ನವದೆಹಲಿ, ಏಪ್ರಿಲ್ 2: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರು ತಮ್ಮ ಪ್ರಸ್ತುತ ಹುದ್ದೆಯಿಂದ ಕೆಳಗಿಳಿಯುವ ಸಾಧ್ಯತೆಯಿದ್ದು, ರಾಜ್ಯಸಭೆಗೆ ಪ್ರವೇಶಿಸಲು ಸಜ್ಜಾಗಿದ್ದಾರೆ. ನಿತೀಶ್ ಕುಮಾರ್ ಏಪ್ರಿಲ್ 10ರಂದು ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅವರು ಏಪ್ರಿಲ್ 9ರಂದು ಪಾಟ್ನಾದಿಂದ ದೆಹಲಿಗೆ ಪ್ರಯಾಣಿಸಿ ದೆಹಲಿಯಲ್ಲಿ ಉಳಿಯಲಿದ್ದು, ಈ ಭೇಟಿಯ ಸಮಯದಲ್ಲಿ ಅವರು ಹಿರಿಯ ಬಿಜೆಪಿ ನಾಯಕರೊಂದಿಗೆ ಸಭೆ ನಡೆಸುವ ಸಾಧ್ಯತೆಯಿದೆ.
ನಿತೀಶ್ ಕುಮಾರ್ ಪಾಟ್ನಾಗೆ ಹಿಂದಿರುಗಿದ ಸ್ವಲ್ಪ ಸಮಯದ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ. ಇದು ಬಿಹಾರದಲ್ಲಿ ಹೊಸ ಸರ್ಕಾರ ರಚನೆಗೆ ದಾರಿ ಮಾಡಿಕೊಡುತ್ತದೆ ಎಂದು ಜೆಡಿಯು ಮೂಲಗಳು ತಿಳಿಸಿವೆ. ಏಪ್ರಿಲ್ 11ರಂದು ಅಥವಾ ನಂತರ ಅವರು ಬಿಹಾರಕ್ಕೆ ಮರಳುವ ನಿರೀಕ್ಷೆಯಿದೆ. ಇದಾದ ಬಳಿಕ ಬಿಹಾರದಲ್ಲಿ ಹೊಸ ಸರ್ಕಾರ ರಚನೆಯಾಗುವ ನಿರೀಕ್ಷೆಯಿದೆ. ಏಪ್ರಿಲ್ ಮಧ್ಯಭಾಗದಲ್ಲಿ ಹೊಸ ಸರ್ಕಾರ ರಚನೆಯಾಗಲಿದೆ ಎನ್ನಲಾಗಿದೆ.
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯಸಭೆಗೆ ಪ್ರವೇಶಿಸಿದ ನಂತರ Z-ಪ್ಲಸ್ ಭದ್ರತೆಯನ್ನು ಪಡೆಯುತ್ತಾರೆ ಎಂದು ರಾಜ್ಯ ಗೃಹ ಇಲಾಖೆ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ ಎಂದು ಪಿಟಿಐ ವರದಿ ತಿಳಿಸಿದೆ.
ಮಾರ್ಚ್ 16ರಂದು ರಾಜ್ಯಸಭೆಗೆ ಆಯ್ಕೆಯಾದ ನಿತೀಶ್ ಕುಮಾರ್ ಈ ತಿಂಗಳು ನಿವೃತ್ತರಾಗುವ ಸದಸ್ಯರ ಅವಧಿ ಮುಗಿದ ನಂತರ ತಮ್ಮ ಹೊಸ ಹುದ್ದೆಯನ್ನು ವಹಿಸಿಕೊಳ್ಳುವ ನಿರೀಕ್ಷೆಯಿದೆ. ಬಿಹಾರದ 5 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆಗಳು ನಡೆದಿದ್ದು, ಅವರ ಅಧಿಕಾರಾವಧಿ ಏಪ್ರಿಲ್ 9ರಂದು ಕೊನೆಗೊಳ್ಳಲಿದೆ.
ನಿತೀಶ್ ಕುಮಾರ್ ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಪ್ರತಿನಿಧಿಸದ ಏಕೈಕ ಸದನವಾದ ರಾಜ್ಯಸಭೆಗೆ ಪಾದಾರ್ಪಣೆ ಮಾಡಲು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧರಾಗಿದ್ದಾರೆ. ಇದು ರಾಜ್ಯ ವಿಧಾನಸಭೆಯಲ್ಲಿ ಅತಿದೊಡ್ಡ ಪಕ್ಷವಾದ ಬಿಜೆಪಿಗೆ ಬಿಹಾರದಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗುವ ಅವಕಾಶವನ್ನು ನೀಡುವ ಸಾಧ್ಯತೆಯಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಯಾದಗಿರಿ, ಏಪ್ರಿಲ್ 02: ಗುತ್ತಿಗೆದಾರನಿಂದ ಲಂಚ (Bribe) ಸ್ವೀಕರಿಸುತ್ತಿದ್ದ ವೇಳೆ ಕೆಬಿಜೆಎನ್ಎಲ್ ಭೀಮರಾಯನಗುಡಿ ವಿಭಾಗದ ಎಇಇ ಮತ್ತು ಜೆಇ ಲೋಕಾಯುಕ್ತ (Lokayukta) ಬಲೆಗೆ ಬಿದ್ದಿದ್ದಾರೆ. ಎಇಇ ಮಧುಸೂದನ್ ಮತ್ತು ಜೆಇ ಮಂಜುನಾಥ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು. ಲೋಕಾಯುಕ್ತ ಡಿವೈಎಸ್ಪಿ ಜೆ.ಹೆಚ್.ಇನಾಂದಾರ್ ನೇತೃತ್ವದಲ್ಲಿ ದಾಳಿ ಮಾಡಿ ಇಬ್ಬರು ಅಧಿಕಾರಿಗಳನ್ನು ವಶಕ್ಕೆ ಪಡೆಯಲಾಗಿದೆ.
ರೆಡ್ ಹ್ಯಾಂಡ್ ಆಗಿ ಬಲೆಗೆ ಬಿದ್ದ ಅಧಿಕಾರಿಗಳು
ಎಇಇ ಮಧುಸೂದನ್ ಮತ್ತು ಜೆಇ ಮಂಜುನಾಥ ಕಾಮಗಾರಿ ಬಿಲ್ ಮಂಜೂರು ಮಾಡಲು ಗುತ್ತಿಗೆದಾರ ಖಾಸಿಂ ಸಾಬ್ನಿಂದ 35 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಇತ್ತ ಅಧಿಕಾರಿಗಳು ಲಂಚಕ್ಕೆ ಬೇಡಿಕೆಯಿಟ್ಟ ಬಗ್ಗೆ ಗುತ್ತಿಗೆದಾರ ದೂರು ಕೂಡ ನೀಡಿದ್ದ. ಇಂದು ಫೋನ್ಪೇ ಮೂಲಕ ಲಂಚ ಸ್ವೀಕರಿಸಲು ಮುಂದಾದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಇಬ್ಬರು ಅಧಿಕಾರಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
3 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ಜಿಬಿಎ ಅಧಿಕಾರಿಗಳು ಲೋಕಾ ಬಲೆಗೆ
ಇನ್ನು ಇತ್ತ ಬೆಂಗಳೂರಿನ ಥಣಿಸಂದ್ರದಲ್ಲಿ ಕೂಡ ಜಿಬಿಎ ಅಧಿಕಾರಿಗಳಿಬ್ಬರು ಲಂಚ ಸ್ವೀಕರಿಸುವಾಗ ಲೋಕಾ ಬಲೆಗೆ ಬಿದಿದ್ದಾರೆ. ಆರ್ಐ ವೆಂಕಟೇಶ್ ಮತ್ತು ತೆರಿಗೆ ಅಧಿಕಾರಿ ಶ್ರೀನಿವಾಸ್ ಲೋಕಾಯುಕ್ತ ಬಲೆಗೆ ಬಿದಿದ್ದಾರೆ. ಕಟ್ಟಡದ ಖಾತೆ ಮಾಡಿಕೊಡಲು 3 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಬೆಂಗಳೂರಿನ ಥಣಿಸಂದ್ರದಲ್ಲಿ ನ್ಯಾಮತುಲ್ಲಾ ಖಾನ್ ಎಂಬುವವರಿಂದ 3 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಇಬ್ಬರು ಅಧಿಕಾರಿಗಳು ರೆಡ್ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳು ಹಿಡಿದಿದ್ದಾರೆ. ಈ ಬಗ್ಗೆ ನ್ಯಾಮತುಲ್ಲಾ ಖಾನ್ ದೂರು ನೀಡಿದ್ದರು. ಹೀಗಾಗಿ ಲೋಕಾಯುಕ್ತ ಎಸ್ಪಿ ವಂಶಿಕೃಷ್ಣ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಸದ್ಯ ಇಬ್ಬರು ಅಧಿಕಾರಿಗಳನ್ನು ವಶಕ್ಕೆ ಪಡೆಯಲಾಗಿದೆ.
ಕೈದಿಯ ಕೂಲಿ ಹಣಕ್ಕೆ ಲಂಚ ಕೇಳಿದ ಅಧಿಕಾರಿ ಲೋಕಾ ಬಲೆಗೆ
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಉಪಕಾರಾಗೃಹದಲ್ಲಿ ಕೈದಿಯ ಕೂಲಿ ಹಣಕ್ಕೆ ಲಂಚ ಕೇಳಿದ ಅಧಿಕಾರಿ ಲೋಕಾ ಬಲೆಗೆ ಬಿದಿದ್ದಾರೆ. ಕಲ್ಲಪ್ಪ ಗಸ್ತಿ ಲೋಕಾಯುಕ್ತ ಬಲೆಗೆ ಬಿದ್ದ ಉಪ ಕಾರಾಗೃಹದ ಅಧೀಕ್ಷಕ. ಕೊಲೆ ಆರೋಪಿ ರಾಜಕುಮಾರ್ ಹುಂದೇಕರನಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಹಳಿಯಾಳ ತಾಲೂಕಿನ ಯಡೋಗಾ ಗ್ರಾಮದ ರಾಜಕುಮಾರ್ 2022ರಲ್ಲಿ ಪತ್ನಿಯ ಕತ್ತು ಸಿಳಿ ಜೈಲು ಪಾಲಾಗಿದ್ದ. ಕೊಲೆ ಆರೋಪದ ಮೇರೆಗೆ ಎರಡು ವರ್ಷ ಜೈಲು ಸೇರಿದ್ದ. ಜಾಮೀನು ಸಿಕ್ಕ ಹಿನ್ನೆಲೆ ಜೈಲಿನಿಂದ ಹೊರ ಬಂದಿದ್ದ. ಎರಡು ವರ್ಷ ಜೈಲಿನಲ್ಲಿ ಕೂಲಿ ಕೆಲಸ ಮಾಡಿ 1 ಲಕ್ಷ 40 ಸಾವಿರ ರೂ ಸಂಪಾದಿಸಿದ್ದ. ಜೈಲಿನ ಕೂಲಿ ವೇತನ ನೀಡಲು ಜೈಲರ್ನಿಂದ 60 ಸಾವಿರ ರೂ ಬೇಡಿಕೆ ಇಟ್ಟಿದ್ದರು. ಹಣವನ್ನು ಧಾರವಾಡದ ಮಹಿಳಾ ವಕೀಲೆಯೊಬ್ಬರಿಗೆ ಫೋನ್ ಪೇ ಮಾಡಲು ತಾಕೀತು ಮಾಡಿದ್ದರು. ಹಣಕ್ಕೆ ಪೀಡಿಸಿದ್ದರಿಂದ ರಾಜಕುಮಾರ್ ಹುಂದೇಕರ್ ಲೋಕಾಯುಕ್ತಕ್ಕೆ ದೂರು ನೀಡಿದ್ದ. ಲೋಕಾಯುಕ್ತ ಎಸ್.ಪಿ ಧನ್ಯ ನಾಯ್ಕ, ಸಿಪಿಐ ವಿನಾಯಕ್ ಬಿಲ್ಲವ ತಂಡದಿಂದ ದಾಳಿ ಹಿಡಿದಿದ್ದಾರೆ. ಸದ್ಯ ಜೈಲರ್ಗೆ ನೋಟಿಸ್ ನೀಡಿ ಬಿಡುಗಡೆ ಮಾಡಲಾಗಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದ ಐಪಿಎಲ್ 2026 ರ (IPL 2026) 6ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (KKR vs SRH) ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ (Abhishek Sharma) 48 ರನ್‌ಗಳ ಅಬ್ಬರದ ಇನ್ನಿಂಗ್ಸ್ ಆಡಿದರು. ಅವರ ಈ ಇನ್ನಿಂಗ್ಸ್ನಲ್ಲಿ 4 ಸಿಕ್ಸರ್‌ಗಳು ಮತ್ತು 4 ಬೌಂಡರಿಗಳು ಸೇರಿದ್ದವು. ಆದರೆ ಅವರ ವಿಕೆಟ್ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಅಭಿಷೇಕ್ ಶರ್ಮಾ ಅವರ ವಿಕೆಟ್ ಅನ್ನು ಬ್ಲೆಸ್ಸಿಂಗ್ ಮುಜರಬಾನಿ ಪಡೆದರಾದರೂ, ವರುಣ್ ಚಕ್ರವರ್ತಿ (Varun Chakravarthy) ಹಿಡಿದ ಕ್ಯಾಚ್ ಇದೀಗ ವಿವಾದ ಸೃಷ್ಟಿಸಿದೆ. 9 ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಅಭಿಷೇಕ್ ಶರ್ಮಾ ದೊಡ್ಡ ಶಾಟ್ ಆಡಿದರು, ಆದರೆ ಸ್ಕ್ವೇರ್ ಲೆಗ್ ಬೌಂಡರಿಯಲ್ಲಿ ನಿಂತಿದ್ದ ವರುಣ್ ಚಕ್ರವರ್ತಿ ಅದ್ಭುತ ಕ್ಯಾಚ್ ತೆಗೆದುಕೊಂಡರು.
ಅಭಿಷೇಕ್ ಶರ್ಮಾ ಔಟ್?
ವರುಣ್ ಚಕ್ರವರ್ತಿ ಕ್ಯಾಚ್ ಹಿಡಿದ ವಿಡಿಯೋವನ್ನು ಮೂರನೇ ಅಂಪೈರ್ ಪರಿಶೀಲಿಸಿದಾಗ, ಚೆಂಡು ನೆಲಕ್ಕೆ ತಾಗಿರುವಂತೆ ಕಂಡುಬಂದಿತು. ಚಕ್ರವರ್ತಿ ಕ್ಯಾಚ್ ತೆಗೆದುಕೊಳ್ಳುವ ಮೊದಲೇ ಚೆಂಡು ನೆಲಕ್ಕಪಳಿಸಿದಂತೆ ಕಾಣಿಸಿತು ಆದರೆ, ಮೂರನೇ ಅಂಪೈರ್ ಅಭಿಷೇಕ್ ಔಟ್ ಎಂದು ಘೋಷಿಸಿದರು. ಇದೀಗ ಅಭಿಷೇಕ್ ಔಟ್ ಆದ ನಂತರ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ಅಭಿಷೇಕ್ ಔಟ್ ಆಗಿಲ್ಲ ಎಂಬುದು ಅವರ ಅಭಿಪ್ರಾಯವಾಗಿದೆ.
ಸ್ಪಿನ್ ಬಲೆ ಮಾತ್ರ ಅಲ್ಲ, ಅದ್ಭುತ ಕ್ಯಾಚ್ ಹಿಡಿಯೋ ಕಲೆ ಕೂಡ ಇದೆ ಚಕ್ರವರ್ತಿಗೆ!
— Star Sports Kannada (@StarSportsKan) April 2, 2026
ಅರ್ಧಶತಕ ವಂಚಿತರಾದ ಅಭಿ
ವರುಣ್ ಚಕ್ರವರ್ತಿಯ ಕ್ಯಾಚ್‌ನಿಂದ ಅಭಿಷೇಕ್ ಶರ್ಮಾ 48 ರನ್ಗಳಿಗೆ ಔಟಾದರು. ಕುತೂಹಲಕಾರಿ ಸಂಗತಿಯೆಂದರೆ ಇದೇ ವರುಣ್ ಬೌಲಿಂಗ್ನಲ್ಲಿ, ಅಭಿಷೇಕ್ ಬೌಂಡರಿ, ಸಿಕ್ಸರ್ಗಳ ಮಳೆಗರೆದಿದ್ದರು. ವರುಣ್ ಅವರ ಓವರ್‌ನಲ್ಲಿ ಅಭಿಷೇಕ್ ಎರಡು ಸಿಕ್ಸರ್‌ಗಳು ಮತ್ತು ಮೂರು ಬೌಂಡರಿಗಳನ್ನು ಒಳಗೊಂಡಂತೆ 25 ರನ್ ಕಲೆಹಾಕಿದ್ದರು. ಅಲ್ಲದೆ ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ಜೊತೆಗೂಡಿ 34 ಎಸೆತಗಳಲ್ಲಿ 82 ರನ್‌ಗಳ ಜತೆಯಾಟ ನಿರ್ಮಿಸಿದ್ದರು.
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ವರುಣ್ ಚಕ್ರವರ್ತಿ ಕೇವಲ ಎರಡು ಓವರ್‌ಗಳನ್ನು ಎಸೆದು 31 ರನ್‌ಗಳನ್ನು ನೀಡಿದರು. ಹಿಂದಿನ ಪಂದ್ಯದಲ್ಲೂ ಕಳಪೆ ಬೌಲಿಂಗ್ ಪ್ರದರ್ಶಿಸಿದ ವರುಣ್, ಮುಂಬೈ ಇಂಡಿಯನ್ಸ್ ವಿರುದ್ಧ ನಾಲ್ಕು ಓವರ್‌ಗಳಲ್ಲಿ 48 ರನ್‌ಗಳನ್ನು ನೀಡಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ತಮಿಳು ಚಿತ್ರರಂಗದ ಖ್ಯಾತ ನಟ ಮತ್ತು ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ದಳಪತಿ ವಿಜಯ್ ಅವರು ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಅಧಿಕೃತವಾಗಿ ತಿರುಚನಾಪಳ್ಳಿಯಲ್ಲಿ (ತಿರುಚಿ) ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಯ ನಂತರ ಅಲ್ಲಿ ನೆರೆದಿದ್ದ ಅಪಾರ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ದಳಪತಿ ವಿಜಯ್ (Thalapathy Vijay) ಅವರು, ತಮ್ಮ ಕೊನೆಯ ಚಿತ್ರ ‘ಜನ ನಾಯಗನ್’ (Jana Nayagan) ಬಿಡುಗಡೆಯ ವಿಳಂಬದ ಹಿಂದೆ ದೊಡ್ಡ ರಾಜಕೀಯ ಷಡ್ಯಂತ್ರವಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
‘ನನ್ನನ್ನು ವಿರೋಧಿಸಲು ಎಲ್ಲಾ ಪಕ್ಷಗಳೂ ಹೇಗೆ ಒಂದಾಗಿವೆ ಎಂಬುದನ್ನು ನಾನು ನಿಮಗೆ ಹೇಳಬೇಕಾಗಿಲ್ಲ. 40ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದ ಕರೂರ್ ಕಾಲ್ತುಳಿತದ ಘಟನೆ ಮತ್ತು ನನ್ನ ಕೊನೆಯ ಸಿನಿಮಾ ಜನ ನಾಯಗನ್ ಬಿಡುಗಡೆಯಾಗದಂತೆ ತಡೆದಿರುವುದರ ಹಿಂದೆ ದೊಡ್ಡ ಷಡ್ಯಂತ್ರವಿದೆ. ಚುನಾವಣೆಯಲ್ಲಿ ಆ ಸಿನಿಮಾ ಪ್ರಬಲ ಅಸ್ತ್ರವಾಗುತ್ತದೆ ಎಂಬ ಭಯ ಅವರಿಗಿದೆ. ಒಬ್ಬ ಸಹೋದರನಾಗಿ, ಮಗನಾಗಿ ನಿಮ್ಮ ವಿಜಯ್‌ಗೆ ನ್ಯಾಯ ಬೇಕು’ ಎಂದು ಅವರು ಭಾವುಕರಾಗಿ ನುಡಿದರು.
‘ನಾನು ಬೇಕಿದ್ದರೆ ಐಷಾರಾಮಿ ಜೀವನ ನಡೆಸಬಹುದಿತ್ತು. ಆದರೆ ನಿಮ್ಮ ಸೇವೆ ಮಾಡಲು, ನಿಮ್ಮ ಪ್ರೀತಿಯ ಕೃತಜ್ಞತೆ ತೀರಿಸಲು ಮತ್ತು ನೋವುಗಳನ್ನು ಹಂಚಿಕೊಳ್ಳಲು ನಾನು ಇಲ್ಲಿಗೆ ಬಂದಿದ್ದೇನೆ. ನಾನು ನಿಮಗೆ ಎಂದಿಗೂ ಸುಳ್ಳು ಹೇಳುವುದಿಲ್ಲ ಅಥವಾ ಮೋಸ ಮಾಡುವುದಿಲ್ಲ’ ಎಂದು ವಿಜಯ್ ಅವರು ಅಭಿಮಾನಿಗಳಿಗೆ ಭರವಸೆ ನೀಡಿದರು.
“From the Karur incident scheme to my last film #JanaNayagan, what if it made our close-to-heart relationship even stronger? And what if that film became a powerful weapon in this election? So they deceived me… I need justice too..”
ಇದೇ ವೇಳೆ ಡಿಎಂಕೆ ವಿರುದ್ಧ ಅವರು ನೇರ ವಾಗ್ದಾಳಿ ಮಾಡಿದರು. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಜನರ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ ವಿಜಯ್, ಪ್ರಸ್ತುತ ಡಿಎಂಕೆ ಸರ್ಕಾರವನ್ನು ‘ದುಷ್ಟ ಶಕ್ತಿ’ ಎಂದು ಕರೆದರು. ಅಲ್ಲದೆ, ಈ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯುವಂತೆ ಮತದಾರರಲ್ಲಿ ಮನವಿ ಮಾಡಿದರು.
ಎಚ್. ವಿನೋದ್ ನಿರ್ದೇಶನದ ‘ಜನ ನಾಯಕನ್’ ಸಿನಿಮಾ ಜನವರಿ 9ರಂದೇ ಬಿಡುಗಡೆ ಆಗಬೇಕಿತ್ತು. ಚಿತ್ರದ ವಿಳಂಬದಿಂದಾಗಿ ಸುಮಾರು 100 ಕೋಟಿ ರೂಪಾಯಿಗೂ ಹೆಚ್ಚು ನಷ್ಟವಾಗುತ್ತದೆ ಎಂದು ಚಿತ್ರದ ನಿರ್ಮಾಣ ಸಂಸ್ಥೆಯಾದ ‘ಕೆವಿಎನ್ ಪ್ರೊಡಕ್ಷನ್ಸ್’ ನ್ಯಾಯಾಲಯದಲ್ಲಿ ವಾದಿಸಿತ್ತು. ಆದರೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ ಪ್ರಮಾಣಪತ್ರ ಪಡೆಯುವಲ್ಲಿನ ವಿಳಂಬದಿಂದಾಗಿ ಚಿತ್ರದ ಬಿಡುಗಡೆ ಮುಂದೂಡಲ್ಪಟ್ಟಿದೆ.
ನವದೆಹಲಿ, ಏಪ್ರಿಲ್ 2: ಇರಾನ್ ಯುದ್ಧಕ್ಕೆ ಮೊದಲು ಚೇತರಿಕೆಯ ಹಾದಿಯಲ್ಲಿದ್ದ ಭಾರತೀಯ ಷೇರು ಮಾರುಕಟ್ಟೆ (stock market) ಈಗ ಮತ್ತೆ ತತ್ತರಿಸುತ್ತಿದೆ. ಇರಾನ್ ಯುದ್ಧ ಆರಂಭವಾದ ಬಳಿಕ ಗಡಗಡ ನಡುಗುತ್ತಿದೆ. ಮಾರ್ಚ್ ತಿಂಗಳಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಶೇ 11ರಷ್ಟು ಕುಸಿತ ಕಂಡಿವೆ. ಹೆಚ್ಚಿನ ಸೂಚ್ಯಂಕಗಳು ಶೇ. 10ಕ್ಕಿಂತಲೂ ಹೆಚ್ಚಿನ ಕುಸಿತ ಕಂಡಿವೆ.
ಇಸ್ರೇಲ್ ಮತ್ತು ಅಮೆರಿಕ ದೇಶಗಳು ಇರಾನ್ ಮೇಲೆ ದಾಳಿ ಮಾಡುವ ಮುನ್ನ, ಅಂದರೆ ಫೆಬ್ರುವರಿ 27ರಂದು ಬಿಎಸ್ಇಯಲ್ಲಿ ಲಿಸ್ಟ್ ಆಗಿರುವ ಕಂಪನಿಗಳ ಒಟ್ಟು ಷೇರು ಸಂಪತ್ತು 463.5 ಲಕ್ಷ ಕೋಟಿ ರೂ ಇತ್ತು. ಇವತ್ತು ಏಪ್ರಿಲ್ 2ರಂದು ಇವುಗಳ ಒಟ್ಟು ಮಾರುಕಟ್ಟೆ ಬಂಡವಾಳ 422.4 ಲಕ್ಷ ಕೋಟಿ ರೂ ಇದೆ. ಅಂದರೆ, ಬರೋಬ್ಬರಿ 41 ಲಕ್ಷ ಕೋಟಿ ರೂ ಷೇರುಸಂಪತ್ತು ಕುಸಿದಿದೆ. ಹೂಡಿಕೆದಾರರಿಗೆ 41 ಲಕ್ಷ ಕೋಟಿ ರೂ ನಷ್ಟ ಆಗಿದೆ.
ಇರಾನ್ ಯುದ್ಧವು ಜಾಗತಿಕ ತೈಲ ಮಾರುಕಟ್ಟೆಯನ್ನು ಅಲುಗಾಡಿಸಿದೆ. ತೈಲ ಪೂರೈಕೆಯಲ್ಲಿ ಭಾರೀ ವ್ಯತ್ಯಯ ಆಗಿದೆ. ಇದು ಒಟ್ಟಾರೆ ಷೇರು ಮಾರುಕಟ್ಟೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ವಿದೇಶೀ ಹೂಡಿಕೆದಾರರು ಸಾಲುಸಾಲಾಗಿ ನಿರ್ಗಮಿಸುತ್ತಿದ್ದಾರೆ. ಇರಾನ್ ಯುದ್ಧ ನಿಂತು, ತೈಲ ಪೂರೈಕೆ ಹಾಗೂ ಇತರ ವ್ಯಾಪಾರ ವಹಿವಾಟು ಸಹಜ ಸ್ಥಿತಿಗೆ ಮರಳುವವರೆಗೂ ಷೇರುಪೇಟೆ ತುಮುಲ ಹೀಗೇ ಮುಂದುವರಿಯುತ್ತದೆ.
ಈ ಸಂದಿಗ್ಧತೆ ಸದ್ಯಕ್ಕೆ ಮುಕ್ತಾಯವಾಗುವುದಿಲ್ಲ ಎಂದು ಅನಿಸುವಂತೆ ಡೊನಾಲ್ಡ್ ಟ್ರಂಪ್ ರಣಕಹಳೆ ಮುಂದುವರಿಸಿದ್ದಾರೆ. ಮುಂದಿನ ದಿನಗಳಲ್ಲಿ ಇರಾನ್ ಮೇಲೆ ಇನ್ನೂ ದೊಡ್ಡ ಮಟ್ಟದಲ್ಲಿ ಪ್ರಹಾರ ಮಾಡುತ್ತೇವೆ ಎಂದಿದ್ದಾರೆ. ಅಮೆರಿಕದ ಹುಟ್ಟಡಗಿಸುವವರೆಗೂ ಯುದ್ಧ ನಿಲ್ಲಿಸಲ್ಲ ಎಂದು ಇರಾನ್ ಕೂಡ ಹೇಳುತ್ತಿದೆ. ಹೀಗಾಗಿ, ಹೂಡಿಕೆದಾರರು ಏನು ಮಾಡಬೇಕೆಂದು ದಿಕ್ಕುತೋಚದೆ ಉಳಿಯುವ ಪರಿಸ್ಥಿತಿ ಇದೆ ಎಂದು ಮೇಲ್ನೋಟಕ್ಕೆ ಕಾಣುತ್ತದೆ.
ಭಾರತದ ಈಕ್ವಿಟಿ ಮಾರುಕಟ್ಟೆ ಕಳೆದ ಒಂದೂವರೆ ವರ್ಷದಲ್ಲಿ ಬಹಳ ಕುಸಿತ ಕಂಡಿದೆ. ಬಹಳಷ್ಟು ಷೇರುಗಳ ಮಾರ್ಕೆಟ್ ಕರೆಕ್ಷನ್ ಆಗಿದೆ. ಅನೇಕ ಉತ್ತಮ ಷೇರುಗಳು ಒಳ್ಳೆಯ ಬೆಲೆಗೆ ಸಿಗುತ್ತಿವೆ. ತಜ್ಞರು ನೀಡಿರುವ ಸಲಹೆ ಪ್ರಕಾರ, ಉತ್ತಮ ಷೇರುಗಳನ್ನು ಖರೀದಿಸಲು ಮಾರುಕಟ್ಟೆ ಅವಕಾಶ ಕೊಟ್ಟಿದೆ. ಹಾಗಂತ, ಷೇರುಗಳಲ್ಲಿ ಸಿಕ್ಕಾಪಟ್ಟೆ ಹೂಡಿಕೆ ಮಾಡಬೇಡಿ ಎನ್ನುವ ಎಚ್ಚರಿಕೆಯೂ ಇದೆ.
ಇತ್ತೀಚೆಗೆ ‘ಕೆವಿಎನ್ ಪ್ರೊಡಕ್ಷನ್ಸ್’ (KVN Productions) ಸಂಸ್ಥೆಯು ‘ಲವ್ ಮಾಕ್ಟೇಲ್ 3’ ಸಿನಿಮಾವನ್ನು ಬಿಡುಗಡೆ ಮಾಡಿತ್ತು. ಆ ಸಿನಿಮಾ ಸೂಪರ್ ಹಿಟ್ ಆಯಿತು. ಅದರ ಬೆನ್ನಲ್ಲೇ ‘ಪೀಟರ್’ ಸಿನಿಮಾವನ್ನು ವಿತರಣೆ ಮಾಡಲು ‘ಕೆವಿಎನ್ ಪ್ರೊಡಕ್ಷನ್ಸ್’ ಸಜ್ಜಾಗಿದೆ. ಈ ಸಿನಿಮಾದ ಕಂಟೆಂಟ್ ನೋಡಿ ಇಷ್ಟಪಟ್ಟಿದ್ದರಿಂದ ವಿತರಿಸಲು ಮುಂದೆ ಬಂದಿದೆ. ಏಪ್ರಿಲ್ 10ಕ್ಕೆ ರಾಜ್ಯದಾದ್ಯಂತ ಬಿಡುಗಡೆ ಮಾಡಲಿದೆ. ರಾಜೇಶ್ ಧ್ರುವ ಅವರು ‘ಪೀಟರ್’ (Peter) ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.
ನಾಯಕಿಯಾಗಿ ಜಾನ್ವಿ ನಟಿಸಿದ್ದಾರೆ. ರವೀಕ್ಷಾ ಶೆಟ್ಟಿ , ರಘು ಪಾಂಡೇಶ್ವರ್ , ರಾಮನಾಡಗೌಡ, ವರುಣ್ ಪಟೇಲ್, ಪ್ರತಿಮಾ ನಾಯಕ್, ಭರತ್, ರಾಧಾಕೃಷ್ಣ ಕುಂಬ್ಳೆ, ರಕ್ಷಿತ್ ದೊಡ್ಡೇರಾ, ದೀನಾ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಕರ್ನಾಟಕ-ಕೇರಳ ಗಡಿ ಭಾಗದಲ್ಲಿ ನಡೆಯುವ ಕಥೆಯನ್ನು ‘ಪೀಟರ್’ ಸಿನಿಮಾದಲ್ಲಿ ತೋರಿಸಲಾಗುವುದು.
ಗುರುಪ್ರಸಾದ್ ನಾರ್ನಾಡ್ ಅವರು ಛಾಯಾಗ್ರಹಣ ಮಾಡಿದ್ದಾರೆ. ನವೀನ್ ಶೆಟ್ಟಿ ಅವರ ಸಂಕಲನ ಈ ಚಿತ್ರಕ್ಕಿದೆ. ‘ವೃದ್ಧಿ ಸ್ಟುಡಿಯೋಸ್’ ಬ್ಯಾನರ್ ಮೂಲಕ 100ಕ್ಕೂ ಹೆಚ್ಚು ಸಿನಿಮಾಗಳಿಗೆ ಸೌಂಡ್ ಡಿಸೈನರ್ ಆಗಿ ಕೆಲಸ ಮಾಡಿದ ರವಿ ಹೀರೇಮಠ್ ಹಾಗೂ ರಾಕೇಶ್ ಹೆಗಡೆ ಅವರು ಈ ಸಿನಿಮಾವವನ್ನು ನಿರ್ಮಿಸಿದ್ದಾರೆ. ರಿತ್ವಿಕ್ ಮುರಳಿಧರ್ ಅವರು ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಈಗಾಗಲೇ ಈ ಸಿನಿಮಾದ ಹಾಡುಗಳು ಗಮನ ಸೆಳೆದಿವೆ. ಇತ್ತೀಚೆಗೆ ಈ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ನಡೆಯಿತು. ನಿರ್ದೇಶಕ ಸುಕೇಶ್ ಶೆಟ್ಟಿ ಮಾತನಾಡಿ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು. ‘ಕರ್ನಾಟಕ ಮಾತ್ರವಲ್ಲದೆ ಕೇರಳ, ತಮಿಳುನಾಡು, ಹೈದರಾಬಾದ್ನಲ್ಲಿಯೂ ಪ್ರಚಾರ ಕೆಲಸ ನಡೆಯುತ್ತಿದೆ. ಏಪ್ರಿಲ್ 10ಕ್ಕೆ ನಮ್ಮ ರಾಜ್ಯದಲ್ಲಿ ಬಿಡುಗಡೆಯಾಗಲಿದೆ. ಎರಡು ವಾರದ ಬಳಿಕ ಬೇರೆ ರಾಜ್ಯಗಳಲ್ಲಿ ಬಿಡುಗಡೆ ಮಾಡಲಿದ್ದೇವೆ’ ಎಂದು ಅವರು ಹೇಳಿದರು.
ರಾಜೇಶ್ ಧ್ರುವ ಅವರಿಗೆ ಇದು ಎರಡನೇ ಸಿನಿಮಾ. ಅಚ್ಚುಕಟ್ಟಾಗಿ ಕೆಲಸ ಮಾಡಿದ ನಿರ್ದೇಶಕರು ಮತ್ತು ಯಾವುದೇ ರಾಜಿ ಇಲ್ಲದೇ ನಿರ್ಮಾಣ ಮಾಡಿದ ನಿರ್ಮಾಪಕರನ್ನು ರಾಜೇಶ್ ಧ್ರುವ ಹೊಗಳಿದರು. ‘ಪೀಟರ್ ರಾಕ್ಷಸನೂ ಹೌದು, ರಕ್ಷಕನೂ ಹೌದು’ ಎಂದು ಹೇಳುವ ಮೂಲಕ ಅವರು ಸಿನಿಮಾದ ಕಥೆಯ ಬಗ್ಗೆ ಕೌತುಕ ಮೂಡಿಸಿದರು.
ಟೆಹ್ರಾನ್, ಏಪ್ರಿಲ್ 2: ಮಧ್ಯ ಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ ಭಾರತಕ್ಕೆ ಇರಾನ್ ಮತ್ತೊಮ್ಮೆ ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಹಡಗುಗಳಿಗೆ ಯಾವುದೇ ತೊಂದರೆಯಾಗದು ಎಂದು ಭರವಸೆ ನೀಡಿದೆ. ಇರಾನಿನ ರಾಯಭಾರ ಕಚೇರಿ ಇಂದು ಹಾರ್ಮುಜ್ ಜಲಸಂಧಿಯ (Strait of Hormuz) ಬಗ್ಗೆ ಭಾರತಕ್ಕೆ ಭರವಸೆ ನೀಡಿದ್ದು, ಸಂಘರ್ಷ ಮುಂದುವರಿದಿದ್ದರೂ, ಕದನ ವಿರಾಮವನ್ನು ಸಾಧಿಸುವ ಪ್ರಯತ್ನಗಳು ವಿಫಲವಾಗಿದ್ದರೂ ಭಾರತ ಭಯಭೀತರಾಗುವ ಅಗತ್ಯವಿಲ್ಲ ಎಂದು ಒತ್ತಿಹೇಳಿದೆ.
ಹಾರ್ಮುಜ್ ಜಲಸಂಧಿಯು ಕಿರಿದಾದ ಹಾಗೂ ಪ್ರಮುಖ ಜಲಮಾರ್ಗವಾಗಿದ್ದು, ಇದು ಪರ್ಷಿಯನ್ ಕೊಲ್ಲಿಯನ್ನು ಓಮನ್ ಕೊಲ್ಲಿಗೆ ಮತ್ತು ಅರೇಬಿಯನ್ ಸಮುದ್ರಕ್ಕೆ ಸಂಪರ್ಕಿಸುತ್ತದೆ. ಇದು ಆಗ್ನೇಯಕ್ಕೆ ಓಮನ್ ಮತ್ತು ಉತ್ತರಕ್ಕೆ ಇರಾನ್ ನಡುವೆ ಇದೆ. ಇದು ಗಲ್ಫ್ ರಾಷ್ಟ್ರಗಳಿಂದ ಪ್ರಪಂಚದಾದ್ಯಂತ ತೈಲ ಮತ್ತು ಅನಿಲವನ್ನು ಸಾಗಿಸುವ ಹಡಗುಗಳು ಸಾಗುವ ಪ್ರಮುಖ ಮಾರ್ಗವಾಗಿದೆ. ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ಹಾರ್ಮುಜ್ ನಿರಂತರವಾಗಿ ಅಡಚಣೆಗಳನ್ನು ಎದುರಿಸುತ್ತಿದೆ.
ನಮ್ಮ ಭಾರತೀಯ ಸ್ನೇಹಿತರು ಸುರಕ್ಷಿತ ಕೈಯಲ್ಲಿದ್ದಾರೆ. ಚಿಂತಿಸಬೇಡಿ ಎಂದು ರಾಯಭಾರ ಕಚೇರಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ವಿದೇಶಾಂಗ ಸಚಿವಾಲಯವು ಭಾರತೀಯ ಪ್ರಜೆಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಗಲ್ಫ್ ಸಂಘರ್ಷದ ನಡುವೆ ಭಾರತೀಯ ಹಡಗುಗಳಿಗೆ ಸುರಕ್ಷಿತ ಮಾರ್ಗವನ್ನು ಖಚಿತಪಡಿಸಿಕೊಳ್ಳಲು ಇರಾನಿನ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಹಾಸನ, ಏಪ್ರಿಲ್ 02: ಅವರೆಲ್ಲಾ ಒಂದೇ ಕುಟುಂಬಗಳು. ಒಂದೇ ಸಮುದಾಯಕ್ಕೆ ಸೇರಿದವರು. ಆದರೆ ದಶದಕದ ಹಿಂದೆ ನಡೆದ ಅದೊಂದು ಚುನಾವಣೆ ಊರಿನ್ನೇ ಎರಡು ಭಾಗ ಮಾಡಿ ಹಾಕಿದೆ. ಸಣ್ಣಪುಟ್ಟ ವಿಚಾರಕ್ಕೂ ಕಲಹ, ಮಾರಾಮಾರಿ (Clash) ನಡೆಯುತ್ತಿದೆ. ಐದು ಕುಟುಂಬಗಳು ವಾಸಿಸುವ ಮನೆಗಳಿಗೆ ತೆರಳಲು ರಸ್ತೆ ನಿರ್ಮಾಣದ ವಿಚಾರ ಇದೀಗ ಊರಿನಲ್ಲಿ ಮತ್ತೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ. ಜಿಲ್ಲೆಯ ಬೇಲೂರು ತಾಲೂಕಿನ ಹಂಚಿಹಳ್ಳಿಯಲ್ಲಿ ಘಟನೆ ನಡೆದಿದೆ. ಅಧಿಕಾರಿಗಳ ಸೂಚನೆಯಂತೆ ದಾರಿ ಮಾಡಿಕೊಳ್ಳಲು ಮುಂದಾದಾಗ ಮಹಿಳೆಯನ್ನ ವಿವಸ್ತ್ರಗೊಳಿಸಿ ಹಲ್ಲೆ ಯತ್ನ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹಳೆಬೀಡು ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ.
ನಡೆದಿದ್ದೇನು?
ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹಂಚಿಹಳ್ಳಿ ಗ್ರಾಮದಲ್ಲಿ ನಡೆದಿರುವ ಘಟನೆ ಇದೀಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಐದು ಕುಟುಂಬಗಳು ವಾಸಿಸುವ ಪ್ರದೇಶಕ್ಕೆ ರಸ್ತೆ ನಿರ್ಮಾಣ ಮಾಡಿಕೊಳ್ಳುವ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಮಹಿಳೆಯನ್ನ ವಿವಸ್ತ್ರಗೊಳಿಸಿ ಹಲ್ಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಪೈಶಾಚಿಕ ಘಟನೆಯ ವಿಡಿಯೋ ವೈರಲ್ ಆಗಿದೆ.
ಗ್ರಾಮದ ಗಂಗಾಬೋವಿ, ಶೀವಕುಮಾರ್, ಸೋಮ, ಕಿರಣ್, ಆನಂದ್, ಪುನೀತ್, ಪ್ರತಾಪ್, ಪ್ರಸನ್ನ, ನಾಗಾಬೋವಿ, ಮಂಜಾಬೋವಿ ಎಂಬುವವರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿರುವ ನೊಂದ ಕುಟುಂಬ ಸದಸ್ಯರು ಇಂದು ಹಾಸನದ ಡಿಸಿ ಕಚೇರಿಗೆ ಆಗಮಿಸಿ ರಕ್ಷಣೆಗೆ ಮೊರೆಯಿಟ್ಟಿದ್ದಾರೆ. 8 ವರ್ಷಗಳಿಂದಲೂ ತಮ್ಮ ಮೇಲೆ ಒಂದಿಲ್ಲೊಂದು ನೆಪವೊಡ್ಡಿ ಹಲ್ಲೆ, ದೌರ್ಜನ್ಯ ನಡೆಸುತ್ತಿದ್ದಾರೆ ಎಂದಿದ್ದಾರೆ.
ಮಹಿಳೆ ಬಟ್ಟೆ ಎಳೆದು ಹಲ್ಲೆ
ಡಿಸಿ, ತಹಸಿಲ್ದಾರ್ ಸೂಚನೆಯಂತೆ ರಸ್ತೆ ನಿರ್ಮಾಣ ಮಾಡಿಕೊಳ್ಳಲು ಯತ್ನಿಸಿದಾಗ ಹಲವು ಬಾರಿ ಗಲಾಟೆ ಮಾಡಿದ್ದಾರೆ. ಈಗ ಕೊನೆಯದಾಗಿ ಮಾರ್ಚ್ 22ರಂದು ಮುಂಜಾನೆ 7ಗಂಟೆ ಸುಮಾರಿಗೆ ಮನೆಯೊಳಗೆ ನುಗ್ಗಿ ಮಹಿಳೆಯನ್ನ ಎಳೆತಂದು ಹಲ್ಲೆ ಮಾಡಿದ್ದಾರೆ. ಮೈ ಮೇಲಿನ ಬಟ್ಟೆ ಎಳೆದು ಹಲ್ಲೆ ಮಾಡಿ ನೀಚ ಕೃತ್ಯ ಎಸಗಿದ್ದಾರೆ ಎಂದು ಮಹಿಳೆ ಕಣ್ನೀರಿಟ್ಟಿದ್ದಾರೆ. ಅವರೆ ವಿಡಿಯೋ ಮಾಡಿ ನಮ್ಮ ಮರ್ಯಾದೆ ತೆಗೆದಿದ್ದಾರೆ ಎಂದು ಅಳಲು ತೋಡಿಕೊಂಡಿದ್ದು, ನಮ್ಮನ್ನ ಅಮಾನುಷವಾಗಿ ಹಲ್ಲೆ ಮಾಡಿದವರ ಬಂಧನ ಆಗಲೇಬೇಕು ಎಂದು ಆಗ್ರಹಿಸಿದ್ದಾರೆ.
ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ತಮ್ಮ ಬೆಂಬಲಿಗ ಅಭ್ಯರ್ಥಿ ವಿರುದ್ಧ ಕುಮಾರ್ ಎಂಬುವವರು ಚುನಾವಣೆಗೆ ನಿಂತರು ಎಂಬ ಕಾರಣಕ್ಕೆ 8 ವರ್ಷದಿಂದ ದ್ವೇಷ ಸಾಧಿಸುತ್ತಿದ್ದಾರೆ ಎನ್ನುವುದು ನೊಂದ ಕುಟುಂಬಗಳ ಅಳಲಾಗಿದೆ. ನಾವು ಐದು ಕುಟುಂಬಗಳಿದ್ದು, ಉಳಿದ 20 ಕುಟುಂಬಗಳು ನಮಗೆ ಕಿರುಕುಳ ನೀಡುತ್ತಿದ್ದಾರೆ. ಮಾರ್ಚ್ 22ರಂದು ಹಲ್ಲೆ ಮಾಡಿದ್ದಾರೆ. ನಮಗೆ ಓಡಾಡಲು ಬೇರೆ ದಾರಿಯೇ ಇಲ್ಲ, ಈಗ ಅವರೇ ಹಲ್ಲೆ ಮಾಡಿ ಮತ್ತೆ ಜೀವಬೆದರಿಕೆ ಹಾಕುತ್ತಿದ್ದಾರೆ. ಅಧಿಕಾರಿಗಳೇ ಬಂದು ದಾರಿ ಗುರುತಿಸಿ ಹೋದರೂ ದಾರಿಯನ್ನ ಬಂದ್ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
10 ಜನರ ವಿರುದ್ಧ ಕೇಸ್: ಆರು ಜನರ ಬಂಧನ
ಇನ್ನು ಘಟನೆ ಸಂಬಂಧ ಶಿವಕುಮಾರ್, ಗಂಗಾಬೋವಿ ಸೇರಿ 10 ಜನರ ವಿರುದ್ಧ ಕೇಸ್ ದಾಖಲಾಗಿದ್ದರೆ, ಇತ್ತ ಪ್ರತಾಪ್ ಎಂಬುವವರು ನೀಡಿದ ದೂರು ಆಧರಿಸಿ ಕುಮಾರ್, ಗೋವಿಂದಪ್ಪ ಹಾಗೂ ಇತರೆ ನಾಲ್ವರ ವಿರುದ್ದ ಕೂಟ ಹಳೆಬೀಡು ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಈಗಾಗಲೆ 6 ಜನರ ಬಂಧನವಾಗಿದ್ದು ಪ್ರತಾಪ್, ಮಂಜಾಬೋವಿ, ಕಿರಣ್ ಹಾಗೂ ಸೋಮ ಎಂಬುವವರ ಬಂಧಿಸಿಲ್ಲ.
ರಸ್ತೆಯೊಂದರ ವಿಚಾರದಲ್ಲಿ ರಾಜಕೀಯ ತಂದು ಪದೇಪದೆ ಬಡಿದಾಡಿಕೊಂಡ ಎರಡು ಗುಂಪುಗಳು ಇದೀಗ ಪರಸ್ಪರ ದೂರು, ಪ್ರತಿದೂರು ನೀಡಿ ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ಘಟನೆಯ ಸಂಬಂಧ ಹಳೆಬೀಡು ಠಾಣೆಯ ಪಿಎಸ್ಐ ಮಂಜುನಾಥ್, ಒಂದು ಗುಂಪಿನ ಪರ ಬೆಂಬಲ ನೀಡುತ್ತಿದ್ದಾರೆಂದು ಬಂಧನಕ್ಕೆ ಒಳಗಾಗಿರುವ ಶಿವಕುಮಾರ್ ಮತ್ತು ಇತರರ ಸಂಬಂಧಿಕರು ಆರೋಪಿಸಿದ್ದಾರೆ. ಆದರೆ ತಹಶೀಲ್ದಾರ್ ಸೂಚನೆಯಂತೆ ಪಿಎಸ್ಐ ಸ್ಥಳಕ್ಕೆ ಭೇಟಿ ನೀಡಿ ಕಾನೂನು ಪ್ರಕಾರ ನಡೆದುಕೊಂಡಿದ್ದಾರೆ. ಆದರೆ ರಾಜಕೀಯ ಅಧಿಕಾರದ ಪ್ರಭಾವ ಹೊಂದಿರುವ ಶಿವಕುಮಾರ್ ಮತ್ತು ಇತರರು ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದ್ದು, ನಮಗೆ ರಕ್ಷಣೆ ಕೊಡಿ ಎಂದು ಡಿಸಿ ಅವರನ್ನ ಭೇಟಿ ಮಾಡಿದ ನೊಂದ ಕುಟುಂಬದ ಸದಸ್ಯರು, ತಮ್ಮ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಅಳಲುತೋಡಿಕೊಂಡಿದ್ದಾರೆ.
ಬೀದಿಯಲ್ಲಿ ಮಾರಾಮಾರಿ
ಒಟ್ಟಿನಲ್ಲಿ 8 ವರ್ಷದ ಹಿಂದೆ ನಡೆದ ಚುನಾವಣೆಯಲ್ಲಿ ಸೃಷ್ಟಿಯಾಗಿದ್ದ ಎರಡು ಗುಂಪುಗಳ ನಡುವಿನ ಸಂಘರ್ಷ ಇದೀಗ ಬೀದಿಯಲ್ಲಿ ಮಾರಾಮಾರಿಯ ಹಂತಕ್ಕೆ ಬಂದು ನಿಂತ್ತಿದೆ. ಅಷ್ಟೇ ಅಲ್ಲದೆ ಮಹಿಳೆಯ ಬಟ್ಟೆ ಬಿಚ್ಚಿ ಹಲ್ಲೆ ಮಾಡುವ ನೀಚತನದ ಕೃತ್ಯದ ಬಗ್ಗೆಯೂ ಆರೋಪ ಕೇಳಿಬಂದಿದೆ. ಸದ್ಯ ಪೊಲೀಸರು ಎರಡೂ ಕಡೆಯಿಂದ ದೂರು ದಾಖಲಿಸಿದ್ದು, ತನಿಖೆ ಬಳಿಕ ಸತ್ಯ ತಿಳಿಯಬೇಕಿದೆ.
ಇತ್ತೀಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಆರಂಭಿಕ ಅಭಿಷೇಕ್ ಶರ್ಮಾ ನಿರೀಕ್ಷೆಯಂತೆ ಪ್ರದರ್ಶನ ನೀಡಲಿಲ್ಲ. ದ್ವಿಪಕ್ಷೀಯ ಸರಣಿಯಲ್ಲಿ ರನ್‌ಗಳ ಪ್ರವಾಹವನ್ನೇ ಹರಿಸಿದ್ದ ಅಭಿಷೇಕ್ ನಿರ್ಣಾಯಕ ಪಂದ್ಯಾವಳಿಯಲ್ಲಿನ ವೈಫಲ್ಯಕ್ಕಾಗಿ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಗಿತ್ತು.
ಪ್ರಸ್ತುತ ನಡೆಯುತ್ತಿರುವ ಐಪಿಎಲ್ನ ಮೊದಲ ಪಂದ್ಯದಲ್ಲಿಯೂ ಅಭಿಷೇಕ್ ಪ್ರಭಾವ ಬೀರಲಿಲ್ಲ. ಆದಾಗ್ಯೂ, ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ತಮ್ಮ ಹಳೆಯ ಫಾರ್ಮ್ ಕಂಡುಕೊಂಡಿರುವ ಅಭಿಷೇಕ್ ರನ್‌ಗಳ ಮಳೆ ಹರಿಸಿದರು. ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟ ಅಭಿಷೇಕ್ 48 ರನ್‌ಗಳ ಇನ್ನಿಂಗ್ಸ್ ಆಡಿದರು.
ಕೇವಲ 2 ರನ್ಗಳಿಂದ ಅರ್ಧಶತಕ ವಂಚಿತರಾದ ಅಭಿಷೇಕ್ 21 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 48 ರನ್ ಬಾರಿಸಿದರು. ಅದರಲ್ಲೂ ವರುಣ್ ಚಕ್ರವರ್ತಿ ಎಸೆದ ಓವರ್‌ನಲ್ಲಿ 2 ಸಿಕ್ಸರ್ ಹಾಗೂ 3 ಭರ್ಜರಿ ಬೌಂಡರಿಗಳನ್ನು ಬಾರಿಸಿದರು. ಈ ಒಂದೇ ಓವರ್‌ನಲ್ಲಿ ಅವರು 24 ರನ್ ಕಲೆಹಾಕಿದರು.
ಇನ್ನು ಈ ಪಂದ್ಯದಲ್ಲಿ 4 ಭರ್ಜರಿ ಸಿಕ್ಸರ್ಗಳನ್ನು ಬಾರಿಸಿದ ಅಭಿಷೇಕ್ ಇದರೊಂದಿಗೆ ತಮ್ಮ ಟಿ20 ವೃತ್ತಿಜೀವನದಲ್ಲಿ 300 ಸಿಕ್ಸರ್ಗಳ ಮೈಲಿಗಲ್ಲನ್ನು ದಾಟಿದರು. ಟಿ20 ಸ್ವರೂಪದಲ್ಲಿ 300 ಅಥವಾ ಅದಕ್ಕಿಂತ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ಎರಡನೇ ಭಾರತೀಯ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೆ ಅಭಿಷೇಕ್ ಪಾತ್ರರಾದರು.
ಇಲ್ಲಿಯವರೆಗೆ, ಈ ಸಾಧನೆ ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಅವರ ಹೆಸರಿನಲ್ಲಿತ್ತು. ರೋಹಿತ್ 330 ಸಿಕ್ಸರ್ಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಅಭಿಷೇಕ್ ಪ್ರಸ್ತುತ 301 ಸಿಕ್ಸರ್ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಇದರ ಜೊತೆಗೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ 100 ಕ್ಕೂ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ಭಾರತದ ಮೊದಲ ಬ್ಯಾಟ್ಸ್ಮನ್ ಹಾಗೂ ಒಟ್ಟಾರೆ ಎರಡನೇ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಬೆಂಗಳೂರು, ಏಪ್ರಿಲ್ 2: ನೀವು ದುಡಿದ ಹಣವೆಲ್ಲವನ್ನೂ ಬಳಸಿ ಬೆಂಗಳೂರಿನಲ್ಲಿ ಮನೆ ಖರೀದಿಸಲು ಹೋಗಬೇಡಿ. ನಿಮ್ಮ ಕೆಲಸ ಯಾವಾಗ ಬೇಕಾದರೂ ಹೋಗಬಹುದು. ಬಾಡಿಗೆ ಮನೆಯಲ್ಲಿ ವಾಸವಿರಿ… ಇದು ಬೆಂಗಳೂರಿನ ಐಟಿ ವೃತ್ತಿಪರನೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ರೆಡ್ಡಿಟ್ ಸೋಷಿಯಲ್ ಮೀಡಿಯಾದಲ್ಲಿ (Reddit Post) ಹಾಕಿದ ಪೋಸ್ಟ್ನಲ್ಲಿ ಐಟಿ ಬಿಟಿ ಸಿಟಿಯ ಟೆಕ್ಕಿಗಳಿಗೆ ಕೊಡಲಾಗಿರುವ ಸಲಹೆ. ಇವರ ಪ್ರಕಾರ ಮುಂದಿನ ಮೂರು ವರ್ಷದೊಳಗೆ ಬೆಂಗಳೂರಿನ ಶೇ. 80ರಷ್ಟು ಐಟಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಾರಂತೆ.
ತನ್ನ ಗುಂಡಿ ತಾನೇ ತೋಡಿದ ಟೆಕ್ಕಿ
ರೆಡ್ಡಿಟ್ನಲ್ಲಿ ಎಲ್ಲಾ ಸಂಕಟ ಮತ್ತು ವಸ್ತುಸ್ಥಿತಿ ತೋಡಿಕೊಂಡಿರುವ ಈ ವ್ಯಕ್ತಿ, ಬೆಂಗಳೂರಿನ ರಿಯಲ್ ಎಸ್ಟೇಟ್, ಐಟಿ ಭವಿಷ್ಯಕ್ಕೆ ಕನ್ನಡಿ ಹಿಡಿದಿದ್ದಾರೆ. ದೊಡ್ಡ ಟೆಕ್ ಕಂಪನಿಯೊಂದರಲ್ಲಿ ಎಐ ಮೈಗ್ರೇಶನ್ ಪ್ರಾಜೆಕ್ಟ್ನಲ್ಲಿ ಕೆಲಸ ಮಾಡುತ್ತಿದ್ದ ಈತ ಈಗ ಕೆಲಸ ಕಳೆದುಕೊಂಡಿದ್ದಾನೆ. ತಾನು ಅದೇ ಕಂಪನಿಯಲ್ಲಿ ಹಿಂದೆ ಮಾಡುತ್ತಿದ್ದ ಕೆಲಸಕ್ಕೆ ಎಐ ಜಾರಿಗೊಳಿಸುವ ಪ್ರಾಜೆಕ್ಟ್ನಲ್ಲಿ ತೊಡಗಿದ್ದ. ಅದಾದ ಬಳಿಕ ಆ ಎಐಗೆ ಬಲಿಪಶುವಾದವರಲ್ಲಿ ಆತನೂ ಒಬ್ಬ. ಅದೇ ಅನುಭವದಲ್ಲಿ ಆತ ಬೆಂಗಳೂರಿನ ಐಟಿ ಉದ್ಯೋಗಿಗಳಿಗೆ ಭವಿಷ್ಯ ಇಲ್ಲ ಎಂದಿದ್ದಾನೆ.
‘ಐಟಿ ಗುಲಾಮರ ಪೈಕಿ ಶೇ. 70-80ರಷ್ಟು ಮಂದಿ ಸರ್ವಿಸ್ ಆಧಾರಿತ ಕಂಪನಿಗಳಲ್ಲಿ ಕೆಲಸ ಮಾಡುತ್ತಾರೆ. ಅವರ ಹೆಚ್ಚಿನ ಕೆಲಸಗಳನ್ನು ಎಐ ಟೂಲ್ಗಳಿಂದ ನಿಭಾಯಿಸಬಹುದು. ಕ್ಲೈಂಟ್ಗಳು ಮನಸ್ಸು ಮಾಡಿದರೆ ಇದು 1-3 ವರ್ಷದಲ್ಲೇ ಆಗಬಹುದು. ಬ್ಯೂರೋಕ್ರಸಿ ಇತ್ಯಾದಿ ಕಾರಣಕ್ಕೆ ಶೇ. 70 ಮಂದಿಗೆ ಕೆಲಸ ಹೋಗುವುದು 3-5 ವರ್ಷ ವಿಳಂಬವಾಗಬಹುದು. ಉಳಿದ ಶೇ. 30 ಮಂದಿಗೆ ಕೆಲಸ ಉಳಿಯುತ್ತದೆ’ ಎಂದು ಈತ ಭವಿಷ್ಯ ನುಡಿದಿದ್ದಾನೆ.
ಕೆಲಸ ಉಳಿಯೋದು ಯಾಕೆಂದರೆ, ಏನಾದರೂ ಹೆಚ್ಚೂಕಡಿಮೆ ಆದರೆ ದೂಷಿಸಲು ಮನುಷ್ಯರು ಇರಬೇಕಲ್ಲ. ಹಾಗೆಯೇ, ಎಐ ಏಜೆಂಟ್ಗಳಿಂದ ಯಡವಟ್ಟಾದರೆ ಅದನ್ನು ನಿರ್ವಹಿಸಲಾದರೂ ಮನುಷ್ಯರು ಇರಬೇಕಲ್ಲ. ಅದಕ್ಕೆ ಕೆಲವರಿಗೆ ಕಾಯಕ ಉಳಿದಿರುತ್ತದೆ’ ಎಂಬುದು ಈ ಟೆಕ್ಕಿಯ ಅನಿಸಿಕೆ. ಎಐ ಭೂತ ನಿಜ, ಐಟಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳೋದು ನಿಜ ಎಂದು ಈತ ಬರೆದಿದ್ದಾನೆ.
ಬೆಂಗಳೂರಿನ ರಿಯಲ್ ಎಸ್ಟೇಟ್ ಮಾರುಕಟ್ಟೆ ವಿಪರೀತ ಉಬ್ಬಲು ಐಟಿ ಕೂಲಿಗಳೇ ಕಾರಣ ಎಂಬುದು ಈ ಟೆಕ್ಕಿಯ ಅಭಿಪ್ರಾಯ. ಕಳೆದ ವರ್ಷ ತಾನು 2 ಕೋಟಿ ರೂ ಮೌಲ್ಯದ ಮನೆ ಖರೀದಿಸಬಹುದಿತ್ತು. ಅದನ್ನು ಖರೀದಿಸುವಷ್ಟು ಹಣಕಾಸು ಬಲ ತನ್ನಲ್ಲಿತ್ತು. ಆದರೂ ಖರೀದಿಸಲಿಲ್ಲ. ಕಚೇರಿ ಸಮೀಪದ ಬಾಡಿಗೆ ಮನೆಯಲ್ಲಿದ್ದೆ. ಎಐ ಪ್ರಾಜೆಕ್ಟ್ನಲ್ಲಿ ಕೆಲಸ ಮಾಡುತ್ತಿದ್ದರಿಂದ ಉದ್ಯೋಗದ ಕಥೆ ಏನಾಗಬಹುದು ಎನ್ನುವ ಅಂದಾಜು ಇತ್ತು. ಮನೆ ಖರೀದಿ ಮಾಡದಿರುವ ನಿರ್ಧಾರ ಈಗ ಸರಿ ಎನಿಸಿದೆ ಎಂದು ಈ ಟೆಕ್ಕಿ ವಿವರಿಸಿದ್ದಾನೆ.
ಹಾಗೆಯೇ, ಮನೆ ಖರೀದಬೇಕೆನ್ನುವವರಿಗೆ ಈತನ ಒಂದು ಟಿಪ್ಸ್ ಉತ್ತಮ ಎನಿಸಬಹುದು. ಒಬ್ಬ ವ್ಯಕ್ತಿಯ ನಿವ್ವಳ ಆಸ್ತಿಮೌಲ್ಯಕ್ಕಿಂತ ಶೇ 150ರಷ್ಟು ಹೆಚ್ಚಿನ ಬೆಲೆಯ ಮನೆಯನ್ನು ಖರೀದಿಸಬಾರದು ಎಂಬುದು ಇವನ ಸಲಹೆ.