ಕನ್ನಡದ ನಟ ಮಯೂರ್ ಪಟೇಲ್ ಚರ್ಚೆಯಲ್ಲಿದ್ದಾರೆ. ಕುಡಿದ ಮತ್ತಿನಲ್ಲಿ ಕಾರು ಓಡಿಸಿ ಅಪಘಾತ ಮಾಡಿದ್ದಾರೆ. ಬೆಂಗಳೂರಿನ ದೊಮ್ಮಲೂರು ಬಳಿ ಈ ಅಪಘಾತ ನಡೆದಿದೆ. ಸಿಗ್ನಲ್ ಬಳಿ ನಿಂತಿದ್ದ ಕಾರುಗಳಿಗೆ ಮಯೂರ್ ಅವರ ಫಾರ್ಚುನರ್ ಕಾರು ಡಿಕ್ಕಿ ಹೊಡೆದಿದೆ. ಆ ಬಳಿಕ ಅವರು ಡ್ರೈವರ್ ಬಳಿ ಮಾತನಾಡಿದ್ದಾರೆ. ನಾನು ಕಾರು ಸರಿ ಮಾಡಿಸಿಕೊಡ್ತೀನಿ’ ಎಂದಿದ್ದಾರೆ. ಈ ಸಂದರ್ಭದ ವಿಡಿಯೋ ಮೇಲಿದೆ.
ಬೆಂಗಳೂರು, ಜನವರಿ 29: ಬೆಂಗಳೂರಿನ (Bangalore) ಅಮೃತಹಳ್ಳಿ ಪೊಲೀಸರು ಬೃಹತ್ ಡ್ರಗ್ ಜಾಲವೊಂದನ್ನು ಭೇದಿಸಿದ್ದಾರೆ. ಕೇರಳ ಮೂಲದ 7 ಡ್ರಗ್ ಪೆಡ್ಲರ್ಸ್ ಸೇರಿ ಹತ್ತು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 4 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಥೈಲ್ಯಾಂಡ್‌ನಿಂದ ವಿಮಾನದ ಮೂಲಕ ಡ್ರಗ್ಸ್ ತರಿಸಿಕೊಂಡು, ಡಾರ್ಕ್‌ವೆಬ್ ಬಳಸಿ ಬೆಂಗಳೂರಿನಾದ್ಯಂತ ಮಾರಾಟ ಮಾಡುತ್ತಿದ್ದರು. ಬಂಧಿತ ಆರೋಪಿಗಳನ್ನು ಕುಶಾಲ್, ಸಾಗರ್, ಶಶಾಂಕ್, ವಿಲ್ಸನ್, ಆಶೀರ್ ಅಲಿ, ಸಜ್ಜದ್, ರಿಯಾಜ್, ಶಿಯಾಬ್, ನಿಸಾರ್ ಮತ್ತು ಅಭಿನವ್ ಎಂದು ಗುರುತಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬಂಧಿತ ಡ್ರಗ್ ಪೆಡ್ಲರ್ಗಳ ಪೈಕಿ ಇಬ್ಬರು ಕರ್ನಾಟಕ, ಮತ್ತೋರ್ವ ಆಂಧ್ರ ಮೂಲದವರಾಗಿದ್ದು, ಉಳಿದ ಎಳು ಜನರು ಕೇರಳದವರಾಗಿದ್ದಾರೆ. ಆರೋಪಿಗಳು ಥೈಲ್ಯಾಂಡ್‌ನಿಂದ ಡ್ರಗ್ಸ್ ತರಿಸಿಕೊಂಡು ಡಾರ್ಕ್‌ವೆಬ್‌ನಲ್ಲಿ ‘ಟೀಂ ಕಲ್ಕಿ’ (Team Kalki) ಎಂಬ ವೆಬ್‌ಸೈಟ್ ಮೂಲಕ ಡ್ರಗ್ಸ್‌ಗಾಗಿ ಆರ್ಡರ್ ಮಾಡುತ್ತಿದ್ದರು. ಥೈಲ್ಯಾಂಡ್‌ನಲ್ಲಿರುವ ಕೇರಳ ಮೂಲದ ವ್ಯಕ್ತಿಯೊಬ್ಬ ವಿಮಾನದ ಮೂಲಕ ಬೆಂಗಳೂರಿಗೆ ಡ್ರಗ್ಸ್ ಕಳುಹಿಸುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಬೆಂಗಳೂರಿಗೆ ತಲುಪಿದ ನಂತರ, ಆರೋಪಿಗಳು ನಗರದಾದ್ಯಂತ ಡ್ರಗ್ಸ್ ವಿತರಿಸುತ್ತಿದ್ದರು.
ಕಾಲೇಜು ವಿದ್ಯಾರ್ಥಿಗಳು, ಐಟಿ-ಬಿಟಿ ಉದ್ಯೋಗಿಗಳೇ ಟಾರ್ಗೆಟ್
ಯಲಹಂಕ, ಹೆಬ್ಬಾಳ, ಕೋರಮಂಗಲ, ಬೆಳ್ಳಂದೂರು ಸೇರಿದಂತೆ ವಿವಿಧ ಪ್ರದೇಶಗಳನ್ನು ಹಂಚಿಕೊಂಡು ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಕಾಲೇಜು ವಿದ್ಯಾರ್ಥಿಗಳು, ಐಟಿ-ಬಿಟಿ ಉದ್ಯೋಗಿಗಳು ಮತ್ತು ಪಾರ್ಟಿಗಳಿಗೆ ಬರುವವರೇ ಇವರ ಪ್ರಮುಖ ಗುರಿಗಳಾಗಿದ್ದರು. ಈ ಡ್ರಗ್ ಪೆಡ್ಲರ್‌ಗಳು ಒಂದೇ ತಂಡದ ಭಾಗವಾಗಿದ್ದರೂ ತಾವು ಹಂಚಿಕೊಂಡಿದ್ದ ಪ್ರದೇಶಗಳ ವಿಚಾರದಲ್ಲಿ ಆಗಾಗ ಜಗಳವಾಡುತ್ತಿದ್ದರು. ತಮ್ಮ ವ್ಯಾಪ್ತಿಯನ್ನು ಬಿಟ್ಟು ಬೇರೆ ಪ್ರದೇಶದಲ್ಲಿ ಡ್ರಗ್ಸ್ ಮಾರಾಟಕ್ಕೆ ಹೋದ ಪೆಡ್ಲರ್‌ನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ಕೂಡ ನಡೆದಿತ್ತು. ಕೆಲವೊಮ್ಮೆ ಕೊಲೆ ಮಾಡುವ ಹಂತದವರೆಗೆ ಅವರ ಜಗಳ ತಲುಪಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಿಂದ ಸಿಕ್ಕಿದ್ದು ಏನೇನು?
ಬಂಧಿತರಿಂದ 3 ಕೆಜಿ ಹೈಡ್ರೋ ಗಾಂಜಾ, 500 ಎಲ್‌ಎಸ್‌ಡಿ ಸ್ಟ್ರಿಪ್ಸ್, 10 ಕೆಜಿ ಗಾಂಜಾ, ಕೃತ್ಯಕ್ಕೆ ಬಳಸಿದ್ದ ಎರಡು ಕಾರುಗಳು ಮತ್ತು 10 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಮುಖ್ಯ ಆರೋಪಿ ನಾಪತ್ತೆಯಾಗಿದ್ದು, ಆತನಿಗಾಗಿ ಅಮೃತಹಳ್ಳಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ತನಿಖೆ ಮುಂದುವರಿದಿದೆ. ಪ್ರತ್ಯೇಕ ಪ್ರಕರಣದಲ್ಲಿ ತಲಘಟ್ಟಪುರ ಪೊಲೀಸರು ಕಾರ್ಯಾಚರಣೆ ನಡೆಸಿ 60 ಲಕ್ಷ ರೂ. ಮೌಲ್ಯದ 78 ಕೆಜೆ ಗಾಂಜಾ ಸೀಜ್ ಮಾಡಿದ್ದಾರೆ.
ಇತ್ತಿಚೇಗಷ್ಟೇ ಮಹಾರಾಷ್ಟ್ರ ಪೊಲೀಸರು ಬೆಂಗಳೂರಿಗೆ ಬಂದು ಮೂರು ಪೊಲೀಸ್ ಠಾಣಾ ವ್ಯಾಪ್ತಿಯ ಡ್ರಗ್ ಪ್ಯಾಕ್ಟರಿ ಭೇದಿಸಿದ್ದರು. ಪೊಲೀಸ್ ಇನ್ಸ್ಪೆಕ್ಟರ್ಗಳೇ ಸಂಸ್ಪೆಂಡ್ ಆಗಿದ್ದರು. ಖುದ್ದು ಸಿಎಂ ಸಿದ್ದರಾಮಯ್ಯ ಬೆಂಗಳೂರು ಪೊಲೀಸರಿಗೆ ಚಾಟಿ ಬೀಸಿದ್ದರು. ಇದರ ಬೆನ್ನಲ್ಲೇ ಮತ್ತಷ್ಟು ಅಲರ್ಟ್ ಆಗಿರುವ ಬೆಂಗಳೂರು ನಗರ ಪೊಲೀಸರು, ಮಾದಕ ವಸ್ತು ಜಾಲದ ಮೇಲೆ ಹದ್ದಿನ ಕಣ್ಣಿಟ್ಟಿದ್ದು ಬೇಟೆ ಮುಂದುವರಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಭಾರತದ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ ಜಯಭೇರಿ ಬಾರಿಸಿದೆ. ವಿಶಾಖಪಟ್ಟಣದ ಎಸಿಎ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು 20 ಓವರ್ಗಳಲ್ಲಿ 215 ರನ್ ಕಲೆಹಾಕಿತು.
ಈ ಬೃಹತ್ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 18.4 ಓವರ್ಗಳಲ್ಲಿ 165 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡವು 50 ರನ್ಗಳಿಂದ ಸೋಲೊಪ್ಪಿಕೊಂಡಿದೆ.
ಈ ಸೋಲಿನ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ನಾವು ಉದ್ದೇಶಪೂರ್ವಕವಾಗಿ ಆರು ಬ್ಯಾಟ್ಸ್‌ಮನ್‌ಗಳೊಂದಿಗೆ ಆಡಿದ್ದೇವೆ. ಏಕೆಂದರೆ ನಾವು ತಂಡದಲ್ಲಿ ಐದು ಪರಿಪೂರ್ಣ ಬೌಲರ್‌ಗಳನ್ನು ಹೊಂದಲು ಬಯಸಿದ್ದೆವು. ಅದಕ್ಕಾಗಿ ಉದ್ದೇಶಪೂರ್ವಕವಾಗಿಯೇ ಹೀಗೆ ಆಡಲು ನಿರ್ಧರಿಸಿದ್ದೆವು.
ಇಂತಹದೊಂದು ನಿರ್ಧಾರಕ್ಕೆ ಮುಖ್ಯ ಕಾರಣ, ನಮಗೆ ನಾವೇ ಸವಾಲೆಸೆಯುವುದಾಗಿದೆ. ಉದಾಹರಣೆಗೆ, ನಾವು 200 ಅಥವಾ 180 ರನ್‌ಗಳನ್ನು ಬೆನ್ನಟ್ಟುತ್ತಿದ್ದರೆ, ಎರಡು ಅಥವಾ ಮೂರು ವಿಕೆಟ್ ಕಳೆದುಕೊಂಡ ಬಳಿಕ ನಾವು ಹೇಗೆ ಚೇಸ್ ಮಾಡುತ್ತೇವೆ ಎಂಬುದು ಗೊತ್ತಾಗಬೇಕಿತ್ತು. ಈ ಮೂಲಕ ನಮ್ಮ ಸ್ಟ್ರಾಟಜಿಯನ್ನು ಪರೀಕ್ಷಿಸಲು ಬಯಸಿದ್ದೆವು.
ಅದಕ್ಕಾಗಿ ವಿಶ್ವಕಪ್ ತಂಡದ ಭಾಗವಾಗಿರುವ ಎಲ್ಲಾ ಆಟಗಾರರನ್ನು ಆಡಿಸಲು ನಿರ್ಧರಿಸಿದ್ದೆವು. ಈ ಮೂಲಕ ಇತರೆ ಬ್ಯಾಟರ್ಗಳಿಗೂ ಹೆಚ್ಚಿನ ಓವರ್ ಆಡಲು ಅನುಕೂಲ ಮಾಡಲು ಬಯಸಿದ್ದೆವು. ಏಕೆಂದರೆ ನಾವು ಮೊದಲು ಬ್ಯಾಟಿಂಗ್ ಮಾಡಿದಾಗ ನಿಜವಾಗಿಯೂ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದೇವೆ. ಆದರೆ 180 ಅಥವಾ 200 ರನ್ಗಳ ಚೇಸಿಂಗ್ ವೇಳೆ ಹೇಗೆ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕೆಂಬ ಪ್ರಯೋಗ ನಡೆಸಬೇಕಿತ್ತು. ಹೀಗಾಗಿ ಉದ್ದೇಶಪೂರ್ವಕವಾಗಿ ನಾವು ಕೇವಲ 6 ಬ್ಯಾಟರ್ಗಳೊಂದಿಗೆ ಮಾತ್ರ ಕಣಕ್ಕಿಳಿದಿದ್ದೇವೆ ಎಂದು ಸೂರ್ಯಕುಮಾರ್ ಯಾದವ್ ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ ಮುಂದಿನ ಪಂದ್ಯದಲ್ಲೂ ನಾವು ಚೇಸಿಂಗ್ ಮಾಡಲು ಬಯಸುತ್ತೇವೆ. ಈ ಮೂಲಕ ಬೃಹತ್ ಗುರಿಯನ್ನು ಚೇಸ್ ಮಾಡುವುದನ್ನು ಕರಗತ ಮಾಡಿಕೊಳ್ಳಬೇಕಿದೆ. ಇದೀಗ ನಾವು 50 ರನ್ಗಳಿಂದ ಸೋತಿದ್ದೇವೆ, ಆದರೆ ಪರವಾಗಿಲ್ಲ. ನಾನು ಹೇಳಿದಂತೆ, ಈ ರೀತಿಯ ರನ್-ಚೇಸ್‌ನಲ್ಲಿ ಈ ರೀತಿಯ ಒಂದು ಅಥವಾ ಎರಡು ಪಾಲುದಾರಿಕೆಗಳು ವ್ಯತ್ಯಾಸವನ್ನುಂಟುಮಾಡಬಹುದು. ಹೀಗಾಗಿ ಟಿ20 ವಿಶ್ವಕಪ್ಗೂ ಮುನ್ನ ಈ ಪ್ರಯೋಗ ಮುಂದುವರೆಸಲು ಬಯಸುತ್ತೇನೆ ಎಂದು ಸೂರ್ಯಕುಮಾರ್ ಯಾದವ್ ತಿಳಿಸಿದ್ದಾರೆ.
ಸೂರ್ಯಕುಮಾರ್ ಯಾದವ್ ಹೇಳಿದಂತೆ ಜನವರಿ 31 ರಂದು ನಡೆಯಲಿರುವ ನ್ಯೂಝಿಲೆಂಡ್ ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲೂ ಟೀಮ್ ಇಂಡಿಯಾ ಟಾಸ್ ಗೆದ್ದರೆ ಬೌಲಿಂಗ್ ಆಯ್ದುಕೊಳ್ಳುವ ಸಾಧ್ಯತೆಯಿದೆ. ಈ ಮೂಲಕ ಬೃಹತ್ ಮೊತ್ತದ ಚೇಸಿಂಗ್ಗೆ ಪ್ರಯತ್ನಿಸಲಿದೆ. ಏಕೆಂದರೆ ಭಾರತ ತಂಡವು ಟಿ20 ಕ್ರಿಕೆಟ್ನಲ್ಲಿ ಈವರೆಗೆ 210 ಕ್ಕಿಂತ ಹೆಚ್ಚಿನ ಮೊತ್ತ ಚೇಸ್ ಮಾಡಿ ಗೆದ್ದ ಇತಿಹಾಸ ಹೊಂದಿಲ್ಲ. ಹೀಗಾಗಿ ಟಿ20 ವಿಶ್ವಕಪ್ಗೂ ಮುನ್ನ ಭಾರತ ತಂಡವು ತನ್ನ ಈ ದೌರ್ಬಲ್ಯವನ್ನು ಸರಿಪಡಿಸಲು ಪ್ಲ್ಯಾನ್ ರೂಪಿಸುತ್ತಿದೆ.
ಚಿತ್ರರಂಗದಲ್ಲಿ ಪ್ರೀತಿಸಿ ಮದುವೆಯಾದ ಜೋಡಿಗಳಲ್ಲಿ ಸೂರ್ಯ ಮತ್ತು ಜ್ಯೋತಿಕಾ ಕೂಡ ಒಬ್ಬರು. ಅವರು ಅನೇಕ ಚಿತ್ರಗಳಲ್ಲಿ ನಾಯಕ-ನಾಯಕಿಯಾಗಿ ನಟಿಸಿ ನಂತರ ಮದುವೆಯಾದರು. ಅವರು ಸುಮಾರು 20 ವರ್ಷಗಳಿಂದ ಒಟ್ಟಿಗೆ ಇದ್ದಾರೆ. ಇಂದಿನ ಯುವಕರಿಗೆ ಸಂಬಂಧದ ಪಾಠಗಳನ್ನು ಹೇಳಿಕೊಡುತ್ತಿದ್ದಾರೆ. ಈ ಮಧ್ಯೆ, ಈ ಜೋಡಿಯ ಬಗ್ಗೆ ವಿಚ್ಛೇದನದ ವರದಿಗಳು ಬಂದವು. ಆದರೆ ಅವು ವದಂತಿಗಳಾಗಿ ಉಳಿದವು. ಈಗ ಪತಿ ಬಗ್ಗೆ ಜ್ಯೋತಿಕಾ ದೂರು ಹೇಳಿದ್ದಾರೆ.
ಸೂರ್ಯ – ಜ್ಯೋತಿಕಾ ದಂಪತಿಗೆ ದಿಯಾ ಎಂಬ ಮಗಳು ಮತ್ತು ದೇವ್ ಎಂಬ ಮಗ ಇದ್ದಾನೆ. ಪ್ರಸ್ತುತ, ಜ್ಯೋತಿಕಾ ತಮ್ಮ ಕುಟುಂಬವನ್ನು ನೋಡಿಕೊಳ್ಳುತ್ತಾ ಚಲನಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಆದಾಗ್ಯೂ, ಅವರು ಬರುವ ಎಲ್ಲಾ ಚಲನಚಿತ್ರಗಳನ್ನು ಆಯ್ಕೆ ಮಾಡುವ ಬದಲು ಕಥೆ ಆಧಾರಿತ ಚಲನಚಿತ್ರಗಳನ್ನು ಆಯ್ಕೆ ಮಾಡುವ ಮೂಲಕ ಮುಂದುವರಿಯುತ್ತಿದ್ದಾರೆ. ಸೂರ್ಯ ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ನಿರತರಾಗಿದ್ದಾರೆ. ಸೂರ್ಯ ಮತ್ತು ಜ್ಯೋತಿಕಾ ಈಗ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಸಂದರ್ಶನವೊಂದರಲ್ಲಿ ಸೂರ್ಯನ ಬಗ್ಗೆ ಜ್ಯೋತಿಕಾ ಹೇಳಿದ ಮಾತುಗಳು ಈಗ ವೈರಲ್ ಆಗುತ್ತಿವೆ.
‘ನನ್ನ ಪತಿ ಸೂರ್ಯ ನನ್ನ ಜೊತೆ ಫ್ರೆಂಡ್ಲಿ ಆಗಿರುತ್ತಾರೆ. ಅವರು ನನ್ನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಅವರು ನನಗೆ ತುಂಬಾ ಗೌರವವನ್ನೂ ನೀಡುತ್ತಾರೆ. ನನಗೆ ಅದು ತುಂಬಾ ಇಷ್ಟ. ಆದರೆ ಅವನಿಗೆ ಒಂದು ಕೆಟ್ಟ ಅಭ್ಯಾಸವಿದೆ. ನನಗೆ ಅದು ಇಷ್ಟವಿಲ್ಲ. ಅವರು ಬಾತ್ರೂಮ್ ನಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ನನಗೆ ಈ ಅಭ್ಯಾಸ ಸಹಿಸಲು ಸಾಧ್ಯವಿಲ್ಲ. ನಾವು ಆಗಾಗ್ಗೆ ಇದರ ಬಗ್ಗೆ ಜಗಳವಾಡುತ್ತೇವೆ’ ಎಂದು ಜ್ಯೋತಿಕಾ ಹೇಳಿದ್ದಾರೆ.
ಸಿನಿಮಾಗಳ ವಿಷಯಕ್ಕೆ ಬಂದರೆ.. ಸೂರ್ಯ ಕೊನೆಯ ಬಾರಿಗೆ ‘ಕಂಗುವಾ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಪ್ರಸ್ತುತ ಅವರ ಕೈಲಿ ಎರಡು ಸಿನಿಮಾಗಳು ಇವೆ. ಟಾಲಿವುಡ್ ನಿರ್ದೇಶಕ ವೆಂಕಿ ಅಟ್ಲೂರಿ ನಿರ್ದೇಶನ ಮಾಡುತ್ತಿರುವ ಚಿತ್ರದಲ್ಲಿ ಸೂರ್ಯ ನಾಯಕನಾಗಿ ನಟಿಸುತ್ತಿದ್ದಾರೆ. ಮಮಿತಾ ಬೈಜು ನಾಯಕಿಯಾಗಿ ನಟಿಸುತ್ತಿದ್ದಾರೆ. ಇದರ ಜೊತೆಗೆ, ಸೂರ್ಯ ಆರ್‌ಜೆ ಬಾಲಾಜಿ ನಿರ್ದೇಶನದ ‘ಕುರುಪ್ಪು’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಎರಡು ಚಿತ್ರಗಳು ಶೀಘ್ರದಲ್ಲೇ ಬಿಡುಗಡೆಯಾಗಲಿವೆ.
WPL 2026: ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್-4 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಬ್ಯಾಕ್ ಟು ಬ್ಯಾಕ್ 5 ಪಂದ್ಯಗಳಲ್ಲಿ ಗೆಲುವು ದಾಖಲಿಸಿತ್ತು. ಆದರೆ ನೇರವಾಗಿ ಫೈನಲ್ಗೇರಲು ಒಂದು ಗೆಲುವಿನ ಅವಶ್ಯಕತೆಯಿದ್ದಾಗ ಸತತವಾಗಿ 2 ಪಂದ್ಯಗಳಲ್ಲಿ ಸೋಲನುಭವಿಸಿದೆ.
ಈ ಸೋಲುಗಳ ಹೊರತಾಗಿಯೂ ಆರ್ಸಿಬಿ ತಂಡಕ್ಕೆ ನೇರವಾಗಿ ಫೈನಲ್ಗೇರಲು ಇನ್ನೊಂದು ಅವಕಾಶವಿದೆ. ಅದರಂತೆ ಇಂದು (ಜ.29) ನಡೆಯಲಿರುವ ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಗೆದ್ದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 12 ಅಂಕಗಳೊಂದಿಗೆ ಫೈನಲ್ಗೆ ಅರ್ಹತೆ ಪಡೆಯಲಿದೆ.
ಒಂದು ವೇಳೆ ಸೋತರೆ?… ಯುಪಿ ವಾರಿಯರ್ಸ್ ವಿರುದ್ಧ ಆರ್ಸಿಬಿ ತಂಡ ಸೋತರೂ ಫೈನಲ್ಗೇರಲು ಉತ್ತಮ ಅವಕಾಶವಿದೆ, ಅದು ಸಹ ನೆಟ್ ರನ್ ರೇಟ್ ನೆರವಿನೊಂದಿಗೆ. ಏಕೆಂದರೆ ಆರ್ಸಿಬಿ ತಂಡದ ಪ್ರಸ್ತುತ ನೆಟ್ ರನ್ ರೇಟ್ +0.947 . ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಹೊರತುಪಡಿಸಿ ಯಾವುದೇ ಟೀಮ್ ಉತ್ತಮ ನೆಟ್ ರನ್ ರೇಟ್ ಹೊಂದಿಲ್ಲ.
ಅದರಲ್ಲೂ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಗುಜರಾತ್ ಜೈಂಟ್ಸ್ ತಂಡ ಹೊಂದಿರುವುದು -0.271 ನೆಟ್ ರನ್ ರೇಟ್. ಹೀಗಾಗಿ ಯುಪಿ ವಾರಿಯರ್ಸ್ ವಿರುದ್ಧ ಸೋತರೂ ಆರ್ಸಿಬಿ ತಂಡ ಅಗ್ರಸ್ಥಾನವನ್ನು ಕಾಯ್ದುಕೊಂಡು ಫೈನಲ್ಗೇರಬಹುದು. ಆದರೆ ಇಲ್ಲಿ ಆರ್ಸಿಬಿ ತಂಡದ ಯುಪಿ ವಾರಿಯರ್ಸ್ ವಿರುದ್ಧ ಹೀನಾಯವಾಗಿ ಸೋಲದಂತೆ ನೋಡಿಕೊಳ್ಳಬೇಕಿದೆ.
ಆರ್ಸಿಬಿ ತಂಡವು ಯುಪಿ ವಾರಿಯರ್ಸ್ ವಿರುದ್ಧ ಕನಿಷ್ಠ 60 ರನ್ಗಳ ಅಂತರದಿಂದ ಸೋತರೆ, ಅತ್ತ ಗುಜರಾತ್ ಜೈಂಟ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 160 ರನ್ಗಳ ಅಂತರದಿಂದ ಗೆಲ್ಲಬೇಕು. ಅಂದರೆ ಮಾತ್ರ ಆರ್ಸಿಬಿ ತಂಡವನ್ನು ಹಿಂದಿಕ್ಕಿ ನೆಟ್ ರನ್ ರೇಟ್ ಮೂಲಕ ಗುಜರಾತ್ ಜೈಂಟ್ಸ್ ತಂಡಕ್ಕೆ ಅಗ್ರಸ್ಥಾನಕ್ಕೇರಲು ಅವಕಾಶ ದೊರೆಯಲಿದೆ.
ಆದರೆ ಬಲಿಷ್ಠ ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಜೈಂಟ್ಸ್ ತಂಡಕ್ಕೆ 160 ರನ್ಗಳ ಅಂತರದ ಗೆಲುವು ಕಷ್ಟಸಾಧ್ಯ. ಹೀಗಾಗಿ ಯುಪಿ ವಾರಿಯರ್ಸ್ ವಿರುದ್ಧ ಸೋತರೂ ಆರ್ಸಿಬಿ ತಂಡ ನೆಟ್ ರನ್ ರೇಟ್ ಮೂಲಕ ಅಗ್ರಸ್ಥಾನವನ್ನು ಕಾಯ್ದುಕೊಳ್ಳಬಹುದು. ಈ ಮೂಲಕ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೈನಲ್ಗೆ ಅರ್ಹತೆ ಪಡೆಯಲಿದೆ.
ಬರ್ವಾನಿ, ಜನವರಿ 29: ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯಲ್ಲಿ ಒಂದು ಭಯಾನಕ ಘಟನೆ ಬೆಳಕಿಗೆ ಬಂದಿದೆ. ಏಳು ವರ್ಷದ ಬಾಲಕಿ(Girl)ಯ ಮೇಲೆ ಅತ್ಯಾಚಾರ ನಡೆಸಿ ನಂತರ ಕೊಲೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ 17 ವರ್ಷದ ಅಪ್ರಾಪ್ತ ವಯಸ್ಸಿನ ಸಂಬಂಧಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಈ ಘಟನೆ ರಾಜ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ನಡೆದಿದೆ. ಜನವರಿ 25 ರ ರಾತ್ರಿ, ಹುಡುಗಿಯ ಕುಟುಂಬ ನಿದ್ರಿಸುತ್ತಿದ್ದಾಗ, ಆರೋಪಿ ಅವಳನ್ನು ಮನೆಯಿಂದ ಅಪಹರಿಸಿ ಹತ್ತಿರದ ಇಂದಿರಾ ಸಾಗರ್ ಕಾಲುವೆಗೆ ಕರೆದೊಯ್ದಿದ್ದ. ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸೆಗಿದ್ದಾನೆ. ಹುಡುಗಿ ಕಿರುಚಲು ಪ್ರಾರಂಭಿಸಿದಾಗ, ಬಂಧನಕ್ಕೆ ಹೆದರಿ ಆರೋಪಿಗಳು ಆಕೆಯನ್ನು ಕಾಲುವೆಗೆ ಎಸೆದಿದ್ದಾನೆ. ಬಾಲಕಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ.
ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್ ದಾವರ್ ಮಾತನಾಡಿ, ಸ್ಥಳೀಯ ನಿವಾಸಿಗಳ ವರದಿಯ ಮೇರೆಗೆ ಜನವರಿ 26 ರಂದು ಬಾಲಕಿಯ ಶವವನ್ನು ಕಾಲುವೆಯಿಂದ ಹೊರತೆಗೆಯಲಾಯಿತು. ವರದಿಯು ಬಾಲಕಿಯ ಖಾಸಗಿ ಭಾಗಗಳಿಗೆ ತೀವ್ರವಾದ ಗಾಯಗಳಾಗಿದ್ದು, ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದು ಸಾವಿಗೆ ಕಾರಣ ಎಂದು ದೃಢಪಡಿಸಿದೆ.
17 ವರ್ಷದ ಸಂಬಂಧಿಯನ್ನು ಅನುಮಾನದ ಮೇಲೆ ಪ್ರಶ್ನಿಸಿದಾಗ, ಆತ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಬಂಧಿತ ಅಪ್ರಾಪ್ತ ವಯಸ್ಕನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಮತ್ತೊಂದು ಘಟನೆ ದೆಹಲಿ: ಮೂವರು ಅಪ್ರಾಪ್ತರಿಂದ 6 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ
ಆರು ವರ್ಷದ ಬಾಲಕಿ(Girl) ಮೇಲೆ ಮೂವರು ಅಪ್ರಾಪ್ತ ಬಾಲಕರು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ. ದೆಹಲಿಯ ಭಜನ್‌ಪುರದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. 10, 13 ಮತ್ತು 14 ವರ್ಷ ವಯಸ್ಸಿನ ಮೂವರು ಅಪ್ರಾಪ್ತ ಬಾಲಕರು ಈ ಅತ್ಯಾಚಾರವೆಸಗಿದ್ದಾರೆ.
ಆರೋಪಿಗಳಲ್ಲಿ ಇಬ್ಬರು ಬಾಲಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ, ಆದರೆ ಮೂರನೆಯವನು ಪರಾರಿಯಾಗಿದ್ದಾನೆ. ಮೂರನೇ ಆರೋಪಿಯ ಕುಟುಂಬ ಕೂಡ ನಾಪತ್ತೆಯಾಗಿದೆ.
ಈ ಘಟನೆ ಜನವರಿ 18 ರ ಮಂಗಳವಾರ ನಡೆದಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಂತರ ಹುಡುಗಿಯ ಕುಟುಂಬವು ಪೊಲೀಸರಿಗೆ ದೂರು ನೀಡಿತ್ತು. ಮೂವರು ಹುಡುಗರು ಹುಡುಗಿಯನ್ನು ಆಮಿಷವೊಡ್ಡಿ ಅತ್ಯಾಚಾರ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಆರೋಪಿಗಳನ್ನು ಗುರುತಿಸಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ. ಒಬ್ಬ ಪರಾರಿಯಾಗಿದ್ದಾನೆ. ಇಬ್ಬರು ಆರೋಪಿಗಳನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗಿದೆ.
ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಗಿದ್ದು, ಅಗತ್ಯ ಆರೈಕೆ ಮತ್ತು ಸಮಾಲೋಚನೆ ಒದಗಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ಹೇಳಿಕೆಯನ್ನು ದಾಖಲಿಸಲಾಗಿದೆ. ಪ್ರಕರಣದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದ್ದು, ಮೂರನೇ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ.
ಸರಣಿ ಬ್ಲಾಕ್‌ಬಸ್ಟರ್‌ಗಳ ಮೂಲಕ ಗಮನ ಸೆಳೆದ ಶ್ರುತಿ ಹಾಸನ್ (Shruthi Haasan) ಈಗ ಸುದ್ದಿಯಲ್ಲಿದ್ದಾರೆ. ಅವರು ಕಮಲ್ ಹಾಸನ್ ಮಗಳು. ಆದರೂ ಚಿತ್ರರಂಗದಲ್ಲಿ ತಮ್ಮದೇ ಆದ ಹೆಸರು ಮಾಡಿದರು. ಈಗ ಅವರು ಧಮ್ ಹೊಡೆಯುತ್ತಿರುವ ಫೋಟೋ ವೈರಲ್ ಆಗಿದೆ. ಹಾಗಂತ ಅವರು ಪಬ್ಲಿಕ್ನಲ್ಲಿ ಧಮ್ ಹೊಡೆದು ಸಿಕ್ಕಿ ಬಿದ್ದಿದ್ದಲ್ಲ. ಅವರು ಈ ರೀತಿ ಸಿಗರೇಟ್ ಸೇದಿದ್ದು ಸಿನಿಮಾಗಾಗಿ. ಆ ಬಗ್ಗೆ ಇಲ್ಲಿದೆ ಮಾಹಿತಿ.
ದುಲ್ಕರ್ ಸಲ್ಮಾನ್ ಈಗ ‘ಆಕಾಶಮ್ಲೋ ಒಕ್ತ ತಾರಾ’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪವನ್ ಸಾದಿನೇನಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಪ್ರತಿಷ್ಠಿತ ಗೀತಾ ಆರ್ಟ್ಸ್ ಮತ್ತು ಸ್ವಪ್ನ ಸಿನಿಮಾ ಅಡಿಯಲ್ಲಿ ಸಂದೀಪ್ ಗುನ್ನಮ್ ಮತ್ತು ರಮ್ಯಾ ಗುನ್ನಮ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ದುಲ್ಕರ್‌ಗೆ ನಾಯಕಿಯಾಗಿ ಹೊಸ ನಾಯಕಿ ಸಾತ್ವಿಕ ವೀರವಳ್ಳಿ ನಟಿಸುತ್ತಿದ್ದಾರೆ. ಶ್ರುತಿಹಾಸನ್ ಕೂಡ ಸಿನಿಮಾದ ಭಾಗ ಆಗಿದ್ದಾರೆ.
ಶ್ರುತಿ ಹಾಸನ್ ಜನ್ಮದಿನದ ಪ್ರಯುಕ್ತ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಆಯ್ದ ಚಿತ್ರಗಳನ್ನು ಮಾಡುತ್ತಿರುವ ಶ್ರುತಿ ಹಾಸನ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಾ ಚಿತ್ರತಂಡ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿದೆ.
ಅವರು ಕನ್ನಡಕ ಧರಿಸಿದ್ದಾರೆ. ಅವರ ತುಟಿಗಳ ಮೇಲಿನ ಸಿಗರೇಟ್ ಮತ್ತು ಅದರಿಂದ ಬರುತ್ತಿರುವ ಹೊಗೆ ಅವರ ಪಾತ್ರಕ್ಕೆ ರಾನೆಸ್ ನೀಡಿದೆ. ಶ್ರುತಿ ಹಾಸನ್ ಪಾತ್ರವು ಕಥೆಯಲ್ಲಿ ಪ್ರಮುಖ ತಿರುವು ನೀಡಲಿದೆ ಎನ್ನಲಾಗಿದೆ. ಈ ಫೋಟೋ ವೈರಲ್ ಮಾಡಲಾಗುತ್ತಿದೆ.
ಈ ಚಿತ್ರವು ಉತ್ತಮ ತಾಂತ್ರಿಕ ಗುಣಮಟ್ಟವನ್ನು ಹೊಂದಿರಲಿದೆ. ಜಿ.ವಿ. ಪ್ರಕಾಶ್ ಕುಮಾರ್ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಸುಜಿತ್ ಸಾರಂಗ್ ಛಾಯಾಗ್ರಹಣವನ್ನು ಮತ್ತು ಶ್ವೇತಾ ಸಾಬು ಸಿರಿಲ್ ನಿರ್ಮಾಣ ವಿನ್ಯಾಸವನ್ನು ನೋಡಿಕೊಳ್ಳುತ್ತಿದ್ದಾರೆ. ಪ್ರಸ್ತುತ ನಿರ್ಮಾಣದ ಅಂತಿಮ ಹಂತದಲ್ಲಿರುವ ‘ಆಕಾಶಮ್ಲೋ ಓಕಾ ತಾರಾ’ 2026 ರ ಬೇಸಿಗೆಯಲ್ಲಿ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ.
ಬೆಂಗಳೂರು, ಜ.29: ಬೆಂಗಳೂರು (Bengaluru) ಹೊರವಲಯ ಬನ್ನೇರುಘಟ್ಟ ಸಮೀಪದ ಬೇಗಿಹಳ್ಳಿಯ ಸಾಯಿ ಸಮೃದ್ಧಿ ಬಡಾವಣೆಯಲ್ಲಿ ಒಂಟಿ ಸಲಗ ಓಡಾಟದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮುಂಜಾನೆ 4:10 ರ ಸುಮಾರಿಗೆ ಬಡಾವಣೆಗೆ ಎಂಟ್ರಿ ಕೊಟ್ಟ ಒಂಟಿ ಸಲಗ ಎದುರು ಸಿಕ್ಕ ಆಲ್ಟೊ ಕಾರಿಗೆ ದಂತದಿಂದ ತುವಿದು ಡೋರ್ ಮತ್ತು ಬಾನೆಟ್ಗೆ ಹಾನಿ ಮಾಡಿದೆ. ಮತ್ತೊಂದು ಕಡೆ ಮನೆ ಮುಂಭಾಗ ನಿಲ್ಲಿಸಿದ್ದ ಬೈಕ್ ಮೇಲೆ ದಾಳಿ ಮಾಡಿದೆ. ಒಂಟಿ ಸಲಗ ಆಕ್ರೋಶದಲ್ಲಿ ಸಿಕ್ಕ ಸಿಕ್ಕ ವಸ್ತುಗಳ ಮೇಲೆ ದಾಳಿ ಮಾಡುತ್ತಿದ್ದು, ಸ್ಥಳೀಯ ನಿವಾಸಿಗಳು ಭಯಬೀತರಾಗಿದ್ದಾರೆ. ಮುಂಜಾನೆ ಹೊತ್ತು ವಾಯುವಿಹಾರಕ್ಕೆ ಹೋಗುವವರು ಅಥವಾ ಕೆಲಸಕ್ಕೆ ತೆರಳುವವರ ಮೇಲೆ ಇಂತಹ ಆನೆಗಳು ದಾಳಿ ಮಾಡುವ ಅಪಾಯವಿದೆ.
ಇನ್ನೂ ಬೆಳಗ್ಗೆ ಕಾರು ಮತ್ತು ಬೈಕ್ ಜಖಂ ಆಗಿರುವುದನ್ನು ಗಮನಿಸಿದ ಸ್ಥಳೀಯರು ಯಾರೋ ಕಳ್ಳರು ವಾಹನಗಳನ್ನು ಕದಿಯಲು ಯತ್ನಿಸಿದ್ದಾರೆ ಎಂದುಕೊಂಡಿದ್ದರು. ಈ ವೇಳೆ ಸಿಸಿ ಕ್ಯಾಮರಾವನ್ನು ಪರಿಶೀಲನೆ ಮಾಡಿ ನೋಡಿದಾಗ ಒಂಟಿ ಸಲಗ ಬಡಾವಣೆಗೆ ನುಗ್ಗಿರುವುದು ಕಂಡು ಸ್ಥಳೀಯ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ. ನಾಲ್ಕು ವರ್ಷದ ಹಿಂದೆ ಕಾಡಾನೆಗಳು ಹಳ್ಳಿಗಳ ಬಳಿ ಲಗ್ಗೆಯಿಡುತ್ತಿದ್ದವು. ಬಳಿಕ ಕಾಡಾನೆಗಳ ಹಾವಳಿ ಇರಲಿಲ್ಲ. ಆದ್ರೆ ನಿನ್ನೆ ರಾತ್ರಿ ಒಂಟಿ ಸಲಗ ಬಡಾವಣೆಯ ಬೀದಿ ಬೀದಿ ಸುತ್ತಾಡಿದೆ. ಇನ್ನು ಮುಂಜಾನೆ ಹೊತ್ತು ಕಾಣಿಸಿಕೊಂಡ ಕಾರಣ, ಮನುಷ್ಯರ ಮೇಲೆ ದಾಳಿ ಮಾಡಿಲ್ಲ. ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ ಎಂದು ಕಾರಿನ ಮಾಲೀಕ ತಿಳಿಸಿದ್ದಾರೆ.
ಈ ಆನೆಗಳು ನಮ್ಮ ಪ್ರದೇಶದಲ್ಲಿ ಓಡಾಡುತ್ತಿರುವುದರಿಂದ ಭಯ ವಾತಾವರಣ ಸೃಷ್ಟಿಯಾಗಿದೆ. ಈ ಬಗ್ಗೆ ಹಲವು ಭಾರಿ ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದೇವೆ. ಆಹಾರಕ್ಕೆ ಮತ್ತೆ ಈ ಕಡೆ ಬರುವ ಸಾಧ್ಯತೆ ಇದೆ. ಅಲ್ಲದೆ ಒಂಟಿ ಸಲಗ ಕೂಡ ಪುಂಡಾಟದ ಸ್ವಭಾವ ಹೊಂದಿದ್ದು, ಮನುಷ್ಯರ ಮೇಲೆ ದಾಳಿ ಮಾಡುವ ಸಾಧ್ಯತೆ ಇದ್ದು, ಅರಣ್ಯ ಇಲಾಖೆ ಅಪಾಯಕಾರಿ ಒಂಟಿ ಸಲಗವನ್ನು ನಾಡಿಗೆ ಬರದಂತೆ ನಿಯಂತ್ರಿಸಬೇಕಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಒಂಟಿ ಸಲಗವನ್ನು ಕಾಡಿಗೆ ಅಟ್ಟಲು ಅಥವಾ ಅದನ್ನು ನಿಯಂತ್ರಿಸಲು ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ. ಮುಂಜಾನೆ 4 ರಿಂದ 7 ಗಂಟೆಯವರೆಗೆ ಮತ್ತು ರಾತ್ರಿ ವೇಳೆ ಏಕಾಂಗಿಯಾಗಿ ಸಂಚರಿಸುವುದನ್ನು ತಪ್ಪಿಸಿ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ. ಅರಣ್ಯ ಇಲಾಖೆಯು ಈಗಾಗಲೇ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಾನಿಗೊಳಗಾದ ವಾಹನಗಳ ಮಾಲೀಕರಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
ಪುಣೆ, ಜನವರಿ 29: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್(Ajit Pawar) ಬುಧವಾರ ಬೆಳಗ್ಗೆ ಸಂಭವಿಸಿದ ವಿಮಾನ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ವಿಮಾನದಲ್ಲಿ ಅವರ ಜತೆ ಇತರೆ ನಾಲ್ವರು ಸಿಬ್ಬಂದಿ ಇದ್ದರು ಅದರಲ್ಲಿ ಪಿಂಕಿ ಮಾಲಿ ಕೂಡ ಒಬ್ಬರು. ಸಾಯುವ ಮುನ್ನ ತಂದೆಗೆ ಕರೆ ಮಾಡಿ ಅಪ್ಪ ನಾನು ಇವತ್ತು ಅಜಿತ್ ಪವಾರ್ ಜತೆ ವಿಮಾನದಲ್ಲಿ ಪ್ರಯಾಣ ಮಾಡ್ತಿದ್ದೀನಿ ಗೊತ್ತಾ ಎಂದು ಖುಷಿಯಿಂದ ಹೇಳಿಕೊಂಡಿದ್ದರು. ಆದರೆ ಇಬ್ಬರಿಗೂ ಅದು ಕೊನೆಯ ಭೇಟಿಯಾಗಿತ್ತು.
ಮುಂಬೈನ ವರ್ಲಿಯ ನಿವಾಸಿ ಪಿಂಕಿ ತನ್ನ ತಂದೆಗೆ, ಅಪ್ಪಾ, ನಾನು ಅಜಿತ್ ಪವಾರ್ ಜೊತೆ ಬಾರಾಮತಿಗೆ ವಿಮಾನದಲ್ಲಿ ಹೋಗುತ್ತಿದ್ದೇನೆ. ಅವರನ್ನು ಬಿಟ್ಟು ಬಂದ ನಂತರ, ನಾನು ನಾಂದೇಡ್‌ಗೆ ಹೋಗುತ್ತೇನೆ. ನಾವು ನಾಳೆ ಮಾತನಾಡೋಣ ಎಂದು ಹೇಳಿದ್ದು.
ಇತ್ತೀಚಿನ ಹಲವಾರು ಪ್ರವಾಸಗಳಲ್ಲಿ ಅವರು ಪವಾರ್ ಜೊತೆಗಿದ್ದರು ಎಂದು ಅವರು ಉಲ್ಲೇಖಿಸಿದ್ದಾರೆ. ನಾನು ನನ್ನ ಮಗಳನ್ನು ಕಳೆದುಕೊಂಡಿದ್ದೇನೆ. ನಿಖರವಾಗಿ ಏನಾಯಿತು ಎಂದು ನನಗೆ ತಿಳಿದಿಲ್ಲ, ಏಕೆಂದರೆ ಅಂತಹ ಘಟನೆಗಳ ಬಗ್ಗೆ ನನಗೆ ಯಾವುದೇ ತಾಂತ್ರಿಕ ಜ್ಞಾನವಿಲ್ಲ. ನಾನು ಸಂಪೂರ್ಣವಾಗಿ ಛಿದ್ರಗೊಂಡಿದ್ದೇನೆ. ನನ್ನ ಮಗಳ ಅಂತ್ಯಕ್ರಿಯೆಯನ್ನು ಗೌರವದಿಂದ ಮಾಡಲು ನನಗೆ ಅವಳ ದೇಹ ಬೇಕು. ನಾನು ಬಯಸುವುದು ಇಷ್ಟೇ ಎಂದು ಅವರು ಹೇಳಿದರು.
ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದ ಬಳಿ ಬುಧವಾರ ಬೆಳಗ್ಗೆ ಈ ಅಪಘಾತ ಸಂಭವಿಸಿದ್ದು, ದೆಹಲಿ ಮೂಲದ ವಿಎಸ್ಆರ್ ವೆಂಚರ್ಸ್ ನಿರ್ವಹಿಸುವ ವಿಟಿ-ಎಸ್‌ಎಸ್‌ಕೆ ನೋಂದಣಿ ಹೊಂದಿರುವ ಲಿಯರ್‌ಜೆಟ್ 45 ವಿಮಾನ ಅಪಘಾತಕ್ಕೀಡಾಗಿತ್ತು.
ವಿಮಾನದಲ್ಲಿ ಐದು ಮಂದಿ ಇದ್ದರು ಅವರಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್, ಅವರ ವೈಯಕ್ತಿಕ ಭದ್ರತಾ ಅಧಿಕಾರಿ ವಿದೀಪ್ ಜಾಧವ್, ವಿಮಾನ ಸೇವಕಿ ಪಿಂಕಿ ಮಾಲಿ, ಪೈಲಟ್-ಇನ್-ಕಮಾಂಡ್ ಸುಮಿತ್ ಕಪೂರ್ ಮತ್ತು ಸೆಕೆಂಡ್-ಇನ್-ಕಮಾಂಡ್ ಶಾಂಭವಿ ಪಾಠಕ್.
ವಿಮಾನದ ವಿವರಗಳ ಪ್ರಕಾರ, ವಿಮಾನವು ಬೆಳಗ್ಗೆ 8.10 ಕ್ಕೆ ಮುಂಬೈನಿಂದ ಹೊರಟು 8.45 ರ ಸುಮಾರಿಗೆ ರಾಡಾರ್‌ನಿಂದ ಕಣ್ಮರೆಯಾಯಿತು, 8.50 ಕ್ಕೆ ಅಪಘಾತಕ್ಕೀಡಾಯಿತು. ಫೆಬ್ರವರಿ 5 ರಂದು ನಡೆಯಲಿರುವ ಜಿಲ್ಲಾ ಪರಿಷತ್ ಚುನಾವಣೆಗೆ ಮುನ್ನ ಪುಣೆ ಜಿಲ್ಲೆಯಲ್ಲಿ ನಾಲ್ಕು ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲು ಪವಾರ್ ತೆರಳುತ್ತಿದ್ದರು.
ವಿಮಾನವು ಲ್ಯಾಂಡಿಂಗ್ ಸಮಯದಲ್ಲಿ ನಿಯಂತ್ರಣ ಕಳೆದುಕೊಂಡ ನಂತರ, ತುರ್ತು ಸೇವೆಗಳು ಮತ್ತು ಹಿರಿಯ ಭದ್ರತಾ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಓಡೋಡಿ ಬಂದಿದ್ದರು. ರಕ್ಷಣಾ ತಂಡಗಳನ್ನು ತಕ್ಷಣವೇ ನಿಯೋಜಿಸಲಾಯಿತು.
ಅಂದುಕೊಂಡಂತೆ ನಡೆದಿದ್ದರೆ ‘ಜನ ನಾಯಗನ್’ ಸಿನಿಮಾ (Jana Nayagan) ರಿಲೀಸ್ ಆಗಿ ಇಂದಿಗೆ (ಜನವರಿ 29) ಮೂರು ವಾರಗಳು ಕಳೆದಿರುತ್ತಿದ್ದವು. ಆದರೆ, ಸೆನ್ಸಾರ್ ಮಂಡಳಿ ಸೆನ್ಸಾರ್ ಪ್ರಮಾಣಪತ್ರ ನೀಡದೆ ಇರುವುದು ತಂಡಕ್ಕೆ ಚಿಂತೆಯನ್ನು ತಂದೊಡ್ಡಿದೆ. ಹೀಗಿರುವಾಗಲೇ ‘ಜನ ನಾಯಗನ್’ ತಂಡ ಕೋರ್ಟ್ನಿಂದ ಪ್ರಕರಣವನ್ನು ಹಿಂಪಡೆಯಲು ನಿರ್ಧರಿಸಿದೆ ಎಂದು ವರದಿ ಆಗಿದೆ. ಅದಕ್ಕೆ ಕಾರಣವೂ ಇದೆ.
ಜನವರಿ 9ಕ್ಕೆ ‘ಜನ ನಾಯಗನ್’ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಸೆನ್ಸಾರ್ ಪ್ರಮಾಣ ಪತ್ರ ಸಿಗದ ಕಾರಣ ಸಿನಿಮಾ ತಂಡ ಕೋರ್ಟ್ ಮೆಟ್ಟಿಲೇರಿತು. ಸ್ಥಳೀಯ ನ್ಯಾಯಾಲಯ, ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ನಲ್ಲಿ ಕೇಸ್ ದಾಖಲು ಮಾಡಲಾಯಿತು. ಆದರೆ, ಎಲ್ಲಿಯೂ ಸಿನಿಮಾಗೆ ನ್ಯಾಯ ಸಿಗುತ್ತಿಲ್ಲ.
ಈಗ ‘ಜನ ನಾಯಗನ್’ ತಂಡ ಒಂದು ನಿರ್ಧಾರಕ್ಕೆ ಬಂದಿದೆ ಎಂದು ವರದಿ ಆಗಿದೆ. ಕೆವಿಎನ್ ಸಂಸ್ಥೆ ಪ್ರಕರಣವನ್ನು ಕೋರ್ಟ್ನಿಂದ ಹಿಂಪಡೆಯುವ ನಿರ್ಧಾರಕ್ಕೆ ಬಂದಿದೆಯಂತೆ. ಚಿತ್ರವನ್ನು ಪುನರ್ವಿಮರ್ಶೆ ಸಮಿತಿಗೆ ಕಳಿಸಲು ನಿರ್ಧರಿಸಿದೆ ಎನ್ನಲಾಗಿದೆ.
ತಮಿಳುನಾಡಿನ ಸೆನ್ಸಾರ್ ಮಂಡಳಿ ‘ಜನ ನಾಯಗನ್’ ಸಿನಿಮಾದ ಕೆಲವು ವಿಷಯದ ಬಗ್ಗೆ ಪ್ರಶ್ನೆ ಮಾಡಿ, ಅದನ್ನು ಪುನರ್ ವಿಮರ್ಶಾ ಸಮಿತಿಗೆ ಕಳುಹಿಸಲು ನಿರ್ಧರಿಸಿತ್ತು. ಆದರೆ, ಅದಕ್ಕೆ ಸಮಯ ಹಿಡಿಯುತ್ತದೆ ಎಂಬ ಕಾರಣಕ್ಕೆ ಕೋರ್ಟ್ನಲ್ಲಿ ಪರಿಹಾರ ಕಂಡುಕೊಳ್ಳಲು ನಿರ್ಮಾಣ ಸಂಸ್ಥೆ ನಿರ್ಧರಿಸಿತ್ತು. ಆದರೆ, ಕೋರ್ಟ್ನಲ್ಲಿ ಯಾವುದೇ ಪರಿಹಾರ ಸಿಗೋ ಸೂಚನೆ ಕಾಣಿಸುತ್ತಿಲ್ಲ. ಹೀಗಾಗಿ, ಈ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗುತ್ತಿದೆ.
‘ಕೆವಿಎನ್’ ಸಂಸ್ಥೆ ಕೋರ್ಟ್ನಲ್ಲಿ ಸಿನಿಮಾದ ಬಜೆಟ್ ವಿಷಯವನ್ನು ಪ್ರಸ್ತಾಪ ಮಾಡುತ್ತಲೇ ಇದೆ. ‘ಚಿತ್ರಕ್ಕಾಗಿ 500 ಕೋಟಿ ರೂಪಾಯಿ ವ್ಯಯಿಸಲಾಗಿದೆ. ಈ ಬಗ್ಗೆ ಗಮನಹರಿಸಬೇಕು’ ಎಂದು ನಿರ್ಮಾಣ ಸಂಸ್ಥೆ ಹೇಳಿತ್ತು. ‘ಜನ ನಾಯಗನ್’ ಸಿನಿಮಾಗೆ ವಿಜಯ್ ಹೀರೋ. ಇದು ಅವರ ವೃತ್ತಿ ಜೀವನದ ಕೊನೆಯ ಸಿನಿಮಾ ಆಗಲಿದೆ. ಈ ಚಿತ್ರದ ಬಳಿಕ ಅವರು ರಾಜಕೀಯಕ್ಕೆ ಹೊರಳಲಿದ್ದಾರೆ. ಈ ಚಿತ್ರದಲ್ಲಿ ಮಲಯಾಳಂ ನಟಿ ಮಮಿತಾ ಬೈಜು, ಪೂಜಾ ಹೆಗ್ಡೆ ನಟಿಸಿದ್ದಾರೆ. ಎಚ್. ವಿನೋದ್ ನಿರ್ದೇಶನ ಚಿತ್ರಕ್ಕೆ ಇದೆ.