ಬೆಂಗಳೂರು, ಜೂನ್ 12: ಬಸವೇಶ್ವರ ನಗರದಲ್ಲಿರುವ ಅಂಜನಾದ್ರಿ ಮಹಿಳಾ ಪಿಜಿಯ ಊಟದಲ್ಲಿ ಹುಳ ಪತ್ತೆಯಾಗಿದ್ದು, ಇದರಿಂದ ಆಕ್ರೋಶಗೊಂಡ ಯುವತಿಯರು ಪ್ರತಿಭಟನೆ ನಡೆಸಿದ್ದಾರೆ. ಊಟದಲ್ಲಿ ಹುಳ ಪತ್ತೆಯಾದ ಬಗ್ಗೆ ಪ್ರಶ್ನಿಸಿದ್ದಕ್ಕೆ, ಪಿಜಿ ಮಾಲೀಕರು ಯುವತಿಯರೊಂದಿಗೆ ಕಿರಿಕ್ ಮಾಡಿ, ಪಿಜಿ ಖಾಲಿ ಮಾಡುವಂತೆ ಎಚ್ಚರಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಕೆಲವು ದಿನಗಳ ಹಿಂದೆಯೂ ಸಹ ಇದೇ ಪಿಜಿಯ ಊಟದಲ್ಲಿ ಹುಳ ಪತ್ತೆಯಾಗಿತ್ತು. ಪದೇ ಪದೇ ಇಂತಹ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿರುವುದನ್ನು ಪ್ರಶ್ನಿಸಿದ ಯುವತಿಯರಿಗೆ, ಮಾಲೀಕರು ನೀವು ಕೊಡುವ 5,000 ರೂಪಾಯಿಗೆ ನಾವು ಉತ್ತಮ ಆಹಾರ ನೀಡಬೇಕೇ? ಎಂದು ಉತ್ತರಿಸಿದ್ದಾರೆ ಎನ್ನಲಾಗಿದೆ. ನಿನ್ನೆ ಬೆಳಿಗ್ಗೆ ದೋಸೆ ಬೇಯದಿದ್ದ ಕುರಿತು ಪ್ರಶ್ನಿಸಿದಾಗಲೂ ಮಾಲೀಕರು ಯುವತಿಯರೊಂದಿಗೆ ಸರಿಯಾಗಿ ಮಾತನಾಡಿಲ್ಲ ಎಂದು ಯುವತಿಯರು ಹೇಳಿದ್ದಾರೆ. ಮಾಲೀಕರ ವರ್ತನೆಯಿಂದ ಬೇಸತ್ತ ಯುವತಿಯರು ತಡರಾತ್ರಿ ಪಿಜಿಯಿಂದ ಹೊರಬಂದು ಧರಣಿ ಕುಳಿತಿದ್ದಾರೆ. ಆಹಾರದ ಗುಣಮಟ್ಟ ಸುಧಾರಿಸುವಂತೆ ಮತ್ತು ಮಾಲೀಕರ ದುರ್ವರ್ತನೆಗೆ ಕಡಿವಾಣ ಹಾಕುವಂತೆ ಯುವತಿಯರು ಆಗ್ರಹಿಸಿದ್ದಾರೆ.
ಬೆಂಗಳೂರು, ಜೂನ್ 12: ನೆರೆಯ ರಾಜ್ಯ ಕೇರಳದಲ್ಲಿ ಮಾರಣಾಂತಿಕ ಶಿಗೆಲ್ಲೋಸಿಸ್ (Shigella) ಸೋಂಕು ತೀವ್ರವಾಗಿ ಹರಡುತ್ತಿದ್ದು, ಪೋಷಕರಲ್ಲಿ ಭಾರಿ ಆತಂಕ ಮೂಡಿಸಿದೆ. ಕರುಳಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಈ ಅಪಾಯಕಾರಿ ಬ್ಯಾಕ್ಟೀರಿಯಾ ಸೋಂಕಿಗೆ ಈಗಾಗಲೇ ಕೇರಳದ ಕೋಝಿಕ್ಕೋಡ್ನಲ್ಲಿ ನಾಲ್ಕು ವರ್ಷದ ಬಾಲಕಿ ಬಲಿಯಾಗಿದ್ದಾಳೆ. ವಯನಾಡು ಸೇರಿದಂತೆ ವಿವಿಧ ಜಿಲ್ಲೆಗಳ ಶಾಲಾ ಮಕ್ಕಳಲ್ಲಿ ಈ ಸೋಂಕು ವೇಗವಾಗಿ ಹರಡುತ್ತಿದ್ದು, ಇದುವರೆಗೆ 300ಕ್ಕೂ ಹೆಚ್ಚು ಮಕ್ಕಳಲ್ಲಿ ಶಿಗೆಲ್ಲಾ ಸೋಂಕಿನ ಲಕ್ಷಣಗಳು ಪತ್ತೆಯಾಗಿವೆ. ಕೇರಳದ ಈ ಆತಂಕಕಾರಿ ಬೆಳವಣಿಗೆಯ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕರ್ನಾಟಕ ಆರೋಗ್ಯ ಇಲಾಖೆಯು ಗಡಿ ಜಿಲ್ಲೆಗಳು ಸೇರಿದಂತೆ ರಾಜ್ಯಾದ್ಯಂತ ಹೈಅಲರ್ಟ್ ಘೋಷಿಸಿದೆ.
ಮುಖ್ಯಾಂಶಗಳು
ಕೇರಳದಲ್ಲಿ ಶಿಗೆಲ್ಲಾ ಸೋಂಕಿಗೆ ಬಾಲಕಿ ಬಲಿ.
ಮಕ್ಕಳ ಕರುಳಿನ ಮೇಲೆ ಬ್ಯಾಕ್ಟೀರಿಯಾ ದಾಳಿ.
ಕರ್ನಾಟಕ ಆರೋಗ್ಯ ಇಲಾಖೆಯಿಂದ ತೀವ್ರ ನಿಗಾ.
ಏನಿದು ಶಿಗೆಲ್ಲೋಸಿಸ್ ಸೋಂಕು? ಇದು ಹರಡುವುದು ಹೇಗೆ?
ವೈದ್ಯರ ಪ್ರಕಾರ, ಶಿಗೆಲ್ಲಾ ಎಂಬುದು ಯಾವುದೇ ವೈರಸ್ ಅಲ್ಲ, ಇದೊಂದು ಅತ್ಯಂತ ಸಾಂಕ್ರಾಮಿಕ ಬ್ಯಾಕ್ಟೀರಿಯಾ (Bacterial Infection) ಆಗಿದೆ. ಇದು ಮುಖ್ಯವಾಗಿ ಮನುಷ್ಯನ ಜೀರ್ಣಾಂಗ ವ್ಯವಸ್ಥೆ ಹಾಗೂ ಕರುಳಿನ ಮೇಲೆ ತೀವ್ರವಾಗಿ ದಾಳಿ ಮಾಡುತ್ತದೆ. ಅನೈರ್ಮಲ್ಯ ಹೊಂದಿರುವ ಪ್ರದೇಶಗಳಲ್ಲಿ ಇದು ಅತಿ ವೇಗವಾಗಿ ಹರಡುತ್ತದೆ. ಕಲುಷಿತ ನೀರು, ಕಲುಷಿತ ಆಹಾರ ಸೇವನೆ ಹಾಗೂ ಶೌಚಾಲಯ ಬಳಕೆಯ ನಂತರ ಕೈಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಈ ಬ್ಯಾಕ್ಟೀರಿಯಾ ಒಬ್ಬರಿಂದ ಮತ್ತೊಬ್ಬರಿಗೆ ಹರಡಬಹುದು. ವಿಶೇಷವಾಗಿ 5 ವರ್ಷದೊಳಗಿನ ಚಿಕ್ಕ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಈ ಸೋಂಕು ಬೇಗನೆ ಅಟ್ಯಾಕ್ ಮಾಡುತ್ತದೆ. ಆರಂಭದಲ್ಲೇ ಪೋಷಕರು ನಿರ್ಲಕ್ಷ್ಯ ವಹಿಸಿದರೆ ಇದು ಮಕ್ಕಳ ಜೀವಕ್ಕೇ ಕಂಟಕವಾಗುವ ಸಾಧ್ಯತೆ ಇರುತ್ತದೆ ಎಂದು ಕೆಸಿಜಿ ಆಸ್ಪತ್ರೆಯ ಡೀನ್ ಮತ್ತು ನಿರ್ದೇಶಕರಾದ ಡಾ. ಲಕ್ಷ್ಮೀಪತಿ ಎಚ್ಚರಿಕೆ ನೀಡಿದ್ದಾರೆ.
ಶಿಗೆಲ್ಲೋಸಿಸ್ ಸೋಂಕಿನ ಪ್ರಮುಖ ಲಕ್ಷಣಗಳು
ತೀವ್ರ ಜ್ವರ ಮತ್ತು ಅತಿಯಾದ ಆಯಾಸ, ದೌರ್ಬಲ್ಯ.
ಹೊಟ್ಟೆ ನೋವು ಮತ್ತು ಹೊಟ್ಟೆ ತೊಳಸುವಿಕೆ (ಸೆಳೆತ).
ನಿರಂತರ ವಾಂತಿ ಹಾಗೂ ತೀವ್ರ ರಕ್ತ ಮಿಶ್ರಿತ ಅತಿಸಾರ (ಭೇದಿ).
ದೇಹದಲ್ಲಿ ನೀರಿನಂಶ ಸಂಪೂರ್ಣ ಕಡಿಮೆಯಾಗಿ ತೀವ್ರ ನಿರ್ಜಲೀಕರಣ (Dehydration) ಉಂಟಾಗುವುದು.
ಸೋಂಕು ನಿಯಂತ್ರಣ ಹಾಗೂ ಮುಂಜಾಗ್ರತಾ ಕ್ರಮಗಳು
ಮಕ್ಕಳಿಗೆ ಹೊರಗಿನ ಹಾಗೂ ಕಲುಷಿತ ನೀರು ಮತ್ತು ತೆರೆದಿಟ್ಟ ಆಹಾರ ನೀಡಬೇಡಿ.
ಮಕ್ಕಳು ಆಹಾರ ಸೇವಿಸುವ ಮುನ್ನ ಹಾಗೂ ಶೌಚಾಲಯ ಬಳಕೆಯ ನಂತರ ಸಾಬೂನು ಬಳಸಿ 20 ಸೆಕೆಂಡುಗಳ ಕಾಲ ಕೈಗಳನ್ನು ಚೆನ್ನಾಗಿ ತೊಳೆಯುವುದನ್ನು ರೂಢಿಸಿ.
ಕುಡಿಯಲು ಯಾವಾಗಲೂ ಸುರಕ್ಷಿತ ಹಾಗೂ ಚೆನ್ನಾಗಿ ಕಾಯಿಸಿ ಆರಿಸಿದ ಶುದ್ಧ ನೀರನ್ನೇ ಬಳಸಿ.
ಹಸಿ ಅಥವಾ ಸರಿಯಾಗಿ ಬೇಯಿಸದ ಮಾಂಸ ಹಾಗೂ ಹಳಸಿದ ಆಹಾರ ಪದಾರ್ಥಗಳ ಸೇವನೆ ಬೇಡ.
ಮಕ್ಕಳಲ್ಲಿ ಜ್ವರ ಅಥವಾ ಅತಿಸಾರದಂತಹ ಸಣ್ಣ ಲಕ್ಷಣಗಳು ಕಂಡುಬಂದರೂ ಸ್ವಯಂ ಚಿಕಿತ್ಸೆ ಮಾಡದೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ.
ಆರೋಗ್ಯ ಇಲಾಖೆ ಅಲರ್ಟ್
ರಾಜ್ಯದಲ್ಲಿ ಶಿಗೆಲ್ಲೋಸಿಸ್ ಆತಂಕ ಸೃಷ್ಟಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ಆರೋಗ್ಯ ಇಲಾಖೆಯು ಎಲ್ಲಾ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ (DHO) ಮತ್ತು ಸರ್ಕಾರಿ ಆಸ್ಪತ್ರೆಗಳ ವೈದ್ಯರಿಗೆ ಮುನ್ನೆಚ್ಚರಿಕೆ ವಹಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಇಲಾಖೆ ಸಚಿವ ಯುಟಿ ಖಾದರ್, ಗಡಿ ಭಾಗಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಲಾಗಿದ್ದು, ಪರಿಸ್ಥಿತಿಯ ಬಗ್ಗೆ ತಜ್ಞರೊಂದಿಗೆ ಸೂಕ್ತ ಚರ್ಚೆ ನಡೆಸಿ ರಾಜ್ಯದಲ್ಲಿ ಸೋಂಕು ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಬಾಲಿವುಡ್ನ (Bollywood) ಹಲವಾರು ಸಿನಿಮಾಗಳು ಪುಣ್ಯಕ್ಷೇತ್ರಗಳಲ್ಲಿ ಶೂಟಿಂಗ್ ನಡೆಸುತ್ತವೆ. ಅದರಲ್ಲಿ ಹರಿದ್ವಾರವೂ ಒಂದು. ಇದೀಗ ಬಾಲಿವುಡ್ ನಟ ಇಮ್ರಾನ್ ಹಶ್ಮಿ ಪವಿತ್ರ ಕ್ಷೇತ್ರ ಎನಿಸಿಕೊಂಡಿರುವ ಹರಿದ್ವಾರದಲ್ಲಿ ತಮ್ಮ ಮುಂದಿನ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಚಿತ್ರೀಕರಣದ ಸ್ಥಳದ ವಿಡಿಯೋವೊಂದು ಆನ್ಲೈನ್ನಲ್ಲಿ ವೈರಲ್ ಆದ ನಂತರ ಚಿತ್ರತಂಡವು ಸ್ಥಳೀಯ ನಿವಾಸಿಗಳೊಂದಿಗೆ ಭಾರಿ ತೊಂದರೆಯನ್ನು ಎದುರಿಸಿದೆ. ಸಿನಿಮಾ ಚಿತ್ರೀಕರಣ ಸೆಟ್ಗೆ ಎದುರು ಜಮಾಯಿಸಿದ ಸ್ಥಳೀಯರು ಚಿತ್ರೀಕರಣ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.
ಹರಿದ್ವಾರದಲ್ಲಿ ಸಿನಿಮಾದ ದೃಶ್ಯ ಒಂದರ ಚಿತ್ರೀಕರಣಕ್ಕಾಗಿ ತಾತ್ಕಾಲಿಕ ಸೆಟ್ ಒಂದನ್ನು ನಿರ್ಮಿಸಲಾಗಿತ್ತು. ಆ ಸೆಟ್ನಲ್ಲಿ ‘ಕೆಫೆ ಮತ್ತು ಬಾರ್’ ಎಂದು ಬರೆದಿದ್ದ ಸೈನ್ಬೋರ್ಡ್ ಅನ್ನು ಅಳವಡಿಸಲಾಗಿತ್ತು. ಇದು ಸ್ಥಳೀಯ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಯಿತು. ನಗರದ ಧಾರ್ಮಿಕ ಭಾವನೆಗಳಿಗೆ ಗೌರವ ನೀಡುವ ದೃಷ್ಟಿಯಿಂದ ಆ ಬೋರ್ಡ್ ಅನ್ನು ತಕ್ಷಣವೇ ತೆಗೆದುಹಾಕಬೇಕೆಂದು ಆಗ್ರಹಿಸಿ, ನಿವಾಸಿಗಳು ಮತ್ತು ಚಿತ್ರತಂಡದ ನಡುವೆ ತೀವ್ರ ವಾಗ್ವಾದ ನಡೆಯಿತು.
ಸ್ಥಳೀಯ ವರದಿಗಳ ಪ್ರಕಾರ ಚಿತ್ರತಂಡ ನಿರ್ಮಿಸಿದ್ದ ಕಾಲ್ಪನಿಕ ಸೆಟ್ನಿಂದಾಗಿ ಹರಿದ್ವಾರದಲ್ಲಿ ವಿವಾದ ಉಂಟಾಯಿತು. ದೃಶ್ಯವೊಂದಕ್ಕಾಗಿ ತಂಡವು ನಕಲಿ ರೆಸ್ಟೋರೆಂಟ್ ಅನ್ನು ನಿರ್ಮಿಸಿತ್ತು. ಆದರೆ, ಆ ಸೆಟ್ನಲ್ಲಿ ‘ಕೆಫೆ ಮತ್ತು ಬಾರ್’ ಎಂದು ದೊಡ್ಡದಾದ ಸೈನ್ಬೋರ್ಡ್ ಹಾಕಲಾಗಿತ್ತು. ವಿಡಿಯೋ ವೈರಲ್ ಆದಾಗ ಈ ಬೋರ್ಡ್ ನೋಡಿದ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದು, ಸ್ಥಳೀಯ ನಿವಾಸಿಗಳು ಮತ್ತು ವಿವಿಧ ಹಿಂದೂ ಸಂಘಟನೆಗಳ ಸದಸ್ಯರು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿ, ಚಿತ್ರತಂಡದ ಜೊತೆಗೆ ವಾಗ್ವಾದ ನಡೆಸಿದ್ದಾರೆ.
ಹರಿದ್ವಾರವು ಭಾರತದ ಅತ್ಯಂತ ಪವಿತ್ರ ಯಾತ್ರಾಸ್ಥಳಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿದೆ. ಇಲ್ಲಿ ಧಾರ್ಮಿಕ ಕಾರಣಗಳಿಂದಾಗಿ ಮದ್ಯಪಾನವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಸ್ಥಳೀಯರೊಟ್ಟಿಗೆ ವಾಗ್ವಾದದ ವೇಳೆ ಇದೊಂದು ಕಾಲ್ಪನಿಕ ಸೆಟ್, ನಿಜವಾದ ರೆಸ್ಟೊರೆಂಟ್ ಅಲ್ಲ ಎಂದು ಹೇಳಿದರೂ ಸಹ ‘ಬಾರ್’ ಎಂಬ ಪದವಿರುವ ಬೋರ್ಡ್ ಹಾಕುವುದು ಸೂಕ್ತವಲ್ಲ ಎಂದು ಪ್ರತಿಭಟನಾಕಾರರು ವಾದಿಸಿದ್ದಾರೆ. ಇದು ಪವಿತ್ರ ನಗರದ ಜನರ ಧಾರ್ಮಿಕ ಭಾವನೆಗಳಿಗೆ ಅಪಾರ ನೋವುಂಟು ಮಾಡಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರು ಮತ್ತು ಹಿಂದೂಪರ ಸಂಘಟನೆಯವರು ಚಿತ್ರತಂಡದೊಂದಿಗೆ ಜಗಳ ಮಾಡುತ್ತಿರುವ ವಿಡಿಯೋಗಳು ಇದೀಗ ವೈರಲ್ ಆಗಿವೆ. ನಟ ಇಮ್ರಾನ್ ಹಶ್ಮಿ ಎಲ್ಲೂ ಕಾಣಿಸದಿದ್ದರೂ, ಚಿತ್ರತಂಡದ ವಕ್ತಾರರು ಪ್ರತಿಭಟನಾಕಾರರೊಂದಿಗೆ ಮಾತನಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಸ್ಥಳೀಯ ವರದಿಗಳ ಪ್ರಕಾರ, ಸೈನ್ಬೋರ್ಡ್ನಿಂದ “ಬಾರ್” ಎಂಬ ಪದವನ್ನು ತೆಗೆದುಹಾಕಲು ಚಿತ್ರತಂಡ ಒಪ್ಪಿಕೊಂಡ ನಂತರ ವಿವಾದವು ಬಗೆಹರಿಯಿತು.
ಇಮ್ರಾನ್ ಹಶ್ಮಿ ಮುಂದಿನ ದಿನಗಳಲ್ಲಿ ನಿರೀಕ್ಷಿತ ಸೀಕ್ವೆಲ್ ‘ಅವಾರಾಪನ್ 2’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2007ರಲ್ಲಿ ಬಿಡುಗಡೆಯಾದ ಮೂಲ ‘ಅವಾರಾಪನ್’ ಚಿತ್ರದ ಮುಂದುವರಿದ ಭಾಗವಾಗಿರುವ ಈ ಸಿನಿಮಾ, ಆಗಸ್ಟ್ 14, 2026ರಂದು ಬಿಡುಗಡೆಯಾಗಲಿದೆ. ಸಿನಿಮಾನಲ್ಲಿ ನಾಯಕಿಯಾಗಿ ದಿಶಾ ಪಟಾಣಿ ನಟಿಸಲಿದ್ದಾರೆ.
ಬೆಂಗಳೂರು, ಜೂನ್ 12: ಸರ್ಕಾರಿ ಕೋಟಾದಡಿ ಸೀಟು ಪಡೆದು ಅತ್ಯಂತ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿ, ಆ ಬಳಿಕ ನಿಯಮದಂತೆ ಗ್ರಾಮೀಣ ಸೇವೆಗೆ ಹಾಜರಾಗದೆ ಕಳ್ಳಾಟವಾಡುತ್ತಿದ್ದ 450ಕ್ಕೂ ಹೆಚ್ಚು ಎಂಬಿಬಿಎಸ್ (MBBS) ವೈದ್ಯರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಭರ್ಜರಿ ಶಾಕ್ ನೀಡಿದೆ. ಈ ಎಲ್ಲಾ ವೈದ್ಯರ ವಿರುದ್ಧ ದಂಡಾಸ್ತ್ರ ಪ್ರಯೋಗಿಸಿರುವ ಇಲಾಖೆಯು, ಪ್ರತಿಯೊಬ್ಬರಿಗೂ ತಲಾ 15 ಲಕ್ಷ ರೂಪಾಯಿ ದಂಡ ವಿಧಿಸಿ ಲೀಗಲ್ ನೋಟಿಸ್ ಜಾರಿಗೊಳಿಸಿದೆ.
ಮುಖ್ಯಾಂಶಗಳು
ಕಡ್ಡಾಯ ಗ್ರಾಮೀಣ ಸೇವೆ ತಪ್ಪಿಸಿದ ನಾನೂರೈವತ್ತು ವೈದ್ಯರಿಗೆ ಭಾರಿ ದಂಡ ವಿಧಿಸಲಾಗಿದೆ.
ಕರ್ತವ್ಯಕ್ಕೆ ಹಾಜರಾಗದ ವೈದ್ಯರ ಪದವಿ ಪ್ರಮಾಣಪತ್ರ ತಡೆಹಿಡಿಯಲು ಸರ್ಕಾರ ಪ್ಲಾನ್ ಮಾಡಿದೆ.
ನಿಯಮ ಉಲ್ಲಂಘಿಸುವವರ ವಿರುದ್ಧ ದಂಡದ ಜೊತೆ ಕೇಸ್ ದಾಖಲಿಸಲು ಇಲಾಖೆ ನಿರ್ಧರಿಸಿದೆ.
2 ಬಾರಿ ನೋಟಿಸ್ ನೀಡಿದ್ರೂ ಕ್ಯಾರೇ ಎನ್ನದ ವೈದ್ಯರು!
ಕರ್ನಾಟಕದ ನಿಯಮಾವಳಿಗಳ ಪ್ರಕಾರ, ಸರ್ಕಾರಿ ಕೋಟಾದಡಿ ವೈದ್ಯಕೀಯ ಸೀಟು ಪಡೆದ ಪ್ರತಿಯೊಬ್ಬ ವಿದ್ಯಾರ್ಥಿಯೂ ಪದವಿ ಮುಗಿದ ನಂತರ ಕಡ್ಡಾಯವಾಗಿ ಒಂದು ವರ್ಷ ಕಾಲ ಗ್ರಾಮೀಣ ಭಾಗದಲ್ಲಿ ಸರ್ಕಾರಿ ಸೇವೆ ಸಲ್ಲಿಸಬೇಕಾಗುತ್ತದೆ. ಆದರೆ, 2018-19ನೇ ಬ್ಯಾಚ್ನ 450ಕ್ಕೂ ಹೆಚ್ಚು ವೈದ್ಯರು ಈ ನಿಯಮವನ್ನು ಗಾಳಿಗೆ ತೂರಿ ಕರ್ತವ್ಯದಿಂದ ಹೊರಗುಳಿದಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಆರೋಗ್ಯ ಇಲಾಖೆಯು ಈಗಾಗಲೇ ಎರಡು ಬಾರಿ ನೋಟಿಸ್ ನೀಡಿದ್ದರೂ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ, ಈಗ ದಂಡದ ಜೊತೆಗೆ ಕಠಿಣ ಕಾನೂನು ಕ್ರಮಕ್ಕೆ ಇಲಾಖೆ ಮುಂದಾಗಿದೆ. ಸದ್ಯ ಕಡ್ಡಾಯ ಸೇವೆಗೆ ಹಾಜರಾಗದ ಇತರ ವಿದ್ಯಾರ್ಥಿಗಳಿಗೆ ಕೊನೆಯ ಕಾಲಾವಕಾಶ ನೀಡಲಾಗಿದ್ದು, ಮುಂದಿನ ವರ್ಷದಿಂದ ಈ ದಂಡದ ಮೊತ್ತವನ್ನು ಬರೋಬ್ಬರಿ 25 ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡಲು ಇಲಾಖೆ ಗಂಭೀರ ಚಿಂತನೆ ನಡೆಸಿದೆ.
ಇನ್ಮುಂದೆ ಸಿಗಲ್ಲ ಪದವಿ ಸರ್ಟಿಫಿಕೇಟ್: ಸಚಿವ ಯು.ಟಿ. ಖಾದರ್ ಕಡಕ್ ಸೂಚನೆ
ದಂಡ ವಿಧಿಸಿದರೂ ವೈದ್ಯರು ಕಡ್ಡಾಯ ಸೇವೆಗೆ ಬರದೇ ಇದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಗ್ರಾಮೀಣ ಸೇವೆ ಸಲ್ಲಿಸದ ವೈದ್ಯರಿಗೆ ಇನ್ಮುಂದೆ ಪದವಿ ಪ್ರಮಾಣಪತ್ರ (Degree Certificate) ನೀಡದಂತೆ ತಡೆಹಿಡಿಯುವ ಹೊಸ ಷರತ್ತನ್ನು ಜಾರಿಗೆ ತರಲು ಆರೋಗ್ಯ ಇಲಾಖೆ ಯೋಜನೆ ರೂಪಿಸಿದೆ. ಈ ಬಗ್ಗೆ ರಾಜೀವ್ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ (RGUHS) ಉಪಕುಲಪತಿಗಳ (VC) ಜೊತೆ ಈಗಾಗಲೇ ಮಹತ್ವದ ಚರ್ಚೆ ನಡೆಸಲಾಗಿದ್ದು, ಕಾನೂನು ಅಭಿಪ್ರಾಯ ಪಡೆದು ಈ ನಿಯಮವನ್ನು ಜಾರಿಗೆ ತರಲು ಇಲಾಖೆ ಸಜ್ಜಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಯು.ಟಿ. ಖಾದರ್, ಯಾರು ಕಡ್ಡಾಯ ಸೇವೆಗೆ ಹಾಜರಾಗುವುದಿಲ್ಲವೋ ಅವರಿಗೆ ಸರ್ಟಿಫಿಕೇಟ್ ನೀಡದಂತೆ ಕಂಡಿಷನ್ ಹಾಕಬೇಕು. ಸರ್ಕಾರಿ ನೇಮಕಾತಿಯಾಗಿಯೂ ಕರ್ತವ್ಯಕ್ಕೆ ಬಾರದವರಿಗೆ ದಂಡದ ಜೊತೆಗೆ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಕಡಕ್ ಸೂಚನೆ ನೀಡಿದ್ದಾರೆ. ಸರ್ಕಾರದ ಈ ಹೈವೋಲ್ಟೇಜ್ ನಿರ್ಧಾರದಿಂದಾಗಿ ಸರ್ಕಾರಿ ಸೇವೆಯಿಂದ ತಪ್ಪಿಸಿಕೊಳ್ಳಲು ಪ್ಲಾನ್ ಮಾಡುತ್ತಿದ್ದ ವೈದ್ಯರ ವಲಯದಲ್ಲಿ ತಲ್ಲಣ ಸೃಷ್ಟಿಯಾಗಿದೆ.
ನವದೆಹಲಿ, ಜೂನ್ 12: ಕೋಪ, ಅಹಂಕಾರ ಮತ್ತು ತಪ್ಪು ತಿಳಿವಳಿಕೆಗಳ ಮಧ್ಯೆ ಮುರಿದು ಬೀಳುವ ಹಂತ ತಲುಪಿರುವ ಸಂಬಂಧಗಳನ್ನು ಕೇವಲ ಒಂದು ಸಣ್ಣ ಗುಣ ಹೇಗೆ ಮರುಜೋಡಣೆ ಮಾಡಬಲ್ಲದು ಎಂಬುದಕ್ಕೆ ದೆಹಲಿಯ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದ ಈ ಅಪರೂಪದ, ಘಟನೆಯೇ ಸಾಕ್ಷಿ. ವಿಚ್ಛೇದನ(Divorce) ನೀಡಲು ಕೋರ್ಟ್ ಮೆಟ್ಟಿಲೇರಿದ್ದ ದಂಪತಿ, ನ್ಯಾಯಾಧೀಶರ ಮುಂದೆಯೇ ಪರಸ್ಪರ ಅಪ್ಪಿಕೊಂಡು ಒಂದಾದ ಸುಂದರ ಘಟನೆ ಇಲ್ಲಿದೆ.
2020 ರ ಮದುವೆ ಮತ್ತು ಕೌಟುಂಬಿಕ ಬಿರುಗಾಳಿ
ದೊಡ್ಡ ಕನಸುಗಳೊಂದಿಗೆ 2020 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ದಂಪತಿ ನಡುವೆ, ಮದುವೆಯಾದ ಕೆಲವೇ ದಿನಗಳಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಭುಗಿಲೆದ್ದವು. ಜಗಳ ತಾರಕಕ್ಕೇರಿ ಪ್ರಕರಣ ಕೋರ್ಟ್ ತಲುಪಿತು. ಕಳೆದ ಕೆಲವು ಸಮಯದಿಂದ ಇಬ್ಬರ ನಡುವೆ ತೀವ್ರ ಕಾನೂನು ಹೋರಾಟ ನಡೆಯುತ್ತಿತ್ತು.
ಆದರೆ, ಮಗಳ ಸಂಸಾರ ಹಳಸುತ್ತಿರುವುದನ್ನು ಕಂಡು ಆಕೆಯ ವಯಸ್ಸಾದ ತಂದೆ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಮಗಳ ದುಃಖವನ್ನು ಸಹಿಸಲಾಗದೆ ಅವರು ಕೊನೆಗೊಂದು ದಿನ ತೀವ್ರವಾಗಿ ಅಸ್ವಸ್ಥಗೊಂಡು, ಆಸ್ಪತ್ರೆಯ ಐಸಿಯು (ICU) ಸೇರಿದರು.
ದ್ವೇಷ ಮರೆತು ಮಾವನಿಗೆ ‘ಮಗ’ನಾದ ಅಳಿಯ
ಮಾವನ ಅನಾರೋಗ್ಯ ಮತ್ತು ಇಡೀ ಕುಟುಂಬದ ಕಷ್ಟದ ಪರಿಸ್ಥಿತಿಯ ವಿಷಯ ತಿಳಿದ ತಕ್ಷಣ, ಆ ಅಳಿಯ ಕೋರ್ಟ್, ಕೇಸ್ ಮತ್ತು ಎಲ್ಲಾ ದ್ವೇಷಗಳನ್ನು ಸಂಪೂರ್ಣವಾಗಿ ಬದಿಗಿಟ್ಟರು. ಒಂದು ಕ್ಷಣವೂ ವ್ಯರ್ಥ ಮಾಡದೆ ಆಸ್ಪತ್ರೆಗೆ ಧಾವಿಸಿದ ಆತ, ಬಿಕ್ಕಟ್ಟಿನ ಸಮಯದಲ್ಲಿ ಅಳಿಯನಾಗಿ ಅಲ್ಲ, ಒಬ್ಬ ಜವಾಬ್ದಾರಿಯುತ ಮಗನಾಗಿ ನಿಂತರು.
अगर जुबान पर संयम हो, तो कई घर टूटने से बच जाएं। साल 2020 में शादी के बाद शिखा ने पति सौरभ पर दहेज का केस कर दिया।
केस लड़ते-लगाते शिखा के पिता सड़क पर आ गए और इसी तनाव में उन्हें हार्ट अटैक आ गया।
जब पति सौरभ को पता चला, तो उसने पुरानी कड़वाहट भूलकर ससुर को मेदांता अस्पताल… pic.twitter.com/iy8YQY2wGD
— Mrigendra Pratap Singh (@MrigendraSpeaks) June 12, 2026
ಚಿಕಿತ್ಸೆಗೆ ಅಗತ್ಯವಿದ್ದ ಭಾರಿ ಮೊತ್ತದ ಹಣವನ್ನು ತಾನೇ ಸ್ವತಃ ವ್ಯವಸ್ಥೆ ಮಾಡಿದ್ದಲ್ಲದೆ, ಹಗಲಿರುಳು ಆಸ್ಪತ್ರೆಯಲ್ಲೇ ಇದ್ದು ವೈದ್ಯರೊಂದಿಗೆ ಮಾತನಾಡಿ ಮಾವನಿಗೆ ಅತ್ಯುತ್ತಮ ಚಿಕಿತ್ಸೆ ಸಿಗುವಂತೆ ನೋಡಿಕೊಂಡರು. ಕೋರ್ಟಿನಲ್ಲಿ ಎದುರಾಳಿಯಾಗಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ತಮ್ಮ ಪಾಲಿನ ದೇವದೂತನಂತೆ ಮಗನಾಗಿ ನಿಂತದ್ದನ್ನು ಕಂಡು ಹುಡುಗಿ ಮತ್ತು ಆಕೆಯ ಕುಟುಂಬದ ಕಣ್ಣುಗಳು ತೇವವಾದವು.
ಆಸ್ಪತ್ರೆಯ ಐಸಿಯುನಲ್ಲಿ ಬರೆಯಲಾದ ಈ ಪ್ರೀತಿಯ ಅಧ್ಯಾಯ, ಮರುದಿನ ಕೋರ್ಟ್ ರೂಮಿನಲ್ಲಿ ಒಂದು ಅದ್ಭುತ ದೃಶ್ಯಕ್ಕೆ ಕಾರಣವಾಯಿತು. ಪ್ರಕರಣದ ಮುಂದಿನ ವಿಚಾರಣೆಗಾಗಿ ನ್ಯಾಯಾಧೀಶರ ಮುಂದೆ ಫೈಲ್ ಬಂದಾಗ, ಇಡೀ ಕೋರ್ಟ್ ಬೆರಗಾಗುವಂತಹ ಘಟನೆ ನಡೆಯಿತು.
ವಕೀಲರು ತಮ್ಮ ವಾದ ಮಂಡಿಸಲು ಸಿದ್ಧರಾಗುತ್ತಿದ್ದಂತೆಯೇ, ಆ ಮಹಿಳೆ ಇದ್ದಕ್ಕಿದ್ದಂತೆ ಮುಂದೆ ಬಂದು, ತನ್ನ ಕೈಯಲ್ಲಿದ್ದ ವಿಚ್ಛೇದನ ಅರ್ಜಿ ಪತ್ರಗಳನ್ನು ಎಲ್ಲರ ಮುಂದೆಯೇ ಹರಿದು ಹಾಕಿದಳು. ಅಲ್ಲದೆ, ಓಡಿಹೋಗಿ ಕಣ್ಣೀರ ನಡುವೆಯೇ ತನ್ನ ಗಂಡನನ್ನು ಎಲ್ಲರ ಮುಂದೆ ಗಟ್ಟಿಯಾಗಿ ಅಪ್ಪಿಕೊಂಡಳು.
ವೈಭವ್ ಸೂರ್ಯವಂಶಿ ಅವರು ತಮ್ಮ ಪ್ರತಿಭೆಯನ್ನು ಜಗತ್ತಿನ ಎದರು ತೆರೆದಿಟ್ಟಿದ್ದಾರೆ. ಈ ಬಾರಿಯ ಐಪಿಎಲ್ ಸೀಸನ್ ಅಲ್ಲಿ ದಾಖಲೆ ಮೇಲೆ ದಾಖಲೆ ಬರೆದಿದ್ದಾರೆ. ಸೂಪರ್ ಸ್ಟ್ರೈಕರ್, ಆರೆಂಜ್ ಕ್ಯಾಪ್, ಸೀಸನ್ನ ಅತಿ ಹೆಚ್ಚು ಸಿಕ್ಸ್ ಸೇರಿದಂತೆ ಅನೇಕ ಅವಾರ್ಡ್ ಅವರ ಕೈ ಸೇರಿತ್ತು. ಈಗ ಅವರಿಗೆ ಟೀಂ ಇಂಡಿಯಾ ಮಣೆ ಹಾಕಿದೆ. ಈ ಕುರಿತು ಮಾಜಿ ನಾಯಕ, ಕನ್ನಡಿಗ ರಾಹುಲ್ ದ್ರಾವಿಡ್ ಮನಬಿಚ್ಚಿ ಮಾತನಾಡಿದ್ದಾರೆ. ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ವೈಭವ್ ಸೂರ್ಯವಂಶಿ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದ್ರಾವಿಡ್, ‘ಎಲ್ಲರನ್ನೂ ವೈಭವ್ ಸೂರ್ಯವಂಶಿಗೆ ಹೋಲಿಕೆ ಮಾಡುವುದು ಸರಿಯಲ್ಲ. ಆತ ಒಬ್ಬ ಅತ್ಯಂತ ಯೂನಿಕ್ ಪ್ಲೇಯರ್’ ಎಂದಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಟೂರ್ನಿಯ ಉದ್ಘಾಟನಾ ಸಮಾರಂಭದಲ್ಲಿ ರಾಹುಲ್ ದ್ರಾವಿಡ್ ಈ ಮಾತುಗಳನ್ನು ಆಡಿದ್ದಾರೆ. ಮಾಜಿ ಕ್ರಿಕೆಟಿಗ ಹಾಗೂ ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರೊಂದಿಗೆ ಸೇರಿ ಟ್ರೋಫಿ ಅನಾವರಣಗೊಳಿಸಿದ ಬಳಿಕ, ಮಾಧ್ಯಮಗಳ ಜೊತೆ ಮಾತನಾಡುತ್ತಾ ದ್ರಾವಿಡ್ ಅವರು ವೈಭವ್ ಅವರ ಬ್ಯಾಟಿಂಗ್ ಶೈಲಿ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.
‘ಎಲ್ಲರನ್ನೂ ವೈಭವ್ ಸೂರ್ಯವಂಶಿಗೆ ಹೋಲಿಸಿ ನೋಡುವುದು ಚೆನ್ನಾಗಿರಲ್ಲ. ವೈಭವ್ ಸೂರ್ಯವಂಶಿ ಒಬ್ಬ ವಿಭಿನ್ನ ಮತ್ತು ಯೂನಿಕ್ ಪ್ಲೇಯರ್. ಸಚಿನ್ 15 ವರ್ಷದವರಿದ್ದಾಗ ಆಡಿದ್ರು. 40 ವರ್ಷಗಳ ಸುದೀರ್ಘ ಅವಧಿಯ ಬಳಿಕ ಈಗ ಮತ್ತೊಬ್ಬ ವೈಭವ್ ಸೂರ್ಯವಂಶಿ ನಮಗೆ ಸಿಕ್ಕಿದ್ದಾನೆ. ಮತ್ತೊಬ್ಬ ವೈಭವ್ ಬರಲು ಇನ್ನು 40 ವರ್ಷ ಬೇಕಾಗಬಹುದು’ ಎಂದು ನಕ್ಕಿದ್ದಾರೆ.
‘ನಮ್ಮ ಹುಡುಗರೂ ಚೆನ್ನಾಗಿ ಆಡುತ್ತಾರೆ, ಅವರಿಗೂ ಅವಕಾಶ ಸಿಗಬೇಕು. ಆದರೆ ವೈಭವ್ ಒಬ್ಬ ವಿಭಿನ್ನ ಆಟಗಾರ ಎಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳಬೇಕು. ಆತ ಸಖತ್ ಆಗಿ ಆಡುತ್ತಿದ್ದಾನೆ. ಅದೊಂದು ಸ್ಪೆಷಲ್ ಟ್ಯಾಲೆಂಟ್. ಮುಂಬರುವ ದಿನಗಳಲ್ಲೂ ಆತ ಇದೇ ರೀತಿಯ ಪ್ರದರ್ಶನವನ್ನು ಮುಂದುವರಿಸಿಕೊಂಡು ಹೋಗಲಿ’ ಎಂದು ಹಾರೈಸಿದ್ದಾರೆ.
ನವದೆಹಲಿ, ಜೂನ್ 12: ಕಳೆದ ಎರಡು ದಿನದಲ್ಲಿ 600 ರೂಗಳಷ್ಟು ಇಳಿಕೆಯಾಗಿದ್ದ ಚಿನ್ನದ ಬೆಲೆ (Gold Rate) ಇವತ್ತು 270 ರೂಗಳಷ್ಟು ಏರಿದೆ. ಬೆಳ್ಳಿ ಬೆಲೆಯೂ 10 ರೂ ಜಂಪ್ ಆಗಿದೆ. ಬಂಗಾರದ ದರ ವಿದೇಶಗಳಲ್ಲೂ ಹೆಚ್ಚಿನ ಕಡೆ ಏರಿಕೆ ಕಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,36,200 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,48,580 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 26,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,36,200 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 26,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 26,500 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜೂನ್ 12ಕ್ಕೆ)
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,858 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,620 ರೂ
18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,144 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,858 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,620 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ನವದೆಹಲಿ, ಜೂನ್ 12: ಭಾರತೀಯ ಕ್ರೀಡಾಲೋಕಕ್ಕೆ ಅಪಾರ ಕೊಡುಗೆ ನೀಡಿದ ಶ್ರೇಷ್ಠ ಶೂಟರ್ ಮತ್ತು ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ತರಬೇತುದಾರ ಜಸ್ಪಾಲ್ ರಾಣಾ(49)(Jaspal Rana) ಅವರು ಕೊನೆಯುಸುರೆಳೆದಿದ್ದಾರೆ. ಆದರೆ, ಅವರು ಕ್ರೀಡಾಲೋಕಕ್ಕೆ ನೀಡಿರುವ ಮೂರು ದಶಕಗಳ ಅದ್ಭುತ ಕೊಡುಗೆ, ಒಲಿಂಪಿಕ್ ಪದಕ ವಿಜೇತರನ್ನು ರೂಪಿಸಿದ ಅವರ ಸಾಧನೆ ಮತ್ತು ಭಾರತೀಯ ಕ್ರೀಡಾ ಇತಿಹಾಸದಲ್ಲಿ ಅವರು ಬಿಟ್ಟು ಹೋಗಿರುವ ಅಮರ ಪರಂಪರೆ ಎಂದಿಗೂ ಸ್ಫೂರ್ತಿಯಾಗಿ ಉಳಿಯಲಿದೆ.
1990ರ ದಶಕದಲ್ಲಿ ಭಾರತದಲ್ಲಿ ಶೂಟಿಂಗ್ ಕ್ರೀಡೆಯು ಇನ್ನು ಜನಪ್ರಿಯವಾಗದ ಕಾಲದಲ್ಲೇ ಜಸ್ಪಾಲ್ ರಾಣಾ ಅವರು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಅಸಾಧಾರಣ ಪ್ರದರ್ಶನ ನೀಡುವ ಮೂಲಕ ದೇಶದ ಗಮನ ಸೆಳೆದರು. ಏಷ್ಯನ್ ಗೇಮ್ಸ್, ಕಾಮನ್ವೆಲ್ತ್ ಗೇಮ್ಸ್ ಹಾಗೂ ಏಷ್ಯನ್ ಚಾಂಪಿಯನ್ಶಿಪ್ಗಳಲ್ಲಿ ಸಾಲು ಸಾಲು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಭಾರತದಲ್ಲಿ ಶೂಟಿಂಗ್ ಕ್ರೀಡೆಗೆ ಒಂದು ಹೊಸ ಮೆರುಗನ್ನು ತಂದುಕೊಟ್ಟರು. ಅಸಂಖ್ಯಾತ ಯುವಕರು ಈ ಕ್ರೀಡೆಯನ್ನು ಆಯ್ಕೆ ಮಾಡಿಕೊಳ್ಳಲು ಇವರೇ ಮುಖ್ಯ ಸ್ಫೂರ್ತಿಯಾಗಿದ್ದರು.
ತಮ್ಮ ಯಶಸ್ವಿ ಕ್ರೀಡಾ ವೃತ್ತಿಜೀವನದ ನಂತರ ಜಸ್ಪಾಲ್ ರಾಣಾ ಅವರು ಯುವ ಪ್ರತಿಭೆಗಳನ್ನು ಗುರುತಿಸುವ ತರಬೇತುದಾರರಾಗಿ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದರು. ಭಾರತದ ಒಲಿಂಪಿಕ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಮನು ಭಾಕರ್ ಸೇರಿದಂತೆ ದೇಶದ ಹಲವು ಅತ್ಯುನ್ನತ ಪಿಸ್ತೂಲ್ ಶೂಟರ್ಗಳನ್ನು ಅಂತಾರಾಷ್ಟ್ರೀಯ ಮಟ್ಟದ ಚಾಂಪಿಯನ್ಗಳನ್ನಾಗಿ ರೂಪಿಸಿದ ಕೀರ್ತಿ ಜಸ್ಪಾಲ್ ರಾಣಾ ಅವರಿಗೆ ಸಲ್ಲುತ್ತದೆ.
2012 ರಿಂದ ದೇಶದ ಜೂನಿಯರ್ ಪಿಸ್ತೂಲ್ ತಂಡದ ಜವಾಬ್ದಾರಿ ಹೊತ್ತು, ಭಾರತದ ಬೆಂಚ್ ಸ್ಟ್ರೆಂತ್ ಅನ್ನು ಜಾಗತಿಕ ಮಟ್ಟದಲ್ಲಿ ಬಲಿಷ್ಠಗೊಳಿಸಿದ ಹೆಗ್ಗಳಿಕೆ ಇವರದ್ದಾಗಿದೆ. ಮ್ಯೂನಿಚ್ನಲ್ಲಿ ನಡೆದ ಐಎಸ್ಎಸ್ಎಫ್ ವಿಶ್ವಕಪ್ ಮುಗಿಸಿ ಭಾರತಕ್ಕೆ ಮರಳುವ ವಿಮಾನ ಪ್ರಯಾಣದಲ್ಲಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ರಾಣಾ ಅವರನ್ನು ನವದೆಹಲಿಯ ಸಾಕೇತ್ನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಜೂನ್ 11ರ ಗುರುವಾರ ಅವರು ಕೊನೆಯುಸಿರೆಳೆದಿದ್ದಾರೆ ಎಂದು ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ ಪರಿಷತ್ತು ದೃಢಪಡಿಸಿದೆ.
ಜಸ್ಪಾಲ್ ರಾಣಾ ಅವರ ದೈಹಿಕ ಅಗಲಿಕೆ ಭಾರತೀಯ ಕ್ರೀಡಾರಂಗಕ್ಕೆ ತುಂಬಲಾರದ ನಷ್ಟವಾದರೂ, ಅವರು ತರಬೇತಿ ನೀಡಿದ ನೂರಾರು ಕ್ರೀಡಾಪಟುಗಳು ಮುಂದಿನ ಒಲಿಂಪಿಕ್ಸ್ ಮತ್ತು ಜಾಗತಿಕ ವೇದಿಕೆಗಳಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಎತ್ತಿಹಿಡಿಯಲಿದ್ದಾರೆ. ಅವರು ಕ್ರೀಡೆಗೆ ನೀಡಿದ ಕೊಡುಗೆಗೆ ಪ್ರತಿಯಾಗಿ ಭಾರತೀಯ ಕ್ರೀಡಾಲೋಕವು ಅವರಿಗೆ ಶ್ರದ್ಧಾಪೂರ್ವಕ ನಮನಗಳನ್ನು ಸಲ್ಲಿಸುತ್ತಿದೆ.
ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಅವರ ಪನ್ವೇಲ್ ಫಾರ್ಮ್ಹೌಸ್ನ ನೆರೆಮನೆಯವರಾದ ಕೇತನ್ ಕಕ್ಕರ್ ನಡುವಿನ ಜಮೀನು ವಿವಾದ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಈ ಪ್ರಕರಣದ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ’ಸಾಮಾಜಿಕ ಜಾಲತಾಣಗಳು ಯಾರನ್ನೂ ದೂಷಿಸುವ ಅಥವಾ ಅವಹೇಳನ ಮಾಡುವ ಹಕ್ಕನ್ನು ಯಾರಿಗೂ ನೀಡುವುದಿಲ್ಲ, ಅದು ಸಾಮಾನ್ಯ ನಾಗರಿಕನಿರಲಿ ಅಥವಾ ಸೆಲೆಬ್ರಿಟಿಯಾಗಿರಲಿ’ ಎಂದು ಗಂಭೀರವಾಗಿ ಹೇಳಿದೆ. ಅಲ್ಲದೆ, ಸಲ್ಮಾನ್ ಖಾನ್ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿರುವ ಆಕ್ಷೇಪಾರ್ಹ ಪೋಸ್ಟ್ಗಳು ಹಾಗೂ ವಿಡಿಯೋಗಳನ್ನು ತೆಗೆದುಹಾಕುವಂತೆ ನೆರೆಮನೆಯವರಾದ ಕೇತನ್ ಕಕ್ಕರ್ ಅವರಿಗೆ ನ್ಯಾಯಮೂರ್ತಿ ಶರ್ಮಿಳಾ ದೇಶಮುಖ್ ಸೂಚಿಸಿದ್ದಾರೆ.
ಏನಿದು ಜಮೀನು ವಿವಾದ?
ಅಮೆರಿಕದಲ್ಲಿ ನೆಲೆಸಿದ್ದ ಅನಿವಾಸಿ ಭಾರತೀಯ ಕೇತನ್ ಕಕ್ಕರ್, 1990ರ ದಶಕದಲ್ಲಿ ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಪನ್ವೇಲ್ನಲ್ಲಿರುವ ಸಲ್ಮಾನ್ ಖಾನ್ ಅವರ ಪ್ರಸಿದ್ಧ ‘ಅರ್ಪಿತಾ ಫಾರ್ಮ್ಸ್’ ಬಳಿ ಎರಡೂವರೆ ಎಕರೆ ಗುಡ್ಡಗಾಡು ಭೂಮಿಯನ್ನು ಖರೀದಿಸಿದ್ದರು. ಆರಂಭದಲ್ಲಿ ಎರಡೂ ಕುಟುಂಬಗಳ ನಡುವೆ ಉತ್ತಮ ಸಂಬಂಧವಿತ್ತು. ಆದರೆ, 2019 ರಲ್ಲಿ ಇವರ ನಡುವಿನ ಬಾಂಧವ್ಯ ಹದಗೆಟ್ಟಿತು.
ಸಲ್ಮಾನ್ ಖಾನ್ ಮೇಲಿರುವ ಗಂಭೀರ ಆರೋಪಗಳೇನು?
ತಮ್ಮ ಜಮೀನಿನಲ್ಲಿದ್ದ ಪರಿಸರ ಸ್ನೇಹಿ ಮನೆ ಮತ್ತು ಗಣಪತಿ ದೇವಸ್ಥಾನವನ್ನು ಕೆಡವಲಾಗಿದೆ, ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ ಹಾಗೂ ತಮ್ಮ ಭೂಮಿಯನ್ನು ಖಾಸಗಿ ಅರಣ್ಯ ಪ್ರದೇಶವೆಂದು ಘೋಷಿಸಲು ಕೆಲವು ದಾಖಲೆಗಳನ್ನು ತಿರುಚಲಾಗಿದೆ’ ಎಂದು ಕೇತನ್ ಕಕ್ಕರ್, ಸಲ್ಮಾನ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು.
ಸಲ್ಮಾನ್ ಖಾನ್ ವಕೀಲರ ವಾದವೇನು?
ಸಲ್ಮಾನ್ ಖಾನ್ ಈ ಎಲ್ಲಾ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಕೇತನ್ ಕಕ್ಕರ್ ಖರೀದಿಸಲು ಬಯಸಿದ್ದ ಭೂಮಿಯ ಪ್ರಕ್ರಿಯೆಯೇ ಕಾನೂನುಬಾಹಿರವಾಗಿತ್ತು, ಹೀಗಾಗಿಯೇ ಸರ್ಕಾರ ಅದನ್ನು ರದ್ದುಗೊಳಿಸಿದೆ ಎಂದು ಸಲ್ಮಾನ್ ಅವರ ವಕೀಲರು ಸ್ಪಷ್ಟಪಡಿಸಿದ್ದಾರೆ. ಈ ಕೋಪದಲ್ಲಿ ಕಕ್ಕರ್ ಅವರು ಸಲ್ಮಾನ್ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎನ್ನುವುದು ನಟನ ವಾದವಾಗಿದೆ.
ವಿವಾದಕ್ಕೆ ಧಾರ್ಮಿಕ ತಿರುವು ಮತ್ತು ಮಾನನಷ್ಟ ಮೊಕದ್ದಮೆ
ಖಾಸಗಿಯಾಗಿ ವಿವಾದ ಬಗೆಹರಿಯದಿದ್ದಾಗ, ಕೇತನ್ ಕಕ್ಕರ್ ಸಾಮಾಜಿಕ ಜಾಲತಾಣಗಳಲ್ಲಿ ಸಲ್ಮಾನ್ ವಿರುದ್ಧ ಸರಣಿ ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದರು. ಒಂದು ವಿಡಿಯೋದಲ್ಲಿ ಸಲ್ಮಾನ್ ಅವರನ್ನು ಬಾಬರ್ ಮತ್ತು ಔರಂಗಜೇಬ್ಗೆ ಹೋಲಿಸಿ, ಗಣಪತಿ ಹಾಗೂ ಅಯೋಧ್ಯೆ ದೇವಾಲಯದ ಪ್ರಸ್ತಾಪ ಮಾಡಿ ವಿವಾದಕ್ಕೆ ಧಾರ್ಮಿಕ ತಿರುವು ನೀಡಲು ಯತ್ನಿಸಿದ್ದರು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಸಲ್ಮಾನ್ ಖಾನ್ ಅವರು ಕಕ್ಕರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದರು. ಕೆಳ ನ್ಯಾಯಾಲಯದಲ್ಲಿ ತಕ್ಷಣದ ಪರಿಹಾರ ಸಿಗದ ಕಾರಣ ಸಲ್ಮಾನ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣದ ತೀರ್ಪು ನೀಡಿರುವ ಬಾಂಬೆ ಹೈಕೋರ್ಟ್, ವಿಷಯ ನ್ಯಾಯಾಲಯದಲ್ಲಿ ಬಾಕಿ ಇರುವಾಗ ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿರುವುದನ್ನು ಪ್ರಶ್ನಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸುಲಭವಾಗಿ ನಮ್ಮ ಅಭಿಪ್ರಾಯ ಹೇಳಬಹುದು ಎಂದಾಕ್ಷಣ, ಇನ್ನೊಬ್ಬರ ಪ್ರತಿಷ್ಠೆಗೆ ಕಳಂಕ ತರುವಂತೆ ದೂಷಿಸುವುದು ಸರಿಯಲ್ಲ ಎಂದು ಕೋರ್ಟ್ ಕಕ್ಕರ್ ಅವರಿಗೆ ಎಚ್ಚರಿಕೆ ನೀಡಿದೆ.
ಶಿವಮೊಗ್ಗ, ಜೂನ್ 12: ಮಳೆಗಾಲದ ಹಿನ್ನೆಲೆಯಲ್ಲಿ ಇತಿಹಾಸ ಪ್ರಸಿದ್ಧ ಆಗುಂಬೆ ಘಾಟಿಯಲ್ಲಿ(Agumbe ghat)ಜೂನ್ 15 ರಿಂದ ಮಳೆಗಾಲ ಮುಗಿಯುವವರೆಗೂ ಭಾರಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಕುರಿತು ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.
ಮುಖ್ಯಾಂಶಗಳು
ಆಗುಂಬೆ ಘಾಟಿಯಲ್ಲಿ ಜೂನ್ ಹದಿನೈದರಿಂದ ಭಾರಿ ವಾಹನಗಳ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ.
ಮಳೆಗಾಲದಲ್ಲಿ ಭೂಕುಸಿತ ಮತ್ತು ಅಪಘಾತ ತಡೆಯಲು ಶಿವಮೊಗ್ಗ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಪ್ರಯಾಣಿಕರ ಅನುಕೂಲಕ್ಕಾಗಿ ಕೊಲ್ಲೂರು ಮತ್ತು ಶೃಂಗೇರಿ ಮಾರ್ಗವಾಗಿ ಪರ್ಯಾಯ ರಸ್ತೆ ಸೂಚಿಸಲಾಗಿದೆ.
ಹುಲಿಕಲ್ ಘಾಟಿಯಲ್ಲಿ ಭೂಕುಸಿತ
ರಾಷ್ಟ್ರೀಯ ಹೆದ್ದಾರಿ 169ಎ ತೀರ್ಥಹಳ್ಳಿ-ಮಲ್ಪೆ-ಉಡುಪಿ ರಸ್ತೆಯ ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಓಡಾಟ ಹೆಚ್ಚಾದರೆ ರಸ್ತೆ ಬದಿಯ ಭೂಕುಸಿತ ಸಂಭವಿಸುವ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುವ ಅಪಾಯವಿದೆ. ಇದೇ ವೇಳೆ, ಮತ್ತೊಂದು ಪ್ರಮುಖ ಸಂಪರ್ಕ ರಸ್ತೆಯಾದ ಹುಲಿಕಲ್ ಘಾಟಿಯಲ್ಲೂ ಭೂಕುಸಿತ ಸಂಭವಿಸಿದ್ದು, ಅಲ್ಲಿನ ತಾತ್ಕಾಲಿಕ ರಕ್ಷಣಾತ್ಮಕ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.
ಆಗುಂಬೆ ಘಾಟಿ ಮಾರ್ಗವು ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಮತ್ತು ಹಾವೇರಿ ಜಿಲ್ಲೆಗಳ ಜನರಿಗೆ ಉಡುಪಿ, ಮಂಗಳೂರು ಹಾಗೂ ಮಣಿಪಾಲ್ ಆಸ್ಪತ್ರೆಗಳಿಗೆ ತುರ್ತು ಚಿಕಿತ್ಸೆಗೆ ತೆರಳಲು ಪ್ರಮುಖ ಸಂಪರ್ಕವಾಗಿದೆ. ಇದೀಗ ಈ ಆದೇಶದಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಜಿಲ್ಲಾಡಳಿತವು ಪರ್ಯಾಯ ಮಾರ್ಗಗಳನ್ನು ಸೂಚಿಸಿದೆ.
ತೀರ್ಥಹಳ್ಳಿಯಿಂದ ಉಡುಪಿ ಕಡೆಗೆ ಹೋಗುವ ವಾಹನಗಳು: ತೀರ್ಥಹಳ್ಳಿ-ನಗರ-ನಾಗೋಡಿ-ಕೊಲ್ಲೂರು-ಕುಂದಾಪುರ-ಉಡುಪಿ ಅಥವಾ ತೀರ್ಥಹಳ್ಳಿ-ಶೃಂಗೇರಿ-ಕೆರೆಕಟ್ಟೆ-ಬಜಗೋಳಿ-ಕಾರ್ಕಳ-ಉಡುಪಿ ಮಾರ್ಗವಾಗಿ ಸಂಚರಿಸಬೇಕು.
ಉಡುಪಿಯಿಂದ ತೀರ್ಥಹಳ್ಳಿ ಕಡೆಗೆ ಬರುವ ವಾಹನಗಳು: ಉಡುಪಿ-ಕುಂದಾಪುರ-ಕೊಲ್ಲೂರು-ನಾಗೋಡಿ-ನಗರ-ತೀರ್ಥಹಳ್ಳಿ ಅಥವಾ ಕಾರ್ಕಳ-ಬಜಗೋಳಿ-ಕೆರೆಕಟ್ಟೆ-ಶೃಂಗೇರಿ-ತೀರ್ಥಹಳ್ಳಿ ರಸ್ತೆಯನ್ನು ಬಳಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.