Category Archives: Blog

Your blog category

ಲಕ್ಕುಂಡಿ ಚೌಕಿಮಠ ಕುಟುಂಬಸ್ಥರ ಮೂಲ, ಹಿನ್ನೆಲೆ ಏನ್ ಗೊತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ – Kannada News | Lakkundi History: temple Found inside house, here Is Family Reaction

ಗದಗ, (ಫೆಬ್ರವರಿ 06) : ಐತಿಹಾಸಿಕ ಲಕ್ಕುಂಡಿಯಲ್ಲಿ (Lakkundi) ಚಿನ್ನದ ನಿಧಿ (Gold Treasure) ಪತ್ತೆಯಾಗಿ ದೊಡ್ಡ ಸುದ್ದಿಯಾಗಿತ್ತು. ಇದಾದ ಬಳಿಕ ಸರ್ಕಾರ ಲಕ್ಕುಂಡಿ ಗ್ರಾಮದಲ್ಲಿ ಉತ್ಖನನ ಕಾರ್ಯ (Excavation) ಶುರುಮಾಡಿದೆ. ಸುಮಾರು ಐದು ದಿನಗಳಿಂದ ಲಕ್ಕುಂಡಿ ಗ್ರಾಮದಲ್ಲಿರುವ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಉತ್ಖನನ ಕಾರ್ಯ ಭರದಿಂದ ಸಾಗುತ್ತಿದೆ. ಈ ವೇಳೆ ಪುರಾತನ ವಸ್ತುಗಳು (Antiquities) ಪತ್ತೆಯಾಗಿವೆ. ಈ ಬೆನ್ನಲ್ಲೇ ಮತ್ತೊಂದು ಅಚ್ಚರಿ ತಿಳಿದುಬಂದಿದೆ. ಗ್ರಾಮದಲ್ಲಿರುವ ಮನೆಯೊಳಗೊಂದು ಐತಿಹಾಸಿಕ ದೇವಸ್ಥಾನ ಪತ್ತೆಯಾಗಿದ್ದು, ಹೊರಗೆ ನೋಡಿದ್ರೆ ಮನೆ ಒಳಗೆ ಹೋದ್ರೆ ದೇಗುಲ. ಹೌದು…. ಚೌಕಿಮಠ ಮನೆತನದ ಆವರಣದಲ್ಲಿ ಈಶ್ವರ ಹಾಗೂ ಅರ್ಧನಾರೇಶ್ವರ ದೇವಸ್ಥಾನವಿದೆ. ಈ ಪುರಾತನ ದೇಗುಲವನ್ನು ಪರಿಶೀಲನೆ ನಡೆಸಿರುವ ಇತಿಹಾಸಕಾರರು ಇದು ಚಾಲುಕ್ಯರ ಕಾಲದ ಈಶ್ವರ ದೇವಸ್ಥಾನ ಎಂದು ಹೇಳಿದ್ದಾರೆ. ಹೀಗಾಗಿ ಚೌಕಿಮಠ ಕುಟುಂಬಕ್ಕೆ ಮನೆ ಖಾಲಿ ಮಾಡುವ ಸ್ಥಿತಿ ಎದುರಾಗಿದ್ದು. 15 ಮನೆಗಳು ನಿರ್ಮಾಣ ಮಾಡಿ ಕೊಡಬೇಕು, ಜೊತೆಗೆ ಪರಿಹಾರ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

ಟಿವಿ9ಗೆ ಚೌಕಿಮಠ ಕುಟುಂಬ ಸದಸ್ಯರು ಪ್ರತಿಕ್ರಿಯಿಸಿದ್ದು, 15 ಮನೆಗಳು ನಿರ್ಮಾಣ ಮಾಡಿ ಕೊಡಬೇಕು. ಜೊತೆಗೆ ಪರಿಹಾರ ನೀಡಬೇಕು. ಇಲ್ಲಾಂದ್ರೆ ನಾವು ಯಾವುದೇ ಕಾರಣಕ್ಕೂ ಬಿಟ್ಟು ಕೊಡಲ್ಲ. ಇನ್ನೂ ನಮ್ಮ ಕುಟುಂಬದ ಜೊತೆ ಯಾವ ಅಧಿಕಾರಿಗಳು ಮಾತನಾಡಿಲ್ಲ.. ಭೂಮಿ ಪೂಜೆ ಕಾರ್ಯಕ್ರಮ ಮಾಡ್ತೀವಿ ಅಂದ್ರು, ಅವಕಾಶ ಕೊಟ್ಟಿದ್ದೇವೆ.ಈಶ್ವರ ದೇವಸ್ಥಾನ‌ ಸಂಕೀರ್ಣದಲ್ಲಿ ಒಟ್ಟು 15 ಕುಟುಂಬಸ್ಥರು ಇದ್ದೇವೆ. ನಮಗೆ ಈ ಜಾಗ ಬಿಟ್ರೆ ಬೇರೆ ಏನೂ ಇಲ್ಲ. ಹೂವು ಕಟ್ಟಿ ಜೀವನ ಮಾಡಬೇಕು. ಬಡ ಕುಟುಂಬಗಳೇ ಇಲ್ಲಿ ವಾಸವಾಗಿದ್ದಾರೆ. ಹೀಗಾಗಿ ಸರ್ಕಾರ ನಮ್ಮ 15 ಕುಟುಂಬಗಳಿಗೆ ನಿವೇಶನ ಜೊತೆಗೆ ಮನೆಗಳ ನಿರ್ಮಾಣ ಮಾಡಿ‌ ಕೊಡಬೇಕು. ಲಕ್ಕುಂಡಿ ಇತಿಹಾಸ ಉಳಿಯಬೇಕು, ಮುಂದಿನ ಪೀಳಿಗೆಗೆ ಗೋತ್ತಾಗಬೇಕು. ಅದಕ್ಕೆ ನಮ್ಮ ಸಂಪೂರ್ಣ ಸಹಕಾರ ಇರುತ್ತೆ. ಆದ್ರೆ, ನಮಗೆ ಸರ್ಕಾರ ಸೂಕ್ತ ಪರಿಹಾರ ಕೊಡಬೇಕು . ಅಂದಾಗ ಮಾತ್ರ ಬಿಟ್ಟು‌ ಕೊಡ್ತೀವಿ. ಇಲ್ಲಂದ್ರೆ ಬಿಟ್ಟುಕೊಡಲ್ಲ ಎಂದು ಸ್ಪಷ್ಟಪಡಿಸಿದರು.

Source link

ಒಡಿಶಾ ಸರ್ಕಾರದ ಬ್ಲ್ಯಾಕ್ ಸ್ವಾನ್ ಶೃಂಗಸಭೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿ – Kannada News | President Droupadi Murmu graces Black Swan Summit by the Government of Odisha in Bhubaneswar

ಭುವನೇಶ್ವರ, ಫೆಬ್ರವರಿ 6: ಒಡಿಶಾ ಸರ್ಕಾರವು ಗ್ಲೋಬಲ್ ಫೈನಾನ್ಸ್ ಮತ್ತು ಟೆಕ್ನಾಲಜಿ ನೆಟ್‌ವರ್ಕ್ ಸಹಯೋಗದೊಂದಿಗೆ ಒಡಿಶಾ ಸರ್ಕಾರ ಆಯೋಜಿಸಿರುವ ಭಾರತದ ಬ್ಲ್ಯಾಕ್ ಸ್ವಾನ್ ಶೃಂಗಸಭೆಯಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಇಂದು (ಫೆಬ್ರವರಿ 6) ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ತಂತ್ರಜ್ಞಾನವು ಭಾರೀ ವೇಗದಲ್ಲಿ ವಿಕಸನಗೊಳ್ಳುತ್ತಿರುವ ಕಾಲದಲ್ಲಿ ನಾವು ಬದುಕುತ್ತಿದ್ದೇವೆ ಎಂದು ಹೇಳಿದರು.

ಹೊಸ ಆವಿಷ್ಕಾರಗಳು ಎಷ್ಟು ವೇಗವಾಗಿ ಬರುತ್ತವೆ ಎಂದರೆ ನಮ್ಮ ವ್ಯವಸ್ಥೆಗಳು, ಕೌಶಲ್ಯಗಳು ಮತ್ತು ವ್ಯವಹಾರ ಮಾದರಿಗಳು ಆಗಾಗ ಮುಂದುವರಿಯಲು ಹೆಣಗಾಡುತ್ತವೆ. ಹಾಗೇ, ಇವು ಸೈಬರ್ ಭದ್ರತಾ ಬೆದರಿಕೆಗಳು, ಡೀಪ್‌ಫೇಕ್‌ಗಳು, ತಪ್ಪು ಮಾಹಿತಿ ಮತ್ತು ತಂತ್ರಜ್ಞಾನದ ಮೇಲೆ ಹೆಚ್ಚುತ್ತಿರುವ ಅವಲಂಬನೆ ಸೇರಿದಂತೆ ಗಂಭೀರ ಸವಾಲುಗಳನ್ನು ಸಹ ತರಬಹುದು. ಈ ತ್ವರಿತ ತಾಂತ್ರಿಕ ಬದಲಾವಣೆಗಳು ನಾವೀನ್ಯತೆ ಮತ್ತು ಬೆಳವಣಿಗೆಯ ಮೇಲೆ ಪಾಸಿಟಿವ್ ಪರಿಣಾಮ ಬೀರುತ್ತವೆ. ಬ್ಲ್ಯಾಕ್ ಸ್ವಾನ್ ಶೃಂಗಸಭೆಯಂತಹ ಕಾರ್ಯಕ್ರಮಗಳ ಮೂಲಕ ಕೌಶಲ್ಯದ ಮೂಲಕ ಸಾಮರ್ಥ್ಯಗಳನ್ನು ಮತ್ತಷ್ಟು ಹೆಚ್ಚಿಸಲು, ಉದ್ಯೋಗ ಸೃಷ್ಟಿಸಲು, ಡಿಜಿಟಲ್ ಮತ್ತು ಆರ್ಥಿಕ ಪರಿವರ್ತನೆಯನ್ನು ವೇಗಗೊಳಿಸಲು ತಂತ್ರಜ್ಞಾನಗಳನ್ನು ಬಳಸಿಕೊಳ್ಳಲು ನವೀನ ವಿಧಾನಗಳನ್ನು ಅನ್ವೇಷಿಸಬಹುದು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.

ಇದನ್ನೂ ಓದಿ: Budget 2026: ಡಿಫೆನ್ಸ್​ನಿಂದ ಹಿಡಿದು ಚಿಪ್​ವರೆಗೆ ಭಾರತವನ್ನು ತಂತ್ರಜ್ಞಾನ ದೈತ್ಯವಾಗಿಸಬಲ್ಲ ಬಜೆಟ್

ತಂತ್ರಜ್ಞಾನವು ಆರ್ಥಿಕತೆಯ ಎಲ್ಲಾ ವಲಯಗಳು ಮತ್ತು ಸಮಾಜದ ಎಲ್ಲಾ ವರ್ಗಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಅಗಾಧ ಸಾಮರ್ಥ್ಯವನ್ನು ಹೊಂದಿದೆ. ಆದರೆ ಕೆಲವೊಮ್ಮೆ ಅದನ್ನು ಆರ್ಥಿಕ ವಂಚನೆಗೆ ದುರುಪಯೋಗಪಡಿಸಿಕೊಳ್ಳಬಹುದು. ಅಂತಹ ವಂಚನೆಯನ್ನು ತಡೆಗಟ್ಟಲು ಜಾಗರೂಕರಾಗಿರಲು ಮತ್ತು ಎಚ್ಚರವಾಗಿರಲು ಜನರಲ್ಲಿ ಜಾಗೃತಿ ಮೂಡಿಸುವುದು ಸೂಕ್ತವಾಗಿದೆ. ಇಂತಹ ವಂಚನೆಗಳನ್ನು ತಡೆಗಟ್ಟಲು ಭಾರತ ಸರ್ಕಾರವು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ, ನಾಗರಿಕ ಹಣಕಾಸು ಸೈಬರ್ ವಂಚನೆ ವರದಿ ಮತ್ತು ನಿರ್ವಹಣಾ ವ್ಯವಸ್ಥೆ ಮತ್ತು ಸೈಬರ್ ವಂಚನೆ ತಗ್ಗಿಸುವಿಕೆ ಕೇಂದ್ರವನ್ನು ಸ್ಥಾಪಿಸುವುದು ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಂಡಿದೆ ಎಂದಿದ್ದಾರೆ.

ಇದನ್ನೂ ಓದಿ: ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಅಂತ್ಯ; ಮುಖ್ಯಮಂತ್ರಿಯಾಗಿ ಖೇಮ್‌ಚಂದ್ ಪ್ರಮಾಣವಚನ ಸ್ವೀಕಾರ

ಆನ್‌ಲೈನ್ ಹಣಕಾಸು ವಂಚನೆಯನ್ನು ತಡೆಯಲು ಡಿಜಿಟಲ್ ಮತ್ತು ಆರ್ಥಿಕ ಸಾಕ್ಷರತೆಯನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ. ತಂತ್ರಜ್ಞಾನದ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಚಿಕ್ಕ ವಯಸ್ಸಿನಲ್ಲಿಯೇ ಅರ್ಥಮಾಡಿಕೊಳ್ಳಲು ಇದನ್ನು ಶಾಲಾ ಪಠ್ಯಕ್ರಮದ ಭಾಗವಾಗಿಸಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

17ನೇ ಬೆಂಗಳೂರು ಚಲನಚಿತ್ರೋತ್ಸವ ಮುಕ್ತಾಯ; ಹಂಸಲೇಖಗೆ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ – Kannada News | 17th Bangalore Film Festival concludes; Hamsalekha gets Lifetime Achievement Award

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (BIFFes) 17ನೇ ಆವೃತ್ತಿಗೆ ಶುಕ್ರವಾರ (ಫೆಬ್ರವರಿ 6) ರಾತ್ರಿ ನಗರದ ಲುಲು ಮಾಲ್‌ನಲ್ಲಿ ತೆರೆ ಬಿದ್ದಿದೆ. ಜಪಾನ್‌ ದೇಶದ ‘ಲಾಸ್ಟ್‌ ಲ್ಯಾಂಡ್‌’, ಮರಾಠಿಯ ‘ಸಬರ್‌ ಬೊಂಡಾ’ ಮತ್ತು ಕನ್ನಡದ ‘ವನ್ಯಾ’ ಸಿನಿಮಾಗಳು ಅನುಕ್ರಮವಾಗಿ ಚಿತ್ರೋತ್ಸವದ ಏಷ್ಯಾ, ಭಾರತ ಮತ್ತು ಕನ್ನಡ ಸ್ಪರ್ಧಾ ವಿಭಾಗಗಳಲ್ಲಿ ‘ಅತ್ಯುತ್ತಮ ಸಿನಿಮಾ’ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡವು. ಹಿರಿಯ ಗೀತರಚನೆಕಾರ ಮತ್ತು ಸಂಗೀತ ನಿರ್ದೇಶಕ ಹಂಸಲೇಖ (Hamsalekha) ಅವರಿಗೆ ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಚಿವ ದಿನೇಶ್‌ ಗುಂಡೂರಾವ್‌ ಭಾಗವಹಿಸಿದ್ದರು. ಚಿತ್ರೋತ್ಸವದ ರಾಯಭಾರಿ ಪ್ರಕಾಶ್‌ ರಾಜ್‌, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಡಾ. ಸಾಧು ಕೋಕಿಲ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ. ಜಯಮಾಲ ಮುಂತಾದವರು ಈ ಸಮಾರಂಭದಲ್ಲಿ ಹಾಜರಿದ್ದರು.

ವೇದಿಕೆಯಲ್ಲಿ ಹಂಸಲೇಖ ಅವರು ಮಾತನಾಡಿದರು. ‘ಕಲೆಗೆ ಸಂಬಂಧಿಸಿದ ಸಮಾರಂಭಕ್ಕೆ ಸಮಾರೋಪ ಇರುವುದಿಲ್ಲ. ಅದು ಆರಂಭ. ಸೃಷ್ಟಿ ಕಾರ್ಯ ನಿರಂತರ. ಅದು ಯಾವತ್ತೂ ನಿಲ್ಲುವುದಿಲ್ಲ. ಕೃಷಿಕರು, ಕಾರ್ಮಿಕರು, ಸಿನಿಮಾದವರಿಗೆ ಯಾವುದೇ ವ್ಯತ್ಯಾಸ ಇಲ್ಲ. ಒಬ್ಬನಿಂದ ಸಿನಿಮಾ ಆಗುವುದಿಲ್ಲ. ಅದೊಂದು ಸಾಮೂಹಿಕ ಕೃಷಿ’ ಎಂದು ಅವರು ಹೇಳಿದರು.

‘ಈ ಚಿತ್ರೋತ್ಸವಕ್ಕೆ ರಾಜ್ಯ ಸರ್ಕಾರ ತುಂಬು ಸಹಾಕಾರ‌ ನೀಡಿದೆ. ಜೀವಮಾನ ಪ್ರಶಸ್ತಿ ಸಿಕ್ಕಿದ್ದು ಖುಷಿಯ ವಿಷಯ. ನಾವು ಕನ್ನಡ ನಾಡಿಗೆ ಋಣಿಯಾಗಿರಬೇಕು. ಕನ್ನಡದಲ್ಲಿ ಬದುಕಿದ್ದೇವೆ. ಕಲೆ ಎನ್ನುವುದು ಆತ್ಮದ ಮೇವು. ಕಲೆಯ ಮೇವನ್ನು ಆರು ದಶಕಗಳ ಕಾಲ‌ ಮೇದಿರುವೆ. ಇಲ್ಲಿನ ವೈಚಾರಿಕತೆ, ಆಧ್ಯಾತ್ಮಿಕತೆ ನನ್ನನ್ನು ಬೆಳೆಸಿದೆ. ಪ್ರಜಾಪ್ರಭುತ್ವದ ಬೀಜ ಬಿತ್ತಿದ ಬಸವ ನಾಡಿನಲ್ಲಿ ಪ್ರಜಾಪ್ರಭುತ್ವ ರಕ್ಷಿಸುವ ಸಿನಿಮಾ ‌ಮಾಡಬೇಕಿದೆ’ ಎಂದು ಹಂಸಲೇಖ ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ‘ಚಿತ್ರೋತವಗಳಿಂದ ಬೇರೆ ಭಾಷೆಯ ಸಿನಿಮಾ ನೋಡಬಹುದಾಗಿದೆ. ಇದು ಕಲೆಯನ್ನು ಉತ್ಕೃಷ್ಟ ಮಟ್ಟಕ್ಕೆ ಒಯ್ಯುವ ಉದ್ದೇಶದಿಂದ ಮಾಡುವ ಚಿತ್ರೋತ್ಸವ. ಪ್ರಜಾಪ್ರಭುತ್ವ ಉಳಿಸುವ ಜವಾಬ್ದಾರಿ ಕಲೆ ಮೇಲಿದೆ ಎಂಬುವ ಮಾತು ಒಪ್ಪುವೆ. ಎಲ್ಲ ರೀತಿಯ ಸಿನಿಮಾಗಳು ಬರಬೇಕು. ಕಮರ್ಷಿಯಲ್, ಕಲಾತ್ಮಕ ಸೇರಿ ಎಲ್ಲಾ ರೀತಿಯಲ್ಲಿ ಬರಬೇಕು. ಕಲೆಯಲ್ಲಿ ಭಯ, ಭೀತಿ ಇರಬಾರದು. ಅಭಿವ್ಯಕ್ತಿ ಇರಬೇಕು’ ಎಂದು ಹೇಳಿದರು.

ಇದನ್ನೂ ಓದಿ: ಮತ್ತೆ ಕೈ ಜೋಡಿಸಿದ ಹಂಸಲೇಖ, ಎಸ್. ಮಹೇಂದರ್: ಹೊಸ ಸಿನಿಮಾ ಅನೌನ್ಸ್

ಚಿತ್ರೋತ್ಸವದ ರಾಯಭಾರಿ ಪ್ರಕಾಶ್‌ ರಾಜ್‌ ಮಾತನಾಡಿ, ‘ಭಾಷೆ ಹಲವಾದರೂ, ಭಾವನೆ ಒಂದೇ. ಬೇರೆಬೇರೆ ವ್ಯಾಕರಣ ಇದ್ದರೂ, ಅದರ ಗರ್ಭದಲ್ಲಿ ಗ್ರಹಿಕೆ ಒಂದೇ. ಮನುಷ್ಯ ವಿಕಾಸದಲ್ಲಿ ಸಿನಿಮಾ ಹೊಸ ಭಾಷೆ. ಅದು ಅವನ ಸಂಸ್ಕೃತಿ, ನೋವು, ಅಳಲು ದಾಖಲಿಸುತ್ತದೆ. ಚಿತ್ರೋತ್ಸವ ಎನ್ನುವುದು ಪ್ರಪಂಚದ ಬೇರೆಬೇರೆ ಮಾನವೀಯ ಗ್ರಹಿಕೆಗಳನ್ನು ಹಂಚಿಕೊಳ್ಳುವ ವೇದಿಕೆ. ದೇಶಕ್ಕೆ, ಸಮಾಜಕ್ಕೆ ಆದ ನೋವು ದೊಡ್ಡ ನೋವು. ಅಂತಹ ನೋವುಗಳನ್ನು ಸಿನಿಮಾಗಳು ದಾಖಲಿಸಬೇಕು. ಈ‌ ನಿಟ್ಟಿನಲ್ಲಿ‌ ಚಿತ್ರೋತ್ಸವ ಉತ್ಸವವಾಗಿದೆ. ಹಂಸಲೇಖ ಅವರನ್ನು ಸನ್ಮಾನಿಸಿ ಉತ್ಸವದ ಅರ್ಥವನ್ನು ಹೆಚ್ಚಿಸಿದೆ’ ಎಂದರು.

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಡಾ. ಸಾಧು ಕೋಕಿಲ ಮಾತನಾಡಿ, ‘ಭಾರತದ ಅತೀ ದೊಡ್ಡ ಚಿತ್ರೋತ್ಸವ ನಮ್ಮದಾಗಿದೆ. ಇದಕ್ಕೆ ಶ್ರಮಿಸಿದ ಸರ್ಕಾರ ಹಾಗೂ ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸುವೆ’ ಎಂದರು. ಈ ಸಮಾರಂಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್‌ ಎಂ. ನಿಂಬಾಳ್ಕರ್‌, ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯ ಕಾರ್ಯದರ್ಶಿ ಬಿ.ಬಿ. ಕಾವೇರಿ, ಚಲನಚಿತ್ರ ಅಕಾಡೆಮಿಯ ರಿಜಿಸ್ಟ್ರಾರ್‌ ವಿನೋದ್‌ ಚಂದ್ರ, ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ಮುರಳಿ ಮುಂತಾದವರು ಭಾಗಿಯಾಗಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕರ್ನಾಟಕದಲ್ಲಿ ಮತ್ತೊಂದು ದರೋಡೆ: ಫ್ಲಿಪ್‌ಕಾರ್ಟ್​​ನ ಲಕ್ಷಾಂತರ ರೂ ಮೌಲ್ಯದ ವಸ್ತುಗಳ ಕಳ್ಳತನ – Kannada News | Haveri: 24 Lakh Flipkart Mobiles Stolen from Goods Vehicle

ಹಾವೇರಿಯಲ್ಲಿ ಕಳ್ಳತನ Image Credit source: tv9 kannada

ಹಾವೇರಿ, ಫೆಬ್ರವರಿ 06: ಇತ್ತೀಚೆಗೆ ಬೆಳಗಾವಿಯ ಚೋರ್ಲಾಘಾಟ್​​​ನಲ್ಲಿ 400 ಕೋಟಿ ರೂ ಹೊತ್ತೊಯ್ತಿದ್ದ ಹಣವನ್ನ ಕಂಟೇನರ್​ ಸಮೇತ ಹೈಜಾಕ್​​ ಮಾಡಲಾಗಿದೆ ಅನ್ನೋ ವಿಷಯ ಕೋಲಾಹಲ ಸೃಷ್ಟಿಸಿತ್ತು. ಇದೀಗ ಅದರಂತೆ ಹೋಲುವ ಪ್ರಕರಣ ಒಂದು ಬೆಳಕಿಗೆ ಬಂದಿದೆ. ಫ್ಲಿಪ್‌ಕಾರ್ಟ್ (Flipkart) ಕಂಪನಿಗೆ ಸೇರಿದ 24 ಲಕ್ಷ ರೂ ಮೌಲ್ಯದ ಮೊಬೈಲ್ ಸೇರಿದಂತೆ ವಿವಿಧ ವಸ್ತುಗಳನ್ನು ಖದೀಮರು ಮೂವಿಂಗ್ ಗೂಡ್ಸ್ ವಾಹನದಿಂದಲೇ ಮಂಗಮಾಯ (theft) ಮಾಡಿದ್ದಾರೆ. ಬೆಂಗಳೂರಿನಿಂದ ಧಾರವಾಡದ ಕೊಟೂರ ಗ್ರಾಮದಲ್ಲಿರುವ ಫ್ಲಿಪ್‌ಕಾರ್ಟ್ ಕಂಪನಿಯ ವೇರ್ ಹೌಸ್​​ಗೆ ಸಾಗಿಸುವ ವೇಳೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಹೆದ್ದಾರಿಯಲ್ಲೇ ಕಳ್ಳರ ಕೈಚಳಕ

ಇತ್ತೀಚಿನ ದಿನಗಳಲ್ಲಿ ಹೆದ್ದಾರಿ ಸೇರಿದಂತೆ ಹಲವು ಕಡೆ ಸಿನಿಮೀಯ ರೀತಿಯಲ್ಲಿ ಕಳ್ಳತನ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ಕಾಕೋಳ ಮತ್ತು ಮೊಟೇಬೆನ್ನೂರು ಮಧ್ಯದಲ್ಲಿ ಲಕ್ಷಾಂತರ ರೂ ಮೌಲ್ಯದ ಮೊಬೈಲ್ ಕಳ್ಳತನ ಮಾಡಿದ ಪ್ರಕರಣ ತಡವಾಗಿ ಬೆಳಕಿನ ಬಂದಿದೆ. ಕಳೆದ ಶನಿವಾರ ಘಟನೆ ನಡೆದಿದ್ದು, ಫ್ಲಿಪ್ಕಾರ್ಟ್ ಕಂಪನಿಗೆ ಸೇರಿದ ಮೊಬೈಲ್ ಸೇರಿದಂತೆ ವಿವಿಧ ವಸ್ತುಗಳು ಬೆಂಗಳೂರಿನಿಂದ ಧಾರವಾಡದ ಕೊಟೂರು ಗ್ರಾಮದ ವೇರ್​ ಹೌಸ್​ಗೆ ಹೋಗುತ್ತಿದ್ದ ವೇಳೆ ಕಳ್ಳತನವಾಗಿದೆ.

ಇದನ್ನೂ ಓದಿ: 400 ಕೋಟಿ ರೂ. ದರೋಡೆ ಪ್ರಕರಣದ ಪ್ರಮುಖ ಆರೋಪಿ ಕಿಶೋರ್ ಸಾಳ್ವೆ ಬಂಧನ

ಗೂಡ್ಸ್ ಲಾರಿ KA-22 D0666 ನಂಬರ್ ವಾಹನದಲ್ಲಿ 6 ಬಾಕ್ಸ್​​ನಲ್ಲಿದ್ದ 25 ಲಕ್ಷ ರೂ ಮೌಲ್ಯದ ಮೊಬೈಲ್ ಕಳ್ಳತನ ‌ಮಾಡಿದ್ದಾರೆ. ಲಿಂಕಿಟ್ ಡಿವೈಸ್ ಲಾಕ್ ಮುರಿದು ಮೊಬೈಲ್ ಕಳ್ಳತನ ಮಾಡಿದ್ದಾರೆ. ಮಲಿಕಜಾನ್ ಮುಲ್ಲಾ ಎಂಬಾತ ಲಾರಿ ಚಾಲನೆ ಮಾಡುತ್ತಿದ್ದು, ಲಾಕ್ ಮುರಿಯುತ್ತಿದ್ದಂತೆ ಮಾಲೀಕನಿಗೆ ಮೆಸೇಜ್ ಹೋಗಿದೆ. ಲಾರಿಯನ್ನ ಪಕ್ಕಕ್ಕೆ ನಿಲ್ಲಿಸಿ ನೋಡಿದಾಗ 25 ಲಕ್ಷ ರೂ ಮೌಲ್ಯದ 6 ಬಾಕ್ಸ್​​ನಲ್ಲಿದ್ದ ಮೊಬೈಲ್ ಕಳ್ಳತನವಾಗಿದೆ.

ಪ್ರಕರಣ ದಾಖಲು

ಶನಿವಾರ ಸಂಜೆ ಬೆಂಗಳೂರಿನಿಂದ ಲಾರಿ ಹೊರಟಿದ್ದು ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಕಳ್ಳತನ ನಡೆದಿದೆ ಎನ್ನಲಾಗಿದೆ. ಖದೀಮರು ಹಿಂದೆ ಹಾಕಿದ್ದ ಸೀಲ್ ಮತ್ತು ಡಿಜಿಟಲ್ ಲಾಕರ್ ಕೂಡ ಓಪನ್ ಮಾಡಿದ್ದಾರೆ. ಸದ್ಯ ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಘಟನೆ ಹೇಗೆ ನಡೆದಿದೆ ಎನ್ನುವುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಎಸ್​​ಪಿ ಯಶೋದಾ ವಂಟಗೋಡಿ ಹೇಳಿದ್ದಾರೆ.

ಇದನ್ನೂ ಓದಿ: 400 ಕೋಟಿ ರೂ. ದರೋಡೆ ಪ್ರಕರಣ: ಹಣ ಸಾಗಿಸುತ್ತಿದ್ದ ಕಂಟೇನರ್ ಚಾಲಕರು ಕೊನೆಗೂ ಸಿಕ್ಕಿಬಿದ್ರಾ?

ಒಟ್ಟಿನಲ್ಲಿ ಹೆದ್ದಾರಿಯಲ್ಲಿ ಸಾವಿರಾರು ವಾಹನಗಳ ಓಡಾಟದ ಮಧ್ಯೆ ಗೂಡ್ಸ್ ವಾಹನದ ಲಾಕ್ ಮುರಿದು 24 ಲಕ್ಷ ರೂ ಮೌಲ್ಯದ ವಸ್ತುಗಳ ಕಳ್ಳತನ ಮಾಡುವ ಮೂಲಕ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಸದ್ಯ ಪೊಲೀಸರ ತನಿಖೆಯಿಂದ ಸತ್ಯಾಸತ್ಯತೆ ಹೊರಬರಬೇಕಿದೆ.

ವರದಿ: ಅಣ್ಣಪ್ಪ ಬಾರ್ಕಿ ಟಿವಿ9 ಹಾವೇರಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Mahashivaratri 2026: ಮಹಾಶಿವರಾತ್ರಿಯಂದು ಶಿವ ಪೂಜೆಯ ವೇಳೆ ಈ ವಸ್ತು ಬಳಸಲೇಬೇಡಿ – Kannada News | Mahashivaratri 2026: Puja Guide, Fasting Benefits and Offerings for Shiva Blessings

ಮಹಾಶಿವರಾತ್ರಿ ಹಬ್ಬವು ಹಿಂದೂ ಧರ್ಮದಲ್ಲಿ ಶಿವನ ಆರಾಧನೆಗೆ ಅತ್ಯಂತ ಪವಿತ್ರ ಮತ್ತು ಮಹತ್ವದ ದಿನವೆಂದು ಪರಿಗಣಿಸಲಾಗಿದೆ. ಈ ದಿನ ಶಿವ ಮತ್ತು ಪಾರ್ವತಿ ದೇವಿಯರ ದಿವ್ಯ ವಿವಾಹ ನಡೆದದ್ದು ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದ್ದು, ಭಕ್ತರು ಉಪವಾಸ, ಜಾಗರಣೆ ಮತ್ತು ಶಿವಪೂಜೆ ಮಾಡುವ ಮೂಲಕ ದೇವರ ಕೃಪೆಯನ್ನು ಪಡೆಯುತ್ತಾರೆ. ನಿಜವಾದ ಭಕ್ತಿಯಿಂದ ಶಿವನನ್ನು ಆರಾಧಿಸಿದರೆ ಜೀವನದಲ್ಲಿನ ಕಷ್ಟಗಳು, ಅಡೆತಡೆಗಳು ಮತ್ತು ದುಃಖಗಳು ದೂರವಾಗಿ ಮನಸ್ಸಿಗೆ ಶಾಂತಿ, ಸಮೃದ್ಧಿ ಮತ್ತು ಯಶಸ್ಸು ದೊರೆಯುತ್ತದೆ ಎಂಬುದು ನಂಬಿಕೆ. ಪಂಚಾಂಗದ ಪ್ರಕಾರ ಈ ವರ್ಷ ಮಹಾಶಿವರಾತ್ರಿ ಫೆಬ್ರವರಿ 15 ರಂದು ಆಚರಿಸಲಾಗುತ್ತದೆ. ಈ ಶುಭ ದಿನದಲ್ಲಿ ಶಿವನಿಗೆ ಯಾವ ವಸ್ತುಗಳನ್ನು ಅರ್ಪಿಸಬೇಕು ಮತ್ತು ಯಾವುದು ತಪ್ಪಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.

ಶಿವನಿಗೆ ಸರಳತೆ ಅತ್ಯಂತ ಪ್ರಿಯ. ಆದ್ದರಿಂದ ಅಲಂಕಾರಕ್ಕಿಂತ ಭಕ್ತಿ ಮುಖ್ಯ. ಬಿಲ್ವಪತ್ರೆ ಶಿವನಿಗೆ ಅತ್ಯಂತ ಇಷ್ಟವೆಂದು ಪರಿಗಣಿಸಲಾಗುತ್ತದೆ; ಮೂರು ಎಲೆಗಳು ಒಂದೇ ಕಾಂಡದಲ್ಲಿ ಇರುವ ಬಿಲ್ವಪತ್ರೆ ಶುದ್ಧವಾಗಿ ಅರ್ಪಿಸಿದರೆ ವಿಶೇಷ ಫಲ ಸಿಗುತ್ತದೆ. ದತುರಾ ಮತ್ತು ಭಾಂಗ್ ನಕಾರಾತ್ಮಕತೆಯನ್ನು ದೂರ ಮಾಡುವ ಸಂಕೇತಗಳಾಗಿ ಶಿವನಿಗೆ ಅರ್ಪಿಸಲಾಗುತ್ತದೆ. ಶಿವಲಿಂಗಕ್ಕೆ ಹಸಿ ಹಾಲು, ಗಂಗಾಜಲ ಮತ್ತು ಜಲಾಭಿಷೇಕ ಮಾಡುವುದು ಶ್ರೇಷ್ಠ. ಬಿಳಿ ಶ್ರೀಗಂಧದ ತಿಲಕ ಹಚ್ಚುವುದು ಮನಸ್ಸಿಗೆ ಶಾಂತಿ ನೀಡುತ್ತದೆ. ಪೂಜೆಯಲ್ಲಿ ಅಕ್ಷತೆ ಬಳಸುವುದು ಶುಭಕರ.

ಆದರೆ ಕೆಲವು ವಸ್ತುಗಳನ್ನು ಶಿವಪೂಜೆಯಲ್ಲಿ ತಪ್ಪಿಸುವುದು ಉತ್ತಮ. ಕೇದಗೆ ಅಥವಾ ಕೇತಕಿ ಹೂವನ್ನು ಶಿವನು ನಿಷೇಧಿಸಿದ್ದಾನೆ ಎಂಬ ಪುರಾಣ ಕಥೆಯಿದೆ. ತುಳಸಿ ಎಲೆಗಳನ್ನು ಶಿವಪೂಜೆಯಲ್ಲಿ ಬಳಸುವುದಿಲ್ಲ. ಸಿಂಧೂರ ಅಥವಾ ಕುಂಕುಮವು ಗೃಹಸ್ಥ ಜೀವನದ ಸಂಕೇತವಾಗಿರುವುದರಿಂದ ತಪಸ್ವಿ ಸ್ವರೂಪದ ಶಿವನಿಗೆ ಅರ್ಪಿಸುವುದಿಲ್ಲ. ಶಂಖದಿಂದ ನೀರು ಅರ್ಪಿಸುವುದೂ ಶ್ರೇಯಸ್ಕರ ಅಲ್ಲ ಎಂಬ ನಂಬಿಕೆಯಿದೆ. ಪೂಜೆ ಮಾಡುವಾಗ ಮುರಿದ ಶಿವಲಿಂಗವನ್ನು ಆರಾಧಿಸಬಾರದು. ಅಭಿಷೇಕಕ್ಕೆ ನೀರನ್ನು ತಾಮ್ರದ ಪಾತ್ರೆಯಲ್ಲಿ ಮತ್ತು ಹಾಲನ್ನು ಬೆಳ್ಳಿ ಅಥವಾ ಉಕ್ಕಿನ ಪಾತ್ರೆಯಲ್ಲಿ ಬಳಸುವುದು ಉತ್ತಮ. ಶಿವಲಿಂಗದ ಸಂಪೂರ್ಣ ಪ್ರದಕ್ಷಿಣೆ ಮಾಡದೆ ಅರ್ಧ ಪ್ರದಕ್ಷಿಣೆ ಮಾಡುವ ಸಂಪ್ರದಾಯವೂ ಇದೆ.‘

ಇದನ್ನೂ ಓದಿ: ಈ ರಾಶಿಯವರು ತಪ್ಪಿಯೂ ಬೆಳ್ಳಿ ಧರಿಸಬೇಡಿ, ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು!

ಮಹಾಶಿವರಾತ್ರಿ ಉಪವಾಸವು ಕೇವಲ ಆಚರಣೆ ಮಾತ್ರವಲ್ಲ, ಆತ್ಮಶುದ್ಧಿ ಮತ್ತು ಆಧ್ಯಾತ್ಮಿಕ ಬೆಳವಣಿಗೆಯ ಸಂಕೇತವಾಗಿದೆ. ಈ ದಿನ ಉಪವಾಸವಿಟ್ಟು ಜಪ, ಧ್ಯಾನ, ಭಜನೆ ಮತ್ತು ಶಿವನಾಮ ಸ್ಮರಣೆ ಮಾಡಿದರೆ ಮನಸ್ಸಿನ ಒತ್ತಡ ಕಡಿಮೆಯಾಗುತ್ತದೆ ಮತ್ತು ಆಂತರಿಕ ಶಕ್ತಿ ಹೆಚ್ಚುತ್ತದೆ. ಶಿವಲಿಂಗದ ಅಭಿಷೇಕ ಮತ್ತು ಪೂಜೆಯಿಂದ ಪಾಪಗಳು ನಿವಾರಣೆಯಾಗುತ್ತವೆ ಹಾಗೂ ಜೀವನದಲ್ಲಿ ಸುಖ-ಶಾಂತಿ ನೆಲೆಸುತ್ತದೆ ಎಂದು ಭಕ್ತರು ನಂಬುತ್ತಾರೆ. ಅವಿವಾಹಿತರಿಗೆ ಇಷ್ಟ ಸಂಗಾತಿ ದೊರೆಯಲಿ, ವಿವಾಹಿತರಿಗೆ ದಾಂಪತ್ಯ ಜೀವನ ಸುಖಮಯವಾಗಲಿ ಎಂಬ ಆಶಯದಿಂದ ಈ ದಿನ ವಿಶೇಷವಾಗಿ ಪ್ರಾರ್ಥನೆ ಮಾಡಲಾಗುತ್ತದೆ.

ಹೀಗೆ ಮಹಾಶಿವರಾತ್ರಿ ದಿನವನ್ನು ಭಕ್ತಿ, ಶ್ರದ್ಧೆ ಮತ್ತು ಶುದ್ಧ ಮನಸ್ಸಿನಿಂದ ಆಚರಿಸಿದರೆ ಶಿವನ ಕೃಪೆ ಸದಾ ನಮ್ಮೊಂದಿಗೆ ಇರುತ್ತದೆ. ಶಿವನ ಆಶೀರ್ವಾದದಿಂದ ಜೀವನದಲ್ಲಿ ಬೆಳಕು, ಆರೋಗ್ಯ ಮತ್ತು ಯಶಸ್ಸು ತುಂಬಿ ಹರಿಯಲಿ ಎಂಬುದು ಪ್ರತಿಯೊಬ್ಬ ಭಕ್ತನ ಪ್ರಾರ್ಥನೆ. “ಓಂ ನಮಃ ಶಿವಾಯ” ಎಂಬ ನಾಮಸ್ಮರಣೆ ಈ ದಿನದ ಮಹತ್ವವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮುಸ್ಲಿಮರಿಗೂ ಸೇಫ್ ಅಲ್ಲ ಪಾಕಿಸ್ತಾನ; ಮಸೀದಿಯಲ್ಲೂ ಬಾಂಬ್ ದಾಳಿ ನಡೆದಿದ್ದೇಕೆ? – Kannada News | Islamabad mosque blast why shia Muslims targeted in pakistan

ನವದೆಹಲಿ, ಫೆಬ್ರವರಿ 6: ಪಾಕಿಸ್ತಾನದ ಇಸ್ಲಮಾಬಾದ್​​​ನಲ್ಲಿ ಇಂದು ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 69 ಜನರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಟೈಮ್ಸ್ ಆಫ್ ಇಸ್ಲಾಮಾಬಾದ್ ವರದಿಯ ಪ್ರಕಾರ, ಆತ್ಮಾಹುತಿ ಬಾಂಬರ್ ಬರುವುದನ್ನು ನೋಡಿದ ಕಾವಲುಗಾರರು ಆತನನ್ನು ಮಸೀದಿಯ ಪ್ರವೇಶದ್ವಾರದಲ್ಲಿ ತಡೆದಿದ್ದರು. ಸ್ಫೋಟದ ಪ್ರದೇಶವನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಆ ಸ್ಥಳದ ಸುತ್ತಲೂ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಬಾಂಬ್ ನಿಷ್ಕ್ರಿಯ ದಳ ಈ ಸ್ಫೋಟದ ಸ್ವರೂಪವನ್ನು ತನಿಖೆ ಮಾಡುತ್ತಿದೆ. ಪಾಕಿಸ್ತಾನದಲ್ಲಿ (Pakistan)  ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಮೇಲೆ ಪದೇಪದೆ ದಾಳಿ ನಡೆಯುತ್ತಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು, ಆದರೆ, ಇದೀಗ ಅಲ್ಲಿ ಮುಸ್ಲಿಮರ ಒಂದು ಪಂಗಡವಾದ ಶಿಯಾ ಸಮುದಾಯದವರಿಗೂ ರಕ್ಷಣೆ ಇಲ್ಲದಂತಾಗಿದೆ.

ಪಾಕಿಸ್ತಾನದಲ್ಲಿ ಧಾರ್ಮಿಕ ಹಿಂಸಾಚಾರವು ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ಮಾತ್ರ ಸೀಮಿತವಾಗಿಲ್ಲ. ದೇಶದೊಳಗಿನ ಶಿಯಾ ಮುಸ್ಲಿಮರು ಸಹ ಆಗಾಗ ಭಯೋತ್ಪಾದಕ ದಾಳಿಗೆ ಗುರಿಯಾಗುತ್ತಿದ್ದಾರೆ. ಪಾಕಿಸ್ತಾನದಲ್ಲಿ ಶಿಯಾ ಮುಸ್ಲಿಮರ ಮಸೀದಿಗಳಲ್ಲಿ ಬಹಿರಂಗವಾಗಿ ಸ್ಫೋಟಗಳು ನಡೆಯುತ್ತಿರುವುದಕ್ಕೆ ಕಾರಣವೇನು? ಎಂಬ ಮಾಹಿತಿ ಇಲ್ಲಿದೆ.

ಇಂದು ಇಸ್ಲಾಮಾಬಾದ್‌ನಲ್ಲಿ ಪ್ರಾರ್ಥನೆಯ ಸಮಯದಲ್ಲಿ ಶಿಯಾ ಮಸೀದಿಯ (ಇಂಬಾರಾ) ಮೇಲೆ ಆತ್ಮಾಹುತಿ ಬಾಂಬರ್ ದಾಳಿ ನಡೆಸಿದ್ದಾನೆ. ಈ ಘಟನೆಯ ನಂತರ ಸರ್ಕಾರ ನಗರದಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿತು ಮತ್ತು ಭದ್ರತೆಯನ್ನು ಬಿಗಿಗೊಳಿಸಿತು. ಈ ಸ್ಫೋಟದ ಹೊಣೆಯನ್ನು ಯಾವುದೇ ಸಂಘಟನೆ ಇನ್ನೂ ಹೊತ್ತುಕೊಂಡಿಲ್ಲ. ಆದರೆ, ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಮತ್ತು ಇಸ್ಲಾಮಿಕ್ ಸ್ಟೇಟ್ (ಐಎಸ್)ನಂತಹ ಭಯೋತ್ಪಾದಕ ಗುಂಪುಗಳ ಮೇಲೆ ಅನುಮಾನ ಉಂಟಾಗಿದೆ. ಈ ಎರಡೂ ಸಂಘಟನೆಗಳು ಈ ಹಿಂದೆ ಸುನ್ನಿ ಬಹುಸಂಖ್ಯಾತರಾಗಿರುವ ಪಾಕಿಸ್ತಾನದಲ್ಲಿ ಶಿಯಾ ಮುಸ್ಲಿಮರನ್ನು ಗುರಿಯಾಗಿಸಿಕೊಂಡಿತ್ತು.

ಇದನ್ನೂ ಓದಿ: Pakistan Mosque Blast: ಪಾಕಿಸ್ತಾನದ ಮಸೀದಿಯಲ್ಲಿ ಬಾಂಬ್ ಸ್ಫೋಟ, 10ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಶಂಕೆ

ಪಾಕಿಸ್ತಾನದಲ್ಲಿ ಶಿಯಾ ಮುಸ್ಲಿಮರ ಮೇಲಿನ ದಾಳಿಗಳು ಹೊಸದೇನಲ್ಲ. ಈ ದೇಶದ ಒಟ್ಟು ಮುಸ್ಲಿಂ ಜನಸಂಖ್ಯೆಯಲ್ಲಿ ಶಿಯಾಗಳು ಶೇ. 10-15ರಷ್ಟಿದ್ದಾರೆ. ಇರಾನ್ ನಂತರ ಪಾಕಿಸ್ತಾನವು ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ಶಿಯಾ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದೆ. ಇದರ ಹೊರತಾಗಿಯೂ, ಶಿಯಾ ಸಮುದಾಯವು ಬಹಳ ಹಿಂದಿನಿಂದಲೂ ಪಾಕಿಸ್ತಾನದಲ್ಲಿ ಪಂಥೀಯ ಹಿಂಸಾಚಾರಕ್ಕೆ ಬಲಿಯಾಗಿದೆ. ಪಾಕಿಸ್ತಾನದಲ್ಲಿರುವ ಕೆಲವು ಮೂಲಭೂತ ಸುನ್ನಿ ಭಯೋತ್ಪಾದಕ ಸಂಘಟನೆಗಳು ಶಿಯಾಗಳನ್ನು ನಾಸ್ತಿಕರು ಮತ್ತು ಇಸ್ಲಾಂನಿಂದ ಹೊರಗಿರುವವರು ಎಂದು ಪರಿಗಣಿಸುತ್ತವೆ. ಇದೇ ಶಿಯಾ ಮಸೀದಿಗಳು, ಇಮಾಂಬರ್ಗಾಗಳು, ಮೆರವಣಿಗೆಗಳು ಮತ್ತು ಧಾರ್ಮಿಕ ಸಭೆಗಳ ಮೇಲೆ ಆಗಾಗ ದಾಳಿ ನಡೆಯಲು ಕಾರಣವಾಗಿದೆ.

ಮೊಹರಂ ಸಮಯದಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ಶಿಯಾ ಸಮುದಾಯದ ಶೋಕಾಚರಣೆಯ ಸಮಯದಲ್ಲಿ ದ್ವೇಷ ಹರಡುವವರು ಇನ್ನಷ್ಟು ಸಕ್ರಿಯರಾಗುತ್ತಾರೆ. ಕರಾಚಿಯಂತಹ ನಗರಗಳಲ್ಲಿ ಮೊಹರಂ ವೇಳೆ ಗೋಡೆಗಳ ಮೇಲೆ “ಶಿಯಾಗಳು ನಾಸ್ತಿಕರು” ಎಂಬ ಘೋಷಣೆಗಳನ್ನು ಬರೆಯಲಾಗುತ್ತದೆ. ಈ ದ್ವೇಷಪೂರಿತ ಭಾವನೆ 1980ರ ದಶಕದಿಂದಲೂ ಪಾಕಿಸ್ತಾನದಲ್ಲಿ ಸಾಮಾನ್ಯವಾಗಿಬಿಟ್ಟಿದೆ.

ಇದನ್ನೂ ಓದಿ: ಪಾಕಿಸ್ತಾನದಿಂದ ವಲಸೆ ಬಂದ ದಲಿತ ಹಿಂದೂಗಳಿಗೆ ವಸತಿ ಕಲ್ಪಿಸಿ; ಸುಪ್ರೀಂ ಕೋರ್ಟ್ ಆದೇಶ

ಶಿಯಾ ಸಮುದಾಯದೊಳಗೆ ಹೆಚ್ಚು ದುರ್ಬಲರೆಂದರೆ ಹಜಾರ ಶಿಯಾಗಳು. ಅವರು ಬಲೂಚಿಸ್ತಾನದ ರಾಜಧಾನಿ ಕ್ವೆಟ್ಟಾದಲ್ಲಿ ವಾಸಿಸುತ್ತಾರೆ. ಅವರನ್ನು ಅವರ ಮುಖಭಾವ ಮತ್ತು ಭಾಷೆಯಿಂದ ಸುಲಭವಾಗಿ ಗುರುತಿಸಬಹುದು. ಇದು ಭಯೋತ್ಪಾದಕರಿಗೆ ಬಹಳ ಅನುಕೂಲವಾಗುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಕ್ವೆಟ್ಟಾದಲ್ಲಿ ಹಜಾರ ಶಿಯಾಗಳ ಮೇಲೆ ಹಲವಾರು ಪ್ರಮುಖ ದಾಳಿಗಳು ನಡೆದಿವೆ.

ಇನ್ನೂ ವಿಶೇಷವಾದ ಸಂಗತಿಯೆಂದರೆ, ಪಾಕಿಸ್ತಾನದ ಸ್ಥಾಪಕ ಮುಹಮ್ಮದ್ ಅಲಿ ಜಿನ್ನಾ ಕೂಡ ಶಿಯಾ ಮುಸ್ಲಿಂ ಆಗಿದ್ದರು. ಪಾಕಿಸ್ತಾನದ ಸ್ಥಾಪಕನ ಜಾತಿಯವರನ್ನೇ ಈಗ ನಾಸ್ತಿಕರು, ದೇಶಭ್ರಷ್ಟರೆಂಬಂತೆ ನೋಡುತ್ತಿರುವುದು ಅತ್ಯಂತ ದೊಡ್ಡ ವಿಪರ್ಯಾಸ. ಪಾಕಿಸ್ತಾನದಲ್ಲಿ ಇಂದು ಮುಸ್ಲಿಮೇತರರು ಮಾತ್ರವಲ್ಲದೆ ಶಿಯಾಗಳಂತಹ ಮುಸ್ಲಿಂ ಪಂಗಡಗಳು ಸಹ ಅಸುರಕ್ಷಿತ ಭಾವನೆಯನ್ನು ಅನುಭವಿಸುತ್ತಿವೆ.

2025ರ ಜಾಗತಿಕ ಭಯೋತ್ಪಾದನಾ ಸೂಚ್ಯಂಕದ ಪ್ರಕಾರ, ಪಾಕಿಸ್ತಾನವು ಈಗ ವಿಶ್ವದ ಎರಡನೇ ಅತಿ ಹೆಚ್ಚು ಭಯೋತ್ಪಾದನಾ ಪೀಡಿತ ರಾಷ್ಟ್ರವಾಗಿದೆ. ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ದಾಳಿಗಳು ಶೇ. 90ರಷ್ಟು ಹೆಚ್ಚಾಗಿದೆ. ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್ಎ) ದಾಳಿಗಳು ಶೇ. 60ರಷ್ಟು ಹೆಚ್ಚಾಗಿದೆ. ಕೆಲವು ದಿನಗಳ ಹಿಂದೆ ಬಲೂಚ್ ಲಿಬರೇಶನ್ ಆರ್ಮಿ (BLA) ಬಲೂಚಿಸ್ತಾನದಲ್ಲಿ ದೊಡ್ಡ ಪ್ರಮಾಣದ, ಸಂಘಟಿತ ದಾಳಿಗಳನ್ನು ನಡೆಸಿತ್ತು. ಅದರ ಬೆನ್ನಲ್ಲೇ ಇಂದು ಈ ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 8:16 pm, Fri, 6 February 26

Source link

ಮಕ್ಕಳು ಸಿರಪ್ ತೆಗೆದುಕೊಂಡ ತಕ್ಷಣ ವಾಂತಿ ಮಾಡಿದ್ರೆ ಏನು ಮಾಡಬೇಕು? ಇಲ್ಲಿದೆ ತಜ್ಞರ ಸಲಹೆ – Kannada News | Kids Vomiting After Syrup: Warning Signs

ಮಕ್ಕಳ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸಿದರೂ ಸಾಲುವುದಿಲ್ಲ. ಜ್ವರ, ಕೆಮ್ಮು ಬಂದಾಗಲೆಲ್ಲಾ ಮಕ್ಕಳಷ್ಟೇ ನೋವನ್ನು ಪೋಷಕರು ಅನುಭವಿಸುತ್ತಾರೆ. ಮಕ್ಕಳಲ್ಲಿ ಏನಾದರೂ ಸ್ವಲ್ಪ ಬದಲಾವಣೆಯಾದರೂ ಕೂಡ ಚಿಂತೆಯಾಗುತ್ತದೆ. ಹಾಗಾಗಿ ತಕ್ಷಣ ಔಷಧ ನೀಡುವುದು ಒಳ್ಳೆಯದು. ಸಾಮಾನ್ಯವಾಗಿ ಮಕ್ಕಳಿಗೆ ಮಾತ್ರೆಗಳನ್ನು ನುಂಗಲು ಸಾಧ್ಯವಾಗದ ಕಾರಣ, ಹೆಚ್ಚಾಗಿ ಸಿರಪ್‌ಗಳನ್ನು (Syrup) ನೀಡಲಾಗುತ್ತದೆ. ಆದರೆ ಕೆಲವು ಮಕ್ಕಳು ಅವುಗಳನ್ನು ತೆಗೆದುಕೊಂಡ ತಕ್ಷಣ ವಾಂತಿ ಮಾಡುತ್ತಾರೆ. ಈ ಕಾರಣದಿಂದಾಗಿ, ಪೋಷಕರು ಹೆಚ್ಚು ಚಿಂತೆಗೀಡಾಗುತ್ತಾರೆ. ಮತ್ತೊಂದು ಡೋಸ್ ನೀಡಬೇಕೇ ಅಥವಾ ಬೇಡವೇ ಎಂಬ ಗೊಂದಲ ಉಂಟಾಗುತ್ತದೆ. ಹಾಗಾಗಿ ಪ್ರತಿಯೊಬ್ಬ ಪೋಷಕರು ಕೂಡ ಈ ಬಗ್ಗೆ ತಿಳಿಯುವುದು ಅನಿವಾರ್ಯವಾಗಿದೆ. ಈ ವಿಷಯವಾಗಿ ತಜ್ಞರು ನೀಡಿದ ಮಾಹಿತಿ ಸ್ಟೋರಿಯಲ್ಲಿದೆ.

ಚಿಕ್ಕ ಮಕ್ಕಳನ್ನು ಎಷ್ಟು ಎಚ್ಚರಿಕೆಯಿಂದ ನೋಡಿಕೊಂಡರೂ ಸಾಲುವುದಿಲ್ಲ. ಅದರಲ್ಲಿಯೂ ಮಕ್ಕಳು ಸಿರಪ್ ತೆಗೆದುಕೊಂಡ ನಂತರ ವಾಂತಿ ಮಾಡಿದರೆ, ಅದು ದೇಹದೊಳಗೆ ಹೋಗುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಿ. 20 ನಿಮಿಷಗಳ ಒಳಗೆ ವಾಂತಿಯಾದರೆ, ಔಷಧ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ, ಆದ್ದರಿಂದ ಅದನ್ನು ಎರಡನೇ ಬಾರಿಗೆ ನೀಡುವುದು ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ಮಕ್ಕಳು ಸಿರಪ್ ತೆಗೆದುಕೊಂಡ ಒಂದು ಗಂಟೆಯ ನಂತರ ವಾಂತಿ ಮಾಡಿದರೆ, ಅದು ಯೋಚಿಸಬೇಕಾದ ವಿಷಯ. ನೀವು ನೀಡಿದ ಸಿರಪ್ ವಾಂತಿಯಲ್ಲಿ ಕಂಡುಬಂದರೆ, ಇನ್ನೊಂದು ಡೋಸ್ ನೀಡುವುದು ಒಳ್ಳೆಯದು.

ಇದನ್ನೂ ಓದಿ: ನಿಮ್ಮ ಮಕ್ಕಳಿಗೆ ಕೆಮ್ಮಿನ ಸಿರಪ್​ ಹಾಕುವ ಮುನ್ನ ಎಚ್ಚರ: ಇಲ್ಲಿದೆ ಆರೋಗ್ಯ ಇಲಾಖೆಯ ಗೈಡ್​ಲೈನ್ಸ್

ಪೋಷಕರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು:

ಮಗುವಿನ ಬಾಯಿಗೆ ಎಂದಿಗೂ ಸಿರಪ್ ಅನ್ನು ಒಂದೇ ಬಾರಿಗೆ ಸುರಿಯಬೇಡಿ. ಸಿರಪ್ ನೀಡಲು ಸಣ್ಣ ಸಿರಿಂಜ್ ಬಳಸುವುದು ಒಳ್ಳೆಯದು. ಖಾಲಿ ಹೊಟ್ಟೆಯಲ್ಲಿ ನೀಡುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಸೂಕ್ತ. ಮಕ್ಕಳು ಪ್ರತಿ ಬಾರಿ ಸಿರಪ್ ತೆಗೆದುಕೊಂಡಾಗ ವಾಂತಿ ಮಾಡಿಕೊಂಡರೆ, ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು ಚಿತ್ರೋತ್ಸವ: ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡದೆ ಲಾಸ್ಟ್‌ ಲ್ಯಾಂಡ್‌, ಸಬರ್ ಬೊಂದಾ, ವನ್ಯಾ – Kannada News | Lost Land movie gets Best Film award in 17th Bengaluru International Film Festival

ಸಿನಿಮಾಸಕ್ತರಿಗೆ ದೇಶ-ವಿದೇಶದ ನೂರಾರು ಸಿನಿಮಾಗಳ ವೀಕ್ಷಣೆಗೆ ವೇದಿಕೆ ಕಲ್ಪಿಸಿದ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (Bengaluru Film Festival) ಶುಕ್ರವಾರ (ಫೆಬ್ರವರಿ 6) ಅಂತ್ಯಗೊಂಡಿದೆ. ಜಪಾನ್‌ ದೇಶದ ‘ಲಾಸ್ಟ್‌ ಲ್ಯಾಂಡ್‌’, ಮರಾಠಿಯ ‘ಸಬರ್‌ ಬೊಂದಾ’ ಹಾಗೂ ಕನ್ನಡದ ‘ವನ್ಯಾ’ ಸಿನಿಮಾಗಳು ಚಿತ್ರೋತ್ಸವದ ಏಷ್ಯಾ, ಭಾರತ ಮತ್ತು ಕನ್ನಡ ವಿಭಾಗಗಳಲ್ಲಿ ಅತ್ಯುತ್ತಮ ಸಿನಿಮಾ ಪ್ರಶಸ್ತಿಗಳನ್ನು ಪಡೆದುಕೊಂಡಿವೆ. ‘ಅತ್ಯುತ್ತಮ ಸಿನಿಮಾ’ ಪ್ರಶಸ್ತಿ ವಿಜೇತರಿಗೆ ಪಾರಿತೋಷಕದ ಜೊತೆಗೆ 10 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಯಿತು.

ದ್ವಿತೀಯ ಮತ್ತು ತೃತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿಗಳನ್ನು ಗೆದ್ದವರಿಗೆ ಅನುಕ್ರಮವಾಗಿ 5 ಲಕ್ಷ ರೂ. ಹಾಗೂ 2 ಲಕ್ಷ ರೂ. ನೀಡಿ ಗೌರವಿಸಲಾಯಿತು. ಏಷ್ಯನ್‌ ಚಿತ್ರ ವಿಭಾಗದಲ್ಲಿ ಈ ವರ್ಷ ಒಟ್ಟು 15 ಸಿನಿಮಾಗಳು ಪ್ರಶಸ್ತಿಯ ಕಣದಲ್ಲಿದ್ದವು. ಈ ಪೈಕಿ ಜಪಾನ್‌ನ ‘ಲಾಸ್ಟ್‌ ಲ್ಯಾಂಡ್‌’ ಅತ್ಯುತ್ತಮ ಸಿನಿಮಾ ಪ್ರಶಸ್ತಿಗೆ ಪಾತ್ರವಾಗಿದೆ. ಭಾರತದ ‘ಶೇಪ್‌ ಆಫ್‌ ಮೋಮೋ’ ಮತ್ತು ಜಪಾನ್‌ನ ‘ದಿ ಡೀಪೆಸ್ಟ್‌ ಸ್ಪೇಸ್‌ ಇನ್‌ ಅಸ್’ ಸಿನಿಮಾಗಳು ದ್ವಿತೀಯ ಮತ್ತು ತೃತೀಯ ಸಿನಿಮಾ ಪ್ರಶಸ್ತಿಗೆ ಭಾಜನವಾಗಿವೆ. ಫಿಲಿಪೈನ್ಸ್‌ನ ‘ರಿಪಬ್ಲಿಕ್‌ ಆಫ್‌ ಪಿಪೊಲಿಪಿನಾಸ್‌’ ಚಿತ್ರವು ತೀರ್ಪುಗಾರರ ವಿಶೇಷ ಮೆಚ್ಚುಗೆಯನ್ನು ಪಡೆದಿದೆ.

ಭಾರತೀಯ (ಚಿತ್ರಭಾರತಿ) ವಿಭಾಗದಲ್ಲಿ ಮರಾಠಿ ಚಿತ್ರ ‘ಸಬರ್‌ ಬೊಂಡಾ’ ಅತ್ಯುತ್ತಮ ಚಿತ್ರ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಮಲಯಾಳಂನ ‘ಮೋಹಂ’ ಮತ್ತು ‘ಕಾಡು’ ಸಿನಿಮಾಗಳು ಅನುಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸಿನಿಮಾ ಪ್ರಶಸ್ತಿಗಳನ್ನು ಗೆದ್ದಿವೆ. ಮರಾಠಿ ಭಾಷೆಯ ‘ಗೊಂದಾಳ್‌’ ಚಿತ್ರವು ಫಿಪ್ರೆಸ್ಕಿ ಪ್ರಶಸ್ತಿ ಪಡೆದರೆ, ಮಲಯಾಳಂ ಭಾಷೆಯ ‘ಸರ್ಕೀಟ್‌’ ಚಿತ್ರವು ತೀರ್ಪುಗಾರರ ವಿಶೇಷ ಮೆಚ್ಚುಗೆಯನ್ನು ಪಡೆದಿದೆ.

ಕನ್ನಡ ಸ್ಪರ್ಧಾ ವಿಭಾಗದಲ್ಲಿ ಈ ಬಾರಿ 14 ಸಿನಿಮಾಗಳು ಸ್ಪರ್ಧಿಸಿದ್ದವು. ಈ ಪೈಕಿ ‘ವನ್ಯಾ’ ಚಿತ್ರವು ಅತ್ಯುತ್ತಮ ಪ್ರಶಸ್ತಿಯನ್ನು ಗೆದ್ದಿದೆ. ದ್ವಿತೀಯ ಹಾಗೂ ತೃತೀಯ ಅತ್ಯುತ್ತಮ ಚಿತ್ರಗಳಾಗಿ ‘ನಮ್‌ ಸಾಲಿ’ ಮತ್ತು ‘ರಾವಣ ರಾಜ್ಯದಲ್ಲಿ ನವದಂಪತಿಗಳು’ ಆಯ್ಕೆಯಾಗಿವೆ. ‘ಹಕ್ಕಿಗಾಗಿ’ ಚಿತ್ರಕ್ಕೆ ನೆಟ್‌ಪ್ಯಾಕ್‌ ತೀರ್ಪುಗಾರರ ಪ್ರಶಸ್ತಿ ಸಿಕ್ಕಿದೆ. ‘ಮೃಗತೃಷ್ಣ’ ಮತ್ತು ‘ಫೋರ್‌ ಬೈ ಫೋರ್‌’ ಚಿತ್ರಗಳು ತೀರ್ಪುಗಾರರ ವಿಶೇಷ ಮನ್ನಣೆಗೆ ಭಾಜನವಾಗಿವೆ.

ಇದನ್ನೂ ಓದಿ: ಬೇರೆ ದೇಶಗಳ ಸಿನಿಮಾ ಯಾಕೆ ನೋಡಬೇಕು? ವಿವರಿಸಿದ ಸಿಎಂ ಸಿದ್ದರಾಮಯ್ಯ

ಈ ಚಿತ್ರೋತ್ಸವದಲ್ಲಿ 70 ದೇಶಗಳ ಸುಮಾರು 300ಕ್ಕೂ ಹೆಚ್ಚು ಅತ್ಯುತ್ತಮ ಸಿನಿಮಾಗಳು, ವಿಶ್ವದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಪಾಲ್ಗೊಂಡಿದ್ದ ಅತ್ಯುತ್ತಮ ಸಿನಿಮಾಗಳು ಪ್ರದರ್ಶನಗೊಂಡಿವೆ. ಈ ಚಿತ್ರೋತ್ಸವವನ್ನು ಪ್ರತೀ ವರ್ಷವೂ ಅರ್ಥಪೂರ್ಣವಾದ ಧ್ಯೇಯವಾಕ್ಯದ ಮೂಲಕ ನಡೆಸಲಾಗುತ್ತಿದ್ದು, ಈ ಬಾರಿ ರಾಷ್ಟ್ರಕವಿ ಡಾ.ಜಿ.ಎಸ್‌. ಶಿವರುದ್ರಪ್ಪನವರ ಪ್ರಸಿದ್ಧ ಗೀತೆಯಾಗಿರುವ ‘ಸ್ತ್ರೀ ಎಂದರೆ ಅಷ್ಟೇ ಸಾಕೆ’ ಎಂಬ ಸಾಲಿನೊಂದಿಗೆ ‘ಸ್ತ್ರೀ ಸಂವೇದನೆ, ಸಮಾನತೆಯ ದನಿ’ ಎಂಬ ಟ್ಯಾಗ್‌ ಲೈನ್‌ ಹೊಂದಿರುವ ಧ್ಯೇಯವಾಕ್ಯದೊಂದಿಗೆ ಆಚರಿಸಲಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

U19 World Cup: 6ನೇ ಬಾರಿಗೆ ಅಂಡರ್-19 ವಿಶ್ವಕಪ್ ಗೆದ್ದ ಟೀಂ ಇಂಡಿಯಾ

ಜಿಂಬಾಬ್ವೆಯ ಹರಾರೆ ಮೈದಾನದಲ್ಲಿ ಯುವ ಭಾರತ ತಂಡ ಇತಿಹಾಸ ಸೃಷ್ಟಿಸಿದೆ. ಅಂಡರ್ 19 ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತ ತಂಡ ಇಂಗ್ಲೆಂಡ್ ತಂಡವನ್ನು ಬರೋಬ್ಬರಿ 100 ರನ್​ಗಳಿಂದ ಸೋಲಿಸಿತು. ಇದರೊಂದಿಗೆ, ಭಾರತ ಆರನೇ ಬಾರಿಗೆ ಅಂಡರ್ 19 ವಿಶ್ವಕಪ್ ಎತ್ತಿಹಿಡಿಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 411 ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡವು 311 ರನ್​ಗಳಿಗೆ ಆಲೌಟ್ ಆಗುವ ಮೂಲಕ 100 ರನ್​ಗಳಿಂದ ಸೋಲೊಪ್ಪಿಕೊಂಡಿತು. ಭಾರತದ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ 14 ವರ್ಷದ ವೈಭವ್ ಸೂರ್ಯವಂಶಿ ಕೇವಲ 80 ಎಸೆತಗಳಲ್ಲಿ 175 ರನ್​ಗಳ ಬಿರುಗಾಳಿಯ ಇನ್ನಿಂಗ್ಸ್ ಆಡಿದರು. ವೈಭವ್ ಅವರ ಈ ಇನ್ನಿಂಗ್ಸ್‌ನಲ್ಲಿ 15 ಸಿಕ್ಸರ್‌ಗಳು ಮತ್ತು 15 ಬೌಂಡರಿಗಳು ಸೇರಿದ್ದವು.

Source link

ಬಡವರ ಬಾದಾಮಿ ಬೆಳೆದ ರೈತರಿಗೀಗ ಸಂಕಷ್ಟ: ದಲ್ಲಾಳಿ-ಕಮಿಷನ್ ಏಜೆಂಟ್ ಮೋಸದಿಂದ ಕಂಗಾಲು – Kannada News | Yadgir Groundnut Farmers Protest Price Drop: APMC Agents Accused of Exploitation

ಶೇಂಗಾ, ರೈತರ ಪ್ರಭಟನೆImage Credit source: tv9 kannada

ಯಾದಗಿರಿ, ಫೆಬ್ರವರಿ 06: ರೈತ ದೇಶದ ಬೆನ್ನೆಲಬು ಅಂತಾರೆ, ಆದರೆ ರೈತರು ಬೆಳೆಗೆ ಸರಿಯಾದ ಬೆಲೆ ಸಿಗುವುದಿಲ್ಲ. ಇದೆ ಕಾರಣಕ್ಕೆ ರೈತರು ಆತ್ಮಹತ್ಯೆ ದಾರಿ ಹಿಡಿಯಬೇಕಾಗುತ್ತೆ. ಏಕೆಂದರೆ ಯಾದಗಿರಿ ಜಿಲ್ಲೆಯ ರೈತರು ಸಾವಿರಾರು ರೂ. ಖರ್ಚು ಮಾಡಿ ಕಷ್ಟ ಪಟ್ಟು ಶೇಂಗಾ (Groundnut) ಬೆಳೆಯನ್ನ ಬೆಳೆದರೆ ಸರಿಯಾದ ಬೆಲೆ ಸಿಗುತ್ತಿಲ್ಲ. ದಲ್ಲಾಳಿ ಹಾಗೂ ಕಮಿಷನ್ ಏಜೆಂಟ್​ಗಳ ಮೋಸಕ್ಕೆ ಕಂಗಲಾಗಿ ಹೋಗಿದ್ದಾರೆ. ಹೀಗಾಗಿ ಕೊನೆಗೂ ರೊಚ್ಚಿಗೆದ್ದ ರೈತರು ಸರ್ಕಾರ ಹಾಗೂ ಕಮಿಷನ್ ಏಜೆಂಟ್​ಗಳ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ.

ಯಾದಗಿರಿ ನಗರದ ಎಪಿಎಂಸಿ ಮುಂದೆ ಇಂದು ರೈತರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸಿಂದಗಿ-ಕೊಡಂಗಲ್ ರಾಜ್ಯ ಹೆದ್ದಾರಿ ಬಂದ್ ಮಾಡುವ ಮೂಲಕ ತಮಗೆ ಆಗುತ್ತಿರುವ ಅನ್ಯಾಯವನ್ನ ತೋಡಿಕೊಂಡಿದ್ದಾರೆ. ರೈತರು ಈ ರೀತಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡುವುದಕ್ಕೆ ಕಾರಣವೇ ಶೇಂಗಾ ಬೆಳೆಯ ದರ ಕುಸಿತ.

ಕ್ವಿಂಟಲ್​ಗೆ ಕೇವಲ 4 ರಿಂದ 6 ಸಾವಿರ ರೂ

ಜಿಲ್ಲೆಯಲ್ಲಿ ಸದ್ಯ ಶೇಂಗಾ ಬೆಳೆಯ ರಾಶಿ ನಡೆಯುತ್ತಿದೆ. ಹೀಗಾಗಿ ರೈತರು ತಾವು ಬೆಳೆದ ಸಾವಿರಾರು ಕ್ವಿಂಟಲ್ ಶೇಂಗಾ ಬೆಳೆಯನ್ನ ನಗರದ ಕೃಷಿ ಮಾರುಕಟ್ಟೆ ತೆಗೆದುಕೊಂಡು ಬರುತ್ತಿದ್ದಾರೆ. ಆದರೆ ಶೇಂಗಾ ಮಾರಾಟಕ್ಕೆ ಮುಂದಾದ ರೈತರಿಗೆ ಶಾಕ್ ಎದುರಾಗಿದೆ. ಏಕೆಂದರೆ ಕಳೆದ ಕೆಲ ದಿನಗಳಿಂದ ದಿಢೀರ್ ಶೇಂಗಾ ಬೆಳೆಯ ದರ ಕುಸಿತವಾಗಿದೆ. ಕ್ವಿಂಟಲ್​ಗೆ 12 ಸಾವಿರಕ್ಕೆ ಮಾರಾಟವಾಗುತ್ತಿದ್ದ ಬೆಳೆ ಈಗ ಏಕಾಏಕಿ ಕ್ವಿಂಟಲ್​ಗೆ ಕೇವಲ 4 ರಿಂದ 6 ಸಾವಿರಕ್ಕೆ ಮಾರಾಟವಾಗುತ್ತಿದೆ. ಇದು ರೈತರಿಗೆ ಶಾಕ್ ಕೊಟ್ಟಿದೆ. ಕಷ್ಟಪಟ್ಟು ಸಾವಿರಾರು ರೂ. ಖರ್ಚು ‌ಮಾಡಿ ಬೆಳೆ ತಂದು ಮಾರಾಟ ಮಾಡಲು ಬಂದರೆ ಬೆಳೆಗೆ ಬೆಲೆನೇ ಕೊಡ್ತಾಯಿಲ್ಲ. ಹೀಗಾಗಿ ನಾವೆಲ್ಲಾ ವಿಷ ಕುಡಿದು ಸಾಯುವುದು ಒಂದೇ ಉಳಿದಿದೆ ಅಂತ ರೈತ ಮಲ್ಲಿಕಾರ್ಜುನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬರದ ನಾಡಲ್ಲಿ ಬಂಗಾರದ ಬೆಳೆ ಬೆಳೆದ ಯುವ ರೈತ: ಮೂರುವರೆ ಎಕರೆ ಜಮೀನಿನಲ್ಲಿ ಲಕ್ಷಾಂತರ ರೂ ಲಾಭ

ಇನ್ನು ರೈತರು ಕಳೆದ ಮೂರು ತಿಂಗಳ ಹಿಂದೆ ಶೇಂಗಾ ಬೆಳೆಯನ್ನ ಬೆಳೆಯುವುದಕ್ಕೆ ಇದೆ ಎಪಿಎಂಸಿಯ ಕಮಿಷನ್ ಏಜೆಂಟ್​ಗಳಿಂದ ಕ್ವಿಂಟಲ್​ಗೆ 12 ಸಾವಿರ ರೂ. ಕೊಟ್ಟು ಶೇಂಗಾ ಬೀಜವನ್ನ ಖರೀದಿ ಮಾಡಿದ್ದರು. ಆದರೆ ಅದೇ ರೈತರು ಬೆಳೆದ ಶೇಂಗಾ ಬೆಳೆಯನ್ನ ಮಾರಾಟ ಮಾಡಲು ಬಂದರೆ ದಿಢೀರ್ ದರವನ್ನ ಇಳಿಸಲಾಗಿದೆ.

ಏಜೆಂಟ್​ರಿಂದ ರೈತರಿಗೆ ಮೋಸ

ಬೇರೆ ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದ ಶೇಂಗಾ ಖರೀದಿ ಮಾಡುವುದಕ್ಕೆ ವ್ಯಾಪಾರಸ್ಥರು ಬಂದಿದ್ದರೂ, ಇದೆ ಎಪಿಎಂಸಿ ಯಾರ್ಡ್​ನ ವರ್ತಕರು ಹಾಗೂ ಕಮಿಷನ್ ಏಜೆಂಟ್​ಗಳು ಬೇರೆ ಕಡೆಯಿಂದ ಬಂದಿದ್ದ ವ್ಯಾಪಾರಸ್ಥರನ್ನ ವಾಪಸ್ ಕಳುಹಿಸುವ ಕೆಲಸ ಮಾಡಿದ್ದಾರೆ. ಏಕೆಂದರೆ ಹೊರಗಿನಿಂದ ಬಂದಿದ್ದ ವ್ಯಾಪಾರಸ್ಥರು ಕ್ವಿಂಟಲ್​ಗೆ 11 ರಿಂದ 13 ಸಾವಿರ ರೂ ಕೊಟ್ಟು ಖರೀದಿ ಮಾಡಲು ಮುಂದಾಗಿದ್ದರು. ಇದು ಸ್ಥಳೀಯ ಕಮಿಷನ್ ಏಜೆಂಟ್​ಗಳಿಗೆ ಹೊಡೆತ ಬೀಳುತ್ತೆ ಎನ್ನುವ ಕಾರಣಕ್ಕೆ ಖರೀದಿ ಮಾಡಲು ಬಿಡದೆ ವಾಪಸ್ ಕಳುಹಿಸಿದ್ದಾರೆ. ಆ ಮೂಲಕ ರೈತರಿಗೆ ಮೋಸ ಮಾಡಿದ್ದಾರೆ.

ಹೊರಗಿನಿಂದ ಬಂದ ವ್ಯಾಪಾರಸ್ಥರು ಹೆಚ್ಚಿನ ದರಕ್ಕೆ ಖರೀದಿ ಮಾಡಿದರೆ ರೈತರಿಗೆ ಲಾಭವಾಗುತ್ತಿತ್ತಿ. ಆದರೆ ಸ್ಥಳೀಯ ಏಜೆಂಟ್​ಗಳಿಂದ ದೋಖಾ ಆಗಿದೆ. ಇದೆ ಕಾರಣಕ್ಕೆ ಇಂದು ಎಪಿಎಂಸಿ ಮುಂದೆ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಸಂಘಟನೆ ನೇತೃತ್ವದಲ್ಲಿ ನೂರಾರು ರೈತರು ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದ್ದಾರೆ. ರೈತರ ಪ್ರತಿಭಟನೆಯಿಂದ ಎರಡು ಗಂಟೆ ಕಿ.ಮೀ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಇದನ್ನೂ ಓದಿ: ಮೈಲಾರಲಿಂಗನಿಗೆ ಬಲಿ ಕೊಡಲು ತಂದಿದ್ದ ಕುರಿಮರಿಗಳನ್ನ ವಶಕ್ಕೆ ಪಡೆದು ಮಾರಾಟ ಮಾಡಿದ ಅಧಿಕಾರಿಗಳು

ಒಟ್ಟಿನಲ್ಲಿ ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದಂತಾಗಿದೆ. ಮೊದಲೇ ಪ್ರವಾಹದಿಂದ ಮುಂಗಾರು ಬೆಳೆ ಕಳೆದುಕೊಂಡು ಕಂಗಲಾದ ಅನ್ನದಾರಿಗೆ ಹಿಂಗಾರು ಬೆಳೆಯಾಗಿ ಶೇಂಗಾ ಬೆಳೆ ಕೈಹಿಡಿದಿತ್ತು. ಆದರೆ ಈಗ ದಿಢೀರ್ ದರ ಕುಸಿತ ಆಗಿದ್ದಕ್ಕೆ ರೈತರು ಕಂಗಲಾಗುವಂತೆ ಮಾಡಿದೆ. ಹೀಗಾಗಿ ಅಧಿಕಾರಿಗಳು ಹಾಗೂ ಸರ್ಕಾರ ಮಧ್ಯಪ್ರವೇಶಿಸುವಂತೆ ಒತ್ತಾಯಿಸಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link