ಹೈದರಾಬಾದ್, ಆಗಸ್ಟ್ 04: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವಾದ ಚಾಟ್‌ಜಿಪಿಟಿ (ChatGPT) ತಮಾಷೆಗೆ ಅಥವಾ ದುರ್ಬಳಕೆಗೆ ಬಳಸಿಕೊಂಡರೆ ಎಂತಹ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಚಾಟ್‌ಜಿಪಿಟಿ ಬಳಸಿ ನಕಲಿ ವಿಮಾನ ಟಿಕೆಟ್ (Fake Flight Ticket) ಸೃಷ್ಟಿಸಿದ ಆರೋಪದ ಮೇಲೆ ಶಂಶಾಬಾದ್ ಪೊಲೀಸರು ಫೋರ್ಜರಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಏನಿದು ಘಟನೆ?
ಅಸ್ಲಂ ಎಂಬ ವ್ಯಕ್ತಿ ಹೈದರಾಬಾದ್‌ನ ಶಂಶಾಬಾದ್ (ರಾಜೀವ್ ಗಾಂಧಿ ಇಂಟರ್ನ್ಯಾಷನಲ್) ವಿಮಾನ ನಿಲ್ದಾಣದಿಂದ ಗೋವಾಕ್ಕೆ ಪ್ರಯಾಣಿಸಲು ಆಗಮಿಸಿದ್ದ. ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಮತ್ತು ಅಧಿಕಾರಿಗಳು ಟಿಕೆಟ್ ಪರಿಶೀಲಿಸುವಾಗ ದಾಖಲೆಯಲ್ಲಿದ್ದ ಕೆಲ ವ್ಯತ್ಯಾಸಗಳನ್ನು ಗಮನಿಸಿ ಅನುಮಾನ ವ್ಯಕ್ತಪಡಿಸಿದ್ದಾರೆ. ತೀವ್ರ ತಪಾಸಣೆ ನಡೆಸಿದಾಗ ಅದು ನಕಲಿ ಟಿಕೆಟ್ ಎಂಬುದು ಸ್ಪಷ್ಟವಾಗಿದೆ.
ವಿಚಾರಣೆ ವೇಳೆ ಅಸ್ಲಂ, ಈ ಟಿಕೆಟ್ ಅನ್ನು ತಮ್ಮ ಸ್ನೇಹಿತ ಚಾಟ್‌ಜಿಪಿಟಿ (ChatGPT) ಮೂಲಕ ಕ್ರಿಯೇಟ್ ಮಾಡಿ ಕೊಟ್ಟಿದ್ದಾಗಿ ತಿಳಿಸಿದ್ದಾನೆ. ವಿಮಾನ ನಿಲ್ದಾಣದ ಅಧಿಕಾರಿಗಳು ನೀಡಿದ ದೂರಿನನ್ವಯ ಶಂಶಾಬಾದ್ ಪೊಲೀಸರು ದಾಖಲೆ ನಕಲು (Forgery) ಮತ್ತು ವಂಚನೆ ಕಾಯ್ದೆಯಡಿ ನಕಲಿ ಟಿಕೆಟ್ ತಯಾರಿಸಿದ ಸ್ನೇಹಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
AI ಬಳಸುವಾಗ ಎಚ್ಚರ
ಚಾಟ್‌ಜಿಪಿಟಿ ಅಥವಾ ಇತರೆ AI ಟೂಲ್‌ಗಳನ್ನು ಬಳಸಿ ನಕಲಿ ಟಿಕೆಟ್‌ಗಳು, ಗುರುತಿನ ಚೀಟಿಗಳು ಅಥವಾ ಯಾವುದೇ ಅಧಿಕೃತ ದಾಖಲೆಗಳನ್ನು ಸೃಷ್ಟಿಸುವುದು ಅಥವಾ ಬಳಸುವುದು ಭಾರತೀಯ ದಂಡ ಸಂಹಿತೆ (IPC/BNS) ಮತ್ತು ಮಾಹಿತಿ ತಂತ್ರಜ್ಞಾನ (IT) ಕಾಯ್ದೆಯಡಿ ಗಂಭೀರ ಅಪರಾಧವಾಗಿದೆ. ತಮಾಷೆ ಅಥವಾ ‘ಪ್ರಾಂಕ್’ ಹೆಸರಿನಲ್ಲಿ ಇಂತಹ ಕೃತ್ಯ ಎಸಗಿದರೂ ಜೈಲು ಶಿಕ್ಷೆ ಮತ್ತು ದಂಡ ಎದುರಿಸಬೇಕಾಗಬಹುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
