ಅಧ್ಯಕ್ಷರಾಗಿ ಮೊದಲ ಬಾರಿಗೆ ಕೆಪಿಸಿಸಿ ಕಚೇರಿಗೆ ಬಿಕೆ ಹರಿಪ್ರಸಾದ್ ಆಗಮನ: ಅದ್ದೂರಿ ಸ್ವಾಗತ, ಜಿಬಿಎ ಚುನಾವಣೆ ಕುರಿತು ಮಹತ್ವದ ಸಭೆ – Kannada News

ಬೆಂಗಳೂರು, ಜೂನ್ 10: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (KPCC) ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಬಿಕೆ ಹರಿಪ್ರಸಾದ್ ಬುಧವಾರ ಮೊದಲ ಬಾರಿಗೆ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದಾರೆ. ಪಕ್ಷದ ಸಾರಥ್ಯ ವಹಿಸಿಕೊಂಡ ಬಳಿಕ ಮೊದಲ ಬಾರಿ ಕಚೇರಿಗೆ ಆಗಮಿಸಿದ ನೂತನ ಸಾರಥಿಗೆ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಅತ್ಯಂತ ಅದ್ದೂರಿ ಮತ್ತು ಸಡಗರದ ಸ್ವಾಗತ ಕೋರಿದರು. ಕೆಪಿಸಿಸಿ ಕಾರ್ಯಾಧ್ಯಕ್ಷರು, ಮಾಜಿ ಸಚಿವರು ಹಾಗೂ ಹಿರಿಯ ಎಂಎಲ್‌ಸಿಗಳು ಹೂಗುಚ್ಛ ನೀಡಿ ಹರಿಪ್ರಸಾದ್ ಅವರನ್ನು ಬರಮಾಡಿಕೊಂಡರು. ಇದೇ ವೇಳೆ ಸಚಿವರಾದ ಜಮೀರ್ ಅಹಮದ್ ಖಾನ್ ಕೂಡ ಕೆಪಿಸಿಸಿ ಕಚೇರಿಗೆ ಆಗಮಿಸಿ ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದರು.

ಕಚೇರಿಗೆ ಭೇಟಿ ನೀಡಿದ ಬೆನ್ನಲ್ಲೇ ಆಡಳಿತಾತ್ಮಕವಾಗಿ ಸಕ್ರಿಯರಾದ ಬಿಕೆ ಹರಿಪ್ರಸಾದ್, ಮೊದಲ ಅಧಿಕೃತ ಸಭೆ ನಡೆಸಿದರು. ಮುಂಬರುವ ಜಿಬಿಎ (GBA) ಚುನಾವಣೆಗಳ ಸಿದ್ಧತೆಗಾಗಿ ಪಕ್ಷದಿಂದ ನಿಯೋಜಿಸಲಾಗಿರುವ ವೀಕ್ಷಕರೊಂದಿಗೆ (Observers) ಅವರು ಸುದೀರ್ಘ ಸಮಾಲೋಚನೆ ನಡೆಸಿದರು. ಈ ಪ್ರಮುಖ ಸಭೆಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್, ಹಿರಿಯ ಮುಖಂಡರಾದ ನಸೀರ್ ಅಹಮದ್, ಸಲೀಂ ಅಹಮದ್, ಜಿ.ಸಿ. ಚಂದ್ರಶೇಖರ್, ಬೇಳೂರು ಗೋಪಾಲಕೃಷ್ಣ ಹಾಗೂ ಐವಾನ್ ಡಿಸೋಜ ಸೇರಿದಂತೆ ಹಲವು ಪ್ರಮುಖ ನಾಯಕರು ಭಾಗವಹಿಸಿ ಮಹತ್ವದ ಚರ್ಚೆ ನಡೆಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿವಾಹದ ಬಳಿಕ ಬ್ರೇಕ್​​ಲೆಸ್ ಆಗಿ ಶೂಟ್ ಮಾಡಿದ ರಶ್ಮಿಕಾ; ಬಿಗ್ ಅಪ್​​ಡೇಟ್ – Kannada News

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಅಭಿಮಾನಿಗಳಿಗೆ ಬ್ಯಾಕ್ ಟು ಬ್ಯಾಕ್ ಸಿಹಿ ಸುದ್ದಿ ಸಿಗುತ್ತಿದೆ. ಇತ್ತೀಚೆಗಷ್ಟೇ ಹಸೆಮಣೆ ಏರಿ ಹೊಸ ಜೀವನಕ್ಕೆ ಕಾಲಿಟ್ಟಿದ್ದ ಕೊಡಗಿನ ಬೆಡಗಿ, ಮದುವೆಯ ನಂತರವೂ ಯಾವುದೇ ಬ್ರೇಕ್ ತೆಗೆದುಕೊಳ್ಳದೆ ಸಖತ್ ಸ್ಪೀಡ್ ಆಗಿ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಮದುವೆಯ ಸಂಭ್ರಮ ಮುಗಿಯುತ್ತಿದ್ದಂತೆ ಮಗದೊಮ್ಮೆ ಕ್ಯಾಮೆರಾ ಮುಂದೆ ನಿಂತಿರುವ ರಶ್ಮಿಕಾ, ತಮ್ಮ ಬಹುನಿರೀಕ್ಷಿತ ಸಿನಿಮಾದ ಶೂಟಿಂಗ್ ಅನ್ನು ವೇಗವಾಗಿ ಮುಗಿಸುತ್ತಿದ್ದಾರೆ.

ಖ್ಯಾತ ಗಾಯಕಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಬಯೋಪಿಕ್‌ನಲ್ಲಿ ರಶ್ಮಿಕಾ ನಟಿಸಲಿದ್ದಾರೆ ಎಂಬ ಬಿಸಿಬಿಸಿ ಸುದ್ದಿಯ ನಡುವೆಯೇ, ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಪ್ಯಾನ್ ಇಂಡಿಯಾ ಬಿಗ್ ಪ್ರಾಜೆಕ್ಟ್ ‘ಮೈಸಾ’ ಚಿತ್ರದ ಕೆಲಸಗಳು ಸದ್ದಿಲ್ಲದೆ ಭರದಿಂದ ಸಾಗುತ್ತಿವೆ. ಇದೊಂದು ಬುಡಕಟ್ಟು ಜನಾಂಗದ ಹಿನ್ನೆಲೆಯುಳ್ಳ ಹೈ-ವೋಲ್ಟೇಜ್ ಆಕ್ಷನ್ ಡ್ರಾಮಾ ಸಿನಿಮಾವಾಗಿದ್ದು, ಚಿತ್ರದ 5ನೇ ಹಂತದ ಶೂಟಿಂಗ್ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.

ಸಾಮಾನ್ಯವಾಗಿ ನಟಿಯರು ಮದುವೆಯ ನಂತರ ಸಿನಿಮಾಗಳಿಂದ ಕೊಂಚ ಬ್ರೇಕ್ ಪಡೆಯುತ್ತಾರೆ. ಆದರೆ ರಶ್ಮಿಕಾ ಮಾತ್ರ ಮದುವೆಯ ಬೆನ್ನಲ್ಲೇ ದುಪ್ಪಟ್ಟು ಉತ್ಸಾಹದಿಂದ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದು, ‘ಮೈಸಾ’ ಚಿತ್ರದ ಹೊಸ ಶೆಡ್ಯೂಲ್ ಮುಗಿಸಿ ಮುನ್ನುಗ್ಗುತ್ತಿದ್ದಾರೆ.

ಇದನ್ನೂ ಓದಿ: ಸ್ಟಾರ್ ನಟಿಗೆ ಫಿಕ್ಸ್ ಆಗಿದ್ದ ಪ್ರಮುಖ ಸಿನಿಮಾ ಈಗ ರಶ್ಮಿಕಾ ಮಂದಣ್ಣ ಕೈಗೆ

ಚಿತ್ರದ 5ನೇ ಶೆಡ್ಯೂಲ್ ಕಂಪ್ಲೀಟ್ ಆಗಿರುವ ಖುಷಿಯ ಬೆನ್ನಲ್ಲೇ ಚಿತ್ರದ ನಿರ್ಮಾಪಕ ಅಜಯ್ ಸಾಯಿಪುರೆಡ್ಡಿ ಅಭಿಮಾನಿಗಳಿಗೆ ಮತ್ತೊಂದು ಬಿಗ್ ಅಪ್‌ಡೇಟ್ ನೀಡಿದ್ದಾರೆ. ಸದ್ಯದಲ್ಲೇ ಚಿತ್ರದ ಅಧಿಕೃತ ಟೀಸರ್ ಅನ್ನು ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗುತ್ತಿದೆಯಂತೆ. ಮದುವೆಯ ನಂತರ ರಶ್ಮಿಕಾ ಅವರ ಮೊದಲ ಪ್ಯಾನ್ ಇಂಡಿಯಾ ಅಪ್‌ಡೇಟ್ ಇದಾಗಿರುವುದರಿಂದ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಹೈ ಬಜೆಟ್‌ನಲ್ಲಿ ‘ಮೈಸಾ’ ಉದಯ
ನವನಿರ್ದೇಶಕ ರವೀಂದ್ರ ಪುಲ್ಲೆ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ‘ಅನ್‌ಫಾರ್ಮುಲಾ ಫಿಲ್ಮ್ಸ್’ ಸಂಸ್ಥೆ ಅತ್ಯಂತ ಬೃಹತ್ ಬಜೆಟ್‌ನಲ್ಲಿ ನಿರ್ಮಿಸುತ್ತಿದೆ. ಚಿತ್ರಕ್ಕೆ ಜೇಕ್ಸ್ ಬಿಜಾಯ್ ಸಂಗೀತ ನೀಡುತ್ತಿದ್ದಾರೆ. ವಿಶೇಷವೆಂದರೆ, ಕನ್ನಡದ ಪ್ರತಿಭಾವಂತ ನಟ ತಾರಕ್ ಪೊನ್ನಪ್ಪ ಈ ಚಿತ್ರದಲ್ಲಿ ಅತ್ಯಂತ ಪ್ರಮುಖ ಹಾಗೂ ಮಹತ್ವದ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 11:05 am, Wed, 10 June 26

Source link

Ganesha Shlokas for Kids: ಮಕ್ಕಳ ಏಕಾಗ್ರತೆ ಮತ್ತು ಜ್ಞಾಪಕಶಕ್ತಿ ಹೆಚ್ಚಿಸುವ 4 ಸರಳ ಗಣೇಶ ಶ್ಲೋಕಗಳು! – Kannada News

ಸನಾತನ ಸಂಸ್ಕೃತಿಯಲ್ಲಿ ಯಾವುದೇ ಶುಭ ಕಾರ್ಯ, ಪೂಜೆ ಅಥವಾ ಹೊಸ ಕೆಲಸವನ್ನು ಆರಂಭಿಸುವ ಮುನ್ನ ವಿಘ್ನನಿವಾರಕನಾದ ಗಣೇಶನನ್ನು ಆರಾಧಿಸುವುದು ಅನಾದಿ ಕಾಲದಿಂದಲೂ ನಡೆದುಬಂದಿರುವ ಸಂಪ್ರದಾಯವಾಗಿದೆ. ಅದರಲ್ಲೂ ಶಾಲೆಗೆ ಹೋಗುವ ಮಕ್ಕಳಿಗೆ ಮುಂಜಾನೆ ಹಾಗೂ ಓದಲು ಕುಳಿತುಕೊಳ್ಳುವ ಮುನ್ನ ಗಣೇಶನ ಶ್ಲೋಕಗಳನ್ನು ಹೇಳಿಕೊಡುವುದು ಅವರ ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆಗೆ ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

ವಾಸ್ತು ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮುಂಜಾನೆಯ ಸಮಯದಲ್ಲಿ ಮಕ್ಕಳ ಮನಸ್ಸು ಅತ್ಯಂತ ಸೂಕ್ಷ್ಮವಾಗಿರುತ್ತದೆ. ಈ ಪವಿತ್ರ ಮುಹೂರ್ತದಲ್ಲಿ ದೈವಿಕ ಶ್ಲೋಕಗಳನ್ನು ಉಚ್ಚರಿಸುವುದರಿಂದ ಮೆದುಳಿನ ನರಗಳು ಉತ್ತೇಜನಗೊಂಡು, ಜ್ಞಾಪಕಶಕ್ತಿ ಮತ್ತು ಏಕಾಗ್ರತೆ ಅದ್ಭುತವಾಗಿ ವೃದ್ಧಿಯಾಗುತ್ತದೆ. ಶಾಲೆಗೆ ಹೋಗುವ ಮಕ್ಕಳಿಗೆ ಸುಲಭವಾಗಿ ಕಲಿಸಬಹುದಾದ 4 ಪ್ರಮುಖ ಗಣೇಶ ಶ್ಲೋಕಗಳು ಮತ್ತು ಅವುಗಳ ಭಾವಾರ್ಥವನ್ನು ಕೆಳಗೆ ನೀಡಲಾಗಿದೆ.

ವಿದ್ಯಾರಂಭದ ಮುನ್ನ ಜಪಿಸಲು ಶುಕ್ಲಾಂಬರಧರಂ ಶ್ಲೋಕ:

ಯಾವುದೇ ಹೊಸ ಪಾಠ, ಶಾಲೆಯ ಹೋಂವರ್ಕ್ ಅಥವಾ ದಿನನಿತ್ಯದ ಓದನ್ನು ಪ್ರಾರಂಭಿಸುವ ಮುನ್ನ ಮಕ್ಕಳು ಈ ಶ್ಲೋಕವನ್ನು ಕಡ್ಡಾಯವಾಗಿ ಹೇಳಬೇಕು. ಇದು ಮನಸ್ಸಿನ ಚಂಚಲತೆಯನ್ನು ದೂರ ಮಾಡಿ ಬುದ್ಧಿಶಕ್ತಿ ಚುರುಕಾಗಲು ನೆರವಾಗುತ್ತದೆ.

ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಮ್ ।
ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ ॥

ಸರ್ವ ಕಾರ್ಯಗಳ ಯಶಸ್ಸಿಗಾಗಿ ವಕ್ರತುಂಡ ಮಹಾಕಾಯ ಶ್ಲೋಕ:

ಮಕ್ಕಳು ಶಾಲೆಗೆ ಹೊರಡುವಾಗ, ಪರೀಕ್ಷೆ ಬರೆಯಲು ಹೋಗುವಾಗ ಅಥವಾ ಕ್ರೀಡೆ ಹಾಗೂ ಯಾವುದೇ ಸ್ಪರ್ಧೆಗಳಲ್ಲಿ ಭಾಗವಹಿಸುವಾಗ ಈ ಶ್ಲೋಕವನ್ನು ಜಪಿಸುವುದು ಒಳ್ಳೆಯದು. ಇದು ಅವರಲ್ಲಿ ಸಕಾರಾತ್ಮಕ ಶಕ್ತಿಯನ್ನು ತುಂಬಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ ।
ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ ॥

ಪುಟ್ಟ ಮಕ್ಕಳಿಗೆ ಅತ್ಯಂತ ಸುಲಭವಾದ ಏಕದಂತಂ ಮಹಾಕಾಯಂ ಶ್ಲೋಕ:

ಎಲ್.ಕೆ.ಜಿ, ಯು.ಕೆ.ಜಿ ಅಥವಾ ಪ್ರಾಥಮಿಕ ಶಾಲೆಗೆ ಹೋಗುವ ಪುಟ್ಟ ಮಕ್ಕಳಿಗೆ ದೊಡ್ಡ ಶ್ಲೋಕಗಳನ್ನು ನೆನಪಿಟ್ಟುಕೊಳ್ಳುವುದು ಕಷ್ಟವಾಗಬಹುದು. ಅಂತಹ ಮಕ್ಕಳಿಗೆ ಬೇಗನೆ ಬಾಯಿಪಾಠವಾಗುವಂತಹ ಅತ್ಯಂತ ಸರಳ ಹಾಗೂ ಮಧುರವಾದ ಶ್ಲೋಕವಿದು.

ಏಕದಂತಂ ಮಹಾಕಾಯಂ ತಪ್ತಕಾಂಚನಸನ್ನಿಭಮ್ ।
ಲಂಬೋದರಂ ವಿಶಾಲಾಕ್ಷಂ ವಂದೇಹಂ ಗಣನಾಯಕಮ್ ॥

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

ಭಯ ಮತ್ತು ಹಿಂಜರಿಕೆ ನಿವಾರಣೆಗಾಗಿ ಗಜಾನನಂ ಶ್ಲೋಕ:

ಕೆಲವು ಮಕ್ಕಳಿಗೆ ಪರೀಕ್ಷೆ ಎಂದರೆ ಅತಿಯಾದ ಭಯವಿರುತ್ತದೆ, ಇನ್ನು ಕೆಲವರಿಗೆ ವೇದಿಕೆಯ ಮೇಲೆ ಹೋಗಿ ಮಾತನಾಡಲು ಹಿಂಜರಿಕೆಯಿರುತ್ತದೆ. ಮಕ್ಕಳ ಮನಸ್ಸಿನಲ್ಲಿರುವ ಇಂತಹ ನಕಾರಾತ್ಮಕ ಭಾವನೆಗಳನ್ನು ದೂರಮಾಡಿ ಧೈರ್ಯ ತುಂಬಲು ಈ ಶ್ಲೋಕ ಸಹಕಾರಿಯಾಗಿದೆ.

ಗಜಾನನಂ ಭೂತಗಣಾದಿಸೇವಿತಂ ಕಪಿತ್ಥಜಂಬೂಫಲಸಾರಭಕ್ಷಿತಮ್ ।
ಉಮಾಸುತಂ ಶೋಕವಿನಾಶಕಾರಣಂ ನಮಾಮಿ ವಿಘ್ನೇಶ್ವರ ಪಾದಪಂಕಜಮ್ ॥

ಪೋಷಕರು ಗಮನಿಸಬೇಕಾದ ಪ್ರಮುಖ ನಿಯಮಗಳು:

ಮಕ್ಕಳಿಗೆ ಶ್ಲೋಕಗಳನ್ನು ಕಲಿಸುವಾಗ ಕೇವಲ ಬಾಯಿಪಾಠ ಮಾಡಿಸುವುದಷ್ಟೇ ಮುಖ್ಯವಲ್ಲ. ದಿನವೂ ಬೆಳಿಗ್ಗೆ ಸ್ನಾನದ ನಂತರ ಅಥವಾ ಸಂಜೆ ಮನೆಯಲ್ಲಿ ದೀಪ ಹಚ್ಚಿದಾಗ ಈ ಶ್ಲೋಕಗಳನ್ನು ಹೇಳುವುದನ್ನು ರೂಢಿಸಬೇಕು. ಶ್ಲೋಕ ಹೇಳುವಾಗ ಕೈಮುಗಿದು, ಕಣ್ಣು ಮುಚ್ಚಿ ಬೆನ್ನು ನೇರಮಾಡಿ ಕುಳಿತುಕೊಳ್ಳಲು ತಿಳಿಸಿಕೊಡಿ. ಇದರಿಂದ ಅವರ ದೈಹಿಕ ಮತ್ತು ಮಾನಸಿಕ ಏಕಾಗ್ರತೆ ಹೆಚ್ಚುತ್ತದೆ. ಆರಂಭದಲ್ಲಿ ನೀವೇ ಶ್ಲೋಕಗಳನ್ನು ಸ್ಪಷ್ಟವಾಗಿ ಉಚ್ಚರಿಸಿ ಹೇಳಿಕೊಡುವುದರಿಂದ ಮಕ್ಕಳ ವಾಕ್ಚಾತುರ್ಯ ಮತ್ತು ಭಾಷಾ ಶುದ್ಧತೆಯೂ ಉತ್ತಮಗೊಳ್ಳುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಧ್ಯರಾತ್ರಿ ಹುಡುಗಿಯರ ಹಾಸ್ಟೆಲ್​​ಗೆ ನುಗ್ಗಿದ ಯುವಕ: ಕಳ್ಳತನಕ್ಕೆಂದು ಹೋದವನೀಗ ಖಾಕಿ ಅತಿಥಿ! – Kannada News

ಮಧ್ಯರಾತ್ರಿ ಹುಡುಗಿಯರ ಹಾಸ್ಟೆಲ್​​ಗೆ ನುಗ್ಗಿದ ಯುವಕ ಅರೆಸ್ಟ್​​Image Credit source: Tv9 Kannada

ಚಿಕ್ಕಮಗಳೂರು, ಜೂನ್​​ 10: ಸರ್ಕಾರಿ ಮೆಡಿಕಲ್ ಕಾಲೇಜಿನ ಹುಡುಗಿಯರ ಹಾಸ್ಟೆಲ್​​ಗೆ ಮಧ್ಯರಾತ್ರಿ ನುಗ್ಗಿ ಯುವಕಮೋರ್ವ ಓಡಾಟ ನಡೆಸಿರುವ ಘಟನೆ ಚಿಕ್ಕಮಗಳೂರು ನಗರದ ಹೊರವಲಯದಲ್ಲಿ ನಡೆದಿದೆ. ಹುಡುಗಿಯ ಹಾಸ್ಟೆಲ್​​ನಲ್ಲಿ ಮಧ್ಯರಾತ್ರಿ ಯುವಕನ ಕಂಡು ವಿದ್ಯಾರ್ಥಿನಿಯರು ಗಾಬರಿಗೊಂಡಿದ್ದು, ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಪ್ರಕರಣ ಸಂಬಂಧ ಆರೋಪಿ ಉತ್ತರ ಪ್ರದೇಶ ಮೂಲದ ರಾಕೇಶ್ (30) ಎಂಬಾತನನ್ನು ಬಂಧಿಸಲಾಗಿದೆ.

ಕಾಲೇಜು ಆಡಳಿತ ಮಂಡಳಿ ವಿರುದ್ಧ ಆಕ್ರೋಶ

ವಿದ್ಯಾರ್ಥಿನಿಯರು ವಸತಿ ಪಡೆದಿರುವ ಮೆಡಿಕಲ್​​ ಕಾಲೇಜಿನ ಈ ಹಾಸ್ಟೆಲ್​​ನಲ್ಲಿ ಇಂತಹ ಘಟನೆಗಳು ಹೊಸದೇನೂ ಅಲ್ಲ. ಈ ಹಿಂದೆಯೂ ಇದೇ ಮಾದರಿಯ ಘಟನೆಗಳು ನಡೆದಿದ್ದವು. ಹೀಗಿದ್ದರೂ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದ ಕಾಲೇಜು ಆಡಳಿತ ಮಂಡಳಿಯ ವಿರುದ್ಧ ಯುವತಿಯರು ಆಕ್ರೋಶ ಹೊರಹಾಕಿದ್ದಾರೆ. ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮೆಡಿಕಲ್ ಕಾಲೇಜು ಡೀನ್ ಪೊಲೀಸರಿಗೆ ದೂರು ನೀಡಿದ್ದು, ಮೆಡಿಕಲ್ ಕಾಲೇಜು ಹಾಸ್ಟೆಲ್ ಭದ್ರತೆ ಬಗ್ಗೆ ಭಾರಿ ಚರ್ಚೆಗಳು ಶುರುವಾಗಿವೆ.

ಇದನ್ನೂ ಓದಿ: ಎಸ್ಟೇಟ್​​​ನಲ್ಲಿ ಬೀಡುಬಿಟ್ಟ ಕಾಡಾನೆಗಳ ಹಿಂಡು; ಗಜಪಡೆ ಕಂಡು ಸಾರ್ವಜನಿಕರು ಕಂಗಾಲು

ಇನ್ನು ಆರೋಪಿ ರಾಕೇಶ್​​ ಮೆಡಿಕಲ್ ಕಾಲೇಜು ಕಟ್ಟಡದ ಕಾಮಗಾರಿ ನಡೆಸುತ್ತಿದ್ದ ಕಾರ್ಮಿಕನೇ ಎಂಬುದು ಗೊತ್ತಾಗಿದೆ. ಹಾಸ್ಟೆಲ್​​ನೊಳಗೆ ನುಗ್ಗಿ ವಿದ್ಯಾರ್ಥಿನಿಯರ ಜೊತೆ ಆರೋಪಿ ಅನುಚಿತವಾಗಿ ವರ್ತನೆ ಮಾಡಿದ್ದಾನೆ ಎನ್ನಲಾಗಿದ್ದು, ಈತನನ್ನು ವಿದ್ಯಾರ್ಥಿನಿಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಭಾನುವಾರ ರಾತ್ರಿ ಘಟನೆ ನಡೆದಿದ್ದು, ವಿದ್ಯಾರ್ಥಿನಿಯರ ಕೈಯಿಂದ ತಪ್ಪಿಸಿಕೊಂಡು ಓಡಿಹೋಗಲು ಆರೋಪಿ ಯತ್ನಿಸಿದ್ದ. ಹೀಗಾಗಿ ಯಾವ ಕಾರಣಕ್ಕೆ ಈತ ಯುವತಿಯರ ಹಾಸ್ಟೆಲ್​​ಗೆ ತೆರಳಿದ್ದ ಎಂಬುದನ್ನು ಪೊಲೀಸರು ವಿಚಾರಣೆ ನಡೆಸಿದಾಗ, ಕಳ್ಳತನ ಮಾಡಲು ಹೋಗೊದ್ದೆ ಎಂದು ರಾಕೇಶ್​​ ತಪ್ಪೊಪ್ಪಿಕೊಂಡಿದ್ದಾನೆ . ಈ ಹಿಂದೆಯೂ ಆರೋಪಿ ರಾಕೇಶ್​​ ಹಾಸ್ಟೆಲ್​​ಗೆ ನುಗ್ಗಿದ್ದ. ಹೀಗಿದ್ದೂ ಮತ್ತೊಮ್ಮೆ ಅಂತಹುದ್ದೇ ಕೆಲಸ ಮಾಡಿದ್ದಾನೆ ಎಂಬುದು ತನಿಖೆ ವೇಳೆ ಬಯಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 11:33 am, Wed, 10 June 26

Source link

ಮಧ್ಯಪ್ರದೇಶ ರಾಜ್ಯಸಭಾ ಚುನಾವಣೆ: ಮೀನಾಕ್ಷಿ ನಟರಾಜನ್ ನಾಮಪತ್ರ ರದ್ದಾಗಿದ್ದೇಕೆ? ಇಲ್ಲಿದೆ ಮಾಹಿತಿ – Kannada News

ಭೋಪಾಲ್, ಜೂನ್ 10: ಮಧ್ಯಪ್ರದೇಶದ ರಾಜ್ಯಸಭಾ ಚುನಾವಣೆ(Rajya Sabha Election)ಯಲ್ಲಿ ಭಾರಿ ರಾಜಕೀಯ ಹೈಡ್ರಾಮಾ ನಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಸಂಸದೆ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ಚುನಾವಣಾಧಿಕಾರಿಗಳು ಕೊನೆಯ ಕ್ಷಣದಲ್ಲಿ ತಿರಸ್ಕರಿಸಿದ್ದಾರೆ. ಇದು ಕಾಂಗ್ರೆಸ್‌ಗೆ ಭಾರಿ ಆಘಾತ ನೀಡಿದ್ದು, ಬಿಜೆಪಿ ಅಭ್ಯರ್ಥಿ ಮಹೇಶ್ ಅವರ ಅವಿರೋಧ ಆಯ್ಕೆಗೆ ಹಾದಿ ಸುಗಮಗೊಳಿಸಿದೆ.

ನಾಮಪತ್ರ ರದ್ದಾಗಲು ಕಾರಣವೇನು?
ಬಿಜೆಪಿ ಅಭ್ಯರ್ಥಿ ಮಹೇಶ್ ಕೇವತ್ ಅವರು ಚುನಾವಣಾಧಿಕಾರಿಗಳಿಗೆ ಅಧಿಕೃತ ದೂರು ನೀಡಿದ್ದರು. ಅದರ ಪ್ರಕಾರ: ಮೀನಾಕ್ಷಿ ನಟರಾಜನ್ ಅವರು ತೆಲಂಗಾಣದ ಹೈದರಾಬಾದ್ ಕೋರ್ಟ್‌ನಲ್ಲಿ ತಮ್ಮ ವಿರುದ್ಧ ಇರುವ ಒಂದು ಖಾಸಗಿ ದೂರಿಗೆ (Private Complaint) ಸಂಬಂಧಿಸಿದ ಮಾಹಿತಿಯನ್ನು ಚುನಾವಣಾ ಅಫಿಡವಿಟ್‌ನಲ್ಲಿ ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ದೂರಿನ ಆಧಾರದ ಮೇಲೆ, ಚುನಾವಣಾಧಿಕಾರಿಗಳು “ಮಾಹಿತಿ ಮರೆಮಾಚಿದ” ಕಾರಣಕ್ಕಾಗಿ ಅವರ ನಾಮಪತ್ರವನ್ನು ರದ್ದುಗೊಳಿಸಿದರು.

ಪ್ರಕರಣವೇನು?
ವರದಿಗಳ ಪ್ರಕಾರ, ಮೀನಾಕ್ಷಿ ನಟರಾಜನ್ ಅವರು ತೆಲಂಗಾಣದ ಎಐಸಿಸಿ (AICC) ಉಸ್ತುವಾರಿಯಾಗಿದ್ದಾರೆ. 2025 ರಲ್ಲಿ ಹೈದರಾಬಾದ್‌ನ ಮಾಜಿ ಕಾರ್ಪೊರೇಟರ್ ಒಬ್ಬರು ಸ್ಥಳೀಯ ನಾಯಕರೊಬ್ಬರಿಂದ ತಮಗೆ ಜೀವಬೆದರಿಕೆ ಇದೆ ಎಂದು ಕೋರ್ಟ್‌ಗೆ ಖಾಸಗಿ ದೂರು ನೀಡಿದ್ದರು. ಆ ದೂರಿನಲ್ಲಿ ಕಾಂಗ್ರೆಸ್‌ನ ಉನ್ನತ ನಾಯಕರು ತಮಗೆ ನ್ಯಾಯ ಒದಗಿಸಿಲ್ಲ ಎಂದು ಮೀನಾಕ್ಷಿ ನಟರಾಜನ್ ಸೇರಿದಂತೆ 7 ಜನರ ಹೆಸರನ್ನು ಉಲ್ಲೇಖಿಸಿದ್ದರು.

ಈ ಕಾರಣಕ್ಕಾಗಿ ಕೋರ್ಟ್ ಅವರಿಗೆ ಕೇವಲ ನೋಟಿಸ್ ನೀಡಿತ್ತೇ ವಿನಃ ಅವರ ಮೇಲೆ ಯಾವುದೇ ನೇರ ಎಫ್‌ಐಆರ್ ಅಥವಾ ಕ್ರಿಮಿನಲ್ ಕೇಸ್ ದಾಖಲಾಗಿರಲಿಲ್ಲ. ಆದರೆ, ಬಿಜೆಪಿ ಇದನ್ನು ಅಫಿಡವಿಟ್‌ನಲ್ಲಿ ಮರೆಮಾಚಲಾಗಿದೆ ಎಂದು ಆಕ್ಷೇಪಿಸಿತು.

ಮತ್ತಷ್ಟು ಓದಿ: ಕಾಂಗ್ರೆಸ್​ಗೆ ಭಾರೀ ಮುಖಭಂಗ; ರಾಜ್ಯಸಭೆ ಚುನಾವಣೆಗೆ ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕೃತ

ಕಾನೂನು ಏನು ಹೇಳುತ್ತದೆ?
ಪ್ರಜಾ ಪ್ರಾತಿನಿಧ್ಯ ಕಾಯ್ದೆ, 1951 (Representation of the People Act, 1951): ಈ ಕಾಯ್ದೆಯ ಸೆಕ್ಷನ್ 33A ಮತ್ತು ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪುಗಳ ಪ್ರಕಾರ, ಅಭ್ಯರ್ಥಿಯು ತನ್ನ ನಾಮಪತ್ರದ ಜೊತೆ ಸಲ್ಲಿಸುವ ಅಫಿಡವಿಟ್‌ನಲ್ಲಿ ತನ್ನ ಮೇಲಿರುವ ಎಲ್ಲಾ ಕ್ರಿಮಿನಲ್ ಮೊಕದ್ದಮೆಗಳು, ಕೋರ್ಟ್ ನೋಟಿಸ್‌ಗಳು ಮತ್ತು ಬಾಕಿ ಇರುವ ಪ್ರಕರಣಗಳ ವಿವರಗಳನ್ನು ಕಡ್ಡಾಯವಾಗಿ ಮತ್ತು ಪ್ರಾಮಾಣಿಕವಾಗಿ ಘೋಷಿಸಬೇಕು.

ಮಾಹಿತಿ ಮರೆಮಾಚುವಿಕೆ (Concealment of Facts): ಅಭ್ಯರ್ಥಿಯು ಯಾವುದೇ ನ್ಯಾಯಾಲಯದ ಪ್ರಕರಣ ಅಥವಾ ಗಂಭೀರ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಅಫಿಡವಿಟ್‌ನಲ್ಲಿ ಉಲ್ಲೇಖಿಸದಿದ್ದರೆ, ಅದನ್ನು ‘ಅಪೂರ್ಣ ಅಥವಾ ಸುಳ್ಳು ಅಫಿಡವಿಟ್’ ಎಂದು ಪರಿಗಣಿಸಿ ಚುನಾವಣಾಧಿಕಾರಿಗೆ ನಾಮಪತ್ರವನ್ನು ತಿರಸ್ಕರಿಸುವ ಸಂಪೂರ್ಣ ಅಧಿಕಾರವಿರುತ್ತದೆ.

ಕಾಂಗ್ರೆಸ್ ವಾದವೇನು?
ಈ ನಿರ್ಧಾರವನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ಮೀನಾಕ್ಷಿ ನಟರಾಜನ್ ಅವರ ಮೇಲೆ ಯಾವುದೇ ಪೊಲೀಸ್ ಕೇಸ್ ಅಥವಾ ಎಫ್‌ಐಆರ್ ಇಲ್ಲ, ಕೇವಲ ಕೋರ್ಟ್ ನೋಟಿಸ್ ಬಂದಿರುವುದಕ್ಕೆ ನಾಮಪತ್ರ ರದ್ದು ಮಾಡಿರುವುದು ಬೇಜವಾಬ್ದಾರಿತನ ಹಾಗೂ “ಪ್ರಜಾಪ್ರಭುತ್ವದ ಕೊಲೆ” ಎಂದು ಕಾಂಗ್ರೆಸ್ ನಾಯಕರು ದೆಹಲಿಯ ಚುನಾವಣಾ ಆಯೋಗದ  ಕಚೇರಿ ಮುಂದೆ ಭಾರಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಈ ತೀರ್ಪಿನ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಫಿಫಾ ವಿಶ್ವಕಪ್ ಅಂಗಳದಲ್ಲಿ ನಾಲ್ವರು ಭಾರತೀಯ ಮೂಲದವರು! – Kannada News

ಫುಟ್‌ಬಾಲ್ ಜಗತ್ತಿನ ಮಹಾಸಮರ ‘ಫಿಫಾ ವಿಶ್ವಕಪ್ 2026‘ ಕ್ಷಣಗಣನೆ ಶುರುವಾಗಿದೆ.  ಭಾರತ ಫುಟ್‌ಬಾಲ್ ತಂಡವು 2026ರ ಫಿಫಾ ವಿಶ್ವಕಪ್‌ಗೆ ಅರ್ಹತೆ ಪಡೆಯದಿದ್ದರೂ, ಜಾಗತಿಕ ಫುಟ್‌ಬಾಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಮೂಲದ ನಾಲ್ವರು ಆಟಗಾರರು ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಅದು ಸಹ ಮೂರು ವಿಭಿನ್ನ ಖಂಡಗಳ ನಾಲ್ಕು ಪ್ರಮುಖ ರಾಷ್ಟ್ರಗಳ ಪರವಾಗಿ ಎಂಬುದು ವಿಶೇಷ. ಆ ಆಟಗಾರರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…

ಸರ್​ಪ್ರೀತ್ ಸಿಂಗ್ (ನ್ಯೂಝಿಲೆಂಡ್): ಆಕ್ಲೆಂಡ್‌ನಲ್ಲಿ ಜನಿಸಿದ 27 ವರ್ಷದ ಸರ್​ಪ್ರೀತ್ ಸಿಂಗ್ ಅವರ ಪೋಷಕರು ಪಂಜಾಬ್‌ನ ಜಲಂಧರ್ ಮೂಲದವರು. 2019 ರಲ್ಲಿ ಜರ್ಮನಿಯ ಪ್ರಸಿದ್ಧ ‘ಬಯರ್ನ್ ಮ್ಯೂನಿಚ್’ ಕ್ಲಬ್ ಪರ ಆಡುವ ಮೂಲಕ ಜರ್ಮನ್ ಬುಂಡೆಸ್ಲಿಗಾದಲ್ಲಿ ಆಡಿದ ಮೊದಲ ಭಾರತೀಯ ಮೂಲದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದೀಗ ನ್ಯೂಝಿಲೆಂಡ್ ಪರ ಚೊಚ್ಚಲ ವಿಶ್ವಕಪ್ ಪಂದ್ಯವಾಡಲು ಸರ್​ಪ್ರೀತ್ ಸಿಂಗ್ ಸಜ್ಜಾಗಿದ್ದಾರೆ.

ನಿಶಾನ್ ವೇಲುಪಿಳ್ಳೈ (ಆಸ್ಟ್ರೇಲಿಯಾ): ಮೆಲ್ಬೋರ್ನ್‌ನಲ್ಲಿ ಜನಿಸಿದ 25 ವರ್ಷದ ನಿಶಾನ್ ಅವರ ತಾಯಿ ಆಂಗ್ಲೋ-ಇಂಡಿಯನ್ ಮತ್ತು ತಂದೆ ಶ್ರೀಲಂಕಾ/ಮಲೇಷ್ಯಾ ತಮಿಳು ಮೂಲದವರು. ಆಸ್ಟ್ರೇಲಿಯಾದ ‘ಮೆಲ್ಬೋರ್ನ್ ವಿಕ್ಟರಿ’ ಅಕಾಡೆಮಿಯ ಮೂಲಕ ಫುಟ್​ಬಾಲ್ ಅಂಗಳಕ್ಕೆ ಕಾಲಿಟ್ಟ ನಿಶಾನ್, ಚೀನಾ ವಿರುದ್ಧ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಗೋಲು ಬಾರಿಸಿ ಮಿಂಚಿದ್ದರು. ಇದೀಗ ಆಸ್ಟ್ರೇಲಿಯಾ ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿರುವ ನಿಶಾನ್ ವೇಲುಪಿಳ್ಳೆಯನ್ನು ಈ ಬಾರಿ ಆಸ್ಟ್ರೇಲಿಯಾದ ಮುನ್ಪಡೆ ಆಟಗಾರನಾಗಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ತಹ್ಸಿನ್ ಮೊಹಮ್ಮದ್ ಜಮ್ಶೀದ್ (ಖತಾರ್): ಖತಾರ್‌ನ ದೋಹಾದಲ್ಲಿ ಜನಿಸಿದ ಈ 19 ವರ್ಷದ ತಹ್ಸಿನ್ ಮೊಹಮ್ಮದ್ ಜಮ್ಶೀದ್ ಪೋಷಕರು ಕೇರಳದ ಕಣ್ಣೂರು (ತಲಶ್ಶೇರಿ) ಜಿಲ್ಲೆಯವರು. ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ಇವರು, ಖತಾರ್‌ನ ಪ್ರತಿಷ್ಠಿತ ಆಸ್ಪೈರ್ ಅಕಾಡೆಮಿಯ ಪ್ರತಿಭೆ. ಇದೀಗ ಖತಾರ್ ಪರ ವಿಶ್ವಕಪ್​ ಆಡಲು ಸಜ್ಜಾಗಿದ್ದಾರೆ.

ಸ್ಯಾಮ್ಯುಯೆಲ್ ಮುಟುಸಾಮಿ (ಡಿಆರ್ ಕಾಂಗೋ): ಪ್ಯಾರಿಸ್‌ನಲ್ಲಿ ಜನಿಸಿದ 29 ವರ್ಷದ ಸ್ಯಾಮ್ಯುಯೆಲ್ ಅವರ ತಾಯಿ ಕಾಂಗೋ ದೇಶದವರಾದರೆ, ತಂದೆ ಭಾರತೀಯ (ತಮಿಳು) ಮೂಲದ ಗ್ವಾಡೆಲೋಪ್ ನಿವಾಸಿಯಾಗಿದ್ದಾರೆ. ಯುರೋಪಿಯನ್ ಫುಟ್‌ಬಾಲ್‌ನಲ್ಲಿ ದೀರ್ಘಕಾಲದ ಅನುಭವ ಹೊಂದಿರುವ ಇವರು, ಫ್ರಾನ್ಸ್‌ನ ಪ್ರಸಿದ್ಧ ಲೀಗ್ 1 ಕ್ಲಬ್ ಆದ ‘ನಾಂಟೆಸ್’ ಪರ 140 ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ. ಇದೀಗ ಕಾಂಗೋ ಪರ ಮಿಡ್ ಫೀಲ್ಡರ್ ಆಗಿ ಫುಟ್​ಬಾಲ್ ವಿಶ್ವಕಪ್ ಆಡಲು ಸಜ್ಜಾಗಿ ನಿಂತಿದ್ದಾರೆ.

ಇದನ್ನೂ ಓದಿ: RCB ಆಟಗಾರನ ನಿಧಾನಗತಿಯ ಬ್ಯಾಟಿಂಗ್: ಆದರೂ ರೋಚಕ ಗೆಲುವು!

ಫಿಫಾ ವಿಶ್ವಕಪ್ ಯಾವಾಗ ಶುರು?

ಜಾಗತಿಕ ಫುಟ್‌ಬಾಲ್ ಮಹಾಸಮರಕ್ಕೆ ನಾಳೆ (ಜೂನ್ 11) ಚಾಲನೆ ಸಿಗಲಿದೆ. ಜೂನ್ 11 ರಿಂದ ಜುಲೈ 19, 2026 ರವರೆಗೆ ನಡೆಯಲಿರುವ ಈ ಟೂರ್ನಿಗೆ ಅಮೆರಿಕ, ಮೆಕ್ಸಿಕೋ ಹಾಗೂ ಕೆನಡಾ ಆತಿಥ್ಯವಹಿಸಲಿದೆ. ಇನ್ನು ಈ ಟೂರ್ನಿಯ ಪಂದ್ಯಗಳನ್ನು ಭಾರತೀಯ ಅಭಿಮಾನಿಗಳು  Zee5 (ಝೀ5) ಆಪ್ ಮೂಲಕ ಲೈವ್ ವೀಕ್ಷಿಸಬಹುದು.

Published On – 11:10 am, Wed, 10 June 26

Source link

ಉದ್ಯೋಗಾಕಾಂಕ್ಷಿಗಳಿಗೆ ಬಂಪರ್ ಕೊಡುಗೆ: 100 ದಿನಗಳೊಳಗೆ 15 ಸಾವಿರ ಶಾಲಾ ಶಿಕ್ಷಕರ ನೇಮಕಾತಿ! – Kannada News

ಬೆಂಗಳೂರು, ಜೂನ್ 10: ರಾಜ್ಯದಲ್ಲಿ ಸರ್ಕಾರಿ ಶಿಕ್ಷಕರ ಹುದ್ದೆಯ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳಿಗೆ ಶಿಕ್ಷಣ ಇಲಾಖೆಯು ಭರ್ಜರಿ ಸಿಹಿ ಸುದ್ದಿ ನೀಡಿದೆ. ಮುಂಬರುವ 100 ದಿನಗಳ ಒಳಗಾಗಿ 15,000 ಪ್ರಾಥಮಿಕ ಶಾಲಾ ಶಿಕ್ಷಕರ (Teachers) ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸರ್ಕಾರ ಮುಂದಾಗಿದೆ. ಮುಂದಿನ ವಾರದಲ್ಲೇ ಇದಕ್ಕೆ ಸಂಬಂಧಿಸಿದ ಅಧಿಕೃತ ಅಧಿಸೂಚನೆ ಹೊರಬೀಳಲಿದೆ.

ಮುಖ್ಯಾಂಶಗಳು

  • ಮುಂದಿನ 100 ದಿನಗಳ ಒಳಗೆ 15,000 ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪೂರ್ಣಗೊಳ್ಳಲಿದೆ.
  • ಕಂಪ್ಯೂಟರ್ ಶಿಕ್ಷಣಕ್ಕಾಗಿ ಸರ್ಕಾರಿ ಶಾಲೆಗಳಿಗೆ 2,500 ಐಟಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತಿದೆ.
  • ಮುಂದಿನ ವಾರ ಅಧಿಕೃತ ನೋಟಿಫಿಕೇಶನ್ ಪ್ರಕಟವಾಗಲಿದ್ದು, ಎರಡು ತಿಂಗಳಲ್ಲಿ ಪರೀಕ್ಷೆ ನಡೆಯಲಿದೆ.

2500 ಐಟಿ ಶಿಕ್ಷಕರ ನೇಮಕ!

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಪ್ರಸ್ತುತ 80 ಸಾವಿರಕ್ಕೂ ಹೆಚ್ಚು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಕೊರತೆಯಿದೆ. ಈ ಕೊರತೆಯನ್ನು ನೀಗಿಸಲು ಒಟ್ಟು 51 ಸಾವಿರ ಶಿಕ್ಷಕರ ನೇಮಕಾತಿಗೆ ಆರ್ಥಿಕ ಇಲಾಖೆಯ ಅನುಮೋದನೆ ಸಿಕ್ಕಿದ್ದು, ಮೊದಲ ಹಂತದಲ್ಲಿ 15 ಸಾವಿರ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಇದರಲ್ಲಿ ಪ್ರಾಥಮಿಕ, ಪ್ರೌಢಶಾಲೆ, ದೈಹಿಕ ಶಿಕ್ಷಣ ಹಾಗೂ ವಿಶೇಷವಾಗಿ ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ ನೀಡುವ ಉದ್ದೇಶದಿಂದ 2,500 ಐಟಿ (ಮಾಹಿತಿ ತಂತ್ರಜ್ಞಾನ) ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಶೈಕ್ಷಣಿಕ ವರ್ಷದಲ್ಲೇ ಹೊಸ ಶಿಕ್ಷಕರು ಶಾಲೆಗಳಲ್ಲಿ ಬೋಧನೆಗೆ ಲಭ್ಯವಾಗಲಿದ್ದಾರೆ.

ಇದನ್ನೂ ಓದಿ Karnataka Teaching Jobs: ಅತಿಥಿ ಉಪನ್ಯಾಸಕ ಹುದ್ದೆಗಳ ಆಕಾಂಕ್ಷಿಗಳಿಗೆ ಸುವರ್ಣಾವಕಾಶ; ನೇಮಕಾತಿ ವೇಳಾಪಟ್ಟಿ ಪ್ರಕಟ!

ಎರಡು ತಿಂಗಳಲ್ಲಿ ಪರೀಕ್ಷೆ ಮತ್ತು ರಿಸಲ್ಟ್ಸ್

ಶಿಕ್ಷಣ ಇಲಾಖೆಯು ಹೊಸ ಸಿಆರ್‌ ಆಂಡ್ ಆರ್‌ ನಿಯಮಾವಳಿಗಳ ಅಡಿಯಲ್ಲಿ PSTR, GPSTR ಹಾಗೂ HSTR ಹುದ್ದೆಗಳ ಸಮಗ್ರ ವಿವರಗಳನ್ನು ಬಿಡುಗಡೆ ಮಾಡಲಿದೆ. ನೋಟಿಫಿಕೇಶನ್ ಪ್ರಕಟವಾದ ಕೇವಲ ಎರಡು ತಿಂಗಳ ಒಳಗೆ ಪರೀಕ್ಷೆ ನಡೆಸಿ, ಫಲಿತಾಂಶ ಪ್ರಕಟಿಸುವ ಮೂಲಕ ಇಡೀ ನೇಮಕಾತಿ ಪ್ರಕ್ರಿಯೆಯನ್ನು ಶರವೇಗದಲ್ಲಿ ಮುಗಿಸಲು ಇಲಾಖೆ ಸಜ್ಜಾಗಿದೆ. ಕಳೆದ ಹಲವು ವರ್ಷಗಳಿಂದ ಶಿಕ್ಷಕರ ಹುದ್ದೆಗಾಗಿ ಕಾಯುತ್ತಿದ್ದ ಅಭ್ಯರ್ಥಿಗಳಿಗೆ ಇದು ಸುವರ್ಣ ಅವಕಾಶವಾಗಿದ್ದು, ತಕ್ಷಣವೇ ಪರೀಕ್ಷಾ ಸಿದ್ಧತೆ ಆರಂಭಿಸುವಂತೆ ಇಲಾಖೆ ಕೋರಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ನೆಹರು ದಾಖಲೆ ಮುರಿದ ಪ್ರಧಾನಿ ಮೋದಿ: ಜಗತ್ತಿನಾದ್ಯಂತ ಹರಿದುಬಂದ ಅಭಿನಂದನೆಗಳ ಮಹಾಪೂರ, ವಿಶ್ವ ನಾಯಕರು ಹೇಳಿದ್ದೇನು? – Kannada News

ನವದೆಹಲಿ, ಜೂನ್ 10: ಭಾರತದ ಪ್ರಧಾನಿ ನರೇಂದ್ರ ಮೋದಿ(Narendra Modi) ಸತತ 4,399 ದಿನಗಳ ಸುಸ್ಥಿರ ಆಡಳಿತ ಪೂರೈಸಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಈ ಮೂಲಕ ಸ್ವತಂತ್ರ ಭಾರತದಲ್ಲಿ ಸತತವಾಗಿ ಅತಿ ದೀರ್ಘ ಅವಧಿಗೆ ಚುನಾಯಿತರಾದ ಮೊದ ಪ್ರಧಾನಿ ಎಂಬ ಐತಿಹಾಸಿಕ ಮೈಲಿಗಲ್ಲನ್ನು ಅವರು ಸ್ಥಾಪಿಸಿದ್ದಾರೆ.

ಭಾರತವನ್ನು ವಿಶ್ವದ 5ನೇ ಅತಿ ದೊಡ್ಡ ಆರ್ಥಿಕತೆಯನ್ನಾಗಿ ಬೆಳೆಸಿದ ಹಾಗೂ ಜಾಗತಿಕ ವೇದಿಕೆಯಲ್ಲಿ ದೇಶದ ಕೀರ್ತಿ ಹೆಚ್ಚಿಸಿದ ಪ್ರಧಾನಿ ಮೋದಿಯವರ ಈ ಅಪೂರ್ವ ಸಾಧನೆಗೆ ದೇಶ-ವಿದೇಶಗಳ ಪ್ರಮುಖ ನಾಯಕರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಯಾರು ಏನು ಹೇಳಿದರು ಇಲ್ಲಿದೆ ಮಾಹಿತಿ.

ಜಾಗತಿಕ ನಾಯಕರ ಹಾರೈಕೆ
ಮೊಹಮ್ಮದ್ ಮುಯಿಝು (ಮಾಲ್ಡೀವ್ಸ್ ಅಧ್ಯಕ್ಷ): ಭಾರತದ ಅತ್ಯಂತ ದೀರ್ಘಾವಧಿಯ ಚುನಾಯಿತ ಪ್ರಧಾನಿಯಾಗಿ ಈ ಮೈಲಿಗಲ್ಲು ತಲುಪಿದ ನರೇಂದ್ರ ಮೋದಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಪರಸ್ಪರ ಗೌರವ ಮತ್ತು ಸಾರ್ವಭೌಮ ಸಮಾನತೆಯ ಆಧಾರದ ಮೇಲೆ ಭಾರತದೊಂದಿಗೆ ಸಹಕಾರವನ್ನು ಮತ್ತಷ್ಟು ಬಲಪಡಿಸಬೇಕೆಂಬುದು ಮಾಲ್ಡೀವ್ಸ್  ಆಶಯ ಎಂದರು.

ಮುಯಿಝು ಪೋಸ್ಟ್​

ಬೋಲಾ ಅಹ್ಮದ್ ಟಿನುಬು (ನೈಜೀರಿಯಾ ಅಧ್ಯಕ್ಷ): ಈ  ಐತಿಹಾಸಿಕ ಸಾಧನೆಯು ಭಾರತದ ಜನರು ಸತತ ಮೂರು ಅವಧಿಗಳಲ್ಲಿ ಅವರ ನಾಯಕತ್ವದ ಮೇಲೆ ಇಟ್ಟಿರುವ ಅಚಲ ವಿಶ್ವಾಸಕ್ಕೆ ಸಾಕ್ಷಿ. ಪ್ರಧಾನಿ ಮೋದಿ ಅವರು ನೈಜೀರಿಯಾದ ಆಪ್ತ ಸ್ನೇಹಿತ. ಅವರ ಬುದ್ಧಿವಂತಿಕೆ ಮತ್ತು ಧೈರ್ಯ ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದೆ ಎಂದಿದ್ದಾರೆ.

ಅನುರ ಕುಮಾರ ದಿಸಾನಾಯಕ (ಶ್ರೀಲಂಕಾ ಅಧ್ಯಕ್ಷ): ಈ ಮೈಲಿಗಲ್ಲು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಜನರು ನಿಮ್ಮ ನಾಯಕತ್ವದ ಮೇಲೆ ಪದೇ ಪದೇ ಇಟ್ಟಿರುವ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. (2022 ರ ಆರ್ಥಿಕ ಬಿಕ್ಕಟ್ಟಿನ ವೇಳೆ ಭಾರತ ನೀಡಿದ ಬೆಂಬಲ ಹಾಗೂ 2025 ರಲ್ಲಿ ಪ್ರಧಾನಿ ಮೋದಿಯವರಿಗೆ ಲಂಕಾದ ಅತ್ಯುನ್ನತ ‘ಮಿತ್ರ ವಿಭೂಷಣ’ ಗೌರವ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು).

ಶ್ರೀಲಂಕಾ ಅಧ್ಯಕ್ಷರ ಪೋಸ್ಟ್​

ಜೇಮ್ಸ್ ಮರಾಪೆ (ಪಪುವಾ ನ್ಯೂಗಿನಿಯಾ ಪ್ರಧಾನಿ): ವಿಶೇಷ ವೀಡಿಯೊ ಸಂದೇಶ ಕಳುಹಿಸಿರುವ ಅವರು, ಪ್ರಧಾನಿ ಮೋದಿಯವರನ್ನು ನಾಯಕತ್ವದ ಅದ್ಭುತ ಮಾದರಿ ಎಂದು ಬಣ್ಣಿಸಿದ್ದಾರೆ. ಭಾರತದಲ್ಲಿ 20 ಕೋಟಿಗೂ ಅಧಿಕ ಜನರನ್ನು ಬಡತನದಿಂದ ಮೇಲೆತ್ತಿದ ಮೋದಿಯವರ ಸಾಧನೆಯನ್ನು ಅವರು ಶ್ಲಾಘಿಸಿದ್ದಾರೆ.

ಕಮಲಾ ಪ್ರಸಾದ್-ಬಿಸ್ಸೆಸ್ಸರ್ (ಟ್ರಿನಿಡಾಡ್ ಮತ್ತು ಟೊಬೆಗೊ ಪ್ರಧಾನಿ): ಪ್ರಧಾನಿ ಮೋದಿಯವರ ದೂರದೃಷ್ಟಿಯಿಂದಾಗಿ ಭಾರತವು ಜಾಗತಿಕ ವಿಷಯಗಳಲ್ಲಿ ಅತ್ಯಂತ ಪ್ರಮುಖ ಧ್ವನಿಯಾಗಿ ವಿಕಸನಗೊಂಡಿದೆ. ಅತ್ಯಂತ ಸಾಮಾನ್ಯ ಮೂಲದಿಂದ ಬಂದು 1.4 ಬಿಲಿಯನ್ ಜನಸಂಖ್ಯೆಯ ರಾಷ್ಟ್ರವನ್ನು ಮುನ್ನಡೆಸುತ್ತಿರುವ ಅವರ ಪ್ರಯಾಣ ಅದ್ಭುತ.

ಅಮೆರಿಕ ರಾಯಭಾರಿ ಶ್ಲಾಘನೆ
ರಾಯಭಾರಿ ಸೆರ್ಗಿಯೊ ಗೋರ್ (ಭಾರತದಲ್ಲಿನ ಯುಎಸ್ ರಾಯಭಾರಿ): ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಭಾರತದ ಅತಿ ಹೆಚ್ಚು ಕಾಲ ಚುನಾಯಿತ ಪ್ರಧಾನಿಯಾದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು. ಈ ಸಾಧನೆಯು ಅವರ ದಶಕಗಳ ಸಮರ್ಪಿತ ಸಾರ್ವಜನಿಕ ಸೇವೆ ಮತ್ತು ಪ್ರಬಲ ನಾಯಕತ್ವಕ್ಕೆ ಸಾಕ್ಷಿಯಾಗಿದೆ. ಅವರಿಗೆ ಶುಭ ಹಾರೈಕೆಗಳು ಎಂದು ಬರೆದಿದ್ದಾರೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಒಟ್ಟು 14 ವರ್ಷ ಅಧಿಕಾರದಲ್ಲಿದ್ದರೂ ಅವರ ಅವಧಿ ಸತತವಾಗಿರಲಿಲ್ಲ. ಹೀಗಾಗಿ, 2014 ರಿಂದ ಆರಂಭಿಸಿ ಸತತ ಮೂರು ಬಾರಿ ಭರ್ಜರಿ ಜನಾದೇಶ ಪಡೆದು ಮುನ್ನಡೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ರಾಜಕೀಯ ಚರಿತ್ರೆಯಲ್ಲಿ ಅಪ್ರತಿಮ ಜನಪ್ರಿಯ ನಾಯಕನಾಗಿ ಹೊರಹೊಮ್ಮಿದ್ದಾರೆ ಎಂದು ಜಾಗತಿಕ ರಾಜತಾಂತ್ರಿಕ ವಲಯ ಬಿಂಬಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ನರೇಂದ್ರ ಮೋದಿ ಪ್ರಧಾನಿಯಾಗಿ 12 ವರ್ಷ ಪೂರ್ಣ; ಬೆಂಗಳೂರಿನಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ವಿಶೇಷ ಪೂಜೆ – Kannada News

ಬೆಂಗಳೂರು, ಜೂನ್ 10: ನರೇಂದ್ರ ಮೋದಿ (Narendra Modi) ದೇಶದ ಪ್ರಧಾನಮಂತ್ರಿಯಾಗಿ ಯಶಸ್ವಿಯಾಗಿ 12 ವರ್ಷಗಳನ್ನು ಪೂರೈಸಿರುವ ಐತಿಹಾಸಿಕ ಕ್ಷಣದಲ್ಲಿ, ಬೆಂಗಳೂರಿನಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ವಿಶೇಷ ಪೂಜೆ ಸಲ್ಲಿಸಿ ಸಂಭ್ರಮಿಸಿದ್ದಾರೆ. ನಗರದ ವಿಜಯನಗರದ ಆರ್‌ಪಿಸಿ ಲೇಔಟ್‌ನಲ್ಲಿರುವ ಪ್ರಸಿದ್ಧ ಸಂಕಷ್ಟಹರ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವರು, ಪ್ರಧಾನಿ ಮೋದಿಯವರ ಆಯುಷ್ಯ, ಆರೋಗ್ಯ ವೃದ್ಧಿಗಾಗಿ ಹಾಗೂ ದೇಶದ ಸಮೃದ್ಧಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿಜಯನಗರ ಮತ್ತು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರಗಳ ನೂರಾರು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಪೂಜೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸೋಮಣ್ಣ, ಪ್ರಧಾನಿ ಮೋದಿಯವರ ಸುದೀರ್ಘ ನಾಯಕತ್ವವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ಕೇಂದ್ರ ಸಚಿವ ಸಂಪುಟ ಪುನರ್‌ರಚನೆ ವೇಳೆ ವಿ. ಸೋಮಣ್ಣ ಅವರಿಗೆ ಕರ್ನಾಟಕ ರಾಜ್ಯ ರಾಜಕಾರಣದ ಪ್ರಮುಖ ಜವಾಬ್ದಾರಿ ಅಥವಾ ಹೆಚ್ಚಿನ ಹೊಣೆಗಾರಿಕೆ ವಹಿಸುವ ಸಾಧ್ಯತೆಗಳ ಕುರಿತು ಹರಿದಾಡುತ್ತಿರುವ ಸುದ್ದಿಗಳಿಗೆ ಸಚಿವರು ಪ್ರತಿಕ್ರಿಯೆ ನೀಡಿದರು. ಕರ್ನಾಟಕ ರಾಜಕಾರಣದಲ್ಲಿ ನಾನು ವಿವಿಧ ಹಂತಗಳಲ್ಲಿ ಸರಿಸುಮಾರು 45 ವರ್ಷಗಳಿಗೂ ಹೆಚ್ಚು ಕಾಲ ಸುದೀರ್ಘ ರಾಜಕೀಯ ಮಾಡಿದ್ದೇನೆ. ಆದರೆ ಸದ್ಯ ಹರಿದಾಡುತ್ತಿರುವ ಆ ರೀತಿಯ ಯಾವುದೇ ಹೊಸ ಜವಾಬ್ದಾರಿಯ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನಾನು ಬೆಳಗ್ಗೆ ಎದ್ದರೆ ಸಂಜೆಯವರೆಗೂ ಬರೀ ದೇಶ ಸುತ್ತುತ್ತಾ ನನ್ನ ಇಲಾಖೆಯ ಕೆಲಸಗಳಲ್ಲೇ ನಿರತನಾಗಿರುತ್ತೇನೆ ಎಂದು ಸ್ಪಷ್ಟಪಡಿಸಿದರು. ರಾಜಕೀಯ ನಿಲುವನ್ನು ಪುನರುಚ್ಚರಿಸಿದ ಸೋಮಣ್ಣ, ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ದೇಶ ದೊಡ್ಡದು ಎನ್ನುವುದನ್ನು ನಮ್ಮ ಹಿರಿಯ ನಾಯಕರು ನಮಗೆ ಸದಾ ಮನವರಿಕೆ ಮಾಡಿಕೊಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ನಮಗೆ ಕೊಡುವ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದು ಮಾತ್ರ ನನ್ನ ಕರ್ತವ್ಯ ಎಂದು ತಿಳಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Gold Rate: ಹತ್ತು ಗ್ರಾಮ್ ಚಿನ್ನದ ಬೆಲೆ 3,950 ರೂ ಕುಸಿತ; ಬೆಳ್ಳಿಯೂ ಭರ್ಜರಿ ಇಳಿಕೆ – Kannada News

ನವದೆಹಲಿ, ಜೂನ್ 10: ಚಿನ್ನ ಮತ್ತು ಬೆಳ್ಳಿ ಬೆಲೆಗಳೆರಡೂ ಇಂದು ಬುಧವಾರ ಭರ್ಜರಿಯಾಗಿ ಕುಸಿತ ಕಂಡಿವೆ. ಚಿನ್ನದ ಬೆಲೆ ಒಂದು ಗ್ರಾಮ್​ಗೆ ಬರೋಬ್ಬರಿ 395 ರೂನಿಂದ 450 ರೂಗಳವರೆಗೆ ಇಳಿಕೆಯಾಗಿದೆ. ಭಾರತದಲ್ಲಿ ಆಭರಣ ಚಿನ್ನದ ಬೆಲೆ (Gold Rates) 14,000 ರೂ ಗಡಿಯೊಳಗೆ ಬಂದರೆ, ಅಪರಂಜಿ ಚಿನ್ನದ ಬೆಲೆ 15,000 ರೂಗಿಂತ ಕೆಳಗೆ ಇಳಿದಿವೆ. ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಬಂಗಾರದ ದರ ತಗ್ಗಿದೆ. ಹಳದಿ ಲೋಹದಂತೆ ಬಿಳಿ ಲೋಹವಾದ ಬೆಳ್ಳಿ ಬೆಲೆಯೂ ಭರ್ಜರಿ ಇಳಿಕೆ ಕಂಡಿದೆ. ಗ್ರಾಮ್​ಗೆ ಬರೋಬ್ಬರಿ 10 ರೂ ತಗ್ಗಿದೆ. ಬೆಂಗಳೂರಿನಲ್ಲಿ ಇದರ ಬೆಲೆ ಮತ್ತೊಮ್ಮೆ 250 ರೂಗೆ ಇಳಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,36,450 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,48,860 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,36,450 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 25,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 26,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜೂನ್ 10ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,886 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,645 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,164 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,886 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,645 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,645 ರೂ
  • ಚೆನ್ನೈ: 13,800 ರೂ
  • ಮುಂಬೈ: 13,645 ರೂ
  • ದೆಹಲಿ: 13,660 ರೂ
  • ಕೋಲ್ಕತಾ: 13,645 ರೂ
  • ಕೇರಳ: 13,645 ರೂ
  • ಅಹ್ಮದಾಬಾದ್: 13,650 ರೂ
  • ಜೈಪುರ್: 13,660 ರೂ
  • ಲಕ್ನೋ: 13,660 ರೂ
  • ಭುವನೇಶ್ವರ್: 13,645 ರೂ

ಇದನ್ನೂ ಓದಿ: ಆನ್​ಲೈನ್​ನಲ್ಲಿ ಶಾಪಿಂಗ್ ಮಾಡುವ ಹೆಚ್ಚಿನವರಿಗೆ ಟೊಪ್ಪಿಹಾಕುತ್ತಿವೆ ಡಾರ್ಕ್ ಪ್ಯಾಟರ್ನ್ಸ್; ಬೆಚ್ಚಿಬೀಳಿಸುತ್ತಿದೆ ಈ ವರದಿ

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 564 ರಿಂಗಿಟ್ (13,233 ರುಪಾಯಿ)
  • ದುಬೈ: 514.25 ಡಿರಾಮ್ (13,365 ರುಪಾಯಿ)
  • ಅಮೆರಿಕ: 141.50 ಡಾಲರ್ (13,504 ರುಪಾಯಿ)
  • ಸಿಂಗಾಪುರ: 184.60 ಸಿಂಗಾಪುರ್ ಡಾಲರ್ (13,686 ರುಪಾಯಿ)
  • ಕತಾರ್: 517.50 ಕತಾರಿ ರಿಯಾಲ್ (13,547 ರೂ)
  • ಸೌದಿ ಅರೇಬಿಯಾ: 533 ಸೌದಿ ರಿಯಾಲ್ (13,547 ರುಪಾಯಿ)
  • ಓಮನ್: 54.10 ಒಮಾನಿ ರಿಯಾಲ್ (13,410 ರುಪಾಯಿ)
  • ಕುವೇತ್: 43.55 ಕುವೇತಿ ದಿನಾರ್ (13,527 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 250 ರೂ
  • ಚೆನ್ನೈ: 260 ರೂ
  • ಮುಂಬೈ: 250 ರೂ
  • ದೆಹಲಿ: 250 ರೂ
  • ಕೋಲ್ಕತಾ: 250 ರೂ
  • ಕೇರಳ: 260 ರೂ
  • ಅಹ್ಮದಾಬಾದ್: 250 ರೂ
  • ಜೈಪುರ್: 250 ರೂ
  • ಲಕ್ನೋ: 250 ರೂ
  • ಭುವನೇಶ್ವರ್: 260 ರೂ
  • ಪುಣೆ: 250

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version