ಪ್ರೆಗ್ನೆನ್ಸಿಯಲ್ಲಿ ವಾಕಿಂಗ್ ಮಾಡುವುದರಿಂದ ಮಧುಮೇಹದ ಅಪಾಯ ಕಡಿಮೆಯಾಗುತ್ತದೆಯೇ? – Kannada News | Daily Walking During Pregnancy: 5 Amazing Benefits for Mother and Baby

ಗರ್ಭಾವಸ್ಥೆ (Pregnancy) ಮಹಿಳೆಯ ಜೀವನದ ಅತ್ಯಂತ ಮಹತ್ವದ ಹಂತಗಳಲ್ಲಿ ಒಂದಾಗಿದೆ. ಈ ಅವಧಿಯಲ್ಲಿ ದೇಹದಲ್ಲಿ ಹಾರ್ಮೋನ್‌ಗಳ ಬದಲಾವಣೆ, ತೂಕ ಹೆಚ್ಚಳ ಮತ್ತು ಹಲವು ದೈಹಿಕ ಬದಲಾವಣೆಗಳಾಗುತ್ತವೆ. ಆದ್ದರಿಂದ ಸಮತೋಲಿತ ಆಹಾರದ ಜೊತೆಗೆ ನಿಯಮಿತವಾದ ಸೌಮ್ಯ ದೈಹಿಕ ಚಟುವಟಿಕೆಗಳಿಗೂ ಮಹತ್ವ ನೀಡಬೇಕು. ಆದರೆ ಕೆಲವು ಗರ್ಭಿಣಿಯರು ತಾವು ಹೆಚ್ಚು ವಿಶ್ರಾಂತಿ ತೆಗೆದುಕೊಳ್ಳಬೇಕೇ ಅಥವಾ ಯಾವ ರೀತಿಯ ವ್ಯಾಯಾಮ ಮಾಡಬೇಕು ಎಂಬುದರ ಬಗ್ಗೆ ಯೋಚಿಸುತ್ತಾರೆ. ಆದರೆ ಗರ್ಭಧಾರಣೆ ಸಾಮಾನ್ಯವಾಗಿದ್ದರೆ ಮತ್ತು ವೈದ್ಯರು ಯಾವುದೇ ನಿರ್ಬಂಧ ವಿಧಿಸದಿದ್ದರೆ, ಪ್ರತಿದಿನ ಸ್ವಲ್ಪ ಸಮಯ ವಾಕಿಂಗ್ ಮಾಡುವುದು ತಾಯಿ ಹಾಗೂ ಗರ್ಭದಲ್ಲಿರುವ ಮಗುವಿನ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಅಮೆರಿಕನ್ ಕಾಲೇಜ್ ಆಫ್ ಆಬ್ಸ್ಟೆಟ್ರಿಷಿಯನ್ಸ್ ಅಂಡ್ ಗೈನಕಾಲಜಿಸ್ಟ್ಸ್ (ACOG) ಪ್ರಕಾರ, ಸಾಮಾನ್ಯ ಗರ್ಭಾವಸ್ಥೆಯಲ್ಲಿ ನಿಯಮಿತ ದೈಹಿಕ ಚಟುವಟಿಕೆ ಸುರಕ್ಷಿತವಾಗಿದ್ದು, ಆರೋಗ್ಯಕರ ಗರ್ಭಧಾರಣೆಗೆ ನೆರವಾಗುತ್ತದೆ.

ಗರ್ಭಾವಸ್ಥೆಯಲ್ಲಿ ಪ್ರತಿದಿನ ನಡೆಯುವುದರಿಂದ ಸಿಗುವ ಪ್ರಯೋಜನಗಳು:

ದೇಹ ಚುರುಕಾಗಿರಲು ಸಹಾಯ ಮಾಡುತ್ತದೆ: ನಿಯಮಿತ ವಾಕಿಂಗ್ ಮಾಡುವುದರಿಂದ ಸ್ನಾಯುಗಳು ಸಕ್ರಿಯವಾಗಿರುತ್ತವೆ. ದೇಹದಲ್ಲಿ ಶಕ್ತಿ ಹೆಚ್ಚಾಗಿ, ದಿನನಿತ್ಯದ ಕೆಲಸಗಳನ್ನು ಸುಲಭವಾಗಿ ನಿರ್ವಹಿಸಲು ನೆರವಾಗುತ್ತದೆ.

ಗರ್ಭಾವಸ್ಥೆಯಲ್ಲಿ ಮಧುಮೇಹದ (Gestational Diabetes) ಅಪಾಯ ಕಡಿಮೆಯಾಗಬಹುದು: ನಡೆಯುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ದೇಹ ಸಮತೋಲನದಲ್ಲಿ ಇಡಲು ಸಹಾಯವಾಗುತ್ತದೆ. ನಿಯಮಿತ ವ್ಯಾಯಾಮ ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುವ ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

ಅನಗತ್ಯ ತೂಕ ಹೆಚ್ಚಾಗುವುದನ್ನು ನಿಯಂತ್ರಿಸುತ್ತದೆ: ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಾಗುವುದು ಸಹಜ. ಆದರೆ ಅಗತ್ಯಕ್ಕಿಂತ ಹೆಚ್ಚು ತೂಕ ಹೆಚ್ಚಾದರೆ ರಕ್ತದೊತ್ತಡ, ಮಧುಮೇಹ ಹಾಗೂ ಹೆರಿಗೆ ಸಮಯದ ಸಮಸ್ಯೆಗಳ ಅಪಾಯ ಹೆಚ್ಚಬಹುದು. ವಾಕಿಂಗ್ ಆರೋಗ್ಯಕರ ತೂಕ ಕಾಪಾಡಲು ನೆರವಾಗುತ್ತದೆ.

ಬೆನ್ನುನೋವು ಮತ್ತು ದೇಹದ ಬಿಗಿತವನ್ನು ಕಡಿಮೆ ಮಾಡುತ್ತದೆ: ಗರ್ಭಾವಸ್ಥೆಯಲ್ಲಿ ಬೆನ್ನುನೋವು, ಸೊಂಟನೋವು ಮತ್ತು ಕಾಲುಗಳಲ್ಲಿ ಭಾರವಾಗಿರುವ ಅನುಭವ ಸಾಮಾನ್ಯ. ಪ್ರತಿದಿನ ನಡೆಯುವುದರಿಂದ ಸ್ನಾಯುಗಳು ಮತ್ತು ಕೀಲುಗಳು ಚುರುಕಾಗಿದ್ದು, ನೋವು ಕಡಿಮೆಯಾಗಲು ಸಹಾಯ ಮಾಡುತ್ತದೆ.

ಹೆರಿಗೆಗೆ ದೇಹವನ್ನು ಸಿದ್ಧಗೊಳಿಸುತ್ತದೆ: ನಿಯಮಿತ ವಾಕಿಂಗ್ ದೇಹದ ಸಹಿಷ್ಣುತೆಯನ್ನು ಹೆಚ್ಚಿಸಿ, ಸಾಮಾನ್ಯ ಹೆರಿಗೆಗೆ ಬೇಕಾದ ದೈಹಿಕ ಸಾಮರ್ಥ್ಯವನ್ನು ಉತ್ತಮಗೊಳಿಸಲು ನೆರವಾಗಬಹುದು.

ಯಾವ ಗರ್ಭಿಣಿಯರು ವಾಕಿಂಗ್ ಆರಂಭಿಸುವ ಮೊದಲು ವೈದ್ಯರ ಸಲಹೆ ಪಡೆಯಬೇಕು?

  • ಅಧಿಕ ರಕ್ತದೊತ್ತಡ (Pregnancy-induced Hypertension)
  • ತೀವ್ರ ರಕ್ತಹೀನತೆ (Severe Anemia)
  • ಹೃದಯ ಅಥವಾ ಶ್ವಾಸಕೋಶದ ಕಾಯಿಲೆಗಳು
  • ಪದೇಪದೇ ರಕ್ತಸ್ರಾವ
  • ಅವಧಿಗೆ ಮುಂಚೆಯೇ ಹೆರಿಗೆ ಆಗುವ ಅಪಾಯ
  • ಪ್ಲಾಸೆಂಟಾ ಸಂಬಂಧಿತ ಸಮಸ್ಯೆಗಳು
  • ಅವಳಿ ಅಥವಾ ಬಹು ಗರ್ಭಧಾರಣೆ ಮತ್ತು ಮುಂಗಡ ಹೆರಿಗೆ ಅಪಾಯ

ಇದನ್ನೂ ಓದಿ: ಮೈಕ್ರೋವೇವ್‌ನಲ್ಲಿ ಆಹಾರ ಬಿಸಿ ಮಾಡುವ ಮುನ್ನ ಈ ವಿಷಯಗಳನ್ನು ತಿಳಿದಿಟ್ಟುಕೊಳ್ಳಿ!

ವಾಕಿಂಗ್ ಮಾಡುವಾಗ ಈ ಲಕ್ಷಣಗಳು ಕಂಡರೆ ತಕ್ಷಣ ನಿಲ್ಲಿಸಿ

  • ತಲೆಸುತ್ತು
  • ತೀವ್ರ ಹೊಟ್ಟೆ ಅಥವಾ ಬೆನ್ನುನೋವು
  • ಉಸಿರಾಟದ ತೊಂದರೆ
  • ಯೋನಿಯಿಂದ ರಕ್ತಸ್ರಾವ
  • ನೀರು ಸೋರಿಕೆ (Water Breaking)
  • ಎದೆನೋವು ಅಥವಾ ಅಸ್ವಸ್ಥತೆ

ಗರ್ಭಾವಸ್ಥೆಯಲ್ಲಿ ವಾಕಿಂಗ್ ಮಾಡುವಾಗ ಪಾಲಿಸಬೇಕಾದ ಮುನ್ನೆಚ್ಚರಿಕೆಗಳು

  • ಆರಾಮದಾಯಕ ಬಟ್ಟೆ ಮತ್ತು ಉತ್ತಮ ಗ್ರಿಪ್ ಇರುವ ಶೂ ಧರಿಸಿ.
  • ಆರಂಭದಲ್ಲಿ 15–20 ನಿಮಿಷ ನಡೆಯಿರಿ. ನಂತರ ವೈದ್ಯರ ಸಲಹೆಯಂತೆ 30 ನಿಮಿಷದವರೆಗೆ ಹೆಚ್ಚಿಸಬಹುದು.
  • ಅತಿಯಾಗಿ ವೇಗವಾಗಿ ನಡೆಯಬೇಡಿ.
  • ನಡೆಯುವ ಮೊದಲು ಮತ್ತು ನಂತರ ಸಾಕಷ್ಟು ನೀರು ಕುಡಿಯಿರಿ.
  • ಬಿಸಿಲಿನ ಸಮಯದಲ್ಲಿ ನಡೆಯುವುದನ್ನು ತಪ್ಪಿಸಿ; ಬೆಳಿಗ್ಗೆ ಅಥವಾ ಸಂಜೆ ಸಮಯ ಉತ್ತಮ.
  • ದೇಹ ತುಂಬಾ ದಣಿದಿದ್ದರೆ ವಿಶ್ರಾಂತಿ ಪಡೆಯಿರಿ.

ಗರ್ಭಾವಸ್ಥೆಯಲ್ಲಿ ವೈದ್ಯರ ಸಲಹೆ ಪಡೆದು ನಿಯಮಿತವಾಗಿ ವಾಕಿಂಗ್ ಮಾಡುವುದು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ. ಇದು ದೇಹವನ್ನು ಚುರುಕಾಗಿಡುವುದರ ಜೊತೆಗೆ ಮಧುಮೇಹದ ಅಪಾಯ ಕಡಿಮೆ ಮಾಡುವುದು, ಬೆನ್ನುನೋವು ನಿವಾರಣೆ, ತೂಕ ನಿಯಂತ್ರಣ ಮತ್ತು ಹೆರಿಗೆಗೆ ದೇಹವನ್ನು ಸಿದ್ಧಗೊಳಿಸಲು ಸಹಕಾರಿಯಾಗುತ್ತದೆ. ಆದರೆ ಯಾವುದೇ ಅಸಹಜ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಧಾನಿ ಮೋದಿ- ಶರದ್ ಪವಾರ್ ಭೇಟಿ; ಎನ್‌ಡಿಎ ಸೇರಲು ಒಪ್ಪಿತಾ ಎನ್‌ಸಿಪಿ? – Kannada News | PM Modi Sharad Pawar Meeting Has the NCP Agreed to Join NDA Maharashtra Politics

ನವದೆಹಲಿ, ಜುಲೈ 27: ದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ (CJP) ಪ್ರತಿಭಟನೆ ತೀವ್ರಗೊಂಡಿದ್ದ ವೇಳೆ ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಮತ್ತು ಸಂಸದೆ ಸುಪ್ರಿಯಾ ಸುಳೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಭೇಟಿಯಾಗಿದ್ದರು. ರೈತರ ಬೇಡಿಕೆಗಳು ಹಾಗೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರಧಾನಿಯವರನ್ನು ಭೇಟಿಯಾಗಿದ್ದಾಗಿ ಶರದ್ ಪವಾರ್ (Sharad Pawar) ನಂತರ ತಿಳಿಸಿದ್ದರು. ಆದರೆ, ಇವರಿಬ್ಬರ ಭೇಟಿಯ ವೇಳೆ ಏನು ಮಾತುಕತೆ ನಡೆಯಿತು ಎಂಬುದು ಇನ್ನೂ ಬಯಲಾಗಿಲ್ಲ. ಎನ್‌ಸಿಪಿ (ಎಸ್‌ಪಿ) ಪಕ್ಷವು ನೇರವಾಗಿ ಅಥವಾ ಎರಡೂ ಬಣಗಳ ವಿಲೀನದ ಮೂಲಕ ಎನ್‌ಡಿಎ (NDA) ಮೈತ್ರಿಕೂಟಕ್ಕೆ ಸೇರಲಿದೆಯೇ? ಅಥವಾ ಕ್ಷೇತ್ರ ಪುನರ್ ವಿಂಗಡಣೆ ವಿಧೇಯಕದಂತಹ ವಿಷಯಗಳಲ್ಲಿ ಸರ್ಕಾರಕ್ಕೆ ವಿಷಯಾಧಾರಿತ ಬೆಂಬಲ ನೀಡಲಿದೆಯೇ? ಎಂಬ ಚರ್ಚೆಗಳು ನಡೆಯುತ್ತಿವೆ.

ಕೆಲವು ಸಮಯದಿಂದ ಶರದ್ ಪವಾರ್ ಎನ್​ಡಿಎ ಸೇರುವ ಬಗ್ಗೆ ಚರ್ಚೆ ನಡೆಯುತ್ತಿತ್ತು. ಎನ್​ಡಿಎ ಸೇರಲು ಎರಡೂ ಎನ್​ಸಿಪಿಗಳು ವಿಲೀನಗೊಳ್ಳಬೇಕೆಂದು ಬಿಜೆಪಿ ಷರತ್ತು ವಿಧಿಸಿತ್ತು ಎಂಬ ಮಾಹಿತಿಯೂ ಬಹಿರಂಗವಾಯಿತು. ಅದಾದ ನಂತರ, ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು. ಈ ಸಭೆಯ ನಂತರ, ಎನ್​ಸಿಪಿ ಎನ್​ಡಿಎ ಸೇರುವ ಮಾತುಕತೆಗಳು ವೇಗ ಪಡೆದುಕೊಂಡವು. ಅದಾದ ನಂತರ, ಶರದ್ ಪವಾರ್ ಅವರ ಎನ್​ಸಿಪಿಯನ್ನು ಎನ್​ಡಿಎಗೆ ಸೇರಿಸಿಕೊಳ್ಳಲು ಬಿಜೆಪಿ ಸಿದ್ಧವಾಗಿದೆ ಎಂದು ಮೂಲಗಳು ಈಗ ತಿಳಿಸಿವೆ. ಈ ನಿಟ್ಟಿನಲ್ಲಿ ರಾಜ್ಯದ ನಾಯಕರಿಗೆ ಸೂಚನೆಗಳನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ. ಆದ್ದರಿಂದ, ಮುಂಬರುವ ದಿನಗಳಲ್ಲಿ ದೊಡ್ಡ ರಾಜಕೀಯ ಬೆಳವಣಿಗೆಗಳನ್ನು ಕಾಣುವ ಸಾಧ್ಯತೆಯಿದೆ.

ಇದನ್ನೂ ಓದಿ: ಎನ್‌ಡಿಎ ಜೊತೆ ಎನ್‌ಸಿಪಿ ವಿಲೀನ ವದಂತಿ: ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಶರದ್ ಪವಾರ್, ಸುಪ್ರಿಯಾ ಸುಳೆ

ಸದ್ಯದ ಮಾಹಿತಿಯ ಪ್ರಕಾರ, ಶರದ್ ಪವಾರ್ ಅವರ ಎನ್‌ಸಿಪಿಯ ಅನೇಕ ಪ್ರತಿನಿಧಿಗಳು ಎನ್‌ಡಿಎ ಜೊತೆ ಸೇರಲು ಸಿದ್ಧರಿದ್ದಾರೆ ಎಂದು ತಿಳಿದುಬಂದಿದೆ. ಇಂದು, ಅಜಿತ್ ಪವಾರ್ ಅವರ ಪಕ್ಷದ ರಾಜ್ಯಾಧ್ಯಕ್ಷ ಸುನಿಲ್ ತತ್ಕರೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದರು. ಈ ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ. ಶರದ್ ಪವಾರ್ ಅವರ ಎನ್‌ಸಿಪಿಯನ್ನು ಎನ್‌ಡಿಎಗೆ ಸೇರಿಸುವ ಬಗ್ಗೆಯೂ ಚರ್ಚೆ ನಡೆದಿದೆ ಎಂದು ವರದಿಯಾಗಿದೆ. ಆದ್ದರಿಂದ, ಶರದ್ ಪವಾರ್ ಅವರ ಎನ್‌ಸಿಪಿ ಮುಂಬರುವ ಸಮಯದಲ್ಲಿ ಎನ್‌ಡಿಎಗೆ ಸೇರಬಹುದು. ಹೀಗೇನಾದರೂ ಆದರೆ ಕೇಂದ್ರದಲ್ಲಿ ಎನ್‌ಡಿಎಯ ಬಲವೂ ಹೆಚ್ಚಾಗುತ್ತದೆ. ಇದರಿಂದಾಗಿ, ರಾಜಕೀಯದಲ್ಲಿ ಹೊಸ ತಿರುವು ಪಡೆಯುವ ಸಾಧ್ಯತೆಯಿದೆ.

ಇದನ್ನೂ ಓದಿ: ಮಹಾರಾಷ್ಟ್ರ: ದೇವೇಂದ್ರ ಫಡ್ನವೀಸ್ ನಿವಾಸದಲ್ಲಿ 3 ರಹಸ್ಯ ಸಭೆಗಳು, ಎನ್‌ಸಿಪಿಯಲ್ಲಿ ಮತ್ತೊಂದು ಒಡಕು

ಮಹಾರಾಷ್ಟ್ರದಲ್ಲಿ ಬಿಜೆಪಿಯ ಮಿತ್ರಪಕ್ಷಗಳಾದ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಸುನೇತ್ರಾ ಪವಾರ್ ನೇತೃತ್ವದ ಎನ್‌ಸಿಪಿ, ಕಾಕ್ರೋಚ್ ಜನತಾ ಪಾರ್ಟಿ (CJP) ಅಥವಾ ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಟೀಕಿಸದೆ ಎಚ್ಚರಿಕೆಯ ನಡೆ ಅನುಸರಿಸಿವೆ. ಎರಡೂ ಪಕ್ಷಗಳು ಪ್ರತಿಭಟನೆಗೆ ಬಹಿರಂಗ ಬೆಂಬಲ ನೀಡದಿದ್ದರೂ, ಮೋದಿ ಸರ್ಕಾರದ ಪರವಾಗಿ ಸಮರ್ಥನೆಯನ್ನೂ ಮಾಡಿಕೊಳ್ಳಲಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೆಟ್ರೋ ರೈಲ್ವೆ ಹಳಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ: ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಸ್ಥಗಿತ – Kannada News | Man Dies After Jumping Onto Tracks on Namma Metro Yellow Line; Services Halted

ಬೆಂಗಳೂರು, ಜುಲೈ 27: ನಮ್ಮ ಮೆಟ್ರೋದ (Namma Metro) ಆರ್‌ವಿ ರಸ್ತೆ-ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದ ಹುಸ್ಕೂರು ಮೆಟ್ರೋ ನಿಲ್ದಾಣದಲ್ಲಿ ಇಂದು ಸಂಜೆ 5:50ರ ಸುಮಾರಿಗೆ 35 ವರ್ಷದ ವ್ಯಕ್ತಿಯೊಬ್ಬರು ರೈಲು ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ವ್ಯಕ್ತಿ ಹಳಿಗೆ ಜಿಗಿಯುತ್ತಿದ್ದಂತೆ ಸ್ಥಳದಲ್ಲಿದ್ದ ಮೆಟ್ರೋ ಸಿಬ್ಬಂದಿ ತಕ್ಷಣ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ರೈಲಿನ ಅಡಿಯಲ್ಲಿ ಸಿಲುಕಿಕೊಂಡಿದ್ದರಿಂದ ವ್ಯಕ್ತಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಬಿಎಂಆರ್‌ಸಿಎಲ್ (BMRCL) ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ನಡೆದಿದ್ದೇನು?

ಸೋಮವಾರ ಸಂಜೆ 5-50ಕ್ಕೆ ಹುಸ್ಕೂರ್ ಮೆಟ್ರೋ ನಿಲ್ದಾಣಕ್ಕೆ ಆಗಮಿಸಿದ್ದ ವ್ಯಕ್ತಿ ಹಳದಿ ಮಾರ್ಗದ ಮೆಟ್ರೋ ಹಳಿ​ಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಪವರ್ ಆಫ್ ಮಾಡಿ ಮೆಟ್ರೋ ಸಿಬ್ಬಂದಿ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಮೆಟ್ರೋ ರೈಲಿನ ಕೆಳಗೆ ಸಿಲುಕಿದ್ದರಿಂದ ಮೃತಪಟ್ಟಿದ್ದಾರೆ. ಇನ್ನು ಮೃತ ವ್ಯಕ್ತಿಯ ಗುರುತು ಪತ್ತೆ ಆಗಿಲ್ಲ.

ಇದನ್ನೂ ಓದಿ: ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ವಿದ್ಯುತ್ ತಾಂತ್ರಿಕ ದೋಷ: ಯಶವಂತಪುರ – ಮಾದಾವರ ನಡುವೆ ರೈಲು ಸಂಚಾರ ವ್ಯತ್ಯಯ!

ಇನ್ನು ಘಟನೆ ಸಂಭವಿಸಿದ ತಕ್ಷಣ ಸ್ಥಳಕ್ಕೆ ಹಿರಿಯ ಮೆಟ್ರೋ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು. ಪ್ರಯಾಣಿಕರು ತಮ್ಮ ಪ್ರಯಾಣವನ್ನು ಪರ್ಯಾಯವಾಗಿ ಯೋಜಿಸಿಕೊಳ್ಳುವಂತೆ ಬಿಎಂಆರ್‌ಸಿಎಲ್​​ ಮನವಿ ಮಾಡಿದ್ದು, ಉಂಟಾದ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿದೆ.

ರೈಲಿನ ಕೆಳಗೆ ಸಿಲುಕಿರುವ ಮೃತದೇಹವನ್ನು ಮೆಟ್ರೋ ಸಿಬ್ಬಂದಿ, ಹೆಬ್ಬಗೋಡಿ ಪೊಲೀಸರು ಶವ ಹೊರತೆಗೆದಿದ್ದು, ಆ್ಯಂಬುಲೆನ್ಸ್​ನಲ್ಲಿ ಸೇಂಟ್​ ಜಾನ್ಸ್​ ಆಸ್ಪತ್ರೆ ಶವಾಗಾರಕ್ಕೆ ಶಿಫ್ಟ್ ಮಾಡಿದ್ದಾರೆ. ಇನ್ನೇನು ಕೆಲವೇ ನಿಮಿಷಗಳಲ್ಲಿ ಮೆಟ್ರೋ ಸೇವೆ ಪುನಾರಂಭ ಸಾಧ್ಯತೆ ಇದೆ. ಹುಸ್ಕೂರು ಮೆಟ್ರೋ ನಿಲ್ದಾಣಕ್ಕೆ ಆಗ್ನೇಯ ವಿಭಾಗ ಡಿಸಿಪಿ ಮೊಹಮ್ಮದ್ ಸುಜಿತಾ ಭೇಟಿ ನೀಡಿ ಪರಿಶೀಲಿಸಿದರು.

ಮೆಟ್ರೋ ಸಂಚಾರ ಸ್ಥಗಿತ

ಸದ್ಯ ಎಲೆಕ್ಟ್ರಾನಿಕ್ ಸಿಟಿಯಿಂದ ಬೊಮ್ಮಸಂದ್ರ ನಡುವಿನ ಒಟ್ಟು 5 ಮೆಟ್ರೋ ನಿಲ್ದಾಣಗಳ ನಡುವೆ ರೈಲು ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಪ್ರಸ್ತುತ ಆರ್‌ವಿ ರೋಡ್‌ನಿಂದ ಎಲೆಕ್ಟ್ರಾನಿಕ್ ಸಿಟಿ ನಡುವೆ ಮಾತ್ರ ಮೆಟ್ರೋ ರೈಲುಗಳ ಸಂಚಾರ ಮಾಡುತ್ತಿವೆ.

ಮೆಟ್ರೋ ಕಾಮಗಾರಿ ಕ್ರೇನ್ ಏರಿ ವ್ಯಕ್ತಿಯಿಂದ ಹುಚ್ಚಾಟ

ಬೆಂಗಳೂರಿನ ಮಾರತಹಳ್ಳಿ ಸಮೀಪ ರಾತ್ರಿ ವೇಳೆ ಹೈಡ್ರಾಮಾವೊಂದು ನಡೆದಿದೆ. ಮೆಟ್ರೋ ಕಾಮಗಾರಿ ಸ್ಥಳದಲ್ಲಿದ್ದ ಬೃಹತ್ ಕ್ರೇನ್ ಏರಿದ ವ್ಯಕ್ತಿಯೊಬ್ಬ ಕೆಳಗಿಳಿಯಲಾಗದೆ ಒದ್ದಾಡಿದ ಘಟನೆ ಬೆಳಗಿನ ಜಾವ 1:30ರ ಸುಮಾರಿಗೆ ನಡೆದಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ, ತಕ್ಷಣವೇ ಮತ್ತೊಂದು ಕ್ರೇನ್ ವ್ಯವಸ್ಥೆ ಮಾಡಿ ಸತತ ಪ್ರಯತ್ನದ ಬಳಿಕ ವ್ಯಕ್ತಿಯನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿದ್ದಾರೆ. ಕ್ರೇನ್‌ನಿಂದ ಕೆಳಗಿಳಿಸಿದ ತಕ್ಷಣ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆತ ಮಧ್ಯರಾತ್ರಿ ಮೆಟ್ರೋ ಕಾಮಗಾರಿಯ ಕ್ರೇನ್ ಅನ್ನು ಯಾವ ಕಾರಣಕ್ಕಾಗಿ ಹತ್ತಿದ್ದ ಎಂಬ ಕುರಿತು ಇನ್ನು ಮಾಹಿತಿ ಲಭ್ಯವಾಗಿಲ್ಲ. ಈ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪೇಟಿಎಂನಲ್ಲೇ ಸಲ್ಲಿಸಿ ಐಟಿಆರ್; ಕೇವಲ 11 ರೂಗೆ ಜಂಜಾಟವಿಲ್ಲದೆ ಸರಳವಾಗಿ, ಸುಲಭವಾಗಿ ಐಟಿ ರಿಟರ್ನ್ಸ್ ಸಲ್ಲಿಸಿ – Kannada News | Paytm partners with ClearTax offers ITR filing in its App

ನವದೆಹಲಿ, ಜುಲೈ 27: ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸುವ ಧಾವಂತದಲ್ಲಿರುವವರಿಗೆ ಖುಷಿ ಸುದ್ದಿ. ಪೇಟಿಎಂ (Paytm) ತನ್ನ ಪ್ಲಾಟ್​ಫಾರ್ಮ್​ನಲ್ಲೇ ಐಟಿ ರಿಟರ್ನ್ಸ್ ಸಲ್ಲಿಸುವ ಸೇವೆ ಆರಂಭಿಸಿದೆ. ಬಹಳ ಕಡಿಮೆ ಬೆಲೆಗೆ, ಮತ್ತು ಬಹಳ ಸರಳವಾಗಿ ತೆರಿಗೆದಾರರು ಐಟಿಆರ್ ಭರ್ತಿ ಮಾಡಿ ಸಲ್ಲಿಸಬಹುದು. ಟ್ಯಾಕ್ಸ್ ಕನ್ಸಲ್ಟಿಂಗ್ ಸಂಸ್ಥೆಯಾದ ಕ್ಲಿಯರ್ ಟ್ಯಾಕ್ಸ್ (ClearTax) ಜೊತೆ ಪೇಟಿಎಂ ಹೊಂದಾಣಿಕೆ ಮಾಡಿಕೊಂಡು ಈ ಸೇವೆ ನಡೆಸುತ್ತಿದೆ. ಇದಕ್ಕೆ ಶುಲ್ಕ ಕೇವಲ 11 ರೂ ಎನ್ನಲಾಗಿದೆ.

ಮಾರುಕಟ್ಟೆಯಲ್ಲಿ ಸಿಎ (CA) ಅಥವಾ ಇತರೆ ಪೋರ್ಟಲ್‌ಗಳ ಮೂಲಕ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಸಾವಿರಾರು ರೂಪಾಯಿಗಳನ್ನು ತೆರಬೇಕಾಗುತ್ತದೆ. ಆದರೆ ಪೇಟಿಎಂ ಪ್ಲಾಟ್​ಫಾರ್ಮ್​ನಲ್ಲಿ ಕ್ಲಿಯರ್‌ಟ್ಯಾಕ್ಸ್ ಮೂಲಕ ಬಳಕೆದಾರರು ಕೇವಲ ₹11 ರ ಶುಲ್ಕದಲ್ಲಿ ತಮ್ಮ ರಿಟರ್ನ್ ಅನ್ನು ಫೈಲ್ ಮಾಡಬಹುದು.

ಇದನ್ನೂ ಓದಿ: ಐಟಿ ರಿಟರ್ನ್ಸ್ ಸಲ್ಲಿಕೆಗೆ ಜುಲೈ 31 ಡೆಡ್​​ಲೈನ್; ಐಟಿಆರ್ ಸಬ್ಮಿಟ್ ಮಾಡುವ ಮುನ್ನ ಈ ಚೆಕ್​ಲಿಸ್ಟ್ ಪರಿಶೀಲಿಸಿ

ಸರಳ ಹಾಗೂ ಸುಲಭ ಪ್ರಕ್ರಿಯೆ: ತೆರಿಗೆದಾರರು ರಿಜಿಸ್ಟರ್ ಮಾಡಿಕೊಂಡು ಪ್ಯಾನ್ ನಂಬರ್ ನಮೂದಿಸಿದರೆ ಪೂರ್ವದಲ್ಲೇ ಭರ್ತಿಯಾದ ಫಾರ್ಮ್ ಅನ್ನು ಪಡೆಯಬಹುದು. ಫಾರ್ಮ್ 16 ಅಥವಾ ಅಗತ್ಯವಿರುವ ಆದಾಯದ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ. ಆ ಮೂಲಕ ಯಾವುದೇ ತೊಂದರೆಯಿಲ್ಲದೆ ಕೆಲವೇ ನಿಮಿಷಗಳಲ್ಲಿ ಐಟಿಆರ್ ಸಲ್ಲಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

ತಜ್ಞರ ಮಾರ್ಗದರ್ಶನ: ಈ ಪ್ಲಾಟ್‌ಫಾರ್ಮ್ ಮೂಲಕ ತೆರಿಗೆದಾರರಿಗೆ ತಮ್ಮ ತೆರಿಗೆ ಉಳಿತಾಯದ ಕುರಿತು ಮತ್ತು ಯಾವುದೇ ಗೊಂದಲಗಳಿದ್ದಲ್ಲಿ ಪರಿಹಾರ ಪಡೆಯಲು ತಜ್ಞರ ಸಹಾಯವೂ (Expert Help) ಲಭ್ಯವಿರುತ್ತದೆ. ಅದೂ ಉಚಿತವಾಗಿ.

ಐಟಿಆರ್ ಸಲ್ಲಿಕೆ ಪ್ರಕ್ರಿಯೆಯು ನಿಖರವಾಗಿರುವುದರಿಂದ ತೆರಿಗೆ ರೀಫಂಡ್ (Tax Refund) ಪ್ರಕ್ರಿಯೆಯೂ ವೇಗವಾಗಿ ನಡೆಯಲು ಇದು ಸಹಕಾರಿಯಾಗಿದೆ.

ಇದನ್ನೂ ಓದಿ: ನೀವು ಐಟಿ ರಿಟರ್ನ್ಸ್ ಸಲ್ಲಿಸಿ 6 ವರ್ಷಗಳವರೆಗೆ ಈ ದಾಖಲೆಗಳು ಜೊತೆಯಲ್ಲಿರಲಿ: ತೆರಿಗೆ ತಜ್ಞರ ಸಲಹೆ

ಸಂಬಳದಾರರು (Salaried Employees) ಹಾಗೂ ಸರಳ ಆದಾಯದ ಮೂಲಗಳನ್ನು ಹೊಂದಿರುವವರು ಪೇಟಿಎಂ ಆ್ಯಪ್ ಮೂಲಕ ಈ ಸೌಲಭ್ಯವನ್ನು ಪಡೆದುಕೊಂಡು, ಕಡಿಮೆ ವೆಚ್ಚದಲ್ಲಿ ಮತ್ತು ಸುರಕ್ಷಿತವಾಗಿ ತಮ್ಮ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸಬಹುದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಟೀಂ ಇಂಡಿಯಾದಲ್ಲಿ ಒಬ್ಬರಿಗೊಂದು ನ್ಯಾಯ; ಬಿಸಿಸಿಐ ವಿರುದ್ಧ ಮಾಜಿ ಕ್ರಿಕೆಟಿಗ ಗರಂ – Kannada News | BCCI Double Standards? Vihari Criticizes Abhishek Sharma’s Continued Selection

ಟಿ20 ವಿಶ್ವಕಪ್​ನಿಂದಲೂ ಟೀಂ ಇಂಡಿಯಾದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ (Abhishek Sharma) ಅವರ ಪ್ರದರ್ಶನ ಅಷ್ಟು ಉತ್ತಮವಾಗಿಲ್ಲ. ಒಂದೆರಡು ಪಂದ್ಯಗಳಲ್ಲಿ ಅರ್ಧಶತಕಗಳನ್ನು ಬಾರಿಸಿದ್ದನ್ನು ಬಿಟ್ಟರೆ ಉಳಿದ ಪಂದ್ಯಗಳಲ್ಲಿ ಒಂದಂಕಿ ದಾಟುವುದು ಕಷ್ಟಕರವಾಗಿತ್ತು. ಮೊದಲಿಗೆ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ದ ಅಭಿಷೇಕ್, ಆ ನಂತರ ಜಿಂಬಾಬ್ವೆ ವಿರುದ್ಧವೂ ಅವರ ಪ್ರದರ್ಶನ ತೀರ ಕಳಪೆಯಾಗಿತ್ತು. ಆಡಿದ ಮೂರು ಪಂದ್ಯಗಳಲ್ಲಿ ಕ್ರಮವಾಗಿ 01, 08 ಮತ್ತು 02 ರನ್ ಗಳಿಸಿದರು. ಇದೀಗ ಅಭಿಷೇಕ್ ಅವರ ಕಳಪೆ ಫಾರ್ಮ್​ ಅವರನ್ನು ಮುಂದಿಟ್ಟು, ಟೀಂ ಇಂಡಿಯಾದ ಮಾಜಿ ಆಟಗಾರ ಹನುಮ ವಿಹಾರಿ ಬಿಸಿಸಿಐ ಅನ್ನು ಟೀಕಿಸಿದ್ದಾರೆ. ಐದು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದಕ್ಕಾಗಿ ಸಂಜು ಸ್ಯಾಮ್ಸನ್ ಅವರನ್ನು ತಂಡದಿಂದ ಕೈಬಿಟ್ಟಿರುವಾಗ ಅಭಿಷೇಕ್ ಶರ್ಮಾ ಅವರನ್ನು ಏಕೆ ಕೈಬಿಡುತ್ತಿಲ್ಲ ಎಂದು ಹನುಮ ವಿಹಾರಿ ಕೇಳಿದ್ದಾರೆ. ಇಲ್ಲಿ ಪ್ರತಿಯೊಬ್ಬ ಆಟಗಾರನಿಗೂ ವಿಭಿನ್ನ ನಿಯಮಗಳಿವೆಯೇ? ಎಂದು ಬಿಸಿಸಿಐನ ಪ್ರಶ್ನಿಸಿದ್ದಾರೆ.

ಹನುಮ ವಿಹಾರಿ ಹೇಳಿದ್ದೇನು?

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಬಗ್ಗೆ ಮಾತನಾಡಿರುವ ಹನುಮ ವಿಹಾರಿ,‘ವಿಶ್ವಕಪ್‌ಗೂ ಮುನ್ನ, ಸಂಜು ಸ್ಯಾಮ್ಸನ್ ಐದು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ಇದರಿಂದಾಗಿ ಅವರು ಆಡುವ XI ನಲ್ಲಿ ಸ್ಥಾನ ಕಳೆದುಕೊಂಡರು. ನಂತರ ಅವರು ಮತ್ತೆ ತಂಡಕ್ಕೆ ಮರಳಿ ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಟೂರ್ನಮೆಂಟ್‌ನ ಆಟಗಾರ ಪ್ರಶಸ್ತಿಯನ್ನು ಪಡೆದರು. ಇತ್ತ ಅದೇ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಅಭಿಷೇಕ್ ಶರ್ಮಾ ಎಷ್ಟು ರನ್ ಗಳಿಸಿದರು?. ಅಭಿಷೇಕ್ ಶರ್ಮಾ ಯುಕೆಯಲ್ಲಿ ನಡೆದ ಸರಣಿಯಲ್ಲಿ ಅರ್ಧಶತಕ ಗಳಿಸಿದನ್ನು ಬಿಟ್ಟರೆ ಅವರು ಬೇರೆ ಯಾವುದೇ ದೊಡ್ಡ ಇನ್ನಿಂಗ್ಸ್ ಆಡಿಲ್ಲ.

ಅಭಿಷೇಕ್ ತಮ್ಮ ಕೊನೆಯ ಎಂಟು ಪಂದ್ಯಗಳಲ್ಲಿ ಕೇವಲ ಒಂದು ಅರ್ಧಶತಕ ಬಾರಿಸಿದ್ದಾರೆ. ಅದರಲ್ಲೂ ತಮ್ಮ ಕೊನೆಯ 18 ಪಂದ್ಯಗಳಲ್ಲಿ ಕೇವಲ ಮೂರೇ ಮೂರು ಅರ್ಧಶತಕಗಳನ್ನು ಸಿಡಿಸಿದ್ದಾರೆ. ಸ್ಯಾಮ್ಸನ್ ವಿಶ್ವಕಪ್‌ನಲ್ಲಿ ಎಷ್ಟು ಪಂದ್ಯಗಳನ್ನು ಆಡಿದ್ದಾರೆ?. ಆಡಿದ್ದು ಕೇವಲ ಮೂರು. ಅವರು ಆ ಮೂರು ಪಂದ್ಯಗಳಲ್ಲೂ ಅರ್ಧಶತಕಗಳನ್ನು ಬಾರಿಸಿದರು. ಆದರೆ ಕೆಲವೇ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದಕ್ಕೆ ಸಂಜುರನ್ನು ತಂಡದಿಂದ ಹೊರಗಿಟ್ಟು ವೈಭವ್ ಸೂರ್ಯವಂಶಿಗೆ ತಂಡದಲ್ಲಿ ಆಡುವ ಅವಕಾಶ ನೀಡಲಾಗಿದೆ.

ಇತ್ತ ಕೊನೆಯ ಐದು ಪಂದ್ಯಗಳಲ್ಲಿ ಅಭಿಷೇಕ್ ಅವರ ಅತ್ಯುತ್ತಮ ಸ್ಕೋರ್ ಕೇವಲ 16. ಹೀಗಿದ್ದರೂ ಯಾರೂ ಇದರ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಒಬ್ಬೊಬ್ಬ ಆಟಗಾರನಿಗೆ ವಿಭಿನ್ನ ನಿಯಮಗಳಿವೆ ಏಕೆ?. ಸಂಜು ಬಗ್ಗೆ ಚರ್ಚಿಸಿದಾಗ, ಅವರು ರನ್ ಗಳಿಸುತ್ತಿಲ್ಲ. ಹೀಗಾಗಿ ಅವರನ್ನು ತಂಡದಿಂದ ಕೈಬಿಡಬೇಕು ಎನ್ನುವ ಕೂಗು ಜೋರಾಗುತ್ತದೆ. ಅವರು ಹೇಳುವುದರಲ್ಲಿ ಸತ್ಯವಿದೆ. ಆದರೆ ಅವರು ಲಯದಲ್ಲಿದ್ದಾಗ ಎಂತಹ ಒತ್ತಡದ ಪಂದ್ಯಗಳನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹನಮ ವಿಹಾರಿ ಅಭಿಪ್ರಾಯಪಟ್ಟಿದ್ದಾರೆ.

ಟೀಂ ಇಂಡಿಯಾ ಟಿ20 ಮಾದರಿಯಲ್ಲಿ ಮತ್ತೆ ಕಣಕ್ಕಿಳಿಯುವುದು ಯಾವಾಗ?

ಅಭಿಷೇಕ್ ಶರ್ಮಾ ಪ್ರದರ್ಶನ

ಅಭಿಷೇಕ್ ಶರ್ಮಾ ಈ ವರ್ಷ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಆಡಿರುವ 23 ಪಂದ್ಯಗಳಲ್ಲಿ 23.36 ಸರಾಸರಿಯಲ್ಲಿ ಕೇವಲ 514 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಲ್ಲಿ ಐದು ಅರ್ಧಶತಕಗಳು ಸೇರಿವೆ. ಇನ್ನು ಕಳೆದ 10 ಪಂದ್ಯಗಳಲ್ಲಿ ಅಭಿಷೇಕ್ ಕೇವಲ 191 ರನ್ ಗಳಿಸಿದ್ದಾರೆ. ಜಿಂಬಾಬ್ವೆ ಸರಣಿಯಲ್ಲಿಯೂ ಅವರು ಸ್ಕೋರ್ ಮಾಡಲು ವಿಫಲರಾದರು. ಆಡಿದ ಮೂರು ಪಂದ್ಯಗಳಲ್ಲಿ ಕೇವಲ 11 ರನ್ ಮಾತ್ರ ಗಳಿಸಿದರು. ಅದಕ್ಕಾಗಿಯೇ ಅಭಿಷೇಕ್ ಶರ್ಮಾ ಬಗ್ಗೆ ಈಗ ಪ್ರಶ್ನೆಗಳು ಎದ್ದಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:43 pm, Mon, 27 July 26

Source link

ಮೈಕ್ರೋವೇವ್‌ನಲ್ಲಿ ಆಹಾರ ಬಿಸಿ ಮಾಡುವ ಮುನ್ನ ಈ ವಿಷಯಗಳನ್ನು ತಿಳಿದಿಟ್ಟುಕೊಳ್ಳಿ! – Kannada News | Microwave Safety Tips: How to Heat Food the Right Way

ಇಂದಿನ ವೇಗದ ಜೀವನಶೈಲಿಯಲ್ಲಿ ಉಳಿದ ಆಹಾರವನ್ನು ಕೆಲವೇ ನಿಮಿಷಗಳಲ್ಲಿ ಬಿಸಿ ಮಾಡಲು ಅಥವಾ ತ್ವರಿತವಾಗಿ ಅಡುಗೆ ಮಾಡಲು ಮೈಕ್ರೋವೇವ್ ಓವನ್ (Microwave) ಅನಿವಾರ್ಯ ಸಾಧನವಾಗಿದೆ. ಆದರೆ ಮೈಕ್ರೋವೇವ್ ಬಳಕೆಯ ಬಗ್ಗೆ ಹಲವು ವರ್ಷಗಳಿಂದ ಅನೇಕ ಗೊಂದಲಗಳು ಹರಿದಾಡುತ್ತಿವೆ. “ಮೈಕ್ರೋವೇವ್‌ನ ರೇಡಿಯೇಷನ್‌ನಿಂದ ಕ್ಯಾನ್ಸರ್ ಬರುತ್ತದೆ”, “ಆಹಾರದಲ್ಲಿನ ಎಲ್ಲಾ ಪೋಷಕಾಂಶಗಳು ನಾಶವಾಗುತ್ತವೆ” ಎಂಬಂತಹ ನಂಬಿಕೆಗಳು ಸಾಮಾನ್ಯವಾಗಿವೆ. ಆದರೆ ವೈಜ್ಞಾನಿಕ ಅಧ್ಯಯನಗಳು ಈ ಹೇಳಿಕೆಗಳಿಗೆ ಸಂಪೂರ್ಣ ಬೆಂಬಲ ನೀಡುವುದಿಲ್ಲ. ಸರಿಯಾದ ವಿಧಾನದಲ್ಲಿ ಮೈಕ್ರೋವೇವ್ ಬಳಸಿದರೆ ಅದು ಸುರಕ್ಷಿತವಾಗಿದ್ದು, ಕೆಲವು ಸಂದರ್ಭಗಳಲ್ಲಿ ಪೋಷಕಾಂಶಗಳನ್ನು ಉತ್ತಮವಾಗಿ ಉಳಿಸಿಕೊಳ್ಳಲು ಸಹ ಸಹಾಯ ಮಾಡುತ್ತದೆ. ಹಾಗಾದರೆ ಇದು ಹೇಗೆ ಕೆಲಸ ಮಾಡುತ್ತದೆ, ಮೈಕ್ರೋವೇವ್ ಬಳಸುವಾಗ ಪಾಲಿಸಬೇಕಾದ ಪ್ರಮುಖ ಮುನ್ನೆಚ್ಚರಿಕೆಗಳೇನು ತಿಳಿದುಕೊಳ್ಳಿ.

ಮೈಕ್ರೋವೇವ್ ಹೇಗೆ ಕೆಲಸ ಮಾಡುತ್ತದೆ?

ಮೈಕ್ರೋವೇವ್ ಓವನ್ ನಾನ್-ಐಯೋನೈಜಿಂಗ್ ರೇಡಿಯೇಷನ್ (Non-Ionizing Radiation) ಎಂಬ ಸುರಕ್ಷಿತ ರೇಡಿಯೋ ತರಂಗಗಳನ್ನು ಬಳಸುತ್ತದೆ. ಈ ತರಂಗಗಳು ಆಹಾರದಲ್ಲಿರುವ ನೀರು, ಕೊಬ್ಬು ಮತ್ತು ಸಕ್ಕರೆಯ ಅಣುಗಳನ್ನು ವೇಗವಾಗಿ ಕಂಪಿಸುವಂತೆ ಮಾಡುತ್ತವೆ. ಈ ಘರ್ಷಣೆಯಿಂದ ಉಷ್ಣತೆ ಉತ್ಪತ್ತಿಯಾಗಿ ಆಹಾರ ಬೇಗನೆ ಬಿಸಿಯಾಗುತ್ತದೆ. ಇದು ರೇಡಿಯೋಆಕ್ಟಿವ್ ಕಿರಣಗಳಲ್ಲ. ಆದ್ದರಿಂದ ಆಹಾರವು ರೇಡಿಯೋಆಕ್ಟಿವ್ ಆಗುವುದಿಲ್ಲ ಅಥವಾ ಅದರಲ್ಲಿ ಅಪಾಯಕಾರಿ ವಿಕಿರಣ ಉಳಿಯುವುದಿಲ್ಲ.

ಮೈಕ್ರೋವೇವ್‌ನಲ್ಲಿ ಬಿಸಿ ಮಾಡಿದರೆ ಪೋಷಕಾಂಶಗಳು ನಾಶವಾಗುತ್ತವೆಯೇ?

ಯಾವುದೇ ಅಡುಗೆ ವಿಧಾನದಲ್ಲಿ ಆಹಾರವನ್ನು ಬಿಸಿ ಮಾಡಿದಾಗ, ವಿಶೇಷವಾಗಿ ವಿಟಮಿನ್ ಸಿ ಮತ್ತು ಬಿ-ಕಾಂಪ್ಲೆಕ್ಸ್ ಮುಂತಾದ ಉಷ್ಣತೆಗೆ ಸೂಕ್ಷ್ಮವಾದ ಪೋಷಕಾಂಶಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು. ಆದರೆ ಮೈಕ್ರೋವೇವ್‌ನಲ್ಲಿ, ಆಹಾರ ಕಡಿಮೆ ಸಮಯದಲ್ಲಿ ಬಿಸಿಯಾಗುತ್ತದೆ ಜೊತೆಗೆ ಹೆಚ್ಚು ನೀರು ಬಳಸುವ ಅಗತ್ಯವಿರುವುದಿಲ್ಲ. ಅಷ್ಟೇಅಲ್ಲ ಪೋಷಕಾಂಶಗಳು ನೀರಿನಲ್ಲಿ ಕರಗಿ ಹೊರಹೋಗುವ ಸಾಧ್ಯತೆ ಕಡಿಮೆಯಾಗುತ್ತದೆ. ಈ ಕಾರಣಗಳಿಂದಾಗಿ ಕೆಲವು ಸಂದರ್ಭಗಳಲ್ಲಿ ಸಾಂಪ್ರದಾಯಿಕ ಅಡುಗೆ ವಿಧಾನಗಳಿಗಿಂತ ಮೈಕ್ರೋವೇವ್‌ನಲ್ಲಿ ಬೇಯಿಸಿದ ಆಹಾರದಲ್ಲಿ ಪೋಷಕಾಂಶಗಳು ಹೆಚ್ಚಿರುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಮೈಕ್ರೋವೇವ್ ಬಳಸುವಾಗ ಪಾಲಿಸಬೇಕಾದ ಪ್ರಮುಖ ಮುನ್ನೆಚ್ಚರಿಕೆಗಳು:

  • ಸಾಮಾನ್ಯವಾಗಿ ಮೈಕ್ರೋವೇವ್ ನಲ್ಲಿ -ಸೇಫ್ ಗಾಜು ಅಥವಾ ಸೆರಾಮಿಕ್ ಪಾತ್ರೆಗಳನ್ನು ಮಾತ್ರ ಬಳಸಿ.
  • ಸಾಮಾನ್ಯ ಪ್ಲಾಸ್ಟಿಕ್ ಡಬ್ಬಿಗಳನ್ನು ಬಳಸಬೇಡಿ. ಬಿಸಿಯಾದಾಗ ಕೆಲವು ಪ್ಲಾಸ್ಟಿಕ್‌ಗಳಿಂದ ರಾಸಾಯನಿಕಗಳು ಆಹಾರಕ್ಕೆ ಸೇರಬಹುದು.
  • ಆಹಾರವನ್ನು ಮಧ್ಯದಲ್ಲಿ ಒಮ್ಮೆ ಕಲಸಿ ಅಥವಾ ತಿರುಗಿಸಿ. ಇದರಿಂದ ಎಲ್ಲೆಡೆ ಸಮಾನವಾಗಿ ಬಿಸಿಯಾಗುತ್ತದೆ.
  • ಮಾಂಸ, ಮೀನು, ಮೊಟ್ಟೆ ಮೊದಲಾದ ಆಹಾರಗಳು ಸಂಪೂರ್ಣವಾಗಿ ಬಿಸಿಯಾಗದಂತೆ ನೋಡಿಕೊಳ್ಳಿ.
  • ಲೋಹದ ಪಾತ್ರೆಗಳು ಅಥವಾ ಅಲ್ಯೂಮಿನಿಯಂ ಫಾಯಿಲ್ ಅನ್ನು ಮೈಕ್ರೋವೇವ್‌ನಲ್ಲಿ ಬಳಸಬೇಡಿ.
  • ಮೈಕ್ರೋವೇವ್ ಬಾಗಿಲು ಸರಿಯಾಗಿ ಮುಚ್ಚದಿದ್ದರೆ ಅಥವಾ ಹಾನಿಯಾಗಿದ್ದರೆ ಬಳಸಬಾರದು.

ಇದನ್ನೂ ಓದಿ: ವಯಸ್ಸಿಗೆ ತಕ್ಕ ವ್ಯಾಯಾಮ; 20ರಿಂದ 60+ ವಯಸ್ಸಿನವರಿಗಾಗಿ ಸಂಪೂರ್ಣ ಫಿಟ್ನೆಸ್ ಗೈಡ್

ಯಾವ ಆಹಾರಗಳನ್ನು ಮೈಕ್ರೋವೇವ್‌ನಲ್ಲಿ ಬಿಸಿ ಮಾಡುವಾಗ ಹೆಚ್ಚು ಎಚ್ಚರಿಕೆ ಅಗತ್ಯ?

ಮಕ್ಕಳ ಆಹಾರ: ಬಿಸಿ ಮಾಡಿದ ನಂತರ ಚೆನ್ನಾಗಿ ಕಲಸಿ ತಾಪಮಾನ ಪರೀಕ್ಷಿಸಿ.
ಮೊಟ್ಟೆ (ಚಿಪ್ಪಿನೊಂದಿಗೆ): ಸಿಡಿಯುವ ಸಾಧ್ಯತೆ ಇದೆ.
ಮುಚ್ಚಿದ ಡಬ್ಬಿಗಳು: ಒತ್ತಡ ಹೆಚ್ಚಾಗಿ ಸ್ಫೋಟವಾಗಬಹುದು.
ಎಣ್ಣೆ ಹೆಚ್ಚು ಇರುವ ಆಹಾರಗಳು: ಅತಿಯಾಗಿ ಬಿಸಿಯಾಗುವ ಸಾಧ್ಯತೆ ಇದೆ.

ಆಹಾರವನ್ನು ಎಷ್ಟು ಬಾರಿ ಬಿಸಿ ಮಾಡಬಹುದು?

ತಜ್ಞರ ಪ್ರಕಾರ, ಬೇಯಿಸಿದ ಆಹಾರವನ್ನು ಸಾಧ್ಯವಾದಷ್ಟು ಒಮ್ಮೆ ಮಾತ್ರ ಬಿಸಿ ಮಾಡುವುದು ಉತ್ತಮ. ಪ್ರತಿಬಾರಿ ಬಿಸಿ-ತಣ್ಣಗೆ ಮಾಡುವುದರಿಂದ ಬ್ಯಾಕ್ಟೀರಿಯಾ ಬೆಳೆಯುವ ಅಪಾಯ ಹೆಚ್ಚಾಗಬಹುದು.

ಉಳಿದ ಆಹಾರವನ್ನು ಹೇಗೆ ಸಂಗ್ರಹಿಸಬೇಕು?

  • ಅಡುಗೆ ಮಾಡಿದ ಎರಡು ಗಂಟೆಗಳೊಳಗೆ ಫ್ರಿಜ್‌ಗೆ ಇಡಿ.
  • ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿ.
  • ಮರುಬಿಸಿ ಮಾಡುವಾಗ ಕನಿಷ್ಠ 74°C ತಾಪಮಾನ ತಲುಪುವಂತೆ ಬಿಸಿ ಮಾಡಿ.

ಮೈಕ್ರೋವೇವ್ ಬಳಕೆಯ ಪ್ರಮುಖ ಪ್ರಯೋಜನಗಳು:

  • ಸಮಯ ಉಳಿತಾಯ
  • ಕಡಿಮೆ ಎಣ್ಣೆಯಲ್ಲಿ ಅಡುಗೆ ಸಾಧ್ಯ
  • ಕೆಲವು ಪೋಷಕಾಂಶಗಳು ಉತ್ತಮವಾಗಿ ಉಳಿಯುವ ಸಾಧ್ಯತೆ
  • ವಿದ್ಯುತ್ ಬಳಕೆ ಕಡಿಮೆ
  • ಆಹಾರವನ್ನು ತ್ವರಿತವಾಗಿ ಬಿಸಿ ಮಾಡಬಹುದು

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಮಮಂದಿರ ಹಗರಣದ ತನಿಖೆಯ ಎಸ್​ಐಟಿಗೆ ಚಾರ್ಟರ್ಡ್ ಅಕೌಂಟೆಂಟ್ ನೇಮಿಸಿ; ಯೋಗಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ – Kannada News | Appoint Chartered Accountant To Ram Temple Donation Theft Case SIT Supreme Court To UP Government

ನವದೆಹಲಿ, ಜುಲೈ 27: ಅಯೋಧ್ಯೆಯ ರಾಮಮಂದಿರದ ದೇಣಿಗೆ ಹಣ ಕಳ್ಳತನ ಪ್ರಕರಣದ (Ram Temple Donation Theft Case) ತನಿಖೆ ನಡೆಸುತ್ತಿರುವ ‘ವಿಶೇಷ ತನಿಖಾ ತಂಡ’ದ (SIT) ನೇತೃತ್ವವನ್ನು ಐಪಿಎಸ್ ಅಧಿಕಾರಿ ಎಸ್. ಕಿರಣ್ ವಹಿಸಲಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ಇಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಈ ಹೇಳಿಕೆಗೆ ಸ್ಪಂದಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಆ ತನಿಖಾ ತಂಡಕ್ಕೆ ಚಾರ್ಟರ್ಡ್ ಅಕೌಂಟೆಂಟ್ ಒಬ್ಬರನ್ನು ನೇಮಿಸುವಂತೆ ಹಾಗೂ 2 ವಾರಗಳಲ್ಲಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಸಿಜೆಐ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್‌ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ಪೀಠವು ಇಂದು ಈ ಪ್ರಕರಣದ ವಿಚಾರಣೆ ನಡೆಸಿತು. ಉತ್ತರ ಪ್ರದೇಶ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಎಸ್‌ಐಟಿ ತಂಡವನ್ನು ಪುನರ್ ರಚಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಇದನ್ನೂ ಓದಿ: Video: ಸುಪ್ರೀಂ ಕೋರ್ಟ್ ಖಡಕ್ ಸೂಚನೆ; ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕದ್ದವರಿಗೆ ಶುರುವಾಯ್ತು ನಡುಕ!

ಎಸ್‌ಐಟಿ ತಂಡಕ್ಕೆ ಉತ್ತರ ಪ್ರದೇಶ ಸರ್ಕಾರ ಮೂವರು ಐಪಿಎಸ್ ಅಧಿಕಾರಿಗಳನ್ನು ಸೇರ್ಪಡೆಗೊಳಿಸಿದೆ ಎಂದು ಅವರು ಹೇಳಿದರು. ಕಿರಣ್ ಎಸ್. ಅವರಷ್ಟೇ ಅಲ್ಲದೆ ಅಯೋಧ್ಯೆ ಡಿಐಜಿ ಸೋಮನ್ ವರ್ಮಾ ಮತ್ತು ಎಸ್‌ಎಸ್ಪಿ ಗೌರವ್ ಗ್ರೋವರ್ ಕೂಡ ಈ ತಂಡದಲ್ಲಿರಲಿದ್ದಾರೆ. ದೇವಾಲಯಕ್ಕೆ ಬಂದಿರುವ ದೇಣಿಗೆಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಎಸ್‌ಐಟಿಗೆ ಒದಗಿಸುವಂತೆ ಸಿಜೆಐ ಸೂರ್ಯ ಕಾಂತ್ ಅಧಿಕಾರಿಗಳಿಗೆ ಆದೇಶಿಸಿದರು.

ಎಸ್‌ಐಟಿಗೆ ಹೊಸ ಅಧಿಕಾರಿಗಳ ಸೇರ್ಪಡೆ ಕುರಿತು ಮೆಹ್ತಾ ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿದಾಗ, ಸಿಜೆಐ ಸೂರ್ಯಕಾಂತ್, “ಆ ತಂಡದಲ್ಲಿ ಒಬ್ಬ ಚಾರ್ಟರ್ಡ್ ಅಕೌಂಟೆಂಟ್ ಕೂಡ ಇರಬೇಕು” ಎಂದು ಸೂಚಿಸಿದರು. ಈ ಪ್ರಕರಣದ ಮುಂದಿನ ವಿಚಾರಣೆ ಎರಡು ವಾರಗಳಲ್ಲಿ ನಡೆಯಲಿದೆ.

ಇದನ್ನೂ ಓದಿ: ‘ರಾಮಮಂದಿರ ದೇಣಿಗೆ ಹಗರಣದಲ್ಲಿ ಮೌನವೇಕೆ?’; ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ, ಖರ್ಗೆ ಪತ್ರ

ಜುಲೈ 20ರಂದು ನಡೆದ ಹಿಂದಿನ ವಿಚಾರಣೆಯ ವೇಳೆ, ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ತನಿಖೆಯ ನೇತೃತ್ವ ವಹಿಸಬೇಕು ಎಂದು ಹೇಳಿದ್ದ ಸಿಜೆಐ ಸೂರ್ಯಕಾಂತ್, ಎಸ್‌ಐಟಿಯನ್ನು ಪುನರ್ ರಚಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದ್ದರು. “ತನಿಖೆಯು ನ್ಯಾಯಯುತವಾಗಿರಬೇಕು ಮತ್ತು ತಾರ್ಕಿಕ ಅಂತ್ಯವನ್ನು ತಲುಪಬೇಕು” ಎಂದು ನ್ಯಾಯಾಲಯ ಹೇಳಿತ್ತು.

ರಾಮಮಂದಿರದಲ್ಲಿ ದೇಣಿಗೆ ಹಣ ಎಣಿಕೆಯಲ್ಲಿ ಭಾಗಿಯಾಗಿದ್ದ 8 ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ. ದೇವಾಲಯದ ನಿರ್ವಹಣೆ ನೋಡಿಕೊಳ್ಳುವ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ನೈತಿಕ ಹೊಣೆ ಹೊತ್ತು ಕಳೆದ ತಿಂಗಳು ರಾಜೀನಾಮೆ ನೀಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಇಂಥ ಅಸಹ್ಯ ಎಲ್ಲೂ ನೋಡಿಲ್ಲ’: ಜೆನ್ ಜಿ ಪ್ರತಿಭಟನೆ ವಿರುದ್ಧ ಕಂಗನಾ ರಣಾವತ್ ಗರಂ – Kannada News | Kangana Ranaut slams Gen Z CJP protest reels calls them puke inducing

ದೆಹಲಿಯ ಜಂತರ್ ಮಂತರ್‌ನಲ್ಲಿ ‘ಕಾಕ್ರೋಚ್‌ ಜನತಾ ಪಾರ್ಟಿ’ (CJP) ನೇತೃತ್ವದಲ್ಲಿ ನಡೆದ Gen Z ವಿದ್ಯಾರ್ಥಿಗಳ ಪ್ರತಿಭಟನೆಯ ವೀಡಿಯೋಗಳ ವಿರುದ್ಧ ಸಂಸದೆ ಹಾಗೂ ನಟಿ ಕಂಗನಾ ರಣಾವತ್ (Kangana Ranaut) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್‌ಸ್ಟಾಗ್ರಾಮ್‌ ಸ್ಟೋರೀಸ್‌ನಲ್ಲಿ ಸರಣಿ ಪೋಸ್ಟ್ ಮಾಡಿರುವ ಅವರು, ಪ್ರತಿಭಟನಾಕಾರರ ನಡವಳಿಕೆಯನ್ನು ‘ಅಸಹ್ಯ, ಕಸ ಮತ್ತು ವಾಂತಿ ಬರುವಂತಹದ್ದು’ ಎಂದು ಜರಿದಿದ್ದಾರೆ. ಅವರ ಈ ಹೇಳಿಕೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

‘ಇವರನ್ನು ಯಾರು ಹೆತ್ತು, ಹೇಗೆ ಬೆಳೆಸುತ್ತಿದ್ದಾರೋ?’

ಪ್ರತಿಭಟನೆಯ ವೀಡಿಯೋಗಳನ್ನು ಉದ್ದೇಶಿಸಿ ಬರೆದುಕೊಂಡಿರುವ ಕಂಗನಾ, ‘ನನ್ನ ಜೀವಮಾನದಲ್ಲೇ ಒಂದೇ ಕಡೆ ಇಷ್ಟೊಂದು ಅಸಹ್ಯವನ್ನು ನಾನು ಎಂದೂ ನೋಡಿರಲಿಲ್ಲ. Gen Z ಪ್ರತಿಭಟನೆಯ ಈ ರೀಲ್ಸ್‌ ವಾಂತಿ ಬರಿಸುವಂತಿವೆ. ಅವರು ಮಾತನಾಡುತ್ತಿರುವ ರೀತಿ ಹಾಗೂ ಬಳಸುತ್ತಿರುವ ಭಾಷೆ ತೀರ ಕೆಟ್ಟದಾಗಿದೆ. ಪ್ರತಿ ಫ್ರೇಮ್‌ನಲ್ಲೂ ಇಷ್ಟೊಂದು ಅಸಭ್ಯತೆ ಕಾಣಿಸುತ್ತಿದೆ. ಛೀ, ಇವರನ್ನು ಯಾರು ಹೆತ್ತು, ಹೇಗೆ ಬೆಳೆಸುತ್ತಿದ್ದಾರೋ’ ಎಂದು ಪ್ರಶ್ನಿಸಿದ್ದಾರೆ.

‘ನನಗೆ ತೀವ್ರ ಮುಜುಗರ ಆಗಿದೆ’

ಭಾರತವು ಸಾಂಸ್ಕೃತಿಕ ಕಲ್ಪನೆ ಮತ್ತು ಸೌಂದರ್ಯ ಹೊಂದಿರುವ ದೇಶ ಎಂದಿರುವ ಕಂಗನಾ, ‘ನೀವು ನಿಮ್ಮನ್ನು ಕಾಕ್ರೋಚ್‌ಗಳೆಂದು ಕರೆದುಕೊಳ್ಳುತ್ತೀರಿ ಹಾಗೂ ಅದೇ ರೀತಿ ವರ್ತಿಸುತ್ತಿದ್ದೀರಿ. ಜಗತ್ತಿಗೆ ನಿಮ್ಮ ಅಸಹ್ಯ ಮತ್ತು ಕಸವನ್ನು ತೋರಿಸುತ್ತಿದ್ದೀರಷ್ಟೇ. ಈ ರೀಲ್ಸ್‌ಗಳನ್ನು ನೋಡಿ ನನಗೆ ತೀವ್ರ ಮುಜುಗರವಾಗಿದೆ. ಇದರಿಂದ ಹೊರಬರಲು ನನಗೀಗ ಡಿಜಿಟಲ್ ಡಿಟಾಕ್ಸ್ ಅಗತ್ಯವಿದೆ’ ಎಂದಿದ್ದಾರೆ.

ಇದನ್ನೂ ಓದಿ: ಕೇವಲ 1 ಕೋಟಿ ರೂ. ಕಲೆಕ್ಷನ್; ಬಾಕ್ಸ್ ಆಫೀಸ್​​ನಲ್ಲಿ ಡಿಸಾಸ್ಟರ್ ಆದ ಕಂಗನಾ ಸಿನಿಮಾ

ಧರ್ಮೇಂದ್ರ ಪ್ರಧಾನ್ ರಾಜೀನಾಮೆ:

NEET-UG ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಹಾಗೂ ಪರೀಕ್ಷಾ ಅಕ್ರಮಗಳನ್ನು ಖಂಡಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಜೂನ್ 20ರಿಂದ ಸಾವಿರಾರು ವಿದ್ಯಾರ್ಥಿಗಳು ‘ಕಾಕ್ರೋಚ್‌ ಜನತಾ ಪಾರ್ಟಿ’ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡು, ಸಂಸತ್ತಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಲಾಠಿಚಾರ್ಜ್ ಹಾಗೂ ಅಶ್ರುವಾಯು ಪ್ರಯೋಗಿಸಿದ್ದರು. ಜುಲೈ 25ರಂದು ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದರು. ಸದ್ಯ ಪ್ರಹ್ಲಾದ್ ಜೋಶಿ ಅವರಿಗೆ ಶಿಕ್ಷಣ ಸಚಿವಾಲಯದ ಹೆಚ್ಚುವರಿ ಹೊಣೆ ನೀಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಜಸ್ಟ್‌ ಈ ಟಿಪ್ಸ್‌ ಪಾಲಿಸುವ ಮೂಲಕ ಮನೆಯಂಗಳದಲ್ಲಿಯೇ ಸುಲಭವಾಗಿ ಬೆಳೆಯಬಹುದು ಕರಿಬೇವಿನ ಗಿಡ – Kannada News | Follow these tips to grow curry leaves plant during the rainy season

ಕರಿಬೇವು (curry leaves) ಅಡುಗೆಯ ಘಮ, ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲ ಆರೋಗ್ಯಕ್ಕೂ ತುಂಬಾನೇ ಪ್ರಯೋಜನಕಾರಿ. ವಿಶೇಷವಾಗಿ ತಲೆ ಕೂದಲು, ಕಣ್ಣಿನ ಆರೋಗ್ಯಕ್ಕೆ ಕರಿಬೇವು ಪ್ರಯೋಜನಕಾರಿ. ಹಾಗಾಗಿ ಅಡುಗೆಗೆ ಕರಿಬೇವನ್ನು ಹೆಚ್ಚಾಗಿ ಬಳಸುತ್ತಾರೆ. ಅದಕ್ಕಾಗಿ ಈ ಗಿಡವನ್ನು ಮನೆಯಲ್ಲಿ ಬೆಳೆಯಲು ಪ್ರಯತ್ನಿಸುತ್ತಾರೆ. ಆದರೆ ಹೆಚ್ಚಿನವರ ಮನೆಗಳಲ್ಲಿ ಕರಿಬೇವು ಸೊಂಪಾಗಿ ಬೆಳೆಯುವುದೇ ಇಲ್ಲ, ನೆಟ್ಟ ಕೆಲವು ದಿನಗಳಲ್ಲಿಯೇ ಗಿಡ ಸತ್ತು ಹೋಗುತ್ತದೆ. ಹೀಗೆ ನಿಮ್ಮ ಮನೆಯಲ್ಲೂ ಕರಿಬೇವಿನ ಗಿಡ ಬೆಳೆಯುತ್ತಿಲ್ಲವೇ, ಹಾಗಿದ್ರೆ ಈ ಕೆಲವೊಂದು ಸಲಹೆಗಳನ್ನು ಪಾಲಿಸುವ ಮೂಲಕ ಈ ಮಳೆಗಾಲದಲ್ಲಿ ಮನೆಯಂಗಳದಲ್ಲಿ ಕರಿಬೇವಿನ ಗಿಡ ನೆಡಿ ಮತ್ತು ಈ ರೀತಿ ಆರೈಕೆ ಮಾಡಿ, ಹೀಗೆ ಮಾಡುವುದರಿಂದ ಖಂಡಿತವಾಗಿಯೂ ಕರಿಬೇವಿನ ಗಿಡ ಸೊಂಪಾಗಿ ಬೆಳೆಯುತ್ತದೆ.

ಕರಿಬೇವಿನ ಗಿಡ ನೆಡಲು ಸೂಕ್ತ ಸಮಯ ಯಾವುವು?

ಕರಿ ಬೇವಿನ ಗಿಡಗಳು ಬೆಚ್ಚಗಿನ ಮತ್ತು ಆರ್ದ್ರ ವಾತಾವರಣದಲ್ಲಿ ಚೆನ್ನಾಗಿ ಬೆಳೆಯುತ್ತವೆ. ಫೆಬ್ರವರಿಯಿಂದ ಏಪ್ರಿಲ್  ಮತ್ತು ಜುಲೈ ನಿಂದ ಸೆಪ್ಟೆಂಬರ್ ತಿಂಗಳ ನಡುವೆ ನೀವು ಕರಿ ಬೇವಿನ ಗಿಡ ನೆಟ್ಟರೆ ಅದು ವೇಗವಾಗಿ ಮತ್ತು ಸೊಂಪಾಗಿ ಬೆಳೆಯುತ್ತದೆ. ನರ್ಸರಿಯಿಂದ ಸಸಿ ತಂದು ನೆಡಬಹುದು ಅಥವಾ ಇತರೆ ಕರಿಬೇವಿನ ಕೊಂಬೆಯನ್ನು ನೆಟ್ಟು ಸಹ ಗಿಡವನ್ನು ಬೆಳೆಸಬಹುದು.

ಕರಿಬೇವಿನ ಗಿಡ ಬೆಳೆಯಲು ಯಾವ ರೀತಿಯ ಮಣ್ಣು ಬೇಕು?

ಕರಿಬೇವಿನ ಗಿಡ ಬೆಳೆಯಲು  ಹಗುರವಾದ, ಚೆನ್ನಾಗಿ ನೀರು ಬಸಿದು ಹೋಗುವ ಮಣ್ಣಿನಲ್ಲಿ ಉತ್ತಮವಾಗಿ ಬೆಳೆಯುತ್ತವೆ. ಇದನ್ನು ಮಾಡಲು, 50% ತೋಟದ ಮಣ್ಣು, 30% ಸಾವಯವ ಗೊಬ್ಬರ (ಕಾಂಪೋಸ್ಟ್ ಅಥವಾ ಹಸುವಿನ ಗೊಬ್ಬರ, ವರ್ಮಿಕಾಂಪೋಸ್ಟ್‌) ಮತ್ತು 20% ಮರಳಿನ ಮಿಶ್ರಣವನ್ನು ತಯಾರಿಸಿ, ಈ ಮಣ್ಣಿನ ಮಿಶ್ರಣವನ್ನು ಪಾಟ್‌ನಲ್ಲಿ ತುಂಬಿಸಿ, ಅದರಲ್ಲಿ ಕರಿಬೇವಿನ ಗಿಡವನ್ನು ನೆಡಿ. ಹೆಚ್ಚುವರಿ ತೇವಾಂಶವು ಬೇರುಗಳಿಗೆ ಹಾನಿ ಮಾಡುವುದರಿಂದ ಮಣ್ಣಿನಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ.

ಇದನ್ನೂ ಓದಿ: ತುಳಸಿ ಸಸ್ಯ ಸೊಂಪಾಗಿ ಬೆಳೆಯಬೇಕೆಂದರೆ, ಮಳೆಗಾಲದಲ್ಲಿ ರೀತಿ ಗಿಡವನ್ನು ಆರೈಕೆ ಮಾಡಿ

ಕರಿಬೇವಿನ ಗಿಡದ ಆರೈಕೆ ಹೀಗಿರಲಿ:

  • ಕರಿಬೇವಿನ ಗಿಡಗಳಿಗೆ ದಿನಕ್ಕೆ ಕನಿಷ್ಠ 4 ರಿಂದ 6 ಗಂಟೆಗಳ ಕಾಲ ಸೂರ್ಯನ ಬೆಳಕು ಬೇಕಾಗುತ್ತದೆ. ಸಾಕಷ್ಟು ಸೂರ್ಯನ ಬೆಳಕು ತ್ವರಿತ ಬೆಳವಣಿಗೆ ಮತ್ತು ಎಲೆ ಸೊಂಪಾಗಿ ಬೆಳೆಯಲು ಸಹಾಯ ಮಾಡುತ್ತದೆ.
  • ಪ್ರತಿದಿನ ಲಘುವಾಗಿ ನೀರು ಹಾಕಿ, ಆದರೆ ಮಣ್ಣು ನೀರಿನಿಂದ ತುಂಬಿಕೊಳ್ಳದಂತೆ ಎಚ್ಚರವಹಿಸಿ.
  • ಕರಿ ಬೇವಿನ ಗಿಡವನ್ನು ಆರೋಗ್ಯಕರವಾಗಿಡಲು, ಆಗಾಗ್ಗೆ ಒಣ ಅಥವಾ ಹಳದಿ ಎಲೆಗಳನ್ನು ತೆಗೆದು ಹಾಕುತ್ತಿರಿ. ಇದು ಹೊಸ ಚಿಗುರುಗಳು ಬೆಳೆಯಲು ಮತ್ತು ದಟ್ಟವಾಗಿ ಗಿಡ ಬೆಳೆಯಲು ಸಹಾಯ ಮಾಡುತ್ತದೆ.
  • . ಪ್ರತಿ ತಿಂಗಳು ಸಾವಯವ ಗೊಬ್ಬರವನ್ನು ಹಾಕುವುದರಿಂದ ಸಸ್ಯದ ಬೆಳವಣಿಗೆ ಹೆಚ್ಚಾಗುತ್ತದೆ. ಕೀಟಗಳು ಕಾಣಿಸಿಕೊಂಡರೆ, ಬೇವಿನ ಎಣ್ಣೆಯನ್ನು ಸಸ್ಯದ ಮೇಲೆ ಸಿಂಪಡಿಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

August Festivals List 2026: ಆಗಸ್ಟ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ – Kannada News | August Festivals List 2026: festivals List of August month

ಹಿಂದೂ ಧರ್ಮದಲ್ಲಿ ವರ್ಷವಿಡೀ ಹಬ್ಬ ಹರಿದಿನಗಳು (festivals), ಧಾರ್ಮಿಕ ಆಚರಣೆಗಳಿಗೆ ಕೊರತೆಯಿಲ್ಲ. ಇದೀಗ ಜುಲೈ ತಿಂಗಳು ಕಳೆದು ಆಗಸ್ಟ್ ತಿಂಗಳಿಗೆ ಕೆಲವೇ ದಿನಗಳು ಬಾಕಿಯಿವೆ. ಈ ತಿಂಗಳಲ್ಲಿ ಪ್ರಮುಖ ಹಬ್ಬಗಳು ಹಾಗೂ ವ್ರತ ಆಚರಣೆಗಳಿವೆ. ಹೌದು, ವರಮಹಾಲಕ್ಷ್ಮಿ ವ್ರತ ಸೇರಿದಂತೆ ಹತ್ತು ಹಲವು ಹಬ್ಬಗಳನ್ನು ಆಚರಿಸಲು ಎಲ್ಲರೂ ಸಜ್ಜಾಗಿದ್ದಾರೆ. ಹಾಗಾದ್ರೆ ವರ್ಷದ ಏಳನೇ ತಿಂಗಳಲ್ಲಿ ಪ್ರಮುಖ ಹಬ್ಬಗಳ ಆಚರಣೆಗಳಿದ್ದು ಈ ಬಗ್ಗೆ ನೀವು ತಿಳಿದುಕೊಳ್ಳಿ.

ಆಗಸ್ಟ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ

  • ಆಗಸ್ಟ್ 2 – ಸಂಕಷ್ಟಹರ ಚತುರ್ಥಿ
  • ಆಗಸ್ಟ್ 3 – ಮಹಾನಕ್ಷತ್ರ ಆಶ್ಲೇಷಾ
  • ಆಗಸ್ಟ್ 9 – ಸರ್ವೈಕಾದಶಿ ಕಾಮಿಕಾ
  • ಆಗಸ್ಟ್ 10 – ಪ್ರದೋಷ
  • ಆಗಸ್ಟ್ 11 – ಮಾಸ ಶಿವರಾತ್ರಿ
  • ಆಗಸ್ಟ್ 12 – ಆಷಾಢ ಅಮಾವಾಸ್ಯಾ ಅಥವಾ ಭೀಮನ ಅಮಾವಾಸ್ಯೆ
  • ಆಗಸ್ಟ್ 13 – ಶ್ರಾವಣ ಶುಕ್ಲ ಪಕ್ಷ
  • ಆಗಸ್ಟ್ 17 – ಸಿಂಹ ಸಂಕ್ರಮಣ
  • ಆಗಸ್ಟ್ 17 – ನಾಗರ ಪಂಚಮಿ
  • ಆಗಸ್ಟ್ 17 – ಮಹಾನಕ್ಷತ್ರ ಮಖಾ
  • ಆಗಸ್ಟ್ 18 – ಮಂಗಳ ಗೌರಿ ವ್ರತ
  • ಆಗಸ್ಟ್ 18 – ಕಲ್ಕಿ ಜಯಂತಿ
  • ಆಗಸ್ಟ್ 19 – ತುಳಸಿದಾಸ ಜಯಂತಿ
  • ಆಗಸ್ಟ್ 21- ವರಮಹಾಲಕ್ಷ್ಮಿ ವ್ರತ
  • ಆಗಸ್ಟ್ 22 – ಶ್ರಾವಣ ಶನಿವಾರ
  • ಆಗಸ್ಟ್ 24 – ವೈಷ್ಣವೈಕಾದಶಿ
  • ಆಗಸ್ಟ್ 25 – ಪ್ರದೋಷ
  • ಆಗಸ್ಟ್ 25 – ದಧಿವ್ರತಾರಂಭ
  • ಆಗಸ್ಟ್ 25 – ಪ್ರದೋಷ
  • ಆಗಸ್ಟ್ 25 – ಪವಿತ್ರಾರೋಹಣ
  • ಆಗಸ್ಟ್ 26 – ಋಗುಪಾಕರ್ಮ
  • ಆಗಸ್ಟ್ 26 – ತಿರು ಓಣಂ
  • ಆಗಸ್ಟ್ 26 – ಈದ್ ಈ ಮಿಲಾದ್
  • ಆಗಸ್ಟ್ 27 – ಯಜುರುಪಾಕರ್ಮ
  • ಆಗಸ್ಟ್ 28 – ರಕ್ಷಾ ಬಂಧನ
  • ಆಗಸ್ಟ್ 28 – ನಾರಾಯಣಗುರು ಜನ್ಮದಿನ
  • ಆಗಸ್ಟ್ 28 – ಹುಣ್ಣಿಮೆ
  • ಆಗಸ್ಟ್ 29 – ಶ್ರಾವಣ ಕೃಷ್ಣ ಪಕ್ಷ
  • ಆಗಸ್ಟ್ 30 – ಶ್ರೀರಾಘವೇಂದ್ರ ಪುಣ್ಯತಿಥಿ
  • ಆಗಸ್ಟ್ 31 – ಸಂಕಷ್ಟಹರ ಚತುರ್ಥಿ

ಇನ್ನಷ್ಟು ಆಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:36 pm, Mon, 27 July 26

Source link

Exit mobile version