Category Archives: Blog

Your blog category

ಬ್ಯಾರಲ್​ಗೆ 120 ಡಾಲರ್ ಮುಟ್ಟಿದ ಕಚ್ಚಾ ತೈಲ ಬೆಲೆ; ಇತಿಹಾಸದಲ್ಲಿ ತೈಲ ಅತಿ ದುಬಾರಿ ಎನಿಸಿದ್ದು ಯಾವಾಗ ಗೊತ್ತಾ?

ಬ್ಯಾರಲ್​ಗೆ 120 ಡಾಲರ್ ಮುಟ್ಟಿದ ಕಚ್ಚಾ ತೈಲ ಬೆಲೆ; ಇತಿಹಾಸದಲ್ಲಿ ತೈಲ ಅತಿ ದುಬಾರಿ ಎನಿಸಿದ್ದು ಯಾವಾಗ ಗೊತ್ತಾ?

ಪಶ್ಚಿಮ ಏಷ್ಯಾದಲ್ಲಿ ಯುದ್ಧದ ರೌದ್ರಾವತಾರ ಕಡಿಮೆಗೊಳ್ಳುತ್ತಿಲ್ಲ. ಯುದ್ಧ ದಾಳಿಗೆ ತೈಲ ಸಂಗ್ರಹಗಾರಗಳೇ (Oil tanks) ಪ್ರಮುಖ ಟಾರ್ಗೆಟ್ ಆಗಿವೆ. ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ತೈಲ ಸಾಗಣೆಗೆ ತಡೆಯಾಗಿರುವುದರಿಂದ ಕಚ್ಚಾ ತೈಲ ಬೆಲೆ ಸಿಕ್ಕಾಪಟ್ಟೆ ಏರುತ್ತಿದೆ. ಕೆಲ ಕಚ್ಚಾ ತೈಲಗಳು (Crude Oils) ಬ್ಯಾರಲ್​ಗೆ 120 ಡಾಲರ್​ವರೆಗೂ ಬೆಲೆ ಏರಿಕೆ ಕಂಡಿವೆ. ಮರ್ಬನ್ ಕ್ರೂಡ್ 120 ಡಾಲರ್​ಗೆ ಏರಿದೆ. ಡಬ್ಲ್ಯುಟಿಐ ಕ್ರೂಡ್ 102 ಡಾಲರ್ ದಾಟಿದೆ. ಬ್ರೆಂಟ್ ಕ್ರೂಡ್ 107 ಡಾಲರ್ ಮುಟ್ಟಿದೆ. ಆದರೆ, ಡಬ್ಲ್ಯುಟಿಐ ಫ್ಯೂಚರ್ಸ್​ನ ಬೆಲೆ 120 ಡಾಲರ್​ಗೆ ಏರಿರುವುದು ಚಿಂತೆಯ ವಿಷಯವಾಗಿದೆ.

2008ರದ್ದು ದಾಖಲೆ ತೈಲ ಬೆಲೆ

2-3 ವಾರಗಳ ಹಿಂದಷ್ಟೇ ತೈಲ ಬೆಲೆ ಬ್ಯಾರಲ್​ಗೆ 66 ಡಾಲರ್ ಇತ್ತು. ಬಹಳ ವೇಗವಾಗಿ ಇದರ ಬೆಲೆ ಬಹುತೇಕ ಎರಡು ಪಟ್ಟು ಹೆಚ್ಚಿದೆ. 18 ವರ್ಷದ ಹಿಂದೆ ತೈಲ ಬೆಲೆ (ಡಬ್ಲ್ಯುಟಿಐ ಕ್ರೂಡ್) ಬ್ಯಾರಲ್​ಗೆ 147 ಡಾಲರ್ ಇತ್ತು. ಅದು ಸಾರ್ವಕಾಲಿಕ ಗರಿಷ್ಠ ತೈಲ ಬೆಲೆ ಎನಿಸಿದೆ. ಆಗ ಜಾಗತಿಕ ರಾಜಕೀಯ ಅನಿಶ್ಚಿತ ಸ್ಥಿತಿ ಜೊತೆಗೆ ಚೀನಾದಿಂದ ಸಿಕ್ಕಾಪಟ್ಟೆ ತೈಲ ಖರೀದಿ ನಡೆದಿತ್ತು. ಹೀಗಾಗಿ, ಕಚ್ಚಾ ತೈಲ 2008ರಲ್ಲಿ ದುಬಾರಿಯಾಗಿತ್ತು. ಪ್ರಸಕ್ತ ಬಿಕ್ಕಟ್ಟು ಹೀಗೆಯೇ ಮುಂದುವರಿದರೆ 2008ರ ದಾಖಲೆಯನ್ನು ಮುರಿಯುವ ಸಾಧ್ಯತೆ ಇದೆ.

ಇದನ್ನೂ ಓದಿ: ಪೆಟ್ರೋಲ್ , ಡೀಸೆಲ್ ಬೆಲೆ ಏರಿಕೆ ಆಗುವುದಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

ಕಚ್ಛಾ ತೈಲ ಬೆಲೆ ದುಬಾರಿಯಾದರೆ ಭಾರತದ ಮೇಲೇನು ಪರಿಣಾಮ?

  • ಆರ್ಥಿಕತೆಗೆ ಹಿನ್ನಡೆ: ತಜ್ಞರ ಪ್ರಕಾರ ಬ್ಯಾರಲ್​ಗೆ 10 ಡಾಲರ್​ನಷ್ಟು ಬೆಲೆ ಏರಿಕೆಯಾದರೆ, ಭಾರತದ ಜಿಡಿಪಿ ಬೆಳವಣಿಗೆ 50 ಮೂಲಾಂಕಗಳಷ್ಟು (ಶೇ. 0.5) ಹಿನ್ನಡೆ ಹೊಂದುತ್ತದೆ.
  • ಹಣದುಬ್ಬರ ಏರಿಕೆ: ಕಚ್ಚಾ ತೈಲ ಬೆಲೆ ಏರಿಕೆಯಾದರೆ ಪೆಟ್ರೋಲ್, ಡೀಸಲ್, ಎಲ್​ಪಿಜಿ, ಎಲ್​ಎನ್​ಜಿ, ಪಿಎನ್​ಜಿ ಇತ್ಯಾದಿ ಬೆಲೆಗಳೆಲ್ಲವೂ ಏರುತ್ತವೆ. ಇದರಿಂದಾಗಿ ಇತರ ಹಲವು ಸರಕುಗಳ ಬೆಲೆ ಏರುತ್ತದೆ. ಪರಿಣಾಮವಾಗಿ, ಹಣದುಬ್ಬರ ಹೆಚ್ಚುತ್ತದೆ.
  • ಕರೆಂಟ್ ಅಕೌಂಟ್ ಡೆಫಿಸಿಟ್ ಏರಿಕೆ: ದುಬಾರಿ ಬೆಲೆಗೆ ತೈಲವನ್ನು ಆಮದು ಮಾಡಿಕೊಳ್ಳುವುದರಿಂದ ಭಾರತ ಹೆಚ್ಚು ಡಾಲರ್​ಗಳನ್ನು ವ್ಯಯಿಸಬೇಕು. ಇದರಿಂದ ಕರೆಂಟ್ ಅಕೌಂಟ್ ಡೆಫಿಸಿಟ್ ಉಂಟಾಗುತ್ತದೆ. ಡಾಲರ್ ಎದುರು ರುಪಾಯಿ ಮತ್ತಷ್ಟು ದುರ್ಬಲಗೊಳ್ಳುತ್ತದೆ. ಇದರಿಂದ ಆಮದು ವೆಚ್ಚ ಮತ್ತಷ್ಟು ಹೆಚ್ಚುತ್ತದೆ. ಇದು ಹಣದುಬ್ಬರ ಮತ್ತಷ್ಟು ಹೆಚ್ಚಲು ಕಾರಣವಾಗುತ್ತದೆ.

ಇದನ್ನೂ ಓದಿ: ಎಲ್​ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ, ಗ್ರಾಹಕರಿಗೆ ಬಿಗ್ ಶಾಕ್

ತೈಲದ ಶಾಕ್ ತಾತ್ಕಾಲಿಕ ಮಾತ್ರ?

ಐತಿಹಾಸಿಕವಾಗಿ ನೋಡಿದಾಗ ತೈಲ ಬಿಕ್ಕಟ್ಟು ಹಲವು ಬಾರಿ ಎದುರಾಗಿದೆ. ಆದರೆ, ದೀರ್ಘ ಕಾಲ ಈ ಬಿಕ್ಕಟ್ಟು ಮುಂದುವರಿದ್ದಿದ್ದಿಲ್ಲ. ಈ ಬಾರಿಯೂ ಪಶ್ಚಿಮ ಏಷ್ಯಾದಲ್ಲಿ ಬಿಕ್ಕಟ್ಟು ಬೇಗ ಮುಗಿಯುವ ನಿರೀಕ್ಷೆ ಇದೆ. ಅಕಸ್ಮಾತ್, ತೈಲ ಪೂರೈಕೆ ತಿಂಗಳುಗಟ್ಟಲೆ ಸ್ಥಗಿತಗೊಂಡರೆ ಆಗ ಪರಿಸ್ಥಿತಿ ಕಷ್ಟಕರವಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸದ್ದಡಗಿಸಲು ಬಂದು ಸದ್ದಿಲ್ಲದೇ ನಿಂತ ಮಿಚೆಲ್ ಸ್ಯಾಂಟ್ನರ್..!

T20 World Cup 2026: ಟಿ20 ವಿಶ್ವಕಪ್ ಫೈನಲ್ ಪಂದ್ಯದ ಆರಂಭಕ್ಕೂ ಮುನ್ನ ಅಹದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತೀಯ ಪ್ರೇಕ್ಷಕರ ಸದ್ದಗಿಸುವುದೇ ನಮ್ಮ ಗುರಿ ಎಂದಿದ್ದ ನ್ಯೂಝಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ ಪಂದ್ಯದ ಬಳಿಕ ಸ್ತಬ್ಧರಾಗಿ ನಿಂತಿರುವುದು ಕಂಡು ಬಂದಿದೆ.

ಈ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಮಿಚೆಲ್ ಸ್ಯಾಂಟ್ನರ್, 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಪ್ಯಾಟ್ ಕಮ್ಮಿನ್ಸ್ ಹೇಳಿದಂತೆಯೇ, ಲಕ್ಷಾಂತರ ಭಾರತೀಯ ಅಭಿಮಾನಿಗಳ ಮುಂದೆ ಆಡುವಾಗ “ಸ್ಟೇಡಿಯಂನಲ್ಲಿರುವ ಅಭಿಮಾನಿಗಳನ್ನು ಮೌನಗೊಳಿಸುವುದೇ ನಮ್ಮ ಗುರಿ” ಎಂದಿದ್ದರು.

ಈ ಮೂಲಕ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾ ಅಭಿಮಾನಿಗಳ ಸದ್ದಡಗಿಸಿ ಟ್ರೋಫಿ ಗೆಲ್ಲುವ ವಿಶ್ವಾಸವನ್ನು ಸ್ಯಾಂಟ್ನರ್ ವ್ಯಕ್ತಪಡಿಸಿದ್ದರು.

ಆದರೆ ಫೈನಲ್ ಪಂದ್ಯವನ್ನು ಟೀಮ್ ಇಂಡಿಯಾ ಏಕಪಕ್ಷೀಯವಾಗಿ ಮುಗಿಸುತ್ತಿದ್ದಂತೆ ಇತ್ತ ನಾಯಕ ಮಿಚೆಲ್ ಸ್ಯಾಂಟ್ನರ್ ಭಾವುಕರಾಗಿ ಕಂಡು ಬಂದರು. ಅದರಲ್ಲೂ ಮ್ಯಾಚ್ ಮುಗಿದ ಬಳಿಕ ನಿಶ್ಶಬದ್ಧರಾಗಿ ಮೈದಾನದಲ್ಲಿ ಏಕಾಂಗಿಯಾಗಿ ನಿಂತಿದ್ದರು.

ಇದೀಗ ಟಿ20 ವಿಶ್ವಕಪ್​ ಬಳಿಕ  “ಕಣ್ಣೀರು ತುಂಬಿದ ಕಣ್ಣುಗಳು”ಗಳೊಂದಿಗೆ ಕಾಣಿಸಿಕೊಂಡ ಮಿಚೆಲ್ ಸ್ಯಾಂಟ್ನರ್ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವೈರಲ್ ಫೋಟೋಗೆ ಸದ್ದಡಗಿಸಲು ಬಂದು ಸದ್ದಿಲ್ಲದೇ ನಿಂತಿದ್ದಾರಾ ಎಂಬಾರ್ಥದಲ್ಲಿ ಅನೇಕರು ಪ್ರತಿಕ್ರಿಯಿಸಿ ಕಾಲೆಳೆದಿದ್ದಾರೆ.

 

Source link

ಸಾಕು ನಾಯಿಗೆ ಅದ್ದೂರಿಯಾಗಿ ಸೀಮಂತ: ಆರತಿ ಎತ್ತಿ, ಉಡಿ ತುಂಬಿದ ಮಹಿಳೆಯರು

ಧಾರವಾಡ, ಮಾರ್ಚ್​​ 09: ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿ ಮುದ್ದಿನ ಸಾಕು ನಾಯಿಗೆ ಕುಟುಂಬಸ್ಥರು ಅದ್ದೂರಿಯಾಗಿ ಸೀಮಂತ ಕಾರ್ಯಕ್ರಮ ಮಾಡಿದ್ದಾರೆ. ಮಹದೇವಿ ನಾಯ್ಕರ್ ಅವರ ಮನೆಯವರು ಗರ್ಭಿಣಿಯಾಗಿದ್ದ ಡಾಬರಮನ್ ತಳಿಯ ಶ್ವಾನಕ್ಕೆ ಮುತ್ತೈದೆಯರನ್ನು ಕರೆಯಿಸಿ ಉಡಿ ತುಂಬಿಸಿದ್ದಾರೆ. ಅನೇಕ ಧಾರ್ಮಿಕ ವಿಧಿ ವಿಧಾನದಂತೆ ಸೀಮಂತ ಕಾರ್ಯಕ್ರಮ ನಡೆದಿದ್ದು, ಈ ವೇಳೆ ಗ್ರಾಮದ ಜನರು ಉಪಸ್ಥಿತರಿದ್ದರು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪ್ರಾದೇಶಿಕ ಪಕ್ಷ ಕಟ್ಟುವ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್ ಮಹತ್ವದ ಘೋಷಣೆ

ನವದೆಹಲಿ, ಮಾರ್ಚ್ 9: ಬಿಜೆಪಿಯಿಂದ ಉಚ್ಚಾಟನೆಯಾಗಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸುವ ಬಗ್ಗೆ ಸಮವಾರ ಮಹತ್ವದ ಘೋಷಣೆ ಮಾಡಿದ್ದಾರೆ. ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಬಿಜೆಪಿಯ ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ಬಂದಿಲ್ಲ. ಪುತ್ರನ ಮದುವೆಯ ಆಹ್ವಾನ ನೀಡಲು ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯ್ಷ ಬಿವೈ ವಿಜಯೇಂದ್ರ, ಸಂಸದ ಬಿವೈ ರಾಘವೇಂದ್ರ ಅವರಂತಹ ಕಡು ಭ್ರಷ್ಟ ಕುಟುಂಬ ಬಿಜೆಪಿಯಲ್ಲಿ ಇರುವವರೆಗೂ ಪಕ್ಷ ಸೇರಲು ಇಷ್ಟಪಡುವುದಿಲ್ಲ ಎಂದು ಯತ್ನಾಳ್ ಹೇಳಿದ್ದಾರೆ. ಬಿಜೆಪಿ ಕರೆಯುವ ನಿರೀಕ್ಷೆಯಲ್ಲಿ ಇರಲು ತಾನು ಹುಚ್ಚನಲ್ಲ ಎಂದು ಹೇಳಿದ ಅವರು, ಪಶ್ಚಿಮ ಬಂಗಾಳ, ಬಿಹಾರ್ ಅಥವಾ ಉತ್ತರ ಪ್ರದೇಶ ಚುನಾವಣೆಗಳ ನಂತರ ಬಿಜೆಪಿ ಕರೆದರೂ ನಿರ್ಧಾರ ಬದಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಾದೇಶಿಕ ಪಕ್ಷವನ್ನು ಕಟ್ಟುವುದಾಗಿ ಘೋಷಿಸಿದ ಅವರು, ಸೂಕ್ತ ಸಮಯದಲ್ಲಿ ಪಕ್ಷ ಘೋಷಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಅದು ಜೆಸಿಬಿ ಚಿಹ್ನೆಯಡಿ ಕಾರ್ಯನಿರ್ವಹಿಸಲಿದೆಯೇ ಎಂಬ ಪ್ರಶ್ನೆಗೆ, ನೋಡೋಣ ಎಂದು ಉತ್ತರಿಸಿದ್ದಾರೆ. ತಮ್ಮದೇ ಪಕ್ಷ ರಚನೆಯಾಗಲಿದ್ದು, ಮುಂದಿನ ಬಾರಿ ನಾವೇ ಅಧಿಕಾರ ಹಿಡಿಯಲಿದ್ದೇವೆ. ಮುಖ್ಯಮಂತ್ರಿಯಾಗಲಿದ್ದೇನೆ ಎಂದು ಯತ್ನಾಳ್ ದೃಢವಾಗಿ ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸ್ಪೀಕರ್ ಅವಿಶ್ವಾಸ ನಿರ್ಣಯದ ನಡುವೆಯೇ ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಕುರಿತು ರಾಜ್ಯಸಭೆಗೆ ವಿವರ ಕೊಟ್ಟ ಜೈಶಂಕರ್

ನವದೆಹಲಿ, ಮಾರ್ಚ್​ 09: ಸ್ಪೀಕರ್(Speaker) ಮೇಲಿನ ಅವಿಶ್ವಾಸ ನಿರ್ಣಯದ ನಡುವೆಯೇ ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ಕುರಿತು ವಿದೇಶಾಂಗ ಸಚಿವ ಎಸ್ ಜೈಶಂಕರ್ ರಾಜ್ಯಸಭೆಗೆ ವಿವರಣೆ ನೀಡಿದ್ದಾರೆ. ಪ್ರಧಾನಿ ಮೋದಿ ಈ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಎಲ್ಲಾ ಕಡೆಯವರು ಉದ್ವಿಗ್ನತೆಯನ್ನು ಶಮನಗೊಳಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆಯೇ ಮುಂದಿನ ಮಾರ್ಗ ಎಂಬ ಸರ್ಕಾರದ ನಿಲುವನ್ನು ಪುನರುಚ್ಚರಿಸಿದರು.

ಕೇಂದ್ರದ ವಿದೇಶಾಂಗ ನೀತಿ ನಿಲುವು ಮತ್ತು ಪ್ರಕ್ಷುಬ್ಧತೆಗೆ ಭಾರತದ ಪ್ರತಿಕ್ರಿಯೆಯ ಕುರಿತು ಕೇಂದ್ರವನ್ನು ಪ್ರಶ್ನಿಸಲು ಪೂರ್ಣ ಪ್ರಮಾಣದ ಚರ್ಚೆಗೆ ವಿರೋಧ ಪಕ್ಷದ ಸಂಸದರು ಒತ್ತಾಯಿಸಿದರು.
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿರುವ ಕಾಂಗ್ರೆಸ್, ಈ ಸಂಬಂಧ ತನ್ನ ಸಂಸದರಿಗೆ ವಿಪ್ ಜಾರಿ ಮಾಡಿತ್ತು.

ಸ್ಪೀಕರ್ ಓಂ ಬಿರ್ಲಾರ ಅವರ ಪದಚ್ಯುತಿ ಕೋರಿ ಸಲ್ಲಿಸಲಾಗಿರುವ ನೋಟಿಸ್‌ ಮುಂದಿನ ವಾರ ಲೋಕಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆಯಿದೆ. ಹೀಗಾಗಿ ಕಾಂಗ್ರೆಸ್ ತನ್ನ ಸಂಸದರಿಗೆ ವಿಪ್ ಜಾರಿ ಮಾಡಿದ್ದು, ಮಾರ್ಚ್ 9 ರಿಂದ 11 ರವರೆಗೆ ಕಡ್ಡಾಯವಾಗಿ ಲೋಕಸಭೆಯಲ್ಲಿ ಹಾಜರಿರಬೇಕು ಎಂದು ಸೂಚಿಸಿದೆ.

ಮತ್ತಷ್ಟು ಓದಿ: ಸ್ಪೀಕರ್ ಓಂ ಬಿರ್ಲಾ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ಗೊತ್ತುವಳಿ ನೋಟಿಸ್, ಸಹಿ ಹಾಕಲ್ಲ ಎಂದ ಟಿಎಂಸಿ ಶಾಸಕರು

ಬಜೆಟ್ ಅಧಿವೇಶನದ ದ್ವಿತೀಯಾರ್ಧದ ಮೊದಲ ಮೂರು ದಿನಗಳವರೆಗೆ ತನ್ನ ಸಂಸದರು ಕೆಳಮನೆಯಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಎಂದು ಕಾಂಗ್ರೆಸ್ ಮೂರು ಸಾಲಿನ ವಿಪ್ ಅನ್ನು ಜಾರಿಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

ಇರಾನ್ ಜೊತೆಗಿನ ಅಮೆರಿಕ-ಇಸ್ರೇಲ್ ಯುದ್ಧವು 10ನೇ ದಿನಕ್ಕೆ ಕಾಲಿಟ್ಟಿದ್ದು, ದಾಳಿಯಲ್ಲಿ ಸುಪ್ರೀಂ ನಾಯಕ ಅಲಿ ಖಮೇನಿ ಸಾವನ್ನಪ್ಪಿದ್ದಾರೆ. ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಇರಾನ್ ಮೊಜ್ತಬಾ ಖಮೇನಿ ಅವರನ್ನು ಹೊಸ ನಾಯಕರನ್ನಾಗಿ ಹೆಸರಿಸಿದೆ. ಡ್ರೋನ್ ದಾಳಿಗಳು, ಹೆಜ್ಬೊಲ್ಲಾ ದಾಳಿಗಳು ಮತ್ತು ಹೆಚ್ಚುತ್ತಿರುವ ಉದ್ವಿಗ್ನತೆಗಳೊಂದಿಗೆ, ಜಾಗತಿಕ ನಾಯಕರು ದೊಡ್ಡ ಯುದ್ಧವನ್ನು ತಪ್ಪಿಸಲು ಮಾತುಕತೆಗೆ ಒತ್ತಾಯಿಸುತ್ತಿದ್ದಾರೆ.

ಖಮೇನಿ ಅವರ ಮಗ ಮೊಜ್ತಾಬಾ ಖಮೇನಿ ಅವರನ್ನು ದೇಶವನ್ನು ಮುನ್ನಡೆಸಲು ಆಯ್ಕೆ ಮಾಡಲಾಗಿದೆ. ಇರಾನ್‌ನ ಹೊಸ ನಾಯಕ ಅವರ ಅನುಮೋದನೆಯಿಲ್ಲದೆ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಟ್ರಂಪ್ ಹೇಳಿದ್ದರೂ, ಇರಾನ್ ಕೂಡ ಎಲ್ಲೆಂದರಲ್ಲಿ ದಾಳಿ ನಡೆಸುವುದನ್ನು ಮುಂದುವರೆಸಿದೆ. ಇರಾನ್ ಯಾವುದೇ ಮಾತುಕತೆಗೆ ಒಪ್ಪುತ್ತಿಲ್ಲ. ಎರಡೂ ಕಡೆಯವರು ನಿರಂತರವಾಗಿ ಪರಸ್ಪರ ಬಾಂಬ್ ದಾಳಿ ನಡೆಸುತ್ತಿದ್ದಾರೆ, ಟೆಹ್ರಾನ್ ಗಲ್ಫ್ ದೇಶಗಳಲ್ಲಿನ ಅಮೆರಿಕಕ್ಕೆ ಸಂಬಂಧಿಸಿದ ಕಚೇರಿ ಮೇಲೆ ದಾಳಿ ನಡೆಸುತ್ತಿದೆ.

ಇಸ್ರೇಲ್ ಲೆಬನಾನ್‌ನಲ್ಲಿ ಹೆಜ್ಬೊಲ್ಲಾವನ್ನು ಗುರಿಯಾಗಿಸಲು ತನ್ನ ದಾಳಿಯನ್ನು ವಿಸ್ತರಿಸುತ್ತಿದೆ, ಇರಾನ್‌ನಲ್ಲಿ ಕಾರ್ಯಾಚರಣೆಗಳು ನಾಲ್ಕು ವಾರಗಳವರೆಗೆ ಮುಂದುವರೆಯಬಹುದು ಎಂದು ಟ್ರಂಪ್ ಹೇಳಿದ್ದರು. ಶಾಶ್ವತವಾಗಿ ಯುದ್ಧಕ್ಕೆ ಸಾಕಾಗುವಷ್ಟು ಅಮೆರಿಕದ ಯುದ್ಧಸಾಮಗ್ರಿಗಳ ತಮ್ಮ ಬಳಿ ಇವೆ ಎಂದು ಟ್ರಂಪ್ ಹೆಮ್ಮೆ ಪಟ್ಟಿದ್ದರು.

 

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಗೋಕರ್ಣ ಸಮೀಪದ 44 ರೆಸಾರ್ಟ್​​ಗಳ ತೆರವಿಗೆ ಆದೇಶ! ಕಾರಣ ಇಲ್ಲಿದೆ

ಕಾರವಾರ, ಮಾರ್ಚ್ 9: ಉತ್ತರ ಕನ್ನಡ (Uttara Kannada) ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಸಮೀಪದ ದುಬ್ಬನಸಶಿ ಗ್ರಾಮದಲ್ಲಿ ಕರಾವಳಿ ನಿಯಂತ್ರಣ ವಲಯ (Coastal Regulation Zone/CRZ) ನಿಯಮ ಉಲ್ಲಂಘಿಸಿ ಅನಧಿಕೃತವಾಗಿ ನಿರ್ಮಿಸಲಾದ ರೆಸಾರ್ಟ್‌ಗಳ ವಿರುದ್ಧ ತಾಲೂಕು ಆಡಳಿತ ಕಠಿಣ ಕ್ರಮ ಕೈಗೊಂಡಿದೆ. ಕುಮಟಾ ತಹಶೀಲ್ದಾರ್ ಶ್ರೀಕೃಷ್ಣ ಅವರು ಒಟ್ಟು 44 ಅನಧಿಕೃತ ರೆಸಾರ್ಟ್‌ಗಳನ್ನು ತೆರವುಗೊಳಿಸಲು ಆದೇಶ ನೀಡಿದ್ದಾರೆ. ಈ ರೆಸಾರ್ಟ್‌ಗಳು ದುಬ್ಬನಸಶಿ, ನಡುಮಸ್ಕೇರಿ ಸೇರಿದಂತೆ ಅರಬ್ಬಿ ಸಮುದ್ರ ತೀರದ ಭಾಗಗಳಲ್ಲಿ ನಿರ್ಮಾಣಗೊಂಡಿವೆ.

ಆದರೆ 44 ರೆಸಾರ್ಟ್‌ಗಳ ಪೈಕಿ 16 ರೆಸಾರ್ಟ್ ಮಾಲೀಕರು ಹೈಕೋರ್ಟ್‌ನಿಂದ ತಡೆಯಾಜ್ಞೆ ಪಡೆದಿದ್ದಾರೆ. ಈ ಕಾರಣದಿಂದಾಗಿ ಆ ರೆಸಾರ್ಟ್‌ಗಳನ್ನು ಈಗಿನ ಪರಿಸ್ಥಿತಿಯಲ್ಲಿ ತೆರವುಗೊಳಿಸಲಾಗುವುದಿಲ್ಲ.

ಇನ್ನುಳಿದ 28 ರೆಸಾರ್ಟ್‌ಗಳ ಪೈಕಿ 7 ರೆಸಾರ್ಟ್‌ಗಳನ್ನು ಮಾಲೀಕರು ಸ್ವಯಂ ಪ್ರೇರಿತವಾಗಿ ತೆರವು ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಉಳಿದ 21 ರೆಸಾರ್ಟ್‌ಗಳನ್ನು ತಾಲೂಕು ಆಡಳಿತ ಸೀಜ್ ಮಾಡಿ, ನಿಯಮಾನುಸಾರವಾಗಿ ತೆರವುಗೊಳಿಸುವ ಕ್ರಮ ಕೈಗೊಳ್ಳಲಿದೆ ಎಂದು ಕುಮಟಾ ತಹಶೀಲ್ದಾರ್ ಶ್ರೀಕೃಷ್ಣ ‘ಟಿವಿ9’ಗೆ ಮಾಹಿತಿ ನೀಡಿದ್ದಾರೆ.

ಇದೇ ವೇಳೆ ಅನಧಿಕೃತ ರೆಸಾರ್ಟ್ ತೆರವು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ BNS 163ರ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ದುಬ್ಬನಸಶಿ, ಗಂಗೆಕೊಳ್ಳ ಹಾಗೂ ಭಾವಿಕೊಡ್ಲ ಗ್ರಾಮಗಳಲ್ಲಿ ಮಾರ್ಚ್ 9ರ ಬೆಳಗ್ಗೆ 10 ರಿದ 10ರ ಬೆಳಗ್ಗೆ 10 ಗಂಟೆ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಕುಮಟಾ ಸಹಾಯಕ ಆಯುಕ್ತ ಶ್ರವಣಕುಮಾರ ಈ ಆದೇಶ ಹೊರಡಿಸಿದ್ದಾರೆ.

ದುಬ್ಬನಸಶಿಯಲ್ಲಿ ಪ್ರತಿಭಟನೆ

ಇನ್ನೊಂದೆಡೆ ರೆಸಾರ್ಟ್ ತೆರವು ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ರೆಸಾರ್ಟ್ ಮಾಲೀಕರು ಮತ್ತು ಕಾರ್ಮಿಕರು ದುಬ್ಬನಸಶಿಯಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ದಿನಕರ ಶೆಟ್ಟಿ, ‘ರೆಸಾರ್ಟ್ ತೆರವು ಮಾಡಲು ಬಿಡುವುದಿಲ್ಲ, ನಿಮ್ಮ ಜೊತೆ ನಾನು ಇದ್ದೇನೆ. ನ್ಯಾಯ ಸಿಗಬೇಕು’ ಎಂದು ಘೋಷಣೆ ಕೂಗಿ ಬೆಂಬಲ ವ್ಯಕ್ತಪಡಿಸಿದರು.

ಇದನ್ನೂ ಓದಿ: “ನಮ್ಮನ್ನು ಮುಸ್ಲಿಂ, ಕ್ರಿಶ್ಚಿಯನ್ನರು ಸೋಲಿಸಿಲ್ಲ ಹಿಂದೂಗಳು ಸೋಲಿಸಿದ್ದು”: ಭಟ್ಕಳದಲ್ಲಿ ಅಬ್ಬರಿಸಿದ ಅನಂತಕುಮಾರ್ ಹೆಗಡೆದ

ಈ ಹಿನ್ನೆಲೆಯಲ್ಲಿ ಗೋಕರ್ಣ ಸಮೀಪದ ಕರಾವಳಿ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ತಾಲೂಕು ಆಡಳಿತ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಂಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗಂಡ-ಹೆಂಡತಿ ಜಗಳ ಸಾವಿನಲ್ಲಿ ಅಂತ್ಯ; ಅಳಿಯನೇ ಮಗಳನ್ನು ಸಾಯಿಸಿದ್ದಾನೆಂದ ಕುಟುಂಬಸ್ಥರು!

ಚಿಕ್ಕಬಳ್ಳಾಪುರ, ಮಾರ್ಚ್​ 09: ಜಿಲ್ಲೆಯ ಆರ್. ಚೊಕ್ಕನಹಳ್ಳಿ ಗ್ರಾಮದಲ್ಲಿ ವರಲಕ್ಷ್ಮಿ (25) ಎಂಬ ಯುವತಿಯ ಅನುಮಾನಾಸ್ಪದ ಸಾವು ಪ್ರಕರಣ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಪ್ರೇಮಿಗಳ ನಡುವೆ ಮಧ್ಯಸ್ಥಿಕೆ ವಹಿಸಬೇಡಿ ಎಂದು ಗಂಡ ಗಂಗರಾಜು ಬುದ್ದಿವಾದ ಹೇಳಿದ ಹಿನ್ನೆಲೆ ಗಂಡ-ಹೆಂಡತಿಯ ನಡುವೆ ಗಲಾಟೆ ನಡೆದಿದ್ದಾಗಿ ತಿಳಿದುಬಂದಿದೆ. ವರಲಕ್ಷ್ಮಿ ಸ್ನೇಹಿತೆ ಶ್ರಾವಣಿಯ ಪ್ರಿಯಕರ ವರಲಕ್ಷ್ಮಿಗೆ ಕರೆ ಮಾಡಿದ್ದು, ಅದನ್ನು ಗಂಗರಾಜು ಸ್ವೀಕರಿಸಿದ್ದರಿಂದ ಜಗಳ ಉಂಟಾಗಿತ್ತು ಎನ್ನಲಾಗಿದೆ. ನಂತರ ವರಲಕ್ಷ್ಮಿ ಗಂಡನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಪತ್ನಿಯನ್ನು ಹೊಡೆದು ಬಳಿಕ ನೇಣು ಹಾಕಿದ್ದಾರೆ ಎಂದು ಮೃತಳ ತವರು ಮನೆಯವರು ಗಂಗರಾಜು ಹಾಗೂ ಅವನ ತಂದೆ-ತಾಯಿಯ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ಇದೇ ವೇಳೆ ಶವವನ್ನು ಸಕಾಲಕ್ಕೆ ತೋರಿಸಲಿಲ್ಲ ಎಂದು ಆರೋಪಿಸಿ ಪೆರೇಸಂದ್ರ ಪೊಲೀಸರು ಹಾಗೂ ಗುಡಿಬಂಡೆ ತಾಲೂಕು ಆಸ್ಪತ್ರೆ ವಿರುದ್ಧ ಮೃತಳ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Gold Rates: ಚಿನ್ನದ ಬೆಲೆ 10 ಗ್ರಾಮ್​ಗೆ 1,800 ರೂ ಇಳಿಕೆ; ಇಲ್ಲಿದೆ ದರಪಟ್ಟಿ

ಬೆಂಗಳೂರು, ಮಾರ್ಚ್ 9: ಚಿನ್ನದ ಬೆಲೆ ಭರ್ಜರಿ ಇಳಿಕೆ ಕಂಡಿದೆ. ವಾರಾಂತ್ಯದಲ್ಲಿ ಜಿಗಿದಿದ್ದ ಇದರ ಬೆಲೆ ಇವತ್ತು ಸೋಮವಾರ ಗ್ರಾಮ್​ಗೆ 180 ರೂಗಳಷ್ಟು ಕಡಿಮೆ ಆಗಿದೆ. ಆಭರಣ ಚಿನ್ನದ ಬೆಲೆ (Gold Rates) ಮತ್ತೊಮ್ಮೆ 15,000 ರೂ ಗಡಿಯೊಳಗೆ ಬಂದಿದೆ. ಕಳೆದ ವಾರ ಸತತ ನಾಲ್ಕೈದು ದಿನ ಬಂಗಾರದ ಬೆಲೆ ಇಳಿಕೆಯಾಗಿತ್ತು. ಅದೇ ಟ್ರೆಂಡ್ ಈ ವಾರವೂ ಮುಂದುವರಿಯುತ್ತದಾ ನೋಡಬೇಕು. ಇನ್ನು, ಬೆಳ್ಳಿ ಬೆಲೆಯೂ ಇವತ್ತು ಕಡಿಮೆಗೊಂಡಿದೆ. ಗ್ರಾಮ್​ಗೆ 5 ರೂನಷ್ಟು ತಗ್ಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,48,200 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,61,680 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 28,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,48,200 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 28,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 29,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮಾರ್ಚ್ 9ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,168 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,820 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,126 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 280 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,168 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,820 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 280 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,820 ರೂ
  • ಚೆನ್ನೈ: 14,950 ರೂ
  • ಮುಂಬೈ: 14,820 ರೂ
  • ದೆಹಲಿ: 14,835 ರೂ
  • ಕೋಲ್ಕತಾ: 14,820 ರೂ
  • ಕೇರಳ: 14,820 ರೂ
  • ಅಹ್ಮದಾಬಾದ್: 14,825 ರೂ
  • ಜೈಪುರ್: 14,835 ರೂ
  • ಲಕ್ನೋ: 14,835 ರೂ
  • ಭುವನೇಶ್ವರ್: 14,820 ರೂ

ಇದನ್ನೂ ಓದಿ: ಕೇಂದ್ರದ ಈ ಪ್ರಮುಖ ಹಣಕಾಸು ಯೋಜನೆಗಳಲ್ಲಿ ಮಹಿಳೆಯರೇ ಹೆಚ್ಚು ಫಲಾನುಭವಿಗಳು

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 616 ರಿಂಗಿಟ್ (14,331 ರುಪಾಯಿ)
  • ದುಬೈ: 577.25 ಡಿರಾಮ್ (14,508 ರುಪಾಯಿ)
  • ಅಮೆರಿಕ: 161.50 ಡಾಲರ್ (14,907 ರುಪಾಯಿ)
  • ಸಿಂಗಾಪುರ: 203.30 ಸಿಂಗಾಪುರ್ ಡಾಲರ್ (14,636 ರುಪಾಯಿ)
  • ಕತಾರ್: 572 ಕತಾರಿ ರಿಯಾಲ್ (14,475 ರೂ)
  • ಸೌದಿ ಅರೇಬಿಯಾ: 585 ಸೌದಿ ರಿಯಾಲ್ (14,387 ರುಪಾಯಿ)
  • ಓಮನ್: 61.25 ಒಮಾನಿ ರಿಯಾಲ್ (14,686 ರುಪಾಯಿ)
  • ಕುವೇತ್: 47.13 ಕುವೇತಿ ದಿನಾರ್ (14,214 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 280 ರೂ
  • ಚೆನ್ನೈ: 290 ರೂ
  • ಮುಂಬೈ: 280 ರೂ
  • ದೆಹಲಿ: 280 ರೂ
  • ಕೋಲ್ಕತಾ: 280 ರೂ
  • ಕೇರಳ: 290 ರೂ
  • ಅಹ್ಮದಾಬಾದ್: 280 ರೂ
  • ಜೈಪುರ್: 280 ರೂ
  • ಲಕ್ನೋ: 280 ರೂ
  • ಭುವನೇಶ್ವರ್: 290 ರೂ
  • ಪುಣೆ: 280

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Shoaib Akhtar: ಭಾರತ ಕ್ರಿಕೆಟ್​ ಅನ್ನೇ ಕೊಂದು ಹಾಕಿದ್ದಾರೆ..!

T20 World Cup 2026: ಟಿ20 ವಿಶ್ವಕಪ್​ ಕ್ರಿಕೆಟ್ ಟೂರ್ನಿಗೆ ತೆರೆ ಬಿದ್ದಿದೆ. ಈ ಬಾರಿ ಕೂಡ ಭಾರತ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಕಳೆದ ಬಾರಿ ಸೌತ್ ಆಫ್ರಿಕಾ ತಂಡವನ್ನು ಬಗ್ಗು ಬಡಿದಿದ್ದ ಟೀಮ್ ಇಂಡಿಯಾ ಈ ಸಲ ನ್ಯೂಝಿಲೆಂಡ್ ತಂಡಕ್ಕೆ ಸೋಲುಣಿಸಿದೆ. ಅದು ಸಹ ಬರೋಬ್ಬರಿ 96 ರನ್​ಗಳ ಅಂತರದಿಂದ ಎಂಬುದು ವಿಶೇಷ.

ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 255 ರನ್ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ನ್ಯೂಝಿಲೆಂಡ್ 19 ಓವರ್​ಗಳಲ್ಲಿ 156 ರನ್​ಗಳಿಸಿ ಆಲೌಟ್ ಆಗಿದೆ.

ಈ ಮುಲಕ ಭಾರತ ತಂಡವು 96 ರನ್​ಗಳ ಅಭೂತಪೂರ್ವ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಮೂರನೇ ಬಾರಿ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿದೆ.

ಇತ್ತ ಭಾರತ ತಂಡವು ಚಾಂಪಿಯನ್ ಪಟ್ಟಕ್ಕೇರುತ್ತಿದ್ದಂತೆ ಅತ್ತ ಪಾಕಿಸ್ತಾನ್ ತಂಡದ ಮಾಜಿ ವೇಗಿ ಶೊಯೆಬ್ ಅಖ್ತರ್ ನಾಲಿಗೆ ಹರಿಬಿಟ್ಟಿದ್ದಾರೆ. ಅದು ಸಹ ವಿತಂಡವಾದ ಮುಂದಿಡುವ ಮೂಲಕ.

ಖಾಸಗಿ ಚಾನೆಲ್​ವೊಂದರಲ್ಲಿ ಮಾತನಾಡಿದ ಶೊಯೆಬ್ ಅಖ್ತರ್,  ಟೀಮ್ ಇಂಡಿಯಾವನ್ನು “ಶ್ರೀಮಂತ ಮಗು” ಎಂದು ಅಣಕಿಸಿದ್ದಾರೆ.  ಭಾರತವು ಶ್ರೀಮಂತ ಮಗುವಿನಂತೆ ಆಡುತ್ತಿದೆ, ಎಲ್ಲರನ್ನೂ ಆಟಕ್ಕೆ ಕರೆಯುತ್ತದೆ. ಆದರೆ ತಾನೇ ಗೆಲ್ಲಬೇಕು ಎಂಬ ಹಠ ಹಿಡಿಯುತ್ತದೆ ಎಂದು ಟೀಕಿಸಿದ್ದಾರೆ.

ಬಿಸಿಸಿಐನ ಆರ್ಥಿಕ ಶಕ್ತಿಯು ಐಸಿಸಿ (ICC) ಮೇಲೆ ಪ್ರಭಾವ ಬೀರುತ್ತಿದೆ. ಇದರಿಂದಾಗಿ ಪಂದ್ಯಾವಳಿಯ ಫಲಿತಾಂಶಗಳನ್ನು ತಮಗೆ ಬೇಕಾದಂತೆ ಬದಲಾಯಿಸಿಕೊಳ್ಳುತ್ತಿದ್ದಾರೆ ಎಂಬ ಪರೋಕ್ಷ ಆರೋಪ ಮಾಡಿದ್ದಾರೆ.

ಭಾರತದ ಪಂದ್ಯಗಳಿಗೆ ಫ್ಲ್ಯಾಟ್ ಪಿಚ್​ಗಳನ್ನು ನಿರ್ಮಿಸಿದ್ದಾರೆ. ಈ ರೀತಿಯ ಪಿಚ್‌ಗಳು ಬೌಲರ್‌ಗಳಿಗೆ ಯಾವುದೇ ಸಹಾಯ ಮಾಡುವುದಿಲ್ಲ. ಇದು ಕ್ರಿಕೆಟ್‌ನ ನೈಜ ಸವಾಲನ್ನು ಕಡಿಮೆ ಮಾಡುತ್ತದೆ. ಟಿ20 ವಿಶ್ವಕಪ್​ನ ನಿರ್ಣಾಯಕ ಪಂದ್ಯಗಳಿಗೆ ಇಂತಹ ಫ್ಲ್ಯಾಟ್ ಪಿಚ್​ಗಳನ್ನು ಮಾಡಿ ಭಾರತ ಕ್ರಿಕೆಟ್ ಅನ್ನೇ ಕೊಂದು ಹಾಕಿದ್ದಾರೆ ಎಂದು ಶೊಯೆಬ್ ಅಖ್ತರ್ ಅಸಮಾಧಾನ ಹೊರಹಾಕಿದ್ದಾರೆ.

ಟೀಮ್ ಇಂಡಿಯಾ ತನ್ನ ಕೊನೆಯ ಎರಡು ಪಂದ್ಯಗಳಲ್ಲಿ ಬ್ಯಾಕ್ ಟು ಬ್ಯಾಕ್ 250+ ಸ್ಕೋರ್​ಗಳಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಮ್ಯಾಚ್​ನಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು 20 ಓವರ್​ಗಳಲ್ಲಿ 253 ರನ್ ಕಲೆಹಾಕಿದ್ದರು. ಇನ್ನು ಫೈನಲ್ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ 255 ರನ್​ ಚಚ್ಚಿದ್ದರು.

ಇದನ್ನೇ ಪ್ರಸ್ತಾಪಿಸುವ ಮೂಲಕ ಶೊಯೆಬ್ ಅಖ್ತರ್, ಭಾರತವು ಫ್ಲ್ಯಾಟ್ ಪಿಚ್​ಗಳನ್ನು ನಿರ್ಮಿಸಿ ಪಂದ್ಯಗಳನ್ನು ಗೆಲ್ಲಲು ನೋಡುತ್ತಿದ್ದಾರೆ. ಇದು ಒಂದಾರ್ಥದಲ್ಲಿ ಶ್ರೀಮಂತ ಮಗು ಇತರರನ್ನು ಪಂದ್ಯಕ್ಕೆ ಕರೆದು ಕೊನೆಗೆ ತಾನೇ ಗೆಲ್ಲುವುದಾಗಿದೆ. ಇಂತಹ ಪಿಚ್​ಗಳ ಮೂಲಕ ಭಾರತ ಕ್ರಿಕೆಟ್​ ಅನ್ನೇ ಕೊಂದು ಹಾಕಿದ್ದಾರೆ ಎಂದು ಶೊಯೆಬ್ ಅಖ್ತರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Source link

ದೆಹಲಿ-ಗೋವಾ ಆಕಾಶ ಏರ್​ ವಿಮಾನದ ವಾಶ್​ರೂಂನಲ್ಲಿ ಧೂಮಪಾನ ಮಾಡಿ ಸಿಕ್ಕಿಬಿದ್ದ ಪ್ರಯಾಣಿಕ

ನವದೆಹಲಿ, ಮಾರ್ಚ್​ 09: ದೆಹಲಿ-ಗೋವಾ ಆಕಾಶ ಏರ್​ ವಿಮಾನ(Plane)ದಲ್ಲಿ ಪ್ರಯಾಣಿಕರೊಬ್ಬರು ವಾಶ್​ರೂಂನಲ್ಲಿ ಧೂಮಪಾನ ಮಾಡಿ ಸಿಕ್ಕಿಬಿದ್ದಿದ್ದಾರೆ. ನಂತರ ಅವರನ್ನು  ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ದೆಹಲಿಯಿಂದ ಗೋವಾಕ್ಕೆ ಪ್ರಯಾಣಿಸುತ್ತಿದ್ದ QP1625 ವಿಮಾನದಲ್ಲಿ ಶನಿವಾರ ಈ ಘಟನೆ ನಡೆದಿದೆ.

ದೆಹಲಿ ನಿವಾಸಿ ಆಶಿಶ್ ಎಂಬ ವ್ಯಕ್ತಿ ಪ್ರಯಾಣದ ಸಮಯದಲ್ಲಿ ವಿಮಾನದ ವಾಶ್ ರೂಂ ಒಳಗೆ ಧೂಮಪಾನ ಮಾಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ವಿಮಾನಯಾನ ಸಂಸ್ಥೆಯು ತನ್ನ ದೂರಿನಲ್ಲಿ, ಪ್ರಯಾಣಿಕ ಲೈಟರ್ ಅನ್ನು ಹೊತ್ತೊಯ್ಯುತ್ತಿರುವುದು ಕಂಡುಬಂದಿತ್ತು, ಇದು ವಿಮಾನ ಮತ್ತು ವಿಮಾನದಲ್ಲಿದ್ದವರಿಗೆ ಸುರಕ್ಷತಾ ಅಪಾಯವನ್ನುಂಟುಮಾಡಬಹುದು ಎಂದು ತಿಳಿಸಿದೆ.

ಈ ಕೃತ್ಯವು ಹಾರಾಟದ ಸಮಯದಲ್ಲಿ ಸಹ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಗೆ ಅಪಾಯವನ್ನುಂಟುಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಮಾನ ಪ್ರಯಾಣದ ಸಮಯದಲ್ಲಿ ಪ್ರಯಾಣಿಕ ಧೂಮಪಾನ ಮಾಡುತ್ತಿರುವುದು ಕಂಡುಬಂದ ನಂತರ ತನ್ನ ಸಿಬ್ಬಂದಿ ಅಗತ್ಯ ಸುರಕ್ಷತಾ ಶಿಷ್ಟಾಚಾರಗಳನ್ನು ಅನುಸರಿಸಿದ್ದಾರೆ ಮತ್ತು ಗೋವಾಕ್ಕೆ ಬಂದ ನಂತರ ಅವರನ್ನು ಅಧಿಕಾರಿಗಳಿಗೆ ಒಪ್ಪಿಸಲಾಗಿದೆ ಎಂದು ಆಕಾಶ ಏರ್ ಹೇಳಿದೆ.

ಮತ್ತಷ್ಟು ಓದಿ: ದುಬೈನಲ್ಲಿ ಸಿಲುಕಿದ್ದ ಮತ್ತಷ್ಟು ಕನ್ನಡಿಗರು ತಾಯ್ನಾಡಿಗೆ ವಾಪಸ್: ಬೆಂಗಳೂರಿಗೆ ಬಂದಿಳಿದ 288 ಪ್ರಯಾಣಿಕರು

ಆರೋಪಿಗಳ ವಿರುದ್ಧ ಮೋಪಾ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ ಮತ್ತು ನಾಗರಿಕ ವಿಮಾನಯಾನ ಸುರಕ್ಷತಾ ಕಾಯ್ದೆಯ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹದ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ವಿಷಯದಲ್ಲಿ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಆಕಾಶ ಏರ್ ಹೇಳಿದೆ. ಈ ವಿಷಯದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಇಂಥಾ ಹಲವು ಘಟನೆಗಳು ಹಲವು ವಿಮಾನಗಳಲ್ಲಿ ನಡೆದಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link