IND vs SL: ದೇವದತ್ ಪಡಿಕ್ಕಲ್ ಶತಕ, ರಾಹುಲ್ ಅರ್ಧಶತಕ; ಭಾರತಕ್ಕೆ ಮೊದಲ ದಿನದ ಗೌರವ – Kannada News | India vs SL Test Day 1: Devdutt Padikkal’s Unbeaten 131 Dominates Galle Match

ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡುತ್ತಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡುತ್ತಿರುವ ಟೀಂ ಇಂಡಿಯಾ ಮೊದಲ ದಿನದಾಟದಂತ್ಯಕ್ಕೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡು 288 ರನ್ ಕಲೆಹಾಕಿದೆ. ತಂಡದ ಪರ ದೇವದತ್ ಪಡಿಕ್ಕಲ್ 178 ಎಸೆತಗಳಲ್ಲಿ ಅಜೇಯ131 ರನ್ ಬಾರಿಸಿದರೆ, ವಿಕೆಟ್ ಕೀಪರ್ ರಿಷಭ್ ಪಂತ್ 36 ಎಸೆತಗಳಲ್ಲಿ 27 ರನ್ ಕಲೆಹಾಕಿ ಎರಡನೇ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಮೊದಲ ದಿನ ಸಂಪೂರ್ಣ 90 ಓವರ್​ಗಳನ್ನು ಆಡಲು ಸಾಧ್ಯವಾಗಲಿಲ್ಲ. ಅಲ್ಲದೆ ಮಳೆ ಆಟಕ್ಕೆ ಅಡ್ಡಿಪಡಿಸಿದರ ಕಾರಣ ಮೊದಲ ದಿನ 73 ಓವರ್​ಗಳ ಆಟ ಮಾತ್ರ ನಡೆಯಿತು.

Published On – 6:10 pm, Sat, 15 August 26

Source link

ಡಬ್ಬಗಳಲ್ಲಿ ಶೇಖರಿಸಿಡುವ ಅಕ್ಕಿಯಲ್ಲಿ ಹುಳಗಳಾಗಂತೆ ತಡೆಯಲು ಈ ಸಿಂಪಲ್‌ ಟಿಪ್ಸ್‌ ಪಾಲಿಸಿ – Kannada News | How to prevent Weevils in rice

ಸಾಮಾನ್ಯವಾಗಿ ಒಂದೆರಡು ತಿಂಗಳಿಗೆ ಬೇಕಾಗುವ ಅಕ್ಕಿ (Rice), ಬೇಳೆ, ದ್ವಿಧಳ ಧಾನ್ಯಗಳನ್ನು ಒಂದೇ ಬಾರಿಗೆ ಖರೀದಿಸಿ, ಡಬ್ಬಗಳಲ್ಲಿ ಭದ್ರವಾಗಿ ಶೇಖರಿಸಿಡುತ್ತಾರೆ. ಅಕ್ಕಿ, ಕಾಳುಗಳು, ಹಿಟ್ಟುಗಳನ್ನು ಎಷ್ಟೇ ಭದ್ರವಾಗಿ ಸ್ಟೋರ್‌ ಮಾಡಿಟ್ಟರೂ ಡಬ್ಬದೊಳಗೆ ಹುಳುಗಳು ಆವರಿಸಿಬಿಡುತ್ತವೆ. ಅದರಲ್ಲೂ ಮಳೆಗಾಲದ ಸಮಯದಲ್ಲಿ ಈ ಸಮಸ್ಯೆ ತುಸು ಹೆಚ್ಚೇ ಇರುತ್ತದೆ. ಹುಳುಗಳು ಅವರಿಸುವುದರಿಂದ ಅಕ್ಕಿ, ಕಾಳುಗಳು ಮತ್ತು ಹಿಟ್ಟಿನ ರುಚಿ, ಗುಣಮಟ್ಟ ಎರಡೂ ಕಡಿಮೆಯಾಗುತ್ತದೆ. ನೀವು ಮನೆಯಲ್ಲಿ ಡಬ್ಬದಲ್ಲಿ ಶೇಖರಿಸಿಟ್ಟ ಅಕ್ಕಿಯಲ್ಲೂ ಇದೇ ರೀತಿ ಹುಳುಗಳಾಗಿದ್ಯಾ? ಹಾಗಿದ್ರೆ ಈ ಸಮಸ್ಯೆಗೆ ಪರಿಹಾರವನ್ನು ಪಡೆಯಲು ಮತ್ತು ಸ್ಟೋರ್‌ ಮಾಡಿಡುವ ಅಕ್ಕಿ, ಕಾಳುಗಳಲ್ಲಿ ಹುಳುಗಳಾಗದಂತೆ ನೋಡಿಕೊಳ್ಳಲು ಈ ಸಿಂಪಲ್‌ ಹಾಗೆನೇ ಪರಿಣಾಮಕಾರಿ ಸಲಹೆಯನ್ನು ಪಾಲಿಸಿ.

ಅಕ್ಕಿಯಲ್ಲಿರುವ ಹುಳುಗಳನ್ನು ತೆಗೆದುಹಾಕುವುದು ಹೇಗೆ?

ಅಕ್ಕಿಯನ್ನು ಸೂರ್ಯನ ಬೆಳಕಿನಲ್ಲಿಡಿ: ನೀವು ಡಬ್ಬದಲ್ಲಿ ಶೇಖರಿಸಿಟ್ಟ ಅಕ್ಕಿ ಅಥವಾ ಕಾಳುಗಳಲ್ಲಿ ವಿಪರೀತ ಹುಳುಗಳಿದ್ದರೆ, ಅಕ್ಕಿಯನ್ನು ದೊಡ್ಡ ತಟ್ಟೆ ಅಥವಾ ಸ್ವಚ್ಛವಾದ ಬಟ್ಟೆಯ ಮೇಲೆ ತೆಳುವಾಗಿ ಹರಡಿ. ಬಿಸಿಲಿನಲ್ಲಿಡಿ. ಕನಿಷ್ಠ ಎರಡರಿಂದ ಮೂರು ಗಂಟೆಗಳ ಕಾಲ ಅದನ್ನು ಬಿಸಿಲಿನಲ್ಲಿಡಬೇಕು. ಸೂರ್ಯನ ಶಾಖವು ಅಕ್ಕಿಯಿಂದ ಕೀಟಗಳನ್ನು ಓಡಿಸುತ್ತದೆ. ಅಲ್ಲದೆ ಈ ಟ್ರಿಕ್ಸ್‌  ಅಕ್ಕಿಯಿಂದ ತೇವಾಂಶವನ್ನು ಸಹ ತೆಗೆದುಹಾಕುತ್ತದೆ.

ವಿನೆಗರ್ ಮತ್ತು ಇಂಗು ಬಳಕೆ: ಒಂದು ಸಣ್ಣ ಬಟ್ಟಲಿನಲ್ಲಿ ಸ್ವಲ್ಪ ಬಿಳಿ ವಿನೆಗರ್ ಸುರಿಯಿರಿ. ಅದಕ್ಕೆ ಕಾಲು ಚಮಚ ಇಂಗು ಸೇರಿಸಿ. ಇದನ್ನು ಅಕ್ಕಿಯ ಡಬ್ಬದ ಮಧ್ಯದಲ್ಲಿಡಿ. ವಿನೆಗರ್‌ ಮತ್ತು ಇಂಗಿನ ಕಟುವಾದ ವಾಸನೆಗೆ ಹುಳುಗಳು ಸಂಪೂರ್ಣವಾಗಿ ಮಾಯವಾಗಿಬಿಡುತ್ತವೆ. ಕೀಟಗಳು ಹೋದ ನಂತರ, ಅಕ್ಕಿಯನ್ನು ಮತ್ತೊಂದು ಪಾತ್ರೆಗೆ ವರ್ಗಾಯಿಸಿ. ಅಕ್ಕಿ, ಕಾಳುಗಳ ಡಬ್ಬದಲ್ಲಿರುವ ಹುಳು, ಕೀಟಗಳನ್ನು ತೊಡೆದುಹಾಕಲು ಈ ಟ್ರಿಕ್ಸ್‌ ತುಂಬಾನೇ ಪರಿಣಾಮಕಾರಿ.

ಲವಂಗ ಅಥವಾ ದಾಲ್ಚಿನ್ನಿ: ಅಕ್ಕಿ ಡಬ್ಬದಿಂದ ಕೀಟಗಳನ್ನು ತೆಗೆದುಹಾಕಲು ನೀವು ಲವಂಗ ಅಥವಾ ದಾಲ್ಚಿನ್ನಿಯನ್ನು ಸಹ ಬಳಸಬಹುದು.  ಅಕ್ಕಿ ಡಬ್ಬದಲ್ಲಿ ಕೆಲವು ಲವಂಗ ಅಥವಾ ದಾಲ್ಚಿನ್ನಿ ತುಂಡುಗಳನ್ನು ಇರಿಸಿ. ಅವುಗಳ ಬಲವಾದ ಪರಿಮಳವು ಹುಳುಗಳನ್ನು ಹೋಗಲಾಡಿಸುತ್ತವೆ. ಅಲ್ಲದೆ ಇದು ಅಕ್ಕಿಯಲ್ಲಿನ ತೇವಾಂಶದ ಸಮಸ್ಯೆಯನ್ನು ಸಹ ಕಡಿಮೆ ಮಾಡುತ್ತದೆ. ನೀವು ಅಕ್ಕಿ, ಕಾಳುಗಳನ್ನು ಸ್ಟೋರ್‌ ಮಾಡುವಾಗ ಒಂದೆರಡು ಲವಂಗ, ದಾಲ್ಚಿನ್ನಿಯನ್ನು ಆ ಡಬ್ಬದಲ್ಲಿ ಇಟ್ಟರೆ ಹುಳುಗಳು ಎಂದಿಗೂ ಅಕ್ಕಿಯನ್ನು ಆವರಿಸುವುದಿಲ್ಲ.

ಅಕ್ಕಿ, ಕಾಳುಗಳಲ್ಲಿ ಹುಳುಗಳಾಗದಂತೆ ನೋಡಿಕೊಳ್ಳುವುದು ಹೇಗೆ?

ಬಿರಿಯಾನಿ ಎಲೆ ತಂತ್ರ: ಕೀಟ, ಹುಳುಗಳು ಬಿರಿಯಾನಿ ಎಲೆಗಳ ವಾಸನೆಯನ್ನು ಇಷ್ಟಪಡುವುದಿಲ್ಲ. ಈ ಎಲೆ ನೈಸರ್ಗಿಕ ಕೀಟ ನಿವಾರಕವಾಗಿಯೂ ಕಾರ್ಯನಿರ್ವಹಿಸುತ್ತದೆ. ಇದು ಅಕ್ಕಿ, ಕಾಳುಗಳಲ್ಲಿ ಹುಳುಗಳಾಗುವುದನ್ನು ತಡೆಯಲು ಸಹ ಪರಿಣಾಮಕಾರಿ. ನೀವು ಸ್ಟೋರ್‌ ಮಾಡುವ ಅಕ್ಕಿ ಡಬ್ಬದಲ್ಲಿ ಎರಡರಿಂದ ಮೂರು ಬಿರಿಯಾನಿ ಎಲೆಗಳನ್ನು ಇರಿಸಿ. ಈ ವಿಧಾನವು ಹಿಟ್ಟು ಮತ್ತು ಇತರ ದ್ವಿದಳ ಧಾನ್ಯಗಳಿಗೂ ಪರಿಣಾಮಕಾರಿಯಾಗಿದೆ.

ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬಕ್ಕೂ ಮುನ್ನ ಮನೆಯನ್ನು ರೀತಿ ಸ್ವಚ್ಛಗೊಳಿಸಿ

ಬೆಳ್ಳುಳ್ಳಿ ಸೇರಿಸಿ: ಅಕ್ಕಿಗೆ ಕೀಟಗಳು ಮುತ್ತಿಕೊಳ್ಳುವುದನ್ನು ತಡೆಯಲು, ಸಿಪ್ಪೆ ತೆಗೆಯದ ಐದರಿಂದ ಆರು ಬೆಳ್ಳುಳ್ಳಿ ಎಸಳುಗಳನ್ನು ಅಕ್ಕಿ ಡಬ್ಬದಲ್ಲಿಡಿ.  ಇದರ ಬಲವಾದ ವಾಸನೆಯು ಕೀಟಗಳನ್ನು ದೂರವಿಡುತ್ತದೆ. ಅಕ್ಕಿ, ಕಾಳುಗಳಲ್ಲಿ ಹುಳುಗಳಾಗುವುದನ್ನು ತಡೆಯುತ್ತದೆ.

ಅರಶಿಣ ಕೊಂಬು, ಒಣ ಮೆಣಸು: ಒಂದು ಒಣ ಅರಿಶಿನ ಕೊಂಬು, ಒಂದು ಒಣ ಮೆಣಸುಎರಡು ಪಲಾವ್‌ ಎಲೆ ಮತ್ತು ನಾಲ್ಕರಿಂದ ಐದು ಲವಂಗಗಳನ್ನು ದ್ವಿದಳ ಧಾನ್ಯಗಳು, ಅಕ್ಕಿ ಅಥವಾ ಯಾವುದೇ ಇತರ ಧಾನ್ಯಗಳನ್ನು ಸ್ಟೋರ್‌ ಮಾಡಿಡುವ ಪಾತ್ರೆಯಲ್ಲಿ ಹಾಕಿದರೆ, ಆ ಡಬ್ಬದಲ್ಲಿ ಹುಳು, ಕೀಟಗಳು ಆವರಿಸುವುದಿಲ್ಲ. ಇವುಗಳ ನೈಸರ್ಗಿಕ ಪರಿಮಳ ಅಕ್ಕಿ, ಧಾನ್ಯಗಳಲ್ಲಿ ಕೀಟ, ಹುಳುಗಳು ಆವರಿಸುವುದನ್ನು ತಡೆಯುತ್ತವೆ. ಅವುಗಳ ಸಂತಾನೋತ್ಪತ್ತಿಯ ಸಾಧ್ಯತೆಯನ್ನು ನಿವಾರಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಕ್ಷಿಣದ ನಟರ ಬಗ್ಗೆ ಶ್ರೆಯಾ ಸರನ್ ಮಾತು, ಪವನ್, ರಜನಿ, ಮಹೇಶ್ ಬಗ್ಗೆ ಹೇಳಿದ್ದೇನು? – Kannada News | Shriya Saran talks about South movie stars

ಶ್ರೆಯಾ ಸರನ್ (Shriya Saran), ಒಂದು ಸಮಯದಲ್ಲಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮೆರೆದವರು. ರಜನೀಕಾಂತ್, ಪವನ್ ಕಲ್ಯಾಣ್, ಮಹೇಶ್ ಬಾಬು, ಜೂ ಎನ್​​ಟಿಆರ್ ಇನ್ನೂ ಹಲವಾರು ಸೂಪರ್ ಸ್ಟಾರ್ ನಟರುಗಳೊಟ್ಟಿಗೆ ಅವರು ನಟಿಸಿದ್ದಾರೆ. ಆದರೆ ಕಳೆದ ಕೆಲ ವರ್ಷಗಳಿಂದಲೂ ಶ್ರೆಯಾ ಸರನ್ ಅವರಿಗೆ ಅವಕಾಶಗಳು ತುಸು ಕಡಿಮೆ ಆಗಿವೆ. ಶ್ರೆಯಾ, ಮದುವೆಯಾಗಿ ಒಬ್ಬ ಮಗಳ ತಾಯಿ ಆಗಿದ್ದಾರೆ. ಇದೀಗ ಶ್ರೆಯಾ ಸರನ್ ಅವರು ಪಾಡ್​​ಕಾಸ್ಟ್ ಒಂದರಲ್ಲಿ ಭಾಗಿ ಆಗಿದ್ದು, ತಮ್ಮ ಸಿನಿಮಾ ಜರ್ನಿಯ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಅವರು ದಕ್ಷಿಣದ ಸ್ಟಾರ್ ನಟರುಗಳ ಬಗ್ಗೆಯೂ ಮಾತನಾಡಿದ್ದಾರೆ.

ಪವನ್ ಕಲ್ಯಾಣ್ ಬಗ್ಗೆ ಮಾತನಾಡಿರುವ ಶ್ರೆಯಾ ಸರನ್, ‘ಅದ್ಭುತವಾದ ನಟ, ಅವರ ಕಣ್ಣುಗಳೇ ಸಾಕಷ್ಟು ಮಾತನಾಡುತ್ತವೆ’ ಎಂದಿದ್ದಾರೆ. ಅಂದಹಾಗೆ ಶ್ರೆಯಾ ಅವರು ಪವನ್ ಕಲ್ಯಾಣ್ ಜೊತೆಗೆ ‘ಬಾಲು ಎಬಿಸಿಡಿಇಎಫ್ಜಿ’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದರು. ಭಾರಿ ಪ್ರಚಾರದೊಂದಿಗೆ ಬಿಡುಗಡೆ ಆದ ಆ ಸಿನಿಮಾ ನಿರೀಕ್ಷಿತ ಯಶಸ್ಸು ಕಾಣಲಿಲ್ಲ.

ಮಹೇಶ್ ಬಾಬು ಬಗ್ಗೆ ಮಾತನಾಡಿರುವ ಶ್ರೆಯಾ ಸರನ್, ‘ಮಹೇಶ್ ಬಾಬು ಅವರ ನಗುವೆಂದರೆ ನನಗೆ ಬಹಳ ಇಷ್ಟ. ಅವರೊಬ್ಬ ಅದ್ಭುತ ವ್ಯಕ್ತಿ, ಅದ್ಭುತ ನಟ. ಆದರೆ ಅವರ ನಗುವಿನಲ್ಲಿ ಏನೋ ವಿಶೇಷವಿದೆ. ಅವರ ನಗು ಒಂದು ರೀತಿ ಬೆಳಕು ತಂದಂತೆ ಆಗುತ್ತದೆ. ಅವರಿಗೆ ವಯಸ್ಸೇ ಆಗುತ್ತಿಲ್ಲ. ಅವರ ಪತ್ನಿ, ಕುಟುಂಬ ಅಭಿಮಾನಿಗಳಿಂದ ಸಿಗುತ್ತಿರುವ ಪ್ರೀತಿಯ ಕಾರಣಕ್ಕೆ ಅವರಿಗೆ ವಯಸ್ಸೇ ಆಗುತ್ತಿಲ್ಲ ಎನಿಸುತ್ತದೆ’ ಎಂದಿದ್ದಾರೆ ಶ್ರೆಯಾ.

ಇದನ್ನೂ ಓದಿ:‘ಆವಾರಾಪನ್’ ಸೋಲಿನ ಬಳಿಕ ಏನಾಯ್ತು? ಶ್ರೆಯಾ ಬೇಸರದ ಮಾತು

ರಜನೀಕಾಂತ್ ಬಗ್ಗೆ ಮಾತನಾಡಿರುವ ನಟಿ ಶ್ರೆಯಾ, ‘ಯಶಸ್ಸು ಎಂದರೆ ರಜನೀಕಾಂತ್, ಯಶಸ್ಸನ್ನು ಅವರು ನೋಡುವ ರೀತಿಯೂ ಅದ್ಭುತ. ನಾನು ಮೊದಲ ಬಾರಿಗೆ ಅವರೊಟ್ಟಿಗೆ ನಟಿಸಿದ್ದು ಒಂದು ರೀತಿ ಅಚ್ಚರಿಯಾಗಿತ್ತು. ಶಂಕರ್ ಅವರು ಕರೆದು ಅವಕಾಶ ಕೊಟ್ಟರು. ಮುಹೂರ್ತದ ದಿನ ಬರುವಂತೆ ಹೇಳಿದರು. ಅಲ್ಲಿ ಹೋದರೆ ರೆಹಮಾನ್, ರಜನೀಕಾಂತ್ ಇನ್ನೂ ಕೆಲವು ದೊಡ್ಡವರು ಇದ್ದರು. ರಜನೀಕಾಂತ್ ಅವರು ಸಿನಿಮಾದ ಮುಹೂರ್ತಕ್ಕೆ ಅತಿಥಿ ಎಂದುಕೊಂಡಿದ್ದೆ. ಆದರೆ ಬಳಿಕ ಶಂಕರ್ ಅವರು, ರಜನೀಕಾಂತ್ ಅವರೇ ನಾಯಕ ಎಂದಾಗ ನನಗೆ ತಲೆ ತಿರುಗಿದಂತಾಗಿತ್ತು. ಅದೊಂದು ಅದ್ಭುತ ಅನುಭವ’ ಎಂದು ಶ್ರೆಯಾ ಹೇಳಿದ್ದಾರೆ. ಶಿವಾಜಿ ಸಿನಿಮಾನಲ್ಲಿ ರಜನೀಕಾಂತ್ ಜೊತೆಗೆ ಶ್ರೆಯಾ ಸರನ್ ನಟಿಸಿದ್ದಾರೆ.

ಇಮ್ರಾನ್ ಹಾಶ್ಮಿ ಬಗ್ಗೆಯೂ ಮಾತನಾಡಿರುವ ಶ್ರೆಯಾ ಸರನ್, ‘ಅದ್ಭುತವಾದ ನಟ, ಅದ್ಭುತವಾದ ತಮಾಷೆ ಪ್ರವೃತ್ತಿ ಅವರಲ್ಲಿ ಇದೆ’ ಎಂದರು. ತಾವು ಇಮ್ರಾನ್ ಅವರ ಪತ್ನಿಯೊಟ್ಟಿಗೆ ಒಳ್ಳೆಯ ಗೆಳತಿ ಆಗಿದ್ದೇನೆ ಎಂದು ಸಹ ನಟಿ ಶ್ರೆಯಾ ಹೇಳಿದರು.

ಶ್ರೆಯಾ ಸರನ್ ಅವರು, ತೆಲುಗು ಹಾಗೂ ತಮಿಳಿನ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ ‘ಚಂದ್ರ’ ಮತ್ತು ‘ಅರಸು’ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಹಿಂದಿಯಲ್ಲಿ ದೊಡ್ಡ ಯಶಸ್ಸು ಸಿಗಲಿಲ್ಲವಾದರೂ ‘ದೃಶ್ಯಂ’ ರೀಮೇಕ್ ಮೂಲಕ ಅಲ್ಲಿಯೂ ಯಶಸ್ಸು ಪಡೆದುಕೊಂಡರು. ಈಗ ಎರಡು ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs SL: ಕೈಗೆ ಗಾಯ, ನಡೆಯಲೂ ಆಗುತ್ತಿಲ್ಲ! ಬ್ಯಾಟಿಂಗ್‌ ನಿಲ್ಲಿಸಿ ಡಗೌಟ್​ಗೆ ತೆರಳಿದ ರಾಹುಲ್ – Kannada News | KL Rahul Suffers Muscle Strain, Retires Hurt in Galle Test vs Sri Lanka

ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ (India vs Sri Lanka) ಉತ್ತಮ ಪ್ರದರ್ಶನ ನೀಡುತ್ತಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡುತ್ತಿರುವ ಟೀಂ ಇಂಡಿಯಾ ಪರ ಬ್ಯಾಟರ್​ಗಳು ತಾಳ್ಮೆಯ ಇನ್ನಿಂಗ್ಸ್ ಕಟ್ಟುತ್ತಿದ್ದಾರೆ. ಆದರೆ ಮೊದಲ ದಿನದಾಟದ ಎರಡನೇ ಸೆಷನ್ ಅಂದರೆ ಚಹಾ ವಿರಾಮ ಮುಗಿದ ಬಳಿಕ ಕಂಡಬಂದ ದೃಶ್ಯ ಟೀಂ ಇಂಡಿಯಾವನ್ನು ಹಾಗೂ ಅದರ ಅಭಿಮಾನಿಗಳನ್ನು ಆತಂಕಕ್ಕೆ ದೂಡಿದೆ. ತಂಡದ ಅನುಭವಿ ಆರಂಭಿಕ ಆಟಗಾರ ಕೆಎಲ್ ರಾಹುಲ್ (KL Rahul) ಸ್ನಾಯು ಸೆಳೆತದಿಂದಾಗಿ ಅರ್ಧಕ್ಕೆ ಬ್ಯಾಟಿಂಗ್‌ ನಿಲ್ಲಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ. ರಾಹುಲ್​ಗೆ ಈ ಸ್ನಾಯು ಸೆಳೆತ ಗಂಭೀರವಾಗಿದ್ದು, ಅವರಿಗೆ ನಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ರಾಹುಲ್ ಮೈದಾನದಿಂದ ಹೊರನಡೆದರು. ರಾಹುಲ್ ಗಾಯಗೊಂಡು ನಿವೃತ್ತಿ ಹೊಂದುವುದಕ್ಕೂ ಮುನ್ನ 162 ಎಸೆತಗಳಲ್ಲಿ 77 ರನ್​ಗಳ ಇನ್ನಿಂಗ್ಸ್ ಆಡಿದ್ದರು.

ರಾಹುಲ್​ಗೆ ಸ್ನಾಯು ಸೆಳೆತ

ದಿನದಾಟದ ಎರಡನೇ ಸೆಷನ್​ನ ಅಂತಿಮ ಓವರ್‌ನಲ್ಲಿಯೇ ಕೆ.ಎಲ್. ರಾಹುಲ್​ಗೆ ಸ್ನಾಯು ಸೆಳೆತ ಸಾಕಷ್ಟು ತೊಂದರೆ ನೀಡುತ್ತಿರುವುದು ಸ್ಪಷ್ಟವಾಗಿತ್ತು. ಇದಾದ ಬಳಿಕ ಎರಡನೇ ಸೆಷನ್ ಮುಗಿದಿದ್ದರಿಂದ ಡಗೌಟ್​ಗೆ ತೆರಳಿದ ರಾಹುಲ್​ಗೆ ತಂಡದ ಫಿಸಿಯೋ ಡ್ರೆಸ್ಸಿಂಗ್ ಕೋಣೆಯಲ್ಲಿ ಚಿಕಿತ್ಸೆ ನೀಡಿದರು. ಹೀಗಾಗಿ ಮೂರನೇ ಸೆಷನ್ ಆರಂಭಿಸುವುದಕ್ಕೆ ರಾಹುಲ್ ಸ್ವಲ್ಪ ತಡವಾಗಿ ಕ್ರೀಸ್‌ಗೆ ಬಂದರು. ಆದರೆ ರಾಹುಲ್​ಗೆ ಮೂರನೇ ಸೆಷನ್​ನಲ್ಲಿ ಒಂದೇ ಒಂದು ಎಸೆತವನ್ನು ಎದುರಿಸಲು ಸಾಧ್ಯವಾಗಲಿಲ್ಲ.

ನಡೆಯುವುದು ಕಷ್ಟಕರವಾಯಿತು

ಮೊದಲಿಗೆ ತನ್ನ ಬಲಗೈ ಸ್ನಾಯು ಸೆಳೆತದಿಂದ ಬಳಲುತ್ತಿದ್ದ ರಾಹುಲ್ ತನಗಾಗುತ್ತಿರುವ ನೋವನ್ನು ಅಂಪೈರ್ ಬಳಿ ಹೇಳಿಕೊಂಡರು. ಕೂಡಲೇ ತಂಡದ ಫಿಸಿಯೋ ಮೈದಾನಕ್ಕೆ ಆಗಮನಿಸಿ ರಾಹುಲ್​ಗೆ ಚಿಕಿತ್ಸೆ ನೀಡಲು ಶುರು ಮಾಡಿದರು. ಬಲಗೈ ಜೊತೆಗೆ ರಾಹುಲ್​ಗೆ ತಮ್ಮ ಎಡಗೈ ಹಾಗೂ ಎಡಗಾಲಿನಲ್ಲೂ ಸ್ನಾಯು ಸೆಳೆತದ ಸಮಸ್ಯೆ ಕಾಡಲಾರಂಭಿಸಿತು. ಫಿಸಿಯೋ ಚಿಕಿತ್ಸೆ ಮುಂದುವರೆಸಿದರಾದರೂ ರಾಹುಲ್​ಗೆ ನೋವು ಕಡಿಮೆಯಾಗಲಿಲ್ಲ. ಇದರಿಂದಾಗಿ ರಾಹುಲ್​ಗೆ ನಡೆಯುವುದು ಕಷ್ಟಕರವಾಯಿತು.

IND vs SL: ಪಡಿಕ್ಕಲ್- ರಾಹುಲ್ ಅರ್ಧಶತಕ; 2ನೇ ಸೆಷನ್​ ಮುಕ್ತಾಯ

ರಾಹುಲ್ ಮತ್ತೆ ಬ್ಯಾಟಿಂಗ್​ಗೆ ಬರಬಹುದು

ಕೊನೆಗೆ ತಮ್ಮ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ರಾಹುಲ್, ಬ್ಯಾಟಿಂಗ್ ಮುಂದುವರಿಸದಿರಲು ನಿರ್ಧರಿಸಿ, ಫಿಸಿಯೋ ಸಹಾಯದಿಂದ ಕುಂಟುತ್ತಾ ಪೆವಿಲಿಯನ್‌ಗೆ ಮರಳಿದರು. ರಾಹುಲ್ 77 ರನ್ ಗಳಿಸಿ ಗಾಯಗೊಂಡು ನಿವೃತ್ತರಾದರು. ಆದಾಗ್ಯೂ ರಾಹುಲ್ ಡ್ರೆಸ್ಸಿಂಗ್ ಕೋಣೆಗೆ ನಡೆಯುವಾಗ ಕಷ್ಟಪಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಅಲ್ಲದೆ ಅವರು ಮೆಟ್ಟಿಲುಗಳನ್ನು ಹತ್ತುವುದಕ್ಕೂ ಬೇರಯವರ ಸಹಾಯ ಪಡೆಯಬೇಕಾಯಿತು. ಇದೀಗ ಗಾಯದಿಂದ ನಿವೃತ್ತಗೊಂಡಿರುವ ರಾಹುಲ್ ಮತ್ತೆ ಬ್ಯಾಟಿಂಗ್‌ ಮಾಡುವ ಅವಕಾಶ ಹೊಂದಿದ್ದಾರೆ. ತಂಡಕ್ಕೆ ಅವರ ಅವಶ್ಯಕತೆ ಇದ್ದರೆ ರಾಹುಲ್ ಮತ್ತೆ ಬ್ಯಾಟಿಂಗ್​ಗೆ ಬರಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:48 pm, Sat, 15 August 26

Source link

ಸೋಮಾವತಿ ನದಿಗೆ ಬಿದ್ದ ಕಾರು: ಕೊಚ್ಚಿಕೊಂಡು ಹೋಗುತ್ತಿದ್ದ ದಂಪತಿಯನ್ನ ಉಳಿಸಿದ ಬಂಡೆ – Kannada News | Car falls into somavati river, locals rescued Bengaluru Couple from Water at Kalasa

ಚಿಕ್ಕಮಗಳೂರು, (ಆಗಸ್ಟ್ 15): ಜಿಲ್ಲೆಯ ಕಳಸ (Kalasa) ತಾಲೂಕಿನ ಗಣಪತಿ ಕಟ್ಟೆ ಬಳಿ ಕಾರೊಂದು ಸೋಮಾವತಿ ನದಿಗೆ (Somavati River) ಉರುಳಿ ಬಿದ್ದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರು (Bengaluru) ಮೂಲದ ದಂಪತಿ ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಭಸದಿಂದ ಹರಿಯುತ್ತಿದ್ದ ನೀರಿನಲ್ಲಿ ಕಾರಿಗೆ ಬಂಡೆಯೊಂದು ಅಡ್ಡ ಸಿಕ್ಕಿದ್ದರಿಂದ ದಂಪತಿಯ ಜೀವ ಉಳಿದಿದೆ. ಬಂಡೆ ಅಡ್ಡ ಸಿಗದೇ ಇದ್ದಿದ್ದರೆ ಕಾರಿನ ಸಮೇತ ದಂಪತಿ ಕೊಚ್ಚಿ ಹೋಗುವ ಸಾಧ್ಯತೆ ಇತ್ತು. ಇನ್ನೂ ಕಾರು ನದಿಗೆ ಬೀಳುತ್ತಿದ್ದಂತೆ ಸ್ಥಳೀಯರು ರಕ್ಷಣೆಗೆ ಬಂದಿದ್ದಾರೆ. ಕಾರಿಗೆ ಹಗ್ಗ ಕಟ್ಟಿ ಮೇಲೆಳೆದು ದಂಪತಿಯ ಪ್ರಾಣ ರಕ್ಷಿಸಿದ್ದಾರೆ. ಸೋಮಾವತಿ ನದಿಗೆ ತಡೆಗೋಡೆ ಇಲ್ಲ. ಹೀಗಾಗಿ ಈ ದುರ್ಘಟನೆ ಸಂಭವಿಸಿದೆ. ಈ ಹಿಮದೆಯೂ ಸಹ ಮುರ್ನಾಲ್ಕು ಅಪಘಾತಗಳು ಸಂಭವಿಸಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕೋಲಾರ: ಸ್ವಾತಂತ್ರ್ಯ ದಿನಾಚರಣೆ ವೇಳೆ ಖಡ್ಗ ಪ್ರದರ್ಶಿಸಿ ರಾಷ್ಟ್ರಧ್ವಜಕ್ಕೆ ಅಗೌರವ; ಓರ್ವನ ಬಂಧನ – Kannada News | Kolar Independence Day: Man Arrested for Sword Display and Alleged Disrespect to National Flag

ಕೋಲಾರ, ಆಗಸ್ಟ್​​​ 15: ನಗರದ ಮಹಾಲಕ್ಷ್ಮೀ ಬಡಾವಣೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣದ ವೇಳೆ ಖಡ್ಗ ಪ್ರದರ್ಶಿಸಿ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಆರೋಪದಡಿ ಮಹಾಲಕ್ಷ್ಮೀ ಬಡಾವಣೆ ನಿವಾಸಿ ಮೊಹಮ್ಮದ್ ಪೀರ್ ಅಲಿಯಾಸ್ ಜಾವಾ ಎಂಬಾತನನ್ನು ಕೋಲಾರ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಧ್ವಜಾರೋಹಣದ ಸಂದರ್ಭದಲ್ಲಿ ಮುಸ್ತಫಾ ಎಂಬುವರಿಗೆ ಉಡುಗೊರೆಯಾಗಿ ನೀಡಲು ಆರೋಪಿ ಈ ಖಡ್ಗವನ್ನು ತಂದಿದ್ದ ಎನ್ನಲಾಗಿದ್ದು, ಸಾರ್ವಜನಿಕವಾಗಿ ಖಡ್ಗ ಪ್ರದರ್ಶಿಸಿ ಧ್ವಜಕ್ಕೆ ಅಪಚಾರ ಎಸಗಿದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Varamahalakshmi festival 2026: ವರಮಹಾಲಕ್ಷ್ಮಿ ಹಬ್ಬಕ್ಕೂ ಮುನ್ನ ಮನೆಯನ್ನು ಈ ರೀತಿ ಸ್ವಚ್ಛಗೊಳಿಸಿ – Kannada News | Clean your house like this before Varamahalakshmi festival

ಪ್ರತಿವರ್ಷ ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ಅಥವಾ ಶ್ರಾವಣ ಮಾಸದ ಶುಕ್ಲ ಪಕ್ಷದ ಪೂರ್ಣಿಮೆಯ ದಿನಕ್ಕಿಂತ ಬರುವ ಶುಕ್ರವಾರದಂದು ವರಮಹಾಲಕ್ಷ್ಮಿ (Varamahalakshmi) ಹಬ್ಬವನ್ನು ಆಚರಿಸಲಾಗುತ್ತದೆ. ಇದು ಸಂಪತ್ತು, ಸಮೃದ್ಧಿ ಮತ್ತು ಅದೃಷ್ಟದ ಅಧಿದೇವತೆಯಾದ ಲಕ್ಷ್ಮಿಯನ್ನು ಆರಾಧಿಸುವ ಹಬ್ಬ. ಈ ಹಬ್ಬದ ದಿನ ಅನೇಕರು ಲಕ್ಷ್ಮೀದೇವಿಯನ್ನು ಮನೆಯಲ್ಲಿ ಕೂರಿಸಿ ಪೂಜಿಸುತ್ತಾರೆ. ಲಕ್ಷ್ಮೀ ದೇವಿಯನ್ನು ಮನೆಯೊಳಗೆ ಬರಮಾಡಿಕೊಳ್ಳುವ ಮುನ್ನ ಪ್ರತಿಯೊಬ್ಬರೂ ಮನೆಯನ್ನು ಸ್ವಚ್ಛಗೊಳಿಸುತ್ತಾರೆ, ಹೌದು ವರಮಹಾಲಕ್ಷ್ಮಿ ಹಬ್ಬ ಬಂದರೆ ಸಾಕು, ಪ್ರತಿಯೊಬ್ಬರೂ ಸಹ ಮನೆಯನ್ನು ಡೀಪ್‌ ಕ್ಲೀನ್‌ ಮಾಡುತ್ತಾರೆ. ಆದರೆ ಹೊರಗೆ ಕೆಲಸಕ್ಕೆ ಹೋಗುವ ಅನೇಕರಿಗೆ ಸರಿಯಾಗಿ ಮನೆ ಕ್ಲೀನ್‌ ಮಾಡಲು ಸಾಧ್ಯವಾಗುವುದಿಲ್ಲ. ಹೀಗಿರುವಾಗ ಈ ಕೆಲವೊಂದು ಸಿಂಪಲ್‌ ಸಲಹೆಗಳನ್ನು ಪಾಲಿಸುವ ಮೂಲಕ ವರಮಹಾಲಕ್ಷ್ಮಿ ಹಬ್ಬದ ಹೊತ್ತಿಗೆ ಬಲು ಸುಲಭವಾಗಿ ಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬಹುದು.

ಕ್ಲೀನಿಂಗ್‌ ಕೆಲಸ ಯಾವಾಗ ಪ್ರಾರಂಭಿಸಬೇಕು?

ಪ್ರತಿಯೊಬ್ಬರೂ ವರಮಹಾಲಕ್ಷ್ಮೀ ಹಬ್ಬಕ್ಕೂ ಮುನ್ನ ಸಂಪೂರ್ಣ ಮನೆಯನ್ನು ಸ್ವಚ್ಛಗೊಳಿಸುತ್ತಾರೆ. ಹಬ್ಬಕ್ಕೆ ಇನ್ನೇನು ಐದಾರು ದಿನ ಇರುವಾಗ ಕ್ಲೀನಿಂಗ್‌ ಕಾರ್ಯ ಆರಂಭಿಸಿದರೆ, ಒತ್ತಡದ ಜೊತೆಗೆ ಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಸಹ ಸಾಧ್ಯವಾಗುವುದಿಲ್ಲ. ಹಬ್ಬ ಸಮೀಪಿಸುತ್ತಿದ್ದಂತೆ ಕೆಲಸಗಳನ್ನು ಮುಂದೂಡುವುದರಿಂದ ನಿಮ್ಮ ಮೇಲೆ ಹೆಚ್ಚುವರಿ ಒತ್ತಡ ಬೀಳುತ್ತದೆ. ಆದ್ದರಿಂದ ನೀವು 10-12 ದಿನಗಳ ಮುಂಚಿತವಾಗಿ ಮನೆ ಸ್ವಚ್ಛಗೊಳಿಸಲು ಪ್ರಾರಂಭಿಸಬೇಕು.

ಮನೆ ಕ್ಲೀನಿಂಗ್‌ ಎಲ್ಲಿಂದ ಆರಂಭಿಸಬೇಕು?

ಮೊದಲು ನಿಮ್ಮ ಕ್ಲೋಸೆಟ್‌ಗಳನ್ನು ಸ್ವಚ್ಛಗೊಳಿಸಿ ಮತ್ತು ಜೋಡಿಸಿ. ನೀವು ಹಾಕದ ಹಳೆಯ ಬಟ್ಟೆಗಳಿದ್ದರೆ ಅದನ್ನು ಬೆರೆಯೇ ಇಟ್ಟು ಯಾರಿಗಾದರೂ ನೀಡಿ, ಇದರಿಂದ ಕ್ಲೋಸೆಟ್‌ಗಳಲ್ಲಿ ಸಾಕಷ್ಟು ಜಾಗ ಕೂಡ ಲಭ್ಯವಾಗುತ್ತದೆ. ನಂತರ ಕಿಟಕಿ ಪರದೆಗಳು ಮತ್ತು ಕಾರ್ಪೆಟ್‌ಗಳನ್ನು ಮುಂಚಿತವಾಗಿ ತೊಳೆಯಿರಿ. ಅವುಗಳನ್ನು ಚೆನ್ನಾಗಿ ಒಣಗಲು ಬಿಡಿ, ಮನೆ ಸಂಪೂರ್ಣ ಸ್ವಚ್ಛವಾದ ಬಳಿಕ ಪರದೆ ಕಾರ್ಪೆಟ್‌ಗಳನ್ನು ಜೋಡಿಸಿಡಿ. ಜೊತೆಗೆ ಅಲಂಕಾರಿಕ ವಸ್ತುಗಳನ್ನು ಸಹ ಮೊದಲೇ ಸ್ವಚ್ಛಗೊಳಿಸಿಡಿ.

ಹಳೆಯ ವಸ್ತುಗಳನ್ನೆಲ್ಲಾ ಹೊರಗಿಡಿ:

ಸಾಮಾನ್ಯವಾಗಿ ಹಳೆಯ ವಸ್ತುಗಳು, ಮುರಿದ ವಸ್ತುಗಳನ್ನೆಲ್ಲಾ ಮೂಲೆಗೆ ಎಸೆದು ಬಿಡುತ್ತೇವೆ. ಮನೆ ಸ್ವಚ್ಛಗೊಳಿಸುವಾಗ ಮೊದಲು ಅವುಗಳನ್ನು ಮನೆಯಿಂದ ಹೊರಗೆ ಹಾಕಿ. ಹೌದು ಮುರಿದ ವಸ್ತುಗಳು, ಗಾಜು ಏನಾದರೂ ಇದ್ದರೆ ಅದನ್ನು ಕಸದ ಬುಟ್ಟಿಗೆ ಹಾಕಿ, ಹಳೆಯ ಬಟ್ಟೆಗಳನ್ನು ಯಾರಿಗಾದರೂ ನೀಡಿ. ಹೀಗೆ ಮಾಡುವುದರಿಂದ ಅರ್ಧ ಶುಚಿಗೊಳಿಸುವಿಕೆ ಸುಲಭವಾಗುತ್ತದೆ, ಮನೆಯಲ್ಲಿ ಸಕಾರಾತ್ಮಕತೆಯೂ ನೆಲೆಸುತ್ತದೆ.

ಇದನ್ನೂ ಓದಿ: ಮನೆ ಕ್ಲೀನ್‌ ಮಾಡೋದು ದೈಹಿಕ, ಮಾನಸಿಕ ಆರೋಗ್ಯಕ್ಕೆ ಸಖತ್‌ ಪ್ರಯೋಜನಕಾರಿಯಂತೆ

ಕ್ಲೀನಿಂಗ್‌ ಕೆಲಸವನ್ನು ವಿಭಾಗಿಸಿ:

ಹಬ್ಬದ ಒಂದೆರಡು ದಿನಕ್ಕಿಂತ ಮುಂಚೆ ಮನೆ ಸ್ವಚ್ಛಗೊಳಿಸಲು ಆರಂಭಿಸಿದರೆ ಖಂಡಿತವಾಗಿಯೂ ಆಯಾಸ ಹೆಚ್ಚಾಗುತ್ತದೆ. ಆದ್ದರಿಂದ ಹಬ್ಬಕ್ಕೆ 10-12 ದಿನಕ್ಕೂ ಮುಂಚೆಯೇ ಕ್ಲೀನಿಂಗ್‌ ಕೆಲಸ ಆರಂಭಿಸಿ, ಒಂದೇ ದಿನ ಎಲ್ಲಾ ಕೆಲಸವನ್ನು ಮಾಡುವ ಬದಲು  ಒಂದು ದಿನ ಲಿವಿಂಗ್‌ ರೂಮ್‌, ಇನ್ನೊಂದು ದಿನ ಅಡುಗೆ ಕೋಣೆ, ಮತ್ತೊಂದು ದಿನ ಸ್ಟೋರ್‌ ಕ್ಲೀನಿಂಗ್‌ ಈ ರೀತಿ ಕೆಲಸವನ್ನು ವಿಭಜಿಸಿ, ಹೀಗೆ ಮಾಡುವುದರಿಂದ ವರಮಹಾಲಕ್ಷ್ಮಿ ಹಬ್ಬದ ಹೊತ್ತಿಗೆ ಒತ್ತಡವಿಲ್ಲ ಸಂಪೂರ್ಣ ಮನೆ ಸ್ವಚ್ಛವಾಗಿರುತ್ತದೆ.

ಕ್ಲೀನಿಂಗ್‌ ಕೆಲಸವನ್ನು ಸುಲಭಗೊಳಿಸುವುದು ಹೇಗೆ?

ಇಡೀ ಮನೆಯನ್ನು ಸ್ವಚ್ಛಗೊಳಿಸುವುದು ಸವಾಲಿನ ಕೆಲಸವೇ ಸರಿ. ಈ ಸವಾಲಿನ ಕೆಲಸವನ್ನು ಮೋಜಿನಿಂದ ಸುಲಭವಾಗಿ ಮಾಡಿಮುಗಿಸಬಹುದು. ಒಬ್ಬರೇ ಮನೆ ಕ್ಲೀನ್‌ ಮಾಡುವ ಬದಲು ಕುಟುಂಬ ಸದಸ್ಯರೊಂದಿಗೆ ಸೇರಿ ಮಾರಾಡುತ್ತಾ ಕೆಲಸ ಮಾಡಿ. ನೀವು ಮಕ್ಕಳನ್ನು ಸಹ ಸಣ್ಣ ಕೆಲಸಗಳಲ್ಲಿಯೂ ತೊಡಗಿಸಿಕೊಳ್ಳಬಹುದು.  ಒಬ್ಬರೇ ಕೆಲಸ ಮಾಡುತ್ತಿದ್ದೀರಿ ಎಂದಾದರೇ ಸಂಗೀತವನ್ನು ಆಲಿಸುತ್ತಾ ಕ್ಲೀನ್‌ ಮಾಡಿ. ಇದರಿಂದ ಯಾವುದೇ ಬೇಸರ, ಆಯಾಸವಿಲ್ಲದೆ ಕ್ಲೀನಿಂಗ್‌ ಕೆಲಸವೆಲ್ಲಾ ಬೇಗ ಮುಗಿದುಹೋಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗುಟ್ಕಾ, ಪಾನ್ ಮಸಾಲ ನಿಷೇಧ ವಾಪಸ್​ ಪಡೆದಿಲ್ಲ, ಅಡಿಕೆ ಬೆಳೆಗಾರರಿಗೆ ಯಾವುದೇ ಸಮಸ್ಯೆ ಆಗಲ್ಲ ಎಂದು ಖಾದರ್ – Kannada News | Will Not Withdraw Gutka Ban Order Says Minister UT Khader

ಬೆಂಗಳೂರು, (ಆಗಸ್ಟ್ 15): ಕರ್ನಾಟಕದಲ್ಲಿ ನಿಕೋಟಿನ್​​​​ ಯುಕ್ತ ಗುಟ್ಕಾ, ಪಾನ್​​​ ಮಸಾಲ (Gutka And Pan Masala) ನಿಷೇಧಿಸುವ ಬಗ್ಗೆ ಪರ ವಿರೋಧದ ಚರ್ಚೆಗಳು ನಡೆದಿವೆ. ಅಡಿಕೆ ಬೆಳೆಗಾರರ ಮೇಲೆ ಪರಿಣಾಮ ಬೀರಲಿದೆ ಎಂದು ಕೆಲ ಶಾಸಕರು, ಸಿಎಂ ಡಿಕೆ ಶಿವಕುಮಾರ್​​​​​​​ (DK Shivakumar) ಅವರನ್ನ ಭೇಟಿ ಮಾಡಿದ್ದರು. ಇದರ ಬೆನ್ನಲ್ಲೇ ಸಿಎಂ, ಆದೇಶ ವಾಪಸ್​ ತೆಗೆದುಕೊಳ್ಳಲು ಆರೋಗ್ಯ ಇಲಾಖೆ ಆಯುಕ್ತರಿಗೆ ಸೂಚಿಸಿದ್ದರು. ಆದ್ರೆ, ಇದೀಗ ಆರೋಗ್ಯ ಸಚಿವ ಯುಟಿ ಖಾದರ್ (UT Khader), ನಾನು ಆದೇಶ ಮಾಡಿದ್ದು ಮಾತ್ರ, ಅದನ್ನು ವಾಪಸು ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಯುಟಿ ಖಾದರ್, ಪಾನ್ ಮಸಾಲಾದಲ್ಲಿ ನಿಕೋಟಿನ್ ಇರಬಾರದು ಎಂಬ ಆದೇಶ ಜನರ ಆರೋಗ್ಯದ ಹಿತದೃಷ್ಟಿಯಿಂದ ಮಾಡಲಾಗಿದೆ. ಇದರಿಂದಾಗಿ ಅಡಿಕೆಗೆ ಯಾವುದೇ ತೊಂದರೆ ಇಲ್ಲ. ನಮ್ಮ ಇಲಾಖೆ ಮತ್ತು ಸರ್ಕಾರ ಅಡಿಕೆ‌ ಬೆಳೆಗಾರರಿಗೆ, ರೈತರಿಗೆ, ವ್ಯಾಪಾರಿಗಳಿಗೆ ಸಂಪೂರ್ಣ ಬೆಂಬಲ, ಪ್ರೋತ್ಸಾಹ ನೀಡುತ್ತದೆ. ಪಾನ್ ಮಸಾಲದಲ್ಲಿ ನಿಕೋಟಿನ್ ನಿಷೇಧ ಆದೇಶದಿಂದ ಅಡಿಕೆ ಬೆಳೆಗಾರಿಗೆ ಏನೂ ಸಮಸ್ಯೆ ಆಗುವುದಿಲ್ಲ.‌ ನಾನು ಆ ಆದೇಶವನ್ನು ವಾಪಸ್​ ಪಡೆದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ನೋಡಿ: ಆರೋಗ್ಯ ಇಲಾಖೆ ಕಾರ್ಯದರ್ಶಿಗೆ ಸಿಎಂ ಕ್ಲಾಸ್: ಗುಟ್ಕಾ ನಿಷೇಧ ಆದೇಶ ಶೀಘ್ರದಲ್ಲೇ ಹಿಂಪಡೆಯಲು ಸೂಚನೆ

ಅಡಿಕೆ ಬೆಳೆಗಾರರಿಗೆ ತೊಂದರೆ ಕೊಡುವ ಕೆಲಸ ಹಿಂದೆಯೂ ಮಾಡಿಲ್ಲ, ಈಗಲೂ ಮಾಡಲ್ಲ, ಮುಂದೆಯೂ ಮಾಡಲ್ಲ. ಅಡಿಕೆ ಬೆಳೆಗಾರರಿಗೆ ಹಾಗೂ ವ್ಯಾಪಾರಿಗಳಿಗೆ ಈ ತೀರ್ಮಾನದಿಂದ ಬೆಲೆ ಹೆಚ್ಚಾಗುತ್ತದೆ. ಗುಟ್ಕಾಗೆ ನಮ್ಮ ದೇಶದ ಅಡಿಕೆಯನ್ನು ಯಾರೂ ಬಳಕೆ ಮಾಡುವುದಿಲ್ಲ. ನೇಪಾಳ, ಬಾಂಗ್ಲಾದೇಶದಿಂದ ಆಮದು ಮಾಡಿ ಬಳಕೆ ಮಾಡುತ್ತಾರೆ. ಗುಟ್ಕಾ, ನಿಕೊಟಿನ್ ನಿಷೇಧದಿಂದ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ.ಅಂದು ನಾನು ಗುಟ್ಕಾ ನಿಷೇಧ ಮಾಡುವಾಗ ಇದೇ ವಿಚಾರ ಮುನ್ನಲೆಗೆ ಬಂದಿತ್ತು. ಆಗ ನಾನು ಬಲವಾಗಿ ಅದನ್ನು ಸಮರ್ಥಿಸಿಕೊಂಡಿದ್ದೆ, ಸಿಎಂ‌ ಕೂಡಾ ಸಮರ್ಥಿಸಿದ್ದರು. ಅಡಿಕೆ ಬೆಲೆ ಕುಸಿತ ಆಗುವುದಿಲ್ಲ‌ ಎಂದಿದ್ದೆವು‌ . ಮೂರು ತಿಂಗಳ ಬಳಿಕ ಅಡಿಕೆ ಬೆಲೆ ಹೆಚ್ಚಾಗಿತ್ತು. ಹಾಗಾಗಿ ಪಾನ್ ಮಸಾಲದಲ್ಲಿ ನಿಕೋಟಿನ್ ಇರಬಾರದು ಎಂಬ ತೀರ್ಮಾನದಿಂದ ಅಡಿಕೆ ಬೆಳೆಗಾರರಿಗೆ ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ.

ಅಡಿಕೆ ವ್ಯಾಪಾರಿಗಳಿಗೂ ಯಾವುದೇ ತೊಂದರೆ ಇಲ್ಲ . ಮೂರು ತಿಂಗಳು ಸಮಯಾವಕಾಶ ಕೊಟ್ಟು ನೋಡಿ. ಸಿಎಂ ಅವರು ಈ ಬಗ್ಗೆ ಚರ್ಚೆ ಮಾಡಿದ್ದು, ಇದರ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ. ಆರೋಗ್ಯ ದೃಷ್ಟಿಯಿಂದ ಇದು ಉತ್ತಮ ತೀರ್ಮಾನ ಅಂದಿದ್ದಾರೆ. ಅಡಿಕೆ ಬೆಳೆಗಾರರಿಗೂ ತೊಂದರೆ ಆಗಬಾರದು ಎಂದು ಸಿಎಂ ತಿಳಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 5:06 pm, Sat, 15 August 26

Source link

ಅರಣ್ಯ ಸಿಬ್ಬಂದಿ ಗುಂಡೇಟಿಗೆ ಮೂವರು ಬಲಿ: ಘಟನೆಯ ಸ್ಫೋಟಕ ಅಂಶ ಬಿಚ್ಚಿಟ್ಟ ಅರಣ್ಯ ಸಚಿವ ರಾಮಲಿಂಗಾರೆಡ್ಡಿ – Kannada News | Three Killed in Forest Staff Firing: Forest Minister Ramalinga Reddy Reveals Shocking Details of Incident

ಬೆಂಗಳೂರು, ಆಗಸ್ಟ್​​ 15: ಚಾಮರಾಜನಗರದಲ್ಲಿ (chamarajanagar) ಅರಣ್ಯ ಸಿಬ್ಬಂದಿ ನಡೆಸಿದ ಎನ್‌ಕೌಂಟರ್‌ನಲ್ಲಿ ಮೂವರು ಬಲಿಯಾಗಿದ್ದಾರೆ. ಹನೂರು ತಾಲೂಕಿನ ಹೊಳೆದಟ್ಟಿ ಅರಣ್ಯದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ, ಮೂವರು ಸಾವನ್ನಪ್ಪಿದ್ದು (death), ಮೃತರ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ‘ಸಿಎಂ ಡಿಕೆ ಶಿವಕುಮಾರ್​ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದಾರೆ. ಘಟನೆಯ ಸಮಗ್ರ ತನಿಖೆಯ ಬಳಿಕವೇ ಸಂಪೂರ್ಣ ಸತ್ಯಾಂಶ ಹೊರಬರಲಿದೆ’ ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಹೇಳಿದ್ದಾರೆ.

ವರದಿ ಕೈಸೇರಿದ ನಂತರ ಅರಣ್ಯ ಇಲಾಖೆಯ ಸಿಬ್ಬಂದಿ ವಿರುದ್ಧ ಕ್ರಮ: ರಾಮಲಿಂಗಾರೆಡ್ಡಿ

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ‘ಬೆಳಗ್ಗೆ ಕೋಲಾರಕ್ಕೆ ತೆರಳುತ್ತಿದ್ದ ವೇಳೆ ನನಗೆ ಘಟನೆಯ ಮಾಹಿತಿ ಲಭಿಸಿತು. ನಾಲ್ವರು ನಾಡಬಂದೂಕು ಹಿಡಿದು ಇಡೀ ರಾತ್ರಿ ಪ್ರಾಣಿಗಳನ್ನು ಬೇಟೆಯಾಡಿ, ಜಿಂಕೆ ಮಾಂಸವನ್ನು ಸಾಗಿಸುತ್ತಿದ್ದರು. ಈ ವೇಳೆ ಅರಣ್ಯ ಇಲಾಖೆಯ ಸಿಬ್ಬಂದಿ ಶೇಖರಪ್ಪ, ರೋಹಿತ್ ಹಾಗೂ ಶಿವರಾಜ್ ಅವರನ್ನು ತಡೆದಿದ್ದಾರೆ’ ಎಂದರು.

ಎರಡೂ ಕಡೆಯಿಂದ ಫೈರಿಂಗ್

ಇನ್ನು ಈ ವೇಳೆ ‘ಬೇಟೆಗಾರರ ಬಳಿ‌ ಎರಡು ಲೈಸೆನ್ಸ್ ಇಲ್ಲದ ನಾಡಬಂದೂಕು ಇತ್ತು. ಸಿಬ್ಬಂದಿಗಳ ಮೇಲೆ ದಾಳಿಗೆ ಯತ್ನಿಸಿದ್ದಾರೆ. ಈ ಹಂತದಲ್ಲಿ ಎರಡೂ ಕಡೆಯ ನಡುವೆ ಫೈರಿಂಗ್ ನಡೆದಿದ್ದು, ಅಂಟೋನಿಸ್ವಾಮಿ, ಜಾನ್ ಪೀಟರ್ ಹಾಗೂ ಸವಾರಿಯಪ್ಪನ್ ಎಂಬುವವರು ಮೃತಪಟ್ಟಿದ್ದಾರೆ. ಮಹಿಮ್ ದಾಸ್ ಎಂಬಾತ ಸ್ಥಳದಿಂದ ಪರಾರಿಯಾಗಿದ್ದಾನೆ. ಗ್ರಾಮದ ಜನರು ಹೇಳುವುದು ಬೇರೆ ಇದೆ. ನಾಲ್ಕು ಬ್ಯಾಗ್ ಜಿಂಕೆ ಮಾಂಸವನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಚಾಮರಾಜನಗರ ಅರಣ್ಯದಲ್ಲಿ ಎನ್‌ಕೌಂಟರ್: ಮೂವರು ಬಲಿ, DRFO ಕಚೇರಿ ಧ್ವಂಸ

‘ಇನ್ನು ಪ್ರಕರಣದ ಮಧ್ಯಂತರ ತನಿಖಾ ವರದಿ ಕೈಸೇರಿದ ನಂತರ ಅರಣ್ಯ ಇಲಾಖೆಯ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ನಿರ್ಧರಿಸಲಾಗುವುದು. ಹಾಗೆಯೇ ತನಿಖಾ ವರದಿಯ ಆಧಾರದ ಮೇಲೆ ಮೃತರ ಕುಟುಂಬಕ್ಕೆ ಪರಿಹಾರ ನೀಡುವ ವಿಚಾರವಾಗಿಯೂ ಚರ್ಚೆ ನಡೆಸಲಾಗುವುದು’ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಇಂಡೋನೇಷ್ಯಾದಲ್ಲಿ 7.7 ತೀವ್ರತೆಯ ಭೂಕಂಪ; ಮೃತರ ಸಂಖ್ಯೆ 38ಕ್ಕೆ ಏರಿಕೆ – Kannada News | 7.7 magnitude earthquake hits in Indonesia 38 dead in tsunami warning issued

ಬಾಲಿ, ಆಗಸ್ಟ್ 15: ಇಂಡೋನೇಷ್ಯಾದಲ್ಲಿ (Indonesia Earthquake) ಸಂಭವಿಸಿದ 7.7 ತೀವ್ರತೆಯ ಭೀಕರ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ. ಇಂದು ಮುಂಜಾನೆ ಉಂಟಾದ ಈ ಪ್ರಬಲ ಭೂಕಂಪದ ಕುರಿತು ಸ್ಥಳೀಯ ರಕ್ಷಣಾ ಸಂಸ್ಥೆಯನ್ನು ಉಲ್ಲೇಖಿಸಿ ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಸಮುದ್ರದಾಳದಲ್ಲಿ ಸಂಭವಿಸಿದ ಈ ಭೂಕಂಪದ ನಂತರ ಆಗ್ನೇಯ ಏಷ್ಯಾದ ಇಂಡೋನೇಷ್ಯಾ ದೇಶದ ಹಲವು ಭಾಗಗಳಲ್ಲಿ ಸುನಾಮಿ ಅಲೆಗಳು ಕಂಡುಬಂದವು.

ಬಂದರು ನಗರಿ ಮಾಉಮೇರೆಯಲ್ಲಿ (Maumere) ರಕ್ಷಣಾ ಸಿಬ್ಬಂದಿ 38 ಶವಗಳನ್ನು ಹೊರಗೆ ತಂದಿದ್ದಾರೆ ಎಂದು ಎಎಫ್‌ಪಿ (AFP) ವರದಿ ಮಾಡಿದೆ. ಜೊತೆಗೆ 13 ಜನರು ಗಾಯಗೊಂಡಿದ್ದು, ಕಟ್ಟಡದ ಅವಶೇಷಗಳ ಅಡಿಯಲ್ಲಿ ಇಬ್ಬರು ಸಿಲುಕಿಕೊಂಡಿದ್ದಾರೆ. ಮಾಉಮೇರೆಯು ಪೂರ್ವ ಇಂಡೋನೇಷ್ಯಾದ ಫ್ಲೋರೆಸ್ ದ್ವೀಪದಲ್ಲಿರುವ ಸಿಕ್ಕಾ ರೇಜೆನ್ಸಿಯ ಪ್ರಮುಖ ಪಟ್ಟಣವಾಗಿದೆ.

ಇದನ್ನೂ ಓದಿ: ಕೊಲಂಬಿಯಾ ಭೂಕಂಪದ ಮೃತರ ಸಂಖ್ಯೆ 224ಕ್ಕೆ ಏರಿಕೆ; 3,000ಕ್ಕೂ ಹೆಚ್ಚು ಜನ ನಾಪತ್ತೆ

ಭೂಕಂಪದ ಕೇಂದ್ರಬಿಂದುವಿಗೆ ಅತ್ಯಂತ ಹತ್ತಿರದಲ್ಲಿದ್ದ ನಗೆಕಿಯೊ ಪ್ರದೇಶದಲ್ಲಿ ಸಂಪರ್ಕ ವ್ಯವಸ್ಥೆ ಸಂಪೂರ್ಣವಾಗಿ ಕಡಿತಗೊಂಡಿರುವುದರಿಂದ ರಕ್ಷಣಾ ತಂಡಗಳಿಗೆ ಆ ಸ್ಥಳವನ್ನು ತಲುಪಲು ಸಾಧ್ಯವಾಗಿಲ್ಲ. ಭೂಕುಸಿತದಿಂದಾಗಿ ರಸ್ತೆ ಸಂಚಾರ ಬಂದ್ ಆಗಿದ್ದು, ಮತ್ತೊಂದು ರಕ್ಷಣಾ ತಂಡವು ದೋಣಿಯ ಮೂಲಕ ಆ ಪ್ರದೇಶವನ್ನು ತಲುಪಲು ಯತ್ನಿಸುತ್ತಿದೆ.

ನಗೆಕಿಯೊ ಪ್ರದೇಶದಲ್ಲಿ ಸುಮಾರು 2,000 ಜನರು ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದಾರೆ. ಹಾಗೆಯೇ ಹಲವಾರು ಮನೆಗಳು, ಗೋದಾಮುಗಳು ಮತ್ತು ಸರ್ಕಾರಿ ಕಟ್ಟಡಗಳು ಹಾನಿಗೊಳಗಾಗಿವೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Exit mobile version