ಆನೇಕಲ್, ಏಪ್ರಿಲ್ 3: ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಚೂಡೇನಹಳ್ಳಿ ಗ್ರಾಮದಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದೆ. ಕಳೆದ ಒಂದು ವಾರದಿಂದ ಗ್ರಾಮದ ಸುತ್ತಮುತ್ತಲೇ ಬೀಡುಬಿಟ್ಟಿರುವ ಗಜಪಡೆ, ಪ್ರತಿ ರಾತ್ರಿ ಜಮೀನುಗಳಿಗೆ ನುಗ್ಗಿ ಬೆಳೆ ನಾಶಪಡಿಸುತ್ತಿವೆ. ರೈತರು ಕಷ್ಟಪಟ್ಟು ಬೆಳೆದ ಬೆಳೆ ಆನೆಗಳ ಪಾಲಾಗುತ್ತಿದ್ದು, ಜೀವ ಭಯದಲ್ಲಿರುವ ಗ್ರಾಮಸ್ಥರು ಮನೆಯಿಂದ ಹೊರಬರಲು ನಡುಗುವಂತಾಗಿದೆ. ಕೂಡಲೇ ಅರಣ್ಯ ಇಲಾಖೆ ಮಧ್ಯಪ್ರವೇಶಿಸಿ ಆನೆಗಳನ್ನು ಕಾಡಿಗಟ್ಟಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈ ಮಧ್ಯೆ, ಗ್ರಾಮದಲ್ಲಿ ಆನೆಗಳ ನೈಟ್ ರೌಂಡ್ಸ್ ವಿಡಿಯೋ ವೈರಲ್ ಆಗುತ್ತಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ನವದೆಹಲಿ, ಏಪ್ರಿಲ್ 03: ಮಧ್ಯಪ್ರಾಚ್ಯದಲ್ಲಿ ಯುದ್ಧ ಆರಂಭವಾದಾಗಿನಿಂದ ಇರಾನ್ನ ಮುಚ್ಚಿರುವ ಹಾರ್ಮುಜ್(Hormuz) ಜಲಸಂಧಿಯನ್ನು ತೆರೆಯುವಂತೆ ಭಾರತ ಒತ್ತಾಯಿಸಿದೆ. ಸಂಘರ್ಷ ಪೀಡಿತ ಜಲಮಾರ್ಗದಲ್ಲಿ ನಾಗರಿಕರನ್ನು ಕಳೆದುಕೊಂಡ ಏಕೈಕ ರಾಷ್ಟ್ರ ಭಾರತ ಎಂದು ಭಾರತ ಹೇಳಿದೆ. ಮಧ್ಯಪ್ರಾಚ್ಯದ ಪರಿಸ್ಥಿತಿಯ ಕುರಿತು ಯುಕೆ ಕರೆದ ಬಹುಪಕ್ಷೀಯ ಸಭೆಯಲ್ಲಿ, ಅಂತಾರಾಷ್ಟ್ರೀಯ ಜಲಮಾರ್ಗಗಳ ಮೂಲಕ ಸುರಕ್ಷಿತ ಮತ್ತು ಮುಕ್ತ ಸಂಚಾರವನ್ನು ಖಚಿತಪಡಿಸಿಕೊಳ್ಳುವ ಮಹತ್ವವನ್ನು ಭಾರತವು ಒತ್ತಿ ಹೇಳಿದೆ.
60 ಕ್ಕೂ ಹೆಚ್ಚು ದೇಶಗಳು ಭಾಗವಹಿಸಿದ್ದ ವರ್ಚುವಲ್ ಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ನಡೆಯುತ್ತಿರುವ ಸಂಘರ್ಷವನ್ನು ಶಮನಗೊಳಿಸಲು ರಾಜತಾಂತ್ರಿಕತೆಯು ಅತ್ಯಂತ ಕಾರ್ಯಸಾಧ್ಯವಾದ ಮಾರ್ಗವಾಗಿದೆ ಎಂಬ ಭಾರತದ ಅಧಿಕೃತ ನಿಲುವನ್ನು ಪುನರುಚ್ಚರಿಸಿದರು.
ಭಾರತದ ಇಂಧನ ಭದ್ರತೆಯ ಮೇಲೆ ಬಿಕ್ಕಟ್ಟಿನ ಪರಿಣಾಮ ಮತ್ತು ಕೊಲ್ಲಿಯಲ್ಲಿ ವ್ಯಾಪಾರಿ ಹಡಗುಗಳ ಮೇಲಿನ ದಾಳಿಯಲ್ಲಿ ನಾವಿಕರನ್ನು ಕಳೆದುಕೊಂಡ ಏಕೈಕ ದೇಶ ಭಾರತವಾಗಿದೆ ಎಂಬ ಅಂಶವನ್ನು ಅವರು ಒತ್ತಿ ಹೇಳಿದರು. ಸುಮಾರು 10 ಮಿಲಿಯನ್ ಭಾರತೀಯ ನಾಗರಿಕರು ಗಲ್ಫ್ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಈ ರಾಷ್ಟ್ರಗಳಲ್ಲಿರುವ ಎಲ್ಲಾ ಭಾರತೀಯರು ಸುರಕ್ಷಿತವಾಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಎಂಟು ಭಾರತೀಯ ನಾಗರಿಕರು ಸಂಘರ್ಷದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಒಬ್ಬರು ಕಾಣೆಯಾಗಿದ್ದಾರೆ. ಭಾರತವು ಇರಾನ್‌ನಿಂದ 204 ಪ್ರಜೆಗಳಿಗೆ ಭೂ ಗಡಿಯ ಮೂಲಕ ಅಜೆರ್ಬೈಜಾನ್‌ಗೆ ನಿರ್ಗಮಿಸಲು ಅನುಕೂಲ ಮಾಡಿಕೊಟ್ಟಿದೆ , ಮುಂಬರುವ ದಿನಗಳಲ್ಲಿ ಹೆಚ್ಚಿನವರು ಮರಳುವ ನಿರೀಕ್ಷೆಯಿದೆ.
ಹಾರ್ಮುಜ್ ಜಲಸಂಧಿಯ ಪರಿಸ್ಥಿತಿಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದು ಇರಾನ್ ಭಾರತಕ್ಕೆ ಭರವಸೆ ನೀಡಿದೆ. ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವ ಹಡಗುಗಳು ಸುರಕ್ಷಿತವಾಗಿರುತ್ತದೆ ಮತ್ತು ಭಾರತ ಶಾಂತವಾಗಿರಬೇಕು ಎಂದು ಇರಾನ್ ಭಾರತಕ್ಕೆ ಭರವಸೆ ನೀಡಿತು. ಫೆಬ್ರವರಿ 28 ರಂದು, ಅಮೆರಿಕ ಮತ್ತು ಇಸ್ರೇಲ್ ಇರಾನ್ ವಿರುದ್ಧ ಯುದ್ಧವನ್ನು ಪ್ರಾರಂಭಿಸಿದವು , ಇದಕ್ಕೆ ಪ್ರತಿಕ್ರಿಯೆಯಾಗಿ ಇರಾನ್ ಜಾಗತಿಕ ವ್ಯಾಪಾರಕ್ಕೆ ಪ್ರಮುಖ ಸಮುದ್ರ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿತ್ತು.
ಬಾಗಲಕೋಟೆ, ಏ.3: ಬಾಗಲಕೋಟೆ ಉಪಚುನಾವಣೆ ಅಖಾಡದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ವೀರಣ್ಣ ಚರಂತಿಮಠ ಅವರ ಪರವಾಗಿ ಪ್ರಚಾರ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಅವರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಹಿಂದೂ ಸಮಾಜದ ಐಕ್ಯತೆಯನ್ನು ಬಲವಾಗಿ ಪ್ರತಿಪಾದಿಸಿದ ಯತ್ನಾಳ್, ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೆ ಮತ ಚಲಾಯಿಸುವಂತೆ ಕರೆ ನೀಡಿದರು. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ ಯತ್ನಾಳ್, ಇವು ಜನರ ಮೇಲೆ ತೆರಿಗೆ ಹೊರೆಯನ್ನು ಹೆಚ್ಚಿಸಿವೆ ಎಂದು ಆರೋಪಿಸಿದರು. ಮರಣೋತ್ತರ ಪ್ರಮಾಣಪತ್ರದ ಶುಲ್ಕ 25 ರೂಪಾಯಿಯಿಂದ 100 ರೂಪಾಯಿಗೆ ಏರಿಕೆಯಾಗಿರುವುದನ್ನು ಮತ್ತು ಪ್ರತಿ ಯೂನಿಟ್ ವಿದ್ಯುತ್ ದರ 7 ರೂಪಾಯಿ 20 ಪೈಸೆಗೆ ಏರಿರುವುದನ್ನು ಅವರು ಉಲ್ಲೇಖಿಸಿದರು. ಯುವಕರಿಗೆ ಉದ್ಯೋಗ ಸೃಷ್ಟಿಸುವುದು ಸರ್ಕಾರದ ಆದ್ಯತೆಯಾಗಬೇಕು, ಕೇವಲ 2,000 ರೂಪಾಯಿ ನೀಡುವ ಯೋಜನೆಗಳಲ್ಲ ಎಂದು ಪ್ರತಿಪಾದಿಸಿದರು. ಸುಮಾರು ಮೂರು ಲಕ್ಷ ಸರ್ಕಾರಿ ಹುದ್ದೆಗಳು ಖಾಲಿಯಿದ್ದರೂ ಅವುಗಳನ್ನು ಭರ್ತಿ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಯತ್ನಾಳ್ ದೂರಿದರು. 2028ರ ವೇಳೆಗೆ ಬದಲಾವಣೆ ತರಲು ವೀರಣ್ಣ ಚರಂತಿಮಠ ಅವರನ್ನು ಬಹುಮತದಿಂದ ಆಯ್ಕೆ ಮಾಡುವಂತೆ ಮತದಾರರಲ್ಲಿ ಮನವಿ ಮಾಡಿದರು.
ಬೆಂಗಳೂರು, ಏಪ್ರಿಲ್ 3: ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಬೆಂಗಳೂರಿನ (Bangalore) ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು ಮತ್ತೊಂದು ಶಾಕ್ ನೀಡಿದ್ದಾರೆ. ನಕಲಿ ನಂಬರ್ ಪ್ಲೇಟ್ ಬಳಸಿ ಸರ್ಕಾರಕ್ಕೆ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಇತ್ತೀಚೆಗಷ್ಟೇ ಇದೇ ಲ್ಯಾಂಬೋರ್ಗಿನಿ ಕಾರಿನಲ್ಲಿ ಹೈ-ಸ್ಪೀಡ್ ಡ್ರಿಫ್ಟಿಂಗ್ ಸ್ಟಂಟ್ ನಡೆಸಿದ ವಿಚಾರದ ವಿಡಿಯೋ ವೈರಲ್ ಆಗಿತ್ತಲ್ಲದೆ, ಪ್ರಕರಣ ಸಹ ದಾಖಲಾಗಿತ್ತು.
ಏನಿದು ಲ್ಯಾಂಬೋರ್ಗಿನಿ ವಂಚನೆ ಪ್ರಕರಣ?
ದೆಹಲಿಯಲ್ಲಿ ಐಷಾರಾಮಿ ಲ್ಯಾಂಬೋರ್ಗಿನಿ ಕಾರನ್ನು ಖರೀದಿ ಮಾಡಿದ್ದ ರಿಕ್ಕಿ ರೈ, ಆರ್‌ಟಿಒ (RTO) ಮೂಲಕ KA 05 NR 0009 ಎಂಬ ಫ್ಯಾನ್ಸಿ ನಂಬರ್ ಪಡೆಯಲು 5 ಲಕ್ಷ ರೂಪಾಯಿ ಪಾವತಿಸಿದ್ದರು. ಆದರೆ, ಈ ನಂಬರ್ ಅನ್ನು ಅಧಿಕೃತವಾಗಿ ನೋಂದಣಿ (Registration) ಮಾಡಿಸದೆಯೇ ಕಾರಿಗೆ ನಂಬರ್ ಪ್ಲೇಟ್ ಅಳವಡಿಸಿ ರಸ್ತೆಗೆ ಇಳಿಸಿದ್ದರು. ನಿಯಮದ ಪ್ರಕಾರ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ನಂಬರ್ ಪ್ಲೇಟ್ ಬಳಸುವುದು ಕಾನೂನುಬಾಹಿರ ಹಾಗೂ ವಂಚನೆಯಾಗಿದೆ.
ದಂಡ ಮತ್ತು ತಲೆಮರೆಸಿಕೊಂಡಿದ್ದ ಆರೋಪಿ
ಈ ಅಕ್ರಮದ ಹಿನ್ನೆಲೆಯಲ್ಲಿ ಈ ಹಿಂದೆ ಪೊಲೀಸರು ಕಾರನ್ನು ಸೀಜ್ ಮಾಡಿದ್ದರು. ಕಳೆದ ಅಕ್ಟೋಬರ್‌ನಲ್ಲಿ ಆರ್‌ಟಿಒ ಅಧಿಕಾರಿಗಳು ಈ ಉಲ್ಲಂಘನೆಗಾಗಿ ಬರೋಬ್ಬರಿ 35 ಲಕ್ಷ ರೂಪಾಯಿ ದಂಡ ವಿಧಿಸಿದ್ದರು. ಇತ್ತೀಚೆಗಷ್ಟೇ ಬೆಂಗಳೂರಿನ ಅನಿಲ್ ಕುಂಬ್ಳೆ ಸರ್ಕಲ್ ರಸ್ತೆಯಲ್ಲಿ ಇದೇ ಲ್ಯಾಂಬೋರ್ಗಿನಿ ಕಾರಿನಲ್ಲಿ ಹೈ-ಸ್ಪೀಡ್ ಡ್ರಿಫ್ಟಿಂಗ್ ಸ್ಟಂಟ್ ನಡೆಸಿ ಸಾರ್ವಜನಿಕರ ಜೀವಕ್ಕೆ ಅಪಾಯ ತಂದೊಡ್ಡಿದ್ದ ಪ್ರಕರಣವೂ ಭಾರಿ ಸುದ್ದಿಯಾಗಿತ್ತು. ಈ ಘಟನೆ ಉದ್ದೇಶಪೂರ್ವಕ ಡ್ರಿಫ್ಟಿಂಗ್ ಆಗಿರದೆ, ಕಾರಿನ ಬ್ರೇಕ್ ಸಮಸ್ಯೆಯಿಂದ ಅಥವಾ ರಸ್ತೆಯ ಮರಳಿನ ಕಾರಣದಿಂದ ಉಂಟಾದ ಆಕಸ್ಮಿಕ ಸ್ಕಿಡ್ ಆಗಿದೆ ಎಂದು ರಿಕ್ಕಿ ರೈ ಪರ ವಕೀಲ ಸಮರ್ಥಿಸಿಕೊಂಡಿದ್ದರು.
ಬಾಗಲಕೋಟೆ, ಏಪ್ರಿಲ್ 3: ಬಾಗಲಕೋಟೆಯಲ್ಲಿ ಉಪಚುನಾವಣೆಯ ಕಣ ರಂಗೇರಿದ್ದು, ಬಿಜೆಪಿಯಿಂದ ಉಚ್ಚಾಟಿತರಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೇಸರಿ ಅಭ್ಯರ್ಥಿ ಪರವಾಗಿ ಅಬ್ಬರದ ಪ್ರಚಾರ ನಡೆಸಿದ್ದಾರೆ. ಶಿವಾಜಿ ಮಹಾರಾಜರ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆಯನ್ನು ಪ್ರಸ್ತಾಪಿಸಿದ ಅವರು, ಹಿಂದೂಗಳೆಲ್ಲರೂ ಒಂದಾಗುವಂತೆ ಕರೆ ನೀಡಿದರು. ಶಿವಾಜಿ ಮಹಾರಾಜರು ಇಲ್ಲದಿದ್ದರೆ ಸನಾತನ ಧರ್ಮದ ರಕ್ಷಣೆ ಸಾಧ್ಯವಾಗುತ್ತಿರಲಿಲ್ಲ. ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದವರ ಮೇಲೆ ಜೆಸಿಬಿ ಪ್ರಯೋಗ ಮಾಡಬೇಕು ಎಂದು ಗುಡುಗಿದರು.
ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಇದು ಸಾಬರ ಸರ್ಕಾರ. ಒಳಗೆ ಕೂತು ಬೆಂಕಿ ಹಚ್ಚುವ ಮುಲ್ಲಾಗಳಿಗೆ ತಿಂಗಳಿಗೆ 6 ಸಾವಿರ ಕೊಡತ್ತೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇವಲ ಒಂದು ಸಮುದಾಯದ ಪ್ರೀತ್ಯರ್ಥಕ್ಕಾಗಿ ಬಜೆಟ್‌ನಲ್ಲಿ ಸಾವಿರಾರು ಕೋಟಿ ಮೀಸಲಿಡುತ್ತಿದ್ದಾರೆ. ಹಿಂದೂ ಹೆಣ್ಣುಮಕ್ಕಳ ರಕ್ಷಣೆಗಾಗಿ ನಾವು ಈಗಲೇ ಎಚ್ಚೆತ್ತುಕೊಳ್ಳಬೇಕು ಎಂದು ಆಕ್ರೋಶ ಹೊರಹಾಕಿದರು. ಏಪ್ರಿಲ್ 9 ರಂದು ನಡೆಯುವ ಮತದಾನದಲ್ಲಿ ಪ್ರತಿಯೊಬ್ಬ ಹಿಂದೂ ಮುಂಜಾನೆ 7 ಗಂಟೆಗೆ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸುವಂತೆ ಅವರು ವಿನಂತಿಸಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಹೊಸಪೇಟೆ, ಏ,3: ಜೀವಂತವಾಗಿದ್ದರೂ ಮಹಿಳೆಯೊಬ್ಬರನ್ನು ದಾಖಲೆಗಳಲ್ಲಿ ‘ಮೃತ’ ಎಂದು ತೋರಿಸಿ, ಸರ್ಕಾರದ ಸವಲತ್ತುಗಳಿಂದ ವಂಚಿತರನ್ನಾಗಿಸಿದ ಹೊಸಪೇಟೆ ತಾಲ್ಲೂಕಿನ ಕಂದಾಯ ಅಧಿಕಾರಿಗಳ ವಿರುದ್ಧ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಸ್ವಯಂಪ್ರೇರಿತ (Suo Motu) ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೊಸಪೇಟೆ ತಾಲ್ಲೂಕಿನ ಧರ್ಮಸಾಗರ ಗ್ರಾಮದ ನಿವಾಸಿ ಎನ್. ಹಂಪಮ್ಮ ಅವರು ಈ ದುರಾಡಳಿತದ ಬಲಿಪಶು. ಅದೇ ಗ್ರಾಮದ ಎನ್. ತಿಮ್ಮಾರೆಡ್ಡಿ ಅವರ ಪತ್ನಿ ಹಂಪಮ್ಮ ಎಂಬುವವರು 2024 ರಲ್ಲಿ ನಿಧನರಾಗಿದ್ದರು. ಆದರೆ, ಅಧಿಕಾರಿಗಳು ಯಾವುದೇ ಪ್ರಾಥಮಿಕ ಪರಿಶೀಲನೆ ನಡೆಸದೆ, ದಾಖಲೆಗಳಲ್ಲಿ ಸಂತ್ರಸ್ತೆ ಎನ್. ಹಂಪಮ್ಮ ಅವರನ್ನೇ ಮೃತ ಎಂದು ನಮೂದಿಸಿದ್ದರು.
ತಾನು ಬದುಕಿದ್ದೇನೆ ಎಂದು ಸಾಬೀತುಪಡಿಸಲು ಹಂಪಮ್ಮ ಅವರು ಕಚೇರಿಯಿಂದ ಕಚೇರಿಗೆ ಅಲೆದಾಡಿದ್ದಾರೆ. ಆಧಾರ್ ಕಾರ್ಡ್‌ನಲ್ಲಿನ ದೋಷ ಸರಿಪಡಿಸಿ, ತಮಗೆ ಸಿಗಬೇಕಾದ ಸರ್ಕಾರಿ ಯೋಜನೆಗಳ ಲಾಭ ನೀಡುವಂತೆ ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಕಿಂಚಿತ್ತೂ ಗಮನ ಹರಿಸಿರಲಿಲ್ಲ. ಈ ಕುರಿತು ಏಪ್ರಿಲ್ 1 ರಂದು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯನ್ನು ಗಮನಿಸಿದ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.
ಈ ಘಟನೆಯನ್ನು ‘ದುರಾಡಳಿತ’ ಮತ್ತು ‘ಕರ್ತವ್ಯ ಲೋಪ’ ಎಂದು ಪರಿಗಣಿಸಿರುವ ಉಪ ಲೋಕಾಯುಕ್ತರು ಕೆಲವೊಂದು ನಿರ್ದೇಶನಗಳನ್ನು ನೋಡಿದ್ದಾರೆ. ಹೊಸಪೇಟೆ ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಇಒ (EO) ಮತ್ತು ಬೈಲುವದ್ದಿಗೇರಿ ಗ್ರಾಮ ಪಂಚಾಯಿತಿಯ ಪಿಡಿಒ (PDO) ಅವರಿಗೆ ನೋಟಿಸ್ ನೀಡಲಾಗಿದ್ದು, ಮೇ 20, 2026 ರಂದು ಖುದ್ದಾಗಿ ಹಾಜರಾಗಿ ವಿವರಣೆ ನೀಡುವಂತೆ ಆದೇಶಿಸಲಾಗಿದೆ. ಹಂಪಮ್ಮ ಅವರ ಆಧಾರ್ ಕಾರ್ಡ್ ದೋಷಗಳನ್ನು ಕೂಡಲೇ ಸರಿಪಡಿಸಿ, ಅವರಿಗೆ ಸವಲತ್ತುಗಳು ಸಿಗುವಂತೆ ಮಾಡಲು ತಹಶೀಲ್ದಾರ್‌ಗೆ ಸೂಚಿಸಲಾಗಿದೆ. ಪ್ರಕರಣದ ಗಾಂಭೀರ್ಯತೆಯನ್ನು ಅರಿತು, ಆದೇಶದ ಪ್ರತಿಯನ್ನು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಿಗೂ ರವಾನಿಸಲಾಗಿದೆ.
ರಾಕಿಂಗ್ ಸ್ಟಾರ್ ಯಶ್, ರಣಬೀರ್ ಕಪೂರ್, ಸನ್ನಿ ಡಿಯೋಲ್, ಸಾಯಿ ಪಲ್ಲವಿ ಸೇರಿದಂತೆ ಅನೇಕರು ‘ರಾಮಾಯಣ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಟೀಸರ್ ರಿಲೀಸ್ ಆಗಿ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಕೆಲವರು ಟೀಸರ್ ಹೊಗಳಿದರೆ ಇನ್ನೂ ಕೆಲವರು ಇದನ್ನು ಎಐ ವಿಡಿಯೋ ಎಂದು ಕರೆದಿದ್ದಾರೆ. ಹೀಗಿರುವಾಗಲೇ ರಾವಣನ ಪಾತ್ರ ಮಾಡಿದ ಯಶ್ ಅವರನ್ನು ರಣಬೀರ್ ಕಪೂರ್ ಹಾಡಿ ಹೊಗಳಿದ್ದಾರೆ.
‘ರಾಮಾಯಣ’ ಸಿನಿಮಾದಲ್ಲಿ ರಣಬೀರ್ ಕಪೂರ್ ಅವರು ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಏಪ್ರಿಲ್ 2ರಂದು ರಿಲೀಸ್ ಆದ ಟೀಸರ್ ಅಲ್ಲಿ ರಾಮನ ಪಾತ್ರವನ್ನೇ ಹೈಲೈಟ್ ಮಾಡಲಾಗಿದೆ. ಹನುಮ ಜಯಂತಿಯಂದು ಟೀಸರ್ ರಿಲೀಸ್ ಆಗಿದೆ. ಆದರೆ, ಹನುಮಂತನ ಪಾತ್ರವನ್ನೇ ತೋರಿಸಿಲ್ಲ. ಇದು ಚರ್ಚೆಗೆ ಕಾರಣ ಆಗಿದೆ. ಸಿನಿಮಾದಲ್ಲಿ ಯಶ್ ಮುಖ ತೋರಿಸದೇ ಇದ್ದರೂ ಅವರ ಪಾತ್ರ ಗಮನ ಸೆಳೆಯುವ ರೀತಿಯಲ್ಲಿ ಇದೆ.
‘ರಾಮಾಯಣ’ ಸಿನಿಮಾದಲ್ಲಿ ಯಶ್ ಪಾತ್ರ ಪ್ರಮುಖವಾಗಲಿದೆ. ಏಕೆಂದರೆ ಅವರು ಮಾಡುತ್ತಿರುವುದು ರಾವಣನ ಪಾತ್ರ. ಈ ಪಾತ್ರ ಹೇಗಿದೆ ಎಂಬುದರ ಝಲಕ್ ತೋರಿಸಲಾಗಿದೆ. ಆದರೆ, ಪಾತ್ರ ಸಂಪೂರ್ಣವಾಗಿ ರಿವೀಲ್ ಮಾಡಿಲ್ಲ. ಯಶ್ ಬಗ್ಗೆ ಹಾಗೂ ಅವರ ಜನಪ್ರಿಯತೆ ಬಗ್ಗೆ ರಣಬೀರ್ ಮಾತನಾಡಿದ್ದಾರೆ.
‘ಯಶ್ ಅವರು ಸಾಕಷ್ಟು ಸ್ಟಾರ್ಡಂ ಜೊತೆ ಬಂದಿದ್ದಾರೆ. ರಾವಣನ ಪಾತ್ರ ಮಾಡಲು ಅಷ್ಟು ಜನಪ್ರಿಯತೆ ಇರಬೇಕು. ರಾವಣನ ಬಗ್ಗೆ ಅವರಿಗೆ ಇರುವ ವ್ಯಾಖ್ಯಾನ ಬೇರೆಯದೇ ಇದೆ. ಇದನ್ನು ಪ್ರೇಕ್ಷಕರು ಎಂಜಾಯ್ ಮಾಡುತ್ತಾರೆ’ ಎಂದು ರಣಬೀರ್ ಕಪೂರ್ ಹೇಳಿದ್ದಾರೆ.
ಯಶ್ ಅವರು ಇತ್ತೀಚೆಗೆ ‘ರಾಮಾಯಣ’ ಸಿನಿಮಾದ ಡಬ್ಬಿಂಗ್ ಮುಗಿಸಿಕೊಟ್ಟಿದ್ದಾರೆ. ಕನ್ನಡದ ಜೊತೆಗೆ ಅವರು ಹಿಂದಿಯಲ್ಲೂ ಡಬ್ ಮಾಡಿದರೇ ಎಂಬ ಕುತೂಹಲ ಮೂಡಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಸಿನಿಮಾ ಈ ವರ್ಷ ದೀಪಾವಳಿಗೆ ರಿಲೀಸ್ ಆಗಲಿದೆ.
ಬೆಂಗಳೂರು, ಏಪ್ರಿಲ್ 03: ಇರಾನ್, ಇಸ್ರೇಲ್ ಮತ್ತು ಅಮೇರಿಕಾ ಯುದ್ಧದ ಪರಿಣಾಮವಾಗಿ ಎಲ್ಪಿಜಿ ಸಿಲಿಂಡರ್ ಕೊರತೆ ಹೆಚ್ಚಾಗಿದೆ. ವಾಣಿಜ್ಯ ಸಿಲಿಂಡರ್ಗಳ ಕೊರತೆ ಜೊತೆಗೆ ಗ್ರಹಬಳಕೆ ಸಿಲಿಂಡರ್ಗಳನ್ನು ಖರೀದಿಸುವಲ್ಲಿಯೂ ಹಲವರು ಅಡಚಣೆಯನ್ನು ಎದುರಿಸುತ್ತಿದ್ದಾರೆ. ಇದೇ ಕಾರಣಕ್ಕೆ ಇಂಡಕ್ಷನ್ ಸ್ಟೌವ್‌ಗಳ (Induction Stove) ಬೇಡಿಕೆ ಏರಿಕೆಯಾಗಿದ್ದು, ಆನ್ಲೈನ್ ಖರೀದಿ ಪ್ಲಾಟ್ಫಾರ್ಮ್ಗಳಲ್ಲಿ ಸ್ಟೌವ್‌ಗಳ ಮಾರಾಟ 5 ರಿಂದ 10 ಪಟ್ಟು ಹೆಚ್ಚಾಗಿದೆ. ಹೀಗಿರುವಾಗ ಹೊಸ ಇಂಡಕ್ಷನ್ ಸ್ಟವ್ ಖರೀದಿಗೂ ಮುನ್ನ ಗಮನಿಸಬೇಕಾದ ಅಂಶಗಳನ್ನು ಬೆಸ್ಕಾಂ (BESCOM) ತನ್ನ ಎಕ್ಸ್(X) ಖಾತೆಯಲ್ಲಿ ಹಂಚಿಕೊಂಡಿದೆ.
ಬೆಸ್ಕಾಂ ಹೇಳಿರುವ ಅಂಶಗಳಿವು
ಐಎಸ್‌ಐ ಪ್ರಮಾಣಿತ ಹಾಗೂ ಉತ್ತಮ ವಿದ್ಯುತ್ ದಕ್ಷತೆಯುಳ್ಳ (3 ಸ್ಟಾರ್ ಅಥವಾ ಹೆಚ್ಚಿನ ರೇಟಿಂಗ್) ಇಂಡಕ್ಷನ್ ಸ್ಟವ್ ಖರೀದಿಸಿ
ಆಟೋಮ್ಯಾಟಿಕ್ ಆಫ್ ಹಾಗೂ ಚೈಲ್ಡ್ ಲಾಕ್ ಸೌಲಭ್ಯ ಇರುವ ಇಂಡಕ್ಷನ್ ಸ್ಟವ್ ಖರೀದಿಸಿ
ಇಂಡಕ್ಷನ್ ಸ್ಟವ್ ಬಳಸಲು ಪ್ರತ್ಯೇಕ (15A ಅಥವಾ ಹೆಚ್ಚಿನ ಲೋಡ್) ಸಾಕೆಟ್ ಅಳವಡಿಸಿ
ಮನೆಯ ವೈರಿಂಗ್ ದೋಷಪೂರಿತವಾಗಿದ್ದಲ್ಲಿ ಅಥವಾ ಸಮರ್ಪಕ ಅರ್ಥಿಂಗ್ ವ್ಯವಸ್ಥೆ ಇಲ್ಲದಿದ್ದಲ್ಲಿ, ಇಂಡಕ್ಷನ್ ಸ್ಟವ್ ಬಳಸದಿರಿ
3-ಪಿನ್ ಪ್ಲಗ್ ಇರುವ ಇಂಡಕ್ಷನ್ ಸ್ಟವ್‌ಗಳನ್ನೇ ಖರೀದಿಸಿ
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಈ ಅಂಶಗಳು ನೆನಪಿನಲ್ಲಿರಲಿ
— Namma BESCOM | ನಮ್ಮ ಬೆಸ್ಕಾಂ (@NammaBESCOM) April 2, 2026
ಉತ್ತಮ ಇಂಡಕ್ಷನ್ ಕುಕ್ವೇರ್ ಆಯ್ಕೆ ಮಾಡುವುದು ಹೇಗೆ?
ಇಂಡಕ್ಷನ್ ಕುಕ್‌ಟಾಪ್ ಖರೀದಿಸುವಾಗ ಅದರ ಪವರ್ ರೇಟಿಂಗ್ ಬಹಳ ಮುಖ್ಯ. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ 1200Wರಿಂದ 2000Wವರೆಗೆ ಸಾಮರ್ಥ್ಯದ ಮಾದರಿಗಳು ಲಭ್ಯವಿದ್ದು, ಹೆಚ್ಚಿನ ವಾಟ್‌ನ ಸಾಧನಗಳು ಆಹಾರವನ್ನು ವೇಗವಾಗಿ ಬೇಯಿಸಲು ಸಹಕಾರಿ. ದಿನನಿತ್ಯ ಬಳಕೆಗೆ ಹೆಚ್ಚಿನ ಪವರ್ ಇರುವ ಕುಕ್‌ಟಾಪ್ ಉತ್ತಮ ಆಯ್ಕೆ ಎಂದು ತಜ್ಞರು ಹೇಳುತ್ತಾರೆ.
ಇದಲ್ಲದೆ, ಹಲವಾರು ಇಂಡಕ್ಷನ್ ಸ್ಟೌವ್‌ಗಳಲ್ಲಿ ಬಾಯ್ಲಿಂಗ್, ಫ್ರೈಯಿಂಗ್, ಕರ್ರಿ, ಅಕ್ಕಿ ಹಾಗೂ ಹಾಲು ಮುಂತಾದ ಪೂರ್ವನಿಗದಿತ (preset) ಆಯ್ಕೆಗಳು ಇರುತ್ತವೆ. ಇವು ತಾಪಮಾನ ಮತ್ತು ವಿದ್ಯುತ್ ಬಳಕೆಯನ್ನು ಸ್ವಯಂಚಾಲಿತವಾಗಿ ನಿಯಂತ್ರಿಸುತ್ತವೆ.
ಸ್ಟವ್ ಖರೀದಿಸುವ ಮೊದಲು ಸುರಕ್ಷತಾ ವೈಶಿಷ್ಟ್ಯಗಳಾದ ಆಟೋ ಶಟ್‌ಆಫ್, ಓವರ್‌ಹೀಟ್ ಪ್ರೊಟೆಕ್ಷನ್, ಚೈಲ್ಡ್ ಲಾಕ್ ಮತ್ತು ಪ್ಯಾನ್ ಡಿಟೆಕ್ಷನ್ ಇರುವುದನ್ನು ಖಚಿತಪಡಿಸಿಕೊಳ್ಳುವುದು ಅಗತ್ಯ. ಇವು ಅಪಘಾತಗಳನ್ನು ತಡೆಗಟ್ಟಲು ಸಹಕಾರಿ. ವಿದ್ಯುತ್ ಸಂಬಂಧಿತ ಅವಘಡಗಳು ಸಂಭವಿಸಿದ್ದಲ್ಲಿ, ಕೂಡಲೇ ಬೆಸ್ಕಾಂ 24×7 ಸಹಾಯವಾಣಿ 1912 ಕ್ಕೆ ಕರೆಮಾಡಿ.
ಜೀ ಕನ್ನಡದಲ್ಲಿ ‘ಸರಿಗಮಪ ಲಿಟ್ಲ್ ಚಾಂಪ್ಸ್’ ಪ್ರಸಾರ ಕಾಣುವುದರಲ್ಲಿ ಇದೆ. ಈ ಶೋನಲ್ಲಿ ಟ್ಯಾಲೆಂಟ್ಗಿಂತ ಹೆಚ್ಚಾಗಿ ಕಷ್ಟದಲ್ಲಿರುವವರಿಗೆ ಅವಕಾಶ ಕೊಟ್ಟು ಟಿಆರ್ಪಿ ಪಡೆದುಕೊಳ್ಳಲಾಗುತ್ತದೆ ಎಂಬ ಆರೋಪ ಇದೆ. ಇದಕ್ಕೆ ತಿರುಗೇಟು ಕೊಡಲು ಪ್ರೋಮೋ ಒಂದನ್ನು ಮಾಡಲಾಗಿದೆ. ಈ ಪ್ರೋಮೋದಲ್ಲಿ ಎಲ್ಲರಿಗೂ ಖಡಕ್ ಆಗಿ ಉತ್ತರಿಸಲಾಗಿದೆ. ಜನರ ಕಲ್ಪನೆ ಮತ್ತು ರಿಯಾಲಿಟಿ ವಿವರಿಸಲಾಗಿದೆ.
ಬೆಂಗಳೂರು (ಏ. 03): ಗುರುವಾರ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2026 ರ ಆರನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 65 ರನ್‌ಗಳಿಂದ ಸೋಲಿಸಿತು. ಋತುವಿನ ಮೊದಲ ಗೆಲುವು ದಾಖಲಿಸಿದ ನಂತರ, ನಾಯಕ ಇಶಾನ್ ಕಿಶನ್ ತಮ್ಮ ಆಟಗಾರರನ್ನು ಹಾಡಿಹೊಗಳಿದ್ದಾರೆ. ಮುಖ್ಯವಾಗಿ ಆರಂಭಿಕ ಜೋಡಿಗಳಾದ ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ನಮ್ಮ ತಂಡಕ್ಕೆ ಪಂದ್ಯವನ್ನು ತುಂಬಾ ಸುಲಭಗೊಳಿಸಿದರು ಎಂದು ಹೇಳಿದ್ದಾರೆ.
ಕೆಕೆಆರ್ ವಿರುದ್ಧದ ಗೆಲುವಿನ ಬಳಿಕ ಇಶಾನ್ ಕಿಶನ್ ಹೇಳಿದ್ದೇನು?
ಪಂದ್ಯದ ನಂತರ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ಇಶಾನ್ ಕಿಶನ್, ಅವರು ಇಡೀ ತಂಡದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು. “ಎಲ್ಲರ ಪ್ರಯತ್ನದಿಂದ ನನಗೆ ಸಂತೋಷವಾಯಿತು. ಪಿಚ್ ಅಷ್ಟೊಂದು ಚೆನ್ನಾಗಿಲ್ಲ ಎಂದು ನಾನು ಭಾವಿಸುತ್ತೇನೆ. ಹೆಡ್ ಮತ್ತು ಅಭಿಷೇಕ್ ನಮಗೆ ಆಟವನ್ನು ಸುಲಭಗೊಳಿಸಿದರು. ಇದು ಸಂಪೂರ್ಣ ತಂಡದ ಪ್ರಯತ್ನವಾಗಿತ್ತು. ವಿಕೆಟ್ ಪಡೆಯುವುದು ನಮ್ಮ ಯೋಜನೆಯಾಗಿತ್ತು. ಹರ್ಷ್ ಆ ಚೆಂಡನ್ನು ಬೌಲ್ ಮಾಡಿದ್ದು ಅದ್ಭುತವಾಗಿತ್ತು, ಮತ್ತು ನಾವು ಆ ವಿಕೆಟ್ ಪಡೆದಿದ್ದು ಅದೃಷ್ಟವಾಗಿತ್ತು.”
“ಹರ್ಷ್ ತಮ್ಮ ದೇಶೀಯ ತಂಡಕ್ಕೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ನಾನು ಶಿವಾಂಗ್ ಅವರ ಕೊಡುಗೆ ಮರೆಯಲ್ಲ; ಅವರು ಅಸಾಧಾರಣವಾಗಿ ಉತ್ತಮ ಬೌಲಿಂಗ್ ಮಾಡಿದರು, ಉತ್ತಮ ಆತ್ಮವಿಶ್ವಾಸದಿಂದ ಬೌಲಿಂಗ್ ಮಾಡಿದರು. ಇಂದಿನ ಪಂದ್ಯದಲ್ಲಿ ಶಿವಾಂಗ್ ಅತ್ಯುತ್ತಮ ಕೆಲಸ ಮಾಡಿ ತಂಡಕ್ಕೆ ಸಹಕಾರ ನೀಡಿದರು” ಎಂದು ಕಿಶನ್ ಹೇಳಿದ್ದಾರೆ.
ಗೆಲುವಿನ ಹೊರತಾಗಿಯೂ, ಮುಂಬರುವ ಪಂದ್ಯಗಳಿಗೆ ತಂಡವು ತನ್ನ ಫೀಲ್ಡಿಂಗ್ ಅನ್ನು ಸುಧಾರಿಸಬೇಕಾಗಿದೆ ಎಂದು ಇಶಾನ್ ಕಿಶನ್ ಅಭಿಪ್ರಾಯಪಟ್ಟಿದ್ದಾರೆ. “ಫೀಲ್ಡಿಂಗ್ ವಿಭಾಗದಲ್ಲಿ ತಂಡವಾಗಿ ನಾವು ಕೆಲಸ ಮಾಡಬೇಕಾಗಿದೆ. 10-20 ರನ್‌ಗಳು ದೊಡ್ಡ ವ್ಯತ್ಯಾಸವನ್ನುಂಟುಮಾಡಬಹುದು” ಎಂದು ಅವರು ಹೇಳಿದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 226 ರನ್ ಗಳಿಸಿತು. ತಂಡದ ಪರವಾಗಿ ಹೆನ್ರಿಕ್ ಕ್ಲಾಸೆನ್ 52, ಅಭಿಷೇಕ್ ಶರ್ಮಾ 48 ಮತ್ತು ಟ್ರಾವಿಸ್ ಹೆಡ್ 46 ರನ್ ಗಳಿಸಿದರು, ನಿತೀಶ್ ರೆಡ್ಡಿ 24 ಎಸೆತಗಳಲ್ಲಿ 39 ರನ್ ಗಳಿಸಿದರು. ಇದಕ್ಕೆ ಉತ್ತರವಾಗಿ, ಕೋಲ್ಕತ್ತಾ ನೈಟ್ ರೈಡರ್ಸ್ 161 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಪರ ಅಂಗ್ಕ್ರಿಶ್ ರಘುವಂಶಿ 52 ರನ್ ಗಳಿಸಿದರೆ, ರಿಂಕು ಸಿಂಗ್ 35 ರನ್ ಗಳಿಸಿದರು. ನಿತೀಶ್ ಕುಮಾರ್ ರೆಡ್ಡಿ 39 ರನ್ಸ್ ಮತ್ತು ಎರಡು ವಿಕೆಟ್ ಕಿತ್ತ ಪರಿಣಾಮ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿದರು.