ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’ ಪ್ರದರ್ಶನ – Kannada News | Cauvery Row Urvashi Theatre replaces Vijay starrer Jana Nayagan with Kannada Film Karavali

ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ವಿವಾದ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ತಮಿಳುನಾಡು ಸಿಎಂ ವಿಜಯ್ ನಟನೆಯ ‘ಜನ ನಾಯಗನ್’ (Jana Nayagan) ಸಿನಿಮಾದ ಪ್ರದರ್ಶನಕ್ಕೆ ಕರ್ನಾಟಕದಲ್ಲಿ ವಿರೋಧ ವ್ಯಕ್ತವಾಗಿದೆ. ಜನಾಕ್ರೋಶದ ಬಳಿಕ ಹಲವು ಚಿತ್ರಮಂದಿರಗಳಲ್ಲಿ ಈ ಸಿನಿಮಾದ ಪ್ರದರ್ಶನವನ್ನು ನಿಲ್ಲಿಸಲಾಗಿದೆ. ಬೆಂಗಳೂರಿನ ಪ್ರಸಿದ್ಧ ‘ಊರ್ವಶಿ’ ಚಿತ್ರಮಂದಿರದಲ್ಲಿ ಕೂಡ ‘ಜನ ನಾಯಗನ್’ ಬದಲಿಗೆ ಕನ್ನಡದ ‘ಕರಾವಳಿ’ ಸಿನಿಮಾವನ್ನು ಪ್ರದರ್ಶಿಸಲಾಗುತ್ತಿದೆ. ಕಳೆದ ಒಂದು ವಾರದಿಂದ ‘ಊರ್ವಶಿ’ ಥಿಯೇಟರ್​ನಲ್ಲಿ ‘ಜನ ನಾಯಗನ್’ ಪ್ರದರ್ಶನ ಕಾಣುತ್ತಿತ್ತು. ಆದರೆ ಆಗಸ್ಟ್ 1ರಿಂದ ಈ ಬದಲಾವಣೆ ಮಾಡಲಾಗಿದೆ. ಚಿತ್ರಮಂದಿರದ ಮುಂಭಾಗದಲ್ಲಿ ಇದ್ದ ತಮಿಳು ಸಿನಿಮಾದ ಪೋಸ್ಟರ್​ಗಳನ್ನು ತೆಗೆದುಹಾಕಲಾಗಿದೆ. ಕಾವೇರಿ ವಿವಾದ ಬಗೆಹರಿಯುವ ತನಕ ಕರ್ನಾಟಕದಲ್ಲಿ ತಮಿಳು ಸಿನಿಮಾಗಳಿಗೆ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ, ಅರಾಜಕತೆಗಲ್ಲ: ನೀಟ್ ಪ್ರತಿಭಟನೆಗಳ ಕುರಿತು ಸ್ಮೃತಿ ಇರಾನಿ ಖಡಕ್ ಹೇಳಿಕೆ – Kannada News | Smriti Irani on NEET Protests: Right to Dissent, Not Anarchy Govt’s Firm Stance on Reforms

ನವದೆಹಲಿ, ಆಗಸ್ಟ್ 02: ನೀಟ್ (NEET-UG) ಪರೀಕ್ಷಾ ಅಕ್ರಮ ಖಂಡಿಸಿ ನಡೆದ ಪ್ರತಿಭಟನೆಗಳು ಜೆನ್​ ಝಿ (Gen-Z) ಯುವಜನತೆ ಹಾಗೂ ನರೇಂದ್ರ ಮೋದಿ ಸರ್ಕಾರದ ನಡುವಿನ ಬಿರುಕನ್ನು ತೋರಿಸುತ್ತವೆ ಎಂಬ ವಾದಗಳನ್ನು ಮಾಜಿ ಕೇಂದ್ರ ಶಿಕ್ಷಣ ಸಚಿವೆ ಮತ್ತು ಬಿಜೆಪಿ ಹಿರಿಯ ನಾಯಕಿ ಸ್ಮೃತಿ ಇರಾನಿ ತೀವ್ರವಾಗಿ ತಳ್ಳಿಹಾಕಿದ್ದಾರೆ. ಪರೀಕ್ಷಾ ಪೇಪರ್ ಸೋರಿಕೆ ತಡೆಯಲು ಕೇಂದ್ರ ಸರ್ಕಾರವು ತಕ್ಷಣವೇ ಹಾಗೂ ಅತ್ಯಂತ ನಿರ್ಣಾಯಕವಾಗಿ ಕಾನೂನಾತ್ಮಕ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

‘ಇಂಡಿಯಾ ಟುಡೇ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಸರ್ಕಾರದ ಪ್ರತಿಕ್ರಿಯೆ, ಪರೀಕ್ಷಾ ಸುಧಾರಣೆ ಹಾಗೂ ಪ್ರತಿಭಟನೆಗಳ ಮೇಲಿನ ಪೊಲೀಸ್ ಕ್ರಮಗಳ ಕುರಿತು ಹಲವು ಮುಖ್ಯ ವಿಷಯಗಳನ್ನು ಹಂಚಿಕೊಂಡಿದ್ದಾರೆ. ನಿಮಗೆ ಪ್ರಜಾಪ್ರಭುತ್ವದಲ್ಲಿ ಚರ್ಚಿಸಲು, ವಿಚಾರ ವಿನಿಮಯ ಮಾಡಲು ಹಾಗೂ ಸರ್ಕಾರದ ವಿರುದ್ಧ ಭಿನ್ನಾಭಿಪ್ರಾಯ ವ್ಯಕ್ತಪಡಿಸಲು ಸಂಪೂರ್ಣ ಸಾಂವಿಧಾನಿಕ ಹಕ್ಕಿದೆ. ಆದರೆ, ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಲು ಅಥವಾ ಅರಾಜಕತೆ ಸೃಷ್ಟಿಸಲು ಹಕ್ಕಿಲ್ಲ ಎಂದು ಸ್ಮೃತಿ ಇರಾನಿ ಸ್ಪಷ್ಟಪಡಿಸಿದರು.

ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ದೆಹಲಿ ಪೊಲೀಸ್ ಅಧಿಕಾರಿಗಳು ಹಾಗೂ ಅರೆಸೈನಿಕ ಪಡೆಗಳ ಸಿಬ್ಬಂದಿ ಗಾಯಗೊಂಡಿರುವುದನ್ನು ಉಲ್ಲೇಖಿಸಿದ ಅವರು, ಭದ್ರತಾ ಸಿಬ್ಬಂದಿಯ ಮೇಲಿನ ಹಿಂಸಾಚಾರವನ್ನು ಬಲವಾಗಿ ಖಂಡಿಸಿದರು. ಪ್ರತಿಭಟನೆಯ ನೆಪದಲ್ಲಿ ಸಮಾಜಘಾತಕ ಮತ್ತು ಕ್ರಿಮಿನಲ್ ಹಿನ್ನೆಲೆಯುಳ್ಳ ಶಕ್ತಿಗಳು ತೂರಿಬಂದಿರುವ ಸಾಧ್ಯತೆಗಳಿದ್ದು, ಸಂಪೂರ್ಣ ತನಿಖೆ ಮುಗಿಯುವ ಮುನ್ನ ತೀರ್ಮಾನಕ್ಕೆ ಬರಬಾರದು ಎಂದರು.

ಪರೀಕ್ಷಾ ಸೋರಿಕೆ ತಡೆ ಕಾಯ್ದೆ: ವಿದ್ಯಾರ್ಥಿಗಳ ಕಳವಳಕ್ಕೆ ಸ್ಪಂದಿಸಿರುವ ಕೇಂದ್ರ ಸರ್ಕಾರವು ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಕಠಿಣ ಕಾನೂನನ್ನು ಜಾರಿಗೆ ತಂದಿದೆ. ಜೊತೆಗೆ ಉನ್ನತ ಮಟ್ಟದ ತಜ್ಞರ ಕಾರ್ಯಪಡೆಯನ್ನು (Task Force) ರಚಿಸಿ, ಪ್ರಧಾನಿ ಮೋದಿಯವರು ನೇರವಾಗಿ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದ್ದಾರೆ.

‘ವಯಸ್ಸಿನ ಆಧಾರದಲ್ಲಿ ವಿಭಾಗಿಸಬೇಡಿ’: ಈ ಸಮಸ್ಯೆಯನ್ನು ಪೀಳಿಗೆಯ ವಿಭಜನೆ ಎಂದು ಬಿಂಬಿಸುವುದನ್ನು ಆಕ್ಷೇಪಿಸಿದ ಅವರು, ದೇಶದ ಲಕ್ಷಾಂತರ ಯುವಕರು ಸಶಸ್ತ್ರ ಪಡೆಗಳು ಹಾಗೂ ಪೊಲೀಸ್ ಇಲಾಖೆಯಲ್ಲಿ ದೇಶಸೇವೆ ಮಾಡುತ್ತಿದ್ದಾರೆ. ದೇಶಭಕ್ತಿ ಮತ್ತು ಸಾರ್ವಜನಿಕ ಮೌಲ್ಯಗಳು ಯಾವುದೇ ವಯಸ್ಸಿನ ಗಡಿಗೆ ಸೀಮಿತವಾಗಿಲ್ಲ ಎಂದು ಹೇಳಿದರು.

ಜಾರ್ಖಂಡ್ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಶಾಂತಿಯುತವಾಗಿ ನಡೆದ ವಿದ್ಯಾರ್ಥಿ ಸಮಾಲೋಚನೆಗಳನ್ನು ಕಡೆಗಣಿಸಿ, ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯನ್ನಷ್ಟೇ ಮಾಧ್ಯಮಗಳ ಒಂದು ವಿಭಾಗ ಪ್ರಮುಖವಾಗಿ ಬಿಂಬಿಸಿದ್ದಕ್ಕೆ ಅವರು ಬೇಸರ ವ್ಯಕ್ತಪಡಿಸಿದರು.

ಪರೀಕ್ಷಾ ಅಕ್ರಮಗಳನ್ನು ತಡೆಯಲು ಕೇಂದ್ರ ಸರ್ಕಾರವು ‘ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ಕಾಯ್ದೆ’ ಜಾರಿಗೆ ತಂದಿದ್ದು, ಅದರಲ್ಲಿ ಕಾಗದ ಸೋರಿಕೆ ಮಾಡಿದವರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಕೋಟಿ ರೂಪಾಯಿವರೆಗೆ ದಂಡ ವಿಧಿಸುವ ಕಠಿಣ ನಿಬಂಧನೆಗಳಿವೆ. ನೀಟ್ ಮತ್ತು ಎನ್‌ಟಿಎ (NTA) ಪರೀಕ್ಷಾ ಸುಧಾರಣೆಗಳಿಗಾಗಿ ಇಸ್ರೋ ಮಾಜಿ ಅಧ್ಯಕ್ಷ ಡಾ. ಕೆ. ರಾಧಾಕೃಷ್ಣನ್ ಅವರ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ರಚಿಸಲಾಗಿದ್ದು, ಪಾರದರ್ಶಕ ಪರೀಕ್ಷಾ ವ್ಯವಸ್ಥೆಗೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

EPFO rules: 2-3 ವರ್ಷ ಕೆಲಸ ಇಲ್ಲದಿದ್ದಾಗ ಹಳೆಯ ಇಪಿಎಫ್ ಖಾತೆ ಏನಾಗುತ್ತದೆ? – Kannada News | What happens to EPF account after being unemployed for 3 years, here are few EPFO rules

ಉನ್ನತ ಶಿಕ್ಷಣ, ಕುಟುಂಬದ ಜವಾಬ್ದಾರಿ, ಆರೋಗ್ಯ ಸಮಸ್ಯೆಗಳು, ನಿರುದ್ಯೋಗ ಇತ್ಯಾದಿ ಕಾರಣಗಳಿಂದಾಗಿ ಜನರು ಕೆಲಸದಿಂದ ಕೆಲ ತಿಂಗಳು, ವರ್ಷಗಳು ಹೊರಗಿರುವುದು ಸಾಮಾನ್ಯ. ಈ ಸಂದರ್ಭದಲ್ಲಿ ಇಪಿಎಫ್ ಖಾತೆಯ (EPF) ಹಣ ಏನಾಗುತ್ತದೆ ಎಂಬ ಆತಂಕ ಹಲವರಲ್ಲಿರುತ್ತದೆ. ಹಾಗೆಯೇ, ಕೆಲಸ ಬದಲಿಸಿದಾಗ ಹಳೆಯ ಪಿಎಫ್ ಅಕೌಂಟ್ ಏನಾಗುತ್ತದೆ? ಭವಿಷ್ಯ ನಿಧಿ ಸಂಸ್ಥೆಯ ವೆಬ್​ಸೈಟ್​ನಲ್ಲಿ ನೀಡಲಾಗಿರುವ ಮಾಹಿತಿ ಪ್ರಕಾರ, ಪಿಎಫ್ ಅಕೌಂಟ್ ನಿಷ್ಕ್ರಿಯವಾಗಿದ್ದರೂ ಸಮಸ್ಯೆ ಇರುವುದಿಲ್ಲ. ನೀವು ಕೆಲಸವನ್ನು ನಿಲ್ಲಿಸಿದ ತಕ್ಷಣ ನಿಮ್ಮ EPF ಖಾತೆ ಮುಚ್ಚಿಹೋಗುವುದಿಲ್ಲ. ನಿಮ್ಮ ಖಾತೆಯಲ್ಲಿರುವ ಹಣ ಸುರಕ್ಷಿತವಾಗಿರುತ್ತದೆ.

EPF ಖಾತೆಗೆ ಬಡ್ಡಿ ಸಿಗುವುದು ಮುಂದುವರಿಯುತ್ತದೆಯೇ?

ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆಯ (EPFO) ನಿಯಮಗಳ ಪ್ರಕಾರ, ನೀವು ಉದ್ಯೋಗ ತೊರೆದರೂ ನಿಮ್ಮ EPF ಖಾತೆಯಲ್ಲಿರುವ ಮೊತ್ತಕ್ಕೆ 58 ವರ್ಷ ವಯಸ್ಸಾಗುವವರೆಗೆ ಬಡ್ಡಿ ಜಮೆಯಾಗುತ್ತಲೇ ಇರುತ್ತದೆ. ಆ ಬಳಿಕ ಅಕೌಂಟ್​ನಲ್ಲಿರುವ ಹಣಕ್ಕೆ ಬಡ್ಡಿ ಸಿಗುವುದು ನಿಂತು ಹೋಗುತ್ತದೆ.

ಇದನ್ನೂ ಓದಿ: ಭಾರತ-ಟಿಬೆಟ್ ಪುರಾತನ ರೇಷ್ಮೆ ಮಾರ್ಗಕ್ಕೆ ಮರುಜೀವ; ಇಲ್ಲಿ ವ್ಯಾಪಾರಕ್ಕೆ ಹಣ ಅಲ್ಲ, ಬಾರ್ಟರ್ ಸಿಸ್ಟಂ

ಹಣವನ್ನು ಅವಧಿಗೆ ಮುನ್ನ ಹಿಂಪಡೆಯುವುದು ಸರಿಯೇ?

ಹೊಸ EPF ನಿಯಮಾವಳಿಗಳ ಪ್ರಕಾರ ಉದ್ಯೋಗಿಯು ಕೆಲಸ ಕಳೆದುಕೊಂಡ ತಕ್ಷಣ ಒಟ್ಟು EPF ಬ್ಯಾಲೆನ್ಸ್‌ನ ಶೇ. 75 ರಷ್ಟು ಭಾಗವನ್ನು ಹಿಂಪಡೆಯಬಹುದು. 12 ತಿಂಗಳ ಕಾಲ ಕೆಲಸ ಸೇರದೇ ಇದ್ದಾಗ ಉಳಿದ ಶೇ. 25ರಷ್ಟನ್ನು ಹಿಂಪಡೆಯಲು ಅವಕಾಶ ಇದೆ.

ತೆರಿಗೆ ನಿಯಮಗಳು: ಇಪಿಎಫ್ ನಿಯಮಗಳ ಪ್ರಕಾರ, ಉದ್ಯೋಗಿ 5 ವರ್ಷಗಳಿಗಿಂತ ಕಡಿಮೆ ಸೇವೆ ಸಲ್ಲಿಸಿದ್ದರೆ ವಿತ್​ಡ್ರಾ ಹಣಕ್ಕೆ ತೆರಿಗೆ ಅನ್ವಯ ಆಗುತ್ತದೆ. 5 ವರ್ಷಗಳ ನಿರಂತರ ಸೇವೆ ಪೂರ್ಣಗೊಂಡಿದ್ದರೆ ವಿತ್​ಡ್ರಾ ಹಣಕ್ಕೆ ಯಾವುದೇ ತೆರಿಗೆ ಅನ್​ವಯ ಆಗುವುದಿಲ್ಲ.

ಇದನ್ನೂ ಓದಿ: ಕೇಂದ್ರದಿಂದ ರಾಜ್ಯಗಳಿಗೆ 1 ಲಕ್ಷ ಕೋಟಿ ರೂ ತೆರಿಗೆ ಹಂಚಿಕೆ; ಕರ್ನಾಟಕಕ್ಕೆ 4,504 ಕೋಟಿ ರೂ; ಬೇರೆ ರಾಜ್ಯಗಳಿಗೆ ಸಿಕ್ಕಿದ್ದು ಎಷ್ಟು?

ಕ್ಲೇಮ್ ಮತ್ತು ಬಡ್ಡಿ ವಿಳಂಬವಾದರೆ ಏನು ಮಾಡಬೇಕು?

  • ಬಡ್ಡಿ ಜಮೆ ವಿಳಂಬ: ಕೆಲವೊಮ್ಮೆ EPFO ಬ್ಯಾಲೆನ್ಸ್ ಪಾಸ್‌ಬುಕ್‌ನಲ್ಲಿ ಬಡ್ಡಿ ಜಮೆಯಾಗುವುದು ತಡವಾಗಬಹುದು. ಆದರೆ ಅರ್ಹ ಖಾತೆದಾರರಿಗೆ ಬಡ್ಡಿಯನ್ನು ಖಚಿತವಾಗಿ ನೀಡಲಾಗುತ್ತದೆ.
  • ಕ್ಲೇಮ್ ಇತ್ಯರ್ಥದ ಸಮಯ: ಆನ್‌ಲೈನ್ ಮೂಲಕ ಸಲ್ಲಿಸಲಾದ ಕ್ಲೇಮ್‌ಗಳು ಸಾಮಾನ್ಯವಾಗಿ 7 ರಿಂದ 10 ಕೆಲಸದ ದಿನಗಳಲ್ಲಿ ಇತ್ಯರ್ಥವಾಗುತ್ತವೆ.
  • ದೂರು ಸಲ್ಲಿಕೆ: ಒಂದು ವೇಳೆ 20 ದಿನಗಳ ಒಳಗಾಗಿ ನಿಮ್ಮ ಕ್ಲೇಮ್ ಇತ್ಯರ್ಥವಾಗದಿದ್ದರೆ, `epfigms.gov.in` ಪೋರ್ಟಲ್‌ನಲ್ಲಿ ದೂರು ನೀಡಬಹುದು. ನಿಯಮಗಳ ಪ್ರಕಾರ, ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿಳಂಬವಾದರೆ ವಾರ್ಷಿಕ ಶೇ. 12 ರಷ್ಟು ದಂಡದ ಬಡ್ಡಿಯನ್ನು ನೀಡಬೇಕಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಪ್ರವಾಹ ಸಂತ್ರಸ್ತರ ನೆರವಿಗೆ ನಿಂತ RCB ಮಾಲಕಿ: ವಿಡಿಯೋ ವೈರಲ್! – Kannada News | RCB Co Owner Ananya Birla Wins Hearts with On Ground Flood Relief in Assam

ಅಸ್ಸಾಂ ರಾಜ್ಯವು ಈ ವರ್ಷ ಭೀಕರ ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಲಕ್ಷಾಂತರ ಜನರ ಬದುಕು ತಲ್ಲಣಗೊಂಡಿದೆ. ಇಂತಹ ಕಷ್ಟದ ಸಮಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸಹ-ಮಾಲಕಿ ಹಾಗೂ ಉದ್ಯಮಿ ಅನನ್ಯಾ ಬಿರ್ಲಾ ನೆರವಿನ ಹಸ್ತ ಚಾಚಿದ್ದಾರೆ.

ರಂಗಕ್ಕಿಳಿದ ಬಿರ್ಲಾ ಫೌಂಡೇಶನ್:

ಅನನ್ಯಾ ಬಿರ್ಲಾ ಅವರು ತಮ್ಮ ‘ಅನನ್ಯಾ ಬಿರ್ಲಾ ಫೌಂಡೇಶನ್’ ಮೂಲಕ ಸ್ಥಳೀಯ ಸಂಸ್ಥೆಗಳೊಂದಿಗೆ ಕೈಜೋಡಿಸಿ ದೊಡ್ಡ ಮಟ್ಟದ ಪರಿಹಾರ ಅಭಿಯಾನವನ್ನು ಕೈಗೆತ್ತಿಕೊಂಡಿದ್ದಾರೆ. ಕೇವಲ ಹಣಕಾಸಿನ ನೆರವು ನೀಡುವುದಷ್ಟೇ ಅಲ್ಲದೆ, ಪ್ರವಾಹದಿಂದ ತತ್ತರಿಸಿರುವ ಜೋರ್ಹತ್ ಮತ್ತು ಶಿವಸಾಗರ್ ಸೇರಿದಂತೆ ಹಲವು ಜಿಲ್ಲೆಗಳ ಹಳ್ಳಿಗಳಿಗೆ ಖುದ್ದಾಗಿ ಭೇಟಿ ನೀಡಿ ಜನರ ಕಷ್ಟಗಳನ್ನು ಆಲಿಸಿದ್ದಾರೆ. ಇದೀಗ ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮೂರು ನಗರಗಳಲ್ಲಿ ಕಲೆಕ್ಷನ್ ಸೆಂಟರ್‌ಗಳು:

ಅಸ್ಸಾಂ ಜನರಿಗಾಗಿ ದೇಶಾದ್ಯಂತ ನೆರವು ಸಂಗ್ರಹಿಸಲು ಅನನ್ಯಾ ಬಿರ್ಲಾ ಅವರು ಬೆಂಗಳೂರು, ಮುಂಬೈ ಮತ್ತು ಕೋಲ್ಕತ್ತಾ ನಗರಗಳಲ್ಲಿ ಜುಲೈ 28 ರಿಂದ ಆಗಸ್ಟ್ 2 ರವರೆಗೆ ವಿಶೇಷ ಪರಿಹಾರ ಸಾಮಗ್ರಿ ಸಂಗ್ರಹಣಾ ಕೇಂದ್ರಗಳನ್ನು ಸ್ಥಾಪಿಸಿದ್ದರು. ಸಾರ್ವಜನಿಕರು ನೀಡಿದ ಕೊಡುಗೆಗಳನ್ನು ನೇರವಾಗಿ ಸಂತ್ರಸ್ತರಿಗೆ ತಲುಪಿಸುವ ಜವಾಬ್ದಾರಿಯನ್ನು ಅವರ ತಂಡ ಯಶಸ್ವಿಯಾಗಿ ನಿಭಾಯಿಸಿದೆ.

ಸಂತ್ರಸ್ತರಿಗೆ ವಿತರಿಸಲಾದ ಸಾಮಗ್ರಿಗಳು:

  • ಒಣ ರೇಷನ್ ಕಿಟ್‌ಗಳು: ಅಕ್ಕಿ, ಬೇಳೆಕಾಳುಗಳು ಮತ್ತು ಅಡುಗೆ ಎಣ್ಣೆ.
  • ಆರೋಗ್ಯ ಮತ್ತು ನೈರ್ಮಲ್ಯ ಕಿಟ್‌ಗಳು: ಸೋಪು, ಟೂತ್‌ಪೇಸ್ಟ್ ಮತ್ತು ಸ್ಯಾನಿಟರಿ ಪ್ಯಾಡ್‌ಗಳು.
  • ತುರ್ತು ಸಾಮಗ್ರಿಗಳು: ಸೊಳ್ಳೆ ಪರದೆಗಳು, ಟಾರ್ಪಾಲಿನ್‌ಗಳು ಮತ್ತು ಮಕ್ಕಳಿಗೆ ಅಗತ್ಯವಿರುವ ಶೈಕ್ಷಣಿಕ ಪರಿಕರಗಳು.

“ಇದು ನನ್ನ ಕರ್ತವ್ಯ”

ಅಸ್ಸಾಂನಿಂದ ಮುಂಬೈ ವಿಮಾನ ನಿಲ್ದಾಣಕ್ಕೆ ಹಿಂತಿರುಗಿದಾಗ, ಪಾಪರಾಜಿಗಳು ಅವರ ಈ ಮಹತ್ಕಾರ್ಯವನ್ನು ಶ್ಲಾಘಿಸಿದರು. ಅದಕ್ಕೆ ಅತ್ಯಂತ ಸರಳವಾಗಿ ಉತ್ತರಿಸಿದ ಅನನ್ಯಾ, “ಇದು ನನ್ನ ಕರ್ತವ್ಯ,” ಎಂದು ಹೇಳುವ ಮೂಲಕ ತಮ್ಮ ಜವಾಬ್ದಾರಿಯನ್ನು ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: ಯಾವುದೇ ಮಾತುಕತೆ ನಡೆದಿಲ್ಲ: ಮುಂಬೈ ಇಂಡಿಯನ್ಸ್​ನಿಂದ ಸ್ಪಷ್ಟನೆ!

ಸಾಮಾಜಿಕ ಜಾಲತಾಣಗಳಲ್ಲಿ ಅವರ ಈ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ನೆಟ್ಟಿಗರು ಅವರನ್ನು ಕೊಂಡಾಡುತ್ತಿದ್ದಾರೆ. ಅಸ್ಸಾಂ ಜನರ ಧೈರ್ಯ ಮತ್ತು ಸ್ಥಿತಿಸ್ಥಾಪಕತ್ವ  ತಮಗೆ ತೀವ್ರ ಸ್ಫೂರ್ತಿ ನೀಡಿದೆ ಎಂದು ಅನನ್ಯಾ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

Source link

CIMS Recruitment 2026: ವೈದ್ಯಕೀಯ ವೃತ್ತಿಪರರಿಗೆ ಸಿಹಿ ಸುದ್ದಿ; ಚಾಮರಾಜನಗರ CIMS ನಲ್ಲಿ 49 ಹುದ್ದೆಗಳಿಗೆ ಅರ್ಜಿ ಆಹ್ವಾನ! – Kannada News | CIMS Recruitment 2026: Apply Offline for 49 Teaching and Medical Officer Posts in Karnataka

ವೈದ್ಯಕೀಯ ವೃತ್ತಿಪರರಿಗೆ ಸಿಹಿ ಸುದ್ದಿ

ಕರ್ನಾಟಕ ಸರ್ಕಾರದಿಂದ ವೈದ್ಯರಿಗೆ ಇಲ್ಲಿದೆ ಸುವರ್ಣಾವಕಾಶ. ವೈದ್ಯಕೀಯ ವೃತ್ತಿಯಲ್ಲಿರುವ ಅಭ್ಯರ್ಥಿಗಳಿಗೆ ಹಾಗೂ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ವೃತ್ತಿಜೀವನ ಕಟ್ಟಿಕೊಳ್ಳಲು ಬಯಸುವವರಿಗೆ ಕರ್ನಾಟಕ ಸರ್ಕಾರವು ಅತ್ಯುತ್ತಮ ಉದ್ಯೋಗಾವಕಾಶ ಒಂದನ್ನು ನೀಡಿದೆ. ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು (CIMS) ಖಾಲಿ ಇರುವ ಬೋಧಕ ಸಿಬ್ಬಂದಿ ಹಾಗೂ ವೈದ್ಯಾಧಿಕಾರಿ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ವಿವಿಧ ವಿಭಾಗಗಳಲ್ಲಿ ಒಟ್ಟು 49 ಹುದ್ದೆಗಳ ಭರ್ತಿ:

ಚಾಮರಾಜನಗರ CIMS ಸಂಸ್ಥೆಯಲ್ಲಿ ಶೈಕ್ಷಣಿಕ ಮತ್ತು ವೈದ್ಯಕೀಯ ಸೇವೆಗಳನ್ನು ಬಲಪಡಿಸುವ ಉದ್ದೇಶದಿಂದ ಒಟ್ಟು 49 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇಲ್ಲಿ ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್ ಹಾಗೂ ಕ್ಯಾಶುಯಲ್ಟಿ ಮೆಡಿಕಲ್ ಆಫೀಸರ್ (CMO) ಹುದ್ದೆಗಳು ಖಾಲಿ ಇದ್ದು, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾವಳಿಗಳ ಪ್ರಕಾರ ಅತ್ಯಾಕರ್ಷಕ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ.

ಹುದ್ದೆಗೆ ತಕ್ಕಂತೆ ಶೈಕ್ಷಣಿಕ ಅರ್ಹತೆಯ ವಿವರ:

ಬೋಧಕ ಸಿಬ್ಬಂದಿ ಹುದ್ದೆಗಳಾದ ಪ್ರೊಫೆಸರ್, ಅಸೋಸಿಯೇಟ್ ಹಾಗೂ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಿತ ವೈದ್ಯಕೀಯ ವಿಭಾಗದಲ್ಲಿ MD, MS, DNB, DrNB, MDS, M.Sc. ಅಥವಾ Ph.D. ಪದವಿ ಪೂರ್ಣಗೊಳಿಸಿರಬೇಕು. ಇನ್ನು ತುರ್ತು ಚಿಕಿತ್ಸಾ ವಿಭಾಗದ ಕ್ಯಾಶುಯಲ್ಟಿ ಮೆಡಿಕಲ್ ಆಫೀಸರ್ (CMO) ಹುದ್ದೆಗೆ ಅರ್ಜಿ ಸಲ್ಲಿಸಲು MBBS ಪದವಿ ಪಡೆದಿರುವುದು ಕಡ್ಡಾಯವಾಗಿದೆ.

ಇದನ್ನೂ ಓದಿ: ಜಾಬ್ ಇಂಟರ್‌ವ್ಯೂಗೆ ಹೋಗುವ ಮುನ್ನ ಈ ತಪ್ಪು ಮಾಡಬೇಡಿ; ಸಿಂಪಲ್​ ಟಿಪ್ಸ್​ ಇಲ್ಲಿದೆ

ಅರ್ಜಿ ಶುಲ್ಕ ಮತ್ತು ಅಭ್ಯರ್ಥಿಗಳ ಆಯ್ಕೆ ವಿಧಾನ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಎಲ್ಲಾ ವರ್ಗದ ಅಭ್ಯರ್ಥಿಗಳು ರೂ. 4,000/- ಅರ್ಜಿ ಶುಲ್ಕವನ್ನು ಡಿಮ್ಯಾಂಡ್ ಡ್ರಾಫ್ಟ್ (DD) ಮೂಲಕ ಪಾವತಿಸಬೇಕಾಗುತ್ತದೆ. ಇನ್ನು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಅವರ ಶೈಕ್ಷಣಿಕ ಅರ್ಹತೆಯಲ್ಲಿ ಗಳಿಸಿದ ಅಂಕಗಳ ಮೆರಿಟ್ ಪಟ್ಟಿ ಹಾಗೂ ನೇರ ವೈಯಕ್ತಿಕ ಸಂದರ್ಶನದ ಆಧಾರದ ಮೇಲೆ ಪಾರದರ್ಶಕವಾಗಿ ನಡೆಯಲಿದೆ.

ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಸರಳ ವಿಧಾನ:

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್‌ಲೈನ್ (ಅಂಚೆ) ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ cimscrnagara.karnataka.gov.in ಗೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ನಂತರ ಅರ್ಜಿಯಲ್ಲಿ ಕೇಳಲಾದ ವಿವರಗಳನ್ನು ಭರ್ತಿ ಮಾಡಿ, ಅಗತ್ಯ ಶೈಕ್ಷಣಿಕ ದಾಖಲೆಗಳು ಹಾಗೂ ತೆಗೆಸಿದ ಡಿಡಿ (DD) ಯನ್ನು ಲಗತ್ತಿಸಿ ನಿಗದಿತ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಿಕೊಡಬೇಕಾಗುತ್ತದೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

ಪುಟಿನ್ ಅಮರತ್ವದ ಕನಸು ನನಸಾಗಲಿದೆಯೇ?: ವಯಸ್ಸಾಗುವುದನ್ನು ತಡೆಯಲು ಜೀನ್ ಥೆರಪಿ

ಮಾಸ್ಕೋ, ಆಗಸ್ಟ್​ 02: ಮನುಷ್ಯರು ಎಂದಾದರೂ ಅಮರರಾಗಲು ಅಥವಾ ತಮ್ಮ ಜೀವಿತಾವಧಿಯನ್ನು ದ್ವಿಗುಣಗೊಳಿಸಲು ಸಾಧ್ಯವೇ? ಈ ಜಾಗತಿಕ ಪ್ರಶ್ನೆಗೆ ರಷ್ಯಾದ ಪ್ರಸಿದ್ಧ ‘ಸ್ಕೋಲ್ಕೊವೊ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ’ಯ ವಿಜ್ಞಾನಿಗಳು ಧನಾತ್ಮಕ ಉತ್ತರ ಕಂಡುಕೊಂಡಿದ್ದಾರೆ. ಗಣಿತದ ಮಾದರಿಗಳು ಮತ್ತು ಡಿಎನ್‌ಎ ತಂತ್ರಜ್ಞಾನವನ್ನು ಆಧರಿಸಿ ನಡೆಸಿರುವ ನೂತನ ಸಂಶೋಧನೆಯ ಪ್ರಕಾರ, ಮಾನವನ ಜೀವಿತಾವಧಿಯನ್ನು ಕನಿಷ್ಠ 194 ವರ್ಷಗಳವರೆಗೆ ವಿಸ್ತರಿಸಲು ಸಾಧ್ಯ ಎಂದು ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ. ಈ ಸಂಶೋಧನಾ ವರದಿಯು ಪ್ರಸಿದ್ಧ ‘NPG ಏಜಿಂಗ್’ ವೈಜ್ಞಾನಿಕ ಜರ್ನಲ್‌ನಲ್ಲಿ ಪ್ರಕಟಗೊಂಡ ಬೆನ್ನಲ್ಲೇ ಜಾಗತಿಕ ಮಟ್ಟದಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಸಂಶೋಧನೆ ಹೇಳುವುದೇನು? ಜೀವಕೋಶಗಳ ವಯಸ್ಸಾಗುವಿಕೆಗೆ ತಡೆ
ಮನುಷ್ಯನಿಗೆ ವಯಸ್ಸಾಗುತ್ತಿದ್ದಂತೆ ಡಿಎನ್‌ಎಯಲ್ಲಿ (DNA) ದೈಹಿಕ ರೂಪಾಂತರಗಳು ಉಂಟಾಗಿ, ಕೋಶಗಳು ಹಾನಿಗೊಳಗಾಗುತ್ತವೆ. ಈ ಕೋಶಗಳನ್ನು ಸರಿಪಡಿಸುವ ಹಾಗೂ ಮಾರಕ ರೋಗಗಳನ್ನು ತಡೆಯುವ ಜೀನ್ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸಿದರೆ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸಬಹುದು ಎಂಬುದು ಅವರ ವಾದ,

ಕೃತಕವಾಗಿ ಮಾನವ ಅಂಗಗಳನ್ನು ತಯಾರಿಸುವ ‘3ಡಿ ಬಯೋಪ್ರಿಂಟಿಂಗ್’ ಮತ್ತು ಪ್ರಾಣಿಗಳ (ವಿಶೇಷವಾಗಿ ತಳೀಯವಾಗಿ ಬದಲಾಯಿಸಲಾದ ಹಂದಿಗಳ) ಅಂಗಗಳನ್ನು ಮನುಷ್ಯರಿಗೆ ಕಸಿ ಮಾಡುವ ‘ಕ್ಸೆನೋಟ್ರಾನ್ಸ್‌ಪ್ಲಾಂಟೇಶನ್’ ತಂತ್ರಜ್ಞಾನಗಳ ಮೂಲಕ ಮುಪ್ಪನ್ನು ಸಂಪೂರ್ಣವಾಗಿ ಜಯಿಸಬಹುದು ಎಂದು ವಿಜ್ಞಾನಿಗಳು ತೀರ್ಮಾನಿಸಿದ್ದಾರೆ.

ಕಳೆದ ವರ್ಷ ಚೀನಾದಲ್ಲಿ ನಡೆದ ಮಿಲಿಟರಿ ಮೆರವಣಿಗೆಯ ವೇಳೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಮತ್ತು ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ನಡುವೆ ನಡೆದ ಮಾತುಕತೆ ಮೈಕ್ರೋಫೋನ್‌ನಲ್ಲಿ ಸೆರೆಯಾಗಿತ್ತು. ಅದರಲ್ಲಿ ಪುಟಿನ್, ಮಾನವ ಅಂಗಾಂಗಗಳನ್ನು ನಿರಂತರವಾಗಿ ಕಸಿ ಮಾಡುತ್ತಿದ್ದರೆ, ಮನುಷ್ಯ ತನಗೆ ಬೇಕಾದಷ್ಟು ಕಾಲ ಬದುಕಬಹುದು ಎಂದು ಹೇಳಿದ್ದರು.

ಈ ಹೇಳಿಕೆಯ ಬೆನ್ನಲ್ಲೇ ರಷ್ಯಾ ಸರ್ಕಾರವು ವಯಸ್ಸಾಗುವಿಕೆಯನ್ನು ತಡೆಯಲು 26 ಬಿಲಿಯನ್ ಡಾಲತ್ ವೆಚ್ಚದ ಯೋಜನೆಯನ್ನು ಘೋಷಿಸಿದೆ. 2030 ರ ವೇಳೆಗೆ ಲಕ್ಷಾಂತರ ಜನರ ಜೀವ ಉಳಿಸುವುದು ಹಾಗೂ ರಷ್ಯನ್ನರ ಜೀವಿತಾವಧಿಯನ್ನು ಹೆಚ್ಚಿಸುವುದು ಇದರ ಅಧಿಕೃತ ಗುರಿಯಾಗಿದೆ.

ರಷ್ಯಾದಲ್ಲಿ ಪುರುಷರ ಸರಾಸರಿ ಜೀವಿತಾವಧಿ ಕೇವಲ 68 ವರ್ಷಗಳು (ಅಮೆರಿಕ ಮತ್ತು ಯುರೋಪ್‌ಗೆ ಹೋಲಿಸಿದರೆ ಅತ್ಯಂತ ಕಡಿಮೆ). ಹೀಗಾಗಿ ದೇಶದ ಕುಸಿಯುತ್ತಿರುವ ಜನಸಂಖ್ಯೆ ಮತ್ತು ಆರೋಗ್ಯ ಮಟ್ಟವನ್ನು ಸುಧಾರಿಸಲು ರಷ್ಯಾ ಈ ಯೋಜನೆ ಕೈಗೆತ್ತಿಕೊಂಡಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆಯಾದರೂ, 73 ವರ್ಷ ದಾಟಿರುವ ವ್ಲಾಡಿಮಿರ್ ಪುಟಿನ್ ತಮ್ಮದೇ ಜೀವಿತಾವಧಿಯನ್ನು ಹೆಚ್ಚಿಸಿಕೊಳ್ಳಲು ಹಾಗೂ ‘ಅಮರತ್ವ’ ಸಾಧಿಸಲು ಈ ಸಂಶೋಧನೆಗಳಿಗೆ ಅನುದಾನ ನೀಡುತ್ತಿದ್ದಾರೆ ಎಂದು ಅನೇಕ ಜಾಗತಿಕ ರಾಜಕೀಯ ವಿಶ್ಲೇಷಕರು ಪ್ರತಿಪಾದಿಸುತ್ತಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಯಾವುದೇ ಮಾತುಕತೆ ನಡೆದಿಲ್ಲ: ಮುಂಬೈ ಇಂಡಿಯನ್ಸ್​ನಿಂದ ಸ್ಪಷ್ಟನೆ! – Kannada News | IPL 2027: Fresh Twist In Hardik Pandya Trade

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಸೀಸನ್-20 ಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ ಅವರ ಟ್ರೇಡಿಂಗ್ ಪ್ರಕ್ರಿಯೆ ನಡೆಯಲಿದೆಯೇ? – ಕಳೆದ ಕೆಲವು ವಾರಗಳಿಂದ ಕೇಳಿಬರುತ್ತಿರುವ ಸರಣಿ ವದಂತಿಗಳು ಇಂತಹದೊಂದು ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕಿವೆ. ಆದರೆ, ಈ ಕುರಿತು ಸಿಎಸ್‌ಕೆ ಅಥವಾ ಇತರ ಯಾವುದೇ ಫ್ರಾಂಚೈಸಿಗಳೊಂದಿಗೆ ಯಾವುದೇ ಮಾತುಕತೆ ನಡೆದಿಲ್ಲ, ಇವೆಲ್ಲವೂ ಕೇವಲ ಗಾಳಿಸುದ್ದಿ ಎಂದು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ವಕ್ತಾರರು ಈಗ ಅಧಿಕೃತವಾಗಿ ಸ್ಪಷ್ಟಪಡಿಸಿದ್ದಾರೆ.

ವದಂತಿಗಳ ಹಿನ್ನೆಲೆ:

ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್​ ನಡುವೆ ಬೃಹತ್ ಆಫರ್ ಕುರಿತು ಚರ್ಚೆಗಳು ನಡೆಯುತ್ತಿದೆ ಎಂಬ ಸುದ್ದಿಗಳು ಹರಿದಾಡಿದ್ದವು.

  • ಮುಂಬೈ ಇಂಡಿಯನ್ಸ್ ಬೇಡಿಕೆ: ನಾಯಕ ಹಾರ್ದಿಕ್ ಪಾಂಡ್ಯರನ್ನು ಬಿಟ್ಟುಕೊಡಲು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಸಿಎಸ್‌ಕೆ ತಂಡದ ಮುಂದೆ ಕಠಿಣ ಷರತ್ತು ಇಟ್ಟಿದೆ. ಚೆನ್ನೈ ತಂಡದಿಂದ ಸ್ಟಾರ್ ಆಲ್-ರೌಂಡರ್ ಶಿವಂ ದುಬೆ ಮತ್ತು ಉದಯೋನ್ಮುಖ ಯುವ ಬ್ಯಾಟರ್ ಆಯುಷ್ ಮ್ಹಾತ್ರೆ ಇಬ್ಬರನ್ನೂ ತಮಗೆ ನೀಡಬೇಕು ಎಂದು ಮುಂಬೈ ಇಂಡಿಯನ್ ಫ್ರಾಂಚೈಸಿ ಬೇಡಿಕೆಯಿಟ್ಟಿದ್ದಾರೆ ಎಂದು ವರದಿಯಾಗಿತ್ತು.
  • ಚೆನ್ನೈ ಸೂಪರ್ ಕಿಂಗ್ಸ್ ಕೌಂಟರ್ ಆಫರ್: ಯುವ ಆಟಗಾರ ಮ್ಹಾತ್ರೆ ಅವರನ್ನು ಬಿಟ್ಟುಕೊಡಲು ನಿರಾಕರಿಸಿದ ಸಿಎಸ್‌ಕೆ, ಬದಲಿಗೆ ಶಿವಂ ದುಬೆ, ಡೆವಾಲ್ಡ್ ಬ್ರೆವಿಸ್ ಮತ್ತು ₹10 ಕೋಟಿ ನಗದು ಹಣದ ಆಫರ್ ನೀಡಿದೆ ಎಂದು ಸುದ್ದಿಯಾಗಿದ್ದವು.

ಈ ಟ್ರೇಡ್​ನಲ್ಲಿ ಇಬ್ಬರೂ ಆಟಗಾರರ ಮೌಲ್ಯಮಾಪನದಲ್ಲಿ ಒಮ್ಮತ ಮೂಡದ ಕಾರಣ ಮುಂಬೈ ಇಂಡಿಯನ್ಸ್ ಹಾಗೂ ಸಿಎಸ್​ಕೆ ನಡುವಣ  ಮೆಗಾ ಡೀಲ್ ಅರ್ಧಕ್ಕೇ ನಿಂತಿದೆ ಎನ್ನಲಾಗಿತ್ತು.

ಇದರ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್ (DC) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡಗಳು ಕೂಡ ಹಾರ್ದಿಕ್ ಪಾಂಡ್ಯ ಅವರನ್ನು ಸೆಳೆಯಲು ಆಸಕ್ತಿ ತೋರಿಸಿವೆ ಎಂಬ ಗಾಳಿ ಸುದ್ದಿಗಳು ಹಬ್ಬಿದ್ದವು.

ಫ್ರಾಂಚೈಸಿಗಳ ಅಧಿಕೃತ ಹೇಳಿಕೆ!

ಈ ಎಲ್ಲಾ ಊಹಾಪೋಹಗಳಿಗೆ ಬ್ರೇಕ್ ಹಾಕಿರುವ ಮುಂಬೈ ಇಂಡಿಯನ್ಸ್ ಹಾಗೂ ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ಅವರು ‘ಕ್ರಿಕ್‌ಬಜ್’ಗೆ ನೀಡಿರುವ ಜಂಟಿ ಹೇಳಿಕೆಯಲ್ಲಿ, ಸದ್ಯಕ್ಕೆ ಯಾವುದೇ ಆಟಗಾರರ ವರ್ಗಾವಣೆ ಪ್ರಕ್ರಿಯೆ ಚಾಲ್ತಿಯಲ್ಲಿಲ್ಲ ಎಂದು ಖಚಿತಪಡಿಸಿದ್ದಾರೆ.

MI ಆಂತರಿಕ ಪರಾಮರ್ಶೆ:

ಐಪಿಎಲ್ 2026ರ ಸೀಸನ್‌ನಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು 9ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬಂದಿತ್ತು. ಈ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಫ್ರಾಂಚೈಸಿಯು ಪ್ರಸ್ತುತ ಕೋಚಿಂಗ್ ಸ್ಟಾಫ್ ಮತ್ತು ಆಟಗಾರರ ಪ್ರದರ್ಶನದ ಬಗ್ಗೆ ಆಳವಾದ ಆಂತರಿಕ ಪರಾಮರ್ಶೆ  ನಡೆಸುತ್ತಿದೆ. ಈ ಪ್ರಕ್ರಿಯೆ ಮುಗಿಯುವವರೆಗೂ ತಂಡದ ನಾಯಕತ್ವದಲ್ಲಾಗಲಿ ಅಥವಾ ಆಟಗಾರರ ಟ್ರೇಡಿಂಗ್‌ನಲ್ಲಾಗಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಮ್ಯಾನೇಜ್‌ಮೆಂಟ್ ತಿಳಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಐಪಿಎಲ್ 2027ರ ಮೆಗಾ ಹರಾಜಿಗೂ ಮುನ್ನ ಹಾರ್ದಿಕ್ ಪಾಂಡ್ಯ ಅವರ ಟ್ರೇಡಿಂಗ್ ಸುದ್ದಿ ಕೇವಲ ಸಾಮಾಜಿಕ ಜಾಲತಾಣಗಳ ಊಹಾಪೋಹ ಎಂಬುದು ಈಗ ಸ್ಪಷ್ಟವಾಗಿದೆ. ಸದ್ಯಕ್ಕೆ ಮುಂಬೈ ಇಂಡಿಯನ್ಸ್ ತನ್ನ ಆಂತರಿಕ ಪರಾಮರ್ಶೆಯಲ್ಲೇ ಬ್ಯುಸಿಯಾಗಿದ್ದು, ತಂಡದ ನಾಯಕತ್ವದಲ್ಲಿ ಯಾವುದೇ ತಕ್ಷಣದ ಬದಲಾವಣೆಯ ಮುನ್ಸೂಚನೆ ನೀಡಿಲ್ಲ.

ಇದನ್ನೂ ಓದಿ: ನಿವೃತ್ತಿ ಘೋಷಿಸಿರುವ ರಹಾನೆಗೆ ಸಿಗಲಿರುವ ಪಿಂಚಣಿ ಮೊತ್ತ ಎಷ್ಟು ಗೊತ್ತಾ?

ಆದಾಗ್ಯೂ, ಐಪಿಎಲ್ ಇತಿಹಾಸದಲ್ಲಿ ಕೊನೆಯ ಕ್ಷಣದ ಟ್ವಿಸ್ಟ್‌ಗಳು ಹೊಸದೇನಲ್ಲ. ಹೀಗಾಗಿ, ಮುಂಬರುವ ಮಿನಿ ಹರಾಜಿನ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗುವವರೆಗೂ ಆಟಗಾರರ ಟ್ರೇಡ್​ ಪ್ರಕ್ರಿಯೆಯ ಕುತೂಹಲಗಳು ಮುಂದುವರೆಯಲಿದೆ.

Source link

ಬಿಜೆಪಿ ರಾಜ್ಯ ಕಚೇರಿಯಲ್ಲಿ ಕೋರ್ ಕಮಿಟಿ ಸಭೆ: ಯಾವೆಲ್ಲ ಪ್ರಮುಖ ವಿಷಯಗಳು ಚರ್ಚೆ? – Kannada News | BJP Core Committee Resolves to Corner Government on Deficit Rainfall, Pension Scams and KPSC Row

ಬಿಜೆಪಿ ರಾಜ್ಯ ಕಚೇರಿಯಲ್ಲಿ ಕೋರ್ ಕಮಿಟಿ ಸಭೆImage Credit source: BJP X Account

ಬೆಂಗಳೂರು, ಆಗಸ್ಟ್​​ 02: ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಹತ್ವದ ಕೋರ್ ಕಮಿಟಿ ಸಭೆ ನಡೆದಿದೆ. ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್, ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ಮಾಜಿ ಸಿಎಂ ಬಿ.ಎಸ್​​. ಯಡಿಯೂರಪ್ಪ, ವಿಧಾನಪರಿಷತ್​ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಕಾರಜೋಳ, ಮಾಜಿ ಸಂಸದ ನಳಿನ್​ ಕುಮಾರ್​ ಸೇರಿ ಹಲವು ಪ್ರಮುಖರು ಸಭೆಯಲ್ಲಿ ಭಾಗಿಯಾಗಿದ್ದಾರೆ. ರಾಜ್ಯದಲ್ಲಿನ ಬರ ಪರಿಸ್ಥಿತಿ, ಮುಂಬರಲಿರುವ ಚುನಾವಣೆಗಳು ಸೇರಿ ಹಲವು ಪ್ರಮುಖ ವಿಚಾರಗಳನ್ನು ಈ ವೇಳೆ ಚರ್ಚಿಸಲಾಗಿದೆ.

ಸಿ.ಟಿ. ರವಿ ಹೇಳಿದ್ದೇನು?

ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ವಿಧಾನ ಪರಿಷತ್​​ ಸದಸ್ಯ ಸಿ.ಟಿ. ರವಿ, ಪರಿಷತ್ ಚುನಾವಣೆ, ಹಿರಿಯೂರು ಉಪ ಚುನಾವಣೆಯಲ್ಲಿ ಎನ್​​ಡಿಎ ಅಭ್ಯರ್ಥಿ ಗೆಲ್ಲಿಸುವ ಸಂಬಂಧ ಸಭೆಯಲ್ಲಿ ಚರ್ಚೆಯಾಗಿದೆ. ತಾಂತ್ರಿಕ ಕಾರಣ ಕೊಟ್ಟು 23 ಲಕ್ಷ ಜನರು ಪಿಂಚಣಿಯಿಂದ ವಂಚಿತರಾಗಿದ್ದಾರೆ. ಇದರಿಂದ ಅಸಹಾಯಕ ಅಂಗವಿಕಲರು, ವಿಧವೆಯರು, ವೃದ್ದರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಾಲ್ಕು ತುತ್ತು ಅನ್ನ ತಿನ್ನುತ್ತಿದ್ದವರು ಅಸಹಾಯಕರಾಗಿರುವ ಬಗ್ಗೆ ಹೋರಾಟ ಮಾಡ್ತೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ‘ಸಂಪುಟ ವಿಸ್ತರಣೆ ಆಗೋವರೆಗೆ ಕಾದು ನೋಡಿ; ಕಾಂಗ್ರೆಸ್​ನ ಒಂದು ದಂಡೇ ಬಿಜೆಪಿ ಸೇರಲಿದೆ’: ಮುರುಗೇಶ್ ನಿರಾಣಿ

ಇನ್ನು, ಕರ್ನಾಟಕದಲ್ಲಿ ಭೀಕರ ಬರವಿದ್ರೂ ಸರ್ಕಾರ ಕೈಕಟ್ಟಿಕುಳಿತಿದೆ. ಹೀಗಾಗಿ ಸದನವನ್ನ ರೈತರ ಧ್ವನಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕೆಂದು ಕೋರ್​​​ ಕಮಿಟಿ ಸಭೆಯಲ್ಲಿ ಚರ್ಚೆ ನಡೆಸಿರೋದಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ. ಕೆಪಿಎಸ್ಸಿ ಯುವಕರಿಗೆ ಬಹಳ ದೊಡ್ಡ ಅನ್ಯಾಯ ಆಗುತ್ತಿದ್ದು, ವಿದ್ಯಾರ್ಥಿಗಳು ವರ್ಷಗಟ್ಟಲೆ ಶ್ರಮ‌ಪಟ್ಟರೂ ವ್ಯರ್ಥವಾಗ್ತಿದೆ. ಇದೆಲ್ಲವನ್ನೂ ಸದನದಲ್ಲಿ ಚರ್ಚೆ ಮಾಡ್ತೇವೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೆಂಕಿಗೆ ತುಪ್ಪ ಸುರಿಯಬೇಡಿ: ಹೃತಿಕ್ ರೋಷನ್ ವಿರುದ್ಧ ಕಿಡಿಕಾರಿದ ಕಂಗನಾ ರಣಾವತ್ – Kannada News | Kangana Ranaut slams Hrithik Roshan over unreasonable comments mentions Saba Azad

ಬಾಲಿವುಡ್‌ನ ವಿವಾದಾತ್ಮಕ ನಟಿ ಹಾಗೂ ಸಂಸದೆ ಕಂಗನಾ ರಣಾವತ್ (Kangana Ranaut) ಮತ್ತು ನಟ ಹೃತಿಕ್ ರೋಷನ್ ನಡುವಿನ ಹಳೆಯ ವಾಕ್ಸಮರ ಮತ್ತೆ ಮುನ್ನೆಲೆಗೆ ಬಂದಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಹೃತಿಕ್ (Hrithik Roshan) ಮಾಡಿದ ಕಾಮೆಂಟ್ ಒಂದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಂಗನಾ, ‘ಅನಗತ್ಯ ಕಾಮೆಂಟ್ ಮಾಡುವ ಬದಲು, ನನಗೆ ಕಿರುಕುಳ ನೀಡುತ್ತಿರುವವರನ್ನು ಖಂಡಿಸಿ’ ಎಂದು ತಿರುಗೇಟು ನೀಡಿದ್ದಾರೆ.

ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಇತ್ತೀಚೆಗೆ ಕಂಗನಾ ನೀಡಿದ್ದ ಹೇಳಿಕೆಯ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ‘ನಾವು ಹೃತಿಕ್ ರೋಷನ್ ಬಳಿ ಕ್ಷಮೆ ಕೇಳಬೇಕು’ ಎನ್ನುವ ಪೋಸ್ಟ್ ಒಂದು ವೈರಲ್ ಆಗಿತ್ತು. ಈ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದ ಹೃತಿಕ್ ರೋಷನ್, ‘ಒಬ್ಬ ವ್ಯಕ್ತಿಯನ್ನು ದ್ವೇಷಿಸುವ ಕಾರಣಕ್ಕೆ ಇನ್ನೊಬ್ಬರ ಪರ ವಹಿಸುವುದು ಸರಿಯಲ್ಲ. ನಾನು ಸೂಕ್ತ ಸಂದರ್ಭ ಮತ್ತು ಸತ್ಯಾಸತ್ಯತೆ ತಿಳಿಯುವವರೆಗೆ ಕಾಯುತ್ತೇನೆ’ ಎಂದು ಬರೆದುಕೊಂಡಿದ್ದರು.

‘ಸಾಬಾ ಆಜಾದ್ ಜೊತೆ ಆನಂದವಾಗಿರಿ’

ಹೃತಿಕ್ ಅವರ ಈ ಪ್ರತಿಕ್ರಿಯೆಯನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡ ಕಂಗನಾ ರಣಾವತ್, ನಟನ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ‘ಪ್ರಿಯ ಹೃತಿಕ್, ನಿಮಗೆ ಸಾಬಾ ಆಜಾದ್ ರೂಪದಲ್ಲಿ ಸೂಕ್ತ ಸಂಗಾತಿ ಸಿಕ್ಕಿರುವುದಕ್ಕೆ ನನಗೆ ಸಂತೋಷವಿದೆ. ನೀವಿಬ್ಬರೂ ಒಟ್ಟಿಗೆ ಚೆನ್ನಾಗಿ ಕಾಣಿಸುತ್ತೀರಿ. ಈಗ ನೀವು ಅವರ ಜೊತೆ ರಿಲೇಷನ್​ಶಿಪ್​​ನಲ್ಲಿ ಇದ್ದೀರಿ. ಹೀಗಿರುವಾಗ ಮತ್ತೊಬ್ಬ ಮಹಿಳೆಯನ್ನು ಈ ರೀತಿ ಕೆಣಕುವುದು ನಿಮಗೆ ಶೋಭೆ ತರುವುದಿಲ್ಲ’ ಎಂದು ಕಂಗನಾ ಬರೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೆ, ‘ನಿಮ್ಮ ಹೆಸರನ್ನು ಬಳಸಿಕೊಂಡು ನನ್ನನ್ನು ಪೀಡಿಸುತ್ತಿರುವ ಮತ್ತು ಕಿರುಕುಳು ನೀಡುತ್ತಿರುವ ಆನ್​ಲೈನ್ ಟ್ರೋಲರ್‌ಗಳನ್ನು ನೀವು ಖಂಡಿಸಬೇಕು. ಬೆಂಕಿಗೆ ತುಪ್ಪ ಸುರಿಯುವುದನ್ನು ನಿಲ್ಲಿಸಿ ಹಾಗೂ ನಿಮ್ಮ ಸಂಗಾತಿಗೆ ಮುಜುಗರ ತರಬೇಡಿ. ನಿಮಗೆ ಇನ್ನಾದರೂ ಬುದ್ಧಿ ಬರಲಿ. ಅನಗತ್ಯವಾಗಿ ಕಮೆಂಟ್ ಮಾಡುವುದು ನಿಲ್ಲಿಸಿ’ ಎಂದು ಖಾರವಾಗಿ ಟೀಕಿಸಿದ್ದಾರೆ.

ಇದನ್ನೂ ಓದಿ: ‘ಇಂಥ ಅಸಹ್ಯ ಎಲ್ಲೂ ನೋಡಿಲ್ಲ’: ಜೆನ್ ಜಿ ಪ್ರತಿಭಟನೆ ವಿರುದ್ಧ ಕಂಗನಾ ರಣಾವತ್ ಗರಂ

2016ರ ವಿವಾದದ ಹಿನ್ನೆಲೆ:

ಕಂಗನಾ ಮತ್ತು ಹೃತಿಕ್ ರೋಷನ್ ನಡುವಿನ ವಿವಾದ 2016ರಲ್ಲಿ ಆರಂಭವಾಗಿತ್ತು. ತಾವು ಇಬ್ಬರೂ ಪ್ರೀತಿಯಲ್ಲಿದ್ದೆವು ಎಂದು ಕಂಗನಾ ಹೇಳಿದ್ದರು. ಆದರೆ ಅದನ್ನು ಹೃತಿಕ್ ಸಂಪೂರ್ಣವಾಗಿ ನಿರಾಕರಿಸಿದ್ದರು. ಈ ವಿವಾದವು ಕಾನೂನು ಸಮರ, ಲೀಕ್ ಆದ ಇಮೇಲ್‌ಗಳು ಹಾಗೂ ಬಹಿರಂಗ ಆರೋಪ-ಪ್ರತ್ಯಾರೋಪಗಳಿಗೂ ಕಾರಣವಾಗಿತ್ತು. ಈಗ ಹಲವು ವರ್ಷಗಳ ನಂತರ ಮತ್ತೆ ಈ ಹಳೆಯ ಕಿಡಿ ಹೊತ್ತಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಮಾತು – Kannada News | PM Modi Launches Nasha Mukt Yuva Campaign for a Developed India; Governor Gehlot Attends Bengaluru Event

ನವದೆಹಲಿ, ಆಗಸ್ಟ್​ 02: ಪ್ರಧಾನಿ ನರೇಂದ್ರ ಮೋದಿ ನಶಾಮುಕ್ತ ಭಾರತ ಸಂಕಲ್ಪ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಈ ಮಹತ್ವದ ಕಾರ್ಯಕ್ರಮವು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಆರ್.ಆರ್. ಮೆಡಿಕಲ್ ಕಾಲೇಜಿನಲ್ಲಿ ಆಯೋಜನೆಗೊಂಡಿತ್ತು. ಕಾರ್ಯಕ್ರಮವನ್ನು ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರು ಉದ್ಘಾಟಿಸಿದರು.

ಪ್ರಧಾನಿ ಮೋದಿ ಅವರು ಮಾದಕವಸ್ತುಗಳ ದುಶ್ಚಟದಿಂದ ಮುಕ್ತಿ ಪಡೆದ ಭಾರತವನ್ನು ನಿರ್ಮಿಸುವ ಮಹತ್ವದ ಬಗ್ಗೆ ಮಾತನಾಡಿದರು. ಯುವಜನತೆಯನ್ನು ಮಾದಕವಸ್ತುಗಳ ದುಶ್ಚಟದಿಂದ ದೂರವಿರಿಸಿ, ಆರೋಗ್ಯಕರ ಮತ್ತು ಪ್ರಗತಿಪರ ಸಮಾಜ ನಿರ್ಮಿಸುವ ಉದ್ದೇಶವನ್ನು ಈ ಅಭಿಯಾನ ಹೊಂದಿದೆ. ವಿಕಸಿತ ಭಾರತ ಸಂಕಲ್ಪ ಅಭಿಯಾನದ ಭಾಗವಾಗಿ, ಯುವಜನತೆಯಲ್ಲಿ ಮಾದಕವಸ್ತುಗಳ ವಿರುದ್ಧ ಜಾಗೃತಿ ಮೂಡಿಸಲು ನಶಾಮುಕ್ತ ಯುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ದೇಶಾದ್ಯಂತ 1000ಕ್ಕೂ ಹೆಚ್ಚು ಸ್ಥಳಗಳಿಂದ ಯುವಜನರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಯುವ ಪೀಳಿಗೆಗೆ ಮಾದಕವಸ್ತು ಮುಕ್ತ ಜೀವನದ ಪ್ರತಿಜ್ಞೆ ಸ್ವೀಕರಿಸುವಂತೆ ಕರೆ ನೀಡಿದರು.

ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಸೇರಿದಂತೆ ಅನೇಕ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮಾದಕವಸ್ತುಗಳ ದುರುಪಯೋಗದ ವಿರುದ್ಧ ಜನಜಾಗೃತಿ ಮೂಡಿಸಲು ಮತ್ತು ಯುವ ಪೀಳಿಗೆಯನ್ನು ರಕ್ಷಿಸಲು ಈ ಅಭಿಯಾನವು 100 ವಾರಗಳ ಕಾಲ ರಾಷ್ಟ್ರವ್ಯಾಪಿ ಜನ ಭಾಗಿದಾರಿ ಅಭಿಯಾನವನ್ನು ನಡೆಸಲಿದೆ. ಇದು ರಾಷ್ಟ್ರದ ಭವಿಷ್ಯವನ್ನು ಸದೃಢಗೊಳಿಸುವ ಒಂದು ಮಹತ್ವದ ಹೆಜ್ಜೆಯಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ  

Source link

Exit mobile version