ಒಂದು ತಿಂಗಳಲ್ಲಿ ಫೋನ್​ಪೇನಲ್ಲಿ 1,000 ಕೋಟಿ ಟ್ರಾನ್ಸಾಕ್ಷನ್ಸ್; ಈ ಮೈಲಿಗಲ್ಲು ಮುಟ್ಟಿದ ಮೊದಲ ಯುಪಿಐ ಆ್ಯಪ್ – Kannada News | NPCI data for 2026 March, Phone pe sees 10 billion transactions, with Gpay close second, here are details

ನವದೆಹಲಿ, ಏಪ್ರಿಲ್ 23: ಭಾರತದ ಅತಿದೊಡ್ಡ ಯುಪಿಐ ಆ್ಯಪ್ ಎನಿಸಿರುವ ಫೋನ್​ಪೇ (PhonePe) ಮಾರ್ಚ್ ತಿಂಗಳಲ್ಲಿ ಹೊಸ ದಾಖಲೆ ಬರೆದಿದೆ. 2026ರ ಮಾರ್ಚ್​ನಲ್ಲಿ ಫೋನ್​ಪೇ ಪ್ಲಾಟ್​ಫಾರ್ಮ್​ನಲ್ಲಿ 10 ಬಿಲಿಯನ್​ಗೂ ಹೆಚ್ಚು ಟ್ರಾನ್ಸಾಕ್ಷನ್​ಗಳು ಆಗಿವೆ. ಅಂದರೆ, ಒಂದು ತಿಂಗಳಲ್ಲಿ 1,000 ಕೋಟಿಗೂ ಹೆಚ್ಚು ಹಣ ವಹಿವಾಟುಗಳು ಫೋನ್ ಪೇನಿಂದ ಆಗಿವೆ. ಈ ಮೈಲಿಗಲ್ಲು ಮುಟ್ಟಿದ ಮೊದಲ ಯುಪಿಐ ಆ್ಯಪ್ ಎನ್ನುವ ದಾಖಲೆ ಫೋನ್​ಪೇನದ್ದು.

ಯುಪಿಐ ಮಾರುಕಟ್ಟೆಯಲ್ಲಿ ಫೋನ್​ಪೇ ಮತ್ತು ಗೂಗಲ್ ಪೇ ಪಾರಮ್ಯ

ಯುಪಿಐ ಪೇಮೆಂಟ್ ವಿಚಾರದಲ್ಲಿ ಫೋನ್ ಪೇ ನಂಬರ್ ಸ್ಥಾನದಲ್ಲಿ ಮುಂದುವರಿದಿದೆ. ಗೂಗಲ್ ಪೇ ಎರಡನೇ ಸ್ಥಾನದಲ್ಲಿ ಸಮೀಪದಲ್ಲೇ ಇದೆ. ಪೇಟಿಎಂ ಮೂರನೇ ಸ್ಥಾನದಲ್ಲಿ ಬಹಳ ಹಿಂದಿದೆ. ಫೋನ್​ಪೇ 1,000 ಕೋಟಿ ಟ್ರಾನ್ಸಾಕ್ಷನ್​ಗಳಾದರೆ, ಗೂಗಲ್ ಪೇ 750 ಕೋಟಿ ವಹಿವಾಟುಗಳನ್ನು ಕಂಡಿದೆ. ಪೇಟಿಎಂನಲ್ಲಿ ಆದ ಟ್ರಾನ್ಸಾಕ್ಷನ್​ಗಳ ಸಂಖ್ಯೆ 170 ಕೋಟಿ ದಾಟಿದೆ.

ಇದನ್ನೂ ಓದಿ: ಪೆಟ್ರೋಲ್ ಬೆಲೆ ಏರಿಕೆ ಸಾಧ್ಯತೆಯನ್ನು ತಳ್ಳಿ ಹಾಕಿದ ಸರ್ಕಾರ

ಟಾಪ್-6 ಯುಪಿಐ ಆ್ಯಪ್​ಗಳು

  1. ಫೋನ್​ಪೇ: 1,000 ಕೋಟಿ ಟ್ರಾನ್ಸಾಕ್ಷನ್
  2. ಗೂಗಲ್ ಪೇ: 750 ಕೋಟಿ ಟ್ರಾನ್ಸಾಕ್ಷನ್
  3. ಪೇಟಿಎಂ: 170 ಕೋಟಿ ಟ್ರಾನ್ಸಾಕ್ಷನ್ಸ್
  4. ನವಿ: 80 ಕೋಟಿ ಟ್ರಾನ್ಸಾಕ್ಷನ್
  5. ಸೂಪರ್ ಡಾಟ್ ಮನಿ: 34 ಕೋಟಿ ಟ್ರಾನ್ಸಾಕ್ಷನ್ಸ್
  6. ಭೀಮ್: 20 ಕೋಟಿ ಟ್ರಾನ್ಸಾಕ್ಷನ್ಸ್

ಎನ್​ಪಿಸಿಐ ಬಿಡುಗಡೆ ಮಾಡಿರುವ ಇತ್ತೀಚಿನ ದತ್ತಾಂಶದ ಪ್ರಕಾರ, ಮಾರ್ಚ್ ತಿಂಗಳಲ್ಲಿ ಒಟ್ಟಾರೆ ಯುಪಿಐ ಟ್ರಾನ್ಷಾಕ್ಷನ್ಸ್ ಸಂಖ್ಯೆ 22.6 ಬಿಲಿಯನ್ ಆಗಿದೆ. ಹಣದ ಮೌಲ್ಯ 29.6 ಲಕ್ಷ ಕೋಟಿ ರೂ. ಫೋನ್ ಪೇ ಪ್ಲಾಟ್​ಫಾರ್ಮ್​ನಲ್ಲಿ ಮಾರ್ಚ್ ತಿಂಗಳಲ್ಲಿ 1,000 ಕೋಟಿ ವಹಿವಾಟುಗಳ ಮೂಲಕ 14.48 ಲಕ್ಷ ಕೋಟಿ ರೂ ಮೌಲ್ಯದ ಹಣದ ಟ್ರಾನ್ಸಾಕ್ಷನ್ ಆಗಿದೆ. ಗೂಗಲ್ ಪೇನಲ್ಲಿ ವಹಿವಾಟು ಆದ ಹಣದ ಮೊತ್ತ 10 ಲಕ್ಷ ಕೋಟಿ ರೂ ದಾಟಿದೆ.

ಇದನ್ನೂ ಓದಿ: ಮೇ 1ರಿಂದ ಹೊಸ ಗೇಮಿಂಗ್ ರೂಲ್ಸ್; ಆಟಗಾರರಿಗೆ ಬದಲಾವಣೆಗಳೇನು? ಇಲ್ಲಿದೆ ಡೀಟೇಲ್ಸ್

ಯುಪಿಐ ಮಾರುಕಟ್ಟೆಯಲ್ಲಿ ಫೋನ್ ಪೇ ಮತ್ತು ಗೂಗಲ್ ಪೇ ಪ್ರಾಬಲ್ಯ ಹೆಚ್ಚಿದೆ. ಫೋನ್ ಪೇ ಶೇ. 45ರಷ್ಟು ಮಾರುಕಟ್ಟೆ ಪಾಲು ಹೊಂದಿದ್ದರೆ, ಗೂಗಲ್ ಪೇ ಶೇ. 33ರಷ್ಟು ಪಾಲು ಹೊಂದಿದೆ. ಇವೆರಡು ಆ್ಯಪ್​ಗಳು ಹೊಂದಿರುವ ಒಟ್ಟು ಮಾರುಕಟ್ಟೆ ಪಾಲು ಶೇ. 78 ದಾಟುತ್ತದೆ. ಯಾವುದೇ ಒಂದು ಆ್ಯಪ್ ಶೇ. 30ಕ್ಕಿಂತ ಹೆಚ್ಚಿನ ಮಾರುಕಟ್ಟೆ ಪಾಲು ಹೊಂದಿರದಂತೆ ನೋಡಿಕೊಳ್ಳುವುದು ಎನ್​ಪಿಸಿಐನ ಗುರಿಗಳಲ್ಲಿ ಒಂದು ಎಂಬುದನ್ನು ಗಮನಿಸಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕೋಲಾರ: SSLC ಪರೀಕ್ಷೆ ಪಾಸ್​ ಆದ ಖುಷಿಯಲ್ಲಿ ಈಜಲು ಹೋದ ವಿದ್ಯಾರ್ಥಿ ನೀರುಪಾಲು – Kannada News | SSLC Result Joy Turns Tragic: Kolar Student Drowns While Swimming

ನೀರುಪಾಲಾದ ಕಿರಣ್​​Image Credit source: Tv9 Kannada

ಕೋಲಾರ, ಏಪ್ರಿಲ್​​ 23: ಈಜಲು ಹೋಗಿ ನೀರುಪಾಲಾಗುವವರ ಸಂಖ್ಯೆ ರಾಜ್ಯದಲ್ಲಿ ಹೆಚ್ಚುತ್ತಲೇ ಇದ್ದು, ತಲಕಾಡು ಬಳಿ ಮೊನ್ನೆ ಮೊನ್ನೆಯಷ್ಟೇ ವಿದ್ಯಾರ್ಥಿನಿಯರು ನೀರುಪಾಲಾದ ಘಟನೆ ಮಾಸುವ ಮುನ್ನವೇ ಇತ್ತ ಕೋಲಾರದಲ್ಲಿಯೂ SSLC ಪರೀಕ್ಷೆ ಪಾಸ್​ ಆದ ಖುಷಿಯಲ್ಲಿದ್ದ ಬಾಲಕನೋರ್ವ ಈಜಲು ಹೋಗಿ ಜಲಸಮಾಧಿಯಾಗಿರುವ ಘಟನೆ ನಡೆದಿದೆ. ಕಿರಣ್(15) ಮೃತ ಬಾಲಕನಾಗಿದ್ದು, ಎಸ್​​ಎಸ್​​ಎಲ್​​ಸಿ ಫಲಿತಾಂಶ ಬಂದ ಬಳಿಕ ಸ್ನೇಹಿತರ ಜೊತೆ ಈತ ಈಜಲು ತೆರಳಿದ್ದ ವೇಳೆ ಬಾವಿಯ ನೀರಲ್ಲಿ ಮುಳುಗಿ ಅವಘಡ ನಡೆದಿದೆ ಎನ್ನಲಾಗಿದೆ.

ರಘುಪತಿ ಎಂಬವರ ಪುತ್ರನಾದ ಕಿರಣ್​​, ಇಂದು ಎಸ್​​ಎಸ್​ಎಲ್​​ಸಿ ಫಲಿತಾಂಶ ಬಂದ ಖುಷಿಯಲ್ಲಿದ್ದ. 625ಕ್ಕೆ 239 ಅಂಕಗಳನ್ನು ಪಡೆದು ತೇರ್ಗಡೆ ಹೊಂದಿದ್ದ ಈತ ಪರೀಕ್ಷೆ ಪಾಸಾದೆ ಎಂದು ಸಂತಸಪಟ್ಟಿದ್ದ. ಆದರೆ ಈಜಲು ತೆರಳಿದ್ದ ಕಿರಣ್​​ ಸ್ಮಿಮ್ಮಿಂಗ್​​ ಬಾರದ ಕಾರಣ ಬಾವಿಯ ನೀರಲ್ಲಿ ಮುಳುಗಿದ್ದಾನೆ. ಘಟನೆ ಬೆನ್ನಲ್ಲೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಕಿರಣ್ ಶವಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಹುಡುಕಾಟ ನಡೆಯುತ್ತಿದೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ರಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಕಾಲು ಜಾರಿ ಕೆರೆಗೆ ಬಿದ್ದ ಅಳಿಯನ ರಕ್ಷಣೆಗೆ ಹೋದ ಮಾವನೂ ಸಾವು; ಅತ್ತ ಪಿರಿಯಾಪಟ್ಟಣದಲ್ಲಿ ಇಬ್ಬರು ಯುವಕರು ನೀರು ಪಾಲು

ರಾಜ್ಯದಲ್ಲಿ ಸಾಲು ಸಾಲು ಅವಘಡ

  • ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ತಲಕಾಡಿನ ನಿಸರ್ಗಧಾಮದಲ್ಲಿ ಕಾವೇರಿ ನದಿಗೆ ಈಜಲು ಇಳಿದಿದ್ದ ಇಬ್ಬರು ವಿದ್ಯಾರ್ಥಿನಿಯರು ನೀರುಪಾಲಾಗಿರುವ ಘಟನೆ ಏಪ್ರಿಲ್​​ 21ಎಂದು ನಡೆದಿತ್ತು. ಅವಘಡದಲ್ಲಿ ಚಾರ್ವಿ(15), ರಮ್ಯಾ(16) ಪ್ರಾಣ ಕಳೆದುಕೊಂಡಿದ್ದರು.
  • ಕಾಲು ಜಾರಿ ಕೆರೆಗೆ ಬಿದ್ದ ಬಾಲಕನ ರಕ್ಷಣೆ ಗೆ ಹೋದ ಮಾವನೂ ದಾರುಣವಾಗಿ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಎನ್‌. ಹೊಸಳ್ಳಿ ಗ್ರಾಮದಲ್ಲಿ ನಡೆದಿತ್ತು. ಪ್ರಭಾಕರ್ (45), ಪ್ರತೀಕ್ (12) ಏಪ್ರಿಲ್​​ 20ರಂದು ಮೃತಪಟ್ಟಿದ್ದರು.
  • ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಪ್ರಾಣಬಿಟ್ಟಿರುವ ಘಟನೆ ಪಿರಿಯಾಪಟ್ಟಣದ ದೊಡ್ಡ ಹರವೆ ಗ್ರಾಮದ ಬಳಿ ಏಪ್ರಿಲ್​​ 19ರಂದು ನಡೆದಿತ್ತು. ಗಣೇಶ್ (22) ಮತ್ತು ಇಮ್ರಾನ್ (28) ಜಲಸಮಾಧಿಯಾಗಿದ್ದರು.
  • ಕಾವೇರಿ ನದಿಯಲ್ಲಿ ಮುಳುಗಿ 6 ಜನ‌ ದುರ್ಮರಣ ಹೊಂದಿರುವ ಘಟನೆ ಮೈಸೂರು ಜಿಲ್ಲೆ K.R.ನಗರದ ಅರ್ಕೇಶ್ವರ ದೇಗುಲದ ಬಳಿ ಏಪ್ರಿಲ್​​ 19ರಂದು ನಡೆದಿತ್ತು. ಬೆಂಗಳೂರಿನ ಯಾಸಿನ್​(23) ಹಾಗೂ ಹೈಮಾ(13), ಊಟಿ ಮೂಲದ 38 ವರ್ಷದ ಸೈದ್ ಫಾತಿಮಾ, ಮೈಸೂರು ಜಿಲ್ಲೆಯ ನೇಹಾ(20), ಉಮೇರ್(7), ಅಫಿಯಾ(20) ಮೃತಪಟ್ಟಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:58 pm, Thu, 23 April 26

Source link

ವಾಟ್ಸಾಪ್​ನಲ್ಲಿ ಪ್ರೀಪೇಡ್ ಮೊಬೈಲ್ ರೀಚಾರ್ಜ್; ಬಂದಿದೆ ಹೊಸ ಫೀಚರ್

ಬೆಂಗಳೂರು, ಏಪ್ರಿಲ್ 23: ನಂಬರ್ ಒನ್ ಮೆಸೇಜಿಂಗ್ ಆ್ಯಪ್ ಆದ ವಾಟ್ಸಾಪ್​ನಲ್ಲಿ ರೀಚಾರ್ಜ್ ಸರ್ವಿಸ್ ಅನ್ನು ಪರಿಚಯಿಸಲಾಗುತ್ತಿದೆ. ಭಾರತದಲ್ಲಿ ವಾಟ್ಸಾಪ್ ಬಳಕೆದಾರರಿಗೆ ಪ್ರೀಪೇಡ್ ಮೊಬೈಲ್ ರೀಚಾರ್ಜ್ ಸೇವೆ ಲಭ್ಯ ಇರಲಿದೆ. ಆಂಡ್ರಾಯ್ಡ್ ಮತ್ತು ಆ್ಯಪಲ್ ಮೊಬೈಲ್​ಗಳಲ್ಲಿ ಎರಡರಲ್ಲೂ ಇದು ಸಿಗಲಿದೆ. ಆದರೆ, ಹಂತ ಹಂತವಾಗಿ ಇದು ಜಾರಿಯಾಗುತ್ತದೆ. ಮುಂಬರುವ ಕೆಲ ವಾರಗಳಲ್ಲಿ ಎಲ್ಲಾ ವಾಟ್ಸಾಪ್ ಬಳಕೆದಾರರಿಗೂ ಈ ಸೇವೆ ಸಿಗುತ್ತದೆ. ಮೊಬೈಲ್ ರೀಚಾರ್ಜ್ ಸೇವೆ ನೀಡಲು ವಾಟ್ಸಾಪ್​ಗೆ ಪೇಯು (PayU) ನೆರವು ನೀಡುತ್ತಿದೆ.

ವಾಟ್ಸಾಪ್ ಬಳಕೆದಾರರು ತಮ್ಮದೇ ಮೊಬೈಲ್ ನಂಬರ್ ಅನ್ನು ರೀಚಾರ್ಜ್ ಮಾಡಬಹುದು. ತಮ್ಮ ಸ್ನೇಹಿತರು, ಕುಟುಂಬ ಸದಸ್ಯರು ಅಥವಾ ಯಾರದೇ ಮೊಬೈಲ್ ನಂಬರ್ ಆದರೂ ಕೆಲ ಸರಳ ಕ್ರಮಗಳಲ್ಲಿ ರೀಚಾರ್ಜ್ ಮಾಡಬಹುದು. ಜಿಯೋ, ಏರ್​ಟೆಲ್, ವೊಡಾಫೋನ್ ಐಡಿಯಾದ ಪ್ರೀಪೇಡ್ ನಂಬರ್​ಗಳನ್ನು ರೀಚಾರ್ಜ್ ಮಾಡಬಹುದು. ಇದಕ್ಕೆ ಪೇಮೆಂಟ್ ಕೂಡ ವಾಟ್ಸಾಪ್ ಪ್ಲಾಟ್​ಫಾರ್ಮ್​ನಲ್ಲೇ ಮಾಡಬಹುದು. ಬೇರೆ ಯುಪಿಐ ಆ್ಯಪ್​ಗೆ ಹೋಗುವ ಅವಶ್ಯಕತೆ ಇರುವುದಿಲ್ಲ. ಮೆಟಾ ಮತ್ತು ಪೇಯು ಸಂಸ್ಥೆಗಳು ಈ ಮಾಹಿತಿ ಪ್ರಕಟಿಸಿವೆ.

ಇದನ್ನೂ ಓದಿ: ಒಂದು ತಿಂಗಳಲ್ಲಿ ಫೋನ್​ಪೇನಲ್ಲಿ 1,000 ಕೋಟಿ ಟ್ರಾನ್ಸಾಕ್ಷನ್ಸ್; ಈ ಮೈಲಿಗಲ್ಲು ಮುಟ್ಟಿದ ಮೊದಲ ಯುಪಿಐ ಆ್ಯಪ್

ವಾಟ್ಸಾಪ್​ನಲ್ಲಿ ₹ ಐಕಾನ್ ಗಮನಿಸಿ

ವಾಟ್ಸಾಪ್​ನ ಹೋಮ್ ಸ್ಕ್ರೀನ್​ನ ಮೇಲ್ಭಾಗದಲ್ಲಿ ₹ ಚಿಹ್ನೆ ಇರುತ್ತದೆ. ಅದನ್ನು ಒತ್ತಿದರೆ ಪೇಮೆಂಟ್ ಸೇವೆಗಳು ಲಿಸ್ಟ್ ಆಗಿರುವುದನ್ನು ಕಾಣಬಹುದು. ಫೋನ್ ಪೇ, ಗೂಗಲ್ ಪೇ ಇತ್ಯಾದಿ ಯುಪಿಐ ಆ್ಯಪ್​ಗಳಂತೆ ವಾಟ್ಸಾಪ್​ನಲ್ಲೂ ಯುಪಿಐ ಪೇಮೆಂಟ್ ಸರ್ವಿಸ್ ಲಭ್ಯ ಇದ್ದು, ಬ್ಯಾಂಕ್ ಅಕೌಂಟ್​ಗಳನ್ನು ಸೇರಿಸಬಹುದು.

ಯುಪಿಐ ಆ್ಯಪ್​ಗಳಂತೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಕಳುಹಿಸಬಹುದು. ಯಾವುದೇ ಮೊಬೈಲ್ ನಂಬರ್​ಗೆ ಹಣ ಕಳುಹಿಸಬಹುದು.

ಇದರ ಜೊತೆಗೆ ಈಗ ಮೊಬೈಲ್ ರೀಚಾರ್ಜ್ ಸೇವೆ ಪರಿಚಯಿಸಲಾಗಿದೆ. ಪೇಯು ಸಂಸ್ಥೆಯು ವಾಟ್ಸಾಪ್​ಗೆ ಸಪೋರ್ಟ್ ನೀಡುತ್ತಿದೆ.

ಇದನ್ನೂ ಓದಿ: ಪೆಟ್ರೋಲ್ ಬೆಲೆ ಏರಿಕೆ ಸಾಧ್ಯತೆಯನ್ನು ತಳ್ಳಿ ಹಾಕಿದ ಸರ್ಕಾರ

ವಾಟ್ಸಾಪ್​ನಲ್ಲಿ ಸದ್ಯ ಹಣದ ಟ್ರಾನ್ಸಾಕ್ಷನ್ ಜೊತೆಗೆ ಬಿಲ್ ಪೇಮೆಂಟ್, ಮೆಟ್ರೋ ಟಿಕೆಟ್ ಬುಕಿಂಗ್ ಇತ್ಯಾದಿಯನ್ನು ಮಾಡಬಹುದು. ಅದಕ್ಕೆ ಈಗ ಪ್ರೀಪೇಡ್ ಮೊಬೈಲ್ ರೀಚಾರ್​ಜ್ ಸೇವೆಯೂ ಸೇರ್ಪಡೆಯಾಗಿದೆ. ಸದ್ಯ ಕೆಲ ಬಳಕೆದಾರರಿಗೆ ಅಲಭ್ಯ ಇರಬಹುದು. ಮುಂದಿನ ದಿನಗಳಲ್ಲಿ ಎಲ್ಲರಿಗೂ ಅದು ಸಿಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ವಂಚನೆ, ಬೆದರಿಕೆ ಆರೋಪ: ಪ್ರತಿಕ್ರಿಯೆ ನೀಡಿದ ಗಾಯಕಿ ಮಂಗ್ಲಿ – Kannada News | Singer Mangli reaction about allegation made against her

ಮಂಗ್ಲಿ (Mangli), ದಕ್ಷಿಣ ಭಾರತದ ಜನಪ್ರಿಯ ಗಾಯಕಿ. ತೀರಾ ಹಿಂದುಳಿದ ಸಮುದಾಯದಿಂದ ಬಂದು, ತನ್ನ ಜನಪದ ಗಾಯಕ ಕಲೆಯಿಂದ ಒಂದೊಂದೆ ಮೆಟ್ಟಿಲು ಹತ್ತಿ ಇಂದು ದಕ್ಷಿಣ ಭಾರತದ ಬೇಡಿಕೆಯ ಗಾಯಕರಿಯರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಕನ್ನಡದ ‘ರಾಬರ್ಟ್’ ಸಿನಿಮಾದ ತೆಲುಗು ಡಬ್​​ನಲ್ಲಿ ಮಂಗ್ಲಿ ಹಾಡಿದ ಹಾಡು ಭಾರಿ ದೊಡ್ಡ ಹಿಟ್ ಆಗಿತ್ತು. ಕರ್ನಾಟಕದಲ್ಲಿ ಹಲವು ಲೈವ್ ಶೋಗಳನ್ನು ಸಹ ಮಂಗ್ಲಿ ನೀಡಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಚಾರಕ್ಕೂ ಅವರು ಬಂದಿದ್ದರು. ಆದರೆ ಇದೀಗ ಮಂಗ್ಲಿ ಹೆಸರು ವಿವಾದದಲ್ಲಿ ಸಿಲುಕಿಕೊಂಡಿದ್ದು, ಅವರ ವಿರುದ್ಧ ಕ್ರಿಮಿನಲ್ ಆರೋಪ ಹೊರಿಸಲಾಗಿದೆ.

ಮಂಗ್ಲಿ ವಿರುದ್ಧ ಹಣಕಾಸು ವಂಚನೆ, ಬೆದರಿಕೆ, ಹಲ್ಲೆಗೆ ಬೆಂಬಲ ಇನ್ನಿತರೆ ಆರೋಪಗಳನ್ನು ಕೆಲವರು ಮಾಡಿದ್ದು, ದೂರು ಸಹ ದಾಖಲಾಗಿದೆ. ಮೈಕ್ರೋ ಫೈನಾನ್ಸ್ ಮತ್ತು ‘ಶುಭಾಕ್ಷೇತ್ರ ಇನ್ಫ್ರಾ’ ಹೆಸರಿನಲ್ಲಿ ನಡೆದ ಕೋಟ್ಯಂತರ ರೂಪಾಯಿಗಳ ಆರ್ಥಿಕ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಮೇಲೆ ಕೇಳಿಬರುತ್ತಿರುವ ಆರೋಪಗಳ ಕುರಿತು ಜನಪ್ರಿಯ ಗಾಯಕಿ ಮಂಗ್ಲಿ ಇದೀಗ ಪ್ರತಿಕ್ರಿಯಿಸಿದ್ದಾರೆ. ಪ್ರಕರಣ ಕುರಿತು ಇನ್​​ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ಗಾಯಕಿ ಮಂಗ್ಲಿ ಈ ಹಗರಣದಲ್ಲಿ ಮೋಸಹೋದ ಸಂತ್ರಸ್ತರಿಗೆ ಅನ್ಯಾಯವಾಗಿದ್ದು, ಅವರಿಗೆ ನ್ಯಾಯ ಸಿಗುವವರೆಗೂ ತಾನು ಬೆಂಬಲವಾಗಿ ನಿಲ್ಲುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಆದರೆ ಹಣಕಾಸು ವಂಚನೆ ಪ್ರಕರಣಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಮಂಗ್ಲಿ ತಿಳಿಸಿದ್ದಾರೆ.

ಕೆಲವು ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ತನ್ನ ಹೆಸರನ್ನು ಈ ಪ್ರಕರಣಕ್ಕೆ ಎಳೆದು ತರುತ್ತಿದ್ದಾರೆ ಮತ್ತು ತನ್ನ ವಿರುದ್ಧ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ‘ಸತ್ಯ ಖಂಡಿತವಾಗಿಯೂ ಹೊರಬರುತ್ತದೆ. ನನಗೆ ಭಾರತದ ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲೆ ಸಂಪೂರ್ಣ ಗೌರವ ಹಾಗೂ ನಂಬಿಕೆಯಿದೆ. ಕಾನೂನು ಪ್ರಕ್ರಿಯೆಯ ಮೂಲಕವೇ ಎಲ್ಲವೂ ಸ್ಪಷ್ಟವಾಗಲಿದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:ಗಾಯಕಿ ಮಂಗ್ಲಿಯಿಂದ 10 ಕೋಟಿ ವಂಚನೆ? ಹಣ ಕೇಳಿದ್ದಕ್ಕೆ ಕೊಲೆ ಬೆದರಿಕೆ ಆರೋಪ

ಸಿಮೆಂಟ್ ಕಂಪನಿ ಮತ್ತು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿದರೆ ಅಲ್ಪಾವಧಿಯಲ್ಲಿ ಹೆಚ್ಚಿನ ಲಾಭ ಹಾಗೂ ಹಣ ದ್ವಿಗುಣವಾಗುತ್ತದೆ ಎಂದು ನಂಬಿಸಿ ಮಧು ಮತ್ತು ಗ್ಯಾಂಗ್ ಕೋಟ್ಯಂತರ ರೂಪಾಯಿ ವಸೂಲಿ ಮಾಡಿರುವ ಬಗ್ಗೆ ದೂರುಗಳು ದಾಖಲಾಗಿವೆ. ಈ ಪ್ರಕರಣದಲ್ಲಿ ಆರೋಪಿಗಳಾದ ರಮಾವತ್ ಮಧು, ಬಾಲಾಜಿನಾಯಕ್ ಮತ್ತು ಭರತ್ ಚೌಹಾಣ್ ವಿರುದ್ಧ ನಲ್ಗೊಂಡ ಮತ್ತು ಗದ್ವಾಲ್‌ನಲ್ಲಿ ಸುಮಾರು 62 ಪ್ರಕರಣಗಳು ದಾಖಲಾಗಿವೆ. ಈ ಆರೋಪಿಗಳು ಮಂಗ್ಲಿಯವರ ಆಪ್ತರಾಗಿದ್ದು, ಸಹೋದರರು ಸಹ ಆಗಿದ್ದಾರೆ. ಮಂಗ್ಲಿ ವಿರುದ್ಧವೂ ಸಹ ವಂಚನೆ ಆರೋಪ ಮಾಡಲಾಗಿದೆ.

ಮಧ್ಯಮ ವರ್ಗದವರು, ಸಣ್ಣ ವ್ಯಾಪಾರಿಗಳು ಮತ್ತು ಗ್ರಾಮೀಣ ಹೂಡಿಕೆದಾರರನ್ನು ಗುರಿಯಾಗಿಸಿಕೊಂಡು ಈ ಸ್ಕೀಮ್ ನಡೆಸಲಾಗಿತ್ತು. ಆರಂಭದಲ್ಲಿ ಲಾಭ ನೀಡುವ ಮೂಲಕ ನಂಬಿಕೆ ಹುಟ್ಟಿಸಿ, ನಂತರ ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಿಸಿ ವಂಚಿಸಲಾಗಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ವಕೀಲರೊಬ್ಬರು ಮಂಗ್ಲಿ ಹಾಗೂ ಸಂಗಡಿಗರ ವಿರುದ್ಧ ದೂರು ದಾಖಲಿಸಿದ್ದಾರೆ. ಅದಾದ ಬಳಿಕ ಗಾಯಕಿ ಮಂಗ್ಲಿ ಸಹ ಪ್ರತಿದೂರು ದಾಖಲಿಸಿದ್ದು, ತನಿಖೆಗೆ ಒತ್ತಾಯಿಸಿದ್ದಾರೆ. ಪ್ರಸ್ತುತ ಈ ಪ್ರಕರಣದ ತನಿಖೆ ನಡೆಯುತ್ತಿದ್ದು, ಮಂಗ್ಲಿ ಅವರ ಹೆಸರು ಕೇಳಿಬಂದಿರುವುದು ಚಿತ್ರರಂಗದಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಆದರೆ ಮಂಗ್ಲಿ ಮಾತ್ರ ತಾನು ನಿರ್ದೋಷಿ ಎಂದು ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

SSLC ಬೋರ್ಡ್ ಎಡವಟ್ಟಿಗೆ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಫೇಲ್ – Kannada News | Karnataka SSLC Board Blunder: Visually Impaired Student Fails Due to Result Error

ಕಾರವಾರ, ಏಪ್ರಿಲ್​ 23: ಇತ್ತೀಚೆಗೆ ಪಿಯುಸಿ ಫಲಿತಾಂಶ ಪ್ರಕಟಣೆ ವೇಳೆ 600 ಅಂಕಗಳ ಪರೀಕ್ಷೆಗೆ 683 ಅಂಕಗಳನ್ನು ನೀಡಿದ ಬೋರ್ಡ್​ನ ಎಡವಟ್ಟು ಬೆಳಕಿಗೆ ಬಂದಿತ್ತು. ಇದೀಗ ಇಂತಹದೊಂದು ಎಡವಟ್ಟು ಇದೀಗ ಎಸ್​​ಎಸ್​ಎಲ್​ಸಿ ಪರೀಕ್ಷೆಯಲ್ಲೂ ನಡೆದಿದ್ದು, ಪ್ರತಿಭಾವಂತ ಅಂಧ ವಿದ್ಯಾರ್ಥಿನಿಯನ್ನ ಫೇಲ್​ ಮಾಡಲಾಗಿದೆ. ಶಿರಸಿಯ ಇಂದಿರಾ ನಗರದ ಯೂನಿಯನ್ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿನಿ ಲೀಸಾ ಖಾನಮ್, ಎಲ್ಲಾ ಪರೀಕ್ಷೆಗೆ ಹಾಜರಾಗಿದ್ದರು ಸಮಾಜ-ವಿಜ್ಞಾನ ವಿಷಯದ ಪರೀಕ್ಷೆಗೆ ಗೈರು ಎಂದು ನಮೋದಿಸಲಾಗಿದೆ. ಕನ್ನಡ -100, ಇಂಗ್ಲಿಷ್​​ -92, ಅರ್ಥಶಾಸ್ತ್ರ-98 , ಪೊಲಿಟಿಕಲ್ ಸೈನ್ಸ್ -92, ಒಟ್ಟು-526 ಅಂಕ ಗಳಿಸುವ ಮೂಲಕ 84.16 % ಫಲಿತಾಂಶ ಪಡೆದಿದ್ದಾರೆ. ಆದರೆ ಪರೀಕ್ಷಾ ಪ್ರಾಧಿಕಾರದ ಎಡವಟ್ಟಿನಿಂದ ಫೇಲ್ ಎಂದು ರಿಸಲ್ಟ್‌ ಬಂದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

500 ರೂ. ಬೆಟ್ಟಿಂಗ್ ಕೇಸ್: ಗೃಹ ಸಚಿವ ಪರಮೇಶ್ವರ್​​​ಗೆ ಬಿಗ್ ರಿಲೀಫ್! – Kannada News | Karnataka High Court Stays On 500 Betting Case Against Home Minister G Parameshwar

ಬೆಂಗಳೂರು, (ಏಪ್ರಿಲ್ 23): ಗೃಹ ಸಚಿವ ಪರಮೇಶ್ವರ್ (G Parameshwar)  ವಿರುದ್ಧದ 500 ರೂಪಾಯಿ ಬೆಟ್ಟಿಂಗ್ ಪ್ರಕರಣಕ್ಕೆ (Rs 500 Betting Case) ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ತಮಾಷೆಗಾಗಿ ಮಾತನಾಡಿದರೂ ಕೇಸ್ ಹಾಕಬಹುದೇ? ಉದ್ದೇಶಪೂರ್ವಕವಾಗಿ ಇಂತಹ ಹೇಳಿಕೆ ನೀಡಿದಂತೆ ಕಾಣುತ್ತಿಲ್ಲ. ತನಿಖೆಗೆ ಆದೇಶಿಸುವ ಮುನ್ನ ಪೊಲೀಸರಿಂದ ವಿವರಣೆ ಪಡೆಯಬೇಕಿತ್ತು ಎಂದು ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯ ಪಟ್ಟಿದೆ. ಅಲ್ಲದೇ ಪ್ರಕರಣಕ್ಕೆ ತಡೆ ನೀಡಿ ವಿಚಾರಣೆಯನ್ನು ಮುಂದೂಡಿದೆ. ಇದರಿಂದ ಗೃಹ ಸಚಿವ ಪರಮೇಶ್ವರ್ ಅವರಿಗೆ ರಿಲೀಫ್ ಸಿಕ್ಕಂತಾಗಿದೆ.

Source link

29ನೇ ವಯಸ್ಸಿಗೆ ಖ್ಯಾತ ನಟಿ ಅನುಮಾನಾಸ್ಪದ ಸಾವು; ಕೊನೇ ಕ್ಷಣದಲ್ಲಿ ನಡೆದಿದ್ದು ಏನು? – Kannada News | Haryanvi Actor Dancer Divyanka Sirohi passes away at 29 in Ghaziabad

ಹರಿಯಾಣದ ಜನಪ್ರಿಯ ನಟಿ ಮತ್ತು ಡ್ಯಾನ್ಸರ್ ದಿವ್ಯಾಂಕಾ ಸಿರೋಹಿ (Divyanka Sirohi) ಅವರು ಮಂಗಳವಾರ (ಏಪ್ರಿಲ್ 21) ಗಾಜಿಯಾಬಾದ್‌ನ ರಾಜನಗರ ಎಕ್ಸ್‌ಟೆನ್ಶನ್‌ನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. ಅವರಿಗೆ 29 ವರ್ಷ ವಯಸ್ಸಾಗಿತ್ತು. ಚಿಕ್ಕ ವಯಸ್ಸಿನಲ್ಲಿ ಅವರ ಸಾವು ಸಂಭವಿಸಿರುವುದು ಚಿತ್ರರಂಗ ಮತ್ತು ಅಭಿಮಾನಿಗಳಲ್ಲಿ ತೀವ್ರ ಆಘಾತ ಮೂಡಿಸಿದೆ. ದಿವ್ಯಾಂಕಾ ಅವರ ಸಾವಿನ (Divyanka Sirohi Death) ನಿಖರ ಕಾರಣ ಇನ್ನೂ ಬಹಿರಂಗವಾಗಿಲ್ಲ. ಸಾವಿನ ಬಗ್ಗೆ ಅನುಮಾನ ಮೂಡಿದೆ. ಬುಧವಾರ (ಏಪ್ರಿಲ್ 22) ಬೆಳಿಗ್ಗೆ ಗಾಜಿಯಾಬಾದ್‌ನಲ್ಲಿ ಅವರ ಅಂತ್ಯಕ್ರಿಯೆ (Funeral) ನೆರವೇರಿಸಲಾಗಿದೆ.

ದಿವ್ಯಾಂಕಾ ನಿಧನದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರ ಸಹೋದರ ಹಿಮಾಂಶು, ‘ಮಂಗಳವಾರ ದಿವ್ಯಾಂಕಾ ಅವರಿಗೆ ದಿಢೀರ್ ಅನಾರೋಗ್ಯ ಕಾಣಿಸಿಕೊಂಡಿತು. ಅವರು ಮನೆಯಲ್ಲೇ ಕೆಳಗೆ ಬಿದ್ದಿದ್ದರಿಂದ ತಲೆಗೆ ಬಲವಾದ ಪೆಟ್ಟಾಗಿ ರಕ್ತಸ್ರಾವವಾಗಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೂ, ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದರು’ ಎಂದು ತಿಳಿಸಿದ್ದಾರೆ.

ದಿವ್ಯಾಂಕಾ ಸಿರೋಹಿ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಬರೋಬ್ಬರಿ 1.3 ಮಿಲಿಯನ್ (13 ಲಕ್ಷ) ಫಾಲೋವರ್ಸ್‌ ಹೊಂದಿದ್ದ ಅವರು, ಸುಮಾರು 50ಕ್ಕೂ ಹೆಚ್ಚು ಹರಿಯಾಣ್ವಿ ಹಾಡುಗಳಲ್ಲಿ ಕಾಣಿಸಿಕೊಂಡಿದ್ದರು. ಬಣ್ಣದ ಲೋಕದಲ್ಲಿ ಇನ್ನೂ ಮಿಂಚಬೇಕಿದ್ದ ಅವರು ಅಕಾಲಿಕ ಮರಣ ಹೊಂದಿರುವುದು ಅಭಿಮಾನಿಗಳಿಗೆ ನೋವುಂಟು ಮಾಡಿದೆ.

ದಿವ್ಯಾಂಕಾ ಅವರ ಅಕಾಲಿಕ ಮರಣಕ್ಕೆ ಅಖಿಲ ಭಾರತ ಸಿನಿ ವರ್ಕರ್ಸ್ ಅಸೋಸಿಯೇಷನ್ (AICWA) ತೀವ್ರ ಸಂತಾಪ ಸೂಚಿಸಿದೆ. ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಂಸ್ಥೆಯು, ‘ನಟಿ ಮತ್ತು ನೃತ್ಯಗಾರ್ತಿ ದಿವ್ಯಾಂಕಾ ಸಿರೋಹಿ ಅವರ ಅಕಾಲಿಕ ನಿಧನದ ಸುದ್ದಿ ಕೇಳಿ ನಮಗೆ ಆಘಾತವಾಗಿದೆ. ಅವರ ಸಾವು ಕೇವಲ ಅವರ ಕುಟುಂಬಕ್ಕೆ ಮಾತ್ರವಲ್ಲದೆ, ಇಡೀ ಚಿತ್ರರಂಗಕ್ಕೆ ದೊಡ್ಡ ನಷ್ಟವಾಗಿದೆ. ಹರಿಯಾಣ ಚಿತ್ರರಂಗದಲ್ಲಿ ಅವರು ತಮ್ಮದೇ ಆದ ಛಾಪು ಮೂಡಿಸಿದ್ದರು. ದೇವರು ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ’ ಎಂದು ಬರೆದುಕೊಂಡಿದೆ.

ಇದನ್ನೂ ಓದಿ: ಲೆಜೆಂಡರಿ ಗಾಯಕಿ ಆಶಾ ಭೋಸ್ಲೆ ನಿಧನಕ್ಕೆ ಸಂತಾಪ ಸೂಚಿಸಿದ ಜಾನ್ ಸೀನಾ, ಬ್ರೆಟ್ ಲೀ

ಚಿತ್ರರಂಗದ ಅನೇಕ ಗಣ್ಯರು ಮತ್ತು ಅಭಿಮಾನಿಗಳು ದಿವ್ಯಾಂಕಾ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಪ್ರತಿಭಾವಂತ ಕಲಾವಿದೆಯೊಬ್ಬರು ಇಷ್ಟು ಬೇಗ ನಿಧನರಾಗಿರುವುದು ಹರಿಯಾಣದ ಕಲಾ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಜನರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Home Names: ನಿಮ್ಮ ಕನಸಿನ ಮನೆಗೆ ‘ರಾಜಮನೆತನದ’ ಕಳೆ ನೀಡಬೇಕೇ? ಇಲ್ಲಿದೆ ಅದ್ಭುತ ಸಂಸ್ಕೃತ ಹೆಸರುಗಳು! – Kannada News | 10 Vastu Approved Sanskrit Home Names for Positive Energy and Prosperity

ಮನೆ ಕೇವಲ ಇಟ್ಟಿಗೆಗಳ ಕಟ್ಟಡವಲ್ಲ ಹಿರಿಯರು ಹೇಳುವಂತೆ, ಇಟ್ಟಿಗೆ ಮತ್ತು ಕಲ್ಲುಗಳು ಕೇವಲ ಒಂದು ಭೌತಿಕ ರಚನೆಯನ್ನು ನಿರ್ಮಿಸುತ್ತವೆ. ಆದರೆ ಆ ರಚನೆಯನ್ನು ‘ಮನೆ’ಯನ್ನಾಗಿ ಪರಿವರ್ತಿಸುವುದು ಅಲ್ಲಿ ವಾಸಿಸುವ ಜನರು, ಅವರ ಕನಸುಗಳು ಮತ್ತು ಅಲ್ಲಿನ ಶಕ್ತಿ. ಪ್ರತಿಯೊಬ್ಬರಿಗೂ ತಮ್ಮ ಜೀವನದ ಸಾಧನೆಯ ಸಂಕೇತವಾಗಿ ಒಂದು ಸುಂದರ ಮನೆ ಇರಬೇಕೆಂಬ ಆಸೆಯಿರುತ್ತದೆ. ಮಗುವಿಗೆ ಹೆಸರಿಡುವುದು ಹೇಗೆ ಅದರ ಗುರುತನ್ನು ನಿರ್ಧರಿಸುತ್ತದೆಯೋ, ಹಾಗೆಯೇ ನಿಮ್ಮ ಮನೆಗೆ ನೀವು ಇಡುವ ಹೆಸರು ಅಲ್ಲಿನ ಸಕಾರಾತ್ಮಕ ಶಕ್ತಿ (Positive Vibrations) ಮತ್ತು ಕಂಪನಗಳನ್ನು ನಿರ್ಧರಿಸುತ್ತದೆ.

ವಾಸ್ತು ಮತ್ತು ಹೆಸರಿನ ಮಹತ್ವ:

ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಮನೆಗೆ ಅರ್ಥಪೂರ್ಣ ಹೆಸರಿಡಲು ಬಹಳ ಆಸಕ್ತಿ ತೋರಿಸುತ್ತಿದ್ದಾರೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಹೆಸರು ಅಲ್ಲಿನ ನಿವಾಸಿಗಳ ಮನಸ್ಥಿತಿಯ ಮೇಲೆ ಪ್ರಭಾವ ಬೀರುತ್ತದೆ. ನಿಮ್ಮ ಮನೆ ಕೇವಲ ಒಂದು ವಿಳಾಸವಾಗದೆ, ನಿಮ್ಮ ಯಶಸ್ಸಿನ ಸಾಕ್ಷಿಯಾಗಲಿ ಎಂಬ ಉದ್ದೇಶದಿಂದ, ಸಕಾರಾತ್ಮಕತೆಯನ್ನು ಆಕರ್ಷಿಸುವ 10 ಶ್ರೇಷ್ಠ ಸಂಸ್ಕೃತ ಹೆಸರುಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಸಕಾರಾತ್ಮಕ ಶಕ್ತಿ ತುಂಬುವ 10 ಆಯ್ದ ಹೆಸರುಗಳು:

ನಿರ್ವಾಣಂ (Nirvanam):

ಸಂಸ್ಕೃತದ ಈ ಹೆಸರು ಮನಸ್ಸಿಗೆ ಪರಮ ಶಾಂತಿ ಮತ್ತು ಮುಕ್ತಿಯ ಭಾವನೆಯನ್ನು ನೀಡುತ್ತದೆ. ನಿಮ್ಮ ಮನೆಯ ವಾತಾವರಣ ಯಾವಾಗಲೂ ಪ್ರಶಾಂತವಾಗಿರಬೇಕು ಮತ್ತು ಒತ್ತಡ ಮುಕ್ತವಾಗಿರಬೇಕು ಎಂದು ನೀವು ಬಯಸಿದರೆ, ಇದು ಅತ್ಯುತ್ತಮ ಆಯ್ಕೆ.

ಅಮೃತಾಲಯ (Amrutalaya):

ಇದರ ಅರ್ಥ ‘ಅಮೃತದಂತಹ ಸುಖವಿರುವ ಮನೆ’. ಈ ಹೆಸರು ಮನೆಯಲ್ಲಿ ತೃಪ್ತಿ, ಮಾಧುರ್ಯ ಮತ್ತು ಸದಾಕಾಲ ಹರಿಯುವ ಸಂತೋಷವನ್ನು ಸೂಚಿಸುತ್ತದೆ. ಇದು ಕುಟುಂಬದಲ್ಲಿ ಪ್ರೀತಿಯನ್ನು ಹೆಚ್ಚಿಸುತ್ತದೆ.

ಸ್ನೇಹಸದನಂ (Snehasadanam):

ಹೆಸರೇ ಸೂಚಿಸುವಂತೆ ಇದು ಪ್ರೀತಿ ಮತ್ತು ಅನ್ಯೋನ್ಯತೆಯ ತಾಣ. ಕುಟುಂಬ ಸದಸ್ಯರ ನಡುವೆ ಬಾಂಧವ್ಯ ಗಟ್ಟಿಯಾಗಲು ಮತ್ತು ಪರಸ್ಪರ ಸ್ನೇಹಭಾವ ನೆಲೆಸಲು ಈ ಹೆಸರು ಪ್ರೇರಣೆ ನೀಡುತ್ತದೆ.

ಅಮ್ರೇಷಂ (Amresham):

ಅಮ್ರೇಷಂ ಎಂದರೆ ಶಕ್ತಿ ಮತ್ತು ಅಭಯದ ಸಂಕೇತ. ಈ ಹೆಸರಿರುವ ಮನೆಯಲ್ಲಿ ವಾಸಿಸುವವರು ಹೆಚ್ಚು ಸುರಕ್ಷಿತ ಭಾವನೆಯನ್ನು ಹೊಂದಿರುತ್ತಾರೆ ಮತ್ತು ಇದು ನಕಾರಾತ್ಮಕ ದೃಷ್ಟಿಯಿಂದ ಮನೆಯನ್ನು ರಕ್ಷಿಸುತ್ತದೆ ಎಂದು ನಂಬಲಾಗಿದೆ.

ಸೌರಭ್ (Saurabh):

ಸುಗಂಧ ಮತ್ತು ತಾಜಾತನ ಎಂಬ ಅರ್ಥವನ್ನು ಹೊಂದಿರುವ ಈ ಹೆಸರು, ಮನೆಯಲ್ಲಿ ಸದಾ ಹೊಸ ಚೈತನ್ಯವಿರುವಂತೆ ಮಾಡುತ್ತದೆ. ಸಕಾರಾತ್ಮಕ ಶಕ್ತಿಯು ಮನೆಯ ಮೂಲೆ ಮೂಲೆಯಲ್ಲೂ ಪಸರಿಸಲು ಇದು ಸಹಕಾರಿ.

ಸತ್ಯಲೋಕಂ (Satyalokam):

ಯಾರು ತಮ್ಮ ಜೀವನದಲ್ಲಿ ಪ್ರಾಮಾಣಿಕತೆ ಮತ್ತು ಸತ್ಯದ ಹಾದಿಯನ್ನು ಅನುಸರಿಸುತ್ತಾರೋ, ಅಂತಹವರಿಗೆ ಈ ಹೆಸರು ಸೂಕ್ತ. ಇದು ಮನೆಯಲ್ಲಿ ಪವಿತ್ರ ಮತ್ತು ಧಾರ್ಮಿಕ ವಾತಾವರಣವನ್ನು ನಿರ್ಮಿಸುತ್ತದೆ.

ಮಂಗಳಾಲಯ (Mangalalaya):

ಶುಭ ಮತ್ತು ಅದೃಷ್ಟದ ಪ್ರತೀಕವೇ ಮಂಗಳಾಲಯ. ಹೊಸದಾಗಿ ಮನೆ ಕಟ್ಟಿದವರಿಗೆ ಅಥವಾ ಜೀವನದಲ್ಲಿ ಹೊಸ ಆರಂಭ ಮಾಡುವವರಿಗೆ ಇದು ಅತ್ಯಂತ ಮಂಗಳಕರ ಹೆಸರಾಗಿದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಸುಕೃತಂ (Sukrutam):

ಒಳ್ಳೆಯ ಕಾರ್ಯಗಳು ಮತ್ತು ಶುದ್ಧ ಮನಸ್ಸಿನ ಫಲವೇ ಸುಕೃತ. ನಿಮ್ಮ ಮನೆಗೆ ಈ ಹೆಸರಿಟ್ಟರೆ, ಅದು ಸತ್ಕರ್ಮಗಳ ಶಕ್ತಿಯನ್ನು ಆಕರ್ಷಿಸುತ್ತದೆ ಮತ್ತು ಮನೆಯಲ್ಲಿ ಪುಣ್ಯದ ವಾತಾವರಣವಿರುತ್ತದೆ.

ಶಾಂತಿವನಂ (Shantivanam):

ನಗರದ ಗದ್ದಲದಿಂದ ದೂರವಿದ್ದು, ಪ್ರಕೃತಿಗೆ ಹತ್ತಿರವಾಗಿ ಬದುಕುವವರಿಗೆ ಮತ್ತು ಏಕಾಂತವನ್ನು ಬಯಸುವವರಿಗೆ ಇದು ಹೇಳಿ ಮಾಡಿಸಿದ ಹೆಸರು. ಇದು ಮನೆಯನ್ನು ಶಾಂತಿಯ ದ್ವೀಪವನ್ನಾಗಿ ಮಾಡುತ್ತದೆ.

ಅನ್ನಪೂರ್ಣ (Annapurna):

ಸಮೃದ್ಧಿಯ ದೇವತೆ ಅನ್ನಪೂರ್ಣೇಶ್ವರಿಯ ಹೆಸರಿದು. ಈ ಹೆಸರಿರುವ ಮನೆಯಲ್ಲಿ ಆಹಾರ, ಸಂಪತ್ತು ಮತ್ತು ಸಂತೋಷಕ್ಕೆ ಎಂದಿಗೂ ಕೊರತೆಯಾಗುವುದಿಲ್ಲ ಎಂಬುದು ಭಕ್ತರ ದೃಢ ನಂಬಿಕೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

41 ನಿಮಿಷದಲ್ಲಿ ಅತ್ಯಾಚಾರ, ಕೊಲೆ, ದರೋಡೆ; ಐಆರ್​ಎಸ್​ ಅಧಿಕಾರಿ ಮನೆಯಲ್ಲಿ ನಡೆದಿದ್ದೇನು? ಆರೋಪಿ ಸಿಕ್ಕಿದ್ದು ಹೇಗೆ? – Kannada News | Rape and murder in 40 minutes Delhi IRS Officer Daughter killed by former Employee Rahul how he Caught

ನವದೆಹಲಿ, ಏಪ್ರಿಲ್ 23: ಬುಧವಾರ ಬೆಳಗ್ಗೆ 6.40ಕ್ಕೆ ದೆಹಲಿಯ ಐಷಾರಾಮಿ ಪ್ರದೇಶವಾದ ಕೈಲಾಶ್ ಹಿಲ್ಸ್​ನಲ್ಲಿರುವ ಐಆರ್​ಎಸ್​ ಅಧಿಕಾರಿಯೊಬ್ಬರ (IRS Officer) ಮನೆಯೊಳಗೆ ಭೀಕರ ಘಟನೆ ನಡೆದಿತ್ತು. ಬೆಳಗ್ಗೆ 6.30ಕ್ಕೆ ಐಆರ್​ಎಸ್​ ಅಧಿಕಾರಿ ತನ್ನ ಹೆಂಡತಿಯ ಜೊತೆ ವಾಕಿಂಗ್​​ಗೆ ಹೋದಕೂಡಲೆ ಅದೇ ಮನೆಯ ಮಾಜಿ ಕೆಲಸಗಾರ ರಾಹುಲ್ ಆ ಮನೆಯೊಳಗೆ ನುಗ್ಗಿದ್ದ. ತನ್ನನ್ನು ಕೆಲಸದಿಂದ ತೆಗೆದುಹಾಕಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಸಂಚು ಮಾಡಿದ್ದ ಆತನಿಗೆ ಆ ಮನೆಯ ಹೊರಗೆ ಕೆಲಸಗಾರರಿಗಾಗಿ ಎಲ್ಲಿ ಕೀ ಇಟ್ಟಿರುತ್ತಾರೆ ಎಂಬುದು ಗೊತ್ತಿತ್ತು. ಆ ಮನೆಯಲ್ಲಿ ಎಲ್ಲಿ ಸಿಸಿಟಿವಿ ಇದೆ, ಮನೆ ಮಾಲೀಕ ಎಷ್ಟು ಗಂಟೆಗೆ ಹೋಗಿ ಎಷ್ಟು ಗಂಟೆಗೆ ವಾಕಿಂಗ್ ಮುಗಿಸಿ ವಾಪಾಸ್ ಬರುತ್ತಾರೆ ಎಲ್ಲವೂ ಆತನಿಗೆ ಗೊತ್ತಿತ್ತು. ಹೀಗಾಗಿ, ಕೆಲಸದವರಿಗಾಗಿ ಹೊರಗೆ ಇಟ್ಟಿದ್ದ ಕೀ ತೆಗೆದುಕೊಂಡು ಬಾಗಿಲು ತೆರೆದು ಒಳಗೆ ಹೋದ ಅವನು ಸೀದಾ ಹೋಗಿದ್ದು ಮೇಲಿನ ಮಹಡಿಗೆ.

ಮೇಲಿನ ಮಹಡಿಯಲ್ಲಿ ಐಆರ್​ಎಸ್​ ಅಧಿಕಾರಿಯ 22 ವರ್ಷದ ಮಗಳ ರೂಂ ಇತ್ತು. ಪಿಯುಸಿಯಲ್ಲಿ ಟಾಪರ್ ಆಗಿದ್ದ ಆಕೆ ಅಪ್ಪನಂತೆ ಅಧಿಕಾರಿಯಾಗಬೇಕೆಂದು ಯುಪಿಎಸ್​ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಅಪ್ಪ-ಅಮ್ಮ ವಾಕಿಂಗ್​ಗೆ ಹೋಗುವ ಮುನ್ನವೇ ಎದ್ದು ಓದಲು ಕೂರುತ್ತಿದ್ದ ಆಕೆ ಅಂದು ಕೂಡ ಅಲ್ಲಿ ಓದುತ್ತಾ ಕುಳಿತಿದ್ದರು. ಆಗ ಆ ರೂಂಗೆ ಬಂದ ರಾಹುಲ್​ನನ್ನು ಕಂಡು ಆಕೆ ಹೆದರಿ ಕಿರುಚಿದ್ದರು. ಆದರೆ, ಆಕೆಯ ಕೂಗು ಯಾರಿಗೂ ಕೇಳಲಿಲ್ಲ. ಅಷ್ಟರಲ್ಲಿ ರಾಹುಲ್ ಟೇಬಲ್ ಲ್ಯಾಂಪ್​ನಿಂದ ಆಕೆಯ ತಲೆಗೆ ಹೊಡೆದಿದ್ದ. ಇದರಿಂದ ಆಕೆಯ ತಲೆಯಲ್ಲಿ ರಕ್ತ ಬಂದು, ಪ್ರಜ್ಞಾಹೀನರಾಗಿದ್ದರು. ಆಕೆಗೆ ಪ್ರಜ್ಞೆ ಹೋಗುತ್ತಿದ್ದಂತೆ ಆಕೆಯ ಮೇಲೆ ಅಮಾನುಷವಾಗಿ ಅತ್ಯಾಚಾರ ಮಾಡಿದ್ದ ರಾಹುಲ್ ಆಕೆಯ ಕುತ್ತಿಗೆಗೆ ಮೊಬೈಲ್ ಚಾರ್ಜರ್​ನ ವೈರ್ ಸುತ್ತಿ ಕತ್ತು ಹಿಸುಕಿ ಕೊಂದಿದ್ದ.

ಆಕೆಯ ಮೈಯಲ್ಲಿದ್ದ ರಕ್ತ ಆತನ ಮೈಗೂ ಮೆತ್ತಿಕೊಂಡಿತ್ತು. ಹೀಗೇ ಮನೆಯಿಂದ ಆಚೆ ಹೋದರೆ ಸಿಕ್ಕಿಹಾಕಿಕೊಳ್ಳುವುದು ಗ್ಯಾರಂಟಿ ಎಂದು ಆತ ಮೃತ ಯುವತಿಯ ಸಹೋದರನ ಬಟ್ಟೆ ತೆಗೆದುಕೊಂಡು ಬಾತ್​ರೂಂಗೆ ಹೋಗಿ ಬಟ್ಟೆ ಬದಲಾಯಿಸಿದ್ದ, ಶೂ ಕೂಡ ಚೇಂಜ್ ಮಾಡಿದ್ದ. ಬಳಿಕ ಕೆಳಗಿನ ಮಹಡಿಗೆ ಬಂದು ಐಆರ್​ಎಸ್​ ಅಧಿಕಾರಿಯ ರೂಂನಿಂದ ಎರಡೂವರೆ ಲಕ್ಷ ರೂ. ಹಣ ತೆಗೆದುಕೊಂಡು ಬ್ಯಾಗ್​​ನಲ್ಲಿಟ್ಟುಕೊಂಡಿದ್ದ. ನಂತರ ಏನೂ ಆಗಿಯೇ ಇಲ್ಲವೆಂಬಂತೆ ಬಾಗಿಲು ಲಾಕ್ ಮಾಡಿ, 7.21ಕ್ಕೆ ಮನೆಯಿಂದ ಹೊರಗೆ ಹೋಗಿದ್ದ. ಅದಾದ ಸ್ವಲ್ಪ ಹೊತ್ತಿನಲ್ಲೇ ಮನೆಗೆ ಬಂದ ಐಆರ್​ಎಸ್​ ಅಧಿಕಾರಿ ದಂಪತಿ ಮಗಳ ರೂಂಗೆ ಹೋದಾಗ ಅಲ್ಲಿ ಆಕೆ ಪ್ರಜ್ಞೆ ತಪ್ಪಿ ಬಿದ್ದಿರುವುದನ್ನು ನೋಡಿ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಅಷ್ಟರಲ್ಲಾಗಿಯೇ ಆಕೆ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದರು.

ಇದನ್ನೂ ಓದಿ: ಆದಾಯ ತೆರಿಗೆ​ ಅಧಿಕಾರಿ ಜಿಮ್​ನಲ್ಲಿದ್ದಾಗ ಮನೆಯಲ್ಲಿ ಮಗಳ ಬರ್ಬರ ಹತ್ಯೆ

ಹಾಡಹಗಲೇ ಕೇವಲ 41 ನಿಮಿಷದಲ್ಲಿ ಆ ಐಷಾರಾಮಿ ಮನೆಯಲ್ಲಿ ಭೀಕರ ಹತ್ಯೆ ನಡೆದಿತ್ತು. ಈ ಘಟನೆಯ ಮಾಹಿತಿ ತಿಳಿದ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ಪರಿಶೀಲಿಸಿದಾಗ ರಾಹುಲ್ ಓಡಾಡಿದ್ದು ಕಂಡುಬಂದಿತ್ತು. ಆತ ಆ ಮನೆಯಲ್ಲಿ ಕೆಲಸಕ್ಕಿದ್ದಾಗ ಹಣ ಕದ್ದಿದ್ದರಿಂದ ಆತನನ್ನು ಕೆಲಸದಿಂದ ತೆಗೆದುಹಾಕಿದ್ದ ವಿಷಯ ತಿಳಿದ ಪೊಲೀಸರಿಗೆ ಸೇಡಿಗಾಗಿ ಆತನೇ ಈ ಕೃತ್ಯ ಎಸಗಿದ್ದಾನೆಂಬುದು ಮನದಟ್ಟಾಗಿತ್ತು. ಈ ಘಟನೆ ನಡೆದ 12 ಗಂಟೆಯೊಳಗೆ ಪೊಲೀಸರು ರಾಹುಲ್​ನನ್ನು ಓಯೋ ಹೋಟೆಲ್​ನಿಂದ ಬಂಧಿಸಿದ್ದಾರೆ. ಸಿಸಿಟಿವಿ ದೃಶ್ಯ ಆಧರಿಸಿ ರಾಹುಲ್ ಅಲ್ಲಿಂದ ಹೋಗಿದ್ದ ಆಟೋ ಚಾಲಕನನ್ನು ವಿಚಾರಿಸಿದ ಪೊಲೀಸರಿಗೆ ಆತ ಓಯೋ ಹೋಟೆಲ್​ ಬಳಿ ಇಳಿದುಕೊಂಡ ಮಾಹಿತಿ ಸಿಕ್ಕಿತ್ತು. ಆತನನ್ನು ಹಿಡಿಯಲು ವಿಶೇಷ ತಂಡ ರಚಿಸಲಾಗಿತ್ತು. ಕೊನೆಗೂ ಹೋಟೆಲ್​ನಲ್ಲಿ ತಣ್ಣಗೆ ಕುಳಿತಿದ್ದ ರಾಹುಲ್ ಪೊಲೀಸರ ಅತಿಥಿಯಾಗಿದ್ದ.

ನಿನ್ನೆ ರಾತ್ರಿಯೇ ದೆಹಲಿಯಿಂದ ತನ್ನ ಊರಾದ ರಾಜಸ್ಥಾನಕ್ಕೆ ತೆರಳಲು ರಾಹುಲ್ ಪ್ಲಾನ್ ಮಾಡಿದ್ದ. ಅಲ್ಲಿಯವರೆಗೂ ತನ್ನ ಬಗ್ಗೆ ಯಾರಿಗೂ ಅನುಮಾನ ಬರುವುದಿಲ್ಲ ಎಂಬುದು ಅವನ ಲೆಕ್ಕಾಚಾರವಾಗಿತ್ತು. ಆದರೆ, ಪೊಲೀಸರು ಅವನಿಗಿಂತ ಬಹಳ ಹೆಜ್ಜೆ ಮುಂದಿದ್ದರು. ರಾಹುಲ್ ಐಆರ್​ಎಸ್​ ಅಧಿಕಾರಿಯ ಮನೆಯ ಬಳಿ ಒಂದೆರಡು ದಿನದಿಂದ ಓಡಾಡಿದ್ದನ್ನು ಸ್ಥಳೀಯ ಅಂಗಡಿಯವರು ನೋಡಿದ್ದರು. ಆತ ಅದೇ ಮನೆಯಲ್ಲಿ ಕೆಲಸ ಮಾಡುತ್ತಿದ್ದುದರಿಂದ ಅವರಿಗೆ ಅವನ ಪರಿಚಯವಿತ್ತು. ಅವನನ್ನು ಕೆಲಸದಿಂದ ವಜಾಗೊಳಿಸಿದ್ದು ಕೂಡ ಅವರಿಗೆ ಗೊತ್ತಿತ್ತು. ಹೀಗಾಗಿ, ಪೊಲೀಸರ ವಿಚಾರಣೆ ವೇಳೆ ಅಂಗಡಿಯವರು ರಾಹುಲ್ ಬಗ್ಗೆ ಹೇಳಿದ್ದರಿಂದ ಪೊಲೀಸರು ಸಿಸಿಟಿವಿಯಲ್ಲಿ ರಾಹುಲ್​ನನ್ನು ಪತ್ತೆಹಚ್ಚಲು ಸಹಾಯವಾಗಿತ್ತು.

ಇದನ್ನೂ ಓದಿ: ಕೊಡಗು: ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಆರೋಪ, ಕುಟ್ಟ ಖಾಸಗಿ ಹೋಂಸ್ಟೇ ಪರವಾನಗಿ ರದ್ದು

ಪೊಲೀಸರು ವಿಚಾರಣೆ ವೇಳೆ ರಾಹುಲ್ ಆ 41 ನಿಮಿಷ ಆ ಮನೆಯಲ್ಲಿ ತಾನು ಏನೇನು ಮಾಡಿದನೆಂಬುದರ ಸಂಪೂರ್ಣ ಮಾಹಿತಿ ನೀಡಿದ್ದಾನೆ. ಆತನನ್ನು ಹಿಡಿಯಲು 15 ತಂಡಗಳನ್ನು ರಚಿಸಲಾಗಿತ್ತು. ಆನ್‌ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್‌ಗೆ ವ್ಯಸನಿಯಾಗಿದ್ದ ರಾಹುಲ್ ಜನರಿಂದ ಹಣವನ್ನು ಸಾಲವಾಗಿ ಪಡೆಯುತ್ತಿದ್ದ. ಅಪರಾಧಕ್ಕೂ ಮುನ್ನ ತನ್ನ ಫೋನ್ ಅನ್ನು 10,000 ರೂಪಾಯಿಗೆ ಮಾರಿದ್ದ. ಐಆರ್‌ಎಸ್ ಅಧಿಕಾರಿಯ ಮಗಳನ್ನು ಕೊಲೆ ಮಾಡಿದ ನಂತರ 2.5 ಲಕ್ಷ ರೂಪಾಯಿಗಳನ್ನು ಕದ್ದಿದ್ದ. ಹಣಕ್ಕಾಗಿ ಆ ಮನೆಗೆ ದರೋಡೆಗೆ ಹೋದ ಆತ ತನ್ನ ಸೇಡು ತೀರಿಸಿಕೊಳ್ಳಲು ಅತ್ಯಾಚಾರ ಮತ್ತು ಕೊಲೆ ನಡೆಸಿದ್ದ. ಪೊಲೀಸರು ಮನೆ ಹತ್ತಿರದ ಸಿಸಿಟಿವಿ ದೃಶ್ಯಾವಳಿಗಳನ್ನು ತನಿಖೆಗಾಗಿ ಪರಿಶೀಲಿಸಿದಾಗ ರಾಹುಲ್ ಬೆಳಿಗ್ಗೆ 6:30ಕ್ಕೆ ಆ ಕಾಲೋನಿಗೆ ಬಂದಿರುವುದು ಕಂಡುಬಂದಿತ್ತು. ಅವನು ಬೆಳಿಗ್ಗೆ 6:40ರ ಸುಮಾರಿಗೆ ಮನೆಯೊಳಗೆ ಪ್ರವೇಶಿಸಿದನು. ನಂತರ ಬೆಳಿಗ್ಗೆ 7:20ಕ್ಕೆ ಅಲ್ಲಿಂದ ಮಾಡಿ ಪರಾರಿಯಾಗಿದ್ದನು. ಅವನು 41 ನಿಮಿಷಗಳಲ್ಲಿ ಅತ್ಯಾಚಾರ ಮತ್ತು ಕೊಲೆ ಮಾಡಿದ್ದಾನೆ ಎಂದು ಜಂಟಿ ಆಯುಕ್ತ ವಿಜಯ್ ಕುಮಾರ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಮೈಸೂರಲ್ಲೊಂದು ಮನಕಲಕುವ ಘಟನೆ: ಇರುವೆ ಕಚ್ಚಿ ಐಸಿಯುವಿನಲ್ಲಿದ್ದ ಹಸುಳೆ ಸಾವು? – Kannada News | Cheluvamba Hospital: Mysuru Infant Dies in ICU, Parents Allege Ant Bites and Negligence

ಮೈಸೂರು, ಏಪ್ರಿಲ್​​ 23: ವೈದ್ಯರ ನಿರ್ಲಕ್ಷ್ಯಕ್ಕೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿ ಡಿಸ್ಚಾರ್ಜ್​​ ಆಗಿದ್ದ ರೋಗಿಯೋರ್ವ ನರಳಿ ನರಳಿ ಪ್ರಾಣಬಿಟ್ಟಿರುವ ಆರೋಪ ನಿನ್ನೆಯಷ್ಟೇ ಕೇಳಿಬಂದಿತ್ತು. ಅದು ಮಾಸುವ ಮುನ್ನವೇ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನವಜಾತ ಶಿಶುವೊಂದು ಇರುವೆ ಕಚ್ಚಿ ಮೃತಪಟ್ಟಿರುವ ಬಗ್ಗೆ ಮೈಸೂರಿನಲ್ಲಿ (Mysuru) ದೂರು ಕೇಳಿಬಂದಿದೆ. ಚೆಲುವಾಂಬ ಆಸ್ಪತ್ರೆವಿರುದ್ಧ ಮೃತ ಮಗುವಿನ ಪೋಷಕರು ದೂರಿದ್ದು, ವೈದ್ಯರು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯವೇ ಹಸುಳೆಯ ಸಾವಿಗೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏಪ್ರಿಲ್ 15ರಂದು ಅವಧಿ ಪೂರ್ವ ಗಂಡು ಮಗುವಿನ ಜನನವಾಗಿತ್ತು. ಕೇವಲ 7 ತಿಂಗಳಿಗೆ ಹುಟ್ಟಿದ್ದ ಮಗು 1 ಕೆಜಿ 40 ಗ್ರಾಂ ಮಾತ್ರ ತೂಕ ಹೊಂದಿತ್ತು. ಈ ಹಿನ್ನೆಲೆ ಚೆಲುವಾಂಬ ಆಸ್ಪತ್ರೆಯ ಐಸಿಯುನಲ್ಲಿ ಶಿಶುವಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಈ ವೇಳೆ ಮಗುವಿಗೆ ಇರುವೆ ಕಚ್ಚಿರುವ ಆರೋಪ ಕೇಳಿಬಂದಿದೆ. ತುಂಬಾ ಇರುವೆಗಳಿದ್ದ ಬಗ್ಗೆ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗೆ ಈ ಮೊದಲೇ ತಿಳಿಸಿದ್ದೆವು. ಆದರೆ ಸಿಹಿ ಕಾರಣಕ್ಕೆ ಒಂದೆರಡು ಇರುವೆಗಳು ಬಂದಿವೆ ಎಂಬ ಸಮಜಾಯಿಷಿಯನ್ನು ಅವರು ನೀಡಿದ್ದರು. ಈಗ ನೋಡಿದರೆ ಮಗುವೇ ತೀರಿಕೊಂಡಿದೆ ಎಂದು ಪೋಷಕರು ಅಲವತ್ತುಕೊಂಡಿದ್ದಾರೆ. ಅಲ್ಲದೆ, ನಮಗೆ ನ್ಯಾಯ ಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ನದಿಗೆ ಈಜಲು ಇಳಿದಿದ್ದ ಇಬ್ಬರು ವಿದ್ಯಾರ್ಥಿನಿಯರು ಜಲಸಮಾಧಿ; ಮೂರೇ ದಿನದಲ್ಲಿ 10 ಮಂದಿ ಕಾವೇರಿ ಪಾಲು!

ಆರೋಪ ಅಲ್ಲಗಳೆದ ಆಸ್ಪತ್ರೆ

ಇನ್ನು ಮೃತ ಮಗುವಿನ ಪೋಷಕರ ಆರೋಪಗಳನ್ನು ಆಸ್ಪತ್ರೆಯ ಪ್ರಭಾರ ವೈದ್ಯಾಧಿಕಾರಿ ಡಾ. ಲಕ್ಷ್ಮೀಕಾಂತ್ ಅಲ್ಲಗಳೆದಿದ್ದಾರೆ. 21 ವಾರಕ್ಕೆ ಮಗು ಹುಟ್ಟಿದ್ದು, ಜನನದ ಸಂದರ್ಭ ಶಿಶು ಕೇವಲ 1 ಕೆಜಿ ಇತ್ತು. ಮಗು ಅಳುತ್ತಿಲ್ಲ ಎನ್ನುವ ಕಾರಣಕ್ಕೆ ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದೆವು. ಐಸಿಯುನಲ್ಲಿ ಚಿಕಿತ್ಸೆ ಹಿನ್ನೆಲೆ ಮಗುವಿನ ಕೈ ಮತ್ತು ಬಾಯಿಗೆ ಪ್ಲಾಸ್ಟರ್ ಹಾಕಿದ್ದೆವು. ಹೀಗಾಗಿ ಆ ಭಾಗದಲ್ಲಿ ಮಾರ್ಕ್​​ಗಳು ಉಂಟಾಗಿವೆ. ಕಳೆದ ಒಂದು ವಾರದಿಂದ ಮಗುವಿನ ಜೀವ ಉಳಿಸಲು ಪ್ರಯತ್ನ ಮಾಡಲಾಗಿದೆ. ನಮ್ಮ ಸಿಬ್ಬಂದಿಗಳಿಂದ ಯಾವುದೇ ನಿರ್ಲಕ್ಷ್ಯ ಆಗಿಲ್ಲ. ಐಸಿಯುನಲ್ಲಿ ಗ್ಲೂಕೊಸ್ ಇರುವುದರಿಂದ ಒಂದೊಂದು ಇರುವೆ ಇರಬಹುದು. ಆದರೆ ಮಗುವಿನ ಪೋಷಕರು ಹೇಳುವಂತೆ ಇರುವೆ ಕಚ್ಚಿ ಸಾವು ಉಂಟಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version