೆಯಿಂದ ತಂಪಾದ ಜಾಗ ಅರಸಿ ಬಂದಿದ್ದ ನೀರುಹಾವು ಇದಾಗಿದ್ದು, ಉರಗ ತಜ್ಞ ಸ್ನೇಕ್ ಚಾಂಪು ಅವರು ಅದನ್ನು ರಕ್ಷಿಸಿದ್ದಾರೆ. ಬೇಸಿಗೆಯಲ್ಲಿ ಹಾವುಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಅವರು ಮನವಿ ಮಾಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಜ್ಯದಲ್ಲಿ ಬ್ಯಾನ್​​ ಆಗುತ್ತಾ ಸೋಲೋ ಟ್ರೆಕ್ಕಿಂಗ್?: ಅನುಭವ ಇದ್ದರೂ ಅಪಾಯ ಫಿಕ್ಸ್​​, ಯಾಕೆ ಗೊತ್ತಾ?

ಕೊಡಗು, ಏಪ್ರಿಲ್​​ 07: ಮಡಿಕೇರಿ ತಾಲೂಕಿನ ತಡಿಯಂಡಮೋಳ ಬೆಟ್ಟಕ್ಕೆ ಚಾರಣಕ್ಕೆಂದು ತೆರಳಿ ನಾಪತ್ತೆಯಾಗಿದ್ದ ಕೇರಳ ಮೂಲದ ಐಟಿ ಉದ್ಯೋಗಿ ಶರಣ್ಯಾ ಬರೋಬ್ಬರಿ 4 ದಿನಗಳ ಬಳಿಕ ಸುರಕ್ಷಿತವಾಗಿ ಪತ್ತೆಯಾಗಿದ್ದರು. ಆ ಬೆನ್ನಲ್ಲೇ ಅರಣ್ಯ ಇಲಾಖೆ ಕೊಡಗಿನ ತಡಿಯಂಡಮೋಳ ಟ್ರೆಕ್ಕಿಂಗ್ ಮಾರ್ಗವನ್ನು ಏಪ್ರಿಲ್ 11ರವರೆಗೆ ತಾತ್ಕಾಲಿಕವಾಗಿ ಮುಚ್ಚಿದೆ. ಈ ಮಾರ್ಗದಲ್ಲಿ ಕೆಲವು ಸುರಕ್ಷತಾ ಕ್ರಮಗಳನ್ನು ಬಲಪಡಿಸುವ ಯೋಜನೆ ಕೈಗೊಂಡಿರುವ ಹಿನ್ನೆಲೆ ಈ ನಿರ್ದಾರ ಕೈಗೊಂಡಿರೋದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೊಂದೆಡೆ ಸೋಲೋ ಟ್ರೆಕ್ಕಿಂಗ್​​ ಸಾಕಷ್ಟು ಅಪಾಯಕ್ಕೆ ಕಾರಣವಾಗಿರುವ ಕಾರಣ ಒಬ್ಬಂಟಿಯಾಗಿ ಚಾರಣಕ್ಕೆ ಹೋಗುವುದನ್ನು ನಿಷೇಧಿಸಬೇಕೆಂಬ ಆಗ್ರಹವೂ ವ್ಯಕ್ತವಾಗಿದೆ.

ಟ್ರೆಕ್ಕಿಂಗ್​​ಗೆಂದು ತೆರಳಿ ತಡಿಯಂಡಮೋಳ ಬೆಟ್ಟದಲ್ಲಿ ನಾಪತ್ತೆಯಾಗಿದ್ದ ಶರಣ್ಯಾಗೆ ಚಾರಣ ಹೊಸದೇನೂ ಆಗಿರಲಿಲ್ಲ. ಆ ಬಗ್ಗೆ ಸಾಕಷ್ಟು ಅನುಭವ ಅವರಿಗಿತ್ತು. ಹೀಗಾಗಿ ಟ್ರೆಕ್ಕರ್‌ಗಳು ಎಷ್ಟೇ ಅನುಭವ ಹೊಂದಿದ್ದರೂ ಪರಿಚಯವಿಲ್ಲದ ಮಾರ್ಗದಲ್ಲಿ ಒಬ್ಬರೇ ಟ್ರೆಕ್‌ಗೆ ಹೋಗುವುದು ಸೂಕ್ತವಲ್ಲ. ತಾವು ತೆರಳಲು ಉದ್ದೇಶಿಸಿದ ಮಾರ್ಗಗಳ ಕುರಿತು ಟ್ರೆಕ್ಕರ್‌ಗಳು ಮುಂಚಿತವಾಗಿ ಸಂಪೂರ್ಣ ಮಾಹಿತಿ ಸಂಗ್ರಹಿಸಿಕೊಳ್ಳಬೇಕು . ಒಬ್ಬರೇ ತೆರಳುವವರು ತಮ್ಮ ಹಾದಿಯನ್ನು ಜಾಗರೂಕತೆಯಿಂದ ಗುರುತಿಸಿಕೊಂಡು ಸಾಗಬೇಕು. ಹಲವು ಬಗೆಯ ನ್ಯಾವಿಗೇಶನ್ ಆಪ್‌ಗಳು ಲಭ್ಯವಿದ್ದು ಅವುಗಳನ್ನು ಬಳಸುವುದು ಒಳಿತು.  ಏಕೆಂದರೆ ಇವುಗಳಲ್ಲಿ ಪೂರ್ವನಕ್ಷಿತ ಮಾರ್ಗಗಳು ಲಭ್ಯವಿರುತ್ತವೆ ಎಂಬ ಅಭಿಪ್ರಾಯಗಳು ಕೂಡ ವ್ಯಕ್ತವಾಗಿವೆ. ಇನ್ನು ಟ್ರೆಕ್ಕರ್​​ಗಳು ಅಗತ್ಯ ಸಾಧನಗಳನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು. ಟಾರ್ಚ್‌ಲೈಟ್, ನೀರು ಮತ್ತು ಆಹಾರ, ಸೀಟಿ (whistle), ಪೋರ್ಟ್‌ಬಲ್ ಚಾರ್ಜರ್ ಮತ್ತು ಫಸ್ಟ್‌ಏಯ್ಡ್ ಕಿಟ್ ಈ ಪೈಕಿ ಇರಲೇ ಬೇಕಾದಂತವು ಎಂಬ ಸೂಚನೆಯನ್ನು ತಜ್ಞರು ನೀಡಿದ್ದಾರೆ.

ಇದನ್ನೂ ಓದಿ: ಕೊಡಗಿನಲ್ಲಿ ಟ್ರೆಕ್ಕಿಂಗ್​ಗೆ ತೆರಳಿ ನಿಗೂಢವಾಗಿ ನಾಪತ್ತೆಯಾಗಿದ್ದ ಯುವತಿ 4 ದಿನದ ಬಳಿಕ ಪತ್ತೆ

ಇನ್ನು ಕೊಡಗು ಜಿಲ್ಲೆಯ ಇತರೆ ಪ್ರಮುಖ ಟ್ರೆಕ್ಕಿಂಗ್ ಮಾರ್ಗಗಳಾದ ಸೋಮವಾರಪೇಟೆಯ ಬೀಡಹಳ್ಳಿಯಿಂದ ಆರಂಭವಾಗುವ ಕುಮಾರ ಪರ್ವತ ಟ್ರೆಕ್‌ಗೂ ಸ್ಪಷ್ಟ ಮಾರ್ಗಗಳಿದ್ದರೂ, ಅವು ಅರಣ್ಯ ಪ್ರದೇಶಗಳ ಮೂಲಕವೇ ಹೆಚ್ಚಾಗಿ ಸಾಗುವುದರಿಂದ ಇನ್ನಷ್ಟು ಸುರಕ್ಷತಾ ವ್ಯವಸ್ಥೆಗಳ ಅಗತ್ಯವಿದೆ. ಜೊತೆಗೆ ಈ ಮಾರ್ಗಗಳಲ್ಲಿ ಎಚ್ಚರಿಕೆ ಮತ್ತು ಸೂಚನಾ ಫಲಕಗಳ ಸ್ಥಾಪನೆ, ಸಂವಹನ ಕೇಂದ್ರಗಳ ನಿರ್ಮಾಣ, ವಿಶ್ರಾಂತಿ ಶೆಲ್ಟರ್‌ಗಳ ವ್ಯವಸ್ಥೆ, ಬ್ಯಾಕಪ್ ರೆಸ್ಕ್ಯೂ ತಂಡಗಳ ನಿಯೋಜನೆ ಮತ್ತು ಬೇಸ್ ಕ್ಯಾಂಪ್‌ಗಳಲ್ಲಿ ಆರೋಗ್ಯ ಸೇವೆಗಳ ಲಭ್ಯತೆ ಒದಗಿಸಬೇಕೇಂಬ ಬಗ್ಗೆಯೂ ಆಗ್ರಹ ಕೇಳಿಬಂದಿವೆ.

ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣಕ್ಕೆ ತೆರಳುವವರಿಂದ ಅರಣ್ಯ ಇಲಾಖೆ ತಲಾ‌ 250 ರೂ. ಶುಲ್ಕ ವಸೂಲಿ ಮಾಡುತ್ಯದೆ.‌ ಆದರೆ ಚಾರಣ ತೆರಳುವವರ ಜೊತೆ ಯಾವುದೇ ಸಿಬ್ಬಂದಿಯನ್ನು ಕಳುಹಿಸುವುದಿಲ್ಲ. ಶರಣ್ಯಾ ಪ್ರಕರಣದಿಂದಾದರೂ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಚಾರಣ ಬರುವವರ ಜೊತೆ ಕನಿಷ್ಠ ಒಬ್ಬ ಸಿಬ್ಬಂದಿಯನ್ನು ಖಡ್ಡಾಯವಾಗಿ ಕಳುಹಿಸುವಂತಾಗಬೇಕು. ಇದರಿಂದ ಚಾರಣಿಗರು ಸುರಕ್ಷಿತವಾಗಿ ಹಿಂದಿರುಗಲು ಅನುಕೂಲವಾಗುತ್ತದೆ ಎಂದು ವಕೀಲ ಅಚ್ಚಾಂಡಿರ ಪವನ್ ಪೆಮ್ಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ಬೀದಿ ಬದಿ ಕಸ ಹಾಕುವವರಿಗೆ ವಿಶಿಷ್ಟ ಬ್ಯಾನರ್ ಹಾಕಿ ವಾರ್ನಿಂಗ್ ಕೊಟ್ಟ ವ್ಯಕ್ತಿ

ಭಾರತದಲ್ಲಿ ಕಸದ ಸಮಸ್ಯೆಗಳು (garbage problem) ಹೆಚ್ಚಾಗುತ್ತಿದ್ದು, ಇದು ಮುಗಿಯದ ಗೋಳು ಎಂದರೂ ತಪ್ಪಿಲ್ಲ. ಹೌದು, ಪ್ರವಾಸಿ ತಾಣ, ಮನೆ, ಬೀದಿ ಬದಿ, ಸೇರಿದಂತೆ ಹೀಗೆ ಎಲ್ಲೆಂದರಲ್ಲಿ ಕಸ ಹಾಕುವುದು ಮಾತ್ರ ನಿಲ್ಲುತ್ತಿಲ್ಲ. ಈ ಸಮಸ್ಯೆಗಳನ್ನು ವಿದೇಶಿಗರು ತೋರಿಸುವ ಮಟ್ಟಿಗೆ ನಾವು ಬಂದು ತಲುಪಿದೆ. ಇದೀಗ ಬೀದಿ ಬದಿಯಲ್ಲಿ ಕಸ ಎಸೆದು ಹೋಗುವವರನ್ನೇ ಗುರಿಯಾಗಿಸಿಕೊಂಡು ಬ್ಯಾನರ್ ಹಾಕಿದ್ದು, ನಿನ್ನ ಹೆಣ ಸುಡಲು ಇನ್ನು ಕಸಬೇಕು ಹಾಗಾಗಿ ಕಸತಂದು ಹಾಕು. ಕಸದೊಂದಿಗೆ ನಿನ್ನ ಪಿಂಡಪ್ರದಾನ ಇಲ್ಲೇ ಮಾಡುವ ಎಂದು ಬರೆಯಲಾಗಿದೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಈ ವೈರಲ್ ವಿಡಿಯೋವನ್ನು ನಿಲಿಶಾ ಡಿಸೋಜ (Nilisha Dsouza) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯಬಾರದೆಂದು ಬೀದಿ ಬದಿಯಲ್ಲಿ ಒಂದು ಬ್ಯಾನರ್ ಹಾಕಿದ್ದಾರೆ. ನಿನ್ನ ಹೆಣ ಸುಡಲು ಇನ್ನು ಕಸಬೇಕು ಹಾಗಾಗಿ ಕಸತಂದು ಹಾಕು. ಕಸದೊಂದಿಗೆ ನಿನ್ನ ಪಿಂಡಪ್ರದಾನ ಇಲ್ಲೇ ಮಾಡುವ. ಭಾವಪೂರ್ಣ ಶ್ರದ್ದಾಂಜಲಿ. ಇಲ್ಲಿ ಕಸ ಹಾಕುವ ಆತ್ಮಗಳಿಗೆ ಅರ್ಪಣೆ. ಪ್ರಕಟಣೆ : ನಾನು ಎಂದು ಬರೆದಿರುವುದನ್ನು ಕಾಣಬಹುದು.

ವೈರಲ್‌ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ನಿರ್ಮಾಣದ ಹೆಸರಿನಲ್ಲಿ ಹದಗೆಟ್ಟ ಬೆಂಗಳೂರು; ವರ್ಷಗಳ ಬಳಿಕ ನಗರಕ್ಕೆ ಮರಳಿದ ವ್ಯಕ್ತಿ ಹೀಗೆಂದಿದ್ದೇಕೆ?

ಈ ವಿಡಿಯೋ ಮೂವತ್ತೂ ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಅಣ್ಣ ಅವರಿಗೆ ಕನ್ನಡ ಓದೋಕೆ ಬರ್ಲಿಲ್ಲ ಅಂದ್ರೆ ಹೇಗೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಒಳ್ಳೆ ಕೆಲಸ ಮಾಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಕಸದ ವಿಷಯದಲ್ಲಿ ಇವನ ಮನ ಎಷ್ಟು ನೊಂದಿರಬೇಡ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link