Category Archives: Blog

Your blog category

ಗೊರಗುಂಟೆಪಾಳ್ಯದಲ್ಲಿ ಗ್ಯಾಸ್ ಲಾರಿ ಬ್ರೇಕ್ ಫೇಲ್ ಆಗಿ ಕೆಟಿಎಂ ಬೈಕ್‌ಗೆ ಡಿಕ್ಕಿ; ಲಾರಿ ಚಕ್ರದಡಿ ಸಿಲುಕಿ ದಂಪತಿ ಸಾವು – Kannada News

ಬೆಂಗಳೂರು, ಜೂ.11: ಗೊರಗುಂಟೆಪಾಳ್ಯ ಜಂಕ್ಷನ್‌ನಲ್ಲಿ ಇಂದು (ಜೂ.11) ಮಧ್ಯಾಹ್ನ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಸಿಲಿಂಡರ್‌ಗಳಿಂದ ತುಂಬಿದ್ದ ಗ್ಯಾಸ್ ಲಾರಿಯೊಂದರ ಬ್ರೇಕ್ ಫೇಲ್ ಆದ ಪರಿಣಾಮ, ನಿಯಂತ್ರಣ ತಪ್ಪಿ ಕೆಟಿಎಂ ಡ್ಯೂಕ್ (KTM Duke) ಬೈಕ್‌ಗೆ ಡಿಕ್ಕಿ ಹೊಡೆದಿದೆ. ಈ ದುರಂತದಲ್ಲಿ ಬೈಕ್‌ನಲ್ಲಿದ್ದ ಪತಿ-ಪತ್ನಿ ಇಬ್ಬರೂ ಲಾರಿಯ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳನ್ನು ನಾಗರಬಾವಿ ನಿವಾಸಿಗಳಾದ ಶಬ್ರಾಜ್ (28) ಮತ್ತು ಆತನ ಪತ್ನಿ ಶಬ್ರೀನ್ (24) ಎಂದು ಗುರುತಿಸಲಾಗಿದೆ. ದಂಪತಿಗಳಿಬ್ಬರು ತಮ್ಮ ಕೆಟಿಎಂ ಬೈಕ್‌ನಲ್ಲಿ ನಾಗರಬಾವಿಯಿಂದ ಹೊರಟು ಗೊರಗುಂಟೆಪಾಳ್ಯ ಸಿಗ್ನಲ್ ದಾಟಿಕೊಂಡು ಯಶವಂತಪುರ ಕಡೆಗೆ ಬರುತ್ತಿದ್ದಾಗ ಈ ಘೋರ ದುರಂತ ಸಂಭವಿಸಿದೆ.

ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಗ್ಯಾಸ್ ಸಿಲಿಂಡರ್ ಲಾರಿಯ ಬ್ರೇಕ್ ಫೇಲ್ ಆಗಿರುವುದು ಪತ್ತೆಯಾಗಿದೆ. ಸಿಗ್ನಲ್ ಬಳಿ ಲಾರಿ ಚಾಲಕನ ನಿಯಂತ್ರಣಕ್ಕೆ ಸಿಗದೆ ಮುನ್ನುಗ್ಗಿದೆ. ಈ ವೇಳೆ ಯಶವಂತಪುರ ರಸ್ತೆಯ ಟಿಎಂಟಿ ಜಂಕ್ಷನ್ ಬಳಿ ದಂಪತಿ ಪ್ರಯಾಣಿಸುತ್ತಿದ್ದ ಬೈಕ್‌ಗೆ ಲಾರಿ ಹಿಂಬದಿಯಿಂದ ಜೋರಾಗಿ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ. ತಕ್ಷಣವೇ ಲಾರಿಯ ಹಿಂಭಾಗದ ಭಾರೀ ಗಾತ್ರದ ಟೈರ್ ದಂಪತಿಗಳ ಮೇಲೆ ಹರಿದಿದ್ದರಿಂದ ತೀವ್ರ ರಕ್ತಸ್ರಾವವಾಗಿ ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಅಪಘಾತದ ತೀವ್ರತೆಗೆ ಅವರ ಕೆಟಿಎಂ ಬೈಕ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ಇದನ್ನೂ ಓದಿ: ಸಾವು ಹೀಗೂ ಬರಬಹುದು: ಉಡುಪಿಯಲ್ಲಿ ತೆಂಗಿನಕಾಯಿ ಬಿದ್ದು ಹಸುಗೂಸು ಸಾವು

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಯಶವಂತಪುರ ಸಂಚಾರಿ ಠಾಣೆ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದೆ. ಪೀಕ್ ಅವರ್‌ನಲ್ಲಿಯೇ ಗೊರಗುಂಟೆಪಾಳ್ಯದ ಪ್ರಮುಖ ಸಿಗ್ನಲ್‌ನಲ್ಲಿ ಈ ಭೀಕರ ಅಪಘಾತ ನಡೆದ ಕಾರಣ ತುಮಕೂರು ರಸ್ತೆ ಮತ್ತು ಯಶವಂತಪುರ ಮಾರ್ಗದಲ್ಲಿ ಬರೋಬ್ಬರಿ ಕಿಲೋಮೀಟರ್‌ಗಟ್ಟಲೆ ಭಾರಿ ಸಂಚಾರ ದಟ್ಟಣೆ (Traffic Jam) ಉಂಟಾಗಿತ್ತು. ಪೊಲೀಸರು ಕ್ರೇನ್ ಬಳಸಿ ಅಪಘಾತಕ್ಕೀಡಾದ ವಾಹನಗಳನ್ನು ಪಕ್ಕಕ್ಕೆ ಸರಿಸಿ, ಸದ್ಯ ಸಂಚಾರ ವ್ಯವಸ್ಥೆ ಕಲ್ಪಿಸಿದ್ದಾರೆ. ಈ ಕುರಿತು ಯಶವಂತಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅನಿವಾಸಿ ಭಾರತೀಯರ FCNR-B ಠೇವಣಿಗಳಿಗೆ ಭಾರತದ ಬ್ಯಾಂಕುಗಳಿಂದ ಭರ್ಜರಿ ಬಡ್ಡಿ ಆಫರ್ – Kannada News

ನವದೆಹಲಿ, ಜೂನ್ 11: ಅನಿವಾಸಿ ಭಾರತೀಯರಿಂದ (NRI) ಅವರ ದೇಶಗಳ ಕರೆನ್ಸಿಯನ್ನು ಆಕರ್ಷಿಸುವ ಸಲುವಾಗಿ ಆರ್​ಬಿಐ ಕೆಲ ನಿಯಮಗಳಲ್ಲಿ ಬದಲಾವಣೆ ಮಾಡಿದ ಬೆನ್ನಲ್ಲೇ ಭಾರತದ ಹಲವು ಬ್ಯಾಂಕುಗಳು ಎನ್​ಆರ್​ಐ ಠೇವಣಿಗಳ (FCNR-B) ದರಗಳನ್ನು ಗಣನೀಯವಾಗಿ ಹೆಚ್ಚಿಸತೊಡಗಿವೆ. ಸರ್ಕಾರಿ ಸ್ವಾಮ್ಯದ ಎಸ್​ಬಿಐನಿಂದ ಹಿಡಿದು ಖಾಸಗಿಯ ಯೆಸ್ ಬ್ಯಾಂಕ್​ವರೆಗೆ ಹಲವು ಬ್ಯಾಂಕುಗಳು ವಿದೇಶೀ ಕರೆನ್ಸಿಗಳ ಠೇವಣಿ ದರಗಳನ್ನು ಏರಿಸಿವೆ. ಕೆಲ ಠೇವಣಿಗಳಿಗೆ ಶೇ. 7.1ರವರೆಗೂ ಬಡ್ಡಿ ಆಫರ್ ಮಾಡಲಾಗಿದೆ.

ಯೆಸ್ ಬ್ಯಾಂಕ್ (Yes Bank) ತನ್ನ ವಿದೇಶಿ ಕರೆನ್ಸಿ ಅನಿವಾಸಿ (FCNR-B) ಠೇವಣಿಗಳ ಮೇಲಿನ ಬಡ್ಡಿದರವನ್ನು ಗಣನೀಯವಾಗಿ ಹೆಚ್ಚಿಸಿದೆ. ಗರಿಷ್ಠ ಶೇ. 6.6 ರವರೆಗೆ ಬಡ್ಡಿದರವನ್ನು ಆಫರ್ ಮಾಡುತ್ತಿದೆ. ಅದರ ಹೊಸ ದರಗಳು ಈ ಕೆಳಗಿನಂತಿವೆ:

  • 1-2 ವರ್ಷದ ಅವಧಿ: ಶೇ. 6.10 ಬಡ್ಡಿದರ.
  • 2-3 ವರ್ಷದ ಅವಧಿ: ಶೇ. 6.35 ಬಡ್ಡಿದರ.
  • 3-5 ವರ್ಷದ ಅವಧಿ: ಶೇ. 6.60 ಬಡ್ಡಿದರ.

ಇದನ್ನೂ ಓದಿ: ಕೈಯಿಂದ ಪ್ರೀಮಿಯಮ್ ಕಟ್ಟಬೇಕಿಲ್ಲ; ಉಚಿತ 7 ಲಕ್ಷ ರೂ ವಿಮಾ ಸೌಲಭ್ಯ ಪಡೆಯುವುದು ಹೇಗೆ?

ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮೂರು ವರ್ಷದ ಡೆಪಾಸಿಟ್​ಗಳಿಗೆ ಬಡ್ಡಿದರವನ್ನು ಶೇ. 7.1ಕ್ಕೆ ಏರಿಸಿದೆ. ಐದು ವರ್ಷದ ಡೆಪಾಸಿಟ್​ಗೆ ಬಡ್ಡಿದರ ಶೇ. 7 ನಿಗದಿ ಮಾಡಿದೆ.

ಇನ್ನು, ಎಚ್​​ಡಿಎಫ್​ಸಿ ಬ್ಯಾಂಕ್ ತನ್ನ ಎನ್​ಆರ್​ಐ ಗ್ರಾಹಕರ ಡೆಪಾಸಿಟ್​ಗಳಿಗೆ ಶೇ. 6 ಬಡ್ಡಿ ಆಫರ್ ಮಾಡುತ್ತಿದೆ. ಇತರ ಹಲವು ಬ್ಯಾಂಕುಗಳು ಕೂಡ ತಮ್ಮ ಠೇವಣಿ ದರಗಳನ್ನು ಹೆಚ್ಚಿಸಿವೆ.

ಆರ್​ಬಿಐನ ಈ ನಿರ್ಧಾರಕ್ಕೆ ಕಾರಣವೇನು?

ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗಷ್ಟೇ ಅನಿವಾಸಿ ಭಾರತೀಯ ಹೂಡಿಕೆದಾರರನ್ನು ಆಕರ್ಷಿಸಲು ಕೆಲವು ಪ್ರಮುಖ ಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ ಎಫ್‌ಸಿಎನ್‌ಆರ್ (FCNR) ಠೇವಣಿಗಳ ಮೇಲಿನ ಹೆಡ್ಜಿಂಗ್ ವೆಚ್ಚವನ್ನು (ವಿದೇಶಿ ಕರೆನ್ಸಿ ವಿನಿಮಯ ದರ ಏರಿಳಿತದ ಅಪಾಯದ ವೆಚ್ಚ) ಆರ್​ಬಿಐ ಭರಿಸುವ ನಿರ್ಧಾರವೂ ಸೇರಿದೆ. ಇದರಿಂದಾಗಿ ಬ್ಯಾಂಕುಗಳಿಗೆ ಆಗುವ ವೆಚ್ಚ ಕಡಿಮೆಯಾಗಿದ್ದು, ಆ ಲಾಭವನ್ನು ಬ್ಯಾಂಕುಗಳು ಹೆಚ್ಚಿನ ಬಡ್ಡಿಯ ರೂಪದಲ್ಲಿ ಎನ್‌ಆರ್‌ಐ ಗ್ರಾಹಕರಿಗೆ ವರ್ಗಾಯಿಸುತ್ತಿವೆ.

ಇದನ್ನೂ ಓದಿ: ಆಂಥ್ರೊಪಿಕ್-ಟಿಸಿಎಸ್ ಎಐ ಡೀಲ್; 50,000 ಉದ್ಯೋಗಿಗಳಿಗೆ ಸಿಗಲಿದೆ ಕ್ಲಾಡ್ ತರಬೇತಿ

FCNR(B) ಠೇವಣಿಗಳ ಪ್ರಮುಖ ಅನುಕೂಲಗಳು

  • ಈ ಖಾತೆಗಳಲ್ಲಿ ಹಣವನ್ನು ಭಾರತೀಯ ರೂಪಾಯಿಗೆ ಬದಲಾಯಿಸದೆ ಯುಎಸ್ ಡಾಲರ್ (USD), ಬ್ರಿಟಿಷ್ ಪೌಂಡ್ (GBP) ಅಥವಾ ಯೂರೋ (EUR) ನಂತಹ ವಿದೇಶಿ ಕರೆನ್ಸಿಗಳಲ್ಲೇ ಇಡಬಹುದು. ಹೀಗಾಗಿ ರೂಪಾಯಿ ಮೌಲ್ಯ ಕುಸಿತದ ಭೀತಿ ಇರುವುದಿಲ್ಲ.
  • ಈ ಠೇವಣಿಗಳ ಮೇಲೆ ಗಳಿಸುವ ಬಡ್ಡಿಯು ಭಾರತದಲ್ಲಿ ಸಂಪೂರ್ಣವಾಗಿ ಆದಾಯ ತೆರಿಗೆಯಿಂದ ಮುಕ್ತವಾಗಿರುತ್ತದೆ (Tax-Free).
  • ಗಳಿಸಿದ ಅಸಲು ಮತ್ತು ಬಡ್ಡಿಯನ್ನು ಯಾವುದೇ ಮಿತಿ ಇಲ್ಲದೆ, ಸುಲಭವಾಗಿ ತಮ್ಮ ದೇಶಕ್ಕೆ ವರ್ಗಾಯಿಸಿಕೊಳ್ಳಬಹುದು (Repatriable).

ಆರ್​ಬಿಐನ ಈ ಕ್ರಮದಿಂದ ದೇಶದ ಫಾರೆಕ್ಸ್ ಮಾರುಕಟ್ಟೆಗೂ ಅನುಕೂಲವಾಗುತ್ತದೆ. ಬಹಳ ಮುಖ್ಯವಾದ ವಿದೇಶಿ ಕರೆನ್ಸಿ ಸಂಪತ್ತು ಸಂಗ್ರಹ ಹೆಚ್ಚುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಇಂಗ್ಲೆಂಡ್​ನಲ್ಲಿ ಮಂಕಾದ ಮಂಧಾನ; ತಂಡಕ್ಕೆ ಎದುರಾಯ್ತು ಹೊಸ ತಲೆನೋವು – Kannada News

2026 ರ ಮಹಿಳಾ ಟಿ20 ವಿಶ್ವಕಪ್ (Women’s T20 World Cup 2026) ಜೂನ್ 12 ರಿಂದ ಇಂಗ್ಲೆಂಡ್​ನಲ್ಲಿ ಆರಂಭವಾಗುತ್ತಿದೆ. ಈ ಪಂದ್ಯಾವಳಿಗಾಗಿ ಟೀಂ ಇಂಡಿಯಾ ಕೂಡ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ. ಅದರ ಭಾಗವಾಗಿ ಭಾರತ ವನಿತಾ ಪಡೆ, ಆತಿಥೇಯ ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಿತು. ಆದರೆ ಆ ಸರಣಿಯನ್ನು 2-1 ಅಂತರದಿಂದ ಕಳೆದುಕೊಂಡಿತು. ಇದಾದ ನಂತರ ಎರಡು ಅಭ್ಯಾಸ ಪಂದ್ಯಗಳನ್ನು ಆಡಿತು. ಅದರಲ್ಲಿ ಒಂದು ಪಂದ್ಯದಲ್ಲಿ ಗೆದ್ದು ಒಂದು ಪಂದ್ಯದಲ್ಲಿ ಸೋತಿತು. ಆ ಒಂದು ಸೋಲು ಇಂಗ್ಲೆಂಡ್ ತಂಡದ ವಿರುದ್ಧವೇ ಬಂದಿತು. ವಿಶ್ವಕಪ್ ಆರಂಭಕ್ಕೂ ಮುನ್ನ ಭಾರತ ವನಿತಾ ಪಡೆ ಸೋಲುಗಳಿಗೆ ಕೊರಳೊಡ್ಡಿರುವುದು ಆಡಳಿತ ಮಂಡಳಿಯ ಚಿಂತೆ ಹೆಚ್ಚಿಸಿದೆ. ಅದರಲ್ಲೂ ತಂಡದ ಉಪನಾಯಕಿ ಸ್ಮೃತಿ ಮಂಧಾನ (Smriti Mandhana) ಅವರ ಕಳಪೆ ಫಾರ್ಮ್​ ಮ್ಯಾನೇಜ್​ಮೆಂಟ್​ನ ನಿದ್ದೆಗೆಡಿಸಿದೆ.

2026 ರ ಟಿ20 ವಿಶ್ವಕಪ್​ನಲ್ಲಿ ಟೀಂ ಇಂಡಿಯಾ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಆದರೆ ಅದಕ್ಕೂ ಮೊದಲು, ಮಂಧಾನ ಅವರ ಬ್ಯಾಟ್ ಸಂಪೂರ್ಣವಾಗಿ ಮೌನವಾಗಿರುವುದು ಹೊಸ ತಲೆನೋವು ತಂದಿದೆ. ಇಂಗ್ಲೆಂಡ್ ಪ್ರವಾಸದಿಂದ ಅಭ್ಯಾಸ ಪಂದ್ಯಗಳವರೆಗೆ, ಸ್ಮೃತಿ ಮಂಧಾನ ಪ್ರತಿ ರನ್‌ಗೂ ಕಷ್ಟಪಡುತ್ತಿರುವುದು ಕಂಡುಬಂದಿದೆ, ಇದು ಟೀಂ ಇಂಡಿಯಾಕ್ಕೆ ಎಚ್ಚರಿಕೆಯ ಸಂಕೇತವಾಗಿದೆ.

ಇಂಗ್ಲೆಂಡ್ ಪ್ರವಾಸದಲ್ಲಿ ಮಂಕಾದ ಮಂಧಾನ

ವಾಸ್ತವವಾಗಿ ಟಿ20 ವಿಶ್ವಕಪ್‌ಗೆ ಸಿದ್ಧರಾಗಲು ಮತ್ತು ಅಲ್ಲಿನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಹರ್ಮನ್‌ಪ್ರೀತ್ ಪಡೆ ಸಾಕಷ್ಟು ಮುಂಚಿತವಾಗಿಯೇ ಇಂಗ್ಲೆಂಡ್‌ಗೆ ತಲುಪಿತ್ತು. ಆದಾಗ್ಯೂ, ಈ ಪ್ರವಾಸ ಮಂಧಾನಾಗೆ ದುಃಸ್ವಪ್ನವಾಗಿ ಪರಿಣಮಿಸಿದೆ. ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಖಾತೆ ತೆರೆಯದೆ ಪೆವಿಲಿಯನ್‌ ಸೇರಿದ್ದ ಮಂಧಾನ, ಎರಡನೇ ಪಂದ್ಯದಲ್ಲಿ 32 ರನ್ ಗಳಿಸುವ ಮೂಲಕ ಹಳೆಯ ಫಾರ್ಮ್​ಗೆ ಮರಳುವ ಭರವಸೆಯನ್ನು ಮೂಡಿಸಿದ್ದರು. ಆದರೆ ಮೂರನೇ ಮತ್ತು ಅಂತಿಮ ಟಿ20ಯಲ್ಲಿ ಕೇವಲ 8 ರನ್ ಕಲೆಹಾಕಲಷ್ಟೇ ಶಕ್ತರಾಗಿದ್ದರು. ಇದರ ನಂತರ, ವೆಸ್ಟ್ ಇಂಡೀಸ್ ವಿರುದ್ಧದ ವಿಶ್ವಕಪ್‌ನ ಮೊದಲ ಅಭ್ಯಾಸ ಪಂದ್ಯದಲ್ಲಿ 39 ರನ್ ಬಾರಿಸಿದ್ದ ಸ್ಮೃತಿ, ಇಂಗ್ಲೆಂಡ್ ವಿರುದ್ಧದ ಎರಡನೇ ಅಭ್ಯಾಸ ಪಂದ್ಯದಲ್ಲಿ ಕೇವಲ 1 ರನ್ ಗಳಿಸುವ ಮೂಲಕ ಮತ್ತೆ ನಿರಾಶೆ ಮೂಡಿಸಿದರು.

‘ಆ ಒಂದು ಪಂದ್ಯಕ್ಕೆ ಏಕೆ ಅಷ್ಟೊಂದು ಮನ್ನಣೆ’?; ವಿಶ್ವಕಪ್​ಗೂ ಮುನ್ನ ಸ್ಮೃತಿ ಮನವಿ

ತಂಡಕ್ಕೆ ತಲೆನೋವಾದ ಮಂಧಾನ ಕಳಪೆ ಫಾರ್ಮ್​

ಮಂಧಾನ ಅವರನ್ನು ಭಾರತೀಯ ಬ್ಯಾಟಿಂಗ್ ಕ್ರಮಾಂಕದ ಬೆನ್ನೆಲುಬು ಎಂದೇ ಪರಿಗಣಿಸಲಾಗಿದೆ. ಪವರ್‌ಪ್ಲೇನಲ್ಲಿ ತಂಡಕ್ಕೆ ಆಕ್ರಮಣಕಾರಿ ಮತ್ತು ಬಲವಾದ ಆರಂಭ ನೀಡುವ ಜವಾಬ್ದಾರಿ ಅವರ ಮೇಲಿದೆ. ಮಂಧಾನ ಒಂದೇ ಒಂದು ಅರ್ಧಶತಕ ಗಳಿಸದಿರುವುದು ಕ್ರೀಸ್‌ನಲ್ಲಿ ಸಮಯ ಕಳೆದರೂ ದೊಡ್ಡ ಇನ್ನಿಂಗ್ಸ್‌ಗಳನ್ನು ಪರಿವರ್ತಿಸುವಲ್ಲಿ ಅವರು ವಿಫಲರಾಗುತ್ತಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಮಂಧಾನ ಅವರ ಫಾರ್ಮ್ ಇದೇ ರೀತಿ ಮುಂದುವರಿದರೆ, ಟೀಂ ಇಂಡಿಯಾದ ಸಮಸ್ಯೆಗಳು ಹೆಚ್ಚಾಗಬಹುದು. ಹೀಗಾಗಿ ಮಂಧಾನ ಬೇಗನೇ ತಮ್ಮ ಹಳೆಯ ಲಯಕ್ಕೆ ಬರಲಿ, ತಂಡಕ್ಕೆ ಮತ್ತೊಂದು ವಿಶ್ವಕಪ್ ಗೆಲ್ಲಿಸಿಕೊಡಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೀರಿನ ಬಾಟಲಿನ ಕ್ಯಾಪ್​ಗಳು ಏಕೆ ಬೇರೆ ಬೇರೆ ಬಣ್ಣದಲ್ಲಿರುವುದು ಏಕೆ? – Kannada News

ಸಾಮಾನ್ಯವಾಗಿ ನಾವು ದಿನನಿತ್ಯ ಬಳಸುವ ವಸ್ತುಗಳ ಬಗ್ಗೆ ಅಷ್ಟಾಗಿ ಯೋಚನೆ ಮಾಡಲ್ಲ. ಹೌದು, ಪ್ರತಿದಿನ ಬಳಸುವ ಸಾಮಾನ್ಯ ವಸ್ತುಗಳಲ್ಲಿ ಈ ನೀರಿನ ಬಾಟಲಿ (water bottle) ಕೂಡ ಒಂದು. ಪ್ರಯಾಣದ ವೇಳೆ ಖರೀದಿ ಮಾಡುವ ಈ ನೀರಿನ ಬಾಟಲಿಯ ಕ್ಯಾಪ್ ಬಣ್ಣವು ಹೆಚ್ಚಾಗಿ ನೀಲಿಯಾಗಿರುತ್ತದೆ. ಆದರೆ ಇನ್ನು ಕೆಲವು ಬಾಟಲಿ ಮುಚ್ಚಳವು ಬಿಳಿ, ಕಪ್ಪು, ಹಸಿರು, ಹಳದಿ ಹೀಗೆ ವಿವಿಧ ಬಣ್ಣದಲ್ಲಿರುವುದನ್ನು ನೀವು ನೋಡಿರುತ್ತೀರಿ. ಬಾಟಲಿ ಮುಚ್ಚಳಗಳು ಬೇರೆ ಬೇರೆ ಬಣ್ಣದಲ್ಲಿರುವುದು ಯಾಕೆ ಎನ್ನುವುದಕ್ಕೆ ಕಾರಣವೂ ಇದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದ್ದು, ಮಹಿಳೆಯೊಬ್ಬಳು ಇದರ ಹಿಂದಿನ ಕಾರಣವನ್ನು ವಿವರಿಸಿದ್ದಾಳೆ.

ಲರ್ನ್‌ ವಿಥ್‌ಪಿಕೆ (Learnwithpk) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಮಹಿಳೆ ನೀರಿನ ಬಾಟಲಿ ಮುಚ್ಚಳದ ಬಣ್ಣಗಳ ಹಿಂದಿನ ಕಾರಣವನ್ನು ವಿವರಿಸುವುದನ್ನು ಕಾಣಬಹುದು. ನೀಲಿ ಮುಚ್ಚಳಗಳು ನೈಸರ್ಗಿಕ ಖನಿಜಯುಕ್ತ ನೀರು, ಬಿಳಿ ಕ್ಯಾಪ್ ಗಳು ಶುದ್ಧೀಕರಿಸಿದ ನೀರು, ಹಸಿರು ಖನಿಜಯುಕ್ತ ಅಥವಾ ಸುವಾಸನೆಯನ್ನು ಹೊಂದಿರುವ ನೀರು, ಕಪ್ಪು ಮುಚ್ಚಳ ಕ್ಷಾರೀಯ ನೀರು, ಹಳದಿ ಕ್ಯಾಪ್ ಗಳು ಜೀವಸತ್ವಗಳು ಹಾಗೂ ವಿಟಮಿನ್ ನಿಂದ ಸಮೃದ್ಧವಾಗಿರುವ ನೀರು ಹಾಗೂ ಕೆಂಪು ಮುಚ್ಚಳ ಎಲೆಕ್ಟ್ರೋಲೈಟ್ಸ್ ಭರಿತ ನೀರು ಎಂದು ಹೇಳಿರುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಟೆರೇಸ್‌ನಲ್ಲಿ ಟಾಟಾ ಸುಮೋ ಕಾರಿನಂತೆ ಕಾಣುವ ವಾಟರ್‌ ಟ್ಯಾಂಕ್ ನಿರ್ಮಿಸಿದ ಮನೆ ಮಾಲೀಕ

ಈ ವಿಡಿಯೋ ನಾಲ್ಕು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿವೆ. ಒಬ್ಬ ಬಳಕೆದಾರ, ಧನ್ಯವಾದಗಳು ಎಂದರೆ, ಇನ್ನೊಬ್ಬರು ಉಪಯುಕ್ತ ಮಾಹಿತಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ಈ ಮಾಹಿತಿ ತಿಳಿದೇ ಇರಲಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ – Kannada News

ಬೆಂಗಳೂರು (ಜೂ.11): ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಯ (Karnataka Rajya Sabha) ನಾಲ್ಕು ಸ್ಥಾನಗಳಿಗೆ ನಾಲ್ವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾವಣ ಕಣದಲ್ಲಿ ಯಾವುದೇ ಪ್ರತಿಸ್ಪರ್ಧಿಗಳಿಲ್ಲದಿದ್ದರಿಂದ ನಾಲ್ಕು ಸ್ಥಾನಗಳ ಪೈಕಿ ಮೂವರು ಕಾಂಗ್ರೆಸ್ (Congress) ಮತ್ತು ಓರ್ವ ಬಿಜೆಪಿ (BJP) ಅಭ್ಯರ್ಥಿ ಅವಿರೋಧವಾಗಿ ಗೆದ್ದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳಾದ ಮಲ್ಲಿಕಾರ್ಜುನ ಖರ್ಗೆ, ಮನ್ಸೂರ್ ಅಲಿಖಾನ್, ಪವನ್ ಖೇರಾ ಹಾಗೂ ಬಿಜೆಪಿ ಅಭ್ಯರ್ಥಿ ನಾಗರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಬಗ್ಗೆ ವಿಧಾನಸಭೆ ಕಾರ್ಯದರ್ಶಿ, ಚುನಾವಣಾಧಿಕಾರಿ ಕೆ.ಎಂ.ವಿಶಾಲಾಕ್ಷಿ ಘೋಷಣೆ ಮಾಡಿದ್ದಾರೆ.

ಆವಿರೋಧವಾಗಿ ರಾಜ್ಯಸಭೆಗೆ ಪ್ರವೇಸಿಸಿದ ಬಿಜೆಪಿಯ ಎಂ.ನಾಗರಾಜ್ ಪ್ರತಿಕ್ರಿಯಿಸಿ, ಕೇಂದ್ರದ ವರಿಷ್ಠರು, ಮೋದಿ, ಅಮಿತ್‌ ಶಾ ಅವರಿಗೆ ಧನ್ಯವಾದ ಸಲ್ಲಿಸ್ತೇನೆ. ಈ ಹಿಂದೆ‌ ಕೋರ್‌ ಕಮಿಟಿ ಸದಸ್ಯರಿಗೆ ಮನವಿ ಮಾಡಿದ್ದೆ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ, ಕೆಲಸ ಮಾಡ್ತಿದ್ದೇವೆ. ಈ ಅವಕಾಶವನ್ನು ಅಪೇಕ್ಷೆ, ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ‌ ಮಾಡ್ತೇನೆ ಎಂದರು.

ಇನ್ನು ಕರ್ನಾಟಕದಿಂದ ರಾಜ್ಯಸಭೆ ಆಯ್ಕೆಯಾಗಿರುವ ಕಾಂಗ್ರೆಸ್​​​ನ ಪವನ್ ಖೇರಾ ಮಾತನಾಡಿ, ಮುಂದೆ ನಾನು ಇಲ್ಲಿಗೆ ಬರುವಾಗ ಕನ್ನಡ ಕಲಿತುಕೊಂಡು ಬರುತ್ತೇನೆ. ಕರ್ನಾಟಕದಿಂದ ರಾಜ್ಯಸಭೆ ಸದಸ್ಯನಾಗಿ ಆಯ್ಕೆಯಾಗಿದ್ದಕ್ಕೆ ಖುಷಿ ಇದೆ ಎಂದು ಸಂತಸ ವ್ಯಕ್ತಪಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

BAN vs AUS: ಸೊನ್ನೆಗೆ 3 ವಿಕೆಟ್; ಬಾಂಗ್ಲಾ ವಿರುದ್ಧ ಬೇಡದ ದಾಖಲೆ ಬರೆದ ಆಸ್ಟ್ರೇಲಿಯಾ – Kannada News

ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಬಾಂಗ್ಲಾದೇಶ ಪ್ರವಾಸ ಮಾಡಿರುವ ಆಸ್ಟ್ರೇಲಿಯಾ ತಂಡ (Bangladesh vs Australia), ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯರ ವಿರುದ್ಧ ಹೀನಾಯವಾಗಿ ಸೋತು ಬೇಡದ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿತ್ತು. ಇದೀಗ ಸರಣಿಯ ಎರಡನೇ ಪಂದ್ಯದಲ್ಲೂ ಕಾಂಗರೂಗಳ ಬ್ಯಾಟಿಂಗ್‌ ವಿಭಾಗ ಮತ್ತೊಮ್ಮೆ ಕಳಪೆ ಪ್ರದರ್ಶನ ನೀಡಿದೆ. ಬಾಂಗ್ಲಾ ನೆಲದಲ್ಲಿ ನೆಲಕಚ್ಚಿ ಆಡುವುದನ್ನು ಮರೆತಿರುವ ಆಸೀಸ್ ಬ್ಯಾಟರ್​ಗಳು ಒಂದಂಕಿ ದಾಟಲು ಪರದಾಡುತ್ತಿದ್ದಾರೆ. ಇದರ ಪರಿಣಾಮವಾಗಿ ಎರಡನೇ ಏಕದಿನ ಪಂದ್ಯದಲ್ಲಿ ಆಸೀಸ್ ತಂಡದ ಅಗ್ರ ಮೂವರು ಬ್ಯಾಟರ್​ಗಳು ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದರು. ಈ ಮೂಲಕ ಆಸೀಸ್ ಕ್ರಿಕೆಟ್ ಇತಿಹಾಸದಲ್ಲೇ ಹಿಂದೆಂದೂ ದಾಖಲಿಸಿದ ಬೇಡದ ದಾಖಲೆಯೊಂದನ್ನು ತನ್ನ ಖಾತೆಗೆ ಹಾಕಿಕೊಂಡಿತು.

ಆರಂಭಿಕರಿಬ್ಬರು ಸೊನ್ನೆಗೆ ಔಟ್

ಢಾಕಾದ ಶೇರ್ ಎ ಬಾಂಗ್ಲಾ ಕ್ರಿಕೆಟ್ ಮೈದಾನದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ ತಂಡ ಆರಂಭದಲ್ಲೇ ಆಘಾತದ ಮೇಲೆ ಆಘಾತ ಎದುರಿಸಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಮ್ಯಾಟ್ ಶಾರ್ಟ್​ ಹಾಗೂ ಕೂಪರ್ ಕನೋಲಿ ಖಾತೆ ತೆರೆಯದೆ ಪೆವಿಲಿಯನ್ ಸೇರಿಕೊಂಡರು. ಶಾರ್ಟ್​ 4 ಎಸೆತಗಳಲ್ಲಿ ಯಾವುದೇ ರನ್ ಗಳಿಸಲು ಸಾಧ್ಯವಾಗದೆ ತಸ್ಕಿನ್ ಅಹ್ಮದ್​ಗೆ ಬಲಿಯಾದರೆ, ಇತ್ತ ಕನೋಲಿ, ಮುಸ್ತಫಿಜುರ್ ರೆಹಮಾನ್ ಎಸೆದ ಎರಡನೇ ಓವರ್​ನ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದರು. ಹೀಗಾಗಿ ಆಸ್ಟ್ರೇಲಿಯಾ ಯಾವುದೇ ರನ್ ಕಲೆಹಾಕುವ ಮೊದಲೆ ತನ್ನೇರಡು ವಿಕೆಟ್‌ಗಳನ್ನು ಕಳೆದುಕೊಂಡಿತು.

ಸೊನ್ನೆಗೆ 3 ವಿಕೆಟ್ ಪತನ

ಆ ನಂತರ 4ನೇ ಕ್ರಮಾಂಕದಲ್ಲಿ ಬಂದ ಮ್ಯಾಥ್ಯೂ ರೆನ್​ಶಾ, ನಾಯಕ ಜೋಶ್ ಇಂಗ್ಲಿಸ್ ಜೊತೆಗೂಡಿ ತಂಡದ ಇನ್ನಿಂಗ್ಸ್ ಕಟ್ಟುವ ಜವಾಬ್ದಾರಿ ಹೊತ್ತಿದ್ದರು. ಆದರೆ ರೆನ್​ಶಾ ಕೂಡ ತಂಡದ ಖಾತೆಗೆ ಯಾವುದೇ ರನ್ ಸೇರುವ ಮೊದಲೇ 4 ಎಸೆತಗಳನ್ನು ಎದುರಿಸಿ ರೆಹಮಾನ್​​ಗೆ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಆಸೀಸ್ ತಂಡ ಸೊನ್ನೆಗೆ ತನ್ನ ಮೊದಲ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ತಂಡ ಯಾವುದೇ ರನ್ ಗಳಿಸದೆ ಮೂರು ವಿಕೆಟ್ ಕಳೆದುಕೊಂಡು ಬೇಡದ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿತು. ಆಸೀಸ್​ಗೂ ಮೊದಲು 1993 ಮತ್ತು 1997 ರಲ್ಲಿ ಪಾಕಿಸ್ತಾನ ತಂಡ ಈ ಬೇಡದ ದಾಖಲೆಯನ್ನು ನಿರ್ಮಿಸಿದ್ದರೆ, ಬಾಂಗ್ಲಾದೇಶ ಕೂಡ 2003 ರಲ್ಲಿ ಶ್ರೀಲಂಕಾ ವಿರುದ್ಧ ಶೂನ್ಯಕ್ಕೆ 3 ವಿಕೆಟ್‌ಗಳನ್ನು ಕಳೆದುಕೊಂಡು ಈ ಪಟ್ಟಿಗೆ ಸೇರ್ಪಡೆಗೊಂಡಿತ್ತು. ಇದೀಗ ಆಸ್ಟ್ರೇಲಿಯಾ ತಂಡ, ಬಾಂಗ್ಲಾದೇಶ ವಿರುದ್ಧ ಸೊನ್ನೆಗೆ 3 ವಿಕೆಟ್‌ಗಳನ್ನು ಕಳೆದುಕೊಂಡು ಈ ಬೇಡದ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

ತಸ್ಕಿನ್, ರೆಹಮಾನ್ ಮಾರಕ ದಾಳಿ

ಆದಾಗ್ಯೂ 7 ಮತ್ತು 8ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಲಬುಶೇನ್ ಮತ್ತು ಬಾರ್ಟ್ಲೆಟ್ ಅವರ ಅರ್ಧಶತಕ ಹಾಗೂ ನಾಯಕ ಇಂಗ್ಲಿಸ್ ಅವರ 34 ರನ್​ಗಳ ಉಪಯುಕ್ತ ಇನ್ನಿಂಗ್ಸ್​ನಿಂದಾಗಿ 42 ಓವರ್​ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 187 ರನ್ ಕಲೆಹಾಕಿತು. ಆದರೆ ಮಳೆಯ ಮಧ್ಯ ಪ್ರವೇಶದಿಂದ ಆಟವನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ಇತ್ತ ಬಾಂಗ್ಲಾದೇಶ ಪರ ತಸ್ಕಿನ್ ಅಹ್ಮದ್ ಹಾಗೂ ಮುಸ್ತಫಿಜುರ್ ರೆಹಮಾನ್ ತಲಾ 3 ವಿಕೆಟ್ ಪಡೆದರೆ, ತನ್ವೀರ್ ಇಸ್ಲಾಂ 2 ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:25 pm, Thu, 11 June 26

Source link

Welcome To The Jungle: 2000 ಕೋಟಿ ರೂ. ನಕಲಿ ಸಿನಿಮಾ; ಫ್ಲಾಪ್ ನಟ ಅಕ್ಷಯ್ ಕುಮಾರ್ ಪರಿಸ್ಥಿತಿ ಇದು – Kannada News

ಬಾಲಿವುಡ್ ಅಂಗಳದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ‘ವೆಲ್ಕಮ್’ ಸರಣಿಯ ಮೂರನೇ ಚಿತ್ರ ‘ವೆಲ್ಕಮ್ ಟು ದಿ ಜಂಗಲ್’ (Welcome To The Jungle) ಸಿನಿಮಾದ ಅದ್ದೂರಿ ಟ್ರೇಲರ್ ಗುರುವಾರ (ಜೂನ್ 11) ಬಿಡುಗಡೆಯಾಗಿದೆ. 4 ನಿಮಿಷ 10 ಸೆಕೆಂಡ್‌ಗಳ ಈ ಸುದೀರ್ಘ ಟ್ರೇಲರ್ ಪ್ರೇಕ್ಷಕರಿಗೆ ನಗುವಿನ ರಸದೌತಣ ನೀಡುತ್ತಿದ್ದು, ಚಿತ್ರದ ಕ್ರೇಜಿ ಕಥಾಹಂದರವನ್ನು ಬಿಚ್ಚಿಟ್ಟಿದೆ. ಕೊರಿಯೋಗ್ರಾಫರ್ ಹಾಗೂ ನಿರ್ದೇಶಕ ಅಹಮದ್ ಖಾನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. 2000 ಕೋಟಿ ರೂಪಾಯಿ ಬಜೆಟ್​ನ ನಕಲಿ ಸಿನಿಮಾದಲ್ಲಿ ನಟಿಸುವ ಫ್ಲಾಪ್ ಹೀರೋ ಪಾತ್ರವನ್ನು ಅಕ್ಷಯ್ ಕುಮಾರ್ (Akshay Kumar) ಅವರು ಈ ಸಿನಿಮಾದಲ್ಲಿ ಮಾಡಿದ್ದಾರೆ.

‘ವೆಲ್ಕಮ್ ಟು ದಿ ಜಂಗಲ್’ ಸಿನಿಮಾದಲ್ಲಿ ಬಾಲಿವುಡ್‌ನ ಘಟಾನುಘಟಿ ಕಲಾವಿದರ ದಂಡೇ ಇದೆ. ಅಕ್ಷಯ್ ಕುಮಾರ್ ಜೊತೆಗೆ ಸುನಿಲ್ ಶೆಟ್ಟಿ, ಅರ್ಷದ್ ವಾರ್ಸಿ, ದಿಶಾ ಪಟಾನಿ, ಜಾಕ್ವೆಲಿನ್ ಫರ್ನಾಂಡಿಸ್, ರವೀನಾ ಟಂಡನ್, ಲಾರಾ ದತ್ತಾ, ಜಾಕಿ ಶ್ರಾಫ್, ಪರೇಶ್ ರಾವಲ್, ಜಾನಿ ಲಿವರ್, ರಾಜ್‌ಪಾಲ್ ಯಾದವ್, ಕೃಷ್ಣ ಅಭಿಷೇಕ್, ಕಿಕು ಶಾರದಾ ಹಾಗೂ ಗಾಯಕ ದಲೇರ್ ಮೆಹಂದಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಟ್ರೇಲರ್‌ನಲ್ಲಿ ತೋರಿಸಿರುವಂತೆ, ಅಕ್ಷಯ್ ಕುಮಾರ್ ಅವರು ಸತತ ಸೋಲುಗಳಿಂದ ಕಂಗಾಲಾಗಿರುವ ಒಬ್ಬ ಫ್ಲಾಪ್ ನಟನ ಪಾತ್ರದಲ್ಲಿದ್ದಾರೆ. ಹಿಟ್ ನಾಯಕಿ ಜಾಕ್ವೆಲಿನ್ ಫರ್ನಾಂಡಿಸ್ ಜೊತೆ ನಟಿಸುವ ಮೂಲಕ ತನ್ನ ವೃತ್ತಿಜೀವನವನ್ನು ಮತ್ತೆ ಮರುಸ್ಥಾಪಿಸಲು ಅವರು ಹರಸಾಹಸ ಪಡುತ್ತಾರೆ. ಇದೇ ವೇಳೆ ಚಿತ್ರದ ಶೂಟಿಂಗ್‌ಗಾಗಿ ಇಡೀ ಚಿತ್ರತಂಡ ಗಡಿ ಭಾಗದಲ್ಲಿರುವ ಒಂದು ಹಳ್ಳಿಗೆ ತೆರಳುತ್ತದೆ.

‘ವೆಲ್ಕಮ್ ಟು ದಿ ಜಂಗಲ್’ ಸಿನಿಮಾದ ಟ್ರೇಲರ್:

ಆದರೆ ಅಲ್ಲಿ ಒಂದು ದೊಡ್ಡ ಟ್ವಿಸ್ಟ್ ಎದುರಾಗುತ್ತದೆ. ಹಳ್ಳಿಯ ಜನರು ಈ ಸಿನಿಮಾ ತಂಡವನ್ನು ನಿಜವಾದ ಭಾರತೀಯ ಸೇನೆಯ ಸೈನಿಕರು ಎಂದು ತಪ್ಪಾಗಿ ಭಾವಿಸುತ್ತಾರೆ. ಅಲ್ಲದೆ, ಕ್ರೂರ ವಿಲನ್ ಜಾಕಿ ಶ್ರಾಫ್ ಗ್ಯಾಂಗ್‌ನಿಂದ ತಮ್ಮನ್ನು ರಕ್ಷಿಸುವಂತೆ ಇವರ ಬಳಿ ಬೇಡಿಕೊಳ್ಳುತ್ತಾರೆ. ಹಳ್ಳಿಯ ನಿವಾಸಿಯಾಗಿರುವ ರವೀನಾ ಟಂಡನ್ ಅವರು, ‘ನಮ್ಮನ್ನು ರಕ್ಷಿಸಲು ಬರಲು ಆರ್ಮಿಗೆ 20 ವರ್ಷ ಬೇಕಿತ್ತಾ?’ ಎಂದು ಅಕ್ಷಯ್ ಕುಮಾರ್ ಕಾಲು ಎಳೆಯುವ ದೃಶ್ಯ ನಗುವಿನ ಅಲೆ ಎಬ್ಬಿಸುತ್ತದೆ. ಈ ಇಡೀ ‘ನಕಲಿ ಸಿನಿಮಾ ಶೂಟಿಂಗ್’ ಪ್ರಕ್ರಿಯೆಯನ್ನು ಬರೋಬ್ಬರಿ 2,000 ಕೋಟಿ ರೂ. ಬಜೆಟ್‌ನಲ್ಲಿ ಮಾಡಲಾಗುತ್ತದೆ ಎಂಬುದು ಮತ್ತೊಂದು ಫನ್.

ಈ ಸಿನಿಮಾಗೆ ‘ವೆಲ್​ಕಮ್’ ಸಿನಿಮಾದ ಹಳೆಯ ಲಿಂಕ್ ಇದೆ. ಈ ಹಿಂದಿನ ‘ವೆಲ್ಕಮ್’ ಸಿನಿಮಾಗಳಲ್ಲಿ ನಾನಾ ಪಾಟೇಕರ್ ಮಾಡಿದ್ದ ಉದಯ್ ಭಾಯ್ ಪಾತ್ರದ ನೆನಪಿಗೆ ಇಲ್ಲಿ ಸುನಿಲ್ ಶೆಟ್ಟಿಯನ್ನು ‘ಉದಯ್ ಕಾ ಭಾಯ್’ ಎಂದು ಹಾಗೂ ಅನಿಲ್ ಕಪೂರ್ ಅವರ ಮಜ್ನು ಭಾಯ್ ಪಾತ್ರದ ರೆಫರೆನ್ಸ್ ಆಗಿ ಅರ್ಷದ್ ವಾರ್ಸಿಯನ್ನು ‘ಮಜ್ನು ಕಾ ಭಾಯ್’ ಎಂದು ಪರಿಚಯಿಸಲಾಗಿದೆ.

ಇದನ್ನೂ ಓದಿ: 1.8 ಕೋಟಿ ರೂಪಾಯಿಗೆ ಕುಸಿಯಿತಾ ಅಕ್ಷಯ್ ಕುಮಾರ್ ಸಂಭಾವನೆ? ಇಲ್ಲಿದೆ ಟ್ವಿಸ್ಟ್

ಒಂದೆಡೆ ಕಾಮಿಡಿ ಪಂಚ್‌ಲೈನ್‌ಗಳು ಮತ್ತು ಕನ್ಫ್ಯೂಷನ್ ಡ್ರಾಮಾಗಳು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದರೆ, ಟ್ರೇಲರ್‌ನ ಕೊನೆಯಲ್ಲಿ ಅಕ್ಷಯ್ ಕುಮಾರ್ ಮತ್ತು ಅವರ ತಂಡ ನಿಜವಾಗಿಯೂ ಗ್ರಾಮಸ್ಥರ ಪರವಾಗಿ ಹೋರಾಡಲು ನಿರ್ಧರಿಸುತ್ತದೆ. ತದನಂತರ ಹೈ-ವೋಲ್ಟೇಜ್ ಆ್ಯಕ್ಷನ್ ಸೀಕ್ವೆನ್ಸ್‌ಗಳು ಹಾಗೂ ಭೀಕರ ಗುಂಡಿನ ಚಕಮಕಿಗಳು ಆರಂಭವಾಗುತ್ತವೆ. ಆ ಮೂಲಕ ಸಿನಿಮಾದ ಮೇಲೆ ಕೌತುಕ ಮೂಡಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹಾರ್ಮುಜ್ ಜಲಸಂಧಿ ಸಂಪೂರ್ಣ ಬಂದ್; ಅಮೆರಿಕ ದಾಳಿಗೆ ಇರಾನ್ ಪ್ರತೀಕಾರ – Kannada News

ಟೆಹ್ರಾನ್, ಜೂನ್ 11: ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್ ದೇಶವು ಜಾಗತಿಕವಾಗಿ ಅತ್ಯಂತ ಪ್ರಮುಖ ಸಮುದ್ರ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಮುಚ್ಚುವುದಾಗಿ ಘೋಷಿಸಿದೆ. ಇರಾನ್‌ನ ಇಂಟರ್ನ್ಯಾಷನಲ್ ಸೆಂಟ್ರಲ್ ಕಮಾಂಡ್ ಅನ್ನು ಉಲ್ಲೇಖಿಸಿ ಅಲ್ಲಿನ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆಯು, ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ ಎಂದು ವರದಿ ಮಾಡಿದೆ.

ಇಂದು ಬಿಡುಗಡೆಯಾದ ಖಾತಮ್ ಅಲ್-ಅನ್ಬಿಯಾ ಸೆಂಟ್ರಲ್ ಹೆಡ್‌ಕ್ವಾರ್ಟರ್ಸ್‌ನ ಅಧಿಕೃತ ಹೇಳಿಕೆಯನ್ನು ಪ್ರೆಸ್ ಟಿವಿ ಪ್ರಸಾರ ಮಾಡಿದೆ. ಈ ಆದೇಶದ ಪ್ರಕಾರ, ತೈಲ ಟ್ಯಾಂಕರ್‌ಗಳು ಮತ್ತು ವಾಣಿಜ್ಯ ಹಡಗುಗಳು ಸೇರಿದಂತೆ ಎಲ್ಲಾ ರೀತಿಯ ನೌಕೆಗಳ ಸಂಚಾರಕ್ಕೆ ಹಾರ್ಮುಜ್ ಜಲಸಂಧಿಯನ್ನು ಮುಚ್ಚಲಾಗಿದೆ ಎಂದು ಪ್ರಕಟಿಸಲಾಗಿದೆ. ಅಷ್ಟೇ ಅಲ್ಲದೆ, ಯಾವುದೇ ಹಡಗುಗಳು ಈ ಮಾರ್ಗದ ಮೂಲಕ ಹಾದುಹೋಗಲು ಪ್ರಯತ್ನಿಸಿದರೆ ಅವುಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗುವುದು ಎಂದು ಇರಾನ್ ಎಚ್ಚರಿಸಿದೆ.

ದಕ್ಷಿಣ ಇರಾನ್ ಪ್ರಾಂತ್ಯದ ಮೇಲೆ ಅಮೆರಿಕ ನಡೆಸಿದ ದಾಳಿಗಳು ಸೇರಿದಂತೆ, ಯುಎಸ್ ನಿರಂತರವಾಗಿ ಕೈಗೊಳ್ಳುತ್ತಿರುವ ವೈರತ್ವದ ಕ್ರಮಗಳಿಗೆ ಪ್ರತಿಕ್ರಿಯೆಯಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಇರಾನ್‌ನ ಪ್ರಕಟಣೆ ತಿಳಿಸಿದೆ. ಇರಾನ್‌ನ ಈ ಘೋಷಣೆಯನ್ನು ಅಮೆರಿಕದ ಮಿಲಿಟರಿ ತಕ್ಷಣವೇ ತಳ್ಳಿಹಾಕಿದೆ. ಯುಎಸ್ ಸೆಂಟ್ರಲ್ ಕಮಾಂಡ್ ಪ್ರತಿಕ್ರಿಯಿಸಿದ್ದು, “ವಾಣಿಜ್ಯ ಹಡಗುಗಳು ಇಂದೂ ಸಹ ಎಂದಿನಂತೆ ಹಾರ್ಮುಜ್ ಜಲಸಂಧಿಯ ಒಳಗೆ ಮತ್ತು ಹೊರಗೆ ಮುಕ್ತವಾಗಿ ಸಂಚರಿಸುತ್ತಿವೆ” ಎಂದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಹಾರ್ಮುಜ್​ನಲ್ಲಿ ಭಾರಿ ಮಿಲಿಟರಿ ಸಂಘರ್ಷ, ಅಮೆರಿಕ ಇರಾನ್ ನಡುವೆ ದಾಳಿ, ಪ್ರತಿದಾಳಿ

ಈ ಬಗ್ಗೆ ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ ಬರೆದುಕೊಂಡಿರುವ ಯುಎಸ್ ಸೆಂಟ್ರಲ್ ಕಮಾಂಡ್, “ಅಮೆರಿಕದ ಯಾವುದೇ ಯುದ್ಧನೌಕೆಗಳ ಮೇಲೆ ದಾಳಿಯಾಗಿಲ್ಲ,” ಎಂದು ತಿಳಿಸಿದೆ. ಜಲಸಂಧಿಯಲ್ಲಿ ವಾಷಿಂಗ್ಟನ್‌ನ ಯುದ್ಧನೌಕೆಯೊಂದರ ಮೇಲೆ ಟೆಹ್ರಾನ್ ದಾಳಿ ನಡೆಸಿದೆ ಎಂದು ಇರಾನ್ ಮಾಧ್ಯಮಗಳು ಬಿತ್ತರಿಸುತ್ತಿರುವ ಸುದ್ದಿಗಳನ್ನು ಅಮೆರಿಕ ಸಂಪೂರ್ಣ ಸುಳ್ಳು ಸುದ್ದಿ ಎಂದು ತಿರಸ್ಕರಿಸಿದೆ.

ಅಮೆರಿಕದ ಹೊಸ ದಾಳಿಗಳ ನಡುವೆ ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿರುವುದು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಭಾರಿ ಆತಂಕವನ್ನು ಸೃಷ್ಟಿಸಿದೆ. ಇದರ ಪರಿಣಾಮವಾಗಿ ಕಚ್ಚಾ ತೈಲದ ಬೆಲೆಗಳು ತಕ್ಷಣವೇ ಶೇ. 2ಕ್ಕಿಂತ ಹೆಚ್ಚು ಏರಿಕೆಯಾಗಿವೆ. ಹಾರ್ಮುಜ್ ಜಲಸಂಧಿಯು ಜಾಗತಿಕ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲ (LNG) ಸಾಗಣೆಯ ಅತ್ಯಂತ ಪ್ರಮುಖ ಜಲಮಾರ್ಗವಾಗಿರುವುದರಿಂದ, ಈ ಬಿಕ್ಕಟ್ಟು ಹೀಗೆಯೇ ಮುಂದುವರಿದರೆ ಇಂಧನ ಬೆಲೆಗಳು ಮತ್ತಷ್ಟು ಗಗನಕ್ಕೇರಲಿವೆ ಎಂಬ ಭೀತಿ ವ್ಯಕ್ತವಾಗಿದೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ಮೇಲೆ ಅಮೆರಿಕದ ಹೆಲಿಕಾಪ್ಟರ್‌ ಪತನ; ಇರಾನ್ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇವೆಂದ ಟ್ರಂಪ್

ಈ ಬಿಕ್ಕಟ್ಟಿನಿಂದಾಗಿ ಭಾರತಕ್ಕೆ ಎದುರಾಗಲಿರುವ ಸವಾಲುಗಳು ಅತ್ಯಂತ ಗಂಭೀರವಾಗಿವೆ. ಭಾರತವು ತನಗೆ ಅಗತ್ಯವಿರುವ ಕಚ್ಚಾ ತೈಲದ ಸುಮಾರು ಶೇ. 88ರಷ್ಟು ಭಾಗವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ ಸರಿಸುಮಾರು ಅರ್ಧದಷ್ಟು ತೈಲ ಆಮದುಗಳು ಹಾರ್ಮುಜ್ ಜಲಸಂಧಿಯ ಮೂಲಕವೇ ಭಾರತವನ್ನು ತಲುಪುತ್ತವೆ. ಇದರೊಂದಿಗೆ, ಭಾರತವು ಬಳಸುವ ಒಟ್ಟು ಎಲ್‌ಪಿಜಿಯಲ್ಲಿ ಶೇ. 60ಕ್ಕಿಂತ ಹೆಚ್ಚು ಭಾಗವನ್ನು ಆಮದು ಮಾಡಿಕೊಳ್ಳಲಾಗುತ್ತಿದ್ದು, ಇದೂ ಸಹ ಇದೇ ಜಲಸಂಧಿಯ ಮಾರ್ಗವಾಗಿ ಬರುತ್ತದೆ. ಈ ಮಾರ್ಗದಲ್ಲಿ ವ್ಯತ್ಯಯ ಉಂಟಾದರೆ ಭಾರತದ ಆರ್ಥಿಕತೆಯ ಮೇಲೆ ಭಾರಿ ಹೊಡೆತ ಬೀಳಲಿದ್ದು, ಅಗತ್ಯ ವಸ್ತುಗಳ ಬೆಲೆಗಳು ತೀವ್ರವಾಗಿ ಹೆಚ್ಚಾಗಲಿವೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಭಕ್ತರೇ ಗಮನಿಸಿ, ಪೊಲೀಸ್ ಇಲಾಖೆಯಿಂದ ಮಹತ್ವದ ಸೂಚನೆ: ನಾಳೆ ಈ ಸಮಯದಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಿ ದರ್ಶನ ಇರುವುದಿಲ್ಲ – Kannada News

ಕೊಲ್ಲೂರು, ಜೂ.11: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ನಾಳೆ (ಜೂನ್ 12, ಶುಕ್ರವಾರ) ಉಡುಪಿ ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆಯಲಿದ್ದಾರೆ. ಸಿಎಂ ಭೇಟಿಯ ಹಿನ್ನೆಲೆಯಲ್ಲಿ ಕೊಲ್ಲೂರು ದೇವಸ್ಥಾನದ ಸುತ್ತಮುತ್ತ ಹಾಗೂ ಮುಖ್ಯಮಂತ್ರಿಗಳು ಸಂಚರಿಸುವ ಮಾರ್ಗದುದ್ದಕ್ಕೂ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯು ಅತ್ಯಂತ ಬಿಗಿ ಬಂದೋಬಸ್ತ್ ಕೈಗೊಂಡಿದೆ. ಸಾರ್ವಜನಿಕರು ಹಾಗೂ ದೂರದೂರುಗಳಿಂದ ಬರುವ ಭಕ್ತಾದಿಗಳಿಗೆ ದರ್ಶನದ ವೇಳೆ ಅನಾನುಕೂಲವಾಗುವುದನ್ನು ತಪ್ಪಿಸಲು ಪೊಲೀಸ್ ಇಲಾಖೆಯು ಮಹತ್ವದ ಮಾರ್ಗಸೂಚಿ ಪ್ರಕಟಣೆಯನ್ನು ಹೊರಡಿಸಿದೆ.

ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಕೇವಲ ದೇವಿಯ ದರ್ಶನ ಮತ್ತು ವಿಶೇಷ ಪೂಜೆಗಾಗಿ ಮಾತ್ರ ಕೊಲ್ಲೂರಿಗೆ ಆಗಮಿಸುತ್ತಿದ್ದು, ಪೂಜೆಯ ಬಳಿಕ ತಮಿಳುನಾಡಿಗೆ ಹಿಂದಿರುಗಲಿದ್ದಾರೆ. ಈ ಪ್ರವಾಸದ ವೇಳೆ ಅವರ ಯಾವುದೇ ಸಾರ್ವಜನಿಕ ಭೇಟಿ ಅಥವಾ ರಾಜಕೀಯ ಕಾರ್ಯಕ್ರಮಗಳು ಇರುವುದಿಲ್ಲ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.

ಇಲ್ಲಿದೆ ನೋಡಿ ಎಕ್ಸ್​​​​​ ಪೋಸ್ಟ್​:

ಭಕ್ತಾದಿಗಳಿಗೆ ಪೊಲೀಸ್ ಇಲಾಖೆಯ ಪ್ರಮುಖ ಸೂಚನೆಗಳು:

ದರ್ಶನದ ಸಮಯ ಬದಲಾವಣೆ ಸೂಕ್ತ: ವಿವಿಐಪಿ (VVIP) ಭೇಟಿ ಮತ್ತು ವಿಶೇಷ ಭದ್ರತಾ ಹಿತದೃಷ್ಟಿಯಿಂದ ಜೂನ್ 12ರ ಮಧ್ಯಾಹ್ನ 12:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ಭಕ್ತಾದಿಗಳು ದೇವಸ್ಥಾನಕ್ಕೆ ಬರುವುದನ್ನು ಮತ್ತು ದರ್ಶನ ಪಡೆಯುವುದನ್ನು ತಪ್ಪಿಸುವುದು ಸೂಕ್ತ ಎಂದು ಹೇಳಲಾಗಿದೆ.

ಪ್ರವೇಶ ನಿಷೇಧವಿಲ್ಲ, ಆದರೆ ವಿಳಂಬ ಸಾಧ್ಯತೆ: ಭಕ್ತಾದಿಗಳಿಗೆ ಯಾವುದೇ ಸಮಯದಲ್ಲಿ ದೇವಸ್ಥಾನ ಪ್ರವೇಶಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿಲ್ಲ. ಆದರೆ, ಸಿಎಂ ಭೇಟಿಯ ಭದ್ರತಾ ತಪಾಸಣೆಗಳ ಕಾರಣದಿಂದಾಗಿ ಸಾಮಾನ್ಯ ದರ್ಶನದ ವೇಳೆ ಭಕ್ತರಿಗೆ ತೀವ್ರ ಅನಾನುಕೂಲ ಹಾಗೂ ವಿಳಂಬವಾಗಬಹುದು.

ಗುಂಪು ಸೇರುವುದಕ್ಕೆ ನಿರ್ಬಂಧ: ಮುಖ್ಯಮಂತ್ರಿಗಳ ವಾಹನ ಸಂಚಾರದ ಕಾನ್ವಾಯ್ ಸಾಗುವ ಹಾದಿ, ದೇವಸ್ಥಾನದ ಮುಖ್ಯ ಪ್ರವೇಶ ದ್ವಾರಗಳು ಹಾಗೂ ಮೂಕಾಂಬಿಕಾ ದೇವಸ್ಥಾನದ ಒಳಗಿನ ಆವರಣದಲ್ಲಿ ಸಾರ್ವಜನಿಕರು ಅನಗತ್ಯವಾಗಿ ಗುಂಪು ಸೇರುವುದು ಅಥವಾ ಜನಸಂದಣಿ ಉಂಟುಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಇದನ್ನೂ ಓದಿ: ಜೂನ್​​ 12ರಂದು ಕೊಲ್ಲೂರಿಗೆ ತಮಿಳುನಾಡು ಸಿಎಂ ಭೇಟಿ: ಮೂಕಾಂಬಿಕೆಗೆ ವಿಶೇಷ ಪೂಜೆ ಸಲ್ಲಿಸಲಿರುವ ವಿಜಯ್​​

ಹೈ-ಪ್ರೊಫೈಲ್ ಬಂದೋಬಸ್ತ್ ಇರುವುದರಿಂದ ಕೊಲ್ಲೂರಿಗೆ ಬರುವ ಸಾರ್ವಜನಿಕರು ಹಾಗೂ ಭಕ್ತಾದಿಗಳು ಪೊಲೀಸ್ ಸಿಬ್ಬಂದಿಯೊಂದಿಗೆ ಸಹಕರಿಸಬೇಕು ಮತ್ತು ಅನಾನುಕೂಲಗಳನ್ನು ತಪ್ಪಿಸಲು ತಮ್ಮ ದರ್ಶನದ ಸಮಯವನ್ನು ಮುಂಚಿತವಾಗಿಯೇ ಯೋಜಿಸಿಕೊಳ್ಳಬೇಕು ಎಂದು ಉಡುಪಿ ಜಿಲ್ಲಾ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಿಸಿಎಂ ಪವನ್ ಕಲ್ಯಾಣ್​​ರ ಭೇಟಿಯಾದ ನಟ ಅಲ್ಲು ಅರ್ಜುನ್: ಕಾರಣ? – Kannada News

ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್ (Pawan Kalyan) ಮತ್ತು ಅಲ್ಲು ಅರ್ಜುನ್ ನಡುವೆ ಎಲ್ಲವೂ ಸರಿ ಇರಲಿಲ್ಲ. ಕಳೆದ ವಿಧಾನಸಭೆ ಚುನಾವಣೆ ವೇಳೆ ಅಲ್ಲು ಅರ್ಜುನ್ ಅವರು, ಎದುರಾಳಿ ಪಕ್ಷದ ಒಬ್ಬ ಅಭ್ಯರ್ಥಿ ಪರವಾಗಿ ಚುನಾವಣೆ ಪ್ರಚಾರ ಮಾಡಿದ್ದರು. ಆದರೆ ಪವನ್ ಕಲ್ಯಾಣ್ ಅವರ ಪರವಾಗಿ ಪ್ರಚಾರ ಮಾಡಿರಲಿಲ್ಲ, ಬದಲಿಗೆ ಪವನ್ ಅವರಿಂದ ಅಂತರ ಕಾಯ್ದುಕೊಂಡಿದ್ದರು. ಪವನ್ ಅವರ ಸಹೋದರ ನಾಗಬಾಬು ಅಂತೂ ಅಲ್ಲು ಅರ್ಜುನ್ ಅವರ ಬಗ್ಗೆ ಸಿಟ್ಟಿನಿಂದ ಪೋಸ್ಟ್ ಸಹ ಹಂಚಿಕೊಂಡಿದ್ದರು. ಬಳಿಕ ಅಲ್ಲು ಅರ್ಜುನ್ ಸಹ ಪರೋಕ್ಷವಾಗಿ ಪವನ್ ವಿರುದ್ಧ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದರು. ಪವನ್ ಕಲ್ಯಾಣ್ ಸಹ ಕರ್ನಾಟಕಕ್ಕೆ ಬಂದಾಗ, ಅಲ್ಲು ಅರ್ಜುನ್ ಅವರ ‘ಪುಷ್ಪ’ ಸಿನಿಮಾ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದರು. ಇಷ್ಟೆಲ್ಲ ಆದ ಬಳಿಕ ಇದೀಗ ಅಲ್ಲು ಅರ್ಜುನ್, ಪವನ್ ಕಲ್ಯಾಣ್ ಅವರನ್ನು ಭೇಟಿ ಆಗಿದ್ದಾರೆ.

ಬುಧವಾರ (ಜೂನ್ 10) ರಾತ್ರಿ ಪವನ್ ಕಲ್ಯಾಣ್ ಅವರ ಮನೆಗೆ ತೆರಳಿದ ಅಲ್ಲು ಅರ್ಜುನ್, ಪವನ್ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ. ಪವನ್ ಕಲ್ಯಾಣ್ ಅವರಿಗೆ ಇತ್ತೀಚೆಗಷ್ಟೇ ಶಸ್ತ್ರಚಿಕಿತ್ಸೆ ನಡೆದಿದೆ. ಕೆಲವು ದಿನಗಳ ಕಾಲ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿರುವ ಅವರು, ಇದೀಗ ಕ್ರಮೇಣ ಚೇತರಿಸಿಕೊಳ್ಳುತ್ತಿದ್ದಾರೆ. ಬಹಳ ಮುಖ್ಯವಾದ ಕಾರ್ಯಕ್ರಮಗಳಿದ್ದರೆ ಮಾತ್ರ ಪವನ್ ಹೊರಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವು ಸಿನಿಮಾ ಮತ್ತು ರಾಜಕೀಯ ಗಣ್ಯರು ಪವರ್ ಸ್ಟಾರ್ ಮನೆಗೆ ತೆರಳಿ ಅವರನ್ನು ಆರೋಗ್ಯ ವಿಚಾರಿಸುತ್ತಿದ್ದಾರೆ. ಖುದ್ದು ಪ್ರಧಾನಿ ಮೋದಿ ಸಹ ಪವನ್ ಮನೆಗೆ ಆಗಮಿಸಿ ಯೋಗಕ್ಷೇಮ ವಿಚಾರಿಸಿದ್ದರು. ಇದೀಗ ಅల్లు ಅರ್ಜುನ್ ಅವರು ಪವನ್ ಕಲ್ಯಾಣ್ ಮನೆಗೆ ತೆರಳಿ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.

ಇದನ್ನೂ ಓದಿ:‘ಈ ಬೆದರಿಕೆ ಬೇಡ’: ಪವನ್ ಕಲ್ಯಾಣ್ ಸಹೋದರನಿಗೆ ಪ್ರಕಾಶ್ ರೈ ಎಚ್ಚರಿಕೆ

ಕಳೆದ ಕೆಲ ತಿಂಗಳುಗಳಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ‘ಮೆಗಾ’ ಮತ್ತು ‘ಅಲ್ಲು’ ಅಭಿಮಾನಿಗಳ ನಡುವೆ ವಾಕ್ಸಮರ ನಡೆಯುತ್ತಿದೆ. ಮೆಗಾ ಮತ್ತು ಅಲ್ಲು ಕುಟುಂಬಗಳ ನಡುವೆ ಶೀತಲ ಸಮರ ನಡೆಯುತ್ತಿದೆ ಎನ್ನಲಾಗುತ್ತಿದೆ. ಆದರೆ, ಇವೆಲ್ಲವೂ ಕೇವಲ ವದಂತಿಗಳಷ್ಟೇ ಎಂದು, ಮೆಗಾ ಮತ್ತು ಅಲ್ಲು ಕುಟುಂಬಗಳ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಎರಡೂ ಕುಟುಂಬಗಳಿಗೆ ಆಪ್ತರಾದವರು ಹೇಳುತ್ತಿದ್ದಾರೆ. ಅಲ್ಲದೆ, ಮೆಗಾ ಮತ್ತು ಅಲ್ಲು ಕುಟುಂಬದ ನಟರು ಕೂಡ ತುಂಬಾ ಆಪ್ತವಾಗಿಯೇ ಇದ್ದಾರೆ. ಒಬ್ಬರ ಸಿನಿಮಾಗಳ ಬಗ್ಗೆ ಮತ್ತೊಬ್ಬರು ಟ್ವೀಟ್‌ಗಳು ಮತ್ತು ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಈಗ ಅల్లు ಅರ್ಜುನ್ ಪವನ್ ಕಲ್ಯಾಣ್ ಅವರನ್ನು ಭೇಟಿಯಾಗಿ ವಿಚಾರಿಸಿದ್ದಾರೆ. ಆ ಮೂಲಕ ವದಂತಿಗಳಿಗೆ ಬ್ರೇಕ್ ಹಾಕುವ ಪ್ರಯತ್ನ ಮಾಡಿದ್ದಾರೆ.

ಅల్లు ಅರ್ಜುನ್ ತಮ್ಮ ಸಿನಿಮಾಗಳ ಶೂಟಿಂಗ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಸ್ತುತ ಅಟ್ಲಿ ನಿರ್ದೇಶನದ ‘ರಾಕಾ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಸನ್ ಪಿಕ್ಚರ್ಸ್ ಸಂಸ್ಥೆ ಸುಮಾರು 800 ಕೋಟಿ ರೂ. ವೆಚ್ಚದಲ್ಲಿ ಈ ಸಿನಿಮಾವನ್ನು ಅತ್ಯಂತ ಪ್ರತಿಷ್ಠಿತವಾಗಿ ನಿರ್ಮಿಸುತ್ತಿದೆ. ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ‘ರಾಕಾ’ ಬಳಿಕ ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ಒಂದು ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದಾರೆ ಬನ್ನಿ. ಅದರ ಬಳಿಕ ಮಲಯಾಳಂ ನಟ ಬಾಸಿಲ್ ಜೋಸೆಫ್ ನಿರ್ದೇಶನದ ಸೂಪರ್ ಹೀರೋ ಸಿನಿಮಾನಲ್ಲಿ ಅಲ್ಲು ಅರ್ಜುನ್ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link