Ayogya 2 Review: ಮುಗ್ಗರಿಸಿದ ‘ಅಯೋಗ್ಯ 2’; ನಿರೀಕ್ಷೆ ಇಟ್ಟುಕೊಂಡವರಿಗೆ ವಿಪರೀತ ನಿರಾಸೆ – Kannada News | Ayogya 2 Film Review Rachita Ram Sathish Ninasam S Mahesh Kumar movie utterly fails to impress

  • Time – 152 Minutes
  • Released – August 07, 2026
  • Language – Kannada
  • Genre – Action, Drama, Romantic

Cast – ಸತೀಶ್ ನೀನಾಸಂ, ರಚಿತಾ ರಾಮ್, ರವಿಶಂಕರ್ ಪಿ., ಸಾಧು ಕೋಕಿಲ, ಗಿರೀಶ್ ಶಿವಣ್ಣ, ಶಿವರಾಜ್ ಕೆ.ಆರ್. ಪೇಟೆ, ದೇವರಾಜ್, ತಬಲಾ ನಾಣಿ, ಸುಂದರ್ ರಾಜ್, ರವಿಚಂದ್ರನ್ ಮುಂತಾದವರು.

Director – ಎಸ್. ಮಹೇಶ್ ಕುಮಾರ್.

2018ರಲ್ಲಿ ‘ಅಯೋಗ್ಯ’ ಸಿನಿಮಾ ರಿಲೀಸ್ ಆಗಿ ಗಮನ ಸೆಳೆದಿತ್ತು. ಹಾಡುಗಳ ಮೂಲಕ ಸದ್ದು ಮಾಡಿದ್ದ ಆ ಸಿನಿಮಾಗೆ ಎಸ್. ಮಹೇಶ್ ಕುಮಾರ್ ಅವರು ನಿರ್ದೇಶನ ಮಾಡಿದ್ದರು. ಸತೀಶ್ ನೀನಾಸಂ (Sathish Ninasam), ರಚಿತಾ ರಾಮ್, ಪಿ. ರವಿಶಂಕರ್, ತಬಲಾ ನಾಣಿ, ಅರುಣಾ ಬಾಲರಾಜ್, ಸುಂದರ್ ರಾಜ್ ಮುಂತಾದವರು ನಟಿಸಿದ್ದ ಆ ಸಿನಿಮಾಗೆ ಈಗ ಸೀಕ್ವೆಲ್ ಬಂದಿದೆ. ಬಹುತೇಕ ಅದೇ ಪಾತ್ರವರ್ಗವನ್ನು ಇಟ್ಟುಕೊಂಡು ನಿರ್ದೇಶಕ ಮಹೇಶ್ ಕುಮಾರ್ ಅವರು ‘ಅಯೋಗ್ಯ 2’ ಸಿನಿಮಾ ಮಾಡಿದ್ದಾರೆ. ಆಗಸ್ಟ್ 7ರಂದು ಬಿಡುಗಡೆ ಆಗಿರುವ ಈ ಚಿತ್ರದ ವಿಮರ್ಶೆ (Ayogya 2 Film Review) ಇಲ್ಲಿದೆ..

ಯಾವುದೇ ಸಿನಿಮಾಗೆ ಸೀಕ್ವೆಲ್ ಬರುತ್ತದೆ ಎಂದಾಗ ಪ್ರೇಕ್ಷಕರಿಗೆ ನಿರೀಕ್ಷೆ ಹುಟ್ಟುವುದು ಸಹಜ. ಮೊದಲ ಪಾರ್ಟ್‌ಗಿಂತ ಹೆಚ್ಚಿನದ್ದು ಎರಡನೇ ಪಾರ್ಟ್‌ನಲ್ಲಿ ನೋಡಲು ಜನರು ಇಷ್ಟಪಡುತ್ತಾರೆ. ಕಾಲಕ್ಕೆ ತಕ್ಕಂತೆ ಅಪ್ಡೇಟ್ ಆದಂತಹ ಕಥೆ, ಮೇಕಿಂಗ್ ಇರಲಿ ಎಂದು ಪ್ರೇಕ್ಷಕರು ನಿರೀಕ್ಷಿಸುತ್ತಾರೆ. ಆದರೆ ‘ಅಯೋಗ್ಯ 2’ ಸಿನಿಮಾ ಈ ವಿಚಾರದಲ್ಲಿ ಎಡವಿದೆ. ಮೊದಲ ಪಾರ್ಟ್‌ನಲ್ಲಿ ಸರಳವಾದ ಒಂದು ಕಥೆ ಇತ್ತು. ಗ್ರಾಮ‌ ನೈರ್ಮಲ್ಯ ಹಿನ್ನೆಲೆಯಲ್ಲಿ ಆ ಕಥೆಯನ್ನು ತೋರಿಸಲಾಗಿತ್ತು. ಇದೇ ಕಥೆಯ ಮುಂದುವರಿದ ಭಾಗ ‘ಅಯೋಗ್ಯ 2’ ಚಿತ್ರದಲ್ಲಿದೆ. ಆದರೆ ಈ ಬಾರಿ ಸೀಕ್ವೆಲ್ ಸಲುವಾಗಿ ಕಥೆಯನ್ನು ಕಷ್ಟಪಟ್ಟು ಎಳೆದಾಡಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತದೆ.

ಶುರುವಿನಲ್ಲೇ ಪ್ರೇಕ್ಷಕರಿಗೆ ನಿರಾಸೆ:

ಆರಂಭದಲ್ಲೇ ಹೀರೋ ಪಾತ್ರಕ್ಕೆ ವಿಪರೀತ ಬಿಲ್ಡಪ್ ನೀಡಲಾಗಿದೆ. ಅದಕ್ಕಾಗಿ ಒಂದು ಫೈಟ್ ಹಾಗೂ ಹಾಡನ್ನು ಮೀಸಲಿಡಲಾಗಿದೆ. ಮೊದಲ ದೃಶ್ಯವು ‘ರೆಬಲ್ ಸ್ಟಾರ್’ ಅಂಬರೀಷ್ ಅಭಿಮಾನಿಗಳನ್ನು ಓಲೈಸುವ ಪ್ರಯತ್ನವೇ ಹೊರತು ಬೇರೇನೂ ಅಲ್ಲ. ನಂತರದ ದೃಶ್ಯಗಳಲ್ಲಾದರೂ ಏನಾದರೂ ಗಟ್ಟಿಯಾದ ಕಥಾಹಂದರ ಸಿಗುತ್ತದೆ ಎಂದುಕೊಂಡರೆ ಆಗಲೂ ಪ್ರೇಕ್ಷಕರಿಗೆ ನಿರಾಸೆ ಎದುರಾಗುತ್ತದೆ. ಸಿನಿಮಾ ಶುರುವಾಗಿ ಅರ್ಧ ಗಂಟೆ ಕಳೆದರೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ‘ಅಯೋಗ್ಯ 2’ ವಿಫಲವಾಗುತ್ತದೆ.

ಕೈಕೊಟ್ಟ ಕಾಮಿಡಿ ದೃಶ್ಯಗಳು:

ಸತೀಶ್ ಅವರ ಸಿನಿಮಾದಲ್ಲಿ ಜನರು ಕಾಮಿಡಿ ಇಷ್ಟಪಡುತ್ತಾರೆ. ಈ ಸಿನಿಮಾದಲ್ಲಿ ಸತೀಶ್ ಜೊತೆ ಗಿರೀಶ್ ಶಿವಣ್ಣ, ಶಿವರಾಜ್ ಕೆ.ಆರ್. ಪೇಟೆ, ಮಂಜು ಪಾವಗಡ ಕೂಡ ಸಾಥ್ ನೀಡಿದ್ದಾರೆ. ಆದರೂ ಕಾಮಿಡಿ ದೃಶ್ಯಗಳು ಉತ್ತಮವಾಗಿ ಮೂಡಿಬಂದಿಲ್ಲ. ಕೆಲವು ದೃಶ್ಯಗಳಂತೂ ನಗು ಉಕ್ಕಿಸುವುದಕ್ಕಿಂತಲೂ ಕಿರಿಕಿರಿ ಉಂಟುಮಾಡುವುದೇ ಜಾಸ್ತಿ ಆಗಿದೆ. ಹಾಸ್ಯದ ಹೆಸರಿನಲ್ಲಿ ಕೆಲವು ದೃಶ್ಯಗಳು ಸಭ್ಯತೆಯ ಗಡಿ ಮೀರಿವೆ. ಡಬಲ್ ಮೀನಿಂಗ್ ಸಂಭಾಷಣೆಗಳು ಚಿತ್ರದ ಘನತೆಯನ್ನು ತಗ್ಗಿಸಿವೆ.

ಕಥೆಗೆ ಹೊರೆಯಾದ ಹಾಡುಗಳು:

‘ಅಯೋಗ್ಯ 2’ ಸಿನಿಮಾದೊಳಗೆ ಹಾಡುಗಳು ಒಂದು ರೀತಿಯ ಹೊರೆಯಂತೆ ಭಾಸವಾಗುತ್ತಿವೆ. ಅನಗತ್ಯವಾಗಿ ಕಥೆಯ ಹರಿವಿಗೆ ಈ ಹಾಡುಗಳು ಅಡ್ಡಗಾಲು ಹಾಕಿದಂತೆ ಆಗಿದೆ. ಅರ್ಜುನ್ ಜನ್ಯ ಅವರು ಸಂಗೀತ ನೀಡಿರುವ ಹಾಡುಗಳು ಬಿಡಿಬಿಡಿಯಾಗಿ ಕೇಳಲು ಪರವಾಗಿಲ್ಲ ಎನಿಸಿದರೂ ಕೂಡ ಸಿನಿಮಾ ಕಥೆಯೊಳಗೆ ನಿರ್ದೇಶಕರು ಅನಗತ್ಯವಾಗಿ ತುರುಕಿದಂತಿವೆ. ಕಥೆಯನ್ನು ಮುಂದುವರಿಸುವ ದೃಷ್ಟಿಯಿಂದ ಹಾಡುಗಳು ಪೂರಕವಾಗಿಲ್ಲ.

ರಚಿತಾ ರಾಮ್ ಅಭಿಮಾನಿಗಳಿಗೆ ಬೇಸರ:

ನಟಿ ರಚಿತಾ ರಾಮ್ ಅವರು ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ. ಆದರೆ ‘ಅಯೋಗ್ಯ 2’ ಸಿನಿಮಾದಲ್ಲಿ ಅವರ ಪಾತ್ರವನ್ನು ನೋಡಿದರೆ ಅಭಿಮಾನಿಗಳಿಗೆ ಬೇಸರ ಆಗುವುದು ಖಚಿತ. ಇಡೀ ಸಿನಿಮಾದಲ್ಲಿ ಅವರ ಪಾತ್ರಕ್ಕೆ ಇರುವ ಸಮಯಾವಕಾಶ ತುಂಬಾ ಕಡಿಮೆ. ಆರಂಭದಲ್ಲಿ ಎರಡು ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ಅವರು ನಂತರ ಮಾಯವಾಗುತ್ತಾರೆ. ಮಧ್ಯಂತರದ ವೇಳೆಗೆ ಮತ್ತೆ ಪ್ರತ್ಯಕ್ಷ ಆಗುತ್ತಾರೆ. ಆದರೆ ಹೆಚ್ಚು ಡೈಲಾಗ್ ಇಲ್ಲ. ದ್ವಿತೀಯಾರ್ಧದಲ್ಲಿ ಕೂಡ ಅವರು ಹೆಚ್ಚು ಕಾಣಿಸಿಕೊಳ್ಳುವುದಿಲ್ಲ. ಇದ್ದೂ ಇಲ್ಲದಂತಹ ಪಾತ್ರವನ್ನು ಅವರಿಗೆ ನೀಡಲಾಗಿದೆ.

ಇದನ್ನೂ ಓದಿ: Boss Movie Review: ಶಿವಸ್ವಾಮಿ ಕೊಲೆ ರಹಸ್ಯದ ಕಥೆ ‘ಬಾಸ್’ ಹೇಗಿದೆ? ಇಲ್ಲಿದೆ ವಿಮರ್ಶೆ

‘ಅಯೋಗ್ಯ 2’ ಚಿತ್ರದ ಕಥೆಯಲ್ಲಿ ಬಲವಿಲ್ಲ:

ಈ ಸಿನಿಮಾದ ಮಧ್ಯಂತರದ ವೇಳೆಗೆ ಒಂದು ಸಣ್ಣ ಟ್ವಿಸ್ಟ್ ಇದೆ ಎಂಬುದು ಬಿಟ್ಟರೆ ಉಳಿದಂತೆ ಹೆಚ್ಚೇನೂ ಇಲ್ಲ. ಇಡೀ ಸಿನಿಮಾದಲ್ಲಿ ಇರುವುದು ಆರಕ್ಕೆ ಏರದ ಮೂರಕ್ಕೆ ಇಳಿಯದ ಕಥೆ. ಸಿದ್ದೇಗೌಡ (ಸತೀಶ್) ವರ್ಸಸ್ ಬಚ್ಚೇಗೌಡ (ರವಿಶಂಕರ್) ನಡುವಿನ ಸವಕಲು ಜಗಳದ ವಿಷಯ ಬಿಟ್ಟು ಬೇರೆ ಏನೂ ಇಲ್ಲ. ಡೈಲಾಗ್​ಗಳಲ್ಲಿ ಪ್ರಾಸ ಜೋಡಿಸುವ ಪ್ರಯತ್ನ ಆಗಿದೆ ಅಷ್ಟೇ. ಇಡೀ ಸಿನಿಮಾದಲ್ಲಿ ಲಾಜಿಕ್ ಹುಡುಕುವಂತೆಯೇ ಇಲ್ಲ. ಲಾಜಿಕ್ ಮರೆತು ಕಾಮಿಡಿಯನ್ನಾದರೂ ಎಂಜಾಯ್ ಮಾಡೋಣ ಎಂದರೆ ಅಲ್ಲಿಯೂ ಪ್ರೇಕ್ಷಕರಿಗೆ ನಿರಾಸೆ.

ಸತೀಶ್ ಎಚ್ಚರಿಕೆ ವಹಿಸಬೇಕಿತ್ತು:

ಸತೀಶ್ ನೀನಾಸಂ ಅವರು ತಾನೊಬ್ಬ ಪ್ರತಿಭಾವಂತ ನಟ ಎಂಬುದನ್ನು ‘ಡ್ರಾಮಾ’, ‘ಲೂಸಿಯಾ’ ರೀತಿಯ ಸಿನಿಮಾಗಳ ಮೂಲಕ ದಶಕದ ಹಿಂದೆಯೇ ಸಾಬೀತು ಮಾಡಿದವರು. ಆದರೆ ‘ಅಯೋಗ್ಯ 2’ ರೀತಿಯ ಕಥೆ ಅವರಿಗೆ ಹಿನ್ನಡೆ ಉಂಟುಮಾಡಿದೆ. ಕಥೆಯ ಆಯ್ಕೆಯಲ್ಲಿ ಅವರು ಇನ್ನಾದರೂ ಎಚ್ಚರಿಕೆ ವಹಿಸಬೇಕಾಗಿದೆ. 2018ರಲ್ಲಿ ‘ಅಯೋಗ್ಯ’ ಸಿನಿಮಾ ಬಂದಾಗ ಆ ಕಥೆಯಲ್ಲಿ ಸ್ವಲ್ಪ ಹೊಸತನ ಇತ್ತು. ಆದರೆ ಸೀಕ್ವೆಲ್ ಕಥೆಯಲ್ಲಿ ಏನೂ ಸುಧಾರಣೆ ಕಂಡಿಲ್ಲ.

ಇದನ್ನೂ ಓದಿ: Karavali Movie Review: ಕಂಬಳದ ಓಟದ ಮಧ್ಯೆ ಸೇಡಿನ ಸುಳಿ; ಹೀಗಿದೆ ‘ಕರಾವಳಿ’

ಕಥೆ, ಚಿತ್ರಕಥೆ, ನಿರ್ದೇಶನವೇ ಮೈನಸ್:

ರವಿಶಂಕರ್, ಸತೀಶ್, ಅರುಣಾ ಬಾಲರಾಜ್, ಸಂದರ್ ರಾಜ್, ಸಾಧು ಕೋಕಿಲ, ತಬಲಾ ನಾಣಿ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಆದರೂ ಕೂಡ ಕಥೆಯಲ್ಲಿ, ಚಿತ್ರಕಥೆಯಲ್ಲಿ, ನಿರ್ದೇಶನದಲ್ಲಿ ‘ಅಯೋಗ್ಯ 2’ ಸಿನಿಮಾ ಸಂಪೂರ್ಣವಾಗಿ ಎಡವಿದೆ. ಪ್ರತಿಭಾವಂತ ಕಲಾವಿದರಿದ್ದರೂ ಸಿನಿಮಾ ಇಷ್ಟು ಸಪ್ಪೆ ಆಗಿರುವುದಕ್ಕೆ ಅದೇ ಕಾರಣ. ಕ್ಲೈಮ್ಯಾಕ್ಸ್‌ನಲ್ಲಿ ರವಿಚಂದ್ರನ್ ಬಂದಾಗ ಸಿನಿಮಾದಲ್ಲಿ ಹೊಡಿಬಡಿ ಅಬ್ಬರ ಜಾಸ್ತಿ ಆಗಿದೆ ಎಂಬುದು ಬಿಟ್ಟರೆ ದೃಶ್ಯದ ತೂಕ ಹೆಚ್ಚಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Rabies Vaccine: ಭಾರತದಲ್ಲಿ ಹೆಚ್ಚುತ್ತಲೇ ಇದೆ ನಾಯಿ ಕಚ್ಚುವಿಕೆ; ಲಸಿಕೆ ಪಡೆದರೂ ರೇಬೀಸ್ ಬರಲು ಸಾಧ್ಯವೇ? – Kannada News | Can you get rabies even after taking the vaccine Health Care Tips

ನವದೆಹಲಿ, ಆಗಸ್ಟ್ 7: ರೇಬೀಸ್ ಸಾವುಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ರೋಗ ಹರಡುವಿಕೆಯನ್ನು ತಡೆಯಲು ಮುಂದಾಗಿದೆ. ಇದರ ಭಾಗವಾಗಿ, ರೇಬೀಸ್​ನಿಂದ ಉಂಟಾಗುತ್ತಿರುವ ಸಾವುಗಳ ಬಗ್ಗೆ ಆರೋಗ್ಯ, ಪಶುವೈದ್ಯಕೀಯ, ಪೌರಾಡಳಿತ ಮತ್ತು ಅರಣ್ಯ ಇಲಾಖೆಗಳ ಜಂಟಿ ತಂಡಗಳ ಮೂಲಕ ತನಿಖೆ ಮಾಡಲು ಭಾರತ ಸಜ್ಜಾಗಿದೆ. ಇತ್ತೀಚೆಗೆ ಪೂರ್ಣ ಪ್ರಮಾಣದ ರೇಬೀಸ್ ನಿರೋಧಕ ಲಸಿಕೆ (Rabies Vaccine) ಪಡೆದ ನಂತರವೂ ಕೆಲವರಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಂಡು ಸಾವನ್ನಪ್ಪಿರುವುದು “ಲಸಿಕೆ ಪಡೆದ ನಂತರವೂ ರೇಬೀಸ್ ಬರಲು ಸಾಧ್ಯವೇ?” ಎಂಬ ಆತಂಕಕಾರಿ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಕೆಲವು ವಿರಳ ಪ್ರಕರಣಗಳಲ್ಲಿ ರೇಬೀಸ್ ಲಸಿಕೆ ಪಡೆದರೂ ರೇಬೀಸ್ ರೋಗ ಉಂಟಾಗುತ್ತದೆ. ರೇಬೀಸ್ ಎಂಬುದು ನರಮಂಡಲದ ಮೇಲೆ ದಾಳಿ ಮಾಡುವ ವೈರಸ್‌ನಿಂದ ಉಂಟಾಗುತ್ತದೆ. ಇದು ಸಾಮಾನ್ಯವಾಗಿ ಸೋಂಕಿತ ಪ್ರಾಣಿಯ ಕಡಿತ ಅಥವಾ ಪರಚುವಿಕೆಯಿಂದ ಹರಡುತ್ತದೆ. ಒಮ್ಮೆ ರೋಗಲಕ್ಷಣಗಳು ಕಾಣಿಸಿಕೊಂಡರೆ ರೇಬೀಸ್‌ನಿಂದ ಸಾವು ಬಹುತೇಕ ಖಚಿತ. ಆದರೆ, ರೇಬೀಸ್ ವೈರಸ್ ನರಗಳ ಮೂಲಕ ಮೆದುಳನ್ನು ತಲುಪಲು ಕೆಲವು ವಾರಗಳು, ಕೆಲವೊಮ್ಮೆ ತಿಂಗಳುಗಳನ್ನೇ ತೆಗೆದುಕೊಳ್ಳುತ್ತದೆ. ಈ ಸಮಯದಲ್ಲಿ ಸೂಕ್ತ ಚಿಕಿತ್ಸೆ ಪಡೆದರೆ ರೋಗ ಹರಡುವಿಕೆಯನ್ನು ನಿಯಂತ್ರಿಸಲು ಸಾಧ್ಯವಿದೆ. ಅಂದರೆ ರೋಗವು ಅಪಾಯಕಾರಿಯಾಗುವ ಮೊದಲು ಸೂಕ್ತ ಚಿಕಿತ್ಸೆಯ ಮೂಲಕ ಅದನ್ನು ಸಂಪೂರ್ಣವಾಗಿ ತಡೆಯಬಹುದು. ಪ್ರಾಣಿ ಕಡಿದ ನಂತರ ತಕ್ಷಣವೇ ಚಿಕಿತ್ಸೆ ಪ್ರಾರಂಭಿಸಿದರೆ ರಕ್ಷಣೆ ಪಡೆಯಬಹುದಾದ ಕೆಲವೇ ಕೆಲವು ಸೋಂಕುಗಳಲ್ಲಿ ರೇಬೀಸ್ ಕೂಡ ಒಂದಾಗಿದೆ.

ರೇಬೀಸ್ ಅತ್ಯಂತ ಭೀಕರವಾದ ಕಾಯಿಲೆಯಾಗಿದ್ದರೂ, ಸರಿಯಾದ ಸಮಯಕ್ಕೆ ಲಸಿಕೆ, ಗಾಯದ ಆರೈಕೆ ಮತ್ತು ಇಮ್ಯುನೊಗ್ಲೋಬುಲಿನ್ ಪಡೆದರೆ ಇದನ್ನು ಸಂಪೂರ್ಣವಾಗಿ ತಡೆಯಬಹುದು. ಪ್ರಾಣಿ ಕಚ್ಚಿದಾಗ ಅಥವಾ ಪರಚಿದಾಗ ಗಾಯ ಸಣ್ಣದಾಗಿ ಕಂಡರೂ ಅಲಕ್ಷಿಸಬೇಡಿ. ತಕ್ಷಣವೇ ಆ ಗಾಯವನ್ನು ತೊಳೆದು, ವೈದ್ಯರನ್ನು ಸಂಪರ್ಕಿಸಿ.

ಇದನ್ನೂ ಓದಿ: Rabies: ನಾಯಿ ಕಚ್ಚಿದ ನಂತರ ರೇಬೀಸ್ ಇಂಜೆಕ್ಷನ್ ಪಡೆದರೂ ಸಾಯುವ ಸಾಧ್ಯತೆ ಉಂಟಾ?

ಕೇವಲ ಲಸಿಕೆ ಒಂದೇ ರೇಬೀಸ್ ಅನ್ನು ತಡೆಯುತ್ತದೆ ಎಂಬುದು ಸಾಮಾನ್ಯ ತಪ್ಪು ಕಲ್ಪನೆ. ಪ್ರಾಣಿ ಕಡಿದ ನಂತರ ನೀಡುವ ಚಿಕಿತ್ಸೆ 3 ಅತ್ಯಂತ ಪ್ರಮುಖ ಹಂತಗಳನ್ನು ಒಳಗೊಂಡಿರುತ್ತದೆ. ಅವುಗಳೆಂದರೆ,

ಗಾಯವನ್ನು ತೊಳೆಯುವುದು:

ಪ್ರಾಣಿ ಕಚ್ಚಿದ ತಕ್ಷಣವೇ ಗಾಯವನ್ನು ಕನಿಷ್ಠ 15 ನಿಮಿಷಗಳ ಕಾಲ ಹರಿಯುವ ನೀರು ಮತ್ತು ಸಾಬೂನಿನಿಂದ ತೊಳೆಯಬೇಕು. ಈ ಸಣ್ಣ ಕ್ರಿಯೆಯು ಗಾಯದ ಭಾಗದಲ್ಲಿರುವ ವೈರಸ್‌ನ ಹರಡುವಿಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

ರೇಬೀಸ್ ಇಮ್ಯುನೊಗ್ಲೋಬುಲಿನ್ (RIG):

ಈ ಮೊದಲು ಲಸಿಕೆ ಪಡೆಯದ ವ್ಯಕ್ತಿಗೆ ಇಮ್ಯುನೊಗ್ಲೋಬುಲಿನ್ ನೀಡಲಾಗುತ್ತದೆ. ದೇಹವು ತನ್ನದೇ ಆದ ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುವವರೆಗೆ, ಇದು ತಕ್ಷಣವೇ ವೈರಸ್ ವಿರುದ್ಧ ಹೋರಾಡಲು ಆ್ಯಂಟಿಬಾಡಿಗಳನ್ನು ಒದಗಿಸುತ್ತದೆ.

ಲಸಿಕೆ ಡೋಸ್‌ಗಳು:

ಲಸಿಕೆಯು ದೇಹದ ರೋಗನಿರೋಧಕ ವ್ಯವಸ್ಥೆಗೆ ದೀರ್ಘಕಾಲದ ರಕ್ಷಣೆ ನೀಡಲು ತರಬೇತಿ ನೀಡುತ್ತದೆ.

ಇದನ್ನೂ ಓದಿ: Rabies: ರೇಬೀಸ್ ತಡೆಗಟ್ಟಲು ಸಾಧ್ಯವೇ?; ಆರೋಗ್ಯ ತಜ್ಞರ ಅಚ್ಚರಿಯ ಉತ್ತರ ಇಲ್ಲಿದೆ

ಲಸಿಕೆ ಪಡೆದರೂ ರೇಬೀಸ್ ಬರಲು ಪ್ರಮುಖ ಕಾರಣಗಳು:

ಪೋಸ್ಟ್-ಎಕ್ಸ್‌ಪೋಶರ್ ಪ್ರೊಫಿಲ್ಯಾಕ್ಸಿಸ್ (PEP) ತಡವಾಗುವುದು:

ಶ್ವಾನ ಅಥವಾ ಇತರ ಸೋಂಕಿತ ಪ್ರಾಣಿ ಕಚ್ಚಿದ ತಕ್ಷಣವೇ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯದಿರುವುದು ಅತ್ಯಂತ ಅಪಾಯಕಾರಿ. ರೇಬೀಸ್ ವೈರಸ್ ನರಮಂಡಲವನ್ನು ತಲುಪುವ ಮೊದಲು ಲಸಿಕೆ ನೀಡಬೇಕಾಗುತ್ತದೆ.

ಇಮ್ಯುನೊಗ್ಲೋಬುಲಿನ್ (RIG) ನೀಡದಿರುವುದು:

ಗಂಭೀರ ಗಾಯಗಳಾದಾಗ ಕೇವಲ ಲಸಿಕೆ ಸಾಲದು. ಗಾಯದ ಭಾಗಕ್ಕೆ ನೇರವಾಗಿ ‘ರೇಬೀಸ್ ಇಮ್ಯುನೊಗ್ಲೋಬುಲಿನ್’ (RIG) ಇಂಜೆಕ್ಷನ್ ನೀಡುವುದು ಕಡ್ಡಾಯ. ಇದನ್ನು ನೀಡದಿದ್ದಾಗ ವೈರಸ್ ತಕ್ಷಣವೇ ಹರಡುವ ಸಾಧ್ಯತೆ ಹೆಚ್ಚಿರುತ್ತದೆ.

ಗಾಯವನ್ನು ಸರಿಯಾಗಿ ಸ್ವಚ್ಛಗೊಳಿಸದಿರುವುದು:

ಪ್ರಾಣಿ ಕಚ್ಚಿದ ತಕ್ಷಣ ಗಾಯವನ್ನು ಕನಿಷ್ಠ 15 ನಿಮಿಷಗಳ ಕಾಲ ಹರಿಯುವ ನೀರು ಮತ್ತು ಸಾಬೂನಿನಿಂದ ತೊಳೆಯಬೇಕು. ಈ ಮೊದಲ ಹಂತವನ್ನು ನಿರ್ಲಕ್ಷಿಸುವುದರಿಂದ ವೈರಸ್‌ನ ಸಾಂದ್ರತೆ ದೇಹದಲ್ಲಿ ಹಾಗೆಯೇ ಉಳಿಯುತ್ತದೆ.

ಅಸಂಪೂರ್ಣ ಲಸಿಕೆ ಡೋಸ್‌ಗಳು:

ವೈದ್ಯರು ನಿಗದಿಪಡಿಸಿದ ಎಲ್ಲಾ ಡೋಸ್‌ಗಳನ್ನು (3, 7, 14 ಮತ್ತು 28ನೇ ದಿನಗಳು) ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳದಿರುವುದು.

ರೋಗನಿರೋಧಕ ಶಕ್ತಿಯ ಕೊರತೆ:

ರೋಗಿಗಳಲ್ಲಿ ತೀವ್ರತರದ ರೋಗನಿರೋಧಕ ಶಕ್ತಿಯ ಕೊರತೆ ಇದ್ದಾಗ ದೇಹವು ಲಸಿಕೆಗೆ ಸರಿಯಾಗಿ ಸ್ಪಂದಿಸಿ ಆ್ಯಂಟಿಬಾಡಿಗಳನ್ನು ಉತ್ಪಾದಿಸಲು ವಿಫಲವಾಗಬಹುದು.

ರೇಬೀಸ್ ಲಸಿಕೆಯು ಸರಿಯಾದ ಸಮಯಕ್ಕೆ ಮತ್ತು ನಿಖರವಾದ ಮಾರ್ಗದರ್ಶನದಂತೆ ಪಡೆದುಕೊಂಡರೆ ಶೇ. 100ರಷ್ಟು ಪರಿಣಾಮಕಾರಿಯಾಗಿದೆ. ಅಜಾಗರೂಕತೆ ಮತ್ತು ಪ್ರೋಟೋಕಾಲ್ ಪಾಲಿಸದಿರುವುದೇ ಇಂತಹ ವಿರಳ ಸಾವುಗಳಿಗೆ ಮುಖ್ಯ ಕಾರಣ ಎಂದು ಅಧ್ಯಯನಗಳು ಎಚ್ಚರಿಸಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಬ್ಲೂಬೆರಿ, ಸ್ಟ್ರಾಬೆರಿ, ಬ್ಲ್ಯಾಕ್‌ಬೆರಿ… ಯಾವ ಬೆರ್ರಿ ಹಣ್ಣು ಯಾವ ಆರೋಗ್ಯ ಸಮಸ್ಯೆಗೆ ಉತ್ತಮ ತಿಳಿದುಕೊಳ್ಳಿ – Kannada News | 5 Healthy Berries You Should Add to Your Daily Diet

ಇತ್ತೀಚಿನ ದಿನಗಳಲ್ಲಿ ಆರೋಗ್ಯಕರ ಆಹಾರದ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚಾಗಿದೆ. ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವ ಆಹಾರಗಳಲ್ಲಿ ಹಣ್ಣುಗಳಿಗೆ ವಿಶೇಷ ಸ್ಥಾನವಿದ್ದು, ಅವುಗಳಲ್ಲಿ ಬೆರ್ರಿ ಹಣ್ಣುಗಳು (Berries) ಸೂಪರ್‌ಫುಡ್‌ಗಳೆಂದು ಪರಿಗಣಿಸಲಾಗುತ್ತದೆ. ಬ್ಲೂಬೆರಿ, ಸ್ಟ್ರಾಬೆರಿ, ರಾಸ್ಪ್‌ಬೆರಿ, ಬ್ಲ್ಯಾಕ್‌ಬೆರಿ ಹಾಗೂ ಕ್ರ್ಯಾನ್‌ಬೆರಿ ಹಣ್ಣುಗಳಲ್ಲಿ ಫೈಬರ್, ವಿಟಮಿನ್ ಸಿ, ವಿಟಮಿನ್ ಕೆ, ಮ್ಯಾಂಗನೀಸ್ ಹಾಗೂ ಶಕ್ತಿಶಾಲಿ ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿವೆ. ಇವು ಹೃದಯದ ಆರೋಗ್ಯ, ಮೆದುಳಿನ ಕಾರ್ಯಕ್ಷಮತೆ, ಜೀರ್ಣಕ್ರಿಯೆ ಮತ್ತು ರೋಗನಿರೋಧಕ ಶಕ್ತಿಯನ್ನು ಉತ್ತಮಗೊಳಿಸಲು ಸಹಕಾರಿಯಾಗುತ್ತವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹೀಗಾದರೆ ಯಾವ ಬೆರ್ರಿ ಹಣ್ಣು ಯಾವ ಆರೋಗ್ಯ ಲಾಭ ನೀಡುತ್ತದೆ ಮತ್ತು ದಿನಕ್ಕೆ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಜೊತೆಗೆ, ಯಾರು ಸೇವನೆ ಮಾಡುವಾಗ ಎಚ್ಚರಿಕೆ ವಹಿಸಬೇಕು ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಆರೋಗ್ಯಕ್ಕೆ ಅತ್ಯುತ್ತಮ ಬೆರ್ರಿ ಹಣ್ಣುಗಳು

ಬ್ಲೂಬೆರಿ (Blueberry): ಬ್ಲೂಬೆರಿಯಲ್ಲಿ ಆಂಥೋಸಯಾನಿನ್ (Anthocyanin) ಎಂಬ ಶಕ್ತಿಶಾಲಿ ಆಂಟಿಆಕ್ಸಿಡೆಂಟ್ ಸಮೃದ್ಧವಾಗಿದೆ. ಇದು ದೇಹದ ಕೋಶಗಳನ್ನು ಫ್ರೀ ರ್ಯಾಡಿಕಲ್ ಹಾನಿಯಿಂದ ರಕ್ಷಿಸುತ್ತದೆ.

ಪ್ರಮುಖ ಲಾಭಗಳು:

  • ಮೆದುಳಿನ ಕಾರ್ಯಕ್ಷಮತೆಯನ್ನು ಬೆಂಬಲಿಸುತ್ತದೆ
  • ಹೃದಯದ ಆರೋಗ್ಯಕ್ಕೆ ಉತ್ತಮ
  • ಉರಿಯೂತ ಕಡಿಮೆ ಮಾಡಲು ಸಹಕಾರಿ
  • ಜ್ಞಾಪಕಶಕ್ತಿಗೆ ನೆರವಾಗಬಹುದು

ಸ್ಟ್ರಾಬೆರಿ (Strawberry): ಸ್ಟ್ರಾಬೆರಿಯಲ್ಲಿ ವಿಟಮಿನ್ ಸಿ, ಫೋಲೇಟ್ ಹಾಗೂ ಫೈಬರ್ ಅಧಿಕ ಪ್ರಮಾಣದಲ್ಲಿರುತ್ತದೆ.

ಪ್ರಮುಖ ಲಾಭಗಳು:

  • ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ
  • ಚರ್ಮದ ಆರೋಗ್ಯ ಕಾಪಾಡುತ್ತದೆ
  • ಹೃದಯದ ಆರೋಗ್ಯಕ್ಕೆ ನೆರವಾಗುತ್ತದೆ
  • ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಹಕಾರಿ

ರಾಸ್ಪ್‌ಬೆರಿ (Raspberry): ರಾಸ್ಪ್‌ಬೆರಿಯಲ್ಲಿ ಫೈಬರ್ ಮತ್ತು ಮ್ಯಾಂಗನೀಸ್ ಸಮೃದ್ಧವಾಗಿದೆ.

ಪ್ರಮುಖ ಲಾಭಗಳು:

  • ಜೀರ್ಣಕ್ರಿಯೆ ಸುಧಾರಿಸುತ್ತದೆ
  • ಹೊಟ್ಟೆ ತುಂಬಿದ ಅನುಭವ ನೀಡುತ್ತದೆ
  • ತೂಕ ನಿಯಂತ್ರಣಕ್ಕೆ ಸಹಕಾರಿ
  • ಕರುಳಿನ ಆರೋಗ್ಯ ಉತ್ತಮಗೊಳಿಸುತ್ತದೆ

ಇದನ್ನೂ ಓದಿ: ಸೋರೆಕಾಯಿ ಜ್ಯೂಸ್ ಕುಡಿಯುವವರೇ ಗಮನಿಸಿ! ಹೃದಯ, ಜೀರ್ಣಕ್ರಿಯೆ, ತೂಕ ಇಳಿಕೆಗೆ ಸಿಗುವ ಆರೋಗ್ಯ ಲಾಭಗಳು

ಬ್ಲ್ಯಾಕ್‌ಬೆರಿ (Blackberry): ಬ್ಲ್ಯಾಕ್‌ಬೆರಿಯಲ್ಲಿ ವಿಟಮಿನ್ ಕೆ, ವಿಟಮಿನ್ ಸಿ ಮತ್ತು ಫೈಬರ್ ಹೆಚ್ಚಾಗಿದೆ.

ಪ್ರಮುಖ ಲಾಭಗಳು:

  • ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು
  • ಜೀರ್ಣಕ್ರಿಯೆ ಸುಧಾರಿಸುತ್ತದೆ
  • ಆಂಟಿಆಕ್ಸಿಡೆಂಟ್‌ಗಳಿಂದ ಕೋಶಗಳನ್ನು ರಕ್ಷಿಸುತ್ತದೆ

ಕ್ರ್ಯಾನ್‌ಬೆರಿ (Cranberry): ಕ್ರ್ಯಾನ್‌ಬೆರಿ ವಿಶೇಷವಾಗಿ ಮೂತ್ರನಾಳದ ಆರೋಗ್ಯಕ್ಕೆ (Urinary Tract Health) ಹೆಸರುವಾಸಿಯಾಗಿದೆ.

ಪ್ರಮುಖ ಲಾಭಗಳು:

  • ಯೂರಿನರಿ ಟ್ರ್ಯಾಕ್ಟ್ ಸೋಂಕಿನ ಅಪಾಯ ಕಡಿಮೆ ಮಾಡಲು ನೆರವಾಗಬಹುದು
  • ವಿಟಮಿನ್ ಸಿ ಒದಗಿಸುತ್ತದೆ
  • ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ
  • ದೇಹವನ್ನು ಫ್ರೀ ರ್ಯಾಡಿಕಲ್ ಹಾನಿಯಿಂದ ರಕ್ಷಿಸುತ್ತದೆ

ಬೆರ್ರಿ ಹಣ್ಣುಗಳನ್ನು ಸೇವಿಸುವ ಅತ್ಯುತ್ತಮ ವಿಧಾನ

  • ತಾಜಾ ಬೆರ್ರಿ ಹಣ್ಣುಗಳನ್ನು ಚೆನ್ನಾಗಿ ತೊಳೆದು ಸೇವಿಸಿ.
  • ಓಟ್ಸ್, ಮೊಸರು, ಸ್ಮೂದಿ, ಸಲಾಡ್ ಅಥವಾ ಬ್ರೇಕ್‌ಫಾಸ್ಟ್ ಬೌಲ್‌ನಲ್ಲಿ ಸೇರಿಸಬಹುದು.
  • ತಾಜಾ ಹಣ್ಣು ಸಿಗದಿದ್ದರೆ ಸಕ್ಕರೆ ಸೇರಿಸದ Frozen Berries ಬಳಸಬಹುದು.
  • ಪ್ರತಿದಿನ ಸುಮಾರು 75–150 ಗ್ರಾಂ ಬೆರ್ರಿ ಹಣ್ಣು ಸೇವಿಸುವುದು ಆರೋಗ್ಯಕರ ಆಹಾರದ ಭಾಗವಾಗಬಹುದು.
  • ಜ್ಯಾಂ, ಸಿರಪ್ ಅಥವಾ ಹೆಚ್ಚು ಸಕ್ಕರೆ ಹೊಂದಿರುವ ಬೆರ್ರಿ ಉತ್ಪನ್ನಗಳ ಬದಲು ನೈಸರ್ಗಿಕ ಹಣ್ಣುಗಳಿಗೆ ಆದ್ಯತೆ ನೀಡಿ.

ಯಾರು ಎಚ್ಚರಿಕೆ ವಹಿಸಬೇಕು?

  • ಬೆರ್ರಿ ಹಣ್ಣುಗಳಿಗೆ ಅಲರ್ಜಿ ಇರುವವರು ಸೇವಿಸಬಾರದು.
  • ಮಧುಮೇಹ ಇರುವವರು ಪ್ರಮಾಣದ ಬಗ್ಗೆ ವೈದ್ಯರು ಅಥವಾ ಪೌಷ್ಟಿಕ ತಜ್ಞರ ಸಲಹೆ ಪಡೆಯುವುದು ಉತ್ತಮ.
  • ಕಿಡ್ನಿ ಸಮಸ್ಯೆ ಇರುವವರು ಪೊಟ್ಯಾಸಿಯಂ ಅಥವಾ ಇತರ ಪೌಷ್ಟಿಕಾಂಶಗಳ ಬಗ್ಗೆ ವೈದ್ಯರ ಸಲಹೆ ಪಡೆಯಬೇಕು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೆವಿಎನ್ ಜೊತೆ ಸೇರಿ ಕರ್ನಾಟಕದಲ್ಲಿ ‘ಟಾಕ್ಸಿಕ್​’ ಡಿಸ್ಟ್ರಿಬ್ಯೂಟ್ ಮಾಡಲಿದ್ದಾರೆ ಯಶ್ – Kannada News | Yash Starrer Toxic Set for Historic Record Breaking Release in Karnataka

ರಾಕಿಂಗ್ ಸ್ಟಾರ್ ಯಶ್ ಪ್ರತಿ ಬಾರಿ ಹೊಸ ಹೊಸ ಜವಾಬ್ದಾರಿ ಹೊತ್ತು ಸಾಗುತ್ತಿದ್ದಾರೆ. ಅವರ ಅಭಿನಯದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್’ ಸಿನಿಮಾ ಕರ್ನಾಟಕದಲ್ಲಿ ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ. ರಾಜ್ಯದ ಬಾಕ್ಸ್ ಆಫೀಸ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮಟ್ಟದ ಬಿಡುಗಡೆ ಕಾಣಲು ಈ ಸಿನಿಮಾ ಸಕಲ ಸಿದ್ಧತೆ ಮಾಡಿಕೊಂಡಿದೆ. ಅಭಿಮಾನಿಗಳಲ್ಲಿ ಈಗಾಗಲೇ ಭಾರಿ ಕುತೂಹಲ ಮೂಡಿಸಿರುವ ಈ ಚಿತ್ರವು ಹೊಸ ದಾಖಲೆಯನ್ನು ಬರೆಯಲಿದೆ. ಈ ಚಿತ್ರದ ಮೂಲಕ ಯಶ್ ಅವರು ಡಿಸ್ಟ್ರಿಬ್ಯೂಟರ್ ಕೂಡ ಆಗುತ್ತಿದೆ.

ದೊಡ್ಡ ಸಂಖ್ಯೆಯಲ್ಲಿ ‘ಟಾಕ್ಸಿಕ್’ ಸಿನಿಮಾ ರಿಲೀಸ್ ಆಗಲಿದೆ ಎಂದು ವರದಿ ಆಗಿದೆ. ಮೊದಲ ದಿನವೇ ಅತ್ಯಂತ ಹೆಚ್ಚಿನ ಶೋ ಪ್ರದರ್ಶನಗಳನ್ನು ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ. ರಾಜಧಾನಿ ಬೆಂಗಳೂರು ಒಂದರಲ್ಲೇ ಮೊದಲ ದಿನ ದಾಖಲೆ ಮಟ್ಟದ ಶೋಗಳು ಪ್ರದರ್ಶನ ಕಾಣಲಿವೆ. ಮುಂಜಾನೆ ವಿಶೇಷ ಫ್ಯಾನ್​ ಶೋಗಳನ್ನು ಆಯೋಜನೆ ಮಾಡಲಾಗುತ್ತಿದೆ.

ಈ ಬಿಗ್ ಬಜೆಟ್ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸಿವೆ. ಈ ಎರಡೂ ಸಂಸ್ಥೆಗಳೇ ಸ್ವತಃ ಕರ್ನಾಟಕದಾದ್ಯಂತ ಸಿನಿಮಾವನ್ನು ವಿತರಣೆ ಮಾಡುತ್ತಿರುವುದು ವಿಶೇಷ. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಇದು ಅತ್ಯಂತ ಮಹತ್ವಾಕಾಂಕ್ಷೆಯ ಸಿನಿಮಾ ಆಗಿದೆ.

ಗೀತು ಮೋಹನ್‌ದಾಸ್ ಅವರು ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾವನ್ನು ಏಕಕಾಲದಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರೀಕರಿಸಲಾಗಿದೆ. ಕನ್ನಡದ ಜೊತೆಗೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರ ತೆರೆಕಾಣಲಿದೆ.

ಇದನ್ನೂ ಓದಿ: ಗೂಗ್ಲಿಯಲ್ಲಿ ಯಶ್​​ಗೆ ಬರೆದ ಡೈಲಾಗ್ ನಿಜವಾಯ್ತು; ಜಾಗತಿಕ ಮಟ್ಟದಲ್ಲಿ ಟಾಕ್ಸಿಕ್ ಹವಾ

ವೆಂಕಟ್ ಕೆ ನಾರಾಯಣ್ ಹಾಗೂ ನಟ ಯಶ್ ಈ ಚಿತ್ರದ ನಿರ್ಮಾಪಕರಾಗಿದ್ದಾರೆ. ಯಶ್ ನಾಯಕನಾಗಿ ನಟಿಸಿದ್ದು, ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ 2026ರ ಆಗಸ್ಟ್ 26ರಂದು ಪ್ರಪಂಚದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಧುರಂಧರ್’ ದಾಖಲೆ: ಜಗತ್ತಿನಲ್ಲೇ ಅತಿ ಹೆಚ್ಚು ವೀಕ್ಷಿಸಿಲ್ಪಟ್ಟ ಸಿನಿಮಾ – Kannada News | Dhurandhar became highest watched non English movie on Netflix

ರಣ್​​ವೀರ್ ಸಿಂಗ್ (Ranveer Singh) ನಟಿಸಿ, ಆದಿತ್ಯ ಧರ್ ನಿರ್ದೇಶನ ಮಾಡಿರುವ ‘ಧುರಂಧರ್’ (Dhurandhar) ಸಿನಿಮಾ ಈಗಾಗಲೇ ಭಾರತೀಯ ಬಾಕ್ಸ್ ಆಫೀಸ್​​ನಲ್ಲಿ ಹಲವು ದಾಖಲೆಗಳನ್ನು ಮಾಡಿದೆ. ಇದೀಗ ದೊಡ್ಡ ಹಿರಿಮೆಯೊಂದು ‘ಧುರಂಧರ್’ ಸಿನಿಮಾ ಪಾಲಾಗಿದೆ. ಬಾಕ್ಸ್ ಆಫೀಸ್​​ನಲ್ಲಿ ದಾಖಲೆಗಳನ್ನು ಬರೆದ ‘ಧುರಂಧರ್’ ಈಗ ಒಟಿಟಿಯಲ್ಲಿ ಮಹತ್ವದ ದಾಖಲೆಯನ್ನು ತನ್ನ ಹೆಸರಿಗೆ ಮಾಡಿಕೊಂಡಿದೆ. ಒಟಿಟಿ ದೈತ್ಯ ನೆಟ್​​ಫ್ಲಿಕ್ಸ್​​ನಲ್ಲಿ ಸ್ಟ್ರೀಂ ಆಗುತ್ತಿರುವ ‘ಧುರಂಧರ್’ ಈ ವರ್ಷ ವಿಶ್ವದಲ್ಲೇ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಇಂಗ್ಲೀಷೇತರ ಸಿನಿಮಾ ಎನಿಸಿಕೊಂಡಿದೆ. ಈ ಬಗ್ಗೆ ಖುದ್ದು ನೆಟ್​​ಫ್ಲಿಕ್ಸ್​ ಸಿಇಓ ಮಾಹಿತಿ ಹಂಚಿಕೊಂಡಿದ್ದಾರೆ.

ನೆಟ್‌ಫ್ಲಿಕ್ಸ್‌ನ ಸಹ-ಸಿಇಒ ಟೆಡ್ ಸರಂಡೋಸ್ ಅವರು, ಸಂದರ್ಶನವೊಂದರಲ್ಲಿ ಮಾತನಾಡಿ, ಈ ವರ್ಷ ಜಗತ್ತಿನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಇಂಗ್ಲಿಷೇತರ (non-English) ಚಲನಚಿತ್ರ ‘ಧುರಂಧರ್’ ಎಂದು ಹೇಳಿದ್ದಾರೆ. ಇದು ಇತರ ಹಲವು ಇಂಗ್ಲಿಷ್ ಚಿತ್ರಗಳಿಗಿಂತ ಹೆಚ್ಚು ವೀಕ್ಷಣೆಗೆ ಒಳಪಟ್ಟಿದೆ ಮತ್ತು ವೀಕ್ಷಣೆಯ (ವೀವರ್ಸ್) ವಿಷಯದಲ್ಲಿ ಅಮೆರಿಕ ಮತ್ತು ಬ್ರಿಟನ್ ನಂತರದ ಸ್ಥಾನದಲ್ಲಿದೆ’ ಎಂದಿದ್ದಾರೆ.

‘ಧುರಂಧರ್’ ಸಿನಿಮಾವು 2026ರ ಜನವರಿಯಿಂದ ಜೂನ್ ವರೆಗೆ 37 ಮಿಲಿಯನ್ (3,70,00,000) ವೀಕ್ಷಣೆಗಳನ್ನು ಗಳಿಸಿದೆ. ಇದು 22 ದೇಶಗಳಲ್ಲಿ ನೆಟ್‌ಫ್ಲಿಕ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಭಾರತೀಯ ಸಿನಿಮಾಗಳು ವಿದೇಶಗಳಲ್ಲಿ ದೊಡ್ಡ ಮಟ್ಟದ ಪ್ರದರ್ಶನ ನೀಡುವುದು ತುಸು ಕಡಿಮೆಯೇ ಆದರೆ ‘ಧುರಂಧರ್’ ವಿದೇಶಗಳಲ್ಲಿಯೇ ಅಪ್ರತಿಮ ದಾಖಲೆ ಮಾಡಿದೆ. ಆದಿತ್ಯ ಧರ್ ನಿರ್ದೇಶನದ ‘ಧುರಂಧರ್’ ಫ್ರಾಂಚೈಸಿ ಎರಡು ಸಿನಿಮಾಗಳು ವಿಶ್ವಾದ್ಯಂತ 3,100 ಕೋಟಿಗೂ ಹೆಚ್ಚು ಹಣ ಗಳಿಸಿವೆ. ಎರಡನೇ ಭಾಗವಾದ ‘ಧುರಂಧರ್: ದಿ ರಿವೆಂಜ್’, ₹1,800 ಕೋಟಿ (ವಿಶ್ವ ಬಾಕ್ಸ್​ಆಫೀಸ್​​ನಲ್ಲಿ) ಮೈಲಿಗಲ್ಲನ್ನು ದಾಟಿದೆ.

ಇದನ್ನೂ ಓದಿ:‘ಸಂಘಿ’ ಎಂದು ಟ್ರೋಲ್ ಮಾಡಿದವರಿಗೆ ‘ಧುರಂಧರ್’ ನಟ ಆರ್‌. ಮಾಧವನ್ ತಿರುಗೇಟು

ಭಾರತೀಯ ಚಲನಚಿತ್ರಗಳು ಮತ್ತು ಟಿವಿ ಸರಣಿಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚುತ್ತಿರುವ ಬೇಡಿಕೆಯ ಬಗ್ಗೆ ನೆಟ್​​ಫ್ಲಿಕ್ಸ್​ ಸಿಇಓ ಟೆಡ್ ಮಾತನಾಡಿ, ‘2024ರಿಂದ ಪ್ರತಿ ವಾರವೂ ಯಾವುದಾದರೂ ಒಂದು ಭಾರತೀಯ ಚಲನಚಿತ್ರ ಅಥವಾ ವೆಬ್ ಸರಣಿಯು ನೆಟ್​ಫ್ಲಿಕ್ಸ್​​ನಲ್ಲಿ ಜಾಗತಿಕವಾಗಿ ಟಾಪ್ 10 ಪಟ್ಟಿಯಲ್ಲಿರುತ್ತಿದೆ ಎಂದು ಅವರು ಹೇಳಿದರು. ಈ ವರ್ಷ ಜಾಗತಿಕವಾಗಿ ಪ್ರೇಕ್ಷಕರು 3.5 ಶತಕೋಟಿ ಗಂಟೆಗಳ ಭಾರತೀಯ ಕಂಟೆಂಟ್ ಅನ್ನು ವೀಕ್ಷಿಸಿದ್ದಾರೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಭಾರತೀಯ ಕಂಟೆಂಟ್​​ಗೆ ವಿಶ್ವ ಮನರಂಜನಾ ಕ್ಷೇತ್ರದಲ್ಲಿ ಇರುವ ಬೇಡಿಕೆಯನ್ನು ಅವರು ಜಾಹೀರು ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸಂಪುಟ ವಿಸ್ತರಣೆ ಬೆನ್ನಲ್ಲೇ ಇದೀಗ ಖಾತೆ ಕ್ಯಾತೆ, ಮತ್ತೆ ದಿಲ್ಲಿಯತ್ತ ಡಿಕೆ ಶಿವಕುಮಾರ್ – Kannada News | CM DK Shivakumar To Visit Delhi To Meet High Command To Discuss About Portfolio Allocation

ಬೆಂಗಳೂರು, (ಆಗಸ್ಟ್ 07): ಸಂಪುಟ ವಿಸ್ತರಣೆ (Cabinet Expansion)  ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್​​​​​​ನಲ್ಲಿ (Karnataka Congress) ಅಸಮಾಧಾನ ಸ್ಫೋಟಗೊಂಡಿದ್ದು, ಮಂತ್ರಿ ಸ್ಥಾನ ಕೈತಪ್ಪಿದ್ದಕ್ಕೆ ಬೇಸರಗೊಂಡಿರುವ ಶಾಸಕರ ಮನವೊಲಿಕೆ ಕಸರತ್ತು ನಡೆದಿದೆ. ಇದರ ಮಧ್ಯೆ ಇದೀಗ ನೂತನ ಸಚಿವರ ಖಾತೆ ಕ್ಯಾತೆ ಶುರುವಾಗಿದೆ. ಮೊದಲು ಮಂತ್ರಿ ಸ್ಥಾನ ಸಿಕ್ಕರೆ ಸಾಕಪ್ಪ ಎನ್ನುತ್ತಿದ್ದವರು ಇದೀಗ ಸಚಿವರಾಗುತ್ತಿದ್ದಂತೆಯೇ ಇಂತಹದ್ದೇ ಖಾತೆ ಬೇಕೆಂದು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಯಾರಿಗೆ ಯಾವ ಖಾತೆ ನೀಡಬೇಕೆಂದು ಚರ್ಚಿಸಲು ಸಿಎಂ ಡಿಕೆ ಶಿವಕುಮಾರ್ ಅವರು ಮತ್ತೆ ದೆಹಲಿಯತ್ತ ಮುಖ ಮಾಡಿದ್ದಾರೆ. ಹೌದು…ನೂತನ ಸಚಿವರಿಗೆ ಖಾತೆ ಹಂಚಿಕೆ ಸಂಬಂಧ ಹೈಕಮಾಂಡ್ ನಾಯಕರ ಚರ್ಚಿಸಲು ಡಿಕೆ ಶಿವಕುಮಾರ್ ಅವರು ಇಂದು (ಆಗಸ್ಟ್ 07) ಅಥವಾ ನಾಳೆ (ಆ.08) ದೆಹಲಿಗೆ ತೆರಳಲಿದ್ದಾರೆ. ಹೀಗಾಗಿ ಯಾರಿಗೆ ಯಾವ ಖಾತೆ ಸಿಗಲಿದ ಎನ್ನುವುದು ಕುತೂಹಲ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಸವರಾಜ ಹೊರಟ್ಟಿ ರಾಜೀನಾಮೆ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು? – Kannada News | CM DK Shivakumar First Reaction on Basavaraj Horatti Resignation

ಬೆಂಗಳೂರು, (ಆಗಸ್ಟ್ 07): ರಾಜ್ಯ ರಾಜಕೀಯದಲ್ಲಿ ಪ್ರಮುಖ ಬೆಳವಣಿಗೆಯೊಂದರಲ್ಲಿ, ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ(Basavaraj Horatti) ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಿಎಂ ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರ ಸತತ ಮನವಿ ಬಳಿಕ ಹೊರಟ್ಟಿ ಅವರು ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನು ಹೊರಟ್ಟಿ ರಾಜೀನಾಮೆ ಬಗ್ಗೆ ಸ್ವತಃ ಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಹೊರಟ್ಟಿಯವರ ಜತೆ ಚರ್ಚೆ ಮಾಡಿದ್ವಿ. ನನಗೆ ರಾಜಕೀಯದ ವಾಸ್ತವಾಂಶದ ಅರಿವು ಇದೆ. ಅವರು ರಾಜೀನಾಮೆ ಸಲ್ಲಿಸಿದ್ದಾರೆ. ನಾನೇ ಅವರಿಗೆ ಮನವಿ ಮಾಡಿಕೊಂಡೆ. ಪ್ರೋಟೆಮ್ ಸಭಾಪತಿಯಾಗಿ ಅವರೇ ಮುಂದುವರೆಯುತ್ತಾರೆ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಾರ್ಕಳದಲ್ಲಿ ವಯನಾಡು ಮಾದರಿ ದುರಂತದ ಭೀತಿ: ಗುಡ್ಡಕುಸಿತದ ಆತಂಕದಲ್ಲಿ ಗ್ರಾಮಸ್ಥರು! – Kannada News | Heavy Rains Trigger Landslide Threat in Udupi

ಉಡುಪಿ, ಆಗಸ್ಟ್​​ 07: ಜಿಲ್ಲೆಯ ಕಾರ್ಕಳ ತಾಲೂಕಿನ ರೆಂಜಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಡ್ಮೆ ಪ್ರದೇಶದಲ್ಲಿ ನಿರಂತರ ಮಳೆಯಿಂದಾಗಿ ಸುಮಾರು ಒಂದು ಎಕರೆಗಿಂತಲೂ ಅಧಿಕ ಜಾಗದಲ್ಲಿ ಬಿರುಕು ಬಿಟ್ಟಿದೆ. ಭೂಕುಸಿತದ ಭೀತಿ ಎದುರಾಗಿದ್ದು, ಕ್ಷಣಕ್ಷಣಕ್ಕೂ ಗುಡ್ಡದಿಂದ ಮಣ್ಣು ಜಾರುತ್ತಿರುವುದರಿಂದ ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕ ಮನೆಮಾಡಿದೆ. ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳು ಸ್ಥಳೀಯ ಕುಟುಂಬಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಿದ್ದರೂ, ಪರ್ಯಾಯ ವಸತಿ ಹಾಗೂ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ವಯನಾಡು ಮಾದರಿಯ ದುರಂತ ಸಂಭವಿಸುವ ಮುನ್ನವೇ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ತಕ್ಷಣವೇ ಸೂಕ್ತ ರಕ್ಷಣೆ ಮತ್ತು ಪುನರ್ವಸತಿ ವ್ಯವಸ್ಥೆ ಮಾಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಸುರಂಗ ರಸ್ತೆ ಯೋಜನೆ ಪ್ರಶ್ನಿಸಿ ಪಿಐಎಲ್: ರಾಜ್ಯ ಸರ್ಕಾರದ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್ ವಿಭಾಗೀಯ ಪೀಠ – Kannada News | Karnataka HC Seeks State Response on Plea Against Tunnel Road Project Near Hebbal Lake

ಬೆಂಗಳೂರು, ಆಗಸ್ಟ್​​ 07: ಪ್ರಸ್ತಾಪಿತ ಕಿರು ಸುರಂಗ ರಸ್ತೆ ನಿರ್ಮಾಣ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರದ ಪ್ರತಿಕ್ರಿಯೆ ಕೇಳಿದೆ. ಆರ್.ಕೆ. ಗುರುಪ್ರಸಾದ್ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಈ ಕುರಿತು ಮಾಹಿತಿ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಯೋಜನೆಯಿಂದ ಹೆಬ್ಬಾಳ ಕೆರೆಗೆ ನೀರಿನ ಹರಿವಿಗೆ ಅಡಚಣೆ ಉಂಟಾಗುತ್ತದೆಯೇ ಮತ್ತು ಈ ಬಗ್ಗೆ ಯಾವುದೇ ಅಧ್ಯಯನ ನಡೆಸಲಾಗಿದೆಯೇ ಎಂಬ ಬಗ್ಗೆ ನ್ಯಾಯಾಲಯವು ಸ್ಪಷ್ಟೀಕರಣ ಕೇಳಿದೆ. ಜೊತೆಗೆ ಹೈಕೋರ್ಟ್ ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ), ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ (ಬಿಎಂಎಲ್​ಟಿಎ) ಮತ್ತು ಕೆರೆ ಸಂರಕ್ಷಣಾ ಪ್ರಾಧಿಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಅಲ್ಲದೆ, ಈ ಯೋಜನೆಗೆ ಸಂಬಂಧಿಸಿದ ರಿತ್ವಿಕ್ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೂ ನೋಟಿಸ್ ನೀಡಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕರ್ನಾಟಕ ವಿಧಾನ ಪರಿಷತ್ ಸದಸ್ಯೆಯಾಗಿ ಗಾಯತ್ರಿ ಶಾಂತೇಗೌಡ ಪ್ರಮಾಣವಚನ ಸ್ವೀಕಾರ – Kannada News | Gayatri Shantegowda Sworn In as Karnataka Legislative Council Member

ಬೆಂಗಳೂರು, ಆಗಸ್ಟ್​​ 07: ಗಾಯತ್ರಿ ಶಾಂತೇಗೌಡ ಅವರು ವಿಧಾನ ಪರಿಷತ್ ಸದಸ್ಯೆಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ವಿಧಾನಸೌಧದ ಸಭಾಪತಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಗಾಯತ್ರಿ ಶಾಂತೇಗೌಡ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಅವರು ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾದರು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version