ಕರ್ನಾಟಕದ ಜಲ ಪ್ರದೇಶಗಳನ್ನು ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ – Kannada News | CM DK Shivakumar Says Appeal Against CWRC Order on Cauvery Water Release to Tamil Nadu

ನವದೆಹಲಿ, (ಜುಲೈ 29): ಕರ್ನಾಟಕದಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದು, ಕುಡಿಯುವ ನೀರಿಗೂ ಬರ ಎದುರಾಗಿದೆ. ಇದರ ಮಧ್ಯೆ CWRC ತಮಿಳುನಾಡಿಗೆ 15 ದಿನಗಳ ಕಾಲ ನಿತ್ಯ 3500 ಕ್ಯೂಸೆಕ್​ ನೀರು ಹರಿಸುವಂತೆ ಕರ್ನಾಟಕಕ್ಕೆ ಆದೇಶಿಸಿದೆ. ಈ ಆದೇಶಕ್ಕೆ ಕರ್ನಾಟಕದಲ್ಲಿ ಭಾರೀ ಆಕ್ರೋಶಗಳು ವ್ಯಕ್ತವಾಗಿದ್ದು, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಬಿಡಬಾರದು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಗಳು ವ್ಯಕ್ತವಾಗುತ್ತಿವೆ. ಇನ್ನು CWRC ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಸರ್ಕಾರ ತೀರ್ಮಾನಿಸಿದೆ. ಈ ಬಗ್ಗೆ ನವದೆಹಲಿಯಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಿಎಂ ಡಿಕೆ ಶಿವಕುಮಾರ್, ಜಲಸಂಪನ್ಮೂಲ ಸಚಿವರು, ಅಧಿಕಾರಿಗಳ ಜೊತೆ ಚರ್ಚಿಸಿದ್ದು, CWRC ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದೇವೆ. ಸುಪ್ರೀಂಕೋರ್ಟ್, CWMAಗೆ ಮೇಲ್ಮನವಿ ಸಲ್ಲಿಸುವ ಬಗ್ಗೆ ನಿರ್ಧಾರ ಮಾಡಿದ್ದು, ಈ ಬಗ್ಗೆ ಕಾನೂನು ತಜ್ಞರು ಸಿದ್ಧತೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ನಮಗೆ ವರುಣ ಕೃಪೆ ತೋರಿಸಿಲ್ಲ. 2 ಸಲ ತಮಿಳುನಾಡು ಮನವಿ ತಿರಸ್ಕರಿಸಿತ್ತು. ಈ ಸಲ ಆದೇಶ ನೀಡಿದೆ.
ನಾವು ಇದರ ವಿರುದ್ಧ ಮೇಲ್ಮನವಿ ಸಲ್ಲಿಸುವುದಕ್ಕೆ ತೀರ್ಮಾನಿಸಿದ್ದೇವೆ. ಈ ಬಗ್ಗೆ ವಿಪಕ್ಷಗಳ ನಾಯಕರ ಜೊತೆಗೆ ಚರ್ಚೆ ಮಾಡುತ್ತೇನೆ. ತಮಿಳುನಾಡು ಸಿಎಂ ಕೂಡಾ ಬಂದು ಮಾತನಾಡುತ್ತಾರೆ. ಫೋನ್‌ನಲ್ಲಿ ಮಾತನಾಡಿದ್ದಾರೆ, ನಾವು ಗೌರವದಿಂದ ಬನ್ನಿ ಅಂದಿದ್ದೇವೆ. ನಮ್ಮ ರಾಜ್ಯದ ಜಲ ಪ್ರದೇಶಗಳನ್ನು ನೋಡಲು ಮನವಿ ಮಾಡಿದ್ದು, ಹೆಲಿಕಾಪ್ಟರ್ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದೇನೆ. ಸೌಹಾರ್ದಯುತವಾಗಿ ಚರ್ಚೆ ಮಾಡಬೇಕಿದೆ, ಅವರ ಉದ್ದೇಶ ಗೊತ್ತಿಲ್ಲ. ಬರ್ತೀನಿ ಅಂದ್ರು, ಗೌರವದಿಂದ ಬರಮಾಡಿಕೊಳ್ಳುತ್ತೇವೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿಗೆ ಅಮಿತ್ ಶಾ ಆದೇಶ’; ರಾಹುಲ್ ಗಾಂಧಿ ಆರೋಪಕ್ಕೆ ರಣರಂಗವಾದ ಸಂಸತ್ – Kannada News | Rahul Gandhi says Home Minister Amit Shah Ordered BJP Demands Apology

ನವದೆಹಲಿ, ಜುಲೈ 29: ಇಂದು ನಡೆದ ಸಂಸತ್ ಅಧಿವೇಶನದ (Parliament Monsoon Session) ವೇಳೆಯೂ ರಾಜಕೀಯ ಕೆಸರೆರಚಾಟ ಮುಂದುವರೆಯಿತೇ ವಿನಃ ಮಸೂದೆಗಳ ಬಗ್ಗೆ ಚರ್ಚೆ ನಡೆಯಲಿಲ್ಲ. ಹೊಸ ಪರೀಕ್ಷಾ ಅಕ್ರಮ ತಡೆ ವಿಧೇಯಕದ ಮೇಲಿನ ಚರ್ಚೆಯ ವೇಳೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ನೀಡಿದ ಹೇಳಿಕೆ ಸಂಸತ್​​ನಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಯಿತು. “ನೀಟ್ (NEET) ಪ್ರತಿಭಟನೆಯ ಸಮಯದಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್, ಗುಂಡಿನ ದಾಳಿ ಮಾಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಆದೇಶ ನೀಡಿದ್ದರು” ಎಂದು ರಾಹುಲ್ ಗಾಂಧಿ ಸದನದಲ್ಲಿ ಆರೋಪಿಸಿದ್ದಾರೆ. ಈ ಹೇಳಿಕೆಗೆ ಆಕ್ರೋಶಗೊಂಡ ಬಿಜೆಪಿ ಸಂಸದರು ರಾಹುಲ್ ಗಾಂಧಿ ಈ ಆರೋಪಕ್ಕೆ ಸಾಕ್ಷ್ಯಾಧಾರಗಳನ್ನು ಒದಗಿಸಬೇಕು, ಇಲ್ಲವಾದರೆ ಅಮಿತ್ ಶಾ ಬಳಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕಾಕ್ರೋಚ್ ಜನತಾ ಪಾರ್ಟಿ (CJP) ಮತ್ತು ನೂರಾರು ವಿದ್ಯಾರ್ಥಿಗಳು ದೆಹಲಿಯ ಜಂತರ್ ಮಂತರ್‌ನಲ್ಲಿ ಪರೀಕ್ಷಾ ಅಕ್ರಮಗಳ ವಿರುದ್ಧ ಪ್ರತಿಭಟನೆ ಆರಂಭಿಸಿದಾಗಿನಿಂದಲೂ, ವಿರೋಧ ಪಕ್ಷಗಳು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡುತ್ತಿವೆ. ಜುಲೈ 20 ರಂದು ನಡೆದ ಪ್ರತಿಭಟನಾ ಮೆರವಣಿಗೆಯ ವೇಳೆ ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್‌ಗಳನ್ನು ಬಳಸಲಾಗಿದೆ ಎಂಬ ಆರೋಪಗಳಿಗೆ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯ ಡೈರಿ ಎಂಟ್ರಿಯು ದೃಢೀಕರಣ ನೀಡಿದ್ದು, ಈ ಪ್ರಕರಣ ಮತ್ತಷ್ಟು ಕಾವು ಪಡೆದುಕೊಂಡಿದೆ.

ಇದನ್ನೂ ಓದಿ: ಕೆಪಿಎಸ್ಸಿ ಕರ್ಮಕಾಂಡ ಬಗ್ಗೆ ರಾಹುಲ್ ಗಾಂಧಿ ಮೌನ ಯಾಕೆ?: ಕಾಂಗ್ರೆಸಿಗರ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ

ರಾಹುಲ್ ಗಾಂಧಿ ಗಂಭೀರ ಆರೋಪ:

ಈ ಹಿನ್ನೆಲೆಯಲ್ಲಿ ಇಂದು ಲೋಕಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ನಮ್ಮ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ನಡೆಸಲು ಗೃಹ ಸಚಿವರು ಆದೇಶ ನೀಡಿದ್ದರು. ಅವರು ನಮ್ಮ ವಿದ್ಯಾರ್ಥಿಗಳ ರಕ್ತದಲ್ಲಿ ಪೆಲೆಟ್‌ಗಳನ್ನು ಹರಿಸಿದರು. ಭಾರತದ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಲು ಅವರು ಆದೇಶಿಸಿದರು” ಎಂದು ಆರೋಪಿಸಿದರು. “ಇಂತಹ ಬಲಪ್ರಯೋಗದ ನಿರ್ಧಾರವನ್ನು ಕೇವಲ ಗೃಹ ಸಚಿವರು ಅಥವಾ ಪ್ರಧಾನಮಂತ್ರಿ ಮಾತ್ರ ಅನುಮೋದಿಸಲು ಸಾಧ್ಯ” ಎಂದು ರಾಹುಲ್ ಗಾಂಧಿ ಹೇಳಿದರು.

ಹಾಗೇ, ತಮ್ಮ ಭಾಷಣದಲ್ಲಿ ಅಮಿತ್ ಶಾ ಅವರ ಹೆಸರನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಈ ದೇಶದ ಗೃಹ ಸಚಿವರಿಗೆ ಸದನಕ್ಕೆ ಬಂದು ಕುಳಿತುಕೊಳ್ಳುವ ಧೈರ್ಯವಿಲ್ಲದಿರುವುದನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ. ನಾನು ಕಾರಿನೊಳಗೆ ಕುಳಿತಿದ್ದ ಗೃಹ ಸಚಿವರು ನಡುಗುತ್ತಾ ನೋಡುತ್ತಿದ್ದುದನ್ನು ಕಂಡೆ” ಎಂದು ಹೇಳಿದರು.

ಕಿರಣ್ ರಿಜಿಜು ಆಕ್ರೋಶ:

ರಾಹುಲ್ ಗಾಂಧಿ ಗೃಹ ಸಚಿವರ ವಿರುದ್ಧ ಆರೋಪ ಮಾಡಿದ ತಕ್ಷಣವೇ, ಬಿಜೆಪಿ ಪಕ್ಷದ ಸಂಸದರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ರಾಹುಲ್ ಗಾಂಧಿಯ ಆರೋಪಗಳಿಗೆ ಸಾಕ್ಷಿ ಎಲ್ಲಿದೆ? ಎಂದು ಅವರು ಪ್ರಶ್ನಿಸಿದರು.

“ದಯವಿಟ್ಟು ಗೃಹ ಸಚಿವರ ಆದೇಶದ ಪ್ರತಿಯನ್ನು ತೋರಿಸಿ. ಯಾವ ಅಧಿಕಾರಿ ನಿಮಗೆ ಇದನ್ನು ಹೇಳಿದರು ಎಂದು ತಿಳಿಸಿ. ರಾಹುಲ್ ಗಾಂಧಿ ಅವರ ಈ ಆರೋಪಕ್ಕೆ ಆಧಾರವೇನು? ನೀವು ವಿರೋಧ ಪಕ್ಷದ ನಾಯಕ. ಯಾವ ಆಧಾರದ ಮೇಲೆ ಇದನ್ನು ಹೇಳುತ್ತಿದ್ದೀರಿ?” ಎಂದು ಸಚಿವ ಕಿರಣ್ ಪ್ರಶ್ನಿಸಿದರು.

ಇದನ್ನೂ ಓದಿ: ವಿದ್ಯಾರ್ಥಿ ಚಳವಳಿಯಲ್ಲಿದ್ದ ಮೇಲೆ ಬಂಧನ ಎದುರಿಸಲು ಸಿದ್ಧರಿರಬೇಕು: ಪ್ರತಿಭಟನಾಕಾರರ ಮೇಲಿನ ಪೊಲೀಸ್ ಕ್ರಮ ಸಮರ್ಥಿಸಿಕೊಂಡ ಜೆಪಿ ನಡ್ಡಾ

“ನಿಮಗೆ ಇದನ್ನು ಯಾರು ಹೇಳಿದರು? ನೀವು ಹೇಳಿದ್ದು ಸಂಪೂರ್ಣ ತಪ್ಪು. ನಾನು ಇದನ್ನು ಆಕ್ಷೇಪಿಸುತ್ತೇನೆ, ಈ ಮಾತುಗಳನ್ನು ಕಲಾಪದಿಂದ ತೆತೆದುಹಾಕಬೇಕು” ಎಂದರು. ಇಷ್ಟೊಂದು ಗಂಭೀರವಾದ ಆರೋಪ ಮಾಡುವುದು ವಿರೋಧ ಪಕ್ಷದ ನಾಯಕ ಸ್ಥಾನದ ಘನತೆಯನ್ನು ತಗ್ಗಿಸುತ್ತದೆ ಹಾಗೂ ಸಂಸತ್ತಿನ ಹಕ್ಕುಚ್ಯುತಿಗೆ ಕಾರಣವಾಗುತ್ತದೆ ಎಂದು ಹೇಳಿದ ಸಚಿವ ಕಿರಣ್ ರಿಜಿಜು, ರಾಹುಲ್ ಗಾಂಧಿ ತಕ್ಷಣವೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಆರ್​ಎಸ್​ಎಸ್​ ಬಗ್ಗೆಯೂ ರಾಹುಲ್ ಆಕ್ಷೇಪ:

ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಶಿಕ್ಷಣ ವ್ಯವಸ್ಥೆ ಮತ್ತು ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತಿರುವ ಪಾಠಗಳ ಮೇಲೆ ಆರ್‌ಎಸ್‌ಎಸ್ ಪ್ರಭಾವ ಬೀರುತ್ತಿದೆ ಎಂದು ಆರೋಪಿಸಿದರು. “ಧರ್ಮೇಂದ್ರ ಪ್ರಧಾನ್ ಅವರು ಎಂದಿಗೂ ಶಿಕ್ಷಣ ಸಚಿವಾಲಯವನ್ನು ನಡೆಸಲಿಲ್ಲ. ಈ ವ್ಯವಸ್ಥೆಯನ್ನು ಆರ್‌ಎಸ್‌ಎಸ್ ವಶಪಡಿಸಿಕೊಂಡಿದೆ. ಈ ಸಚಿವಾಲಯವನ್ನು ನಿಜವಾಗಿ ನಡೆಸುತ್ತಿರುವ ವ್ಯಕ್ತಿ ಮತ್ತು ಸಂಘಟನೆ ಎಂದರೆ ಅದು ಆರ್‌ಎಸ್‌ಎಸ್” ಎಂದು ರಾಹುಲ್ ಟೀಕಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ತಮನ್ನಾ, ಸಮಂತಾ, ಶ್ರೀಲೀಲಾ ಬಳಿಕ ಈಗ ಕಿರ್ತಿ ಸುರೇಶ್ – Kannada News | Keerthy Suresh making her debut to Item song dancing

ಕೀರ್ತಿ ಸುರೇಶ್ (Keerthy Suresh), ದಕ್ಷಿಣ ಭಾರತದ ಸ್ಟಾರ್ ನಟಿ. ಕೆಲ ಹಿಂದಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದ ಕೀರ್ತಿ ಸುರೇಶ್, ಅದ್ಭುತ ನಟಿ ಹಾಗೂ ಒಳ್ಳೆಯ ಡ್ಯಾನ್ಸರ್ ಸಹ. ಆದರೆ ಇತ್ತೀಚೆಗೆ ಕೀರ್ತಿ ಸುರೇಶ್ ಅವರ ಸಿನಿಮಾಗಳು ಬಾಕ್ಸ್ ಆಫೀಸ್​​ನಲ್ಲಿ ಹೆಚ್ಚು ಸದ್ದು ಮಾಡುತ್ತಿಲ್ಲ. ಜೊತೆಗೆ ಕೀರ್ತಿ ಸುರೇಶ್ ಅವರಿಗೆ ಇತ್ತೀಚೆಗೆ ಅದರಲ್ಲೂ ಮದುವೆ ಆದ ಬಳಿಕ ಅವಕಾಶಗಳು ಕಡಿಮೆ ಆಗಿವ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದರ ನಡುವೆಯೇ ಕೀರ್ತಿ ಸುರೇಶ್ ದಿಟ್ಟ ಹೆಜ್ಜೆಯೊಂದನ್ನು ಇಟ್ಟಿದ್ದು, ಮೊದಲ ಬಾರಿಗೆ ಐಟಂ ಹಾಡಿಗೆ ಡ್ಯಾನ್ಸ್ ಮಾಡಲು ನಟಿ ಮುಂದಾಗಿದ್ದಾರೆ.

ದಕ್ಷಿಣದಲ್ಲಿ ನಾಯಕಿಯರಾಗಿ ಹೆಸರು ಮಾಡಿದ್ದ ತಮನ್ನಾ ಭಾಟಿಯಾ, ಸಮಂತಾ, ಪೂಜಾ ಹೆಗ್ಡೆ ಅವರುಗಳು ಐಟಂ ಹಾಡುಗಳಲ್ಲಿ ಕಾಣಿಸಿಕೊಂಡರು ಇತ್ತೀಚೆಗೆ ನಟಿ ಶ್ರೀಲೀಲಾ ಸಹ ‘ಪುಷ್ಪ 2’ ಸಿನಿಮಾದ ಐಟಂ ಹಾಡಿನಲ್ಲಿ ಕಾಣಿಸಿಕೊಂಡರು. ಈಗ ಕೀರ್ತಿ ಸುರೇಶ್ ಸಹ ಐಟಂ ಹಾಡಿಗೆ ಸೊಂಟ ಬಳುಕಿಸಲು ಸಿದ್ಧವಾಗಿದ್ದಾರೆ. ಕೀರ್ತಿ ಸುರೇಶ್ ಅವರು ನಾನಿ ನಟನೆಯ ‘ದಿ ಪ್ಯಾರಡೈಸ್’ ಸಿನಿಮಾದ ಐಟಂ ಹಾಡೊಂದಕ್ಕೆ ಡ್ಯಾನ್ಸ್ ಮಾಡಲಿದ್ದಾರೆ. ಇದು ಅವರ ವೃತ್ತಿ ಜೀವನದ ಮೊದಲ ಐಟಂ ಹಾಡಾಗಿರಲಿದೆ.

‘ದಿ ಪ್ಯಾರಡೈಸ್’ ನಟ ನಾನಿ ಹಾಗೂ ನಿರ್ದೇಶಕ ಶ್ರೀಕಾಂತ್ ಒಡೆಲ ಒಟ್ಟಿಗೆ ಕೆಲಸ ಮಾಡುತ್ತಿರುವ ಎರಡನೇ ಚಿತ್ರವಾಗಿದೆ. ಈ ನಟ ಮತ್ತು ನಿರ್ದೇಶಕರ ಜೋಡಿಯು ಹಿಂದೆ ‘ದಸರಾ’ ಎಂಬ ಬ್ಲಾಕ್ ಬಸ್ಟರ್ ಚಿತ್ರವನ್ನು ನೀಡಿದೆ. ಅದರಲ್ಲಿ ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸಿದ್ದರು. ಈಗ, ಈ ಮೂವರು ‘ದಿ ಪ್ಯಾರಡೈಸ್’ಗಾಗಿ ಮತ್ತೆ ಒಂದಾಗುತ್ತಿದ್ದಾರೆ. ಕೀರ್ತಿ ಇದರಲ್ಲಿ ನಾಯಕಿಯಾಗಿ ನಟಿಸುತ್ತಿಲ್ಲ, ಬದಲಿಗೆ ಅವರು ಚಿತ್ರದಲ್ಲಿ ವಿಶೇಷ ಹಾಡೊಂದಕ್ಕೆ ಹೆಜ್ಜೆ ಹಾಕಲಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ:ಬೋಲ್ಡ್ ಅವತಾರದಲ್ಲಿ ಬಂದ ಹುಚ್ಚ ಸಿನಿಮಾ ನಟಿ ರೇಖಾ

ನಾನಿ ಜೊತೆಗೆ ಕೀರ್ತಿ ಸುರೇಶ್ ಅವರು ಈ ಹಿಂದೆ ‘ನೇನು ಲೋಕಲ್’ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ‘ದಸರಾ’ ಸಿನಿಮಾನಲ್ಲೂ ಈ ಇಬ್ಬರು ಒಟ್ಟಿಗೆ ನಟಿಸಿದ್ದಾರೆ. ಈಗ ನಾನಿಯ ಸಿನಿಮಾ ಮೂಲಕವೇ ಐಟಂ ಹಾಡಿಗೂ ಹೆಜ್ಜೆ ಹಾಕಲು ಮುಂದಾಗಿದ್ದಾರೆ. ಈ ಸಿನಿಮಾಕ್ಕೆ ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಿದ್ದು, ಕೀರ್ತಿ ಸುರೇಶ್ ಅವರ ಆಪ್ತ ಗೆಳೆಯರೂ ಆಗಿರುವ ಅನಿರುದ್ಧ್, ಕೀರ್ತಿ ಅವಿರಗಾಗಿ ವಿಶೇಷ ಹಾಡನ್ನು ರೆಡಿ ಮಾಡಿದ್ದಾರೆ.

‘ದಿ ಪ್ಯಾರಡೈಸ್’ ಸಿನಿಮಾವನ್ನು ಶ್ರೀಕಾಂತ್ ಒಡೆಲ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ನಾನಿ ಮತ್ತು ಕೀರ್ತಿ ಸುರೇಶ್ ನಟಿಸಿದ್ದ ‘ದಸರಾ’ ಸಿನಿಮಾ ಅನ್ನು ಇದೇ ನಿರ್ದೇಶಕರು ನಿರ್ದೇಶಿಸಿದ್ದರು. ಈಗ ಮತ್ತೆ ತಮ್ಮ ಸಿನಿಮಾನಲ್ಲಿ ನಾನಿಯ ಜೊತೆಗೆ ಕೀರ್ತಿ ಅವರನ್ನೂ ಕರೆತಂದಿದ್ದಾರೆ. ‘ದಿ ಪ್ಯಾರಡೈಸ್’ ಸಿನಿಮಾನಲ್ಲಿ ಖಯಾದು ಲೋಹರ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದ ವಿಲನ್ ಪಾತ್ರದಲ್ಲಿ ಬಾಲಿವುಡ್​​ನ ಜನಪ್ರಿಯ ಯುವನಟ ರಾಘವ್ ನಟಿಸಿದ್ದು, ಇದು ಅವರಿಗೆ ಮೊದಲ ದಕ್ಷಿಣದ ಸಿನಿಮಾ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Anti-paper Leak Bill Passed: ವಿರೋಧ ಪಕ್ಷಗಳ ಭಾರಿ ಗದ್ದಲದ ನಡುವೆಯೂ ಲೋಕಸಭೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಮಸೂದೆ ಅಂಗೀಕಾರ – Kannada News | Lok Sabha Clears Landmark Anti Paper Leak Bill Amid Opposition Protests

ನವದೆಹಲಿ, ಜುಲೈ 29: ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಪ್ರತಿಪಕ್ಷಗಳ ಭಾರಿ ಗದ್ದಲ ಮತ್ತು ನಿಯಮಿತ ಘೋಷಣೆಗಳ ನಡುವೆಯೂ, ಲೋಕಸಭೆಯು ಬುಧವಾರ ಮಹತ್ವದ ‘ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯದ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ, 2026’ಅನ್ನು ಅಂಗೀಕರಿಸಿದೆ.ಇತ್ತೀಚೆಗೆ ದೇಶಾದ್ಯಂತ ಭಾರಿ ವಿವಾದ ಸೃಷ್ಟಿಸಿದ್ದ ನೀಟ್ (NEET-UG) ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳನ್ನು ತಡೆಯಲು ಕೇಂದ್ರ ಸರ್ಕಾರ ಈ ಕಠಿಣ ತಿದ್ದುಪಡಿ ಮಸೂದೆಯನ್ನು ಸದನದಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಂಡಿದೆ.

ಸಂಘಟಿತ ಪರೀಕ್ಷಾ ಮಾಫಿಯಾ, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ವಂಚನೆಯಲ್ಲಿ ಭಾಗಿಯಾಗುವ ತಪ್ಪಿತಸ್ಥರಿಗೆ ಕನಿಷ್ಠ 5 ವರ್ಷದಿಂದ ಗರಿಷ್ಠ 10 ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ 50ಲಕ್ಷ ರೂ. ವರೆಗೆ ಭಾರಿ ದಂಡ ವಿಧಿಸಲು ನೂತನ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಪರೀಕ್ಷಾ ಪತ್ರಿಕೆ ಸೋರಿಕೆ ಪ್ರಕರಣಗಳ ಶೀಘ್ರ ತನಿಖೆಗಾಗಿ ಕೇವಲ 2 ತಿಂಗಳ ಗಡುವಿನೊಂದಿಗೆ ವಿಶೇಷ ಕಾರ್ಯಪಡೆ (STF) ರಚಿಸಲಾಗುವುದು. ಪ್ರಕರಣದ ವಿಚಾರಣೆಯನ್ನು 3 ತಿಂಗಳೊಳಗೆ ಪೂರ್ಣಗೊಳಿಸಲು ‘ಫಾಸ್ಟ್ ಟ್ರ್ಯಾಕ್’ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು. ದೇಶದ ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪಾರದರ್ಶಕ, ವಿಶ್ವಾಸಾರ್ಹ ಮತ್ತು ತಂತ್ರಜ್ಞಾನ ಆಧಾರಿತವಾಗಿಸಲು ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ನೇತೃತ್ವದಲ್ಲಿ ಉನ್ನತ ಮಟ್ಟದ ಕಾರ್ಯಪಡೆ ರಚಿಸಲಾಗುತ್ತಿದೆ.

ಮತ್ತಷ್ಟು ಓದಿ: ‘ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಸಂಸತ್​ನಲ್ಲಿ ವಿವರವಾದ ಚರ್ಚೆಗೆ ಸರ್ಕಾರ ಸಿದ್ಧ’; ಜೆ.ಪಿ ನಡ್ಡಾ ಭರವಸೆ

ಜಂತರ್ ಮಂತರ್‌ನಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲಿನ ದೆಹಲಿ ಪೊಲೀಸರ ದೌರ್ಜನ್ಯ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಉತ್ತರವನ್ನಾಗ್ರಹಿಸಿ ಪ್ರತಿಪಕ್ಷಗಳ ನಾಯಕರು ಸದನದ ಭಾವಾವೇಶಕ್ಕೆ ಬಂದು ತೀವ್ರ ಪ್ರತಿಭಟನೆ ನಡೆಸಿದರು. ವಿಪಕ್ಷಗಳ ಈ ಗದ್ದಲದ ನಡುವೆಯೇ ಧ್ವನಿ ಮತದ ಮೂಲಕ ಮಸೂದೆಯನ್ನು ಅಂಗೀಕರಿಸಲಾಯಿತು. ಮಸೂದೆಯ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ್ದ ವಿಪಕ್ಷ ನಾಯಕ ರಾಹುಲ್ ಗಾಂಧಿ, “ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಯಾವುದೇ ಕೋಪವಿರಲಿಲ್ಲ, ಅದು ಅವರ ನೈಜ ಧ್ವನಿಯಾಗಿತ್ತು. ಸರ್ಕಾರ ಅವರ ಬೇಡಿಕೆಗಳನ್ನು ಆಲಿಸಬೇಕು” ಎಂದು ಒತ್ತಾಯಿಸಿದರು.

ಮಸೂದೆಯನ್ನು ಬೆಂಬಲಿಸಿದ ಬಿಜೆಪಿ ಸಂಸದೆ ಬಾನ್ಸುರಿ ಸ್ವರಾಜ್, ಮೋದಿ ಸರ್ಕಾರವು ಯುವಜನರ ಭವಿಷ್ಯವನ್ನು ಕಾಯಲು ‘ಜೆನ್ ಝಿ’ ಶೈಲಿಯಲ್ಲಿ ಸರಿಯಾದ ಸಮಯಕ್ಕೆ ಕ್ರಾಂತಿಕಾರಿ ಕಾನೂನು ತಂದಿದೆ ಎಂದು ಪ್ರಶಂಸಿದ್ದರು. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಬಿಕ್ಕಟ್ಟು ತೀವ್ರಗೊಂಡು ದೇಶಾದ್ಯಂತ 36 ದಿನಗಳ ಕಾಲ ನಡೆದ ವಿದ್ಯಾರ್ಥಿ ಆಂದೋಲನದ ನಂತರ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಸರ್ಕಾರವು ಈ ಕಠಿಣ ಮಸೂದೆಯನ್ನು ರೂಪಿಸಿ ಸಂಸತ್ತಿನ ಅಧಿವೇಶನದಲ್ಲಿ ಅಂಗೀಕರಿಸಿದೆ.

ಲೋಕಸಭೆಯಲ್ಲಿ ಅಂಗೀಕಾರಗೊಂಡಿರುವ ಈ ತಿದ್ದುಪಡಿ ಮಸೂದೆಯು ಈಗ ರಾಜ್ಯಸಭೆಯ ಅನುಮೋದನೆಗೆ ಸಾಗಲಿದ್ದು, ರಾಷ್ಟ್ರಪತಿಯವರ ಅಂಕಿತ ಬಿದ್ದ ನಂತರ ದೇಶಾದ್ಯಂತ ಅಧಿಕೃತವಾಗಿ ಜಾರಿಗೆ ಬರಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪ್ರಯಾಣಿಕನಿಗೆ ಸೇರಿದ 35 ಸಾವಿರ ಮೌಲ್ಯದ ಮದ್ಯದ ಬಾಟಲಿ ಒಡೆದ ಪ್ರಕರಣ: ಇಂಡಿಗೋಗೆ ಶಾಕ್​​ ಕೊಟ್ಟ ಗ್ರಾಹಕರ ಆಯೋಗ – Kannada News | Consumer Court Shock to Indigo: Ordered to Pay Full Cost with Interest and Compensation for Breaking Passenger’s 35k Liquor Bottle

ಹೈದರಾಬಾದ್, ಜುಲೈ 29: ಪ್ರಯಾಣಿಕನ ದುಬಾರಿ ಮದ್ಯದ ಬಾಟಲಿ ಒಡೆದ ಪ್ರಕರಣದಲ್ಲಿ ಕೇವಲ 500 ಮೌಲ್ಯದ ವೋಚರ್​​ ನೀಡಲು ಮುಂದಾಗಿದ್ದ ಇಂಡಿಗೋ ಏರ್‌ಲೈನ್ಸ್‌ಗೆ ಹೈದರಾಬಾದ್ ಜಿಲ್ಲಾ ಗ್ರಾಹಕರ ವಿವಾದ ಪರಿಹಾರ ಆಯೋಗ-III (District Consumer Disputes Redressal Commission-III) ತೀವ್ರ ತರಾಟೆಗೆ ತೆಗೆದುಕೊಂಡಿದೆ. ಒಡೆದ ಬಾಟಲಿಯ ಸಂಪೂರ್ಣ ಮೌಲ್ಯ, ಮಾನಸಿಕ ವೇದನೆಗೆ ಪರಿಹಾರ ಹಾಗೂ ನ್ಯಾಯಾಂಗ ವೆಚ್ಚವನ್ನು ಪಾವತಿಸುವಂತೆ ಆಯೋಗ ಆದೇಶಿಸಿದೆ.

2025ರ ಸೆಪ್ಟೆಂಬರ್ 3ರಂದು ನಡೆದಿದ್ದ ಘಟನೆ

ಯೂಸುಫ್‌ಗುಡ ನಿವಾಸಿ ವಿನೀತ್ ಅವರು 2025ರ ಸೆಪ್ಟೆಂಬರ್ 3ರಂದು ದೆಹಲಿಯಿಂದ ಚೆನ್ನೈಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಿದ್ದರು. ಚೆಕ್-ಇನ್ ವೇಳೆ ತಮ್ಮ ಸೂಟ್‌ಕೇಸ್‌ನಲ್ಲಿ 35,000 ಮೌಲ್ಯದ ಪ್ರೀಮಿಯಂ ವೈಟ್ ಅಂಡ್ ಬ್ಲೂ ಮದ್ಯದ ಬಾಟಲಿ ಇದೆ ಎಂದು ವಿಮಾನಯಾನ ಸಂಸ್ಥೆಯ ಸಿಬ್ಬಂದಿಗೆ ಮುಂಚಿತವಾಗಿಯೇ ತಿಳಿಸಿದ್ದರು. ಇದು ಅತ್ಯಂತ ಸೂಕ್ಷ್ಮ ವಸ್ತುವಾಗಿರುವುದನ್ನೂ ಅವರು ಹೇಳಿದ್ದರು. ಆದರೆ ಚೆನ್ನೈ ತಲುಪಿ ಲಗೇಜ್ ಪಡೆದು ಸೂಟ್‌ಕೇಸ್ ತೆರೆದಾಗ, ಮದ್ಯದ ಬಾಟಲಿ ಸಂಪೂರ್ಣ ಒಡೆದಿರುವುದು ಕಂಡುಬಂದಿತು. ಬಾಟಲಿಯಲ್ಲಿದ್ದ ಮದ್ಯ ಸೋರಿಕೆಯಾಗಿದ್ದು, ಸೂಟ್‌ಕೇಸ್‌ನಲ್ಲಿದ್ದ ಇತರೆ ವಸ್ತುಗಳಿಗೂ ಹಾನಿಯಾಗಿತ್ತು.

ಇದನ್ನೂ ಓದಿ: 15 ಸಾವಿರ ರೂ ಸಿಗುತ್ತೆ ಎಂಬ ಆಸೆಗೆ ತಲೆ ಬೋಳಿಸಿಕೊಂಡ ಮಹಿಳೆಯರು, ಆಮೇಲೆ ಸಿಕ್ಕಿದ್ದೇನು?

ಪ್ರಯಾಣಿಕರದ್ದೇ ಜವಾಬ್ದಾರಿ ಎಂದಿದ್ದ ಇಂಡಿಗೋ

ವಿಮಾನ ನಿಲ್ದಾಣದಲ್ಲೇ ದೂರು ನೀಡಿದ ಬಳಿಕವೂ ಯಾವುದೇ ಸಮರ್ಪಕ ಪ್ರತಿಕ್ರಿಯೆ ಸಿಗದ ಕಾರಣ ವಿನೀತ್ ಇ-ಮೇಲ್ ಮೂಲಕ ಇಂಡಿಗೋವನ್ನು ಸಂಪರ್ಕಿಸಿದರು. ಬಾಟಲಿಯನ್ನು ಸರಿಯಾಗಿ ಪ್ಯಾಕ್ ಮಾಡಲಾಗಿತ್ತು ಎಂಬುದನ್ನು ಇಂಡಿಗೋ ಒಪ್ಪಿಕೊಂಡರೂ, ತಮ್ಮ ಲಗೇಜ್ ನಿಯಮಗಳ ಪ್ರಕಾರ ಸೂಕ್ಷ್ಮ ವಸ್ತುಗಳನ್ನು ಪ್ರಯಾಣಿಕರು ತಮ್ಮದೇ ಜವಾಬ್ದಾರಿಯಲ್ಲಿ ಸಾಗಿಸಬೇಕು ಎಂದು ಹೇಳಿ ಕೇವಲ 500 ರೂ. ಮೌಲ್ಯದ ವೋಚರ್ ನೀಡಲು ಮುಂದಾಗಿತ್ತು. ಇದರಿಂದ ಅಸಮಾಧಾನಗೊಂಡ ವಿನೀತ್ ಮೊದಲು ಕಾನೂನು ನೋಟಿಸ್ ನೀಡಿ, ಬಳಿಕ ಗ್ರಾಹಕರ ಆಯೋಗದ ಮೊರೆ ಹೋಗಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಹೈದರಾಬಾದ್ ಜಿಲ್ಲಾ ಗ್ರಾಹಕರ ವಿವಾದ ಪರಿಹಾರ ಆಯೋಗ-III, ಚೆಕ್-ಇನ್ ಲಗೇಜ್ ಅನ್ನು ನಿರ್ಲಕ್ಷ್ಯದಿಂದ ನಿರ್ವಹಿಸಿರುವುದರಿಂದ ಇಂಡಿಗೋ ಸೇವೆಯಲ್ಲಿ ಲೋಪವಾಗಿದೆ ಎಂದು ತೀರ್ಪು ನೀಡಿದೆ. ಒಡೆದ ಮದ್ಯದ ಬಾಟಲಿಗೆ 35,000 ಪರಿಹಾರವನ್ನು ವಾರ್ಷಿಕ 9% ಬಡ್ಡಿಯೊಂದಿಗೆ, ಮಾನಸಿಕ ವೇದನೆಗೆ 15,000, ಹಾಗೂ ನ್ಯಾಯಾಂಗ ವೆಚ್ಚಕ್ಕೆ 5,000 ಪಾವತಿಸುವಂತೆ ಆಯೋಗವು ಇಂಡಿಗೋಗೆ ಆದೇಶಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ICC ODI Ranking: ಏಕದಿನದಲ್ಲಿ ಪ್ರಿನ್ಸ್ ಶುಭ್​ಮನ್ ಗಿಲ್​ಗೆ ನಂ.1 ಕಿರೀಟ – Kannada News | Shubman Gill No. 1 ODI Batsman: Tops ICC Rankings after Stellar Performance

ಅಫ್ಘಾನಿಸ್ತಾನ ಹಾಗೂ ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಟೀಂ ಇಂಡಿಯಾ ನಾಯಕ ಶುಭ್​ಮನ್ ಗಿಲ್ ಏಕದಿನ ಬ್ಯಾಟ್ಸ್‌ಮನ್​ಗಳ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಕಳೆದ ವಾರ ಕೇವಲ 1 ಪಾಯಿಂಟ್​ನಿಂದ ಅಗ್ರಸ್ಥಾನದಿಂದ ವಂಚಿತರಾಗಿದ್ದ ಗಿಲ್, ಈ ವಾರ ಅಗ್ರಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ(PC-PTI).

ಕಳೆದ ನಾಲ್ಕು ಏಕದಿನ ಇನ್ನಿಂಗ್ಸ್‌ಗಳಲ್ಲಿ ಗಿಲ್ ಎರಡು ಅರ್ಧಶತಕ ಮತ್ತು ಒಂದು ಶತಕ ಬಾರಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳಲ್ಲಿ ಗಿಲ್ 188 ರನ್‌ ಕಲೆಹಾಕಿದ್ದರು. ಈ ವರ್ಷ, ಶುಭ್​ಮನ್ ಗಿಲ್ 142 ಸರಾಸರಿಯಲ್ಲಿ 426 ರನ್ ಗಳಿಸಿದ್ದಾರೆ, ಸ್ಟ್ರೈಕ್ ರೇಟ್ 116.71 ಆಗಿದೆ. ಏಕದಿನ ವೃತ್ತಿಜೀವನದಲ್ಲಿ ಗಿಲ್ 60.33 ಸರಾಸರಿಯಲ್ಲಿ 3,379 ರನ್‌ಗಳನ್ನು ಗಳಿಸಿದ್ದಾರೆ. ಈ ಅಂಕಿಅಂಶಗಳೇ ಏಕದಿನ ಸ್ವರೂಪದಲ್ಲಿ ಗಿಲ್​ನ ಅಗ್ರಸ್ಥಾನಕ್ಕೇರಿಸಿವೆ(PC-PTI).

ಶುಭ್​ಮನ್ ಗಿಲ್ 801 ಪಾಯಿಂಟ್​​ಗಳೊಂದಿಗೆ ಅಗ್ರಸ್ಥಾನಕ್ಕೇರಿದರೆ, ಇಷ್ಟು ದಿನ ಅಗ್ರಸ್ಥಾನದಲ್ಲಿದ್ದ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಡ್ಯಾರಿಲ್ ಮಿಚೆಲ್ 794 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಇಬ್ಬರ ನಡುವೆ 7 ಅಂಕಗಳ ಅಂತರವಿದೆ. ಉಳಿದಂತೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ(PC-PTI).

ವಿರಾಟ್ ಕೊಹ್ಲಿ 767 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ರೋಹಿತ್ ಶರ್ಮಾ 758 ರೇಟಿಂಗ್ ಪಾಯಿಂಟ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇಬ್ರಾಹಿಂ ಜದ್ರಾನ್ 712 ರೇಟಿಂಗ್‌ನೊಂದಿಗೆ ಐದನೇ ಸ್ಥಾನದಲ್ಲಿದ್ದು, ಬಾಬರ್ ಆಝಂ 689 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಆರನೇ ಸ್ಥಾನದಲ್ಲಿದ್ದಾರೆ. ಜೋ ರೂಟ್ 674 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಈ ಶ್ರೇಯಾಂಕದಲ್ಲಿ 8 ನೇ ಸ್ಥಾನದಲ್ಲಿದ್ದಾರೆ(PC-PTI).

ಇನ್ನು ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದ ಬಗ್ಗೆ ಹೇಳುವುದಾದರೆ, ಟಾಪ್ -10 ಬ್ಯಾಟ್ಸ್‌ಮನ್‌ಗಳಲ್ಲಿ ಕೇವಲ ಇಬ್ಬರು ಭಾರತೀಯರು ಮಾತ್ರ ಇದ್ದಾರೆ. ಭಾರತದ ನಾಯಕ ಶುಭ್​ಮನ್ ಗಿಲ್ ಪ್ರಸ್ತುತ 7 ನೇ ಸ್ಥಾನದಲ್ಲಿದ್ದರೆ, ಯಶಸ್ವಿ ಜೈಸ್ವಾಲ್ 9 ನೇ ಸ್ಥಾನದಲ್ಲಿದ್ದಾರೆ. ಗಿಲ್ ಪ್ರಸ್ತುತ 743 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದರೆ, ಯಶಸ್ವಿ 733 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದಾರೆ(PC-PTI).

Published On – 3:27 pm, Wed, 29 July 26

Source link

ಲೋಕಾಪುರ ಡಿಸಿಸಿ ಬ್ಯಾಂಕ್​​ನಲ್ಲಿ ಗೋಲ್​ಮಾಲ್: ಪರ್ಸನಲ್ ಖಾತೆಗೆ ಹಣ ಹಾಕಿಸಿಕೊಂಡು ಮ್ಯಾನೇಜರ್ ಎಸ್ಕೇಪ್ – Kannada News | Lokapur DCC Bank Manager Absconds with 65 Lakh: Police Launch Investigation

ಡಿಸಿಸಿ ಬ್ಯಾಂಕ್ ಶಾಖೆImage Credit source: tv9 kannada

ಬಾಗಲಕೋಟೆ, ಜುಲೈ 29: ಜಿಲ್ಲೆಯ ಡಿಸಿಸಿ ಬ್ಯಾಂಕ್​​ನಲ್ಲಿ (DCC Bank) ಈ ಹಿಂದೆ 12 ಕೋಟಿರೂ ಬೃಹತ್ ಹಗರಣವೊಂದು ನಡೆದಿತ್ತು. ಇದೀಗ ಮತ್ತೊಂದು ಗೋಲಮಾಲ್ ಬೆಳಕಿಗೆ ಬಂದಿದೆ. ಬ್ಯಾಂಕ್​​ ಮ್ಯಾನೇಜರ್​ ಬರೋಬ್ಬರಿ 65 ಲಕ್ಷ ರೂ ಎಗರಿಸಿ ಪರಾರಿ ಆಗಿರುವ ಘಟನೆ ಬಾಗಲಕೋಟೆ (bagalkot) ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರದಲ್ಲಿ ನಡೆದಿದೆ. ಬ್ಯಾಂಕ್ ಮ್ಯಾನೇಜರ್ ಗುರುರಾಜ್ ಶಿವರಾಜ್​ ವಿರುದ್ಧ ಲೋಕಾಪುರ ಪೋಲಿಸ್​ ಠಾಣೆಯಲ್ಲಿ ಎಫ್​ಐಆರ್​​ ದಾಖಲಾಗಿದೆ.

ನಡೆದಿದ್ದೇನು?

ಲೋಕಾಪುರ ಪಟ್ಟಣದಲ್ಲಿರುವ ಡಿಸಿಸಿ ಬ್ಯಾಂಕ್​​​ನಲ್ಲಿ ಕಳೆದ 12 ವರ್ಷಗಳಿಂದ ಬ್ರ್ಯಾಂಚ್ ಮ್ಯಾನೇಜರ್​​ ಆಗಿ ಗುರುರಾಜ್ ಶಿವರಾಜ​​ ಕೆಲಸ ಮಾಡುತ್ತಿದ್ದರು. ಮಾರ್ಚ್ 31 ರಂದು ಬ್ಯಾಂಕ್‌ಗೆ ಸೇರಿದ ಎಸ್‌ಬಿಐ ಖಾತೆಯಿಂದ ನೇರವಾಗಿ ತಮ್ಮ ಐಡಿಎಫ್‌ಸಿ ವೈಯಕ್ತಿಕ ಖಾತೆಗೆ 65 ಲಕ್ಷ ರೂ ವರ್ಗಾಯಿಸಿಕೊಂಡು ದುರ್ಬಳಕೆ ಮಾಡಿಕೊಂಡಿದ್ದಾರೆ.

ಮೊಬೈಲ್ ಸ್ವಿಚ್ ಆಫ್ ಮಾಡಿ ತಲೆಮರೆಸಿಕೊಂಡ ಗುರುರಾಜ್

ಮ್ಯಾನೇಜರ್ ಗುರುರಾಜ್ ದೀರ್ಘ ರಜೆಯ ಮೇಲೆ ತೆರಳಿದ್ದಾಗ, ಆ ಹುದ್ದೆಗೆ ಮತ್ತೊಬ್ಬ ಮ್ಯಾನೇಜರ್​ ಅನ್ನು ನೇಮಕ ಮಾಡಲಾಗಿದ್ದು, ಆಗ ವಂಚನೆ ಬೆಳಕಿಗೆ ಬಂದಿದೆ. ಇನ್ನು ಇತ್ತ ಕಳೆದ ಹಲವು ವಾರಗಳಿಂದ ಬ್ಯಾಂಕಿಗೆ ಬಾರದೆ ಗುರುರಾಜ್​ ಗೈರಾಗಿದ್ದು, ಕಳೆದ ನಾಲ್ಕು ದಿನಗಳಿಂದ ತಮ್ಮ ಮೊಬೈಲ್ ಫೋನ್ ಅನ್ನು ಸಹ ಸ್ವಿಚ್ ಆಫ್ ಮಾಡಿಕೊಂಡು ಎಸ್ಕೇಪ್ ಆಗಿದ್ದಾರೆ.

ಇದನ್ನೂ ಓದಿ: ಹೆಚ್ಚಿನ ಬಡ್ಡಿ ಆಸೆ ತೋರಿಸಿ ಕೋಟಿ ಕೋಟಿ ವಂಚನೆ: ಮಹಿಳಾ ಸಂಘದ ಹೆಸರಲ್ಲಿ ಲೂಟಿ ಹೊಡೆದ ಮಹಿಳೆಯರು

ಇನ್ನು ಈ ಸಂಬಂಧ ಲೋಕಾಪುರ ಪೊಲೀಸ್ ಠಾಣೆಯಲ್ಲಿ ಎಫ್​​ಐಆರ್​ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಮ್ಯಾನೇಜರ್ ಗುರುರಾಜ್ ಶಿವರಾಜ ಬಂಧನಕ್ಕೆ ಲೋಕಾಪುರ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಬೇಲೂರು ಚನ್ನಕೇಶವಸ್ವಾಮಿ ದೇಗಲದ ಹುಂಡಿ ಎಣಿಕೆ ವೇಳೆ 1.98 ಲಕ್ಷ ರೂ. ಜಾಕೆಟ್ ಒಳಗೆ ಇಳಿಸಿ ಎಗರಿಸಿ ಸಿಕ್ಕಿಬಿದ್ದ ಆಸಾಮಿ

ಇದೇ ಡಿಸಿಸಿ ಬ್ಯಾಂಕ್‌ನ ಅಮೀನಗಢ ಹಾಗೂ ಕಮತಗಿ ಶಾಖೆಗಳಲ್ಲಿ ಈ ಹಿಂದೆ ಪ್ಯೂನ್​ನಿಂದ 12 ಕೋಟಿ ರೂ ಬೃಹತ್ ಹಗರಣ ನಡೆದಿತ್ತು. ಇದೀಗ ಮತ್ತೆ ಲೋಕಾಪುರ ಶಾಖೆಯಲ್ಲಿ ಮ್ಯಾನೇಜರ್‌ನಿಂದಲೇ ಇಂತಹ ವಂಚನೆ ನಡೆದಿರುವುದು ಗ್ರಾಹಕರಲ್ಲಿ ಸದ್ಯ ಆತಂಕ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಇನ್ಮುಂದೆ ನೋಟುಗಳು ಹರಿಯಲ್ಲ, ನೀರಿಗೆ ನೆನೆಯಲ್ಲ: 200 ಕೋಟಿ ಪ್ಲಾಸ್ಟಿಕ್ ನೋಟು ಮುದ್ರಣ; ಕಾಗದದ ನೋಟುಗಳು ಬಂದ್ ಆಗುತ್ತಾ? – Kannada News | India Gets Polymer Notes: RBI’s New Durable Plastic Currency Trials and Benefits

ದೆಹಲಿ, ಜು.29: ಭಾರತೀಯ ರಿಸರ್ವ್ ಬ್ಯಾಂಕ್ (RBI) ದೇಶದಲ್ಲಿ ಪ್ರಥಮ ಬಾರಿಗೆ ಪ್ಲಾಸ್ಟಿಕ್ (ಪಾಲಿಮರ್) ಕರೆನ್ಸಿ ನೋಟುಗಳನ್ನು ಪ್ರಾಯೋಗಿಕವಾಗಿ ಚಲಾವಣೆಗೆ ತರಲು ಮಹತ್ವದ ಹೆಜ್ಜೆ ಇಟ್ಟಿದೆ. 10 ಹಾಗೂ 20 ರೂ. ಮುಖಬೆಲೆಯ ಒಟ್ಟು 200 ಕೋಟಿ (2 ಬಿಲಿಯನ್) ಪ್ಲಾಸ್ಟಿಕ್ ನೋಟುಗಳನ್ನು ಪ್ರಾಯೋಗಿಕ ಪರೀಕ್ಷೆಗೆ (Field Trials) ಮುದ್ರಿಸುವ ಆರ್‌ಬಿಐ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಅಂಕಿತ ನೀಡಿದೆ ಎಂದು ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

100 ಕೋಟಿ (1 ಬಿಲಿಯನ್) 10 ರೂ. ಮುಖಬೆಲೆ ನೋಟಗಳನ್ನು ಹಾಗೂ 100 ಕೋಟಿ 20 ರೂ. ಮುಖಬೆಲೆಯ ಪ್ಲಾಸ್ಟಿಕ್ ನೋಟುಗಳ ಮುದ್ರಣ ಮಾಡಲಾಗುತ್ತದೆ. ಈ ಪ್ರಾಯೋಗಿಕ ಪರೀಕ್ಷೆಗಳು (Field Trials) ಯಶಸ್ವಿಯಾದ ನಂತರವಷ್ಟೇ ಇವುಗಳನ್ನು ಪೂರ್ಣ ಪ್ರಮಾಣದಲ್ಲಿ ಸಾರ್ವಜನಿಕ ಚಲಾವಣೆಗೆ ನೀಡಲಾಗುತ್ತದೆ.

ಕಾಗದದ ನೋಟುಗಳು ಬಂದ್ ಮಾಡಲಾಗುತ್ತಾ?

ಕಾಗದದ ನೋಟುಗಳನ್ನು ಸಂಪೂರ್ಣವಾಗಿ ಹಿಂಪಡೆಯುವ ಅಥವಾ ಬಂದ್ ಮಾಡುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಹೊಸ ಪ್ಲಾಸ್ಟಿಕ್ ನೋಟುಗಳು ಮತ್ತು ಚಾಲ್ತಿಯಲ್ಲಿರುವ ಕಾಗದದ ನೋಟುಗಳು ಮಾರುಕಟ್ಟೆಯಲ್ಲಿ ಒಟ್ಟಿಗೇ (ಸಮಾಂತರವಾಗಿ) ಚಲಾವಣೆಯಲ್ಲಿರಲಿವೆ.

ಡಿಜಿಟಲ್ ಪಾವತಿ (UPI) ಮೇಲಾಗುವ ಪರಿಣಾಮ:

ಪ್ರಸ್ತುತ ಈ ಯೋಜನೆ ಆರಂಭಿಕ ಹಂತದಲ್ಲಿದೆ. ಪ್ಲಾಸ್ಟಿಕ್ ನೋಟುಗಳು ಪೂರ್ಣಪ್ರಮಾಣದಲ್ಲಿ ಜಾರಿಯಾದ ಮೇಲಷ್ಟೇ ಡಿಜಿಟಲ್ ಪಾವತಿಗಳ ಮೇಲಾಗುವ ಪರಿಣಾಮವನ್ನು ಅಳೆಯಬಹುದು. ನಗದು ಹಣ ಮತ್ತು ಡಿಜಿಟಲ್ ಪಾವತಿ ವ್ಯವಸ್ಥೆಗಳು ಒಂದಕ್ಕೊಂದು ಪೂರಕವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಸರ್ಕಾರ ತಿಳಿಸಿದೆ.

ಪ್ಲಾಸ್ಟಿಕ್ (ಪಾಲಿಮರ್) ನೋಟುಗಳ ವಿಶೇಷತೆ ಏನು?

ಪ್ರಸ್ತುತ ಬಳಸಲಾಗುವ ಕಾಗದದ ನೋಟುಗಳಿಗೆ ಹೋಲಿಸಿದರೆ ಪ್ಲಾಸ್ಟಿಕ್ (ಪಾಲಿಮರ್) ನೋಟುಗಳು 2ರಿಂದ 6 ಪಟ್ಟು ಹೆಚ್ಚು ಕಾಲ ಬಾಳಿಕೆ ಬರುತ್ತವೆ. ಇವು ನೀರಿಗೆ ನೆನೆಯುವುದಿಲ್ಲ, ಸುಲಭವಾಗಿ ಹರಿಯುವುದಿಲ್ಲ ಹಾಗೂ ಕೊಳೆಯಾಗುವುದಿಲ್ಲ. ಪ್ಲಾಸ್ಟಿಕ್ ನೋಟುಗಳ ಆರಂಭಿಕ ಮುದ್ರಣ ವೆಚ್ಚ ಹೆಚ್ಚಿದ್ದರೂ, ಇವು ದೀರ್ಘಕಾಲ ಬಾಳಿಕೆ ಬರುವುದರಿಂದ ಹೊಸ ನೋಟುಗಳನ್ನು ಪದೇ ಪದೇ ಮುದ್ರಿಸುವ, ರವಾನಿಸುವ ಹಾಗೂ ಹಳೆಯ ನೋಟುಗಳನ್ನು ನಾಶಪಡಿಸುವ ಆರ್‌ಬಿಐನ ವೆಚ್ಚ ಗಣನೀಯವಾಗಿ ಕಡಿಮೆಯಾಗಲಿದೆ. ಪಾಲಿಮರ್ ನೋಟುಗಳಲ್ಲಿ ಆಧುನಿಕ ಭದ್ರತಾ ವೈಶಿಷ್ಟ್ಯಗಳು (ಪಾರದರ್ಶಕ ವಿಂಡೋ ಇತ್ಯಾದಿ) ಇರುವುದರಿಂದ ನಕಲಿ ನೋಟುಗಳನ್ನು ತಡೆಯಲು ನೆರವಾಗಲಿದೆ.

ಸ್ತುತ ಭಾರತದ ಕರೆನ್ಸಿ ನೋಟುಗಳನ್ನು ಹೇಗೆ ತಯಾರಿಸಲಾಗುತ್ತದೆ?

ಭಾರತದಲ್ಲಿ ಪ್ರಸ್ತುತ ಚಲಾವಣೆಯಲ್ಲಿರುವ ಕಾಗದದ ನೋಟುಗಳನ್ನು ಮರಗಳ ಜಜ್ಜಿದ ಕಚ್ಚಾವಸ್ತುವಿನಿಂದ ತಯಾರಿಸುವುದಿಲ್ಲ. ಬದಲಾಗಿ, 100% ಶುದ್ಧ ಹತ್ತಿ ದಾರಗಳಿಂದ (Cotton Fibres) ತಯಾರಿಸಲಾಗುತ್ತದೆ. ಹೀಗಾಗಿ ಭಾರತೀಯ ನೋಟುಗಳ ತಯಾರಿಕೆಯಿಂದ ಸಾಂಪ್ರದಾಯಿಕ ಮರಗಳ ನಾಶವಾಗುವುದಿಲ್ಲ.

ಇದನ್ನೂ ಓದಿ: ಮೊಬೈಲ್‌ನಲ್ಲೇ ವಿದ್ಯುತ್ ಬಿಲ್ ಪಾವತಿಸುವುದು ಹೇಗೆ?: ಸರಳ ಮತ್ತು ಸುಲಭ ವಿಧಾನ

ಜಾಗತಿಕ ಮಟ್ಟದಲ್ಲಿ ಪ್ಲಾಸ್ಟಿಕ್ ನೋಟುಗಳ ಬಳಕೆ:

1988ರಲ್ಲಿ ವಿಶ್ವದಲ್ಲೇ ಮೊದಲ ಬಾರಿಗೆ ಆಸ್ಟ್ರೇಲಿಯಾ ಪೂರ್ಣ ಪ್ರಮಾಣದಲ್ಲಿ ಪ್ಲಾಸ್ಟಿಕ್ ನೋಟುಗಳನ್ನು ಪರಿಚಯಿಸಿತು. ಪ್ರಸ್ತುತ ಬ್ರಿಟನ್ (UK), ಕೆನಡಾ, ನ್ಯೂಜಿಲೆಂಡ್, ಸಿಂಗಾಪುರ್, ಮಲೇಶಿಯಾ ಹಾಗೂ ಥೈಲ್ಯಾಂಡ್ ಸೇರಿದಂತೆ ವಿಶ್ವದ ೬೦ಕ್ಕೂ ಹೆಚ್ಚು ದೇಶಗಳು ಪಾಲಿಮರ್ ಕರೆನ್ಸಿಯನ್ನು ಯಶಸ್ವಿಯಾಗಿ ಬಳಸುತ್ತಿವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿದ್ದರಬೆಟ್ಟದಲ್ಲಿ ಎಣ್ಣೆ ಪಾರ್ಟಿ: ಒಂದೇ ಬಾರಿಗೆ 6 ಪಿಡಿಒ, ಇಬ್ಬರು ಕಾರ್ಯದರ್ಶಿಗಳು ಸಸ್ಪೆಂಡ್ – Kannada News | Bengaluru rural CEO Suspends 6 Panchayt PDOs over Party During duty hours at Siddarabetta

ಬೆಂಗಳೂರು, (ಜುಲೈ 29): ಕೆಲಸದ ಅವಧಿಯಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಿದ್ದರಬೆಟ್ಟದ ತಪ್ಪಲಲ್ಲಿ ಮದ್ಯ ಸಹಿತ ಪಾರ್ಟಿ ಮಾಡಿದ ವಿಡಿಯೋ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ಬೆಂಗಳೂರು ಗ್ರಾಮಾಂತರ (bengaluru rural) ಜಿಲ್ಲೆಯ 6 ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಓ) ಹಾಗೂ ಇಬ್ಬರು ಕಾರ್ಯದರ್ಶಿಗಳನ್ನು ಅಮಾನತು ಮಾಡಲಾಗಿದೆ. ಪಿಡಿಒಗಳಾದ ರವಿಶಂಕರ್, ಗಿರೀಶ್, ಹರೀಶ್, ಪ್ರಶಾಂತ್, ದಿನೇಶ್, ಚಿರಂಜೀವಿ, ಕಾರ್ಯದರ್ಶಿಗಳಾದ ಕೆಂಪರಂಗಯ್ಯ, ಗಂಗಾಧರ್ ಅಮಾನತುಗೊಂಡವರು. ಕರ್ತವ್ಯದ ವೇಳೆ ಕಚೇರಿ ಕೆಲಸ ಬಿಟ್ಟು ಅಧಿಕಾರಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಸಿದ್ದರಬೆಟ್ಟದಲ್ಲಿ ಕಳೆದ ಶುಕ್ರವಾರ ಎಣ್ಣೆ ಪಾರ್ಟಿ ಮಾಡಿರುವ ವಿಡಿಯೋ ವೈರಲ್ ಬೆನ್ನಲ್ಲೇ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ ತನಿಖೆ ಆದೇಶಿಸಿದ್ದರು. ಇದೀಗ ಎಂಟು ಅಧಿಕಾರಿಗಳ ವಿರುದ್ಧ ದಿಟ್ಟ ಕ್ರಮಕೈಗೊಳ್ಳಲಾಗಿದೆ.

ಸಸ್ಪೆಂಡ್ ಆದ ಅಧಿಕಾರಿಗಳು ಕಳೆದ ಶುಕ್ರವಾರ ಕರ್ತವ್ಯದ ಸಮಯದಲ್ಲಿ ನೆಲಮಂಗಲ ತಾಲೂಕಿನ ಸಿದ್ದರಬೆಟ್ಟದ ತಪ್ಪಲಿನಲ್ಲಿ ಎಣ್ಣೆ ಪಾರ್ಟಿ ಮಾಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ ಅವರು 24 ಗಂಟೆಗಳಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದರು. ಅದರಂತೆ ಸದ್ಯ ಅಧಿಕಾರಿಗಳ ವರದಿ ಆಧಾರದ ಮೇರೆಗೆ 8 ಜನರನ್ನು ಅಮಾನತು ಮಾಡಿ ಸಿಇಒ ವಾಸಂತಿ ಅಮರ್ ಆದೇಶಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಐಪಿಎಸ್ ಲೇಔಟ್ ವಿಲ್ಲಾದಲ್ಲಿ ಭರ್ಜರಿ ರೇವ್ ಪಾರ್ಟಿ: ಸಿಸಿಬಿ ದಾಳಿ, ಮೂವರ ಬಂಧನ!

ಡಾಬಸ್ ಪೇಟೆ ಪಿಡಿಒ ರವಿಶಂಕರ್, ಪಿಡಿಒ ದಿನೇಶ್, ಶಿವಗಂಗೆ ಪಿಡಿಒ ಗಿರೀಶ್, ಅಗಲಕುಪ್ಪೆ ಪಿಡಿಒ ಹರೀಶ್, ಮರಳಕುಂಟೆ ಪಿಡಿಒ, ಪ್ರಶಾಂತ್ ಸೇರಿ ಸೋಪುರ ಹೋಬಳಿ ಹಾಗೂ ತ್ಯಾಮಗೊಂಡ್ಲು ಹೋಬಳಿಯ ಪಿಡಿಒಗಳು ಜು.24ರಂದು ಮೋಜು ಮಸ್ತಿ ಮಾಡಿದ್ದು, ಪಾರ್ಟಿ ವಿಡಿಯೋ ಹಲವು ಮಾಧ್ಯಮಗಳಲ್ಲಿ ವರದ ಪ್ರಸರವಾಗಿತ್ತು. ಈ ಹಿನ್ನೆಲೆಯಲ್ಲಿ ಪಾರ್ಟಿ ಮಾಡಿದ್ದ ಎಲ್ಲಾ ಅಧಿಕಾರಿಗಳಿಗೂ ಕಾರಣ ಕೇಳಿ ನೋಟಿಸ್ ನೀಡಿ, ಕರ್ತವ್ಯ ಸಮಯದಲ್ಲಿ ಒಂದು ಕಡೆ ಸೇರಿ ಪಾರ್ಟಿ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾದಲ್ಲಿ ಅಮಾನತು ಮಾಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ಅವರು ಸೂಚಿಸಿದ್ದರು.

ಇದರ ಬೆನ್ನಲ್ಲೇ ಆರು ಪಿಡಿಒಗಳಿಗೆ ನೋಟಿಸ್ ನೀಡಿ್ದ ಬೆಂಗಳೂರಯ ಗ್ರಾಮಾಂತರ ಜಿಲ್ಲೆಯ ಮುಖ್ಯ ಕಾರ್ಯನಿರ್ವಹ ಅಧಿಕಾರಿ ಡಾ ವಾಸಂತಿ ಅಮರ್ ಅವರು, ಇಂದು ಈ ಎಲ್ಲಾ ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಈ ದಿಟ್ಟ ಕ್ರಮ ಇತರೆ ಅಧಿಕಾರಿಗಳಿಗೂ ಪಾಠವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Asian Games 2026: ಏಷ್ಯನ್ ಗೇಮ್ಸ್​ಗೆ ಹಾಲಿ ಚಾಂಪಿಯನ್ ಭಾರತ ಹಾಕಿ ತಂಡ ಪ್ರಕಟ – Kannada News | Asian Games Hockey: India Men’s Squad Announced, Harmanpreet Leads Charge for 2028 Olympics

ಜಪಾನ್‌ನ ಐಚಿ-ನಗೋಯಾದಲ್ಲಿ ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 4 ರವರೆಗೆ ನಡೆಯಲಿರುವ 20 ನೇ ಏಷ್ಯನ್ ಕ್ರೀಡಾಕೂಟಕ್ಕೆ ( Asian Games) ಹಾಕಿ ಇಂಡಿಯಾ (Hockey India) 20 ಸದಸ್ಯರ ಭಾರತೀಯ ಪುರುಷರ ಹಾಕಿ ತಂಡವನ್ನು ಪ್ರಕಟಿಸಿದೆ. ಹಾಲಿ ಏಷ್ಯನ್ ಚಾಂಪಿಯನ್ ಆಗಿರುವ ಭಾರತ ತಂಡವನ್ನು ಹರ್ಮನ್‌ಪ್ರೀತ್ ಸಿಂಗ್ (Harmanpreet Singh) ಮುನ್ನಡೆಸಲಿದ್ದು, ತಂಡದ ಪರ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಅನುಭವಿ ಆಟಗಾರ, ಮಿಡ್‌ಫೀಲ್ಡರ್ ಮನ್ಪ್ರೀತ್ ಸಿಂಗ್ ಕೂಡ ಈ ತಂಡದಲ್ಲಿದ್ದಾರೆ. ಈ ಕ್ರೀಡಾಕೂಟದಲ್ಲಿ ಭಾರತ ತಂಡ ತನ್ನ ಹಾಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವುದರ ಜೊತೆಗೆ 2028 ರಲ್ಲಿ ನಡೆಯಲಿರುವ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ನೇರವಾಗಿ ಅರ್ಹತೆ ಪಡೆಯುವ ಇರಾದೆಯೊಂದಿಗೆ ಕಣಕ್ಕಿಳಿಯಲಿದೆ.

12 ತಂಡಗಳು ಭಾಗಿ

ಈ ಕ್ರೀಡಾಕೂಟದಲ್ಲಿ 12 ದೇಶಗಳ ತಂಡಗಳು ಭಾಗವಹಿಸುತ್ತಿದ್ದು, ತಲಾ 6 ತಂಡಗಳ ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಅದರಲ್ಲಿ ಹಾಲಿ ಚಾಂಪಿಯನ್ ಭಾರತ ಆತಿಥೇಯ ಜಪಾನ್, ಕೊರಿಯಾ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಇಂಡೋನೇಷ್ಯಾ ಜೊತೆಗೆ ಪೂಲ್ ಎ ನಲ್ಲಿ ಸ್ಥಾನ ಪಡೆದಿದೆ. ಹಾಗೆಯೇ ಚೀನಾ, ಚೈನೀಸ್ ತೈಪೆ, ಕಝಾಕಿಸ್ತಾನ್, ಮಲೇಷ್ಯಾ, ಓಮನ್, ಪಾಕಿಸ್ತಾನ ತಂಡಗಳು ಪೂಲ್ ಬಿ ನಲ್ಲಿ ಸ್ಥಾನ ಪಡೆದಿವೆ. ಎಲ್ಲಾ ಪಂದ್ಯಗಳು ಕಾಕಮಿಗಹರಾದ ಗಿಫು ಪ್ರಿಫೆಕ್ಚರಲ್ ಗ್ರೀನ್ ಕ್ರೀಡಾಂಗಣದಲ್ಲಿ ನಡೆಯಲಿವೆ.

ಭಾರತ ಹಾಕಿ ತಂಡ ಸೆಪ್ಟೆಂಬರ್ 20 ರಂದು ಇಂಡೋನೇಷ್ಯಾ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಇದರ ನಂತರ ಸೆಪ್ಟೆಂಬರ್ 22 ರಂದು ಶ್ರೀಲಂಕಾ, ಸೆಪ್ಟೆಂಬರ್ 24 ರಂದು ದಕ್ಷಿಣ ಕೊರಿಯಾ, ಸೆಪ್ಟೆಂಬರ್ 26 ರಂದು ಜಪಾನ್ ಮತ್ತು ಸೆಪ್ಟೆಂಬರ್ 28 ರಂದು ಬಾಂಗ್ಲಾದೇಶ ವಿರುದ್ಧ ಪಂದ್ಯಗಳನ್ನು ಆಡಲಿದೆ.

ಸಂಪೂರ್ಣ ನಂಬಿಕೆ ನನಗಿದೆ

ತಂಡದ ಪ್ರದರ್ಶನದ ಬಗ್ಗೆ ಮಾತನಾಡಿದ ನಾಯಕ ಹರ್ಮನ್‌ಪ್ರೀತ್ ಸಿಂಗ್, ‘ಯುವಕರಾಗಲಿ ಅಥವಾ ಹಿರಿಯರಾಗಲಿ, ಎಲ್ಲರೂ ತಮ್ಮ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುತ್ತಾರೆ ಎಂಬ ಸಂಪೂರ್ಣ ನಂಬಿಕೆ ನನಗಿದೆ. ಯಾವುದೇ ಒತ್ತಡವಿಲ್ಲದೆ ಆಟವನ್ನು ಆನಂದಿಸುವುದು ಮತ್ತು ನಮ್ಮ ಜವಾಬ್ದಾರಿಗಳನ್ನು ಅರ್ಥಮಾಡಿಕೊಳ್ಳುವುದು ನಮ್ಮ ಮುಖ್ಯ ಗುರಿಯಾಗಿದೆ’ ಎಂದಿದ್ದಾರೆ.

ಏಷ್ಯನ್ ಗೇಮ್ಸ್‌ ಕ್ರಿಕೆಟ್ ವೇಳಾಪಟ್ಟಿ ಪ್ರಕಟ; ಹೀಗಾದ್ರೆ ಮಾತ್ರ ಭಾರತ- ಪಾಕ್ ಮುಖಾಮುಖಿ

ಭಾರತ ಹಾಕಿ ತಂಡ

ಗೋಲ್‌ಕೀಪರ್‌ಗಳು: ಮೋಹಿತ್ ಎಚ್‌ಎಸ್, ಸೂರಜ್ ಕರ್ಕೇರಾ.

ಡಿಫೆಂಡರ್ಸ್: ಜರ್ಮನ್‌ಪ್ರೀತ್ ಸಿಂಗ್, ಹರ್ಮನ್‌ಪ್ರೀತ್ ಸಿಂಗ್ (ನಾಯಕ), ಅಮಿತ್ ರೋಹಿದಾಸ್, ಜುಗ್ರಾಜ್ ಸಿಂಗ್, ಸಂಜಯ್, ಸುಮಿತ್, ಯಶ್‌ದೀಪ್ ಸಿವಾಚ್.

ಮಿಡ್‌ಫೀಲ್ಡರ್‌ಗಳು: ರಾಜಿಂದರ್ ಸಿಂಗ್, ರಾಜ್ ಕುಮಾರ್ ಪಾಲ್, ಹಾರ್ದಿಕ್ ಸಿಂಗ್, ಮನ್‌ಪ್ರೀತ್ ಸಿಂಗ್, ನೀಲಕಂಠ ಶರ್ಮಾ, ವಿವೇಕ್ ಸಾಗರ್ ಪ್ರಸಾದ್.

ಫಾರ್ವರ್ಡ್‌ಗಳು: ದಿಲ್‌ಪ್ರೀತ್ ಸಿಂಗ್, ಶಿಲಾನಂದ್ ಲಾಕ್ರಾ, ಸುಖಜೀತ್ ಸಿಂಗ್, ಮನ್‌ದೀಪ್ ಸಿಂಗ್, ಅಭಿಷೇಕ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version