Category Archives: Blog

Your blog category

ಭಾರತೀಯ ಪ್ರಜೆಗಳು ಅಮೆರಿಕದಲ್ಲಿ ಎಷ್ಟು ಸಮಯ ಉಳಿಯಬಹುದು?ವೀಸಾ ಮುಕ್ತಾಯದ ಬಗ್ಗೆ ಸ್ಪಷ್ಟನೆ ಇಲ್ಲಿದೆ – Kannada News | How long can Indian visitors stay in US? Embassy clarification on visa expiry date

ನವದೆಹಲಿ, ಡಿಸೆಂಬರ್ 18: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ವಲಸಿಗರ ಮೇಲಿನ ಕಠಿಣ ಕ್ರಮದ ಮಧ್ಯೆ ಭಾರತದಲ್ಲಿನ ಅಮೆರಿಕದ ರಾಯಭಾರ ಕಚೇರಿಯು ವಿದೇಶಿಗರು ಅಮೆರಿಕದಲ್ಲಿ ಎಷ್ಟು ದಿನಗಳು ಉಳಿಯಬಹುದು? ಎಂಬುದಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ಬಹಿರಂಗಗೊಳಿಸಿದೆ. ಈ ಬಗ್ಗೆ ಮಾಡಿರುವ ಎಕ್ಸ್​ ಪೋಸ್ಟ್‌ನಲ್ಲಿ ರಾಯಭಾರ ಕಚೇರಿಯು ಅಮೆರಿಕದಲ್ಲಿ ವಿಸಿಟರ್​​ಗಳ ವಾಸ್ತವ್ಯದ ಅವಧಿಯು ಅವರ ವೀಸಾ ಮುಕ್ತಾಯ ದಿನಾಂಕದ ಪ್ರಕಾರವಾಗಿರುವುದಿಲ್ಲ ಎಂದು ಹೇಳಿದೆ.

“ಅಂತಾರಾಷ್ಟ್ರೀಯ ವಿಸಿಟರ್​​ಗಳಿಗೆ ಅಮೆರಿಕದಲ್ಲಿ ಉಳಿಯಲು ಅನುಮತಿಸಲಾದ ಸಮಯವನ್ನು ಅವರ ಆಗಮನದ ನಂತರ ಕಸ್ಟಮ್ಸ್ ಮತ್ತು ಗಡಿ ರಕ್ಷಣಾ ಅಧಿಕಾರಿ ನಿರ್ಧರಿಸುತ್ತಾರೆ. ವೀಸಾ ಮುಕ್ತಾಯದ ದಿನಾಂಕಕ್ಕೂ ಅವರು ಅಮೆರಿಕದಲ್ಲಿ ಉಳಿಯಲು ಇರುವ ಗಡುವಿಗೂ ಸಂಬಂಧವಿಲ್ಲ. ವೀಸಾ ಮುಕ್ತಾಯದ ದಿನಾಂಕಕ್ಕೂ ಮೊದಲೇ ಅವರು ಅಮೆರಿಕ ಬಿಟ್ಟು ಹೊರಡಬೇಕಾಗಬಹುದು. ನೀವು ಎಷ್ಟು ಕಾಲ ಉಳಿಯಬಹುದು ಎಂಬುದನ್ನು ನೋಡಲು, https://i94.cbp.dhs.gov ನಲ್ಲಿ ನಿಮ್ಮ I-94 ‘Admit Until Date’ ಅನ್ನು ಪರಿಶೀಲಿಸಿ” ಎಂದು ರಾಯಭಾರ ಕಚೇರಿ ಟ್ವೀಟ್ ಮಾಡಿದೆ.

ಇದನ್ನೂ ಓದಿ: ಸತ್ತ ಆರ್ಥಿಕತೆ ಎಂದಿದ್ದ ಟ್ರಂಪ್​ಗೆ ತಕ್ಕ ಉತ್ತರ; ನವೆಂಬರ್​ನಲ್ಲಿ ಅಮೆರಿಕಕ್ಕೆ ಭಾರತದ ರಫ್ತು ಭರ್ಜರಿ ಏರಿಕೆ

ಅಮೆರಿಕದ ಹೆಚ್ಚಿನ ವಿಸಿಟರ್​​ಗಳಿಗೆ ಕಡ್ಡಾಯವಾಗಿರುವ I-94 ಫಾರ್ಮ್ ‘admit Until date’ ಮಾಹಿತಿಯನ್ನು ಹೊಂದಿರುತ್ತದೆ. ಒಬ್ಬ ವ್ಯಕ್ತಿಯು ಅಮೆರಿಕದ ನೆಲದಲ್ಲಿ ಉಳಿಯಬಹುದಾದ ಕೊನೆಯ ದಿನಾಂಕವನ್ನು ಇದು ತೋರಿಸುತ್ತದೆ. ಪ್ರಯಾಣಿಕರು ಗಮನಿಸಬೇಕಾದ ಅಂಶವೆಂದರೆ ಆ ದಿನಾಂಕವು ಅವರ ವೀಸಾ ಮುಕ್ತಾಯ ದಿನಾಂಕದೊಂದಿಗೆ ಹೊಂದಿಕೆಯಾಗುವುದಿಲ್ಲ. ಅದನ್ನು ಅವರು ಅಮೆರಿಕದ ಗಡಿಯನ್ನು ತಲುಪಿದ ನಂತರ ಕಸ್ಟಮ್ಸ್ ಅಧಿಕಾರಿ ನಿರ್ಧರಿಸುತ್ತಾರೆ.

ಇದನ್ನೂ ಓದಿ: ಅಮೌಂಟು, ಟ್ಯಾಲೆಂಟು ಎರಡೂ ಇದ್ರೆ ಮಾತ್ರ ತೆರೆಯುತ್ತೆ ಅಮೆರಿಕದ ಗೇಟು; ಇಲ್ಲಿದೆ ಟ್ರಂಪ್ ಗೋಲ್ಡ್ ಕಾರ್ಡ್ ವೀಸಾ ರೇಟು

ಸಾಮಾನ್ಯವಾಗಿ ವಿಮಾನ ನಿಲ್ದಾಣ ಅಥವಾ ಬಂದರು ಮೂಲಕ ಅಮೆರಿಕಕ್ಕೆ ಆಗಮಿಸುವ ವಿದೇಶಿ ಪ್ರಯಾಣಿಕರಿಗೆ ಕಸ್ಟಮ್ಸ್ ಮತ್ತು ಗಡಿ ಪೊಲೀಸ್ ಅಧಿಕಾರಿ ಎಲೆಕ್ಟ್ರಾನಿಕ್ I-94 ಫಾರ್ಮ್ ಅನ್ನು ಒದಗಿಸುತ್ತಾರೆ. ಈ ವ್ಯಕ್ತಿಗಳು ಇನ್ನು ಮುಂದೆ I-94 ಗೆ ಅರ್ಜಿ ಸಲ್ಲಿಸಲು ವೆಬ್‌ಸೈಟ್ ಅನ್ನು ಬಳಸಬೇಕಾಗಿಲ್ಲ. ಆದರೆ, ಭೂಮಿ ಅಥವಾ ಹಡಗಿನ ಮೂಲಕ ಅಮೆರಿಕವನ್ನು ಪ್ರವೇಶಿಸುವವರು ತಾತ್ಕಾಲಿಕ I-94 ಗೆ ಅರ್ಜಿ ಸಲ್ಲಿಸಲು ವೆಬ್‌ಸೈಟ್ ಅನ್ನು ಬಳಸಬೇಕಾಗುತ್ತದೆ. ಹೀಗಾಗಿ ಅದಾದ ನಂತರ ಪ್ರವೇಶದ ಹಂತದಲ್ಲಿ ಅವರು ಅಮೆರಿಕದಲ್ಲಿ ವಾಸವಾಗುವ ಗಡುವಿನ ಸಮಯವನ್ನು ನಿರ್ಧರಿಸಲಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಹಿರಿಯ ನಟನ ‘ವಾರಣಾಸಿ’ ಸಿನಿಮಾದಿಂದ ಹೊರಗಟ್ಟಿದರೇ ರಾಜಮೌಳಿ – Kannada News | SS Rajamouli replaces Bollywood actor Rajath Kapoor from Varanasi movie

ರಾಜಮೌಳಿ (Rajamouli) ಈಗ ಪ್ಯಾನ್ ವರ್ಲ್ಡ್ ನಿರ್ದೇಶಕ. ಅವರ ಸಿನಿಮಾನಲ್ಲಿ ಸಣ್ಣ ಪಾತ್ರದಲ್ಲಾಗಲೂ ನಟಿಸಲು ದೊಡ್ಡ ದೊಡ್ಡ ನಟರೇ ಸಾಲುಗಟ್ಟಿ ನಿಂತಿದ್ದಾರೆ. ರಾಜಮೌಳಿ ಸಿನಿಮಾನಲ್ಲಿ ಸಣ್ಣ ಪಾತ್ರದಲ್ಲಿ ನಟಿಸಲು ಸಹ ದೊಡ್ಡ ಸಿನಿಮಾಗಳನ್ನೇ ಕೈಬಿಡಲು ರೆಡಿ ಇದ್ದಾರೆ. ಅವರ ಸಿನಿಮಾನಲ್ಲಿ ನಟಿಸಲು ಅವಕಾಶ ಸಿಗುವುದೇ ಅದೃಷ್ಟವೆಂದು ಭಾವಿಸಲಾಗುತ್ತಿದೆ. ಹೀಗಿರುವಾಗ ಹಿಂದಿಯ ಜನಪ್ರಿಯ ಹಿರಿಯ ನಟರೊಬ್ಬರಿಗೆ ರಾಜಮೌಳಿ ತಮ್ಮ ಸಿನಿಮಾನಲ್ಲಿ ಅವಕಾಶ ನೀಡಿದ್ದರು. ಆದರೆ ಈಗ ಸಿನಿಮಾದಿಂದ ತೆಗೆದು ಹಾಕಿದ್ದಾರೆ.

ಹಿಂದಿ ಸಿನಿಮಾ ಮತ್ತು ಟಿವಿ ಎರಡೂ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ರಜತ್ ಕಪೂರ್ ಅವರು ‘ವಾರಣಾಸಿ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಸಿನಿಮಾನಲ್ಲಿ ನಾಯಕ ಮಹೇಶ್ ಬಾಬು ಅವರ ತಂದೆಯ ಪಾತ್ರದಲ್ಲಿ ರಜತ್ ಕಪೂರ್ ನಟಿಸಲಿದ್ದಾರೆ. ಆದರೆ ಇದೀಗ ರಾಜಮೌಳಿ ಅವರು ರಜತ್ ಕಪೂರ್ ಅವರನ್ನು ಸಿನಿಮಾದಿಂದ ಕೈಬಿಟ್ಟಿದ್ದಾರಂತೆ. ಇದಕ್ಕೆ ಇಬ್ಬರ ನಡುವೆ ಮೂಡಿರುವ ಭಿನ್ನಾಭಿಪ್ರಾಯವೇ ಕಾರಣ ಎನ್ನಲಾಗುತ್ತಿದೆ.

ಇದನ್ನೂ ಓದಿ:‘ವಾರಣಾಸಿ’ ಸಿನಿಮಾದಲ್ಲಿ ಕನ್ನಡದ ಖ್ಯಾತ ಹೀರೋಗೆ ಅವಕಾಶ ಕೊಟ್ಟ ರಾಜಮೌಳಿ

ರಜತ್ ಕಪೂರ್ ನಟರಾಗಿರುವ ಜೊತೆಗೆ ಬಾಲಿವುಡ್​ನ ಜನಪ್ರಿಯ ನಿರ್ದೇಶಕ ಸಹ. ಅವರ ಮೂರು ಸಿನಿಮಾಗಳು ರಾಷ್ಟ್ರಪ್ರಶಸ್ತಿಯನ್ನು ಸಹ ಪಡೆದುಕೊಂಡಿವೆ. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕರೂ ಆಗಿರುವ ರಜತ್ ಕಪೂರ್ ಅವರು, ರಾಜಮೌಳಿ ಅವರು ತಮ್ಮ ಪಾತ್ರವನ್ನು ಪ್ರಸ್ತುತ ಪಡಿಸುತ್ತಿರುವ ರೀತಿಯ ಬಗ್ಗೆ ತಕರಾರು ತೆಗೆದಿದ್ದರಂತೆ. ರಾಜಮೌಳಿ ಹಾಗೂ ರಜತ್ ಕಪೂರ್ ಅವರ ನಡುವೆ ಈ ಬಗ್ಗೆ ಸಾಕಷ್ಟು ಚರ್ಚೆಗಳು ಸಹ ಸೆಟ್​​ನಲ್ಲಿ ನಡೆದಿವೆ ಎನ್ನಲಾಗುತ್ತಿದೆ. ಆದರೆ ಅಂತಿಮವಾಗಿ ರಾಜಮೌಳಿ ಅವರು ಕಠಿಣ ನಿರ್ಧಾರ ತಳೆದಿದ್ದು ರಜತ್ ಕಪೂರ್ ಅವರನ್ನು ಸಿನಿಮಾದಿಂದ ಹೊರಗಿಟ್ಟಿದ್ದಾರೆ.

ತಾವು ಅಂದುಕೊಂಡಂತೆ ಸಿನಿಮಾ ಮೂಡಿಬರಲು ಏನು ಬೇಕಾದರೂ ಮಾಡುವ ರಾಜಮೌಳಿ, ಇದೀಗ ತಾವಂದುಕೊಂಡಂತೆ ಪಾತ್ರ ಮೂಡಿಬರುತ್ತಿಲ್ಲ, ನಟರಿಂದ ನಟನೆ ಹೊಮ್ಮುತ್ತಿಲ್ಲ ಎಂದಾಗ ಸಹಜವಾಗಿಯೇ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಹಿಂದೆ ಸಹ ಕೆಲವು ಬಾರಿ ಹೀಗೆ ಮಾಡಿದ್ದಿದೆ. ‘ಆರ್​​ಆರ್​​ಆರ್’ ಸಿನಿಮಾನಲ್ಲಿ ಆಲಿಯಾ ಭಟ್ ಅವರ ನಟನೆಯ ಹಲವು ದೃಶ್ಯಗಳನ್ನು ರಾಜಮೌಳಿ ಚಿತ್ರೀಕರಿಸಿಕೊಂಡಿದ್ದರು, ಆದರೆ ಸಿನಿಮಾದ ವೇಗಕ್ಕೆ ಅವು ತೊಡಕಾಗುತ್ತಿವೆ ಎಂದು ಡಿಲೀಟ್ ಮಾಡಿದ್ದರು. ಅದೇ ಸಿನಿಮಾನಲ್ಲಿ ಮಕರಂದ್ ದೇಶಪಾಂಡೆ ಅವರ ಸಾಕಷ್ಟು ದೃಶ್ಯಗಳನ್ನು ಸಹ ಶೂಟ್ ಮಾಡಲಾಗಿತ್ತು, ಆದರೆ ಅವನ್ನೂ ಸಹ ಡಿಲೀಟ್ ಮಾಡಿದ್ದರು ರಾಜಮೌಳಿ.

‘ವಾರಣಾಸಿ’ ಸಿನಿಮಾನಲ್ಲಿ ಮಹೇಶ್ ಬಾಬು ನಾಯಕರಾಗಿದ್ದು, ಪ್ರಿಯಾಂಕಾ ಚೋಪ್ರಾ ನಾಯಕಿ. ಪೃಥ್ವಿರಾಜ್ ಸುಕುಮಾರ್ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಆರ್ ಮಾಧವನ್ ಸಹ ನಟಿಸುತ್ತಿದ್ದಾರೆ. ಇದೇ ಸಿನಿಮಾನಲ್ಲಿ ಹಾಲಿವುಡ್​ನ ಸ್ಟಾರ್ ನಟರೊಬ್ಬರು ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

BPL ಕಾರ್ಡ್​​ದಾರರಿಗೆ ಶೀಘ್ರವೇ ಗುಡ್​​ನ್ಯೂಸ್​?: ಆದಾಯ ಮಿತಿ ಪರಿಷ್ಕರಣೆಗೆ ಚಿಂತನೆ – Kannada News | Karnataka BPL Card Income Limit Revision: Good News for Beneficiaries?

ಬೆಳಗಾವಿ, ಡಿಸೆಂಬರ್​​ 18: ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಪಡೆಯಲು ಇರುವ ಆದಾಯ ಮಿತಿ ಪರಿಷ್ಕರಣೆಗೆ ಚಿಂತನೆ ನಡೆದಿದೆ ಎಂದು ಆಹಾರ ಸಚಿವ ಕೆ. ಹೆಚ್. ಮುನಿಯಪ್ಪ ತಿಳಿಸಿದ್ದಾರೆ. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೇಂದ್ರ ಸರ್ಕಾರ ಬಿಪಿಎಲ್ ಕಾರ್ಡ್​​ದಾರರ ಆದಾಯವನ್ನು 1.20ಲಕ್ಷ ರೂ.ಗೆ ಮಿತಿಗೊಳಿಸಿದೆ. ಆದರೆ ಕೂಲಿ ಕೆಲಸಗಾರರಿಗೂ ಪ್ರತಿದಿನ 500 ರೂ. ದೊರೆಯುತ್ತದೆ. ಇದರ ಆಧಾರದಲ್ಲಿ ಅವರ ಆದಾಯವೂ ವರ್ಷಕ್ಕೆ 1.80 ಲಕ್ಷ ರೂ. ಗಿಂತ ಅಧಿಕವಾಗುತ್ತಿದೆ. ಹೀಗಾಗಿ ಈ ಬಗ್ಗೆ ಪರಿಷ್ಕರಣೆ ಕುರಿತು ಚಿಂತನೆ ನಡೆದಿದೆ ಎಂದಿದ್ದಾರೆ.

ಕೇಂದ್ರ ಸರ್ಕಾರ ರಾಜ್ಯದಲ್ಲಿ 7,75,206 ಶಂಕಾಸ್ಪದ ಪಡಿತರ ಫಲಾನುಭವಿಗಳನ್ನು ಗುರುತಿಸಿದೆ. ರಾಜ್ಯದಲ್ಲಿ 4.53 ಲಕ್ಷ ಬಿಪಿಎಲ್ ಹಾಗೂ 1.25 ಲಕ್ಷ ಎಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿವೆ . ಇಲ್ಲಿನ ಜನಸಂಖ್ಯೆಗೆ ಹೊಲಿಸಿದರೆ ಶೇ.73ರಷ್ಟು ಕುಟುಂಬಗಳು ಬಿಪಿಎಲ್ ಕಾರ್ಡ್​ ಪಡೆದಿವೆ. ರಾಜ್ಯವು ಜಿಎಸ್ಟಿ , ಆದಾಯ ತೆರಿಗೆ ಪಾವತಿಯಲ್ಲಿ ದೇಶದಲ್ಲಿ ಮುಂಚೂಣಿಯಲ್ಲಿದೆ. ಈ ಅಂಶ ಪರಿಗಣಿಸಿದರೆ ಬಿಪಿಎಲ್ ಕುಟುಂಬಗಳ ಪ್ರಮಾಣ ಶೇ.50ರಷ್ಟು ಇರಬೇಕಿತ್ತು. ಆದರೆ ಅದಕ್ಕೂ ಹೆಚ್ಚಿನ ಕುಟುಂಬ ಬಿಪಿಎಲ್ ಕಾರ್ಡ್​​ ಪಡೆದುಕೊಂಡಿವೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಅನರ್ಹ ಬಿಪಿಎಲ್ ಕಾರ್ಡ್​ದಾರರಿಗೆ ಶಾಕ್ ನೀಡಲಿದೆ ಆಹಾರ ಇಲಾಖೆ; 12 ಲಕ್ಷ ಪಡಿತರ ಚೀಟಿ ರದ್ದತಿಗೆ ತೆರೆಮರೆಯ ಸಿದ್ಧತೆ

ರಾಜ್ಯದಲ್ಲಿ ಆದ್ಯತಾ ಪಡಿತರ ಚೀಟಿಗಳನ್ನು ಪಡೆಯುವ ಹಾಗೂ ಹೊರಗಿಡುವ ಬಗ್ಗೆ 2017ರಲ್ಲಿ ಮಾನದಂಡಗಳನ್ನು ರೂಪಿಸಲಾಗಿದೆ. ಇದರ ಅನ್ವಯ ಸರ್ಕಾರಿ, ಅನುದಾನಿತ ಸಂಸ್ಥೆಗಳು, ಮಂಡಳಿ, ನಿಗಮ, ಸ್ವಾಯತ್ತ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ನೌಕರರು, ಆದಾಯ, ಸೇವಾ ಹಾಗೂ ಜಿಎಸ್ಟಿ ತೆರಿಗೆ ಪಾವತಿ ಮಾಡುವ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ನೀಡಲಾಗುವುದಿಲ್ಲ. ಆದಾಯ ಮಿತಿ ಪರಿಷ್ಕರಣೆಗೆ ಚಿಂತನೆ ನಡೆಸಿರುವುದರಿಂದ, ತಾತ್ಕಾಲಿಕವಾಗಿ ಯಾವುದೇ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸದ್ಯ ವೈದ್ಯಕೀಯ ಆಧಾರದಲ್ಲಿ ಮಾತ್ರ ಬಿಪಿಎಲ್ ಕಾರ್ಡ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ಕುಟುಂಬದ ಸದಸ್ಯರು ನೌಕರಿಗೆ ಸೇರಿದ್ದಾರೆ ಎನ್ನುವ ಕಾರಣದಿಂದ ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ, ಬಾಧಿತ ಕುಟುಂಬದವರು ನೌಕರಿಗೆ ಸೇರಿದವರು ತಮ್ಮೊಂದಿಗೆ ವಾಸವಾಗಿಲ್ಲ ಎನ್ನುವ ಕಾರಣ ನೀಡಿದಲ್ಲಿ, ಸಂಬಂಧಪಟ್ಟ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಿದರೆ 15 ದಿನದ ಒಳಗಾಗಿ ಬಿಪಿಎಲ್ ಕಾರ್ಡ್ ಪುನಃ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Manufacturing sector: ಮತ್ತೆ ವಿದೇಶದಲ್ಲಿ ಭಾರತದ ವಿರುದ್ಧ ರಾಹುಲ್ ಧ್ವನಿ; ಸತ್ಯ ಎಷ್ಟು, ಸುಳ್ಳೆಷ್ಟು? – Kannada News | Rahul Gandhi says Indian manufacturing declining, Amit Malviya and others counter with data

ನವದೆಹಲಿ, ಡಿಸೆಂಬರ್ 18: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ವಿದೇಶಕ್ಕೆ ಹೋದಾಗೆಲ್ಲಾ ಭಾರತದ ಸರ್ಕಾರ ಹಾಗೂ ದೇಶದ ಪರಿಸ್ಥಿತಿ ಬಗ್ಗೆ ಟೀಕೆ ಮಾಡುವುದು ಈಗ ಸಾಮಾನ್ಯವಾಗಿ ಹೋಗಿದೆ. ಜರ್ಮನಿಯ ಮ್ಯೂನಿಕ್ ನಗರದಲ್ಲಿ ಬಿಎಂಡಬ್ಲ್ಯು ಕಾರ್ ಕಂಪನಿಯ ಫ್ಯಾಕ್ಟರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಭಾರತದಲ್ಲಿ ಮ್ಯಾನುಫ್ಯಾಕ್ಚರಿಂಗ್ ಕಾರ್ಯ ಇಳಿಮುಖವಾಗಿದೆ ಎಂದು ಹೇಳಿ ಹೊಸ ವಿವಾದ ಹುಟ್ಟುಹಾಕಿದ್ದಾರೆ.

ಬಿಎಂಡಬ್ಲ್ಯುದ ಮುಖ್ಯ ಕಚೇರಿ ಮ್ಯೂನಿಕ್ ನಗರದಲ್ಲೇ ಇದೆ. ಅಲ್ಲೇ ಅದರ ವೆಲ್ಟ್ ಅಂಡ್ ಬಿಎಂಡಬ್ಲ್ಯು ಮ್ಯಾನುಫ್ಯಾಕ್ಚರಿಂಗ್ ಘಟಕ ಇದೆ. ಅಲ್ಲಿರುವ ಕೆಲಸಗಳನ್ನು ಅವಲೋಕಿಸಿದ ಅವರು, ನಂತರ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಅದೇ ಘಟಕದಲ್ಲಿ ಟಿವಿಎಸ್ ಹಾಗೂ ಬಿಎಂಡಬ್ಲ್ಯು ಜಂಟಿಯಾಗಿ 450 ಸಿಸಿ ಬೈಕ್ ಅಭಿವೃದ್ಧಿಪಡಿಸುತ್ತಿರುವುದನ್ನು ಕಂಡು ಖುಷಿ ವ್ಯಕ್ತಪಡಿಸಿದ್ದಾರೆ. ಬಳಿಕ ಭಾರತದಲ್ಲಿ ಉತ್ಪಾದನಾ ವಲಯ ಕುಸಿಯುತ್ತಿರುವುದಕ್ಕೆ ಖೇದ ವ್ಯಕ್ತಪಡಿಸಿದ್ದಾರೆ. ಅವರ ಈ ಅನಿಸಿಕೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಲವರು ದತ್ತಾಂಶ ಸಹಿತವಾಗಿ ಉತ್ತರ ಕೊಟ್ಟಿದ್ದಾರೆ.

ಇದನ್ನೂ ಓದಿ: ಓಮನ್ ಜೊತೆಗಿನ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದಿಂದ ಭಾರತಕ್ಕೆ ಆಗುವ ಲಾಭಗಳೇನು?

ಭಾರತದಲ್ಲಿ ಉತ್ಪಾದನೆ ಕಡಿಮೆ ಆಗಿದೆ ಎನ್ನುವುದು ಸುಳ್ಳು: ಅಮಿತ್ ಮಾಳವೀಯ

ಭಾರತದಲ್ಲಿ ಉತ್ಪಾದನೆ ಕುಸಿದಿದೆ ಎಂದ ರಾಹುಲ್ ಗಾಂಧಿ ಹೇಳಿಕೆಯನ್ನು ಬಿಜೆಪಿ ರಾಷ್ಟ್ರೀಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಅಲ್ಲಗಳೆದಿದ್ದಾರೆ. ಎಲೆಕ್ಟ್ರಾನಿಕ್ಸ್, ಮೊಬೈಲ್ ಮ್ಯಾನುಫ್ಯಾಕ್ಚರಿಂಗ್, ಫಾರ್ಮಾಸ್ಯೂಟಿಕಲ್, ಎಂಜಿನಿಯರಿಂಗ್ ಗೂಡ್ಸ್, ಡಿಫೆನ್ಸ್ ಸೆಕ್ಟರ್​ಗಳಲ್ಲಿ ಭಾರತದ ರಫ್ತು ಹೆಚ್ಚಿರುವುದನ್ನು ಅವರು ಅಂಕಿ ಅಂಶ ಸಮೇತ ತೋರಿಸಿದ್ಧಾರೆ. 2014ರಲ್ಲಿ ಇದ್ದ ಸ್ಥಿತಿ, ಈಗ ಇರುವ ಸ್ಥಿತಿಯನ್ನು ತುಲನೆ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಮಿತ್ ಮಾಳವೀಯ ಪೋಸ್ಟ್ ಮಾಡಿದ್ದಾರೆ.

  • ಎಲೆಕ್ಟ್ರಾನಿಕ್ಸ್ ಉತ್ಪಾದನೆ: 1.9 ಲಕ್ಷ ಕೋಟಿ ರೂನಿಂದ 11.3 ಲಕ್ಷ ಕೋಟಿ ರೂಗೆ ಏರಿಕೆ.
  • ಎಲೆಕ್ಟ್ರಾನಿಕ್ಸ್ ರಫ್ತು: 38,000 ಕೋಟಿ ರೂನಿಂದ 3.27 ಲಕ್ಷ ಕೋಟಿ ರೂಗೆ ಏರಿಕೆ.
  • ಮೊಬೈಲ್ ಮ್ಯಾನುಫ್ಯಾಕ್ಚರಿಂಗ್ ಘಟಕ: 2ರಿಂದ 300ಕ್ಕೆ ಹೆಚ್ಚಳ
  • ಮೊಬೈಲ್ ಫೋನ್ ಉತ್ಪಾದನೆ: 18,000 ಕೋಟಿ ರೂನಿಂದ 5.45 ಲಕ್ಷ ಕೋಟಿ ರೂಗೆ ಏರಿಕೆ.
  • ಮೊಬೈಲ್ ಫೋನ್ ರಫ್ತು: 15,000 ಕೋಟಿ ರೂನಿಂದ 2 ಲಕ್ಷ ಕೋಟಿ ರೂಗೆ ಏರಿಕೆ.

ಅಮಿತ್ ಮಾಳವೀಯ ಅವರ ಎಕ್ಸ್ ಪೋಸ್ಟ್​ಗಳು

ಆಟೊಮೊಬೈಲ್ ಸೆಕ್ಟರ್​ನಲ್ಲಿ ಉತ್ಪಾದನೆ ಎಷ್ಟು ಹೆಚ್ಚಿದೆ?

ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಮಂಡಳಿ ಸದಸ್ಯರೂ ಆಗಿರುವ ಅಮಿತ್ ಮಾಳವೀಯ ಅವರು ಮತ್ತೊಂದು ಕುತೂಹಲಕಾರಿ ದತ್ತಾಂಶ ಬಹಿರಂಗಪಡಿಸಿದ್ದಾರೆ. ವಿಶ್ವದ ಅಗ್ರಮಾನ್ಯ 10 ವಾಹನ ಉತ್ಪಾದಕ ದೇಶಗಳ ಪೈಕಿ ಎಂಟು ದೇಶಗಳಲ್ಲಿ ವಾಹನ ಉತ್ಪಾದನೆ ಕಡಿಮೆ ಆಗಿದೆ. 2014ರಲ್ಲಿ ಆಗುತ್ತಿದ್ದುದಕ್ಕಿಂತ 2024ರಲ್ಲಿ ಆಗಿರುವ ಉತ್ಪಾದನೆ ಕಡಿಮೆ. ಉತ್ಪಾದನೆ ಹೆಚ್ಚಿಸಿದ ಎರಡು ದೇಶಗಳಲ್ಲಿ ಭಾರತವೂ ಒಂದು ಎಂದು ಅಮಿತ್ ಮಾಳವೀಯ ಹೇಳಿದ್ದಾರೆ.

ಇದನ್ನೂ ಓದಿ: ಅಮೆರಿಕದಿಂದ ಪಾಕಿಸ್ತಾನಕ್ಕೆ ಮಿಲಿಟರಿ ಪ್ಯಾಕೇಜ್; ಪಾಕ್ ಅಂದ್ರೆ ಅಮೆರಿಕ, ಚೀನಾಗೆ ಯಾಕೆ ಪ್ರೀತಿ?

2014ರಿಂದೀಚೆಗೆ ಭಾರತದ ವಾಹನ ಉತ್ಪಾದನೆ ಎರಡು ಪಟ್ಟು ಹೆಚ್ಚಿದೆ. ಉಕ್ಕು, ಎಲೆಕ್ಟ್ರಾನಿಕ್ಸ್, ರಾಸಾಯನಿಕ, ಎಂಎಸ್​ಎಂಇ ಮತ್ತು ಸರ್ವಿಸ್ ಸೆಕ್ಟರ್​ಗಳೊಂದಿಗೆ ಆಟೊಮೊಬೈಲ್ ಸೆಕ್ಟರ್ ನಿಕಟ ಸಂಬಂಧ ಹೊಂದಿದೆ. ದೇಶದ ಜಿಡಿಪಿಗೆ ಆಟೊಮೊಬೈಲ್ ಸೆಕ್ಟರ್​ನ ಕೊಡುಗೆ ಶೇ 7.1ರಷ್ಟಿದೆ. ಭಾರತ ವಿಶ್ವದ ನಾಲ್ಕನೇ ಅತಿದೊಡ್ಡ ವಾಹನ ಉತ್ಪಾದಕ ದೇಶವೆನಿಸಿದೆ ಎಂದು ಅಮಿತ್ ಮಾಳವೀಯ ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಬರೆದಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Agniveer Recruitment: ಅಗ್ನಿವೀರ್ ನೇಮಕಾತಿಯಲ್ಲಿ ಐಟಿಐ-ಡಿಪ್ಲೊಮಾ ಪಡೆದವರಿಗೆ ಆದ್ಯತೆ ಏಕೆ? ಕಾರಣ ತಿಳಿಯಿರಿ – Kannada News | Agniveer Recruitment: ITI Diploma Holders Preferred Amidst Key Changes

ಅಗ್ನಿವೀರ್ ಯೋಜನೆಯಡಿ ನೇಮಕಗೊಂಡ ಮೊದಲ ಬ್ಯಾಚ್ ಮುಂದಿನ ವರ್ಷ ನಿವೃತ್ತರಾಗಲಿದೆ. ಇದರ ಜೊತೆಗೆ, ಅಗ್ನಿವೀರ್ ನೇಮಕಾತಿ ಪ್ರಕ್ರಿಯೆಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಅಗ್ನಿವೀರ್ ನೇಮಕಾತಿಗಳ ಸಂಖ್ಯೆಯನ್ನು ಹೆಚ್ಚಿಸಲು ಯೋಜನೆಗಳು ನಡೆಯುತ್ತಿವೆ. ಅಗ್ನಿವೀರ್ ನೇಮಕಾತಿ ಯೋಜನೆಗೆ ಮಾಡಿದ ಬದಲಾವಣೆಗಳಿಗೆ ಸಂಬಂಧಿಸಿದಂತೆ, ಐಟಿಐ ಡಿಪ್ಲೊಮಾ ಹೊಂದಿರುವ ಅಭ್ಯರ್ಥಿಗಳು ಸಾಮಾನ್ಯ ಅಭ್ಯರ್ಥಿಗಳಿಗಿಂತ ಆದ್ಯತೆಯನ್ನು ಪಡೆಯುತ್ತಿದ್ದಾರೆ. ಇದಕ್ಕೆ ಹಲವಾರು ಪ್ರಮುಖ ಕಾರಣಗಳಿವೆ.

ಅಗ್ನಿವೀರ್ ನೇಮಕಾತಿಯಲ್ಲಿ ಐಟಿಐ ಡಿಪ್ಲೊಮಾ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ಏಕೆ ಸಿಗುತ್ತಿದೆ, ಇದಕ್ಕೆ ಕಾರಣಗಳೇನು? ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆಗೆ ಐಟಿಐ ಡಿಪ್ಲೊಮಾಗಳು ಹೇಗೆ ಅವಶ್ಯಕವಾಗಿವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಸೇನೆಯಲ್ಲಿ ತಾಂತ್ರಿಕ ಯುವಕರಿಗೆ ಬೇಡಿಕೆ:

ವಾಸ್ತವವಾಗಿ, ಭಾರತೀಯ ಸೇನೆ, ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆಗೆ ಸಾಮಾನ್ಯ GD ಅಭ್ಯರ್ಥಿಗಳ ಜೊತೆಗೆ ತಾಂತ್ರಿಕ ಅಭ್ಯರ್ಥಿಗಳು ಬೇಕಾಗುತ್ತಾರೆ. ಭಾರತೀಯ ನೌಕಾಪಡೆ ಮತ್ತು ಭಾರತೀಯ ವಾಯುಪಡೆಯು ಪ್ರಾಥಮಿಕವಾಗಿ ತಮ್ಮ ಅಭ್ಯರ್ಥಿಗಳಲ್ಲಿ ಶೇ.50ಕ್ಕಿಂತ ಹೆಚ್ಚು ಜನರು ತಾಂತ್ರಿಕ ಸಿಬ್ಬಂದಿಯಾಗಿರಬೇಕು ಎಂದು ಬಯಸುತ್ತದೆ. ಈಗ, ಮಿಲಿಟರಿ ನೇಮಕಾತಿಯ ಸ್ವರೂಪ ಬದಲಾಗಿದೆ ಮತ್ತು ಮೂರೂ ಪಡೆಗಳು ಅಗ್ನಿವೀರ್ ನೇಮಕಾತಿಗೆ ಒತ್ತು ನೀಡುತ್ತಿವೆ, ಆದ್ದರಿಂದ ITI ಡಿಪ್ಲೊಮಾ ಹೊಂದಿರುವ ಅಭ್ಯರ್ಥಿಗಳಿಗೆ ಅಗ್ನಿವೀರ್ ನೇಮಕಾತಿಯ ಅಡಿಯಲ್ಲಿ ಆದ್ಯತೆ ನೀಡಲಾಗುತ್ತಿದೆ.

ತರಬೇತಿಯ ಸಮಸ್ಯೆಗೆ ಪರಿಹಾರ:

ಅಗ್ನಿವೀರ್ ನೇಮಕಾತಿ ಯೋಜನೆ ಆರಂಭವಾಗುವ ಮೊದಲು, ಭಾರತೀಯ ಸೇನೆ, ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆಯು ಸಾಮಾನ್ಯ ನೇಮಕಾತಿ ನಡೆಸಿದ ನಂತರ ಅಭ್ಯರ್ಥಿಗಳಿಗೆ ತಾಂತ್ರಿಕ ತರಬೇತಿಯನ್ನು ನೀಡುತ್ತಿತ್ತು. ಆದಾಗ್ಯೂ, ಈಗ ಕೇವಲ ನಾಲ್ಕು ವರ್ಷಗಳ ಅವಧಿಯನ್ನು ಹೊಂದಿರುವ ಅಗ್ನಿವೀರ್ ನೇಮಕಾತಿ ಯೋಜನೆಯಡಿಯಲ್ಲಿ ಹೆಚ್ಚಿನ ನೇಮಕಾತಿಗಳು ನಡೆಯುತ್ತಿವೆ. ಆದ್ದರಿಂದ, ಯಾವುದೇ ಅಭ್ಯರ್ಥಿಯನ್ನು ದೀರ್ಘಾವಧಿಯ ತರಬೇತಿಗೆ ಕಳುಹಿಸಲು ಸಾಧ್ಯವಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು, ಅಗ್ನಿವೀರ್ ಯೋಜನೆಯಡಿ ನೇಮಕಾತಿಯಲ್ಲಿ ಐಟಿಐ ಡಿಪ್ಲೊಮಾ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತಿದೆ.

ಇದನ್ನೂ ಓದಿ: ಐಪಿಎಸ್ ಅಧಿಕಾರಿಯಾಗಲು 15 ಸರ್ಕಾರಿ ಉದ್ಯೋಗ ತೊರೆದ ತೃಪ್ತಿ ಭಟ್; ಯಶಸ್ಸಿನ ಕಥೆ ಇಲ್ಲಿದೆ

ಒಂದು ವರ್ಷದಲ್ಲಿ 1 ಲಕ್ಷ ಅಗ್ನಿವೀರರನ್ನು ನೇಮಿಸಿಕೊಳ್ಳುವ ಯೋಜನೆ:

ಭಾರತೀಯ ಸೇನೆಯ ಮೂರು ಶಾಖೆಗಳಾದ ಭಾರತೀಯ ಸೇನೆ, ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆಗಳು ಪ್ರಸ್ತುತ ಪ್ರತಿ ವರ್ಷ 40 ರಿಂದ 45 ಅಭ್ಯರ್ಥಿಗಳನ್ನು ಅಗ್ನಿವೀರ್ ನೇಮಕಾತಿ ಯೋಜನೆಯಡಿಯಲ್ಲಿ ನೇಮಕ ಮಾಡಿಕೊಳ್ಳುತ್ತವೆ. ಈ ಯುವಕರಲ್ಲಿ ಕೇವಲ 25 ಪ್ರತಿಶತದಷ್ಟು ಜನರನ್ನು ಮಾತ್ರ ಖಾಯಂಗೊಳಿಸಬೇಕಾಗಿದೆ, ಆದರೆ 75 ಅಭ್ಯರ್ಥಿಗಳು ನಿವೃತ್ತರಾಗುತ್ತಾರೆ. ಆದಾಗ್ಯೂ, ಪ್ರತಿ ವರ್ಷ 100,000 ಅಗ್ನಿವೀರ್‌ಗಳನ್ನು ನೇಮಕ ಮಾಡಿಕೊಳ್ಳುವ ಯೋಜನೆಯನ್ನು ಈಗ ಕೈಗೊಳ್ಳಲಾಗುತ್ತಿದೆ. ಭಾರತೀಯ ಸೇನೆಯಲ್ಲಿ ಸೈನಿಕರ ಕೊರತೆಯ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಪರಿಗಣಿಸಲಾಗುತ್ತಿದೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:14 pm, Thu, 18 December 25

Source link

ಸುಲಭವಾಗಿ ತೂಕ ಇಳಿಸಿಕೊಳ್ಳಲು ಬಯಸಿದರೆ ಪ್ರತಿದಿನ ಬೆಳಗ್ಗೆ ಈ ನಾಲ್ಕು ಕೆಲಸಗಳನ್ನು ಮಾಡಿ – Kannada News | You can easily lose weight by following these habits in your morning routine

ಕಳಪೆ ಆಹಾರ ಪದ್ಧತಿ, ಜಡ ಜೀವನಶೈಲಿ (Lifestyle) ಇವೆಲ್ಲದರ ಕಾರಣದಿಂದಾಗಿ ತೂಕ ಹೆಚ್ಚಾಗುವುದು ಸಾಮಾನ್ಯವಾಗಿಬಿಟ್ಟಿದೆ. ಈ ತೂಕ ಇಳಿಸಿ ಫಿಟ್‌ ಮತ್ತು ಸ್ಲಿಮ್‌ ಆಗಿರುವುದು ಅನೇಕರಿಗೆ ಸವಾಲಿನ ಸಂಗತಿಯಾಗಿದೆ. ಹೌದು ಆಹಾರಕ್ರಮ, ಜಿಮ್‌, ಔಷಧಿ ಇವೆಲ್ಲವನ್ನೂ ಪ್ರಯತ್ನಿಸಿದರೂ ತೂಕ ಮಾತ್ರ ಇಳಿಕೆಯಾಗ್ತಿಲ್ಲ ಎಂದು ಹಲವರು ದೂರುತ್ತಿರುತ್ತಾರೆ. ಇದೇ ರೀತಿ ನೀವು ಸಹ ದೇಹ ತೂಕವನ್ನು ಇಳಿಸಿಕೊಳ್ಳಲು ಸಾಕಷ್ಟು ಸರ್ಕಸ್‌ ಮಾಡ್ತಿದ್ದೀರಾ? ಹಾಗಿದ್ರೆ ಬೆಳಗಿನ ದಿನಚರಿಯಲ್ಲಿ ಈ ಒಂದಷ್ಟು ಅಭ್ಯಾಸವನ್ನು ರೂಢಿಸಿಕೊಳ್ಳಿ ಮತ್ತು ಸುಲಭವಾಗಿ ದೇಹ ತೂಕವನ್ನು ಇಳಿಸಿಕೊಳ್ಳಿ.  ತೂಕ ಇಳಿಕೆಗಾಗಿ ಬೆಳಗ್ಗೆ ಮಾಡಬೇಕಾದ ಕೆಲಸಗಳೇನು ಎಂಬುದನ್ನು ನೋಡೋಣ ಬನ್ನಿ.

ತೂಕ ಇಳಿಕೆಗೆ ಬೆಳಗಿನ ದಿನಚರಿಯಲ್ಲಿ ಈ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ:

ಉಗುರು ಬೆಚ್ಚಗಿನ ನೀರು ಕುಡಿಯಿರಿ: ಬೆಳಿಗ್ಗೆ ಎದ್ದ ಕೂಡಲೇ ಒಂದರಿಂದ ಎರಡು ಗ್ಲಾಸ್ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ. ಈ ಅಭ್ಯಾಸವು ದೇಹದ ಚಯಾಪಚಯ ಕ್ರಿಯೆಯನ್ನು ಸಕ್ರಿಯಗೊಳಿಸುತ್ತದೆ ಮತ್ತು ನಿರ್ಜಲೀಕರಣವನ್ನು ನಿವಾರಿಸುತ್ತದೆ. ಉಗುರು ಬೆಚ್ಚಗಿನ ನೀರು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ, ದೇಹದಲ್ಲಿನ ವಿಷವನ್ನು ಹೊರಹಾಕುತ್ತದೆ ಮತ್ತು ಚಯಾಪಚಯ ದರವನ್ನು ಹೆಚ್ಚಿಸುತ್ತದೆ. ಅಲ್ಲದೆ ನೀವು ನೀರಿಗೆ ನಿಂಬೆ ರಸ, ಜೇನುತುಪ್ಪ ಅಥವಾ ಶುಂಠಿಯ ತುಂಡನ್ನು ಕೂಡ ಸೇರಿಸಬಹುದು. ಇದು ಕೊಬ್ಬನ್ನು ಸುಡುವ ಪ್ರಕ್ರಿಯೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ.

ಬಿಸಿಲಿನಲ್ಲಿ ಸ್ವಲ್ಪ ಸಮಯ ಕಳೆಯಿರಿ: ವಿಟಮಿನ್ ಡಿ ಪಡೆಯಲು ಬೆಳಗ್ಗೆ ಸ್ವಲ್ಪ ಸಮಯ ಬಿಸಿಲಿನಲ್ಲಿ ಕಳೆಯುವುದು ಅತ್ಯಗತ್ಯ. ಇದಲ್ಲದೆ, ಕನಿಷ್ಠ 15-20 ನಿಮಿಷಗಳ ಕಾಲ ಬಿಸಿಲಿನಲ್ಲಿ ಕಳೆಯುವುದರಿಂದ ದೇಹದ ಸಿರ್ಕಾಡಿಯನ್ ಲಯವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಇದು ಚಯಾಪಚಯ ಕ್ರಿಯೆ ಮತ್ತು ಹಸಿವನ್ನು ನಿಯಂತ್ರಿಸುವ ಹಾರ್ಮೋನುಗಳನ್ನು ಸಮತೋಲನಗೊಳಿಸುತ್ತದೆ. ಇದು ದಿನವಿಡೀ ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಅನಾರೋಗ್ಯಕರ ಆಹಾರದ ಹಂಬಲವನ್ನು ಕಡಿಮೆ ಮಾಡುತ್ತದೆ. ಈ ಮೂಲಕ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

ಪ್ರೋಟೀನ್ ಭರಿತ ಉಪಹಾರವನ್ನು ಸೇವಿಸಿ: ಬೆಳಗಿನ ಉಪಾಹಾರವು ದಿನದ ಪ್ರಮುಖ ಊಟವಾಗಿದ್ದು, ಪ್ರೋಟೀನ್ ಭರಿತ ಉಪಾಹಾರವು ತೂಕ ಇಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರೋಟೀನ್ ದೀರ್ಘಕಾಲದವರೆಗೆ ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಹಗಲಿನಲ್ಲಿ ಅನಾರೋಗ್ಯಕರ ತಿಂಡಿಗಳನ್ನು ಕಡಿಮೆ ಮಾಡುತ್ತದೆ. ಮೊಟ್ಟೆ, ಮೊಸರು, ಚೀಸ್ ಮತ್ತು ಬೇಳೆಕಾಳುಗಳಂತಹ ಆಹಾರಗಳನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಹಸಿ ಹಾಲನ್ನು ಮುಖಕ್ಕೆ ಹಚ್ಚುವುದು ನಿಜಕ್ಕೂ ಪ್ರಯೋಜನಕಾರಿಯೇ?

ಕನಿಷ್ಠ 20-30 ನಿಮಿಷಗಳ ಕಾಲ ವ್ಯಾಯಾಮ ಮಾಡಿ: ಬೆಳಿಗ್ಗೆ ವ್ಯಾಯಾಮ ಮಾಡುವುದರಿಂದ ದೇಹದ ಚಯಾಪಚಯ ಕ್ರಿಯೆ ಚುರುಕಾಗುತ್ತದೆ. ಜಾಗಿಂಗ್, ಸೈಕ್ಲಿಂಗ್, ಸ್ಕಿಪ್ಪಿಂಗ್ ಅಥವಾ ಸೂರ್ಯ ನಮಸ್ಕಾರ ಮತ್ತು ಕಪಾಲಭಾತಿ ಪ್ರಾಣಾಯಾಮದಂತಹ ಯೋಗ ಭಂಗಿಗಳಂತಹ ಲಘು ಕಾರ್ಡಿಯೋ ವ್ಯಾಯಾಮಗಳು ಕೊಬ್ಬನ್ನು ಸುಡುವಲ್ಲಿ ಹೆಚ್ಚು ಪರಿಣಾಮಕಾರಿ. ಅಲ್ಲದೆ ಬೆಳಗಿನ ಈ ಅಭ್ಯಾಸಗಳು ನಿಮ್ಮನ್ನು ದಿನವಿಡಿ ಕ್ರಿಯಾಶೀಲವಾಗಿಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಜ್ಯದ 1,800 ಹಳ್ಳಿಗಿಲ್ಲ ಬಸ್​​ ಸಂಪರ್ಕ: ಸಾರಿಗೆ ಸಚಿವರೇ ಕೊಟ್ರು ಶಾಕಿಂಗ್​​ ಮಾಹಿತಿ – Kannada News | 1,800 Karnataka villages lack direct bus access, reveals Minister Ramalinga Reddy in the Legislative Council

ಬೆಂಗಳೂರು, ಡಿಸೆಂಬರ್​​ 18: ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನಗಳಲ್ಲೊಂದಾದ ಮಹಿಳೆಯರಿಗೆ ಸಾಮಾನ್ಯ ಸಾರಿಗೆ ಬಸ್​​ಗಳಲ್ಲಿ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಯ ಪ್ರಯೋಜನವನ್ನು ಪ್ರತಿನಿತ್ಯ ಲಕ್ಷಾಂತರ ಮಂದಿ ಪಡೆಯುತ್ತಿದ್ದಾರೆ. ಈ ನಡುವೆಯೂ ಸುಮಾರು 1,800 ಗ್ರಾಮಗಳಲ್ಲಿ ಮಹಿಳೆಯರು ಬಸ್ ಏರಲು ಕನಿಷ್ಠ 2 ಕಿಲೋಮೀಟರ್ ನಡೆದು ಹೋಗುವ ಪರಿಸ್ಥಿತಿ ಇದೆ ಎಂಬ ಮಾಹಿತಿ ಬಹಿರಂಗೊಂಡಿದೆ.

ಬಹುತೇಕ ಪ್ರದೇಶಗಳಲ್ಲಿ ಬಸ್​​ಗಳ ಲಾಸ್ಟ್​​ ಸ್ಟಾಪ್​​ ಕನೆಕ್ಟಿವಿಟಿ ಇಲ್ಲದ ಕಾರಣ ವಿದ್ಯಾರ್ಥಿಗಳನ್ನು ಸೇರಿದಂತೆ ಪ್ರಯಾಣಿಕರು ಪ್ರತಿದಿನ ಕಿಲೋಮೀಟರ್​​ಗಟ್ಟಲೆ ದೂರವನ್ನು ನಡೆಯಬೇಕಾದ ಸ್ಥಿತಿ ಇದೆ. ಹೀಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬಸ್‌ಗಳ ಸಂಚಾರ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ರಸ್ತೆ ದುಃಸ್ಥಿತಿಯ ಕಾರಣ KSRTC, NERTC ಮತ್ತು NWRTC ಅಧಿಕಾರಿಗಳು ಈ ಪ್ರದೇಶಗಳಲ್ಲಿ ಬಸ್​​ ಸಂಚಾರಕ್ಕೆ ಅವಕಾಶ ನೀಡಿಲ್ಲ ಎನ್ನಲಾಗಿದೆ. ತುಮಕೂರು, ಚಿಕ್ಕಮಗಳೂರು, ಉಡುಪಿ, ಮಂಡ್ಯ, ಚಿಕ್ಕಬಳ್ಳಾಪುರ, ಕೊಡಗು, ದಕ್ಷಿಣ ಕನ್ನಡ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಚಾಮರಾಜನಗರ, ಕಲಬುರಗಿ ಮತ್ತು ವಿಜಯನಗರ ಜಿಲ್ಲೆಗಳ ಬಹುತೇಕ ಗ್ರಾಮಗಳಲ್ಲಿ ಸಾರ್ವಕನಿಕರು ಈ ಸಮಸ್ಯೆ ಎದುರಿಸುತ್ತಿದ್ದಾರೆ.

ಇದನ್ನೂ ಓದಿ:  ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಸಾರಿಗೆ ನಿಗಮಗಳಿಗೆ ಶಕ್ತಿ ಅಲ್ಲ, ಶಾಪ! 4 ಸಾವಿರ ಕೋಟಿ ರೂ.ಗೂ ಹೆಚ್ಚು ಮೊತ್ತ ಬಾಕಿ

ಈ ಬಗ್ಗೆ ವಿಧಾನ ಪರಿಷತ್​​ನಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೇ ಉತ್ತರಿಸಿದ್ದು, KSRTC 17 ಜಿಲ್ಲೆಗಳಲ್ಲಿ ಬಸ್ ಸೇವೆ ನೀಡುತ್ತಿದೆ. ಒಟ್ಟು 21,748 ಗ್ರಾಮಗಳ ಪೈಕಿ 20,090 ಗ್ರಾಮಗಳಿಗೆ KSRTC ಬಸ್ ಸೇವೆ ಒದಗಿಸುತ್ತಿದೆ. ಉಳಿದ 1,658 ಗ್ರಾಮಗಳಲ್ಲಿ ಬಸ್​​ಗಾಗಿ ಜನರು 2 ಕಿಲೋಮೀಟರ್​​ ನಡೆದೇ ಹೋಗಬೇಕಿದೆ. ಅದೇ ರೀತಿ, NWRTC ವ್ಯಾಪ್ತಿಯಲ್ಲಿ ಇರುವ 4,610 ಗ್ರಾಮಗಳಲ್ಲಿ 4,565 ಗ್ರಾಮಗಳಿಗೆ ನೇರ ಬಸ್ ಸೇವೆ ಲಭ್ಯವಿದೆ. NERTC ವ್ಯಾಪ್ತಿಯ 5,283 ಗ್ರಾಮಗಳಲ್ಲಿ 5,237 ಗ್ರಾಮಗಳಿಗೆ ಬಸ್​​ಗಳು ಸಂಪರ್ಕ ಕಲ್ಪಿಸುತ್ತಿವೆ. ಜನರ ಬೇಡಿಕೆಯನ್ನು ಆಧಾರದಲ್ಲಿ ಸಮೀಕ್ಷೆ ನಡೆಸಿ, ಬಸ್ ಸೇವೆ ವಿಸ್ತರಿಸಲಾಗುವುದು ಎಂದು ಅವರು ತಿಳಿಸಿರೋದಾಗಿ ದಿ ನ್ಯೂ ಇಂಡಿಯನ್​​ ಎಕ್ಸ್​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:18 pm, Thu, 18 December 25

Source link

ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿ ಬಿದ್ದ ಕಾರು – Kannada News | Car Jumps 10 Feet While Avoiding Bike In bidar, here Is Accident video

ಬೀದರ್, (ಡಿಸೆಂಬರ್ 18): ಬೈಕ್ ಸವಾರನನ್ನ ಬಚಾವು ಮಾಡಲು ಹೋಗಿ ಕಾರು ಹತ್ತು ಅಡಿ ಮೇಲೇ ಹಾರಿ ಬುಗುರಿ ತಿರುಗಿದಂತೆ ತಿರುಗಿ ಮತ್ತೆ ರಸ್ತೆ ಮೇಲೆ ಬಿದ್ದಿದೆ. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕೌಡಿಯಾಳ ಬಳಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಬರುತ್ತಿದ್ದ ಕಾರಿಗೆ ಬೈಕ್ ಅಡ್ಡ ಬಂದಿದೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿ ಕಾರು ಡಿವೈಡರ್​​ಗೆ ಡಿಕ್ಕಿ ಹೊಡೆದಿದೆ. ಬಳಿಕ ಕಾರು ಹತ್ತು ಅಡಿ ಮೇಲಕ್ಕೆ ಹಾರಿ ಬಿದ್ದಿದ್ದು, ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರೈಲ್ವೆ ಪರೀಕ್ಷೆಯಲ್ಲಿ ಕನ್ನಡಕ್ಕೆ ಮತ್ತೆ ಕೊಕ್: ಸಚಿವರ ಸೂಚನೆಗೂ ಕಿಮ್ಮತ್ತಿಲ್ಲ; ಸಿಡಿದೆದ್ದ ಕರವೇ – Kannada News | Allegations of neglecting Kannada in Railway examinations resurface

ಬೆಂಗಳೂರು, ಡಿಸೆಂಬರ್​​ 18: ನೈರುತ್ಯ ರೈಲ್ವೆ ವಲಯದಲ್ಲಿ ಕಳೆದ ವರ್ಷ ಸಹಾಯಕ ಲೋಕೋಪೈಲೆಟ್ ಹುದ್ದೆಗಳಿಗೆ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಪರೀಕ್ಷೆ (exam) ಬರೆಯಲು ಅವಕಾಶ ಮಾಡಿಕೊಡಲಾಗಿತ್ತು. ಆ ಮೂಲಕ ಕನ್ನಡಿಗರಿಗೆ ಅನ್ಯಾಯವೆಸಗಲಾಗಿತ್ತು. ಆಗ ಸಚಿವ ವಿ. ಸೋಮಣ್ಣ (V Somanna) ಕನ್ನಡದಲ್ಲೇ ಪರೀಕ್ಷೆಗೆ ಆದೇಶಿಸಿದ್ದರು. ಆದರೆ ಇಲಾಖೆ ಕೆಲ ಪರೀಕ್ಷೆಗಳಿಗೆ ಮಾತ್ರ ಕನ್ನಡಕ್ಕೆ ಅವಕಾಶ ನೀಡಿ ಬಳಿಕ ತೆಗೆದುಹಾಕಿದೆ. ಆ ಮೂಲಕ ಸಚಿವರ ಆದೇಶಕ್ಕೂ ಬೆಲೆಯಿಲ್ಲದಂತಾಗಿದೆ. ಸದ್ಯ ಈ ವಿಚಾರ ಮತ್ತೆ ಮುನ್ನಲೆಗೆ ಬಂದಿದ್ದು, ಕನ್ನಡ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ

ಈ ಕುರಿತಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಮಾತನಾಡಿದ್ದು, ರೈಲ್ವೆ ಬಡ್ತಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ. ಹುಬ್ಬಳ್ಳಿ, ಮೈಸೂರಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್ ಮೂರು ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಆದರೆ ಬೆಂಗಳೂರಲ್ಲಿ ಹಿಂದಿ, ಇಂಗ್ಲಿಷ್​​ನಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಈ ತಾರತಮ್ಯ ಕನ್ನಡದ ಕಡೆಗಣನೆ ತುಂಬಾ ನೋವಿನ ಸಂಗತಿ. ಈ ಕೂಡಲೇ ಪರೀಕ್ಷೆ ರದ್ದುಗೊಳಿಸಿ ಎಲ್ಲಾ ಪ್ರಾದೇಶಿಕ ಭಾಷೆಯಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು, ಇಲ್ಲವಾದಲ್ಲಿ ಕರವೇ ಮತ್ತೆ ಪರೀಕ್ಷಾ ಸ್ಥಳಕ್ಕೆ ನುಗ್ಗಿ ಪರೀಕ್ಷೆ ನಡೆಸದಂತೆ
ತಡೆಯುವ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದಲೇ ವಿಶೇಷ ತರಬೇತಿ ಕಾರ್ಯಾಗಾರ

ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜುಲೈ 2009ನೇ ಇಸವಿಯಲ್ಲಿ ಬೆಂಗಳೂರಿನ ಕಮಲ ಬಾಯಿ ಶಾಲೆಯಲ್ಲಿ ಡಿ ಗ್ರೂಪ್ ಹುದ್ದೆಗಾಗಿ ನಡೆಯುತ್ತಿದ್ದ ಪರೀಕ್ಷಾ ಕೊಠಡಿಗೆ ನುಗ್ಗಿ ಪ್ರಶ್ನೆ ಪ್ರತ್ರಿಕೆಯನ್ನು ಹರಿದು ಹಾಕಿದ್ದರು. ಈ ಹಿನ್ನಲೆ ಲಾಟಿ ಏಟು ಹಾಗೂ ಸೆರೆವಾಸ ಅನುಭವಿಸಿದ್ದ ಫಲವಾಗಿ ನಮ್ಮ ಹೋರಾಟಕ್ಕೆ ಮಣಿದು ಆ ಸಂದರ್ಭದಲ್ಲಿ ರೈಲ್ವೆ ಸಚಿವರಾಗಿದ್ದ ಮಮತಾ ಬ್ಯಾನರ್ಜಿ ಅವರು ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆಯನ್ನು ಬರೆಯಲು ಅವಕಾಶ ಮಾಡಿಕೊಟ್ಟಿದ್ದರು ಎಂದರು.

ಇದನ್ನೂ ಓದಿ: ಧಾರವಾಡ ಸರ್ಕಾರಿ ಹುದ್ದೆಗಳ ಭರ್ತಿ: ಉದ್ಯೋಗಾಕಾಂಕ್ಷಿಗಳಿಗೆ ಸಿಎಂ ಭೇಟಿಗೆ ಅವಕಾಶ ನೀಡಿ ಹೈಕೋರ್ಟ್​ ಆದೇಶ

ಈಗ ನಮ್ಮ ರಾಜ್ಯದವರೇ ಆದ ವಿ.ಸೋಮಣ್ಣ ಮಂತ್ರಿಗಳಾಗಿದ್ದರು ಕೂಡ ಈ ತಾರತಮ್ಯ ಕನ್ನಡದ ಕಡೆಗಣನೆ ತುಂಬಾ ನೋವಿನ ಸಂಗತಿ. ಈ ಕೂಡಲೇ ಕೇಂದ್ರ ಸರ್ಕಾರ ಎಚ್ಚೆತ್ತು ತಮ್ಮ ನಿಲುವನ್ನು ಹಿಂತೆಗೆದುಕೊಂಡು ಈ ಕೂಡಲೇ ಪರೀಕ್ಷೆ ರದ್ದುಗೊಳಿಸಿ ಎಲ್ಲಾ ಪ್ರಾದೇಶಿಕ ಭಾಷೆಯಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 3:10 pm, Thu, 18 December 25

Source link

Margashira Amavasya: ನಾಳೆ ವರ್ಷದ ಕೊನೆಯ ಅಮಾವಾಸ್ಯೆ; ಮಾರ್ಗಶಿರ ಅಮಾವಾಸ್ಯೆಯ ಮಹತ್ವ ಮತ್ತು ಪೂಜಾ ವಿಧಾನ ತಿಳಿಯಿರಿ – Kannada News | Margashira Amavasya: Significance, Rituals and Dosha Remedies

ಹಿಂದೂ ಸಂಸ್ಕೃತಿಯ ಪ್ರಕಾರ ಮಾರ್ಗಶಿರ ಅಮಾವಾಸ್ಯೆಗೆ ಹೆಚ್ಚಿನ ಮಹತ್ವವಿದೆ. ಈ ಶುಭ ದಿನದಂದು, ತಮ್ಮ ಪೂರ್ವಜರ ಆತ್ಮಗಳಿಗೆ ಶಾಂತಿ ಸಿಗಲು ಶ್ರಾದ್ಧ ಮತ್ತು ತರ್ಪಣಗಳನ್ನು ಮಾಡಲಾಗುತ್ತದೆ. ಕಾಲ ಸರ್ಪದೋಷದಿಂದ ಬಳಲುತ್ತಿರುವವರು ಈ ದಿನದಂದು ಉಪವಾಸ ಮಾಡಬೇಕು ಎಂದು ವಿದ್ವಾಂಸರು ಹೇಳುತ್ತಾರೆ. ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರು ಮಾರ್ಗಶಿರ ಅಮಾವಾಸ್ಯೆಯ ದಿನದಂದು ಅಶ್ವತ್ಥ ಮರದ ಬಳಿ ದೀಪ ಹಚ್ಚಬೇಕು. ಈ ವರ್ಷ ಮಾರ್ಗಶಿರ ಅಮಾವಾಸ್ಯೆ ಡಿಸೆಂಬರ್ 19, ಶುಕ್ರವಾರದಂದು ಬಂದಿದೆ.

ಮಾರ್ಗಶಿರ ಅಮಾವಾಸ್ಯೆಯ ಶುಭ ಸಮಯ:

ಮಾರ್ಗಶಿರ ಅಮಾವಾಸ್ಯೆ ತಾ.19-12-25 ರಂದು ಬೆಳಗ್ಗೆ 4:59 ಕ್ಕೆ ಪ್ರಾರಂಭವಾಗಿ ಮರುದಿನ 20 ರಂದು ಬೆಳಗ್ಗೆ 07:12 ಕ್ಕೆ ಮುಕ್ತಾಯಗೊಳ್ಳುತ್ತದೆ. ಆದ್ದರಿಂದ ಡಿಸೆಂಬರ್ 19ರಂದು ಮಾರ್ಗಶಿರ ಅಮಾವಾಸ್ಯೆ ಆಚರಿಸಲಾಗುತ್ತದೆ.

ಮಾರ್ಗಶಿರ ಅಮಾವಾಸ್ಯೆಯ ಪೂಜಾ ವಿಧಾನ:

ಈ ದಿನದಂದು ಸೂರ್ಯೋದಯಕ್ಕೆ ಮೊದಲು ಎಚ್ಚರಗೊಂಡು ನದಿಯಲ್ಲಿ ಸ್ನಾನ ಮಾಡುವುದರಿಂದ ವಿಶೇಷ ಫಲಿತಾಂಶ ಬರುತ್ತದೆ. ಈ ದಿನದಂದು ವಿಷ್ಣುವನ್ನು ಪೂಜಿಸಬೇಕು. ವಿಷ್ಣುವನ್ನು ಗಂಗಾ ನೀರಿನಿಂದ ಪೂಜಿಸಬೇಕು. ವಿಷ್ಣುವಿನ ವಿಗ್ರಹಕ್ಕೆ ನೈವೇದ್ಯ ಅರ್ಪಿಸಿ ಆರತಿ ಮಾಡಬೇಕು. ಮಾರ್ಗಶಿರ ಅಮಾವಾಸ್ಯೆಯಂದು ವಿಷ್ಣುವನ್ನು ಅತ್ಯಂತ ಭಕ್ತಿಯಿಂದ ಪೂಜಿಸಿ ಉಪವಾಸ ಮಾಡುವುದರಿಂದ ಜಾತಕದಲ್ಲಿನ ಕಾಲಸರ್ಪ ದೋಷ ದೂರವಾಗುತ್ತದೆ. ಈ ದಿನದಂದು ಸೂರ್ಯನನ್ನು ಪ್ರಾರ್ಥಿಸುವುದು ಶುಭ. ಅಲ್ಲದೆ, ಈ ದಿನದಂದು ಹಿಟ್ಟಿನ ದೀಪಗಳು ಮತ್ತು ಕುಂಭ ದೀಪಗಳನ್ನು ಬೆಳಗಿಸಬೇಕು.

ಇದನ್ನೂ ಓದಿ: ವಾಸ್ತು ಪ್ರಕಾರ, ಮನೆಯಲ್ಲಿ ಕಾಮಧೇನುವಿನ ವಿಗ್ರಹ ಇಡುವುದರಿಂದ ಸಿಗುವ ಅದ್ಭುತ ಲಾಭಗಳಿವು!

ಶನಿ ದೋಷ ಮತ್ತು ಪಿತೃ ದೋಷ ಇರುವವರು ಬಡವರಿಗೆ ಕಂಬಳಿ, ಎಳ್ಳು ಮತ್ತು ಇತರ ಆಹಾರ ಧಾನ್ಯಗಳನ್ನು ದಾನ ಮಾಡಬೇಕು. ಅಮಾವಾಸ್ಯೆಯನ್ನು ಆಧ್ಯಾತ್ಮಿಕವಾಗಿ ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಈ ಶುಭ ದಿನದಂದು ಉಪವಾಸ ಮಾಡುವುದರಿಂದ ಪೂರ್ವಜರ ಆತ್ಮಗಳಿಗೆ ಶಾಂತಿ ಸಿಗುವುದಲ್ಲದೆ, ಬ್ರಹ್ಮ, ಇಂದ್ರ, ದೆವ್ವ, ಸೂರ್ಯ, ಬೆಂಕಿ, ಗಾಳಿ, ಋಷಿಗಳು, ಪಕ್ಷಿಗಳು ಮತ್ತು ಪ್ರಾಣಿಗಳಿಗೂ ಶಾಂತಿ ಸಿಗುತ್ತದೆ. ಅಮಾವಾಸ್ಯ ಪೂಜೆ ಮಾಡುವಾಗ, ಗಜೇಂದ್ರ ಮೋಕ್ಷ ಕಥೆಯನ್ನು ಓದಬೇಕು. ಈ ದಿನ ಆಹಾರವನ್ನು ದಾನ ಮಾಡುವುದರಿಂದ ಪೂರ್ವಜರ ಆಶೀರ್ವಾದ ಸಿಗುತ್ತದೆ ಎಂದು ನಂಬಲಾಗಿದೆ.

ಲೇಖನ: ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link