“ನಮ್ಮ ಶಾಲೆಗೆ ರಸ್ತೆ ಮಾಡಿಸಿಕೊಡಿ”: ಯಡ್ರಾಮಿಯಲ್ಲಿ ಅಧಿಕಾರಿಗಳ ವಿರುದ್ಧ ಶಾಲಾ ಮಕ್ಕಳ ಆಕ್ರೋಶ – Kannada News | Vastari School Road Negligence: Kalaburagi Students Face Muddy Nightmare, Seek Solution

ಕಲಬುರಗಿ, ಜು.31: ಕತ್ತೆತ್ತಿ ಸಾಧನೆ ಮಾಡಬೇಕಾದ ವಯಸ್ಸಿನಲ್ಲಿ, ಕಾಲಿಡಲು ಸೂಕ್ತ ರಸ್ತೆಯಿಲ್ಲದೆ ಶಾಲಾ ಮಕ್ಕಳು ಕೆಸರಿನ ಹಾದಿಯಲ್ಲೇ ಸರ್ಕಸ್ ಮಾಡುತ್ತಾ ಶಾಲೆಗೆ ತೆರಳುತ್ತಿರುವ ಆಕ್ರೋಶಜನಕ ಘಟನೆ ಕಲಬುರಗಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ವಸ್ತಾರಿ ಗ್ರಾಮದಲ್ಲಿ ಸೂಕ್ತ ರಸ್ತೆ ಸೌಕರ್ಯವಿಲ್ಲದೆ, ವಿದ್ಯಾರ್ಥಿಗಳು ಪ್ರತಿದಿನ ಕೈಯಲ್ಲಿ ಚಪ್ಪಲಿ ಹಿಡಿದುಕೊಂಡು ಮುಖದಲ್ಲಿ ಬೇಸರ ಹೊತ್ತು ಕೆಸರಿನಲ್ಲೇ ನಡೆದುಕೊಂಡು ಶಾಲೆಗೆ ತೆರಳುವ ದುಸ್ಥಿತಿ ನಿರ್ಮಾಣವಾಗಿದೆ. ವಸ್ತಾರಿ ಗ್ರಾಮದ ಹೊರವಲಯದಲ್ಲಿ ಇತ್ತೀಚೆಗಷ್ಟೇ ನೂತನವಾಗಿ ಪ್ರೌಢಶಾಲಾ ಕಟ್ಟಡವನ್ನು ನಿರ್ಮಿಸಲಾಗಿದೆ. ಆದರೆ ಶಾಲೆಯನ್ನು ಆರಂಭಿಸಿದ ಆಡಳಿತ ಮಂಡಳಿ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಶಾಲೆ ಸಂಪರ್ಕಿಸುವ ರಸ್ತೆಯನ್ನು ನಿರ್ಮಿಸಲು ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ. ಮಳೆಗಾಲದ ಹಿನ್ನೆಲೆಯಲ್ಲಿ ಇಡೀ ಹಾದಿ ಕೆಸರು ಗದ್ದೆಯಂತಾಗಿದ್ದು, ಶಾಲಾ ಸಮವಸ್ತ್ರ (Uniform) ಹಾಗೂ ಪುಸ್ತಕದ ಚೀಲಗಳನ್ನು ಹೊತ್ತುಕೊಂಡು ಬರುವ ವಿದ್ಯಾರ್ಥಿಗಳು ಕಾಲಿಗೆ ಹಾಕಿದ ಚಪ್ಪಲಿ ಕೆಸರಿನಲ್ಲಿ ಹೂತುಹೋಗುತ್ತದೆ ಎಂದು ಚಪ್ಪಲಿಗಳನ್ನು ಕೈಯಲ್ಲಿ ಹಿಡಿದುಕೊಂಡೇ ಕೆಸರಿನಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. “ನಮ್ಮ ಶಾಲೆಗೆ ಸೂಕ್ತ ರಸ್ತೆ ನಿರ್ಮಿಸಿಕೊಡಿ, ನಾವು ನೆಮ್ಮದಿಯಿಂದ ಪಾಠ ಕೇಳುವಂತೆ ಮಾಡಿ” ಎಂದು ಆಕ್ರೋಶಗೊಂಡ ವಿದ್ಯಾರ್ಥಿಗಳು ಮತ್ತು ಪೋಷಕರು ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಶಾಪ ಹಾಕುತ್ತಾ ಆಗ್ರಹಿಸಿದ್ದಾರೆ. ಗ್ರಾಮೀಣ ಭಾಗದ ಶಿಕ್ಷಣ ಹಾಗೂ ಮೂಲಸೌಕರ್ಯದ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನಾಡುವ ಜನಪ್ರತಿನಿಧಿಗಳು ಈ ಕಡೆ ತಕ್ಷಣ ಗಮನಹರಿಸಿ, ವಿದ್ಯಾರ್ಥಿಗಳಿಗೆ ಸೂಕ್ತ ರಸ್ತೆ ಸಂಪರ್ಕ ಕಲ್ಪಿಸಬೇಕಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

2027 ರ ಏಕದಿನ ವಿಶ್ವಕಪ್​ಗೆ 12 ನಗರಗಳ ಆತಿಥ್ಯ; ಐಸಿಸಿ ಅಧಿಕೃತ ಪ್ರಕಟಣೆ – Kannada News | 2027 ODI Cricket World Cup Venues: SA, Zim, Namibia Host Cities Revealed!

2027 ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ಗೆ ಮೂರು ದೇಶಗಳು ಆತಿಥ್ಯವಹಿಸುತ್ತಿವೆ ಎಂಬುದು ಈ ಹಿಂದೆಯೇ ಖಚಿತವಾಗಿತ್ತು. ಇದೀಗ ಈ ಮೂರು ದೇಶಗಳ ಯಾವ್ಯಾವ ನಗರಗಳು ಈ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಆತಿಥ್ಯವಹಿಸುತ್ತಿವೆ ಎಂಬುದನ್ನು ಐಸಿಸಿ ಇಂದು ಬಹಿರಂಗಪಡಿಸಿದೆ. ಮುಂದಿನ ಏಕದಿನ ವಿಶ್ವಕಪ್ ಆಫ್ರಿಕಾ ಖಂಡದ ಮೂರು ದೇಶಗಳಾದ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯುತ್ತಿದೆ. ಈ ಮೂರು ದೇಶಗಳ ಒಟ್ಟು 12 ನಗರಗಳಲ್ಲಿ 54 ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಇದರಲ್ಲಿ ಅತಿ ಹೆಚ್ಚು ಪಂದ್ಯಗಳು ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿವೆ.

12 ನಗರಳಲ್ಲಿ ಆಯೋಜನೆ

ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿರುವ 12 ಸ್ಥಳಗಳನ್ನು ಬಹಿರಂಗಪಡಿಸಲಾಯಿತು. ಇವುಗಳಲ್ಲಿ, ಜೋಹಾನ್ಸ್‌ಬರ್ಗ್ ಮತ್ತು ಕೇಪ್ ಟೌನ್ ಸೇರಿದಂತೆ ಎಂಟು ಸ್ಥಳಗಳು ದಕ್ಷಿಣ ಆಫ್ರಿಕಾದಲ್ಲಿದ್ದರೆ, ಜಿಂಬಾಬ್ವೆಯ ಮೂರು ನಗರಗಳು ವಿಶ್ವಕಪ್ ಪಂದ್ಯಗಳನ್ನು ಆಯೋಜಿಸುತ್ತವೆ. ನಮೀಬಿಯಾದ ಒಂದು ನಗರದಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿವೆ.

24 ವರ್ಷಗಳ ನಂತರ ಏಕದಿನ ವಿಶ್ವಕಪ್

2027 ರ ವಿಶ್ವಕಪ್ ಅಕ್ಟೋಬರ್ 4 ರಿಂದ ನವೆಂಬರ್ 21, 2027 ರವರೆಗೆ ನಡೆಯುವ ನಿರೀಕ್ಷೆಯಿದೆ. ಈ ಬಾರಿಯ ವಿಶ್ವಕಪ್​ನ ವಿಶೇಷತೆ ಏನೆಂದರೆ 24 ವರ್ಷಗಳ ನಂತರ ಪುರುಷರ ಏಕದಿನ ವಿಶ್ವಕಪ್ ಆಫ್ರಿಕಾ ಖಂಡದಲ್ಲಿ ನಡೆಯುತ್ತಿದೆ. ಇದಕ್ಕೂ ಮೊದಲು ಅಂದರೆ 2003 ರಲ್ಲಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ಕೀನ್ಯಾದಲ್ಲಿ ಏಕದಿನ ವಿಶ್ವಕಪ್ ಪಂದ್ಯಾವಳಿ ನಡೆದಿತ್ತು. ಆದಾಗ್ಯೂ, ಈ ಬಾರಿ ಕೀನ್ಯಾ ಬದಲಿಗೆ ನಮೀಬಿಯಾದಲ್ಲಿ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ.

ಅದರಂತೆ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್, ಸೆಂಚುರಿಯನ್, ಡರ್ಬನ್, ಗ್ಕೆಬರ್ಹಾ, ಕುಗೊಂಪೊ ಸಿಟಿ, ಕೇಪ್ ಟೌನ್, ಪಾರ್ಲ್ ಮತ್ತು ಬ್ಲೂಮ್‌ಫಾಂಟೈನ್​ನಲ್ಲಿ 2027 ರ ವಿಶ್ವಕಪ್‌ ಪಂದ್ಯಗಳು ನಡೆಯಲಿವೆ. ಫೈನಲ್ ಪಂದ್ಯವು ವಾಂಡರರ್ಸ್ ಅಥವಾ ನ್ಯೂಲ್ಯಾಂಡ್ಸ್‌ನಲ್ಲಿ ನಡೆಯಲಿದೆ. ಜಿಂಬಾಬ್ವೆಯ ಹರಾರೆ, ಬುಲವಾಯೊ ಮತ್ತು ವಿಕ್ಟೋರಿಯಾ ಫಾಲ್ಸ್ 7 ರಿಂದ 10 ಪಂದ್ಯಗಳನ್ನು ಆಯೋಜಿಸುತ್ತವೆ. ಉಳಿದಂತೆ ನಮೀಬಿಯಾದ ವಿಂಡ್‌ಹೋಕ್ ಮೈದಾನದಲ್ಲಿ ಮೂರು ಪಂದ್ಯಗಳು ನಡೆಯಲಿವೆ. ಹಾಗೆಯೇ ಬೆನೋನಿ ಮತ್ತು ಪೊಚೆಫ್‌ಸ್ಟ್ರೂಮ್‌ ಕ್ರೀಡಾಂಗಣಗಳನ್ನು ಅಭ್ಯಾಸಕ್ಕಾಗಿ ಬಳಸುವುದರ ಜೊತೆಗೆ ವಿಶ್ವಕಪ್ ಅರ್ಹತಾ ಪಂದ್ಯಗಳನ್ನು ಸಹ ಇಲ್ಲಿ ಆಯೋಜಿಸುವ ಸಾಧ್ಯತೆಯಿದೆ.

ಪಂದ್ಯಗಳು ನಡೆಯಲಿರುವ ನಗರಗಳ ಪಟ್ಟಿ

ದಕ್ಷಿಣ ಆಫ್ರಿಕಾ

  • ವಾಂಡರರ್ಸ್ ಕ್ರೀಡಾಂಗಣ, ಜೋಹಾನ್ಸ್‌ಬರ್ಗ್ (ದಕ್ಷಿಣ ಆಫ್ರಿಕಾ)
  • ಸೆಂಚುರಿಯನ್ ಕ್ರೀಡಾಂಗಣ, ಶ್ವಾನೆ (ದಕ್ಷಿಣ ಆಫ್ರಿಕಾ)
  • ನ್ಯೂಲ್ಯಾಂಡ್ಸ್ ಕ್ರಿಕೆಟ್ ಮೈದಾನ, ಕೇಪ್ ಟೌನ್ (ದಕ್ಷಿಣ ಆಫ್ರಿಕಾ)
  • ಕಿಂಗ್ಸ್‌ಮೀಡ್ ಕ್ರಿಕೆಟ್ ಮೈದಾನ, ಡರ್ಬನ್ (ದಕ್ಷಿಣ ಆಫ್ರಿಕಾ)
  • ಸೇಂಟ್ ಜಾರ್ಜ್ ಪಾರ್ಕ್, ಗ್ಬೆರೆಖಾ (ದಕ್ಷಿಣ ಆಫ್ರಿಕಾ)
  • ಮಾಗೌಂಗ್ ಓವಲ್, ಬ್ಲೂಮ್‌ಫಾಂಟೈನ್ (ದಕ್ಷಿಣ ಆಫ್ರಿಕಾ)
  • ಬೋಲ್ಯಾಂಡ್ ಪಾರ್ಕ್, ಪಾರ್ಲ್ (ದಕ್ಷಿಣ ಆಫ್ರಿಕಾ)
  • ಬಫಲೋ ಪಾರ್ಕ್, ಕುಗೊಂಪೊ ನಗರ – ಪೂರ್ವ ಲಂಡನ್ (ದಕ್ಷಿಣ ಆಫ್ರಿಕಾ)

ಜಿಂಬಾಬ್ವೆ

  • ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ (ಜಿಂಬಾಬ್ವೆ)
  • ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ (ಜಿಂಬಾಬ್ವೆ)
  • ಫೇಲ್ ಮೋಸಿ-ಓ-ತುನ್ಯಾ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, (ಜಿಂಬಾಬ್ವೆ)

ನಮೀಬಿಯಾ

  • ನಮೀಬಿಯಾ ಕ್ರಿಕೆಟ್ ಮೈದಾನ, ವಿಂಡ್‌ಹೋಕ್ (ನಮೀಬಿಯಾ)

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೆಂಪು ಬಾರ್ಡರ್​ನ ಬಿಳಿ ಸೀರೆ, ಹಣೆಯ ಮೇಲೆ ಬಿಂದಿ, ಮುಖದಲ್ಲಿ ನಗು, 19 ವರ್ಷಗಳ ಬಳಿಕ ಕೋಲ್ಕತ್ತಾಗೆ ಬಂದ ತಸ್ಲೀಮಾ ನಸ್ರೀನ್ – Kannada News | Taslima Nasreen Returns to Kolkata After 19 Years: A Fight for Freedom of Speech

ಕೋಲ್ಕತ್ತಾ, ಜುಲೈ 31: ಪ್ರಸಿದ್ಧ ಬಾಂಗ್ಲಾದೇಶಿ ಲೇಖಕಿ ಹಾಗೂ ಮಾನವ ಹಕ್ಕುಗಳ ಹೋರಾಟಗಾರ್ತಿ ತಸ್ಲೀಮಾ ನಸ್ರೀನ್ (Taslima Nasreen) ಅವರು ಸುಮಾರು 19 ವರ್ಷಗಳ ನಂತರ ಕೋಲ್ಕತ್ತಾಗೆ ಮರಳಿದ್ದಾರೆ. 2007 ರಲ್ಲಿ ಅವರ ‘ದ್ವಿಖಂಡಿತೋ’ ಪುಸ್ತಕದ ವಿರುದ್ಧ ಭಾರಿ ಪ್ರತಿಭಟನೆ ಹಾಗೂ ಬೆದರಿಕೆಗಳು ವ್ಯಕ್ತವಾದ ನಂತರ ಅವರು ನಗರವನ್ನು ತೊರೆಯಬೇಕಾಗಿತ್ತು. ಇದೀಗ ಪಶ್ಚಿಮ ಬಂಗಾಳದಲ್ಲಿ ಸನ್ನಿವೇಶ ಬದಲಾದ ಬೆನ್ನಲ್ಲೇ, ಆ ಆಗಸ್ಟ್ 1 ರಂದು ಕೋಲ್ಕತ್ತಾದ ರವೀಂದ್ರ ಸದನದಲ್ಲಿ ನಡೆಯಲಿರುವ ಸಾಹಿತ್ಯಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಆಗಮಿಸಿದ್ದು, ಅವರಿಗೆ ಭವ್ಯ ಸ್ವಾಗತ ದೊರೆತಿದೆ.

“ನಾನು ಸಂತೋಷ ಮತ್ತು ನೋವು ಎರಡನ್ನೂ ಹೊತ್ತು ಹಿಂತಿರುಗಿದ್ದೇನೆ. ಕೋಲ್ಕತ್ತಾ ನನಗೆ ಕೇವಲ ನಗರವಲ್ಲ; ಅದು ನನ್ನ ಮನೆ, ಸ್ನೇಹಿತರು ಮತ್ತು ಭಾವನೆಗಳು ನೆಲೆಸಿದ್ದ ಸ್ಥಳವಾಗಿತ್ತು. ನನ್ನ ಜೀವನದ 19 ವರ್ಷಗಳನ್ನು ನನ್ನಿಂದ ಕಸಿದುಕೊಳ್ಳಲಾಯಿತು. ಕಳೆದುಹೋದ ಆ ವರ್ಷಗಳನ್ನು ಯಾರೂ ಹಿಂತಿರುಗಿಸಲು ಸಾಧ್ಯವಿಲ್ಲ. ಆದರೂ ನಾನು ಇಲ್ಲಿಗೆ ಅತಿಥಿಯಾಗಿ ಬಂದಿಲ್ಲ, ಬಂಗಾಳದ ಭಾಗವಾಗಿಯೇ ಮರಳಿದ್ದೇನೆ” ಎಂದಿದ್ದಾರೆ.

ಸಿಎಂ ಸುವೇಂದು ಅಧಿಕಾರಿಗೆ ಧನ್ಯವಾದ: ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸಿ ತಮಗೆ ಸೂಕ್ತ ಭದ್ರತೆ ಒದಗಿಸಿದ್ದಕ್ಕಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಹಾಗೂ ಸಂಘಟಕರಿಗೆ ತಸ್ಲೀಮಾ ಕೃತಜ್ಞತೆ ಸಲ್ಲಿಸಿದರು. ಆಗಸ್ಟ್ 1 ರಂದು ನಡೆಯಲಿರುವ ವೇದಿಕೆಯಲ್ಲಿ ಸಿಎಂ ಸುವೇಂದು ಅಧಿಕಾರಿ ಮತ್ತು ಖ್ಯಾತ ಲೇಖಕ ಶಿರ್ಷೇಂದು ಮುಖೋಪಾಧ್ಯಾಯ ಅವರೊಂದಿಗೆ ಅವರು ವೇದಿಕೆ ಹಂಚಿಕೊಳ್ಳಲಿದ್ದಾರೆ.

ವಾಕ್ ಸ್ವಾತಂತ್ರ್ಯ ಮತ್ತು ಲೇಖಕರ ರಕ್ಷಣೆ:
ಮೂಲಭೂತ ಹಕ್ಕುಗಳ ರಕ್ಷಣೆ: “ಬರಹಗಾರರ ಸ್ವಾತಂತ್ರ್ಯ ಮತ್ತು ಸುರಕ್ಷತೆಯು ಯಾವುದೇ ಸರ್ಕಾರದ ಕೃಪೆ ಅಥವಾ ಧಾರ್ಮಿಕ ಗುಂಪುಗಳ ಅನುಮತಿಯನ್ನು ಅವಲಂಬಿಸಿರಬಾರದು. ಭಿನ್ನಾಭಿಪ್ರಾಯಗಳನ್ನು ರಕ್ಷಿಸುವುದೇ ನಿಜವಾದ ವಾಕ್ ಸ್ವಾತಂತ್ರ್ಯ” ಎಂದು ತಸ್ಲೀಮಾ ಪ್ರತಿಪಾದಿಸಿದ್ದಾರೆ.

ಬಾಂಗ್ಲಾದೇಶದಿಂದ ಗಡಿಪಾರು: ಧರ್ಮ, ಮುಸ್ಲಿಂ ಸಮುದಾಯದಲ್ಲಿ ಮಹಿಳಾ ಹಕ್ಕುಗಳು ಹಾಗೂ ಜಾತ್ಯತೀತತೆಯ ಕುರಿತು ಕಠಿಣವಾಗಿ ಬರೆಯುತ್ತಿದ್ದ ತಸ್ಲೀಮಾ ನಸ್ರೀನ್ ಅವರಿಗೆ ಮೂಲಭೂತವಾದಿಗಳಿಂದ ಜೀವ ಬೆದರಿಕೆ ಬಂದಿದ್ದರಿಂದ 1994ರಲ್ಲಿ ಬಾಂಗ್ಲಾದೇಶದಿಂದ ಗಡಿಪಾರು ಮಾಡಲಾಗಿತ್ತು. 2007ರಲ್ಲಿ ತೀವ್ರ ಧಾರ್ಮಿಕ ಪ್ರತಿಭಟನೆಗಳು ಎದುರಾದಾಗ ಅವರು ಕೋಲ್ಕತ್ತಾ ತೊರೆದು ದೆಹಲಿಗೆ ತೆರಳಬೇಕಾಯಿತು. 2007 ರ ನಂತರ ಪ್ರಥಮ ಬಾರಿಗೆ ಅವರು ಕೋಲ್ಕತ್ತಾದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

37 ಸರ್ಕಾರಿ ಪಿಯು ಕಾಲೇಜುಗಳಲ್ಲಿ ಈ ವರ್ಷ ಅಡ್ಮಿಷನೇ ಆಗಿಲ್ಲ! 57 ಕಾಲೇಜುಗಳಲ್ಲಿ ಒಂದಂಕಿ ದಾಖಲಾತಿ – Kannada News | 37 Karnataka Government PU Colleges Record Zero Admissions This Year

ಸರ್ಕಾರಿ ಕಾಲೇಜು (ಸಾಂದರ್ಭಿಕ ಚಿತ್ರ)Image Credit source: tv9

ಬೆಂಗಳೂರು, ಜುಲೈ 31: ಕರ್ನಾಟಕದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ (PU College) ಬಗ್ಗೆ ವಿದ್ಯಾರ್ಥಿಗಳ ಆಸಕ್ತಿ ಕಡಿಮೆಯಾಗುತ್ತಿರುವುದು ಅಂಕಿ-ಅಂಶಗಳಿಂದ ಬಹಿರಂಗವಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 37 ಸರ್ಕಾರಿ ಪಿಯು ಕಾಲೇಜುಗಳಲ್ಲಿ ಒಬ್ಬ ವಿದ್ಯಾರ್ಥಿಯೂ ಪ್ರವೇಶ ಪಡೆದಿಲ್ಲ. ಮತ್ತೊಂದೆಡೆ, 57 ಕಾಲೇಜುಗಳಲ್ಲಿ 1ರಿಂದ 10ರೊಳಗೆ, ಅಂದರೆ ಒಂದಂಕಿ ದಾಖಲಾತಿ ಮಾತ್ರ ವರದಿಯಾಗಿದೆ. ವಿದ್ಯಾರ್ಥಿಗಳನ್ನು ಸರ್ಕಾರಿ ಪಿಯು ಕಾಲೇಜುಗಳತ್ತ ಸೆಳೆಯುವ ಉದ್ದೇಶದಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಈ ಬಾರಿ ‘ಲೇಟ್ ಅಡ್ಮಿಷನ್ ಫೀಸ್’ ರದ್ದುಪಡಿಸಿದ್ದು, ಪ್ರವೇಶದ ಗಡುವನ್ನು ಜುಲೈ 31ರವರೆಗೆ ವಿಸ್ತರಿಸಿದೆ.

ಮಂಡ್ಯ, ತುಮಕೂರಿನಲ್ಲಿ ತಲಾ 5 ಕಾಲೇಜು

ಶೂನ್ಯ ಪ್ರವೇಶ ದಾಖಲಿಸಿರುವ 37 ಕಾಲೇಜುಗಳ ಪೈಕಿ ಮಂಡ್ಯ ಮತ್ತು ತುಮಕೂರು ಜಿಲ್ಲೆಗಳು ತಲಾ ಐದು ಕಾಲೇಜುಗಳೊಂದಿಗೆ ಅಗ್ರಸ್ಥಾನದಲ್ಲಿವೆ. ಶಿವಮೊಗ್ಗ ಮತ್ತು ಬೆಂಗಳೂರು ದಕ್ಷಿಣದಲ್ಲಿ ತಲಾ ನಾಲ್ಕು ಕಾಲೇಜುಗಳಿವೆ. ಬೆಳಗಾವಿ, ಚಿಕ್ಕಮಗಳೂರು ಮತ್ತು ದಾವಣಗೆರೆಯಲ್ಲಿ ತಲಾ ಮೂರು ಕಾಲೇಜುಗಳು ಶೂನ್ಯ ಪ್ರವೇಶ ದಾಖಲಿಸಿವೆ. ಬೆಂಗಳೂರು ಉತ್ತರ, ಚಿಕ್ಕಬಳ್ಳಾಪುರ ಹಾಗೂ ಹಾಸನದಲ್ಲಿ ತಲಾ ಎರಡು ಕಾಲೇಜುಗಳಿವೆ.

ಉಡುಪಿ, ಮೈಸೂರು, ದಕ್ಷಿಣ ಕನ್ನಡ ಹಾಗೂ ಬೆಂಗಳೂರು ಕೇಂದ್ರ ಶೈಕ್ಷಣಿಕ ಜಿಲ್ಲೆಗಳಲ್ಲೂ ತಲಾ ಒಂದು ಸರ್ಕಾರಿ ಪಿಯು ಕಾಲೇಜಿನಲ್ಲಿ ಯಾವುದೇ ಅಡ್ಮಿಷನ್ ಆಗಿಲ್ಲ. ಫಲಿತಾಂಶಗಳಲ್ಲಿ ರಾಜ್ಯದಲ್ಲೇ ಉತ್ತಮ ಸಾಧನೆ ಮಾಡುವ ಉಡುಪಿ ಜಿಲ್ಲೆಯಲ್ಲೂ ಇಂತಹ ಕಾಲೇಜು ಇರುವುದು ಗಮನಾರ್ಹವಾಗಿದೆ.

57 ಕಾಲೇಜುಗಳಲ್ಲಿ ಒಂದಂಕಿ ಪ್ರವೇಶ

ಶೂನ್ಯ ಪ್ರವೇಶದ ಜೊತೆಗೆ ರಾಜ್ಯದ 57 ಸರ್ಕಾರಿ ಪಿಯು ಕಾಲೇಜುಗಳಲ್ಲಿ ಕೇವಲ 1ರಿಂದ 10 ವಿದ್ಯಾರ್ಥಿಗಳಷ್ಟೇ ದಾಖಲಾಗಿದ್ದಾರೆ. ಈ ಪಟ್ಟಿಯಲ್ಲಿ ಹಾಸನ ಜಿಲ್ಲೆ ಏಳು ಕಾಲೇಜುಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಉಡುಪಿ ಮತ್ತು ಬೀದರ್‌ನಲ್ಲಿ ತಲಾ ಆರು, ಕಲಬುರಗಿಯಲ್ಲಿ ಐದು ಕಾಲೇಜುಗಳು ಒಂದಂಕಿ ಪ್ರವೇಶ ದಾಖಲಿಸಿವೆ.

ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೂನ್ಯ ಪ್ರವೇಶ ಹೊಂದಿರುವ ಕಾಲೇಜುಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕ ಭರತ್ ಎಸ್. ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಕೆಲವು ಪ್ರದೇಶಗಳಲ್ಲಿ ಎರಡು-ಮೂರು ಸರ್ಕಾರಿ ಪಿಯು ಕಾಲೇಜುಗಳು ಸುತ್ತಮುತ್ತಲಿನಲ್ಲಿರುವುದರಿಂದ ವಿದ್ಯಾರ್ಥಿಗಳ ಪ್ರವೇಶ ಒಂದು ಕಾಲೇಜಿನತ್ತ ಹೆಚ್ಚು ಕೇಂದ್ರೀಕೃತವಾಗುತ್ತಿದೆ. ಇದರಿಂದ ಕೆಲವು ಕಾಲೇಜುಗಳಲ್ಲಿ ಪ್ರವೇಶ ಶೂನ್ಯವಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.

ಶೂನ್ಯ ಪ್ರವೇಶ ಹೊಂದಿರುವ 37 ಕಾಲೇಜುಗಳ ಪೈಕಿ 15 ಕಾಲೇಜುಗಳು ಪ್ರಸಕ್ತ ವರ್ಷವೇ ಮಂಜೂರಾಗಿರುವ ಹೊಸ ಕಾಲೇಜುಗಳು. ಹೊಸದಾಗಿ ಆರಂಭವಾಗಿರುವುದರಿಂದ ವಿದ್ಯಾರ್ಥಿಗಳನ್ನು ಆಕರ್ಷಿಸಲು ಸ್ವಲ್ಪ ಸಮಯ ಬೇಕಾಗಬಹುದು ಎಂದು ಇಲಾಖೆ ತಿಳಿಸಿದೆ.

ಖಾಸಗಿ ಕಾಲೇಜುಗಳ ಹೆಚ್ಚಳವೂ ಕಾರಣ?

ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶ ಕಡಿಮೆಯಾಗಲು ಖಾಸಗಿ ಪಿಯು ಕಾಲೇಜುಗಳ ಹೆಚ್ಚಳವೂ ಒಂದು ಕಾರಣ ಎಂದು ಇಲಾಖೆಯ ಮೂಲಗಳು ಅಭಿಪ್ರಾಯಪಟ್ಟಿವೆ. ಖಾಸಗಿ ಕಾಲೇಜುಗಳಲ್ಲಿ ಉತ್ತಮ ಮೂಲಸೌಕರ್ಯ ಇರುವುದರಿಂದ ವಿದ್ಯಾರ್ಥಿಗಳು ಅತ್ತ ಆಕರ್ಷಿತರಾಗುತ್ತಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಲೋಕಾಯುಕ್ತ ಇಲಾಖೆಯಲ್ಲಿ ಉದ್ಯೋಗವಕಾಶ; ಪರೀಕ್ಷೆಯಿಲ್ಲದೆ ನೇರ ನೇಮಕಾತಿ, ಪಿಯುಸಿ ಆಗಿದ್ರೆ ಸಾಕು

ಸರ್ಕಾರಿ ಪಿಯು ಕಾಲೇಜುಗಳ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ. ಸರ್ಕಾರಿ ಕಾಲೇಜುಗಳು ಇರುವ ಪ್ರದೇಶಗಳಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಖಾಸಗಿ ಕಾಲೇಜುಗಳಿಗೆ ಅನುಮತಿ ನೀಡುವುದನ್ನು ನಿಯಂತ್ರಿಸಬೇಕು ಎಂಬ ಅಭಿಪ್ರಾಯವೂ ಕೇಳಿಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

KRS ಬಳಿ ಭಾರಿ ಹೈಡ್ರಾಮಾ: ಡ್ಯಾಂ ಮುತ್ತಿಗೆಗೆ ಯತ್ನಿಸಿದ ಬಿಜೆಪಿಗರು ಪೊಲೀಸ್​​ ವಶಕ್ಕೆ

ಮಂಡ್ಯ, ಜುಲೈ 31: ತಮಿಳುನಾಡಿಗೆ ನೀರು ಹರಿಸುವಂತೆ CWMA ಆದೇಶ ಖಂಡಿಸಿ ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಕೆಆರ್​ಎಸ್​ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಲಾಶಯಕ್ಕೆ ಮುತ್ತಿಗೆ ಹಾಕಲು ಮುಂದಾದ ಬಿಜೆಪಿ ನಾಯಕರು, ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದು, ಎಲ್ಲರನ್ನೂ ವಾಹನದಲ್ಲಿ ತುಂಬಿಸಿ ಕರೆದೊಯ್ದಿದ್ದಾರೆ. ಪ್ರತಿಭಟನೆಯಲ್ಲಿ ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ, ವಿಪಕ್ಷ ನಾಯಕ ಆರ್​.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ​ಸೇರಿ ಪ್ರಮುಖರು ಭಾಗಿಯಾಗಿದ್ದರು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸಂಪೂರ್ಣ ಸ್ವಂತವಾಗಿ ಟ್ರಿಲಿಯನ್ ಪ್ಯಾರಾಮೀಟರ್ ಎಐ ಮಾಡಲ್ ಕಟ್ಟುತ್ತಿರುವ ಸರ್ವಂ; ಇದು ಭಾರತಕ್ಕೆ ಹೊಸ ಶಕ್ತಿ – Kannada News | Sarvam building 1 trillion parameter AI model, eyes beyond foundational model

ಇತ್ತೀಚೆಗೆ ನಡೆದ ಎಐ ಕಾರ್ಯಕ್ರಮವೊಂದರಲ್ಲಿ ಸರ್ವಂ ಪ್ರಸ್ತುತಿ ವೀಕ್ಷಿಸಿದ ಪ್ರಧಾನಿ ಮೋದಿImage Credit source: PTI

ನವದೆಹಲಿ, ಜುಲೈ 31: ಭಾರತೀಯ ಎಐ ಸ್ಟಾರ್ಟ್‌ಅಪ್ ಸರ್ವಂ (Sarvam AI) ತನ್ನ ‘Epoch 2026’ ಎಐ ಸಮ್ಮೇಳನದಲ್ಲಿ ಹಲವು ಪ್ರಮುಖ ತಂತ್ರಜ್ಞಾನ ನವೀಕರಣಗಳು ಮತ್ತು ಹೊಸ ಎಐ ಮಾಡೆಲ್‌ಗಳನ್ನು ಘೋಷಿಸಿದೆ. ಭಾರತದಲ್ಲೇ ಸಂಪೂರ್ಣವಾಗಿ 1 ಟ್ರಿಲಿಯನ್‌ಗಿಂತಲೂ ಹೆಚ್ಚು (1 Trillion+) ಪ್ಯಾರಾಮೀಟರ್ ಹೊಂದಿರುವ ಬೃಹತ್ ಎಐ ಮಾಡೆಲ್ ಅನ್ನು ಅಭಿವೃದ್ಧಿಪಡಿಸುತ್ತಿರುವುದಾಗಿ ಸರ್ವಂ ಸಂಸ್ಥೆ ಘೋಷಿಸಿದೆ. ಇದು ಕೋಡಿಂಗ್, ಸೈಬರ್ ಸೆಕ್ಯುರಿಟಿ, ವಿಜ್ಞಾನ ಹಾಗೂ ಸಿಮ್ಯುಲೇಶನ್ ಕ್ಷೇತ್ರಗಳಲ್ಲಿ ಓಪನ್ ಎಐ (OpenAI) ಮತ್ತು ಆಂಥ್ರೋಪಿಕ್ (Anthropic) ನಂತಹ ಜಾಗತಿಕ ಕಂಪನಿಗಳಿಗೆ ಪ್ರಬಲ ಸ್ಪರ್ಧೆ ನೀಡಲಿದೆ.

ಸರ್ವಂ 105B – ಅತ್ಯಂತ ಅಗ್ಗದ ಹಾಗೂ ವೇಗದ ಮಾಡೆಲ್

ಸರ್ವಂ ತನ್ನ Sarvam 105B ಮಾಡೆಲ್ ಅನ್ನು ಮತ್ತಷ್ಟು ಸುಧಾರಿಸಿದೆ. ಇದು OpenAI ನ GPT-5.4 Mini ಗಿಂತ 5.5 ಪಟ್ಟು ಅಗ್ಗವಾಗಿದೆ ಮತ್ತು Google ನ Gemini 3.5 Flash ಗಿಂತ 11 ಪಟ್ಟು ಅಗ್ಗವಾಗಿದೆ. ಧ್ವನಿ ಕರೆ (Voice calls) ಹಾಗೂ ಸೂಚನೆಗಳನ್ನು ಪಾಲಿಸುವ ಸಾಮರ್ಥ್ಯದಲ್ಲಿ ಇದು ಉತ್ತಮ ಕಾರ್ಯಕ್ಷಮತೆ ತೋರಿಸಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಸರ್ವಂ ವಿಷನ್ 2.0 ಮತ್ತು ವಿಷನ್ ಎಡ್ಜ್

ಡಾಕ್ಯುಮೆಂಟ್ ಮತ್ತು ಪಠ್ಯ ಗುರುತಿಸುವಿಕೆಗೆ (OCR) Vision 2.0 ಬಿಡುಗಡೆ ಮಾಡಲಾಗಿದೆ. ಇದು ಭಾರತೀಯ ಕೈಬರಹ (Handwriting) ಮತ್ತು ಕೋಷ್ಟಕಗಳನ್ನು (Tables) ಸುಲಭವಾಗಿ ಅರ್ಥೈಸಿಕೊಳ್ಳುತ್ತದೆ. ಸರ್ವಂನ ಈ Vision Edge ಅನ್ನು ಒಡಿಶಾ ಸರ್ಕಾರವು ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು ಬಳಸುತ್ತಿದೆ.

ಇದನ್ನೂ ಓದಿ: ಎಥನಾಲ್ ಮಿಶ್ರಿತ ಪೆಟ್ರೋಲ್​ ಕುರಿತ ತಪ್ಪು ಕಲ್ಪನೆಗಳಿಗೆ ಕೇಂದ್ರ ಸರ್ಕಾರದ ಸ್ಪಷ್ಟನೆ

ವಾಯ್ಸ್ ಮಾಡೆಲ್‌: ಸರಸ್ V4 ಮತ್ತು ಬುಲ್‌ಬುಲ್ V4

  • Saras V4: ಧ್ವನಿ ಗುರುತಿಸುವಿಕೆ (Speech Recognition) ಮಾದರಿಯಾಗಿದ್ದು, ಹಿಂದಿ, ಬೆಂಗಾಲಿ ಜೊತೆಗೆ ಒಡಿಯಾ, ಸಂಸ್ಕೃತ ಮತ್ತು ಮಣಿಪುರಿಯಂತಹ ಭಾಷೆಗಳನ್ನು ಸರಾಗವಾಗಿ ಟ್ರಾನ್ಸ್‌ಸ್ಕ್ರೈಬ್ ಮಾಡುತ್ತದೆ.
  • Bulbul V4: ಪಠ್ಯವನ್ನು ಧ್ವನಿಯಾಗಿ ಬದಲಾಯಿಸುವ (Text-to-Speech) ಮಾಡೆಲ್ ಆಗಿದ್ದು, ನಗು ಮತ್ತು ಭಾವನೆಗಳನ್ನು ಧ್ವನಿಯಲ್ಲಿ ವ್ಯಕ್ತಪಡಿಸುವ ಸಾಮರ್ಥ್ಯ ಹೊಂದಿದೆ.

ಸರ್ವಂ ‘Kaze’ ಎಐ ಸ್ಮಾರ್ಟ್ ಗ್ಲಾಸ್

ದೃಷ್ಟಿಹೀನರಿಗೆ ನೆರವಾಗಲು Sarvam Kaze ಸ್ಮಾರ್ಟ್ ಕಣ್ಣಿನ ಕನ್ನಡಕವನ್ನು ಪ್ರದರ್ಶಿಸಲಾಯಿತು. ಈ ಕನ್ನಡಕವು (AI Smartglasses) ಕ್ಯಾಮೆರಾ ಬಳಸಿ ಬಸ್ ಮಾರ್ಗಗಳು, ದೂರ ಹಾಗೂ ತಲುಪುವ ಸಮಯವನ್ನು ಗುರುತಿಸಿ ದೃಷ್ಟಿಹೀನರಿಗೆ ಮಾಹಿತಿ ನೀಡುತ್ತದೆ.

30 ಸೆಕೆಂಡುಗಳಲ್ಲಿ ಭಾರತೀಯ ಫೋನ್ ಸಂಖ್ಯೆ ಬಾಡಿಗೆಗೆ

ಬಳಕೆದಾರರು ಪ್ಯಾನ್ ಮತ್ತು ಆಧಾರ್ ವಿವರಗಳನ್ನು ಹಂಚಿಕೊಳ್ಳುವ ಮೂಲಕ ಕೆಲವೇ ಸೆಕೆಂಡುಗಳಲ್ಲಿ ಭಾರತೀಯ ಫೋನ್ ಸಂಖ್ಯೆಯನ್ನು ಬಾಡಿಗೆಗೆ ಪಡೆಯುವ ಹೊಸ ಸೇವೆಯನ್ನು ಪರಿಚಯಿಸಲಾಗಿದೆ.

ಇದನ್ನೂ ಓದಿ: ಮನೆ ಕಟ್ಟುವ ಪ್ಲ್ಯಾನ್‌ನಲ್ಲಿದ್ದೀರಾ, ಈ ದಾಖಲೆಗಳು ಇದ್ರೆ ಲೈಸನ್ಸ್ ಪಡೆಯೋದು ಸುಲಭ

ಭಾರತ ಡಿಜಿಟಲ್ ಕಾಲೊನಿಯಾಗುವ ಭೀತಿ: ವಿವೇಕ್ ರಾಘವನ್

ಭಾರತದಲ್ಲಿ ಪೂರ್ಣ ಪ್ರಮಾಣದ ಎಐ ಸ್ಟ್ಯಾಕ್ ನಿರ್ಮಾಣವಾಗದಿದ್ದರೆ ಮತ್ತು ಇತರ ವಿದೇಶೀ ಎಐ ಪ್ಲಾಟ್​ಫಾರ್ಮ್​ಗಳಿಗೆ ಭಾರತೀಯ ಪರ್ಯಾಯ ಸೃಷ್ಟಿಯಾಗದಿದ್ದರೆ ದೇಶವು ಡಿಜಿಟಲ್ ಕಾಲೊನಿಯಾಗುವುದು ನಿಶ್ಚಿತ ಎಂದು ಸರ್ವಂ ಎಐ ಸಹ-ಸಂಸ್ಥಾಪಕ ವಿವೇಕ್ ರಾಘವನ್ ಕಳವಳ ವ್ಯಕ್ತಪಡಿಸಿದ್ದಾರೆ.

ಎಐ ಮಾಡಲ್ ನಿರ್ಮಾಣ ಉದ್ದೇಶದೊಂದಿಗೆ ಆರಂಭವಾಗಿದ್ದ ಸರ್ವಂ ಎಐ ಇದೀಗ ತನ್ನ ಸ್ಟ್ರಾಟಿಜಿಯನ್ನು ವಿಸ್ತರಿಸಿಕೊಂಡಿದೆ. ಫೌಂಡೇಶನಲ್ ಮಾಡಲ್ ಆಚೆ ದೃಷ್ಟಿ ಇಟ್ಟಿರುವ ಸಂಸ್ಥೆಯು, ಎಐ ಅನ್ನು ವ್ಯಾಪಕವಾಗಿ ನಿಯೋಜನೆ ಮಾಡಲು ಸಾಧ್ಯವಾಗಿಸುವಂತಹ ಮೂಲಸೌಕರ್ಯವನ್ನು ನಿರ್ಮಿಸುವ ಗುರಿ ಇಟ್ಟಿದೆ. ಈ ನಿಟ್ಟಿನಲ್ಲಿ ಒಂದು ಟ್ರಿಲಿಯನ್ ಪ್ಯಾರಮೀಟರ್​​ನ ಎಐ ಮಾಡಲ್ ನಿರ್ಮಿಸಲು ಯೋಜಿಸಿರುವುದು ಮಹತ್ವದ ಹೆಜ್ಜೆ ಎನ್ನಲಾಗಿದೆ. ಚೀನಾದ ಕಿಮಿ ಕೆ3, ಲಾಂಗ್ ಕ್ಯಾಟ್ 2.0, ಡೀಪ್ ಸೀಕ್ ವಿ4-ಪ್ರೋ ಮಾಡಲ್​ಗಳು, ಅಮೆರಿಕದ ಕ್ಲಾಡ್, ಓಪನ್​ಎಐ ಸಂಸ್ಥೆಗಳ ಮಾಡಲ್​ಗಳು ಟ್ರಿಲಿಯನ್ ಪ್ಯಾರಾಮೀಟರ್​ಗಳ ಗಡಿ ದಾಟಿವೆ. ಇತ್ತೀಚೆಗೆ ಬಿಡುಗಡೆಯಾದ ಚೀನಾದ ಕಿಮಿ ಕೆ3 ಮಾಡಲ್ 2.8 ಟ್ರಿಲಿಯನ್ ಪ್ಯಾರಾಮೀಟರ್​ನದ್ದಾಗಿದ್ದೆಂದು ಸದ್ದು ಮಾಡಿದೆ.

ಇದೇ ವೇಳೆ, HCL Tech ನೇತೃತ್ವದ ಹೂಡಿಕೆ ಸುತ್ತಿನಲ್ಲಿ $234 ಮಿಲಿಯನ್ ನಿಧಿ ಸಂಗ್ರಹಿಸಿದ ನಂತರ ಸರ್ವಂ ಎಐ ಸಂಸ್ಥೆಯ ಮೌಲ್ಯವು $1.5 ಬಿಲಿಯನ್ ದಾಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 12:46 pm, Fri, 31 July 26

Source link

ಪಾಕ್​ನ ಬ್ರಾಡ್ ಪೀಕ್‌ನಲ್ಲಿ ಹಿಮಪಾತ: ಓಮನ್‌ನ ಪ್ರಸಿದ್ಧ ಪರ್ವತಾರೋಹಿ ನಾಧಿರಾ ಸೇರಿ ಇಬ್ಬರು ಸಾವು, ನಿರ್ಮಲ್ ಪುರ್ಜಾ ನಾಪತ್ತೆ – Kannada News | Broad Peak Avalanche Kills Two, Nirmal Purja and Team Missing: Pakistan Tragedy

ಇಸ್ಲಾಮಾಬಾದ್, ಜುಲೈ 31: ಪಾಕಿಸ್ತಾನ(Pakistan)ದ ಕಾರಕೋರಂ ಪರ್ವತ ಶ್ರೇಣಿಯಲ್ಲಿರುವ ವಿಶ್ವದ 12 ನೇ ಅತಿ ಎತ್ತರದ ಶಿಖರ ‘ಬ್ರಾಡ್ ಪೀಕ್’ ಏರುವ ವೇಳೆ ಭೀಕರ ಹಿಮಪಾತ ಸಂಭವಿಸಿದ್ದು, ಕನಿಷ್ಠ ಇಬ್ಬರು ಪರ್ವತಾರೋಹಿಗಳು ಶವವಾಗಿ ಪತ್ತೆಯಾಗಿದ್ದಾರೆ. ಅಷ್ಟೇ ಅಲ್ಲದೆ, ಜಗತ್ಪ್ರಸಿದ್ಧ ನೇಪಾಳಿ ಪರ್ವತಾರೋಹಿ ನಿರ್ಮಲ್ ‘ನಿಮ್ಸ್‌ದೈ’ ಪುರ್ಜಾ ನೇತೃತ್ವದ 10 ಪರ್ವತಾರೋಹಿಗಳ ತಂಡವು ಕಾಣೆಯಾಗಿದ್ದು, ಜಾಗತಿಕ ಪರ್ವತಾರೋಹಣ ಸಮುದಾಯ ತೀವ್ರ ಆತಂಕದಲ್ಲಿದೆ.

ಪಾಕಿಸ್ತಾನ ಆಲ್ಪೈನ್ ಕ್ಲಬ್ ಗುರುವಾರ ಮಧ್ಯಾಹ್ನ ಸಂಭವಿಸಿದ ಈ ಅನಾಹುತವನ್ನು ದೃಢಪಡಿಸಿದ್ದು, ಮೃತಪಟ್ಟ ಇಬ್ಬರು ಪ್ರಮುಖ ಪರ್ವತಾರೋಹಿಗಳನ್ನು ಗುರುತಿಸಿದೆ. ಓಮನ್ ಸುಲ್ತಾನೇಟ್‌ನ ಪ್ರಸಿದ್ಧ ಪರ್ವತಾರೋಹಿ ನಾಧಿರಾ ಅವರು ಹಿಮಪಾತಕ್ಕೆ ಸಿಲುಕಿ ಉಸಿರೆಳೆದಿದ್ದಾರೆ. ಅವರ ಮೃತದೇಹವನ್ನು ಪತ್ತೆಹಚ್ಚಲಾಗಿದ್ದು, ಹೆಲಿಕಾಪ್ಟರ್ ಮೂಲಕ ಸ್ಕಾರ್ದು ನಗರಕ್ಕೆ ರವಾನಿಸಲಾಗುತ್ತಿದೆ. ನೇಪಾಳ ಮೂಲದ ಮತ್ತೊಬ್ಬ ಅನುಭವಿ ಪರ್ವತಾರೋಹಿ ಯುಕ್ತ ಅವರೂ ಸಹ ಈ ದುರಂತದಲ್ಲಿ ಮೃತಪಟ್ಟಿದ್ದು, ಅವರ ದೇಹದ ಸ್ಥಳಾಂತರ ಕಾರ್ಯ ನಡೆಯುತ್ತಿದೆ.

ನಿರ್ಮಲ್ ಪುರ್ಜಾ ನೇತೃತ್ವದ ತಂಡವು ಕ್ಯಾಂಪ್ 2 ಮತ್ತು ಕ್ಯಾಂಪ್ 3 ರ ನಡುವೆ ಶಿಖರವೇರುತ್ತಿದ್ದಾಗ ಇದ್ದಕ್ಕಿದ್ದಂತೆ ಹಿಮಪಾತ ಸಂಭವಿಸಿದೆ. ಹಿಮಪಾತದ ನಂತರ ತಂಡದೊಂದಿಗಿನ ಸಂಪೂರ್ಣ ವೈರ್‌ಲೆಸ್ ಹಾಗೂ ಉಪಗ್ರಹ ಸಂಪರ್ಕ ಕಡಿದುಹೋಗಿದೆ. ಘಟನಾ ಸ್ಥಳದಲ್ಲಿ ಭಾರಿ ಹಿಮಪಾತ ಮತ್ತು ದಟ್ಟ ಮಂಜು ಕವಿದಿರುವುದರಿಂದ ಹೆಲಿಕಾಪ್ಟರ್ ರಕ್ಷಣಾ ಕಾರ್ಯಾಚರಣೆಗೆ ತೀವ್ರ ಅಡಚಣೆ ಉಂಟಾಗಿದೆ.

ಮತ್ತಷ್ಟು ಓದಿ: ಪಾಕಿಸ್ತಾನ ಸೇನೆಯಿಂದ ಬಲೂಚಿಸ್ತಾನದ ಬಾಲಕಿಯ ಹತ್ಯೆ; ಹಮಾಸ್ ರೀತಿ ವಾಹನಕ್ಕೆ ಕಟ್ಟಿ ರಸ್ತೆಯಲ್ಲಿ ಮೆರವಣಿಗೆ

ಬ್ರಿಟಿಷ್ ಸೇನೆಯ ಗಣ್ಯ ‘ಗೂರ್ಖಾ ರೆಜಿಮೆಂಟ್’ ಹಾಗೂ ಯುಕೆ ವಿಶೇಷ ಪಡೆಗಳಲ್ಲಿ (SBS) 16 ವರ್ಷ ಸೇವೆ ಸಲ್ಲಿಸಿದ್ದ ನಿರ್ಮಲ್ ಪುರ್ಜಾ, ವಿಶ್ವದ ಅತ್ಯಂತ ಎತ್ತರದ 14 ಶಿಖರಗಳನ್ನು ಅತಿ ಕನಿಷ್ಠ ಅವಧಿಯಲ್ಲಿ ಏರಿ ಗಿನ್ನೆಸ್ ದಾಖಲೆ ಬರೆದ ಜಾಗತಿಕ ಸಾಹಸಿ. ಹಿಮಪಾತದ ವರದಿಯ ನಂತರವೂ ನಿರ್ಮಲ್ ಪುರ್ಜಾ ಅವರ ಜಿಪಿಎಸ್ (GPS) ಟ್ರ್ಯಾಕಿಂಗ್ ಸಾಧನದಿಂದ ಸಣ್ಣ ಪ್ರಮಾಣದ ಚಲನೆ ದಾಖಲಾಗಿರುವುದು ರಕ್ಷಣಾ ಸಿಬ್ಬಂದಿಗೆ ಭರವಸೆಯ ಕಿರಣ ಮೂಡಿಸಿದೆ.

‘‘ಅವರೊಬ್ಬ ಹೋರಾಟಗಾರ, ಈ ಕಠಿಣ ಪರಿಸ್ಥಿತಿಯಿಂದ ಅವರು ಜೀವಂತವಾಗಿ ಹೊರಬರಲಿದ್ದಾರೆ ಎಂಬ ನಂಬಿಕೆಯಿದೆ” ಎಂದು ಅವರ ಆಪ್ತರು ಪ್ರಾರ್ಥಿಸುತ್ತಿದ್ದಾರೆ. ವಿಶ್ವದ ಎರಡನೇ ಅತಿ ಎತ್ತರದ ಶಿಖರವಾದ ‘ಕೆ2’ (K2) ಪರ್ವತದಿಂದ ಕೇವಲ 8 ಕಿಲೋಮೀಟರ್ ದೂರದಲ್ಲಿರುವ ಬ್ರಾಡ್ ಪೀಕ್, ಅತ್ಯಂತ ಕಡಿದಾದ ಮಂಜಿನ ಕಂದಕಗಳು ಹಾಗೂ ದಿಢೀರ್ ಹಿಮಪಾತಗಳಿಗೆ ಹೆಸರಾಗಿದೆ.

ಸಾಹಸ ಯಾನದ ಗುರಿ: ನಿರ್ಮಲ್ ಪುರ್ಜಾ ಅವರು ವಿಶ್ವದ 8 ಸಾವಿರ ಮೀಟರ್‌ಗಿಂತ ಎತ್ತರದ ಎಲ್ಲಾ ಶಿಖರಗಳನ್ನು ಮೂರು ಬಾರಿ ಏರಿದ ವಿಶ್ವದ ಮೊದಲ ವ್ಯಕ್ತಿ ಎನಿಸಿಕೊಳ್ಳುವ ಐತಿಹಾಸಿಕ ಸಾಧನೆಯ ಹಾದಿಯಲ್ಲಿದ್ದರು. ಈ ದಂಡಯಾತ್ರೆಯ ನಡುವೆಯೇ ಈ ದುರಂತ ಸಂಭವಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Apply Now: ಮಂಗಳೂರು ವಿವಿಯಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ; ಆನ್‌ಲೈನ್ ಲಿಂಕ್, ಶೈಕ್ಷಣಿಕ ಅರ್ಹತೆ ಪೂರ್ಣ ವಿವರ ಇಲ್ಲಿದೆ – Kannada News | Mangalore University Guest Faculty Recruitment 2026: Apply Online for PG Teaching Posts

ಮಂಗಳೂರು ವಿಶ್ವವಿದ್ಯಾನಿಲಯವು 2026-27 ನೇ ಶೈಕ್ಷಣಿಕ ಸಾಲಿಗೆ ವಿವಿಧ ಸ್ನಾತಕೋತ್ತರ (PG) ವಿಭಾಗಗಳಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ (Guest Faculty) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಈ ಬೋಧನಾ ಹುದ್ದೆಗಳು ವಿಶ್ವವಿದ್ಯಾನಿಲಯದ ವಿವಿಧ ಸ್ನಾತಕೋತ್ತರ ಅಧ್ಯಯನ ವಿಭಾಗಗಳಲ್ಲಿ ಲಭ್ಯವಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ಕೊನೆಯ ದಿನಾಂಕದೊಳಗೆ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕಾಗಿದೆ.

ಹುದ್ದೆಗಳು ಲಭ್ಯವಿರುವ ಪ್ರಮುಖ ವಿಷಯಗಳು:

ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ, ಇಂಗ್ಲಿಷ್, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಸೋಷಿಯಲ್ ವರ್ಕ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಜಿಯೋಗ್ರಫಿ, ಲೈಬ್ರರಿ ಆಂಡ್ ಇನ್‌ಫಾರ್ಮೇಷನ್ ಸೈನ್ಸ್, ಬಯೋಕೆಮಿಸ್ಟ್ರಿ, ಮೆಡಿಕಲ್ ಫಿಸಿಕ್ಸ್, ಫಿಸಿಕ್ಸ್, ಕೆಮಿಸ್ಟ್ರಿ, ಎನ್ವಿರಾನ್‌ಮೆಂಟ್ ಸೈನ್ಸ್, ಇಲೆಕ್ಟ್ರಾನಿಕ್ಸ್, ಮೆಟೀರಿಯಲ್ ಸೈನ್ಸ್, ಬಾಟನಿ, ಪ್ರಾಣಿಶಾಸ್ತ್ರ, ಸೈಬರ್ ಸೆಕ್ಯೂರಿಟಿ, ಫುಡ್ ಸೈನ್ಸ್ ಆಂಡ್ ನ್ಯೂಟ್ರಿಷನ್, ಬಯೋಟೆಕ್ನಾಲಜಿ, ಹ್ಯೂಮನ್ ಕಾನ್ಷಿಯಸ್‌ನೆಸ್ ಆಂಡ್ ಯೋಗಿಕ್ ಸೈನ್ಸ್, ಇಂಡಸ್ಟ್ರಿಯಲ್ ಕೆಮಿಸ್ಟ್ರಿ, ಗಣಿತ, ಮೈಕ್ರೋಬಯಾಲಜಿ, ಕಂಪ್ಯೂಟರ್ ಸೈನ್ಸ್/MCA, M.PEd, B.PEd, MBA (ಟೂರಿಸಂ), MBA, ಸ್ಟಾಟಿಸ್ಟಿಕ್ಸ್, MBA (IB), M.Ed ಮತ್ತು ಕಾಮರ್ಸ್ ಸ್ನಾತಕೋತ್ತರ ಕಾರ್ಯಕ್ರಮಗಳಿಗೆ ಅತಿಥಿ ಉಪನ್ಯಾಸಕರಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಶೈಕ್ಷಣಿಕ ಅರ್ಹತೆ ಮತ್ತು ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಸಂಬಂಧಪಟ್ಟ ವಿಷಯದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ. 55 ರಷ್ಟು ಅಂಕಗಳನ್ನು ಪಡೆದಿರಬೇಕು (ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಕನಿಷ್ಠ ಶೇ. 50 ಅಂಕಗಳು ಇರಬೇಕಾಗುತ್ತದೆ). ಅರ್ಹ ಅಭ್ಯರ್ಥಿಗಳು ನಿಗದಿತ ವೆಬ್‌ಸೈಟ್ ಲಿಂಕ್ (14.139.155.115/guest/index.php/home/) ಮೂಲಕ ಆಗಸ್ಟ್ 1, 2026 ರೊಳಗೆ ತಮ್ಮ ಆನ್‌ಲೈನ್ ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಬೇಕಾಗಿದೆ.

ಅರ್ಜಿ ಶುಲ್ಕ ಮತ್ತು ಪಾವತಿ ಮಾಡುವ ಸರಳ ವಿಧಾನ:

ಸಾಮಾನ್ಯ ಮತ್ತು ಇತರ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಾಗಿ 250ರೂ. ಹಾಗೂ SC/ST/Cat-1 ಅಭ್ಯರ್ಥಿಗಳಿಗೆ 125 ರೂ. ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚಿನ ವಿಷಯ ಅಥವಾ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸಿದಲ್ಲಿ, ಪ್ರತಿ ಹೆಚ್ಚುವರಿ ಅರ್ಜಿಗೆ 100 ರೂ. ನಂತೆ ಪ್ರತ್ಯೇಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಅರ್ಜಿ ಶುಲ್ಕವನ್ನು ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‌ಸೈಟ್‌ಗೆ (www.mangaloreuniversity.ac.in) ಭೇಟಿ ನೀಡಿ, “Online fees collection” ವಿಭಾಗದಲ್ಲಿರುವ “005/60- Guest Faculty Application fee” ಶೀರ್ಷಿಕೆಯಡಿ ಆನ್‌ಲೈನ್ ಮೂಲಕವೇ ಪಾವತಿಸಬೇಕು. ಆ ನಂತರ ಲಭಿಸುವ ಇ-ರಶೀದಿಯನ್ನು (E-Receipt) ತಪ್ಪದೇ ಅರ್ಜಿಯೊಂದಿಗೆ ಅಪ್‌ಲೋಡ್ ಮಾಡಬೇಕು.

ಇದನ್ನೂ ಓದಿ: ಜಾಬ್ ಇಂಟರ್‌ವ್ಯೂಗೆ ಹೋಗುವ ಮುನ್ನ ಈ ತಪ್ಪು ಮಾಡಬೇಡಿ; ಸಿಂಪಲ್​ ಟಿಪ್ಸ್​ ಇಲ್ಲಿದೆ

ಸಂದರ್ಶನ ಪ್ರಕ್ರಿಯೆ ಮತ್ತು ಅಗತ್ಯ ದಾಖಲೆಗಳ ವಿವರ:

ಅಭ್ಯರ್ಥಿಗಳನ್ನು ಯುಜಿಸಿ (UGC) ಯ ನಿಗದಿತ ಮಾನದಂಡಗಳು ಹಾಗೂ ಕರ್ನಾಟಕ ಸರ್ಕಾರದ ಮೀಸಲಾತಿ ನಿಯಮಗಳ ಪ್ರಕಾರ ಆಯ್ಕೆ ಮಾಡಲಾಗುತ್ತದೆ. ಆನ್‌ಲೈನ್ ಅರ್ಜಿಯಲ್ಲಿ ಅಭ್ಯರ್ಥಿಗಳು ತಮ್ಮ ಇ-ಮೇಲ್ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು. ಸಂದರ್ಶನದ ಸಮಯದಲ್ಲಿ ಅಭ್ಯರ್ಥಿಗಳು ತಮ್ಮ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಪದವಿ ಮತ್ತು ಸ್ನಾತಕೋತ್ತರ ಪದವಿಯ ಅಂಕಪಟ್ಟಿಗಳು, ಪದವಿ ಪ್ರಮಾಣ ಪತ್ರಗಳು ಹಾಗೂ SCOPUS/WOS/UGC-CARELIST ನಲ್ಲಿ ಪ್ರಕಟವಾದ ಸಂಶೋಧನಾ ಪತ್ರಿಕೆಗಳ ಮೂಲ ದಾಖಲೆಗಳು ಮತ್ತು ಸ್ವಯಂ ದೃಢೀಕರಿಸಿದ ನಕಲುಗಳನ್ನು ಹಾಜರುಪಡಿಸುವುದು ಕಡ್ಡಾಯವಾಗಿದೆ. ಸಂದರ್ಶನದ ನಿಖರ ದಿನಾಂಕವನ್ನು ವಿಶ್ವವಿದ್ಯಾನಿಲಯದ ವೆಬ್‌ಸೈಟ್‌ನಲ್ಲಿ ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

ದೊಡ್ಡ ಡೆಪಾಸಿಟ್​ಗಳಿಗೆ ತಮ್ಮದೇ ಬಡ್ಡಿದರ ನಿಗದಿ ಮಾಡಲು ಬ್ಯಾಂಕುಗಳಿಗೆ ಆರ್​ಬಿಐ ಅನುಮತಿ – Kannada News | Bulk Deposits, RBI allows banks to fix differential interest rates

ನವದೆಹಲಿ, ಜುಲೈ 31: ಬ್ಯಾಂಕುಗಳ ಬಡ್ಡಿದರ ವಿಚಾರದಲ್ಲಿ ಆರ್​ಬಿಐನ ಕಟ್ಟುಪಾಡುಗಳು ಬಿಗಿಯಾಗಿವೆ. ಬ್ಯಾಂಕುಗಳು ಈ ಕಟ್ಟುಪಾಡುಗಳ ಒಳಗೆ ಬಡ್ಡಿ ನಿಗದಿ ಮಾಡಬೇಕು. ಆದರೆ, ಬಲ್ಕ್ ಡೆಪಾಸಿಟ್ (Bulk Deposits) ವಿಚಾರದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಸ್ವಲ್ಪ ನಿಯಮ ಸಡಿಲಿಸಿದೆ. ಬ್ಯಾಂಕುಗಳಿಗೆ ಬಲ್ಕ್ ಡೆಪಾಸಿಟ್‌ಗಳ (ಬೃಹತ್ ಠೇವಣಿಗಳು) ಮೇಲಿನ ಬಡ್ಡಿದರಗಳ ನಿಯಮದಲ್ಲಿ ಪ್ರಮುಖ ಬದಲಾವಣೆ ತಂದಿದೆ. ಬಲ್ಕ್ ಡೆಪಾಸಿಟ್‌ಗಳಿಗೆ ಲಿಕಿಡಿಟಿ ಕವರೇಜ್ ರೇಶಿಯೋ (LCR) ಚೌಕಟ್ಟಿನಡಿಯಲ್ಲಿ ವಿಭಿನ್ನ ಬಡ್ಡಿದರಗಳನ್ನು (Differential Rates) ನೀಡಲು ಅವಕಾಶ ಮಾಡಿಕೊಟ್ಟಿದೆ. ಠೇವಣಿದಾರರ ವರ್ಗಗಳು (Retail vs Non-Retail / Wholesale) ಮತ್ತು ಆ ಠೇವಣಿಗಳಲ್ಲಿ ಇರುವ ಲಿಕ್ವಿಡಿಟಿ ರಿಸ್ಕ್ ಅನ್ನು (Liquidity Risk / Run-off rate) ಆಧರಿಸಿ ಬ್ಯಾಂಕುಗಳು ಬೇರೆ ಬೇರೆ ಬಡ್ಡಿದರಗಳನ್ನು ನಿರ್ಧರಿಸಬಹುದು.

ಈ ಹೊಸ ತಿದ್ದುಪಡಿ ನಿರ್ದೇಶನಗಳು 2026ರ ಅಕ್ಟೋಬರ್ 1ರಿಂದ ಜಾರಿಗೆ ಬರಲಿವೆ. ಸ್ವದೇಶಿ ರೂಪಾಯಿ ಬಲ್ಕ್ ಡೆಪಾಸಿಟ್​ಗಳು ಹಾಗೂ ಅನಿವಾಸಿ ಭಾರತೀಯರ (Non-Resident) ರೂಪಾಯಿ ಠೇವಣಿಗಳೆರಡಕ್ಕೂ ಇದು ಅನ್ವಯಿಸುತ್ತದೆ.

ಇದನ್ನೂ ಓದಿ: ಸಂಪೂರ್ಣ ಸ್ವಂತವಾಗಿ ಟ್ರಿಲಿಯನ್ ಪ್ಯಾರಾಮೀಟರ್ ಎಐ ಮಾಡಲ್ ಕಟ್ಟುತ್ತಿರುವ ಸರ್ವಂ; ಇದು ಭಾರತಕ್ಕೆ ಹೊಸ ಶಕ್ತಿ

ಪಾರದರ್ಶಕತೆ ಮತ್ತು ಹೊಸ ನಿಯಮಗಳು

ಬ್ಯಾಂಕುಗಳು ತಮ್ಮ ವೆಬ್‌ಸೈಟ್‌ನಲ್ಲಿ ಪ್ರತಿದಿನ ಬೆಳಗ್ಗೆ 10:00ರಿಂದ 10:10ರೊಳಗೆ ಬಲ್ಕ್ ಠೇವಣಿಗಳ ಬಡ್ಡಿದರಗಳ ವೇಳಾಪಟ್ಟಿಯನ್ನು ಮುಂಚಿತವಾಗಿಯೇ ಪ್ರಕಟಿಸುವುದು ಕಡ್ಡಾಯವಾಗಿದೆ.

ಒಮ್ಮೆ ವೇಳಾಪಟ್ಟಿ ಪ್ರಕಟಿಸಿದ ನಂತರ, ಅದೇ ದಿನಾಂಕ ಮತ್ತು ಅದೇ ಮೊತ್ತದ ಠೇವಣಿಗಳಿಗೆ ಬ್ಯಾಂಕಿನ ಎಲ್ಲಾ ಶಾಖೆಗಳಲ್ಲಿಯೂ ಯಾವುದೇ ತಾರತಮ್ಯವಿಲ್ಲದೆ ಒಂದೇ ರೀತಿಯ ಬಡ್ಡಿದರ ನೀಡಬೇಕಾಗುತ್ತದೆ.

ಇದನ್ನೂ ಓದಿ: Bank holidays in August 2026: ಆಗಸ್ಟ್ ತಿಂಗಳಲ್ಲಿ ಬ್ಯಾಂಕುಗಳಿಗೆ 15 ದಿನಗಳವರೆಗೆ ರಜೆ; ಇಲ್ಲಿದೆ ರಜಾಪಟ್ಟಿ

ಆರ್‌ಬಿಐ ನಿರ್ಧಾರದ ಉದ್ದೇಶ

ಬ್ಯಾಂಕುಗಳಲ್ಲಿ ಸಾಲದ ಬೆಳವಣಿಗೆಗೆ (Credit growth) ಹೋಲಿಸಿದರೆ ಠೇವಣಿ ಸಂಗ್ರಹಣೆಯ ವೇಗ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ, ಬ್ಯಾಂಕುಗಳಿಗೆ ಲಿಕ್ವಿಡಿಟಿ ಆಧಾರಿತವಾಗಿ ಠೇವಣಿ ಆಕರ್ಷಿಸಲು ಹೆಚ್ಚಿನ ಅವಕಾಶ (Flexibility) ನೀಡಲು ಆರ್‌ಬಿಐ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಗಾಲ್ವಾನ್ ಸಂಘರ್ಷದ ಬಳಿಕ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಲಿದ್ದಾರೆ ಚೀನಾ ಅಧ್ಯಕ್ಷ ಷಿ ಜಿನ್​ಪಿಂಗ್ – Kannada News | Xi Jinping Likely to Visit India for BRICS Summit After Years of Border Tensions

ನವದೆಹಲಿ, ಜುಲೈ 31: ಭಾರತದ ಆತಿಥ್ಯದಲ್ಲಿ ನಡೆಯಲಿರುವ 18ನೇ ಬ್ರಿಕ್ಸ್​ ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾ ಅಧ್ಯಕ್ಷ ಷಿ ಜಿನ್​ಪಿಂಗ್(Xi Jinping) ಅವರು ಸೆಪ್ಟೆಂಬರ್​​ನಲ್ಲಿ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. 2020 ರ ಗಾಲ್ವಾನ್ ಕಣಿವೆ ಭೀಕರ ಸಂಘರ್ಷ ಹಾಗೂ ವಾಸ್ತವ ನಿಯಂತ್ರಣ ರೇಖೆಯ (LAC) ಮಿಲಿಟರಿ ಬಿಕ್ಕಟ್ಟಿನ ನಂತರ ಚೀನಾ ಅಧ್ಯಕ್ಷರು ಭಾರತಕ್ಕೆ ಆಗಮಿಸುತ್ತಿರುವುದು ಇದೇ ಮೊದಲ ಬಾರಿಯಾಗಿದ್ದು, ಈ ಭೇಟಿಯು ದ್ವಿಪಕ್ಷೀಯ ರಾಜತಾಂತ್ರಿಕತೆಯಲ್ಲಿ ಅತ್ಯಂತ ಐತಿಹಾಸಿಕ ಎಂದೇ ವಿಶ್ಲೇಷಿಸಲಾಗಿದೆ.

ಸೆಪ್ಟೆಂಬರ್ 12-13ರಂದು ನವದೆಹಲಿಯಲ್ಲಿ ಬ್ರಿಕ್ಸ್ ಶೃಂಗಸಭೆ:2026 ರ ಬ್ರಿಕ್ಸ್ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಕ್ಸಿ ಜಿನ್‌ಪಿಂಗ್ ಅವರಿಗೆ ಅಧಿಕೃತ ಆಹ್ವಾನ ಕಳುಹಿಸಿದ್ದಾರೆ. ಈ ಬಾರಿಯ ಶೃಂಗಸಭೆಯು ಸೆಪ್ಟೆಂಬರ್ 12 ಮತ್ತು 13 ರಂದು ನವದೆಹಲಿಯ ಭಾರತ್ ಮಂಟಪಂನಲ್ಲಿ ನಡೆಯಲಿದ್ದು, ಕ್ಸಿ ಜಿನ್‌ಪಿಂಗ್ ಹೊರತಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ಕೂಡ ಭಾಗವಹಿಸಲಿದ್ದಾರೆ.

ಮಾಮಲ್ಲಾಪುರಂ ಶೃಂಗಸಭೆ: ಕ್ಸಿ ಜಿನ್‌ಪಿಂಗ್ ಅವರು ಕೊನೆಯದಾಗಿ ಅಕ್ಟೋಬರ್ 2019 ರಲ್ಲಿ ತಮಿಳುನಾಡಿನ ಮಾಮಲ್ಲಾಪುರಂನಲ್ಲಿ ನಡೆದ ದ್ವಿತೀಯ ಅನೌಪಚಾರಿಕ ಶೃಂಗಸಭೆಗಾಗಿ ಭಾರತಕ್ಕೆ ಆಗಮಿಸಿದ್ದರು.
ಸಂಬಂಧಗಳ ಏರಿಳಿತ: ಆ ಭೇಟಿಯ ಕೇವಲ 6 ತಿಂಗಳಲ್ಲೇ ಲಡಾಖ್ ಗಡಿಯಲ್ಲಿ ಚೀನಾ ಸೇನೆಯ ಅತಿಕ್ರಮಣ ಹಾಗೂ ಗಾಲ್ವಾನ್ ಘರ್ಷಣೆಯಿಂದಾಗಿ ಉಭಯ ದೇಶಗಳ ಬಾಂಧವ್ಯ ಕಳೆದ ಆರು ದಶಕಗಳಲ್ಲೇ ಅತ್ಯಂತ ತಳಮಟ್ಟಕ್ಕೆ ಕುಸಿದಿತ್ತು.

ಶಾಂತಿ ಹಾದಿಯಲ್ಲಿ ಹೆಜ್ಜೆ: ಅಕ್ಟೋಬರ್ 2024 ರಲ್ಲಿ ರಷ್ಯಾದ ಕಜಾನ್‌ನಲ್ಲಿ ಹಾಗೂ ಆಗಸ್ಟ್ 2025 ರಲ್ಲಿ ಚೀನಾದ ಟಿಯಾಂಜಿನ್‌ನಲ್ಲಿ ನಡೆದ ಎಸ್‌ಸಿಒ (SCO) ಶೃಂಗಸಭೆಯ ವೇಳೆ ಪ್ರಧಾನಿ ಮೋದಿ ಮತ್ತು ಷಿ ಜಿನ್‌ಪಿಂಗ್ ದ್ವಿಪಕ್ಷೀಯ ಮಾತುಕತೆ ನಡೆಸಿ ಗಡಿ ಬಿಕ್ಕಟ್ಟು ಶಮನಗೊಳಿಸಲು ಸಮ್ಮತಿಸಿದ್ದರು.

ಚೀನಾ ಅಧ್ಯಕ್ಷರ ಭೇಟಿಗೆ ಮುನ್ನ ಸಿದ್ಧತೆ ನಡೆಸಲು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಜುಲೈ ಅಂತ್ಯದಲ್ಲಿ ಬೀಜಿಂಗ್‌ಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಚೀನಾದ ಹಿರಿಯ ಭದ್ರತಾ ಅಧಿಕಾರಿಗಳ ತಂಡವೂ ನವದೆಹಲಿಗೆ ಆಗಮಿಸಿ ಭದ್ರತಾ ಪರಿಶೀಲನೆ ನಡೆಸಿದೆ. 2024 ರಲ್ಲಿ ಇರಾನ್, ಯುಎಇ, ಈಜಿಪ್ಟ್ ಮತ್ತು ಇಥಿಯೋಪಿಯಾ ಸೇರ್ಪಡೆಯಾದ ನಂತರ ವಿಸ್ತೃತ ಸ್ವರೂಪದಲ್ಲಿ ನಡೆಯುತ್ತಿರುವ ಪ್ರಮುಖ ಶೃಂಗಸಭೆ ಇದಾಗಿದೆ. ಮಧ್ಯಪ್ರಾಚ್ಯ ಸಂಘರ್ಷ ಹಾಗೂ ಜಾಗತಿಕ ವಾಣಿಜ್ಯ ಬಿಕ್ಕಟ್ಟುಗಳ ನಡುವೆ ಈ ಶೃಂಗಸಭೆಯು ಜಾಗತಿಕ ಗಮನ ಸೆಳೆದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 1:42 pm, Fri, 31 July 26

Source link

Exit mobile version